ಶ್ರೀನಾರೀಸಂಸ್ತುತನ
ಜ್ಞಾನಾಂಬುದತೀವ್ರಪವನನಮಳಿನವಿದ್ಯಾ
ಧೀನಂ ಗುಣನಿಧಿ ಸಮ್ಯಕ್
ಜ್ಞಾನಮನೊಸೆದೆಮಗೆ ಮಾೞ್ಕೆ ವೀರಜಿನೇಂದ್ರಂ || || ||

ಪರಮಮುಖಚಂದ್ರನಿಂ ವಿ
ಸ್ತರಮಾಗಿರ್ದೊಗೆವ ವಚನಚಂದ್ರಿಕೆ ದುರ್ಬೋ
ಧರ ಕುಮತತಿಮಿರಪಟಳಮ
ನಿರಲೇನಿತ್ತಪುದೆ ಭವ್ಯಸಮತಿಇಯ ಮನದೊಳ್ || || ||

ಚಂ || ಜನನಿಯ ಗರ್ಭದಿಂದೊಗೆಯದಾತನಮೂರ್ತನಮೂರ್ತನಪ್ಪ[ನಿಂ]
ಜನಿಯಿಸಿತಾಗಮಂ ಶಿವನಜಾತನರೂಪಕನೆಂಬರನ್ನನ
ಪ್ಪನ ಮತಮಂತೆ ಶೂನ್ಯಮದಱಿಂ ಜಿನನಾಥ[ನೆ] ಮೂರ್ತನಾ ಮಹಾ
ತ್ಮ ನಿನೊಗೆದಾಗಮಂ ಸಕಳತತ್ತ್ವ ವಿನಿಶ್ಚಯಮೆಂದು ನಂಬಿರೇ || || ||

ಶಿವನೆಂಬನಜಾತಂ ಗಡ
ಶಿವಂಗೆ ರೂಪಿಲ್ಲ ಮೂರ್ತಿಯಿಲ್ಲದ ಪುರುಷಂ
ಶಿವತತ್ತಮನೆಂತಱಿದ
ನವಳಿಲ್ಲ ಗಡವಳ ಮಕ್ಕೊಳವೇಂ ಪೇೞಿಂ || || ||

ಕಿವಿ ಕಣ್ ಮೆಯ್ ನಾಲಗೆಯೆಂ
ಬಿವಱಿಂ ಪೆಸರಿಂದಮೊಂದು ರೂಪಿನೊಳಿ[ರ್ದಂ]
ವಿವರಿಸಿ ಪೇೞ್ಗುಂ ತತ್ತಮ
ನವಿಲ್ಲದಾ ಶಿವನೆ ಪೇೞ್ವ ತೆಱನೆಂತಕ್ಕುಂ || || ||

ಆಗಳುಮಾಪ್ತನ ವಚನಂ
ರಾಗಾದಿಗಳಿಲ್ಲದಿ[ರ್ಪುದಾ]ಪ್ತಂ ದೋಷ
ತ್ಯಾಗಿ ಪುಸಿನುಡಿಯನಂತಱಿ
ನಾಗಮಮದು ಸತ್ಯಮದುವೆ ಲೋಕಸ್ತುತ್ಯಂ || ||

ರಾಗದ್ವೇಷಾದಿಗಳಿಂ
ಮೇಗಿಲ್ಲದೆ ನುಡಿವನಲ್ಲಿ ಪುಸಿಗಳೆ ಪುಗುಗುಂ
ರಾಗಾದಿ ದೋಷರಹಿತನೊ
ಳಾಗದು ಪುಸಿ ಪುಸಿಗೆ ಹೇತುವಿಲ್ಲಪ್ಪುದಱಿಂ || ||

ಅದಱಿಂದಾಪ್ತನ ವಚನಂ
ಸದಸದ್ವಸ್ತುಸ್ವರೂಪರೂಪಿತಮೆನಿಸಿ
ರ್ದುದು ಪೇೞ್ದ ತತ್ತಮಂ ತಾ
ನೊದವಿದ ಮತಿಯಿಂದೆ ಕೇಳ್ಗೆ ಕೇಳ್ವಂ ಕ್ರಮದಿಂ || ||

