ಮಾದೇವಂ ದಿತಿಸುತರೊಳ್
ಕಾದುವನಣಮಲ್ಲ ನಿರ್ಮಳಾಂಗಂ ಪೂಸಂ
ಬೂದಿಯನೆಂತುಂ ಮುಕ್ತಿ
ಶ್ರೀದಯಿತಂ ಮಸಣದಲ್ಲಿ ಪಟ್ಟಿರಲಱಿಯಂ || ೬೪ ||

ನಿರ್ಮಳನಪ್ಪಂ ಪೊದೆಯಂ
ಚರ್ಮಮನತಿ ಶೌಚಿಯಪ್ಪನೊಣಕೆಯೊಳುಣ್ಣಂ
ಧರ್ಮೋಪದೇಶಿಯಪ್ಪಂ
ದುರ್ಮನನೇ ಶಾಂತನಾಪ್ತನಲ್ಲಂ ರುದ್ರಂ || ೬೫ ||

ಭವಹರನಪ್ಪೊಡಜಾತಂ
ಶಿವನಪ್ಪೊಡೆ ದುಃಖಿಯಲ್ಲನಪಗತಚೇತೋ
ಭವನಪ್ಪೊಡಲ್ಲ ಗೌರೀ
ಧವನೀಶ್ವರನಪ್ಪೊಡೆಂತುಮಱಿಯಂ ತಿರಿಯಲ್ || ೬೬ ||

ಶಂಕರನಪ್ಪೊಡೆ ಲೋಕಭ
ಯಂಕರನಲ್ಲನನಘನಪ್ಪೊಡೞಿಯಂ ಜಗಮಂ
ತಾಂ ಕರ್ಮವೈರಿಯಪ್ಪೊಡೆ
ಮುಂಕೊಂಡೀ ಜಗಮನೆಯ್ದೆ ಮಾಡನವಶ್ಯಂ || ೬೭ ||

ಜಿತಕಾಮನಲಂಪಿನೊಳಗ
ಸುತೆಯೊಳ್ ನೆರೆಯಲ್ಕೆ ಬಲ್ಲನೆನೆ ಪಾವನನಾ
ಹುತವಹನ ಮುಖದೊಳಿಡುವನೆ
ಗತಲಿಂಗನುಮಾಗಲಱಿವನೇ ತಾಪಸರಿಂ || ೬೮ ||

ರೂಡಿಯ ಪರಮಾತ್ಮನದೇಂ
ಕಾಡಾನೆಯ ರೂಪುಗೊಂಡು ಪಿಡಿಯೊಳದೆಂತುಂ
ಕೂಡುವನೆ ಕರಿಯ ಸೀಳ್ದೀ
ಡಾಡಿಡುವನೆ ಬಿರ್ಚಿ ಜೆಡೆಯನೆೞ್ದಾಡುವನೇ || ೬೯ ||

ಸಲ್ಲಲಿತಸಿಂಹವಿಷ್ಟರ
ದಲ್ಲಿ ಜಗತ್‌ಸ್ವಾಮಿಯಾಗಿ ನೆಲಸಿರ್ಪನದೇಂ
ಬಲ್ಲನೊ ಪಿರಿದುಂ ಶ್ವೇತನ
ಬಿಲ್ಲಿನ ಕೊಪ್ಪಿನೊಳಿರಲ್ಕೆ ನಾರಿಯ ತೆಱದಿಂ || ೭೦ ||

ಗಣನೆಗೆ ಸರ್ವಜ್ಞನದೇ
ನೆಣಿಸುವನೇ ಮಣಿಯನಖಿಳಮಂಗಳನಿಳಯಂ
ಪೆಣನಂ ಪೊತ್ತು ತೊೞಲ್ವನೆ
ಗುಣಗಣನಿಧಿ ವಿಷಮನಿರಿಸಲಱಿವನೆ ಕೊರಲೊಳ್ || ೭೧ ||

ಜ್ಞಾನದೆ ಕಾಣ್ಬಾತಂ ನಾ
ನಾನನ[ನ]ಲ್ಲಭಯನಪ್ಪೊಡಾಯುಧಚಯಮಂ
ತಾನೆಂತುಂ ಪಿಡಿದಿರನಾ
ಜ್ಞಾನಚರಿತಾತ್ಮನಪ್ಪೊಡುಡುವನೆ ತೊವಲಂ || ೭೨ ||

