ಕಿ[ಚ್ಚ]ಲ್ಲದುರಿವ ಸಾಸಿಗ
ರಿಚ್ಚೆಗೆ ನೆರವಾಯ್ತು ವೇದಮಿನ್ನೇತಱ್ ಕಾ
ೞ್ಕಿಚ್ಚಿಂಗೆ ಗಾಳಿ ನೆರವನೆ
ಮೆಚ್ಚಿದ ತೆಱದಿಂದೆ ಜಗಮನುರಿಪರೆ ಪಾರ್ವರ್ || ೧೨೧ ||

ದೊರೆಕೊಳ್ಗೆ ಜನ್ನಮದೆ ತಾಂ
ದೊರೆಕೊಳ್ಳದ ಬಡವನಾದೊಡಂ ತಾಂ ಕ್ರತುವಂ
ತಿರಿದುಂ ಮಾಡುವೆವೆಂಬರ್
ತಿರಿದುಂ ನರಕಕ್ಕೆ ಪರಿವ ತಕ್ಕುಳ್ಳವರ್ಗಳ್ || ೧೨೨ ||

ವಿನಯದೆ ಪೊಡೆಮಟ್ಟೊಡೆ ನಿ
ತನಯನುಮಂ ಜನ್ನಮಿರ್ದ ಜಾ[ಳಿ]ಗೆಯಂ ಸೂ
ಡೆನುತುಂ ತಾಯ್ ಗಡ ಪರಸುವ
[ಳೆ]ನೆ ಪಾಪಮೆ ಪರ[ಮ]ಧರ್ಮಮಾ ದ್ವಿಜರ್ಗೆಲ್ಲಂ || ೧೨೩ ||

ಪೊನ್ನೊಲ್ಲದೊಡಂ ತಿರಿದುಂ
ಜನ್ನಂಮಾೞ್ಪಾ ದುರಾತ್ಮರಿನ್ನೆತ್ತಾನುಂ
ಪೊನ್ನೊಳ್ಳೊಡೆ ಕುಱಿವಿಂಡಂ
ಜನ್ನದ ನೆವದಿಂದೆ ಬಱಿದುಮಾಡರೆ ತಕ್ಕರ್ || ೧೨೪ ||

ಬಯಕೆಗೆ ಪಶುವಂ ಕೊಲ್ವವ
ರಯಸಕ್ಕಂಜುವರೆ ಕೊಂದು ಕೊಳ್ವಾತಂ ಹಿಂ
ಡೆಯ ಕೂೞ್ಗೆ ಹೇಸುವನೆ ನಿ
ರ್ದಯರೆನಿಸಿದ ಕುಪಾತ್ರಕಂಠರೇನಂ ಮಾಡರ್ || ೧೨೫ ||

ಅವಿವೆನ್ನದೆ ದೇಹಿಗಳಾ
ದುವೆಲ್ಲಮಂ ಕೊಂದು ಜನ್ನವಿರವೇೞ್ದಾ ವೇ
ದವನೆ ಪಿಡಿದರ್ಪವಂ ಪೇ
ಸುವನೇ ಪಾಪಕ್ಕೆ ಪಾರ್ವನೆಲ್ಲಂದದೊಳಂ || ೧೨೬ ||

ಪಶುಕರ್ಮಂಗೆಯ್ದನನಿಱಿ
ಯಿಸುವರ್ ಪೊಲೆಯನುಮನರಸರುತ್ತಮರೆಂದುಂ
ಪಶುಕರ್ಮ ಗೆಯ್ದೊಡೆ ದಂ
ಡಿಸರೊಲ್ದುದನಿತ್ತು ಪೂಜಿಪರ್ ಪಾಪಿಷ್ಠರ್ || ೧೨೭ ||

ಮಾಡಿದ ಮಾಡಿಸಿದ ಪೆಱರ್
ಮಾಡಿದ ಹಿಂಸಾದಿ ದೋಷದೊಳ್ ಮೆಚ್ಚುಗೆಯಂ
ಮಾಡಿದ ಪಾಪಂ ಪ್ರಾಣಿಗೆ
ಮಾಡದೆ ಮಾಣ್ದಪುದೆ ಘೋರನಾರಕವಿಧಿಯಂ || ೧೨೮ ||

