ಶ್ರೀದಿವಿಜರಾಜಪೂಜಿತ
ಪಾದಾಂಭೋಜದ್ವಯಂ ಗುಣಾಂಬುಧಿ ಮುಕ್ತಿ
ಶ್ರೀದಯಿತನೆಮಗೆ ಮಾೞ್ಕೆ ಶು
ಭೋದಯಮಂ ದುಶ್ಚರಿತ್ರತಮಚಂಡಕರಂ || ||

ಪರಮಸುಖಕ್ಕೆಯ್ದಿಪ ಋಷಿ
ಯರನೊಲ್ಲದೆ ದುಶ್ಚರಿತ್ರರಂ ಲೋಲುಪರಂ
ಪರಲಿಂಗಿಗಳು ಪೊರ್ದಿ
ರ್ಪಿರವಿದು ಪಾಷಂಡಿಮೂಢಮೆಂಬುದದಕ್ಕುಂ || ||

ದೋಷಿಯ [ತೆಱಂ] ಸುಕರ್ಮಂ
ದೋಷಾವಿಳಮಪ್ಪುದದೆ ವಿಕರ್ಮ ನಿಲಲಾ
ದೋಷದೊಳೆ ವಿಕರ್ಮಸ್ಥಂ
ಪಾಷಂಡಿಯೆನಿಕ್ಕುಮಲ್ಲಿ ನಿಂದ ದುರಾತ್ಮಂ || ||

ಅರ ತಪಮುಗ್ರಮುಪಶಮ
ಮಾರೊಳ್ ನೆಲಸಿರ್ಪುದಖಿಳಜೀವಂಗಳ್ಗಿ
ನ್ನಾರೊ ದಯಾಪರರುತ್ತಮ
ರಾರವರ್ಗಳ್ ಯತಿಗಳೆಂದು ನಂಬುವುದಱಿವಂ || ||

ದೆಯ್ವಂ ಶುಚಿಯೆಂದಱಿದಾ
ದೆಯ್ವದ ಪೇೞ್ದೋದಿನಿಂದೆ ಮಾೞ್ಪುದುಮದುವುಂ
ದೆಯ್ವಮೆ ವರವಿಲ್ಲದೊಡೇ
ಗೆಯ್ವುದೊ ತಪಮಾಳ್ದನಿಲ್ಲದಾಳಿನ ಮಾರ್ಗಂ || ||

ಮುಂಬಿಟ್ಟು ಪಲರ ಮನೆಗಳೊ
ಳಂ ಬಿಡದೆ ತೊೞಲ್ದು ತಿರಿವರೆಸಕಂ ಪೊಲ್ಲೆಂ
ದೆಂಬು[ದು] ನಾರಿಯರಿಕ್ಕಿದೊ
ಡುಂಬುದು ಕೂೞ್ ಭಕ್ತ[ನಾದೊಡೆಂಬರ್] ಗೊರವರ್ || ||

ಪಶುವಿನ ತೊವಲೊಳ್ ತೀವಿದ
ಕಿಸುಗುಳಮೆನಿಸಿರ್ದ ತುಪ್ಪಮಂ ನೀರಂ ಸಂ
ಕಿಸದುಂಡು ದಾನಿಯಂ ಬ
ಣ್ಣಿಸುವರ್ ಮಿಷ್ಟಾನ್ನದಾತನೆನುತುಂ ಗೊರವರ್ || ||

ಉಂಡಲ್ಲಿಯೆ ನೀರ್ಗುಡಿವರ
ಮಂಡಲ್ಲಿಯೆ ಖಾದ್ಯಮಪ್ಪವಂ ಮೆಲ್ವವರಂ
ಕೊಂಡೊಲಿವ[ರಿಂ]ತು ಮುನಿಗಳ
ಖಂಡಿತತಪದಿಂದೆ ನೆಗೞ್ದರಾರೆಂದೆನ್ನರ್ || ||

