ಶ್ರೀಗೆ ವಚಃಶ್ರೀಗೆ ಜಯ
ಶ್ರೀಗೆ ಯಶಃಶ್ರೀಗೆ ತಾವೆ ನೆಲೆಯಾಗಿ ಜಗ
ಕ್ಕಾಗಳುಮಭಿಮತಸುಖಮಂ
ಬೇಗಂ ಕುಡುವಭವಚರಣಮೀಗೆಮಗೊಳ್ಪಂ || ||

ಅತಿನಿರ್ಮಳಗುಣಸಂಗದಿ
ನತಿಶಯದಸದ್ವೃತ್ತರುಚಿರಮಣಿನಿಚಯದಿನೀ
ಕ್ಷಿತಿಯೊಳ್ ಭಾವಿಸುವೊಡಲಂ
ಕೃತಿಯವೊಲೆಸೆದಿರ್ಪರಲ್ತೆ ಜೈನಮುಣೀಂದ್ರರ್ || ||

ಚಂ || ಖರಕರತಪ್ತಮಪ್ಪ ತನುತಾಪಮನಾಱಿಸಲಬ್ಜವಿಷ್ಟರಂ
ಧರಿಯಿಸಿದಂ ಕಮಂಡಳುವಿನೊಳ್ ಜಳಮಂ ಜಳಧಿಸ್ಥನಾದನಾ
ಹರಿ ಹರ[ನಿಂದು]ಸಿಂಧುವನೆ ಪೊತ್ತು [ಸು]ನೆತ್ತಿಯೊಳಾಂತನಂತು ನಿಂ
ದುರಿವ ನಿದಾಘದೊಳ್ ಋಷಿಯರಂದದೆ ಕಲ್ನೆಲೆನಿಲ್ವನಾವವಂ || ||

ಚಂ || ಕುಳಿತವರುದ್ಧಮೆಂದಱಿಯಲಾರ್ಗಮಗೋಚರಮಾಗಿ ಕೊಳ್ವ ಒಎ
ಮೞೆಯ ಪೊನಲ್ಗೆ ಶೈಳಕುಳವಳ್ಕುಱೆ ಬೀಸುವ ಗಾಳಿಗೆತ್ತಲುಂ
ಮೊೞಗುವ ಮೇಘಗರ್ಜನೆಗೆ ಪೊಯ್ವ ಸಿಡಿಲ್ಗೆ ನಗೇಂದ್ರದಂತೆ ಸಂ
ಚಳಿಸುವ ಜೈನಯೋಗಿಯವೊಲೇಂ ನಿಲಲಾರ್ಪರೆ ವೃಕ್ಷಮೂಲದೊಳ್ || ||

|| ಸ್ರ || ಪರೆದಂಗೋಪಾಂಗದೊಳ್ ಪತ್ತಿರೆ ಹಿಮಪಟಳಂ ಹೈಮನಂ ಗಾ[ಳಿ] ಬೀಸು
ತ್ತಿರೆ ಶುದ್ಧಧ್ಯಾನದಿಂದಂ ಸ್ಫಟಿಕಮಣಿದೃಢಸ್ತಂಭಮೀ ನಿಂದುದೆಂಬಂ
ತಿರೆ ನಿಲ್ವರ್ ಬೆಳ್ಳವಾಸಬ್ರತದ ನಿಯಮದಿಂದಂ ಜಿನೇಂದ್ರವ್ರತೀಂದ್ರರ್ || ||

ಸ್ತುತಿಯಿಸೆ ಧರಿತ್ರಿ ಸೂರ್ಯ
ಪ್ರತಿಮಾಯೋಗದೊಳೆ ಪೂಣ್ಣು ವಿಶ್ರುತಜೈನ
ವ್ರತಿ ನಿಲ್ಲನಿತರ ಮುನಿ ನಿಜ
ಕುತಪದೊಳಂ ನಿಲ್ಲದವನದೇಂ ನಿಂದಪನೇ || ||

ಭುವನನುತಮಾಗೆ ಪಕ್ಷೋ
ಪವಾಸ ಮಾಸೋಪವಾಸಮಂ ನಿಯಮದೆ ಮಾ
ಡುವ ಜಿನಮುನಿ ನಿರತಂ ಮಾ
ೞ್ಪ ವರುಷದಂದೊಂದು ಚವುತಗಾವುದು ಗಹನಂ || ||

ನೂಲಿಕ್ಕುವೊಡುಪವಾಸಮ
ನಾಲಸ್ಯದಿನೊರ್ಮೆ ಮಾಡುವರ್ ಪೆಱರೆನುತುಂ
ಸಾಲದುಪವಾಸಮೆಂದು ನಿ
ರಾಲಸ್ಯದಿನೊಲ್ದು ಮಾಡುವರ್ ಜಿನಮುನಿಗಳ್ || ||

ತುಱಿಸರ್ ಮಲಮಂ ಧರಿಯಿಪ
ರೊಱಗರ್ ಕುಕ್ಕುಟದ ತೆಱದೆ ಕುಳ್ಳಿರ್ಪರ್ ತಾ
ಮೊಱಗಿರ್ಪರೊಂದೆ ಮಗ್ಗುಲೊ
ಳುಱೆ ರಾತ್ರಿಪ್ರತಿಮೆನಿಲ್ವರಾರ್ಹತಮುನಿಗಳ್ || ||

