ನಾರಾಯಣನಾಪ್ತಂ ಗಡ
ಚಾರಿತ್ರಂ ಕರ್ಮ[ಫ]ಳಮನುಂಬುದು ಗಡ ಮ
ತ್ತಾರಿಕ್ಕಿದೊಡುಂಬರ್ ಗಡ
ಭೋರೆನೆ ಸಗ್ಗಕ್ಕೆ ಪರಿಯದಿಪ್ಪರೆ ಭಗವರ್ || ೬೧ ||

ತಿರಿವಲ್ಲಿ ಪಾತ್ರೆಯೊಳ್ ಭ
ಕ್ತರೇನನಿಕ್ಕಿದೊಡಮದೆ ಪವಿತ್ರಂ ಬೌದ್ಧರ್
ಪರಿಹರಿಸಲಾಗದೆಂದೆಂ
ಬರ ಮತಮುಂ ತಪದ ಮಾರ್ಗಮಲ್ಲ ಕುಮಾರ್ಗಂ || ೬೨ ||

ಪಗಲುಮಿರುಳುಂಡು ಮಿಕ್ಕೆರ
ಡಗುೞುಳ್ಳೊಡೆ ಕೊಳ್ವೆವಿಲ್ಲದಂದುಪವಾಸಂ
ಜಗದೊಳಗೆಯುಗ್ರತಪಮುಂ
ಮಿಗಿಲೆಂಬರಸೌಖ್ಯಮಂಬುದಂ ತಾಮಱಿಯರ್ || ೬೩ ||

ಉಣಲಱಿಯಂ ತಂಗೂೞಂ
ಗುಣಮುಳ್ಳ ಗೃಹಸ್ಥನೆಂದೊಡಿಂ ತಪಸಿಗೆ ಪೇ
ೞುಣಲಕ್ಕುಮೆ ತಂಗೂೞ[ನಿ]
ದಣಕಂ ತಂಗೂೞನುಣ್ಬ ಬೌದ್ಧರ ಚರಿತಂ || ೬೪ ||

ತಂಗೂೞೆಂಬುದು ನಿಯಮ
ಸ್ಥಂಗಾಗದು ದೋಷದೂಷ್ಯಮೆನಲೇನಱಿದುಂ
ತಂಗೂೞನುಣ್ಬುದದೆ ನಿಯ
ಮಂ ಗಡ ತುಱುಗಾವ ಗೋವನಕ್ಕುಂ ಬೌದ್ಧಂ || ೬೫ ||

ಆದೆಡೆಯೊಳುಂಡು ನಿಚ್ಚಂ
ಬೀದಿಯೊಳೊಱಗಿರ್ದು ತಾನೆ ದೇವನೆನುತ್ತಿ
ರ್ಪಾ ದೊಡ್ಡನೊಡನೆ ನುಡಿಯಲು
ಮಾದರಿಸಲುಮೆಂತುಮಾಗದಱಿವುಳ್ಳಾತಂ || ೬೬ ||

ಆಚಾರಹೀನನಧಿಕಂ
ನೀಚಂ ಕಳ್ಗುಡಿದು ವಾಸುದೇವನೆನಾನೆಂ
ಬಾ ಚಪಳನೊಡನೆ ಮಱೆದು ಸ
ಮಾಚರಿಸಲುಮಾಗದೆಂಬನುತ್ತಮಜೈನಂ || ೬೭ ||

ಮಿಂಡಾಟಮಾಗಿ ಮೆಚಚಿದ
ಱಂಡೆಯೊಳ್ ನೆರೆದು ವಿಕೃತವೇಷದೆ ಜಗಮಂ
ಕಂಡೆಂ ಜ್ಞಾನಿಯೆನೆಂಬನ
ಮುಂಡಿಂಗೊಳಗಾಗದಿಪ್ಪವಂ ಸತ್ಪುರುಷಂ || ೬೮ ||

