|| ಶ್ರೀಮದಶೇಷಭವ್ಯಕಮಳಾಕರಹಂಸನನಂತದೃಗ್ವಚೋ
ಧಾಮನಪಾರದಿವ್ಯಮುನಿಸಂಸ್ತುತಪಾದನತತ್ತ್ವದುಸ್ತಮ
ಸ್ತೋಮನನಿಂದ್ಯನಕ್ಷಯಗುಣಾಂಬುಧಿ ನಿರ್ಮಳನೀ ಜಗತ್ತ್ರಯ
ಸ್ವಾಮಿ ಜಿನಾರ್ಕನೊಲ್ದೆಮಗೆ ಮಾಡುಗೆ ದೃಷ್ಟಿಲಕ್ಷ್ಮಿಯಂ || ||

|| ಜಿನಧರ್ಮಾಮೃತವಾರ್ಧಿವರ್ಧನಶಶಾಂಕಂ ತೀವ್ರಮಿಥ್ಯಾರಿಖಂ
ಡನಚಂಡಾಸಿಕರಂ ಕಷಾಯವಿಪುಳಧ್ವಾಂತದ್ವಿಷಂ ಭವ್ಯಮಂ
ಡನನಾನಂದಿತಸನ್ಮುನೀಂದ್ರನಿಕರಂ ರತ್ನತ್ರಯೋದ್ಭಾಸಿ ಸ
ಜ್ಜನಸಂಸ್ತುತ್ಯನನಾಪ್ತರಂದಮನೆ ಬ್ರಹ್ಮಂ ಪೇೞ್ದನಾ ಮಾರ್ಗದಿಂ || ||

ಜಗಮೆಲ್ಲಂ ಬೆಂದೊಡೆ ಪ
ದ್ಮುಗರ್ಭನುಂ ಹರಿಯುಮೊರ್ವರೊರ್ವರನಿಱಿದುಂ
ಜಗಮೆಲ್ಲಂ ಬೆಂದೊಡೆ ಪ
ದ್ಮು ಗರ್ಭನುಂ ಹರಿಯುಮೊರ್ವರೊರ್ವಳರನಿಱಿದುಂ
ಜಗಮಂ ಮಾಡುವೆವೆಂದಿರೆ
ಭುಗಿಲೆಂದುರಿಲಿಂಗವಾದನೀಶ್ವರನೆಂಬರ || ||

ಲೋಕತ್ರಯಮುಂ ಬೆಂದಂ
ದಾ ಕಮಳೋದರನುಮಬ್ಜಭವನುಂ ತಾ
ವಾ ಲೋಕದೊಳಿರ್ದರೊ ಪೇೞಿಮ
ಲೋಕದೊಳಿರ್ದರೊ ವಿಚಾರಮುಳ್ಳವರ್ಗಳಿದಂ || ||

ಚಂ || ಒಗೆದುರಿಲಿಂಗದೊಂದು ಪವಣಂ ಪರಿಭಾವಿಸಲಬ್ಜನಾಭನುಂ
ನೆಗೞ್ದ ವಿರಂಚಿಯುಂ ಕೆೞಗೆಯುಂ ನೆಱೆ ಮೇಗೆಯುಮೆಯ್ದುವಲ್ಲಿ ಕೇ
ದಗೆ ಗಡ ಬೊಮ್ಮನೊಳ್ ನುಡಿದು ಮುಂ ಪುಸಿದಿರ್ದುದಱಿಂದಮೀಶಪೂ
ಜೆಗೆ ಪೊಱಗಾದುದೆಂಬರೆಲೆ ಕೇದಗೆ ಮುಂ ನುಡಿ[ಗ]ಲ್ತುದಕ್ಕುಮೇ || ||

ಆಗಳುರಿಲಿಂಗಮೊಗೆದ
ತ್ತಾಗಳದಂ ನೋೞ್ಪೆನೆಂದು ನೆಗೆದಬ್ಜಭವಂ
ಗಾಗಳೆ ಕೇದಗೆ ನುಡಿದುದು
ಬೇಗಂ ಪುಸಿನುಡಿಯ[ನಿ]ನ್ನವಘಟಿತಮೊಳವೇ || ||