ಅಱನುಂ ದಯೆಯುಂ ಲಜ್ಜೆಯು
ಮಱಿವುಂ ತನಗುಳ್ಳ ಶಂಕರಂ ದಾನವರಂ
ತಱಿವನೆ ಜಗಮಂ ಸುಡುವನೆ
ನಿಱಿದೆೞ್ದಾಡುವನೆ ಪಶುವನೇನೇಱುವನೇ || ೭೩ ||

ಚಂ || ಪ್ರಿಯಮಿನಿಸುಳ್ಳವಂ ಕಡಿಯಲೇನೊ ಮನಂದರಲಾರ್ಪನೇ ವಿರಿಂ
ಚಿಯ ತಲೆಯಂ ಜಗತ್ಪ್ರಭುವೆನಿಪ್ಪವನೞ್ತಿಯೊಳಾ ಪಿಶಾಚಕೋ
ಟಿಯೊಳೊಡಗೂಡಿ[ಯಾ]ಳ್ವವನೆ ಪಾವನಮೂರ್ತಿ ಮಹೇಶನೊಲ್ದು ತಾ
ಳ್ದಿಯುಮಿರಬಲ್ಲನೇ ಹರಿಯ ಪಾದಜಲಂಗಳನುತ್ತಮಾಂಗದಿಂ || ೭೪ ||

ಲೋಕಾಗ್ರದಲ್ಲಿ ದಿವಿಜಾ
ನೀಕಸ್ತುತ್ಯಂ ಸದಾಶಿವಂ ನೆಲಸಿರೆ ಮ
ತ್ತೇಕೆ ಮತಿಹೀನರಾತ್ಮನ
ನೇಕಾತ್ಮ ಕನೆನುತುಮಾಗಳುಂ ಬಣ್ಣಿಸುವರ್ || ೭೫ ||

ನೆಲನಾಕಾಶಂ ಮರುತಂ
ಜಲಮಗ್ನಿಶಶಾಂಕಸೂರ್ಯರಾಪ್ತನ ತನುವೆಂ
ದಲಸದುಲಿವವರ ನುಡಿಯೊಳ್
ಫಲಮಿಲ್ಲ ಸದಾಶಿವಂಗಿವಲ್ಲವು ತನುಗಳ್ || ೭೬ ||

ಅಡುವ ಸುಡುವಗ್ನಿ ಕರ್ಚುವೆ
ಜ[ಡ]ಮೆಂದುಂ ಮೆಟ್ಟುವಗುೞ್ವ ಪರಗುವ ಮಲಮಂ
ಬಿಡುವ ನೆಲನೆಂಬಿವಾಪ್ತಂ
ಗೊಡಲ್ಗಳೆನಲಾಗ ಪವನಶಶಿದಿನಪರುಮಂ || ೭೭ ||

ಶಿವಗೋಪುರದೊಳಗಂ ಕೆ
ರ್ಪುವೆರಸಿ ಪುಗಲಾಗದೆಂದೊಡಾತನ ತನುವ
ಪ್ಪವನಿಯನಪ್ಪುದೆ ಪೇೞ್ ಕೆ
ರ್ಪುವೆರಸು ಮೆಟ್ಟಲ್ಕೆ ಭಕ್ತರೆನಿಸಿದ ಶೈವರ್ || ೭೮ ||

ಎಂಟುಮೊಡಲ್ಗಳ್ ದೆಯ್ವ
ಕ್ಕುಂಟಾದೊಡೆ ಭಕ್ತನಪ್ಪವಂ ನಡೆಯಲ್ ಬೇ
ಱುಂಟೆ ನೆಲಂ ಕುಡಿಯಲ್ ನೀ
ರುಂಟೇ ಪೇೞ್ ಸುಡುಲುಮಡಲುಮೆ[ಲೆ] ಕಿರ್ಚುಂಟೇ || ೭೯ ||