ಧರೆಗೇಕವಾಕ್ಯನೆನಿಸಿದ
ಪರಮಾತ್ಮ ಮಾತೆ ನಿಶ್ಚಯಂ ಬಹುಮುಖದಿಂ
ಮರುಳಾಟದಿಂದಮೂಳ್ವಾ
ಪ್ತರ ಕುಮತಂ ತಥ್ಯಮಾಗಲೇನಱಿದಪುವೇ || ||

ತಕ್ಕನೆನಿಸಿರ್ದು ನಯಮಂ
ನಿಕ್ಕುವಮಾಗಱಿದು ನುಡಿದೊಡಾಲಿಸಿ ಕೇಳ್ವಂ
ಗಕ್ಕುಂ ಸಂತೊಸಮಲ್ಲದೊ
ಡಕ್ಕುಂ ಹೃ[ದ್ರೋ]ಗಮಱಿಯದೂಳ್ವರ ಮತದಿಂ || ೧೦ ||

|| ಸುತ್ತಿದ ದರ್ಶನಾವರಣಕರ್ಮಮನೋವದೆ ತೂಳ್ದಿ ಬೋಧಸಂ
ಪತ್ತಿಯೊಳೊಂದಿ ಲೋಕದೊಳಗುಳ್ಳ ಪದಾರ್ಥಮನೆಯ್ದೆ ಕಂಡು ಪೇ
ೞುತ್ತಿರೆ ಕೇಳ್ದದಂ ತಿಳಿಯೆ ಪೇೞ್ವವರಾರೊ ಜಗಕ್ಕೆ ಮೋಹದಿಂ
ಪತ್ತಿ ಹರಾದಿಗಳ್ ಸಮೆದರಾಗಮಮೆಲ್ಲಮನೆಂಬುದೀ ಜಗಂ || ೧೧ ||

ಪುಸಿವೊಡೆ ಪೋಲರ್ ಪುಸಿವುದು
ಪುಸಿಯಲ್ಕಱಿಯದೊಡೆ ಮಾಣ್ಬುದಂತಿರದೆ ಕರಂ
ದೆಸೆಬಿದ್ದಂ ಪುಸಿವೊಡೆ ಬಾ
ರಿಸಬರ್ಪುದೆ ಪುಸಿಯೆ ಬಸನಮಾಗಿರ್ಪವರಂ || ೧೨ ||

ಮುನಿಗಳ ಮಹೇಶ್ವರಾಂಶಂ
ಜನನಿಯ ಬಸಿರೊಳಗೆ ಪುಗಲೆ ಪೇಸಿ ಪವಿತ್ರಂ
ತನುವೆಂದು ಸತ್ತ ಮಾಣಿಯ
ತನುವಂ ಪೊಕ್ಕಿರ್ದನೆಂಬರಿದು ಬೋಧಫಲಂ || ೧೩ ||

ಅನುನಯದೆ ಸೋಮಶರ್ಮನ
ತನಯನ ಪೆಣನೊಳಗೆ ಲಾಕುಳೇಶಂ ಪೊಕ್ಕಾ
ತನೆ ಶೈವಾಗಮಮೆಲ್ಲಮ
ನನಂತರಂ ಪೇೞ್ದನೆಂಬರಿದು ಶೈವಮತಂ || ೧೪ ||

ಸುಡುವಂ ಜಗಮಂ ಜಗಮಂ
ಪಡೆವಂ ಪಡೆದುದನೆ ಮತ್ತೆ ಸುಡುವಂ ಲೋಕಂ
ಮೃಡನಿಚ್ಛೆಯಿಂದಮಪ್ಪುದು
ಗಡ ಮುಳಿದೊಡೆ ಬೇವುವೆಂಬರಿನ್ನವು ಪುಸಿಗಳ್ || ೧೫ ||

ಲೋಕಮನೆಲ್ಲಂ ಸುಡುವಂ
ದಾ ಕಱೆಗೊರಲಾತನೊಳಗೆ ತಾನಿರ್ದಂತೀ
ಲೋಕಮನೆಲ್ಲಂ ಸುಟ್ಟನೊ
ಲೋಕದ ಪೊಱಗಿರ್ದು ಸುಟ್ಟನೋ ಪೇೞಿಮಿದಂ || ೧೬ ||

