ಮಂಗಳನಿಳಯನನರ್ಚಿಸಿ
ಸಂಗೀತಮನಲ್ಲಿ ಮಾಡಿ ನೋೞ್ಪುದು ಮುದದಿಂ
ದಂಗನೆಯರ್ ಪಾಡೆ ಗುಣೋ
ತ್ತುಂಗನನೋಲಗಿ[ಸಿ] ರಾಗಿ ರಾಗದ ಮೆಯ್ಯೊಳ್ || ೬೧ ||

ಜಿನನನೆ ಬಿಡದೋಲಗಿಪಂ
ಜಿನಚರಿತಮನೞ್ತಿಯಿಂದೆ ಕೇಳುತ್ತಿರ್ಪಂ
ಜಿನಸಮಯಿಗಳೊಡನಾಡುವ
ನನಂತಸುಖಭಾಗಿಯುೞಿದುದೇನುಮನೊಲ್ಲಂ || ೬೨ ||

ವ್ಯಸನಂಗಳೊಳಗೆ ಪರಮ
ವ್ಯಸನಂ ಪರಮಾತ್ಮ ಚಿಂತೆಯದನೊಲ್ಲದೆ ದು
ರ್ವ್ಯಸನಕ್ಕೆ ಪುಣ್ಯಪುರುಷರ್
ಬಸಮಾಗಿ ಮನುಷ್ಯಭವಮನುೞಿವುದು ಚದುರೇ || ೬೩ ||

ಪರಮಾಗಮಭಾವನೆಯಿಂ
ಪರಮೇಶ್ವರಪೂಜೆಯಿಂದೆ ಪರಮಧ್ಯಾನಂ
ನರರ್ಗೆ ಪೆಱತುಂಟೆ ಬಸನಮ
ನೆರಡೆಣಿಸದೆ ಬಿಟ್ಟು ಪಡೆವುದುತ್ತಮಸುಖಮಂ || ೬೪ ||

ಒಡಲೆಂಬುದೊಂದು ಮೊದಲಂ
ಪಡೆದಾ ಮೊದಲಿಂದೆ ಲಾಭಮಂ ಬಯಸುವವಂ
ಪಡೆವುದು ರತ್ನತ್ರಯಮಂ
ಪಡೆದಾಗಳನಂತಸೌಖ್ಯಭಾಜನನಕ್ಕುಂ || ೬೫ ||

ಬಡವನುಮೆಂಬೀ ಮಾತಂ
ನುಡಿಯಲ್ ಸದ್ದೃಷ್ಟಿಗಾಗದೇಕೆನೆ ಜಗದೊಳ್
ಪಡೆಯಲ್ ಬಾರದ ನಿಧಿಯಂ
ಪಡೆದುದಱಿನನರ್ಘ್ಯನೂತ್ನರತ್ನತ್ರಯಮಂ || ೬೬ ||

ಬಡವನೆ ರತ್ನತ್ರಯಮಂ
ಪಡೆದಾತಂ ಪುಣ್ಯಮೂರ್ತಿ ಸಿರಿಯೊಡೆಯಂ ನೋ
ೞ್ಪೊಡೆ ತಾಂ ರತ್ನತ್ರಯಮಂ
ಪಡೆಯದವಂ ಭಾಗ್ಯಹೀನನವನೆ ದರಿದ್ರಂ || ೬೭ ||

|| ಅಮಿತ[ಪ್ರಾ]ಕ್ತನಜನ್ಮ ದುರ್ಲಭಮನಾಂ ತ್ರೈಲೋಕ್ಯದೊಳ್ ನೋೞ್ಪೊಡು
೨ತ್ತಮಮಂ ನಿರ್ಮಳದೃಷ್ಟಿಲಕ್ಷ್ಮಿಯಮನುದ್ಯದ್ಭೋಧಮಂ ಸಚ್ಚರಿ
ತ್ರಮುಮಂ ಪುಣ್ಯದೆ ಪೆತ್ತೆನೆನ್ನ ತೆಱದಿಂದಾರ್ ನೋಂತರೆಂದೆಯ್ದಿ ಪೇ
ೞ್ದು ಮನೋರಾಗದೆ ರಾಗಿಪಂ ಭುವನದೊಳ್ ಧನ್ಯಂ ಪೆಱರ್ ಧನ್ಯರೇ || ೬೮ ||

