ಲೋಗರ್ ಮಾಡಿದ ಪಾಪಮ
ನಾಗಡೆ ಗಡ ಕಳೆವ ರುದ್ರನುಂ ಬ್ರಹ್ಮಘ್ನಾ
ಪೋಗೆಂದು ಸುರರುಮೆಂದೊಡೆ
ಪೋಗಿ ತೊೞಲ್ದಂ ಗಡಕ್ಕಟಾ ದುರಿತಹರಂ || ೧೨೮ ||

ಲಿಂಗಂ ತನಗಿಲ್ಲದನ
ರ್ಧಾಂಗದೊಳಗಸುತೆಯನೇಕೆ ತಾಳ್ದಿದನಂತಾ
ಗಂಗೆಯುಮಂ ಪೊತ್ತಿರ್ದಪ
ನಂಗಜಹರನೆನಿಸಿಕೊಳ್ಳನಂತದು ವ್ಯರ್ಥಂ || ೧೨೯ ||

ಪುಸಿದಂ ಮಹೇಶ್ವರಂಗೂ
ರ್ವಸಿಯೊಳ್ ಮಱೆವಾೞ್ದನಾತ್ಮ ಜಾತೆಯೊಳಿರಲಾ
ಟಿಸಿದಂ ಶಾಪಂಬೆತ್ತಂ
ವಿಸರುಹಭವನಾಪ್ತನೆನಲೆ ವೇಡಱಿವಾತಂ || ೧೩೦ ||

ಮ್ಯಡನಿಂ ತನ್ನಯ ತಲೆಯಂ
ಕಡಿವಡೆದಂ ಮರೆಯ ರೂಪಿನಿಂ ತನುಜೆಗೆ ಸೋ
ಲ್ತೊಡವರ್ದಂ ನಾಣಿಲಿ ನಿ
ಗ್ಗಡಿ ನಿಜದಿನಪೂಜ್ಯನಾಪ್ತನೆನಲಾಗಱಿವಂ || ೧೩೧ ||

ಹರನ ವಿವಾಹೋತ್ಸವದೊಳ್
ಗಿರಿಜೆಯ ಮೈಸೋಂಕೆ ಹರುಷದಿಂದಂ ವೀರ್ಯ
ಕ್ಷರಣಂ ದೊರೆಕೊಳೆ ಸಿಗ್ಗಿಂ
ದೊರಸಿದನಾಪ್ತನೆನಲಾಗದಱಿವುಳ್ಳಾತಂ || ೧೩೨ ||

ಜಗಮಂ ಮಾೞ್ಪಂ ಗಡ ಪ
ದ್ಮ ಗರ್ಭನಂತನಿತು ಶಕ್ತಿಯುಳ್ಳಂ ತಾನೇ
ಕೆ ಗಡಂ ನಿಜಶಿರಮಂ ಕಿ
ತ್ತಗೆಯೆತ್ತಿದ ಮೃಡನನಿನಿಸು ಮಾಣಿಸಲಾಱಂ || ೧೩೩ ||

ಜಗಮಂ ಗಡ ಮಾಡಿದ ಪ
ದ್ಮ ಗರ್ಭನೊಂದರ್ಕೆ ಮುಟ್ಟುವಲ್ಲದೆ ಪೋದಂ
ಮಿಗೆ ಪಲರುಂ ದೇವರಾಗಿ ನಿಂದರದೆಂತೋ || ೧೩೪ ||

ಪರಮೇಷ್ಠಿ ಜಗಜ್ಜನಕಂ
ಗುರು ವಿಮಳವಚೋಭಿರಾಮವರಚತುರಾಸ್ಮಂ
ಪರಮ್ರಹ್ಮಂ ಮತ್ತಿನ
ದರವುರಿಗಂ ಬ್ರಹ್ಮನಲ್ಲ ಸಂಚಿತಕರ್ಮಂ || ೧೩೫ ||

ಮೀನಾದನೆ [ಸಡಿಯಾದಂ]
ಮಾನವಕೇಸರಿಯುಮಾಗಿ ಪಂದಿಯುಮಾದಂ
ದಾನವರಂ ಕೊಲಲೆನಿಪ
ಜ್ಞಾನಿಯನಾಪ್ತನೆನಲಾಗದಱಿವುಳ್ಳಾತಂ || ೧೩೬ ||