ಜಗಮಂ ಸುಡುವೊಡೆ ರುದ್ರಂ
ಜಗದೊಳಗಿರ್ದಾತ್ಮ ಭಕ್ತರೆಲ್ಲರುಮಂ ಮೆ
ಲ್ಲಗೆ ತೆಗೆದು ಬೇಱೆ ಪೊಱಗಿ
ಕ್ಕುಗಮೋ ಮೇಣ್ ಕೂಡೆ ಸುಟ್ಟು ಕಳೆದನೊ ಪೇೞಿಂ || ೧೭ ||

ಮಾಡಿದುದನೆನಿತುಮೞಿಯರ್
ನಾಡಾಡಿಯ ನರರುಮೆಂದೊಡಿಂತೀ ಜಗದೊಳ್
ರೂಡಿಗೆ ಸಂದೀಶಂ ಗಡ
ಮಾಡಿದುದಂ ತಾನೆ ಕಿಡಿಪುದುಚಿತವೆ ಪೇೞಿಂ || ೧೮ ||

ಮಾಡಲುಮೞಿಯಲುಮಾರ್ಗಂ
ಕೂಡದೆನ್ನಿಪ್ಪೊಂದು ಲೋಕಮಂ ತಾನೊರ್ವಂ
ಮಾಡುಗುಮದನೞಿಗುಂ ಗಡ
ಸೋಡಲಿವಾಡಲಿಯೆ ಮಾಡಿ ಕಿಡಿಸುವ ಲೋಕಂ || ೧೯ ||

ಎಲ್ಲಿರ್ದುಂ ಜಗಮಂ ಮಾ
ೞ್ಪಲ್ಲಿಗೆ ಗಡ ಬರ್ಕುಮಾವಗಂ ಜಗಮಂ ತಾ
ನೆಲ್ಲಿರ್ದು ಮಾಡುವಂ ಪುಸಿ
ಯಲ್ಲೆಂದೆಂದಱಿವರಱಿವರಱಿಯದರಱಿಯರ್ || ೨೦ ||

ಮುನ್ನಮೊಳವೆನಿಪ ವಸ್ತುವ
ನಿನ್ನೊರ್ವಂ ಪಡೆಯವೇಡ ಮುನ್ನಮೆ ಸಿದ್ಧಂ
ಮುನ್ನಿಲ್ಲದುದಂ ಪಡೆವನೆ
ಬಿನ್ನಣಮಾಕಾಶದಲ್ಲಿ ಪೂವಡೆವಂದಂ || ೨೧ ||

ಮೃಚ್ಚಕ್ರದಂಡ ತೋಯದಿ
[ನ]ಚ್ಚಿಱಿ[ಗುಂ] ಕುಂಭಕಾರಕಂ ಮಡಕೆಗಳು
ಮೃಚ್ಚಕ್ರಮಿಲ್ಲದಂತವ
ನಿಚ್ಚೆಯಿನಾ ಮಡಕೆ ನೆನೆದೊಡೇನಾದಪುದೇ || ೨೨ ||

ಶಿವನಿಚ್ಚೆ ಲೋಕವರ್ತನೆ
ಶಿವನುಂ ಶೂನ್ಯಂ ತದಿಚ್ಛೆ ವರ್ತಿಪ ತೆಱ[ನುಂ]
ಶಿವರೂಪಮಿಚ್ಛೆಯೆಂಬೊಡೆ
[ಭು]ವನಂಗಳನಿಚ್ಛೆ ಮಾಡಲಱಿಗುಮೆ ಪೇೞಿಂ || ೨೩ ||

|| ಮಾಡುವ ಬುದ್ಧಿಯಿಂ ಶಿವನೆ ಮಾಡುವನೇನುಮನಾ ಶಿವೇಚ್ಛೆಯಿಂ
ಮಾಡಿದ ಪುಣ್ಯಪಾಪಫಲಮಂ ಬೞಿಕಂ ಶಿವ[ನೂ]ಡುವಂ ಗಡ
ಮಾಡಿಸಲೂಡಲುಂ ಗಸಣಿಯೇನಿನಿಸುಳ್ಳೊಡೆ ಪುಣ್ಯಪಾಪಮಂ
ಮಾಡುವನುಂ ಬೞಿಕ್ಕಮದನುಣ್ಬವನುಂ ಶಿವನಲ್ತೆ ಲೋಕದೊಳ್ || ೨೪ ||

