ಖ್ಯಾತಿಯ ಜಿನಧರ್ಮಕ್ಕಿನಿ
ಸೋತೆಱಗದೆ ವಿಕಳಮತಿಗಳಿತರರ ಧರ್ಮ
ಕ್ಕೋತಿರ್ಪರದಂತುಟೆ ತಾಂ
ಸೋತಂ ಗಡ ರಂಭೆಯೆಂಬುದೇಂ ತಪ್ಪುಗುಮೇ || ೬೧ ||

ಜಿನಧರ್ಮಮನೊಲ್ಲದ ಮನು
ಜನಿಕಾಯಕ್ಕಿತರಧರ್ಮಮೆಸೆದಿರ್ಕುಮದೆಂ
ತೆನೆ ಮರುಳ ಕಣ್ಗೆ ಸಾಸಿವೆ
ಯೆ ನಾಡೆ ಕೊಡದ ತೋರಮೆಂಬರ ನುಡಿವೋಲ್ || ೬೨ ||

ಬಡತನಮೆಮ್ಮನ್ವಯದಿಂ
ದೆಡೆವಱಿಯದೆ ಬಂದುದೆಂದು ಬಿಡುವರ್ ಸಿರಿ ಸಾ
ರ್ದೊಡೆಮೆಂಬಂದದೆ ದೊರೆಕೊಂ
ಡೊಡಮೊಲ್ಲರ್ ಕುಪಥವರ್ತಿಗಳ್ ಸತ್ಪಥಮಂ || ೬೩ ||

ರ್ಹತಮಂ ಕೈಕೊಂಡು ಸಚ್ಚರಿತ್ರದೆ ನಡೆದಂ
ಗತಿವಡೆಗುಮೊರ್ಮೆ ನೊಸಲಂ
ಕ್ಷಿತಿಯೊಳ್ ತಾಟಿಸಿದೊಡಾಗಲಱಿಗುಮೆ ಸಗ್ಗಂ || ೬೪ ||

ಜಿನಮತಮಂ ಪೊರ್ದದೆ ಮ
ತ್ತಿನ ಧರ್ಮಂ ಸುಖದಮೆಂದು ಪೊರ್ದಿರ್ದೊಡೆ ಪಾ
ವಿನ ಪೆಡೆಯ ನೆೞಲ ನೆೞಲೆಂ
ದೆ ನಂಬಿ ಸಾರ್ದಂದಮಕ್ಕುಮಕ್ಕುಮೆ ಸೌಖ್ಯಂ || ೬೫ ||

ಅಱನೆಂದಱಿಯದೆ ಕೈಕೊಂ
ಡಱಿದುಂ ಬಿಡಲಾಗ ದೋಷಮೆಂಬರ ಮಾತಿಂ
ಮಱುಗದೆ ನಿರ್ಮಳಮೆನಿಸಿ
ರ್ದಱನಂ ಕಂಡಾಗಳದನೆ ಕೈಕೊಳ್ಗಱಿವಂ || ೬೬ ||

ಅಪವರ್ಗಮಾರ್ಗಮಲ್ತೆಂ
ದು ಪರೀಕ್ಷಿಸಿಯುಂ ಮಹಾಜನಂ ನಡೆದು[ದೆ ತಾಂ]
[ಸುಪಥಂ ಎ]ನುತುಂ ಪಲರುಂ
ಕುಪಥದೊ[ಳಂ] ಬಿಡದೆ ನಡೆವರಱಿವಿಲ್ಲದವರ್ || ೬೭ ||

ಜಿನಧರ್ಮಮೆಂತು ನೋೞ್ಪೊಡ
ಮನವದ್ಯಂ ಜಗದೊಳೆಂಬರಲ್ಲದೆ ಮಱೆದುಂ
ಮನಮಂ ತಾರರದೆಂತುಂ
ಜಿನಧರ್ಮದೊಳೆಸಗರಧಿಕಪುಣ್ಯವಿಹೀನರ್ || ೬೮ ||

ನೂರ್ವರ್ ವೈಷ್ಣವರುಂ ಸಾ
ಸಿರ್ವರ್ ಬೌದ್ಧರುಮನಕ್ಕುಮಾಗಿಸಲಿರ್ಚ್ಛಾ
ಸಿರ್ವರ್ ಮಾಹೇಶ್ವರರನ
ದೊರ್ವಂ ಜೈನನನದಾರ್ಗೆ ಮಾಡಲ್ ಬರ್ಕುಂ || ೬೯ ||

