ಪಡೆವಂ ಗೋತ್ರಕ್ಕೆಲ್ಲಂ
ಕುಡುವಂ [ಮಾ]ಲಿಂಗಭಕ್ತನೆನಿಪಂದೀಗಳ್
ಪಡೆಯಂ ಮುಂ ಕೂರ್ಪವರೊಳ್
ನುಡಿಯಂ ಜಿನಭಕ್ತತನದಿನೆಂಬರ್ ಪೆಂಡಿರ್ || ೧೦೫ ||

ಲಿಂಗಕ್ಕೆಱ[ಗಿ]ದೊಡೊಸೆದು ಜಿ
ನಂಗೆಱಗದೊಡಂತೆ ಬೆಸೆವುತಿರ್ಪರ್ ಪೆಂಡಿರ್
ಲಿಂಗ[ಕ್ಕೆ] ಭಕ್ತರೆಂದೊ
ರ್ವಂಗೀವರೆ ಭಕ್ತಿಮಾಡಲಾ ಪ್ರಿಯವೆಂಡಿರ್ || ೧೦೬ ||

ಅಱಿಕೆಯ ಸದ್ಗುರುಗಳ ಕಂ
ಡಱನಂ ಪತ್ತಿಸಲೆ ಮನೆಗೆ ಬರಲಿವನಾಯುವ
ಕೊಱೆದುದು ಕಿಡಿಸಿದನಿನ್ನೇ
ತಱ ಬಾಳುವೆ ಮನೆಯನೊಲ್ಲೆವೆಂಬರ್ ಪೆಂಡಿರ್ || ೧೦೭ ||

ಮನೆಯಂ ಮಕ್ಕಳನೊಕ್ಕಲ
ತನಮಂ ಬಿಡುವಂತು ಧರ್ಮಮಂ ಪೇೞ್ವಂತೇಂ
ನಿನಗೇನುಮುಂಟೆ ನೀಂ ಕೆ
ಮ್ಮನೆ ಬಾರದಿರಣ್ಣ ಪೋಗಿಮೆಂಬರ್ ಪೆಂಡಿರ್ || ೧೦೮ ||

ಪೊಂದಿರುತಿರೆ ಗಂಡಂ ಸಾ
ಯೆಂದೊಡೆ ಜೀಯೆಂದು ಪೇೞ್ದೊಡಂ[ಬಡುವವರಿಂ]
ತೊಂದುದಿನಂ ಬಿಯಮಿಲ್ಲದೊ
ಡಂದಾಗಳ್ ಮಾತುಗೇಳರಱನಂ ಮಱೆವರ್ || ೧೦೯ ||

ಪುರುಷನ ಚಿತ್ತಂಬಿಡಿಯಲ್
ಪರಮಶ್ರಾವಕಿಯರಪ್ಪ [ರ]ತ್ತಲ್ ಬ[ಲಿ]ಯಂ
ಕರಗಮುಮಂ ಮೊಱನಂ ತಾ
ನಿರದೀವರ್ ಗಾ[ಡಿ]ಗೆಂದು ಸಲೆ ತಾಟಕಿಯರ್ || ೧೧೦ ||

ಉಡಲುಂ ತೊಡಲುಂ ನಿಚ್ಚಂ
ಕುಡೆ ಗಂಡಗಂಜಿ ಜೈನೆಯ[ರೆ]ಮೆಂದೆಂಬರ್
ಪಡಪಿಲ್ಲದೊಡಾ ಬ್ರತಮಂ
ಬಿಡುವರ್ ಪೊಲೆಯರವೊಲೆಸೆಪರಱಗುಲಿವೆಂಡಿರ್ || ೧೧೧ ||

ನಾರಿಯರಜ್ಜಿಯ ರೂಪಂ
ವೈರಾಗ್ಯದೆ ಕೊಂಡುಮೆಲ್ಲಿಯುಂ ತಮ್ಮವರಂ
ಕೂರೆ ತಿರಿತಂದು ರಕ್ಷಿಪ
ರಾರಾಧ್ಯನ ದೆಸೆಯನೊಲ್ಲರೆಂತುಂ ಕೆಲಬರ್ || ೧೧೨ ||