ತೋಳಂ ಬೀಸದೆ ಬರ್ಪೊಡೆ
ಬಾಳಂ ಬೀಸಿ[ದೆನೆ]ಯೆಂದು ದಯೆಯಿಂದೊಳ್ಪಂ
ಪಾಳಿಸಿ ಜಿನಮುನಿಗಳ್ ಜೀ
ವಾಳಿಯನಿಂಬಾಗಿರೋವಿ ನಿಯಮದೆ ನಡೆವರ್ || ೧೦ ||

ಬಹುವಿಧಮಾರ್ಗಕ್ರಮಮಂ
ರಹಸ್ಯದಿಂ ತಮಗೆ ತಾಮೆ ಕೈಕೊಂಡುಂ ನಿ
ರ್ವಹಿಸುವ ಋಷಿಯರ್ಗೇಂ ಗಳ
ಗಹನಮೆ ಸದ್ಗುರುನಿರೂಪಿತಬ್ರತನಿಯಮಂ || ೧೧ ||

ಅಡವೇೞ್ವರಡುವರಡದಿ
ರ್ದೊಡೆ ಬೇಡಿಯುಮುಣ್ಬರುೞಿದ ಯತಿಗಳ್ ಧೃತಿಗೆ
ಟ್ಟೆಡಱಡಸಲ್ ಮಱೆದುಮೊಡಂ
ಬಡರಡುವರೊಳೆಂತು ನೋೞ್ಪೊಡಂ ಋಷಿಯರ್ಕಳ್ || ೧೨ ||

ಮನೆಮನೆದಪ್ಪದೆ ಪರಿಪರಿ
ದನವರತಂ ತಿರಿವರನ್ಯಸಮಯದ ಯತಿಗಳ್
ಜಿನಸಮಯದಲ್ಲಿ ಕಡೆಪ
ಟ್ಟನುಮೆನಿಸೆಡಱಡಸಿದಲ್ಲಿಯಂ ತಿರಿದಪನೇ || ೧೩ ||

ಸವಿಸವಿಯಡುಗೆಗಳಿಂತಿವೆ
ಸವಿಯಾದುವೆನುತ್ತುಮುಣ್ಬರಿತರ ಬ್ರತಿಗಳ್
ಸವಿಯಂ ಬಣ್ಣಿಸದೀ ವ
ಸ್ತುವೆಂತುಟೆಂದುಸಿರದುಣ್ಬರೀ ಜಿನಮುನಿಗಳ್ || ೧೪ ||

ಮನೆಯಿಲ್ಲವರ್ಗೆ ತಾಂ ಜಿನ
ಮುನಿಗಳ್ಗೆ ತಪೋಧನ[ರ್ಗೆ] ಯಾತ್ತಂದೆವಿರಾ
ಜಿನಭಕ್ತರೆ ನಿಶ್ಚಯವೆಂ
ದನಿತಾನುಂ ಯತ್ನದಿಂದೆ ರಕ್ಷಿಪರಱಿವರ್ || ೧೫ ||

ಅಕ್ಷಯನಿಧಿಯೆನಿಸಿದ ಗುಣ
ದ ಕ್ಷಯಮಂ ಬಗೆಯ[ದ]ನ್ಯಸಮಯದ ಮುನಿಗಳ್
ದಕ್ಷಿಣೆಯಂ ಬೇೞ್ಪಂದದೆ
ಮೋಕ್ಷಾರ್ಥಿಗಳಪ್ಪ ಋಷಿಯರಱಿವರೆ ಬೇಡಲ್ || ೧೬ ||

ಕೀೞ್ಪಟ್ಟು ಪೆಱರ್ಗೆ ವಿನಯಂ
ಮಾೞ್ಪುದುಮಭಿಮಾನಮೆಲ್ಲಮಱೆ[ಯ]ಟ್ಟಳಿಪಿಂ
ಬೇೞ್ಪುದುಮಾಪ್ತಾಗಮಮಂ
ಮೆೞ್ಪಡದುದುಮೆಂತುಮಿಲ್ಲ ರಿಷಿಯರ್ ಮನದೊಳ್ || ೧೭ ||

ಚಿತ್ತನಿರೋಧಂ ತಪಮೆಂ
ಬುತ್ತಮವಚನಮನೆ ಮನದೆಗೊಂಡಾಪೊೞ್ತುಂ
ಚಿತ್ತಮನಾಗಮದಲ್ಲಿಯೆ
ಪತ್ತಿಸುವಂತೇನೊ ಋಷಿಯರಾದರೆ ಲೋಗರ್ || ೧೮ ||

ಬಲವಂತಮಾಗಿ ಕರ್ಮಂ
ಚಳಿಯಿಸಿದೊಡಮಿತರ ಲಿಂಗಿಯಂದದೆ ಜೈನಂ
ಚಳಿಯಿಸಲಱಿಗುಮೆ ಕಲ್ಗಳ್
ಚಳಿಯಿಸುಗುಂ ಪರ್ವತಂಗಳೇಂ ಚಳಿಯಿಕುಮೇ || ೧೯ ||

