ಪಲತೆಱದಾಗಮಮಂ ಕೇ
ಳ್ದಲಸಿಕೆಯಿದಂ ಯಥೇಷ್ಟನಾದವನುಂ ನಿ
ರ್ಮಳಚಿತ್ತನಕ್ಕುಮಘಮಂ
ಗೆಲಲಾರ್ಕುಂ ಕೇಳಲೊಡನೆ ಜೈನಾಗಮಮಂ || ೫೩ ||

ಅತಿಕಾಮಾತುರನೆನಿಪಂ
ಸಿತಗಂ ಕಳ[ವ]ಳಿಗನೇಗೋಣಂ ಮೂರ್ಖಂ
[ಸತವ]ಱಿಯನೆನಿಪ್ಪಂ ಜಿನ
ಮತಮಂ ಕೇಳ್ವಾಗಳನಘನಕ್ಕುಮಭವ್ಯಂ || ೫೪ ||

ಕಲಹಕ್ಕೆ ಕಚ್ಚೆವಾಸುವ
ತಲೆವೊತ್ತೆ ಕೆರಳ್ವ ಜಗಳವಾಡುವನುಂ ತಾಂ
ಸಲೆ ಬಯ್ಯಿಸಿಕೊಳ್ವಂ ನಿ
ರ್ಮಳನಕ್ಕುಂ ಕೇಳಲೊಡನೆ ಜೈನಾಗಮಮಂ || ೫೫ ||

ಜಿನಮತಮಂ ಕೇಳದರೊಳ್
ಮನದೊಳ್ ನೋವಿಲ್ಲ ಕೇಳ್ದೊಡೆಂತಪ್ಪಂಗಂ
ಮನದೊಳ್ ನೋವಕ್ಕುಂ ಕೆ
ಮ್ಮನೆ ಪೆಱಗಣ ಕಾಲ[ಮುಂ]ತೆ ಪೋದುವೆನುತ್ತುಂ || ೫೬ ||

ಎಯ್ದುವುದುಂ ದುರ್ಗತಿಗಳ
ನೆಯ್ದಿ ಕರಂ ಸೇದೆಗೆಟ್ಟು ಘಾತಿಸಿ ಬಿದಿಯಂ
ಬಯ್ದುಂ ಮಱುಗದೆ ಮುಕ್ತಿಯ
ನೆಯ್ದುವನಾರ್ಹತಮನೊ[ಲ್ದು] ಭಾವಿಪುದಱಿವಂ || ೫೭ ||

ವಿಕಳತೆಯಿನಂತಾನಂ
ತಕಾಲಮುಂ ಜೈನಮಾರ್ಗಮಂ ಕಾಣದೆ ಮು
ನ್ನಕಟಕಟ ಕೆಟ್ಟೆ ನೀಂ ಮ
ತ್ತೆ ಕೆಡದಿರೆಲೆ ಜೀವ ಭಾವಿಸರುಹನ ಮತಮಂ || ೫೮ ||

ಪರಮಜಿನಮಾರ್ಗಮಂ ಸ
ದ್ಗುರುಗಳ್ ದಯೆಯಿಂದ ತೋಱೆ ತಾಳ್ವುದು ನೀನಾ
ದರದಿಂದಮೊಡಂಬಡುವುದು
ಸಿರಿ ಬರೆ ಮೋೞಕಾಲನಾಂಪ ಗಾಂಪರುಮೊಳರೇ || ೫೯ ||

ನರಕದ ದುಃಖಮನುಣುತಿರೆ
ಸುರರಾಜಂ ಜೈನಧರ್ಮಮಂ ತಿಳಿಪಿದೊಡಾ
ನರಕದವರ್ಕೇಳ್ವರ್ಮನು
ಜರೇಕೆ ಪಡೆಯಲ್ಕೆ ಕೇಳ[ರೋ ತಾಂ] ಪೇೞಿಂ || ೬೦ ||

