ಗಿರಿಶನನಾರಾಧಿಪ ದೈ
ತ್ಯರೆ ಗಿರಿಶನೊಳೊದಱಿ ಕಾದುತಿರ್ಪರ್ ಗಡ ಬಾ
ಪ್ಪುರೆ ಭಕ್ತರವಿನಯಮುಮಾ
ಗಿರಿಶನ ದೇವತ್ವದಂದಮುಂ ಕಡುರಯ್ಯಂ || ೬೬ ||
ಭರದಿಂ ದೈತ್ಯರನಾರ್ದಿಸು
ತಿರೆ ರುದ್ರನ ಬಾಣಹತಿಯಿನುಗುತರುತಿರೆ ದೈ
ತ್ಯರ ನೆತ್ತರ ಪನಿಯೊಳ್ ಸಾ
ಸಿರವಪ್ಪರ್ ದೈತ್ಯರೆಂಬರಿನ್ನವು ಪುಸಿಗಳ್ || ೬೭ ||
ಚಂ || ಮುನಿಸಿನೊಳಾಂತು ದಾನವನಿಕಾಯದೊಳರ್ವಿಸಿ ಕಾದುವಲ್ಲಿ ರು
ದ್ರನ ನೊಸಲಿಂದೊಸರ್ತ ಬೆಮರಂ ಕಳೆದೊಯ್ಯನೆ ಸೂಸಿದಲ್ಲಿ ಮೇ
ದಿನಿಯೊಳಗುರ್ವುವೆತ್ತೊಗೆದು ದೈತ್ಯರನೋವದೆ ಭದ್ರಕಾಳಿ ರು
ದ್ರನ ಬೆಸದಿಂದೆ ಕೊಂದಳೆನುತುಂ ಕಥೆವೇೞ್ವರನಾರೊ ಬಾರಿಪರ್ || ೬೮ ||
ಸಮರಾಂಗಣದೊಳ್ ರುದ್ರನ
ಬೆಮರಿಂದಂ ಭದ್ರಕಾಳಿ ಪುಟ್ಟಿದಳೆನುತುಂ
ಕ್ರಮಮಱಿಯದ ಜಡರೊಳ್ವರ್
ಬೆಮರಿಂದೊಗೆವಂತು ರೌದ್ರಿ ತಗುಣೆಯೊ ಪೇನೋ || ೬೯ ||
ಧರೆ ರಥಮಾಗಿರೆ ಚಂದ್ರಾ
ರ್ಕರೆ ಗಾಲಿಗಳಾಗೆ ಕಮಳಜಂ ಸಾರಥಿಯಾ
ಗಿರೆ ರುದ್ರಂ ನಡೆದಂ ಗಡ
ಪುರಂಗಳಂ ಕಿಡಿಸಲಿನ್ನವಘಟಿತಮೊಳದೇ || ೭೦ ||
ಸುರಗಿರಿ ಬಿಲ್ ನಾಗೇಂದ್ರಂ
ತಿರು ಕೃಷ್ಣನೆ ಬಾಣಮಾಗಿರೆಚ್ಚಂ ಮೂಱುಂ
ಪುರಮಂ ಗಡ ರುದ್ರಂ ಪೇ
ೞ್ವರಿರ್ಕೆ ಕೇಳ್ವರಿದನಘಟವೆನ್ನರೆ ಚದುರರ್ || ೭೧ ||
ಗಂಗೆಯುಮಂ ಜೆಡೆಗಳೊಳೆಳ
ದಿಂಗಳುಮಂ ತಾಳ್ದಿ ರುದ್ರನಿರ್ಪಂ ಗಡ ಪೋ
ಗಂಗೆ ನೆಲದಲ್ಲಿ ಬಾನೊಳ್
ತಿಂಗಳ್ ಸುೞಿಯುತ್ತುಮಿರ್ಕುಮಿದು ಪುಸಿಯೆಸಕಂ || ೭೨ ||
ಒಡಲೊರ್ಭಾಗಮನಿತ್ತಂ
ಗಡ ಕಾಂತೆಗೆ ಶಂಭು ಶಂಭುಗಂ ಕೊಟ್ಟಳ್ ತ
ನ್ನೊಡಲೊರ್ಭಾಗಮನಗಸುತೆ
ಗಡ ಮಿಕ್ಕೆರಡರೆಯನಾರ್ಗೆ ಕೊಟ್ಟರೊ ಪೇೞಿಂ || ೭೩ ||
