ಶ್ರೀದಿವಿಜರಾಜಪೂಜಿತ
ಪಾದಾಂಬುಜನನುಪಮಾನನಮಳಿನವಿದ್ಯಾ
ಶ್ರೀದಯಿತಂ ದಯೆಗೆಯ್ಗೆ ಶು
ಭೋದಯಕರನೆಮಗೆ ವಿಮಳರತ್ನತ್ರಯಮಂ || ||

ಆವನ ವಚನಂ ಶಿವಸೌ
ಖ್ಯಾವಹಮವಿರುದ್ಧಮಮಳಮಖಿಳಜನಕ್ಕಂ
ಭಾವಿಸುವೊಡೆನಿಸಿ ನೆಗೞ್ದಾ
ದೇವಂ ತಾನೆಂತು ಪೇೞ್ದನದು ಸಿದ್ಧಾಂತಂ || ||

ಆಗಮಮಗಣಿತಪುಣ್ಯಸ
ಮಾಗಮಕಾರಣಮಶೇಷಭವ್ಯೌಘಮನೋ
ರಾಗನಿಬಂಧನಮಾರ್ಹುತ
ಯೋಗಿವ್ಯಾಖ್ಯಾನಮಾನಜಿನಪತಿಸೂಕ್ತಂ || ||

|| ವಿದಿತಂ ಸರ್ವಜನಕ್ಕೆ ಸನ್ನುತಮಹಿಂಸಾ ಲಕ್ಷಣೋ ಧರ್ಮಮೆಂ
ಬುದು ಸಾಕ್ಷಾದ್ಭಗವಜ್ಜಿನೇಶ್ವರಮುಖಾಬ್ಜೋದೀರಿತಂ ತತ್ತ್ವಮೆಂ
ಬುದು ತಾನೈಹಿಕಸಿದ್ಧಿಗಾಶ್ರಯಮದೆಂದಾಮುತ್ತಿಕವ್ಯಾಪ್ತಿಗಾ
ಸ್ಪದಮೆಂದೆಂದೆಱಗಿತ್ತು ಜೈನವಚನಕ್ಕೆಲ್ಲಂ ಮಹೀಮಂಡಳಂ || ||

ಪಾಪದೊಳೆಂತುಂ ಪೊರ್ದದು
ಕೋಪದೊಳೊಂದದು ತೊಡರ್ಪಿನೊಳ್ ತೊಡರದು ಪೂ
ರ್ವಾಪರವಿರುದ್ಧಮಲ್ಲದು
ದೇ[ಪೊೞ್ತೆಂ]ತೆಂತು ನೋೞ್ಪೊಡಂ ಜಿನವಚನಂ || ||

ಒಂದೆಡೆಯೊಳೊರ್ಮೆ ನುಡಿ ತೊದ
ಳೊಂದದು ಪಲತೆಱದ ಕಥೆಯೊಳಾಗಮದೊಳ್ ಬೇ
ಱೊಂದಂದಮಲ್ಲ ಜಿನಮತ
ದಂದಂ ಜಗದೊಳಗದೆಲ್ಲಿಯುಂ ನೋಡುವೊಡಂ || ||

ಇಂತಲ್ಲದೆ ನಡೆಯಲ್ ಮ
ತ್ತೆಂತುಂ ದಲ್ ಸಲ್ಲದೆಮ್ಮ ಜಾತಿಗಳೆಂದೋ
ರಂತಿರೆ ಪೇೞ್ದಾಗಮಮಿ
ನ್ನಂತದೆ ಮೋಕ್ಷಕ್ಕೆ ಮಾರ್ಗಮೆಂದಱಿಗಱಿವಂ || ||

ಕುಲಹೀನಂಗೊಂದು ತೆಱಂ
ಕುಲಜಂಗೊಂದು ತೆಱನಕ್ಕುಮಾಚಾರಮೆನು
ತ್ತೊಲವರಮಂ ಪೇೞ್ವದು ನಿ
ರ್ಮಲಧರ್ಮಮದಲ್ತು ಠಕ್ಕಮತಮೆಂದಱಿವಂ || ||