|| ಮಿಗೆ ದುಃಖಂಗಳನುಂಡು ಬಂದು ಬೞಿಕೀ ಮಾನುಷ್ಯದೊಳ್ ಸಪ್ತಧಾ
ತುಗಳಿಂದಿಂದ್ರಿಯವರ್ಗದಿಂ ಪುದಿ[ದು] ಕಲ್ಕಂಗೂಡುವಂತೆಯ್ದೆ ಕೂ
ಡಿ ಗುಣಕ್ಕಾಗರಮಾಗಿ ನಿಂದ ತನುಮಂ ಪೆತ್ತೞ್ತಿಯಿಂ ಜೈನದೊಳ್
ನೆಗೞಂ ತಾನೆನಿಪಂ ಭವಾಬ್ಧಿತಟಮಂ ಸಾರಲ್ಕದೇನಾರ್ಪನೇ || ೬೯ ||

|| ಪಡೆಯಲ್ ಬಾರದುದಂ ಮನುಷ್ಯಭವಮಂ ಮುಂ ಮಾಡಿದೊಂದೊಳ್ಪಿನಿಂ
ಪಡೆದಂ ಪ್ರೀತಿಯಿನಾರ್ಹತಕ್ಕೆಱಗುಗುಂ ಪುಣ್ಯಾತ್ಮನತ್ತೊಂದಱೊಳ್
ತೊಡರ್ಗುಂ ಮೂಢನದಂತೆ ಭಾಗ್ಯವಶದಿಂ ರತ್ನಾಕರಸ್ದಾನದೊಳ್
ಪಡೆಗುಂ ರತ್ನಮನೊವ್ನಲ್ಲಿ [ಪ]ಡೆಗುಂ ಭಾಗ್ಯೇತರಂ ಸೇದೆಯಂ || ೭೦ ||

ಇಟ್ಟೆಡೆಯಾಗಲೊಡಂ ಧೃತಿ
ಗೆಟ್ಟು ಚರಿತ್ರಮನೆ ತೊಱೆವರುೞಿದರ್ ಜೀವಂ
ಬಿಟ್ಟಪುದೆಂಬೆಡೆಗಳೊಳಂ
ಬಿಟ್ಟೆಪೆಮೆಂದಪರೆ ಜೈನರೆಂತುಂ ಬ್ರತಮಂ || ೭೧ ||

ವ್ಯಗ್ರಮನರನ್ಯರೆಂತುಮ
ವಗ್ರಹಮೆಂದುದನೆ ಮತ್ತಮನುಭವಿಸುವರಾ
ರಾಗ್ರಹಿಸಿದೊಡಂ ಮಱಿದುಮ
ವಗ್ರಹಮೆಂದುದನೆ ಜೈನರನುಭವಿಸುವರೇ || ೭೨ ||

ಎಡಱಡಸಿದಲ್ಲಿ ಪುಸಿಯಂ
ನುಡಿಯಲ್ ಪೊಲ್ಲದುದನುಣಲುಮಕ್ಕಮೆಯೆನುತುಂ
ನುಡಿವ ದುರಾತ್ಮರ ತೆಱದಿಂ
ನುಡಿವರೆ ಮಾಡುವರೆ ಜೈನರೊಳ್ಪಲ್ಲದುದಂ || ೭೩ ||

ನೋಡರ್ದು ಕಣ್ ಪರವಧುವಂ
ಕೂಡದು ದುಶ್ಚರಿತದಲ್ಲಿ ಚಿತ್ತಂ ಮನಮ
ಲ್ಲಾಡದು ಪರೀಷಹಕ್ಕೆನೆ
ನಾಡಾಡಿಯ ಮನುಜರಳವೆ ನಿರುಪಮಜೈನರ್ || ೭೪ ||

