ಶ್ರೀಮದಮರೇಂದ್ರನಿಚಯಶಿ
ಖಾಮಣಿಮಾಲಾರ್ಚಿತಾಂಗ್ರಿಯುಗಳಂ ಮುಕ್ತಿ
ಶ್ರೀಮಹಿತಂ ತ್ರಿಭುವನಚಿಂ
ತಾಮಣಿ ದಯೆಗೆಯ್ಗೆ ವಿಮಳರತ್ನತ್ರಯಮಂ || ೧ ||
ಮ || ಅತಿಚಾತುರ್ಯಪ[ರ]ರ್ ವಿವೇಕನಿಳಯರ್ ಸರ್ವಜ್ಞಸದ್ಭಾವನಿ
ಶ್ಚಿತಚಿತ್ತರ್ ಗುಣಭೂಷಣರ್ ಪರಹಿತಾಚಾರರ್ ಮಹೋತ್ಸಾಹಸಂ
ಯುತರಾಪ್ತಾಗಮಸಚ್ಚರಿತ್ರನಿಪುಣರ್ ಧರ್ಮಾನುರಾಗಾತ್ಮ ರೀ
ಕ್ಷಿತಿಯೊಳ್ ಭವ್ಯಸಮಾಜಮೆಂದು ವಿಬುಧರ್ ಕೂರ್ತಾಗಳುಂ ಕೀರ್ತಿಪರ್ || ೨ ||
ಮನವಚನಕಾಯದಿಂ ಜೀ
ವನಿಕಾಯಮನೆಯ್ದಿಸಲ್ಕೆ ಪೆಱನಱಿವನೆ ಜೈ
ನನೆ ಸುಗತಿಗೆಯ್ದಿಕುಂ ತಾ
ನೆನೆ ಜಗದೊಳ್ ಜೈನರಿಂ ದಯಾಪರರೊಳರೇ || ೩ ||
ಒಡಲುಳ್ಳನಿತುಂ ನಸಿದೊಡೆ
ಬಿಡಲಾಱಂ ತನ್ನನಿಂತಮೇಧ್ಯದ ಪುೞುವುಂ
ಬಿಡಲಾಱದು ದೇಹಮನೆಂ
ದೊಡೆ ದೇಹಿಗೆ ದೇಹದಿಂದೆ ಸಖಿ ಪೆಱತುಂಟೇ || ೪ ||
ಒಡಗೂಡಿದವರಗಲ್ಕೆಗೆ
ಗಡ ಪಿರಿದುಂ ದುಃಖಮಕ್ಕುಮೆಂದುಮೊಡಂಬ
ಟ್ಟೊಡಲಂ ಸಲೆ ಪತ್ತಿದುದಂ
ಬಿಡುವಾಗಳ್ ಮೇರೆಯುಂಟೆ ದೇಹಿಗೆ ದುಃಖಂ || ೫ ||
ಎಡಪಿಯುಮಂಗಾಲಂ ಮುಳ್
ನಡೆಯುಂ ತಾನೆಂತು ನೊಂದು ಮಱುಗುವನಂತೆ
ಲ್ಲೆಡೆಗಳೊಳಂ ಪ್ರಾಣಿಗಳಂ
ಮಡಿಪದೆ ನೋಯಿಸದೆ ಕಾವುದೆಂಬಂ ಜೈನಂ || ೬ ||
ನಡೆವೆಡೆಯೊಳ್ ನಿಲ್ವೆಡೆಯೊಳ್
ಪಡುವೆಡೆಯೊಳ್ ಜೀವನಿಕರಮಂ ರಕ್ಷಿಸದಿ
ರ್ದೊಡೆ ಪಾಪಮಕ್ಕುಮೆಂದೆಂ
ದಡಿಗಡಿಗಾರೈದು ನೋಡಿ ನಡೆವಂ ಜೈನಂ || ೭ ||
ಕಸಗಳೆವಡೆಗಳೊಳಂ ಸಾ