ಹರನ ಗಿರಿಸುತೆಯ ತನುಗಳೊ
ಳೆರಡರೆಯಂ ಕಾಣಲಾಗದುೞಿದೆರಡರೆಯಂ
ನರಿ ತಿಂದುವೊ ನಾಯ್ ತಿಂದುವೊ
ಪರೆದಿರ್ದುವೊ ಪೇೞಿಮರ್ಧನಾರೀಶ್ವರನಾ || ೭೪ ||
ರಾಗದಿನಗಸುತೆಯೊಳ್ ಸಂ
ಭೋಗಿಸುತಿರ್ಪಲ್ಲಿಗಗ್ನಿ ಬರೆ ನಾಚಿಕೆಯಿಂ
ಪೋ[ಗೆ] ಗಿರಿಜಾತೆ ಮುನಿಸಿಂ
ದಾ ರೇತಮನಿಟ್ಟನಗ್ನಿಮುಖದೊಳ್ ರುದ್ರಂ(?) || ೭೫ ||
ಅನಲಂ ರುದ್ರನ ರೇತಮ
ನನಿತುಮನಂದಿಂದೆ ಪಾಂಡುರೋಗದೆ ನಮೆದ
ರ್ಜುನನೀಯಲುಂಡು ಖಾಂಡವ
ವನಮಂ ನೀರೋಗಿಯಾದನೆಂಬರ್ ಗೊರವರ್ || ೭೬ ||
ಬಡವೆಯ ನಾಣಂ ಕಂಡರ್
ಕಡೆಗಣಿಸುವರೆಂದೊಡಱಿತಮುಳ್ಳರ್ ಕಲ್ಲೊಳ್
ಕಡೆದರ್ಚಿಪರೇನುಚಿತಮೆ
ಮೃಡಾನಿಯಾ ಕರಮೆ ನಾಣ ಪುತ್ತಿನ ರೂಪಂ || ೭೭ ||
ಧಾರಿಣಿಯ ಪೆಂಡಿರೆಲ್ಲಂ
ಗೌರಿಯ ರೂಪೆಂಬರಂತುಟಾದಂದಿನ್ನಾ
ಗೌರೀಶಭಕ್ತರೆಂತು ವಿ
ಚಾರಿಸರಾ ಪೆಂಡಿರೊಡನೆ ನೆರೆವುದಯುಕ್ತಂ || ೭೮ ||
ಚಂ || ಬಳಸಿದ ಪತ್ರೆಯಂ ಬರುತೆ ಕೆರ್ಪಿನ ಕಾಲೊಳೆ ನೂಂಕಿ ತನ್ನ ಮು
ಕ್ಕುಳಿಸಿದ ತೋಯದಿಂ ಮಿಸಿಸಿ ಪತ್ರೆಯನೊಟ್ಟುತುಮಿರ್ದ ಕಬ್ಬಿಲಂ
ಗೆಳಸಿ ಸ್ವಯಂಭು [ಸಂಬಳದ] ದಾಯಮನೞ್ತಿಯೊಳಿತ್ತನೆಂಬರಾ
ರಳವಿಯೊ ಬಣ್ಣಿಸಸಲ್ಕವನ ಭಕ್ತಿಯನೀಶನ ದಾನಶಕ್ತಿಯಂ || ೭೯ ||
ಮಾತೇನೊ ಪಾರ್ವರೀಶನ
ರೇತಮೆ ಪೊನ್ನೆಂದು ಪೇೞ್ವರಾ ರೇತದೆ ಮ
ತ್ತಾತನನರ್ಚಿಪುದೆಂಬರ್
ಭೂತಳದೊಳ್ ತಕ್ಕರಿಂತು ಪೇೞಲ್ವೇೞ್ಕುಂ || ೮೦ ||
ಕನಕನಗೇಂದ್ರಂ ಧನು ರು
ದ್ರನ ರೇತಮದೆಂಬರದುವೆ ಕುಲಶೈಲಂ ತಾ
ನೆನುತಿಪ್ಪರಿನ್ನವೋದುಗ
ಳೆನಿತಾನುಂ ಮತ್ತಮೊಳವು ಶೈವಾಗಮದೊಳ್ || ೮೧ ||
ಅವಯವದಿಂ ಜೀವಂ ಬೊಂ