ಕನಕಮುಮಂ ಜೈನಮುಮಂ
ಮನಕ್ಕೆ ವಂದಾಗ ಮಾಡಲೇಂ ಬರ್ಕುಮೆ ಕ
ರ್ಬುನಮುಮನಿತರ[ಮು]ಮನದೊಂ
ದಿನಿಸಾನುಂ ಕ್ರಿಯೆಯಿನಾಗುಮಾಡುವ ತೆಱದಿಂ || ೭೦ ||

ಆವರಿವರೆನ್ನದೆ ಮುಂಬಿ
ಟ್ಟವನಿಪರಂ ಕೂಡೆ ಮಾಡಬಾರದ ತೆಱದಿಂ
ಶಿವಗತಿಗೆ ಭಾಗ್ಯವಿಲ್ಲೆನಿ
ಪವರಂ ಜೈನಕ್ಕೆ ತರಲೆಬಾರದದೆಂತುಂ || ೭೧ ||

ಜಿತದೋಷಂ ಶುಚಿ ಲೋಕ
ಸ್ತುತನೆನಿಪಂ ಪಿಡಿಯಲಾರ್ಪನಂತಲ್ಲದೆ ದು
ಷ್ಕೃತಿಗೆ ಸದೋಷಂಗೆ ಜಿನ
ಬ್ರತಮಂ ದಿಬ್ಯಮುಮನೆಂತು ಪಿಡಿಯಲ್ ಬರ್ಕುಂ || ೭೨ ||

ನಾನಾ ಸ್ವರೂಪದಿಂದಮೆ
ಯೋನಿಗಳೆಂಬತ್ತನಾಲ್ಕುಲಕ್ಕೆಯೊಳಮನಂ
ತಾನಂತಕಾಲಮುಂ ನಮೆ
ವೇನೋಜೀವಂಗಳರುಹಪದವಿಮುಖಂಗಳ್ || ೭೩ ||

ಚಂ || ಪರಿಕಿಸಿ ನೋೞ್ಪೊಡಾಪ್ತರತಿನಿಷ್ಠುರರಾಗಮವೊಂದವಿಂದಿ ದು
ಶ್ಚರಿತಮೆ ತಮ್ಮ ಧರ್ಮಮಿದು ಮುಕ್ತಿಗೆ ಕಾರಣಮಲ್ಲದೆಂದದಂ
ತರದೊಳೆ ನೋಡಿ ಬಿಟ್ಟಿರದೆ ಲೋಕದೊಳುತ್ತಮಮೆಂದೆ ನಂಬಿದರ್
ಪರಮಜಿನೇಂದ್ರಧರ್ಮದೊಳೆ ವರ್ತಿಪರುತ್ತಮಸೌಖ್ಯಭಾಜನರ್ || ೭೪ ||

ಚಂ || ಹರಿಹರ ಬುದ್ಧ ಸೂರ್ಯ ಕಮಳಾಸನಭಕ್ತರುಮಂತೆ ವೇದಭ
ಕ್ತರುಮವಿವೇಕದಿಂ ನಿಜನಿಜಾಗಮಮಾರ್ಗದೆ ಪೋಗಿ ಭಾಗ್ಯದಿಂ
ವರಜಿನಮಾರ್ಗದಿಂ ಬೞಿಕೆ ಕೊಂಡು ಕುಮಾರ್ಗಮನೆಯ್ದೆ ಬಿಟ್ಟು ಮ
ತ್ತಿರದೆ ಜಿನೇಂದ್ರಮಾರ್ಗದೊಳೆ ಸಂತೊಸದಿಂ ನಡೆವರ್ ವಿವೇಕಿಗಳ್ || ೭೫ ||

ವೈದಿಕ ವೈಷ್ಣವ ಪಾಶುಪ
ತಾದಿಗಳುಂ ಜೈನರಪ್ಪರಾ ಜೈನರದೆಂ
ದಾಡೊಡಮಂತಾ ಸಮಯಿಗ
ಳಾದುದುಮಂ ಮಱೆದುಮಪ್ಪೊಡಂ ಕೇಳ್ದಱಿಯೆಂ || ೭೬ ||