ಚಂ || ಅನಿಮಿಷ ಕೂರ್ಮ ಸೂಕರ ನೃಕೇಸರಿ ವಾಮನ ರಾಮ ರಾಮ [ನಾ]
ಮನೃಪ ಸಮಂತಭದ್ರಮುನಿ ಕಲ್ಕಿಗಳೆಂಬಿವು ಪತ್ತಿ ಸುತ್ತಿರಲ್
ವನರುಹನಾಭನಂ ತರದೆ ಕೇಸರಿಮೂರ್ತಿಯದೆಂದು ಕೂಡೆ ಭೂ
ಜನಮದನರ್ಚಿಕುಂ ಪರಮನೆಂಬಭಿಧಾನಮನಿಟ್ಟು ಮೋಹದಿಂ || ೧೩೭ ||

ಮುರರಿಪುಗೆ ಸೂೞ್‌ಸೂೞೊಳೆ
ಬರೆ ಕರದೊಳ್ ಶಂಖಚಕ್ರಮುದ್ಗರಪದ್ಮಂ
ಪರಿವಿಡಿಯಿಂ ಪೆಸರ್ಗಳ್ ಪ
ನ್ನೆರಡಾದುವು ಮೂರ್ತಿಭೇದಮಾ ವೈಷ್ಣವರೊಳ್ || ೧೩೮ ||

ಬರಿಸದ ಮಾಸಂಗಳ್ ಪ
ನ್ನೆರಡಱೊಳಂ ಕ್ರಮದೆ ವಿಷ್ಣುಗಕ್ಕುಂ ಗಡ ಪ
ನ್ನೆರಡು ಪೆಸರೇಕರೂಪಂ
ಹರಿನಾಮಕ್ಕಿಲ್ಲ ಬಗೆವೊಡಿಂತುಟೆ ನಿರುತಂ || ೧೩೯ ||

ಚಕ್ರಧರ[೦] ಪ್ರತಿಕೃತಿಗಳ
ಚಕ್ರಾಂಕಿತಮಪ್ಪ ಚಿಕ್ಕ ಕಲ್ಲೆಂಬರ್ ಭೂ
ಚಕ್ರದ ಮೂಢರ್ ಸತ್ಪಥ
ವಕ್ರರ್ ಮತ್ತೊಂದು ಗುಂಡುಮಂ ಹರಿಯೆಂಬರ್ || ೧೪೦ ||

ಪಿರಿದ[ಪ್ಪು]ದೊಂದು ನಿದ್ರೆಯ
ಭರದಿಂ ಶರನಿಧಿಯೊಳೊಂದಿ ಪಸೆಯೊಳ್
ಕೊರೆವುತ್ತೆ ನಾಲ್ಕು ತಿಂಗಳ್
ವರೆಗಂ ಪಟ್ಟಿರ್ಪನಾಪ್ತನೆನಲಾಗಱಿವಂ || ೧೪೧ ||

ತಾಂ ಕೊಲಲಾಱದೆಯುಂ ಮುಳಿ
ಸಿಂ ಕೌರವಬಲಮನಂದು ವೇಳೆತನಂಗೊಂ
ಡುಂ ಕೌಂತೇಯರಿನಾ ಬಲ
ಮಂ ಕೊಲಿಸಿದನಾಪ್ತನಪ್ಪನೆನಲಾಗಱಿವಂ || ೧೪೨ ||

ಬಸಿಱೊಳಗೆ ಬಯ್ತು ಹರಿ ರ
ಕ್ಷಿಸುವಂ ಗಡ ಜಗಮನಸುರರಲ್ಲಿರದೇನೊಂ
ದೆಸೆಯೊಳ್ ಪೋಗಿರ್ದರೆ ಪೇೞ್
ಮಸಗಿ ಕೊಲಲ್ ತಕ್ಕುದೇ ಶರಣ್ಬೊಕ್ಕವರಂ || ೧೪೩ ||