ಉರುಲಿಂಗವಾದ ಲಿಂಗಂ
ಸುರಮುನಿಗಳ್ ಶಾಪಮೀಯೆ ಕೊಱೆದಾ ಲಿಂಗಂ
ಧರೆಗಾಪ್ತಮೂರ್ತಿಯಾಯ್ತೆಂ
ಬರಱಿಯದರ್ ತಿಳಿದು ನೋಡಿದರಲ್ತೆಂಬರ್ || ||

ಚಂ || ಸುರಮುನಿಸಂಕುಳಂ ನೆರೆದು ದಾರುವನಾಂತರದೊಳ್ ತಪಂಗೆಯು
ತ್ತಿರೆ ಪದಧೀಶನಪ್ಪ ಶಿವನಾ ರಿಷಿಪಳ್ಳಿಗೆ ಬಂದೊಡಾ ಮುನೀ
ಶ್ವರರ ವಧೂಜನಂ ಮುದದೆ ನೋಡಿ ಮರುಳ್ಗೊಳೆ ತನ್ಮುನೀಶರಾ
ಗಿರಿಶನ ಲಿಂಗಮಂ ಪಱಿಯೆ ಶಾಪಿಸೆ ಬಿರ್ದುದಿದೆಂಬರೆಲ್ಲರುಂ || ||

ಲಲನೆಯರನಿಂತು ಕಿಡಿಸಿದ
ಖಳನಡು ಪಱಿಗೆಂದು ಶಾಪಮಂ ಸುರಮುನಿಗಳ್
ಕಲುಷದಿನೀಯಲೊಡಂ ಭಿ
ನ್ನಲಿಂಗಮಾಗಿರ್ದನೆಂಬರಾ ಶೈವರ್ಕಳ್ || ||

ಚಂ || ಗಿರಿಶನ ಲಿಂಗಮಂತು ಪಱಿದಲ್ಲಿಯೆ ನಟ್ಟಿರೆ ಮಕ್ಕಳಾರ್ಗಮಾ
ಗರೆ ಗಡಮತ್ತ ದೇವಗಣಮಾ ಶಿವನಲ್ಲಿಗೆ ಪೋಗಿ ಪೇೞ್ವುದಾ
ದರದೊಳೆ ಪೋಗಿ ಪೂಜಿಪುದದಂ ಸುತರಾದಪರೆಂದೊಡೆಲ್ಲರುಂ
ಗಿರಿಶನ ಬಿರ್ದ ಲಿಂಗಮನೆ ಪೂಜಿಸಿದರ್ ಪುತ್ರಕಾಂಕ್ಷೆಯಿಂ || ೧೦ ||

ದಾರುವನದಲ್ಲಿ ಮುನಿಗಳ್
[ಬಾ]ರದೆ ಬಂ[ದಂ]ದು ಪಱಿದ ರುದ್ರನ ಲಿಂಗಂ
ಧಾರಿಣಿಗೆ ದೆಯ್ವಮಾಯ್ತೆಂ
ದಾರಾಧಿಸುತಿರ್ಪರಱಿತವಿಲ್ಲದ ಶೈವರ್ || ೧೧ ||

ಚಂ || ಮರುಳರಸಂಗೆ ಮಲ್ಲಿಗೆಯ ಮೊಲ್ಲೆಯ ಜಾದಿಯ ಕಂಪನಾಳ್ವ ಭಾ
ಸುರ ಕುಸುಮಂಗಳಂ ಕುಡದ ಕಾರಣಮಾವುದೊ ಬನ್ನಿಯೆಕ್ಕೆಯು
ತ್ತರಣೆಯ ಬೆಲ್ಲವತ್ತದ ತೊಳಂಚೆಯ ಪತ್ರೆಯನೊಂದನಿತ್ತು ಚೆ
ಚ್ಚರಮಮರತ್ವಮಂ ಪಡೆಯಿಮೆಂಬರದರ್ಕೆ ನಿಮಿತ್ತಮಾವುದೋ || ೧೨ ||

ಶಾಪದೆ ಪಱಿದಾ ಲಿಂಗ
ಕ್ಯಾಪೊತ್ತುಂ ಬನ್ನಿಯೆಕ್ಕೆಯುತ್ತರಣೆಗಳೆಂ
ಬೀ ಪತ್ರೆಯನರ್ಚಿಪುದಾ
ಶಾಪಪ್ರತಿಕಾರಮೆಂದು ಕೆಲಬರ್ ನುಡಿವರ್ || ೧೩ ||