ಮುಱುಗಿಸೆ ಪರೀಷಹಂಗಳ್
ನೆಱೆ ಧೈರ್ಯಂಗಿಡುವರನ್ಯಯತಿಗಳ್ ಜೈನರ್
ಮಱೆದುಂ ಧೈರ್ಯಂಗಿಡುವರೆ
ತುಱು ಬೆರ್ಚುವ ತೆಱದೆ ಬಸವನೇಂ ಬೆರ್ಚುವನೇ || ೨೦ ||

|| ದೊರೆಕೊಳ್ಳ ನೆಱೆ ವಿಘ್ನಮಕ್ಕುಮೆನುತುಂ ನಿಚ್ಚಂ ತಪೋದ್ಯೋಗಮಂ
ದೊರೆಕೊಂಡುದ್ಧತವಿಘ್ನಭೀತಿವಶದಿಂ ಬಿಟ್ಟಿರ್ಪನಾ ಮಧ್ಯಮಂ
ದೊರೆಕೊಂಡೆಲ್ಲಿಯುಮೆಂತುಮಾವ ತೆಱದಿಂದಂ ವಿಘ್ನಸಂಘಾತಮೊ
ತ್ತರಿಸುತ್ತಿರ್ದೊಡಮಾರ್ಹತಂ ಬಿಡುವನೆ ನಿರ್ಯಾಣಕಾಲಂಬರಂ || ೨೧ ||

ಪುಲಿ ಪಟ್ಟ ಮೆಳೆಯನಾ ಮೃಗ
ಕುಲಮೆಂತುಂ ಪೊರ್ದದಂತೆ ಸಂಯಮದೊಳ್ ನಿ
ಶ್ಚಲಮಪ್ಪ ತಪಸ್ವಿಯನಘ
ಕುಳಮೆಂತುಂ ಪೊರ್ದಲಂತದೇನಾರ್ತಪುದೇ || ೨೨ ||

ಪಿರಿದುಂ ಪಾಪೋತ್ಕರಮಂ
ನೆರಪಿ ಗುಣಂಗಳನೆ ಮಱಸೆ ಬಾರದ ಭವಮಂ
ಬರಿಸುವ ಕರ್ಮಮನಲೆಯಲ್
ನಿರಾಕುಳಂ ಋಷಿಯರಲ್ಲದೇನಾರ್ತಪರೇ || ೨೩ ||

ಚಂ || ನುಡಿ ನೆರವಾಗಿ ತಮ್ಮೊಳೊಡನೋನುವ ಸಂಗಡ ಕೂಡಿ ಬಂದರಂ
ಬಿಡದುಚಿತಜ್ಞರೇ ನವಭವಂಗಳೊಳಂ ಬಿಡದಿರ್ದೊಡಲ್ಗೊಡಂ
ಬಡೆ ಸುಖಮಂ ಕುಡುತ್ತುಮೊಡವಂದ ನಿಜಾರ್ಚಿತಕರ್ಮಮಿತ್ರನಂ
ಕಿಡಿಸಲೊಡರ್ಚುತಿರ್ಪರೆನೆ ಭವ್ಯರದೆಂತು ಕೃತಘ್ನರಲ್ಲರೇ || ೨೪ ||

ಅಸಿಧಾರಾವ್ರತಮೆಂಬೀ
ಪೆಸರಲ್ಲದೆ ಕಾಣಲಾಗದಂತದನೀಗಳ್
ಪುಸಿಯಲ್ತು ಕಾಣಲಾದಪು
ದಸಿಧಾರಾವ್ರತಮಿದೆನಿಪ ತಪದೊಳಮೀಗಳ್ || ೨೫ ||

ಜಗದೊಳಗುಳ್ಳನಿತಂ ವಿ
ದ್ಯೆಗಳೆಲ್ಲಮನಱಿದುಮಱಿಯದಂತೆವೊಲಿರ್ಪರ್
ಬಗೆವಾಗ ಋಷಿಯರುೞಿದರ್
ಮಿಗೆ ಬೆಸೆಯುತ್ತಿರ್ಪರಱಿದೊಡೆರಡಕ್ಕರಮಂ || ೨೬ ||

ಎನಿತಂ ಬೆಸಗೊಂಡೊಡವಂ
ತನಿತರ್ಕಂ ತುೞಿಲ ಬೞಿಯ ಪರಕೆಯ ತೆಱದಿಂ
ದನುಮಾನಿಸದೆ ಸದುತ್ತರ
ಮನೆ ಕುಡುವರ್ ಬೇಗಮಂತೆ ಜೈಬ್ರತಿಗಳ್ || ೨೭ ||

ಧರ್ಮದ ಲಕ್ಷಣಮಿಂತುಟ
ಧರ್ಮದ ಲಕ್ಷಣಮದಿಂತುಟೆಂದೀ ತೆಱನಂ
ನಿರ್ಮಳಮಾಗಿರೆ ತಿಳಿವೊಡೆ
ನಿರ್ಮಚ್ಚರನಾಗಿ ಋಷಿಯರೊಳ್ ತಿಳಿಗಱಿವಂ || ೨೮ ||