ತಂಬುಲಮನಿಕ್ಕದೊಡಮೆಂ
ತುಂ ಬೇಡಿಯುಮಲ್ಲಿ ಮೆಲ್ವರುಂಡಿಂಬೞಿಯಂ
ತಿಂಬರ್ ಖಜ್ಜಯಮಂ ಶೀ
ತಾಂಬುಗಳಂ ಕುಡಿವರಱಿತಮಿಲ್ಲದ ಶೈವರ್ || ||

|| ಪಸಿವಾದಾಗಳೆ ಬೇಗಮುಂಡು ಪಲವುಂ ಪರ್ಯಾಯದಿಂ ನೀರನೀಂ
ಟಿಸಿ ರಾಗಾತ್ಮಕರಾಗಿ ರಾಜವಿಟಚೋರವ್ಯಾಪ್ತಿಯಂ ಪೇೞ್ದು ತ
ಮ್ಮ ಸಮಾನಂ ಪೆಱರಿಲ್ಲ ಸಂಯಮಿಗಳೆಂದೆಲ್ಲಂದದಿಂ ಪೋಗಿ ಪಾ
ಡಿಸುವೆರ್ ಕಾಳಮುಖಾಖ್ಯರಾ ಮುನಿಗಳೇನಂ ಮಾಡರೇಗೆಯ್ಯರೋ || ೧೦ ||

ಸಲೆ ಮೆಯ್ಗರ್ಚುವ ಪಲ್ಲಂ
ಸುಲಿವ ವಿಲೇಪನಮನಾಗಳುಂ ಪೂಸುವ ತಂ
ಬುಲಮಂ ಮೆಲ್ವ ತಪಸ್ವಿಗ
ಳೊಲಿಪರ್ ಬೆಲೆವೆಣ್ಣನೊಲಿಸರಮೃತಾಂಗನೆಯಂ || ೧೧ ||

|| ಮನೆಯಂ ಪುತ್ರ ಕಳತ್ರ ಮಿತ್ರ ಧನಧಾನ್ಯವ್ರಾತಮಂ ಬಿಟ್ಟು ಮ
ತ್ತೆನಿತಾನುಂ ತೆಱದಿಂದೆ ಪೂಣ್ದು ತಪಮಂ ಮಾಡುತ್ತುಮಿರ್ದೆಲ್ಲರುಂ
ವನಿತಾಸಂಗಮನಾಸೆವಟ್ಟಿಳಿಪಿನಿಂ ಹಾಸ್ಯಕ್ಕೆ ಪಕ್ಕಾಗಿ ಚೆ
ನ್ನನೆ ಪಾಟಿಪ್ಪವರಾಗಳುಂ ಗೊರವರೇನಂ ಮಾಡರಜ್ಞಾನಿಗಳ್ || ೧೨ ||

ಸದಮಳಚರಿತ್ರದಿಂ ನೆಗ
ೞದೆ ಮೆಚ್ಚಿದ ತೆಱದೆ ನಲಿದು ಸವಳದೆ ಸಾಧು
ತ್ವದೊಳೊಂದಿ ಬೆಣ್ಣೆಯಂ ನುಂ
ಗಿದ ಬೆಕ್ಕಿನ ತೆಱದಿನಿರ್ಪ ಮುನಿಯುಂ ಮುನಿಯೇ || ೧೩ ||

ಆಡದ ಗೊಡ್ಡಂಗಳನೊ
ಲ್ದಾಡಿ ಕೆಲರ್ ಮುನಿಗಳಂತ್ಯದೊಳ್ ಮುಕ್ತಿಯೊ[ಳಾಂ]
ಕೂಡುವೆವೆನುತಿರ್ಪರದೇಂ
ಕೂಡಲ್ ಬರ್ಪಂತೆ ಮುಕ್ತಿ ಮನೆವೆಂಡತಿಯೇ || ೧೪ ||

|| ಅಪದಸ್ಥಂ ವಿಷವಕ್ತ್ರಕಂ ದ್ವಿರಸನಂ ಮಿತ್ರದ್ವಿಷಂ ವಕ್ರಗಾ
ಮಿ ಪರೋಪದ್ರವಕಾರಿ ದುಷ್ಟಮತಿ ಛಿದ್ರಾನ್ವೇಷಿ ಹಿಂಸೈಕರೋ
ಲುಪನತ್ಯಾಮಿಷದತ್ತಚಿತ್ತನೆನೆ ಪಾವಂ ಪೋಲ್ತು ಲೋಕಕ್ಕೆ ವ
ರ್ತಿಪ ದುರ್ಭೋಧನನುಗ್ರನಂ ತಪಸಿಯೆಂಬರ್ ಮೂಢರೀ ಲೋಕದೊಳ್ || ೧೫ ||

ಎಱಗಿ ಬಸನಕ್ಕೆ ತಮ್ಮುವ
ನಱಿಯದೆ ಪೊೞ್ತೊಂದು ಬಣ್ಣವಾಗಿಪ್ಪವರೇ
ನಱಿವರೆ ಜೈನರ ತೆಱದಿಂ
ಪಱಿದಿಕ್ಕಲ್ ಬಲ್ಲಿತಪ್ಪ ಕರ್ಮದ ತೊಡರಂ || ೧೬ ||