ಚಂ || ಕೊಲೆಯುಮಸತ್ಯಮಂ ಕಳವುಮನ್ಯಸತೀಸ್ಪೃಹೆಯುಂ ವಿಮೋಹಮುಂ
ಸಲೆ ಮಧುಮದ್ಯಸೇವೆಯುಮಧರ್ಮಮಿವಂ ಬಿಡಿಮೆಂದು ಪೇೞ್ವ ನಿ
ರ್ಮಲಜಿನರಾಜನಾಜ್ಞೆಯನೆ ಮೀಱೆ ನಿಲಲ್ ನೆಗೞಲ್ಕಮಾಗದೆಂ
ದೆಲೆಮಿಡುಕಲ್ಕೆ ಸಲ್ಲದುದಱಿಂ ಜಿನವಾಕ್ಯಮೆ ಮುಖ್ಯಮೆಲ್ಲಿಯುಂ || ||

ಸತತಮಹಿಂಸಾದಿ ಮಹಾ
ಬ್ರತಮೆಂದೆಂದುಂ ಮಾಣಿಸ
ದಿತರ ಕುಮಾರ್ಗಂಗಳತಿಶಯಮೆ ಜಿನಮತದಿಂ || ೧೦ ||

ಏನೋಹೀನಂ ನಿರ್ಮಳ
ವಾನಂದಾವಹಮಿದೆನಿಸಿ ಕೇಳ್ವಂ ಮಿಥ್ಯಾ
ಜ್ಞಾನಮನೆ ಕಿಡಿಪ ಸಮ್ಯಕ್
ಜ್ಞಾನಂ ಶ್ರೀ ಜೈನಮತಮದಾರ್ಗಮಲಂಘ್ಯಂ || ೧೧ ||

ಕವಡಿಕೆಯುಂ ಕಾಜುಂ ಸ
ಲ್ಗುಮೆ ಹೊನ್ನವೊಲೆಲ್ಲಿಯಾದೊಡಂ ಕುಮತಂಗಳ್
ಭುವನದೊಳಗೆಲ್ಲಮಾರ್ಹತ
ದವೊಲೇಂ ಸಂದಪುದೆ ದಯೆಯಿನೇಕಸ್ಥಿತಿಯಿಂ || ೧೨ ||

ಅವನೀಶನಾಜ್ಞೆ ಸಲ್ವಂ
ತವನಿಗೆ ಪೆಱೆರಾಜ್ಞೆ ಸಲ್ಗುಮೆ ಕುಮತಂಗಳ್
ತಮತಮಗೆ ಸಲ್ಗುಮಲ್ಲದೆ
ಭವನದೊಳಾರ್ಹತದ ತೆಱದೆ ಸಲಲಱಿದಪುವೇ || ೧೭ ||

ಸರ್ವಜ್ಞನೆ ನೆಱೆ ಪೇೞ್ಗುಂ
ಸರ್ವಮನಿಂಬಾಗಿ ನಿಯಮದಿಂದಂ ಪೇೞಲ್
ದುರ್ವೋಧರಳವೆ ತಮತಮ
ಗುರ್ವುವರಂ ಬಾಗಿಸಲ್ಕೆ ಬಲ್ಲರುಮೊಳರೇ || ೧೪ ||

ದುರಿತದ ಮೂಲಂ ಜ್ಞಾನಾ
ವರಣೀಯಂ ಬೋಧದೃಷ್ಟಿ ಮುಚ್ಚಿರೆ ಕಾಣ್ಬಂ
ತಿರೆ ಸಕಳಮಾ ಕುದೃಷ್ಟಿಗ
ಳರುಹಂ ಜಿತದುರಿತನಾಗಿ ಕಾಣ್ಬಂ ಪೇೞ್ವಂ || ೧೫ ||

