ಶ್ರೀ ವೃಷಭೇಶ್ವರನನಘಂ
ಭಾವೋದ್ಭವಮಥನನಖಿಳದೋಷಾಪಹರಂ
ಕೇವಳಬೋಧಂ ಸುರಪತಿ
ಸೇವಿತಪದನೀಗೆ ನಮಗೆ ಬೇಡಿದ ವರಮಂ || ||

ಮರುದೇವಿಗೆ ನಾಭಿನರೇ
ಶ್ವರಂಗೆ ಮಗನಾದ ಮನುಜನಿಂ ಪುಟ್ಟಿದುದೀ
ಧರೆಗೆ ಜಿನಧರ್ಮವೆನುತಿ
ರ್ಪರುಮಱಿಯದೆ ಜಗವನಾದಿಯಪ್ಪುದನಱಿಯರ್ || ||

ಅರಹಂತರ್ ಜಗದೊಳಗೊ
ರ್ವರಲ್ಲ ಯುಗಕೋಟಿಗಳೊಳನಾದಿಯೊಳೆಂದುಂ
ಪರಮಜಿನಕೋಟಿ ಕಾಲಾಂ
ತರದೊಳ್ ಸಲೆ ಪುಟ್ಟಿ ಮುಕ್ತಿಗೆಯ್ದುತ್ತಿರ್ಪರ್ || ||

ಅವರಿವರುವರೆನ್ನದೆ ಜಗ
ದವರೆಲ್ಲಂ ಕರ್ಮಮೆಂದು ಮಾತಿಂ ಮುನ್ನಂ
ತವತವಗೆ ಕರ್ಮಮೆಂದು ಮಾತಿಂ ಮುನ್ನಂ
ತವತವಗೆ ನುಡಿವರದಱಿಂ
ದವೆ ನಂಬುಗೆ ಕರ್ಮವಾದವಾರ್ಹತವಾದ್ಯಂ || ||

ಶನಿ ಕಾಣಲ್ ಪುಟ್ಟಿದವಂ
ಜಿನಭಕ್ತನೆಯಕ್ಕುಮೆಂಬರದಱಿಂದಾದ್ಯಂ
ಜಿನಧರ್ಮವೆಂಬ ನಂಬುಗೆ
ಶನಿ ಬಗೆವೊಡನಾದಿಕಾಲದವನಪ್ಪುದಱಿಂದಂ || ||

ಚಂ || ನಿರುಪಮಜಾತರೂಪವರಮುದ್ರೆ[ಯೆ] ಮುದ್ರೆ ಜಗಕ್ಕದಲ್ಲದೀ
ಶ್ವರವರಮುದ್ರೆಯೋ ಕಮಳಸಂಭವಮುದ್ರೆಯೊ ವಿಷ್ಣುಮುದ್ರೆಯೊ
ಸರಸಿಜಮಿತ್ರಮುದ್ರೆಯೊ ಜಗತ್ತ್ರಯಮುಂ ಜಿನರಾಜಮುದ್ರೆಯೆಂ
ಬರ ನುಡಿ ತಕ್ಕುದೀ ತೆಱದಿ ತೋರ್ಪುದು ಯುಕ್ತಿಯೊಳೊಂದಿ ಬಲ್ಲವರ್ || ||

ಜಿನನಾಥನಖಿಳಭುವನದ
ಜನಕೆಲ್ಲಂ ತಾನೆ ಜನಕನೆಂಬುದನೆಂದುಂ
ಜನವತ್ಸಳತ್ವಮಱಿಪದೆ
ಜನಶೈಶವಕುಚಿತಫಳದ ವನರೂಪತೆಯಿಂ || ||

ಚಂ || ಸರಸಿಜಸಂಭವಂ ಬಗೆದು ಭಾವಿಸಿ ಭಾವಿಸಿ ಚಿತ್ರಶಾಸ್ತ್ರಮಂ
ವಿರಚಿಸುವಂದು ತಾನೆ ಚತುರುತ್ತರಹಸ್ತ[ಮಿ]ತಾದಿವಿದ್ಧಮಂ
ಬರೆವುತವಾದಿವಿದ್ಧಮೆ ಜಿನೇಶ್ವರವಿದ್ಧಮಿದೆಂದು ಪೇೞ್ದುದಂ
ಪರಿಕಿಸಬೇಕೆ ಮೂಢಜನಮೂಳ್ವರೊ ನೂತನಮೆಂದು ಜೈನಮಂ || ||

ಪಲಕಾಲಂ ಭರತದರಾ
[ತಳ]ಮೆಲ್ಲಂ ಭೋಗಭೂಮಿಯಾಗಿದೆ ಸುಖಸಂ
ಕುಳಮಂ ಸುರತರುಗಳ್ ಕುಡೆ
ವಿಳಾಸದಿಂ ಭೋಗಭೂಮಿಜರ್ ಸುಖದಿನಿರಲ್ || ||

ಮನುವಂಶತಿಳಕನಾದಿಯ
ಜಿನೇಶ್ವರಂ ತಾನೆ ಭೋಗಭೂಮಿಯ ಕಡೆಯೊಳ್
ಮನುಜರ್ ಜೀವಿಪ ಮಾರ್ಗಮ
ನೆನಿತಾನುಂ ಮಾಡಲಾಯ್ತು ಕೃತಯುಗನಾಮಂ || ೧೦ ||

ಧರೆಯೊಳ್ ವರ್ಣಾಶ್ರಮಮಂ
ನರೇಂದ್ರವಂಶದ ವಿಕಲ್ಪಮಂ ಧಾರಿಣಿಯಂ
ಪರಗುವ ಬಿತ್ತುವ ಬಹುವಿಧ
ಪರಿಕರದಿಂದುಣ್ಬುಪಾಯಮಂ ವಿಭು ಪೇೞ್ದಂ || ೧೧ ||

ಕ್ಷಿತಿಪತಿ ವೃಷಭೇಶ್ವರನೂ
ರ್ಜಿತಯಶನಿಂಬಾಗಿ ಮಾಡಲಾದಿಯ ಜಿನನಾ
ಕೃತಯುಗಮಾದತ್ತಲ್ಲದೆ
ಕೃತಯುಗಮೆಂದಿಂತು ದೆಸೆಗದೇಂ ಪೆಸರಾಯ್ತೇ || ೧೨ ||