ಸೋದಿಸದಟ್ಟುದನುಂಬರ್
ವಾದಿಸುವರ್ ಬಿಡದೆ ಜೆಡೆಗಳೊಳಗುಣ ಪೇನಂ
ಬಾಧಿಪರಿಲಿಯಂ ಬೆಕ್ಕಂ
ಬಾಧಿಸಲಾಗೆಂದು ಪೆಱರ್ಗೆ ಪೇೞ್ವರ್ ಗೊರವರ್ || ೧೭ ||

ತತ್ತಬಳೆ ತಾಳಗೊಟ್ಟಿಯೆ
ನುತ್ತಾದಂ ಋಷಿಯರೊಡನೆ ಜಡಮತಿಗಳ್ ಪೋ
ರುತ್ತಿರ್ಪರಲ್ಲದೆಂತ
ತ್ಯುತ್ತಮಸನ್ಮಾರ್ಗದೊಳಗನಱಿವರೆ ಪೇೞಿಂ || ೧೮ ||

|| ಅಱಿಯರ್ ಜೀವದ ಕರ್ಮದೊಂದು ಗತಿಯುಂ ಸನ್ಮಾರ್ಗಮಿಂತಪ್ಪುದೆಂ
ದಱಿಯರ್ ಜೈನರ ಮಾರ್ಗದಿಂದೆ ತಿಳಿಯರ್ ತಮ್ಮಿಚ್ಛೆಯಿಂದಂ ಕೆಲರ್
ಜಱುಚುತ್ತಿರ್ಪರಿದಕ್ಕುಮೆಂದುಮಱಿಯರ್ ಮೇಲಪ್ಪ ಕಾರ್ಯಕ್ಕೆ ಬೊ
ಬ್ಬಿಱಿದಾರ್ದೆತ್ತಲೆ ಬಲ್ಲರಲ್ಲದಱಿಯರ್ ಸರ್ವಜ್ಞಸದ್ಭಾವಮಂ || ೧೯ ||

ಜಾಱಲ್ತು ಮುಕ್ತಿಪಥಮಂ
ತೋಱಲ್ಕಱಿದಪರೆ ಜೈನರಲ್ಲದ[ರ]ವರಂ
ದೂಱಲ್ಕೆ ವೇಡ ಕುರುಡಂ
ತೋಱಿದಪನೆ ಕಟ್ಟಿ ಬಡಿದೊಡಂ ಸತ್ಪಥಮಂ || ೨೦ ||

ಕಟ್ಟಳಿಪರಾಗಿ ಶಿಷ್ಯಂ
ಕೊಟ್ಟುದನೊಲ್ದೀಸಿಕೊಳ್ವರಾಪ್ತನ ರೂಪಂ
ನಿಟ್ಟಿಸುವುದೆನ್ನರಱನಂ
ಬಿಟ್ಟೆಸಪರ್ ವಾದಹೀನರೆನಿಸಿದ ಬೋಧರ್ || ೨೧ ||

ಸೀರೆಗಮಿನಿಸಾನುಮಲಂ
ಕಾರಕ್ಕಂ ಮಱುಗಿ ಶಿಷ್ಯನಂ ಮುನ್ನಂ ಸ
ಚ್ಚಾರಿತ್ರಂ ಮಾಡದೆ ದೇ
ಹಾರಮನೀಯಲ್ಕೆ ಮಱುಗುತಿರ್ಪರ್ ಗೊರವರ್ || ೨೨ ||

ತನ್ನೊಲ್ದ ಮಾರ್ಗದಿಂ ಶಿ
ಷ್ಯಂ ನೆಗೞ್ಗೆಮ ಲಿಂಗದೇವರಂ ಕಂಡೊಡೆ ನಾ
ಲ್ಗುಂ ನಿಚ್ಚಲುಮೆಂಬಿರ್ಪಿರಿ
ದೇಂ[ನಲ್ಲದೊ] ಗುರುಗಳಂತೆ ನಿಯಮಿಸವೇೞ್ಕುಂ || ೨೩ ||

ಪತ್ತಿಸುಗುಂ ದಯೆಯಂ ಸಲೆ
ಪತ್ತಿಸುಗುಂ ಸಚ್ಚರಿತ್ರಮಂ ಸದ್ಗುರು ಪೋ
ಪತ್ತಲೆ ಪೋಕೆಮ ಶಿಷ್ಯನೆ
ನುತ್ತುಂ ಬಿಟ್ಟಿರ್ಪ ಗುರುವೆ ಸದ್ಗುರುವಲ್ಲಂ || ೨೪ ||