ನಡೆವವರಾರುಣ್ಬವರಾರ್
ನುಡಿವವರರಾರ್ ಸರ್ವಮೆಲ್ಲಮೊರ್ವನೆ ಬೊಮ್ಮಂ
ಗಡಮೆಂದು ಮೆಚ್ಚಿದಂದದೆ
ನುಡಿವರ ನುಡಿಗೇಳದಿಪ್ಪುದೆಂದುಂ ಗುಣಿಗಳ್ || ೬೯ ||

ಕುಡುವನೆ ತಾಂ ಕುಡುವುದು ತಾಂ
ಕುಡೆ ಕೊಳ್ವಂ ತಾನೆ ದೇವನಿತ್ತಂ ಕೊಳ್ವಂ
ನುಡಿವವನುಂ ತಾನೆಂಬನ
ನುಡಿಯಂ ಕೈಕೊಳ್ಳದಿರ್ಪವಂ ಮತಿವಂತಂ || ೭೦ ||

ಕಷ್ಟಕ್ರಿಯೆಗಳೊಳೊಂದಿ ಯ
ಥೇಷ್ಟಂ ನಲಿದಾಡಿ ಸಾಧುವೇಷದಿನಿವರ್ಗಳ್
ಶಿಷ್ಟರೊಳೆ ಬದ್ಧಮಿಥ್ಯಾ
ದೃಷ್ಟಿಗಳೊಪ್ಪಿರ್ಪ ತೆಱನನಱಿವರ ತೆಱದಿಂ || ೭೧ ||

ಚಂ || ಕುಲಜರೆವೆಂದು ಪಂಡಿತರೆವೆಂದು ಮುಣಿಂದ್ರರೆವೆಂದು ಪೆಂಪಿನೊಳ್
ಮಲೆದು ಪರತ್ರೆಗಾಟಿಸಿ ಕೆಲರ್ ಮಱೆಗಳ್ಗುಡಿದಾತ್ಮಭಾವಮೆ
ಮ್ಮೊಳೆ ಶಿವತತ್ತ್ವಮೆಮ್ಮೊಳೆ ವಿಮುಕ್ತಿಯುಮೆಮ್ಮೊಳೆ ನಿಂದುದೆಂಬ ಗಾ
ವಿಲರ ನೆಗೞ್ತೆ ದುರ್ಯಶದೊಳೊಂದಿ ನಿಗೋದದೊಳೊತ್ತದಿರ್ಕುಮೇ || ೭೨ ||

ಪರಿದು ಪಿಡಿತಂದು ಪುಲ್ಲೆಯ
ಗೊರವಂಗುಣಲಿಕ್ಕಿ ಮೀಸಿ ಸೂಳೆಯೊಳವನಂ
ನೆರಪಿದೊಡವಂಗೆ ಸಗ್ಗಂ
ದೊರೆಕೊಳ್ಗುಂ ನಿರುತಮೆಂದು ನೆಗೞ್ವರ್ ಮೂಢರ್ || ೭೩ ||

ಆಪ್ತನ ಮಾರ್ಗದೆ ನಡೆಯ[ದ]
ನಾಪ್ತಾರಾಧಕಸಮಾಜಮಾರ್ಹತರಂತ
ಲ್ಲಾಪ್ತನ ಪೇೞ್ದೊಂದೋಜೆಯೊ
ಳಾಪ್ತಂ ನೆಗೞ್ವಂತೆ ನೆಗೞ್ವರೊಲ್ದಂತೆಸಗರ್ || ೭೪ ||

ಆಪ್ತನ ರೂಪಿಂದಂ ಮ
ತ್ತಾಪ್ತನ ಮಾರ್ಗದೊಳಮೆಸಗರನ್ಯರುಮೊಳ್ಪಿಂ
ದಾಪ್ತನ ರೂಪಂ ಕೈಕೊಂ
ಡಾಪ್ತನ ಮಾರ್ಗದೊಳೆ ಬಿಡದೆ ನಡೆವರ್ ಜೈನರ್ || ೭೫ ||

