ಕಡುನೀಱೆಯರಂ ಲೋಗರ
ಮಡದಿಯರಂ ಸೋಂಕಿ ಸೋಂಕಿ ಕುಳ್ಳಿರ್ಪನಿತಂ
ಪಡೆಯದೊಡೆ [ಮು]ಱುಕದಿಂದಂ
[ಮು]ಡಿ ಮೆಯ್ ಕಣ್ ಪುರ್ಬುಗೊಳ್ವೆನೆಂಬಂ ಪಾಣ್ಬಂ || ೫೩ ||

|| ಪದೆದೆೞ್ದೊಯ್ಯನೆ ಬಂದು ಪೊಕ್ಕು ಮನೆಯಂ ಮಿಥ್ಯಾಪ್ರಳಾಪಂಗಳಿಂ
ಪದಪಿಂದಂ ಮನೆಯಾಣ್ಮನಂ ಮಱಸುತುಂ ಜಾರಾನನಾಂಭೋಜಮಂ
ಮುದದಿಂದಂ ನಡೆ ನೋಡಿ ತಾಂ ತನಗಮಿಂಬಾದಾಗಳಾ ಪಾಣ್ಬೆಯೆಂ
ದುದನೆಂಗುಂ ಸುೞಿಯುತ್ತೆ ಪೊೞ್ತುಗಳೆಗುಂ ಜಾರಂ ಮಹಾಕ್ಲೇಶದಿಂ || ೫೪ ||

ತನಗಿಚ್ಚೆಕಾರ್ತಿ ಗಡ ಕಡು
ಚೆನ್ನೆ ಗಡಂ ಪಿಡಿದೊಡೆಳಸಿ ತಾಂ ಪೇೞ್ದುದು ಗೆ
ಯ್ವನ್ನಳ್ ಗಡ ದೊರೆಕೊಂಡೊಡೆ
ಮನ್ನಿಸದಿರ್ಪನೆ ವಿಚಿತ್ರದೂರಂ ಜಾರಂ || ೫೫ ||

ತಮಗೆ ಪೊದೞ್ದೊದವಿದ ತಾ
[ವು] ಮನೋಹರಸುರತಭವನಮುಂ ಪಾಸುಂ ಮಂ
ಚಮುಮಾಗಿರೆ ನೆರೆವರ್ ಮೆ
ಯ್ಗೆ ಮೆಚ್ಚಿದೆಡೆಯಲ್ಲಿ ಜಾರಜಾರಾನೀಕಂ || ೫೬ ||

ತುರಿಪದೆ ಗೋಹಳಿಯೆಡೆಯೊಳ್
ಪೊರಳ್ವರುಂ ಪಾೞ್‌ಮರಂಗಳೊಳ್ [ಪಡುವವರುಂ]
ಕರಮೊಪ್ಪಿರೆ ಪಾಣ್ಬಂ ತಾಂ
ನರಕಂಗಳೊಳಿಂತೆ ಪೊರಳ್ವನೆಂಬುದನೀಗಳ್ || ೫೭ ||

ಲೋಗರ ಪೆಂಡಿರೊಳಾವಿ
ನ್ನೇಗೆಯ್ದುಂ ನೆರೆವೆವಲ್ಲ[ವೆನೆ] ಕೆಲಬರ್ ತಾ
ಮಾಗಳ್ ಮನದೊ[ಳ]ಸದ್ಗುಣ
ಮಾಗಿರೆ ಪೊಗೞಿಸುವರಿಂತು ಗಾವಿಲರೊಳರೇ || ೫೮ ||

|| ಎಲ್ಲರುಮಾಗಳುಂ ಪೆಱರ ಪೆಂಡಿರೊಳೋತೊಡಗೂಡುತಿರ್ಪರಾ
ವಲ್ಲ[ವೆ] ಬಿಟ್ಟೆವೆಂಬವರವೋಲ್ ಸಲೆ ಬಱ್ಱನೆ ಬೀಗಿ ರೂಢಿಗೆಂ
ದೆಲ್ಲರ ಮುಂದೆಯುಂ ಪೊಗೞಿಪಂ ಮರುಳಲ್ಲನೆ ಕಂಡು ಕನ್ನದೊಳ್
ಕೊಲ್ಲದರುಳ್ಳೊಡಲ್ಲಿ ಪೊಗೞಿಪ್ಪುದು ತನ್ನಯ ಶೌಚವೃತ್ತಿಯಂ || ೫೯ ||

