ಹರಿಹರಕಮಳಾಸನರೆಂ
ಬರ ನೆಗೞ್ವ ನೆಗೞ್ತಿಯಿಂದೆ ಸರ್ವಜ್ಞತ್ವಂ
ದೊರೆಕೊಂಡುದೆಂದು ನಿರುತಂ
ಪರಮನ ಮುನ್ನಱಿದು ಬೞಿಕೆ ಸೇವಿಪುದವರಂ || ೧೯೩ ||

ಸಂಸಾರಿಜೀವನೀ ತೆಱ
ದಿಂ ಸಾರ್ದಂ ಲಬ್ಧಿ ಕೂಡೆ ಸನ್ಮಾರ್ಗಮನಾ
ದಂ ಸೂಕ್ತದತ್ರಣಱಿವಿಂ
ದಂ ಸಮ್ಯಕ್ ದೃಷ್ಟಿಯಾಗಿ ತಪಮಂ ಕೊಂಡಂ || ೧೯೪ ||

ಇಂತಪ್ಪ ತಪದೊಳೆಸಗಿದ
ರಿಂತಪ್ಪ ಗುಣಂಗಳೊಡನೆ ಕೂಡಿದರೊಳ್ಪಿಂ
ದಿಂತಪ್ಪೆಡಗೆಯ್ದಿದರೆಂ
ದಿಂತಱಿದಾಪ್ತರುಮನಱಿದು ಪೂಜಿಪುದಱಿವಂ || ೧೯೫ ||

ಈ ತೆಱದಿಂದಂ ಕೆಡಿಸಿದ
ನೀ ತೆಱದಘಚಯಮನಿನಿತು ಬೋಧಾದಿ ಗುಣ
ವ್ರಾತದೊಳೊಂದಿದನೆಂದೆಂ
ದೀ ತೆಱದಿಂ ತಿಳಿವುದಾಪ್ತರಪ್ಪರೊಳೆಲ್ಲಂ || ೧೯೬ ||

ಇದು ದೆಯ್ವಂ ತಾನಿ[ದು] ದೆ
ಯ್ವದ ಸದ್ಗುಣಮೆಂತುಟೆಂದು ನೋೞ್ಪೊಡಮಿನ್ನಿಂ
ತಿದು ದೋಷದೊಳೆನಿಸಿದ ದೆ
ಯ್ವ[ದೊಳಂ] ತಾನಱಿದು ಸೇವಿಪುದು ವಂತಿವಂತಂ || ೧೯೭ ||

ಜ್ಞಾನಮಯಂ ನಿರ್ಮಳನಖಿ
ಳಾನಂದಕರಂ ಗುಣಾಂಬುನೀರಧಿ ಮುಕ್ತಿ
ಶ್ರೀನಾರೀವರನೆಂಬಭಿ
ಧಾನಮನುಳ್ಳಾತನಾಪ್ತನುೞಿದವನಾಪ್ತಂ || ೧೯೮ ||

ಪಿರಿದುಂ ಕೋಟಲೆಗೊಳಿಸುವ
ದುರಿತಾರಾತಿಗಳನಾವಗಂ ಗೆಲ್ದುದಱಿಂ
ದರಹಂತನೆಂಬ ನಾಮಂ
ಪರಮಜಿನಂಗಲ್ಲದುೞಿದರೊಳ್ ಸಂದಪುದೇ || ೧೯೯ ||

ತ್ರಿಜಗನ್ನಾಥಂಗನಘಂ
ಗೆ ಜಿನೇಂದ್ರಂಗಾತ್ಮ ಜನಿತಮತ್ಯಂತಸುಖಂ
ನಿಜಮಲ್ಲದೆ ಸಂಸಾರಿಗ
ಳಜಹರಿಹರಬುದ್ಧಂ ಸೂರ್ಯರೊಳ್ ಕೂಡುಗುಮೇ || ೨೦೦ ||