ಕರ್ಮದ ಕಟ್ಟುವ ತೆಱನಂ
ಕರ್ಮಸ್ಥಿತಿಯಂ ಬೞಿಕ್ಕ[ಮೊಂ]ದುವ ತೆಱನಂ
ಕರ್ಮವಿಮೋಕ್ಷಕ್ರಮಮಂ
ನಿರ್ಮಳಜಿನಮತದಿನರಿಗೆ ನೀರ್ಣಯಮಾಗಲ್ || ೧೬ ||

ಸ್ವರ್ಗಂಗಳಿರ್ಪ ತೆಱನಂ
ಸ್ವರ್ಗಂಗಳ ಪೆಸರನಲ್ಲಿ ಪುಟ್ಟುವ ತೆಱನಂ
ಸ್ವರ್ಗಂಗಳಂದಮಂ ಸ
ನ್ಮಾರ್ಗೇತರರಱಿಯರಱಿಗೆ ಜೈನಾಗಮದೊಳ್ || ೧೭ ||

ಮುಕ್ತಿಗಳೊಳ್ ಮಾಹೇಶ್ವರ
ಮುಕ್ತಿಯೊಳಾತ್ಮಂ ವಿನಾಶಮಾಗಿರ್ಪುದು ತಾಂ
ಮುಕ್ತಿ ಗಡ ರಯ್ಯಮಿನ್ನಾ
ಮುಕ್ತಿಯೊಳತ್ಯಂತಸುಖಮನೆಯ್ದುವನಾವಂ || ೧೮ ||

ತನಗಾರುಮಿಲ್ಲ ತಾನೊ
ರ್ವನೆ ಜೀವಂ ಕರ್ತೃ ಭೋಕ್ತೃವೆಂಬೀ ಸೂಕ್ತಂ
ಜಿನವಚನದೊಳಲ್ಲದೆ ಮ
ತ್ತಿನ ಕುಮತದೊಳುಂಟೆ ನೋೞ್ಪೊಡೆಲ್ಲಂದದೊಳಂ || ೧೯ ||

ಕ್ರಮದಿಂ ಲೋಕಮುಮಂ ಜೀ
ವಮುಮಂ ದ್ರವ್ಯಸ್ವರೂಪಮಂ ಮುಕ್ತಿಗೆ ಮಾ
ರ್ಗಮುಮಂ ಪೆೞ್ವದು ಸೌಖ್ಯಾ
ಗಮಮುಱಿದುದು ದುಃಖದಾಗಮಂ ಬಗೆವಾಗಳ್ || ೨೦ ||

ಲೋಕಾಲೋಕಸ್ಥಿತಿಯನ
ನೇಕದ್ರವ್ಯಸ್ವರೂಪಮಂ ಖಳಕರ್ಮಾ
ನೀಕಮನನ್ಯಮತಂಗಳೊ
ಳೇಕಱಿಯಲ್ ಬರ್ಕುಮಱಿಗೆ ಜೈನಾಗಮದೊಳ್ || ೨೧ ||

ಪುಸಿ ಕೊಲೆ ಕಳವು ಪರಸ್ತ್ರೀ
ಪ್ರಸಂಗವತಿಕಾಂಕ್ಷೆ ಮಾಂಸ ಮಧು ಮದ್ಯಂ ಸೇ
ವಿಸೆ ಕಷ್ಟಮೆಂದವಂ ಸಲೆ
ಬಿಸುಡಿಪುದಾವಂ[ಗೆ] ಸನ್ಮತಂ ಜೈನಮತಂ || ೨೨ ||

ಎಂತೆಂತು ಪಿಕ್ಕಿ ನೋೞ್ಪೊಡ
ಮಂತಂತೆ ವಿಚಾರಸಹಮನಿಂದ್ಯಂ [ತಾನಾ]
ದ್ಯಂತಂ ಜೈನಾಗಮಮನ
ದಂತಿಂತುಂತೆಂದೆನಲ್ಕದೇಂ ಬಂದಪುದೇ || ೨೩ ||