ದಿವೆರಸು ಸಗ್ಗಕ್ಕೆ ಪಾರುಗುಂ ಸುಕೃತದಿನೆಂ
ಬವರೋದುಗಳಂ ಕೇಳ್ದೂ
ಳುವರೀಗಳುಮದನೆ ಪಿಡಿದು ಮತಿಗೆಟ್ಟವರ್ಗಳ್ || ೮೨ ||
ಸಂತತಮನೃತಂ ನುಡಿವರೊ
ಳೆಂತುಂ ದಿಟಮಪ್ಪ ನುಡಿಗಳೊಂದರಡಕ್ಕುಂ
ಭ್ರಾಂತೆನಲಿಂ ಬೀೞೆಂದೊಡ
ಮೆಂತುಂ ನಂಬುವುದೆ ಕೌಳಸಮಯದ ನುಡಿಯಂ || ೮೩ ||
ಪರಿದಿರ್ದ ಪುದ್ಗಲಂಗಳ್
ನೆರೆದಂಬುದಸಮಿತಿಯಾಗಿ ಸದ್ರವರೂಪಂ
ಸುರಿಯೆ ಸುರೇಂದ್ರನ ಬೆಸದಿಂ
ಸರಧಿಯ ನೀರ್ದಂದು ಸುರಿದುವಂಬುದವೆಂಬರ್ || ೮೪ ||
ವಿಪರೀತಮಲ್ಲಮೇ ಮ
ತ್ಸ್ಯಪುರಾಣಂ ಕೂರ್ಮಕೃತಪುರಾಣಂ ವಾರಾ
ಹಪುರಾಣಂಗಳ್ ನರಸಿಂ
ಹಪುರಾಣಂ ತಿರಿಕಜೀವವಱಿವುವೆ ಪೇೞಲ್ || ೮೫ ||
ಮೀನಾವೆಪಂದಿಯೆಂಬ
ಜ್ಞಾನಿಗಳೆಲ್ಲಂ ಪುರಾಣಕರ್ತೃಗಳಾದಂ
ದೇನೆಂಬುದೊ ಕೇಳ್ವರನ
ಜ್ಞಾನಿಗಳೆನಲೆತ್ತಲುಚಿತಮಂ ತಾವಱಿವರ್ || ೮೬ ||
ಪದಿನೆಂಟು ಪುರಾಣಮುಮಂ
ಪದಿನೆಂಟು ಸ್ಮೃತಿಯುಮಂ ಪರೀಕ್ಷಿಸಿ ನೋೞ್ಪಂ
ದದಱ ಮತಂ ಬೇಱಲ್ಲಂ
ತದೆ ಮತಮೊಂದಲ್ತು ಸಮಯಮೊಂದಾಗಿರ್ಕುಂ || ೮೭ ||
ಧರೆಯಪ್ಪೊಡಚೇತನಮಾ
ಧರೆ ಗಳ ಚತುರಂಗಬಲದ ಭಾರಮನಾಂ ಪೊ
ತ್ತಿರಲಾಱೆನೆಂದು ಪೇೞ್ದುದು
ಮುರರಿಪುಗೆ ಗಡಿನ್ನವುಮೊಳವೆ ಪುಸಿ ಗಳ[ಗಾ]ಳಂ || ೮೮ ||
ಧಾರಿಣಿಗೆ ಸೇನೆಯೊದವಿಂ
ಭಾರಂ ಪಿರಿದಾಗೆ ದೈತ್ಯರಿಂ ಭಾರತದಿಂ
ಭಾರಮನೆ ಕಳೆಯಲೊಗೆದಂ
ನಾರಾಯಣನೆಂದು ಪೇೞ್ವರಱಿವಿಲ್ಲದವರ್ || ೮೯ ||
ನುಂಗಲ್ಕಾರ್ಪಂ ಗಡ ಲೋ
ಕಂಗಳನವುಱೊಳಗಣಸುರರಂ ಕೊಲಲೆಂದಾ
ತಂ ಗಡ ಹರಿ ಪಲವುಂ ಚೋ
ಹಂಗಳನೀರು ಯುಕ್ತಮಾಗಲಱಿಗುಮೆ ಪೇೞಿಂ || ೯೦ ||
ಮೀನಾವೆ ಪಂದಿಯೆಂದೆನಿ
ತಾನುಂ ರೂಪಾಗಿ ಕೊಲ್ಲದೊಡಮೊಳಗಿರ್ದಾ
