ಲೋಕದೊಳಗುಳ್ಳ ದೇವಾ
ನೀಕಮದೊಂದಾವಿನಲ್ಲಿ ನೆಲಸಿರ್ಪದೊ ಮೇಣ್
ಗೋಕುಲದೊಳಲ್ಲಿಗಲ್ಲಿಗ
ನೇಕಂ ರೂಪಾಗಿ ನೆಲಸುವುದೊ ಪೇೞಿಮಿದಂ || ೬೬ ||

ಮುನ್ನಿನ ಪಾಪದ ಫಲದಿಂ
ದಿನ್ನುಂ ನಮೆವುತ್ತುಮಿರ್ಪ ಪಶುಗೆಱಗುವವಂ
ತೊನ್ನಂಗೆ ತುೞಿಲ್ಗೆಯ್ದಂ
ಗೆನ್ನಂತಾಗೆಂದನೆಂಬುದನೆ ನೆನೆಯಿಸುಗುಂ || ೬೭ ||

ಕವಿಲೆಗಳ ಪೆಱಗೆ ಪರಿಪರಿ
ದವು ಸರುಗಾಡುತ್ತುಮಿರ್ದೊಡಂತಿರೆ ಬಲಗೊ
ಡಿವು ದೆಯ್ವಮೆಂದು ಪೊಡೆವಡು
ವವರಂದದೆ ಜೈನರಲ್ಲಿ ಕುತ್ಸಿತರೆಱಗರ್ || ೬೮ ||

ಶಿಷ್ಟನವಿವೇಕಿಯಾದೊಡೆ
ಕಷ್ಟಂ ಪಶುಕಲ್ಪನೆಂಬ[ರಂತೆಂದು]ದಱಿಂ
ಕಷ್ಟಂ ಪೆಱತುಂಟೆಂಬರ
ಕಷ್ಟಮುಮಂತಂತದರ್ಕೆ ಬಿಡದೆಱಗುವವಂ || ೬೯ ||

ಒರ್ಮಾನಂಗಱೆವಾವಿಂ
ಗೊರ್ಮೆಯುಮೆಱಗುತ್ತುಮಿರದೆ ಕೊಡವಾಲ್ಗೞಿವಾ
ಎರ್ಮೆಗೆಱಗುವುದು ಪಶುವಿಂ
ನೂರ್ಮಡಿ ಫಲಮೀಗುಮದಱಿನೆಱಗುಗೆ ಭಕ್ತರ್ || ೭೦ ||

ಅಡಿಂಗೆ ಮೆಲ್ಲನೆಱಗುಗೆ
ಕೋಡುಳ್ಳಾವಿಂಗೆ ಮತ್ತೆ ತಲೆವಾಗುಗೆ ಮ
ತ್ತಾಡಿಂದಿರ್ಮಡಿ ಕೋಡು
ಳ್ಳಾಡೆರ್ಮೆಗೆ ತಾನುಮೊಲ್ದು ಪೊಡೆವಡುಗೆ ಫಲಂ || ೭೧ ||

ಇಂತಱಿವರೊಳರೆ ಪಶುವಿನ
ಪಿಂತೊಳ್ಳಿತು ಮುಂತಮೇಧ್ಯಮೆಂದೆಂಬರದಿ
ನ್ನಂತೆ ಸಲೆ ಸರುಗವಾಡುವು
ದಂತದಱಿಂ ಮುಖಮಮೇಧ್ಯಮೆಂಬರದುಚಿತಂ || ೭೨ ||

ಸುರಿತರ್ಪ ಕವಿಲೆಯುಚ್ಚೆಯ
ನಿರದೊಯ್ಯನೆ ತಳಿದು ತಮ್ಮ ತಲೆಯೊಳ್ ಕುಡಿವಾ
ನರರುರುಗುರಮಂ ತಿಂಗುಂ
ನಿರುತಂ ಕೃತವಱಿವ ದಯವಮಾವುದೊ ಪಶುವಿಂ || ೭೩ ||

ಜೀವಂ ಕರ್ಮವಿಪಾಕ[ದೆ]
ಪಾವುಂ ತೇೞಾಗೆ ಪಲಬರುಂ ಭಾವಿಸುಗುಂ
ಕಾವುದೆ ತಮ್ಮಂ ಪುೞುಗಳ್
ಭಾವಕರೇಕಱಿದು ಮಾಣರೊಳ್ಳಕ್ಕರಿಗರ್ || ೭೪ ||

ನಾಡೆಯುಮರ್ಚಿಸುವರ ಮೆ
ಯ್ಯೇಡನಣಂ ಕಾಯಲಾಱವೆಂತುಂ ನೊಣೆದೀ
ಡಾಡುವ ಸಾರಂಗದ ಮೆ
ಯ್ಯೇಡನೆ ಕೆಡಿಸುವುವು ನಾಗರೇಂ ಸನ್ನಿದಮೋ (?) || ೭೫ ||