ಅಂತುಟಿದಿಂತುಟು ಪೇೞಿ
ನ್ನುಂತುಟದೆಂಬಂತುಟಲ್ತು ಜೈನಾಗಮಮಾ
ದ್ಯಂತ್ಯಂ ನೇರಾಣಿಯ ಹೊ
ನ್ನಂತುಟು ಮಧ್ಯಸ್ಥವೃತ್ತಿಯಿಂ ನೋೞ್ಪಾಗಳ್ || ೨೪ ||

ಖಸಸಂಸೃತಿಯೆಂಬ ಮಹಾ
ಜಳನಿಧಿಯೊಳಗೆಂಟು ತೆಱದ ಕರ್ಮದ ವಶದಿಂ
ಮುೞುಗುತ್ತಲಿರ್ಪ ಜೀವಾ
ವಳಿಗೆಲ್ಲಂ ಯಾನಪಾತ್ರಮರ್ಹತ್ ಪ್ರೋಕ್ತಂ || ೨೫ ||

ಒಳಗಂ ಭೇದಿಸದನ್ನಂ
ಚಳಬುದ್ಧಿಗೆ ಪೊಱಗು ಬೆಟ್ಟಿತಾಗಿರ್ಕುಂ ನಿಂ
ದೊಳಗಂ ಭೇದಿಸುತಿರೆ ನಿ
ರ್ಮಳಬುದ್ಧಿಗೆ ತೆಂಗಿನಂತೆ ರುಚಿ ಜಿನವಚನಂ || ೨೬ ||

ಕ್ಷಿತಿಯೊಳ್ ಮಿಥ್ಯಾಮಾರ್ಗಂ
ಸತತಂ ಸನ್ಮಾರ್ಗಮಾವುದೆಂದಱಿಯದ ಸಂ
ಸೃತಿಯ ಮನುಜಂಗೆ ಕಣ್ಣುಂ
ಗತಿಯುಮದೆಂತಂತುಟಲ್ತೆ ಜಿನರಾಜಮತಂ || ೨೭ ||

ಎಡೆಯಱಿಯದೆ ಕಣ್ಗೆಟ್ಟಿ
ರ್ಪೊಡಱಿಯನೊಳಗಱಿದು ನೆರೆಯೆ ಬೆಳಗೆತ್ತಂ ನೋ
ೞ್ಪೊಡೆ ಭಾವಕಂಗೆ ಕೈಗ
ನ್ನಡಿಯವೊಲೆಸದಪುದು ನಿರ್ಮಳಂ ಜೈನಮತಂ || ೨೮ ||

ಒಳಗಱಿಯದಿರ್ದೊಡಿರ್ಕೆಮ
ತಿಳಿದೊಳಪೊಕ್ಕಿಂ ಬೞಿಕ್ಕ ಭಾಷಿತಮಂ ತಾಂ
ಚಳಮನನಾಗದೆ ಬಗೆದೊಡೆ
ಖಳನುಂ ಜೈನಬ್ರತಕ್ಕೆ ಫೞಿಲನೆ ಬರ್ಕುಂ || ೨೯ ||

ಒಳ್ಳಿತ್ತು ಹೊಲ್ಲದೆಂಬುದ
ನೊಳ್ಳಿತ್ತಾಗಱಿವವಂಗೆ ಜಿನವಚನಂ ತಾ
ನೊಳ್ಳಿತ್ತು ವಿಚಾರಿಸದಂ
ಗೊಳ್ಳಿತ್ತಾಗಿರ್ಕುಮತ್ತ ಲೋಗರ ಕುಮತಂ || ೩೦ ||

