|| ಕೆಲರಂ ಸಂಸ್ಕೃತಿಮೋಹದಿಂ ಕೆಲಬರಂ ಮಾಯಾಪ್ರಪಂಚಂಗಳಿಂ
ಕೆಲರಂ ದುಶ್ಚರಿತಂಗಳಿಂ ಕೆಲಬರಂ ಸದ್ಧರ್ಮಮಾರ್ಗಂಗಳಿಂ
ಕೆಲರಂ ಮೆಚ್ಚಿದ ವೃತ್ತಿಯಿಂ ನಡಸುತುಂ ದೇಹಂಗಳೊಳ್ ಸಂತತಂ
ನೆಲಸಿರ್ದೂಡುವನೆಯ್ದೆ ಕರ್ಮಮಹಿಪಂ ಮುಮ್ಮಾಡಿದೊಂದಂದಮಂ || ||

ಬೇಡುಗರವನಿಪರಾದೊಡೆ
ರೂಡಿಯ ಸತ್ಕುಲಜರಪ್ಪ ಭೂಮೀಶ್ವರರಂ
ನೋಡಲುಮಾಱದ ತೆಱನಂ
ಮಾಡುವರೊಳ್ಗುಣದ ಜೈನರಂ ಕಂಡು ಕೆಲರ್ || ||

|| ಜಗದಾನಂದನನಾದಿದೇವನನಶೇಷಾರಾಧ್ಯನಂ ಮೋಕ್ಷಲ
ಕ್ಷ್ಮಿಗತಿಪ್ರೀತನನಾಪ್ತನೆನ್ನದೆ ಮಹಾಮಿಥ್ಯಾತ್ವದಿಂ ಮೂಢಜೀ
ವಿಗಳೊಳ್ಪಿಲ್ಲದನಾಪ್ತರಂ ಪಲರುಮಂ ತಾವಾಪ್ತರೆಂದೊಲ್ದು ಪೊ
ರ್ದಿ ಗುಣಂಗೆಟ್ಟು ಜಿನೇಂದ್ರನಾಪ್ತನಣವಲ್ಲೆಂದೂಳ್ವರಜ್ಞಾನಿಗಳ್ || ||

|| ಸ್ರ || ತನಗೆಂತಂತಿಚ್ಚೆಯಂ ಪಾಳಿಸಿ ನಡೆವಮೃತಾಂಭೋಜನಾಭಾರ್ಕಹವ್ಯಾ
ಶನರ್ಗೆಂದುಂ ರಾಗದಿಂ ತಾನೆಱಗಿಸುವನಿಳಾಲೋಕದಿಂ ಮೋಹರಾಜಂ
ಮುನಿಸಂ ಕೊಂಡಾಡಿ ತನ್ನಂ ಕಿಡಿಸಿ ಭವಮಹಾಪಾಶಮಂ ಕೂಡೆ ಕೊಯ್ದಾ
ಜಿನನಾಥಂಗೇಕೆಯೋ ಲೋಕಮನೆಱಗಿಸುವಂ ಶತ್ರುವಿಂತಾಗವೇಡಾ || ||

ಪರಮಜಿನನೊಡನೆ ತಮ್ಮಾ
ಪ್ತರನಾ ಮತದೊಡನೆ ತಮ್ಮ ಮತಮಂ ಮತ್ತಾ
ಚರಿತದೊಡನೋಜೆಯಿಂ ನಿಜ
ಚರಿತಮನೊರೆದೆಯ್ದೆ ನೋಡಿ ದೂಷಿಪುದೆಗ್ಗೇ || ||

ಎಮ್ಮಾಪ್ತಂ ನಿರ್ಮಳನಿ
ನ್ನೆಮ್ಮಾಗಮಮಮಳಮೆಮ್ಮ ಚರಿತಂ ಲೇಸೆಂ
ದುಮ್ಮಱೆದುಮುಸಿರರೇಕೆನೆ
ತಮ್ಮಾಪ್ತರ ಪುರುಳನಱಿವ ಕತದಿಂ ಚದುರಂ || ||

ಜಿನನನ್ನ[ನಿನ್ನನೆನ್ನಂ]
ಜಿನಸೂಕ್ತಮದಂತುಟಿಂತುಟೋ ಧರ್ಮಮಿದೆಂ
ತೆನಲಱಿಯದೆ ಮೂರ್ಖರ್ [ಕೆ]
ಮ್ಮನೆ ಜೈನಮದೊಳ್ಳಿತಲ್ಲದೆಂದಿಂತೂಳ್ವರ್ || ||