ಜಡನೆನಿಸಿದಾತ್ಮನೆತ್ತಲು
ಮಡಿಮಿಡುಕದೆ ನಿಂದೊಡೀಶ್ವರಪ್ರೇರಣೆಯಿಂ
ದೊಡಲೆಡೆಯಾಡುಗುಮೆಂಬೊಡ
ಮೊಡಲಿಂದುದ್ಭವದ ಕಾರ್ಯಮಾವುದೊ ಪೇೞಿಂ || ೨೫ ||

ಜಡನೆನಿಸಿದಾತ್ಮಂ ತಾ
ನೊಡಲುಮಚೇತನಮವೆರಡಱಿಂದಂ ಕಾರ್ಯಂ
ನಡೆಯದದು ಬೇಡಿಯೊಡಲಂ
ಮೃಡನಂತೇಕಯ್ಯ ಪೊತ್ತು ತಿರಿತಂದಪನೇ || ೨೬ ||

ಶಿವನ ವಶಂ ಗಡ ಮೂಱುಂ
ಭುವನಮುದೆಂದೂಳ್ವರಂತುಟಾದೊಡೆ ಜಗಮಂ
ಶಿವಭಕ್ತರಾಗೆ ಮಾಡದೆ
ತವತವಗತ್ತಿತ್ತ ಪೋಗಲಂತೇಕಿತ್ತರ್ ೨೭ ||

ಶಿವನ ವಶಂ ಗಡ ಮೂಱುಂ
ಭುವನಮುಮದಱಿಂದೆ ಜೈನನಕ್ಕೆಮ ದೇವಂ
ಶಿವಭಕ್ತರೞಲಲಾಗದು
ಶಿವೇಚ್ಛೆಯಿಂ ಜೈನನಾದನೆಂಬುದು ಶೈವಂ || ೨೮ ||

ವಸುಧೆ ಮೊದಲೆನಿಸಿದೆಂಟುಂ
ಪೆಸರ್ಗಳ ತನುಗಳ್ ಶಿವಂಗಮೆನಗಂ ಸಮನಾ
ನಸದೃಶನೆನಲ್ಲೆನಾರಾ
ಧಿಸೆಯದಱಿಂದೆಂದು ಸರಸ[ವಾ]ಡುಗೆ ಜೈನಂ || ೨೯ ||

ಸಮಯಂಗಳೊಳಗದೊಂದುಂ
ಸಮಯಂ ವಂಶಪ್ರಯುಕ್ತಮಲ್ಲದು ಬೞಿಕಂ
ತು ಮರುಳ್ಗಳೊ ಪಾರ್ವರ್ ತ
ಮ್ಮ ಮೆಚ್ಚಿದಾ ಸಮಯದಲ್ಲಿ ಪುಗರದು ಚದುರೇ || ೩೦ ||

ನೆನೆಯಲೊಡಂ ಲೋಕಂಗಳ್
ಜನಿಯಿಸುಗುಂ ದಿವಿಜಮನುಜಫಣಿಸಂಕುಳಮುಂ
ಜನಿಯಿಸುಗುಂ ರುದ್ರನಿನೆಂ
ದೆನಿತಾನುಂ ಪುಸಿಯುತಿರ್ಪರಱಿವಿಲ್ಲದವರ್ || ೩೧ ||

ದಾನವರಂ ಪುಟ್ಟಿಸುವಂ
ತಾನೆ ಗಡಂ ರುದ್ರನಂತು ಪುಟ್ಟಿಸಿದವರಂ
ತಾನೆ ಗಡ ಕೊಲ್ವನೆಂಬರ
ದೇನೆಂಬುದೊ ಪೆತ್ತ ಮಕ್ಕಳಂ ಕೊಲ್ವರೆ ಪೇೞ್ || ೩೨ ||

ಕೆಲರಂ ನರಕದೊಳಿತ್ತಲ್
ಕೆಲರಂ ಸ್ವರ್ಗಾಪವರ್ಗಸುಖದೊಳ್ ರುದ್ರಂ
ನಿಲಿಸುವನೆಂಬರ್ ಪೆತ್ತ
ರ್ಗೊಲವರಮೇ ಪೆತ್ತನಪ್ಪೊಡಂತೇಮಾೞ್ಪಂ || ೩೩ ||

