ಶ್ರೀಮತ್ಸಮಸ್ತಲೋಕಶಿ
ಖಾಮಣಿ ಸುರಮನುಜದನುಜನಾಗಾಧಿಪಚೂ
ಡಾಮಣಿ ಸಕಳಜಗದ್ರ
ಕ್ಷಾಮಣಿ ಸನ್ಮತಿಯನೀಗೆ ಸನ್ಮತಿನಾಥಂ || ೧ ||
ಕ್ರಮದಿಂದುತ್ತಮಪುರಷಂ
ಸಮಸ್ತಹಿತಮಾಗೆ ಪೇೞ್ಗುಮಂತಲ್ಲದೆ ಧ
ರ್ಮಮನೆ ಬಿಡದೂಳ್ವ ಕತದಿಂ
ದಮೆ ವೇದಮಪೌರುಷೇಯಮೆಂಬರ್ ಪಾರ್ವರ್ || ೨ ||
ಉ || ಆಗಮಮೆಂಬುದಾಪ್ತಮುಖನಿರ್ಗತಮಲ್ಲದೆ ತಾಂ ಸ್ವಯಂಭು ವೇ
ದಾಗಮಮುಂಟೆ ಬೇಱೆ ಸಕಳಜ್ಞನೆ ಲೋಕಮನೋಜೆಯಿಂದಮಿಂ
ಬಾಗಿರೆ ಕಾಣ್ಬನಾಗಿ ನೆಱೆ ಪೇೞ್ಗುಮದಾ ಪರಮಾತ್ಮನಲ್ಲದಂ
ಗಾಗದು ಪೇೞಲಂತಱಿವನಾಕುಳಮಾಪ್ತನ ಸೂಕ್ತಮುತ್ತಮಂ || ೩ ||
ನುಡಿಯೊಳ್ ವೇದಮ[ದಿ]ಲ್ಲಂ
ನುಡಿಯಪ್ಪೊಡೆ ಪೌರುಷೇಯಮದಱಿಂ ಪುರುಷಂ
ನುಡಿಯದುದೇನಾಗಸದಿಂ
ದೊಡೆಬಿರ್ದೊಡೆ ವೇದಮದಱಿವರ್ ತಿಳಿಯಿಮಿದಂ || ೪ ||
ಮ || ಗುರು ತನ್ನಂ ಬೆಸವೇೞೆ ಮಾರ್ಕೊಳಲೊಡಂ ನೀನೋದಿನಾ ವೇದಮಂ
ತ್ವರಿತಂ ಕಾಱೆನೆ [ಯಾಜ್ಞವಲ್ಕ್ಯ] ಮುನಿಪಂ ವೇದಂಗಳಂ ಕಾಱೆ ತಿ
ತ್ತಿರಿಯಾಗಿ[ರ್ದ]ದನಗ್ನಿ ಪೀರ್ದೊಡದು ತಾಂ [ತೈತ್ತಿರ್ಯ] ವೇದೆಂಬುದೀ
ಧರೆಗಾಯ್ತೆಂಬರಿದೆಂತುಟೆಂದಱಿವರಾರ್ ವೇದಂಗಳು[ತ್ಪ]ತ್ತಿಯಂ || ೫ ||
ಮ || ಗುರು ಮುನ್ನೋದಿಸಿದೊಂದು ವೇದಮನದಂ ತಾಂ ಕಾಱಿ ಪೋಗಿರ್ದು ಭಾ
ಸ್ಕರನಂ ಪ್ರಾರ್ಥಿಸಿ ವಾಜಿಯಂ ತೊನಸೆಯೊಂದಾಕಾರದಿಂ ಪತ್ತಿ ವೇ
ದರಹಸ್ಯಂಗಳನೋದೆ ವಾಜಿವೆಸರಿಂದಾ [ಯಾಜ್ಞವಲ್ಕ್ಯ]ವ್ರತೀ
ಶ್ವರನಿದಾದುದು ವೇದಮೆಂಬರಱಿಯರ್ ವೇದಂಗಳುತ್ಪತ್ತಿಯಂ || ೬ ||
ಎಂತಿನನ ರಥಮನೇಱಿದ
ನೆಂತಿಱಿದಂ ಯಾಜ್ಞಾವಲ್ಕಿ ಮಾನಸನಾಗಿ
[ರ್ದಿಂ] ತುರಗ ತೊನಸೆಯಾದನ
ದೆಂತೋದಿದನರ್ಕನಲ್ಲಿ ವೇದಮನಘಟಂ || ೭ ||
ಆ ಸಕಳವಱಿಯೆ ನೀಮಿಂ
ವ್ಯಾಸಂ ವೇದಮನೆ ಪೇೞ್ವ ಕತದಿಂ ವೇದ
ಬ್ಯಾಸನೆನೆ ಸಂದನದಱಿಂ
ಬ್ಯಾಸಕೃತಂ ವೇದಮೇಂ ಸ್ವಯಂಭುವೆ ಪೇೞಿಂ || ೮ ||
ಅದಱಲ್ಲಿ ತನ್ನ ಬಲ್ಲಂ
ದದ ಮಾತಂ ಕೂಡಿ ಮಾಡಲಾ ಬ್ಯಾಸನಿನಾ
ದುದು ಗಗನದಿಂದಮೇಂ ಬಿ
ರ್ದುದೊ ಭಾವಿಸುವುದು ಸ್ವಯಂಭುವಲ್ಲದು ವೇದಂ || ೯ ||
ಮೊದಲಿಂದಂ ಮೂಱುಂ ಲೋ