ಕುಂದುವ ಪೆರ್ಚುವ ನಂದಿಸೆ
ನಂದುವ ಮೂರ್ತಿಗಳನಾಪ್ತನ ಕ್ಷಿತಿಗಳೆನ
ಲ್ಕೊಂದೊಂದರ್ಕಿವು ನೇರಿದು
ವೆಂದುಂ ತಾವಲ್ಲದದಱಿನೆನಲಾಗಱಿವಂ || ೮೦ ||

ಜ್ಞಾನಾಂಬಕನಮಳಗುಣಾ
ಧಾನಂ ಸರ್ವಜ್ಞನೆಂಬುದಲ್ಲದೆ ಚಂದ್ರಾ
ರ್ಕಾನಳನೇತ್ರತ್ರಯನೆಂ
ಬೀ ನುಡಿಯಂ ನುಡಿಯಲಾಗದಱಿವುಳ್ಳಾತಂ || ೮೧ ||

|| ಜ್ಞಾನದಿನಲ್ತೆ ಸರ್ವಗತನಂ[ತೆ] ಸಂಖಾಸ್ಪದನಾಪ್ತನೆನ್ನದೆ
ಜ್ಞಾನದಿನಲ್ತೆ ದೇಹಿಗಳ ದೇಹದೊಳಿರ್ದು ಶುಭಾಶಭಂಗಳಂ
ತಾನೊಸೆದುಂಬ ಕಾಲದೊಳೆ ಸರ್ವಗತಂ ಸಕಳಾತ್ಮನೆಂಬರ
ಜ್ಞಾನಿಗಳನ್ನನಾದೋಡೆ ಸದಾಶಿವನಲ್ಲನನಂತದುಃಖತಂ || ೮೨ ||

ಒಂದಂದಂ ಧ್ಯಾನಂ ಮ
ತ್ತೊಂದಂದಂ ಪ್ರತಿಮೆಯುೞಿದ ಸಮಯಿಗೆ ನೋೞ್ಪಂ
ದೆಂದುಂ ಧ್ಯಾನಮುಮಾಪ್ತನು
ಮೊಂದಂದವು ಪಲವು ಭೇದಮಿಲ್ಲಾರ್ಹತದೊಳ್ || ೮೩ ||

ಶಿವನೊಂದು ಮೂರ್ತಿಯಂದಮ
ನವಯವದಿಂ ಸಾಜಮೆ ಗಡ ಪೇೞ್
ವಿವರಿಸಿ ನೆನೆವಂದಮಾವುದವನಂ ಭಕ್ತರ್ || ೮೪ ||

ಶಿವಶಿವಯೆಂಬುದು ಲೋಕಂ
ಶಿವಮೆಂಬುದು ಸುಖಮದರ್ಕೆ ನೆಲೆಯೆನಿಪಾತಂ
ಶಿವಬುದ್ಧಿಯೊಳ[ಗ]ಮೆಂಬರ್
ಶಿವತತ್ತ್ವಜ್ಞರ್ ಕರಂ ವಿವೇಕವಿಹೀನರ್ || ೮೫ ||

ಧ್ಯಾನಿಪೊಡೆ ಲಿಂಗರೂಪಂ
ಧ್ಯಾನಿಪುದೋ ಪಂಚವಕ್ತ್ರಮಂ ದಶಭುಜಮಂ
ಧ್ಯಾನಿಪುದೊ ನಾಟ್ಯರೂಪಂ
ಧ್ಯಾನಿಪುದೋ ತನುಗಳೆಂಟುಮಂ ಧ್ಯಾನಿಪುದೋ || ೮೬ ||

ಪೆಂಡಿತಿವೆರಸಿದ ದೆಯ್ವಂ
ಪೆಂಡಿರ್ ಪೂಜಿಪೊಡೆ ಪೆಂಡಿರಲ್ಲದ ದೆಯ್ವಂ
ಗಂಡಂಗಾಪ್ತಂ ಗೊರವರ
ತಂಡಕ್ಕಂ ಬೇಱೆ ಮಾಹೇಶ್ವರರೊಳ್ || ೮೭ ||

ಪೆಂಡಿರ್ಗಂ ಮಕ್ಕಳ್ಗಂ
ಗಂಡರ್ಗಂ ತಪಸಿಯರ್ಗಮಾಪ್ತಂ ಧರಣೀ
ಮಂಡಳದೊಳ್ ಜಿನಬಿಂಬಮ
ಖಂಡಿತಮೊಂದಂದದಿಂದಮಾರ್ಹತಮೆಸೆಗುಂ || ೮೮ ||