ಕಿಱಿಯಂದು ತೊಟ್ಟು ಮೂಢಮ
ನಱಿಯದೆ ಮನೆಗಳೊಳೆ ಬಳೆದ ಸತಿಯರ್ ಜೈನ
ಕ್ಕೆಱಗುವರಲ್ಲದೆ ಭಕ್ತಿಯಿ
ನೆಱಗುವರೇ ಪೆಂಡಿರೆಂದು ನಂಬುಗೆ ಜೈನಂ || ೧೧೩ ||

ಎನಿತವಗುಣಂಗಳೊಳವಂ
ತನಿತಕ್ಕಂ ನೋೞ್ಪೊಡಾವಗಂ ತಾಮೆ ತವ
ರ್ಮನೆಯೆನಿಪ ಪೆಂಡಿರಿಂದಂ
ಜಿನಧರ್ಮ ಬೆಳಗದಿನಿತನಱಿವುದು ಜೈನಂ || ೧೧೪ ||

ಪುರುಷಂ ಸದ್ದೃಷ್ಟಿತ್ವಂ
ದೊರೆಕೊಂಡೊಡಮೇನೊ ತಾ[ಯ್ವಿರಂ] ಸ್ತ್ರೀಯರನೇ
ಕಿರಲಿತ್ತಪರವರಿನದಂ
ಪರಿಭವಿಸುವೆನೆಂದು ಪೊಂಗುಗುಂ ಮಿಥ್ಯಾತ್ವಂ || ೧೧೫ ||

ಮನೆಯ ಮಕ್ಕಳನೊಕ್ಕಲು
ತನಮಂ ಬಿಡಲಾಱೆನೇವೆನೆನೆ ಪೊ[ರೆ]ಯನಣಂ
ವನಿತೆ ನಿರಂಕುಶೆಗೆನಿಸಂ
ಯೆನಗೆಂದೊಡೆ ಗೆಯ್ದು ಪೊರೆವನಲ್ಲಂ ಜೈನಂ )?) || ೧೧೬ ||

ನೆಱೆ ಧರ್ಮಮನೊಲ್ಲದರಂ
ತೊಱೆವುದು ತೊಱೆಯಲಣಮಾಱದಿರ್ದೊಡೆ ಬಿಯಮಂ
ಕಿಱಿದನಱಿದೀವುದುಳ್ಳುದ
ನಱನಱಿವರ್ಗಿತ್ತು ತವಿಪುದಱಿವುಳ್ಳಾತಂ || ೧೧೭ ||

ಪಿರಿದುಂ ದುಃಖದೆ ನೆರಪಿದ
ಪುರುಳಂ ಧರ್ಮಕ್ಕೆ ತವಿಸಿ ಶಾಶ್ವತಸುಖದೊಳ್
ನೆರೆಯದೆ ಧರ್ಮಮನೊಲ್ಲದೆ
ತರುವ[ಲಿ]ಗಳ್ಗಿತ್ತು ವಿತ್ತಮಂ ತವಿಸುವುದೇ || ೧೧೮ ||

ಪಲವುಂ ಮಾತಿನೊಳೇನೋ
ಫಲಮಪ್ಪುದು ದಾನದೇೞ್ಗೆಯಿಂ ಸುಬ್ರತದಿಂ
ಸಲೆ ನೆಗೞ್ವವ[ನಂ] ಪಡೆವುದು
ಕುಲತಿಲಕನನೊರ್ವ ಜೈನನಂ ಗುಣನಿಧಿಯಂ || ೧೧೯ ||

ಜಿನಬಿಂಬವ ನಂಬಿರ್ಪಂ
ಜಿನಧರ್ಮಮೆ ಧರ್ಮಮೆಂದು ಮಿಗೆ ನಂಬುವನುಂ
ಜಿನಸಮಯಿಗೆ ದಾನಮನೀ
ವನುಮೆನ್ನ ಸುಪುತ್ರನೆಂದು ಪೊರೆವಂ ಜೈನಂ || ೧೨೦ ||