ಬೆವಸಾಯಹೀನನಂ ಪೆ
ತ್ತವನುಂ ರಕ್ಷಿಸುವನೆಂದೊಡೆಳ್ಪಿಲ್ಲದೊಡಂ
ಭುವನದ ದೇಹಿಗಳಂ ಪೆ
ತ್ತನೆಂತು [ಮೇಂ] ಸುಖದಿನೀಶನಿರಸಲ್ವೇಡಾ || ೩೪ ||

ತಿರಿಕರ್ ಮೊದಲಾಗಿರೆ ಪೆ
ತ್ತರನೆಂತು ಪೊರೆಗುಮೆಂದೊಡಖಿಳಜಗಕ್ಕೀ
ಶ್ವರನೆ ಗಡಂ ಪೆತ್ತಂ ಜೀ
ವರಾಶಿಯಂ ಸುಖದಿನೆಂತುಮಿರಿಸಲ್ವೇಡಾ || ೩೫ ||

ಕೃತಪುಣ್ಯಂಗಳ್ ಕುಡುಗುಂ
ಗತಪುಣ್ಯಂಗಿತ್ತೊಡಿತ್ತ ದಾನಂ ಸುಖಮಂ
ಶ್ರಿತಪುಣ್ಯಫಲಮನುಣ್ಭಂ
ತೆ ತಾನೆ ದಲ್ ಕರ್ತೃ ಭೋಕ್ತೃ ಜೀವನೆ ಮುಖ್ಯಂ || ೩೬ ||

ಕೃತದುಷ್ಕೃತನುಣ್ಗುಂ ದು
ರ್ಮತಿ ಘೋರಮೆನಿಪ್ಪ ಪಾಪದುಃಖಮನೆಂತುಂ
ಕೃತಸುಕೃತನುಮುಣ್ಗುಂ ಸ
ನ್ಮತಿಸಾರಮೆನಿಪ್ಪ ಸುಖಮನೀಶ್ವರನೂಡಂ || ೩೭ ||

ಮಾಡಿದ ಪುಣ್ಯಫಲಂಗಳ
ನೂಡುವನಾ ಕರ್ತೃವಪ್ಪನಲ್ಲದೆ ಜೀವಂ
ಮಾಡಿದ ಕರ್ಮಫಲಂಗಳ
ನೂಡುವೊಡವನೇಕೆ ಕರ್ಮವಶಮೆ ಸಮಸ್ತಂ || ೩೮ ||

ಬೆನಕಂಗಾನೆಯ ಮುಖಮಂ
ತನೂಭವಂಗಖಿಳಕರ್ತೃಕಾಂಗೆ ಷಡಾ
ನನಮಂ ಮಾಣಿಸಲಾಱದ್ರ
ನೆನಿತುಂ ಚೆಲುವಾಗಿ ಮಾಡಲಾರ್ಪನೇ ಪೆಱರಂ || ೩೯ ||

|| ಪರಮಸ್ವಾಮಿ ಜಿನೇಶ್ವರಂ ಪಿರಿಯನೆಂದಂದೀಶ್ವರಂ ಛತ್ರ ಚಾ
ಮರ ಸಿಂಹಾಸನಮೆಂಬಿವಂ ಸಮೆದು ದೇವರ್ಗಿತ್ತನಿಲ್ಲೆಂಬುದಂ
ಗೊರವಂ ಪಾರುವನಕ್ಕೆ ತಪ್ಪುನುಡಿದಂದೆಲ್ಲಂ ಜಗತ್ಕರ್ತೃವೀ
ಶ್ವರನ[ಲ್ಲಾ] ಜಗದಿಂದಮೇಂ ಪೊಱಗೊ ಮಾೞ್ಪಂದಾ ಜಿನೇಂದ್ರಾಲಯಂ || ೪೦ ||

ಉರಿಲಿಂಗಮಾದ ರುದ್ರಂ
ವಿರಿಂಚಿಗಂ ಹರಿಗಮಖಿಳಜಗಮಂ ಮಾೞ್ಪಂ
ತಿರೆ ಬೆಸ[ಸೆ] ಮಾಡಿದಂ ಗಡ
ವಿರಿಂಚಿ ರಕ್ಷಿಸಿದನಿನಿತುಮಂ ಗಡ ಕೃಷ್ಣಂ || ೪೧ ||