ಮುನ್ನಂ ತ್ರಿಲೋಕಗುರು ಸಿ
ದ್ಧನ್ನಮಯೆಂದೆಱಗಿ ಬೞಿಕೆ ಸರ್ವಾಕ್ಷರಮಂ
ತನ್ನಿಂದೀ ಜಗವಱಿಯೆ ಜ
ಗನ್ನುತನಾದಿಜಿನನೋಜೆಯಿಂ ವಿರಚಿಸಿದಂ || ೧೩ ||

ಅಕ್ಕರಮಂ ಬಲಗಯ್ಯೊಳ್
ಲೆಕ್ಕಮನೆಡಗಯ್ಯೊಳಭವನನುಲೋಮವಿಲೋ
ಮಕ್ಕೆ ನೆಲೆಯಾಗಿ ಮಾಡಿ ಜ
ಗಕ್ಕಱಿಪಿದನೋಜೆಯಿಂದಮಾದಿಬ್ರಹ್ಮಂ || ೧೪ ||

ಒಂದಾದಿಯಾದ ಲೆಕ್ಕಮ
ನಂದಡಗಯ್ಯಿಂದೆ ಲಿಪಿಗಳಂ ಬಲಗಯ್ಯೊಳ್
ಸಂದಾದಿಬ್ರಹ್ಮ ದಯೆ
ಯಿಂದೆ ಜಗಕ್ಕಱಿಪಿ ಪರಮಗುರು ಧರೆಗೆಸೆದಂ || ೧೫ ||

ಅರುಹರಶರೀರರಾಚಾ
ರ್ಯರುಪಾಧ್ಯಾಯರ್ ಮುನೀಶರೆಂಬೀ ನಾಮಾ
ಕ್ಷರದಲ್ಲಿ ಮೊದಲ ಪಂಚಾ
ಕ್ಷರಮಂ ತೆಗೆದೊಂದುಮಾಡಲಾಯ್ತಾ ಪ್ರಣವಂ || ೧೬ ||

ಆನುಪಮನಿಶ್ರೇಯಸಸಾ
ಧನಕಾರಣಮಪ್ಪ ಪಂಚಪದದಾದಿಯೆ ತಾ
ನೆನಲಂತುಟಿಂತುಟೆಂದಿಂ
ತೆನಲಳವಿಯೆ ಭುವನಸಾರಮಪ್ಪೋಂಕಾರಂ || ೧೭ ||

ಧರೆಯೊಳ್ ಸಿದ್ಧಂ ನಮ ಸಿ
ದ್ಧಿರಸ್ತುವುಂ ಶಾಂತಿರಸ್ತುವುಂ ಸುದ್ದಗೆಯಾ
ಗಿರೆಯುಂ ಜೈನಂ ಮೊದಲೆಂ
ಬರಲ್ತು ಲೋಕಕ್ಕೆ ಕಲ್ತುಮೆಯ್ದೆ ಕೃತಘ್ನರ್ || ೧೮ ||

ಜೋಯಿಸಮಂ ಶಕುನಂಗಳ
ನಾಯುರ್ವೇದಮನನೇಕವಿದ್ಯೆಗಳಂ ವಾಕ್
ಶ್ರೀಯುವತೀಶ್ವರನರುಹನ
ಮೇಯಜ್ಞಾನನಿಧಿ ಪೇೞ್ದನುೞಿದವರಳವೇ || ೧೯ ||

ಗಣಿತದೊಳೇಂ ಜೋಯಿಸ[ಮುಂ]
ಗಣಿತಮುಮಿವು ಮೊದಲೊಳಾರ್ಹತರ್ ಪೇ[ೞ್ದಿ]ರೆ ಧಾ
ರಿಣಿಯೊಳಗೆ ಬೆಳಗುತಿರ್ದುವು
ಗಣಿತಮುಮಂ ಜೈನರಲ್ಲಿ ಕಲ್ತರೆ ಬಲ್ಲರ್ || ೨೦ ||

|| ಕುಡೆ ತವುತರ್ಪುದಲ್ತು ಪಡೆದಂಗೆಡಱಿಲ್ಲ ದರಿದ್ರನಪ್ಪನುಂ
ಪಡೆಗುಮದರ್ಕೆ ಬೇಱೆ ಬೆಲೆ ಬೇಡ ನಿಜೇಚ್ಚೆಯಿನಪ್ಪುದಾಗಿಯುಂ
ಕಿಡದು ಕವರ್ತೆವೋಗದು ಕಳಲ್ಕಮಮಾಗದು ಟಕ್ಕವಿದ್ಯೆಯೊಳ್
ತೊಡರದು ಕೂಡೆ ಪುಂಜಿಸಿದ ವಾಙ್ಮ ಯರತ್ನಚಯಂ ಜಿನೇಶನಾ || ೨೧ ||

|| ಅಕ್ಕರವಿದ್ಯೆಯೊಳ್ ನೆಱೆಯೆ ಜೆಟ್ಟಿಗನೆಂಬನಿತಲ್ಲದಿರ್ದೊಡಂ
ಮಕ್ಕಳನೋದಿಸಲ್ ಬಗೆದು ಸುದ್ದುಗೆಗಲ್ತನುವೆಲ್ಲರಂತು ದುಃ
ಖಕ್ಕೊಳಗಪ್ಪನಲ್ಲನೆನಿಸಿರ್ದ ಜಗಜ್ಜನಕಾಮಧೇನುವ
ಪ್ಪಕ್ಕರಮಾದಿದೇವಕೃತವೆಂದೊಡೆ ಜೈನವ[ದಾ]ದಿಯಲ್ಲ[ದೇಂ] || ೨೨ ||

ಕ್ಷತ್ರಿಯನೆ ಧಾತ್ರಿಗೊಡೆಯಂ
ಕ್ಷತ್ರಿಯನಾರ್ಗೇನನಿತ್ತನದು ದೆಯ್ವಕೃತಂ
ಕ್ಷತ್ರಿಯನೆ ತೀರ್ಥಕರನಾ
ಕ್ಷತ್ರಿಯನದಱಿಂದೆ ಪಿರಿಯನೆಲ್ಲಂದದೊಳಂ || ೨೩ ||