ದೇವಸ್ತುತಿ ಲೋಕಕ್ಕಖಿ
ಳಾವನಿಯೊಳ್ ಪಲವು ಭೇದಮಂತಲ್ತರ್ಹದ್
ದೇವಸ್ತುತಿಯೊಂದಂದಂ
ಭೂವಳಯದೊಳದಱಿನಾರ್ಹತಂ ತತ್ಸೇವ್ಯಂ || ೮೯ ||

ಏಡಿಸುವ ಮರುಳ ಪಡೆಯೊಡ
ನಾಡುವ ದಿವಿಜರೊಳೆ ತೋಟಿಮಾಡುವ ಪಲವಂ
ಬೇಡುವ ವಿಕಳನನಾಪ್ತಂ
ಮಾಡಿ ಮಗುೞ್ದೆಱಗಲಾಗದಱಿವುಳ್ಳಾತಂ || ೯೦ ||

ಅನುಪಮಗುಣನಖಿಳಜಗ
ಜ್ವನಹಿತಕರನೆನಿಸಿದಂ ಮಹಾದೇವಂ ದೈ
ತ್ಯನಿಕಾಯಮೆಲ್ಲಮಂ ಕೊ
ಲ್ವನಣಂ ಮಾದೇವನಲ್ಲ ಸುಭಟರ ದೇರಂ || ೯೧ ||

ಶಂಕರನಖಿಳಜಗಕ್ಕಂ
ಶಂಕರನೆನೆ ಸಂದನಪ್ಪನನಿತುಮನೞಿವಂ
ಶಂಕರನಲ್ಲಂ ಲೋಕಭ
ಯಂಕರನಾ ಪೆಸರ್ಗೆ ತಕ್ಕನಲ್ಲನವಶ್ಯಂ || ೯೨ ||

ರಾಗದ್ವೇಷವಿವರ್ಜಿತ
ನಾಗಿರ್ದಂ ದೆಯ್ವಮೆಂಬರಗಜೆಯ ಮೆಯ್ಯೊಳ್
ರಾಗಂ ದೈತ್ಯರ ದೆಸೆಯಿಂ
ದಾಗಿರ್ಕುಂ ದ್ವೇಷಮೆರಡುಮೀಶಂಗೆ ನಿಜಂ || ೯೩ ||

ಪಾದದ ಬೆಳ್ಳಿಯನೊಂದಿನಿ
ಸೂದಲೊಡಂ ತನ್ನ ಸಾಜಮಂ ತೋರುವವೋಲ್
ಮಾದೇವನೆಂದು ಪರಿಕಿಪೊ
ಡಾ ದೈತ್ಯರನೞಿದನೆಂಬುದದೆ ಬಂದಿರ್ಕುಂ || ೯೪ ||

|| ಮೊದಲಿಂದಂ ಮೃಡನರ್ಧನಾರಿ ನೃಶಿರೋಮಾಳಾಧರಂ ಚರ್ಮಮಂ
ಪೊದೆದಿರ್ಪಂ ಜಗಮೆಲ್ಲಮಂ ಸುಡುವಣುಣ್ಬಂ ಸುತ್ತಿಯೊಳ್ ಮತ್ತಮಾ
ಡದ ಗೊಡ್ಡಂಗಳನಾಡುತಿರ್ಪನೆನುತುಂ ಬಣ್ಣಿಪುದಂ ಕೇಳ್ವೆವ
ಲ್ಲದೆ ಸನ್ಮಾರ್ಗದೆ ಮುಕ್ತಿಗೆಯ್ದಿದುದನೆಂತುಂ ಕೇಳ್ದೆವಿಲ್ಲೆಲ್ಲಿಯುಂ || ೯೫ ||