ಧರೆಗೊಡೆಯಂ ಚಕ್ರೇಶಂ
ತಿರಿವನೆ ಬಲಿಯಲ್ಲಿ ಬೇಡಿ ಮೂಱಡಿನೆಲನಂ
ಸಿರಿಯೊಡೆಯಂ ಕೀೞಾಳಾ
ಗಿರಲಱಿವನೆ ಪರಿಸುತುಂ ಕಿರೀಟಿಯ ರಥಮಂ || ೧೪೪ ||

ಜಾನಿಪೊಡೆ ಚತುರ್ಭುಜಮಂ
ಜಾನಿಪುದೋ ಮೇಣ್ ದಶಾವತಾರದ ರೂಪಂ
ಜಾನಿಪುದೋ ಯೋಗಯುತನುಂ
ಜಾನಿಪುದೋ ಜಳಧಿಯನನಂ ಜಾನಿಪುದೋ || ೪೫ ||

ಎಣಿಕೆಯ ಪದಿನಾಱುಸಾಸಿರ
ಗಣಿಕೆಯರೊಳ್ ನೆರೆವ ಮೂರ್ತಿಯಂ ಧ್ಯಾನಿಪುದೋ
ತ್ರಿಣಯನನೆರ್ದೆಯೊಳ್ ನೆಲಸಿ
ರ್ಪಣಕದ ಮೂರ್ತಿಯನೆ ವೈಷ್ಣವಂ ಧ್ಯಾನಿಪುದೋ || ೧೪೬ ||

ಆ ಮಾಧವನಂ ಶಾಲ
ಗ್ರಾಮ ಶಿವನಾಭಿಯೆಂಬ ಕಿಱುಗಲ್ಗಳೊಳಂ
ಪ್ರೇಮದಿ[ನೇಂ] ಜಾನಿಸುವುದೊ
ಕಾಮಿಸಿ ಜಾನಿಸುವವಂಗಾವುದೊ ಲಕ್ಷ್ಯಂ || ೧೪೭ ||

ನರಸಿಂಹನೆಂಬ ನಾಮಂ
ಪರಿಕಿಸುವೊಡೆ ಪುರುಷಸಿಂಹನೆಂಬಂದಮದಂ
ನರರಜ್ಞಾನದೆ ಹರಿ ಕೇ
ಸರಿವದನನುಮಾದನೆಂಬರದು ಕೂಡುಗುಮೇ || ೧೪೮ ||

ಪರಿಕಿಸೆ ಮೂಱುಂ ಲೋಕದ
ಪುರುಷರೊಳುತ್ತಮನೆನಿಪ್ಪ ಪೆರ್ಮೆ[ಯಿ]ನಾತಂ
ಪುರುಷೋತ್ತಮನಲ್ಲದೆ ಕಾ
ಪುರುಷೋತ್ತಮಕುಟಿಲವೃತ್ತಿಯೊಳ್ ತಾನೆಸಪಂ || ೧೪೯ ||

ಅಚ್ಯುತಸುಖಾಸ್ಪದಂ ಕ
ರ್ಮಚ್ಯುತನಖಿಳಾಮರೇಂದ್ರಸಂಸ್ತುತ್ಯಂ ತಾ
ನಚ್ಯುತನೆಂಬುದು ಸುಖಿಗಳು
ಮಚ್ಯುತನೆನಲಾಗ ಸಾವ ಪುಟ್ಟುವ ನರನಂ || ೧೫೦ ||

ಬಲಿಯಂ ಕಟ್ಟಿದನಸುರರ
ಬಲಮೆಲ್ಲಮನೞಿದನೆಯ್ದೆ ನೆಲನಂ ಪೊತ್ತಂ
ಸಲೆ ಪಾರ್ವರ ಕಾರುಣ್ಯದ
ಬಲದಿಂ ತಾನೆಂದು ವಿಷ್ಣುವಂ ಪೊಡೆವಡುವಂ || ೧೫೧ ||

