ಶ್ರೀಮತ್ತ್ರಿಲೋಕವಂದ್ಯಮ
ಹಾಮಹಿಮಾಸ್ಪದನನಂತಗುಣಗಣನಿಳಯಂ
ಕಾಮಹರನನಘನಮಳಂ
ಪ್ರೇಮದೆ ದಯಗೆಯ್ಗೆ ವಿಮಲರತ್ನತ್ರಯಮಂ || ೧ ||
ಚಂ || ನುಡಿ ಪುಸಿಯೊಳ್ ಪೊದೞ್ದಿರದು ದಾನದ ಪೊಂಪುೞಿ ಲೋಭದಾಸೆಯೊಳ್
ತೊಡರದು ಶೌಚದೇೞ್ಗೆ ಪೞಿಯೊಳ್ ಕೆಳೆಗೊಳ್ಳದು ಕೀರ್ತಿ ಕಲ್ಮಷ
ಕ್ಕೆಡೆಗುಡದೊಳ್ಪು ಬಂಜೆಯೆನೆ ಸಂದಿರದುನ್ನ[ತಿ] ಹೀನವೃತಿಯಂ
ಗೆಡೆಗೊಳೆಂತುಮೊಲ್ಲದೆನೆ ಬಣ್ಣಿಸಲಾರ್ ಗಳ ಭವ್ಯಕೋಟಿಯಂ || ೨ ||
ಶುಭಮತಿಗಳ್ಗಾಗದು ರಾ
ತ್ರಿಭೋಜನಂ ದುಃಖಭಾಜನನಿಶ್ಚಯಮೆಂ
ದಭಿಭವಿಪರಾಗಿ ದಿವದೊಳ್
ಸುಭೋಜನಂ ಗೆಯ್ವರಲ್ಲರೇ ಜೈನಪರರ್ || ೩ ||
ಇರುಳುಣ್ಬೊಡೆನ್ನರುಂ ಕಾ
ಣರ್ ಸೂಕ್ಷ್ಮ ಮೆನಿಪ ಪುೞುಗಳಂ ಕಾಣ್ಬರ್ ನೋ
ಡಿರೆ ಪಗಳೊಳುಣ್ಬರದಱಿಂ
ಪರಿಕಿಸೆ ನೇಸಱೊಳಗುಣ್ಬೆನೆಂಬಂ ಜೈನಂ || ೪ ||
ಇರುಳುಣ್ಬುದಾಗದೇಕೆನೆ
ಹರಿಹರಬುದ್ಧರ ತಪಸ್ವಿಗಳ್ ಗುಣಮಲ್ಲೆಂ
ದಿರುಳುಣಿಸನೊಲ್ಲರೆಂದೊಡೆ
ಪರತ್ರೆಯೊಳ್ ದುಃಖಮಕ್ಕುಮುೞಿಗಱಿವಾತಂ || ೫ ||
ಹಿಂಸಾದಿ ದೋಷರಹಿತಂ
ಮಾಂಸಾದನಮದ್ಯಮಧುಗಳಂ ಪರಿಹರಿಪಂ
ತಾಂ ಸಚ್ಚರಿತ್ರನೆನಿಸುವ
ವಂ ಸೌಖ್ಯಾಸ್ಪದಮನೆಂತುಮೆಯ್ದದೆ ಮಾಣಂ || ೬ ||
ಎರಡಾಲ ಬಸುರಿಯೌದುಂ
ಬರದರಳಿಯ ಮರದ ಪಣ್ಣುಮಂ ಗಿಣ್ಣುಮನಂ
ತಿರೆ ಬಿಲ್ವಫಲಮುಮಂ ಪರಿ
ಹರಿಪುದು ಸಚ್ಚರಿತನೆಂದು ತೊಱೆದು ಜೈನಂ || ೭ ||
ಪೂವಿನ ಬಾಡುಗಳಂ ಕ್ಷೀ
ರಾವನಿಜಾತದ ಫಲಂಗಳಂ ಬಳ್ಳಿಯುಮಂ
ಶ್ರಾವಕನಪ್ಪಂಗಾಗದು
ಸೇವಿಸಲಂತಲ್ಲಿ ಪುೞುಗಳೊಳವಪ್ಪುದಱಿಂ || ೮ ||