ದಾನವರಂ ಜಠರಾಗ್ನಿಯಿ
ನೇನುರಿಪಲುಮಾಱದಿರ್ದನೇ ಗೋವಿಂದಂ || ೯೧ ||
ಧರೆಯುಳ್ಳನಿತುಮನೊರ್ವಂ
ಭರದಿಂ ಕೊಂಡೊಯ್ದು ಕೋಣೆಯೊಳ್ ಮಡಗಿದನಾ
ಧರೆಯಂ ಮುರರಿಪು ಗಡ ಸೂ
ಕರನಾಗಿಯೆ ತಂದನೆಂಬರಿನ್ನವು ಪುಸಿಗಳ್ || ೯೨ ||
ಧರಣಿಯನೆತ್ತಿದನಮರೇ
ಶ್ವರಗಿರಿಯಂ ಕಿೞ್ತು ಶರಧಿಯಂ ಕಡೆದಂ ಮ
ತ್ತಿರದಂತು ತಂದು ನಟ್ಟಂ
ಹರಿಯಾದಿಯನಂದ [ದಿನೆನೆ] ಪುಸಿವರ್ ಪಲಬರ್ || ೯೩ ||
ನೆಲನೆನಿತನಿತುಮನೊರ್ವಂ
ಬಲಿಯಿತ್ತೊಡೆ ಮೂಱುಪಾದಮಾಗಿರೆ ನಡೆದಂ
ಸಲೆ ಮಾನಸರ್ಗಮಘಟಂ
ಬಲವೈರಿಗಮಳೆಯಲರಿದು ವಿಕ್ರಿಯೆಯಿಂದಂ || ೯೪ ||
ದೊರೆಕೊಳ್ಗುಂ ವೈಕುರ್ವಣ
ಶರೀರಮಮರರ್ಗೆ ಪಲವು ರೂಪಂ ತಾಳ್ದಲ್
ಹರಿಗೆ ದೊರೆಕೊಳ್ಳದೇಕೆನೆ
ನರನಾಗಿಯೆ ಮನುಜರೆಲ್ಲಿ ಪುಟ್ಟಿದ ಕತದಿಂ || ೯೫ ||
ಮನದನುರಾಗದಿಂ ಹರಿಗೆ ಮೂಱಡಿಯಂ ಕೊಡುತಿರ್ದೊಡಲ್ಲಿ ಶು
ಕ್ರನೆ ಗಡ ವಕ್ರನಾಗಿ ಬಲಿ ಧಾರೆಯನೆತ್ತಿದೊಡಡ್ಡಮಾಗಿ ಪೊ
ಕ್ಕನನಱಿದಾಗ ವಾಮನನೆ ದರ್ಭೆಯೊಳಾಸಿದೊಡಾರೆ ನಾಂಟಿ ಶು
ಕ್ರನ ಬಲಗಣ್ಣುಮಾಗಳೊಡೆದತ್ತೆನುತುಂ ಕಥೆಗುಟ್ಟುವರ್ ದ್ವಿಜರ್ || ೯೬ ||
ಅರೆಮತ್ತರ್ ನೆಲನಂ ದ್ವಿಜಂಗೆ ಮುದದಿಂದೀಯಲ್ಕೆ ತದ್ದಾನದಿಂ
ಸುರಲೋಕಂ ದೊರೆಕೊಳ್ಗುಮೆಂಬರದು ಕಾಲಂ ತನ್ಮುಖಂ ಪಾತ್ರಮಂ
ಹರಿಯೆಂದುರ್ವರೆಯೆಲ್ಲಮಂ ಕುಡೆ ಬಲೀಂದ್ರಂಗಕ್ಕಟಾ ಬಂಧನಂ
ದೊರೆಕೊಂಡತ್ತು ಸುಪಾತ್ರದಾನದ ಫಲಂ ಕೈಗೆಯ್ಯಲಿಂತೂಡಿತೋ || ೯೭ ||
ಭುವನಂಗಳೆಲ್ಲಮಂ ಕಾ
ವ ವಿಷ್ಣು ತನ್ನನುಜೆಯಾತ್ಮಜಾತನನಭಿಮ
ನ್ಯುವನೇಕೆ ಕಾಯನೋನಂ
ಬುವುದಾತನೆ ಮಾರ್ಗಮೇನುವಂ ಮಾಡದುದಂ || ೯೮ ||
