ಅನ್ನಮನಾರ್ತಿತ್ತವನುಂ
ಜನ್ನಮನಿರ್ದವನುಮೊಳ್ಳಿತಂ ಮಾಡಿದನುಂ
ತನ್ನೊಡನುದ್ಧರಿಪಂ ಗಡ
ತನ್ನಿರ್ಪತ್ತೊಂದು ತಲೆಯ ಪಿತೃಗಳನೆಲ್ಲಂ || ೧೩೧ ||

ಅಲ್ಲಲ್ಲಿ ಕೂಡೆ ಸತ್ತರ
ನೆಲ್ಲರುಮಂ ಬರಿಸಿ ತಾನುಮೇನೊಯ್ವನೊ ಮೇ
ಣಿಲ್ಲ ಬರವೇೞ್ದು ಪೋಪನೊ
ಮೆಲ್ಲನೆ ಸಗ್ಗಕ್ಕೆ ಪೆಱಗೆ ಪಿತೃಗಳನಾತಂ || ೧೩೨ ||

ಸುರಲೋಕಕ್ಕೆಲ್ಲಂ ಭೂ
ಚರರಪ್ಪ ಮಹೀಶರಾಗಳುಂ ಪೋಪರುಮ
ಲ್ಲಿರದಂತೆ ಬರ್ಪರೆಂಬಾ
ಪುರಾಣಮಂ ನಂಬಿ ಕಲ್ವರಱಿವಿಲ್ಲದವರ್ || ೧೩೩ ||

ಗುಣಿಯಲ್ಲ ಜೀವನೆಂದುಂ
ಕ್ಷಣಿಕಂ ತಾನೆಂದು ನುಡಿವ ಬೌದ್ಧರ ಕುಮತಂ
ಗಣಿದಮೆ ಜೀವಂ ನಿತ್ಯಂ
ಗುಣಿಯೆಂದಿಂಬಾಗಿ ತಿಳಿಗೆ ಜೈನಾಗಮದೊಳ್ || ೧೩೪ ||

ಮೊದಲಿ[ರದ]ನಂತಸಂಸಾ
ರದಿಂದ[ಮಾ] ಮುಕ್ತಿಗೆಯ್ದುವನ್ನೆವರಂ ಪೇ
ೞ್ದುದು ತಾಂ ಪುರಾಣಮಂತ
ಲ್ಲದುದೆಲ್ಲಂ ಸಿತಗರೂಳ್ವ ಸಿತಮತಮೆನಿಕುಂ || ೧೩೫ ||

ಇದು ತಕ್ಕುದು ತಗದಿಂತಿದು
ವಿದು ಸತ್ಪಥವಿಂತಿದಿನ್ನಸತ್ಪಥವೆಂದೆಂ
ದದನಱಿಯದೆ ಕುಮತಿಗಳೂ
ಳ್ವುದನಾಗಮಮೆಂದು ನಂಬಲಾಗದು ಚದುರಂ || ೧೩೬ ||

ಅವಿವೆನ್ನದೆಲ್ಲಮಂ ನೋ
ಡುವೊಡಾರ್ಹತಮಲ್ಲದನ್ಯರಾಗಮಮುಂ ಮ
ತ್ತವರ ಪುರಾಣಂಗಳುಮೆಂ
ಬುವೆಲ್ಲಮುಂ ಯುಕ್ತಿಶೂನ್ಯಮಘಟಿತಘಟಿತಂ || ೧೩೭ ||

ದೇವರ ಕಯ್ಯೊಳ್ ಸತ್ತರೆ
ಜೀವಂಗಳ್ ದೇವಲೋಕಮಂ ಪೊರ್ದುಗುಮೆಂ
ದೀ ವಿಧಿಯಿಂದಂ ನುಡಿವರ್
ದೇವರ ಕೊಲೆಯಿಂ ಸಾಮಾಧಿಮರಣಮೆ ಪೇೞಿಂ || ೧೩೮ ||

