ಮ || ಎನಿತಂ ಭಾವಿಸಿ ನೋಡೆ ದೋಷರಹಿತಂ ಜ್ಞಾನಾತ್ಮ ಕಂ ದೇವನಾ
ತನ ಸೂಕ್ತಂ ಪರಮಾಗಮಂ ನಿಖಿಳಸೌಖ್ಯಕ್ಕಾಸ್ಪದಂ ಶ್ರೀಯುತರ್
ವಿನಯಾಚಾರದಯಾನ್ವಿತಲ್ ಪರಮಮುಕ್ತಿಶ್ರೀವಧೂಕಾಂಕ್ಷಿತರ್
ಮುನಿಗಳ್ ತಾಮೆನೆ ಜೈನಧರ್ಮಮನದಂ ಬಣ್ಣಿಪ್ಪನೇವಣ್ಣಿಪಂ || ೧ ||

ವಿಳಸನ್ನರೇಂದ್ರಸೌಖ್ಯದ
ನಿಳಯಂ ದೇವೇಂದ್ರಸೌಖ್ಯದೆಱೆವಟ್ಟತಿನಿ
ಶ್ಚಳಸೌಖ್ಯದಾಯಿ ಮೋಕ್ಷದ
ಬೆಳೆಗೆಯ್ ತಾಮೆನೆ ಜೈನಧರ್ಮಮನದಂ ಬಣ್ಣಿಪ್ಪನೇವಣ್ಣಿಪಂ || ೨ ||

ಆವಾವ ಮಾೞ್ಕೆಯಿಂದಂ
ಭಾವಿಸುವೊಡಮೆಲ್ಲ ತೆಱದೊಳಂ ಪಾವನಮುಂ
ಸಾವದ್ಯರಹಿತಮಪ್ಪುದ
ದಾವುದು ತಾನದನೆ ಧರ್ಮಮೆಂದಱಿಗಱಿವಂ || ೩ ||

ಆವುದು ಸನ್ಮಾರ್ಗಂ ವಿ
ಶ್ವಾವನಿಯೊಳ್ ನೆಗೞ್ಗುಮಾರ ಧರ್ಮದೊಳದೆ ತಾಂ
ದೇವೇಂದ್ರವಂದ್ಯಮಖಿಲಸು
ಖಾವಹಮಂತದುವೆ ಧರ್ಮಮುೞಿದುದಧರ್ಮಂ || ೪ ||

ಶ್ವಪಚಂ ಮೊದಲಾಗಿರೆ ಮಿ
ಕ್ಕ ಪಾಪದೊಳ್ ಪೊರೆಯದಾವ ಧರ್ಮದೊಳೆಸಗಿ
ರ್ದು ಪವಿತ್ರಮೆನಿಕುಮದೆ ತಾ
ನಪವರ್ಗೋಚಿತಮೆನಿಪ್ಪ ಧರ್ಮಂ ಧರೆಯೊಳ್ || ೫ ||

ಉತ್ತಮರೆವೆಂದು ಬೆಸೆವರ
ವಿತ್ತಂ ತವೆ ಮಾೞ್ಪ ಮಾಟಮಂ ಕೇಳಲೊಡಂ
ತುತ್ತನಿದಂ ಪೊಲೆಯನುಮೆನಿ
ಪುತ್ತಮಚಾರಿತ್ರಮೆಲ್ಲಿತಲ್ಲಿಯೆ ಧರ್ಮಂ || ೬ ||

ಉತ್ತಮರೊಳ್ ಪಾರ್ವಂಗಂ
ಮತ್ತತ್ತಲ್ ಕೀಲಿಗಂಗಮೊಂದಂದಂ ತಾ
ನುತ್ತಮಚರಿತ್ರಮಾದೊಡೆ
ಮತ್ತಂ ಮೋಕ್ಷಕ್ಕೆ ಮಾರ್ಗಮದೆಯೆನ್ನಱಿವಂ || ೭ ||