ಚಂ || ಸವಳದೆ ಸಂಜೆವಾಸಿದಪೆಮೆಂದು ನಿಬಂಧದೆ ಕರ್ಚಿ ಕಾಲ್ಗಳಂ
ದಿವಸಕರಂಗೆ ನೀರ್ದುಳಿಕಿ ದೇಗುಲಮಂ ಬಲಗೊಂಡು ಮೂಱು ಸೂೞ್
ಶಿವ ಶರಣೆಂದು ನಿಂದೆಱಗಿ ಬಂದು ಯಥೇಷ್ಟದಿನಾಡಿ ಮತ್ತೆಯುಂ
ಶಿವಗತಿಗೊಳ್ಗೆಯೆಂಬರಿನಿತುಳ್ಳೊಡೆ ಧಾರ್ಮಿಕರಲ್ತೆ ಶೈವರೊಳ್ || ೨೫ ||

ಲಿಂಗಕ್ಕೆಱಗುವುದುಂ ಪಾ
ರ್ವಂಗೆಲೆಯೆರಡಡಕೆಯೊಂದನೀವುದುಮಿವು ಧ
ರ್ಮಂಗಳ್ ಬ್ರತಗುಣಚಾರಿ
ತ್ರಂಗಳಿವೊಂದಿನಿಸುಮಿಲ್ಲ ಶೈವರ್ಗೆಲ್ಲಂ || ೨೬ ||

ಚಂ || ತುರಿಪದೆ ಕೊಂಡುಪೋಗಿ ಕರವತ್ತಿಯನೋತದನಿಟಟು ಬಾಸುವರ್
ನರಕದ ಮೇಲೆ ಬಾಸಿ ಬೞಿಕೊಯ್ದದನೋವದೆ ತೀವಿ ತಂದು ಬಿ
ತ್ತರದೆ ಸಣಂಗಿ ಬಾಸಲೆಱೆದಾ ಜಳದಿಂದಮೆ ಮೀಸಿ ಲಿಂಗದೇ
ವರನದನರ್ಚಿಪರ್ ಕಟಕದಣ್ಣಲೆಗಳ್ ಗತಿಗೊಳ್ವ ತಕ್ಕಿನಿಂ || ೨೭ ||

ರೂಢಿಯ ಶಲ್ಯಧರಂಗಿವು
ನಾಡೆಯುಮುಚಿತಂ ದಲೆಂವೋಲಭಿಷೇಕಂ
ಮಾಡುವರೊಲ್ದುಂ ಮಾವಿನ
ಕೋಡಿಂ ಪಂದೊವಲ ನೀರಿಂ ಜೇನೆಯ್ಯಿಂ || ೨೮ ||

ಲಿಂಗಂ ಗಡ ದೆಯ್ವಂ ಚರಿ
ತಂ ಗಡ ವೇದೋಕ್ತಱನ ದೆಸೆಯಱಿಯದ ಪಾ
ರ್ವಂ ಗಡ ಪಾತ್ರಂ ತನಗೆನ
ಲಿಂಗ ಗುಣಮಱಸುವುದೆ ಶೈವಬೋಧರೊಳೆಂತುಂ || ೨೯ ||

ಪಾಗಕ್ಕೆ ಕೊಂಡು ದರ್ಭೆಯ
ನಾಗಳುಮದನಿಟ್ಟುಕೊಂಡು ಬೆರಲೊಳ್ ಬೋಧೋ
ದ್ಯೋಗದೊಳೆ ಲಿಂಗಭಕ್ತನಿ
ಯೋಗದೊಳಿರ್ದಪ್ಪರಱನನಱಿವರ ತೆಱದಿಂ || ೩೦ ||

ಚಂ || ಕೊಲೆಯುಮಸತ್ಯಮುಂ ಕಳವುಮನ್ಯವಧೂಜನಸಂಗಕಾಂಕ್ಷೆಯುಂ
ಫಲ ಮಧು ಮದ್ಯ ಸೇವೆಯುಮಧರ್ಮಮಿವಂ ಬಿಡು ಸಚ್ಚರಿತ್ರನಾ
ಗೆಲೆ ಶಿವಭಕ್ತ ಚರ್ಮಳಜಳಮಂ ತೊಱೆ ಸಂತತಮೆಂದು ಪೇೞ್ವ ನಿ
ರ್ಮಲ ಶಿವಯೋಗಿಯಿಲ್ಲದಱೆನಂತವರಲ್ತೆ ಯಥೇಷ್ಪಚರಿತೆರ್ || ೩೧ ||