ಕದ ತೆಱನಂ ಸಕಳತತ್ತ್ವಮಂ ಕ್ರಮದಿಂ ಪೇ
ೞದೆ ಬಾಯ್ಗೆ ವಂದುದಂ ಪೇ
ೞ್ದುದಱಿಂ ಕಾೞ್ಕಬ್ಬಮೆನಿಕುಮೆಂತುಂ ವೇದಂ || ೧೦ ||
ಮ || ಕ್ರಮದಿಂ ಧರ್ಮಮನಲ್ಲಿಗಲ್ಲಿಗೆಡೆಯೊಳ್ ಬೂತಾಟಮಂ ಪ್ರಾಣಿವ
ರ್ಗಮನೋರಂತಿರೆ ಕೊಲ್ವ ತಿಂಬ ತೆಱನಂ ಪೇೞ್ವಂದಮಂ ಕಂಡನು
ಕ್ರಮದಿಂದಂ ಮುನಿಭಂಡರಾಕ್ಷಸಕೃತಂ ತಾಂ ವೇದಮೆಂದೆಂಬ ಜೈ
ನಮತಂ ತಥ್ಯಮಪೌರುಷೇಯಮೆನಿಪಾ ವಿಪ್ರೋಕ್ತಿಯೇಂ ತಥ್ಯಮೇ || ೧೧ ||
ಇಂತು ಪುಸಿಯೊಳವೆ ವೇದಮ
ನಂತಂ ಗಡ ಮುನ್ನ ಬೞಿಕಮೊಣಗಿಲ್ಗುಂದಿ
ರ್ದಂತವು ಮೂಱಾದುವೆ ಪೇೞ್
ಭ್ರಾಂತಾದಪುದೆಮಗೆ ನೇಣ ನೆರವಿಯ ನುಡಿಯೊಳ್ || ೧೨ ||
ಮ || ಜಗದೊಳ್ ವೇದಮನಂತಮೆಂಬರದಱೊಳ್ ಲಂಕಾಧಿಪಂ ಕಲ್ತ ಶಾ
ಖೆಗಳಂ ಸಪ್ತಶತಂಗಳೆಂಬರವು ಮೇಣಂತಾತನೊಳ್ ಪೋದುವಾ
[ಚೆ]ಗೆಯಲ್ಲಲ್ಲಿಗೆ ಬಾರದೊಲ್ಲದವು ಮೇಣಾ ದ್ವೀಪದೊಳ್ ನಿಂದುವೋ
ಮಿಗೆ ಬರ್ಪಾಗಳವೆಲ್ಲಮಂ ತಡೆದವರ್ ಮೇಣಂದು ಕೊಂಡೆಯ್ದರೋ || ೧೩ ||
ಹಡುಕೆಯ ಕೆಲದೊಳ್ಗೋಹಳಿ
ಯೆಡೆಯೊಳ್ ಭೋರೆಂದು ಸಕಳ ವಿಪ್ರಜನಂಗಳ್
ಬಿಡದೋದುವರೆಂತೋ ಶುಚಿ
ಗೆಡೆಯಾಯ್ತಾ ವೇದಮಪ್ಪೊಡಂತೋದುವರೇ || ೧೪ ||
ಅಪಶಬ್ದಮಪ್ಪು[ವಂ] ಮ
ತ್ತಪಪ್ರಯೋಗಂಗಳಪ್ಪುವಂ ವೇದದೊಳಿ
ರ್ದಪುವೆಂಬುದುಮಱಿಯಲ್ ಬಂ
ದಪುವೇ ವೇದಾರ್ಥಮೆಂದು ನುಡಿವರ್ ತಕ್ಕರ್ || ೧೫ ||
ಅಲ್ಲಿಗಿದು ತಕ್ಕುದೆಂಬುದ
ನೆಲ್ಲಾ ಪರ್ಯಾಯದಿಂದೆ ಪೇೞದೆ ಮುಂಬಿ
ಟ್ಟಿಲ್ಲಿಲ್ಲದುದಂ ಪೇೞ್ವುದ
ನಲ್ಲಲ್ಲಿಗೆ ವೇದಗೂಢಮೆಂಬರ್ ಮೂಢರ್ || ೧೬ ||
ಇದು ಯುಕ್ತಮೆಂದು ಪರ್ಯಾ
ಯ[ದ] ವೇದಂ ಪೇೞದಿರ್ದೊಡಾ ಮೂಢರ್ ಮ
ತ್ತದಱೊಳಗೇನಾನುಂ ಕಂ
ಡುದು ವೇದರಹಸ್ಯಮೆಂದು ಪೇೞುತ್ತಿರ್ಪರ್ || ೧೭ ||
ಮ || ಜಗಮಂ ದ್ರವ್ಯನಿಕಾಯಮಂ ಪದ ಪದಾರ್ಥವ್ಯಕ್ತಿಯಂ ಜೀವನು
ಜ್ಜುಗಮಂ ಕರ್ಮವಿಪಾಕಮಂ ಬೞಿಕೆ ಸಮ್ಯಕ್ ಜ್ಞಾನಮಂ ಪೆತ್ತು ಮು
ಕ್ತಿಗೆ ಶುದ್ಧಾತ್ಮನ ಪೋಪುದಂ ಕ್ರಮದೆ ವೇದಂ ಪೇೞ್ವುದೆಂದೂಳ್ವರೋ
ದುಗಳೊಳ್ ನೋೞ್ಪೊಡವಿಲ್ಲ ನಂಬಲವರ್ಗಳ್ ನೋೞ್ಕೆಯ್ದೆ ವೇದಂಗಳೊಳ್ || ೧೮ ||