ಪರಮಜ್ಞಾನಾತ್ಮ ಕಂ ಶಂಕರನಘಹರಣಂ ಮೋಕ್ಷಲಕ್ಮ್ಮೀಪ್ರದಂ ಮು
ಕ್ತಿರಮಾಕಾಂತಂ ಕೃತಾಂತಾಂತಕನನಘನನಂಗಾಪಹಂ ದೋಷದೂರಂ
ಪರಮಾನಂದಂ ತ್ರಿಲೋಕೀಪತಿ ಗುಣನಿಧಿ ಸರ್ವಜ್ಞನೆಂಬೀ ಪೆಸರ್ ದೇವರ
ದೇವಂ ಶ್ರೀಜಿನೇಂದ್ರಂಗಮರ್ಗುಮುೞಿದರೊಳ್ ಪತ್ತವಿಂತಪ್ಪ ನಾಮಂ || ೯೬ ||

ಪರಮೇಶ್ವರನನಘಂ ಜ್ಞಾ
ನರೂಪನೆಂದಿಟ್ಟು ಕಟ್ಟಿಕೊಂಡೇನಾನುಂ
ನರರಱಿಯರೆಂಗುಮಕ್ಕಟ
ಮರುಳರಸಂ ರುದ್ರನಲ್ಲನನ್ನನವಶ್ಪಂ || ೯೭ ||

ಆನಂದಮೂರ್ತಿಯೆಂದ
ಜ್ಞಾನಿಗಳಾರ್ತದೊಳೆ ಬೇವನಂ ಬಣ್ಣಿಪರೊ
ಲ್ದಾನಂದಮೂರ್ತಿಯೆಂಬಭಿ
ಧಾನಂ ಜಿನನಲ್ಲದವರೊಳೇಂ ಸಂದಪುದೇ || ೯೮ ||

ಭವಮೆಂಬುದು ಸಂಸಾರ
ಕ್ಕವಿಶೇಷಂ ನಾಮಮದಱ ಪೆಸರ್ಗೊಂಡಾತಂ
ಶಿವನಲ್ಲಂ ಜಿನನೆಸೆದಾ
ಶಿವನಾನಂದಸ್ವರೂಪನಪ್ಪುದಱಿಂದಂ || ೯೯ ||

ಪರಮಜ್ಞಾನಮಯಂ ಶಂ
ಕರನಭವಂ ಲೋಕವಂದ್ಯನೆನುತುಂ ಮೂಢಂ
ಮರುಳೊಡನೆ ಕೂಡಿ ಮಾಡುವ
ಮರುಳಂ ಪುರುಳಾಗೆ ಮಾಡಿಕೊಂಡೊಲ್ದೆಸೆಪರ್ || ೧೦೦ ||

ನಿಶಿತಪ್ರಜ್ಞೆಯಿನಭವಂ
ವಿಶೇಷಗುಣಯುಕ್ತನಾಪ್ತನೆಂದಱಿಯದವರ್
ಪಶುಗಳವರ್ಗಧಿಪನಾಗಿಯೆ
ಪಶುಪತಿಯೆನೆ ರುದ್ರನಿಂತು ರೂಢಿಗೆ ಸಂದಂ || ೧೦೧ ||

ಗೌರೀಪತಿ ಶಲ್ಯಧರಂ
ಭೈರವನಹಿಧಾರಿ ಲೋಕಮಂ ಸುಡುವಂ ದೈ
ತ್ಯಾರಿ ಸದಾಶಿವನಲ್ಲ ವಿ
ಚಾರಿಸೆ ಬೇಱೊರ್ವನೆಂಬರೆಲ್ಲಿದನಾತಂ || ೧೦೨ ||

ಇರ್ದೆಡೆಯಱಿದಾಗಮದಿಂ
ಪೊರ್ದುವುದೋಲಗಿಪುದಾಪ್ತನಂ ಜೈನಂ ತ
ಮ್ಮಿ ರ್ದೆಡೆಯುಮನಾ ಈಶ್ವರ
ನಿರ್ದೆಡೆಯುಮನಱಿಯರೆಂಬರೆಂತೋಲಗಿಪರ್ || ೧೦೩ ||

ಮನದೊಳ್ ಘೋಳಾಘೋಳಾ
ಯೆನುತಿರ್ದೊಡೆ ಸಾಲ್ಗುಮಾಪ್ತನಿಂತಪ್ಪವನೆಂ
ದನಿಶಂ ಚಿಂತಿಸವೇಡಾ
ತ[ನೆ] ಭಕ್ತರನಱಿದು ಪೊರೆವನೆಂಬರ್ ಮೂಢರ್ || ೧೦೪ ||