ಕುತ್ತಂಗುಳಿಗಾಹಾರಮ
[ನೊ]ತ್ತಂಬದೆ ಪುಗಿಸಿ ಒಯ್ಯನೂಡುವವೋಲ್ ದು
ರ್ವೃತ್ತಂಗೆ ಜೈನಮಾರ್ಗಮ
ನೊತ್ತಂಬದೆ ಪೇೞಯೊಯ್ಯನಱಿವನೆ ಚದುರಂ || ೬೧ ||

|| ಬಾವಿಯೊಳಿರ್ದ ಪಾವಸೆ ತುಳುಂಕಲೊಡಂ ತಿಳಿದಂತೆ ಮತ್ತೆಯುಂ
ತೀವುಗುಮಂತೆ ಪೇೞ್ವ ಪದದೊಳ್ ಜಿನಮಾರ್ಗಮನೊಳ್ಳಿತೆಂ [ದದಂ]
ಭಾವಿಸುಗುಂ ಬೞಿಕ್ಕೆ ಕುಮ[ತಂ] ಪೊರೆಗುಂ ನರರಂತೆಯಾರುಮೇ
ನೇವರವಾರ್ಯಪೂರ್ವಭವಸಂಚಿತದುಃಕೃತಕರ್ಮಮುಳ್ಳಿನಂ || ೬೨ ||

ಸಲೆ ನವೆವ ರೋಗಿ ಬೇಗಂ
ತಲೆಯೆತ್ತಲ್ ಕಾಡಿ ನವೆವನನ್ಯರ ಮತದೊಳ್
ಪಲಕಾಲಂ ಭಾವಿಸಿದವ
ನಲಸಿಕೆಯಿಂದಾರ್ಹತಕ್ಕಮೆಂದುಂ ಬಾರಂ || ೬೩ ||

ಜ್ವರಿತಂಗೆ ದುಗ್ಧಪಾನಂ
ಪಿರಿದುಂ ಸೊಗಯಿಸದ ತೆಱದೆ ಮಿಥ್ಯಾತ್ವಮಹಾ
ಜ್ವರಿತಂಗೆ ಸುಧಾಪ್ರತಿಮಂ
ಪರಮಜಿನೇಂದ್ರಾಗಮೋಕ್ತಿ ಮೋಹಿಸದೆಂತುಂ || ೬೪ ||

ಓತು ಜಿನಮಾರ್ಗಮಂ ಕೇ
ಳ್ದಾ ತೆಱದಿಂ ನಡೆಯದನ್ಯಮಾರ್ಗದೆ ನಡೆವಂ
ಮಾತೇನೊ ಮತ್ತಮಾ ಪೊಱ
ಸಾ ತಗುಣೆಯೆನಿಪ್ಪ ತೆಱದಿನಾತ್ಮದ್ರೋಹಂ || ೬೫ ||

ಇದು ತಕ್ಕುದು ತಗದುದುವೆಂ
ದಿದುವಾಗಮಮಿದುವೆ ಸತ್ಪಥಂ ದುಷ್ಟಥಮೆಂ
ದಿರನಱಿಯದೆ ಕುಮತಿಗಳೂ
ಳ್ವುದನಾಗಮಮೆಂದು ನಂಬಿ ಕಿಡುವರ್ ಮೂಢರ್ || ೬೬ ||

ಮೊಟ್ಟೈಸವನ್ಯಸಮಯಿಗ
ಳೊಟ್ಟಜೆಯಿಂ ಮಾಡಿದಾಗಮಂಗಳ್ ಬಗೆಯಿಂ
ದಟ್ಟು ಸವಿನೋಡದಂದಮೆ
ನಿಟ್ಟಿಸಲದು ಮೋಕ್ಷಮಾರ್ಗಮಂ ಜಿನಮತದೊಳ್ || ೬೭ ||

ಲೋಗರ್ ಮಾಡಿದ ಪಲತೆಱ
ದಾಗಮಮುಂ ಯುಕ್ತಿ ಪಲವು ತಾನುಂತುಂ ಜೈ
ನಾಗಮದೃಷ್ಟಂ ನಿಶ್ಚಯ
ಮಾಗಿರ್ಕುಂ ಕೋಟೆ ತೆಱದೊಳಂ ನೋಡುವೊಡಂ || ೬೮ ||