ಕುಲಹೀನಂಗೊಂದಂದಂ
ಕುಲಜಂಗೊಂದಂದಮಕ್ಕುಮಾಚಾರಮದೆಂ
ದೊಲವರಮಂ ಪೇೞ್ವುದು ನಿ
ರ್ಮಲಧರ್ಮಮದಲ್ಲ ಠಕ್ಕಮತಮೆನ್ಗಱಿವಂ || ೮ ||

ಪೊನ್ನುಂ ದಯೆಯೊಳ್ ಕೂಡಿ ಜ
ಗನ್ನುತಮೆನಿಸಿರ್ದ ಧರ್ಮಮುಂ ಸಕಲಜಗ
ಕ್ಕಂ ನಿರುತಂ ಸಲವೇೞ್ಪುದು
ಪೊನ್ನಱನೆಂಬೆರಡರಲ್ಲಿವೊಲವರಮುಂಟೇ || ೯ ||

ಪೊಲೆಯಂ ಪಡೆದ ಸುವರ್ಣಂ
ಕುಲುಂಬುಗೊಂಡಿರ್ದು ತಾಮ್ರಮಕ್ಕುಮೆ ಧರ್ಮಂ
ಕುಲಜಂಗಮಕುಲಜಂಗಂ
ಸಲವೇೞ್ಪುದು ಕುಲಮದೇವುದಱಿತಮೆ ಮುಖ್ಯಂ || ೧೦ ||

ಉ || ಕ್ಷತ್ರಿಯನಾದಿಯಾಗಿ ಕಡೆಯೊಳ್ ಪೊಲೆಯಂಬರಮೆಲ್ಲ ಜಾತಿಗಂ
ಧಾತ್ರಿಯೊಳೆಲ್ಲಿ ನೋಡುವೊಡಮೇತೆಱದಿಂ ಕಱೆಯಿಲ್ಲ ಶುದ್ಧಚಾ
ರಿತ್ತಮದೊಂದೆ ಮಾರ್ಗಮದಱಿಂ ಜಿನಧರ್ಮಮೆ ಧರ್ಮಮೈಹಿಕಾ
ಮುತ್ರಿಕಸೌಖ್ಯಹೇತು ಭುವನತ್ರಯಸಾರಮದೆಂತುಮೆಲ್ಲಿಯುಂ || ೧೧ ||

ಹಿಮಕರನ ಹಿಮಾಂಶುಗಳು
ತ್ತಮಜಾತಿಗಮಂತ್ಯಜಾತಿಗಂ ತಣ್ಪಿಂದಂ
ಸಮನಪ್ಪ ತೆಱದಿನಱನುಂ
ಸಮನಾಗಲೆ ವೇೞ್ಕುಮಾವ ಜಾತಿಗಮೆಂತುಂ || ೧೨ ||

ಪಾಲುತ್ತಮಂಗಮಾ ಚಾಂ
ಡಾಲಂಗಂ ಸೀಯನಪ್ಪ ತೆಱದಿಂದಱನುಂ
ಮೇಲಪ್ಪ ಜಾಗಿತಂ ಚಾಂ
ಡಾಲಂಗಮದೊಂದೆಯಂದಮಾಗಲೆವೇೞ್ಕುಂ || ೧೩ ||

ಆದಿದೆನುತುಂ ಬಾದಂ ಮಾ
ೞ್ಪುದು ಬುದ್ಧಿಯೆ ಪಿರಿದುಮಾವುದೊ ಕಾರಣಮ
ಭ್ಯುದಯಕ್ಕಂ ಮುಕ್ತಿಗಮಾಂ
ತದೆ ಧರ್ಮಂ ಜಗದೊಳಲ್ಲಿ ಸಂದೆಯಮುಂಟೇ || ೧೪ ||

ಒರೆದುಂ ಕಡಿದುಂ ಪೊಯ್ದುಂ
ಕರಗಿಸಿಯುಂ ಪೊಪ್ಪನೆಂತು ನೋಡುವರಿನ್ನಂ
ತಿರೆ ದೆಯ್ವದಿನಾಗಮದಿಂ
ಚರಿತ್ರದಿಂ ದಯೆಯಿನೆಯ್ದೆ ಪರಿಕಿಪುದಱನಂ || ೧೫ ||