ಉ || ಲೋಕದೊಳುಳ್ಳ ತತ್ತ್ವಮುಮನಿಂಬಿನೆ ವಿದ್ಯೆಗಳಾದುವೆಲ್ಲಮಂ
ವ್ಯಾಕರಣಾದಿ ಶಾಸ್ತ್ರಮನತೀತಮನಾಗತಮೆಂಬ ಕಾಲಮಂ
ಪ್ರಾಕಟಮಾಗಿರೆಯ್ದೆ ತಿಳಿವಂತಿರೆ ಪೇೞ್ದುದ ವೇದಮೆಂಬರಂ
ತೇಕೆಯೊ ಬುದ್ಧಿವಂತರದಱೊಂದೊಳಗಂ ನೆಱೆ ನೋಡಲಕ್ಕುಮೇ || ೧೯ ||
ಚಂ || ಜಿನಮತದಲ್ಲಿ ಸಚ್ಚರಿತಮಂ ಕಱಿದಂ ನೆಱೆ ಸೂನೆಗಾಱರೊಳ್
ಘನತರ ಹಿಂಸೆಯಂ ಪಿಶಿತಸೇವೆಯನಂತ್ಯಜರಲ್ಲಿ ಜಾರರೊಳ್
ತನುಜನಿಮಿತ್ತಮೆಂದು ಪರವೆಣ್ಗಳ ಕೂಟಮನಿಂತು ಪೇೞ್ದೊಡಿಂ
ತನಿತಱಿನಾಯ್ತು ವೇದವೆನುತಿರ್ಪರ ಮಾತುಚಿತಂ ಧರಿತ್ರಿಯೊಳ್ || ೧೨೦ ||
ನಿರ್ಮಲ ಸುಬ್ರತಯುಕ್ತ ಸು
ಧರ್ಮಮದಿರಲತ್ತನೇಕಸಾಧನಸಾಧ್ಯೋ
ಧರ್ಮಯೆನುತ್ತುಂ ಸಲೆ ದು
ಷ್ಕರ್ಮಂಗಳ್ಗೆಱಗಿ ಪಾರ್ವರಸುಗತಿಗಿೞಿವರ್ || ೨೧ ||
ಚಂ || ಪರಮಪದಾಂಬುಜಾರ್ಚನೆಗಳಿಂ ಬ್ರತದಿಂ ಸುಚರಿತದಿಂ ಜಿನೇ
ಶ್ವರಮತಮಾರ್ಗದಿಂ ನಡೆವ ನೋಂಪಿಗಳಿಂ ವಿಳಸತ್ತಪಂಗಳಿಂ
ಪರಮನನೊಲ್ದು ಜಾನಿಪುದಱಿಂ ಜಪದಿಂ ಪಲವುಂ ಪ್ರಕಾರದಿಂ
ಪರಿಕಿಸೆ ಸಾಧ್ಯಮಪ್ಪುದದು ಧರ್ಮಮೆನಿಪ್ಪುದು ಮೋಕ್ಷಕಾರಣಂ || ೨೨ ||
ಮ || ಪರಮಜ್ಞಾಣಿ ದಯಾಳುವಾಪ್ತನೆನಲಂತಂತೆಲ್ಲಮಂ ಕೂಡೆ ಸಂ
ಹರಿಪಾ ಪಾವಕನಾಪ್ತನೆಂಬರಮಳಂ ಸತ್ಯಾತ್ಮಕಂ ಧರ್ಮದಾ
ಗರಮಿನ್ನಾಗಮಮೆಂಬೊಡಲ್ಲದೆ ವಿರುದ್ಧಾಳಾಪಮಂ ಪಾಪದಾ
ಗರಮಂ ವಿಪ್ರಸಮೂಹಮಾಗಮಮೆನುತ್ತುಂ ಕೂಡೆ ಕೊಂಡಾಡುವರ್ || ೨೩ ||
ಚಂ || ಕೊಲೆಯುಮಸತ್ಯಮುಂ ಕಳವುಮನ್ಯವಧೂಜನಸಂಗಕಾಂಕ್ಷೆಯುಂ
ಫಲಮಧುಮದ್ಯಸೇವೆಯುಮಧರ್ಮಮಿವಂ ಬಿಡವೇೞ್ಕುಮೆಂದೊಡಾ
ಕೊಲೆಯುಮಸತ್ಯಮುಂ ಕಳವುಮನ್ಯವಧೂಜನಸಂಗಕಾಂಕ್ಷೆಯುಂ
ಫಲಮಧುಮದ್ಯಸೇವೆಗಳೆ ಧರ್ಮಮೆನುತ್ತುಮೆ ಮಾೞ್ಪರಾ ದ್ವಿಜರ್ || ೨೪ ||
ಇರುಳುಂಬುದಾಗದೆಂದೊಡೆ
ಇರುಳುಂಬರ್ ಸತ್ತುಪೋದವರನೂಡುವುದಂ
ಪರಿಹರಿಪುದೆನಲದಂ ಪರಿ
ಹರಿಸರ್ ವಿಪರೀತಮಾರ್ಗದಿಂ ನಡೆವವರ್ಗಳ್ || ೨೫ ||
ಆಗದುದನಪ್ಪುದಪ್ಪುದ
ನಾಗೆಂಬುದುಮಱನನೊಕ್ಕಧರ್ಮದ ನಡೆವೀ
ರಾಗಮುಮೂರ್ಧ್ವಮನೇಱದ
ಧೋಗತಿಗಿೞಿಯಲ್ಕೆ ಬಯಸುತಿರ್ಪರ್ಗೆ ನಿಜಂ || ೨೬ ||