ಮೞೆಗಾಲದೊಳೆಲೆವಾಡಂ
ಪೞೆಯೆಳ್ಳಂ ಪಿೞಿದ ತೈಲಮಂ ಬಿಸತತಿಯಂ
ಮೊೞೆಯಲ್ಲಮನುಪ್ಪುಂಗಾ
ಯ್ಗಳನಾಗಲ್ ಸೇವಿಸಲ್ಕೆ ಭೀತಂ ಜೈನಂ || ೯ ||
ಕಳೆದುಮಬುದು ಕೂೞೊಳಗಣ
ನೊಳವಂ ತಲೆನವಿರನಿಱುಪೆಯಂ ಪರಿಕಿಪೊಡಂ
ಗಳ[ದೆ]ಡೆ ಗಡ್ಡೆಗಳಂ [ತಾಂ]
ಖಳರಂದದೆ ನೆಗೞಲೆಂತುಮಱಿಯಂ ಜೈನಂ || ೧೦ ||
ಶಲ್ಯಂಗಳೊಳಗೆ ವೇಷದ
ಖಲ್ಯರ್ ಬಿಡದುಣ್ಬರಗ್ರಮುನಿಗಳ್ ಪಲರೇಂ
ಲೌಲ್ಯರೊ ಭಾವಿಸಲದಮಾಂ
ಗಲ್ಯಂ ಪೆಸರ್ಗೊಂಡ ಬೞಿಯಮುಣ್ಬರೆ ಜೈನರ್ || ೧೧ ||
ಪರಸಮಯದ ಯತಿಪತಿಗಳ್
ಕರವತಿಗೆಯ ನೀರನೞ್ತಿಯಿಂದೀಂಟಿದರೇಂ
ಪರಮಜಿನಸಮಯದಲ್ಲಿಯ
ದರವುರಿಗನುಮದನೆ ಕಂಡು ಕುಡಿಗೆಮ ನೀರಂ || ೧೨ ||
ಕರವತಿಗೆಯ ಕೊೞೆನೀರ್ ಪಾ
ರ್ವರಿಗಂ ಭಗವರಿಗಮಂತೆ ವ್ಯಾಧರಿಗಂ ತಾಂ
ಪರಮ ಪವಿತ್ರ[ಮಾ] ಜೈನ
ರಲ್ಲಿ ಪೊಲೆಯರ್ಗಮಾಗದೆಂತುಂ ಕುಡಿಯಲ್ || ೧೩ ||
ಬುಧರುಂ ಕರವತಿಗೆಯವೋ
ಲಧಮರ್ ಕಿಸು[ವೆ]ನದೆ ಸಮೆಯೆ ಕುಡಿವರ್ ನೀರಂ
ಮಧುವೆಂದು ತುಪ್ಪಮಂ ಪರ
ವಧುವೆಂದಾತ್ಮೀಯವಧುವನನುಭವಿಸುವವೋಲ್ || ೧೪ ||
ತೊಗಲ ಕೊೞೆತುಷ್ಟಮಂ ಪಂ
ದೊಗಲೊಳ್ ಪುೞುವೆರಸು ತೀವಿದಾ ನೀರುಮನುಂ
ಡು ಗಡಂ ತಮ್ಮಾಚಾರಂ
ಜಗಕೆ ಮಿಗಿಲ್ ತಾಮೆ ಪರಿಯರೆಂಬರ್ ಕೆಲಬರ್ || ೧೫ ||
ಕರವತಿಗೆಯ ನೀರಂ ಪಾ
ದರಕ್ಕೆ ತೊಟ್ಟೆಱೆಯೆ ಶಿಷ್ಟರೆಂತುಂ ಕುಡಿಯರ್
ಕರವತಿಗೆ ಪೊಂಬೆಸಂ ಪಾ
ದರಕ್ಕೆ ತೊಗಲಕ್ಕುಮಲ್ಲದಂದೇಕೊಲ್ಲರ್ || ೧೬ ||
ಮ || ಪಸು ಸಾಯಲ್ ಪೊಲೆಯರ್ಕಳೆಯ್ದೆ ಸುಲಿಯಲ್ ಮಾತಂಗರಾ ತೋಲನ