|| ಜಿನನುಂ ಬುದ್ಧನುಮೆಂತು ವರ್ತಿಸಿದರಂತಾ ಮಾರ್ಗದಿಂದಾ ಜಿನೇ
ಶನ ತದ್ ಬುದ್ಧನ ಯೋಗಿಗಳ್ ಚರಿಯಿಪರ್ ಲಕ್ಷ್ಮೀಶನುಂ ಪಾರ್ವತೀ
ಶನುಮಿಪ್ಪಂದದೆ ವ್ಯಾಧರುಂ ಭಗವರುಂ ಸ್ತ್ರೀಸಂಯುತರ್ ವಸ್ತ್ರಮಂ
ಡನಶಸ್ತ್ರಾನ್ವಿತರಾಗಿ ವರ್ತಿ[ಪ]ರದಂತೇನಾಪ್ತರಂ ಮೆಚ್ಚರೋ || ೭೬ ||

ಹಿಂಸಾದಿ ದೋಷಚಯಮಂ
ತಾಂ ಸಲೆ ಮಾಡುತ್ತುಮಿರ್ಪ ಪಾಪಿಗೆ ದುರಿತ
ಧ್ವಂಸಂ ಮಾಡುವ ಜಿನಧ
ರ್ಮಂ ಸೊಗಯಿಸದೆನಿಬರಿರ್ದು ಪೇೞ್ಪೊಡಮೆಂತುಂ || ೭೮ ||

ಅರಸಂ ಬೇಂಟೆಯನಾಡು
ತ್ತಿರೆ ಸಾಗುಂ ನಾಡ ಕೆಯ್ಗಳಂ ಮೇವ ಮೃಗೋ
ತ್ಕರಮದಱಿಂದಂ ಪುಣ್ಯಂ
ದೊರೆಕೊಳ್ಗುಂ ನೃಪತಿಗೆಂಬರಾಱಡಿಕಾಱರ್ || ೭೯ ||

ಅಱನಂ ಬಗೆಯದೆ ಬೇಂಟೆಗೆ
ಪೊಱ[ಮಡಿಮೆಂ]ದುದ್ದಮೇಱಿ ಸವಳದೆ ನಿಚ್ಚಂ
ಪಱೆಯಂ ಪೊಯ್ಸುತ್ತಿರ್ಪಂ
ಪೆಱತೇಂ ಬೆಟ್ಟೇಱೆ ಮೃತ್ಯುಗರೆವಂತಕ್ಕುಂ || ೮೦ ||

ಸವಳದೆ ದೇಹಾರಂ ಗೆ
ಯ್ದವಹಿತಮೆಮಗೆಂದು ಜೈನರಲ್ಲದ ನೃಪರಾ
ಟವಿಕರ ತೆಱದಿಂದಂ ಬೇ
ಟೆವೋಪರಿಂತಪ್ಪವಿಹಿತಮೆಲ್ಲಿಯುಮುಂಟೇ || ೮೧ ||

ಒಕ್ಕಲನೆಂತುಂ ರಕ್ಷಿಸು
ವಕ್ಕಟಿಕೆಯನುಳ್ಳ ಭೂಮಿಪಾಲಂ ತಲೆಮ
ಟ್ಪೊಕ್ಕಲ ಕೆಯ್ಗಳ್ಗೆಱಗುವ
ಪಕ್ಕಿಗಳಂ ಕವಣೆಗೊಂಡು ಕಾಯಲ್ವೇೞ್ಕುಂ || ೮೨ ||

ಶಿವದೀಕ್ಷೆಗೊಂಡು [ತಾ]ನುಂ
ಶಿವನೆನಿಸಿಯೆ ಮಂತ್ರಮೂರ್ತಿಯಾಗಿರ್ದುಂ ಮಾಂ
ಸವನುಂಡೊಡೆ ಶಿವ[ನಂ] ಮಾ
ಸವನೂಡಿದೊಡೆ ದೋಷಮಕ್ಕುಮೆನ್ನರ್ ಗೊರವರ್ || ೮೩ ||

ಜೈನರ ಕಡೆಪಟ್ಟವನುಂ
ಜೇನೆಯ್ಯಂ ಮುಟ್ಟೆ ಕಯ್ಗಳಂ ಕರ್ಚುವನಿ
ನ್ನೇನೆಂಬಮಿತರರೊಂದ
ಜ್ಞಾನಮನಾಪ್ತಂಗಮೆಱೆದು ತಾಮುಂ ಕುಡಿವರ್ || ೮೪ ||