ಚಂ || ಸವಳದೆ ಬೇಳ್ವವಂಗೆ ಸುರಸಾನ್ನಮನಿಕ್ಕುವವಂಗೆ ವೇದತ
ತ್ತ್ವವ ನೆಱೆ ಬಲ್ಲವಂಗೆ ಪತಿಭಕ್ತಂಗೆ ಮಾಸಸಹಸ್ರಜೀವಿತ
ರ್ಗವಯವದಿಂದೆ ತಿಂಗಳುಪವಾಸಮನಿಂಬಿನೆ ಮಾೞ್ಪವಂಗೆ ಮಾ
ಧವನತಿಭಕ್ತಿಯಿಂದೆಱಗುವಂ ಗಡ ಕೇಳಿಮಿದಾಪ್ತಲಕ್ಷಣಂ || ೧೫೨ ||

ಆದಿತ್ಯಹೃದಯವಂ ನೀ
ನೋದುವುದೆಂದರ್ಜುನಂಗೆ ನಾರಾಯಣನ
ತ್ಯಾದರದೆ ಪೇೞ್ಪನೆಂದದ
ನೋದುವರೆಲೆ ಕೃಷ್ಣನರ್ಕನಂ ಸ್ತುತಿಯಿಪನೇ || ೧೫೩ ||

ದೇವಕಿ ಗೋಪಿಗಮಾ ವಸು
ದೇವಂಗಂ ಪುಟ್ಟಿ ದೇವಕೀಸುತನಾದಂ
ಶ್ರೀವಾಸುದೇವನಾದಂ
ಭೂವಳಯದೊಳಿದುವೆ ಸಿದ್ಧಮಜನೆಂತಾದಂ || ೧೫೪ ||

ಪದಿನಾಱು ಸಾಸಿರಂ ಮೇಣ್
ಸುದತಿಯರಂ ಸೂಱೆಗೊಟ್ಟು ಕೃಷ್ಣಂ ಕಡೆಯೊಳ್
ಪದತಳಮನಂಬು ಕೊಳೆ ಪೊಂ
ದಿದನೆಂಬರ್ ವಿಷ್ಣುಭಕ್ತರದಱಿನನಾಪ್ತಂ || ೧೫೫ ||

ವಸುದೇವನ ತನಯಂ ಕ್ಷೀ
ರಸಮುದ್ರನಿವಾಸಿ ನರನ ತೇರೆಸಗುವನ
ಲ್ಲಸುರಧ್ವಂಸಿಯುಮತ್ತೊಂ
ದೆಸೆಯೊಳ್ ಹರಿಯಿಪ್ಪನೆಮಬರೆಲ್ಲಿದನಾತಂ || ೧೫೬ ||

ಹರಿಹರರಂ ಪೂಜಿಪ ಭ
ಕ್ತರೆಲ್ಲರುಮವರಿರ್ದ ತಾಣಮಂ ಪಿರಿದಾನುಂ
ಪರಿಕಿಸಲೊಲ್ಲರ್ ಕೆಲಮನೆ
ಪರಿಪರಿದೋಲಗಿಸುತಿರ್ಪರಱಿವಿಲ್ಲದವರ್ || ೧೫೭ ||

ಮುಂದೆ ಜಿನೇಶ್ವರರಾದಪ
ರೆಂದಿದನಿಂಬಾಗಿ ತಿಳಿದು ಹರಿಹರರಂ ನಿ
ಸ್ಸಂದೇಹಮಾಗಿ ಪೂಜಿ[ಸೆ]
ವಂದಿ[ಸೆ] ತಾಳ್ದಿತ್ತು ಬಱಿದೆ ಪೂಜಿಸೆ ವಿಫಲಂ || ೧೫೮ ||

ಹರಿಯುಂ ಹರನುಂ ನೋೞ್ಪೊಡೆ
ಪರಸಮಯಿಗಳೆನಿಸಿ ಮತ್ತೆ ಕರ್ಮದ ವಶದಿಂ
ಧರೆಯ ಕೆೞಗಿರ್ದೊಡಂ ಮಾ
ನ್ಯರೆ ಪೊಱಮಟ್ಟಂತೆ ತೀರ್ಥಕರರಪ್ಪುದಱೆಂ || ೧೫೯ ||

ರಾಮನುಮಂ ಲವಕುಶರಂ
ಭೀಮಾರ್ಜುನಧರ್ಮಪುತ್ರನಕುಳಾನುಜರಂ
ಶ್ರೀಮಜ್ಜಿನೇಶರೆನುತುಂ
ಪ್ರೇಮದೆ ನೆನೆವಂದು ಸಫಲಮಲ್ಲದೊಡಫಲಂ || ೧೬೦ ||