ಜಿನಮಾರ್ಗದೆ ನಡೆವಂ ಮ
ತ್ತಿನ ಸಮಯಕ್ಕೆಱಗನನ್ಯಸಮಯದ ಗುರುವುಂ
ಜಿನಮತಮಂ ಕೇಳ್ದೊಡೆ ಮು
ನ್ನಿನ ತಪಮಂ ಬಿಟ್ಟು ಜೈನನಾಗದೆ ಮಾಣಂ || ೭೭ ||

ಒಂದಂದಮಾಗಮಂ ಮ
ತ್ತೊಂದಂದಂ ದೆಯ್ವದಂದಮಾಚರಣಂ ಬೇ
ಱೊಂದಂದವೊಂದವಿಂದಿಯ
ಚಂದಮೆ ದಲ್ ಜೈನರಲ್ಲದವರೊಂದಂದಂ || ೭೮ ||

ಉ || ಆಪ್ತನಶೇಷದೋಷಪರಿವರ್ಜಿತ[ನಾ]ಗಲೆವೇೞ್ಕುಮನ್ನನ
ಪ್ಪಾಪ್ತನ ಸೂಕ್ತಮುಂ ಶಿವಸುಖಪ್ರದಮಾಗಲೆ ವೇೞ್ಕುಮಂತೆ ಮ
ತ್ತಾಪ್ತನಿರೂಪಿತಂ ಚರಿತಮುತ್ತಮಮಾಗಲೆವೇೞ್ಕುಮಾ ಸುಖಾ
ವಾಪ್ತಿಗಿದಲ್ತೆ ಮಾರ್ಗಮಿನಿತಲ್ಲದ ಮಾರ್ಗಮಮಾರ್ಗಮಲ್ಲ[ಮೇ] || ೭೯ ||

ವಸತಿ ಸುಖವಸತಿ ಮಾರ್ಗಂ
ಪ್ರಸಿದ್ಧ ಸೌಖ್ಯಕ್ಕೆ ಮಾರ್ಗಮಾಗಮಮತ್ಯಂ
ತ ಸುಖಾಗಮಮದಱಿಂದೊಂ
ದೆ ಸಾರಮೆಂತೆಂತು ನೋೞ್ಪೊಡಂ ಜಿನಮಾರ್ಗಂ || ೮೦ ||

ಮ || ಸ್ರ || ನಿಡುಮಾಳಂ ಮುಂತೆ ನೀರಿಲ್ಲಣಮೆ ಮಗುೞ್ಪೊಡಂ ಪಿಂತಣೂರ್ ಗೆಂಟು ಕಳ್ಳರ್
ಬಡಿವರ್ ಪಾರ್ದಿರ್ದು ಪಗಲಿೞಿದಪುದೆಂದಂಜಂತುಂ ಬಟ್ಟೆವೋಪಂ
ಗೆಡೆಯೊಳ್ ಪಣ್ತಿರ್ದ ಮಾವುಂ ಸುಭಟರ ನೆರವುಂ ನೀರುಮಿರ್ಪಂತಿರಿರ್ದ
ತ್ತೆಡಱಿಂದಾಸತ್ತ ಜೀವಾವಳಿಗೆ ಭುವನಕಾಂತಾರದೊಳ್ ಜೈನಧರ್ಮಂ || ೮೧ ||

ಮ || ಸ್ರ || ಅನಿತುಂ ಕಲ್ಪದ್ರುಮಂಗಳ್ ನೆರೆದು ಕುಡುವೊಡಂದಂದ[ವಂ] ತಾನೆ ಮುಂಕೊಂ
ಡನಿತುಂ ಮುನ್ನೀರ ನೀರೊರ್ವೞಿಗೆ ತೆಗೆದೊಡಂ ತಾನೆ ಗಂಭೀರವಾ[ಗಿ
ರ್ದ]ನಿತುಂ ಗೋತ್ರಾಚಳಂಗಳ್ ಬಿಡದೊಡನಡಕಿಲ್ಗೊಂಡೊಡಂ ತಾನೆ ಮೇಲ್ಗೈ
ಯೆನಲೇಂ ಕೈಗೆಯ್ದುದೋ ಭೂಭುವನಕಮಳಮಂ ಪೆರ್ಮೆಯಿಂ ಜೈನಧರ್ಮಂ || ೮೨ ||