ಹರಿಹರರ್ಗೆ ದಾನವರ್ ಭ
ಕ್ತರಾದೊಡಾಗದೊಡಮಿರ್ಕೆ ಚಿತ್ತದೊಳಾದಾ
ದರದಿಂ ಮೇಣ್ ಮುನಿಸಿಂ ಮಱೆ
ಯರಾಗಿ ಸಗ್ಗಕ್ಕೆ ಪೋಪರೆಂಬರ್ ಮೂಢರ್ || ೧೩೯ ||

ಪಲತೆಱದಿಂ ದಾನವಸಂ
ಕುಳಮಂ ಮಚ್ಚರದಿನಿಱಿದರೆಂಬರ ಕಥೆಯೊಳ್
ಫಲಮೇನೋ ಕೇಳ್ವುದು ನಿ
ರ್ಮಳಮತಿಯಿಂ ಮೋಕ್ಷಮಾರ್ಗಮಂ ಜಿನಮತಮಂ || ೧೪೦ ||

ಮುನಿವಂದಧಿಕಂ ಗಡ ದೇ
ವನಿಕಾಯದೆ ಬಯ್ಕೆಗೊಂಡು ದೈತ್ಯರ್ಗಗಿದಾ
ತನ ಬಸಿಱೊಳಿಕ್ಕಿದಂ ಶ
ಸ್ತ್ರನಿಚಯಮುಮನೆಂಬರಿನ್ನವಘಟಿತಮೊಳವೇ || ೧೪೧ ||

ದಿವಿಜತತಿ ಬಯ್ತ ಕೈದುವ
ನವರಸದೊಳ್ ಬೇಡೆ ಸುರಭಿಯಿಂ ನಕ್ಕಿಸೆ ದೇ
ಹಮನೆಲ್ವನುರ್ಚಿ ಕುಡೆ ಕ
ಯ್ದುವಾದವಾ ಗೊರವನೆಲ್ವು ಗಡ ಚಿತ್ರತರಂ || ೧೪೨ ||

ಆಕುಳಮತಿಗಳ್ ನಿಚ್ಚಂ
ಲೋಕಪುರಾಣಮನೆ ಕೇಳ್ವರನ್ಯರ್ ಸಲೆ ನಿ
ರ್ವ್ಯಾಕುಳಮತಿಯಿಂ ಜೈನರ್
ಲೋಕಸ್ತುತಜೈನಧರ್ಮಕಥೆಯಂ ಕೇಳ್ವರ್ || ೧೪೩ ||

ಮಾದೆಂಗನಾಗಿ ಯೋಗದೊ
ಳಾದಂ ನಿಂದಲ್ಲಿ ಪುತ್ತು ಪರ್ವಿದೊಡವನೊಂ
[ದೋ]ದಂ ವಾಲ್ಮೀಕಿಯಿನಾ
ದೋದುಗಳೆಂದೊಯ್ಯೆ ಮೂಢರೋದುವರೀಗಳ್ || ೧೪೪ ||

ನುಂಗಿದನಣುವಂ ಭಾಸ್ಕರ
ನಂ ಗಡ ಕಂಡಿಂದ್ರನಣುವನಂ ವಜ್ರದಿನಿ
ಟ್ಟಂ ಗಡ ಸುತಶೋಕದಿನನಿ
ಲಂ ಗಡ ಮುಳಿದೊಂದು ಮರದ ಪೊೞರೊಳಗಿರ್ದಂ || ೧೪೫ ||

ತಲೆಗಳನರಿದೇಱಿಸಿ ನಿ
ಶ್ಚಲಭಕ್ತಿಗೆ ಸಂದ ರಾವಣಂಗೊಲಿದಿತ್ತಂ
ತಲೆಗಳುಮಂ ಖೞ್ಗಮನೆಂ
ದಲಸದೆ ಪುಸಿಯುತ್ತುಮಿರ್ಪರಱಿವಿಲ್ಲದವರ್ || ೧೪೬ ||

ಕಡಿದೇಱಿಸೆ ತಲೆಗಳನಾ
ಗಡೆ ರುದ್ರಂ ಮೆಚ್ಚಿ ತಲೆಗಳನಿತುಮನಿತ್ತಂ
ಗಡ ರಾವಣಂಗಿದಘಟಂ
ಕಡಿದೊಡೆ ಕೊನರ್ವಂತು ತಲೆಗಳರಳಿಯ ಮರನೇ || ೧೪೭ ||