ಕೃತಯುಗದವರ್ಗಾಯುಷ್ಯಂ
ಶತಾಬ್ದಮೋ ಮೇಣದೀಗ ಕಲಿಯುಗದವರ್ಗೋ
ಮತಿವಂತರಿದಂ ತಿಳಿವುದು
ಶತಾಬ್ದಮಾಯುಷ್ಯಮೆಂದು ಪೇೞ್ದುದು ವೇದಂ || ೨೭ ||
ಕೃತಯುಗದೊಳಿಲ್ಲ ವೇದಂ
ಶತಾಯುವೆಂದಂದೆ ನಿಶ್ಚಯಂ ಕಲಿಯುಗದೊಳ್
ಮತಿಹೀನರಿಂದೆ ಪುಟ್ಟಿ
ತ್ತು ತುದಿಯೊಳಶ್ಲಾಘ್ಯಮಪ್ಪ ಮಾರಣವೇದಂ || ೨೮ ||
ತಾನೆ ನಿಜವಧುಗೆ ಸುತಸಂ
ತಾನಕ್ರಮದಿಂದೆ ಪುಟ್ಟುತಿರ್ಪಂ ಗಡ ಮ
ತ್ತೇನೆಂಬುದೋ ವೈದಿಕರ
ಜ್ಞಾನಮನಂತಾಗೆ ತಾಯ್ಗೆ ತಪ್ಪಿದನಲ್ಲಾ || ೨೯ ||
ಸುತರಂ ಪಡೆಯಲ್ವೇೞ್ಕುಂ
ಸುತರಿಲ್ಲದವಂ ಪರತ್ರೆಯೊಳ್ ಸಲ್ವಂ ದು
ರ್ಗತಿಗೆ ತಪಂಗಳನುಡಿದುಂ
ಸುತರನೆ ಗಡ ಪಡೆದು ಮಾೞ್ಪುದತ್ತಲ್ ತಪಮಂ || ೩೦ ||
ತಂದೆ ನರಕಕ್ಕೆ ಸಂ[ದೊಡೆ]
ನಂದನನೊಳ್ಪಿಂದೆ ತೆಗೆವನೆಮ್ಮು ವನೆಂಬರ್
ಮಂದಮತಿಗಳ್ ತನೂ[ಜಂ]
[ಪೊಂ]ದುವನೇ ನರಕಕೂಪದೊಳ್ಬಿರ್ದವನಂ || ೩೧ ||
ತನಗೆ ಗುಣವಂತನೌರಸ
ತನುಜಂ ಪುಟ್ಟದೊಡೆ ಲೋಗರಿಂ ಕ್ಷೇತ್ರಜನಂ
ವನಿತೆ ಪಡೆದಂದು ತತ್ಪು
ತ್ರನೆ ಸಗ್ಗಕ್ಕೊಯ್ವನೆಂದು[ಮೂಳ್ವ]ರ್ ಪಾರ್ವರ್ || ೩೨ ||
ಮಕ್ಕಳ್ ತನಗಾಗದೊಡಂ
ತಕ್ಕರನಾರಯ್ದು ತನ್ನ ಸಿತಯೊಳ್ ನೆರಪ
ಲ್ಕಕ್ಕುಂ ನಿಶ್ಚಯಮೆಂಬಾ
[ಟ]ಕ್ಕರ್ ಪಾದರಕೆ ದೋಷವಿಲ್ಲೆನವೇಡಾ || ೩೩ ||
ಏನೆಂಬುದೊ ವೈದಿಕರ
ಜ್ಞಾನಮನಾತ್ಮ ಸತಿ ಜಾರೆಯಾದೊಡೆ ಘೃತದಿಂ
ಯೋನಿಯನೆ ಕರ್ಚಿ ವಿಧಿಯಿಂ
ದೇನುಂ ಕೊಕ್ಕರಿಸದುಂಬರಂತಾ ಘೃತಮಂ || ೩೪ ||
ಶ್ರೀಧರ್ಮದಾಂಕೆಯಿಲ್ಲದೊ
ಡೀ ಧರೆಯೊಳ್ ಮಿಕ್ಕ ಪಾಪಕರ್ಮರ ಮತದಿಂ
ಗೋಧರ್ಮಮಕ್ಕುಮಂಗಜ
ಬಾಧೆಯಿನಸತಿಯೊಡವೋಪ ಜಾರರ ಕತದಿಂ || ೩೫ ||
ವೇದಾರ್ಥದಿಂದೆ ನಡೆದವ
ನಾದರದಿಂ ತಿಂಬುದಡಗನನ್ಯಾಂಗನೆಯಿಂ
[ದಾದ]ಸುಖಮಪ್ಪುದಿಂತಿನಿ
ತಾದೊಡೆ ತಾಂ ಭಕ್ತನೊಲ್ಲದಂ ದೂಷಿಸಿದಂ || ೩೬ ||
ಅಡುಗೆಗಳ ಮೀಸಲಂ ಮುಂ
ಸುಡುವುದು ಬೞಿಕುಣ್ಬುದೆಂಬರಂತವನೆಲ್ಲಂ
ಸುಡೆ ಬೂದಿಯಕ್ಕುಮದಱಿಂ
ಕುಡುಗಭವಂಗಮಿತಸೌಖ್ಯಮಂ ಬಯಸುವವಂ || ೩೭ ||
ಕಿರ್ಚಿನೊಳಗಿಕ್ಕೆ ಹವಿಯಂ
ಕಿರ್ಚಾಗಳೆ ದಿವಿಜಸಮಿತಿಗೊಯ್ದದನೀಗುಂ