ಯುಕ್ತಂ ಮನುಷ್ಯಭವದೊಳ್
ಮುಕ್ತಿಯಿನಿರ್ಪುದೆ ಗಜೇಂದ್ರನುಂ ವೈಷ್ಣವದೊಳ್
ಮುಕ್ತಿಯನೆಯ್ದಿದನೆಂಬುದ
ಯುಕ್ತಂ ದಲ್ ತಿರಿಕಗತಿಯೊಳಪ್ಪುದೆ ಮೋಕ್ಷಂ || ೯೯ ||
ಫಣಿಗಳ್ಪೊತ್ತಿರ್ದುವು ಧಾ
ರಿಣಿಯೆಲ್ಲಮನೊಂದು ಕೂರ್ಮನಾ ಫಣಿಯಂ ಧಾ
ರಿಣಿಯುಮನಾಂತಿರ್ದಪುದೆಂ
ಬಣಕಮನಾರಯ್ಯ ಕೇಳ್ದು ದಿಟಮೆನಲಱಿವರ್ || ೧೦೦ ||
ಕಡೆನೇಣಾಗಿ ಫಣೀಂದ್ರಂ
ಕಡೆಗೋಲ್ ಕನಕಾದ್ರಿಯಾಗೆ ಕಮಠಂ ತಾಳ್ದಲ್
ಕಡೆದರಮರರಸುರರ್ ಪಾ
ಲ್ಗಡಲಂ ಗಡ ಯುಕ್ತಿಶೂನ್ಯಮಿನ್ನವುಮೊಳವೇ || ೧೦೧ ||
ಧರೆಯಂ ಪೊತ್ತ ಫಣೀಂದ್ರನಂ ಕಮಠನಂ ತಂದೞ್ತಿಯಿಂದಂ ಸುರಾ
ಸುರರಾ ಕ್ಷೀರಸಮುದ್ರಮಂ ಕಡೆಯುತಿರ್ದಾ ಕಾಲದೊಳ್ ಬಂದೊಡಾ
ಧರೆಯೆಂತಿರ್ದುದದಾರೊ ಪೊತ್ತರಹಿರಾಜಂ ರುದ್ರಚಾಪಕ್ಕೆ ಮುಂ
ತಿರುವಾದಂದುಮದಾರೊ ತಮ್ಮ ತನು [ವಿಂ] ಮೋಹಿಟ್ಟರಾ ಲೋಕಮಂ || ೧೦೨ ||
ಮಾರಾರಿ ತಂತ್ರಿ ಸಿ[ಲ್ಕ]ಲ್
ಧಾರಿಣಿಯಂ ಪೊತ್ತ ಶೇಷ [ನಂ] ಗಡ ತೆಗೆದಿ
ರ್ದಾ ರುದ್ರವೀಣೆಗಿಕ್ಕಿದ
ರಾರೋ ಪೊತ್ತಿರ್ದರೆಳೆಯನಂದಂತವರೊಳ್(?) || ೧೦೩ ||
ಅಮರ್ದುಂ ಸುರಕುಜಮುಂ ಮ
ದ್ಯಮುಮಿನನುಂ ಸಸಿಯುಮಾನೆಯುಂ ಕುದುರೆಯುಮಾ
ಕಮಳೆಯುಮಮರಾಂಗನೆಯರು
ಮಮರ್ದಂ ಕಡೆವಲ್ಲಿ ಪುಟ್ಟಿದುವು ಗಡ ತಿಳಿಯಿಂ || ೧೦೪ ||
ಅತ್ರಿಗೆ ಶಶಿಯೊಗೆದಂ ಗಡ
ನೇತ್ರದಿನಾ ಕಶ್ಯಪಂಗೆ ದಿನಪಂ ಜಗತೀ
ನೇತ್ರನೊಗೆದಂ ಗಡಿಂತಿದು
ಚಿತ್ರಂ ಮಾನಸರ ಮಕ್ಕಳೇ ಜ್ಯೋತಿಷ್ಯರ್ || ೧೦೫ ||
ಅತಿದೂರಂ ಬಗೆಯೆ ಬೃಹ
ಸ್ಪತಿಗಮರಾಧೀಶನಿಪ್ಪ ತಾಣಂ ದೂರಂ
ಸಿತನಿರ್ದೆಡೆಗಸುರರುಮಿ