ಮುಟ್ಟಿದೊಡೆ ಮೀಯವೇೞ್ಪುದು
ಮುಟ್ಟದೊಡಂ ಸಿದ್ಧಿಹಾನಿ ಸುಗತಿಯೊಳೆಂದುಂ
ಪುಟ್ಟಂ ಕೀಲಿಗನಪ್ಪಂ
[ಕಿ]ಟ್ಟಂ ನಿರ್ಮಲ್ಯಮೆಂಬರಿದು ಬಿಸವಂದಂ || ೧೪ ||

ಒಕ್ಕಲಿಗನನೋಲಗಿಸಿದ
ತಕ್ಕಂ ಮೊದಲಾಗಿ ಮುಡಿದ ಪೂವಂ ಮುಡಿವರ[ರ್]
ತಕ್ಕುದೆ ಲಿಂಗದ ಮಂಡೆಯೊ
ಳಿಕ್ಕಿದ ಪುಷ್ಪಮನೆ ಮುಡಿಯಲಾಗೆಂಬ ಮತಂ || ೧೫ ||

ದೇವನ ಮಂಡೆಯೊಳಿಕ್ಕಿದ
ಪೂವಂ ಮುಟ್ಟಿದೊಡೆ ಮೀವರೆಂದೊಡೆ ಪೊಲ್ಲೆಂ
ದಾವೇಕೆಂದಪೆಮಾಪ್ತಂ
ಪಾವನಮಲ್ಲೆಂದು ಸಾಱುತಿರ್ಪರ್ ಶೈವರ್ || ೧೬ ||

ಮುಟ್ಟಲ್ಕಣಮಾಗದುದಂ
ಮುಟ್ಟಿಯೆ ಕೈಗರ್ಚಿಕೊಳ್ವ ತೆಱದಿಂ ಭಕ್ತಂ
ಮುಟ್ಟಿದೊಡೆ ಕರ್ಚುತಿರ್ಪರ್
ಮುಟ್ಟುತೆ ಕೈಗರ್ಚುವಂತಿರಾಪ್ತರಶುಚಿ[ಯೇ] || ೧೭ ||

ಲಿಂಗಮನೆ ಮುಟ್ಟಲೊಡನೆ ಕ
ರಂಗಳನಿಂಬಾಗಿ ಕರ್ಚವೇೞ್ಕುಂ ತದ್ಭ
ಕ್ತಂಗೆಂದು ಪೇೞುತಿರ್ಪಾತಂಗಳ್ ಬಲ್ಲಂತಿರುಚಿತಮಂ ಬಲ್ಲವರಾರ್ || ೧೮ ||

ಜಗದೊಳ್ ಪವಿತ್ರಮನೆ ಮುಂ
ಪೊಗೞ್ತೆವೆತ್ತವರನವರ ಮನೆಯುಮನಾ ವ
ಸ್ತುಗಳಂ ಮುಟ್ಟಿಯೆ ಮೀವೊಡೆ
ನೆಗೞ್ತೆಯುಂ ಮಾತುಮೊಂದಿ ನೇರ್ಪಟ್ಟಿರ್ಕುಂ || ೧೯ ||

ಶಪಥಂ ಮಾೞ್ಪಾಗಳ್ ಕೋ
ಶಪಾನಮಂ ಮಾೞ್ಪರೆಂಬರೆಲ್ಲಂ ಲಿಂಗ
ಕ್ಕೆ ಪೆಸರ್ ಕೋಶಂ ತತ್ಕೋ
ಶಪಾನಮಸ್ಪೃಶ್ಯಮೆಂದು ತಿಳಿದರ್ ಕುಡಿಯರ್ || ೨೦ ||

ಉರಿಲಿಂಗಮಾದ ಲಿಂಗಂ
ಸುರಮುನಿಗಳ್ ಶಾಪಮೀಯೆ ಪಱಿದಾ ಲಿಂಗಂ
ಧರೆಗಾಪ್ತಮೂರ್ತಿಯಾಯ್ತೆಂ
ಬರಱಿಯದರ್ ಬಗೆದು ನೋಡಿದವರಲ್ಲೆಂಬರ್ || ೨೧ ||

ಅಭಯಪ್ರಸಾದಖಟ್ವಾಂ
ಗ ಭಯಂಕರಶೂಲಶಕ್ತಿಮರುಗ ರುದ್ರಾ
ಕ್ಷ ಭುಜಂಗಕುಮುದಫಲಯು
ಕ್ತ ಭುಜಂಗಳನುಳ್ಳವಂ ಸದಾಶಿವನಲ್ಲಂ || ೨೨ ||