ಪಿತ್ತಳೆಗೆ ಬೆಳ್ಳಿಯುತ್ತಮ
ಮುತ್ತಮಮದಱಿಂ ಸುವರ್ಣಮೆಂಬವೊಲದಱಿಂ
ದುತ್ತಮವಿಂತಿದು ನೋೞ್ಪೊಡೆ
ನುತ್ತುಂ ಪರಿಕಿಸುವುದೊಳ್ಪನಱಸುವ ಮನುಜಂ || ೧೬ ||

ಲೇಸಿಂಗೆ ಲೇಸ ಮಾೞ್ಪುದು
ದೋಸಮಿದೊಳ್ಳಿತ್ತಿದೆಂದು ತಿಳಿವುದು ತಿಳಿದುಂ
ದೋಸಮನೆ ಬಿಟ್ಟು ಬೇಗಂ
ಲೇಸೆನಿಸಿದ ಧರ್ಮದತ್ತಲೆಱಗುವುದಱಿವಂ || ೧೭ ||

ಸಾರಮಿದಸಾರಮಿದೆಂದು ವಿ
ಚಾರಿಸುವುದು ಮುನ್ನೆ ತನ್ನೊಳಱಿವುಳ್ಳವರೊಳ್
ವೈರಮನೆ ಬಿಟ್ಟು ಧರ್ಮದ
ಸಾರಮನೇಂ ತಿಳಿದು ಬೞಿಕೆ ಕೈಕೊಳ್ಗಱಿವಂ || ೧೮ ||

ಚಂ || ಪರಿಕಿಸದೇನುಮಂ ನೆಗೞ್ಪುದೇ [ಪೞಿ]ಗೊಳ್ವೊಡೆ ಕಯ್ಯನಿಟ್ಟು ಮುಂ
ಪರಿಕಿಸಿ ಮಾಱುಗೊಳ್ವರೆನೆ ಶಾಶ್ವತಸೌಖ್ಯಸಧರ್ಮಮಂತದಂ
ಪರಿಕಿಸದುದ್ಧತಂ ಪ[ೞಿ]ವುದೇಕೆ ವಿನಿರ್ಮಳಧರ್ಮಮಂ ಕರಂ
ಪರಿಕ್ಷಿಸಿ ಸಂತತಂ ನೆಗೞ್ವುದಂತದಱಿಷ್ಟದಿನೊಳ್ಪನೊಲ್ವವಂ || ೧೯ ||

ಅಡಗಂ ತಿಂದುಂ ಕಳ್ಳಂ
ಕುಡಿದುಂ ನಲಿದಾಡಿ ಮೆಯ್ಗೆ ಮೆಚ್ಚಿದ ತೆಱದಿಂ
ನಡೆವುದೇಂ ಧರ್ಮಮೆ ನೋ
ೞ್ಪೊಡೆ ನಿರ್ಮಳಮಾವ ತೆಱದೊಳಂ ಜಿನಧರ್ಮಂ || ೨೦ ||

ಎಂತುಂ ನೇರಾಣಿಯ ಪೊ
ನ್ನಂತಿರೆ ಲೇಸೆನಿಪುದೆಂತು ಪರಿಕಿಪೊಡಮೆನಿ
ಪ್ಪಂತದು ಧರ್ಮಂ ಪಿತ್ತಳೆ
ಯಂತೆಸೆವುದು ಧರ್ಮಮಾಗಿ ಸಲಲಱಿದಪುದೇ || ೨೧ ||