ಅಱಿವಿನ ಕಾಣ್ಕೆಯ ಸೌಖ್ಯದ
ನೆಱವಿಯೊಳೊಂದಿಪ್ಪನಾಪ್ತನಲ್ಲದೆ ಸತತಂ
ಪೆಱವಱಿನಪ್ಪಲ್ಪಸುಖ
ಕ್ಕೆಱಗಿರ್ಪವರಾಪ್ತರಲ್ಲರಜ್ಞಾನಯುತರ್ || ೨೦೧ ||

ಆನಂದಮೂರ್ತಿಯೆಂದ
ಜ್ಞಾನಿಗಳಾರ್ತದೊಳೆ ಬೇವನಂ ಬಣ್ಣಿಪರೊ
ಲ್ದಾನಂದಮೂರ್ತಿಯೆಂಬಭಿ
ಧಾನಂ ಜಿನನಲ್ಲದವರೊಳೇ ಸಂದಪುದೇ || ೨೦೨ ||

ಉಟ್ಟು ತೊಟ್ಟುಂ ತಿಳಕಮ
ನಿಟ್ಟುಂ ಪೆಂಡಿರನೆ ರಾಗದಿಂದೆರ್ದೆಯೊಳ್ ತಂ
ದಿಟ್ಟುಂ ನಲಿವವರಕ್ಕಟ
ಕೊಟ್ಟಲ್ಲದೆ ಮಾಣರಿದಿರ್ಗೆ ಮುಕ್ತಿಶ್ರೀಯಂ || ೨೦೩ ||

ವನಿತೆಯರ ಸುತರ ಮೋಹದಿ
ನನವರತಂ ಮಱುಗುತಿರ್ಪ ಸಂಸಾರಿಯನಾ
ಪ್ತನೆನುತ್ತಿರ್ಪವರಿಂತೀ
ಮನುಜರುಮಂ ದೈವಮೆನ್ನದಿರ್ಪುದಿದೇನೋ || ೨೦೪ ||

ಪರಸಮಯದ ದೆಯ್ವಕ್ಕಂ
ಪರಸಮಯದ ದೇವ ಋಷಿ ಸಮೂಹಕ್ಕಂ ಪೆಂ
ಡಿರ್ ಮಕ್ಕಳುಮೊಳರಾಯ್ತಾ
ಪ್ತರಿರ್ಕೆ ಮುನಿಗಳ್ಗೆ ಸಲ್ಲ ಜಿನಶಾಸನದೊಳ್ || ೨೦೫ ||

ಈ ತೆಱದಿ ಚರಿತಮಂ ನೆಗ
ೞ್ವಾತಂ ಸಂಸಾರಿಯಲ್ಲದಾಪ್ತಂ ತಾನ
ಲ್ಲಾತನನಾರಾಧಿಸುವವ
ನೇತೆಱದಿಂ ಪಡೆಯಲೆಂತುಮಱಿವನೆ ಸುಖಮಂ || ೨೦೬ ||

ಸ್ವಾರ್ಥಂ ಸದ್ದೃಷ್ಟಿತ್ವಂ
ವ್ಯರ್ಥಂ ಮಿಥ್ಯಾತ್ಮಮೆಂದು ನಿಶ್ಚಯಿಸುವವಂ
ಸ್ವಾರ್ಥಪರನಲ್ಲದಾತಂ
ಸ್ವಾರ್ಥಭ್ರಾಂತಂ ವಿವೇಕಶೂನ್ಯನಧನ್ಯಂ || ೨೦೭ ||