ಮಕ್ಕಳನಿಂಬಿಂ ಋಷಿಯರ
ಪಕ್ಕದೊಳೋದಿಪುದು ಯೋಗ್ಯರಪ್ಪರ್ ಪಿರಿದುಂ
ತಕ್ಕುದನಱಿವರ್ ದಯೆಯಿಂ
ದಕ್ಕ[ಜ]ವಚನಮನೆ ನುಡಿವರಱನಱಿದೆಸಪರ್ || ೧೨೧ ||

ಕಲಿಸದೆ ಮುಂ ಪೆಱಪೆಱವಂ
ಕಲಿಪುದು ಮಕ್ಕಳನೆ ದೇವತಾರಾಧನೆಯಂ
ಕಲಿಪುದು ಗುಣಗುಣಮಂ ತಾಂ
ಕಲಿಪುದು ಸತ್ಪಾತ್ರಮಱಿದು ದಾನಮನೀಯಲ್ || ೧೨೨ ||

ಕಲಿಸದೆ ವಿದ್ಯೆಗಳನಣಂ
ಕಲಿಪುದು ಮಕ್ಕಳನೆ ಮುನ್ನೆ ಜೈನಾಗಮಮಂ
ಕಲಿಸಿದೊಡೆಲ್ಲಾ ಗುಣವಂ
ಕಲಿಸಿದ ತೆಱನಕ್ಕುಮೆಂದು ನೆಗೞ್ವಂ ಜೈನಂ || ೧೨೩ ||

ಇಸುವಿಡುವ ಪೊಯ್ವ ಕುತ್ತುವ
ಮಸೆಯಂ ಪತ್ತಿಸುವ ಕೈದುಬಿನ್ನಣಮಂ ಈ
ಕ್ಷಿಸಲಾಗ ಸುತರನಾ ದು
ರ್ವ್ಯಸನಂ ದೋಷಕರ[ಮೆಂ]ಬನುತ್ತಮಜೈನಂ || ೧೨೪ ||

ಇಂತಿರೆ ಕಲಿಸಲ್ ಧರ್ಮದ
ಸಂತತಿಯುಂ ಕಿಡದೆ ನಡೆಗುಮಲ್ಲದೆ ಸುತರಂ
ತಂತಮ್ಮಿಚ್ಛೆಗೆ ಬಿಟ್ಟೊಡೆ
ಸಂತಾನಂ ಕಿಡುಗುಮೆಂದು ನೆಗೞ್ವಂ ಜೈನಂ || ೧೨೫ ||

ಆಭರಣದೊಳಗೆ ತಾನೊಂ
ದಾಭರಣಂ ಸುರಿಗೆವೊಂದ ಕಟ್ಟುವನುೞಿದಂ
ತೇಭಂಡಂ ಸುಗತಿಪರಂ
ಗಾಭರಣಂ ಲೋಕಮಿತ್ರಮಾರ್ಹತಮಲ್ತೇ || ೧೨೬ ||

ಗಂಡಂ ಬೆಸಸಿದೊಡೊಸೆದೇ
ಗೊಂಡರ್ಹತ್ಪೂಜೆಯಂ ಸುದಾನಮುಮಂ ಕೈ
ಕೊಂಡೊಲ್ದು ಮಾಡುತಿರ್ಪಾ
ಪೆಂಡಿತಿಯಂ ಪಡೆದವಂ ನಿಧಾನಂಬಡೆದಂ || ೧೨೭ ||

ಪುರುಷಂ ತೀರಮೆಯಿಂದಂ
ಪರದೇಶದೊಳಿರ್ದನಿತ್ತಲುತ್ತಮಪಾತ್ರ
ಬರೆ ಸಾಲಂಗೊಂಡುಂ ಬಿ
ತ್ತರದಿಂದಿಕ್ಕುವೊಡೆ ಧರ್ಮಪತ್ನಿಯೆನಿಕ್ಕುಂ || ೧೨೮ ||

ವ್ರತಮುಂ ಗುಣಮುಂ ಶೀಲಮು
ಮತಿಶಯಮೆನೆ ಜೈಭಕ್ತಿಯೆನೆ ನೆಗೞ್ದಾ ಪೆಂ
ಡಿತಿಯಂ ಪಡೆದ ಮಹಾತ್ಮಂ
ಕೃತಾರ್ಥನಿಹಪರಸುಖಂಗಳಂ ಪಡೆದಾತಂ || ೧೨೯ ||