ಪಾವಂ ಕೊಲ್ವರ್ ಸುಟ್ಟಿಂ
ಮೀವರ್ ಪೆಱರಿಂದಮಾದೊಡಂ ನಡುವಿರುಳುಂ
ಪಾವಿನ ಸಾವಂ ಕೇಳ್ದುಂ
ಮೀವರ್ ಪಾವಿಂಗೆ ಭಕ್ತರಾಗಿ ಮರುಳ್ಗಳ್ || ೭೭ ||

ಕೆಱೆ ತೊಱೆ ಬಾವಿಗಳಂ ಪೊ
ಕ್ಕಱುಚುತ್ತುಂ ಬೆಂದ ನಾಗನಂ ಪೆಸರ್ಗೊಂಡುಂ
ಮೊಱೆಯಿಡುವರುಮನ್ಯಾಯದೆ
ತೆಱೆವೇೞ್ದೊಡೆ ನಾಗ[ರಂ]ತು ಗಾವಿಲರೊಳರೇ || ೭೮ ||

ಕಚ್ಚದಿರಿಮೆಂದು ಭಯದಿಂ
ನಿಚ್ಚಂ ಮೊಱೆಯಿಟ್ಟು ಪುತ್ತನರ್ಚಿಸುತಿರೆಯುಂ
ನಚ್ಚನಿ ನಾಗರದೆಂತುಂ
ಕಚ್ಚದೆ ಮಾಣ್ದಪುವೆ ಭಕ್ತರಂ ತೊಡರ್ದಾಗಳ್ || ೭೯ ||

ನಡುಗಿ ಪೊಡೆವಡುವುದುಂ ಮೊಱೆ
ಯಿಡುವುದುಮೇಕಣ್ಣ ಪಿಡಿದು ಪಲ್ಗಳೆ[ಮಂ] ಪಾ
ವಡಿಗನೆನಿಪವನ ಮೆಯ್ಯಂ
ಕಿಡಿಸಲ್ಕಾರ್ತಪುವೆ ತಮ್ಮ ನಚ್ಚಿನ ನಾಗರ್ || ೮೦ ||

ಅಸುವೆವೊರಲೊನಕೆ ಗೂಟಂ
ಪೊಸತಿಲ್ ಮನೆಮನೆಯ ಕಂಭವೊಲೆ ಪಡಿ ಪಾ[ೞುಂ]
ಪೊಸೆವ ಮರನಂ ಬಿಲಂ ತೊೞ
ಲಿ ಸಮಸ್ತಂ ದೆಯ್ವಮಿಂತಿವೆಂಬರ್ ಮೂಢರ್ || ೮೧ ||

ದಾರಿಯ ಹೊರೆಯಣ ಗುಡ್ಡೆಯ
ನೂರ ಸಮೀಪದ ಮರಂಗಳಂ ಕಲ್ಗಳನಂ
ಭೋರುಹವನಮಂ ಭಕ್ತಿಯಿ
ನೋರಂತರ್ಚಿಸುತ್ತುಮಿರ್ಪರ್ ಮೂಢರ್ || ೮೨ ||

ದೇವಾರ್ಚನೆಗೆಯ್ದಲ್ಲಿಂ
ಪಾವುಗೆಯಂ ಮೆಟ್ಟಿ ನಡೆದು ಮನೆದೆಯ್ವಕ್ಕುಂ
ಗೋವಾಜಿಗಜಾಸ್ತ್ರಕ್ಕಂ
ಗಾವಿಲರರ್ತಿಯಿ[ನೆ] ತಾವು ಪೊಡೆವದುತಿಪ್ಪರ್ || ೮೩ ||

ಮಾರಬ್ಬೆ ಮಸಣವಾಸಿಣಿ
ಬೀರಂ ಮೈಲಾರನೆಂಬಿವರ ರೂಪಂ ವಿ
ಸ್ತಾರಿಸಿ ಮಾಡಿಸಿದಾತಂ
ನಾರಕದುಃಖದೊಳೆ ಮಱುಗುಗುಂ ಪಲಕಾಲಂ || ೮೪ ||

ಪಲವುಂ ಪ್ರಾಣಿಗಳಂ ನಿ
ಚ್ಚಲುಮೞಿಯಲ್ ಮದ್ಯಮಾಂಸಮಂ ಸೇವಿಸಲುಂ
ನಲಿವರ್ಗ[ಳ್] ಬಳರಿಯ ದೇ
ಗುಲಮಂ ಮಾಡಿಸುವರೞ್ತಿಯಿಂ ಪಾಪಿಷ್ಠರ್ || ೮೫ ||

ಅತಿಶಯವಾಗಿರೆ ಪೂರ್ವಾ
ರ್ಜಿತಪುಣ್ಯದ ಫಲಮನುಣುತೆ ತಾವುಂ ಮೂಢರ್
ಮತಿಗೆಟ್ಟೀ ಭವದೊಳ್ ದೇ
ವತೆಗಳನರ್ಚಿಸಿದೊಡಾಯ್ತು ಸಿರಿ ತಮಗೆಂಬರ್ || ೮೬ ||