ಅರಹಂತನೆ ದೆಯ್ವಂ ಮಿ
ಕ್ಕರೆಲ್ಲರುಂ ದೇವರಲ್ಲರೇ ಗುಣಿಗಳ್ ಜೈ
ನರೆ ಮಿಕ್ಕರೆಲ್ಲರುಂ ಕ
ಷ್ಟರೆ ಪೇೞಿಮೆನುತ್ತೆ ಕರ್ಚಿ ಕೊಲ್ವರ್ ಮೂಢರ್ || ||

ಜಿನಮತಮೆ ಲೇಸು ಗಡ ಮ
ತ್ತಿನ ಮತದೊಳ್ ಕೊಂದು ತಿಂಬುದಂತಿರ್ದುದೆ ಪೇ
ೞಿನಿತೂಳ್ವಂ ವೇದಮನೊಂ
ದಿನಿಸುಂ ಕೆಳ್ದಱಿಯರಕ್ಕುಮಾ ಮತಿವಂತರ್ || ||

ಜಿನಧರ್ಮಮೊಳ್ಳಿತೆಂದುಸಿ
ರ್ದನಿತಱೊಳೇಂ ಕನಲ್ದು ಕಾಯ್ದು ಕಳ್ಗುಡಿವರೆ ಮ
ತ್ತಿನ ಸಮಯಿಗಳೆಲ್ಲರುಮೆಂ
ದು ನಾಡೆಯುಂ ಗುಂಡುಗೊಳ್ವರುಪಶಮನಿರತಲ್ || ೧೦ ||

ಶ್ರಾವಕರಲ್ಲರೆ ಪಾರ್ವರ್
ಸೇವಿಸುತಿರ್ದಪರೆ ಮಾಂಸಮಧುಗಳನೆಂಬರ್
ಸೇವಿಸುವರವನೆ ಮತ್ತಂ
ಶ್ರಾವಕತನದಿಂದಮಿಂತುಟಾಗಲೆ ವೇೞ್ದಕುಂ || ೧೧ ||

ಶಿವವಿಷ್ಣುಸೂರ್ಯಶಶಿಲೋ
ಕವೆಂಬಿವೊಳವಲ್ಲದಿಲ್ಲ ಜಿನಲೋಕಮದೆಂ
ಬವರ ನುಡಿ ತಕ್ಕು[ದಲ್ಲದೆ
ಲೆ]ವೊಡೆಯನಪ್ಪಂಗೆ ಬೇಱದೇಕೆಯೊ ಲೋಕಂ || ೧೨ ||

ಧರಣೀತಳದೊಳಗೆ ಮಹೇ
ಶ್ವರರುಂ ವೈದಿಕರೆ ಪಲಬರಲ್ಲದೆ ಜೈನರ್
ಪಿರಿದಿಲ್ಲೆಂಬರದಂತುಟೆ
[ಸಿ]ರಿವಂತರ್ ಕೆಲಬರುೞಿದವರ್ ಪಲವು ತೆಱಂ || ೧೩ ||

ಪಿರಿದುಂ ಸುಲಭಂ ಕಲ್ಲಳ್
ಪರಿಕಿಸುವೊಡೆ ಸುಲಭವಲ್ಲ ಮಾಣಿಕಮೆಂಬಂ
ತಿರೆ ಸುಲಭಮನ್ಯಸಮಯಂ
ಪರಮಸುಖಾವಾಸಮಪ್ಪ ಜೈನಮಸುಲಭಂ || ೧೪ ||

ಬಲ್ಲಹನುಂ ಸಾಮಂತರು
ಮೆಲ್ಲಾ ಪ್ರಜೆಯುಂ ಶಿವಂಗೆ ಭಕ್ತರೆ ಜೈನಂ
ಪೊಲ್ಲಪ್ಪ ಕತದೆ ಕೈಕೊಳ
ಲೊಲ್ಲರ್ ನಾಡವರ್ಗಳದಱಿನೆಂಬರ್ ಮೂರ್ಖರ್ || ೧೫ ||

ಜಿನಧರ್ಮಮೊಳ್ಳಿತಪ್ಪೊಡೆ
ಜನಮೆಲ್ಲಂ ಪೊರ್ದದೇಕೆ ಮಾಣ್ಬ[ರೊ] ಪೇೞಿಂ
ಜನರಾಗಮುಳ್ಳ ಕತದಿಂ
ಜನಮೆಲ್ಲಂ ಶೈವರಪ್ಪರೆಂಬರ್ ಮೂರ್ಖರ್ || ೧೬ ||