ಜಿನಮತಮನಱಿದವಂ ಮ
ತ್ತಿನಾಗಮಂಗಳುಮನೋದುವಂದವಱವಱೊ
ಳ್ಪಿನಿಸುಂ ನಿಶ್ಚಯಮಿಲ್ಲೆಂ
ತೆನೆ ಮೆಚ್ಚಿದ ತೆಱದೆ ನಡೆವುತಿಪ್ಪುದಱಿಂದಂ || ೬೯ ||

ಪರಮತದೊಳಗೆತ್ತಾನುಂ
ಪರಿಕಿಸುವೊಡೆ ಯುಕ್ತಿಸಹಮೆನಿಪ್ಪೋದುಗಳೊಂ
ದೆರಡೊಳ[ವಾ] ಜಿನಮತಶರ
ಶರಧಿಯ ಶಿಖರಕ್ಕೆ ನೋಡೆ ಬೇಱಿಲ್ಲೆಂತುಂ || ೭೦ ||

ಅತ್ತಿಯ ಪಣ್ಣಂದದಿನೊ
ಳ್ಳಿತ್ತಪ್ಪುದು ಪೊಱಗೆ ನೋ[ೞ್ಪೊಡಂ]ದೊಳಗಣದೊ
ಳ್ಳಿತ್ತಲ್ತದನ್ಯಸಮಯದ
ಪೊತ್ತಗೆಗಳ್ ಜೈನಮತದ ಪೊತ್ತಗೆಗೆಣೆಯೇ || ೭೧ ||

ನೋಡದ ಮುನ್ನಮದಕ್ಕು[ಮೆ]
ರೂಢಿಯ ಜಿನಮತಮನನ್ಯಮತದಾಗಮಮಂ
ನೋಡಿ ಬೞಿಕ್ಕಂ ಪೆಱ[ವಂ]
ನೋಡೆ ಜರತ್ತೃಣಲವಂಗಳೆನಿತೊಳವನಿತುಂ || ೭೨ ||

ನಾಡೊಳಗೆ ಬೆಳ್ಳಿಕಟ್ಟಂ
ಮಾಡುವನುಂ ಪೊನ್ನನಿಕ್ಕಿ ಮಾೞ್ಪಂ[ತ]ನಿಬರ್
ಮಾಡುವರರುಹನ ಮತದೊಳ್
ಕೂಡಿ ಕರಂ ಮೇರೆಗೆಟ್ಟು ಪುಸಿ[ವೋ]ದುಗಳಂ || ೭೩ ||

ಜೈನಾಗಮ[ದ]ಮೃತಾಬ್ದಿಯೊ
ಳೇನುಂ ದೊರೆಕೊಂಡುದದಱ ಬಲದಿಂದಂ ತಾ
ವೇನಂ ಮಾಡಿದೊಡಂತದು
ತಾನ್ನಯಮಾಗಿರ್ಕುಮನ್ಯಸಮಯಕ್ಕೆಲ್ಲಂ || ೭೪ ||

ಪುಸಿ[ಯಿಂ] ದಿಟಮಂ ಸುಕೃತಮ
ನಸದಾಚಾರ[ದಿ]ನಹಿಂಸೆಯಂ ಹಿಂಸೆ[ಯಿ]ನೋ
ಡಿಸಿ ಜೈನರಲ್ಲದರ್ ಬ
ಣ್ಣಸರಂಗೋದಂತೆ ಧರ್ಮಶಾಸ್ತ್ರಂ ಪೆೞ್ವರ್ || ೭೫ ||

ಉತ್ತಮಮೆನಿಸಿದ ಮಾತುಗ
ಳೆತ್ತಾನುಂ ಅನ್ಯರಾಗಮಂಗಳೊಳಂ ಕಂ
ಡ[ತ್ತಿರ]ದೆ ತೊರೆಯೊಳೞ್ದಂ
ಮತ್ತಹಿಯಂ ತೆಪ್ಪಮೆಂದು ಪಿಡಿವಂತಕ್ಕುಂ || ೭೬ ||