ಮ || ಇದು ಧರ್ಮ ಸುಚರಿತ್ರಮಿಂತುಟಿದು ದಲ್ ಪುಣ್ಯಾವಹಂ ನೋೞ್ಪೊಡಿಂ
ತಿದು ಸೌಖ್ಯಾಕರಮೀಗಳಿಂತು ಬೞಿಯಂ ಮುಂತಪ್ಪ ಜನ್ಮಕ್ಕೆ ತಾ
ನಿದೆ ಮೋಕ್ಷಪ್ರದಮಕ್ಕುಮೆಂದನಿತುಮಂ ನಿಶ್ಚಯಿಸಿ ಸನ್ಮಾರ್ಗದಿ
ಷ್ಟದಿನೊಲ್ದಾಚರಿಪಂ ವಿವೇಕಿಯುೞಿದಂ ಚಾತುರ್ಯಹೀನಂ ನರಂ || ೨೨ ||

ಲೋಕದ್ವಯಹಿತಮಂ ಸೌ
ಖ್ಯಾಕರಮಂ ಜೈನಧರ್ಮಮಂ ಖಳಕರ್ಮಾ
ನೀಕಕ್ಷಯಕರಮಂ ನಿ
ರ್ವ್ಯಾಕುಳಮನನಾಗಿ ಸೇವಿಪುದು ಮತಿವಂತಂ || ೨೩ ||

ಸಮಯಂಗಳೊಳೆಲ್ಲಂ ಜಿನ
ಸಮಯಮೆ ಸುಖನಿಳಯಮಂತದಂ ಸನ್ಮತಿಯಿಂ
ದಮೆ ತಿಳಿದು ಪೊಕ್ಕ ಭವ್ಯನೆ
ಸುಮತಿ ವಿವೇಕಕ್ಕವನೆ ಕಳಶಮನಿಟ್ಟಂ || ೨೪ ||

ಪೆಱಪೆಱವು ಸಮಯದೊಳ್ ಸುಖ
ಮಱಸುವವೊಡುಂಟಣ್ಣ ಸಕಳಸೌಖ್ಯಕ್ಕಂ ಪಾ
ನೆಱವಟ್ಟೆನಿಸಿದ ಪೆಂಪಂ
ನೆಱೆ ತಾಳ್ದಿದ ಜೈನದಲ್ಲಿ ಪಡೆಯಲ್ ಬರ್ಕುಂ || ೨೫ ||

ಧರ್ಮಂಗಳರಸನಂ ಜಿನ
ಧರ್ಮಮನೆತ್ತಾನುಮೊರ್ಮೆ ಬಗೆಗೊಂಡಾತಂ
ಕರ್ಮದ ತೊಡರಂ ಪಱಿದಿ
ರ್ದೊರ್ಮೊದಲೊಳೆ ದೇವನಾಗಲಾರ್ಪನಮೋಘಂ || ೨೬ ||

ಜಿನಧರ್ಮದಲ್ಲಿ ಚಿತ್ತಂ
ತನಗಾದೊಡೆ ಬೇಗಮಂತೆ ಕೈಕೊಳ್ಳದವಂ
ತನಗೆ ನಿಧಾನಂ ಸಾರ್ದೊಡ
ಮನುಭವಿಸದೆ ತಿರಿವುತಿರ್ಪ ಮರುಳಂ ಪೋಲ್ಕುಂ || ೨೭ ||

ಪ್ರಬಳಜಿನಮಾರ್ಗಮಂ ಬಿ
ಟ್ಟು ಬೇಱೆ ಪೆಱತೊಂದು ವಿಡಿದು ತುದಿಯೆಯ್ದಲ್ಕಿ
ರ್ಪಬಳನವಂ ಕೂದಲ್ವಿಡಿ
ದು ಬೆಟ್ಟವಡರುತ್ತುಮಿರ್ಪ ಜಡನಂ ಪೋಲ್ಕುಂ || ೨೮ ||

ಕನಕಂ ಕಲ್ಲೊಳಗಿಂ ತೆಗೆ
ವನ್ನಂ [ತಾಂ] ದಹನ ತಾಪನಕ್ರಿಯೆ ವೇೞ್ಕುಂ
ಮನುಜಂಗೆ ಮುಕ್ತಿವಡೆವೊಡೆ
ಜಿನಮಾರ್ಗ[೦] ನಿಯಮದಿಂದಮಾಗಲೆವೇೞ್ಕುಂ || ೨೯ ||