ಚಂ || ಧರೆಯೊಳಗುಳ್ಳ ದೇಹಿಗಳನೋವದೆ ಘಾತಿಸಿ ಕೂಡೆ ಕಾಯ್ದು ಬಿ
ತ್ತರದೊಳೆ ಸುಟ್ಟು ಮಿಕ್ಕುದನೆ ತಿಂಬುದು ಸ್ವರ್ಗಸುಖಕ್ಕೆ ಹೇತುವೆಂ
ಬರ ಮತದಿಂದೆ ಮಾೞ್ಪುದು ಜೀನೇಶ್ವರನಿಂದಮೆ ಮಾಣ್ದುದೀ ಧರಾ
ಮರಜನಮಿಲ್ಲದಂದು [ಮ]ಖದಿಂ ಜಗದಿಂ ಬಱಿಕೆಯ್ಯದಿರ್ಕುಮೇ || ೧೨೯ ||

ಕೊಲ್ವದಧರ್ಮ ಕೊಂದಂ
ಸಲ್ವಂ ನರಕಕ್ಕೆ ಬೇಗಮೆನೆ ಜಿನಮತದಿಂ
ಕೊಲ್ವುದನುೞಿದರ್ ಪಸುವಂ
ಕೊಲ್ವುದೆ ತಾಂ ಧರ್ಮಮೆಂದು ನೆಗೞ್ವರೊಳರೆಬರ್ || ೧೩೦ ||

ಎಂತುಟೆ ಬೀಜಂ ಭಾವಿಪೊ
ಡಂತುಟೆ ಮೊಳೆಯೆಂಬ ತೆಱದೆ ವೇದಂ ತಾಂ ಮು
ನ್ನೆಂತುಟದು ಪೇೞ್ವ ಧರ್ಮಮ
ದಂತುಟೆಯಕ್ಕುಂ ಪ್ರಶಾಂತಮೇನಾದಪುದೇ
ಕತೆಗಳೊಳೆ ಕೇಳ್ದೊಡೇಕೆಯೊ
ಮತಿವಂತರ್ ಮತ್ತಮವರ ಪೇೞ್ವುದೆ ಗೆಯ್ವರ್ || ೧೩೨ ||

ಪುಸಿಯಂ ದಿಟಮಂ ಧರ್ಮಮ
ನಸದಾಚಾರಮನಹಿಂಸೆಯಂ ಹಿಂಸೆಯನೊಂ
ದಿಸಿ ಜೈನರಲ್ಲದರ್ ಬ
ಣ್ಣಸರಂಗೋದಂತೆ ಧರ್ಮಶಾಸ್ತ್ರಂಬೇೞ್ವರ್ || ೧೩೩ ||

ಎಲ್ಲೆಲ್ಲಿಕೃಷ್ಣಮೃಗಮುಂ
ಟಲ್ಲಿಯೆ ಸದ್ಧರ್ಮಮುಂಟು ತದ್ದೇಶದೊಳೆಂ
ದೆಲ್ಲಂ ನುಡಿವರ್ ಮೃಗಮುಂ
ಟಲ್ಲಲ್ಲಿಗೆ ಬೇಡನಾಡಲುಂಟೇ ಧರ್ಮಂ || ೧೩೪ ||

ಎರಳೆಗಳಾವಾವೆಡೆಯೊಳ್
ಚರಿಯಿಪುವಾ ಭೂಮಿ ಧರ್ಮಭೂಮಿಯೆ ಗಡ ಪೆ
ರ್ಮರೆಯುಂ ಮದಕರಿಗಳುಮಿ
ರ್ಪರಣ್ಯಮೀ ಧರ್ಮಭೂಮಿಯಾಗದಿದೇನೋ || ೧೩೫ ||

ಕುಟಿಳತೆಯಿಂದಂ ರಾಗೋ
ತ್ಕಟಚಿತ್ತರ್ ಪೇೞ್ದ ಧರ್ಮದಿಂದಂ ಪುಣ್ಯಂ
ಘಟಯಿಸದದಂತೆ ತಂಪೇಂ
ಘಟಿಯಿಸುಗುಮೆ ತೀವ್ರಪಾವಕ್ಕಜ್ವಾಳೆಗಳೊಳ್ || ೧೩೬ ||