ಋತುಮತಿಗೆ ನಿಜೇಶನ ಸಂ
ಗತಿಯಿಂ ಸುತರಾಗೆ ದೇವರಿತ್ತಾ ವರದಿಂ
ಸುತರಾದರೆಂಬರಂತಾ
ಸುತರಂ ಬಂಜೆಯರ್ಗೆ ದೇವರೀಯದುದೇನೋ || ೮೭ ||

ನಿಜಕರ್ಮವಶದಿನೆಯ್ತಂ
ದು ಜನಿಯಿಕುಂ ಜೀವಮಲ್ಲದಂತದನಾರ್ಗಂ
ಸೃಜಿಯಿಸ[ಲೆ] ಬರ್ಕುಮೆ ಮೂ
ಢಜನಂ ವರಮೀಯೆ ಪಡೆದೆವೆಂಬರಿದಘಟಂ || ೮೮ ||

ಸಂತತಧನಧಾನ್ಯಂಗಳ
ನಂತಿಲ್ಲದ ಸಿರಿಯನಿದಿರ್ಗೆ ಕುಡುವರೆನುತ್ತುಂ
ಭ್ರಾಂತಾತ್ಮ ರೞ್ತಿಯಿಂದಂ
ವ್ಯಂತರದೇವರನೆ ನಿಚ್ಚಮರ್ಚಿಸುತಿರ್ಪರ್ || ೮೯ ||

ಪೂಜಿಸಿದವರ್ಗೇವೇೞ್ಪುದ
ನಾ ಜನ್ಮದೊಳೀವ ದೆಯ್ವಮುಳ್ಳೊಡೆ ಬೞಿಯಂ
ರಾಜಾಶ್ರಯಮೇವುದೊ ಸಲೆ
ಪೂಜೆಗಳಂ ಕೊಟ್ಟು ಕಟ್ಟಿಕೊಳ್ಳುದು ಪೊನ್ನಂ || ೯೦ ||

ಉತ್ತಮಮಾಹೇಶ್ವರರುಂ
ಮತ್ತಾವೈದಿಕರುಮಂತೆ ವೈಷ್ಣವರುಂ ತ
ಮ್ಮುತ್ತಮಿಕೆಯನೊಕ್ಕಾಗಡೆ
ಸತ್ತಪೆಮೆಂದಂಜಿ ಬಳರಿಗರ್ಚನೆಗುಣಿವರ್ || ೯೧ ||

ಪೆಂಪೇಂ ನೆಱೆ ತೊಱೆದರಿಸಿನ
ಮಂ ಪೇಸದೆ ಪೂಸಿ ಕಟ್ಟಿ ಬಾಸಿಗಮಂ ಕೋ
ಲಿಂ ಪಿಡಿದು ಕುಣಿವರರ್ಚನೆ
ಯಿಂ ಪೞಿವರನಱಿಯರನ್ಯಸಮಯಿಗಳಾರುಂ || ೯೨ ||

ಪೊಲೆಯರ್ ಪಱೆಯಂ ಬಾಜಿಸಿ
ನಲಿದರ್ಚನೆಯಾಡಿ ಮುಟ್ಟಿನೋೞ್ಪರನೆಲ್ಲಂ
ಪೊಲೆಗಲ[ಸೆ] ಬಂಧುಜನಮುಂ
ಪೊಲೆಯರುಮೊಂದೆಡೆಯೊಳೊಂದೆ ನರಕಕ್ಕಿೞಿವರ್ || ೯೩ ||

ಮಾರಬ್ಬೆ ಮಸಣವಾಸಿಣಿ
ಬೀರಂ ಮೈಲಾರನೆಂಬಿವರ ನೋಂಪಿಗಳೊಳ್
ಪಾರುವರಂ ಪೊಲೆಯರ್ ಬಂ
ದೋರಂತಿರೆ ಮುಟ್ಟಲಕ್ಕುಮೆಂಬರ್ ಪಾರ್ವರ್ || ೯೪ ||

ಘನಕರ್ಮವಶದೆ ಮುನ್ನಂ
ಮನುಜಂ ತನ್ನಿಂ ಕನಿಷ್ಠನಂ ಪೂಜಿಸುವಂ
ದನುಚಿತಮೆನೆ ಮತ್ತಿನ ಬೀ
ರನ ಗುಡಿಗಳ ಮುಂದೆ ಕುಣಿವುದಾವುಚಿತಗುಣಂ || ೯೫ ||