ನೆಱೆ ಜಿನಮಾರ್ಗದೆ ನಡೆದೊಡೆ
ಕೊಱೆವಂತಿರೆ ಕರ್ಮಮುೞಿದಱೊಳ್ ಕೊಱೆದಪುದೇ
ಪಱುಗೋಲೊಳ್ ಪಾಯ್ವಂತಿರೆ
ತೊಱೆಯಂ ಮೊಱದಿಂದೆ ಪಾಯಲೇಂ ಬಂದಪುದೇ || ೩೦ ||

ಪುಟ್ಟುವ ಪೊಂದುವ ರುಜೆಗಿದೆ
ನೆಟ್ಟನೆ ಮರ್ದೆನಿಸಿ ನೆಗೞ್ದ ಜಿನಶಾಸನಮಂ
ಬಿಟ್ಟುೞಿದುದಱೊಳಗೆಸಪಂ
ಪುಟ್ಟದೆ ಮಾಣ್ಬನೆ ಭವಾಬ್ಧಿಯೊಳ್ ಮತಿಹೀನಂ || ೩೧ ||

ಸಿರಿ ದೊರೆಕೊಂಡೊಡೆ ಮತ್ತಂ
ತಿರಿಯುತ್ತಿರಲೇಕೆ ಪುಣ್ಯದಿಂ ಜಿನಧರ್ಮಂ
ದೊರೆಕೊಂಡೊಡೆ ಪುರುಳಿಲ್ಲದ
ಪರಸಮಯಂಗಳೊಳೆ ತೊಡರ್ದು ಕಿಡುವುದೆ ಚದುರಂ || ೩೨ ||

ಸಲೆ ಮುಂ ಕಳ್ಗುಡಿವಂ ನಿ
ರ್ಮಳಮೆನಿಸಿದ ಜೈನಧರ್ಮಮಂ ಮಱೆಗೊಳೆ ಭೂ
ತಳವಂದ್ಯನಕ್ಕುಮೆನೆ ಮ
ತ್ತೆ ಲೇಸು ಜಿನಧರ್ಮಮಲ್ಲದೊಳವೇ ಧರ್ಮಂ || ೩೩ ||

ಎನಿತಾನುಂ ದುರ್ಜನ[ನ
ನ್ನ]ಯಮಂ ಮಾಡುತ್ತಮಿರ್ದನುಂ ಗುಣಿಯೆನಿಕುಂ
ಜಿನಸಮಯಿಯೆನಿಸಿದೊಡೆ ಪಾ
ಸಿನ ಪರೆಪಂ ಪಚ್ಚವಡಿಗೆ ಮುಚ್ಚುವ ತೆಱದಿಂ || ೩೪ ||

ಕಟ್ಟಳಿಪಿಂದೊಳ್ಗುಣಮಂ
ಬಿಟ್ಟುಂ ಲಘುಪಾತ್ರನಾಗಿ ಕಾಗೆಯ ಕೊರಲೊಳ್
ಕಟ್ಟಿದೊಡೆ ಪಾಱುವವನುಂ
ನೆಟ್ಟನೆ ಬಿಣ್ಣಿದನೆನಿಕ್ಕುಮಾರ್ಹತದಿಂದಂ || ೩೫ ||

ಪತ್ತೆಂಟು ಪಲದೊಳೊರ್ಪಲ
ಕತ್ತುರಿಯಂ ಕೂಡಲೊಡನೆ ದಳವುಳ್ಳನಿತುಂ
ಕತ್ತುರಿಯಪ್ಪವೊಲಾರ್ಹತ
ದೊತ್ತುಳ್ಳಂದನ್ಯಸಮಯಿ ದೇನೆನಿಕ್ಕುಂ || ೩೬ ||