ಆಗಮದೊಂದರ್ಧಮನಿಂ
ಬಾಗಿರೆ ತಿಳಿದೋದಿ ಬೞಿಕೆ ಸನ್ಮಾರ್ಗಮನೊ
ಲ್ದಾಗಳುಮಾಶ್ರಿತಗತ್ಯನು
ರಾಗಂ ಪೇೞ್ವಂತು ಋಷಿಯರಾದರೆ ಲೋಗರ್ || ೨೯ ||

ದಯೆಯಿಂ ನೆಗೞೆಂದು ನಿಜ
ಪ್ರಿಯಸೂನುಗೆ ಪೇೞ್ವರನ್ಯರೇನುಮ[ನೆಂ]ತುಂ
ದಯೆಯಿಂ ಪತ್ತಿಸುತಿಪ್ಪರ್
ದಯೆಯಿಂ ಪೊಲೆಯಂಗಮಾದೊಡಂ ಸಲೆ ಜೈನರ್ || ೩೦ ||

ಉಡಲುಂ ತುಡಲುಂ ಕೊಟ್ಟುಂ
ಪಿಡಿತೀವಿದ ಪೊನ್ನನಿತ್ತುಮನ್ಯರೊಳನ್ಯರ್
ಪಡೆಯರ್ ದೇಹಾರಮನುಡ
ತುಡಲಿತ್ತುಂ ಕುಡುವರೞ್ತಿಯಿಂದಂ ಜೈನರ್ || ೩೧ ||

ಬಾದದ ಶಿಷ್ಯರುಮನಹಿಂ
ಸಾದಿಬ್ರತನಿರತರಾಗೆ ಮಾೞ್ಪರ್ ಮನಮೊ
ಲ್ದಾದರಿಸಿ ಜೈನರಾತ್ಮಜ
ನಾದೊಡಮೇಂ ನಿಯಮಿಸಲ್ಕೆ ಬಲ್ಲರೆ ಲೋಗರ್ || ೩೨ ||

ಪ್ರಿಯಮಂ ಕಲಿಸಲ್ಕಱಿಯರ್
ನಿಯಮಿಸಿ ಸನ್ಮಾರ್ಗದಿಂದೆ ನಡೆಯಿಸಲಱಿಯರ್
ದಯೆಯಿಂ ಪತ್ತಿಸಲಱಿಯರ್
ನಿಯಮಾನ್ವಿತರಪ್ಪ ಜೈನರಲ್ಲದ ಮುನಿಗಳ್ || ೩೩ ||

[ವ]ಸಿಗಳೊಳಗ್ಗಳವಸಿಗಂ
ಬಸನಿಗಳೊಳ್ ಮಿಕ್ಕ ಬಸನಿ ಪುಸಿವರ್ಗೆ ದಿಟಂ
ಪುಸಿವವ[ನೆನಿಪವನಂ] ನಿಯ
ಮಿಸಿ ಧರ್ಮಪಥಕ್ಕೆ ತಂದು ನಿಲಿಪರ್ ಜೈನರ್ || ೩೪ ||

ಹೂಜೆಗತನಕ್ಕೆ ನಾಡೊಳ
ಗೋಜಂ ಪುಸಿಯುತ್ತುವಿರ್ಪುದರೆ ತಮಗೆಂದುಂ
ಸಾಜವೆನೆ ಸಂದ ಖಳನಂ
ಯೋಜಿಸುವರ್ ನಿರ್ವಿಕಾರಿಯಾಗಿರೆ ಋಷಿಯರ್ || ೩೫ ||

ಅಭಿಮುಖಿಗಳಾಗಿ ಕುಳ್ಳಿ
ರ್ದು ಭಕ್ತಿಯಿಂ ಋಷಿಯರೊಡನೆ ಮಾತಾಡಲೊಡಂ
ಶುಭಪರಿಣಾಮಮನಾ ಪಂ
ಚಭೇದಮಂ ಮಿಕ್ಕ ಬಸನಿಯುಂ ಕೈಕೊಳ್ಗುಂ || ೩೬ ||

ಉಪಶಮಗುಣಮಂ ಪಡೆವೊಡೆ
ಜಪಮುಂ ತಪಮುಂ ಸಮಾಧಿಯುಂ ಬೇೞ್ಪುದು ನಿ
ಷ್ಕಪಟತೆ[ಯಿಂ] ಋಷಿಯರ ಪಾ
ದಪದ್ಮಮಂ ಪೊರ್ದೆ ಶಾಂತನಾಗನೆ ಮನುಜಂ || ೩೭ ||