ಎಮ್ಮಾಪ್ತನೀಶನುಣ್ಬಂ
ಬೊಮ್ಮನ ಡೋವಿಗೆಯೊಳೆಮಗೆ ಗೋಚರ್ಮದೊಳೇ
ಕಮ್ಮ ಬಳಸಲ್ಕೆ ಸಲ್ಲ[ದು]
ನಿಮ್ಮಾಣೆಂಬಂತೆ ನೆಗೞ್ವರಾ ಶಿವಭಕ್ತರ್ || ೮೫ ||

ಪಶುವೋಲಂಬೆಯೆನೆ ಮಾ
ನಸನಂ ಮೊದಲಾಗಿ ಪಗೆವನಿಱಿಯನದಂ ಭಾ
ವಿಸಿ ದೇವಾರ್ಚನೆಗೆಯ್ವರ್
ಪಶುವಂ ಕೊಲಲಾಗದೆಂದು ಪೇೞ್ವರ್ ಗೊರವರ್ || ೮೬ ||

ಮಿಗೆ ಬಸನದಿಂದೆ ಕೊಲೆಕೊಂ
ದು ಗಡಂ ಸಗ್ಗಕ್ಕೆ ಪಾಪಿ ಸಲ್ವೊಡೆ ಮತ್ತೀ
ಜಗದೊಳ್ ಪೆಱತಿರ್ಕೆಮ ಸೂ
ನೆಗಾಱನುಂ ಜಾಲಗಾಱನುಂ ಮಾಣ್ದಪರೇ || ೮೭ ||

ಮಿಡುಕುವಿನಂ ಪ್ರಾಣಿಗಳಂ
ಮಡಿಪಿದೊಡಂ ದೋಷಮಿಲ್ಲ ದೇವಾರ್ಚನೆಯು
ಳ್ಳೊಡೆ ಸಾಲ್ಗುಮೆಂಬ ಮುನಿಗಳ
ನುಡಿಯಂ ಕೇಳ್ದಾಳಿಗೊಳ್ಳದಿರ್ಪರೆ ಚದುರರ್ || ೮೮ ||

ಇತ್ತಲ್ ಲಿಂಗಮನರ್ಚಿಪ
ರತ್ತಲ್ ಕುಱಿದನ್ನಿಮೆಂಬರಾ ಕೌಳರ್ ಮ
ತ್ತತ್ತಲ್ ಹೋಮಂ ಮಾಡುವ
ರಿತ್ತಲ್ ಸುಂಟಗೆಯನೊಯ್ದು ಕಾಸುವರ[ರೆ]ಬರೆ || ೮೯ ||

ಸಂದಿಸಿ ದೇಹಾರದ ಮು
ಟ್ಟೊಂದೆಸೆಯೊಳ್ ಮಾಂಸಮೊಂದು ದೆಸೆಯೊಳ್ ಕಾಸಿಂ
ಪಿಂದನೆ ನಡೆವರ್ ಮಱೆದೆಂ
ದೆಂದುಂ [ರ]ಕ್ಷಿಸಿಯುಮಱಿಯರಧಮರ ಶಿಷ್ಯರ್ || ೯೦ ||

ಶಿವಮೂರ್ತಿಯಾಗಿ ಬೞಿಯಂ
ಶಿವನಂ ಪೂಜಿಸಲೆ ವೇೞ್ಕುಮಾ ಶೈವಮತಂ
ಶಿವಮೂರ್ತಿಯಾದವಂ ಮಾ
ಡವೇಡ ಮಧುಮದ್ಯಸೇವೆಯಂ ತಾಮೆನ್ನರ್ || ೯೧ ||

ಪೊಲೆಯರ್ ಮುಟ್ಟಿಸರೆಂತುಂ
ಪೊಲಸಂ ಪಾಲ್ಗಲನನೆಂದೊಡಱಿವುಳ್ಳಾತಂ
ಪೊಲಸಂ ಮುಟ್ಟಿಪುದೇ ಪೇೞ್
ಸುಲಲಿತಧರ್ಮಾಮೃತೈಕಭಾಜನತನುಮಂ || ೯೨ ||