ಧನಮುಂ ಧಾನ್ಯಮುಮಕ್ಕುಂ
ತನಯರ್ ಪಲರಪ್ಪರೀಶಭಕ್ತರ್ಗೆಂದುಂ
ಜಿನಸಮಯಂಬೊಕ್ಕವರ್ಗಳ
ಮನೆ ನೆಗೞ್ದೊಡೆಯುಂಟೆ ತೋಱಿಮೆಂಬರ್ ಮೂರ್ಖರ್ || ೧೭ ||

ಬಡತನಮಕ್ಕುಂ ಮೆಯ್ಯುಂ
ಕಿಡುಗುಂ ಮತ್ತಾಯು ಕುಂದುಗುಂ ಜೈನಂಬೊ
ಕ್ಕೊಡೆ ಪೊಲ್ಲೆಂಬರ್ ದೂಷಣೆ
ಯಿಡಲಱಿಯರದರ್ಕೆ ಶೈವರುಂ ವೈದಕರುಂ || ೧೮ ||

|| ಸ್ರ || ಸಿರಿವಂತಂ ತಾನೆನಲ್ ಜೀವಿಸಿದನಿವನೆ ಸದ್ಭಕ್ತಿಯಿಂ ಮುನ್ನೆ ಮಾಹೇ
ಶ್ವರನಾಗಿರ್ದಂದು ಮತ್ತಾರ್ಹತದೊಳೆಸಗಲೀತಂಗೆ ದಾರಿದ್ರ್ಯಮಾಯ್ತೆಂ
ದರೆಬರ್ ಮೂಢಾತ್ಮರಪ್ಪರ್ ಸಿರಿಯುಮವನ ದಾರಿದ್ರ್ಯಮುಂ ಪೂರ್ವಜನ್ಮಾಂ
ತರಕರ್ಮ ಮತ್ತದಂ ಬಿತ್ತಿದನೆ ಬೆಳಸನುಣ್ಬಂದಿಂದುಣ್ಬನಾತ್ಮಂ || ೧೯ ||

ಈತಂ ವಿವೇಕಿ ಭಾವಕ
ನೀತಂ ಲೇಸಲ್ಲದಂದು ಜಿನಮಾರ್ಗದೊಳಂ
ತೇತರ್ಕೆ ನಡೆವನೆನ್ನದೆ
ಬೂತಿನವೋಲಂದಚಂದಗೆಡೆವರ್ ಧೂರ್ತರ್ || ೨೦ ||

ವರಜಿನಧರ್ಮದೊಳೀತಂ
ಸ್ಥಿರನಾದಂ ಲೇಸುಗೆಯ್ದನೆನ್ನದೆ ತಮ್ಮಂ
ತಿರೆ ಮಾೞ್ಪರೊಲ್ದು ಚಂದನ
ಗೊರವನ ಕತೆಮಾಡಿ ಜೈನರಂ ದುಶ್ಚರಿತರ್ || ೨೧ ||

ತಮ್ಮಂತಿರೆ ಮಾಡಲ್ ಪಿರಿ
ದುಂ ಮಱಗುವರೆಲ್ಲರೀತನುತ್ತಮನಾದಂ
ನಮ್ಮೀ ಕುಲದೊಳಗೆಂಬುದ
ನೇಂ ಮಱೆದುಂ ನುಡಿಯಲಾಪರೇ ಪಾಪಿಷ್ಠರ್ ೨೨ ||

ತಾಂ ತಿರಿವ ಗೊರವಿ ಬೆನಕನು
ಮಂ ತಿರಿಸಿದಳೆಂಬ ಕಥೆಯೊಳಱಿವಿಲ್ಲದೆ ಕೆ
ಟ್ಟಂತುಂ ನಿಲ್ಲದೆ ಜೈನರು
ಮೇಂ ತಮ್ಮವೊಲಾಗೆ ಮಾಡಲೞ್ತಿಗರರೆಬರ್ || ೨೩ ||

ನಿಟ್ಟೆಯೊಳೆ ಸಂಜೆವಾಸಂ
ಕೆಟ್ಟನಿವಂ ವಿಪ್ರಜೈನನೆನವೇಡಱನಂ
ಬಿಟ್ಟೂಳ್ವ ಸಂಜೆಮಂತ್ರದ
ಪುಟ್ಟಿದ ಮನೆ ಪೊಲ್ಲ ವೇದಮದಱಿಂದೊಲ್ಲಂ || ೨೪ ||