ರ್ದಿಸಿ ಪೋೞ್ದಾಱಲಿಟ್ಟು ನೇರೆ ದಳಮುಂ ಕೆಂಪುಂ ತಗುಳ್ದೆಯ್ದೆ ಸೋ
ದಿಸಿ ಸುದ್ದೈಸಿದ ಸಮ್ಮಗಾಱವೆಸದೊಳ್ ಚೆಲ್ವಾದವಂ ತೀವಿದಾ
ರಸವರ್ಗಂಗಳನುಣ್ಬೆವೆಂಬ ಜಡರಂ ಕೈಕೊಳ್ವರೇ ಶ್ರಾವಕರ್ || ೧೭ ||
ನರಕಕ್ಕೆಮಗೆರಡಿಲ್ಲದೆ
ಬರವುಂಟೆಂದೆಯ್ದೆ ನಂಬಿಸಲ್ ನಾರಕರಂ
ನಿರುತಂ ಬಳಿನೀರ್ಗುಡಿದಂ
ತಿರೆ ಕುಡಿವರ್ ಕರವತಿಗೆಯ ನೀರಂ ಪಲಬರ್ || ೧೮ ||
ಅಡಗಂ ತಿಂಬವರುಂ ಕೆಲ
ವೆಡೆಯೊಳ್ ಗೋಮಾಂಸಮೆಂದು ಸೂರುಳ್ ಗೆಯ್ವರ್
ಕಡುಶಿಷ್ಟರೆನಿಪ ಪುರುಷರ್
ಕುಡಿವುದೆ ಗೋಚರ್ಮವಾರಿಯಂ ಕಿಸುಗುಳಮಂ || ೧೯ ||
ಏಮಾತೋ ನುಡಿಯಲ್ಕಿಂ
ಗೋಮಾಂಸಂ ತಗದು ಪೊಲೆಯನಲ್ಲದವಂಗಾ
ಗೋಮಾಂಸಂ ಗೋಚರ್ಮಂ
ತಾಮೆರಡುಮವೊಂದೆ ನೋೞ್ಪೊಡುಂಟೆ ವಿಕಲ್ಪಂ || ೨೦ ||
ಸಲೆ ಪಸುವನೆ ಸೇವಿಸುವಂ
ಪೊಲೆಯಂ ಮೊದಲಾಗಿ ಜೈನನಾದೊಡೆ ಕುಡಿಯಂ
ಕುಲಹೀನನಾಗಿಯುಂ [ತೆ] ತೊ
ಗಲ [ಪೞ]ಕೊೞೆನೀರನೆಂದೊಡಕ್ಕುಮೆ ಕುಡಿಯಲ್ || ೨೧ ||
ಸುತ್ತಿಯೊಳುಣ್ಬೊಡೆ ಮುಟ್ಟುಪ
ಡೆತ್ತಣದತ್ತಿವಿಮಳಚರಿತನೆನಿಸಿದೊಡಂ ತಾ
ನುತ್ತಮನಲ್ಲಂ ದಲ್ ಕರ
ವತ್ತಿಗೆ ಸಿದ್ದಿಗೆ ತದಂಗಮಂ ಬಿಡದನ್ನಂ || ೨೨ ||
ಚಂ || ಕಡುಮುಳಿದಟ್ಟಿ ದಾನವನಿಕಾಯಮನುತ್ತಮರಾಜಪುತ್ರ[ರುಂ]
ಮಡಿಪಿದರೆಂದು ಪೇೞ್ವ ಕಥೆಯಂ ಸಲೆ ನಿಶ್ಚಲುಮೞ್ತಿಯಿಂದಮು
ಣ್ಬೆಡೆಯೊಳೆ ಕೇಳುತಿರ್ಪರುೞಿದರ್ ಮಱೆದಪ್ಪೊಡಮೊಂದು ಪೊಲ್ಲದಂ
ನುಡಿದೊಡೆ ಕೆಳ್ದುಮುಣ್ಬರೆ ಸದಾಚರಿತರ್ ಜಿನಭಕ್ತರೆಲ್ಲಿಯುಂ || ೨೩ ||