ಭ್ರಾಂತೇಂ ಮುಕ್ತಿಶ್ರೀಪ
ರ್ಯಂತಂಬರಮೊಲ್ದು ಸುಖಮನೀವೆಡೆಯೊಳ್ ತಾ
ನಂತೇಕೆ ಕಾಮಧೇನುವಿ
ನಂತುಟೆ ಜಿನಧರ್ಮದಲ್ಲಿ ಸಂದೆಯಮುಂಟೇ || ೮೩ ||

ಅಕ್ಷೂಣಮಪ್ಪ ಸುಖಮನ
ಪೇಕ್ಷಿಸುವಂ ಜೈನಧರ್ಮಮಾರ್ಗದೆ ನಡೆಯಲ್
ದಕ್ಷನೆನಿಪ್ಪುದು ದಯೆಯಿಂ
ರಕ್ಷಿಸುವುದು ಜೀವನಿಕರಮಂ ನಿಶ್ಚಯದಿಂ || ೮೪ ||

ಕಡೆಯಿಲ್ಲದ ಸಂಸಾರದ
ಕಡೆಯೆಯ್ದುವ ಬುದ್ಧಿಯುಳ್ಳೊಡರುಹತ್ಪದಮಂ
ಬಿಡದೆ ನಡೆವುತ್ತುಮಿರ್ಪುದು
ನಡೆವುದು ಜಿನಧರ್ಮಮಾರ್ಗದಿಂ ಮತಿವಂತಂ || ೮೫ ||

ಜಿನಧರ್ಮವೊಳ್ಳಿತೆಂದೊಂ
ದಿನಿಸಾನುಂ ಮೆಚ್ಚಿದನಿತಱಿಂ ದುರ್ಗತಿಭಾ
ಜನನಲ್ಲನೆಂದೊಡನಿಶಂ
ಜಿನಮಾರ್ಗದೆ ನಡೆವವಂಗೆ ಗಹನಮೆ ಮೋಕ್ಷಂ || ೮೬ ||

ಪೆಱರಂ ತನ್ನಂತಿರೆ ಬಗೆ
ದಱಿವುಳ್ಳರ ಪೇೞ್ದು ಗೆಯ್ದು ದುರಿತದ ಬೇರೊಳ್
ನೆಱೆ ಬೆನ್ನೀರಂ ಪೊಯ್ದವ
ನುಱುವಱಿವಂ ಸ್ವಾರ್ಥವಿಕಳನಿದನೊಲ್ಲದವಂ || ೮೭ ||

ಒಡವೆಯುಮನೊಡಲುಮಂ ಮಡ
ಗಿಡದಂತವನೆಯ್ದೆ ದಾನದಿಂ ತಪದಿಂ ಪೂ
ಣ್ದೆಡೆಯುಡುಗದೆ ತವಿಸುವವಂ
ಪಡೆವುದು ಪರಿದಾಯ್ತೆ ಪರಮಸೌಖ್ಯಾಸ್ಪದಮಂ || ೮೮ ||

ತನುವಂ ಸುವ್ರತದಿಂದಂ
ಧನಮಂ ಸತ್ಪಾತ್ರದಾನದಿಂದಂ ತವಿಪಾ
ತನ ಜನ್ಮಂ ಸಫಲಂ ಮ
ತ್ತಿನವಂ ತಾಂ ಜನ್ಮಿಯೆನಿಸಿ ಜೀವನ್ಮೃತಕಂ || ೮೯ ||

ತನುವಿತ್ತಮೆಂಬ ಬಿತ್ತಂ
ಜಿನಧರ್ಮಕ್ಷೇತ್ರದಲ್ಲಿ ಪದ[ದೊಳ್] ಬಿತ್ತಿ
ರ್ದನುಪಮಸುಖಮಂ ಬೆಳೆವಂ
ಮನುಜಂ ಮತ್ತಿವನೊಲ್ಲದಂ ಮತಹೀನಂ || ೯೦ ||

ಮದದಿಂ ಜಿನಮಾರ್ಗದೊಳೆಸ
ಗದೆ ಮುನ್ನಿನ ಸುಕೃತಫಳಮನನುಭವಿಸುವವಂ
ಗದೆ ಸಫಲಂ ತದ್ಭವದೊಳೆ
ಕದಳೀಫಲದಂತೆ ಮೇಲೆ ಫಲವಿಲ್ಲೆಂತುಂ || ೯೧ ||