ಪೊಲಸಟ್ಟ ಕಲನನೆಂತುಂ
ಕಲಸರ್ ಮಡಕೆಗಳೊಳೆಂದೊಡಂತದನಱಿದುಂ
ಪೊಲಸಂ ತಿಂಬವನೊಡನೇಂ
ಕಲುಸುವುದೇ ಸಚ್ಚರಿತ್ರರಪ್ಪ ಮಹಾತ್ಮರ್ || ೯೩ ||

ಅಡಗನರಿವಲ್ಲಿ ಕತ್ತಿಗೆ
ನಡೆ ಕಯ್ಯಂ ನೊಂದು ಬಿದಿರ್ದು ಶಿವಯೆಂಬರ್ ಮ
ತ್ತಡಗಿನೊಳಿರ್ದೆಲುವಣಲಂ
ನಡೆ ಶಿವಶಿವಯೆಂಬರುಣುತುಮಾ ಶಿವಭಕ್ತರ್ || ೯೪ ||

ಅಡಗಿನೊಳಿಱುಂಪೆಯಂ ಕಂ
ಡೊಡೆ ಮುಟ್ಟುಪಡಾದುದೆಂದು ಬಾಸುವರುಣುತುಂ
ಗಡ ಶೈವರ್ ಮುಟ್ಟುಪಡಾ
ದೊಡೆ ಸುವ್ರತನಿರತರಪ್ಪೊಡಂತೇಕುಣ್ಬರ್ || ೯೫ ||

ಪೊಲೆಗೇವಯ್ಸರ್ ತೊಗಲಿನೊ
ಳಲಸದೆ ನೀರ್ಗುಡಿಯುತಿರ್ಪರಡಗಂ ತಿಂಬರ್
ಪೊಲೆಯರ ತೆಱದಿಂ ನೆಗೞ್ವರ್
ಪೊಲೆಯರ ಪೆಸರ್ಗೊಂಡೊಡುಣ್ಣರಾ ಸಚ್ಚರಿತರ್ || ೯೬ ||

ತನ್ನೊಡಲ ಪುಣ್ಣುಮಂ ಮು
ಟ್ಟಿ ನೋ[ಸೆ] ಕೈಗರ್ಚಿಕೊಳ್ವವಂ ಪಶುಗಳ ಪು
ಣ್ಣನದೆಂತು ತಿಂದಪಂ ನೋ
ಡ ನಾಡೆಯುಂ ಮಾಂಸರಾಜಿಯಂ ಸಾಸಿಗನೋ || ೯೭ ||

ಒಡಲೆಂಬ ಪುೞಿತ ಮಾಂಸದ
ಪಡುಕೆಯ ಭಾರಮನದೇನುಮಂ ಬಗೆಯದೆ ನಿ
ಗ್ಗಡಿ ಜೀವಂ ಪಶುಗಳ ಬ
ಲ್ಲಡಗಂ ಸಲೆ ಪೇಱಿ ತೞ್ಗಿ ನರಕಕ್ಕೞ್ಗುಂ || ೯೮ ||

ಚಂ || ಅವಚಱದೆಯ್ದಿ ತನ್ನೊಡಲ ತೋಲ ತಡಂಗದೊಳೊಟ್ಟಿಕೊಂಡು ಮಾಂ
ಸವನೆನಗಾವನುಂ ಸರಿಯೆ ಪೇೞೆನುತುಂ ಜಿನಧರ್ಮಮೆಂದೊಡಂ
ತವರ ಮೊಗಕ್ಕೆ ವಾಯ್ವರಸನೇನಱಿದಪ್ಪನೆ ನಾಡೆ ನೋಡೆ ರೌ
ರವದೊಳಗರ್ದು ತಾನಱಿಯದಿರ್ದಪನೇ ನಿಜಭೂಪತಿತ್ವಮಂ || ೯೯ ||