ಪುಸಿದೈವದ ಪುಸಿಯಱಿತದ
ಪುಸಿಧರ್ಮದ ಪುಸಿವ ಬಲ್ಮೆಯೋದುಗಳಂ ತಾಂ
ಪಸರಿಸುವ ಠಕ್ಕಸಮಯದ
ದೆಸೆವೋಗರದೆಂತುಮಾವ ತೆಱದಿಂ ಜೈನರ್ || ೭೫ ||

ಮನದೊಳ್ ಕಪಟಂ ವಚನದೊ
ಳನೃತಂ ಸಂಚಿತಮೆನಿಪ್ಪ ಚಾರಿತ್ರದೊಳೊಂ
ದಿನಿಸು ಕಳಂಕಮುಮಿಲ್ಲೆಂ
ಬಿನೆಗಂ ನೆಗೞಲ್ಕೆ ಜೈನರೆಲ್ಲಂ ಬಲ್ಲರ್ || ೭೬ ||

ಅಱಿವುಂ ನೆರವುಂ ಮನದೊಳ್
ತಱಿಸಲವುಂ ಧರ್ಮದಲ್ಲಿ ಪಾಪದ ದೆಸೆಯೊಳ್
ಪೆಱಪಿಂಗುವುದಿದು ಸಹಜಂ
ಜಱುಚಲ್ಲದು ಜೈನಸಮಯಿಗೆಂದುಂ ನಿರುತಂ || ೭೭ ||

ದೊರೆಯೆಂದವಗುಣಿಗಳನಾ
ದರಿಸಂ ತಕ್ಕೆಡೆಗೆ ತಕ್ಕುದಂ ಕುಡುವಂ ಲೋ
ಗರೊಳಹಿತನಾಗಿ ನೆಗೞಂ
ಧರಿತ್ರಿಯೊಳ್ ಜೈನಧರ್ಮಮಂ ನೆಮ್ಮದವಂ || ೭೮ ||

ಪಡೆದೊಡಮೆಯೆಲ್ಲಮಂ ಬ
ಯ್ತಿಡರೆಂದುಂ ಜೈನಪೂಜೆಗಂ ದಾನಕ್ಕಂ
ಕುಡುವರೆನೆ ಭವ್ಯಸಮಿತಿಯ
ಪಡದರ್ಥಂ ಸಫಲಮನ್ಯರರ್ಥಂ ವಿಫಲಂ || ೭೯ ||

ಬೇವು ಕರಂ ಪಣ್ತೊಡೆ ಕಾ
ಕಾವಳಿಗುಪಯೋಗ್ಯವೆಂಬ ನುಡಿವೋಲ್ ಪಿರಿದುಂ
ಭಾವಿಸಲಜ್ಞಾನಿಯ ಪಡೆ
ದಾ ವಿತ್ತಮಪಾತ್ರದಾನದಲ್ಲಿಗೆ ಯೋಗ್ಯಂ || ೮೦ ||

ಅನುವಶನೀತಂ ಚಾರಿ
ತ್ರನಿಯುಕ್ತಂ ಪಲರೊಳೆನಿಸಿ ನೆಗೞ್ದಿರ್ದವನುಂ
ಜಿನಸಮಯಿಯಲ್ಲಿ ಕಡೆಪ
ಟ್ಟ[ನಂದದಿಂ] ನಿಯಮದಿಂದಲೆಂತುಂ ನಡೆಯಂ || ೮೧ ||

ದೇವನಿವನಲ್ತೆ ತಪದಿಂ
ಭಾವಿಸುವಂ[ದೆ]ನಿಸುವನ್ಯಸಮಯದ ಮುನಿ[ಯುಂ]
ಶ್ರಾವಕರ ಸಚ್ಚರಿತ್ರಮ
ನಾವಂದದೊಳಂ ಸಮಂತು ಪೋಲಲ್ ನೆಗೞಂ || ೮೨ ||

ದೂರದ ಬೆಟ್ಟದ ತೆಱದಿಂ
ನೇರಿತ್ತಾಗಿರ್ಕುಮಲ್ಲದೊಳಗಂ ನೋಡಲ್
ಸಾರತರಮಲ್ತು ಪೊಕ್ಕು ವಿ
ಚಾರಿಸುವೊಡೆ ಜೈನನಲ್ಲದವನ ಚರಿತ್ರಂ || ೮೩ ||