ಪರಲಲನೆಗೆ ತಪ್ಪಿದನಂ
ಧರಣೀಶಂ ಕಂಡು ಕವರದಿರ್ದೊಡೆ ಬೞಿಯಂ
ಪರನಾರೀದೂರನೆನಾಂ
ದೊರೆಯಾರೆನಗೆಂದು ಪೊಗೞಿಪುದು ತನ್ನೊಳ್ಪಂ || ೬೦ ||

ತನ್ನ ಸತಿಯೊಡನೆ ನಕ್ಕೊಡೆ
ಮುನ್ನಿಸುವೊಡೆ ಪೆಱರನಿಱಿವನಂತಿರೆ ಪೆಱರಂ
ತನ್ನಂತೆ ಬಗೆದು ಲೋಗರ
ಚೆನ್ನೆಯರಂ ಬಯಸಲಾಗದಱಿವುಳ್ಳ ನರಂ || ೬೧ ||

ಪುರುಷಂ ಕಂಡೊಡೆ ಕೊಲ್ವಿಂ
ಧರಣೀಶಂ ಕಂಡು ಕವರ್ವನೆಲ್ಲಂ ಬಯ್ವರ್
ಪರಿಭವಮನೆ ಮಾೞ್ಕುಮಿಹಂ
ಪರದೊಳುಮದಱಿಂದೆ ಕಷ್ಟಮಸತೀಸಂಗಂ || ೬೨ ||

ಮಸೆದಂಗಜನಸಿಲತೆಯೆನಿ
ಪಸತಿಯ ಮನ ಬಯಸಿ ಮೇಲೆಱ[ಗಿ]ದೊಡಮೇನಾ
ಟಿಸಲಾಗದಱಿವನುಂ ಪೊ
ನ್ನ ಸುರಿಗೆಯೆನೆ ಮೂಗನರಿಕೊಳ್ವುದು ಚದುರೇ || ೬೩ ||

|| ಪೆರ್ಮೊಲೆ ಚರ್ಮಮಾಂಸಭರಿತಂ ಪೊಱಗಾಗೊಳಗಂ ವಿಚಾರಿಸಲ್
ಸೋರ್ಮಡಿ ಸೀರ [ಪೇ]ನ [ಪು]ೞು [ಪು]ತ್ತು ನಿರೀಕ್ಷಿಸುವಕ್ಷಿ [ಪ]ಕ್ಕು ಸಿ
ಳ್ಳುಣ್ಮವ ಕಾಣ ತಾಣವಧರಾಮೃತಮುಂ ರುಧಿರದ್ರವಂ ಜಡರ್
ಕೆಮ್ಮನವಕ್ಕೆ ಪೆರ್ಮೆತನಮಂ ಬಱಿದೇಱಿಸಿ ಸೂಱೆವೋದಪರ್ (?) || ೬೪ ||

ಪರವಧುಗೆ ಸೋಲ್ತು ತಮ್ಮಯ
ಪುದುಳೆಲ್ಲಮನಿತ್ತು ರಾಗದಿಂದಂತವರೊಳ್
ನೆರೆದು ನರಕಕ್ಕೆ ಪೋಪುದು
ಸುರಿಗೆಯ ಕಿೞ್ತಿಱಿಸಿಕೊಳ್ವ ತೆಱನಂ ಪೋಲ್ಕುಂ || ೬೫ ||

ಚಂ || ಕಿಡಕಿಯನೊಲ್ದು ನೋಡಲೊಡಮೊರ್ಮೆಯೆ ಪಿಂಗುವುದೊಳ್ಪು ದಿಟ್ಟಿಗಳ್
ನಡೆ ನೆಗೆವಾಸೆಯಿಂ ನುಡಿದೊಡಾಗಡೆ ಪೋಪುದು ಲಕ್ಷ್ಮಿ ಸೋಲದೊಳ್
ತೊಡರ್ದೊಡಗೂಡಿದಾ ಕ್ಷಣದೆ ಕುಂದುವುದಾಯುವೆನಲ್ಕೆ ನೋಡಲುಂ
ನುಡಿಯಲುಮೋತು ಕೂಡಲುಮಪೇಕ್ಷಿಲುಂ ಗುಣಿಗಳ್ಗೆ ತಕ್ಕುದೇ || ೬೬ ||