ರಿಸುವೆಡೆಯೊಳಮಕ್ಕಿಗುಟ್ಟುವೆಡೆಯೊಳ್ ಸಲೆ ಸೋ
ದಿಸಿ ಜೀವನಿಕರಮಂ ರ
ಕ್ಷಿಸುವರೆನಲ್ ಜೈನರಿಂ ದಯಾಪರರೊಳರೇ || ೮ ||
ಆವಾವ ಮಾೞ್ಕೆಯಿಂಬದಂ
ಜೀವಂಗಳನೋವಿ ನಡೆವರಲ್ಲದೆ ಮಱಿದುಂ
ಸಾವದ್ಯಮೆಂದೊಡೊಮ್ಮೊ ೞ
ಪಾವಿಂಗಂಜದುದನಂಜುವರ್ ಸಲೆ ಜೈನರ್ || ೯ ||
ತೊತ್ತಿರ ಬಂಟರ ಪಶುಗಳ
ಕತ್ತೆಯ ಕಿವಿಮೂಗನರಿವ ಪೀಡಿಪ ಬಿಡದಾ
ಪೊತ್ತುಂ ಕೆಲಸಂಗೊಳ್ವ ನೆ
ಗೞ್ತೆಗಳಂ ನೆಗೞಲೆಂತುಮಱಿಯರ್ ಜೈನರ್ || ೧೦ ||
ದೇವತೆಗೆ ಪರಕೆಗುಡೆ ನಾ
ನಾವಿಧ ರುಜೆ ಪಿಂಗಿಪೋಗೆ ಬರ್ದುಕಿದೆನೆಂಬರ್
ದೇವತೆಗೆ ಕುಡದೆ ಸತ್ತೊಡೆ
ತೀವಿದ ಮನೆಗಳನೆ ಪರಕೆಗೊಟ್ಟರ್ ಸತ್ತರ್ || ೧೧ ||
ನೀರಂ ತೋಱದೆ ಪಸಿದುದ
ನಾರಯ್ಯದೆ ಸೇದೆಯಱಿದು ನಿಲಿಸದೆ ಪಿರಿದುಂ
ಭಾರಮನೇಱಿಸಿ ಪಸುವಂ
ದೂರಾಂತರಮೊಯ್ಯದೋವಿ ನೆಗೞ್ವರ್ ಜೈನರ್ || ೧೨ ||
ಮುಂಗುರಿ ಮಾರ್ಜಾರಂ ಸಾ
ರಂಗಂ ಪುಲಿ ಕೋೞಿ ಗಿಡಿಗನೆಂಬಿವೆ ದಲ್ ಜೀ
ವಂಗಳ್ಗೆ ಬಾಧೆಮಾಡುವ
[ರಂ] ಗುಣಿಗಳ್ ನಡಪಲಾಗದೆಂಬಂ ಜೈನಂ || ೧೩ ||
ಕ್ರೂರಮೃಗಪಕ್ಷಿನಿಚಯಮ
ನೋರಂತಿರೆ ಪೊರೆದ ಪಾಪಫಲದಿಂ ಮನುಜಂ
ಘೋರತರಮಪ್ಪ ದುಃಕಾಂ
ಭೋರಾಶಿಯೊಳಾೞ್ಗುಮೆಂದು ಭೀತಂ ಜೈನಂ || ೧೪ ||
ತಗರಂ ಕೋೞಿಗಳಂ ಲಾ
ವಗೆಗಳನೆಸೆವೆರ್ಮೆವೋರಿಯಂ ಪಾಪಿಷ್ಠರ್
ಮಿಗೆ ಬಸನದಿಂದೆ ಪೋರಿಪ
ರಗಣಿತಗುಣಱಿದು ತೊಱೆದು ನೆಗೞ್ವರ್ ಜೈನರ್ || ೧೫ ||
ಸಂದ ಗುಣಮ[ಣ]ದೊಳತ್ಯಾ
ನಂದಮನರ್ ಬಗೆವರೊಳ್ಪನಲ್ಲದೆ ಹಿಂಸಾ