ಆಪೊತ್ತುಂ ಜೋಯಿಸಿಗರ್
ಪಾಪಗ್ರಹಮೆಂದು ಪೆಸರನಿಡೆ ಸಂದಂ ಸಂ
ತಾಪಕರಂ ಕುವಳಯರಿಪು
ಶಾಪಂಬೆತ್ತಾತನಾಪ್ತನೆನಲಾಗಱಿವಂ || ೧೬೧ ||

ಎನಗತಿಭಕ್ತನಿವಂ ಸೌ
ರನೆಂದು ದಯೆಯಿಂದೆ ಬ್ರತಮನೀಯದೆ ಭಕ್ತಂ
ಗೆನಿತುಂ ಪೀಡೆಯನಿತ್ತುಂ
ಟೆನೆಯೆಡೆಯೊಳ್ ಮಾೞ್ಪನಾಪ್ತನೆನಲಾಗಱಿವಂ || ೧೬೨ ||

ಸೌರಂ ಸೂರ್ಯನನರ್ಚಿಪೊ
ಡೋರಂತೇಂ ಚಂದ್ರಕುಜಬುಧಾಮರಗುರುದೈ
ತ್ಯಾರಾಧ್ಯಮಂದಫಣಿಗಳ
ನಾರಾಧಿಪನೊಂದು ಮಣೆಗೆ ತಂದನಿಬರುಮಂ || ೧೬೩ ||

ಚಂ || ಪರಿಕಿಸೆ ಸೌರ್ಯರಚಿಸುವ ಸೂರ್ಯನ ಮೂರ್ತಿಯದೊಂದೆ ಮೂರ್ತಿಯೆ
ಕರಯುಗಮೊಂದಱೊಳ್ ಕರಚತುಷ್ಟಯಮೊಂದಱೊಳೊಂದು ಮೂರ್ತಿಯೊಳ್
ಸಿರಮುಮನೇಕಮಾಯುಧದೊಳೊಂದಿದ ಕಯ್ಯುಮನೇಕಮಲ್ಲಿ ಭೀ
ಕರತರರೌದ್ರಮೂರ್ತಿಯೆರಡೊಂದು ಮನೋಹರಮೂರ್ತಿ ಭಾವಿಸಲ್ || ೧೬೪ ||

ಚಳಬುದ್ಧಿಗಳ್ ಪ್ರಯೋಜನ
ತಿಳಕ[ರ್] ಮಾರ್ತಂಡಭೈರವಂ ರಣಜಯಮೆಂ
ದೆಳೆಯೊಳ್ ಸೌರಾರಾಧನೆ
ಪಲವುಂ ತೆಱನೆಂದು ಪೇೞ್ವರಾ ಸಮಯದವರ್ || ೧೬೫ ||

ಉದಯೊದೊಳೀಶಂ ಮಧ್ಯಾ
ಹ್ನದೊಳಗಧರನಸ್ತಮಯದೊಳ್ ಕಮಳಜನ
ಪ್ಪುದು ಸಾಜಂ ಸೂರ್ಯಂಗೆಂ
ದಿದನೂಳ್ವರ್ ಪಲರುಮಿನ್ನವಘಿತಮೊಳವೇ || ೧೬೬ ||

ಬಿಂಬಂ ಋಗ್ವೇದಂ ಗಡ
ಬಿಂಬಾಂತರ್ವರ್ತಿ ಗಡ ಯಜುರ್ವೇದಂ ತ
ದ್ಬಿಂಬಪ್ರಭೆ ಗಡ ಸಾಮಮ
ದೆಂಬರ್ ದಿನಕರನನಿನ್ನವಘಟಿತಮೊಳವೇ || ೧೬೭ ||

ಸೌರಂ ಜಾನಿಸುವಾಗಳ್
ಭೋರೆನೆ ನಭದಲ್ಲಿ ಪರಿವ ಪಳಿಕಿನ ವೃತ್ತಾ
ಕಾರಮನೆ ಜಾಣಿಪನೊ ಪೇೞ್
ಭೈರವನಂ ಪದ್ಮಹಸ್ತನಂ ಧ್ಯಾನಿಪನೋ || ೧೬೮ ||