ನಂದನರುಂ ನಂಟರುಮೊಡ
ವಂದಪ್ಪರೆ ಕೊಂಡು ಮುೞುಗುವರ್ ಪುಣ್ಯ ತಾ
ನೊಂದೆಯೊಡವರ್ಕುಮೆಂದದ
ನೆಂದುಂ ಪೆರ್ಚಿಸುವ ವನಿತೆ ಮಾಸತಿಯಕ್ಕುಂ || ೧೩೦ ||

ನವಗೆಂದಾ ತಾಯ್ತಂದೆಯ
ರವರಿತ್ತರೆ ಮೊದಲನೊಳ್ಪಿನಿಂ ಪಡೆವೆಂ ಮ
ತ್ತವರಂ ಪುಣ್ಯಮೆ [ನ]ಡೆಯಿಪು
ದವಶ್ಯಮೆಂದದಱೊಳೆಸಪ ಮಿಥುನಮೆ ತೀರ್ಥಂ || ೧೩೧ ||

ಮಕ್ಕಳ ಮಱಿಗಳ ಸುಖದುಃ
ಖಕ್ಕಾದಂ ಮಱುಗಲಾಗದಂತವರ್ಗಱದಿಂ
ದಕ್ಕುಂ ಸೌಖ್ಯಂ ಪಾಪದಿ
ನಕ್ಕುಂ ದುಃಖಮವು ತಮಗೆ ವಶಮಲ್ಲದಱೆಂ || ೧೩೨ ||

ಬಸುಱೊಳಿರೆ ತಾಯ ಪೊಱಮಡೆ
ವಸುಧೆಗೆ ಪೊಱೆಯಾಗಿ ಬಾೞ್ವ ಮಗನಂ ಪೆತ್ತಂ
ಗಸಣಿಯನೆ ಪೆತ್ತನೊಳ್ಪಿಂ
ದೆಸಗುವನಂ ಪೆತ್ತ ತಂದೆ ನಿಧಿಯಂ ಪೆತ್ತಂ || ೧೩೩ ||

ಮನೆಯೊಳಗುಳ್ಳದನೆಂದುಂ
ಜಿನಮಹಿಮೆಗೆ ತವಿಸುತಿರ್ಪ ಮಗನಂ ಪೆತ್ತಂ
ಮನಮಾರೆ ವಸ್ತುವಾಹನ
ಧನಕನಕಸಮೃದ್ದಮಪ್ಪ ಸಿರಿಯಂ ಪೆತ್ತಂ || ೧೩೪ ||

ಬಗರಗೆಯೊಳೆಱತೆಯುಳ್ಳ
ನ್ನಗಮೆನಿತಂ ತೋಡಿಕೊಂಡೊಡಂ ನೀರ್ ತವದಂ
ತಗಣಿತಪುಣ್ಯಮದುಳ್ಳ
ನ್ನೆಗಮೊರ್ವಂಗೀಗೆ ತವದುದನವೇಗೆಯ್ದುಂ || ೧೩೫ ||

ಸುಲಭಂ ಪಡೆಯಲ್ ಬರ್ಕುಮೆ
ಸಲೆ ಪಿರಿಯರನೆತ್ತಲಾನುಮೊಂದೆವಸಂ ನಿ
ರ್ಪುಳಜೈನರನಲ್ಲದೆ ಪಡೆ
ಯಲಾಗದೆಂದೊಲ್ದು ತುಷ್ಟಿಮಾೞ್ಪಂ ಜೈನಂ || ೧೩೬ ||

ಸದಮಳವಱನನಱಿವಾತಂ
ವಿದಿತಂ ದ್ರವ್ಯಗುಣಪರ್ಯಯಂಗಳಿನಾವಂ
ವಿದಿತಾಧ್ಯಾತ್ಮನವಂ ದೋ
ಷದೂರನಾತಂ ಗೃಹಸ್ಥರೊಳ್ ಸತ್ಪಾತ್ರಂ || ೧೩೭ ||