ಚಂ || ಹರಿಹರಪದ್ಮ ಸಂಭವರ ಮೂರ್ತಿಗಳೊಂದೆನುತಿರ್ಪರಲ್ಲಿಯುಂ
ಹರನೆ ಗಡಂ ಪಿತಾಮಹಕಪಾಳದೊಳುಂಬನೆನುತ್ತುಮಿರ್ಪರಾ
ಮುರಹರನಂಗಮಂ ಪೆಗಲೊಳಿಟ್ಟು ತೋೞಲ್ವರುತಿರ್ಪನೆಂಬರೀ
ಧರೆಯ ಮನುಷ್ಯರೆಂತುಮಱಿಯೆಂ ದಿಟ[ಮಲ್ತ]ದನೆಂತು ನಂಬುವರ್ || ೨೦೮ ||

|| ಕರಿಕಂ ಶ್ರೀಪತಿ ಹೇಮವರ್ಣನಜನೀಶಂ ಶ್ವೇತವರ್ಣಂ ಮುಖಂ
ಮುರವಿಧ್ವಂಸಿಗದೊಂದೆ ನಾಲ್ಕುಮುಖಮಾ ಬ್ರಹ್ಮಂಗೆ ಪಂಚಾಸ್ಯಮಾ
ಗಿರಿಜೇಶಂಗೆ ಬೞಿಕ್ಕೆ ಮೂವರೊಡಲುಂ ಜೀವಂಗಳುಂ ಚಿತ್ತಮುಂ
ಪರಿಣಾಮಂಗಳುಮೊಂದೆಯಲ್ಲ ಬೞಿಕೆಂತೊಂದಾದರಾ ಮೂವರುಂ || ೨೦೯ ||

ಮೃಡ ಹರಿ ವಿರಿಂಚಿಗಳ್ ಮುಂ
ಪಡೆದರೊ ಕುಲವೞಿಯಿದಲ್ಲ ಪೊಂಗೊಟ್ಟುಂ ಮೇಣ್
ಪಡೆದರೊ ವರದಿಂದಂ ಮೇಣ್
ಪಡೆದರೊ ದೇವತ್ವಮಂ ವಿಚಾರಿಸುವುದಿದಂ || ೨೧೦ ||

ಚಂ || ಕುಲವೞಿಯಿಂದೆ ಮೇಣ್ ಪಡೆದರಪ್ಪೊಡೆ ದೇವರೆನಿಪ್ಪ ರೂಢಿಯಿಂ
ನಲಿಗೆಮ ಗೋಪಿಗಂ ಕ್ರಮದೆ ಪುಟ್ಟಿದರಿರ್ವರಿನಾ ಮಹೇಶ್ವರಂ
ಬೆಲೆಗಳನಿತ್ತೊಡಿಲ್ಲ ತಪವಿಲ್ಲ [ವಿ]ರಾಗಿಗಳೆಂತುಮಿಲ್ಲ ಭೂ
ತಳದವರೇಕೆ ದೇವತನಮಂ ಬಱಿದೇಱಿಪರಯ್ಯ ಮೂವರೊಳ್ || ೨೧೧ ||

|| ಪಲರುಂ ಬ್ರಹ್ಮ ರಡಂಗೆ ಕೋಟಿಯುಗಪರ್ಯಂತಂಬರಂ ವಿಷ್ಣಗಳ್
ಪಲರುಂ ಸಾವುತಿರಲ್ಕೆ ರುದ್ರನೞಿವಂ ತಾನೊರ್ವನಾ ರುದ್ರರುಂ
ಪಲರುಂ ಸಾವುತಿರಲ್ಕೆ ರೋಮಮುದಿರ್ಗುಂ ದಲ್ ರೋಮಜಂಗೆಂಬರೆಂ
ತೆಲೆ ಪದ್ಮೋದ್ಭಕೃಷ್ಣರುದ್ರರನದೇಂ ದೇವರ್ಕಳೆಂದರ್ಚಿಪರ್ || ೨೧೨ ||

ಏಗೆಯ್ದುಂ ದೂಷಿಸಲಣ
ಮಾಗ[ದದೊ]ರ್ವಂ ಕಪಾಳಿ ತರುವಲಿಯೊರ್ವಂ
ಗೋವಳಸುತ[ನಾ] ಮಗಳೊಡ
[ನೋವುದು] ತ್ರೈಪುರುಷರಾದರೆಂತೊ ಜನಾಪ್ತರ್ || ೨೧೩ ||