ಪುಟ್ಟಲ್ ಪಡೆಯದ ಕುಲದೊಳ್
ಪುಟ್ಟಿಯುಮಾ ಸಂಜೆಮೀಹಮೆಂಬಿವನೆಲ್ಲಂ
ಟ್ಟು ಸವಣರನೆ ಕೂಡಿಯೆ
ಕೆಟ್ಟಂ ಕುಲದಿಂದೆ ಕೆಟ್ಟನೆಂಬರ್ ಪಾರ್ವರ್ || ೨೫ ||

ಶ್ರಾವಕರಾದೊಡೆ ಸಾಲ್ಗುಂ
ದೇವಂ ತನಗಿಲ್ಲ ಶೂದ್ರತಳಿಗೆಯೊಳುಂಬರ್
ಭಾವಿಸುವರಲ್ಲ ಕುಲಮಂ
ಶ್ರಾವಕರಿಂ ಕಿಡುವರೆಂಬರಱಗುಲಿ ಪಾರ್ವರ್ || ೨೬ ||

ಅನುಪಮರತ್ನತ್ರಮಂ
ಡನನಮಳನುತ್ತಮಂ ಪವಿತ್ರಾತ್ಮನೆನಿ
ಪ್ಪ ನರಂ ಕಿಡುಕಂ ಗಡ ಪೊಲೆ
ಯನಂದದಿಂ ಪೇಸದೆಸಪನುತ್ತಮನೆ ಗಡಂ || ೨೭ ||

ಸಲೆ ಕಿರ್ಚು ದೈವಮೆಂಬರ್
ಕೊಲೆಯಾ[ಡಂ] ವೇದಮೆಂಬರಡಗಂ ತಿಂದುಂ
ನಲಿವುದು ಚರಿತ್ರಮೆಂಬರ್
ಮಲಿನಾತ್ಮರ್ ತಮ್ಮ ಕೆಟ್ಟ ಕೇಡಂ ಕಾಣರ್ || ೨೮ ||

ಕೊಲೆ ಹೊಲೆಯಿಲ್ಲದ ಧರ್ಮ[ವ]
ಸಲೆ ನೆಗೞ್ವುದು ನರಕಹೇತುವೆಂಬರ್ ಪಿರಿದುಂ
ಕೊಲೆ ಹೊಲೆಯುಳ್ಳಱನಂ ಪೊ
ರ್ದಲೆ ಸುಖಹೇತುವೆಂಬರಾಱಡಿಕಾಱರ್ || ೨೯ ||

ಅಮಳಿನ ಜಿನಧರ್ಮಂ ಪೊ
ಲ್ಲ ಮಲಿನಮಪ್ಪನ್ಯಧರ್ಮಮೊಳ್ಳಿತ್ತೆಂದಾ
ದಮೆ ಮೆಚ್ಚಿದಂದದಿಂ ನುಡಿ
ವ ಮನುಷ್ಯಂ ಶ್ವೇತಕೃಷ್ಣಕಾರಕನಲ್ಲಾ || ೩೦ ||

ಪಲತೆಱದಿಂ ಸನ್ಮಾರ್ಗದಿ
ನಲಸದೆ ನಡೆವವರ್ಗಲೊಳ್ದು ಜೈನವ್ರತಮಂ
ಸಲಿಸಲ್ ತಾಮಾಱದೆ ನುಡಿ
ಯಲುಮಾಗದು ಜೈನಸಮಯಿಯೊಡನೆಂದೂಳ್ವರ್ || ೩೧ ||

ಮಲಮು ತಳೆವರ್ ಪಲ್ಲಂ
ಸುಲಿಯರ್ ನಿಂದುಣ್ಬರುಟ್ಟುದಂ ಬಿಟ್ಟಿರ್ಪರ್
ತಲೆವಱಿವರೆಂದು ಪೞಿವರ್
ಮಲಿನಾತ್ಮರ್ ಘೋರವೀರತಪಮೆಂದಱಿಯರ್ || ೩೨ ||