ಚಂ || ಧರೆ ಪೊಗೞ್ವಂತು ದಾನಮನನೂನಮೆನಲ್ ಮನವೊಲ್ದು ಮಾಡಿ ಭಾ
ಸುರಮೆನಿಸಿರ್ದ ದೇವನಿಳಯಂಗಳನೇೞಿಸಿ ರೂಢಿವೆತ್ತನುಂ
ಪರವಧುಗಾಸೆಗೆಯ್ಯೆ ಕೆಡುಗುಂ ಗತಿ ಸಾಸಿರನೋಂಪಿಯೊಂದೆ ಪಾ
ದರದೊಳೆ ಕೆಟ್ಟುಪೋಕುಮೆನೆ ಸಂದ ಸುಭಾಷಿತಮೇಕೆ ತಪ್ಪುಗುಂ || ೬೭ ||

ಕಡುನೀಱಿಯರಪ್ಪನ್ಯರ
ಮಡದಿಯರಂ ಕಂಡು ಸೋಲ್ತು ಮೇಳದಿನವರೊಳ್
ನುಡಿಯದೆ ಗುರು ದೆಯ್ವಂ ತ
ನ್ನೊಡವುಟ್ಟಿದರೆಂದು ಬಗೆಯುತಿರ್ಪಂ ಜೈನಂ || ೬೮ ||

|| ಪರನಾರೀಜನಮಂಬಿಕಾಜನ[ಕೆ] ಪುಣ್ಯಸ್ತ್ರೀಯರುಚ್ಛಿಷ್ಟದಾ
ಗರಮಪ್ಪಾ ಪಡಿಗಕ್ಕೆ ಭರ್ತೃಹರಿತ ಸ್ತ್ರೀಯುಂ ಪರಿತ್ಯಕ್ತಸುಂ
ದರಿಯುಂ ತೊೞ್ತಿನಮೇಧ್ಯಭಾಜನದ ಸಾಮ್ಯಸ್ಥಾನಮೆಂದಿಂತು ಕೊ
ಕ್ಕರಿಪಂ ಸನ್ನುತಮುಕ್ತಿಲಕ್ಷ್ಮಿಯೊಲವಂ ಪೆತ್ತಲ್ಲದೇಂ ಮಾಣ್ಪನೇ || ೬೯ ||

ಕೊಡಗೂಸು ತೊ[ೞ್ತ]ಸಂಯಮಿ
ತುಡುಗುಣಿ ಪಾದರಿಗೆ ಱಂಡೆ ಕೀೞ್ಜಾತಿಯವಳ್
ಕಿಡಕಿಯೆನಿಪವಳೊಳೊಲವಂ
ನುಡಿಯಲ್ಕೆನಗಾಗದೆಂಬನುತ್ತಮಜೈನಂ || ೭೦ ||

ಆಗಳುಮಂಗಜನಳಿ[ಪಂ]
ರಾಗದೆ ಪೆರ್ಚಿ[ಪ್ಪ] ಬಸನದಿಂ ವನಿತೆಯರೊಳ್
ಭೋಗಿಸುವುದು ಸಚ್ಚರಿತಂ
ಗಾಗದು ಪರಮಾರ್ಥಮೆಂದು ಬಿಡುವಂ ಜೈನಂ || ೭೧ ||

ಸ್ತ್ರೀವಿಷಯದೊಳಾಪೊೞ್ತುಂ
ಭಾವಿಸಿ ಕಡುರಾಗಿಯಾಗಿ ಸೇವಿ[ಪ]ನುಂ ತಾಂ
ಭಾವಜರುಜೆಗೌಷಧಮಂ
ಸೇವಿಸುವಂದದೊ[ಳೆ] ಸೇವಿಪಂ ತದ್ವ್ರತಿಕಂ || ೭೨ ||