ಭಾವಿಸುತುಂ ತನಗೆ ಮಹಾ
ದೇವಂ ತಾನಿಷ್ಟದೆಯ್ವಮೆಂಬರ್ ಮತ್ತಂ
ಬೋವದೆ ದೇವತೆಗಳುಮಂ
ಸೇವಿಪನೆಂದಂದು ನಗಿಸಿಕೊಳ್ಳನೆ ತನ್ನಂ || ೯೬ ||

ಪಿಱಿತಿನಿಯಂ ವ್ಯಂತರಮಂ
ಪಱಿಕರುಮಂ ಪೂಜಿಸಲ್ಕೆ ವೇೞ್ಕುಮೆನುತ್ತುಂ
ಜಱುಚವರೆಂತು ಭುವನ
ಕ್ಕೆಱೆಯನನೋಲಗಿಪೆವೆಂಬ ರೂಢಿಯ ಶೈವರ್ || ೯೭ ||

ನರಪತಿಯಣುಗುಂ ಸೊಣಕಡಿ
ಕರಮಂ ಪೊಲೆಯರುಮನೋಲಗಿಪ್ಪುದೆ ಭುವನೇ
ಶ್ವರನಂ ಪೂಜಿಸುವಂ ವ್ಯಂ
ತರಮಂ ಪೂಜಿಸುವುದುಚಿವಮೆ ಗುಣವಂತಂ || ೯೮ ||

ಕುಲದೆಯ್ವದ ಪೆಸರಂ ಮ
ಕ್ಕಳ ಪೆರ್ಸಗಳನಿಟ್ಟು ಷೋಡಶಕ್ತಿಯೆಗಳನಾ
ಕುಲದೆಯ್ವದ ಮುಂದಿರಿಸಿ[ಯೆ]
ಚಳಮತಿಗಳ್ ಮಾೞ್ಪರಂಜಿ ಮೂಢಜನಂಗಳ್ || ೯೯ ||

ಸಂತತಿಗೆ ಬಸಿಱೊಳಿರ್ದ
ಲ್ಲಿಂ ತೊಡಗಿರ್ದೆಯ್ದೆ ಷೋಡಶಕ್ರಿಯೆಗಳುಮಂ
ವ್ಯಂತರರ ಮುಂದೆ ಮಾಡದೆ
ಶಾಂತಾತ್ಮನ ಜಿನನ ಮುಂದೆ ಮಾಡುಗೆ ಶುಭದಂ || ೧೦೦ ||

ಸಿರಿಯಿಲ್ಲದಂದು ದೆಯ್ವಂ
ಬರಲೊಲ್ಲವು ಲಕ್ಷ್ಮಿ ಬಂದು ಸಾರ್ದಿರ್ದಾಗಳ್
ಪರಿತರ್ಪುವೆ ಮೂಢಜನಂ
ಸಿರಿ ಮೂಡಲ್ಕಲಸದಾಡುವರ್ ವ್ಯಂತರಮಂ || ೧೦೧ ||

ಸಿರಿಯಾಗೆ ದೆಯ್ವದಚ್ಚಂ
ತುರಿಪದೆ ಮಾಡಿ[ಸುವ]ರೊಕ್ಕಲಂ ಪೀಡಿಸುವರ್
ಸಿರಿ ಪೋಗೆ ತನ್ನ ರೂಪಂ
ಕರಗಿಸಿದೊಡೆ ಮುಳಿಯದೇಕೆಯೊ ಮುರುಟಿರ್ಕುಂ || ೧೦೨ ||

ಸೀರಿಗೆ ಪೇಲಂ ಕಳೆಯೆನೆ
ಮಾರಿಯದಂ ಕಳೆಗೆ ತಿನ್ನು ನೀಂ ಪೇಲನೆನಲ್
ಮಾರಿಯದ ತಿಂಗೆಯೆಂದಿಂ
ತಾರಾನುಂ ನುಡಿವರಾಕೆ ಕುನ್ನಿಯೊ ಪೇೞಿಂ || ೧೦೩ ||

ಪಸಕಾಲದೊಳೆಱಿಯಪನಾ
ಗಸದಬ್ಬೆ ಬಳಾರಿ ಭೈರವಂ ಮೈಲಾರಂ
ಪುಸಣಿ ಮಾರಬ್ಬೆಯೆಂದಿಂ
ತು ಸತ್ತರಾ ಭಕ್ತರೇಕೆಯೋ ಕೊಂಡಾಡರ್ || ೧೦೪ ||

ದೆಯ್ವದ ಜನ್ನಿಗೆಯುಮನಾ
ದೆಯ್ವದ ಬಣ್ಣಮುಮನಚ್ಚುಮಾ ಕಳ್ಳರ್ ಕೊಂ
ಡೊಯ್ವಲ್ಲಿ ಕಾಯಲಾಱದ
ದೆಯ್ವಂಗಳ್ ತಮಗೆ ಭಕ್ತರಂ ಕಾದಪುವೇ || ೧೦೫ ||