ನಂದದೆ ಬೊಬ್ಬಿಱಿದಾಡುವ
ರೆಂದೊಡೆ ರಾಗಿಸಲುಮೆಂತುಮಱಿವರ್ ಜೈನರ್ || ೧೬ ||
ಕುಡುಗೋಲಂ ಕೂಱಿಗೆಯಂ
ಕೊಡಲಿ ಕುರುಂಜಿಗೆಯನುೞುವ ಪರಗುವ ಕಱುಪಿಂ
ಬಿ[ಡದೆಯಗು]ೞ್ವಾ ಮುಟ್ಟಂ
ಕುಡರೆರವಂ ಪೆಱರ್ಗೆ ಪಾಪಭೀತರ್ ಜೈನರ್ || ೧೭ ||
ಇಂತಪ್ಪ ಧಾನ್ಯನಿಚಯಮ
ನಿಂತಪ್ಪೆಡೆ ಬೆಳೆವುದಿಲ್ಲಿ ಜಳಚರಮೊಳವಿ
ಲ್ಲಿಂತಪ್ಪಡವಿಗಳೊಳ್ ಮೃಗ
ಸಂತತಿಯುಂಟೆಂದು ಪೇೞನೆಂತುಂ ಜೈನಂ || ೧೮ ||
ಕುತ್ತಮಿನಿಸಾದೊಡನ್ಯರ್
ಮತ್ತೆನಿಸದೆ ಬಳರಿಗೊಯ್ದು ಕುಡುವರ್ ಕುಱಿಯಂ
ಸತ್ತವರ್ಗಳೆೞ್ದು ಬರ್ಪೊಡ
ಮೆತ್ತಾನುಂ ಹಿಂಸೆಗೆಯ್ಯಲಱಿಯರ್ ಜೈನರ್ || ೧೯ ||
ಚಂ || ತನಗೆ ಕಡಂಗಿ ಮಿತ್ತು ಬರೆ ಮಾನಿಸರಂ ಕುಱಿಯಂ ಬಳಾರಿಗಾ
ರ್ಪನಿತನೆ ಕೊಟ್ಟು ಜೀವಿಸುವೆನಂದೞಿಮೋಹದೆ ಕೊಲ್ವ ಪಾಪಕ
ರ್ಮನೆ ನಿಮಿಷಾರ್ಧಮಂ ಬರ್ದುಕನಾಗಳೆ ಸಾವನಮೋಘಮಂತು ಸ
ತ್ರನನೆೞೆದೊಯ್ದು ಘೋರನರಕಂಗಳೊಳಿಕ್ಕುವರೊಲ್ದು ನಾರಕರ್ || ೨೦ ||
ದೇವತೆಯ ಮುಂದೆ ಕೊಂದೊಡೆ
ಜೀವಂಗಳನಾಗ ಸಾವವಂ ಬರ್ದುಕುವನೆಂ
ದೀ ವಿಧದೆ ಕೊಲ್ವ ನರ[ನಂ]
ದೇವತೆಗಳ ಕಾದ ಬಟ್ಟೆಯುಳ್ಳೊಡೆ ತೋಱಿಂ || ೨೧ ||
ಮಾತಿಂ ಮುನ್ನಂ ನಿನ್ನಂ
ಘಾತಿಸಿದೆನೆನುತ್ತೆ ನುಡಿವರಿತರರ್ ನಿರುತಂ
ಮಾತಾಡುವಲ್ಲಿ ಪೆಱರಂ
ಘಾತಿಸಿದೆನೆನಲ್ಕೆ ಜೈನರಱಿವರೆ ಮಱೆದುಂ || ೨೨ ||
ಭಾವಿಸುವನಾವನೆಲ್ಲಾ
ಜೀವಮುಮಂ ತನ್ನ ಮಕ್ಕಳೆಂತಂತವನಂ
ಭಾವಿಸುಗುಂ ಭೂವಳಯಂ