ಅಂದಿನ ಭಕ್ತಿಗೆ ತಕ್ಕುದ
ನಿಂದುವರಂ ಕಡಿದ ತಲೆಗಳಂ ಕೊನರಿಸಿದಂ
ತಿಂದಿನ ಭಕ್ತಿಗೆ ತಕ್ಕುದ
ನೊಂದಿನಿಸಂ ಕಡಿ[ದ] ಬೆರಳನೇಕೆ ಕೊನರ್ಚ[೦] || ೧೪೮ ||

ಕೋಡಗಗಳದ್ರಿಯಂ ತಂ
ದೀಡಾಡಿದೊಡೆಯ್ದೆ ಶರಧಿಯಂ ಕಟ್ಟಿದುದಾ
ರೂಡಿಯ ರಾಮಂ ಲಂಕೆಗೆ
ಕೋಡಗಗಳ್ ವೆರಸಿ ಪೋಗಿ ಗಡ ಸಾಧಿಸಿದಂ || ೧೪೯ ||

ಮೃತಸಂಜೀವನಿಯಂ ಕಿ
ೞ್ತು ತಂದು ಸತ್ತವರ ಕಿವಿಯೊಳೆಱೆಯೆ ಪುನರ್ಜೀ
ವಿತಮಾದುದು ರಘುಜಾತ
ಕ್ಷಿತಿಪನ ಬಲಕೆಂಬರಿನ್ನವಘಟಿತಮೊಳವೇ || ೧೫೦ ||

ರಾವಣನಲ್ಲಂ ರಕ್ಕಸ
ನಾ ವಿದ್ಯಾಧರನ ತಲೆಗಳುಂ ಪೆಱವಿಲ್ಲಿ
ನ್ನಾ ವಾಯುಸೂನು ಕಪಿಯ
ಲ್ಲಾ ವಿದ್ಯಾಧರನೆ ಕಾಮದೇವಂ ಮುಕ್ತಂ || ೧೫೧ ||

ವಾಲ್ಮೀಕಿ ತನ್ನ ಪುಸಿಗಳ
ಬಲ್ಮೆ[ಯಿ]ನುತ್ತಮಮೆನಿಪ್ಪ ರಾಮಾಯಣಮಂ
ಕಲ್ಮಷಮೊದವಿರೆ [ತಾಂ] ಪೇ
ೞಲ್ಮಲಿ[ನಂ ಕಥೆ] ಯೆನಿಪ್ಪುದಾ ಕಥೆಯನಿತುಂ || ೧೫೨ ||

ಪೊಡವಿಯ ತೀರ್ಥಂ ಜಗುನೆಯ
ನಡುವೆ ಪರಾಶರಮುನೀಶ್ವರಂ ಕೊಡಗೂಸು
ಕಿಡಿಸೆ ಗಡಂ ಬ್ಯಾಸಂ ಗಡ
ಜೆಡೆದೊಂಗಲ್ ವೆರಸಿ ಜಾಲಗಾಱಿತಿಗೊಗೆದಂ || ೧೫೩ ||

ವ್ಯಾಸಮುನೀಶಂ ಱಂಡೆಗೆ
ಪೇಸದೆ ಗರ್ಭಮನೆ ಮಾಡೆ ಪುಟ್ಟಿದ ಸುತರಿಂ
ದೀ ಸಕಳೋರ್ವರೆಗೆ ಗಡಂ
ವ್ಯಾಸಮುನೀಶ್ವರನಿನಾಯ್ತು ಭಾರತವಂಶಂ || ೧೫೪ ||

ಕೊಂತಿಗೆ ರವಿ ಬರೆ ಗರ್ಭಮ
ದಂತಾಗಳೆ ಕನ್ನೆತನದೊಳೊಗೆದುದು ನವಮಾ
ಸಂ ತೀವದೆ ಕಿವಿಯೊಳಗೊಗೆ
ದಂ ತನಯಂ ಬೞಿಕೆ ಮದುವೆಯಾದತ್ತು ಗಡಂ || ೧೫೫ ||