ಚಂ || ಮನೆಯವರಟ್ಟುದಂ ತನಗೆ ಮೀಸಲನರ್ಚಿಸದನ್ನಮುಣ್ಣರಾ
ಮನೆಗಧಿದೆಯ್ವಮಾಗಿ ಗಡ ಕನ್ನಮನಿಕ್ಕುವ ಕಳ್ಳರಂ ಕರಂ
ತಿನಲಣಮಾಱದಿರ್ದೊಡಮದೊರ್ಮೆಗೆ ಕೂಗಿಡಲಾರ್ತಳಿಲ್ಲ ನಾ
ಯ್ತನದೊಳೆ ಮೀಸಲೆಂಬುದಱಿನೊಕ್ಕುದನು[ಣ್ಣ]ಳೆ ದೇವಿ ಸಾವಳೇ || ೧೦೬ ||

ಉಸಿರಿಂಗುಸಿರಂ ಕುಡುವುದು
ಮಸಣದ ಮಾರಕ್ಕ ಕಾವುದಿ[ದೊ] ರ್ಮೆಯುಮಾ
ಗಸದಬ್ಬೆ ಬೀರ ಭೈರವ
ದೆಸೆದೆಯ್ವಮೆ ನೀವುವೆಮ್ಮನೆಂಬರ್ ಮೂಢರ್ || ೧೦೭ ||

ಮಸಗಿದುದು ಬೇನೆಯಂ ಮಾ
ಣಿಸು ದೇವತೆಯೆಂದು ಪರಕೆಯಂ ನುಡಿದೊಡೆ ಮಾ
ಣಿಸುವಳೆ ದೇವತೆ ವೇದನೆ
ಯ ಸಮಾಪ್ತಿಯೊಳೆರವಿಗೊಳ್ಳದೊಡೆ ನುಂಗುವ[ಳೇ] || ೧೦೮ ||

ದೇವತೆ ಪೆಱರನದೆಂತುಂ
ಕಾವಳ್ ಗಡ ತನ್ನ ಪೆರ್ಮಗಂ ಜೋಕೊವರಂ
ಸಾವಾಗ ಕಾಯಲಾಱದ
ಕೀವಿಲಿ ಪೇೞ್ ಪೆಱರ್ಗೆ ಮಾಡಲಾರ್ಪಳೆ ಸುಖಮಂ || ೧೦೯ ||

ಕುಱಿಯಂ ಕಳ್ಳಂ ಕೂೞಂ
ನಱುನೆಯ್ಯಂ ಬೇಡಿ ತಿಂಬ ಪಿಱಿತಿನಿ ಬರವಂ
ಪೆಱರ್ಗೆ ಕುಡಲಱಿಯಳೆಂಬುದ
ನಱಿಯದ ಪಶು ಮನುಜನಲ್ಲ ಕುಱಿಗಳ ಭಾವಂ || ೧೧೦ ||

ಚಂ || ಕುಱಿದಿನಲೞ್ತಿಯುಳ್ಳೊಡವಱಿರ್ದೆಡೆಗಾಣಳೆ ದೇವಿ ತನ್ನ ತ
ನ್ನೞಿವಿನಮೆಯ್ದೆ ಮೆಚ್ಚಿದನಿತಂ ತಿನಲಾಱಳೆ ಕೆಮ್ಮ ನಾಕೆ[ಯಂ]
ಕುಱಿತಡದಿಂಬ ತಮ್ಮ ಬಸನಕ್ಕವನೊಯ್ದು ದುರಾತ್ಮರಾಗಳುಂ
ತಱಿವರದೇಕೆ ತಮ್ಮ ಸವಿನಾಲಗೆಯಂ ಸವಿಗೆಯ್ಯಲಾಱರೇ || ೧೧೧ ||

ಚಂ || ಬನದ ಬಳಾರಿ ಕೊಲ್ಲಪುರದಕ್ಕಳೆ ಕಾಂಚಿಯ ಕಾಮಕೋಟಿಯೆಂ
ಬನಿಬರುಮೆಕ್ಕರೋ ಕನಸುದೋಱಿದರೂಡುವಮೆಂದು ರಂಗಮಂ
ಮನಮೊಸೆದಿಕ್ಕುಕೊಂಡು ಕುಱಿಯಂ ಕೆಲಬರ್ ದುಱುದುಂಬಿಮುಂಡೆಯರ್
ಮನೆಯೊಳಗುಳ್ಳುದಂ ತವಿಸಿ ಗಂಡರನೇಂ ಕುಱಿಮಾಡಿ ತಿಂದಪರ್ || ೧೧೨ ||