ಅಣುಮಾತ್ರಮಸತ್ಯಮದಾ
ಗಣುವಿಲ್ಲ ಜಿನೇಂದ್ರಮತದೊಳೆಂತು ನೋ[ೞ್ಪಂ]
ದಣಕದ ಪುಸಿಯೊಂದೆರಡೆ
ಎಣಿಸುವೊಡವು ಲೆಕ್ಕಮಿಲ್ಲ ಮಿಕ್ಕಿನ ಮತದೊಳ್ || ೭೭ ||

ಮೊದ[ಲೊಳ್] ಮುನ್ನೋರ್ವಂ ಪೇ
ೞ್ವದುಮಿ[ಲ್ಲಾ] ಇನ್ನು ಮುನ್ನ ನುಡಿಯಳ್ಳೊಡೆ ಪೇ
ೞ್ದುದುಮಿಲ್ಲ ಪೇೞ್ವುದಿಲ್ಲಂ
ಮೊದ[ಲೊಳ್] ಮುತ್ತ ತುದಿ ಚಂದನ[ವಿವು] ಮತಂಗಳ್ || ೭೮ ||

ಅಡಗಡಗ ಮುಚ್ಚಿದಂದಮೆ
ನುಡಿಯದುದಾಗಮಮೆನಿಕ್ಕುಮಲ್ಲದೆ ಭಾಗಂ
ಮಡಿ ಮೈಲಗೆಯಂತಿರಲೇ
ನೆಡಂಬಡಂ ನುಡಿಯದಂತಿದೇನಾಗಮಮೇ || ೭೯ ||

ನುಡಿದುದನೆ ನಿಶ್ಚಯಂ ಸಲೆ
ನುಡಿಯದೆ ತಾಂ ಬಾಯ್ಗೆ ಬಂದುದಂ ನುಡಿ[ವುದದೇಂ]
ನುಡಿವು[ದೆಯದು] ಪರಸಮಯದ
ನುಡಿಯಲ್ಲದೆ ತಪ್ಪು ನುಡಿಯಲಱಿವರೆ ಜೈನರ್ || ೮೦ ||

ನೋಡಲದು ಯುಕ್ತಿಯಂದಂ
ರೂಢಿಯ ಜಿನಮತಮನನ್ನಮತಮಂ ತಾನುಂ
ನೋಡುವುದಯುಕ್ತಮದು ಕೊಂ
ಡಾಡುವುದನುಚಿತಮುಮೆಂದುಮೆಂಬರ್ ಜೈನರ್ || ೮೧ ||

ನುಡಿದುದನೆ ನುಡಿಯದೆರಡಂ
[ನುಡಿವಿ]ರ್ನಾಲಗೆಯ ಜಡರನುತ್ತಮರೆನವೇ
ಡುಡುವೆಂಬುದು ಪಾವೆಂಬುದು
ನುಡಿಗಳ ದಿಟವಲ್ಲವೆನಿಪನಾಪ್ತನುಮಲ್ಲಂ || ೮೨ ||

ತಪ್ಪಂ ನುಡಿವರ ಮತದೊಳ್
ತಪ್ಪದು ಸುಖಹೇತುವೆಂದು ನಡೆವೊಡೆ ಸುಖಮೇ
ನಪ್ಪುದು ತೊಱೆಯೊಳ್ ಪೋಪಂ
ತೆಪ್ಪಮೆ ಗೆತ್ತಹಿಯನೆಯ್ದೆ ಪಿಡಿವಂತಕ್ಕುಂ || ೮೩ ||

|| ಕುರುಡಂ ಲಾವಗೆ ಮೆಟ್ಟಿದಂತೆಸೆವಸದ್ಧರ್ಮಂಗಳಂ ಪೇೞ್ವ ಲೋ
ರಗದೊಂದಾಗಮಮಾರ್ಗದಿಂದೆ ನಡೆಯಲ್ಕೇಂ ಸಾರ್ಗುಮೇ ಸೌಖ್ಯಮಾ
ದರದಿಂದಂ ಕಡೆಗೆಯ್ದುವನ್ನೆವರೆಗಂ ಸನ್ಮಾರ್ಗಮಂ ಪೇೞ್ವ ಜೈ
ನರದೊಂದಾಗಮಮಾರ್ಗದಿಂ ನಡೆದವಂಗಪ್ಪಂತೆ ಸೌಖ್ಯಾವಹಂ || ೮೪ ||