ಪರದರುಮಾ ದ್ವಿಜರುಂ ಶೂ
ದ್ರರುಮುರ್ವಿಗೆ ನಾಥರಲ್ಲರದಱಿಂದಾ ಮೂ
ವರುಮಿತ್ತುದು ಸಲ್ಲದು ಭೂ
ಪರ ಮಾಟಮುಮಿತ್ತ ವೃತ್ತಿಯುಂ ನೆಱೆ ಸಲ್ಗುಂ || ೨೪ ||

ಆದಿಬ್ರಹ್ಮ ಸುತಂ ಲ
ಕ್ಷ್ಮೀದಯಿತಂ ಚರಮದೇಹಿ ಮನುಕುಳತಿಳಕಂ
ಮೇದಿನಿಪತಿ ಭರತೇಶ್ವರ
ನಾ ದೊರೆಯಂ ಮಾಡಿದದುವೆ ಶಾಸನಮಲ್ತೇ || ೨೫ ||

ಆವನಿಪತಿ ಭರತರಾಜಂ
ನವನಿಧಿಗಳ್ಗರುಹನಾಗಿ ನಿಧಿಗಳ್ಗೆಂತುಂ
ತವಿಲಿಲ್ಲದುದಂ ಕಂಡು
ತ್ಸವದಿಂ ಜಿನನಿಳಯನಿಚಯಮಂ ಮಾಡಿಸಿದಂ || ೨೬ ||

ಅಂತುಂ ತವಿಲಿಲ್ಲದೊಡಿ
ನ್ನಿಂತಿದನಾಂ ತವಿಪೆನಿತ್ತೊಡಂ ಮುನಿಪರ್ ತಾ
ಮೆಂತುಮಿದನೊಲ್ಲ[ರು]ೞಿದವ
ರ್ಗಿಂತಾಂ ತವಿ[ಸಿದ]ಪೆನೆಂದು ಬಗೆದಂ ಮನದೊಳ್ || ೨೭ ||

ತ್ರಿಜಗದ್ಗುರುತನಯಂ ಮೂ
ಱು ಜಾತಿಯೊಳ್ ಗುಣಿಗಳಪ್ಪರಂ ಬ್ರತವಿತ್ತುಂ
ದ್ವಿಜರಾಗಿ ಮಾಡಲಂದಿಂ
ದ್ವಿಜರಾದರ್ ಬ್ರತಕೆ ಗುರುಗೆ ಪುಟ್ಟಿದ ಕತದಿಂ || ೨೮ ||

ನಿಜದಿಂ ತಾಯ್ತಂದೆಗಮೊ
ರ್ಮ ಜನಿಯಿಸಿರ್ದುತ್ತಮಬ್ರತಂಗುಡೆ ಗುರುಗೊ
ರ್ಮೆ ಜನಿಯಿಸಿದ ಕಾರಣದಿಂ
ದ್ವಿಜರಾದರ್ ದೆಸೆಗೇಂ ದ್ವಿಜನ್ಮರೆ ಪಾರ್ವರ್ || ೨೯ ||

ಭೂವಿಭು ರತ್ನತ್ರಯನಾ
ಮಾವಸಥಂ ಮಾಡಿ ಮೂಱೆ ನೂಲ್ಗಳ ಗುಣದಿಂ
ಮೂವಡಿ ಮಾಡಿದ ತತ್ಸೂ
ತ್ರಾವಳಿಯಂ ಕೊರಲೊಳಿಕ್ಕಿ ಕೊಟ್ಟಂ ಬ್ರತಮಂ || ೩೦ ||

ಯಜ್ಞೋಪವೀತಮಂ ಸ
ರ್ವಜ್ಞನನರ್ಚಿಸುವ ಪದದೊಳಿಕ್ಕುವ ಕತದಿಂ
ಯಜ್ಞೋಪವೀತಮೆಂಬೀ
ಸಂಜ್ಞೆಯದರ್ಕಾಯ್ತು ದೆಸೆಗದೇಂ ಪೆಸರಾಯ್ತೇ || ೩೧ ||

ಬ್ರತದಿಂ ಕೆಟ್ಟೊಡೆ ಪಾರ್ವರ
ಸುತನಿದಱಿಂ ಪಾರ್ವನಲ್ಲನಂತದಱಿಂದಂ
ವ್ರತಮೆ ವಿಶೇಷಂ ಮನುಜಂ
ವ್ರತಬಂಧನದಿಂದೆ ಪೂಜ್ಯನಲ್ಲದನಲ್ಲಂ || ೩೨ ||

ತಪಮಂ ಕೆಯ್ಕೊಳಲೊಡನೆಂ
ತು ಪಾರ್ವರುಂ ಭೂಪ ವೈಶ್ಯ ಶೂದ್ರರುಮೆಲ್ಲಂ
ತಪಸಿಗಳಪ್ಪವೊಲಾರ್ಹತ
ರೆ ಪಾರ್ವರೆನೆ ಸಂದರಾವ ಜಾತಿಯೊಳೊಗೆದುಂ || ೩೩ ||

ಸುರಲೋಕದಲ್ಲಿ ದೇವರ್
ಸುರರೀ ಧರೆಗಿವರೆ ದೇವರದಱಿಂದೆ ಧರಾ
ಮರರೆಂದು ಪೆಸರನಿಟ್ಟಂ
ಭರತೇಶ್ವರಚಕ್ರವರ್ತಿ ಸುವ್ರತಯುತರಂ || ೩೪ ||

ಭರತೇಶನಾದಿಚಕ್ರೇ
ಶ್ವರನಾದರದಿಂದೆ ಮಾನ್ಯರಿವರೆಂದು ಧರಾ
ಮರರಂ ಸದ್ರತ್ನತ್ರಯ
ನಿರತರನೋಜೆಯೊಳೆ ಮಾಡಿ ಭಾವಿಸಿ ದಯೆಯಿಂ || ೩೫ ||

ಆರಂಭಂ ರತ್ನತ್ರಿತ
ಯಾರಾಧಕರ್ಗೀ ದ್ವಿಜನ್ಮತತಿಗಾಗದು ಲೋ
ಕಾರಾಧ್ಯರೆಂದು ಭರತಂ
ಕಾರುಣ್ಯದೆ ದಾನಯೋಗ್ಯರಾಗಿರೆ ಕೊಟ್ಟಂ || ೩೬ ||