ಎಲೆ ಹರಿಹರರುಂ ರೌದ್ರಾ
ವಿಳರಲ್ಲ ದಯಾತ್ಮರೆಂದು ಪೇೞದೊಡೇನೋ
ಕಳಶದ ಮೇಗಣ ತಿಸುಳದ
ವಿಳಾಸಮುಂ ಮಿಱುಪ ಚಕ್ರಮುಂ ಸೂಚಿಸವೇ || ೨೧೪ ||

ನರಸಿಂಹನಾ ಹಿರಣ್ಯಾ
ಸುರನಂ ಗಜದೈತ್ಯನಂ ಹರಂ ಸೀಳ್ದ ಭಯಂ
ಕರರೂಪು ಪೇೞ್ಗುಮಾಯಿ
ರ್ವರ ದಯೆಯಂ ದೇವಗೃಹದ ನೆಲೆಗಳೊಳವ[ರಾ] || ೨೧೫ ||

ಅವರವರ ದೆಯ್ವದಂದಮ
ನವರವರಾಗಮದೊಳವರ ಕಥೆಗಳೊಳಂ ನೋ
ಡುವೊಡವೆ ದೂಷಿಸಿದಪುವಿ
ನ್ನವರನ್ಯರ್ ನುಡಿಯೆ ಮುಳಿವರಾ ಸಮಯದವರ್ || ೨೧೬ ||

ಎಲ್ಲಿಲ್ಲದ ಮಾಂಗಲ್ಯಮ
ನೆಲ್ಲಂ ಸ್ತುತಿಮಾ[ಡೆ] ತಮಗೆ ಪೊಗೞದು ಸಲ್ಗುಂ
ಸಲ್ಲ ಗಡಂ ಲೋಗರದಂ
ಪೊಲ್ಲೆನಲೇನಿಂತದರಸನಾಣೆಯೊ ಪೇೞಿಂ || ೨೧೭ ||

ಉಳ್ಳುದನುಳ್ಳಂತೆಂದೊಡೆ
ಕೊಳ್ಳೆಂದೆತ್ತಲ್ಕೆ ವೇಡ ಮತಿವಂತರ್ ತಾ
ಮೊಳ್ಳಿದನೊಂದೊಡೆ ದೇವರ
ನೊಳ್ಳಿದರಲ್ಲೆಂದು ಪೞಿಯರಂತೇಗೆಯ್ದುಂ || ೨೧೮ ||

[ಸಾಗದು] ದೂಷಿಸಲಣಮುಮ
ದಾಗದು ಹರಿಹರಹಿರಣ್ಯಗರ್ಭರನಾ ವೇ
ದಾಗಮಮಂ ಸ್ಮೃತಿಯುಮನೆಂ
ದಾಗಳುಮೆನುತಿರ್ಪ[ರಿ]ನ್ನವೊಳವೇ ದೆಯ್ವಂ || ೨೧೯ ||

ಮಿಡಿದೊಡೆ ಬಿರಿವುದೆನಿಪ್ಪಾ
ಮಡಕೆಯಲಡಲೆಂತು ಬರ್ಪುದಂತೊಂದಿನಿಸಂ
ನುಡಿಯಮಂ ಸೈರಿಸಲಾಱವು
ಗಡ ದೆಯ್ವಮುಮವರ ತಪಮುಮೇನಾದಪುವೋ || ೨೨೦ ||

ಪೊನ್ನೆಂತುಂ ಪರಿಕಿಸುವೊಡೆ
ಪೊನ್ನಪ್ರೊಡೆ ದೂಷಿಸಲ್ಕೆ ವೇಡೆನಲಾಗಾ
ಪೊನ್ನೆ ಕಿಸುವಪ್ಪೊಡೆಂಬುದು
ತನ್ನಾಪ್ತಂ ಶುದ್ಧನಪ್ಪೊಡೆನಲಾಗಱಿವಂ || ೨೨೧ ||