ಪಿರಿದಪ್ಪಾದರದಿಂದಂ
ಪುರಾಣಮಂ ಕೇಳ್ವರಲ್ಲದಾ ತೆಱದಿಂದಂ
ಚರಿಯಿಸುವರಲ್ಲರನ್ಯರ್
ಪರಮಾರ್ಥಂ ಜೈನಸಮಯದವರ್ಗಳೆ ಬಲ್ಲರ್ || ೨೪ ||
ಒಂದಂದದಾಗಮಂ ಪೆಱ
ತೊಂದಂದದ ಚರಿತಮನ್ಯಸಮಯಿಗಳೊಳ್ ಮಾ
ತೊಂದು ಮನೆವಾರ್ತೆಯೊಂದೆನಿ
ಪಂದಂ ಮಱೆದೆಂತುಮಿಲ್ಲ ಜಿನಸಮಯಿಗಳೊಳ್ || ೨೫ ||
ಹಿಂಸಾದಿ ದೋಷರಹಿತಂ
ಸಂಸಾರಶರೀರಭೋಗನಿರ್ವೇಗಪರಂ
ಮಾಂಸಮಧುಮದ್ಯವಿರತನ
ವಂ ಸೌಖ್ಯಾಸ್ಪದಮನೆಯ್ದುವುದು ಪರಿದಾಯ್ತೇ || ೨೬ ||
ಪರಮಜಿನೋದಿತಮಾರ್ಗದೆ
ಗುರುಗಳ್ ಪೇೞ್ವಂತೆ ಸಚ್ಚರಿತ್ರದೆ ನಡೆದಂ
ದುರಿಗೊಡ್ಡಿದರಗಿನಂತಿರೆ
ಕರಗುವುದಚ್ಚರಿಯೆ ನರನ ನೆರಪಿದ ದುರಿತಂ || ೨೭ ||
ಉಟ್ಟೊಡೆ ತೊಟ್ಟೊಡೆ ಸವಿಯೆನ
ಲಟ್ಟಡುಗೆಯನುಂದೊಡೆಲ್ದು ಗಣಿಕೆಯ ಕೆಲದೊಳ್
ಪಟಟೊಡಮನಿತುಂ ತನುವಂ
ಮುಟ್ಟುಗುಮಾನಂದರೂಪನಂ ಮುಟ್ಟುಗುಮೇ || ೨೮ ||
ಪೆಱವಱ ಕೂಟದ ಸುಖವೇ
ತಱ ಸುಖವದು ನಿದಿನಾದ ಸುಖವದು ಸುಖದೊಳ್
ನೆಱೆದ ಸುಖಮೆಂಬ ತತ್ತ್ವಮ
ನಱಿಯದವಂ ದ್ವೈತಸುಖಮೆ ಸುಖಮೆಂದಿರ್ಪಂ || ೨೯ ||
ಉಣಿಸಿಂ ತಂಬುಲದಿಂ ಭೂ
ಷಣ ಗಣಿಕಾ ಗಾನ ವಸ್ತ್ರ ಮಾಲ್ಯಾದಿಗಳಿಂ
ತಣಿಯನಣಂ ಚರ್ವಿತಚ
ರ್ವಣಮಾ ಪಿಷ್ಟಪೇಷಣಕ್ ಮೂಢಂ || ೩೦ ||
ಪುದ್ಗಳಮನೆ ಪಾಟಿಸುವರ್
ಸದ್ಗತಿಯಂ ಬಯಸರುೞಿದರೆಲ್ಲಂದದೊಳಂ
ಸದ್ಗತಿಯಪ್ಪಂತೆಸಪರ್
ಪುದ್ಗಳಮಂ ಬಾೞ್ತೆಮಾಡಿ ಪೊರೆಯರ್ ಜೈನರ್ || ೩೧ ||
ತನುಸೌಖ್ಯಮಕ್ಕುಮೆಂದೆನಿ
ತೆನಿತಂ ತೊಳೆದೊಡಮದರ್ಕೆ ಕೊೞೆ ಸಹಜಮದೆಂ
ತೆನೆ ಸಂಸ್ಕಾರಶತೇನಾ