ಆರಾನುಂ ನಿಲಿಸಿದೊಡಾ
ಹಾರಂಗೊಂಡಲ್ಲಿ ನೀರನಾಗಳೆ ಕುಡಿವರ್
ವೀರಬ್ರತಮೆಂದಱಿಯರ್
ನೀರಂ ಕಾಱಿದೊಡೆ ಕುಡಿಯರೆಂಬರ್ ಕಷ್ಟರ್ || ೩೩ ||

|| ಸ್ರ || ನಡೆವಾಗಳ್ ಜೀವಸಂಘಾತಮನವಯದಿಂ ಮೆಟ್ಟರೆತ್ತಾನುಮಾರೊಳ್
ನುಡಿವಾಗಳ್ ಸತ್ಯಮಂ ಬಿಟ್ಟಳಿಪಿ ನುಡಿಯರೇಗೆಯ್ದೊಡಂ ಪಾಪದತ್ತಲ್
ತೊಡರರ್ ಶುದ್ಧಾತ್ಮರೆಂಬೀ ಪುರುಡಿನೊಳೆನಸುಂ ತಮ್ಮ ಬಳ್ಳಕ್ಕಿ ಹಳ್ಳಂ
ಬಿಡಿದೋಡಲ್ ಜೈನರಂ ಕಂಡೊಡೆ ಕಡುಮುಳಿವರ್ ಕೋಪದಿಂದಾ ಪಾಪಕರ್ಮರ್ || ೩೪ ||

ನೀರಂ ಗಾಳಿಪರುಂಬಾ
ಹಾರಮನಿಂಬಾಗೆ ಸೋದಿಪರ್ ಜಿತದೋಷರ್
ಚಾರಿತ್ರವಂತರಂ ಬಿಡೆ
ಕಾರಣದಿಂ ಭವ್ಯತತಿಗೆ ಮುಳಿವರ್ ಕಷ್ಟರ್ || ೩೫ ||

ಸಚ್ಚರಿತ್ರರಲ್ಲದವರಂ
ಮೆಚ್ಚರ್ ಮತ್ತವರ ಮನೆಯ ಸುಣ್ಣಮನೊಲ್ಲರ್
ಚೆಚ್ಚರಿಗರಲ್ಲರೆನುತುಂ
ಚುಚ್ಚುಳರಾರ್ಹತರ್ಗೆ ಬಱಿದೆ ಮುಳಿಯುತ್ತಿರ್ಪರ್ || ೩೬ ||

ಉತ್ತಮರನೆ ಮಾಹೇಶ್ವರ
ವೃತ್ತಿಯೊಳೆಸಗುತ್ತುಮಿರ್ದು ಕಳ್ಗುಡಿವವರಂ
ಪತ್ತಿದೊಡೆ ಮುಳಿಯರಾರ್ಹತ
ರತ್ತೆಱಗಿದೊಡಂತೆ ಕಿನಿಸುವರ್ ದುಶ್ಚರಿತರ್ || ೩೭ ||

ಪೊಲೆಯರ ನೆಗೞ್ತೆಯಂದದೆ
ಸಲೆ ನೆಗೞ್ದನನೇನುಮೆನ್ನರಂತೆಂತುಂ ನಿ
ರ್ಮಲಚರಿತರಪ್ಪ ಜೈನರ
ತಲೆಗಂಡೊಡೆ ಬಱಿದೆ ಕಿನಿಸುವರ್ ನಿಭಾಗ್ಯರ್ || ೩೮ ||

ಜ್ಞಾನಿಗಳಂ ನೆಗೞ್ದುತ್ತಮ
ದಾನಿಗಳಂ ಕಂಡು[ಮುಂಡುಮ]ಜ್ಞಾನದೆ ತಾ
ಮಾನೆಯನೇಱಿದರಂದದೆ
ಯೇನಾನುಂ ನುಡಿವರಣಕಮಂ ಪಾಪಿಷ್ಠರ್ || ೩೯ ||

ಬೆಂದ ಮಗಂದಿರ್ ಜೈನದೊ
ಳೆಂದುಂ ನಯದಿಂದೆ ನುಡಿಯರೆಂತುಂ ತಮ್ಮಾ
ಯುಂ ದಲ್ ತಮ್ಮ ಭವಿಷ್ಯಂ
ಕುಂದಲು[ಮಂದಾ]ಗಳಿಕ್ಕಸಕ್ಕಂಗೆಡೆವರ್ || ೪೦ ||

ಜಡತೆಯೊಳೆ ಬೆಂದನಲ್ಲಂ
ಗಡ ಮಳಮಂ ತಿಂದು ಪರಿವನಲ್ಲಂ ವಿಬುಧಂ
ಗಡ ವಿಮಳಚರಿತರಂ ಕಂ
ಡೊಡೆ ಕಾಯ್ದೊಡೆ ತಕ್ಕನೆನಿಸಿದೊಳ್ಳಕ್ಕರಿಗಂ || ೪೧ ||