ಪಲವುಂ ಮೊಗಮಂ ತಾಳ್ದಿದ
ಪಲವುಂ ಕೈಗಳೊಳೆ ಕೆಯ್ದುವಿಡಿವಿದಿರ್ದನನಾ
ನಳಿನಪ್ರಿಯರೂಪಂ ಮೇಣ್
ಗೆಲೆ ವೇದತ್ರಿತಯಮೂರ್ತಿಯಂ ಧ್ಯಾನಿಪುದೋ || ೧೬೯ ||

ಮುರಹರ ಪುರಹರ ದಶಶತ
ಕರ ಮೂರ್ತಿಗಳೆನಿತುಮೊಳವು ಜಾನಿಪ ಭಕ್ತಂ
ಗರಿದೆಂತುಂ ನಿಟ್ಟಿಸುವೊಡೆ
ನಿರುತಮದೊಂದಲ್ಲದಾಪ್ತವರುಮದೆಂತೋ || ೧೭೦ ||

ದುರಿತಧ್ವಂಸಕರಂ ಭಾ
ಸ್ಕರನಖಿಳಜಗಜ್ಜನಾಬ್ಜಮಿತ್ರನೆ ದಲ್ ಭಾ
ಸ್ಕರನಲ್ಲದಂ[ದವಂ] ಭಾ
ಸ್ಕರನಲ್ಲ ನಭದೊಳೆಯ್ದೆ ತಿಟ್ಟನೆ ತಿರಿವಂ || ೧೭೧ ||

ಸದಮಳ ಕೇವಳಬೋಧ
ಪ್ರದೀಪದಿಂ ಜಗಮನಾವಗಂ ಬೆಳಗಿ ಮಹಾ
ಭ್ಯುದಯಕರನೆನಿಸಿದಂ ದಿವ
ದ ದೇವನಾದಂ ಪ್ರಭಾಕರರುಮೆಂತಾದರ್ || ೧೭೨ ||

ಚಂ || ನೆಲದೊಳಗಿರ್ಪ ನೀರಧಿಯೊಳಿರ್ಪ ಕುಭೃತ್‌ಕುಲದಲ್ಲಿಯಿರ್ಪ ಬಾ
ನೊಳಗೆ ತೊೞಲ್ವ[ರೆಂ]ತುಮಸುರರ್ ಬಗೆಯಲ್ ಬಗೆಯಲ್ ಜಘನ್ಯತಾ
ನೆಲೆಗಳನೆಯ್ದರುತ್ತಮಸುದೃಷ್ಟಿಗಳಪ್ಪವರೂರ್ಧ್ವಲೋಕದೊಳ್
ನೆಲಸುವರುತ್ತಮಬ್ರತಿಕರಲ್ಲದೊಡಂ ದೃಢದರ್ಶನಾನ್ವಿತರ್ || ೧೭೩ ||

ಜ್ಯೋತಿಷ್ಕನಾಗಿ ಪುಟ್ಟಂ
ಖ್ಯಾತಿಯ ಸಮ್ಯಕ್ತ್ವಮುಳ್ಳ ನರನೆನೆ ಮತ್ತಾ
ಜ್ಯೋತಿಷ್ಯದೇವನಂ ತಾ
ನೇತಕ್ಕೋಲಗಿಪನಱಿತಮುಳ್ಳ ಮಹಾತ್ಮಂ || ೧೭೪ ||

ಅಱುವತ್ತನಾಲ್ಕು ಭೈರವ
ಱುವತ್ತಱ ಮೇಲೆ ನಾಲ್ಕೆ ಯೋಗಿನಿಯರುಮೆಂ
ಬಱಿಕೆಯ ದೆಯ್ವಮಿವಿನಿ[ತಂ]
ಕುಱಿವೇಡ[ವನ]ರ್ಚಿಸಲ್ಕೆ ವೇಡವನಱಿವಂ || ೧೭೫ ||