ದೀನಮನರಾರ್ತರೌದ್ರ
ಧ್ಯಾನಿಗಳತ್ಯಂತಪಾಪಕೋಪಾನ್ವಿತರ
ಜ್ಞಾನಪರಾಯಣರಮಳ
ಧ್ಯಾನಾನ್ವಿತರಪ್ಪ ಜೈನರಲ್ಲದ ಮನುಜರ್ || ೮೪ ||

ಅಮರ್ದಿರ[ದೆ]ನಿತಂ ತಮ್ಮಂ
ಸಮಱಿದೊಡಂ ಸದ್ಗುಣಂಗಳನ್ಯರ ಮೆಯ್ಯೊಳ್
ಸಮಱದೊಡಂ ಸದ್ಗುಣಗಣ
ಮಮರ್ದಿರ್ಕುಂ ಭವ್ಯಸಮಿತಿಗೆಲ್ಲಂದದೊಳಂ || ೮೫ ||

ಮತ್ತಿನ ಪರಸಮಯಿಗಳೊಳ್
ಪತ್ತಿಸಿದೊಡಮೊಳ್ಪು ಜೈನಸಮಿತಿಗೆ ನಿರುತಂ
ಪತ್ತುವ ತೆಱದಿಂ ಪತ್ತದು
ಪಿತ್ತಳೆ ಸಂಸ್ಕಾರವಶದೆ ಪೊನ್ನಾಗದವೋಲ್ || ೮೬ ||

ಕಲ್ಲಾಗಿ ಪಲವು ಕಣಿಗಳೊ
ಳಲ್ಲಿಯೆ ಮೇಲಪ್ಪುವಪ್ಪ ತೆಱದಿಂ ಗುಣದಿಂ
ದೆಲ್ಲಾ ತೆಱದೆ ಮನುಷ್ಯರಿ
ಗೆಲ್ಲಂ ಮೇಲಾಗಿ ಜೈನರುತ್ತಮರಾದರ್ || ೮೭ ||

ದೀವಳಿಗೆಯ ಕೞ್ತಲೆಯೊಳ್
ದೀವಿಗೆಗಳ್ ಬೆಳಪ ತೆಱದೆ ಕಲಿಕಾಲದ ಮಿ
ಯಾವೃತ ತಮಿಸ್ರರಪ್ಪ ಜ
ನಾವಳಿಗಳ ನಡುವೆ ಬೆಳಗುತಿರ್ಪರ್ ಜೈನರ್ || ೮೮ ||

ಶ್ರಾವಕನಲ್ಲದೊಡಂ ಪು
ಣ್ಯಾವಹಮೆಂದೊಂದು ಪರ್ವದೊಳ್ ಮಿಂದುಣ್ಬಂ
ಶ್ರಾವಕಭೋಜನಮೆಂದೊಡೆಇ
ದೇವಣ್ಣಿಪುದುತ್ತಮಿಕ್ಕೆಯಂ ಶ್ರಾವಕನೊಳ್ || ೮೯ ||

ಬರಿಸದ ಪರ್ವದೊಳಂ ಪರಿ
ಹರಿಸಿದೊಡಂ ಪುಣ್ಯಮೆಂಬರೆಂದೊಡೆ ಸಲೆ ಕೊ
ಕ್ಕರಿಸಿ ಮಧುಮಾಂಸಮಂ ಪರಿ
ಹರಿಸಿದ ಪುಣ್ಯಾಧಿಕಂಗೆ ಸರಿಯೇ ಕುಲಜರ್ || ೯೦ ||

ಪಾರ್ವರ ಮನೆಗಳೊಳುಣ್ಬುದು
ಪಾರ್ವಂ ಮಿಕ್ಕವರ ಮನೆಯ ನೀರಂ ಕುಡಿಯಲ್
ಪಾರ್ವಂಗೆ ಸಲ್ಲದೆಂಬಾ
ಪಾರ್ವಂ ವೇದದೊಳಗಱಿಯನಱಿದೊಡೆ ನುಡಿಯಂ || ೯೧ ||