ಮಱಿದಿರ್ದಂ ಜವನೆಂದಱ
ನಱಿಯದೆ ಬಸನಮನೆ ಬಿಡದೆ ಪಾಟಿಸುವಾತಂ
ತೊಱೆಮಱೆದು ಪಟ್ಟುದೆಂದ[ದ]
ನಱಿಯದೆ ಪೊಕ್ಕಾೞ್ವನನವನುಕರಿಸಿರ್ಕುಂ || ೯೨ ||

ಚಂ || ಅಱಿಯಮೆಯಿಂದಮಕ್ಕೆ ಧನಲೋಭದಿನಕ್ಕೆಮ ಪಾತಕಂಗಳಂ
ತಱಿಸಲೆ ಮಾಡಿ ಮಾಡಿದಘಮಂ ಕಳೆಯಲ್ಕಣಮಾಱೆನೆಂದು ನೀಂ
ಮಱುಗದಿರಮ್ಮ ಕೆಟ್ಟ ಜಪಮುಂ ತಪಮುಂ ನಿನಗೇಕೆ ಚೆಚ್ಚರಂ
ಮಱಿವುಗೆ ಸಾಲ್ಗುಮೀಗ ಮರುಳಾಗದೆ ಪೋಗಿ ಜಿನೇಂದ್ರಧರ್ಮಮಂ || ೯೩ ||

ಚಂ || ಅೞಿಯೊಡಲೆಂಬ ಮಣ್ಣ ಮಱೆಗೋಂಟೆಯೊಳಿಂದ್ರಿಯದುಷ್ಪರಿಗ್ರಹಂ
ಗಳನೊಳಕೊಂಡು ಜೀವನಿರಲಾರ್ತಪನಾ[ಳಿ]ಯೆ ಲಗ್ಗೆಗೆಯ್ದು ತೊ
ತ್ತಳದುೞಿದಿರ್ಪನುದ್ದವರಿ[ದಿಂ] ಜವನಂತದಱಿಂದೆ ನಂಬಿ ನಿ
ರ್ಮಳ ಜಿನಧರ್ಮಮಾರ್ಗದೊಳೆ ನೀಂ ನಡೆದೆಯ್ದಪವರ್ಗದುರ್ಗಮಂ || ೯೪ ||

ಚಂ || ಕರಡಿ ಫಿಫೀಲಿಕಾವಳಿಗೆ ನಾಲಗೆವಾಸುವೋಲ್ ಯಮಂ ಭಯಂ
ಕರರಸನಾಗ್ರಮಂ ಧರೆಗೆ ಪಾಸಿದನಲ್ಲಿಗೆ ಕಾಯಲಾರ್ಪುದೇ
ಕರಿತುರಗಂ ಪದಾತಿಕವಚಂ ನಿಜರ್ದೋರ್ವಮ್ಮ ನೀಂ
ಮರುಳನೆ ಬಂದು ಪೊರ್ದು ಶರಣಿನ್ ನಿನಗೇಂ ಪೆಱತುಂಟೆ ಧರ್ಮಮಂ || ೯೫ ||

ಚಂ || ಕೊೞೆವನಿ ನೆತ್ತರೊಳ್ ಕಲಸಿ ಸಿದ್ದಿಗೆಯೊಳ್ ನೆಲಸಿರ್ದ ಕೀವಿನಂ
ತೊಳಗಿರೆ ನೆತ್ತರಿಂದಡಗಿನಿಂ ಮಿದುೞಿಂದೆಲುವಿಂದಮೇಧ್ಯದಿಂ
ಬೞಿಕದು ತೀವಿ ಸಂಗಡಿವೊಲಾದೊಡಲಲ್ಲಿ ಮಹಾತ್ಮ ನಿನ್ನ ನಿ
ರ್ಮಳತೆಯನೊಕ್ಕು ಪೊರ್ದಿರದೆ ಪೊರ್ದು ನಿರಂತರಸೌಖ್ಯಕೋಟಿಯಂ || ೯೬ ||