ಕರ್ಣದೊಳೊಗೆದುದಱಿಂದಂ
ಕರ್ಣನೆಯಿವನೆಂದು ಕೊಂತಿ ಪೆಸರಿಡೆ ನೆಗೞ್ದಂ
ಕರ್ಣಮಹೀಪತಿಯೆಂಬರ್
ಕರ್ಣದೊಳೊಗೆವಂತು ಕರ್ಣಶೂಲಮೆ ಕರ್ಣಂ || ೧೫೬ ||

ಕಳಶಂಗಳೊಳಂ ಹೋಮಾ
ನಳನೊಳಮವನಿಯೊಳಮಮರನದಿಯೊಳಮಂತಾ
ಗಳೆ ಸುಭಟರ್ ಪುಟ್ಟಿ ಮಹಾ
ಬಳರಾದರ್ ನಿರುತಮೆಂಬರಿನ್ನವು ಪುಸಿಗಳ್ || ೧೫೭ ||

ಒರ್ವಳೆ ತಾಯ್ ಗಡ ಮಕ್ಕಳ
ನೊರ್ವರ್ಗೊರ್ವರನೆ ಪಡೆದಳಮರರ್ಗೆಂದಿಂ
ತುರ್ವುವರರೆಬರ್ ತಂದೆಯು
ಮೊರ್ವನೆ ಗಡ ಕಡೆಯೊಳಿನ್ನವಾ ವ್ಯಾಸಮತಂ || ೧೫೮ ||

ಇಂತು ಪುಸಿಯೊಳವೆ ಖಾಂಡವ
ಮಂ ತಣಿಯುಣಲಗ್ನಿ ಪಾರ್ವ[ನಾಗೆಯ್ತಂದಂ]
ಕೊಂತಿಯ ತನಯನಘಟಮಿ
ದೆಂತಗ್ನಿಯ ಚೇತನಂ ಸಚೇತನಮಾಯ್ತೋ || ೧೫೯ ||

ಸುರಪುರಕೆ ಪಾಱಿದಂ ಗಡ
ನರನಿಂದ್ರನ ತೊಡೆಯನೇಱೆದಂ ಗಡ ಕೊಂದಂ
ಸುರಪತಿಯ ಪಗೆವನಂ ಗಡ
ನರಂಗೆ ಸಗ್ಗಕ್ಕೆ ಪಾಱಲೇಂ ಗಱಿಯೊಳವೇ || ೧೬೦ ||

ಗುರುಗಳುಮಂ ಸುತರಂ ಸೋ
ದರರಂ ಕೊಲಲಾಱೆನೆಂದ ಪರ್ಥನನಾಗಳ್
ಹರಿ ರಥಮಂ ಪರಿಯಿಸುತುಂ
ತೆರಳ್ಚಿ ತತ್ತ್ವಮನೆ ಪೇೞ್ದು ಗಡ ಕಾದಿಸಿದಂ || ೧೬೧ ||

ಅಂಬುನೆಲೆಯಲ್ಲಿ ನಿಂದಿ
ರ್ದಂಬುಜನಾಭಂ ನರಂಗೆ ಪೇೞ್ವಂದೆನಸುಂ
ಇಂಬಿನೆ ಕೇಳ್ವಾಗಳ್ ತಾ
ನಂಬಿಕ್ಕಲ್ ಮಱೆದನಕ್ಕುಮೇ ಪೇೞಿಮಿದಂ || ೧೬೨ ||

ಚಂ || ಜಗದೊಳಗೆಲ್ಲಮುತ್ತಮದೊಳುತ್ತಮಮಪ್ಪುದದೆಲ್ಲವಾನೆ ತ
ಜ್ಜಗಮನೆ ಪುಟ್ಟಿಪೆಂ ನಡೆಯಿಪೆಂ ಕಿಡಿಪೆಂ ಕ್ರಮದಿಂದವಾನೆ ಸೃ
ಷ್ಟಿಗೆ ಮೊದಲಾಗೆ ನೀನುಸುರದೆತ್ತರಿಸೈನ್ಯದ ಮೇಲೆ ಪಾರ್ಥ ಬಂ
ಧುಗಳೆನವೇಡ ಮುನ್ನೞಿದೆನೆಲ್ಲರನೆಂದುಸಿರ್ದಂ ಗಡಚ್ಯುತಂ || ೧೬೩ ||