ಮೃಗಕುಳದೊಳ್ ಜಳಚರದೊಳ್
ಖಗನಿಚಯದೊಳಿನ್ನವಿನ್ನವಂ ಸೇವಿಪುದ
ಗ್ನಿಗೆ ಹವಿಯಿಕ್ಕಿರೆ ವಿಪ್ರಾ
ಳಿಗಿಕ್ಕಿ ಮಿಕ್ಕಡಗನೆಂಬರಾ ಸ್ಮೃತಿಕಾಱರ್ || ೧೩೭ ||

ದೇವಾಗ್ನಿಪಿತೃಗಳಂ ಭೂ
ದೇವರುಮಂ ತಣಿಪಿ ಮಿಕ್ಕ ಮಾಂಸಮನೆಂದುಂ
ಸೇವಿಸಿದಾತನ ಪುಣ್ಯಮ
ನೇವೊಗೞ್ವದೊ ಪೇೞಿಮೆಂದು ಪೊಗೞ್ವರ್ ಪಾರ್ವರ್ || ೧೩೮ ||

ತಮ್ಮೊಡನೆ ಕೂಡಿ ದೇವ
ರ್ಗಂ ಮಾಂಸಂ ಮದ್ಯಮಧುಗಳೆಂಬವನಿತ್ತು
ತಮ್ಮಯ ನರಕಾಯುಷ್ಯಮು
ಮಂ ಮತ್ತಂ ಪೆರ್ಜಿಸುತ್ತುಮಿರ್ಪರ್ ಮೂಢರ್ || ೧೩೯ ||

ಚಂ || ಒಡಲೊಳದೆಲ್ಲಿಯುಂ ಕ್ಷತಮದಿಲ್ಲದೆ ಸತ್ತುದನೆಲ್ಲಿ ಕಂಡೊಡಂ
ಕಡೆಗಣಿಸಲ್ಕೆ ಸಲ್ಲ ಮೃಗಮಂ ಪಥದೊಳ್ ಮಗುೞ್ದೆತ್ತಿ ತಂದದಂ
ಕಡಿಕಡಿದಟ್ಟು ವಿಪ್ರತತಿಗಿಕ್ಕವುದೊಳ್ಪನೆ ಬೇೞ್ಪನೊಲ್ಲದಂ
ತಡೆಯದೆ ರೌರವಕ್ಕಿೞಿವಣೆಂದುಸಿರ್ವರ್ ಸಲೆ ವೇದಮಾರ್ಗದೊಳ್ || ೧೪೦ ||

ನುಣ್ಣನೆ ನೊಣೆವುದು ಮಾಂಸಮ
ನುಣ್ಣದವಂ ದಿವಮನೆಯ್ದನೆಯ್ದನೆನುತ್ತುಂ
[ತಿ]ಣ್ಣಂ ಕ[ಲಿ]ಸುವರಱನಂ
ಬಣ್ಣಿಸಿ ತಾಂ ಪೇೞ್ದೊಡೆಲ್ಲಿಯುಂ ಸ್ಮೃತಿಕಾಱರ್ || ೧೪೧ ||

ಅಡಗ ನೆಱೆ ತಿಂಬ ಮಧುವಂ
ಕುಡಿವ ಮಹಾತ್ಮಂ ದಿವಕ್ಕೆ ಸಲ್ವಂ ಮಱೆದ
ಪ್ಪೊಡಮುಳ್ಳಿಯನಾಸ್ವಾದಿಸಿ
ದೊಡೆ ಪಾತಕನಕ್ಕುಮಾತನೆಂಬರ್ ತಕ್ಕರ್ || ೧೪೨ ||

ಎನಿತೊಳವಧರ್ಮಮಾರ್ಗಮ
ವನಿತರ್ಕಂ ನೋೞ್ಪೊಡಾವಗುಂ ತಾಮೆ ತವ
ರ್ಮನೆಯೆನಿಪ ವೇದದಿಷ್ಟದೊ
[ಳೆ] ನಡೆವ ಪಾರ್ವಂಗೆ ನೆಗೞಲಾಗದುದುಂಟೇ || ೧೪೩ ||