ಪಲವುಂ ಮಾತಿನೊಳೇಂ ದ್ರ
ವ್ಯಲಿಂಗಿಯುಂ ಭಾವನಾಪರಂ ಜೈನಂ ನಿ
ರ್ಮಳನಾತನೆ ಸತ್ಪಾತ್ರಂ
ದಲೆಂದು ಸಂತುಷ್ಟಿಮಾೞ್ಪನಱಿವುಳ್ಳಾತಂ || ೧೩೮ ||

ನಿಧಿ ಬರ್ಪಂತಿರೆ ಬಂದೊ
ರ್ಮೆ ದಾನಿಯುಂ ಮೋಹದೋಱಿ ಋಷಿ ನೆನೆಯಿಸುವಂ
ದದೆ ಮನೆಗೆ ಬಂದು ನೆನೆಯಿಪ
ನದಱಿಂದಮಪೂರ್ವಪಾತ್ರನುತ್ತಮಜೈನಂ || ೧೩೯ ||

ಒಕ್ಕಲಿಗನಕ್ಕೆ ಪಂಚಮ
ನಕ್ಕೆಮ ಸದ್ದೃಷ್ಟಿಯಾಗೆ ಕಾಲಂ ಕರ್ಚಲ್
ತಕ್ಕುದು ಜೈನಂಗೇಕೆನೆ
ಚಿಕ್ಕಯ್ಯಂ ಶೂದ್ರನೆಂದು ಕರ್ಚರೆ ಕುಲಜರ್ || ೧೪೦ ||

ಒಕ್ಕಲಿಗಂ ಋಷಿಯಾದೊಡೆ
ಚಿಕ್ಕಯ್ಯನೆ ಕಾಲನೆಂತು ಕುರ್ಚುವನದಱಿಂ
ದೊಕ್ಕಲಿಗಂ ಬ್ರತಿಯಾದಂ
ದಕ್ಕುಂ ಕರ್ಚಲ್ಕೆ ಮದಮನುೞಿಗೆ ಕುಲಜ್ಞಂ || ೧೪೧ ||

ಅಧಿಗಮಸದ್ದೃಷ್ಟಿಗೆ ನವ
ವಿಧ ಪುಣ್ಯಮುಮೇೞುಗುಣಮುಮಮರ್ದಿರೆ ತನ್ನೊಳ್
ನಿಧಿ ದೊರೆಕೊಂಡಂತೆನಗೆಂ
ದು ಧಾರ್ಮಿಕಂ ತುಷ್ಟಿವಡಿಸವೇೞ್ಕುಂ ಜೈನಂ || ೧೪೨ ||

ಪರಮಜಿನಪತಿಯೊಳಂ ಬಿ
ತ್ತರದಿಂದಂ ದೇಶಯತಿಯೊಳಂ ಸ್ನೇಹಪರಂ
ಪರೆ ನೆಗೞಿ ತುಷ್ಟಿಯೊಳ್ ತ
ಳ್ತಿರದಿಂ ಮೋಕ್ಷಾಂಗನಾಧಿಪತಿಯೆಂತಕ್ಕುಂ || ೧೪೩ ||

ಅರಸಂಗಮರಸಿಗಂ ಪು
ಟ್ಟಿ ರಾಜಸುತನೆನಿಸಿ ಭೂಪನಪ್ಪವೊಲಱಿತಂ
ದೊರೆಕೊಳೆ ಭವ್ಯಂ ನಿಯಮದಿ
ನರುಹಂ ತಾನಕ್ಕುಮದಱಿನರ್ಚಿಪುದಱಿವಂ || ೧೪೪ ||

ಬ್ರತಗುಣಸುಚರಿತ್ರಸಮ
ನ್ವಿತನಾತ್ಮಜನಾಗೆ ಪುತ್ರನೆಂಬುದು ಜೈನಂ
ಬ್ರತಗುಣಚರಿತ್ರಮಿಲ್ಲದ
ಸುತನಂ ಜಂತೆಂಗೆ ತನುಜನಪ್ಪುದಱಿಂದು || ೧೪೫ ||