|| ಭೂವನಿತೇಶನುತ್ತಮಕುಲಪ್ರಭವಂ ನರರೆಲ್ಲಮಾಗಳುಂ
ದೇವ ಮಹಾಪ್ರಸಾದಮೆನೆ ರೂಢಿಗೆ ಸಂದ ನೃಪಂ ವ್ರತಂಗಳಿಂ
ದೇವಸಮಾನನಾಗಿ ಸುಚರಿತ್ರಪವಿತ್ರಿತಗಾತ್ರನಲ್ಲದಂ
ಭೂವರನೆ ಶ್ವಪಾಕನವನಂದದೆ ಪೇಸದೆ ಮಾಡುವಾ ನೃಪಂ || ೧೦೦ ||

ಮದ್ಯಮನರಸಿಯರೊಲ್ದು ನಿ
ವೇದ್ಯಮನಾ ಗೌರಿಗಿತ್ತೊಡಲ್ಲದೆ ತಮಗಂ
ಹೃದ್ಯವೆನಿಸದು ಗಡಂ ಕಡು
ಚೋದ್ಯಮೊ ಮೀಸಲ್ಗೆ ಸಲುಗಗೆಯ್ವರ್ ಭಕ್ತರ್ || ೧೦೧ ||

ಅರಸರನಡಗಂ ಮಾಣಿಸ
ಲರಸಿಯರಂ ಮದ್ಯಸೇವೆಯಿಂ ಮಾಣಿಸಲುಂ
ಭರವಸರೆನಿಪ್ಪ ಮುನಿಗಳ್
ಪರಸಮಯದೊಳಾರುಮಿಲ್ಲ ಜೈನರೆ ಸುಲಭರ್ || ೧೦೨ ||

ಬ್ರತಮುಂ ಶುಚಿತ್ವಮುಂ ಸುಚ
ರಿತಮುಂ ಪೊಲೆಯಂಗೆ ಜೈನನಾದೊಡೆ ಸಲ್ಗುಂ
ಯತಿಪತಿಗಂ ಭೂಪತಿಗಂ
ವ್ರತಾದಿಗಳ್ ಸಲ್ಲ ಕಾಳಸಮಯಿಗಳೆಂತುಂ || ೧೦೩ ||

ಪೊಲಸಿಂಗಂ ಕಳ್ಳಿಂಗಂ
ಕುಲಜರ್ ಮೊದಲಾಗಿ ಪೆಸರನಿಕ್ಕಿ[ಯೆ] [ಕುಡಿಯಲ್]
ಪೊಲೆಯನುಮೆಂತುಂ ಮುಟ್ಟಂ
ಕುಲಜನದೊಂದಸೆಯೊಳಿರ್ಕೆ ಜೈನರೊಳೆಲ್ಲಂ || ೧೦೪ ||

ವ್ರತಸಚ್ಚರಿತ್ರಹಿನಂ
ಕ್ಷಿತಿಪತಿಯಕ್ಕವನ ತನುಜನಪ್ಪುದಱಿಂದ
ಬ್ರತನಿರತನಪ್ಪ ಪೊಲೆಯನ
ಸಾತನಪ್ಪುದು ಪುಣ್ಯಮುಭಯಭವಮುಂ ಸಫಲಂ || ೧೦೫ ||

ಪೇಸಿಕೆಯಿಂದೆ ಬಿಡುಗುಂ
ಸಾಸಿರ್ವರೊಳೊರ್ವ ಶೂದ್ರನಲ್ಲದೆ ಪಿರಿದುಂ
ದೋ[ಸಂ] ಬಿಡೆಂದು ಗೊರವಂ
ಸಾಸಿಸೆ ಮಾಣಿಪನೆ ಮಾಂಸಮಂ ಜೈನರವೋಲ್ || ೧೦೬ ||

ಅಡಗಂ ತಿನ್ಗೆಮ ಕಳ್ಳಂ
ಕುಡಿಗೆಮ ಕೊಲೆ ಪುಸಿಗೆ ಕಳವು ಪರಲಲನೆಯೊಳಂ
ಪಡುಗೆ ಶಿವಭಕ್ತನಾಗಿ
ರ್ದೊಡೆ ಪೊರ್ದವು ಪಾಪಮೆಂಬರಾಱಿಡಿಕಾರರ್ || ೧೦೭ ||