ಜಿನನಾಥಂಗಂ ಮತ್ತಾ
ನಿನೋಕ್ತಮಪ್ಪಾಗಮಕ್ಕಮಾ ಜಿನಧರ್ಮ
[ಕ್ಕೆ]ನಿತುಂ ದೂಷಣೆಯಿಡಲಱಿ
ವನೆ ದೂಷಣೆಯಿಡುಗೆ ಕೋಟಿದಿನಮುಮನಿತ್ತಂ || ೨೨೨ ||

ದೂಷಿಸಲಱಿವವರುಳ್ಪೊಡೆ
ದೂಷಿಸುಗದನಾಗದೆನ್ನೆವಾವನ್ಯರವೋಲ್
ದೂಷಿಸುವ[ಗೆ]ಡನಿತ್ತೆಂ
ದೋಷಮಿದುಂಟಪ್ಪೊಡೆಂತುಮಾರ್ಹತಮತಮಂ || ೨೨೩ ||

ಪದಿನೆಂಟು ದೋಷದಿಂದಂ
ಪುದಿನನುಂತಾಪ್ತನಲ್ಲದೆಂದೋದುವರ
ಲ್ಲದೆ ದೋಷನಿಚಯದಿಂದಂ
ಪುದಿದರುಮಂ ಬಿಡದೆ ಪೂಜಿಪರ್ ವಿಕಳಾತ್ಮರ್ || ೨೨೪ ||

ಕರ್ಮಾದಿ ದೋಷದೂರಂ
ನಿರ್ಮಳನೆಮ್ಮಾಪ್ತನೆಂದು ಪೊಗೞ್ವರ್ ಪಲರುಂ
ಕರ್ಮದೊ[ಳೆ] ತೊಡರ್ದು ನಮೆವರ
ನೊರ್ಮೆ[ಯೆ] ಮ[ಱಿ]ಯುತ್ತುಮಿರ್ದು ಮಲೆವರ್ ಮೂರ್ಖರ್ || ೨೨೫ ||

ಎಡೆವಿಡದ ದೆಯ್ದು ಧರ್ಮದೊ
ಳಿ[ಡಿ]ದಘಮಂ ತಮ್ಮಮತದೊ[ಳೇ] ಕಂಡುಮದಂ
ಕಡೆಗಣಿಸುವರಂತದೆ ದಲ್
ಕಡೆಗಣಿಸರೆ ತಮ್ಮ ತಾಯ ನಾಣಂ ಕಂಡರ್ || ೨೨೬ ||

ಭಾವಕರಾಗಮದೊಳ್ ಸಂ
ಭಾವಿತಚಿತ್ತರ್ ವಿಚಾರ[ಪರರ]ವರುಂತುಂ
ಭಾವಿಸಿ ತಿಳಿದುಂ ತಮ್ಮಯ
ದೇವರ ಪೊಲ್ಲಮೆಯನಂತುಮಿಂತುಂ ಬಿಡುವರ್ || ೨೨೭ ||

ಚಂ || ಮನದ ವಿಮೋಹದಿಂದೆ ಲವಮಾ ಘನಕಲ್ಪಮಹೀಜಮೆಂದು ಸಾ
ರ್ದನವರತಂ ಮರುಳ್ಗಳರಸಂ ನಮೆವಂತಿರೆ ಸಂಶಯಾತ್ಮ ಕಂ
ಘನತರ ಕರ್ಮಸಂಗತನನಿಷ್ಟಸುಖಪ್ರದನೆಂದು ನಚ್ಚಿ ಕೆ
ಮ್ಮನೆ ಬಿಡದರ್ಚಿಪರ್ ಪರಮನೆಂದಭಿಧಾನಮನಿಟ್ಟು ಮೋಹಿತರ್ || ೨೨೮ ||