ಆ ತಡಿಗಿರದೊಯ್ದಿಕ್ಕುವ
ಪೋತದ ವೋಲ್ ಜೈನಯೋಗಿ ಭವಜಳಧಿಯೊಳಾ
ೞ್ವಾತನುಮಂ ತನ್ನುಮನೊ
ಯ್ದಾ ತಡಿಗೆಯ್ದಿಸುಗುಮಲ್ಲಿ ಸಂದೆಯಮುಂಟೇ || ೩೮ ||

|| ಸ್ರ || ತೊಱೆಯೊಳ್ ಪೋಗುತ್ತಮಿರ್ದಂ ತಡಿಯ ಗಿಡುವನಾಶ್ರಯ್ಸೆ ಕಾಯಲ್ಕದೆತ್ತಾ
ನಱಿ[ವೆಂ] ಪೋಗೆನ್ನದೆಂತುಂ ನಿಲಿಸುಗುಮೆನೆ ದುರ್ವಾರಸಂಸಾರಮೆಂಬೀ
ತೊಱೆಯೊಳ್ ಪೋಗುತ್ತುಮಿರ್ದಂ ನಿಜಚರಣಮನಾಶ್ರಯ್ಸೆ ಕಾರುಣ್ಯದಿಂದ
ತೊಱೆ ಬಲ್ಪಿಂದೊಯ್ಯದಂತಾಗಿದೆ ನಿಲಿಪುದು ಸನ್ಮಾರ್ಗದಿಂದಂ ಮುನೀಂದ್ರ್ || ೩೯ ||

ಸೊರೆ ಮೊದಲಾಗಿರೆ ಪಿಡಿದಿ
ರ್ದರನಾ ತಡಿಗೊಯ್ಯಲಾರ್ಕುಮಲ್ಲಿಂ ಕಷ್ಟಂ
ಗುರುವೊಳನೆ ಸಾರ್ದರಂ ನಿ
ಸ್ತರಿಸಲ್ವೇೞ್ಪುದು ಭವಾಬ್ಧಿತೀರಂಬರೆಗಂ || ೪೦ ||

ಪಿರಿದುಂ ಲಘುಕರ್ಮದೊಳೊಂ
ದಿರದತಿಲಘುಕರ್ಮಿಯಾಗದಘಸಂಕುಳದೊಳ್
ಪೊರೆದಿರ್ದ ಪೆಱ[ನವಂ ನಿ
ಸ್ತರಿಪನೆ] ತಾಂ ಕಲ್ಲ ದೋಣಿಯಂದದ ಮುನಿಪಂ || ೪೧ ||

ಮ || ಬಗೆಗೊಳ್ವಂತಿರೆ ಧರ್ಮಮಂ ತಿಳಿಪ ಸಚ್ಚಾರಿತ್ರದಿಂ ನಿಶ್ಚಯಂ
ನೆಗೞ್ವಂತಾಗಿರೆಯೋಜೆಯಿಂದೆ ಪುದಿಗುಂ ನಿರ್ಬಂಧದಿಂ ಜೈನನಿ
ಟ್ಟಗೆಯಂ [ಚುರ್ಚಿ]ದರಂತೆ ಚೆಚ್ಚರಿಕೆಯಿಂದಂ ದೀಕ್ಷೆಗೊಟ್ಟಾತನಂ
ಮಗುೞ್ದುಂ ನೋಡದೆ ಪೋಪರನ್ಯಮುನಿಗಳ್ ನೋೞ್ಪಾಗಳಂತೆಲ್ಲಿಯುಂ || ೪೨ ||

ಪರವಶದಿಂ ಕ್ಲೇಶಧುರಂ
ದರನಾಗಿರ್ದೊಳ್ಪನಱಿಯ[ದಾವದಿ]ವಡುವಾ
ನರಪಶುವಂ ಧರ್ಮಧುರಂ
ದನಾಗಿ[ರಲ್] ಶಿಕ್ಷೆಗೊಳಿಪರೆಂತುಂ ಋಷಿಯರ್ || ೪೩ ||

ಚಂ || ಜಳನಿಧಿ ಮೇರೆಯಂ ಮಿಗದೆ ನಿಂದುದು ಧಾರಿಣಿ ಧಾನ್ಯವರ್ಗಮಂ
ಬೆಳೆವುದು ಸತ್ಯಶೌಚಸುಚರಿತ್ರದೊಳೊಂದಿದುದೀ ಜಗಜ್ಜನಂ
ಬೆಳಗಿದುದೆಯ್ದೆ ಧರ್ಮದಳವುತ್ತಮಮಾದುದು ದಾನದೇೞ್ಗೆ ನಿ
ರ್ಪುಳಗುಣಜೈನಯೋಗಿಗಳ ನಿಶ್ಚಳವೀರತಪಃಪ್ರಭಾವದಿಂ || ೪೪ ||

|| ದಯೆ ಜೀವಂಗಳೊಳಾಗಳುಂ ಮತಿ ಜಿನೇಂದ್ರಶ್ರೀಪದಾಬ್ಜಂಗಳೊಳ್
ಭಯಮಾ ದುಶ್ಚರಿತ್ರಂಗಳೊಳ್ ರತಿಯೆ ಸಚ್ಚಾರಿತ್ರದೊಳ್ ಸಂತತಂ
ಪ್ರಿಯಾಮಾಪ್ತಾಗಮತತ್ತ್ವದೊಳ್ ತಮಗೆನಲ್ ಸಂದಿರ್ದ ಪುಣ್ಯಾತ್ಮರಂ
ನಯದಿಂ ಬಣ್ಣಿಸರಾರೊ ಭವ್ಯಜನರಂ ಲೋಕೈಕಮಾಂಗಲ್ಯರಂ || ೪೫ ||