ಅಂದಿಂ ತೊಟ್ಟಾರಂಭಮ
ನೆಂದುಂ ತಾವೊಲ್ಲ[ರೊ]ಳ್ಪಿನಿಂ ನಡೆವೆಡೆಯೊಳ್
ಮುಂದಱಿಯದೆ ರತ್ನತ್ರಯ
ದಿಂದುೞಿದು ಯಥೇಷ್ಟರಾದ ಕಾರಣದಿಂದಂ || ೩೭ ||

ಸಲ್ಲದು ವಿಪ್ರಂಗಿಂತಿದು
ಪೊಲ್ಲದೆನುತ್ತಾಡಲಱಿಯದಂಗಣವೊಳ್ಳಿ
ತ್ತಲ್ಲೆಂಬವೋಲ್ ವ್ರತಂಗ
ಳ್ಗಲ್ಲದವರ್ ಜೈನಧರ್ಮಮಂ ಕೈಕೊಳ್ಳರ್ || ೩೮ ||

ಕ್ಷಿತಿಪತಿ ಗುಣಿಗಳನೆಲ್ಲಂ
ವ್ರತಬಂಧನಮಾಗೆ ಮಾಡಲಂದಿಂ ತೊಟ್ಟಾ
ವ್ರತದೊಂದು ರೂಢಿಯಿಂದಂ
ವ್ರತಬಂಧನಮೆಂದು ಮಾೞ್ಪರಿನ್ನುಂ ಪಾರ್ವರ್ || ೩೯ ||

ಉತ್ತಮಕುಲಮಂ ಪಡೆದ
ತ್ಯುತ್ತಮ ಜಿನಮಾರ್ಗದಿಂದೆ ನಡೆವಾತಂ ತಾ
ನುತ್ತಮರೊಳಗತ್ಯುತ್ತಮ
ನತ್ತ[ಳಗಂ] ಪಡೆಗುಮುತ್ತರೋತ್ತರಸುಖಮಂ || ೪೦ ||

ಪೊಲೆಯಂ ಶ್ರಾವಕನಾದೊಡೆ
ಪಲರೊಳವಂ ಮಾನ್ಯನಪ್ರೊನೆಂದೊಡೆ ಮತ್ತಿಂ
ಕುಲಜಂ ಗಡ ಜೈನಂ ಗಡ
ಬೆಲೆಯುಂಟೆ ಪೊನ್ಗೆ ಕಂಪು ದೊರೆಕೊಂಡ ತೆಱಂ || ೪೧ ||

ಶಾ || ಶ್ರೇಯಾಂಸಂ ಗುರುಭಕ್ತಿಯಿಂ ನಿಱೆಸೆ ತನ್ನಂ ನಿಂದು ಸಂದಕ್ಷಯ
ಶ್ರೀಯಕ್ಕೆಂದು ತೃತೀಯೆಯಲ್ಲಿ ಪರಸಲ್ ಸಂದಾದಿದೇವಂ ಜಗ
ಜ್ವ್ಯಾಯಂ ತದ್ದಿನಮೀಗಳಕ್ಷಯತೃತೀಯಶ್ರೀಯನಾಳ್ದಿರ್ದುದಂ
ತಾ ಯೋಗೀಂದ್ರನಿನಲ್ಲದಂದನಿತು ಪೆಂಪೆಂತಾ ದಿನಕ್ಕಾದುದೋ || ೪೨ ||

ಎಸೆದಿರೆ ನಂದೀಶ್ವರಮಂ
ಬಸಂತದೊಳ್ ಮಾಡಿ ಬೞಿಕ ಪೌರ್ಣಮಿಯೊಳ್ ದೇ
ವಸಮಾಜಮೋಕುಳಿಯನಾ
ಡೆ ಸಿಂಪಿಣಿಯದೆಂದು ಮಾಡುವರ್ ತದ್ದಿನದೊಳ್ || ೪೩ ||

|| ಖ್ಯಾತಿಗೆ ಕಾರ್ತಿಕ ಚತುರ್ದಶಿಯಂದು ನಿಶಾವಸಾನದೊಳ್
ಸ್ವಾತಿಯೊಳೊಪ್ಪೆ ವೀರಜಿನನೊಲ್ದಮೃತಾಂಗನೆಗೀಶನಾಗೆ ಸಂ
ಜಾತಮನೋಮುದರ್ ದಿವಿಜರುತ್ಸವಮಂ ನೆಱೆ ಮಾಡೆ ತದ್ದಿನಂ
ಭೂತಳದೊಳ್ ಮಹೋತ್ಸವಸುಖಾಸ್ಪದಕಾರಣಮಾದುದೀಗಳುಂ || ೪೪ ||

ಬೆಳಗಪ್ಪಾಗಳ್ ಸೊಡರ್ಗುಡಿ
ಗಳನೆಲ್ಲಂ ಬೆಳಗಿ ಪೂಜೆಗೆಯ್ತರೆ ದೀಪಾ
ವಳಿಯೆಂಬುದಾದುದಾ ದಿನ
ದೊಳಗೀಗಳ್ ಪರ್ವಮಾದುದಾ ಜಿನನಿಂದಂ || ೪೫ ||

ದೇವೇಂದ್ರ[ನ]ಭವನಿರ್ವಾ
ಣಾವನಿಗರ್ಚಿಸಿದ ಧೂಪಭೂ[ತಿ]ಯ ಬೊಟ್ಟಂ
ದೇವಾವಳಿ [ಪೆ]ಸರಿಡೆ ಭ
ವ್ಯಾವಳಿಯುಂ ತಿಳಕಮಿಟ್ಟೊಡೆಲ್ಲರುಮಿಟ್ಟರ್ || ೪೬ ||

ಧರೆಯೊಳ್ ಮುಟ್ಟದೆ ನೆಗೆದಂ
ತರಿಕ್ಷದೊಳ್ ನೆಲಸಿ ನಿಂದ ಮೈಳಾಪಜಿನೇ
ಶ್ವರತೀರ್ಥದತಿಶಯಮನಾ
ಧರಣೇಂದ್ರಂ ಪೊಗೞಲಱಿಯನುೞಿದವರಳವೇ || ೪೭ ||