ಜಿನಗೇಹಂ ಜಿನಬಿಂಬಂ
ಜಿನಾಗಮಂ ಜೈನರೆಂಬ ವಚನಂ ಕಿವಿವೊ
ಕ್ಕನಿತಱಿನಲ್ತಾನಂದಂ
ಜನಿಯಿಸುಗುಂ ಭವ್ಯಸಮಿತಿಗಿದು ನಿರ್ವ್ಯಾಜಂ || ೪೨ ||

ಜಿನದ ಜೈನಾಲಯಮಂ
ಜಿನಮತಮಂ ಜೈನಸಮಯಿಗಳುಮಂ ಪೆಸರ್ಗೊಂ
ಡನಿತಱೊಳೆ ಕಿನಿಸುವಂ ಭ
ವ್ಯನಲ್ಲದಂ ಭವದವಾಗ್ನಿಯೊಳ್ ಬೇವಾತಂ || ೪೩ ||

ಅತಿನಿರ್ಮಳಮೆನಿಸಿದ ಜಿನ
ಮತಮಂ ಸನ್ಮಾರ್ಗದಿಂದೆ ನಡೆವಾ ಭವ್ಯ
ಪ್ರತತಿಯುಮಂ ಪಿರಿದುಂ ಕಾ
ಣುತೆ ನರಕಕ್ಕಿೞಿವ ಮನುಜರಲ್ಲದೆ ಮುಳಿಯರ್ || ೪೪ ||

ಅಡಗಂ ತಿಂದುಂ ಕಳ್ಳಂ
ಕುಡಿದುಂ ಪಲತೆಱದ ಪಾಪಮಂ ಮಾಡುವರಂ
ನಡೆ ನೋಡಿ ಪುಣ್ಯಮೀಕ್ಷಿಸಿ
ದೊಡೆ ಪಾಪಂ ಶುಚಿಗಳಪ್ಪ ಜೈನರನೆಂಬರ್ || ೪೫ ||

ಚಂ || ಬಳರಿಗೆ ಕೊಂಡು ಪೋಗಿ ಕುಱಿಯಂ ತಱಿದಲ್ಲಿಯೆ ತಿಂದು ಪೀರ್ದು ಕ
ಳ್ಗಳನಡಗಿಂಡೆಯಾಡುವರೆ ಮೆಚ್ಚುವರರ್ಚನೆಯಂ ತ್ರಿಲೋಕಮಂ
ಗಳನಿಯಂಗೆ ಜೈನನಿಳಯಕ್ಕತಿಭಕ್ತಿಯಿನೊಯ್ಯೆ ಕಾಣುತುಂ
ಮುಳಿದು ಕನಲ್ವರಂತವರ್ಗೆ ದುಸ್ಸಹನಾರಕದುಃಖಭಾಜನಂ || ೪೬ ||

ಅಡಗಿಂಡೆಯಾಡಿ ಕಳ್ಳಂ
ಕುಡಿದುಂ ಪೊಲೆಯರೊಡಗೂಡಿಯಾಡುವರಂ ಕಂ
ಡೊಡೆ ನಲಿವರಾಗಳುಂ ಕಂ
ಡೊಡೆ ಮುಳಿವ[ರ್] ಸಚ್ಚರಿತ್ರರಂ ದುಶ್ಚರಿತರ್ || ೪೭ ||

ಚರಿತಂಗಳೊಳ್ ನಿಕೃಷ್ಟರ
ಚರಿತಮುಮಂ ದೆಯ್ವದಲ್ಲಿ ಪಶುವಂ
ಪಿರಿದಾನುಮೊಲ್ವರುತ್ತಮ
ಚರಿತ್ರರಂ ಜಿನರನೊಲ್ವರೇ ಪಾಪಿಷ್ಠರ್ || ೪೮ ||

|| ಸ್ರ || ಪದಪಿಂ ಸನ್ಮಾರ್ಗದಿಂದಂ ನಡೆದು ಕುಪಥಮಂ ಬಿಟ್ಟು ನಿಸ್ಸೀಮಸೌಖ್ಯಾ
ಸ್ಪದಮಂ ಪೇೞ್ವಾ ಮಹಾಭವ್ಯರ ಸುಚರಿತಮಂ ಕಂಡು ದುರ್ಮಾರ್ಗಮಂ ಪೊ
ರ್ದಿದವಂದಿರ್ ತನ್ಮಹಾಭಾಗರನವಯವದಿಂ ಕೆಟಟರೆಂದೂಳ್ವರತ್ಯು
ಗ್ರ ದವಾಗ್ನಿಸ್ಥರ್ ವನಾಂತಸ್ಥರನಕಟಕಟಾ ಬೆಂದರೆಂಬಂದದಿಂದಂ || ೪೯ ||