ಲಿಂಗಕ್ಕೆ ಭಕ್ತಿಮಾಡುವ
ವಂಗಳ್ ತಾಂ ಸ್ವಲ್ಪ ಸೌಖ್ಯವಂ ಕುಡುಗುಂ ಸ್ವ
ರ್ಗಂಗಳ ಸುಖಮಂ ಮುಕ್ತಿಯು
ಮಂ ಗುಣನಿಧಿ ಜಿನನೆ ಕುಡುಗುಮರ್ಚಿಸೆ ಜಿನನಂ || ೨೩ ||

ಅವಯವಮನುಂತೆ ಮಾಡರೆ
ಶಿವನಪ್ಪೊಡೆ ಶಿವನ ಲಿಂಗಮಪ್ಪುದನಱಿದಿ
ರ್ದವಯವ[ವಂ] ಮಾಡರೆ ತಾಂ
ಶಿವಲಿಂಗಕ್ಕಾರ್ಯರುಚಿತಮಂ ತಪ್ಪುವರೇ || ೨೪ ||

ಕಮಳಜನ ಭಾಗ ಮೊದಲದು
ಕಮಳಾಕ್ಷನ ಭಾಗಮದಱ ನಡುವದಱಿಂ ಮೇ
ಗೆ ಮಹೇಶ್ವರಭಾಗಮುಮೆಂ
ದು ಮೂವರಂ ಲಿಂಗದಲ್ಲಿ ನಿಲಿಪರದೇನೋ || ೨೫ ||

ಈ ನೆಲದೊಳಿನಿತು ಕಾಲಮು
ಮಾನಿರ್ದೆಂ ಪೂೞ್ದು ಲಿಂಗಮಪ್ಪೆಂ ಭ್ರಾಂತೇಂ
ನೀನಗೞ್ವುದೆಂದು ಕಲ್ಗ[ಳೆ]
ಮಾನಸರೊಳ್ ನುಡಿದು ಕನಸುದೋಱಿತ್ತೆಂಬರ್ || ೨೬ ||

ಒಂದೆರಡು ಮುಂಡದಂತರ
ದಿಂದಂ ಧರೆಯೊಳಗೆ ಬಗೆದು ಪೊಣ್ಮಿದ ಕಲ್ಲಂ
ಮಂದಮತಿಗಳ್ ಸ್ವಯಂಭುವ
ದೆಂದೂಳ್ವರ್ ಮಿಕ್ಕ ಕಲ್ಗಳೇಂ ಮಾಡಿದು[ವೋ] || ೨೭ ||

ಅವಯವಸಂಪೂರ್ಣವೆನಿ
ಪ್ಪುವು ಮಾಡಿದ ಕಲ್ಗಳವನಿ[ಯಿಂ] ಪೊಣ್ಮಿ ಸ್ವಯಂ
ಭು[ವೆ] ನಿರುತಮೆನಿಕುಮುಱಿದಂ
ದವಲ್ಲವೇ ಸಾಜದಿಂ ಸ್ವಯಭುಗಳಲ್ಲಾ || ೨೮ ||

ಅವಯವಮನೆ ಬಣ್ಣಿಸುತಿ
ರ್ಪುವೆ ಶೈವಸ್ತುತಿಗಳಾ ಶಿವಂ ಪ್ರತಿಗಳೊಳಾ
ದವಯವಮುಮಿಲ್ಲ ಲಿಂಗ
ಕ್ಕೆ ವಿರುದ್ಧಂ ಸುತ್ತಿಯುಮಾಪ್ತಮೂರ್ತಿಯುಮೆಂತುಂ || ೨೯ ||

ಮೃಡನರ್ಚಿಪಂಗೆ ವರವಂ
ಕುಡುವೊಡೆ ಕೆಯ್ ನೋೞ್ಪೊಡಕ್ಷಿ ಕೇಳ್ವೊಡೆ ಕಿವಿಗಳ್
ನುಡಿವೊಡೆ ಬಾಯಿಲ್ಲೆಂತೋ
ಕುಡುವಂ ಲಿಂಗಸ್ವರೂಪನಂಗವಿಹೀನಂ || ೩೦ ||