ನೀನವರನೞಿವೆನೆಂಬಬಿ
ಮಾನಂ ಬೇಡಾನೆ ಮುನ್ನೆ ಕೊಂದೆಂ ನೋಡಿಂ
ನೀನೆಂದು ತೆಱೆಯೆ ಬಾಯಂ
ಸೇನೆಗಳ ಪೆಣಂಗಳಿರ್ದುವುದರದೊಳೆಂಬರ್ || ೧೬೪ ||

ನರನ ರಥವೇಱಿ ಬಾಯಂ
ಹರಿ ತೆಱೆಯೆ ಸಮಂತು ಸೇನೆಯೊಳಗಿರ್ದುದೆನು
ತ್ತರೆಬರ್ ನುಡಿವರಿದಘಟಂ
ಕುರುಭೂಮಿಯೊಳಿರ್ದ ಸೇನೆ ಪೊಕ್ಕುದೆ ಬಸಿಱಂ || ೧೬೫ ||

ತಾನೆಲ್ಲಿರ್ದಂ ಕೌರವ
ಸೇನೆಯದೆಲ್ಲಿರ್ದುದೇಱಿದಾ ರಥಮೆಲ್ಲಿ
ತ್ತಾ ನಾರಾಯಣನೆನಿತೊಳ
ನೇನೆಂಬೆಮೊ ವಿಷ್ಣಮಾಯಮೆಂಬುದಿದಕ್ಕುಂ || ೧೬೬ ||

ಮುಂ ಪದಿನೆಂಟಕ್ಷೋಹಿಣಿ
ಯಂ ಪದ್ಮೋದರನೆ ತಾನೆ ಕೊಂದಂ ಗಡ ಮ
ತ್ತಂ ಪೞೆಮೇಕೆ ಕಾಳೆಗ
ಮಂ ಪಣ್ಣಿದರಯ್ಯ ಪಾಂಡವರ್ ಪೆಣನಿಱಿಯಲ್ || ೧೬೭ ||

ದನುಜರನೞಿದಂ ಪೇೞ್ವೊಡೆ
ತನುಜರುಮಂ ಬಂಧುವರ್ಗಮಂ ಕೊಲ್ವಾತಂ
ಮನಮೊಸೆದು ಕೇಳ್ವನರ್ಜುನ
ನೆನೆ ಮತ್ತಾ ಧರ್ಮದಲ್ಲಿ ಪುರುಳಱಿಸುವುದೇ || ೧೬೮ ||

ತುಡುವಾಗಳೊಂದು ಬಿಲ್ಲಿಂ
ಬಿಡುವಾಗಳ್ ಲಕ್ಕೆ ವೈರಿಸೇನೆಯ ಮೊನೆಯೊಳ್
ನಡುವಾಗ ಕೋಟಿಯಪ್ಪುವು
ಗಡ ಪಾರ್ಥನ ಬಾಣಮೆಂಬರಿನ್ನವು ಪುಸಿಗಳ್ || ೧೬೯ ||

ಪಲ ತೆಱದಿಂದಂ ನರಸಂ
ಕುಳಮಂ ಕೊಲ್ವವನೆ ಪೇೞ[ಲಾಂತಣ್ಮಿನೆ] ನಿ
ರ್ಮಳನಾಗಿ ಗುರುಗಳಂ ಕುರು
ಬಲ್ಲವೆಲ್ಲಮನೞಿದನರ್ಜುನಂ ತಾನಲ್ತೇ || ೧೭೦ ||

|| ಸುತರಂ ಸೋದರರಂ ಮಹಾಪುರುಷರಪ್ಪಾರಾಧ್ಯರಂ ಭೂಪಸಂ
ತತಿಯಂ ಕೊಂದೊಡೆ ದೋಷಮಿಲ್ಲ ನಿನಗೆಂದೇನಾನುಮಂ ಪೇೞ್ದು ಭಾ
ರತಮಂ ಕೃಷ್ಣನೆ ಮಂಜುಮಾಡಿದ ವೃಥಾಳಾಪಂಗಳಂ ತತ್ವಮೆಂ
ದು ತಗುಳ್ದಾಗಳುಮೋದುವರ್ ಕುಮತಿಗಳ್ ಶ್ರೀನೀತಿಯೆಂದೆಂದದಂ || ೧೭೧ ||