ಜನನಿಯ ಯೋನಿಯೊಳೊಗೆವುದು
ಕನಿಷ್ಠವೆನಗೆಂದು ತೇೞ ತೆಱದಿಂದಂ ತಾಂ
ಜನನಿಯ ಬಸಿಱಂ ಸೀಳ್ದೊಗೆ
ದನಾಪ್ತನಲ್ಲೆಂತುಮಪ್ರಬುದ್ಧಂ ಬುದ್ಧಂ || ೧೭೬ ||

ಬಸಿಱೊಳಗೆ ಪಲವು ಪೞುವಿನ
ಕಿಸುಗುಳದೊಳಗೞ್ದು ನಮೆದು ನವಮಾಸಂ ಸೈ
ರಿಸಿ ತಾಯ ಯೋನಿಯಿಂದಂ
ನುಸುಳ್ವ ವೇದನೆಗೆಯಾಱನೇಕೆ[ಲೆ] ಬುದ್ಧಂ || ೧೭೭ ||

ಸಕಳಪರಿಗ್ರಹಮಂ ಬಿ
ಟ್ಟಕಾಮಿಕಂ ಯೋಗಮುಕ್ತನೆನಿಪಂ ಗಡದೊಂ
ದು ಕಷಾಯವಸನಮನೆ ಪೊದೆ
ದುಕೊಂಡು ಬಿಡಲಾಱದಿರ್ದನೇನೋ ಬುದ್ಧಂ || ೧೭೮ ||

ಕ್ಷಣದಿಂದಂ ಗಡ ಬೆರಲಿಂ
ದೆಣಿಸುವನೋ ವಸ್ತುವೆಲ್ಲಮಂ ಬುದ್ಧಂ ತಾಂ
ಕ್ಷಣಿಕನೆನಿಸಿರ್ದು ಸಕಳಮ
ನೆಣಿಸುವ ತೆಱನಾವುದಲ್ಲಿ ತಾನಿಲ್ಲದುವಂ || ೧೭೯ ||

ಜ್ಞಾನಂ ಸಂತತಮೆನುತುಂ
ಜ್ಞಾನಿ ಕರಂ ಕ್ಷಣದಿನತ್ತಲಿರನೆಂದೆನುತುಂ
ಜ್ಞಾನಿಸುತಿರ್ಪನದೇನೋ
ಮೋನದಿನಾ ಭಿಕ್ಷು ತನ್ನ ನಿಲವಱಿಯದವಂ || ೧೮೦ ||

ತಾನೊಳನಾಗಿ ಬೞಿಕ್ಕಂ
ಜ್ಞಾನದಿನಱಿವುದು ಸಮಸ್ತವಸ್ತುವನೆಲ್ಲಂ
ತಾನಱಿದೊಡಱಿತವೞಿಗುಮೆ
ಭಾನುದ್ಯುತಿ ಭಾನುವಿಲ್ಲದೇಂ ಬೆಳಗುಗುಮೇ || ೧೮೧ ||

ಅಗಣಿತಗುಣನಿಧಿ ಮುಕ್ತಿಯೊ
ಳಗಲದೆ ಲೋಕಾಗ್ರದಲ್ಲಿ ನಿಂದ ಮಹಾತ್ಮ
ಸುಗತಿನಿತಿಲ್ಲದಾತಂ
ಸುಗತನೆ ತಾನಾತ್ಮವಧೆಯೊಳೊಂದಿದ ಪುರುಷಂ || ೧೮೨ ||

ಒಣಗು ಪಸಿ ಜೀವನಿಕರಂ
ಪೆಣನೆನ್ನದೆ ಸುಡುವುದುಂತೆ ಪೊರ್ದಿದನಿತಱೊಳ್
ಗುಣಲೇಶಮೆಂತುಮಿಲ್ಲೆಂ
ದೆಣಿಸರ್ ಮತಿಹೀನರಾಪ್ತನೆಂಬರ್ ಕಿರ್ಚಂ || ೧೮೩ ||

ಇದು ರಮ್ಯಮೆನಿಸಿದಲ್ಲಿ
ರ್ಪುದು ದೆಯ್ವಂ ದೇವಗೃಹದೊಳಿರ್ಪುದು ಮೇಣೆ
ನ್ನದೆ ಪೊಗೆವುತವೊಲೆಯೊಳಗಿ
ರ್ಪುದು ದೆಯ್ವಮೆನಲ್ಕೆ ಸಲ್ಲದಱಿವುಳ್ಳಾತಂ || ೧೮೪ ||