ಮೃಡನೀ ಲೋಕಮನೆಲ್ಲಂ
ಪಡೆದನೆನುತಿರ್ಪರರೆಬರದು ಪುಸಿ ಬಮ್ಮಂ
ಪಡೆದನೆನುತಿರ್ಪರರೆಬರ್
ಪಡೆದವರಾರಾಗಮಜ್ಞರಪ್ಪರ್ ಪೇೞಿಂ || ೪೨ ||

ಜಗಮಂ ಮಾಳ್ಪನೆ ಗಡ ಪ
ದ್ಮಗರ್ಭನೋರೊರ್ಮೆ ರುದ್ರನುಂ ಮಾೞ್ಪಂ ಮ
ತ್ತೆ ಗಡಂ ಕಿಡಿಸುವನೆನುತುಂ
ಸಗರ್ಭಗಡೆಯುತ್ತುಮಿರ್ಪರಱಿ || ೪೩ ||

[ಚಳ]ಮತಿಗಳೊರ್ಮೆ ಲೋಕಂ
ಗಳನಾ ಹರಿ ಬಸಿಱೊಳಿಟ್ಟನಂತಾತನ ಪೊ
ರ್ಕುೞಿ ಪೂವಿನಲ್ಲಿ ಲೋಕಂ
ಗಳನೆಲ್ಲಂ ಮಾಡಿದಜನೆ ಪುಟ್ಟಿದನೆಂಬರ್ || ೪೪ ||

ಜಗಮಂ ಬಸಿಱೊಳಗಿಡುವಂ
ನಗಧರನೆಂಬರ್ ಕೆಲಂಬ[ರಾ] ಸಂಹರಿಪಂ
ಜಗಮಂ ರುದ್ರನೆನುತ್ತುಂ
ಮಿಗೆ ಪುಸಿವರ್ ಕಾದರಾರೊ ಕಾಯದರಾರೋ || ೪೫ ||

ಲೋಕತ್ರಯಮುಂ ಬೇವುದು
ಮಾ ಕಮಳೋದರನುಮಜನುಮಂದಾ ಕಾಲಂ
ಲೋಕಮನೆ ಸಮೆದರೆಂಬರ
ದೇಕೆಯೊ ಮತ್ತವರನಿಂದು ಪುಟ್ಟಿದರೆಂಬರ್ || ೪೬ ||

ಅಂದಿನ ಕಮಳಭವಂ ಮ
ತ್ತಂದಿನ ಮಾಧವನೆ ಪೇೞಿಮೆಂದೊಡವರ್ ತಾ
ವಂದಿನವರಪ್ಪರಂತವ
ರಿಂದೀಗ ನಿಮಿತ್ತದಿಂದೆ ಪುಟ್ಟಿದರೆಂಬರ್ || ೪೭ ||

ಅಡಿಗಡಿಗೆ ಸಾವುತಿರ್ಪ[ರ್]
ಗಡ ರುದ್ರಲೋಕಮಂ ಮಾಡಲ್ಕಾ
ರೊಡರಿಸುವರ್ ಲೋಕನಂ ಬೆಂ
ದೊಡೆ ರುದ್ರರುಮಿರ್ಪರೆಂಬರಿದು ಬಿಸವಂದಂ || ೪೮ ||

ಆಱಿದಂಬಲಗುಡಿಗಾಡುವ
ತೆಱದಿಂದಂ ಭುವನಕೋಶಮಂ ತೀವುವುದುಂ
ಬಱಿದಾಗೆ ಮಾೞ್ಪುದುಂ ಸಲೆ
ಕಱೆಗೊರಲಾತಂಗೆ ಬಿನದಮೆಂಬರ್ ಶೈವರ್ || ೪೯ ||

ಜಗಮಂ ಪರ್ಯಯದಿಂ ಮಾ
ಡುಗುಮೞಿಯುತ್ತಿರ್ಕುಮಾವ ಕಾಲದೊಳಂ ಮಂ
ಕ್ತಿಗೆ ಪೋಗದೆಲ್ಲಿಯುಂ ಸ್ಥಾ
ಣು ಗಡಂ ತೊೞಲುತ್ತುಮಿರ್ಪನೋ ಸಂಸ್ಕೃತಿಯೊಳ್ || ೫೦ ||