ಮಾಡಲ್ಕಣಮಾಗದುದಂ
ಮಾಡಿಯುಮೆಲ್ಲಂದದಿಂದೆ ನಡೆದುಂ ಶಿವನಂ
ನೋಡಿದನಿತಱೊಳೆ ಸುಖದೊಳೆ
ಕೂಡುವರೊಲ್ಲದರುಮೊಳರೇ ಶೈವಬ್ರತಮಂ || ೧೦೮ ||

ಚಂ || ಪತಿಯ ನೆಗೞ್ತೆಯಂ ಬಿಡದೆ ಸಾಮಿಯ ಚಂದಮೆ ಚಂದಮೆಂದು ಸಂ
ಗತ ವಚನಂಗಳಂ ನುಡಿದು ಲೋಕದವರ್ ನೆಗೞುತ್ತಿರಲ್ಕಮಾ
ಪತಿಯ ವಿರುದ್ಧಮಾರ್ಗದೆಸಕಕ್ಕೊಳಗಾಗದೆ ಶೈವರೊಳ್ ಕೆಲರ್
ಗತಿಗಳಲೞ್ತಿಯಿಂ ಸುಚರಿತಂಗಳೊಳೊಂದುವರೇಂ ವಿಡಂಬಮೋ || ೧೦೯ ||

ತುಡುವಂ ಶಲ್ಯಮನಜಿನಮ
ನುಡುವಂ ಸುತ್ತಿಯೊಳಮುಣ್ಬನಾಪ್ತಂ ಮತ್ತಾ
ಮೃಡಮುನಿಗಳಂತೆ ನೆಗೞ[ಲ್]
ನಡೆಯಲ್ ತಾಮೊಲ್ಲರೇಕೆಯೋ ಮೃಡಭಕ್ತರ್ || ೧೧೦ ||

ಭೋಗಮನನ್ಯಭವಂಗಳೊ
ಳಾಗಿಪುದಂತಿರ್ಕೆ ಭಕ್ತರೞ್ತಿಯೊಳುಣುತಿ
ರ್ಪಾಗಳ್ ಕೇಳ್ದೊಡೆ ಮುಟ್ಟುಪ
ಡಾಗದೊಡದೆ ಸಾಲ್ಗುಮೀಶ್ವರಸ್ತವನಂಗಳ್ || ೧೧೧ ||

ತಮ್ಮಾಪ್ತನೀಶನುಣ್ಬಂ
ಬಮ್ಮನ ಡೊಯಿಗೆಯೊಳಾತನಂ ಸೇವಿಸಿ ಮ
ತ್ತಂ ಮಾಣದೇಕೆ ಮುಟ್ಟಪ
ಡಂ ಮಾಡುವರಾಪ್ತನಿಂದಶುಚಿಗಳೆ ಶೈವರ್ || ೧೧೨ ||

ಕಡುಸಕಳರ್ ತಾಯಿಂದಂ
ಗಡ ಕುಲಜರ್ ಮಕ್ಕಳೆಂಬವೋಲ್ ತಮ್ಮಾಪ್ತಂ
ಮೃಡನೆಸಕಮುಮಂ ಮೆಚ್ಚದೆ
ನಡೆವರ್ ಸತ್ಪಥದೆ ತನುಗದೇಕೆಯೊ ಸಲ್ಗುಂ || ೧೧೩ ||

ತಮಗೆ ನಿಜಾಪ್ತರ ಚಾರಿ
ತ್ರಮೆ ವೇೞ್ಕುಮದೇಕೆ ತಳಿಗೆಯಂ ಬಾಜಿಪರು
ತ್ತಮಮಂ ನುಡಿಯೆಂಬರದೇ
ಕೆ ಮಹೇಶ್ವರರುಣುತಮಿರ್ದು ಜೈನರ ತೆಱದಿಂ || ೧೧೪ ||