ಕ್ರಮವಱಿಯದಿತರ ಕುಮತ
ಕ್ರಮದೆ ತಪಂಗೆಯ್ದು ನಮೆದು ನಾರುಟ್ಟೊಡಮ
ಕ್ಕುಮೆ ಸುಗತಿ ಮರುಳೆ ನೀಂ ಜೈ
ನಮಾರ್ಗದಿಂ ನಡೆಯೆ ಮುಕ್ತಿಯಕ್ಕುಮಮೋಘಂ || ೮೫ ||

ನೆಱೆ ಜಿನಮಾರ್ಗದೆ ನಡೆದೊಡೆ
ಕೊಱೆಗುಂ ಕರ್ಮಂಗಳುೞಿದರೊಳ್ ಕೊಱದಪುದೇ
ಪಱುಗೋಲಿಂ ಪಾಯ್ವಂದದೆ
ತೊಱೆಯಂ ಮೊಱದಿಂದೆ ಪಾಯಲೇಂ ಬಂದಪುದೇ || ೮೬ ||

ಇದು ದೆಯ್ವಮಪ್ಪುದೀ ದೆ
ಯ್ವದ ಪೇೞ್ವುದೆ ಲೋಕಹಿತಮೆನಿಪ್ಪಾಗಮಮಿಂ
ತಿದು ಮೋಕ್ಷಮಾರ್ಗಮೆಂದೆಂ
ಬುದನಾ ಸದ್ದೃಷ್ಟಿಯಲ್ಲದಂ ಕಂಡಪನೇ || ೮೭ ||

ಆದರಿಸಿ ಸಂತತಂ ಮಿ
ಥ್ಯಾದೃಷ್ಟಿಗಳೋದಿನಿಷ್ಟದಿಂ ನೆಗೞದೆ ಸಂ
ದಾದಿಬ್ರಹ್ಮಂ ಪೇೞ್ದೊಂ
ದಾದಿಯ ಮಾರ್ಗದೊಳೆ ನಡೆದು ಪಡೆವುದು ಸುಖಮಂ || ೮೮ ||

ಉತ್ತಮಜಿನಮಾರ್ಗಕ್ಕೆಣೆ
ಮತ್ತಿನ ಕುಮತಂಗಳೆನ್ನದಿರೆ ಪರಿಕಿಸುವಂ
ದುತ್ತಮಮಲ್ಲದಱಿಂದಂ
ದುತ್ತಮವೆಂದೆನ[ಲ್ಕೆ] ವೇಡ ಸನ್ಮತಿಯಪ್ಪಂ || ೮೯ ||

ಮದಗಜದ ತಿವಣಿಯೊಳಗ
ಲ್ಲದೆ ಮೃಗದಡಿಮೃಗದ ತೆಱದೆ ಲೋಕದವರ್ ಮಾ
ಡಿದ ಸಕಲತತ್ತ್ವಮೊಳಗ
ಲ್ಲದೆ ಮಿಗಲಱಿದಪುವೆ ಜಿನಮತಾಂಭೋನಿಧಿಯಂ || ೯೦ ||

ಪರಸಮಯದ ಪಿರಿದೆನಿಸಿದ
ಪುರಾಣಮಂ ಜೈನರಲ್ಲಿ ವಾಕ್ಯಮದೊಂದಂ
ಪರಕಿಸಿ ನೊೞ್ಪಾಗಳ್ ಕೆಂ
ಬರಲಿನ ಪೆರ್ಗಲ್ಲ ತೆಱನದೆಂತಂತೆ [ವಲಂ] || ೯೧ ||