ಹರಿಯುಂ ಪಂಕಜಭವನುಂ
ಪರಮೇಶನನಿನ್ನುಮಱಿಯರೆಂದೊಡೆ ಮತ್ತೀ
ನರರೆತ್ತಱಿದಪರೆಂಬರ್
ಪರಮನನಱಿಯದೊಡೆ ಪೂಜಿಸಿದಪರೆ ಕೊಱಡಂ || ೧೦೫ ||

ಸರಸಿಜಭವಾದಿ ಸುರರುಂ
ಗಿರಿಶನ ಗುಣಗಣಮನಱಿಯರಭಿವರ್ಣಿಸಲೆಂ
ಬರ ಮಾತು ತಕ್ಕುದೆಂತೆನೆ
ಗಿರಿಶಂಗೊಳ್ಗುಣಮದೇನುಮಿಲ್ಲಪ್ಪುದಱಿಂ || ೧೦೬ ||

|| ಕರದೊಳ್ ಶೂಲಮುಮಂ ವಿಷೋರಗಮುಮಂ ಭಾಳಾಕ್ಷಿಯೊಳ್ ಕೊಡೆ ದ
ಳ್ಳುರಿಯಂ ತಾಳ್ದಿ ಮಹೋಗ್ರನೆಂಬ ಪೆಸರಂ ಕೈಕೊಂಡನಂ ಪೊರ್ದಿ ಬಿ
ತ್ತರದಿಂ ನಿತ್ತರಿಸಲ್ಕೆ ಬಾರದೆನುತುಂ ನಿಶ್ಚೈಸಿ ಬಿಟ್ಟುಂ ಜಿನೇ
ಶ್ವರನಂ ಶಂಕರನಂ ಗುಣಾಕರನನತ್ಯಾನಂದದಿಂ ಪೊರ್ದುವರ್ || ೧೦೭ ||

ಶಾಂತಾತ್ಮನ ನುಡಿಗಳ್ ಕಿವಿ
ಯಂ ತಣಿಪುಗುಮೆಸಕಮಖಿಲಜನಹಿತಕರಮೆಂ
ದಿಂತು ತಿಳಿದೋಲಗಿಪ್ಪುದ
ನಂತಸುಖಾಸ್ಪದಮನೊಲ್ವನಾಪ್ತನ ಗುಣಮಂ || ೧೦೮ ||

ಸರಸಿಜಭವಂಗೆ ವಿಷ್ಣುಗೆ
ಸರಸಿಜಮಿತ್ರಂಗೆ ಶಿಖಿಗೆ ಚಂಡಿಕೆಗೀತಂ
ಗುರು ದೆಯ್ವಮೆಂಬರವರೆಲೆ
ಗಿರಿಶನುಮೋಲಗಿಪನೆಂಬರಾರೋ ದೆಯ್ವಂ || ೧೦೯ ||

ಕಮಳಭವಂ ಕಾಲ್ಗರ್ಚಿದ
ಕಮಂಡಳೋದಕಮೆ ವಿಷ್ಣುಪಾದದಿನಿೞಿತಂ
ದಮರನದಿಯಾದುದೆಂದೂ
ಳ್ವ ಮಹಾತ್ಮರ ಬಾಯ್ಗೆ ಮುಚ್ಚುಳಪ್ಪರೆ ಚದುರರ್ || ೧೧೦ ||

ಚಂ || ಪರಿದೆನಿಸಿರ್ದ ಭಕ್ತಿಯೊ[ಳೆ] ವಿಷ್ಣುಮನೆಯ್ದೆ ಸಹಸ್ರನಾಮದಿಂ
ಗಿರಿಸುತೆ ನಿಚ್ಚಲುಂ ಸ್ತುತಿಯಿಸುತ್ತಿರಲೀಶನಿನಿತ್ತು ವೇೞ್ಕಮೇ
ಹ[ರ]ಹರ ರಾಮರಾಮಯೆನೆ ನಾಮಸಹಸ್ರಮನೋದಿದಾ ಫಲಂ
ದೊರೆಕೊಳಲಾರ್ಕುಮೆಂದನೆನತುಂ ಸಲೆ ಬಣ್ಣಿಪರೀಗ ವೈಷ್ಣವರ್ || ೧೧೧ ||