ಚಂ || ನರಕೆ ಮನುಷ್ಯತಿರ್ಯಗಮರಾದ್ಯಚತುರ್ಗತಿಯಲ್ಲಿ ನೀಂ ನಿರಂ
ತರಮೆನಿತಾನುಮಂದದ ಶರೀರದ ಭಾರದೊಳೊಂದಿ ಹಾಸ್ಯದೊಳ್
ಪೊರೆದಪೆ ಧರ್ಮಮಂ ಪಿಡಿದು ನಮ್ಮ ಪವರ್ಗಮನೇಕೆ ಜೀವ ಸಂ
ಸರಣಮಹಾಂಬುರಾಶಿಯೊಳಗೞ್ದು[ವೆ] ಮುನ್ನಿನ ಕೇಡು ಸಾಲದೇ || ೯೭ ||

ಚಂ || ಒದವಿದ ಮಿಥ್ಯೆಯೊಂದು ವಶದಿಂದಮೆ ನಾಂದೆ ಗಾಣದೆೞ್ತು ಮ
ಟ್ಟಿದುದೆನೆ ಮೆಟ್ಟಿ ಕೂಡೆ ತಿರಿವಂದದೊಳೀ ತ್ರಿಜಗಂಗಳೊಳ್ ತೋೞ
ಲ್ದುದು ನಿನಗಾಗ ದುಂಖಮದಱಿಂ ತ್ರಿಜಗಾಗ್ರಮನೆಯ್ದಿ ನಿತ್ಯಸೌ
ಖ್ಯದೊಳಿರು ಜೀವ ನಿಶ್ಚಳಿತದರ್ಶನಬೋಧಚರಿತ್ರರೂಪದಿಂ || ೯೮ ||

ಚಂ || ಮದದಿನಗುರ್ವುವೆತ್ತ ಮುಳಿಸಿಂ ಕೊಲೆಯಿಂದಘಲೋಹಬಂಧಮಾ
ದುದು ಬೞಿಕಂತೆ ಪುಣ್ಯದೊಳೆ ಭೋಗಸುವರ್ಣಸುಸೂತ್ರಬಂಧಮಾ
ದುದು ನಿನಗಮ್ಮ ಭದ್ರಗುಣಸೇತು ನಿರಂಕುಶನಾಗಿ ಬಂಧಯು
ಗ್ಮದ ತೊಡರೆಲ್ಲಮಂ ಪಱಿದು ನೀಂ ಪುಗು ಮುಕ್ತಿವನಾಂತರಾಳಮಂ || ೯೯ ||

ಚಂ || ಪಗೆ ನಿನಗಿರ್ವರಲ್ತೆ ಸುಖದುಃಖಫಲಂಗಳನೂಡಿ ಕೊಲ್ವ ಜೆ
ಟ್ಟಿಗರಿರೆ ಪುಣ್ಯಪಾಪಖಳರಿರ್ದಪರಂತವರ್ಗೇಕೆ ಪಕ್ಕುಗೊ
ಟ್ಟಗವಡುತಿರ್ಪೆ ನಂಬದಿರವಂದಿರನೆಲ್ಲಿಯುಮಾತ್ಮ ನೀಂ ಮನಂ
ಬುಗೆ ನೆನೆ ಸಂತತಂ ನಿನಗುಣಸ್ತವದಿವ್ಯವಿಷಾಪಹಾರಮಂ || ೧೦೦ ||

ಚಂ || ಜವದೊಳೆ ಪುಣ್ಯಪಾಪದ ಪೊನಲ್ ಕವಿತರ್ಪುದು [ಮೇಗೆ] ಮೇರೆಗೆ
ಟ್ಟವಿಚಳಶುದ್ಧಭಾವದೊಳೆ ನಿಂದು ನಿಜೋರ್ಜಿತಕರ್ಮದೀರ್ಘಿಕಾಂ
ಬುವನುಗುತೊ[ತ್ತು] ಜೈನಮತಪಾತ್ರದೊಳಂತವು ಕೂಡಿ ನಿನ್ನನೀ
ಭವಜಳರಾಶಿಮಧ್ಯದೊಳಗೞ್ದದ ಮುನ್ನಮೆ ಭವ್ಯ ಚೆಚ್ಚರಂ || ೧೦೧ ||