ಭಾವಿಪೊಡವಯವಮಿಲ್ಲದ
ದೇವನನೇನೆಂದು ಬಣ್ಣಿಪರ್ ಪೂಜಿಪರಂ
ತಾವೆಡೆಯಂ ಜಾನಿಪರಂ
ತಾವುದನಾ ಭಕ್ತರಲ್ಲಿ ಲಿಂಗದೊಳನಿತುಂ || ೩೧ ||

ಮೊದಲೊಳ್ ಲಿಂಗಂ ಗಡ ಬೞಿ
ಕದು ತನ್ನೊಳ್ ಪಂಚವಕ್ತ್ರ ದಶಭುಜಮಂ ಪೆ
ತ್ತುದು ನೋಡುವಾಗಳಿನ್ನಿಂ
ತಿದು ಚಿತ್ರಂ ಲಿಂಗಮಿಂದ್ರಜಾಗನಕ್ಕುಂ || ೩೨ ||

ಲಿಂಗಮದು ದೆಯ್ವಮಲ್ಲಾ
ಲಿಂಗದ ಮೇಲಯ್ದು ತಲೆಯ ದಶಭುಜದಾ ರೂ
ಪಂ ಗಡ ನಿಲಿಸಿಯೆ ಪೂಜಿಪು
ದೆಂಗುಂ ಜನಮಾಪ್ತನೆರಡಱೊಳ್ ತಾನೇನೋ || ೩೩ ||

ಆಯ್ದುಂ ಬಣ್ಣಮೆ ವದನಮ
ವಯ್ದಕ್ಕಂ ಬಿಳಿದು ಮೆಯ್ಯ ಬಣ್ಣಂ ತೋಳೀ
ರಯ್ದುಂ ಬಿಡದೊಲ್ದು ಜಾನಿಪರ್ ಮತಿಹೀನರ್ || ೩೪ ||

ನವಬಂಧಕಂಗೆ ವಿರತಿಗೆ
ನೆವನೆವದಿಂ ರುದ್ರನಂದು ಪುಟ್ಟಿದ ಕತದಿಂ
ಶಿವಭಕ್ತರದಂ ಮಱೆಯಿಸಿ
ಶಿವನಭವಂ ಜನಕನಾರುಮಿಲ್ಲೆಂದೂಳ್ದರ್ || ೩೫ ||

|| ಸತತಂ ಸನ್ಮತಿಯಿಂದೆ ಸದ್ಗುಣಗಣಕ್ಕಾವಾಸಮಾಗಿರ್ದ ಶಾ
ಶ್ವತನಂ ಶಂಕರನಂ ಸದಾಶಿವನನಾನಂದಾತ್ಮನಂ ಭವ್ಯಸಂ
ಸ್ತುತನಂ ದೇವರ ದೇವನಂ ಪೊಗೞದೆಂತು ದೈತ್ಯರಂ ಕೊಂದನೆಂ
ದು ತಗುಳ್ದಾಗಳುಮಾಪ್ತನಂ ಪೊಗೞ್ವರಿಂತಜ್ಞಾನದಿಂ ಮಾನಸರ್ || ೩೬ ||

ನರರಸ್ಥಿ ಹಸ್ತಿಚರ್ಮಂ
ಪರೇತವನಮೊಳ್[ಗೆ] ಪಾವು ಶೂಲಂ ಭಸ್ಮಂ
ಮರುಳ ಪಡೆಯೆಂಬಿನಿತುಂ
ಪೊಱಗಾಗಿರೆ ಬಣ್ಣಿಸರ್ ತದಾಪ್ತನನೆಂದುಂ || ೩೭ ||

ತೊಡುವನೆಲ್ವುಗಳಜಿನಮ
ನುಡುವಂ ತಾಂ ನರಕಪಾಳದೊಳ್ ತಿರಿದುಂ
ಪಡುವಂ ಮಸಣದೊಳೆಂಬರ್
ಕಡೆವಟ್ಟುನುಮಿಂತೆ ನೆಗೞನಾಪ್ತನೆ ನೆಗೞ್ವಂ || ೩೭ || *

ಊರಿಂಗೆ ಶಲ್ಯಮಂಡನ
ಕಾರಿಯಮಾಂಗಲ್ಯ[ನಿ]ರಲೆ ಸಲ್ಲೆಂಬವೊಲೀ
ಧಾರಿಣಿಯೊಳೆಲ್ಲಮುಗ್ರಂ
ಗೂರಿಂದಂ ಪೊಱಗೆ ಮಾಡುವರ್ ದೇಗುಲಮಂ || ೩೮ ||