ದೇವನಿವಂ ಮನುಜನಲ್ಲನೆಂದಾಪೊೞ್ತುಂ || ೨೩ ||
ಎನಿತೊಳವು ಧರ್ಮಶಾಸ್ತ್ರಮ
ವನಿತುಮನಱಿವನ್ಯಸಮಯಿಯುಂ ಭಾವಿಪೊಡೀ
ಜಿನಸಮಯಿಯಲ್ಲಿ ಕಡೆಪ
ಟ್ಟನೊಳಂ ಸಮನಾಗಲೆಂತುಮಾಱಂ ದಯೆಯೊಳ್ || ೨೪ ||
ಹಿಂಸಾದಿ ದೋಷಚಯಮಂ
ತಾಂ ಸಲೆ ಮಾಡುತ್ತಲಿರ್ಪ ಪಾಪಿಗೆ ದುರಿತ
ಧ್ವಂಸಂ ಮಾಡುವ ಜಿನವಚ
ನಂ ಸೊಗಯಿಸದೆನಿಬರಿರ್ದು ಪೇೞ್ದೊಡಮೆಂತುಂ || ೨೫ ||
ದಯೆಯಿಲ್ಲದನ್ಯಸಮಯಿಗ
ಳ ಯಥೇಷ್ಪಚರಿತ್ರದಿಂದೆ ಜೈನಚರಿತ್ರಂ
ಪ್ರಿಯಮಾದುದಂತೆ ದಲ್ ರೂ
ಢಿಯ ತಮಮಿಲ್ಲದೊಡೆ ಭಾನುವೇನೆಸೆದಪನೇ || ೨೬ ||
ಜೀವಂಗೆ ಸೌಖ್ಯನಿಳಯಂ
ಸಾವದ್ಯನಿವೃತ್ತಿ ಸಪ್ತಋದ್ಧಿಯುಮದಱಿಂ
ದಾವೊಂಗಮಕ್ಕುಮೆಂತುಂ
ಭಾವಿ[ಸೆ] ದಯೆಯಿಂದಮಿನ್ನತಃಪರಮುಂಟೇ || ೨೭ ||
ಆವಂಗಂ ತನ್ನಿಂದಂ
ಸಾವುಂ ಕೇಡುಂ ಭಯಂಗಳುಂ ವಿಕಳತೆಯುಂ
ನೋವುಮಿನಿಸಾಗದಂತಿರ
ಲಾವಂ ಸಲೆ ನುಡಿಯನೆಂದುಮಾತನೆ ದೇವಂ || ೨೮ ||
ಪುಸಿಯಂ ನುಡಿವವರ್ಗಳ ಮಾ
ನಸಿಕ್ಕೆಯುಂ ಗುಣಮುಮೞಿಗುಮಂತವರಂ ಮ
ನ್ನಿಸರಾರುಂ ಭಾವಿಸುವೊಡೆ
ಪುಸಿಯೆ ಮೊದಲ್ ಪಾತಕಂಗಳೆನಿತನಿತರ್ಕಂ || ೨೯ ||
ಮ || ಪರದಾರಾಭಿಗಮಕ್ಕೆ ಹೇತುವಳಿಪಿಂಗನ್ಯಸ್ವಮಂ ಕೊಳ್ವ ದು
ಶ್ಚರಿತಂಗಂ ಪುಸಿ ಬಾೞ್ಮೊದಲ್ ನುಡಿಗುಮಂತಾ ವಾರ್ತೆಯಂ ಮದ್ಯಪಾ
ನರತಂ ಮೇಣ್ ಮೃಗಯಾನುರಕ್ತನದಱಿಂದಂ ನಾನೃತಾತ್ಪಾತಕಂ
ಪರಮೆಂಬೀ ನುಡಿಯಂ ವಿಚಾರಿಸದವಂ ಪಾಪಕ್ಕೆ ಪಕ್ಕಾಗನೇ || ೩೦ ||
ಮಱಿದಪ್ಪೊಡಮೆಂದುಂ ನುಡಿ