ಪಲ ತೆಱದ ಮಾಂಸಮಂ ಸಲೆ
ಮೆಲಲಕ್ಕುಂ ಮಱೆದುಮುಳ್ಳಿಯೆಂಬುದನೆಂತುಂ
ಮೆಲಲಾಗದೆಂದು ಪೇೞ್ವಾ
ಮಲಿನಾತ್ಮ ಮಾತುಗೇಳಲಾಗದು ಚದುರಂ || ೧೪೪ ||

ನಾರಾಯಣನವತಾರಂ
ವಾರಾಹಮತ್ಸ್ಯ ಕೂರ್ಮಮೆಂಬಿವೆ ದಿಟಮೆಂ
ದೋರಂತೆ ಪೇೞ್ವರವನೆ ವಿ
ದಾರಿಸಿಯುಂ ತಿನಲುಮಕ್ಕುಮೆಂಬರ್ ತಕ್ಕರ್ || ೧೪೫ ||

ಪೇಸದೆ ಕಂಟಳಿಸದೆ ಬಿಱು
ತೋಸರಿಸದೆ ಮಾಂಸಸೇವೆಗೆಯ್ವನೆ ಮತ್ತಂ
ಪೇಸಿ ಕಿಸುಗುಳಮಿಂದೆಂದೆಂ
ದೋಸರಿಸಿದೊಡವನೆ ವೇದಮಂ ದೂಷಿಸಿದಂ || ೧೪೬ ||

ವೇದಾರ್ಥದಿಂದೆ ನಡೆವವ
ನಾದರದಿಂ ತಿಂಬುದಡಗನೊಲ್ಲದೆ ತೊಱೆದಂ
ವೇದಕ್ಕೆ ಬಾಹ್ಯನಾತಂ
ಬಾದೇನೋ ಪಾರ್ವನಲ್ಲನೆಂಬರ್ ತಕ್ಕರ್ || ೧೪೭ ||

ನರಕದೊಳಾಚಂದ್ರಾರ್ಕಂ
ಬರಮಿ[ರ್ಪ]ನದೊರ್ಮೆ ಮಾಂಸಮಂ ಸೇವಿಸದಾ
ನರನೆಂದೊಡೆಂತೊ ಪಾರ್ವಂ
ನಿರಂತರಂ ತಿನ್ಗೆ ಕಿವಿಯನೆಂಬರ್ ತಕ್ಕರ್ || ೧೪೮ ||

ಮಧುಮಾಂಸಮಿಲ್ಲದಿರ್ದಂ
ದು ಧರಾಮರಸಮಿತಿಯಾಜ್ಯಮುಮನುದ್ದುಮನಾ
ಮಧು ಮಾಂಸಮೆಂದು ಕಲ್ಪಿಪ
ರಧಾರ್ಮಿಕರ್ ಶ್ರಾದ್ಧಮಿಕ್ಕುವೆಡೆಯೊಳ್ ಪಾರ್ವರ್ || ೧೪೯ ||

ಪೊಱಗೊಂದು ಹೆಡಗೆ ಮಣ್ಣಂ
ನೆಱೆ ಶೌಚಂಗೆಯ್ವರೊಳಗೆ ಪಲತೆಱದಡಗಂ
ತುಱುಕುವರಿಂತುಟು ಶೌಚದ
ತೆಱನೀ ಧರೆಯಲ್ಲಿ ಕುಲಕೆ ಬೆಸೆದರ್ಪವರಾ || ೧೫೦ ||

ಬಿಡರಿನಿಸಂ ಜೇನೆಯ್ಯಂ
ಬಿಡರೆನಿಸಂ ಮಾಂಸಸೇವೆಯಂ ಕರವತಿಯಂ
ಬಿಡರೆಯ್ದೆ ಬಿಲ್ವಫಲಮಂ
ಬಿಡರೌದುಂಬರಫಲಂಗಳಂ ವೇದಜಡರ್ || ೧೫೧ ||

ಪುೞುಗಳ ನೀರಂ ಪೇಸದೆ
ಬಳಸುವುದುಂ ಚರ್ಮಭಾಜನಂಗಳ ನೀರಂ
ಬಳಸುವುದುಂ ಸಿದ್ದಿಗೆಯೊಳ್
ಬಳಸುವುದುಂ ವಿಪ್ರತತಿಗೆ ನಚ್ಚಿನ ಚರಿತಂ || ೧೫೨ ||