ಹೇಯಕ್ಕೆಱಗದುದುಮುಪಾ
ದೇಯಕ್ಕೆಱಗಿರ್ದ ಬುದ್ಧಿಯುಂ ನಿಜವೆನೆ ಸಂ
ದಾಯತಿಗೆ ಕೊಟ್ಟ ದಾನಂ
ಶ್ರೀಯನನೂನಮೆನೆ ದಾನಿಗೀವುತ್ತಿರ್ಕುಂ || ೪೬ ||

|| ಈವುದು ತನ್ನ ಶಕ್ತಿಗನುರೂಪಮೆ ತತ್ಫಲದೇೞ್ಗೆ ಕಲ್ಪಭೂ
ಜಾವಧಿ ಖೇಚರೇಶ್ವರಪದಾವಧಿ ಚಕ್ರಧರಪ್ರಕೃಷ್ಟಭೋ
ಗಾವಧಿ ದೇವರಾಜವಿಭವಾವಧಿ ಮುಕ್ತಿವಧೂವಿಳಾಸಸೌ
ಖ್ಯಾವಧಿಯೆಂದೊಡಿಂ ಫಲಮನೇವೊಗೞ್ದಪ್ಪುದೊ ಪಾತ್ರದಾನದಾ || ೪೭ ||

ಬಿಡವೇೞ್ಪ ವಸ್ತು ಹೇಯಂ
ಕಡಂಗಿ ಕೈಕೊಳ್ವುದಿಂತುಪಾದೇಯಮಿವಂ
ಬಿಡದಱೆದು ಕೈಕೊಳಲ್ ಬ
ಲ್ಲೊಡವಂ ವ್ರತಿ ಪೊಲ್ಲದಂ ಬಿಸುಟ್ಪೊಳ್ಗುಣವಂ || ೪೮ ||

ಹೇಯಮುಪಾದೇಯಮೆನಿ
ಪ್ಪಾಯೆರಡುಮನಱಿದು ನೆಗೞದಾಗಮಧರನ
ಪ್ಪಾ ಯತಿಯಂ ಯತಿಯೆನವೇ
ಡಾ ಯತಿಯಂ ಪೊತ್ತಗೆ ದಲೆಂದು ಮನ್ನಿಪುದಱಿವಂ || ೪೯ ||

ಉತ್ತಮತಪದಿಂ ತನ್ನಂ
ಬಿತ್ತರಿಸುವ ಬಲ್ಮೆಯಿಲ್ಲದಾಗಮಧರನಂ
ಪೊತ್ತಗೆಯೆಂಬುದು ಜಗ[ಮಾ]
ಪೊತ್ತಗೆಯೊಳಿರ್ದು [ಮೊಳ್ಪನೇಂ] ನೆಗೞ್ದಪುದೇ || ೫೦ ||

ಹೇಯದೊಳಾದೊಲವುಮುಪಾ
ದೇಯದೊಳೊಲವಿಲ್ಲದಿರ್ಪುದುಂ ನಿಜವೆನೆ ಸಂ
ದಾ ಯತಿಗೆ ಕೊಟ್ಟ ದಾನಂ
ಪಾಯಸಮಂ ಪುಲಿಯನೂಡಿ ಪೊರೆದಂತಕ್ಕುಂ || ೫೧ ||

|| ಎಂತುಮಸತ್ಯಮಂ ನುಡಿಯದೊಳ್ಪಿನೊಳಾರ್ಜಿಪನರ್ಥ [ಮಂ] ಬೞಿ
ಕ್ಕಂತದನೋಜೆಯಿಂ ತವಿಸುಗುಂ ಮತಿವಂತನಧರ್ಮಮಾರ್ಗದಿಂ
ಸಂತತಮರ್ಥಮಂ ಪಡೆದು ರೂಢಿಗೆ ದಾನಮನೀವನೆಗ್ಗನಾ
ಮುಂತಣ ಪಾರ್ವರುಂ [ಬ]ಡಿದು ಪಿಂತಣ ಪಾರ್ವರಿಗೀವ ಮಾೞ್ಕೆಯಿಂ || ೫೨ ||

|| ಸುರವಂದ್ಯಂ ಜಿನನಾಪ್ತನೆಂದು ದಯೆಯೊಳ್ ಕೂಡಿರ್ದ ಸೌಖ್ಯಕ್ಕದಾ
ಗರಮಂ ಸನ್ಮತಿಯಿಂದೆ ನಂಬಿ ದಯೆಯಿಂ ಕೈಕೊಂಡು ಸನ್ಮಾರ್ಗದೊಳ್
ನಿರುತಂ ತಾಂ ನಡೆದಾರುಮಂ ನಡಸುತಿರ್ಪಂ ಪಾಪಭೀತಂ ಮಹಾ
ಪುರುಷಂ ಸಜ್ಜನವಂದ್ಯನಾ ಗುಣನಿಧಾನಂ ಪಾತ್ರನತ್ಯುತ್ತಮಂ || ೫೩ ||