ಪುರುಷಾರ್ಥಮನೆಣಿಸುವೊಡಿ
ಷ್ಟರುಮಂ ಗುರುಗಳುಮನೞಿದರೋರೊರ್ವ[ರುಮ]
ಯ್ವರೊಳೆಂದು ಪೇೞ್ವ ಕೌಂತೇ
ಯರ ಕಥೆಯಂ ಕೇಳ್ದೊಡಾಗದಿರ್ಕುಮೆ ಸಗ್ಗಂ || ೧೭೨ ||

|| ಪಿರಿಯಂ ಮುಂ ನೆಗೞ್ದಂದದಿಂ ನೆಗೞವೇೞ್ಕುಂ ತತ್ಪರಂಗೆಂಬರೆ
ಲ್ಲರುಮಾ ವ್ಯಾಸನ ತಂದೆ ಮೀಂಗುಲಿಗೆಯೊಳ್ ತದ್ವ್ಯಾಸನಾ ಱಂಡೆಯೊಳ್
ನೆರೆದ[ರ್] ತತ್‌ಪರರಂತೆ ದಲ್ ನೆರೆಯವೇೞ್ಕುಂ ತಾಮದೇಕೊಲ್ಲರಾ
ದರದಿಂ ತತ್ಕೃತಿ ಪುಣ್ಯಹೇತುವೆನುತುಂ ಕೇಳ್ವಾ ಮಹಾತ್ಮರ್ಕಳುಂ || ೧೭೩ ||

ಇತಿಹಾಸಮೆಂದು ಭಾರತ
ಕಥೆಯೊಳಗುಪಕತೆಗಳೊಳ[ವ]ವಂ ಕೇ[ಳ್ದೊಡ]ಸಂ
ಗತಮಲ್ಲದೆಲ್ಲಿಗಂ ಸಂ
ಗತಮಲ್ಲವು [ಮಾ]ಡವೆರಡು ಗಣ[ವೇಕತೆ]ಯಂ || ೧೭೪ ||

ಚಂ || ಪರಿಕಿಸುವೈ ಪರಾಶರತನೂಜ ಭವತ್ಕೃತ ಭಾರಾತಾದಿಯೋಳ್
ವಿರಚಿಸಿ ಪೇೞ್ವ ಪದ್ಯದ [ಚ]ಕಾರಚತುಷ್ಕಮನೆಂದು ಮೂಲದಿಂ
ವರರುಚಿ ಸುಟ್ಟಿ ತೋಱೆ ಬಸಿಱಂ ಬೆರಲಲ್ಲಿಯೆ ಪತ್ತಿತೆಂಬರಂ
ತಿರಲದು ವಜ್ರಲೇಪಮೆ ತದಾಕೃತಿ ಸತ್ಯವತೀತನೂ[ಜನಾ] || ೧೭೫ ||

ಅಪಶಬ್ದಕುಕ್ಷಿ ನೀನೆಂ
ದು ಪೞಿವುತುಂ ಮುಟ್ಟೆ ಕುಕ್ಷಿಯಂ ಮುಳಿಸಿಂ ಸಂ
ದ ಪರಾಶರಾತ್ಮಜಾಕೃತಿ
ಯೆ ಪಿಡಿದುದೋ ಬೆರಲನೆಂಬರಿನ್ನವು ಪುಸಿಗಳ್ || ೧೭೬ ||

ಪೊಲೆ ಮಸಗಿ ದಿಕ್ಕವರೆಗಂ
ತಲಸದೆ ಭಾರತಮನೆಯ್ದೆ ಕಿಡೆ ಪೇೞ್ದುದಱಿಂ
ಪೊಲೆಯರ ಬಸಿಱೊಳ್ ಬಂದಂ
ಮಲಿನಾತ್ಮಂ ವ್ಯಾಸನೆಂಬರಿವನಿದನಱಿಯರ್ || ೧೭೭ ||