ಹರಿ ತನ್ನಯ ಕಣ್ಣಂ ಕಳೆ
ದು ರುದ್ರನಂ ಪೂಜಿಸಿದೊಡೆ ಕಣ್ಣುಮನಿತ್ತಂ
ಹರನೊಸೆದು ಚಕ್ರಮಂ ಕೂ
ರ್ತಿರದಿತ್ತಂ ವಿಷ್ಣುಗೆಂಬರಾ ಶಿವಭಕ್ತರ್ || ೧೧೨ ||

ಗಿರಿಶಂ ಸ್ತುತಿಯಿಸಿದಂ ದಿನ
ಕರನಂ ದಿನಕರಸಹಸ್ರನಾಮದಿನವನಾ
ಗಿರಿಜೆಗೆ ಕಲಿಸಿದನೆಂಬರ್
ಸದಸಿಜಮಿತ್ರನುಮನೀಶನಾರಾಧಿಪನೇ || ೧೧೩ ||

ಮೊದಲೊಳ್ ಮುನ್ನಂ ಪೊಡೆವಡು
ವುದು ಸೂರ್ಯಂಗಿಷ್ಟದೇವತಾರಾಧನೆ ಮಾ
ೞ್ಪುದು ಬೞಿಕಮೆಂದು ಪೇೞ್ದಂ
ದದಿನೀಶನ ಮತದೆ ಶೈವರೆಲ್ಲಂ ನೆಗೞ್ವರ್ || ೧೧೪ ||

ಸೌರಾರಾಧನೆಯಂ ಕ್ರೌಂ
ಚಾರಿಗೆ ತಿಳಿವಂತು ಸೌರಸಂಹಿತೆಯಂ ವಿ
ಸ್ತಾರದೆ ಪೇೞ್ದಂ ಕ್ರಮದಿಂ
ಗೌರೀಪತಿಯೆಂದು ಶೈವರೆಲ್ಲಂ ನುಡಿವರ್ || ೧೧೫ ||

ವೇದಂ ಸ್ವಯಂಭುವಲ್ಲಾ
ವೇದಮುನೀಶ್ವರನೆ ಪೇೞ್ದನೆಂಬರ್ ಮೊದಲೊಳ್
ವೇದಂ ಕಿರ್ಚನೆ ಪೊಗೞ್ವುದು
ಮಾದೇವಂಗಿಷ್ಟದೈವಮುಂ ಕಿರ್ಚಕ್ಕುಂ || ೧೧೬ ||

ಮುರಹರ ಸರಸಿಜಭವ ರು
ದ್ರರುಮೀಶ್ವರನುಂ ಸದಾಶಿವಂ ಬೆರಸಿಂತ
ಯ್ವರುಮೊಂದಿರ್ಪರ್ ಚಂಡಿಯ
ಚರಣಂಗಳ ಮೊದಲೊಳೆಂದು ಕೌಳರ್ ಪೇೞಕ್ವರ್ || ೧೧೭ ||

ದೇವರ್ಕಳಾದರೆಲ್ಲಂ
ಸೇವಿಪರೀಶ್ವರನನೆಂಬರವರನೆ ಮತ್ತಂ
ಸೇವಿಪನೀಶ್ವರನೆಂಬರ್
ದೇವಂ ಸೇವಕರ್ಗೆ ತಾನುಮೇಂ ಸೇವಕನೇ || ೧೧೮ ||

ಬಲ್ಲಿದ ದೇವರ್ಕಳ್ ನೆರ
ದೆಲ್ಲಂ ಬಂದೆಮ್ಮ ದೇವರಂ ಸೇವಿಪರೆಂ
ದಲ್ಲಲ್ಲಿಗೆಂಬರರುಹನ
ದೆಲ್ಲಿಯುಮೋಲಗಿಪನೆಂಬುದಂ ಕೇಳ್ದಱಿಯೆಂ || ೧೧೯ ||