ರ್ದ ತಾಣಮಿಮರ್ಗವರ್ಗಳೆಂತು ಮಂತ್ರಿಗಳಾದರ್ || ೧೦೬ ||
ಅನಲಂ ಯಮಸತಿಯೊಳ್ ಚಂ
ದ್ರನೆ ಗಡ ಬುಧ[ನ]ಬ್ಬೆಯೊಡನೆ ಗೌತಮನೆಂಬಾ
ಮುನಿಪಸತಿಯೊಳ್ ಸುರೇಂದ್ರಂ
ಮನದಳಿಪಿಂ ನೆರೆದರೆಂಬರಿನ್ನವು ಕಥೆಗಳ್ || ೧೦೭ ||
ಆಱಡಿಕಾಱನನಾರುಂ
ದೂಱಾ[ದೊಡೆ] ಕೊಂದು ಕಡಿದು ಬೇಳುತ್ತಿರಲಿಂ
ನೂಱಾದಿನ್ನಾತ್ಮ ಜನಂ
ಮಾಱಿದನಾ ಶುನಕಶೇಫನೆಂ[ಬನ] ಮುನಿಪಂ || ೧೦೮ ||
ಜಳರಾಶಿಯನುಂಗುಟದನಿ
ತೊಳನೊರ್ವನಗಸ್ತೈನೆಯ್ದೆ ಕುಡಿದನೆನುತ್ತಂ
ಗೞಪುತ್ತಿರ್ಪರ ನುಡಿಯೊಳ್
ಫಲಮಿಲ್ಲಾತಂಗೆ ಜಳಧಿ ಕುಡಿತೆಯ ನೀರೋ || ೧೦೯ ||
ಬಳೆವುತ್ತಿರೆ ಕುಡಿ ನೀನಿಂ
ಬಳೆದಂದೆನ್ನಾಣೆಯೆನಲಗಸ್ತೈನ ಮಾತಿಂ
ಬಳೆಯಲ್ಕಮ್ಮದು ವಿಂಧ್ಯಾ
ಚಳವೆಂಬರ್ ಬೆಟ್ಟವಾಣಿಗೇನಂಜುಗುಮೇ || ೧೧೦ ||
ಸಗರನೃಪನಗುೞ್ದ ಕುೞಿ ಧಾ
ತ್ರಿಗೆ ಸಾಗರಮಾಗೆ ಲವಣಜಳಧಿಯೆನುತ್ತುಂ
ಮಿಗೆ ಪುಸಿವರ್ಜಳಧಿಯನೇ
ನಗುೞ್ದು ಮಾೞ್ಪಂತು ಕೆಱೆಯೊ ಬಾವಿಯೊ ಪೇೞಿಂ || ೧೧೧ ||
ಶರನಿಧಿಗಂಬಂ ತುಡೆ ಪರ
ಶುರಾಮನದು ತೆಗೆಯೆ ಸಪ್ತಕೊಂಕಣಮಾ ಸಾ
ಗರದ ತೆಗೆದೆಡೆಯೊಳಾಯ್ತೆಂ
ಬರಱಿಯದರ್ ಜಳಧಿ ಭಯದೆ [ತೆ]ಗೆದುದೆ ಪೇೞಿಂ || ೧೧೨ ||
ಸುರರೆಲ್ಲಂ ಬಡಲಗ್ ನೆರೆ
ದಿರೆಯಾ ದೆಸೆ ಕುಸಿದು ತೆಂಕ ನೆಗೆದೊಡಗಸ್ತೈಂ
ಪರಿದತ್ತಲ್ ನಿಲೆ ವಿಶ್ವಂ
ಭರೆ ಸಮತಳಮಾದುದೆಂಬರಿಳೆ ಕುಸಿದಪುದೇ || ೧೧೩ ||
ದಿನಕರನುದಯಿಸವೇಡಿ
ನ್ನೆನೆ ನೆನೆವೊಂ ದಿಬ್ಯಪುರುಷಭಕ್ತಿಯ ಮಾತಿಂ
ದಿನಕರನುದಯಿಸಲಂಜಿದ
ನೆನುತುಂ ಕಥೆವೇೞ್ವರಿನ್ನವಿತರಪುರಾಣಂ || ೧೧೪ ||
ಚಂ || ಅರಸರ ಕೊಟ್ಟ ದಾನಮನೆ ಕೊಳ್ಳದೆ ದೂಷಿಸೆ ಪೊಕ್ಕರಣ್ಯದೊಳ್