ಚಂ || ಅಸುರರನಾಸುರಂ ಮಸಗಿ ಕೊಂದೊಡೆ ತಿಂಬ ಬಳಾರಿ ಬಂದು ಮಾ
ನಸರನೆ ಬೇಡಿ [ತಿಂ]ದಪಳೆ ಬಲ್ಗುಱಿಯಂ ಕುಱಿವಿಂಡನೆಯ್ದಿ ಮೆ
ಯ್ವಸಮೊಳಸೋರ್ವಿನಂ ಪಿಡಿದು ಗುಕ್ಕಿಸಲಾಱಳೆ ದುಂಡುಱುಂಬೆಯರ್
ಬಸನಿಗಳಾಗಿ ಗಾವಿಲರನಾ ಪೆಸರಿಂ ಕುಱಿಮಾಡಿ ತಿಂದಪರ್ || ೧೧೩ ||

ಮಾನಸರಂ ತುರಗಂಗಳ
ನಾನೆಗಳಂ ಪರಕೆಗುಡುವೊಡವು ಬೆಲೆ ಪಿರಿದೆಂ
ದೂನಂ ಬೆಲೆಯುಪ್ಪದಱಿಂ
ದೇನೊಂದಂ ಬಳರಿಗೊಯ್ದು ತಱಿವರ್ ಕುಱಿಯಂ || ೧೧೪ ||

ಪಸುವೆರ್ಮೆ ಕುಱಿಗಳೆಂಬಿವು
ವಸುಧೆಗೆ ಪಯನಲ್ಲಿ ಪಿರಿಯ ಬೆಲೆಗಳ ಪಸುವಂ
ಬಸನಿಗಳೊಲ್ಲದೆ ಕುಱುವೆಲೆ
ಪಸುವಂ ಬೆಲೆಯಾಸೆಯಿಂದೆ ತಿಂದಪರಲ್ತೇ || ೧೧೫ ||

ಕುಱಿಗಳ ಕತದಿಂ ಜಗಮಂ
ಬಱಿಕೆಯ್ಯದೆ ಮಾಣ್ದರುಂತೆ ಪಿಱಿತಿನಿಗಳ್ಗೇಂ
ತಱಿಯಲ್ ಕರಿತುರಗಾಳಿಯ
ನಱಿಕೆಯ ಮಾನಸರನಾಗಳುಂ ಪಾಪಿಷ್ಠರ್ || ೧೧೬ ||

ಬಳರಿಯ ದೇಗುಲಮಂ ಕುಱಿ
ಗಳನೋವದೆ ತೀವಿ ಪುಗಿಸುವುದು ಕುಱಿಗಳನಾ
ಬಳರಿಯೞಿದಪಳೆ ಕುಱಿಗಳ್
ಬಳರಿಯನೞಿದಪವೆ ನೋೞ್ಪೆವದನೊಂದಿನಿಸಂ || ೧೧೭ ||

ಚಂ || ಮನೆಗೆಲಸಕ್ಕೆ ಸಯ್ತು ಮೊಗಸಲ್ಕಣಮಾಱದೆ ಪೂಂಕೃತ
ಧ್ವನಿ ಮಿಗಲಿತ್ತಲಾಗುಳಿಸಿ ತೇಗಿದೊಡಾಗಳೆ ಬಂದು ತಮ್ಮತೊ
ೞ್ತಿನ ಚರಣಂಗಳಂ ತಲೆಯೊಳಿಟ್ಟಕಟೆಂಬುದು ದೇವಿ ಕಾವುದೆಂ
ದಿನಿತು ಭಯಂ ಮಿಗಲ್ಕೆರವಿಗೊಳ್ವರಿದೇಕೆ ಕೆಲರ್ ಮರುಳ್ಗಳೋ || ೧೧೮ ||

ಚಂ || ಬ್ರತಗುಣಸಚ್ಚರಿತ್ರಯುತರಪ್ಪ ಮಹಾತ್ಮರ ಮೇಲೆ ವಂದು ದೇ
ಮತೆ ತನಗೊಲ್ದುದಂ ಪರಕೆವೇಡಿದೊಡಪ್ಪುದು ನಂಬಲಂತದಂ
ಸಿತಗೆ ನಿಕೃಷ್ಟೆ ದುಶ್ಚರಿತೆ ತೊೞ್ತೆನಿಸಿರ್ದಳ ಮೇಲೆ ವಂದು ದೇ
ವತೆ ನುಡಿದಪ್ಪಳೆಂದೊಡೆ ವಿವೇಕಿಗಳಂತದನೇಕೆ ನಂಬುವರ್ || ೧೧೯ ||

ತಲೆಬೋಳಿಸಿ ಹೊಂತಂ ಸಿಡಿ
ದಲೆಗುಡವರ್ ಕೆಂಡದಿಂದೆ ಮೀವರ್ ತಮ್ಮಂ
ಗುಲಿಯಂ ಕಡಿವರ್ ಬರಿಯೊಳ್
ಸುರಗಿಗಳಂ ಕುತ್ತಿ ನಡೆದು ಪರಕೆಯನೀವರ್ || ೧೨೦ ||