|| ಗತದೋಷಂ ಜಿನನಾಪ್ತನೆಂದಱಿಪಿ ಸಮ್ಯಕ್‌ಜ್ಞಾನದೊಳ್ ಕೂಡಿ ಸು
ಬ್ತಚಾರಿತ್ರಮನೋಜೆಯಿಂ ಕಲಿಸಿ ಸಮ್ಯಕ್‌ಜ್ಞಾನಸನ್ಮಾರ್ಗಸಂ
ಯುತನಪ್ಪಂತಿರೆ ಮಾಡವೇೞ್ಪುದು ಯಥಾರ್ಥಜೈನನಂ ಮಿಕ್ಕವಂ
ಗೆ ತಗುಳ್ದಿಂತವನೆಯ್ದೆ ಪೇೞ್ದ ಫಲಮೇಂ ಸದ್ದೃಷ್ಟಿಯಲ್ಲೇತಱಿಂ || ೩೨ ||

ಪೊನ್ನಂ ಬೆಳಗುವವೋಲ್ ಕ
ಬೊನ್ನಂ ಬೆಳಗಿದೊಡೆ ಬಣ್ಣಮೇನೆಸೆಗುಮೆ ಭ
ವ್ಯೋನ್ನತನಂ ತಿಳಿಪುವವೋ
ಲನ್ನಾನಿಗೆ ತಿಳಿಪೆ ವಿಮಳನಕ್ಕುಮೆ ಪಿರಿದುಂ || ೩೩ ||

ಮನೆವಾರ್ತೆಗೆ ಮಾಹೇಶ್ವರ
ತನಕ್ಕೆ ಗುರುವೆಂಬುದಿಲ್ಲ ತನತನಗೊಲ್ವರ್
ಜಿನಸಮಯಿಗೆ ಗುರುಗಳ್ ನಿ
ಚ್ಚ ನಿಚ್ಚಲುಂ ನಿಯಮದಿಂದ ಶಿಕ್ಷಿಸಮೇೞ್ಕುಂ || ೩೪ ||

ಪೊಸಮಡಕೆಯೊಳಡುವರ್ ಬ
ಡ್ಡಿಸಿದಪ್ಪರ್ ನೀಮುಮುಣ್ಬುದೆಂದು ಕರಂ ಪ್ರಾ
ರ್ಥಿಸುವರ್ ಗುರುಗಳನಿಂತ
ಪ್ಪ ಸುಚರಿತರ್ ಜೈನರಲ್ಲದವರ್ಗಳ ಶಿಷ್ಯರ್ || ೩೫ ||

|| ಮೊದಲೊಳ್ ದೀಕ್ಷೆಯನಿತ್ತು ಸಚ್ಚರಿತದಿಂ ದೇವಾರ್ಚನಂ ಮಾೞ್ಪುದೆ
ನ್ನದೆ ಮಾಂಸಂ ಮಧು ಮದ್ಯಮೆಂಬಿನಿತುಮಂ ಸೇವಿಪ್ಪುದಂತಲ್ಲಿ ಪೊ
ರ್ದದು ದೊಷಂ ದಿಟಮೆಂಬವೋಲುಸುರದಿರ್ದಪ್ಪಾತನಂ ಯೋಗಿಯೆಂ
ಬುದೆ ಸನ್ಮಾರ್ಗವಿಹೀನನಂ ಕಪಟನಂ ಪಾಪಿಷ್ಠನಂ ಕಷ್ಟನಂ || ೩೬ ||

|| ಕೊಲ್ಲದಿರೆಂಬ ಕೊಂಕಿ ನುಡಿದಕ್ಕಟ ನೀಂ ನರಕಕ್ಕೆ ಱಿಕ್ಕಟಂ
ಸಲ್ಲದಿರೆಂಬ ಪಾದರದ ಪಂಬಲನಿಂ ಬಿಡುವೆಂಬ ತೃಷ್ಣೆಯಂ
ಗೆಲ್ಲದಿರೇವೆ[ಯೆಂ]ಬ ಕಳಲಾಗದುಮೀಗಳಶಕ್ಯಮೆಂಬ ಮಾ
ತಲ್ಲದೆ ಮಂಗಳಂ ಪೆಱವು ಮಂಗಳಮಿಲ್ಲಮಱಿದೆಂ ಜಿನೇಶ್ವರಾ || ೩೭ ||