ಕುಲವಧುವನೊಲ್ಲದಳಿಪಿಂ
ಕುಲಟೆಯರೊಳ್ ನೆರೆದು ಪೞಿಗೆ ನಾಣ್ಚದೆ ಕರಮ
ಗ್ಗಲಿಪವರ್ಗದೆಂದುಮೆಂದುಂ
ನಿಲಲಱಿಯವು ಮೋಕ್ಷದಾಯಕಂ ಸಚ್ಚರಿತಂ || ೭೩ ||

ಭವಕಾರಣದಿಂದಿಂದ್ರಿಯ
ಮವಱಳಿಪಿಂ ಮೊದಲ ಶತ್ರು ತಾನುಂ ಚಿತ್ತ
ಕ್ಯವಕಾಶಮಾಗಿ ಚೇತೋ
ಭವನುಂ ಪಗೆ ಪಗೆಗೆ ಪಕ್ಕುಗುಡುವು[ದು] ಚದು[ರೇ] || ೭೪ ||

ಅಗ್ರಹದಿಂದಪ್ಪುಭಯಪ
ರಿಗ್ರಹಮಂ ನೆರಪಿ ತಣಿಯದೆಲ್ಲಾ ಪೊೞ್ತುಂ
ವ್ಯಗ್ರಮನನಾಗಿ ಚಿಂತಿಸು
ವುಗ್ರಂಗೇನುಭಯಜನ್ಮದೊಳಮುಂಟೆ ಸುಖಂ || ೭೫ ||

ಎನಿತುಂ ಮಱುಗಿದೊಡಂ ಮು
ನ್ನಿನ ಭವದೊಳ್ ಕೊಟ್ಟ ದಾನಫಲಮಿಲ್ಲದನೊಳ್
ಧನಧಾನ್ಯಪರಿಗ್ರಹವೆಂ
ಬಿನಿತುಂ ತನಗಾಗಲಱಿಯವೆಲ್ಲಂದದೊಳಂ || ೭೬ ||

ತನಗೆ ಶುಭೋದಯಮಾದೊಡೆ
ಧನಧಾನ್ಯಪರಿಗ್ರಹಂಗಳೆಯ್ತರುತಿರ್ಕುಂ
ತನಗೆ ಶುಭೋದಯಮಿಲ್ಲದ
ನೆನಿತುಂ ಮಱುಗಿದೊಡಮಾಗದೆಂಬಂ ಜೈನಂ || ೭೭ ||

ಧರೆ ತನ್ನದೆಂಬರದನಾ
ಳ್ವರ್ ಲೋಗರುಮಲ್ಲಿಗಲ್ಲಿಗೆಲ್ಲಂ ತಾನೊಂ
ದರಮನೆಯೊಳಿರ್ಪನರಸಿನ
ಪುರುಳಿಂತುಟು ಪೆಸರ್ ತನ್ನದುೞಿದವರ್ಗೆ ಮೊಸರ್ || ೭೮ ||

ಚಂ || ಕಱಿವುವು ಗೋಸಹಸ್ರಮೊಳವಾದೊಡಮೊಬ್ಬಳ ಪಾಲೆ [ಕಂ]ಭಮುಂ
ನೆಱೆದಿರೆ ಲಕ್ಕೆಗಳ್ ಬೆಳೆದುಮೊಪ್ಪಿಡಿಯಕ್ಕಿಯ ಕೂ[ೞೆ] ಚೆಲ್ವುವೆ
ತ್ತಱೆಕೆಯ ನೂಱು ಮಾಡಮನೆ ಮಾಡಿಯುಮೋವರಿಯೊಂದಱಲ್ಲಿ ನೀ
ನೊಱಗುವೆ ಮಿಕ್ಕ ಲಂಪಳನೆ ವಸ್ತುಗಳಂ ನೆಱೆ ನೀನೆ ಭೋಗಿಪಾ || ೭೯ ||

ಧನ ಧಾನ್ಯ ವಸ್ತು ಭೂ ಮಂ
ಡನ ವಾಹನ ಸಾರವಸ್ತು ಕೋಟಿಗಳೊಳ್ ನೀ
ನನುಭವಿಸುವೆಯೊಂದನೆ ಮ
ತ್ತಿನದೆಲ್ಲಂ ಪೊಱಗೆ ಕಾಣ್ಬೆ ಕಾಣುತುಮಱಿಯಾ || ೮೦ ||