ಆರೊರ್ವರ ಕಥೆಗಳೊಳಂ
ಸಾರಮೆನಿಪ್ಪೆಡೆಗಳಾರ ಮತದೊಳ್ ಮುಂಬಿ
ಟ್ಟಾರಯ್ಕೆ ಧರ್ಮಮುಂಟದೆ
ಸಾರಂ ತಾನಲ್ತೆ ಭುವನದೊಳ್ ಜಿನಧರ್ಮಂ || ೩೧ ||

ಜಿನಮುಖಹೈಮಾಚಳಸಂ
ಜನಿತಾಗಮಮಾರ್ಗವಿಮಳಗಂಗಾಸ್ನಾನಂ
ಮನುಜಂಗಘಹರಣಂ ಮ
ತ್ತಿನ ಗಂಗಾಸ್ನಾನಮಿಂತು ತನುಮಳಹರಣಂ || ೩೨ ||

ಬಗೆವು[ಗೆ] ಜೈನಮನೋದದೆ
ಮಿಗೆ ಪಾಟಿಸಿ ಕುಮತಿ ಕುಮತಮಂ ಪಲ್ಲುಂ ನಾ
ಲಗೆ ತಪ್ಪುವನ್ನಮಿರದೋ
ದುಗೆ ಸಮ್ಯಕ್‌ಜ್ಞಾನಿಯಾಗಲೇನಱಿದಪನೇ || ೩೩ ||

ಸನ್ನುತಜೈನಾಗಮಸಂ
ಪನ್ನಂ ತಾನೆನಿಸದಿತರ ಕುಮತಂಗಳೊಳು
[ತ್ಸ]ನ್ನಮತಿ ಮನಂಗೆಯ್ವುದು
ಹೊನ್ನಂಬಂ ನೀರೊಳೆಚ್ಚು ಕಿಡಿಪಂತಕ್ಕುಂ || ೩೪

ಸಾರಾಸಾರದ್ವಿತಯವಿ
ಚಾರಕ್ಷಮನೆನಿಸಿದವನೆ ಮಿಥ್ಯಾತ್ವದೆ ತಾ
ನೋರಂತೆ ನಮೆವೊಡಕ್ಕಟ
ನೀರೊಳ್ ಕಿಚೆೞ್ವೊಡೇತಱಿಂದಾಱಿಸುವರ್ || ೩೫ ||

ಫಳಮಱಸುವಂಗೆ ರುಚಿ ನಿ
ರ್ಮಳಜಿನಮತದಲ್ಲಿ ಪುಟ್ಟೆ ಬೇಡಿದ ಕಾಡೊಳ್
ಮೞೆ ಕೊಂಡುದೆಂದು ಸಂತಸ
ದೊ[ಳೆ] ನಿಚ್ಚಂ ನಿಚ್ಚಮೊಲ್ದು ಭಾವಿಪುದಱಿನಂ || ೩೬

|| ಸ್ರ || ಜಿನದೇವಂ ದೇವನಾ ದೇವ[ನ] ನುಡಿದುದೆ ಸಿದ್ಧಾಂತಮಾ ಜ್ಞಾನರೂಪಂ
ಮನಮೊಲ್ದಾನಂದದಿಂ ತಾಳ್ದಿದ ತಪಮೆ ತಪಂ ಮತ್ತಮಿಂದ್ರಾದಿಪೂಜಾ
ರ್ಹನ ಮಾರ್ಗಂ ಮೋಕ್ಷಮಾರ್ಗಂ ದಿಟಮಿದು ಪೆಱತಲ್ತೆಂದು ಕೈಕೊಂಡ ಪುಣ್ಯಾ
ತ್ಮನೆ ಭವ್ಯಂ ಸೇವ್ಯನತ್ಯುತ್ತಮನಘನವಂ ಸರ್ವಲೋಕೈಕಪೂಜ್ಯಂ || ೩೭ ||