ಗಂಡುಡೆಯುಡಿಪರ್ ಪೆಣ್ಣಂ
ಗಂಡುಮನೋರಂದದಿಂದೆ ಪೆಣ್ಣುಡೆಯುಡಿಪರ್
ತಂಡದೆ ತಿರಿವರ್ ಕುತ್ತಂ
ಗೊಂಡು ಬರ್ದುಂಕಿದೊಡೆ ದೇವಿ ಕಾದಳೆನುತ್ತುಂ || ೧೨೧ ||

ಪತ್ತುಂ ಬೆರಲೊಳ್ ಸೊಡರಂ
ಪತ್ತಿಸುವರ್ ಪೇಲ ಬೆಱಟಿಗಳನಿಱಿಯಿಸುವರ್
ಕುತ್ತಂಬಟ್ಟಂ ಕರ್ಮಾ
ಯುತ್ತದೆ ಬರ್ದುಕಿದೊಡೆ ಮೂಢರೀ ಪರಕೆಗ[ಳಿಂ] || ೧೨೨ ||

ಬೆರ್ಚಿ ಪಿಱಿತಿನಿಗೆ ಪರಕೆಯ
ನರ್ಚನೆಯೆಂದಾಡೆ ಪೊಲೆಯರೊಡಗಲಸದೆ ದಿ
ವ್ಯಾರ್ಚನೆಯಂ ಸಕಳಸುರೇಂ
ದ್ರಾರ್ಚಿತಚರಣಕ್ಕೆ ಕೊಟ್ಟು ಪಡೆವುದು ಸುಖಮಂ || ೧೨೩ ||

ಪರಕೆಗಳನಿತ್ತೊಡಂ ತಾಂ
ಪರತ್ರೆಗವು ಫಲದಮಲ್ಲ ದಾನಂ ಪರಮೇ
ಶ್ವರಪೂಜೆಯೆ ಶಾಂತಿಕರಂ
ಪರತ್ರೆಯೊಳ್ ಸುಖಮನೀಗುಮೆಂತುಂ ಸಫಲಂ || ೧೨೪ ||

ಪುರುಳಿಲ್ಲದ ಪಿಱಿತಿನಿಗಳ್
ವರವಂ ಕೊಟ್ಟಪುವೆ ಮರುಳೆ ಪೂಜಿಸದಿನಿಸುಂ
ಪರಮಜಿನೇಂದ್ರನ ಪದಪಂ
ಕರುಹಮನೋಲಗಿಸು ಪಡೆವೆಯಿಹಪರಸುಖಂ || ೧೨೫ ||

ಬೇಡಿದ ವರಮಂ ಕುಡುವೊಡೆ
ರೂಡಿಯ ಚಾವುಂಡಿ ಕಾಳಿ ಮಾಳಚಿಯೆಂಬಾ
ಜೋಡೆಯರವರಂ ಪೂಜಿಸ
ವೇಡಿಹಪರಸುಖಮನೊಲ್ವೊಡರ್ಚಿಸು ಜಿನನಂ || ೧೨೬ ||

ನೀರಂ ಪೊಸೆದು ಬೆಣ್ಣೆಯ
ನಾರಾನುಂ ಪಡೆದರೊಳರೆ ವರವೀಗುಮೆ ಮೈ
ಲಾರಂ ಕೇತಂ ಕಾಟಂ
ಮಾರಿಗೆ ಮಸಣಿಗೆಯೆನಿಪ್ಪ ಕೊೞೆದೆಯ್ವಂಗಳ್ || ೧೨೭ ||

ತೊಱೆಗಳ ದೀರ್ಘಿಕೆಗಳ ಪೆ
ರ್ಗೆಱೆಗಳ ತಡಿಯಲ್ಲಿ ರಂಗಮಂ ಬರೆದುಂ ಬೊ
ಬ್ಬಿಱಿದು ಸುರಿದಲ್ಲಿ ಪಲವುಂ
ತೆಱದಡುಗೆಯನಿತ್ತು ಬಱಿದೆ ಕಿಡಿಪರ್ ಮೂಢರ್ || ೧೨೮ ||

ನಡುಬೀದಿಯೊಳಂ ಪಶುಗಳ್
ಪಡುವೆಡೆಯೊಳಮೂರ ಪಿರಿಯ ಚೌವಟ್ಟದೊಳಂ
ತೊಡೆದು ಬರೆದಲ್ಲಿ ರಂಗಮ
ನಡುಗೆಗಳ ಸುರಿದು ಸೂಸಿ ಕೆಡುವರ್ ಮೂಢರ್ || ೧೨೯ ||

ಮಾರಿಯನೆ ಮನಗೆದಂದುಂ
ಮಾರಿಯನೂರಿಂಗೆದಂದುವಡಗಿಂ ಕಳ್ಳಿಂ
ದಾರಂಭದ ಬೆಳಸಿಂದಂ
ಭೋರೆನೆ ಪಱೆ ಮೊೞಗಲೂಡಿ ಕಳಿಪುವರವರಂ || ೧೩೦ ||