ಮಾನಧನಂ ನಿರ್ಲೌಲ್ಯಂ
ದಾನಕ್ಕುಪಯೋಗ್ಯನುತ್ತಮಂ ಸತ್ಪಾತ್ರಂ
ದೀನಂ ಕಷ್ಟಂ ಖಳನ
ಜ್ಞಾನಿಯೆನಿಪ್ಪವನಪಾತ್ರಮೆಂದಱಿಗಱಿವಂ || ೫೪ ||

ಅನುಪಮಚರಿತಂ ನಿಷ್ಕ್ರಿಯ
ನನಘಂ ಸತ್ಪಾತ್ರನಿರಲಪಾತ್ರಕ್ಕಿತ್ತೊಂ
[ದ]ನವದ್ಯದಾನಮದು ಭ
ಸ್ಮ ನಿಹುತಮೆಂಬಂತೆ ಮೇಲೆ ನಿಷ್ಪಲಮಕ್ಕುಂ || ೫೫ ||

ಅನವರತಂ ದಯೆಯಿಲ್ಲದ
ಮುನಿಗಳನೂಡುವುದಱಿಂದಮೊಲ್ದೊರ್ವಂ ಜೈ
ನನನೂಡುಗೆ ಸಾಸಿರ ಸು
ತ್ತನೊಂದು ಗಂಟುಱುಗುಮೆನಿಸುಗುಂ ಫಲದೆಡೆಯೊಳ್ || ೫೬ ||

ಬಹುಳಾಳಾಪದೊಳೇನಾ
ಗ್ರಹದಿಂ ತೀರ್ಥಂಗಳೆಲ್ಲಮಂ ನೋೞ್ಪುದಱಿಂ
ಮಹನೀಯಮನ್ನದಾನದ
ಮಹಿಮೆ ದಲದು ಪಾತ್ರಪತಿತಮಾದೊಡನಂತಂ || ೫೭ ||

ಮನೆಯಿಲ್ಲದ ನಾಗಾರಿಗೆ
ಜಿನಮುನಿಗೆ ತಪೋಧನಂಗೆ ದಯೆಯಿಂ ನಿಚ್ಚಂ
ಮನಮೊಲ್ದೀವುದು ದಾನಮ
ನನಂತಸೌಖ್ಯಮನೆ ಬಯಸುವಂ ಮತಿನಂತಂ || ೫೮ ||

ಕಷ್ಟಕುಲದಲ್ಲಿ ಪುಟ್ಟಿ ನಿ
ಕೃಷ್ಣನುಮೆನೆ ಸಂದ ಪೊಲೆಯನುಂ ಬ್ರತದಿಂದು
ತ್ಕೃಷ್ಟಮೆನೆ ಬಾಳ್ವೊಡಾತನೆ
ಶಿಷ್ಟಂ ಸಂತುಷ್ಟಿಮಾೞ್ಪುದವನಂ ಜೈನಂ || ೫೯ ||

ಮನೆಮನೆದಪ್ಪದೆ ಪರಿಪರಿ
ದನವರತಂ ಬೇೞ್ಪರಲ್ಲಿ ಪರಲಿಂಗಿಗಳುಂ
ಜಿನಸಮಯದಲ್ಲಿ ಕಡೆಪ
ಟ್ಟನುಮೆನಿಸೆಡಱಡಸಿದಲ್ಲಿಯುಂ ತಿರಿದಪನೇ || ೬೦ ||

ಬ್ರತಮಂ ಬೇೞ್ಪಂ ನಿಱಿಸ
ಲ್ಕೆ ತಪಸಿಯಂ ಬೇೞ್ಪನಣ್ಮಿ ಮತ್ತಂತೆ ಮಹಾ
ಬ್ರತಮಂ ಬೇೞ್ಪಂ ಗುರುಗಳ
ನಿತರರ ವೋಲ್ ಬೇೞ್ಪನಲ್ಲ ಪೊನ್ನಂ ಜೈನಂ || ೬೧ ||

ಮಾನಧನಂಗಿಕ್ಕುವವೋಲ್
ದೀನಂಗಿಕ್ಕುವರೆ ಭಕ್ತರಾಹಾರಮನೊ
ಲ್ದಾನೆಗಳನೂಡುವಂದದಿ
ನೇನೋ ಕೋೞೆಗಳನೂಡಿದಪ್ಪರೆ ಪೇೞಿಂ || ೬೨ ||

ಪೊಡೆವಟ್ಟುಂ ಪ್ರಾರ್ಥಿಸಿಯುಂ
ಕುಡೆ ಕೊಳ್ವರ್ ಜೈನರುೞಿದರಂದದೆ ದಾನಂ
ಗುಡಿಮೆಂದು ಬೇಡಲಱಿವನೆ
ಕಡೆಪಟ್ಟನುಮಾಗಿ[ಗಿ] ಸಾವೊಡೆಂತು ಜೈನಂ || ೬೩ ||