ಸತತಂ ಧನ ಧಾನ್ಯಂಗಳ
ನತಿಮೋಹದೆ ನೆರಪಿ ಮಱುಗುತಿರ್ಪಾತಂ ದು
ರ್ಗತಿಗೆಯ್ದುಗುಮತಿಮೋಹಂ
ಗತಿಗೆಡಿಸುಗುಮೆಂಬ ಜೈನವಚನಂ ಪುಸಿಯೇ || ೮೧ ||

ಎನಿತೆನಿತುಂ ಪೆರ್ಚುಗುಮಂ
ತನಿತನಿತೊಡನೊಡನೆ ಪೆರ್ಚುತಿರ್ಕುಂ ಮೋಹಂ
ಧನದಿಂ ಪರಿಜನದಿಂದೆಂ
ದಿನತಱಿನಗ್ಗಳವನೊಲ್ಲೆನೆಂಬಂ ಜೈನಂ || ೮೨ ||

ಎಂತು ದೊರೆಕೊಂಡು ಬಂದೊಡ
ಮಂತದೆ ಸುಖವಾಗಿ ಸಮತೆಯಿಂದಾಪೊೞ್ತುಂ
ಸಂತುಷ್ಟರಾಗಿ ನಡೆಯಲು
ದೆಂತುಂ ಜೈನರವೊಲನ್ಯನಱಿದಪರೇ || ೮೩ ||

ಧನಧಾನ್ಯಂ ಲೋಹಂ ಕೆಯ್
ಮನೆ ಬಂಟರ್ ತೊೞ್ತುಗಳ್ ಸುವರ್ಣಂ ವಸ್ತ್ರಂ
ಮನೆಮುಟ್ಟು ಭಾಂಡಮೆಂಬಿವ
ನಿನಿತಱಿನಗ್ಗಳಮನಾಳೆನೆಂಬಂ ಜೈನಂ || ೮೪ ||

|| ಇವಱಿಂದಗ್ಗಳಮಾಂ ಪರಿಗ್ರಹಿಸೆನೆಂದಾ ಮಾರ್ಗದಿಂದಲ್ಲಿ ಮಿ
ಕ್ಕುವನೋರಂತಿರೆ ದಾನದಿಂ ತವಿಸದಾತಂ ಲೋಭದಿಂ ಕೂಡಿ ದುಃ
ಖವ[ನಾ] ಲೋಗರ ಲಕ್ಷ್ಮಿಯಂ ಸುಖಮುಮಂ ನೋಡಲ್ಕೆ ತಾನಾಱದಿ
ರ್ಪವನುಂ ಶಾಶ್ವತಲಕ್ಷ್ಮಿಯಂ ಪಡೆಯಲೇಗೆಯ್ದೊಡಂ ಬಲ್ಲನೇ || ೮೫ ||

ಲೋಗರ ಸಿರಿಯಂ ಕಾಣ್ಬುದು
ಮಾಗಳೆ ಕೆಟ್ಟಪ್ಪೆನೆಂದು ಬಯಸಲ್ ಜೈನಂ
ಗಾಗದು ಪುಣ್ಯದೆ ಪಡೆದುದು
ಪೋಗದು ಮುಳಿದಂದು ನಿಷ್ಫಲಂ ಮಾಣ್ಬುದದಂ || ೮೬ ||

ಇಹದೊಳ್ ದಾರಾದಿ ಪರಿ
ಗ್ರಹಮೆಂಬುದು ಭವನಿಬದ್ಧಮಾತ್ಮಂಗದಱಿಂ
ಬಹುವಿಧದೆ ಪೋದೊಡಂತದು
ಮಹನೀಯ ಸುಖೈಕಹೇತುವೆಂಬಂ ಜೈನಂ || ೮೭ ||

ಚಂ || ಮಱುಗದಿರೆನ್ನ ಪೆಂಡಿರಿವರೆನ್ನ ಸುತರ್ ಪರಿವಾರವೆನ್ನದೆಂ
ದಱಿಯದೆ ನಿನ್ನ ನಚ್ಚಿನ ಶರೀರಮೆ ಮುನ್ನಿನ ಮಾೞ್ಕೆಯಲ್ತದೇ
ತಱ ಪಡೆಮಾತಪಾಯವೆನಿಸಿರ್ದುವು ನಿನ್ನವೆ ಬೇಱವಲ್ಲವೆಂ
ದಱಿದೆಲೆ ಭವ್ಯ ನಿನ್ನೊಡನೆ ಬರ್ಪವನರ್ಪಿಸು ಸುವ್ರತಂಗ[ಳಿಂ] || ೮೮ ||