ದೇಗುಲದ ನೆೞಲ್ ಮನೆಗಳ
ಮೇಗಾಗದು ಪರಿಯಲೆಂದು ಪೊಱಗಿರಿಸುವರಿಂ
ಬಾಗಿರೆ ಮಾಡಿಪರೊಳ್ಪಿಂ
ಗಾಗರಮೆನಿಸಿರ್ದ ಜೈನಗೇಹಮನೂರೊಳ್ || ೩೯ ||

ಜಗದಧಿಪತಿಯಂ ವಿನಯದೆ
ಪೊಗೞದೆ ವಸ್ತುಸ್ತವಂಗಳಿಂದನಿಶಂ ಕೆ
ಮ್ಮ ಗೆ ಕೊಳ್ಳಿಯಮನ್ನೆಯರಂ
ಪೊಗೞ್ವಂದದೆ ಪೊಗೞುತಿರ್ಪರಱಿವಿಲ್ಲದವರ್ || ೪೦ ||

ಭೂವಿಶ್ರುತರಿವರಾಗಮ
ಕೋವಿದರೆನೆ ರೂಢಿವೆತ್ತ ಶೈವಾಚಾರ್ಯರ್
ಕೀವಿಲ ದುರ್ಜನನೆಮ್ಮಯ
ದೇವನಮಾಂಗಲ್ಯ[ನೆಂ]ದು ಬಣ್ಣಿಸುತಿರ್ಪರ್ || ೪೧ ||

ಸ್ವೈರಾಚಾರ್ಯರ ಶಾಸ್ತ್ರದೊ
ಳಾರಿಂದಂ ಪಿರಿಯರೆನಿಸಿದಾ ಗೊರವರ್ ತಾ
ವೋರಂತೆಸೆದಾ ಶಿವನಂ
ಚಾರಿತ್ರವಿಹೀನನೆಂದು ಬಣ್ಣಿಸುತಿರ್ಪರ್ || ೪೨ ||

ಲೋಕದೊಳೆಲ್ಲಂ ಕರಮವಿ
ವೇಕಿಗಳೆನಿಪಾ ಮಹೇಶ್ವರ್ಕಳ ಪುರುಳಂ
ಏಕಱಸುವುದಾಪ್ತನನವಿ
ವೇಕಿ ಖಳಂ ಕ್ರೂರನೆಂದೆ ಪೊಗೞ್ದೆಂ ಬೞಿಯಂ || ೪೩ ||

ಎಲ್ಲಿಲ್ಲದಮಾಂಗಲ್ಯನ
ನೆಲ್ಲಂ ಸುತ್ತಿಯಾಗಿ ಪೇೞ್ದೊಡ[ದೆ] ಪಾವನಮೆಂ
ದಲ್ಲಲ್ಲಿಗಱಿತಮಿಲ್ಲದ
ರೆಲ್ಲಂ ಕಲ್ತವಱಿನೀಶನಂ ಸ್ತುತಿಯಿಸುವರ್ || ೪೪ ||

ಚಳಮತಿಗಳ್ ಶಿವನಂ ನಿ
ರ್ಮಳನನಮಾಂಗಲ್ಯನೆಂದು ಬಣ್ಣಿಸೆ ತಮಗಂ
ಚಲಮುಂಟೇ ಗುಣಿಗಳ್ ನಿ
ರ್ಮಳನೆನಲೇಕಾಗದಂಜದೆಂಬುದು ಪೊಲ್ಲಾ || ೪೫ ||

ಪರಮನನತಿನಿರ್ಮಳನಂ
ತಿರಿವನಮಾಂಗಲ್ಯನೆಂದು ಶೈವರೆ ನಿಚ್ಚಂ
ಪರಮಾದರದಿಂ ಪೊಗೞ್ವರ್
ಪರಸಮಯಿಗಳಾಳಿಗೊಳ್ವುದೇನದು ತಪ್ಪೋ || ೪೬ ||

ಗಿರಿಶಂ ಪಿನಾಕಿ ದಕ್ಷಾ
ಧ್ವರಮಥನಂ ವ್ಯಾಘ್ರಚರ್ಮವಸನಂ ಲಾಳಾ
ಸುರಮಥನಂ ಶೂಲಿ ಜಳಂ
ಧರಸೂದನನಾಪ್ತನೆನ[ಲೆ]ವೇಡಱಿವಾತಂ || ೪೭ ||