ಪಿ ನ ಗೂಥಃ ಕುಂಕುಮಾಯತೇ ಎಂಬ ತೆಱಂ || ೩೨ ||
ಮ || ಅಮೃತಾಹಾರಮಮೇಧ್ಯಮಾಗಳೆ ಸಂಗಂಧಾಲೇಪನಂ ಮೆಯ್ ವಲಂ
ಸುಮನೋದಾಮಮಮೂಲ್ಯಮುತ್ತಮಮೆನಿಪ್ಪಾ ವಸ್ತ್ರಮಸ್ಪೃಶ್ಯಮ
ಕ್ಕುಮದೀ ದೇಹದೊಳೊಂದಿದಾಗಳೆನೆ ಮತ್ತೀ ದೇಹಮಂ ಸೌಖ್ಯಮ
ಕ್ಕುಮಿದೆಂದಾಗಳುಮೇಕೆಯೊ ತೊಡರ್ದಪರ್ ದುರ್ಮೋಹದಿಂ ಮಾನಸರ್ || ೩೩ ||
ಚಂ || ನರವಿನ ಪುತ್ತಮೇಧ್ಯದ ತವರ್ಮನೆ ಕೀವಿನ ಕೊಂಡಮೆಲ್ವಿನಾ
ಗರವೞಿದೋಲ ಪೆರ್ವಡುಕೆ ಜಂತುಗಳಾಗಳುಮಿರ್ಪ ತಾವು ನೆ
ತ್ತರ ನೆಲೆವೆರ್ಚಿ ನಿಂದ ಮಡುವೀ ಕಡುಕಷ್ಟಮೆನಿಪ್ಪ ದುಷ್ಯಳೇ
ವರಮಿದನೊಳ್ಳಿತೆಂಬಱಿವಿಲ್ಲದವರ್ ಪೆಣನೆಂಬರಾರ್ಹತರ್ || ೩೪ ||
ಕೊೞೆಯೊಡಲನೆ ಪಾಲಿಸುತುಂ
ವಿಳಸದ್ಧರ್ಮಮನೆ ಬಿಸುಟು ಭೋಗಿಸುವ ಮದಾ
ವಿಳನಂ ಭೋಗಿ[ಪ] ವಸ್ತುಗ
ಳೊಳಗಣ ಪುೞುವೆಂಗೆ ಭೋಗಿಯೆನವೇಡಱಿವಂ || ೩೫ ||
ಮ || ಕರಮಿಂಬಾಗಿರೆ ತಿರ್ದಿ ಬೈತಲೆಯನಕ್ಷಿದ್ವಂದ್ವಮಂ ಮುಚ್ಚವಂ
ತಿರೆ ನೇಣಂ ತಲೆಸುತ್ತಿಕೊಂಡು ಪಿರಿದುಂ ಪೂಮಾಲೆಯಂ ಸೂಡಿ ನಿ
ರ್ಭರಮಪ್ಪಂತಿರಲಿಟ್ಟು ಗಂ[ಧಮು]ಡೆಯಂ ಸೊಪ್ಪಾಗದಂತುಟ್ಟು ಬ
ರ್ಬರಮಂ ಪೂಸಿ ತೊೞಲ್ವರಿಂತು ನೆಗೞಲ್ ಜೈನೋತ್ತಮಂ ಬಲ್ಲನೇ || ೩೬ ||
ಚಂ || ಅವರಿವರನ್ನರಿನ್ನರವರೇವರೆನುತ್ತಮೆ ರೂಪುಗಾಣುತುಂ
ಕವಿಪದಮೀವ ಜನ್ನಿವರಮಂ ಬಲಮುಯ್ವಿನೊಳಿಕ್ಕಿ ನೋೞ್ಪ ಕೆ
ಟ್ಟವರೊಡಗೂಡುತಿರ್ಪ ಪೆಱನನ್ನನುಮಾನಿರೆ ಬಲ್ಲನಾವನೀ
ಭುವನದೊಳೆಂದು ಕೌಳನವೊಲೇಂ ಪೞಿಕೆಯ್ವನೆ ಕೆಟ್ಟ ಜೈನ[ನುಂ] || ೩೭ ||