ಪುೞುವನಿಱುಂಪೆಯನೆಲ್ಲಂ
ಕಳೆದು ಗಡಾ ಕೂೞನುಣ್ಬುದುಂ ಮೆಚ್ಚಿದುದಂ
ಗೞಪುತ್ತುಮುಣ್ಬುದುಂ ಭೂ
ತಳದೊಳ್ ವೈದಿಕರ್ಗಲ್ತೆ ನೋಡ ವಿಹಿತಾಚಾರಂ || ೧೫೩ ||

ತುರಿಪದೆ ಧೋತ್ರಮುಮಂ ಪಾ
ದರಕ್ಕೆಯಂ ಸುತ್ತಿ ತೊಡೆಯ ಕೆೞಗಿಕ್ಕಿರ್ದೊ
ರ್ವರ ತಳಿಗೆಯೆಂಜಲೋರೊ
ರ್ವರ [ಮೇ]ಲುಗೆ ಪಾರ್ವರೆಯ್ದೆ ಛತ್ರದೊಳುಂಬರ್ || ೧೫೪ ||

ಪಾಪಮನೆ ಮಾಡಿ ಜನಕಂ
ಪೋಪದುಮಿತ್ತಿರ್ದ ಪೆಣನನೆತ್ತಲ್ ಸಲ್ಲೆಂ
ದಾಪತ್ತುವಡಿಸಿ ಪುತ್ರನ
ನೀ ಪೊನ್ನಂ ಸುಗತಿಗುಡುವೆಮೆಂಬರ್ ತಕ್ಕರ್ || ೧೫೫ ||

ಕನಸಿನೊಳಂ ಪಾರ್ವಂ ಭೋ
ಜನಮಂ ಬೇಡಿದೊಡೆ ಕೊಟ್ಟೊಡಂದಿನ ದಿವಸಂ
ಮನೆ ಬೇಗುಮೆಂಬರಱಿದಿ
ತ್ತ ನರಂಗೇನಕ್ಕುಮಱಿದುಕೊಳ್ಳುದು ಚದುರಂ (?) || ೧೫೬ ||

ಭ್ರಷ್ಟವ್ರತಂಗಶೌಚಿಗೆ
ನಷ್ಟಾಚಾರಂಗೆ ಪಾರುವಂಗಿತ್ತನ್ನಂ
ಕಷ್ಟಂಬಟ್ಟೆಂ ಮುನ್ನೆ ನಿ
ಕೃಷ್ಟಂ ಮಾಡಿದೆನೊ ಪೇೞಿಮೆಂದು ಗಡೞುಗುಂ || ೧೫೭ ||

ವಿತ್ರಸ್ತದುರಿತನಲ್ಲದ
ಪಾತ್ರಕ್ಕಿಕ್ಕಿದೊಡ ನಿಷ್ಫಲಂ ಬಗೆಯಲದೇಂ
ಚಿತ್ರತರಮೋ ಪ್ರವಾಹೇ
ಮೂತ್ರಿತಮುದವೀಣನೆಂಬಂತೆವೊಲಂ || ೧೫೮ ||

ಪಾವಿಂಗೆ ಪಾಲನೆಱೆದೊಡೆ
ಕೇವಳಮದು ವಿಷಮೆಯಕ್ಕುಮಂತಘಚಯದೊಳ್
ಭಾವಿಸಿದಂಗಿತ್ತುದು ಪಾ
ಪಾವಹಮಲ್ಲದೆ ವಿಶೇಷಫಲಮಾದಪುದೇ || ೧೫೯ ||

ಬಗೆಗೆಟ್ಟು ಕುಪಾತ್ರಕ್ಕಿ
ತ್ತಗಣಿತಧನಮಂ ಕುಭೋಗಭೂಮಿಯನಾದಂ
ಪುಗಲೊಡರಿಪ ಧಾರ್ಮಿಕನ
ಕ್ಕಿಗೊಟ್ಟು ಮಡಗೂೞನುಣ್ಬ ಮರುಳಂ ಪೋಲ್ಕುಂ || ೧೬೦ ||

ಪುಸಿಯೋದುಗಳಿಂದಂ ನಂ
ಬಿಸೆ ನಂಬಿ ಕುಪಾತ್ರದನವಂ ಮಾಡಿದವಂ
ಕಸವರದಿಂ ಮತಿಯಿಂ ಮೇ
ಲಸುಗತಿಯಂ ಕಟ್ಟಿ ಮೂಱು ಕೇಡಿಂ ಕಿಡುಗುಂ || ೧೬೧ ||