ಜಿನಧರ್ಮದ ವಾರ್ತೆಯುನೊಂ
ದಿನಿಸಾನುಮನಱಿವೊಡನ್ಯಸಮಯದ ಮುನಿಗಳ್
ಜಿನಮುನಿಗೆ ದೊರೆ ಸಮಂತಿದ
ರೆನಿಸಲ್ ತಾಮಾರ್ಪರಿನಿಸು ದಯೆಯಱಿವುದಱಿಂ || ೩೭ ||

ಸಲೆ ನಿಚ್ಚಂ ಮೃಗಕುಳಮಂ
ಕೊಲುತಿರ್ಪನುಮೊರ್ಮೆ ಋಷಿಯರಂ ಕಂಡಂದಾ
ಪೊಲದಲ್ಲಿ ಮೃಗಮನೆಂತುಂ
ಕೊಲಪಡೆಯಂ ಧರ್ಮವಿನ್ನವೊಳವೇ ಜಗದೊಳ್ || ೩೮ ||

ಚಳಮತಿಗಳ್ ತಮ್ಮಿಚ್ಛೆಗೆ
ಗೞಪಿದೊಡೇಂ ಕ್ರೋಧಮಾನಮಾಯಾಲೋಭಂ
ಗಳ ದೆಸೆಯಂ ಪೊರ್ದದ ನಿ
ರ್ಮಳಧರ್ಮಂ ಜೈನಧರ್ಮದಿಂ ಪೆಱತುಂಟೇ || ೩೯ ||

ಪಿತ್ತಳೆಯಂತಿರೆ ನೋೞಪೊಡೆ
ಮತ್ತಿನ ಧರ್ಮಂಗಳೆಂತು ಪರಿಕಿಸುವೊಡಮ
ತ್ಯುತ್ತಮ ಸುವರ್ಣದಂದದಿ
ನೆತ್ತಂ ಲೇಸಪ್ಪುದೆಲ್ಲಿಯುಂ ಜಿನಧರ್ಮಂ || ೪೦ ||

ಪುಸಿವವನೆ ತೊಲಗು ಹಿಂಸೆಯೊ
ಳೆಸಗುತ್ತಿಪ್ಪವನೆ ತೊಲಗು ಪರವಧುವಿಂಗಾ
ಟಿಸುವನೆ ತೊಲಗೆನುತುಂ ತಾಂ
ಪಸರಿಸುವುದು ಜೈನಧರ್ಮಭೇರೀನಿನದಂ || ೪೧ ||

ಅಡಗಂ ತಿಂಬ ತೊಲಗು ಪೆಱ
ರೊಡಮೆಗಳಂ ಕೊಳ್ವ ತೊಲಗು ಮಧುವಂ ಕಳ್ಳಂ
ಕುಡಿವವನೆ ತೊಲಗೆನುತ್ತುಂ
ಪೊಡವಿಗೆ ಜಿನಧರ್ಮದೊಂದೆ ಗೋಸನೆಯೆಸೆಗುಂ || ೪೨ ||

ಪಲವೊಳವು ಧರ್ಮಮವಱೊಳ್
ಫಲಮಾವುದು ಪಾಪದತ್ತಲೊಂದದ ಪೆಂಪಂ
ಸಲೆ ತಾಳ್ದ ನಿಂದ ಧರ್ಮಮೆ
ವಲುಮಘಕುಲಹರಣಕರಣಮದೆ ಸದ್ಧರ್ಮ || ೪೩ ||

ದಾನಿಗೆ ಶೌಚಿಗೆ ಸಮ್ಯಕ್
ಜ್ಞಾನಿಗೆ ಜಿನಧರ್ಮಮೞ್ತಿ ಭಾವಿಸುವಂದ
ಜ್ಞಾನಿಗೆ ಖಳಂಗೆ ಪಾಪಿಗೆ
ಹೀನಚರಿತ್ರಂಗೆ ರುಚಿ ಜಿನೇತರಧರ್ಮಂ || ೪೪ ||

ಈ ತೆಱದಿಂ ಭಾವಿಸುವೊಡೆ
ಪಾತಕದೊಳ್ ಪೊರ್ದದೆನಿಪ ಜಿನಶಾಸನಮಂ
ನೀತಿವಿದರೊಲ್ವರಲ್ಲದೆ
ಚಾತುರ್ಯವಿಹೀನರೆಂತುಮೊಲ್ಲರಮೋಘಂ || ೪೫ ||