ಪರಶುಧರಂ ಸರ್ಪಧರಂ
ಕರಿಚರ್ಮಾಂಬರಧರಂ ಪುರಾರಿ ಮಹೋಗ್ರ
ಸ್ಫುರಿತನಿಟಿಳೇಕ್ಷಣಂ ದೈ
ತ್ಯರನೆಲ್ಲಂ ಕೊಲ್ವನಾಪ್ತನೆನಲಾಗದಱಿವಂ || ೪೮ ||

ಶ್ವೇತನ ಬಿಲ್ಲೊಳ್ ನೆಲಸಿದ
ನಾತನ ಪೆಸರವನನೊರ್ಮೆ ಕಾದಂ ಭೂತ
ವ್ರಾತದೊಡಗೂಡಿ ತಿರಿದುಪ
ರೇತದೊಳಿರ್ಪವನನಾಪ್ತನೆನಲಾಗಱಿವಂ || ೪೯ ||

ಕಾಡಾನೆಯ ರೂಪಿಂದಂ
ಕೂಡಿದಗಜೆಯೊಳ್ ಗಜಾಸುರನ[ನೇಂ] ಸೀೞ್ದೇ
ಡಾಡಿದನರ್ಜುನನೊಳ್ ಪೊಣ
ರ್ದಾಡಿದನಾಪ್ತನೆನಲಾಗದಱಿವುಳ್ಳಾತಂ (?) || ೫೦ ||

ನರನಂ ಗೆಲ್ವಂದು ವನೇ
ಚರನಾದಂ ರಜತಗಿರಿಯನೆತ್ತಿದ ಲಂಕೇ
ಶ್ವರನಂ ನುರ್ಗೊತ್ತಿದನೆಂ
ದು ರಾಗದಿಂ ಪೊಗೞಲಾಗದಾಪ್ತನನಱಿವರ್ || ೫೧ ||

ನರನೊಳ್ ಪೊಣರ್ದಗಿದಿತ್ತಂ
ಸರಲಂ ಲಂಕಾಧಿಪಂಗೆ ಖೞ್ಗಮನಿತ್ತಂ
ಸುರರಭಿವರ್ಣಿಸೆ ಬೊಮ್ಮನ
ಶಿರಗಡಿದಂ ಪೇಸಿ ಭೂಮಿಯಂ ಬಲವಂದಂ || ೫೨ ||

ಧುರದೊಳ[ಗು]ರ್ವಿಪ ಲಂಕಾ
ಸುರನಂ ಕೊಂದಂ ಕಪಾಲದೊಳ್ ತಿರಿದುಂಡುಂ
ಸುರಮನಿಪತ್ನಿಯರೊಳ್ ಪಾ
ದರವಾಡಿದನಾಪ್ತನೆನಲೆ ವೇಡಱಿವಾತಂ || ೫೩ ||

ರಾಗದಿನಗುಸುತೆಯೊಳ್ ಸಂ
ಭೋಗಿಸುತಿಪ್ಪಲ್ಲಿಗಗ್ನಿ ಬರೆ ನಾಣ್ಚಕೆಯಿಂ
ದಾ ಗಿರಿಜೆ ಪೋ[ಗೆ] ತರಿಸಿದ
ನಾಗಳೆ ಷಣ್ಮುಖನಿನಾಪ್ತನೆಗಲಾಗಱಿವಂ || ೫೪ ||

ಮುರಹರನಾಗಸಕೆತ್ತಿದ
ಚರಣಮನಜನಲ್ಲಿ ತೊಳೆದನಾ ನೀರೆ ಗಡಂ
ಸುರಸಿಂಧುವಾಗಿ ಬರುತಿರೆ
ಶಿರದೊಳ್ ತಾಂ ತಳೆದನಾಪ್ತನೆನಲಾಗಱಿವಂ || ೫೫ ||

ಸುಡುವಂ ಜಗಮಂ ಮತ್ತಂ
ಪಡೆವಂ ತ್ರಿಗುಣಾತ್ಮನೊಲ್ದ ತೆಱನಪ್ಪ ತಾ
ನಡಿಗಡಿಗೆನುತುಂ ಸುಖಮಂ
ಕುಡುವನುಮೀಯಂದದಿಂದಕ್ಕುಮೆ ಪೊಗೞಲ್ || ೫೬ ||