ಮನೆಯೊಳ್ ತನ್ನಯ ಮಕ್ಕಳ್
ಜಿನಧರ್ಮಮನೆಂತುಮೊ[ಲ್ಲ]ರಪ್ಪೊಡೆ ಬೞಿಯಂ
ಜಿನಸಮಯಿಗ್ಗಳೆ ತವಿಪುದು
ಧನಮಂ ಮನೆಯವರ್ಗೆ ತವಿಸದಿಪ್ಪುದು ಜೈನಂ || ೮೯ ||

ವ್ರತಮಿಲ್ಲದ ಸುತರಂ ಪೆಂ
ಡಿತಿಯಂ ಕೂರ್ತೆನ್ನ ವೃಂದಮೆನ್ನದೆ ಖಳಸಂ
ತತಿಯ ತೊೞ್ತಂ ಪೊರೆವೊಂ
ದು ತೆಱದೆ ಕೂೞಿಕ್ಕುತಿಪ್ಪನುತ್ತಮಜೈನಂ || ೯೦ ||

ಪುೞುಗಳೆನಿತಂ ಪೊರೆದುಂ
ಫಲಮುಂಟೆ ಸಗಣದೊಳಗೆ ದುಸ್ಸಂತತಿಯಿಂ
ಫಲಮುಂಟೆ ಲಘುಕರ್ಮಿಗೆ
ಚಳಮತಿಯಿಂ ಪುೞಿತ ಪುೞುಗಳಂ ಪೊರೆವಂದಂ || ೯೧ ||

ಸಲೆ ಪಲವಾಡುತ್ತುಂ ನಿ
ರ್ಮಲಧರ್ಮಮನುೞಿದು ನಾಡ ಕಲ್ಲಂ ಮರನಂ
ಕುಲದೈವಮೆಂದು ಪೂಜಿಸಿ
ಪೊಲೆಗಲಸುವ ಪೆಂಡಿರಿಂದೆ ಬೆಳಗದು ಧರ್ಮಂ || ೯೨ ||

ಜಿನರುಮನರ್ಚಿಸುತಿರ್ಪುದು
ಜಿನಮುನಿಗಳ್ಗನ್ನದಾನಮಂ ಕುಡುವುದು ಮ
ತ್ತಿನ ಪಾರುವರುಮನೂಡುವು
ದಿನಿತಱೊಳೆಗ್ಗುಂಟೆ ಪೇೞಿಮೆಂಬರ್ ಪೆಂಡಿರ್ || ೯೩ ||

ಋಷಿಯರ್ಗಲ್ಲದೆ ಕೂೞಂ
ಪಸಿದವರ್ಗಿಕ್ಕುವುದು ದೋಷವೇನೆಂದುಂ ದೂ
ಪಿಸಿ ಮಹಳಮಿಕ್ಕಿದೊಡೆ ಪೇ
ಳೊಸರ್ವುದದು ಜೈನಭಕ್ತಿಯೆಂಬರ್ ಪೆಂಡಿರ್ || ೯೪ ||

ಪುರುಳಿಲ್ಲದ ಜೈನಂ ವ್ಯಂ
ತರಮಂ ಮಿಥ್ಯಾಲಯಂಗಳಂ ಪಾರುವರಂ
ಪಿರಿದುಂ ಕೊಂಡಾಡಲ್ ಜೈ
ನರಲ್ಲರೆ ನೋಡಿಮಿವರನೆಂಬರ್ ಪೆಂಡಿರ್ || ೯೫ ||

ತನ್ನಂತಿರೆ ಮಾೞ್ಪಂ ಸವ
ಣಂ ನಂಟರ್ ನಲ್ಲರೇಕೆಯೆಂಬರ್ ಪಣಮಂ
ತನ್ನ ಸಮಯಕ್ಕೆ ಕುಡಿಮೆಂ
ಬನ್ನರ ನುಡಿಗೇಳಲಾಗದೆಂಬಂ ಜೈನಂ || ೯೬ ||