ಮಿಕ್ಕ ಗುಣಂಗಳ ಭವ್ಯರ
ನುಕ್ಕೆವನಜ್ಞಾನದಿಂದೆ ಕಿಡೆ ನುಡಿವುದೆ ಬೆ
ಟ್ಟಕ್ಕೆ ನರಿಯೂಳ್ವ ಮಾೞ್ಕೆವೊ
ಲಕ್ಕುಂ ಇತರರ ಮಹತ್ತ್ವಮೇಂ ಕೆಟ್ಟಪುದೇ || ೫೦ ||

ಮಚ್ಚರದಿಂ ಜಿನಮತಮಂ
[ಚು]ಚ್ಚಳನಪ್ಪನ್ಯಸಮಯಿ ಪೊಲ್ಲೆಂದೊಡದೇಂ
ಪೊಚ್ಚಂಬೋಕುಮೆ ವಾಯಸ
ಮೆಚ್ಚಮನಿಕ್ಕಿದೊಡೆ ವಾರ್ಧಿಗಕ್ಕುಮೆ ಭಂಗಂ || ೫೧ ||

ಕಿಡಿಪೆಂ ಕರ್ಮಮನೊಳ್ಪಂ
ಪಡೆವೆನೆನುತ್ತಿರಲಾತ್ಮನಾತ್ಮನ ಕಾಲಂ
ಪಿಡಿದು ದಱದಱನೆ ಕರ್ಮಂ
ಕಡುಪಿಂದೆೞೆದೊಯ್ದು ನೂಂಕುಗುಂ ಸಂಸೃತಿಯೊಳ್ || ೫೨ ||

|| ಮತಿಹೀನರ್ ಕೆಲರಕ್ಕಟೂರ್ಧ್ವಗತಿಗೊಯ್ಯಲ್ಕಾರ್ಪ ಜೈನೋದಿತ
ಬ್ರತಮಂ ಕೈಕೊಳಲಾಱದೆಯ್ದೆ ಕಮತಾಚಾರಂಗಳಿಂ ಸಂದಧೋ
ಗತಿಯಂ ಬೇಗಮೆ ಸಾರ್ವರಂತುಟೆ ದಲಿನ್ನೆಂತಪ್ಪನುಂ ಸಂದಧೋ
ಗತನಾಗಿರ್ದಪನೊರ್ಮೊೞಂ ನೆಗೆದಿರಲ್ಕೆಂತಪ್ಪನುಂ ಬಲ್ಲನೇ || ೫೩ ||

ಬಿಡದನ್ಯಮಾರ್ಗಧರ್ಮದೆ
ನಡೆವಂದದೆ ಜೈನಧರ್ಮಮಾರ್ಗದೊಳೆಂತುಂ
ನಡೆಯಲ್ ಬರ್ಕುಮೆ ಪಾಪಿಗೆ
ಕಡಲೆಗಳಂ ತಿಂಬ ಮೊಗ್ಗು ಕಲ್ಗಳೊಳುಂಟೇ || ೫೪ ||

ಜಿನಮಾರ್ಗಮನೊಲ್ಲದೆ ಬಿ
ಟ್ಟು ನಂಬಿ ಲೋಗರ ಕುಮಾರ್ಗದೊಳ್ ನಡೆದಿನ್ನಿಂ
ದ್ರನೆನಪ್ಪೆನೆಂಬನೆಸಕಂ
ಕನಸಿನ ಬತ್ತಕ್ಕೆ ಗೋಣಿಯಾಂಪಂತಕ್ಕುಂ || ೫೫ ||

ಮಳಿನಾತ್ಮಂ ಧರ್ಮದ್ವಿಷ
ನಳಿಕನೆನಿಪ್ಪಾ ಕುದೃಷ್ಟಿಯಂ ಕಂಡಿನಿಸುಂ
ಮುಳಿಯಂ ಲಬ್ಧಿವಿಹೀನಂ
ಖಳಕರ್ಮಾಗ್ರಸ್ಥನೆನ್ಗೆ ದರ್ಶನಶುದ್ಧಂ || ೫೬ ||