ದಱಿಯಂ ದಿಟಮಪ್ಪ ನುಡಿಗಳಂ ಮಾಣದೆ ಪೊ
ಚ್ಚಱತನದೆ ನುಡಿವನೆನಿಸಿ
[ಪ್ಪ]ಱಗುಲಿಗಂ ಮೊಗ್ಗೆ ಸೂನೃತವ್ರತಮೆಂತುಂ || ೩೧ ||
ಇವಳವ[ಳೆ] ಚೆಲ್ವಂ ರೂಪಿನೊ
ಳಿವಂಗೆ ಪೊನ್ನುಂಟು ಕೊಲ್ವುದೀ ತೆಱದಿಂದಿ
ನ್ನಿವನಂ ದಂಡಿಪುದೆನಲೇ
ನವಶ್ಯಮಱಿದಪರೆ ಜೈನರೆಂದುಂ ಮಱೆದುಂ || ೩೨ ||
ಪರಪರಿವಾದಮನೆಂತುಂ
ಪಿರಿದಪ್ಪೞ್ತಿಯೊಳೆ ಕೇಳರುತ್ತಮಗುಣಮು
ತ್ತರೆ[ನಲ್] ಕೇಳುತ್ತಿರ್ಪರ್
ಪರಮಾದರದಿಂದೆ ಜೈನಸಮಯಿಗಳಾರುಂ || ೩೩ ||
ಆನುವದಿಸಿ ಧರ್ಮಮಂ ಕಿವಿ
ಗಿನಿದಾಗೆ ಪರತ್ರೆಗಿದುವೆ ಹಿತವೆನಿಸಿದ ಮಾ
ತನೆ ನುಡಿವರುೞಿದದಂದದಿ
ನನೇಕಮಂ ನುಡಿಯಲೆಂತುಮಱಿಯರ್ ಜೈನರ್ || ೩೪ ||
ಒಡವುಟ್ಟಿದವರ ಕಯ್ಯಂ
ಪಿಡಿವಂ ಕಳ್ಗುಡಿವನೆಂದು ತಮ್ಮೊಳ್ ಸರಸಂ
ನುಡಿವ ದುರಾತ್ಮರ ತೆಱದಿಂ
ನುಡಿವರೆ ಮಱೆದೆಂದುಮಪ್ಪೊಡಂ ಜಿನಭಕ್ತರ್ || ೩೫ ||
ಲೋಗರ ಪುಸಿಯಂ ಸೈರಿಸ
ನೇಗೆಯ್ದುಂ ತಾನೆ ಪುಸಿವನಲ್ಲಂ ಮಿಥ್ಯಾ
ತ್ವಾಗರ್ವಮಿಲ್ಲ ಗುಣಿ ಭೂ
ಭಾಗದೊಳಿವನೆಂದು ಸರಸಮಾಡುಗೆ ಚದುರಂ || ೩೬ ||
ಮಕ್ಕಳ್ಗೆ ಬೆಣ್ಣೆಯೊಳ್ ಮ
ರ್ದಿಕ್ಕುವವೊಲ್ ಪೆಱ[ರ್ಗೆ] ಪೇೞ್ವ ಮಾತುಗಳೊಳ್ ತಂ
ದಿಕ್ಕುವನಱನಂ ಜೈನಂ
ಮೊಕ್ಕಳಿಗರ ತೆಱದೆ ನುಡಿಯಲಱಿಯನದೆಂತುಂ || ೩೭ ||
ಮಧುರವಚನಂ ಮನಕ್ಕ
ತ್ಯಧಿಕಸುಖಪ್ರಾಪ್ತಿಹೇತುವಪ್ಪವೊಲಮೃತಾಂ
ಬುಧಿಯುಂ ಮಳಯಜರಸಮುಂ
ವಿಧುಕರಮುಂ ತಣ್ಪನೀಯಲೇನಾರ್ತಪುವೇ || ೩೮ ||