ಮದುವೆಗಿದು ಪೆತ್ತ ಮಕ್ಕ
ಳ್ಗಿದು ಬಾೞ್ಮೊದಲೆನ್ನದುಳ್ಳುದಂ ಸವಣರ್ಗಿ
ಕ್ಕಿದಪಂ ಕೂರ್ಪವರಿಂ ಪೇ
ೞ್ವುದು ಬುದ್ಧಿಯನೆಂದು ದೂಱುತ್ತಿರ್ಪರ್ ಪೆಂಡಿರ್ || ೯೭ ||

ನೆರೆಮನೆಯವರುಂ ಜಾತ್ರೆಗೆ
ಕರೆದೊಡೆ ಬರಲೀಯನೆನ್ನ ಗಂಡಂ ಪೊಲೆಯಂ
ಕರಮುಬ್ಬಟೆಯಾತಂ ವೆಂ
ತರಂಗಳಂ ನಾಯ್ಗಳೆಂಬನೆಂಬರ್ ಪೆಂಡಿರ್ || ೯೮ ||

ಕೂಸಿಂಗೆ ಕುತ್ತವಾದೊಡೆ
ದೇಶದ ಬಳರಿಯರ್ಗೆ ಕುಡುವರೊಳ್ಳರ್ಚನೆಯಂ
ಶಾಸನದೇವತೆಗೆಂದೊಡೆ
ವೀಸದ ಪುಷ್ಪಮುಮನೀಯರಱಗುಲಿವೆಂಡಿರ್ || ೯೯ ||

ಪೊಲೆಯರ ತೆಱದಿಂ ನೆಗೞ್ದುಂ
ಕುಲನಾಶಕನಕ್ಕೆ ತನುಜನಾದೊಡೆ ಸಾಲ್ಗುಂ
ಲಲನೆಯರ್ಗೆ ರಾಜಸುತನಂ
ಸಲೆ ಪೊರೆವಂದದೊಳೆ ಪೊರೆವರಱಗುಲಿವೆಂಡಿರ್ || ೧೦೦ ||

ದಾನಕ್ಕೆ ಕೊಟ್ಟುದಂ ನೆರೆ
ತಾನಿಕ್ಕದೆ ಋಷಿಯರಂ ಚಟಾರಿಸಿ ಬಯ್ತ
ಜ್ಞಾನಿ ತರುವ[ಲಿ]ಗೆ ಬಸನ
ಕ್ಕೇನೆಂದುದ ಕೊಟ್ಟು ಪೆಂಡಿರಸುಗತಿಗಿೞಿವರ್ || ೧೦೧ ||

ಮಗನ ಬಸನಕ್ಕೆ ಕೊಡುವರ್
ಮಗಳ್ಗೆ ಸರ್ಚುತ್ತುಮಿರ್ಪರುಳ್ಳುದನೆಲ್ಲಂ
ಜಗದೀಶ್ವರಪೂಜೆಗೆ ತಪ
ಸಿಗೆಂದೊಡೊ[ಪ್ಪ]ಳಮನಿಕ್ಕರಱಗುಲಿವೆಂಡಿರ್ || ೧೦೨ ||

ಪರಮಸುಖದತ್ತಲೆಯ್ದಿಪ
ಗುರುಗಳನೋದಿಪೊಡೆ ಮುಳಿವರಾ[ರ್ದುಂ] ಕೊಂದುಂ
ತರುವ[ಲಿ]ಗಳುಮಂ ಪೊರೆಯು
ತ್ತಿರಲಿರಲೇ[ನೇ]ನುವೆನ್ನರಱಗುಲಿವೆಂಡಿರ್ || ೧೦೩ ||

ನಿರುಪಮಸುಖದೊಳ್ ಕೂಡುವ
ಪರಮಮುನೀಶ್ವರರ ಪೇೞ್ದುದಂ ನೋನರಣಂ
ತಿರಿವ ಬಡಱಂಡೆ ಪೇೞ್ವೊಡೆ
ಪರಿದಾಗಡೆ ನೋನುತಿರ್ಪರಲಸದೆ ಪೆಂಡಿರ್ || ೧೦೪ ||