ಚಂ || ಪಡುವಣವಾರ್ಧಿಯಲ್ಲಿ ಧನುಪಂಚಶತೋನ್ನತಜೈನಬಿಂಬವಿ
ರ್ದೆಡೆಯ ಜಳಂ ಸುಧಾಸಮಯೆ ಯೋಜನವಿಸ್ತೃತಮಲ್ಲಿ ಭಾವಿಸಲ್
ಜಳಚರಮಿಲ್ಲ ತತ್ಪ್ರತಿಮೆ ಪಚ್ಚೆಯ ಬಣ್ಣದಿನುರ್ವಿಗಾವಗಂ
ತುಡುಗೆವೊಲಿರ್ಪುದೆಂದೊಡೆಲೆ ಬಣ್ಣಿಸಲಾರ್ಪರೆ ತೀರ್ಥದಂದಮಂ || ೪೮ ||

ಜಳಯಾತ್ರೆಗೆ ಪೋಪವರ್ಗಳ್
ಜಳವಿಲ್ಲದೊಡಾ ಜಿನೇಶ್ವರಂ ನಿಂದೆಡೆಯೊಳ್
ಜಳಮಂ ಮೊಗೆದೊಯ್ಯರ್ ತ
ಜ್ಜಳಮಬ್ದಿಯ ನಡುವೆ ಸೀಯನಾದುದಱಿಂದು || ೪೯ ||

|| ಸ್ರ || ಇಳೆಯೊಳ್ ಸಂದಿರ್ದ ಮು[ೞ್ಗುಂ]ದದ ಜಿನನ ಪದಾಂಗುಷ್ಠಮನ್ ನೇಣ್ಕೊಳಿಂಬಾ
ಗಳೆದಂತಾ ಸೂತ್ರದಿಂದಂ ಕರಿತುರಗನಗೇಂದ್ರೋತ್ತಮಾಂಗಂಗಳಂ ಮ
ತ್ತಳೆವಾಗಳ್ ಸಾಲ್ಗುಮಲ್ಲಲ್ಲಿಗೆ ನಿರುತಮೆನಲ್ಕಿನ್ನವಾಶ್ವರ್ಯಮೆಂತಾ
ನೊಳವೇ ಮೇಱೆಂದು ತೀರ್ಥಾತಿಶಯಮನನಿಶಂ ಬಣ್ಣಿಸಲ್ ಬಲ್ಲನಾದಂ || ೫೦ ||

ಒಂದಿರುಳೊಳ್ ಜಾನುವರಂ
ತಂದಿಕ್ಕಿದ ಪುಷ್ಪಮಾಲೆ ನಿಮಿರ್ದುದು ಪಾದ
ಕ್ಕೆಂದೊಡೆ ಭುವನಕ್ಕಚ್ಚರಿ
ಬಂದಳಿಕೆಯ ಶಾಂತಿನಾಥತೀರ್ಥಾತಿಶಯಂ || ೫೧ ||

ಭರತಂ ಮಾಡಿದ ಕೊಲ್ಲಾ
ಪುರದ ಜಿನೇಶ್ವರನ ಲೆಪ್ಪಮಂದಾ ಕಾಲಂ
ಕರುವಿಟ್ಟಂದದೆ ಧರೆಗ
ಚ್ಚರಿಯಾಗಲ್ ಕೋಟಿ ವರ್ಷಮಿರ್ದಪುದಿನ್ನುಂ || ೫೧* ||

ಧರೆ ಪೊಗೞೆ ನೆಗೞ್ದ ಕೊಲ್ಲಾ
ಪುರದ ಜಿನೇಶ್ವರನ ಲೆಪ್ಪಮಂ ಚೋಳಂ ಬಂ
ದಿರದೊಡೆದೊಡೆ ಕುಲನಗದವೊ
ಲಿರೆ ಭರದಿಂ ಪೂಜೆಗೆಯ್ದು ಪೋಪುದು ಪುಸಿಯೇ || ೫೧* ||

ಶ್ರೀಮತ್ಸಮಂತಭದ್ರ
ಸ್ವಾಮಿಯ ವಾಗ್ವಜ್ರಪಾತದಿಂ ವಾರಣಸೀ
ಗ್ರಾಮದ ಮಹೇಶಲಿಂಗವಿ
ಳಾಮಂಡಳವಱಿಯಲೊಡೆಯೆ ಜಿನನೊಳಗಿರ್ದಂ || ೫೨ ||

ಹಿಮಶೈಳಾಗ್ರದಿನಿೞಿತಂ
ದಮರಾಪಗೆ ಕೆೞಗೆ ನಿಂದ ಜಿನಬಿಂಬದ ಮೇ
ಲಮರ್ದಿರೆ ಪರಿತಂದುಱಿಂ
ದಮೆ ಪಾವನಮಾಯ್ತು ಬಱಿದೆ ಪಾವನಮಾಯ್ತೇ || ೫೩ ||

ಉರಗೇಂದ್ರನ ಲೋಕದಳಂ
ಧರೆಯೊಳಮಾ ಜ್ಯೋತಿರಿಂದ್ರಲೋಕದೊಳಂ ಬಿ
ತ್ತರಿಸುವುದಲ್ಲವೆ ಪಲರ್ಗ
ಚ್ಚರಿಯೆನಿಸಿದಕೃತ್ರಿಮಂ ಜಿನೇಂದ್ರಾವಸಥಂ || ೫೪ ||

ಈ ವಿಧದತಿಶಯಮುಱಿದರ
ದೇವರೊಳೆತ್ತಾನುಮುಳ್ಳೊಡನಿತಱೊಳೆ ಜಗ
ಕ್ಕಾವಲ್ಲದೆ ದೇವಂ ಪೆಱ
ನಾವಂ ಮತ್ತೆಂದು ಬೀಗಿ ಬೆಸೆಯದೆ ಮಾಣರ್ || ೫೫ ||