ದೆಯ್ವಮಿದೆಂದಱಿಯದೆ ಮುಂ
ಗಯ್ವಲದಿಂ ಜೈನರಲ್ಲದರ್ ಪಿಡಿದುದೆ ಪೇೞ್
ದೆಯ್ವಮೆನುತ್ತುಂ ಮಿಥ್ಯಾ
ದೆಯ್ವಂಗಳ್ಗೆಱಗಿ ಬಱಿದೆ ಕಿಡುವರ್ ಕಡೆಯೊಳ್ || ೨೨೯ ||

ಮನೆವೆರ್ಗಡೆ ಚಟ್ಟಪನಿಂ
ದೆ ನಿನ್ನೆ ತಾನಾದ ಮೈಲನುಂ ಮಾಳಚಿಯುಂ
ಜನಕಾಪ್ತರಾದರೆನೆ ಮು
ನ್ನಿನ ಹರಿಹರರಾಪ್ತದೇಕೆಯೊ ಮಾಣ್ಬರ್ || ೨೩೦ ||

ಇಂತಪ್ಪನಾಪ್ತನೆಂಬುದ
ನೆಂತುಂ ಭವ್ಯಂಗೆ ತೋಱಿದಾತನ ಮನಮುಂ
ಭ್ರಾಂತಿ[ನೆ] ಪುದಿಯುತ್ತಿರ್ಕುಮ
ನಂತಂ ನೆಱೆ ಮಱಸಿ ದರ್ಶನಾವರಣೀಯಂ || ೨೩೧ ||

ನರನನದೆಂತುಂ ಜ್ಞಾನಾ
ವರಣೀಯಂ ಜಿನರನಱಿಯಲೀಯದೆ ಮುಚ್ಚು
ತ್ತಿರೆ ತತ್ಕರ್ಮದ ವಶದಿಂ
ನರನೊಲ್ಲಂ ದುರಿತಹರನನ[ೞಿ]ವೋದುಗಳಿಂ || ೨೩೨ ||

ನಿಲೆ ವಾಸಿಸಿ ಪಲವು ಭವಂ
ನೆಲಸಿದ ಮಿಥ್ಯಾತ್ವದೊಂದು ದುರ್ವಾಸನೆಯಂ
ಸಲೆ ವಾಸಿಸಿದಾತಂ ಪೊ
ರ್ದಲೊಲ್ಲನತಿವಿಮಳಜೈನನುದ್ವಾಸನೆಯಂ || ೨೩೩ ||

ಒಡಲೊಳ್ ಪತ್ತಿರ್ದಸುವಂ
ಬಿಡೆ ಪೊಡೆನೋವೆಂತುಟಂತೆ ಮಿಥ್ಯಾತ್ವಮುಮಂ
ಬಿಡೆಪೆಡೆಯೊಳಕ್ಕುಮದಱಿಂ
ಬಿಡಲಱಿವನೆ ಲಬ್ಧಿಹೀನನೆಂತುಂ ಜೀವಂ || ೨೩೪ ||

ದೂರತರ ಭವ್ಯನಪ್ಪನ
ನೋರಂತೆ ಪಥಕ್ಕೆ ತರ್ಪೆನೆಂಬಂ ಕಲ್ಲೊಳ್
ನಾರೆತ್ತುವನಂ ನೆೞಲೊಳ್
ಪೋರುತ್ತಿರ್ಪವನ ತೆಱನನನುಕರಿಸಿರ್ಕುಂ || ೨೩೫ ||

ನಿಟ್ಟಿಪುದಿದರ್ಕೆ ಮೋಕ್ಷದ
ಬಟ್ಟೆಯನಿಂ [ಕೆಮ್ಮನ]ಱಿಯದೇಂ ಮುಕ್ತಿಯ[ನಿಂ]
ಕೊಟ್ಟು ಕಿಡಿಸಿಹರೆ ಜಿನನಂ
ನಿಟ್ಟೆಯಿನೋಲಗಿಪುದಮಿತಸೌಖ್ಯಮನೊಲ್ವಂ || ೨೩೬ ||