ತಿರತರುತಿರ್ವರುಂ ಋಷಿಯರೞ್ತಿಯೆ ಪಣ್ಣನೆ ಸೇವಿಸಲ್ಕೆ ಕಂ
ಡರಸನುಮಾ ಫಲಂಗಳೊಳಗಿಕ್ಕೆ ಸುವರ್ಣಮನ್ನಿನಭೋಜ್ಯಮೀ
ಮರದ ಫಲಂಗಳಕ್ಕೆನಲೊಡಂ ಪುೞು ತಿಂದುವವೆಂಬರೀಗಳುಂ || ೧೧೫ ||
ಧರಣೀಶರೀಯೆ ಕೊಳ್ವುದು
ಪಿರಿದು ದೋಷಂ ದಲೆಂದು ಪರಿದಾಗಳೆ ಕೊ
ಕ್ಕರಿಸದೆ ಪೆಣನಂ ತಿಂದುಂ
ನೆರೆದರ್ ಗಡ ಸಪ್ತಋಷಿಯರಮೃತಾಂಗನೆಯೊಳ್ || ೧೧೬ ||
ತನಗಿಟ್ಟೆಡೆಯಾದೊಡೆ ಸುರ
ಮುನಿಯೊರ್ವಂ ನಾಯ ಮಾಂಸಮಂ ಪೇಸದೆ ಸೇ
ವನೆ ಮಾಡಿ ತಪಂಗೆಯ್ದಾ
ತನೆ ಪೋದಂ ಮುಕ್ತಿಗೆಂಬರಿನ್ನವು ಕಥೆಗಳ್ || ೧೧೭ ||
ಪೊಲತಿಯಣಲಿಕ್ಕೆ ಶುನಕನ
ಕಳೆವರಮಂ ಪೊಕ್ಕು ಪೇಸದುಂಡಾ ಮುನಿ ನಿ
ರ್ಮಳನಾಗಿ ಮುಕ್ತಿರಮೆಯೊಳ್
ನಲಿದಂ ನಾಯಂದನೆಂಬನೆಂಬರ್ ತಕ್ಕರ್ || ೧೧೮ ||
ಉ || ಆಕಳಿಗೆರ್ಮೆಯಂ ಜವೆಗೆ ಗೋದುವೆಯಂ ತುರಗಕ್ಕೆ ಕೞ್ತೆಯಂ
ಲೋಕದ ನೆಲ್ಗೆ ಕೆಂಗಳವೆಯಂ ಬಱುಸೀರೆಗೆ ನಾರ ಸೀರೆಯಂ
ಶಾಕಟಿಕಕ್ಕೆ ಮತ್ತೆ ರಥಮಂ ಪ್ರತಿಮಾಡಿದನೊರ್ವ ಜೀಯನೆಂ
ದೇಕೆಯೊ ಮೂಢರೂಳ್ವರವನೆನ್ನುನುಮೊಪ್ಪಿರೆ ಮಾೞ್ವನೇ ಪೇಱಂ || ೧೧೯ ||
ಗೊರವರ ಶಾಪದಿನೌದುಂ
ಬರಮೆಲ್ಲಂ ಪುೞಿತವೆಂಬರರಳಿಯ ಪಣ್ಣುಂ
ಪಿರಿದು ಗೋಳಿಯ ಪಣ್ಣುಂ
ಗೊರವರ ಶಾಪದೊಳೆ ಪುೞಿತವೇ ಪೇೞಿಮಿದಂ || ೧೨೦ ||
ಸಾಮರ್ಥ್ಯಮುಳ್ಳ ಪುರುಷಂ
ಭೂಮಿಯೊಳವನೊರ್ವನಾದನೇ ಬಲ್ಲವರುಂ
ತಾಮೊಂದಂ ಮಾಡ[ರೆ] ವಿ
ಶ್ವಾಮಿತ್ರಂಗಖಿಳಮಿತ್ರನೇಂ ಪ್ರತಿಯಿಲ್ಲಾ || ೧೨೧ ||
ಮುನಿಗಳ್ ಪೆಱರಂ ಶಾಪಿಸಿ
ದನಿತಱಿನವರ್ಗಳ ತಪಂಗಳೞಿಗುಮದೊರ್ವಂ
ಮುನಿ ಪೆಱರಂ ಶಾಪಿಸಿದೊಡೆ
ತನಗೆ ತಪಂ ಪೆರ್ಚುತಿರ್ಕುಮೆಂಬರ್ ತಕ್ಕರ್ || ೧೨೨ ||