ಮ || ಅಪವರ್ಗೋಚಿತಮಾರ್ಗಮಸ್ತದುರಿತಾ[ತಂಕಂ] ಸದಾಚಾರಸೌ
ಖ್ಯಪದಂ ಸಜೃನಸನ್ನುತಂ ಬಗೆಯೆ ಸತ್ಯಂ ನಾಸ್ತಿ ಸತ್ಯಾತ್ಪರಂ
ತಪಮೆಂದಿರ್ದಪುದಾಗಮೋಕ್ತಮದಱಿಂದಾರಾದೊಡಂ ಸತ್ಯವಾ
ಕ್ಯಪವಿತ್ರೀಕೃತವಕ್ತ್ರರಾಗಿ ಪಡೆಯಿಂ ನಿರ್ವಾಣಕಲ್ಯಾಣಮಂ || ೩೯ ||
ಹಾಗದ ಭಾಗಂ ಕೆಟ್ಟಂ
ದಾಗಳುಮೊಡಲುರಿಗುಮೆಂತು ತನಗದಱಿಂದಂ
ಲೋಗರ ಕಸವರಮಂ ಕೊಳ
ಲಾಗದು ಕೊಂಡಂದು ಕಿಡುಗುಮೆರಡುಂ ಭವಮುಂ || ೪೦ ||
ಇವನೆತ್ತುಂಗೋಲಂ ನೀ
ಮಿವನಂ ನಂಬದಿರಿಮೆಂದು ಕಂಡವರ್ಗಳ್ ಸಾ
ಱುವರತ್ತಮಿತ್ತಲುತ್ತಲ್
ಭವಮಂ ಬಾಯೞಿವ ದುರ್ಗುಣಂಗಳುಮೊಳವೇ || ೪೧ ||
ಪರಮಾರ್ಥಂ ಲೋಗರ ಕಸ
ವರದೊಳ್ ತರಲಾಗ ಕ[ಳ್ವ] ಚಿತ್ತಂ
ಪರಿಹರಿಸಿ ತಾಳ್ದುವೆಂ ಸ
ಚ್ಚರಿತಮನೆಂ[ದಱಿಯೆ] ನೆಱಿಯೆ ತೊಱೆವಂ ವ್ರತಿಕಂ || ೪೨ ||
ಪೆಱರಱಿಯದುದುವನಾರುಂ
ಮಱೆದುದುವಂ ಬಿರ್ದುವಂ ಪೆಱರ್ ಬಯ್ತುದುವಂ
ಮಱೆದುಂ ತಾಂ ಸ್ವೀಕರಿಸ
ಲ್ಪೆಱರಂ ಕೈಕೊಳಿಸಲಾಗದೆಂಬಂ ಜೈನಂ || ೪೩ ||
ಕಳ್ಳರ ನಂಟರ್ತನಮುಂ
ಕಳ್ಳರ ದೆಸೆಯಿಂದೆ ಧನಮನಾರ್ಜಿಸುವುದುಮಾ
ಕಳ್ಳರ್ಗೆಡೆಗುಡುವುದುಮದು
ಕಳ್ಳತನಬ್ರತದ ಹಾನಿಯೆಂಬಂ ಜೈನಂ || ೪೪ ||
ತುಪ್ಪದೊಳಗೆಣ್ಣೆಯಂ ಲೇ
ಸಪ್ಪಾ ಹೊನ್ನೊಳಗೆ ಬೆಳ್ಳಿಯಂ ಧನದಳಿಪಿಂ
ದುಪ್ಪಿನೊ[ಳೆ] ಮಣ್ಣನೆಂತುಂ
ತಪ್ಪಿಲ್ಲದೆ ನಡೆವೆನೆಂಬನಾಗಲ್ ಬೆರಸಲ್ || ೪೫ ||
ಪಿರಿದಪ್ಪ ಕೋಲ್ಗಳಿಂದಂ
ಪಿರಿದೆನಿಸಿದ ಕೊಳಗದಿಂದಮುಂ ತಾಂ ಕೊಂಡಂ