ಮುಂ ಮುಕ್ತಿಗೆ ಪೋದನೆ ಜಗ
ಮ ಮಾಡಂ ಬಗೆವೊಡದು ಸುಸಿದ್ಧಂ ಪೆಱತೇಂ
ನಿರ್ಮುಕ್ತಿಗೆ ಪೋಪನೆ ರು
ದ್ರಂ ಮಾಡದೆ ಜಗಮನಱಿದು ಮಾಣಲ್ವೇೞ್ತುಂ || ೫೧ ||

ಲೋಕಂ ಸ್ವಯಂಭುವದಱೊಳ
ನೇಕಂ ಸರ್ವಜ್ಞರಪ್ಪರಂತಾದವರುಂ
ಲೋಕಮನೆ ಮಾಣ್ಬರಲ್ಲದೆ
ಲೋಕಮನಂತಾರ್ಗೆ ಮಾಡಲೇಂ ಬಂದಪುದೇ || ೫೨ ||

ಹರನ ಹೃದಯದೊಳಗಿರ್ಪಂ
ಹರಿ ಕೃಷ್ಣನ ಹೃದಯದಲ್ಲಿ ಸಂತೊಸದಿಂದಂ
ಹರನಿರ್ಪನೆಂದು ಸಂತತಂ
ಧರಾಮ್‌ವೇದದಿಷ್ಟದಿಂದಂ ನುಡಿವರ್ || ೫೩ ||

ಚಂ || ಹರಿಹರದಲ್ಲಿ ಭೇದಮಣಮಿಲ್ಲೆನುತುಂ ನುಡಿಯುತ್ತುಮಿರ್ಪ ಪಾ
ರ್ವರೆ ಶಿವಯೋಗಿಯಂ ಬಿಡದೆ ದೂಷಿಪರಾ ದ್ವಿಜರಂ ತಪಸ್ವಿಗಳ್
ಪಿರಿದುಮೊಡಂಬಡರ್ ಪರಮಿತ್ರರ ಸೇವಕರೊರ್ವರೊರ್ವರಂ
ಪರಿಕಿಸುತಿ[ದು] ಪಾರ್ವರಧಿದೆಯ್ವಮನೊರ್ವರೆ ಮತ್ತೆ ಪೂಜಿಪರ್ || ೫೪ ||

ವೈದಿಕರೆನೆ ದೂಷಿಸುವರ್
ಮಾದೇವನ ಪಕ್ಷದವರ್ಗಳಾ ವೈಷ್ಣವರುಂ
ಮಾದೇವನ ದರುಶನಮಂ
ಬಾದೇಂ ದೂಷಿಸುತುಮಿರ್ಪರಿದು ಮಿತ್ರತ್ವಂ || ೫೫ ||

ಒರ್ವನ ಮೂರ್ತಿಯ ಭಾವಿಸ
ಲೊರ್ವಂ ಗಡಮಲ್ಲಿ ತನ್ನೊಳಾರಾಧಿಸಿದಂ
ಗೊರ್ವಂ ಬರವಿತ್ತೊಡೆ ಮ
ತ್ತೊರ್ವಂ ಮುಳಿದವನಿಱಿವುದಿನ್ನವು ಕೂಟಂ || ೫೬ ||

ಮೃಡನಂ ಮೆಚ್ಚಿಸಿ ಸುಖದಿಂ
ಪಡೆದಾಯುಧದಿಂದೆ ರಾವಣಂ ವಿಷ್ಣುವಿನೊಳ್
ಪೊಡರ್ದಿಱಿದುಂ ಗಡ ತನ್ನಂ
ಕೆಡೆಯೆಚ್ಚೊಡೆ ಸತ್ತನಿಂತುಟೀಶ್ವರನ ವರಂ || ೫೭ ||

|| ಸ್ರ || ಹರಭಕ್ತಂ ಕೋಟಿಲಿಂಗಂಗಳನನವರತಂ ಕಾಸಿನೊಳ್ ಪೊತ್ತ ಬಾಣಾ
ಸುರನೆಂಬಂ ಪ್ರೀತಿಯಿಂ ಪೂಜಿಸುತಿರೆ ಗಡ ವಾತ್ಸಲ್ಯದಿಂ ಮಿಕ್ಕ ಮಾಹೇ
ಶ್ವರನಾ ನಾರಾಯಣಂ ಕಾಸನೆ ಕಡಿದೊಡೆ ಲಿಂಗಂ ಗಡಂ ಬೀೞೆ ಬಾಣಾ
ಸುರನಾಗಳ್ ಸತ್ತನಾಗಳ್ ಶಿವಸಮಯದವರ್ ತಮ್ಮೊಳಿತಾಗವೇಡಾ || ೫೮ ||