ಚಚ್ಚರಮೆಂಬರ್ ಗಱಿಗಳ್
ಕಿರ್ಚಿಂಗೊಳಗಕ್ಕುಮಮರರಲ್ಲಿಗೆ ಪಾಱಲ್ || ೩೮ ||
ಹವಿಯೆಲ್ಲಂ ಬೆಂದೊಡೆ ಹ
ವ್ಯವಹಂ ಸುರಸಮಿತಿಗೊಯ್ವನೇ ಬೂದಿಯನಾ
ಹವಿ ಬೂದಿಯಾಗಿ ಪೋದುದು
ದಿವಿಜರ್ಗಾಯಗ್ನಿಯೇನನೀವಂ ಪೇೞಿಂ || ೩೯ ||
ಪಾವಕನ ಮುಖದೊಳುಂಬರ್
ದೇವರ್ ಮಿಕ್ಕಂತು ಪಸಿದು ಗಡ ಪೇೞ್
ದೇವರ್ಕಳಾ ಕೃಶಾನುಗೆ
ಭಾವಿಸೆ ಮಡಗೂೞನುಂಬ ಗರಜೆಗರಕ್ಕುಂ || ೪೦ ||
ಪಿರಿದಪ್ಪುದೊಂದು ಫಲದಿಂ
ಸುರೇಂದ್ರಸೌಖ್ಯಕ್ಕೆ ಯೋಗ್ಯಮಾದಾ ದಿವಿಜರ್
ನರರಗ್ನಿಯೊಳಿಕ್ಕಿದುದಱ
ಬರವನೆ ಗಡ ಪಾರ್ವರಿನ್ನವೊಳವೇ ದೈವಂ || ೪೧ ||
ಉ || ಇಂದುವಿಮಾನ[ಮೊಂ]ದೆವಸ ರಾಹುವಿಮಾನಮದೊರ್ಮೆಗೊರ್ಮೆ ಸಾ
ರ್ತಂದಿರೆ ಚಂದ್ರನುಂ ಕ್ರಮದೆ ತೋಱುವನೊರ್ಮೆಯೆ ತೋಱದಿರ್ಪನೆಂ
ದೆಂದು ವಿಚಾರದಿಂ ತಿಳಿಯದಾ ಸಸಿಯುಂ ದಿವಿಜಾಳಿ ನಿಚ್ಚಲುಂ
ತಿಂದೊಡೆ ಕುಂದುಗುಂ ಕ್ರಮದೆ ಪೆರ್ಚುಗುಮೆಂದಪರಯ್ಯ ವೈದಿಕರ್ || ೪೨ ||
ನೆರೆದು ಪದಿನೆಯ್ದು ದಿವಸಂ
ಬರೆಗಂ ಸುರಸಮಿತಿ ತೋಡಿ ತಿನೆ ಮತ್ತಂ ವಿ
ಸ್ತರಿಸುವನೆಂಬರ್ ಪೇೞಂ
ತಿರೆ ಪೊರೆಪುಗುಱಿಯೆ ದಿವಿಜಸಮಿತಿಗೆ ಚಂದ್ರಂ || ೪೩ ||
ಕ್ಷಿತಿಯಱಿವಂತು ಫಣೀಂದ್ರನ
ಗತಿವಶದಿಂದು ಕುಂದೆ ಪೆರ್ಚುತ್ತಿರೆಯುಂ
ಮತಿಹೀನರಿಂದುವಂ ದೇ
ವತೆಗಳ್ ತಿನುತಿರ್ಪರೆಂದೊಡಾರ್ ನಂಬುವರೋ || ೪೪ ||
ಬಿಂಬಂ ಋಗ್ವೇದಂ ಗಡ
ಬಿಂಬಾಂತರ್ವರ್ತಿ ಗಡ ಯಜುರ್ವೇದಂ ತದ್
ಬಿಂಬಪ್ರಭೆ ಗಡ ಸಾಮಮ
ದೆಂಬರ್ ದಿನಕರನನಿನ್ನವಘಟಮುಮೊಳವೇ || ೪೫ ||
ವೇದಂಗಳ್ ತನು ನಿಶ್ಚಯ
ವಾದಿತ್ಯಂಗೆಂದು ಪಾರ್ವರೆಂಬರ್ ನೋೞ್ಪಂ
ದಾದಿತ್ಯಂ ರತ್ನಮಯಂ
ವೇದಂ ಬಱಿಯೋದು ಬಗೆವೊಡಿದು ಸಂದೇಹಂ || ೪೬ ||
ಆದಿತ್ಯಂಗಾ ಮೂಱುಂ
ವೇದಮೆ ತನುವಪ್ಪೊಡಲ್ಲಿ ನಿಲ್ಲದೆ ಬಂದೀ
ಭೂದೇವರ ಬಾಯ್ಗಳೊಳಾ
ವೇದಂಗಳ್ ವರ್ತಿಸುತ್ತುಮೇಕಿರ್ದಪುವೋ || ೪೭ ||
ವೇದಮೆ [ಗೋ] ಸಾವಿತ್ರಿಗ
ಮಾದಿತ್ಯಂಗೆಯ್ದೆ ಮಂಗಳಸ್ತವ[ವೆನೆ ಪೇ]
ೞ್ದಾದಿವರಾಹಂಗಂ ಮೆ
ಯ್ಯಾದುವು ಗಡ ಬಗೆವೊಡಿನ್ನವಘಿತಮೊಳವೇ || ೪೮ ||
ಮೇರುವಿನೊಳಚ್ಚು ಕೀಲಿಸಿ