ಚಂ || ಹೃದಯಮನೆಲ್ಲಮೆಯ್ದೆ ಲೊಲಗೞ್ತಲೆ ತೀವಿರೆ ಜೀವ ಮುಂದುಗಾ
ಣದೆ ನಡೆದಂಧಕೂಪದೊಳೇಕೆಯೊ ಬಿೞ್ದಪೆ ನಿನ್ನ ದೇಹಗೇ
ಹದೊಳದೆ ಬೋಧದೀಪಮದನಿಂ ಬೆಳಗಂತದಱಿಂದೆ ಜೈನಮಾ
ರ್ಗದೆ ನಡೆದೀ ತ್ರಿಲೋಕದೊಳಗುಳ್ಳ ಪದಾರ್ಥಮನೆಯ್ದೆ ಕಂಡಪಯ್ || ೧೦೨ ||

ಶಾ || ದಾರಿದ್ರ್ಯಾಗ್ನಿ ಮಹಾಕ್ಷುಧಾಗ್ನಿ ವಿಚಳತ್ಯೋಪಾಗ್ನಿ ಶೋಕಾಗ್ನಿ ದು
ರ್ವಾರ ಪ್ರಸ್ಫುರದಂಗಜಾಗ್ನಿಯೆನಿಪೀ ಪಂಚಾಗ್ನಿಯಿಂ ಜೀವ ನೀ
ನೋರಂತೇಕೆಯೊ ಬೆಂದಪಯ್‌ನದಿಪು ಬೇಗಂ ಜೈನಧರ್ಮಾಮೃತಾ
ಸಾರಸ್ರೋತದೆ ಶಾಂತಿಯಂ ತಳೆದು ನೀನಿರ್ಪಯ್ ಕುಳಿರ್ ಕೋಡುತುಂ || ೧೦೩ ||

ಚಂ || ಜಿನಪತಿಪೂಜೆ ದಾನಮಪಪವಾಸ ಸುಶೀಲಮೆನಿಪ್ಪ ನಾಲ್ಕುಮೊ
ಳ್ಪಿನ ಮೊಲೆವೆತ್ತ ನಿನ್ನ ಶುಭಕರ್ಮಮನೋಹರಕಾಮಧೇನು ಸೈ
ಪಿನೊಳನುರಾಗದಿಂ ಕಱಿವ ಧರ್ಮರಸಾಮೃತಮಂ ತಗುಳ್ದು ಭ
ವ್ಯನೆ ತಣಿವನ್ನಮೀಂಟು ತಳೆದಪ್ಪೆ ಬೞಿಕ್ಕಜರಾದುರತ್ವಮಂ || ೧೦೪ ||

ಹೃದಯದೊಳಿರ್ಪುದು ಪಂಕಜ
ಮದಱೊಳ್ ಪರಮಾತ್ಮ ನಿರ್ಪರೆಂಬರ ಮಾತಿಂ
ಕುದಿಯದೆ ದೇಹಪ್ರಮಿತಂ
ಸದಮಳಗುಣನಾತ್ಮನೆಂದೆ ಭಾವಿಸುಗಱಿವಂ || ೧೦೫

ಬಿಡೆ ಬಾಹ್ಯಪದಾರ್ಥಂಗಳ
ತೊಡರ್ಪನಿಂದ್ರಿಯಸಮಾಜದೊಳ್ ಚಿತ್ತಂ ತಾಂ
ಮಾರುತನಲೆಪಿಲ್ಲದ
ಸೊಡರವೊಲಿರ್ಪಾ ಚಿದಾತ್ಮನಂ ಧ್ಯಾನಿಸುವೆಂ || ೧೦೬ ||

ತ್ವರಿತಂ ಮುಕ್ತಿಶ್ರೀಯೊಳ್
ನೆರೆಯಲ್ಕಾಟಿಸುವ ಬುದ್ಧಿಯುಳ್ಳೊಡೆ ಬೇಗಂ
ಪರಮಜಿನೋದಿತಮಾರ್ಗದೆ
ಚರಿಯಿಪುದಂತದನೆ ಭಾವಿಸಿರುಳುಂ ಪಗಲುಂ || ೧೦೭ ||