ಪರಮಜಿನಂಗೆಱಗದರಂ
ಪೊರೆದೊಡೆ ಫಲಮಿಲ್ಲ ಪಾಪದಾಸ್ರವಮಕ್ಕುಂ
ಪರಿಹರಿಸುವುದಾರ್ಹತರಂ
ಪೊರೆವುದು ಪುಣ್ಯ ದಲೆಂದು ಪೊರೆವಂ ಜೈನಂ || ೧೪೬ ||

ಚಂ || ಮದುವೆಗೆ ಮಾಣಿಗಾರ್ತೊಡಮೆಯೆಲ್ಲಮನೋವದೆ ಕೊಟ್ಟು ಲೇಸ ಮಾ
ಡಿದೆನೆನೆ ರೂಢಿಗಾಟಿಸದೆ ಜೈನಗೃಹಾಳಿಗೆ ಭವ್ಯಕೋಟಿಗೀ
ವುದು ಧನಮಂ ಸ್ವಯಂಭುಪತಿಗೊಪ್ಪಿರೆ ಕಟ್ಟಿದ ಪಟ್ಟಮಂ ಮನೋ
ಮುದದಿನಧಃಕರಿಪ್ಪುದಘಮಂ ಜಸಮಪ್ಪುದು ವಿಶ್ವಧಾತ್ರಿಯೊಳ್ || ೧೪೭ ||

ದುರಿತಾರಿಯನೋಲಗಿಸದೆ
ತಿರಿದೆಂದುಂ ಬಂದ ಜಸುಱುಮಂ ವೃಂದಮುಮಂ
ಪೊರೆಯಲ್ಕೆ ಮಱುಗುವಾತಂ
ನರಕ್ಕಿೞಿವಂದದಾರ್ಗೆ ಕೈಯೆಡೆಗುಡುವಂ || ೧೪೮ ||

ರತ್ನತ್ರಯಮಂ ಪಾಲಿಪ
ಪತ್ನಿಗೆ ಮಕ್ಕಳ್ಗೆ ಬೇೞ್ಪುದೆಲ್ಲಮನಿತ್ತುಂ
ರತ್ನದ ತೊಡಿಗೆಯನಿತ್ತುಂ
ಯತ್ನದೆ ರಕ್ಷಿಸುವನೆಂಬನುತ್ತಮಜೈನಂ || ೧೪೯ ||

ಉಂಡುಟ್ಟು ತೊಟ್ಟ ನಂಟರ
ತಂಡಂ ತಮಗಾಗಿ ಬರ್ದನಂ ದುಃಖಂ ಮುಂ
ಕೊಂಡುಯ್ಯೆ ಕಾಯರಾರ್ಹತ
ರುಂಡೊಡೆ ನರಕಕ್ಕೆ ಪೋಗಲೀಯದೆ ಕಾವರ್ || ೧೫೦ ||

ಪಾಪಿಗಳಂ ಪೊರೆದಂದೊಡ
ವೋಪರೆ ಪೋಗಿರ್ದು ಬರ್ಪರೇ ಸ್ವರ್ಗ[ಕ್ಕಾ]
ಪಾಪರ್ಮುಕ್ತಿಗೆ ವೋಗ[ರೆ]
ಪೋಪರ್ ಬಿಡರಾವ ಕಾಲಮುಂ ಭವ್ಯರ್ಕಳ್ || ೧೫೧ ||

ಮುನ್ನಿನ ಭವದಿಂದೀಗಳ್
ತನ್ನೊಡವಂದವೆ ಪರಿಗ್ರಹಂ ತನುಧನವೇಂ
ತನ್ನವೆ ತನ್ನವರಲ್ಲ[ವು]
ವೆನ್ನುತೆ ನಿಸ್ಸಂಗನಾಗಿ ಬಗೆವುದು ಜೈನಂ || ೧೫೨ ||

ಸಂಗಮನೆ ತೊಱೆವುದೆಂತುಂ
ಸಂಗವ್ಯಾಸಕ್ತನಾದೊಡೆಂತುಂ ವಿದ್ವತ್
ಸಂಗಮನೆ ಮಾೞ್ಪುದದೆ ನಿ
ಸ್ವಂಗಕ್ರಿಯೆಉಚಿತಭೇಷಜಂ ತಾನಕ್ಕುಂ || ೧೫೩ ||