ಎಣಿಸುವೊಡೆ ತೀರ್ಥಸಂಚಯ
ವೆಣಿಕೆಗೆ ಮಿಗಿಲವಱೊಳೀಗಳೊಂದೆರಡಂ ಕಂ
ಡೆಣಿಸಿದೆನಂತಾ ತೀರ್ಥಮ
ನೆಣಿಸಲ್ ಧರಣೇಂದ್ರನಾದೊಡಂ ನೆಱೆದಪನೇ || ೫೬ ||

|| ರಾಮನರೇಂದ್ರನುಂ ನೆಗೞ್ದ ಪಾಂಡುನರೇಂದ್ರನ ಪುತ್ರರಯ್ವರುಂ
ಪ್ರೇಮದಿನಾರ್ಹತಬ್ರತಮನೊಪ್ಪಿರೆ ಪಾಳಿಸಿ ಮುಕ್ತಿಕಾಮಿನೀ
ಕಾಮರೆನಲ್ಕೆ ಸಂದರವರಂ ಸಲೆ ಮೋಹದೆ ಶೈವರೆಂಬರೀ
ಭೂಮಿಯ ಮೂಢಜೀವಿಗಳವಂದಿರನಾರ್ಪಳೆ ಮಾರಿ ಬಾರಿಸಲ್ || ೫೭ ||

ಚಂ || ನರಪತಿ [ಶಾತವಾಹನ] ಮಾಡಿದ ಕೋಟೆಗಳೆಲ್ಲ ನಾಡೊಳಂ
ಪಿರಿದೊಳವಂತೆ ರಾಮವೆಸರೊರ್ವ ನೃಪಂ ಧರೆಯಲ್ಲಿ ಮಾಡಿದೀ
ಶ್ವರನಿಳಯಂಗಳಂ ಬಿಡದೆ ಮಾಡಿಸಲಾ ಯುಗದಲ್ಲಿ ರಾಮನೀ
ಶ್ವರಭವನಂಗಳಂ ಧರೆಯೊಳೊಪ್ಪಿರೆ ಮಾಡಿದನೆಂಬರೇಳಿದರ್ || ೫೮ ||

ಯುಗದ ಕಡೆವರೆಗಮಿಪ್ಪವೆ
ಜಗದೊಳಗಿಟ್ಟಗೆಯ ಕಿಱಿಯ ದೇಗುಲ[ಮಿಂ]ತಿ
ಮ್ಮೆಗೆ ಪುಸಿವರೊಳರೆ ಮುನ್ನಿನ
ಯುಗದಾ ದೇಗುಲಮಿನಿತ್ತು ಕಿಱಿಯವೆ ಪೇೞಿಂ || ೫೯ ||

ಶ್ರೀಪರ್ವತಮೆಂಬುದು ದುರಿ
ತಾಪಹರಂ ಮಲ್ಲಿನಾಥಜಿನಿರ್ದೆಡೆ ಮ
ತ್ತೇ ಪಡೆಮಾತೊ ಜಿನೇಶ್ವರ
ರೂಪುಗಳಾ ನಗದೊಳೆತ್ತಲುಂ ಬಾಹುಲ್ಯಂ || ೬೦ ||

|| ನುತ ವೈಶಾಖದ [ಪೌ]ರ್ಣಮಾಸೆಯೊ[ಳಿ]ನಂ ತದ್ದೇಶವೀಥೀಸುಸಂ
ಗತನಾಗಲ್ಕೆ ತದರ್ಕರಶ್ಮಿನಿವಹಂ ತಳ್ಪೊಯ್ವುದುಂ ದೇವನಿ
ರ್ಮಿತ ಶೈಳಾಗ್ರಮಣಿಸ್ಫುರಜ್ಜಿನಗೃಹಪ್ರದ್ಯೋತಿ ರೋದೋಂತರ
ಸ್ಥಿತಮಾಗಲ್ಕದನೀಗ ತಾಮಸದೆ ಲಿಂಗಂ ಜ್ಯೋತಿಯೆಂಗುಂ ಜನಂ || ೬೧ ||

|| ಇಂತಿವನೞ್ತಿಯಿಂ ನಿಲಿಪೆವೆಂದು ಮುನೀಶ್ವರರೇೞು ಲಿಂಗಮಂ
ತಂದಿರೆ ಪೊೞ್ತು ಪೊೞ್ತುಗಳೆವುತ್ತಿರೆ ಲಗ್ನಮೆ ತಪ್ಪಿದಪ್ಪುದೆಂ
ದಂದವನೊಂದುಮಾಡಿ ನಿಲಿಸಲ್ ಬಗೆದೊರ್ಮೆಯೆ ಭೀಮ[ಲಿಂ]ಗಮಾ
ಯ್ತೆಂದೆಱಗುತ್ತುಮಿರ್ಪರಘಟಂ ದ[ಲಿ]ದೆನ್ನದೆ ಮೂಢಜೀವಿಗಳ್ || ೬೨ ||

ಸಂದರ್ಕಕಾಂತಲಿಂಗಮ
ನೊಂದಾಗಲಸ್ತ್ಯನೊತ್ತೆ ತಮ್ಮೊಳಗೇೞಿಂ
ತೊಂದಾದುವವೆಂದೂಳ್ವ[ರ
ವೊಂ]ದಪ್ಪಂತಿ[ರೆಲೆ]ಮಣ್ಣ ಮುದ್ದೆಯೊ ಪೇೞಿಂ || ೬೩ ||

ಭೀಮೇಶನೆಂದು [ದಾಕ್ಷಾ
ರಾಮ]ದವರ್ ನುಡಿವ ಶಂಭು ಮಾನಸ್ತಂ [ಭಂ]
ಭೂಮಿಕೆಯ ಕೆೞಗೆ ಕಾಣ್ಬರ್
ತಾಮುತ್ಸವದಿಂದಲದಱ ಮೊದಲೊಳ್ ಜಿನನಂ || ೬೪ ||

ಅಣುವನ ಮಣಿಕುಂಡಳಮುಂ
ಫಣಿವೈರಿಯ ಪಚ್ಚೆಸಾರಮುಂ ಸೀತೆಯ ಕಂ
ಕಣಮುಂ ಗಂಗೆಯ ನೊರೆಯುಂ
ಫಣಿಕಟಕನ ಕೆೞಗೆ ಬಯ್ಕೆಯಿರ್ದಪುವೆಂಬರ್ || ೬೫ ||

ಮಾನಸ್ತಂಭದ ಮೊದಲೊಳ್
ಜೈನಪ್ರತಿಕೃತಿಗಳಿರ್ದುವದು ಕಾರಣದಿಂ
ತಾ ನೆಲೆಯಂ ಮುಚ್ಚಿರ್ದ
ಜ್ಞಾನಿಗಳದಱೊಳಗೆ ರತ್ನಮಿರ್ದಪುವೆಂಬರ್ || ೬೬ ||