ನರನಂ ಮುಕ್ತ್ಯಂಗನೆಯೊಳ್
ನೆರಪಲ್ ಜಿನವಚನದೂತಿಯಲ್ಲದೆ ಜಗದೊಳ್
ಪರಿಣತರಿಲ್ಲದಱಿಂ ತಡೆ
ದಿರದಱಿಗೆ ತದೀಯ ಹೃದಯಮಂ ಭವ್ಯ[ವಿ]ಟಂ || ೩೮ ||

ಭಾವನೆ ಮಿಗೆ ಜಿನಮತಮಂ
ಭಾವಿಸಿ ಕೇಳಲೊಡನಂತೆ ಕಳ್ಗುಡಿವವನುಂ
ಶ್ರಾವಕ್ಕನಕ್ಕುಂ ಬಱಿಯಂ
ದೇವಂ ತಾನೆನಿಕುಮುತ್ತಮಬ್ರತದಿಂದಂ || ೩೯ ||

ಪರಮಜಿನೋಕ್ತವ್ರತದೊಳ್
ಗುರುಗಳ್ ನಿಯಮಿಸಿದ ಮೋಕ್ಷಮಾರ್ಗದ ಮಾತಂ
ನಿರುತಂ ಮೀಱಲ್ ಸಲ್ಲದು
ಗುರುವಚನಮಲಂಘನೀಯಮೆಂಬುದನರಷಿಯಾ || ೪೦ ||

ಗುರುವೆಂಬುದಱಿಂ ಪ್ರಾಕೃತ
ಪುರುಷರ ಪೇೞ್ದಂತೆ ಗೆಯ್ವರೆಂದೊಡೆ ಬೋಧಾ
ಕರರೆನೆ ನೆಗೞ್ವ[ರ್] [ಜಗದೊಳ್]
ಗುರು ಬೆಸಸಿದ ಮಾರ್ಗದಿಂದೆ ನಡೆಯಲ್ವೇಡಾ || ೪೧ ||

ಚಂ || ಕದಡದೆ ಚಿತ್ತದೊಳ್ ಕಲುಷಮಂ ಗೆಡೆಗೊಳ್ಳದೆ ಪೋಗಿದೇತಱೆ
ನ್ನದೆ ಸಲೆ ಮುಕ್ತಿಯಂ ಕಿಡಿಸಿ ದಾಂಟದೆ ಸಾರಮನಪ್ಪುಕೆ [ಯ್ದ] ಸಾ
ರದ ದೆಸೆಯಾಗದೀ ತೆಱದೆ ಕೇಳ್ವವರುಳ್ಳೊಡೆ ಲೋಕಸಾರಮ
ಭ್ಯುದಯಸುಖೈಕಹೇತು ಜಿನಮಾರ್ಗಮೆ ಮುಕ್ತಿಗೆ ಮಾರ್ಗವೆಲ್ಲಿಯುಂ || ೪೨ ||

ಎಂತಕ್ಕುಮೆಂದು ಮನದೊಳ್
ಚಿಂತಿಸಿ ಮಱುಗದಿರು ಮರುಳೆ ಸರ್ವಜ್ಞ ಪೇ
ೞ್ದಂತುಟೆ ನಿಶ್ಚಯಮದಱಿಂ
ಭ್ರಾಂತಂ ಬಿಟ್ಟೊಲ್ದು ಕೇಳ್ಗೆ ಜೈನಾಗಮಮಂ || ೪೩ ||

ಓರಂತಪಥ್ಯಕುಮತಾ
ಹಾರದೆ ಜಡನಾದ ದೇಹಿಯಂ ಸರ್ವಜ್ಞೋ
ದೀರಿತ ದರವಚನಸುಧಾ
ಹಾರಮೆ ಪಟುಮಾೞ್ಕುಮುೞಿದವಾರ್ಕುಮೆ ಮಾಡಲ್ || ೪೪ ||