ಶೃಂಗಾರವೃತ್ತಮಂ ಪು
ಣ್ಯಾಂಗನೆಯರ ಕೆಲದೊಳೋದುವಾಗ್ರಹದಿಂ ಪಾ
ಪಂಗೊಳ್ವರಲ್ಲದೇಂ ಪಾ
ಠಂಗೊಳ್ವರೆ ಪುಣ್ಯಹೀನರಜಿತಸ್ತುತಿಯಂ || ೩೮ ||
ಮ || ನೆಲನಂ ನೋಇ ತುಱುಂಬನೋಸರಿಸು[ತುಂತೇನಾನುಮಂ] ಪಾಡುತುಂ
ಪೞಿಯುತ್ತುಂ ಸುಚರಿತ್ರರೊಂದೆಸಕಮಂ ಪುಣ್ಯಾಂಗನಾನೀಕದೊಳ್
ಕೆಳೆಗೊಂಡಾಡುತುಮೇಣಗೋಣತನದಿಂ ಮಾತಾಡುತುಂ ರಾಗದಿಂ
ಸುೞಿವುತ್ತಿರ್ಪವರಂತಿರಾರ್ಹತರದೇನೇಗೆಯ್ದೊಡಂ ಬಲ್ಲರೇ || ೩೯ ||
ಎಲೆ ಗಳ [ಚೀ]ಯೆಂದೆನ್ನದೆ
ಬೆಲೆವೆಣ್ಗಳೊಳೊಲ್ದು ನಲಿವುದೆಲ್ಲಂದದೊಳಂ
ತಲೆಗೆ ನರೆಬಂದ ಬೞಿಯಂ
ಸಲೆ ನೋೞ್ಪುದು ತಪಮನೆಂದು ನುಡಿವರ್ ಮಿಂಡರ್ || ೪೦ ||
ಲಲಿತಾಂಗಿಯರೊಳ್ ರಾಗದೆ
ನಲಿದಾಡುವ ವಯಸದಂದು ಮಾಡದೆ ತಪಮಂ
ಸಲೆ ಮಾೞ್ಕೆ ದೈವದಿಂದಂ
ತಲೆ ಬೋೞಾಯ್ತೆನಿಪ ಮುಪ್ಪಿನೊಳ್ ನರನೆಂಬರ್ || ೪೧ ||
ಪೋ ಪೋಯೆನಲೊಡಮಾಗಳ್
ಪೋಪುದಱಿಂ ಕರೆಯಲೊಡನೆ ಬಪ್ಪುದಱಿಂದಂ
ರೂಪೋಪಜೀವಿಗೆಱಗಿ
ಪ್ಪಾ ಪುರುಷಂ ಗ್ರಾಮಸಿಂಹಮಂ ನೆನೆಯಿಸುಗುಂ || ೪೨ ||
ಮೆಚ್ಚಿದ ತೆಱದಿಂದಿಂದ್ರಿಯ
ದಿಚ್ಚೆಗಳಂ ಸಲಿಸಿ ಸವ ಪದದೊಳ್ ತನುವಂ
ಮೆಚ್ಚಿಸುವೆಂ ತಪಕೆಂಬಂ
ಕಿರ್ಚಿರ್ದೊಡೆ ಬಾವಿದೋಡುವವನಂ ಪೋಲ್ಕುಂ || ೪೩ ||
ಚೆನ್ನೇವುದೊ ಸಚ್ಚರಿತಂ
ಚೆನ್ನಲ್ಲದೆ ದೇಹಿಗೆಂದು ನೆಗೞ್ವರ್ ಜೈನರ್
ಚೆನ್ನಿಂಗೆ ಮಱುಗಿ ಮಾಣದೆ
ಚೆನ್ನನೆ ಪಾಟಿಸುವರಾಗಳುಂ ವಿಕಳಾತ್ಮರ್ || ೪೪ ||
ಜಿನಗಂಧೋಧಕದಿಂದಂ
ಜಿನನಂ ಪೂಜಿಸಿದ ಗಂಧಮಾಲ್ಯಾದಿಗಳಿಂ