ಚಂ || ಪುಲಿಗೆಱೆಯಲ್ಲಿ ಮುಂ ವೃಷಭವಾಹನಯಕ್ಷನನಾದಿಕಾಲದೊಳ್
ನೆಲದೊಳೆ ಪೂೞ್ದುದಂ ಬೆರಟಿ ಕಂಡದನೊರ್ಮೆಯೆ ನಂದಿವಾಹನಂ
ನೆಲದೊಳಗಿರ್ದು ರುದ್ರನೊಗೆತಂದನಿದಲ್ತೆ ಸ್ವಯಂಭುವೆಂದು ಗಾ
ವಿಲರದನೀಗಳರ್ಚಿಸುವರೇನದು ತಮ್ಮ ಸ್ವಯಂಭುಲಿಂಗಮೇ || ೬೭ ||

ಪರಿಯಳಿಯ ಜಿನನ ನೆತ್ತಿಯೊ
ಳಿರದೊಗೆದುದು ಲಿಂಗವೆಂಬರಂತ್ತಲು ಜಿನೇ
ಶ್ವರನಿಪ್ಪನೊಳಗೆ ಪೊಱಗೆಡೆ
ಯ ರಂಗದೊಳ್ ಲಿಂಗವೆಡಚತನದಿಂದಿರ್ಕುಂ || ೬೮ ||

|| ಸ್ರ || ಜಗತೀವಿಖ್ಯಾತೆ ಕೊಲ್ಲಾಪುರವರದ ಮಹಾಲಕ್ಷ್ಮಿ ಚಂದ್ರಪ್ರಭಸ್ವಾ
ಮಿಗ[ಳಿಂದಂ] ಭ[ಕ್ತೆ]ಯಿನ್ನುಂ ಜಿನಪದಯುಗಳಕ್ಕೆತ್ತಿ ನೈವೇದ್ಯಮಂ ಜಾ
ತ್ರೆಗೆ ಬಂದರ್ ಮತ್ತೆ ತೋರ್ಪರ್ ಸರುಗನದಱಿನಾ ದೇವಿ ತಾಂ ಜೈನೆ ಹಿಂಸಾ
ದಿಗಳಂ ಕೈಕೊಳ್ಳಳಿನ್ನುಂ ಕೃತಕದವಳುಮಾ ಕಾಳಿ ಮಾಂಸಾಶಿಯಲ್ತೇ || ೬೯ ||

ಭಾವಿಸಿ ಜಿನಮತಮಂ ಸ
ಭಾವಿತಮತಿ ಕೇಳ್ದು ಬಳರಿತನಮಂ ಬಿಟ್ಟಾ
ದೇವಿ ನೆಗೞ್ದಣ್ಣಿಗೆಱಿಯೊಳ್
ಶ್ರಾವಕಿಯೆನೆ ರೂಢಿವೆತ್ತು ದೇವತೆಯಾದಳ್ || ೭೦ ||

|| ವೀರದೊಳುರ್ಕಿ ಮಚ್ಚರಿಸಿ ಕೋಪದೆ ಜೈನನೆ ಕಾದಿ ಸತ್ತು ಮೈ
ಲಾರನೆನಲ್ಕೆ ರೂಢಿವಡೆದಂ ಬ್ರತಮಂ ಬಿಡದೀಗಳುಂ ಕರಂ
ಘೋರವೆನಲ್ಕೆ ಕೊಲ್ಪ ಕೊಲೆಗಾದಮೆ ತಾನುಪವಾಸಮಿರ್ಪುದಂ
ಪಾರಣೆಮಾೞ್ಪುದಂ ತಿಳಿದು ನಂಬುವುದಾತನ ಜೈನವೃತ್ತಿಯಂ || ೭೧ ||

ಅಡಿಗಡಿಗಿರದೊಳ್ಳಿತ್ತಂ
ನುಡಿಯೆನುತೆ ಪವಿತ್ರಮಪ್ಪ ಸರುಗೆತ್ತುವರೆಂ
ದೊಡೆ ಮೈಲಾರಂ ಕೊಲೆಗಳ
ನೊಡಂಬಡಂ ನಾಡ ಪಾಪಕರ್ಮರೆ ಕೊಲ್ವರ್ || ೭೨ ||

ಚಂ || ಪರಶುಫಳಾಕ್ಷಸೂತ್ರವರದೋಚಿತಚೆಹ್ನಚರ್ತುರ್ಭುಜಂ ಮಹಾ
ಕರಿವದನಂ ಜಿನೇಂದ್ರವರಶಾಸನರಕ್ಷಣದಕ್ಷನುತ್ತಮಂ
ಕರಿಮುಖಯಕ್ಷನಲ್ಲನೆ ವಿನಾಯಕನೆಂಬವನೀಗಳಾತನಂ
ಹರಸುತನೆಂದು ಮೂಢಜನಮರ್ಚಿಸುಗುಂ ವಿಪರೀತವೃತ್ತಿಯಿಂ || ೭೩ ||

ಭೂವಳಯದೊಳಗೆ ರೂಢಿಯ
ದೇವಿಯರಂ ಬಳರಿಯೆಂದು ಕೊಂಡಾಡಿದೊಡಂ
ಶ್ರಾವಕರಾದರ್ ಶಾಸನ
ದೇವಿಯರೆಂದಱಿವುದಾ ಪೆಸರ್ಗೊಂಡವರಂ || ೭೪ ||

ಅವಿವೆನ್ನದೆ ರೂಢಿಯ ತಾ
ಣವೆಲ್ಲಮಂ ತೀರ್ಥಕರರ ಕೇವಳಿಗಳ ಮು
ನ್ನ ವಿಹಾರಿಸಿದೆಡೆಗಳಿವೆ
ಲ್ಲವೆಂದು ನಂಬುವುದು ಬೇಱೆ ಪೆಸರಿಟ್ಟೊಡಮೇಂ || ೭೫ ||

ಇಂದ್ರಮುನಿ ಚಂದ್ರಮುನಿ ಜೈ
ನೇಂದ್ರಮುನಿ ಪ್ರ[ಭೃ]ತಿಯೆನೆ ವಿಶ್ರುತಮಾ
ಯ್ತಿಂದ್ರಂ ಚಂದ್ರಂ ಶ್ರೀ ಜೈ
ನೇಂದ್ರಮೆನಲ್ ಜಗದೊಳೆಲ್ಲಿಯುಂ ವ್ಯಾಕರಣಂ || ೭೬ ||