ಕಳಿಮಳಿನಕುಮತಸಂಗತ
ಕಳಂಕಮಂ ಕರ್ಚಿ ಕಳೆವೊಡಭವೋದಿತನಿ
ರ್ಮಳವಾಕ್ಸುಧಾಂಬುಪೂರಮೆ
ಕಳೆಗುಂ ಮ[ತ್ತಿ]ನ ದುರುಕ್ತಿಗಳ್ ಕಳೆದಪ್ಪವೇ || ೪೫ ||

ಅಭಿಮತಸುಖದೊಳ್ ಕೂಡುವ
ಶುಭಪರಿಣಾಮಮನೆ ಕೇಳ್ದೊಡಘವಿರದದಱಿಂ
ದಭಿವಿನುತ ಜೈನಸೂಕ್ತಿ
ಪ್ರಭಾವಮಂ ಬಣ್ಣಿಸಲ್ಕೆ ನೆಱೆವವನಾವಂ || ೪೬ ||

ಭವಜಳಧಿಮಗ್ನಮಾನವ
ನಿವಹಸಮುತ್ತಾರಣೈಕಕಾರಣಮಂ ಭೂ
ಭುವನಸ್ತುತಮಂ ಕೇಳ್ವುದು
ವಿವೇಕಿಗಳ್ ಸೂಖ್ಯಸಾರಮಂ ಜಿನಮತಮಂ || ೪೭ ||

ತಿಮಿರಂ ಸೂರ್ಯಾಂಶುಗಳಿಂ
ದಮೆ ಕರಗುವ ತೆಱದೆ ಕರಗುಗುಂ ದುರಿತಂ ವಿ
ಶ್ವಮನೆಯ್ದೆ ಕಾಣ್ಬ ಬೋಧಂ
ಸಮನಿಸುಗುಂ ಕೇಳಲೊಡನೆ ಜೈನಾಗಮಮಂ || ೪೮ ||

ನಿರ್ಮಳಮನನಕ್ಕುಂ ದು
ಷ್ಕರ್ಮಂಗಳ [ಬ] ಸಕೆ ಸಲ್ಲನೆಲ್ಲಂದದೊಳಂ
ಧರ್ಮಂ ಗೆಯ್ಯಲ್ ಬಯಸುಗು
ಮೊರ್ಮೆ ಜಿನಾಗಮಮನೋಜೆಯಿಂ ಕೇಳ್ದ ನರಂ || ೪೯ ||

ಮನವಲಸದೆ ಜೀವಂಗಳ
ನನಿಶಂ ಘಾತಿಸುವ ಪಾಪಿ ಸೂ[ದ] ನುಮಾದಂ
ಜಿನನುತ್ತಮಮತಮಂ ಕೇ
ಳ್ದನಿತಱೊಳಂ ಕೊಲ್ವ ಕೊಲೆಗೊಡಂಬಡಲಱಿಯಂ || ೫೦ ||

ಮನುಜಂ ದ್ವಿಪಾದಪಶು ತಾ
ನೆನಿಪವನುಂ ಭಕ್ತಿವೆರಸು ನಿಶ್ಚಳಮತಿಯಿಂ
ಜಿನಮತಮನೞ್ತಿಯಿಂ ಕೇ
[ಳ್ದನಿತಱೊಳಂ] ಜೈನನೆನಿಸಿ ಪಂಡಿತನಕ್ಕುಂ || ೫೧ ||

ಲೋಗರ್ ಮಾಡಿದ ಪಲತೆಱ
ದಾಗಮಮಂ ಕೇಳ್ದು ನಿಟ್ಟೆಗೊಳ್ಳದವಂ ಕೇ
ಳ್ವಾಗಳೆ ಸನ್ಮತಿಯಕ್ಕುಂ
ಬೇಗಂ ತ್ತೈಲೋಕ್ಯಹಿತಮೆನಿಪ್ಪಾರ್ಹತಮಂ || ೫೨ ||