ಪಗರಣಿಗರಂತೆ ಬಹುರೂ
ಪುಗಳಿಂದಾಡುವರನಾಪ್ತರೆಂದಾಪೊತ್ತುಂ
ಬಗೆಯದೆ ಬಗೆವುದು ಬಗೆಗೊಂ
ಡಗಣಿತಗುಣನಿಧಿಯನಮಳನಂ ಜಿನಪತಿಯಂ || ೨೩೭ ||

ಪೊಡೆವಡುವುದಭವಚರಣ
ಕ್ಕೆ ಡೊಂಬ ದ[ಡ್ಡಿ]ಸದ ಪೆಱವು ದೆಯ್ವಂಗಳವೇಂ
ಕುಡುಗುಮೆ ಸುಖಮಂ ನಿರುತಂ
ಕುಡುಗುಂ ಜಿನಚರಣಸೇವೆ ಶಾಶ್ವತಸುಖಮಂ || ೨೩೮ ||

ಸಕಳಂಕಂ ವಿಕಳಾತ್ಮಂ
ವಿಕಾರಿ ಕಲ್ಯಾಣಕಾರಿಯಕ್ಕುಮೆ ಭಕ್ತಂ
ಗಕಳಂಕಾತ್ಮಂ ಪಂಚ
ಪ್ರಕಾರ ಕಲ್ಯಾಣಭಾಗಿಯಪ್ಪನೆ ಮಾೞ್ಕುಂ || ೨೩೯ ||

ದಯೆಯಿಂದಮನಂತಚತು
ಷ್ಟಯಾತ್ಮಕನೆ ಕುಡುಗುಮನಿಶಮಾರಾಧಿಸುವಂ
ಗೆ ಯಥಾರ್ಥಮನಂತಚತು
ಷ್ಟಯಮಂ ಸಂಸಾರಿಜೀವನೇನಂ ಕುಡುಗಂ || ೨೪೦ ||

ಶಾಂತೀಶನೆ ಮಾೞ್ಕುಂ ತಾಂ
ಶಾಂತಿಯನುೞಿದಾತನಾರ್ತರೌದ್ರಾನ್ವಿತನುಂ
ಶಾಂತಿಯನೆರೆದಂಗೀವು[ದ]
ಶಾಂತಿಯೆ ತನಗಿಲ್ಲದಾತನೇನಂ ಮಾೞ್ಕುಂ || ೨೪೧ ||

ಪರಮತಪೋನುಷ್ಠಾನದೆ
ನೆರೆದಂ ಮುಂ ಮುಕ್ತಿರಮೆಯೊಳಿನಿಪನೆ ಕುಡುಗುಂ
ವರಮುಕ್ತಿಶ್ರೀಯಂ ತಾ
ನೆ ರಾಗಿಯಪ್ಪಂ ಪೆಱಂಗದೇನಂ ಕುಡುಗಂ || ೨೪೨ ||

ತನಗಿಲ್ಲದ ದೆಯ್ವಂ ಮ
ತ್ತಿನವಂಗಿತ್ತಪುದೆ ವರವನೆಂಬೊಲೊಳ್ಪಂ
ತನಗಾಗಿಸಲಾಱದ ದೇ
ವನಿಕಾಯಂ ಪೆಱರ್ಗೆ ಮಾಡಿದಪ್ಪುದೆ ಸುಖಮಂ || ೨೪೩ ||

ಜಿನನಲ್ಲದ ಸಂಸಾರಿಗ
ಳನೆ ಮೂಢರ್ ದೇವರೆಂದು ನಂಬಿರ್ದೊಡಮಿ
ರ್ದನಿತಲ್ಲದೆ ಫಲಮಿಲ್ಲೆಂ
ತೆನೆ ತುದಿಯೊಳ್ ಕಾಜು ಕಾಜೆ ಮಣಿ ಮಣಿಯೆ ವಲಂ || ೨೪೪ ||