ಪಾಲೆಂದೊಡೆ ಗಿಡುಮರಗಳ
ಪಾಲುಂ ಸೇವ್ಯಂಗಳಲ್ಲವೆನಿಸಿದ ಪಾಲುಂ
ಪಾಲಕ್ಕುಮೆ ಜಿನಮತದಿಂ
ಮೇಲಕ್ಕುಮೆ ಸಿತಗರೂಳ್ವ ಸಿತಮತಕಥೆಗಳ್ || ೯೨ ||

ಸಾರವಿದಸಾರವೆಂದು ವಿ

ಚಾರಿಸುವುದ ಮುನ್ನ ತನ್ನೊಳಱಿವುಳ್ಳ[ವರೊಳ್]
ವೈರವನೆ ಬಿಟ್ಟು ತತ್ತ್ವದ
ಸಾರತೆಯಂ ತಿಳಿದು ಬೞಿಕೆ ಕೈಕೊಳ್ಗಱಿವಂ || ೯೩ ||

ಇದು ಮುಕ್ತಿಮಾರ್ಗಮಿಂತ
ಪ್ಪುದು ದುರ್ಗತಿಮಾರ್ಗಮೆಂದು ಪರಿಕಿಸುತುಂ ತ
ತ್ತ್ವದ ಹರಿಕೆಯುಳ್ಳವಂ ತಿಳಿ
ವುದು ಮಚ್ಚರಮಂ ಬಿಸುಟ್ಟು ಜೈನರ ಕೆಲದೊಳ್ || ೯೪ ||

ಅಪವರ್ಗಮಾರ್ಗಮಂ ಜೈ
ನಪುರಾಣಮನೆಯ್ದೆ ತಿಳಿದು ಮನುಜಂ ಬೞಿಯಂ
ಕುಪಥಕ್ಕೆಱಗನಿರುಳ್ ಬಿ
ರ್ದ ಪಗವದೊಳ್ ಪಗಲುಮಱಿವುತುಂ ಬಿೞ್ಪಪನೇ || ೯೫ ||

ಅನುಪಮಜಿನವಚನರಸಾ
ಯನಸೇವನೆ ಜನನಮರಣದುಃಆಖಾಪಹರಂ
ಮನುಜಂಗೆಂದದನನಿಶಂ
ಮನಸ್ವಿಗಳ್ ನಿಯಮದಿಂದೆ ಸೇವಿಸುತಿಪ್ಪರ್ || ೯೬ ||

ಆಗಮದಿಂದಾಪ್ತನನಿಂ
ಬಾಗಿರೆ ತಿಳಿದಾಪ್ತನಿಂದಾಗಮೆಂದಿಂ
ಬಾಗಿರೆ ತಿಳಿಯದೊಡೆರಡೊಂ
ದಾಗಿರ್ಕುಂ ಮುಖ್ಯಮೆರಡುಮೆಂದಿಂದಿಂಗಂ || ೯೭ ||

ಚಂ || ಪರಮಸುಖಕ್ಕೆ ತಾನೆ ನೆಲೆಯಂ ಬಿಡದಾತ್ಮ ವಿಭೂತಿ ಸೂಚಿಸು
ತ್ತಿರೆ ಮನುಜಂಗೆ ಮಂಗಳಮಹೋತ್ಸವಮೊಪ್ಪುವುದೆಂದೊಡಂತದಂ
ವಿರಚಿಸಿ ದೇವದೇವಪದದೊಳ್ ನೆಗೞ್ದಾದಿಜಿನೇಂದ್ರಚಂದ್ರನಾ
ದರದೊಳೆ ಬೋಧವಾರ್ಧಿಯನೆ ಪೆರ್ಚಿಸುತಿರ್ಕೆ ವಿನೇಯೆಕೋಟಿಯಾ || ೯೮ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮ ರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಟರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳಾಪ್ತಾಗಮವರ್ಣನಂ ತೃತೀಯಾಧಿಕಾರಂ