ಕಡುಬಸನದಿಂದೆ ಕಿಡಕಿಯ
ರೊಡನಾಡುತ್ತಿರ್ಪವಂಗಮಲಸದೆ ಪುಷಿಯಂ
ನುಡಿವಂಗಂ ಪ್ರಾಣಿಗಳಂ
ಮಡಿಪುತ್ತಿಪ್ಪಂಗಮೞ್ತಿಯೇ ಜಿನಧರ್ಮಂ || ೪೬ ||

ಅತುಳಂ ಲೋಕದ್ವಯಕತಿ
ಹಿತಮೆನಿಸಿದ ಜೈನಧರ್ಮಮೆಂತುಮಸಂಭಾ
ವಿತಮತಿಗೆ ಸೊಗಯಿಸದು ರಾ
ಜಿತದರ್ಪಣಮೆಂತನಾಸಿಕಂಗು[ಱಿಸದ] ವೋಲ್ || ೪೭ ||

ಪತ್ತದು ನೊಣಮೇಗೆಯ್ದು
ಕತ್ತುರಿಯೊಳ್ ಕೊೞೆಗೆ ಪೋಕುಮಂತಿರಲೆಂತುಂ
ಪತ್ತದು ದಲ್ ದುಶ್ಚರಿತನ
ಚಿತ್ತಂ ಜಿನಧರ್ಮದಲ್ಲಿ ನಿಶ್ಚಯದಿಂದಂ || ೪೮ ||

ಖಳಸಂಗದೊಳಿರ್ಪನ ಮನ
ವೆಳಸದು ಧರ್ಮಕ್ಕೆ ಪಾಪಮನೆ ಮಾೞ್ಪುದಱಿಂ
ಗೞಗೞನೆ ಬೞಿಕೆ ನರಕ
ಕ್ಕಿೞಿಗುಂ ಮಱುಭವದೊಳಲ್ಲಿ ಸಂದೆಯಮುಂಟೇ || ೪೯ ||

ಅರಯ್ವೊಡೆಮ್ಮ ಧರ್ಮದ
ಸರತೆಯಂ ಪೋಲವನ್ನಧರ್ಮಂಗಳೆನು
ತ್ತಾರುಂ ನುಡಿವರ್ ತಮ್ಮಳೆ
ನೀರಳೆಯೆಂದಪರೆ ಮಿಕ್ಕ ಸಮಯಿಗಳೆಲ್ಲಂ || ೫೦ ||

ನಿಯಮಿಪರುಳ್ಳುದಱಿಂ ರೂ
ಡಿಯ ಜೈನಮನೊಲ್ಲದಂಗೆ ಮತ್ತಿನ ಧರ್ಮಂ
ಪ್ರಿಯಮೇಕೆನಲೆಲೆಯೆಂಬ
ತ್ತೆಯಿಲ್ಲಮೆಲೆಯೆಂಬ ಮಾವನಿಲ್ಲಪ್ಪುದಱಿಂ || ೫೧ ||

ನಿನಗಿದು ನಿಧಿ ದೊರೆಕೊಂಡುದು
ಜಿನಧರ್ಮಂ ಕೈಕೊಳಲ್ಕೆ ವೇೞ್ಕುಂ ನೀನೆಂ
ದೆನಿತಂ ಪೇೞ್ಪೊಡಮೇಂ ಭ
ವ್ಯನಲ್ಲದಂ ಕೈಕೊಳಲ್ಕದೇನಱಿದಪನೇ || ೫೨ ||

ಪ್ರತಿಕೂಲದೈವನೊಳ್ ಪಿಡಿ
ದುತಂದು ಲಕ್ಷ್ಮಿಯನೆ ಕೂಡೆಯುಂ ಕೂಡದವೋಲ್
ಗತಪುಣ್ಯನಪ್ಪನೊಳ್ ಜಿನ
ಮತಮಂ ಪತ್ತಿಸಿದೊಡೆಂತುಮೇಂ ಪತ್ತುಗುಮೇ || ೫೩ ||