ಅಧನಂ ನಿಧೀಯಂ ಪಡೆದಿ
ರ್ದ ಧಾರ್ಮಿಕಂಗಂಜುವಂತೆ ಜೈನಬ್ರತಮಂ
ನಿಧಿಯಂ ಪಡೆದಾ ಮಾನವ
ನಧಾರ್ಮಿಕಂಗಂಜಿ ಮು[ಚ್ಚಿ]ಯನುಭವಿಪನದಂ || ೫೭ ||

ತೆಱನಱಿಯದೊಂ[ದವಿಂ]ದಂ
ಜಱುಚುವುದುಂ ಸಚ್ಚರಿತ್ರರಂ [ಮ]ಚ್ಚದುದಂ
ಪ[ಱಗು]ತನಂ ನಿಜವೆನಿಪುದು
ಮಱಗುಲಿಯಪ್ಪಂಗೆ ಸಹಜಮಿವಿನಿತುಂ || ೫೮ ||

|| ದೂಷಿಸಿದಪ್ಪರೆಲ್ಲರುಮನಾಗಳುಮಾರ್ಹತರೆಂಬರಂತವರ್
ದೂಷಿಸಿದಪ್ಪರೇಂ ಬಱಿದೆ ತಮ್ಮ ನೆಗೞ್ತೆಗಳಲ್ತೆ ತಮ್ಮುಮಂ
ದೂಷಿಸಿದಪ್ಪುವಲ್ಲಮೆ ವಿಶುದ್ಧಚರಿತ್ರರೆನಿಪ್ಪ ಜೈನರಂ
ದೂಷಿಸಲಾರ್ಗೆ ವಂದಪದೊ ನಿರ್ಮಳರಂ ಬ್ರತಯುಕ್ತರಪ್ಪರಂ || ೫೯ ||

ಚಳಮತಿಗೆ ಧರ್ಮಮಂ ನಿ
ರ್ಮಳಮಪ್ಪಂತಾಗಿ ತಿಳಿಪುತಿರ್ದೊಡಮೆಂತುಂ
ತಿಳಿಯದನಂತುಟೆ ತಿಳಿಗುಮೆ
ದೊೞೆವಾವಿಂಗೆನಿತನೋದೆಯುಂ ಗಾರುಡಮಂ || ೬೦ ||

ಮುದುಗುದುರೆ ತಿರ್ದೆ ಬಡವಾ
ದುದೆಂಬ ತೆಱದಿಂ ಯಥೇಷ್ಟನಂ ಸದ್ಗುರುಗಳ್
ಮಿದಿಯುತ್ತಿರ್ದೊಡಮೆಂತುಂ
ಮೃದುವಪ್ಪನೆ ಗುಣದೊಳೊಂದಿಯುಂ ನಿಂದಪನೇ || ೬೧ ||

ಪುಟ್ಟುವ ಪೊಂದುವ ರುಜೆಗಿದೆ
ನೆಟ್ಟನೆ ಮರ್ದೆನಿಸಿ ನೆಗೞ್ದ ಜಿನಶಾಸನಮಂ
ಬಿಟ್ಟುೞಿದುದಱೊಳೆಸಗುವವಂ
ಪುಟ್ಟದೆ ಮಾಣ್ಬನೆ ಭವಾಬ್ದಿಯೊಳ್ ಮತಿಹೀನಂ || ೬೨ ||

ಯಮನೆಂಬ ಸೊರೆಮೊಗಂ ಬಂ
ದು ಮುೞುಗಿಸಲ್ ಜನ್ಮಜಳಧಿಯೊಳ್ ದೇಹಬಹಿ
ತ್ರಮದೊಡೆಯೆ ಜೈನಮೆಂಬಾ
ಪ್ರಮಾದವಲಗೆಯನೆ ಪಿಡಿಯದವನಡಿಗಿೞಿಗುಂ || ೬೩ ||

ಒಳ್ಳಿದನೆನಿಸದೆ ಬೞ್ದುಂ
ಕಳ್ಳರೊಳೊಡಗೂಡಿಯುಂ ಮಹಾತಪಮಂ ಕೈ
ಕೊಳ್ಳದೆ ನರಕದೊಳೞ್ದುಂ
ಕಳ್ಳನ ತಾಯಂತೆ ಮಱುಗುತಿರ್ಪುದೆ ಕಡೆಯೊಳ್ || ೬೪ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಜರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳ ಕುದೃಷ್ಟಿಲಕ್ಷಣನಿರೂಪಣಂ ತ್ರಯೋದಶಾಧಿಕಾರಂ