ಕೆಟ್ಟ ಗೊರವಂಗೆ ಱಂಡೆಗೆ
ಪುಟ್ಟಿದ ಸಂತಾನಮಲ್ಲದೋರೊರ್ವರ್ಗಂ
ಪುಟ್ಟಿದರಲ್ತೆ ಕುಲೀನರ್
ಪುಟ್ಟಿದರಾ ಪಾಂಡುವಿಂಗೆ ಪಾಂಡುತನೂಜರ್ || ೧೭೮ ||

ದ್ರೌಪದಿಯರ್ಜುನನೊರ್ವಂ
ಗೋಪಳ್ ತಾಯ್ಗಱಿಪಿ ಪರ್ಚುಣ್ಗೆಂದಾಡ[ಲ್ಕೇಂ]
ಪಾಪಿಗಳೆಲ್ಲರ್ ಹಿಮಕಂ
ಪೋಪರುಮಲ್ಲವರ್ಗಳೊಪ್ಪೆ ಮುಕ್ತಿಗೆ ಸಂದರ್ || ೧೭೯ ||

ಕವಿತೆಯೊಳುತ್ಕೃಷ್ಪರ್ ಗಡ
ವಿವೇಕಿಗಳ್ ಗಡ ತಪಸ್ವಿಗಳ್ ಗಡ ತಾಮೆಂ
ಬವರವರಜ್ಞಾನಮನಱಿ
ವವರಱಿದುಂ ಪೇೞ್ದರೇಕೆ ಪಾಂಡವಕಥೆಯಂ || ೧೮೦ ||

ಸವಳದೆ ಭಾರತಮಂ ಕೇ
ಳ್ವವರುಂ ಮತ್ತಿರು[ಳ್ಗೆ] ರಾಮಕಥೆಗೇಳ್ವವರುಂ
ಸುಗತಿಗೆ ನಿರುತಂ ಸಲ್ವರ್
ಸವಳದೆ ಕೇಳೆ ಗಡ ಪೊಲ್ಲ ರಾಮಾಯಣಮಂ || ೧೮೧ ||

ಅದಂ ವಾಲ್ಮೀಕಿ ವ್ಯಾ
ಸಾದಿ ಕವೀಶ್ವರನಯದ ಮಿಥ್ಯಾತ್ ತಾ
ನೀ ದೊರೆತೆನಲರೆಗಬ್ಬಿಗ
ರಾದರ್ ನೆಱೆ ಬಲ್ಲ[ರೇ] ಕವಿಪ್ರಬಲತೆ[ಯಂ] || ೧೮೨ ||

ಕುರುಡರ್ ಕುರುಡರ ಬೞಿಯಂ
ಪರಿಪರಿದುಂ ತೊೞಲ್ಲ ತೆಱದೆ ವಿಕಳಾತ್ಮರ್ ಮೂ
ಢ[ರ] ಪೇೞ್ದ ಕೃತಿಗಳಂ ಕೇ
[ಳ್ವರೆಬರ್] ತಾಮವರ ತೆಱದೆ [ಪೇೞು]ತ್ತಿರ್ಪರ್ || ೧೮೩ ||

ಕುರುಡರ್ ಸಭೆಯೊಳ್ ಪಲರುಂ
ನೆರೆದಿರೆ ಕೆಲರಲ್ಲಿ [ಕೂೞಿ] ಗಾರ್ದೊಡೆ ತಾಮುಂ
ಭರದಿಂದಾರ್ವವೊಲಱಿಯದ
ನರ[ಸೆಂ]ಬರ ಮಾತ ಪಿಡಿದು ಬಾಯಂ ಬಿಡುವರ್ || ೧೮೪ ||

ರಾಮನುಮಂ ಲವಕುಶರಂ
ಭೀಮಾರ್ಜುನಧರ್ಮಪುತ್ರನಕುಲಾದಿಗಳಂ
ಶ್ರೀಮಜ್ಜೈನೋತ್ತಮ[ರೆನೆ]
ಪ್ರೇಮದೆ ಪೇೞ್ವಂದು ಸಫಲಮಲ್ಲದೊಡಫಲಂ || ೧೮೫ ||