ತಿರೆ ಪೆಱರ್ಗೆ ಕುಡುಗೆ ಕುಂದಿಸಿ
ಪರದುಗೆಯಲ್ ಸಲ್ಲದೆಂದು ನೆಗೞ್ವಂ ಜೈನಂ || ೪೬ ||
ಪೆಱರೊಡಮೆಯನಳಿಪಿಂದಂ
ಕಿಱಿಕಿಱಿದಂ ಮಱಸಿ ಕೊಳ್ವ ನಾಣಿಲ್ಲದ ಮಾ
ಯ್ದಱಗುಲಿಯ ಮೆಯ್ಯೊಳಂ ನಿಲ
ಲಱಿಗುಮೆ ಕಳಲಾಗದೆಂಬ ಸುಬ್ರತ[ಮೆನಸುಂ] || ೪೭ ||
ಇನಿದುಂಬಂ ವಿಷಸೇವನೆ
ಗಿನಿಸಂ ಬಯಸುವಂತೆ ದುಶ್ಚರಿತಂ ಸ
ಜ್ಜನಮಿರ್ದಂದದೆ ಕುಲಟಾಂ
ಗನೆಯೊಳ್ ನೆರೆಯಲ್ಕೆ ಕರಮೆ ಬಯಸುತುಮಿರ್ಪಂ || ೪೮ ||
ಮ || ಸ್ರ || ಬಸನಂ ಕೈಗಣ್ಮೆ ತಮ್ಮೊಲ್ದರನೆ ಪಿಡಿದು ಬಲಂದದಿಂ ನಲ್ಮೆಯಂ ಪ
ತ್ತಿಸಿ ಚಿತ್ತಂಬೆತ್ತು ಮೆಚ್ಚಂ ಸಲಿಸಿ ನಲಿವ ತಾಣಂಗಳೊಳ್ ಜಾಣರಂ ಜೊ
ತ್ತಿಸಿ ತತ್ಸಂಕೇತಸದ್ಮಕ್ಕವಯವದಿರುಳ್ ಪೋಪರಾತ್ಮೇಶನಂ ವಂ
ಚಿಸುತುಂ ತಮ್ಮಣ್ಣನೆಂಬರ್ ವಿನಯವತಿಯರಾ ಜಾರನಂ ಜಾರೆಯರ್ಕಳ್ || ೪೯ ||
ಎಮ್ಮಣ್ಣನೆಮ್ಮ ಸೋದರ
ನೆಮ್ಮಯ್ಯಂ ಮಾವನೆಮ್ಮ ಮುತ್ತಯ್ಯಂ ಮ
ತ್ತೆಮ್ಮ ಗುರುವೆಂದು ಮಱಿಯವ
ನಂ ಮೊಱೆಯವನಾಗೆ ಜಾಱೆಯರ್ ವಂಚಿಸುವರ್ || ೫೦ ||
ತಮ್ಮಂ ಪೆತ್ತಮ್ಮಂ ಕಿಱಿ
ಯಮ್ಮಂ ತಮ್ಮಣ್ಣ ತಮ್ಮನೆಂದೆನುತುಂ ತಾಂ
ತಮ್ಮಣ್ಣನ ತಮ್ಮಳಿಯನ
ತಮ್ಮನ ಮೊಱೆಗೊಳ್ವರಾಗಿ ಮೊಱೆವಾದರಿಯರ್ || ೫೧ ||
ಸಲೆ ಮುಡಿಯಂ ಸಡಿಲಿಪುದುಂ
ಕೆಲನಂ ನೋೞ್ವಂತೆ ನೀಱರಂ ನೋಡುವುದಂ
ಮೊಲೆಗೆಲನಂ ತೋಱುವುದುಂ
ಕುಲಟೆಯರ್ಗಿವೆ ಮೊದಲ ವಿದ್ಯೆ ಭಾವಿಸುವಾಗಳ್ || ೫೨ ||
Leave A Comment