ಕಳ್ಳೆನ್ನದಿರಡಗೆನ್ನದಿ
ರೊಳ್ಳಿತ್ತಂ ನುಡಿಯಿಮೆಂದು ನಿಯಮಿಸುವಂತೇ
ನೊಳ್ಳಿದನೆ ನಿಜಾಪ್ತಂ ಮ
ತ್ತೊಳ್ಳಿತ್ತಯ್ ಶೈವಸಮಯದವರ್ಗಳ ಚರಿತಂ || ೧೧೫ ||

ಮನೆಯೊಳಗಹಿಯುಂ ಪೊಕ್ಕಂ
ತೆ ನಿಚ್ಚಲುಂ ಕೂಡೆ ತಳಿಗೆಯಂ ಬಾಜಿಸಲುಂ
ಬ ನಿಮಿತ್ತಮೇಕೆ ತಾಮೇಂ
ಜಿನಭಕ್ತರ ತೆಱದೆ ಶುಚಿಗಳೇ ಶಿವಭಕ್ತರ್ || ೧೧೬ ||

|| ಮುಟ್ಟುಪಡೆಂಬುದೆಂತುಮಣಕಂ ನಿಶಿಭೋಜಿಗೆ ಮದ್ಯಮಾಂಸಮಂ
ಮುಟ್ಟುವವಂಗೆ ಸೋದಿಸದೆ ನಿರ್ದಯೆಯಿಂ ಮೊಗೆತಂದ ನೀರ್ಗಳಿಂ
ದಟ್ಟುದನುಣ್ಬವಂಗೆ ಕರವತ್ತಿಯ ನೀರ್ಗುಡಿವಂಗೆ ನೋಡುವಂ
ದಿಟ್ಟಳಮಿಟ್ಟವೋಲಿರದೆ ಬಾಜಿಪ ಕಾಂಸಮುತ್ತಮೊ[ತ್ತಮಂ] || ೧೧೭ ||

|| ದೋ[ಸ] ಮನಾಪ್ತರೊಳ್ ಪುಸಿಯನಾಮದೊಳ್ ರತಿಯಂ ತಪಸ್ವಿಯೊಳ್
ಪೇಸದೆ ಮದ್ಯಮಾಂಸರುಚಿಯಂ ಬ್ರತದೊಳ್ ಕೊಲೆಯಂ ಸ್ವಧರ್ಮದೊಳ್
ವಾಸನೆ ಮಾಡಿ ಮುಗ್ಧರನಧೋಗತಿಗರ್ದುವೊಡರ್ದುಗಾ ವಚೋ
ನ್ಯಾಸಮಪಾರಿಪಂಥಿಕರವೋಲೞಿದತ್ತಪವರ್ಗಮಾರ್ಗಮಂ || ೧೧೮ ||

ಚಂ || ಹರಿಹರ ಸೂರ್ಯಭೈರವಿಯುಮೆಂಬರ ದೆಯ್ವಮಧರ್ಮಕರ್ಮಮಂ
ವಿರಚಿತ ವೇದಮಾರ್ಗಮುಮಕೃತ್ಯಪರಾಯಣರಪ್ಪ ವೈದಿಕರ್
ಪರಮಮೆನಿಪ್ಪ ಪಾತ್ರಮೊಸೆದೀವೆಡೆಗೆಂದೊಡೆ ಮತ್ತದೇಕೆಯೋ
ಪುರುಳಱಪರ್ ವಿಚಾರಪರರೀ ತೆಱದಿಂ ನೆಗೞುತ್ತುಮಿರ್ಪರೊಳ್ || ೧೧೯ ||

ನಚ್ಚಿದ ತಮ್ಮಯ ದೆಯ್ವಂ
ಕಿಚ್ಚಪ್ಪುದಱಿಂದಮದನೆ ಭಾವಿಸಿ ಪಾರ್ವರ್
ಕಿಚ್ಚಿನವೊಲುಗ್ರರಾದರ
ದಚ್ಚರಿಯಲ್ಲಾಪ್ತನನ್ನರಾಗರೆ ಭಕ್ತರ್ || ೧೨೦ ||