ಚಂ || ಜಿನಮತಮುತ್ತರೋತ್ತರಸುಖಪ್ರಮೆಂದದನೆಲ್ಲ ಮಾರ್ಗದಿಂ
ಮನಮೊಸೆದಯ್ದೆ ಕೇಳ್ದುಮಿದೆ ನಿರ್ಮಳಧರ್ಮಮೆನುತ್ತೆ ನಂಬದಂ
ತನಗೆ ನಿಮಿತ್ತದಿಂ ಶಕುನದಿಂ ನೆಱೆ ನಂಬುಗೆಯುಳ್ಳೊಡಲ್ಲಿ ನೆ
ಟ್ಟನೆ ತಿಳಿದೆಯ್ದೆ ನಂಬಿ ಬೞಿಕಾರ್ಹತನಕ್ಕೆ ವಿವೇಕಿಯಪ್ಪವಂ || ೧೦೮ ||

ತ್ರೈಲೋಕ್ಯಸಾರಮಮೃತ
ಶ್ರೀಲಲನೆಯನೊಲಿಪುದಣ್ಣ ಪಾಲಾ ಮರ್ದಾ
ಸಾಲೆ ಗುಡಿಯೆಂಬುದಂ ಬಗೆ
ದಾ ಬೆಸದಿಂದೊಲ್ದು ಕೊಳ್ಳ ಜೈನಬ್ರತಮಂ || ೧೦೯ ||

ಶುಭಮತಿಯುಂ ಸದ್ಗತಿಯುಂ
ಪ್ರಭುತ್ವಮುಂ ಸಕಳಸೌಖ್ಯಮುಂ ಶಾಂತಿಯುಮ
ತ್ಯಭಿನವಮೆನೆ ಸಮನಿಸುಗುಂ
ಪ್ರಭಾತದೊಳ್ ಜೈನಧರ್ಮಮಂ ಕೇಳಲೊಡಂ || ೧೧೦ ||

ಇದನಾವನೋಜೆಯಿಂದಂ
ಪದಪಿಂದಿಂಬಾಗೆ ಕೇಳ್ವನಂತಾತಂ ಜೀ
ವದಯಾಪರನಪ್ಪಂ ಧ
ರ್ಮದ ತೆಱನುಮನಱಿಗುಮಂತ್ಯದೊಳ್ ಸುಖಿಯಕ್ಕುಂ || ೧೧೧ ||

ಧರಣಿಯನಾದರದಿಂದಂ
ಧರಣೀಶ್ವರರೊಲ್ದು ಪಾಲಿಸುತ್ತಿರ್ಕೆ ಜಿನೇ
ಶ್ವರಧರ್ಮಮೆಯ್ದೆ ಸುಖದೊಳ್
ಪರಿದೆಸೆಗೆ ಜಗಕ್ಕೆ ಶಾಂತಿಯಕ್ಕನವರತಂ || ೧೧೨ ||

ಪರಮಾತ್ಮನೆನಿಸಿದರುಹ
ತ್ಪರಮೇಶ್ವರನಮಳಕೀರ್ತಿಯೆಂತಂತಿರೆ ವಿ
ಸ್ತರಿಸಿ ಕರಮೆಸೆಗೆ ಬಮ್ಮಂ
ವಿರಚಿಸಿದೀ ಕಾವ್ಯಮಖಿಲಬುಧಜನಸೇವ್ಯಂ || ೧೧೩ ||

ಮ || ಸ್ರ || ಘನಕರ್ಮಾರಾತಿಸಂದೋಹಮನವಯವದಿಂ ಗೆಲ್ದು ನಿಃಶ್ರೇಯಸಶ್ರೀ
ವನಿತಾಸಂಭೋಗಸೌಖ್ಯಾಕರದೊಳಮಿತಬೋಧಾಕರಾವಾಸದೊಳ್ ಭ
ವ್ಯನಿಕಾಯಾಭೀಷ್ಪಲೋಕತ್ರಿತಯಶಿಖರದೊಳ್ ನಿಂದ ಲೋಕೈಕನಾಥಂ
ಜನನವ್ಯಾಪಾರದೂರಂ ಕುಡುಗೆ ನಿಜಸುಖಾವಾಪ್ತಿಯಂ ಶಾಂತಿನಾಥಂ || ೧೧೪ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಜರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳ ಶ್ರೀಜಿನಧರ್ಮವ್ಯಾವರ್ಣನಂ ಪಂಚದಶಾಧಿಕಾರಂ