ಎನ್ನನೆ ಪೂಜಿಪರಾಗಳು
ಮೆನ್ನನೆ ಪಿಡಿದಿರ್ಪರೊಳ್ಳಿತಂ ಮಾಡುವೆನಾ
ನೆನ್ನದೆ ಮನೆಯಂ ಸುಡುತಿ
ರ್ಪನ್ನಗ್ನಿಯನೆಂತು ದೆಯ್ವವೆಂಬರ್ ಚದುರರ್ || ೧೮೫ ||

ಮನೆಮುಟ್ಟಂ ಸೀರೆಗಳೆ
ಬಿನಿತುಮನೊಂದಿಸುವಗ್ನಿ ಮುಟ್ಟಿದೊಡವನಾ
ಮನೆಯಿಂದೆ ಕಳೆವರೆನ್ನರು
ಮೆನಲ್ಕೆ ಪೊಲೆವಟ್ಟುದಾಗದಿರ್ಕುಮೆ ದೆಯ್ಯಂ || ೧೮೬ ||

ದ್ವಾದಶಗಣಪರಿವೇಷ್ಟಿತ
ನಾದಿಬ್ರಹ್ಮಂ ಜಿನೇಶ್ವರಂ ಗಣಪತಿ ಮ
ತ್ತಾ ದೊರೆಯನಲ್ಲದವನೆಂ
ತಾದನೊ ಗಣಪತಿ ಗಜಾನನಂ ವಿಕಟಾಂಗಂ || ೧೮೭ ||

ಜನಕಂ ತಾಂ ಸ್ಥಾಣು ಗಡಂ
ಜನನಿಯೆ ಸುಪರ್ಣೆ ಗಡ ತಾಂ ವಿಶಾಖಂ ಗಡ ವಾ
ಹನವದು ಶಿಖಿ ಗಡ ಬಹುಮುಖ
ನೆನೆ ಸಂದ ಕುಮಾರನೀಯಲಱಿಗುಮೆ ಫಲಮಂ || ೧೮೮ ||

ಕಡೆಯಿಲ್ಲದ ಸಂಸ್ಕೃತಿಯೆಂ
ಬಡವಿಯೊಳಿರಿಮೆಂಬ ಶಬರ[ನ]ಜ್ಞಾನಿಮೃಗಂ
ಕೆಡೆಯಲ್ ಮಾಡಿದ ಕುೞಿಗಳ್
ಗಡಮೆಂದಱಿ ಹರಿಹರಾದ್ಯನಾಪ್ತಗೃಹಂಗಳ್ || ೧೮೯ ||

ಪೆಣನಂ ಪೆಸರ್ಗೊಳೆ ದೋಷಂ
ಪೆಣದೊಳ್ ಕುಳ್ಳಿರ್ದು ಮಾಂಸಮಂ ತಿಂಬಾ ಕ
ಳ್ಳುಣಿಯಂ ಭೈರವಿಯಂ ನಿ
ರ್ಗುಣಿಯಂ ಪೂಜಿಪನನಂಟಲಾಗದು ಜೈನಂ || ೧೯೦ ||

ತುಡುವನೆಲುಗಳನೆಯಜಿನಮ
ನುಡುವಂ ಪೊದೆವಂ ಕಪಾಳದೊಳ್ ತಿರಿದುಂಬಂ
ಮೃಡನದಱಿನಮಾಂಗಲ್ಯಂ
ಬಿಡದವನಂ ಜಾನಿಪವನಮಾಂಗಲ್ಯತರಂ || ೧೯೧ ||

ಆರಯ್ಯದಾಪ್ತನಂದಮ
ನಾರೇನಂ ದೆಯ್ವಮೆಂದು ಸೇವಿಪರದನೊ
ಲ್ದಾ[ರಯ್ಸುವ] ಮರುಳ್ಗಳವಿ
ಚಾರಿಗಳೀ ಧರೆಯ ಮನುಜಱಿವಿಲ್ಲದವರ್ || ೧೯೨ ||