ಖ್ಯಾತಿವಡೆದಿರ್ದ ನಾಲ್ಕುಂ
ಜಾತಿಗಳೊಳ್ ಮದುವೆಯಾಗಲಕ್ಕುಂ ಪಾರ್ವಂ
ಗೀ ತೆಱದಿನೆಂಬರೇನಾ
ಜಾತಿಗಳಿಕ್ಕಿದುದನುಣ್ಣೆವೆಂಬರಿದಣಕಂ || ೯೨ ||

ಅಮಳಿನಚರಿತ್ರರ್ ನಾಲ್ಕುಂ
ಸಮಯದ ಮುನಿಪತಿಗಳಾರ ಮನೆಗಳೊಳಟ್ಟ
ನ್ನಮನುಣ್ಬರವರೆ ಲೋಕೋ
ತ್ತಮರವರೆ ಕುಲೀನ[ರ]ಲ್ಲಿಯುಂಬುದು ಪಾರ್ವಂ || ೯೩ ||

ಭೂದೇವನೆನಿಪ ವಿಪ್ರಂ
ಬಾದೇನೊ ತಪಸ್ವಿಗೆಱಗುವಂ ತಪಸಿ ಗಡಾ
ಭೂದೇವಂಗೆಱಗುವ[ನೇ]
ಮೇದಿನಿಯೊಳ್ ಮುನಿಗಳದಱಿನೆಂತುಂ ಪಿರಿಯರ್ || ೯೪ ||

ಅಪವರ್ಗಲಕ್ಷ್ಮಿ ಸಾರ್ಗುಂ
ತಪೋಧನಂಗಾಗಳಲ್ತೆ ಪಾರ್ವಂಗದಱಿಂ
ತಪಸಿಯೆ ವಂದ್ಯಂ ಜಗದೊಳ್
ತಪಸ್ವಿಯಿಂದತ್ತ ಮ[ತ್ತೆ] ಪಿರಿಯರುಮೊಳರೇ || ೯೫ ||

ಅಪವಿತ್ರಂ ಮೂಢಂ ತಾ
ನೆ ಪವಿತ್ರಂ ವಿಪ್ರಗೃಹದೊಳಟ್ಟಡುಗೆಗಳಂ
ಸುಪವಿತ್ರಜೈನರಿಕ್ಕಿದೊ
ಡೆ ಪಾರ್ವರುಣರೊ[ಲ್ವ]ರಾತ್ಮ ಗೃಹದಡುಗೆಗಳುಂ || ೯೬ ||

ಗೋರಸದೊಳ್ ಕೂಡಿರ್ದಾ
ಹಾರಮನಾ ಗೋಷ್ಠದಲ್ಲಿ ಗೋವಳನಿಕ್ಕ
ಲ್ಯಾರೋಗಿಸಲಕ್ಕುಂ ಗಡ
ಚಾರಿತ್ರಾನ್ವಿತರ ಮನೆಯೊಳುಣ್ಬರೆ ಪಾರ್ವರ್ || ೯೭ ||

ಜಳಮಂ ಕೊಳಲ್ ಸಲೆ ನಿ
ರ್ಮಳವಸ್ತ್ರದೆ ಸೋದಿಸಿರ್ದುದಂ ನಿಚ್ಚಮವಂ
ಬಳಸುವರಿಹಪರಸೌಖ್ಯದ
ಫಲಮನಪೇಕ್ಷಿಸುವ ಪುಣ್ಯವಂತರ್ ಜೈನರ್ || ೯೮ ||

ನೀರಂ ಸೋದಿಪುದಿಂಬಾ
ಗಾರೈವುದು ಪುೞುಬೆಱಟಿಯೊಳಗಣ ಪುೞುವಂ
ಸಾರೈಸುವಲ್ಲಿ ದಯೆಯಿಂ
ದಾರೈವುದೆನಿಪ್ಪ ಮನೆಗಳಲ್ಲವೆ ತೀರ್ಥಂ || ೯೯ ||