ಎಂತೆಂತು ಪಿಕ್ಕಿ ನೋೞ್ಪೊಡ
ಮಂತಂತಾಪ್ತನೊಳಮಾಗಮಂಗಳೊಳಂ ಮ
ತ್ತಂತವರ ಚರಿತ್ರದೊಳ
ಶ್ಯಂತಂ ದಯೆ ಮುಖ್ಯಮಪ್ಪದದೆ ಸತ್ಸಮಯಂ || ೩೮ ||

ಚಂ || ಅನುಪಮ ಶಾಂತಮೂರ್ತಿಯೆನಿಪಾಪ್ತ[ನಿನಾ]ಪ್ತಮುಖಾರವಿಂದಸಂ
ಜನಿತ ದಯೋಕ್ತಿಯಿಂ ದಯೆಯೊಳೊಂದಿದ ಶುದ್ಧಚರಿತ್ರದೊಳ್ಪಿನಿಂ
ಜಿನಸಮಯಂ ಜಗಕ್ಕೆ ದಯೆಯಂ ಸಲೆ ಬೀಱುಗುಮಾವ ಮೆಯ್ಯೊಳೊಂ
ದಿನಿಸುಮನಪ್ಪೊಡಂ ದಯೆಯನನ್ಯರೊ[ಳೇಂ] ಪಡೆಯಲ್ಕೆ ಬರ್ಕುಮೇ || ೩೯ ||

ದಯೆ ಮೂಲಂ ಧರ್ಮ[ಕ್ಕಾ]
ದಯೆ ಜೈನದೊಳಲ್ಲದಿಲ್ಲ ಮುಗ್ಧಜನಂಗಳ್
ದಯೆ ತಮಗುಂಟೆಂಬರ್ ನಿ
ರ್ದಯರಪ್ಪುದನಱಿಯುತಿರ್ದು ಮೋಹಿಸುತಿರ್ಪರ್ || ೪೦ ||

|| ಘನರೌದ್ರಾತ್ಮ ಕನುಗ್ರನಾಪ್ತವಚನಂ ತಾನಲ್ಲ ಮತ್ತೊರ್ವ ಪಾ
ರ್ವನ ಪುತ್ರಂ ಗತನಾದ ಮಾಣಿಯೊಡಲಂ ಪೊಕ್ಕಿರ್ದ ತಲ್ಲಾಕುಳೇ
ಶನ ಪೇೞ್ದಾಗಮಮುಂ ದಯಾನ್ವಿತಮುಮಲ್ಲಾಚಾರದೊಳ್ ನೋೞ್ಪುದೊಂ
ದಿನಿಸಾನುಂ ದಯೆಯಿಲ್ಲ ಭಾವಿಸುವೊಡಿಂತೆಲ್ಲಂದದಿಂ ಶೈವರೊಳ್ || ೪೧ ||

ದಯೆ ಮೂಲಂ ಜಿನಮತದೊಳ್
ದಯೆ ಬೌದ್ಧರೊಳುಂಟು ಕಿಱಿದು ಮಾಹೇಶ್ವರರೊಳ್
ದಯೆಯಿಲ್ಲಾ ವೈಷ್ಣವರೊಳ್
ದಯೆಯಿಲ್ಲಾಗಮದೊಳಾಪ್ತನೊಳ್ ನಡೆವೆಡೆಯೊಳ್ || ೪೨ ||

ನರಸಿಂಹನಾ ಹಿರಣ್ಯಾ
ಸುರನಂ ಗಜದೈತ್ಯನಂ ಹರಂ ಸೀೞ್ದ ಭಯಂ
ಕರರೂಪೆ ಪೇೞ್ಗುಮಾಯಿ
ರ್ವರ ದಯೆಯಂ ದೇವಕುಲದ ನೆಲೆಗಳೊಲ್ಲೆಲ್ಲಂ || ೪೩ ||

ದಯೆ ತಮ್ಮಾಪ್ತರೊಳಿಲ್ಲ[ದೆ]
ದಯೆಯನವರ್ ಕಳ್ದು ತರ್ಪರೇ ಲಿಂಗಿಗಳಾ
ದಯೆ ಜಿನನೊಳುಳ್ಳ ಕತದಿಂ
ದಯೆಯನೆ ಮುಂದಿಟ್ಟು ಜೈನರೆಸಗುತ್ತಿರ್ಪರ್ || ೪೪ ||