ದಾನಮನೀವುದು ಪಾತ್ರ
ಕ್ಕಾನತನಾಗಿತ್ತೊಡುತ್ತಮಂ ಕರೆದಿತ್ತಾ
ದಾನಂ ಮಧ್ಯಮಮಧಮಂ
ದೀನತೆಯಿಂ ಬೇಡಲಿಕ್ಕೆ ಕೊಟ್ಟಾ ದಾನಂ || ೬೪ ||

ವಿದಿತಮಸತ್ಕಾರದೊಳೊಂ
ದಿದ ದಾನಂ ದಾನಮಾಗಲಱಿಯದು ಮತ್ತಂ
ಸದಮಳಗುಣನಿಧೀಗೀವುದು
ಸದಯಂ ತಾನಾಗಿ ದಾನಮಂ ಮತಿವಂತಂ || ೬೫ ||

|| ನೆಟ್ಟನೆ ದಾನಿ ಪಾತ್ರ ನಿಧಿಯುಂ ದಯೆಯೆಂಬಿವು ಕೂಡಿ ಬಂದೊಡಂ
ನೆಟ್ಟನೆ ತನ್ನೊಳೊಂದಿನಿಸೆ ಭಕ್ತಿ ಯಥೋಚಿತಮಾಗೆ ದಾನಮಂ
ಕೊಟ್ಟನನಂತಮಪ್ಪ ಫಲಮಂ ಪಡೆಗುಂ ಪದವಟ್ಟು ಬಿತ್ತಿದಂ
ದಿಟ್ಟಳಮಪ್ಪುದೊಂದು ಬೆಳಸಂ ಪಡೆವಂತೆ ಸಮಸ್ತಧಾತ್ರಿಯೊಳ್ || ೬೬ ||

ಬುದ್ಧಿಯನೆ ಮೆಱೆದು ಪಡೆ[ದಂ
ಶ್ರ]ದ್ಧಾಭಾವದೊಳೆ ಪಡೆದ ಪಣಮಂ ಬಂದ
[ಶ್ರ]ದ್ಧಂ ಮಾಡದೆ ಕುಡುವುದು
ಸಿದ್ಧಾಯತನಕ್ಕೆ ಭವ್ಯಸಮಿತಿಗೆ ಚದುರಂ || ೬೭ ||

ಕೀರ್ತಿಗಪೇಕ್ಷಿಸಿ ವಿತ್ತಮ
ನಾರ್ತದೆ ಪಡೆದೊಲ್ದು ಬಂದ ಪಾತ್ರಪ್ರಕರ
ಕ್ಕಾರ್ತೀವುದೆ ಭವ್ಯಾಳಿಗೆ
ಕೂರ್ತೀವುದು ವಿಮಳಕೀರ್ತಿಯಂ ಬಯಸುವವಂ || ೬೮ ||

ಜೈನಂಗೆ ತವಿಸಿದೊಡಮೆಯೊ
ಳೇನುಂ ನೋವಿಲ್ಲ ಪೊಲೆಯನಕ್ಕುಮಪಾತ್ರಂ
ಜ್ಞಾನೇತರಂ ಕುದೃಷ್ಟಿ ಕು
ಲೀನಂಗಂ ಕೊಟ್ಟ ಕಾಣಿ ನೋವಂ ಮಾೞ್ಕುಂ || ೬೯ ||

ಬ್ರತಗುಣಸುಚರಿತ್ರಸಮ
ನ್ವಿತನಪ್ಪ ಸುಪಾತ್ರಮೆಯ್ದೆ ನಿಸ್ತರಿಕುಂ ಸಂ
ಸ್ಮತಿಯೆಂಬ ಶರಧಿಯಿಂ ದು
ಷ್ಕೃತಿಯಪ್ಪ ಕುಪಾತ್ರಮೞ್ದುಗುಂ ದುರ್ಗತಿಯೊಳ್ || ೭೦ ||

ಶ್ರೀಯಂ ಶಾಶ್ವತಸೌಖ್ಯ
ಶ್ರೀಯಂ ಬಯಸುವೊಡೆ ದಾನಿ ದಾನಂ ಪಾತ್ರಂ
ದೇಯವೆನಿಪ್ಪುವನಱಿವುದ
ನಾಯಾಸದೆ ಜೈನಸೂಕ್ತಿಯಿಂ ಮತಿವಂತಂ || ೭೧ ||

ಶಾ || ಶ್ರೀರಾಮಾರಮಣೀಯಪಾದಕಮಳಂ ದುರ್ವಾರಸಂಸಾರಕಾಂ
ತಾರಾತ್ಯುಗ್ರದವಾನಳಂ ನಿಖಿಳಲೋಕೈಕಾಶ್ರಯಂ ದೇವರಾ
ಜಾರಾಧ್ಯಂ ಸ್ಮರಶಾಸನಕ್ಷಪಿತಕಾಳಂ ದೇವದೇವಂ ಗುಣಾ
ಧಾರಂ ರಕ್ಷಿಸುತಿರ್ಕೆ ಭವ್ಯಜನಮಂ ಶ್ರೀವೀರಭಟ್ಟಾರಕಂ || ೭೨ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಜರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳ ತಪೋಧನಸ್ವರೂಪಕಥನಂ ಸಪ್ತಮಾಧಿಕಾರಂ