ಉಡದ ಬೆಡಂಗು ಪೆಂಡಿರೊ
ಳೊಡಗೂಡದ ಸುಖಮುಮಾಯುಧಂಗಳನೆಂತುಂ
ಪಿಡಿಯದ ವೀರಮುಮುಣ್ಣದ
ಕಡುದಣಿವುಂ ನಿನಗೆ ಸಹಜಮರುಹದ್ದೇವಾ || ೨೪೫ ||

ಚಂ || ಉಡದ ಬೆಡಂಗು ಭೂಷಣವಿಭೂಷಿತವಲ್ಲದ ಚೆಲ್ವು ಕಯ್ದುವಂ
ಪಿಡಿಯದ ವೀರಮುಣ್ಮದ ತನುದ್ಯುತಿ ಪೂಸದ ಕಂಪು ಪೆಂಡಿರೊಳ್
ತೊಡರದಪಾರಭೋಗಸುಖಮೀಹಿತದೆಂಟುಱದಾ ಮಹಾಸ್ಪದಂ
ಪಿಡಿಯದನೆನ್ನದಾರ್ಪು ಜಿನನಾಥನೊಳೊಪ್ಪುಗುಮೆಂತು ನೋೞ್ಪೊಡಂ || ೨೪೬ ||

|| ನಾಡೊಳಗುಳ್ಳ ಕೂ[ಡು]ಕುಳಿ ದೇವರನೋಲಗಿಸುತ್ತುಮಿರ್ದೊಡೇಂ
ಕೂಡುಗುಮೇ ಸುಖಾಸ್ಪದಮದೆತ್ತಣ ಮಾತು ಜಿನೇಂದ್ರಸೇವೆಯಿಂ
ಕೂಡುಗುಮಿಂದ್ರವಂದ್ಯವಿಭವಂ ಮರುಳಣ್ಣ ತೆ ಮಿಕ್ಕುವೇಕೆ ನೂ
ಱಾಡಿನ ಬಾಲಮಂ ಮುರಿದೊಡೇಂ ಮಿಳಿಯಕ್ಕುಮೆ ಕಣ್ಣಿಯಕ್ಕುಮೇ || ೨೪೭ ||

ಪರಹಿತನಲ್ಲ ಜಿನೇಂದ್ರಂ
ಪರಮಾರ್ಥಂ ಸ್ವಹಿತನೆಂಬರಧ್ಯಾತ್ಮವಿದರ್
ಪರಹಿತನಾತ್ಮಹಿತಂ ಜೀ
ವರಾಶಿಹಿತಕಾರಿ ತೀರ್ಥಕರನಪ್ಪುದಱಿಂ || ೨೪೮ ||

|| ಸ್ರ || ಪರಮಶ್ರೀಮಲ್ಲತಾಲಂಬನಲಲಿತತರಾನಲ್ಪಕಲ್ಪದ್ರುಮಂ ದೇ
ವರ ದೇವಂ ಶ್ರೀಜಿನೇಂದ್ರಂ ಕುಡನೊಸೆದು ಜಗಕ್ಕೆಂಬರಜ್ಞಾನಿಗಳ್ ತ
ತ್ಪರಮೇಷ್ಠಿ ವ್ರಾತಾವಾಙ್ಮಾತ್ರದೊಳೆ ಸಕಳಲೋಕೈಕಸಾಮ್ರಾಜ್ಯಸೌಖ್ಯಂ
ದೊರೆಕೊಳ್ಗುಂ ದೇಹಿಗೆಂದಂದಭವವಿಭುತೆಯಂ ಬಣ್ಣಿಸಲ್ ಬಲ್ಲನಾವಂ || ೨೪೯ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಚರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊ[ಳನಾ]ಪ್ತಸ್ವರೂಪನಿರೂಪಣಂ ಅಷ್ಟಮಾಧಿಕಾರಂ