ತನುವನಲಂಕರಿಸಿರ್ಪಾ
ತನೆ ಚೆಲ್ವಂ ಸತಿಯನೊಲಿಪವಂ ಸಲೆ ಸಲ್ವಂ || ೪೫ ||
ಮಣಿಕನಕಚಯಮಹಾಭೂ
ಷಣಮೆ ಮನುಜಂಗೆ ವಿಮಳರತ್ನತ್ರಯಭೂ
ಷಣನಾವನಂತವಂ ಭೂ
ಷಣನಖಿಳಧರಾತಳಕ್ಕೆ ಭಾವಿಸುವಾಗಳ್ || ೪೬ ||
ಮನುಜಂಗಲ್ಪದಿನಂ ಜೀ
[ವನವವಱೊಳೆ ಬೞಿಕೆ] ಕೆಲವು ದಿವಸಂ ಪೋದಂ
ದೆನಿತಂ ನೆರಪಿದಪಂ ಪು
ಣ್ಯನಿಚಯಮಂ ಮಿಕ್ಕ ದಿನದೊಳೆಂಬಂ ಜೈನಂ || ೪೭ ||
ನೆತ್ತಂ ಚದುರಂಗಂ ಬಾರ್
ಗುತ್ತಂ ಕಡದೊಂಟಿ ಗೊಟ್ಟೆಜೂದೆಂಬಿವನಾ
ಡುತ್ತುಮಿರಲಾಗದಾಗಮ
ದತ್ತಲ್ ಮನಮಾಗಿ ಪೊೞ್ತುಗಳೆವನೆ ಚದುರಂ || ೪೮ ||
ಚಂ || ಬವರದ ಬಿತ್ತು ವಂಚನೆಯ ಪುತ್ತಱಿವಿಂಗತಿ [ನಾಶ]ಹೇತು ದು
ರ್ವ್ಯವಸೆಯ ಕಾರಣಂ ಪರಿಭವಕ್ಕೆಡೆ ವಿತ್ತದ ಕೇಡು ರೌದ್ರಸಂ
ಭವಮಸುಖಾಸ್ಪದಂ ಗುಣಗಣಪ್ರವಿನಾಶಿಯೆನಿಪ್ಪ ಜೂದನಾ
ಡುವ ನರನೆಯ್ದನೇ ಸಕಳಹಾನಿಯನುತ್ತಮಸೌಖ್ಯಹಾನಿಯಂ || ೪೯ ||
ಪೆಡತಲೆ ಮಿಗೆ ನೋಗುಂ ಕಣ್
ಕಿಡುಗುಂ ಮೆಯ್ ಬೇನೆಗೆಯ್ದುಮಾಯು[ವು]ಮೊಳ್ಪುಂ
ಕಿಡುಗುಂ ಮೂಲವ್ಯಾಧಿಯು
ಮಡಸುಗುಮಿಂತಿನಿತೆ ಜೂದಿನಿಂದಪ್ಪ ಫಲಂ || ೫೦ ||
ಚಂ || ಉಡುಗಳ ಸೊಕ್ಕಿದಂದದೊಳೆ ಗೆಲ್ವೆಡೆಯೊಳ್ ಸಲೆ ಬಾಯ್ಗೆ ಬಂದುದಂ
ನುಡಿದೊಡೞಲ್ದು ಸೋಲ್ತ ಪದದೊಳ್ ದೆಸೆಗಾಣದೆ ಮಾನ್ಯರಪ್ಪರಂ
ಜಡಿವರನರ್ಥಮಂ ಬಗೆಯರಂತದಱಿಂದಮೆ ಜೂದನಾಡಲುಂ
ನುಡಿಯಲುಮಾಗ ಸದ್ಗುಣಿ ವಿಭಾವಮನೆಯ್ದುವನಪ್ಪ ದೂಸಱಿಂ || ೫೧ ||
ಬಿಡದಾಡುವನಿತು ಪೊೞ್ತುಂ
ತೊಡರ್ದು ವಿಭಾವದೊಳೆ ಬಸನಿ ತನ್ನುಮನಱಿಯಂ