ದಯೆ ಧರ್ಮಮನೊಕ್ಕಾ ಪಾ
ಪಿಯೆ ಪಾತ್ರಂ ಎನುತೆ ಕೊಟ್ಟು ಕಿಡದೆ ನಿಸರ್ಗಂ
ದಯೆ ಧರ್ಮಮುಳ್ಳ ಪಾತ್ರ
ಕ್ಕೆ ಯತ್ನದಿಂ ಕುಡುಗೆ ಸೌಖ್ಯಮಂ ಬಯಸುವವಂ || ೧೬೨ ||

ಆರಾಧಿಪ ದೈವಂ ವಿ
ಸ್ತಾರದೆ ಪೇೞ್ವಾಗಮಂಗಳಂತಾ ಧರ್ಮಂ
ಚಾರಿತ್ರಮುಮಱಿವೆಡೆಗಳೊ
ಳಾರಯ್ವೊಡೆ ನಾಡುನಾಡೊಳೊಂದೊಂದಂದಂ || ೧೬೩ ||

ಜಳನಿಧಿಪರಿವೃತಧಾತ್ರೀ
ವಳಯದೊಳಾರಯ್ದು ನೋಡೆ ಜಿನಧರ್ಮಂ ನಿ
ರ್ಮಳಮೊಂದೆ ಮಾರ್ಗಮೆಲದಲಡೆ
ಯೊಳಮದಱಿಂ ಜಿನ ಮಾರ್ಗಮದೆ ಸನ್ಮಾರ್ಗಂ || ೧೬೪ ||

ಆರಾಪ್ತಂ ನಿರ್ಮಳಮಿ
ನ್ನಾರಾಗಮಮಮಳಸಾರಚರಿತಂ ಲೇಸೆಂ
ದಾರಯ್ವೊಡಲ್ಲಿಗಲ್ಲಿಗೆ
ಸಾರಂ ಜಿನಮಾರ್ಗಮುೞಿದುದೆಲ್ಲವಮಾರ್ಗಂ || ೧೬೫ ||

ಇದನಿಂಬಾಗಱಿಗೆ ಕುಮಾ
ರ್ಗದೊಳಾವಂ ಬಿಡದೆ ನಡೆವವಂ ವೈಷ್ಣವನೆಂ
ಬುದು ಮೇಣ್ ಮಾಹೇಶ್ವರನೆಂ
ಬುದು ದೆಯ್ವದ ಧರ್ಮದೊಂದು ತೆಱನಱಿಯದರಂ || ೧೬೬ ||

ಅವರಿವರೆನ್ನದೆ ಮಿಥ್ಯಾ
ತ್ವವಶದೆ ಮಾಹೇಶ್ವರರ್ ದಿಟಕ್ಕೆನೆ ಸಂದಿ
ರ್ದವರೊಳಗೆತ್ತಾನುಂ ಪು
ಣ್ಯವಶದೆ ಸದ್ದೃಷ್ಟಿಯಾದ ಕೆಲಬರೆ ಜೈನರ್ || ೧೬೭ ||

|| ಉರಗೇಂದ್ರಪ್ರಮದಾರ್ಚನಾಕುಸುಮಧೂಲಿಧೂಸರಶ್ರೀಪದಾಂ
ಬುರುಹಂ ಭಕ್ತಿಭರನತಾಮರವಧೂಧಮ್ಮಿಲ್ಲಮಂದಾರ ಸೌಂ
ದರಮಾಲಾರುಚಿರಂ ಜಿನಾಂಘ್ರಿಯುಗಳಂ ದೇವಾಧಿದೇವಂ ಜಿನೇ
ಶ್ವರನೀಗೊಲ್ದು ವಿನೇಯಸಂತತಿಗೆ ಮುಕ್ತಿಶ್ರೀಸುಖಾವಾಪ್ತಿಯಂ || ೧೬೮ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಚರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳ್ ಕುಲಿಂಗಿಕುಚಾರಿತ್ರಸ್ವರೂಪನಿರೂಪಣಂ ಚತುರ್ದಶಾಧಿಕಾರಂ