ಗೊರವರ್ ಶಾಪಂಗೊಟ್ಟೊಡೆ
ಸುರೇಂದ್ರರುಂ ಸ್ವರ್ಗದಲ್ಲಿ ಸುಖದಿಂದಿರುತುಂ
ಧರೆಗೆ ಕೆಡೆತಂದು ಕೀೞ
ಪ್ಪ ರೂಪಮಂ ತಾಳ್ದಿ ನಮೆವರೆಂಬರ್ ಮೂಢರ್ || ೧೨೩ ||
ಶಾಪಮನಿತ್ತೊಡೆ ಕುತ್ಸಿತ
ರೂಪಮನೆಯ್ದುವರನುಗ್ರಹಂ ಮಾಡಿದೊಡಾ
ರೂಪಂ ಬಿಸುಟ್ಟು ಮುನ್ನಿನ
ರೂಪನೆ ಗಡ ತಳೆವರೆಯ್ದೆ ಗೊರವರಿನವರ್ಗಳ್ || ೧೨೪ ||
ಪಿರಿದಪ್ಪ ಪುಣ್ಯಫಲದಿಂ
ಸುರೇಂದ್ರರಾದವರ್ಗಳಾ[ಗಿ] ಗೊರವರ ಶಾಪಾಂ
ತರದಿಂ ಕಿಡುವಂತೇಂ ಗಳ
ಸುರೇಂದ್ರರಾರ್ಜಿಸಿದ ಲಕ್ಷ್ಮಿ ಬೂದಿಯ ಬೊಟ್ಟೇ || ೧೨೫ ||
ಮ || ಜವನಿರ್ದಲ್ಲಿಗೆ ಸತ್ತರಂ ಪಿಡಿದುಕೊಂಡೊಯ್ವರ್ ಗಡಂ ದೂತರಾ
ಜವನಿಂ ಪೇೞೆನೆ ಚಿತ್ರಗುಪ್ತನವರೊಂದಾಚಾರಮಂ ಪೇೞ್ವನಂ
ತವರುಂ ಮಾಡಿದ ಪುಣ್ಯಪಾಪಫಲಮಂ ನೀಮಣ್ಬುದೆಂದೂಡುವಂ
ಜವನಿಂತಾಗಳುಮೆಂಬರಿನ್ನವಘಟಂ ದುರ್ಬೋಧರೊಂದೋದುಗಳ್ || ೧೨೬ ||
ಜವನುಂ ಕರಣಂಗಳುಮಾ
ಜವದೂತರುಮಿರ್ಪ ತಾಣಮಾವೆಡೆ ಬರೆಯ
ಲ್ಕವರಾರ್ಪರೆ ಲೋಕದ ಜೀ
ವವನೆಲ್ಲಂ ಲೆಕ್ಕವಲಗೆ ತಾ[ನ]ನಿತುಂಟೇ || ೧೨೭ ||
ಜೀವಂಗಳಮೂರ್ತಂಗಳ್
ಜೀವಂಗಳ್ ಪಿಡಿಯ ಬರ್ಕುಮೇ ಕರಣಂಗಳ್
ಜೀವಂಗಳ್ ಮಾಡಿದುದಂ
ತಾವೆಂತಱಿದಪ್ಪರುಂಟೆ ಕೇವಳಬೋಧಂ || ೧೨೮ ||
ಪರಕಾಯಂ ಪೊಕ್ಕುಂ ಮ
ರ್ತ್ಯರ ಜೀವಂ ಶಬಮನೆತ್ತಿ ನಡೆಯಿಪುವು ಬೞಿ
ಕ್ಕಿರದೆ ಮಗುೞೊಡಲೊಳಾಗಳೆ
ಬೆರಸಿರ್ಪುವು ಗಡ ಮಹಾತ್ಮರಿಂತಿರೆ ಪುಸಿವರ್ || ೧೨೯ ||
ಪಾವು ತಿನೆ ಸತ್ತವಂಗಾ
ಪಾವಿನ ಜೀವಿಸುವ ಬರಿಸದೊಳ್ ಭಾಗಮನಾ
ಪಾವಡಿಗಂ ಗಡ ಕುಡುವಂ
ಜೀವಿತಮದು ಭಾಗಿಪಂತು ಪೂವಿನ ಪೊನ್ನೇ || ೧೩೦ ||
Leave A Comment