ಧಾರಿಣಿಯಿಂ ಪೊಱಗೆ ಸುತ್ತಿದಾ ಬೆಟ್ಟದ ಮೇ
ಗೋರಂತೆ ಗಾಲಿ ಪರಿವುದು
ಭೋರೆನೆ ಗಡ ಪುಸಿಗಳಿಂತು ನಿಡಿಯವುಮೊಳವೇ || ೪೯ ||
ಸಾರಥಿ ಪೆೞವಂ ವಿಷಮವಿ
ಷೋರಗನಾ ನೇಣು ಹಯಗಳೇೞಾಕಾಶಂ
ದಾರಿ ರಥಚಕ್ರಮೊಂದೆ ವಿ
ಚಾರಿಪೊಡಾಶ್ಚರ್ಯವಿಂದುವರ್ಕನ ಚರಿತಂ || ೫೦ ||
ಗಗನಂ ಮಾರ್ಗಂ ಸ್ಯಂದನ
ದ ಗಾಲಿಯೊಂದಶ್ವಮೇೞು ರಥದಾಳಣೆ ಪಾ
ವುಗಳೇ ರವಿಗೆಂಬರ ಮಾ
ತುಗಳೊಳ್ ಪುರುಳಿಲ್ಲ ಜಿನರ ಪೇೞ್ದುದೆ ತಥ್ಯಂ || ೫೧ ||
ಅನಿವಿರಿಯ ರಥಮನೆಲ್ಲಿಯು
ಮಿನಿಸುಂ ಕಾಣಲ್ಕೆ ಬಾರದಾ ರಥದೊಳಗಿ
ರ್ದನನೆಂತು ಕಾಣಲಾದುದು
ದಿನಕರನಂ ಬಗೆವೊಡಿನ್ನವಘಟಿತಮೊಳವೇ || ೫೨ ||
ಉ || ಭಾನುವ ತೇಜದೊಳ್ ಪುದಿದ ದೀಪ್ತಿಯೊಳೊಂದಿದ ಸೂರ್ಯಕಾಂತವೈ
ಮಾನದ ರಶ್ನಿಗಳ್ ಬೆಳಗುತಿಪ್ಪುವು ಧಾತ್ರಿಯನೆಂದು ಪೇೞದ
ಜ್ಞಾನಿಗಳಾ ದಿನೇಶರಥಮಂ ಬಿಗಿದಿರ್ದಹಿಯೊಂದು ಸುಯ್ಗಳಿಂ
ದೀ ನೆಲನೆಲ್ಲಮಂ ಬೆಳಗುತಿರ್ದುಪುವೆಂದಪರಯ್ಯ ವೈದಿಕರ್ || ೫೩ ||
ಅನಲಂಗಿರುಳಪ್ಪಾಗಳ್
ದಿನಪಂ ಕೊಟ್ಟಾತ್ಮತೇಜಮಂ ಮತ್ತದನೊ
ಯ್ಯನೆ ಸವಳದೆ ಕೊಳ್ವಂ ಗಡ
ದಿನಪಂ ತಸ್ಕರರ ಬಾಧೆಗಂಜುವನಕ್ಕುಂ || ೫೪ ||
ನಿತ್ಯಂಗಳಖಿಳಚಂದ್ರಾ
ದಿತ್ಯಗ್ರಹತಾರೆಗಳ ವಿಮಾನಂಗಳ್ ತಾ
ವತ್ಯುತ್ತಮರತ್ನಂಗಳ
ವತ್ಯಂತಂ ದ್ಯೋತಿಮಂತಮಱಿ ಜಿನಮತದೊಳ್ || ೫೫ ||
ಅಗ್ರಹಿಗಳಪ್ಪ ಮಿಥ್ಯಾ
ತ್ವಗ್ರಹಪೀಡಿತರ ಮತದೊಳೇಂ ತಿಳಿವುದೆ ನಿ
ರ್ವ್ಯಗ್ರತೆಯಿಂ ಚಂದ್ರಾದಿ
ತ್ಯಗ್ರಹತಾರೆಗಳ ಚರಣೆಯಂ ಜಿನಮತದೊಳ್ || ೫೬ ||
ವಿಶ್ವಂ ಶ್ರೋತ್ರಂ ನೇತ್ರಂ
ವಿಶ್ವಂ ವಿಶ್ವಂ ಮುಖಂ ಪ್ರಜಾಪತಿಗೆಂದುಂ
ವಿಶ್ವಂ ಕೆಯ್ ವಿಶ್ವಂ ಕಾಲ್
ವಿಶ್ವಂ ತಾನಾಪ್ತನೆಂದು ವೈದಿಕರೂಳ್ವರ್ || ೫೭ ||
ತರದಿಂ ದೆಯ್ವದ ಮೊಗದೊಳ್
ಕರದೊಳ್ ತೊಡೆಯೊಳ್ ಪದಂಗಳೊಳ್ ದ್ವಿಜರುಂ ಭೂ
ಪರುಮಂತೆ ವೈಶ್ಯರುಂ ಶೂ
ದ್ರರುಮೋಜೆಯಿನೊಗೆದರೆಂಬರಿನ್ನವು ಪುಸಿಗಳ್ || ೫೮ ||
ಮೊಗದೊಳ್ ಕರದೊಳ್ ಸ್ಥಿರಮೂ
ರುಗಳೊಳ್ ಪಾದಂಗಳೊಳ್ ದ್ವಿಜಾದಿ ಕುಲಂ ತಾ
ಮೊಗೆತಂದುವೆಂಬ ಠಾವಿನೊ