ಬಿಡುವುದದಱಿಂದೆ ಬಸನಮ
ನಡಿಗಡಿಗಾತ್ಮ ಸ್ವಭಾವಮಂ ನೆನೆಗಱಿವಂ || ೫೨ ||
ಬಸನಂಗಳಲ್ಲಿ ಚಿತ್ತಂ
ಬಸದಪ್ಪವೊಲಮಲಮಪ್ಪ ಜೈನಾಗಮದೊಳ್
ಬಸದಾಗೆ ಮರ್ತ್ಯನೇಂ ಸಾ
ಧಿಸನೇ ನಿರ್ವಾಣಪದವಿಯಂ ಕ್ರಮದಿಂದಂ || ೫೩ ||
ಅಯ[ನಯ]ಮಾರ್ಗಕ್ರಮನಿ
ಶ್ಚಯನಿಪುಣನುಮನಿಶಮುತ್ತಮೋತ್ತಮಸುಖಮಂ
ಬಯಸುವವಂ ಭಾವಿಸುವುದು
ದಯಾನ್ವಿತಂ ಶ್ರೀಜಿನೇಂದ್ರವಚನಾಮೃತಮಂ || ೫೪ ||
ಉತ್ತಮಸುಖಮಂ ಬಯಸುವ
ರೆತ್ತಾನುಂ ಪೊೞ್ತು ಪೋಗದಿರ್ದಾಗ ಮುನೀ
ದ್ರೋತ್ತಮರ ಪಕ್ಕದೊಳ್ ಕೇ
ಳುತ್ತಿರ್ಪುದು ಮೋಕ್ಷಮಾರ್ಗಮಂ ಸನ್ಮತಿಯಂ || ೫೫ ||
ಪಿರಿದಪ್ಪ ಭಕ್ತಿಯಿಂ ಜಿನ
ಪುರಾಣಮಂ ಪೇೞ್ವುದಱಿಯದಿರ್ದೊಡಮೇನಾ
ದರದಿಂ ಕಬ್ಬಿಗನಪ್ಪಂ
ಪರಮನನೋಲಗಿಪುದೊಂದು ಮುಕ್ತಕದಿಂದಂ || ೫೬ ||
ಕವಿತೆ ಕಡು ಲೇಸು ಕಬ್ಬಂ
ನವರಸಭರಿತಂ ದಲೆಂದು ಮಿಥ್ಯಾಕಥೆಯಂ
ಅವಚಱದೆ ಕೇಳ್ವನಾ ದು
ರ್ವಿವೇಕಿ ಜೈನಮನೆ ಕೇಳ್ವನೆಂದುಂ ಜೈನಂ || ೫೭ ||
ಅಂಗನೆಯರ ಕೆಯ್ತಂಗಳ
ನಂಗನೆಯರ ರೂಪನನ್ಯಚರಿತಗಳುದ್ಯಾ
ನಂಗಳನೊಪ್ಪುವ ಪೊಸವೆ
ಳ್ದಿಂಗಳನಾದರದೆ ಪೇೞನೆಂತುಂ ಜೈನಂ || ೫೮ ||
ಜಿನನ ಚರಿತಂಗಳಂ ತ
ಜ್ಜಿನಮಾರ್ಗದೆ ನಡೆದು ಭವ್ಯರೆಯ್ದಿದ ಗತಿಯಂ
ಜಿನಧರ್ಮಕಥೆಗಳಂ ದೇ
ವನಿಕಾಯಸ್ತುತಿಯ ಪೇೞ್ವನುತ್ತಮಜೈನಂ || ೫೯ ||
ಕರಮನುರಾಗದೊಳೆ ಮನೋ
ಹರಮಪ್ಪಡೆಗೆಯ್ದಿ ಬಱಿದೆ ಪೊೞ್ತ ಕಳೆಯು
ತ್ತಿರದಲ್ಲಿ ಪೊೞ್ತುಗಳೆವೊಡೆ
ಪರಮೋತ್ಸವದಿಂದೆ ಮಾೞ್ಕೆ ಜಿನಪೂಜೆಗಳಂ || ೬೦ ||
Leave A Comment