ಪಿರಿದುಂ ದಯೆಯಿಂದಂ ಸಂ
ಸರಣಾಂಭೋರಾಶಿಯಿಂದೆ ಪೊಱಮಡಿಸಲ್ ಸ
ಚ್ಚರಿತದೆ ನಡೆಯಿಮೆನಲ್ ದು
ಶ್ಚರಿತ್ರರಾ ಜೈನ[ಮೆಂ]ಬುದಂ ನಗುತಿರ್ಪರ್ || ೫೪ ||

ಜಱುಚಲ್ತು ಬಾಳ್ ಬಾಯೊಳ್
ಕಿಱಿದೆಡೆಯೊಳ್ ನಡೆಯಬರ್ಕುಮಲ್ಲದೆ ಪಲವುಂ
ತೆಱದ ಸುಚರಿತ್ರದಿಂದಂ
ನೆಱೆದಾರ್ಹತದಲ್ಲಿ ನಡೆಯಬಾರದಿದಾರ್ಗಂ || ೫೫ ||

ಬಿಡದನ್ಯಧರ್ಮಮಾರ್ಗದೆ
ನಡೆವಂದದೆ ಜೈನಧರ್ಮಮಾರ್ಗದೊಳೆಂತುಂ
ನಡೆಯಲ್ ಬರ್ಕುಮೆ ಪಾಪಿಗೆ
ಕಡಲೆಗಳಂ ತಿಂಬ ಮೊಗ್ಗು ಕಲ್ಗಳೊಳುಂಟೇ || ೫೬ ||

ಮೊದಲೊಳ್ ಕುಟುಕಂ ಪರಿಣಾ
ಮದೊಳಮೃತಸಮಾಮಪ್ಪ ಜೈನಬ್ರತಮಂ
ಮದಮೋಹವ್ಯಾಧಿಗೆ ತ
ಕ್ಕುದೆನಿಸುವೌಷಧಮನಾರೊ ಕೈಕೊಳ್ಳದವರ್ || ೫೭ ||

ಸಾರತರ ಜೈನಮಾರ್ಗದೊ
ಳೋರಂತಿರೆ ನಡೆಯದನ್ಯಮಾರ್ಗದೆ ನಡೆ[ದೇಂ]
ದೂರದ ತೊಱೆಯಂ ಮೀವರ್
ನೀರಿಂ ಪೋಪಂತೆ ಮೆಯ್ಯ ಮಲಮೋ ಪಾಪಂ || ೫೮ ||

ಪಲವುಂ ತೊಱೆಗಳ ನೀರಂ
ಸಲೆ ಮಿಂದೊಡೆ ಪೋಪವಲ್ಲ ಪಾಪಂಗಳ್ ನಿ
ರ್ಮಳಿನ ಜಿನಧರ್ಮಮೆಂಬೀ
ಜಳದಿಂ ಕರ್ಚುವುದು ಪಾಪಪಂಕಮನಱಿವಂ || ೫೯ ||

ಚಂ || ಇದು ಕುಲಧರ್ಮಮಿಂತಿದನೆ [ದಲ್] ಬಿಡಲಾಗದೆನುತ್ತೆ ದೋಷದೊಳ್
ಪುದಿದುದನಂತೆ ಪತ್ತಿ ನಮೆವರ್ ಪರಿಭಾವಿಸಿ ವಿಶ್ವಸೌಖ್ಯಸಂ
ಪದಮನಗಣ್ಯಪುಣ್ಯನಿಧಿಯಂ ಜಿನಧರ್ಮಮನೆಂತುಮೊಲ್ಲದಾ
ವದಿವಡುವಂಗೆ ಶಾಶ್ವತಸುಖಂ ದೊರೆಕೊಂಡೆಡಮೊಲ್ಲದಂದದಿಂ || ೬೦ ||