ಪುಸಿಯಂ ನುಡಿಯರ್ ಲೋಗರ
ಕಸವರಮಂ ಕೊಳ್ಳರನ್ಯವಧುಗಳಿಪರ್ ಮೋ
ಹಿಸಿ ನೆಗೞ್ವರಲ್ಲ ಹಿಂಸೆಯ
ದೆಸೆಯಣವಿಲ್ಲೆನಿಸಿ ನೆಗೞ್ವರಾರ್ಹತನಿರತರ್ || ೧೫೪ ||

ಚಂ || ನುಡಿವುದು ಸತ್ಯಮಂ ಮಡಿಪದಿರ್ಪುದು ಜೀವಮನನ್ಯಕಾಂತೆಯಂ
ಕಡೆಗಣಿಸಿರ್ಪುದನ್ಯಧನಮಂ ಕಳಲಾಟಿಸಲಾಗದೆಂದಿವಂ
ನುಡಿಯಲೆ ಬಲ್ಲರಾ ತೆಱದಿನಾಚರಿಸರ್ ಪೆಱರಾಗಮೇಷ್ಟದಿಂ
ನುಡಿಯಲೆ ಬಲ್ಲರುತ್ತಮಗುಣಾನ್ವಿತರಾರ್ಹತರೆಂದು ನೋೞ್ಪೊಡಂ || ೧೫೫ ||

ನುಡಿಯೊಂದಂದಂ ಲೋಗರ
ನಡೆ ತಾನೊಂದಂದಮಿತರರೀ ಮಂಡಳದೊಳ್
ನುಡಿಯುಂ ನಡೆಯುಂ ನೋಡುವೊ
ಡೆ ಡಂಬಮಿಲ್ಲೆನಿಸಿ ನೆಗೞ್ವರಾರ್ಹತರೆಲ್ಲಂ || ೧೫೬ ||

ಅಯ್ದುಂ ಬ್ರತಕ್ಕೆ ಭವ್ಯ[೦]
ಮೆಯ್ದಂ[ದಾ] ಜೈನಚರಣಮಂ ಭಾವಿಸುವಂ
ದೆಯ್ದುಗುಮಿದನೊಲ್ಲದನೇ
ನೆಯ್ದಲ್ಕಾರ್ತಪನೆ ವಿಮಳಮುಕ್ತಿಶ್ರೀಯಂ || ೧೫೭ ||

ಇಂತೀ ಬ್ರತಂಗಳೊಳ್ ತಾ
ಮೆಂತುಂ ನಡೆಯಲ್ಕಮಾಱದರೆಬರ್ ಪಿರಿದುಂ
ಭ್ರಾಂತಾತ್ಮರಾಗಿ ನಡೆದ
ತ್ಯಂತಂ ದುಶ್ಚರಿತ್ರರೆಯ್ದುವರ್ ದುರ್ಗತಿಯಂ || ೧೫೮ ||

ಶಾ || ಜೀವಂಗಳ್ಗತಿದುಃಖಮಪ್ಪ ನರಕಾವಾಸಂಗಳಂ ಮಾಡುಗುಂ
ಸಾವದ್ಯಪ್ರಮುಖಾಗ್ರದೋಷಮದಱಿಂದಾಸಕ್ತಿ ವೇಡಲ್ಲಿ ಸ
ದ್ಭಾವಂ ಜೈನರೊಳಾಗೆ ನೀಂ ನೆಗೞೆ ಸಚ್ಚಾರಿತ್ರದಿಂ ತಪ್ಪದಾ
ದೇವತ್ವಂ ದೊರೆಕೊಳ್ಗುಮಲ್ತೆ ಬೞಿಯಂ ನಿಶ್ಯ್ರೇಯಸಂ ಕೂಡುಗುಂ || ೧೫೯ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮ ರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಚರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷೆಯೊಳ್ ಪಂಚಾಣುವ್ರತವರ್ಣನಂ ಪಂಚಮಾಧಿಕಾರಂ