ಧ್ಯಾನಿಪೊಡಾಪ್ತಂ ರೌದ್ರ
ಧ್ಯಾನಿ ಮಹಾಬ್ಯಸನಿಯಂತೆ ತಾಮುಂ ರೌದ್ರ
ಧ್ಯಾನಿಗಳಾಗದೆ ಧರ್ಮ
ಧ್ಯಾನಿಗಳಾಗದೆ ಧರ್ಮ
ಧ್ಯಾನಿಗಳಾಗಲ್ಕೆ ಬಗೆವರೇಂ ವಿಸ್ಮಯಮೋ || ೪೫ ||

ರಾಗ ದ್ವೇಷಂಗಳ್ ತ
ಮ್ಮಾ ಗಿರಿಶನೊಳಿಡಿದು ತೀವಿದಂತಿರ್ದುವು ಮ
ತ್ತಾ ಗುಣಮಾತನ ಸಮಯಿಗೆ
ಯೋಗಗ್ರಂಥಗಳೆಲ್ಲಿ ಬಂದುವೊ ಚೋದ್ಯಂ || ೪೬ ||

|| ಸ್ರ || ದಯೆಯುಂ ಸದ್ವೃತ್ತಮುಂ ರುದ್ರನೊಳಱಸುವೊಡಿಲ್ಲಂತವಂ ಪೇೞ್ವೊಡೆಂತುಂ
ದಯೆಯೊಳ್ ಕೂಡಿರ್ದ ಸದ್ವೃತ್ತಮನೞಿಗುಂ ಕಟ್ಟಿಕೊಂಡೀಶಭಕ್ತರ್
ದಯೆಯಂ ಸನ್ಮಾರ್ಗಮಂ ಪೇೞ್ದೊಡೆ ಮಟದೊಳಗಾ ಪೊಸ್ತಕಂ ಬೆಚ್ಚನಿರ್ಕುಂ
ದಯೆಯುಂ ಸದ್ವೃತ್ತಮುಂ ಶೈವರ ನಡೆವಳಿಯೊಳ್ ನೋೞ್ಪೊಡಿಲ್ಲೆಂದುಮೆಂತುಂ || ೪೭ ||

ಚಂ || ಉಡುವುದು ಚರ್ಮಮುಂಬುದು ಕಪಾಳಮದಲ್ಲದೆ ಪೇಸದಾಗಳುಂ
ತುಡುವುದು ಶಲ್ಯದೊಳ್ ಸಮೆದ ಭೂಷಣಮಿರ್ಪೆಡೆ ಕಾನ ಕೋಪದಿಂ
ಪಿಡಿವುದು ಶೂಲಮಿಂತುಟು ನಿಜಾತ್ಮನ ಮಾರ್ಗಮದಂ ಬಿಸುಟ್ಟುಮೀ
ಗಡಿನವರೇಕೆ ಸಚ್ಚರಿತರಾದಪೆಮೆಂಬರಿದೇಂ ವಿಡಂಬಮೋ || ೪೮ ||

ಕ್ರಮದಿಂ ವರ್ತಿಸುವಾ ಕಾ
ಳಮುಖಾಖ್ಯ ಕಪಾಳಿ ಪಾಶುಪತ ಶೈವರೊಳೊ
ರ್ವ ಮಹಾಬ್ರತಿ ಗೊರವಂ ರು
ದ್ರಮಾರ್ಗದಿಂ ನಡೆವ[ನು]ೞಿದ ಮೂವರ್ ನಡೆಯರ್ || ೫೦ ||

ಶ್ವಪಚರ್ ನೆಗೞ್ದೊಂದದದೆ
ಶ್ವಪಚಾಚಾರಮಿದೆಂದು ಪೇಸಿ ಬಿಡದೆಸಗುವುದುಂ
ತಪಮೊಂದೊಡಿನ್ನದೇನೆಂ
ದಪುದೋ ಶೈವಂಗೆ ನೆಗೞಲಾಗದುದುಂಟೇ || ೫೧ ||

ಅಱುಗುಲಿ ಗೊರವರ್ ಶಾಪಿಸೆ
ಪಱಿದಿರ್ದಾ ರುದ್ರಲಿಂಗಮದು ದೆಯ್ವಮೆನು
ತ್ತೆಱಗುವರೆಂದೊಡೆ ಮತ್ತಿ
ನ್ನಱಿತಮನಱಸಲ್ ವೇಡ ಮಾಹೇಶ್ವರರೊಳ್ || ೫೨ ||

|| ಪೇಸದೆ ಚರ್ಮಮಂ ಪೊದೆವ ಸುತ್ತಿಯೊಳಂ ಬಿಡದುಣ್ಬ ಶಲ್ಯಮಂ
ಪೇಸದೆ ತೊಟ್ಟು ಪೇಸಿಕೆಯುಮಿಲ್ಲದೆ ಕೊಲ್ವನನಾಪ್ತನೆಂಬರಿಂ
ಪೇಸದೆ ತಾನುಮಾಪ್ತನವೊಲಾಚರಿಪಂ [ವ್ರ]ತಿಯೆಂಬರೆಂದೊಡಿಂ
ದೋಸಿಗರಾರೊ ಪೇಸಿಕೆಯುಮಿಲ್ಲದರಾರ್ ಗಳ ಶೈವರಂದದಿಂ ೫೩ ||