ಎತ್ತೀದುದು ಕೋಣನನಾ
ಮುತ್ತೆಮ್ಮೆಯೆ ಪೋರಿಯೀದುದೆಂಬೋದುಗಳಂ
ಧೂರ್ತರ್ ಪೇೞ್ವೊಡೆ ಕುಮತಿಗ
ಳರ್ತಿಯಿನಂತವೆ ಪುರಾಣಮೆನುತುಂ ಕೇಳ್ವರ್ || ೧೮೬ ||

ಚಂ || ಪೆಳವರದೊಂದು ಗೊಂದೆ ಮೊದಲಾಗೆ ಪಶುತ್ವನಿಬದ್ಧ ರೂಪಮಂ
ತಳೆದ ದುರಾತ್ಮರೆಂದು ಪೆಸರ್ಗೊಂಡವರ್ಗೋಲಗಮೀಯರೆಂದೊಡ
ಗ್ಗಳದ ವಿವೇಕಿಗಳ್ ಪಲಬರಾ ಪಶುವಿಂದತಿಕಷ್ಟರಾಗಿ ಕಂ
ಟಳಿಸ[ರೆ] ಪಾಪಕರ್ಮರ ಕಥಾಶ್ರುತಿಗೇಕೆಯೊ ಚಿತ್ತವಿತ್ತಪರ್ || ೧೮೭ ||

ವಸ್ತುವನವಸ್ತುವೆಂಬರ
ವಸ್ತುವನಿದು ವಸ್ತುವೆಂಬ ದುರ್ವಿದರಸ್ತ
ವ್ಯಸ್ತರತಿದುರ್ಮನರ್ ತಾ
ಮಸ್ತಮಿತಸುತತ್ತ್ವವಿಮಳಬೋಧರ್ ವಾದರ್ || ೧೮೮ ||

ಇಱಿದರ್ ಕೊಂದರ್ ನೆತ್ತರ
ತೊಱೆ ಪರಿಯಿತ್ತೆಂಬ ಕಥೆಗಳಿಂದಂ ಪುಣ್ಯಂ
ನೆಱೆ ಸಾರ್ಗುಮಪ್ಪೊಡಿಂ ನಾ
ಡೆಱೆಯ[ರರಸಿಕೆಯನೆ] ಕೇ[ಳೆ] ನಿಚ್ಚಂ ಪುಣ್ಯಂ || ೧೮೯ ||

ಕವಿತೆ ಕಡು ಲೇಸು ಕಬ್ಬಂ
ನವರಸಭರಿತಂ ದಲೆಂದು ಮಿಕ್ಕಾ ಕಥೆಗ
ಳ್ಗವಚಱದೆ ಕೇಳ್ವವಂ ದು
ರ್ವಿವೇಕಿ ಜೈನಮನೆ ಕೇಳ್ವವಂ ಮತಿವಂತಂ || ೧೯೦ ||

ಮೊದಲಿದಂ ನಾಲ್ಕುಂ ಸಮ
ಯದ ಕಥೆಯಂ ಕೇಳ್ದು ತಿಳಿವ ಬಗೆಯುಳ್ಳೊಡೆ ಕೇ
ಳ್ವುದು ಕೇಳ್ದು ತಾನವಂ ತಿಳಿ
ವುದು ಲೋಕದ ಕಥೆಗಳಂ ಕಥಾರಾಧನೆಯೊಳ್ || ೧೯೧ ||

|| ಖಳಮನ್ಯಾಯಪಥಪ್ರವೃತ್ತಮಪಕಾರಪ್ರಾಯಮ[ಪ್ರೋ]ಕ್ತಕೌ
ಶಳಮಪ್ರೌಢಮಸಾರಮನ್ಯರ ಮತಂ ವಿದ್ವತ್ಸಭಾರಂಜನಂ
ಫಲಸಾರಂ ಸರಸಂ ಪ್ರಸನ್ನಮನವದ್ಯಂ ಸನ್ನುತಂ ವ್ಯಕ್ತಮ
ಸ್ಖಳಿತಂ ಸರ್ವಸುಖೈಕಹೇತು ಜಗದೊಳ್ ಶ್ರೀಜೈನವಾಕ್ಯಾಮೃತಂ || ೧೯೨ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಟರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳಾಪ್ತಸ್ವರೂಪನಿರೂಪಣಂ ದಶಮಾಧಿಕಾರಂ