ಚಂ || ನೆರಪಿದುದೊಂದು ಪಾಪಫಲದಿಂದೆ ಕುಯೋನಿಗಳೊಳ್ ನಿರಂತರಂ
ತಿರಿತರುತಿರ್ಪ ಜೀವನಿಕರಕ್ಕೆಱಗುತ್ತಿರೆ ಸೌಖ್ಯಮಕ್ಕುಮೇ
ತಿರಿದುಣುತಿರ್ಪ ಕಪ್ಪಡಿಯನೋಲಗಿಸುತೇಕೆ ಮಹಾವಿಭೂತಿಯೊಳ್
ನೆರೆವೆನಮೋಘಮೆಂದು ಮನವಾಲ್ಗುಡಿವಂಗದು ಕೂಡದಂತೆವೋಲ್ || ೧೩೧ ||

ಇವರೀ ದೆಯ್ವಕ್ಕೆಱಗುವ
ರಿವರವೊಲಾಮೆಱಗಿದಪ್ಪೆನಿನ್ನೆಂದೆನುತುಂ
ತವತವಗೆಱಗುವರಂ ಕಂ
ಡವರಾಪ್ತನ ತೆಱನನೇನುಮಱಿಯರ್ ಮೂಢರ್ || ೧೩೨ ||

ಸತತಂ ಸಚ್ಚಾರಿತ್ರದೊ
ಳತಿಶಯಮೆನೆ ನಡೆಯಲಾರ್ಪರೊಲ್ವರ್ ಜಿನನಂ
ಬ್ರತದೊಳ್ ನೆರೆಯಲ್ಕಾಱದೆ
ಮತಿಹೀನರ್ ಪಲವು ದೆಯ್ವಮಂ ಪೂಜಿಸುದರ್ || ೧೩೩ ||

ಜಿನಸಮಯದವರ್ಗೆ ಜಿನನೊ
ರ್ವನೆ ದೆಯ್ವಂ ಮತ್ತಿನವರ್ಗೆ ಪಶುಮೃಗಖಗಮುಂ
ಮನೆಮುಟ್ಟುಂ ಕುೞುಗಳುಮಿಂ
ತನೇಕಮೊಳವೊಂದು ದೆಯ್ವಮಲ್ಲವು ನಿರುತಂ || ೧೩೪ ||

ಜಿನಪತಿಭಾಷಿತರುಂ ಜ್ಞಾ
ನನಿಢಾನಮಿದೆಂದು ಭಕ್ತಿಯಿಂ ಪೂಜಿಸುವರ್
ಮನಮೊಸೆದು ಸರಸ್ವತಿಯಂ
ವಿನೇಯಜನಮನ್ಯದೆಯ್ವಮಂ ಪೂಜಿಪುದೇ || ೧೩೫ ||

ಸುರವಂದ್ಯಜಿನೇಶನ ತೊ
ೞ್ತಿರೆಂದು ಮನ್ನಿಸುವರಲ್ಲದಾದರದಿಂ ವ್ಯಂ
ತರಮಂ ಪೂಜಿಸಲಱಿವರೆ
ಪಿರಿದುಂ ಮತಿವಂತರೆನಿಸಿದಾರ್ಹತಭಕ್ತರ್ ೧೩೬ ||

ಸರ್ವಜ್ಞನಲ್ಲದುೞಿದರ
ನೊರ್ವರುಮಂ ದೆಯ್ವಮೆಂದು ಮನ್ನಿಸುವಾತಂ
ನಿರ್ಬುದ್ಧಿಯಕ್ಕುಮಲ್ಲದ
ಪೂರ್ವಸುಖಶ್ರೀಯನೆಂತುಮಱಿವನೆ ಪಡೆಯಲ್ || ೧೩೭ ||

|| ಪ್ರತಿಪೂಪಕ್ಕನುರೂಪಮಾಗಿರದೆ ಕೀೞ್ಮೀಲಾಗೆ ರೂಪಂ ನಿಜಾ
ರ್ಯತೆಯಿಂ ನೋೞ್ಪ ಜನಕ್ಕೆ ಕಣ್ಗೆ ದಿಟದಿಂ ತೋರ್ಪಂತೆ ಕರ್ಮಾನುರೂ
ಪತೆಯಿಂ ಕರ್ಮಿಗೆ ಪುಣ್ಯಪಾಪಫಲಮಂ ತಾಂ ತೋರ್ಪ ದೇವತ್ವದು
ನ್ನತಿಯಂ ತಾಳ್ದಿದನರ್ಹನೀಗೆಮಗೆ ಮುಕ್ತಿಶ್ರೀಸುಖಾವಾಪ್ತಿಯಂ || || ೧೩೮ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮ ರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಚರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ
ಸಮಯಪರೀಕ್ಷೆಯೊಳ್ ದೇವತಾಮೂಢಸ್ವರೂಪನಿರೂಪಣಂ ನವಮಾಧಿಕಾರಂ