ಚಂ || ಪರಮಮಹೇಶ್ವರರ್ ದಿತಿಜರಪ್ಪುದಱಿಂ ಕೊಲಬಾರದೀಶನಂ
ಪರಿಹರಿಸಲ್ಕೆ ಶಕ್ತಿ ಕಿಡುಗುಂ ಕಿಡೆ ಕೊಲ್ವನೆನುತ್ತಮಂಬುಜೋ
ದರನಿರದಂದು ಬುದ್ಧವಪುವಂತದನಾಗಳೆ ತಾಳ್ದಿ ಮೋಹಿಸಲ್
ಗಿರಿಶನ ಭಕ್ತಿಯಂ ಮಱೆಯೆ ದೈತ್ಯರನಂದೞಿದಂ ಗಡಚ್ಯುತಂ || ೫೯ ||

ಒರ್ವಂ ಜಗಮಂ ಮಾಡುವ
ನೊರ್ವಂ ಮತ್ತದನೆ ಕಾವನಲ್ಲದನೇಂ ಮ
ತ್ತೊರ್ವಂ ಕಿಡಿಸುವನನಿಬರು
ಮೊರ್ವನೆ ಗಡ ಕಡೆಯೊಳಿನ್ನವಘಟಿತಮೊಳವೇ || ೬೦ ||

ಒರ್ವಂ ಮಾಡಿದುದಂ ಮ
ತ್ತೊರ್ವಂ ಕಿಡಿಸಿದೊಡೆ ಕೊಲ್ವರೆಲ್ಲಮಿ[ದೇಂ] ಮ
ತ್ತೊರ್ವಂ ಮಾಡಿದ ಲೋಕಮ
ನೊರ್ವಂ ಗಡ ಸುಟ್ಟು ಮತ್ತೆಯುಂ ಕೂಡಿರ್ಪರ್ || ೬೧ ||

|| ಜಗಮಂ ಮಾಡುವನಬ್ಜಸಂಭವನದಂ ಕಾದಂ ಗಡ ವಿಷ್ಣು ತ
ಜ್ಜಗಮಂ ತಾಂ ಕಡೆಯಲ್ಲಿ ಕೂಡೆ ಸುಡುವಂ ರುದ್ರಂ ಗಡಿನ್ನೇಕಮೂ
ರ್ತಿಗಳೊಂದಂದಮದೆಂತೊ ಪುಟ್ಟಿಸಿದವಂಗಂ ಕಾದವಂಗಂ ಹರಂ
ಪಗೆಯಲ್ತೇ ಸುಡುವಾತನೆಂದು ತಿಳಿಯರ್ ಮೂಢಾತ್ಮರೇಗೆಯ್ದೊಡಂ || ೬೨ ||

ಹರಿಹರೆಂತುಂ ಕೊಲ್ವರ್
ವಿರಿಂಚಿ ಬರವಿತ್ತ ದನುಜರಂ ಮತ್ತಾ ಮೂ
ವರುಮೇಕಮೂರ್ತಿಗಳ್ ಗಡ
ನಿರಂತರಂ ತಮ್ಮೊಳಿಂತು ನೇರ್ಪಡವೇಡಾ || ೬೩ ||

ವನಜಭವಂ ದನುಜರನೊಂ
ದಿನಿಸಾನುಂ ಭಕ್ತಿಗಿತ್ತು ಬರವಂ ಜಗಮು
ಳ್ಳನಿತುಮನೞಿದಪರೆಂದಂ
ದನಿಬರುಮಂ ಕೊಂದರೆಯ್ದೆ ಹರಿಹರರೆಂಬರ್ || ೬೪ ||

ವಾರಿಜಭವನಂ ನಿಷ್ಠೆಯಿ
ನಾರಾಧಿಸಿ ಸಾಯದಂತು ವರಮಂ ಪಡೆದಾ
ತಾರಕನಂ ಶಂಕರನ ಕು
ಮಾರಕನೞಿದಂ ಗಡಿಂತು ತೊಟ್ಟಿಲ ಚಿಣ್ಣಂ || ೬೫ ||