ದಕ್ಷನಳಿಯಂ ಶಿಖಂಡಿ [ವ]
ಳಕ್ಷಾಂಗಂ ಪಶುವನೇಱುವಂ ತಿರಿವಂ ಲೋ
ಕಕ್ಷಯಕಾರಣನೆಂದೆಂ
ದಕ್ಷಯನಂ ಪೊಗೞಲಾಗದಾಪ್ತನನಱಿವಂ || ೫೭ ||

ಪೆಱೆಯಂ ಸೂಡಿರ್ಪಂ ಬಾಂ
ದೊಱೆಯಂ ಪೊತ್ತಿರ್ಪನಗಜೆಯೊಳ್ ಕೂಡಿರ್ಪಂ
ಕಱೆಗೊರಲನೆಂದು ಲೋಕ
ಕ್ಕೆಱೆಯನನೀಯಂದದಿಂದಮಕ್ಕುಮೆ ಪೊಗೞಲ್ || ೫೮ ||

ಮಾದೇವನುಗ್ರನಜನೇ
ಕಾದಶರುದ್ರಂ ಶಿವಂ ಮಹಾಕ್ರೂರನೆನು
ತ್ತಾದಂ ಮುತ್ತುಂ ಮೆೞಸುಂ
ಗೋದಂತಿರೆ ಪೊಗೞಲಾಗದಾಪ್ತನನಱಿವಂ || ೫೯ ||

ಕಡುಮೂರ್ಖನೊರ್ಮೆ ಶಾಂತಂ
ಕಡುರಾಗಿ ವಿರಾಗಿ ದುಶ್ಚರಿತ್ರಂ ಶುಚಿಯೆಂ
ದೆಡಬಲದಿಂ ಪಂಕ್ತಿಯೊಳಿ
ರ್ಪೆಡೆಯಂ ತೋರ್ಪಾತನಾಪ್ತನೆನಲಾಗಱಿವಂ || ೬೦ ||

|| ಒಡಲೊರ್ಭಾಗಮನಿತ್ತನದ್ರಿಜೆಗೆ ಗಂಗಾದೇವಿಯಂ ತಾಳ್ದಿಯುಂ
ಜಡೆಯೊಳ್ ತಾಂ ಬಸನಂಗಳಂ ತೊಱೆದನಾ ದೈತ್ಯೇಂದ್ರರಂ ಕೋಪದಿಂ
ಕಡಿದಂ ಮತ್ತೆ ದಯಾಪರಂ ದನುಜಮೌಳಿವ್ರಾತಮಂ ಸೂಡಿಯುಂ
ಗಡ ಪೂತಾತ್ಮನೆಂಬರಿನ್ನವಘಟಂ ದುರ್ಬೋಧರೊಂದೋದುಗಳ್ || ೬೧ ||

ಚಂ || ಮರುಳೊಡನಾಡುವಂ ಮಸಣದೊಳ್ ಪಡುವಂ ಪುಲಿದೋಲನುಟ್ಟು ಭೀ
ಕರಕರಿಚರ್ಮಮಂ ಪೊದೆವನಸ್ಥಿಗಳಂ ತುಡುವಂ ಕಪಾಳದೊಳ್
ತಿರಿದುಣುತಿರ್ಪನುಗ್ರಫಣಿಯಂ ಪಿಡಿವಂ ವಿಷಭೋಜಿಯೆಂದು ಜೇಂ
ಕರಿಸುವರಿಂತು ಬಾರದ ಭವಂ ಬರಿಪರ್ ವಿಕಳಾತ್ಮರೀಶನಂ || ೬೨ ||

ಚಂ || ಉಡೆ ಪಱೆದೇಕೆ ಕೈದುವಿಡಿದಂ ಸಲೆ ಕೈದುಗಳಾಗೆ ಬೂದಿಯಂ
ತೊಡೆವುದದೇಕೆ ಬೂದಿಗೊರವಂ ಗಡ ಪೆಂಡಿರದೇಕೆ ಪೆಂಡಿರಾ
ದೊಡೆ ಮದನಾರಿಯೆಂಬ ಬಿರುದೇಕೆಯೊ ನಾಡೆ ವಿರುದ್ಧಚೇಷ್ಟಿಯಾ
ಮೃಡನೆಸಕಂ ವಿಚಾರಿಸುವೊಡೆನ್ನರದೇಕೆ ವಿವೇಕಮುಳ್ಳವರ್ || ೬೩ ||