ಆಗುಱಿಯಾಗೆಂದೆಂಬವೊ
ಲಾ ಗಿರಿಜಾಧಿಪನದೊಂದು ದೇವತ್ವಕ್ಕಿ
ನ್ನಾ ಗುಣಿಗಳೆ ಸಮಧರ್ಮೋ
ದ್ಯೋಗಿಗಳೆನಿಪವರೆ ಭಕ್ತರಾಗ[ಲ್] ತಕ್ಕರ್ || ೫೪ ||

ಅಱನಿಂತುಟೆಂದು ನಿಶ್ಚಯ
ಮಱಿವುದಂತಿರ್ಕೆ ಬಸನದೊಳ್ ತೊಡರ್ದು ಕರಂ
ಮಱುಗಿ ಮತಿಗೆಟ್ಟು ತಮ್ಮುಮ
ನಱಿಯರಣಂ ಜ್ಞಾನಹೀನರೆನಿಸಿದ ದೇವರ್ || ೫೫ ||

ದೇವರ್ಕಳಾದರೆಲ್ಲಂ
ಸೇವಿಸುವರ್ ಮಿಕ್ಕರೀಗ ಕೌಳಾಚಾರ್ಯರ್
ಸೇವಿಪರೆಂದೊಡೆ ಮದ್ಯಮ
ನೇವೊಗೞ್ವು[ದೊ] ದೂಷಿಸಲ್ಕೆ ಸಲ್ಲದನೆಂಬರ್ || ೫೬ ||

ನುಡಿವವರೆತ್ತಾನುಂ ಪುಸಿ
ನುಡಿದೊಡೆ ಕಳ್ಗುಡಿವನಂತೆ ಮೆಯ್ಯೞಿಯದಿವಂ
ನುಡಿದಪ್ಪ[ನೆಂ]ಬರೆನೆ ಕ
ಳ್ಗುಡಿವುದಱಿಂದತ್ತ ಪಾತಕಂ ಪೆಱತುಂಟೇ || ೫೭ ||

|| ಸ್ರ || ಪ್ರಿಯಮಂ ನೀನೇಕೆ ಮದ್ಯಪ್ರಿಯನೊಳಱಸುವಯ್ ಮದ್ಯಪೇ ಸೌಹೃದಂ ನಾ
ಸ್ತಿಯೆನಿಪ್ಪಾ ವಾಕ್ಯಮಂ ಭಾವಿಸದ ಮರುಳೆ ಮದ್ಯಾನುರಕ್ತಾತ್ಮನಾರ್ಗಂ
ಪ್ರಿಯಮಂ ತಾಂ ಮಾಡನುರ್ವೀವಳಯದೊಳದಱಿಂ ಮದ್ಯಪಾಃ ಕಿಂ ನ ಕುರ್ವಂ
ತಿಯೆನುತ್ತುಂ ಪಂಡಿತರ್ಕಳ್ ನುಡಿವರದನೆ ನೀಂ ಚಿತ್ತದೊಳ್ ತಾಳ್ದಿರೆಂದುಂ || ೫೮ ||

ಮೊರೆಯಱಿಯ[ನಾ]ಗಳುಂ ಕೃತ
ಮಱಿಯಂ ಕಳ್ಗುಡಿದ ಪಾತಕಂ ತನ್ನಂ ತಾ
ನಱಿಯನೆನೆ ಬಗೆವೊಂಡಿಂತವ
ನಱಿದಪನೆ ದೂರಮಪ್ಪ ಮೋಕ್ಷದ ಪಥಮಂ || ೫೯ ||

ಆರ್ಪನಿತಂ ಸೇವಿಸಿಯುಂ
ದರ್ಪಾಂಧಕರಾಗಿ ಬಸನಮಂ ಪಾಳಿಸಿಯುಂ
ಕೂರ್ಪುವೆರಸಿರ್ಪ ಕೌಳರ್
ತೋರ್ಪರೆ ಸನ್ಮಾರ್ಗದಂದಮಂ ಜೈನರವೋಲ್ || ೬೦ ||