ಳಗೆ ಯೋನಿಗಳಿರ್ಕುಮಕ್ಕುಮಲ್ಲದೊಡೆನ್ನರ್ || ೫೯ ||
ನೀರುಂ ಕಿಚ್ಚುಂ ಗಾಳಿಯು
ಮಾ ರವಿಯುಂ ಶಶಿಯುಮನಿತು ವೇದಮುಮೆಂದುಂ
[ಪಾ]ರುವರ ಬಲದ ಕಿವಿಯೊಳ್
ಗೋರಂತಿರಲಿರ್ಪುವೆಂಬರಘಟಮಿವಿನಿತುಂ || ೬೦ ||
ಪುಸಿನುಡಿದೊಡಮುಗುೞ್ದೊಡಮ
ತ್ತ ಸೀಂತೊಡಂ ಪತಿತರಪ್ಪರೊಡನಿನ್ನೆತ್ತಾ
ನುಸಿರ್ದೊಡಮಂತಾಗಳ್ ಮು
ಟ್ಟೆ ಸುದ್ದಮೆಂದೊಳ್ವರಱಿಯದರ್ ಬಲಗಿವಿಯಂ || ೬೧ ||
ದೆಸೆಗೆಟ್ಟ ಮೂಢರೇನು
ದ್ದೆಸಮೋ ಸೀಂತಾಗಳುಗುೞ್ದೊಡಾಗಳ್ ಕ[ಣ್ಣಂ]
ಕಸವು ಪುಗೆ ಕಿವಿಯನೂದುವ
ರಸುಜನರೆಂತಂತೆ ಮುಟ್ಟವರ್ ಬಲಗಿವಿಯಂ || ೬೨ ||
ಪಿತೃದೇವಬ್ರಹ್ಮಪಿಶಾ
ಚತರ್ಪಣಾದಿಗಳೊಳಂತೆ ದೇಹಾರದೊಳಂ
ಸ್ತುತಿಯಿಸುವ ಪದದೊಳಂ ಸಂ
ಸ್ಕೃತದಿಂದಂ ನುಡಿಯೆ ಕಿಡದು ಗಡ ಮೌನಫಲಂ || ೬೩ ||
ಅಸಗಂ ಮುಟ್ಟಿದ ಸೀರೆಯ
ನೆ ಶುದ್ಧಮೆಂದುಟ್ಟುಕೊಂಡು ದೇವರುಮಂ ಪೂ
ಜಿಸುವರದಂ ಶೂದ್ರಂ ಮು
ಟ್ಟೆ ಶುದ್ಧಮಲ್ಲೆಂಬರಿಂತುಟಾ ವೇದಮತಂ || ೬೪ ||
ಆಗದು ಪಾರ್ವಂಗುಣುತಿ
ರ್ಪಾಗಳ್ ಕಾಲ್ಗಳನೆ ಮಣೆಯ ಮೇಲಿಡಲಿಂತುಂ
ಡಾಗಳ್ ಗೋಮಾಂಸಮದಂ
ತಾಗಳೆ ತಾನಕ್ಕು ಮುನ್ನಮೆಂಬರ್ ಪಾರ್ವರ್ || ೬೫ ||
ಉಗುರ್ಗಳ ಮೊನೆಯಿಂದಂ ನೀ
ರುಗುತರಲೆಱೆಯಲ್ಕೆ ಕುಡಿಯೆ ಕಳ್ಗುಡಿವ ತೆಱಂ
[ತಗದದುಯೆಂ]ದೂಳ್ವವರೋ
ದುಗಳಂ ಕೇಳ್ದಾಗ ನಗದೆ ಮಾಣ್ಬರೆ ಚದುರರ್ || ೬೬ ||
ಆಗದು ತಾಱೆಯ ನೆೞಲೊಳ್
ಪೋಗಲ್ ವಿಪ್ರಂಗೆ ಬೆಳಲ ನೆೞಲೊಳ್ ಮಱೆದುಂ
ಪೋಗಲ್ಕೆ ಸಲ್ಲೆನುತ್ತವ
ರಾಗದು ತಿನಲವಱೆಕಾಯನೆನುತಿರವೇಡಾ || ೬೭ ||
ಎಡಗಯ್ಯೊಳುಣ್ಬ ಕಂಚಂ
ಪಿಡಿದುಣ್ಣದೆ ಬಿಟ್ಟೊಡೆಂಜಲಂ ತಿಂದಾತಂ
ಬಿಡದಿರ್ದೊಡೆಂಜಲಲ್ಲದು
ಗಡ ನಿಶ್ಚಯಮೆಂದು ಕೂಡೆ ವೈದಿಕರೂಳ್ವರ್ || ೬೮ ||
ಅಂಜುಳಿಯೊಳ್ ನೀರ್ಗುಡಿಯಲು
ಮಂಜುಳಿಯೊಳಮುಣಲುಮಾಗದೆಂಬರ್ ತಾಮೆಂ
ತಂಜುಳಿಯೊಳರ್ಘ್ಯಮೆತ್ತುವ
ರಂಜುಳಿಯೊಳ್ ದೇವಪೂಜೆಗೆಯ್ವರ್ ಪಾರ್ವರ್ || ೬೯ ||
ಮಾತುಳವಿವಾಹಮಂ ಮು
ನ್ನಾ ತೆಱದಿಂ ವಿಷ್ಣು ಮಾಡೆ ತಮ್ಮಾಪ್ತಂ ತಾ
ಮಾತನುಮಂ ಮೆಚ್ಚರ್ ಮ