ಶಾ || ಶ್ರೀಯಂ ಚಕ್ರಿಗೆ ದೇವರಾಜಪದಮಂ ಶಕ್ರಂಗೆ ತೇಜೋಧಿಕ
ಶ್ರೀಯಂ ತೀವ್ರಕರಂಗೆ ಬುದ್ಧಿಯೊದವಂ ಬುದ್ಧಂಗೆ ರಾಜದ್ವಚ
ಶ್ರೀಯಂ ವಾಕ್ಪತಿಗಿತ್ತನೆಂದು ಪೊಗೞ್ವರ್ ಗೌರೀಶನಂ ನಿರ್ವೃತಿ
ಶ್ರೀಯೊಳ್ ನಿಂದ ಜಿನಂಗೆ ಕೊಟ್ಟುದನೆ ಕೇಳಲ್ ಬಂದುದಿಲ್ಲೆಲ್ಲಿಯುಂ || ೧೨೦ ||

ತ್ರಿಗುಣಾತ್ಮನದೇನಂ ಮಾ

ಡುಗುಮಮಿತಗುಣಾಂಬುರಾಶಿ ಜಿನನಾಥನೆ ಮಾ
ಡುಗುಮಮಿತಗುಣ[ಮವಂ] ವಂ
ದಿಗೆ ಸತ್ತ್ವರಜಸ್ತಮಂಗಳಂ ಭವನೀಗುಂ || ೧೨೧ ||

ಮಾಂಗಲ್ಯನಿಳಯನ[ಪ್ಪನೆ]
ಮಾಂಗಲ್ಯಪ್ರದನೆನಿಕ್ಕುಮಾಶ್ರಿತರ್ಗೆಂತುಂ
ಮಾಂಗಲ್ಯಪ್ರದನಲ್ಲನ
ಮಾಂಗಲ್ಯಚರಿತ್ರನೆನಿಸಿ ಗೋಸನೆವೋದಂ || ೧೨೨ ||

ಮಂಗಳಮನೊಸೆದು ಮಾೞ್ಪನ
ಮಂಗಳನೆನಿಸಿರ್ದುಮುಗ್ರನೆಂಬರ್ ತಾಂ ಬೀ
ೞ್ವಂ ಗಡ ಲೋಗರನುದ್ಧರಿ
ಪಂ ಗಡ ಕೆಡೆಬೀೞ್ವರೆಂಬರೆಂಬಂತಿರ್ಕುಂ || ೧೨೩ ||

ಕೋಪಪ್ರಸಾದಮೆಂಬಿವೆ
ಶಾಪಾನುಗ್ರಹಸಮರ್ಥಮಾಗಲೆ ವೇೞ್ಕುಂ
ಕೋಪ ಪ್ರಸಾದವಿಲ್ಲದ
ಕಾಪುರುಷಂ ದೇವನಲ್ಲನೆಂಬರ್ ಮೂಢರ್ || ೧೨೪ ||

ಗಿರಿಶಂ ತನ್ನಂ ಪೂಜಿಪ
ಗೊರವರ್ಗೊಳ್ಳಿತ್ತು ಮಾೞ್ಪುದಕ್ಕೆಮ ಮುಳಿದಾ
ಗೊರವರ್ ಶಾಪಿಸೆ ದುಃಖದೆ
ಪೊರಳುತ್ತಿರ್ದಂ ಗಡಕ್ಕಟಾ ದುರಿತಹರಂ || ೧೨೫ ||

ಕಲುಷದೆ ಶಾಪಿಸೆ ತಾಂ ಭಿ
ನ್ನಲಿಂಗಿಯಾಗಿರ್ದನೀಶನೆಂಬರ್ ಮತ್ತಂ
ತೆಲೆ ಬೆನಕನುಂ ಕುಮಾರನು
ಮಲಿಂಗಿಗೆಂತಾದರಘಟಮೋ ಶೈವಮತಂ || ೧೨೬ ||

ಉರಿದಪನೀಶನದೊರ್ವಂ
ಗೊರವನ ಶಾಪದಿನೆನುತ್ತೆ ವಸುಧಾರೆಯನಾ
ದರದಿಂ ಕಟ್ಟಿಸುವರ್ ಬಡ
ಗೊರವರ ಶಾಪದೊಳೆ ಬೇವನಾಪ್ತನುಮಲ್ಲಂ || ೧೨೭ ||