ಸಕಳಜ್ಞಂಗಮಿತಗುಣಂ
ಗೆ ಕಿಲ್ಬಿಷಂಗೆಱಗಿ ಪೇೞ್ದನಾ ಪಾಣಿನಿಯಂ
ಸುಕ[ರ]ವಿದನಮಿತಗುಣನೆಂ
ಬ ಕೀರ್ತಿ ಜಿನನಲ್ಲದನ್ಯರೊಳ್ ಸಂದಪುದೇ || ೭೭ ||

ಸೂತ್ರಮನೆ ಮುನ್ನೆ ಪಾಣಿನಿ
ಸೂತ್ರಿಸೆ ಜೈನೇಂದ್ರಬುದ್ಧಿ ಮಾಡಿದನಂತಾ
ಸೂತ್ರಕ್ಕೆ ವೃತ್ತಿಯಂ ಬುಧ
ಮಿತ್ರಂ ಕೊಟ್ಟಂ ದ್ವಿಜನ್ಮರೆಲ್ಲಂ ಬೇಡರ್ || ೭೮ ||

ಸರ್ವಂಗೆ ಸರ್ವದರ್ಶಿಗೆ
ಸರ್ವಜ್ಞಂಗೆಱಗಿ ಸರ್ವವರ್ಮಂ ಪೇೞ್ದಂ
ಸರ್ವಮನಱಿವಂ ಕಾಣ್ಬನು
ಮೊರ್ವನುಮಿಲ್ಲರುಹನಱಿವನರುಹನೆ ಕಾಣ್ಬಂ || ೭೯ ||

ಕರಿ ದಿಕ್ಕರಿನಿಭವೆಣ್ಫಾ
ಸಿರಕ್ಕೆ ದಶಲಕ್ಷವಾಜಿಗಳ್ಗಧಿಪತಿಯಾ
ಗಿರೆ ಮಾಧವಂಗೆ ಮಾಡಿದ
ಗುರು ಜಗದೊಳ್ ಸಿಂಹಣಂದಿಮುನಿಪತಿಯಲ್ಲಾ || ೮೦ ||

ಧರಣೀಶಶಿಮಣಿಗ
ಚ್ಚರಿಯಾಗಿರೆ ಗಂಗವಾಡಿ ತೊಂಬತ್ತಱುಸಾ
ಸಿರದಧಿಪಂ ಮಾಧವನಾ
ಗಿರೆ ಮಾಡಿದರಲ್ತೆ ಸಿಂಹಣಂದ್ಯಾಚರ್ಯರ್ || ೮೧ ||

ಧರೆ ಪೊಗೞೆ ನೆಗೞೆ ಕಂಚಿಗೆ
ಕರುವಿಟ್ಟಂ[ತೆ]ಯ್ದೆ ಮಾಡಿದೆಡೆಗಳೊಳೊಂದೊಂ
ದರುಹದ್ದೇವಾಲಯವೆಸೆ
ದರೆ ಮಾಡಿಸಿ ಸಂದರಲ್ತೆ ಜೈನವ್ರತಿಗಳ್ || ೮೨ ||

ಒಂದಿರುಳೊಳೆ ಖಚರೇಂದ್ರಂ
ಬಂದೊಪ್ಪಿರೆ ಕೋ[ಟೆ] ಮಾಡಿ ಬೋದನಮಂ ತಾ
ನೊಂದೊಂದಟ್ಟಳೆಯೊಳ್ ಮ
ತ್ತೊಂದೊಂದು ಜಿನಾಲಯಂಗಳಂ ನೆಱೆ ಸಮೆದಂ || ೮೩ ||

ಏಂ ಗಳ ಜಿನಶಾಸನವಾ
ದ್ಯಂ ಗಡ ಪುಸಿಯೆಂದು ನುಡಿವ ದುಷ್ಟರ ದುರ್ವಾ
ಕ್ಯಂಗಳೊಳೇನಾದಿತ್ಯನ
ನಂಗಯ್ಯೊಳ್ ಮುಚ್ಚಲಾರ್ಗಮೇಂ ಬಂದಪುದೇ || ೮೪ ||

ಇಂತಿಲ್ಲದೆ ವಿಕಳಾತ್ಮರ
ನೆಂತುಂ ತಿಳಿಪಲ್ಕೆ ಬಾರದೆಂಬುದಱಿಂದಾ
ನಿಂತಿವನೆಲ್ಲಂ ತಿಳಿಪದೆ
ನುಂ[ತೇಂ] ಜಿನಧರ್ಮವಲ್ಲದುಂಟೇ ಧರ್ಮಂ || ೮೫ ||

ಭರತದೊಳೈರಾವತದೊಳ್
ಪರಿವಿಡಿಯಿಂದೊಂದೆ ಕಾಲದೊಳ್ ಮಿಥ್ಯಾತ್ವಂ
ದೊರೆಕೊಳೆ ಕುಲಿಂಗಿಜನಕು
ಬ್ಬರವಕ್ಕುಂ ಜೈನಮೞಿಯೆ ವರ್ತಿಸುತಿರೆಯುಂ || ೮೬ ||

|| ಪರಮಶ್ರೀರಮಣೀಪ್ರಿಯಂ ನರಸುರೇಂದ್ರಾಹೀಂದ್ರದೈತ್ಯೇಂದ್ರಖೇ
ಚರರಾಜೇಂದ್ರಕಿರೀಟಕೋಟಿವಿಲುಠದ್ರತ್ನಾವಳೀರಶ್ಮಿ ಕೇ
ಸರರಾಜಿತಪಾದಪದ್ಮಯುಗಳಂ ಲೋಕೈಕನಾಥಂ ಜಿನೇ
ಶ್ವರನೊಲ್ದೀಗೆ ವಿನೇಯಸಂತತಿಗೆ ಮುಕ್ತಿಶ್ರೀಸುಖಾವಾಪ್ತಿಯಂ || ೮೭ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮ ರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಜರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ
ಸಮಯಪರೀಕ್ಷೆಯೊಳನಾದ್ಯನಿಧನಜಿನಧರ್ಮವರ್ಣನಂ ದ್ವಿತೀಯಾಧಿಕಾರಂ