ತ್ತಾ ತೆಱದಿಂ ಲಾಳರೇಕೆ ಮಾಡರೆ ಪೇೞಿಂ || ೭೦ ||
ಒಂದೊಂದು ನಾಡಲಡಗಂ
ತಂದೊಡೆ ದಲ್ ದೋಷಮಿಲ್ಲಮೆಂದಾದಿತ್ಯಂ
ಬಂದಿಲ್ಲಿ ಸೊರ್ಕಿ ನುಡಿದಂ
ಸಂದೆಯಮೇ ನಿರುತಮೆಂದು ನುಡಿವರ್ ಪಾರ್ವರ್ || ೭೧ ||
ಇಱಿದನನಿಱಿಯಲ್ವೇೞ್ದುಂ
ನೆಱೆ ವೇದಮನೋದಿ ಶಾಸ್ತ್ರಮಂ ಕೇಳ್ದನನೆಂ
ದಱುಚುತ್ತುಮಿರ್ಪರೋದಿನ
ತೆಱನಿಂತುಟು ಧರ್ಮಶಾಸ್ತ್ರಮಿದು ವೈದಿಕರಾ || ೭೨ ||
ಪ್ರಾಯಶ್ಚಿತ್ತಂ ಸ್ವರ್ಣ
ಸ್ತೇಯಿಗೆ ಗಡ ಮದ್ಯಪಂಗೆ ಕಾಸಿದ ಕಳ್ಳ
ನ್ಯಾಯಿಗೆ ಗುರುತಳ್ಪಗತಂ
ಗಾಯುಧದಿಂದಕಟ ಲಿಂಗವಿಚ್ಛಿತ್ತಿ ಗಡ || ೭೩ ||
ಚಂ || ಒನಕೆಯನೆತ್ತಿ ನೆತ್ತಿಯನೆ ಪೊಯ್ವ ಕರಂ ಬಿಸಿದಾಗಿ ಕಾಸಿ ಕ
ಳ್ಳನೆ ಕೆಡೆಯಿಕ್ಕಿ ಬಾಯೊಳೆಱೆವರ್ಚಿಸಿ ಸಾಧನಮಂ ತೆರಳ್ಚಿ ಕೊ
ಯ್ದನಿತುಮನಂಜದಂಜುಳಿಯೊಳಿಟ್ಟು ತೊೞಲ್ಜುವ ಚರ್ಚೆ ಬಾರ್ತೆಯೇ
ಜಿನಮತದಿಷ್ಟ[ದಿಂ] ಕಳೆಗೆ ಮಾಡಿದ ದುಷ್ಕೃತಮಂ ನಿರಾಕುಳಂ || ೭೪ ||
ದೋಷಕ್ಕೆ ತಕ್ಕುದೆನಿಸಿದ
ಶಾಸನೆಯಿಂ ಪಾಪಮೞಿಗುಮಱಗುಲಿಗಳ ದು
ಶ್ಯಾಸನದಿಂ ಪೋಕುಮೆ ಜಿನ
ಶಾಸನರಿಷ್ಟದೊಳೆ ಪಾಪಮಂ ಕಳೆಗಱಿವಂ || ೭೫ ||
ಮಧುಮಾಂಸಸೇವೆಯುಂ ಪಶು
ವಧೆಯುಂ ಪರದಾರಗಮನಮುಂ ಸಲ್ಗುಮಿದೆಂ
ದಧಮರಿವಂ ಮಱಸಿಯುಮ
ನ್ಯಧನಾಪಹ ಮದ್ಯಸೇವೆಗಳ್ ಸಲ್ಲೆಂಬರ್ || ೭೬ ||
ಪುಸಿ ಕೊಲೆ ಕಳವು ಪರಸ್ತ್ರೀ
ವ್ಯಸನಮಿವತ್ಯಂತದೋಷಮೆಂಬರ್ ಮತ್ತಂ
ಪುಸಿ ಕೊಲೆ ಕಳವು ಪರಸ್ತ್ರೀ
ವ್ಯಸನಂ ಕೆಲವೆಡೆಯೊಳಕ್ಕುಮೆಂಬರ್ ತಕ್ಕರ್ || ೭೭ ||
ಶಾಪಿಸಲಸುವುಂ ಪಸುವುಂ
ಪೋಪುವು ಶುಭಮಕ್ಕೆಯೆಂದೊಡಕ್ಕುಂ ಜಗದೊಳ್
ಶಾಪಾನುಗ್ರಹನಿಪುಣರು
ಮೀ ಪೊನ್ನಿಂ ಕಳೆವೆಮಘವನೆಂಬರ್ ಪಾರ್ವರ್ || ೭೮ ||
ಗೋಘ್ನನ ಪಾಪಮುಮಂ ಬ್ರ
ಹ್ಮ ಘ್ನನ ಪಾಪಮುಮನೆಮಗೆ ಪೊಂಗುಡಿಮೀಗಳ್
ನಿಘ್ನಂ ಮಾಡುವೆಮೆಂದು ಗು
ಣಘ್ನರ್ ಪೊನ್ ಕೊಂಡು ಪಾರ್ವರಸುಗತಿಗಿೞಿವರ್ || ೭೯ ||
ಪಿರಿದುಂ ಪಾಪೋತ್ಕರಮಂ
ನೆರಪಿದೊಡಮದೊಂದು ಪೊನ್ನನಾರ್ತೊರ್ಮೆ
ಧರಾಮರಸಮಿತಿಗಿತ್ತೊಡಘಮೇ
ನಿರಲಱಿಗುಮೆ ಪೋಕುಮೆಂದು ಪೇೞ್ವರ್ ತಕ್ಕರ್ || ೮೦ ||
Leave A Comment