ಬಾಡಂ ಸೋದಿಸಿ ಬೋನಂ
ಮಾಡುವ ಋಷಿಯರನೆ ನಿಲಿಪ ಪೊೞ್ತಾಯ್ತೀಗಳ್
ನೋಡಿಂ ನಿಱಿಸಿಂ ಪೋಸಂ
ಮಾಡಿಮೆನುತ್ತಿರ್ಪ ಮನೆಗಳಲ್ಲವೆ ತೀರ್ಥಂ || ೧೦೦ ||

ಎನಿತಾನುಂ ತೆಱದಿಂದಿಂ
ಬಿನೆ ಸೋದಿಸಿ ಸೌಖ್ಯಮಾಗಿಯಡುವುದಱಿಂದಂ
ಜಿನಸಮಯಿಯೆನಿಸಿದವರ್ಗಳ
ಮನೆಯೆಂತುಂ ಪೂತಮುಣ್ಬುದಲ್ಲಿ ಕುಲೀನರ್ || ೧೦೧ ||

ಸೋದಿಸಿಯಟ್ಟಡುಗೆಗಳಂ
ಸೋದಿಸಿ ಬಡ್ಡಿಸೆ ಮುನೀಂದ್ರರುಣ್ಬೆಡೆಗಳೊಳೊ
ಲ್ದಾದರದಿನುಣ್ಗೆ ಪಾರ್ವಂ
ಬಾದೇನೊ ಮುನೀಂದ್ರರಿಂದೆ ಪಿರಿಯರೆ ಪಾರ್ವರ್ || ೧೦೨ ||

ವರವಿಪ್ರೋತ್ತಮರಿರ್ದಂ
ತಿರೆ ಪಂಕ್ತಿಯೊಳುಣ್ಬ ಜೈನನೊರ್ವಂಗತ್ಯಾ
ದರದಿಂ ಯತ್ನದಿನಿಕ್ಕೆಂ
ಬರೆಂದೊಡೀ ಜೈನರಿಂದೆ ಸುಚರಿತರೊಳರೇ || ೧೦೩ ||

ಜಡನೆಲ್ಲಿಯುಮೆನಿಸದನುಂ
ಪಡೆಗುಂ ಸನ್ಮತಿಯನತ್ತಲುತ್ತಮಸುಖಮಂ
ಪಡೆಗುಮದಱಿಂದೆ ಭವ್ಯರ
ನೊಡಗೊಂಡಾಡಿದನೆ ಪಡೆಗುಮಿಹಪರಸುಖಮಂ || ೧೦೪ ||

ದೊರೆಯಾಗರೆಮಗೆ ದೇವರ
ದೊರೆಯೆನಿಸಿದ ಕುಲದವರ್ಗೆ ನೆಲೆಯಾದ ಧರಾ
ಮರ ಕುಲದೊಳ್ ಪುಟ್ಟಿದನುಂ
ಪುರುಷಾಧಮನೆನಿಕುಮಲ್ತೆ ಜಿನಮತಬಾಹ್ಯಂ || ೧೦೫ ||

ಚೆಚ್ಚರಿಗಂ ಪಱಿವಾಯಂ
ಚುಚ್ಚುಳನತ್ಯುಗ್ರಕೋಪಿ ಮೂರ್ಖಂ ಕೆಸರೊಳ್
ಕಿಚ್ಚಿಡುವನೆನಿಪ ಖಳನುಂ
ಬಿಚ್ಚ[ತಿ]ಗನೆನಿಕ್ಕುಮೊಂದಿ ಜೈನರ ಕಲದೊಳ್ || ೧೦೬ ||

ಜೈನರ ಕೆಲದೊಳ್ ಬಳೆದಾ
ಮಾನಸ[ನೆಲೆ]ಯಱನಿಱಿವರೊಳ್ ಕೂಡಿದೊಡಂ
ತಾನಿದಿರಂ ಕೊಲಲಱಿಯಂ
ದಾನಂಗೊಳ್ವಂತಿರವರ ಕೊಟ್ಟುದೆ ಕೊಳ್ವರ್ || ೧೦೭ ||

ಖಳಸಂತತಿಯಂ ಪತ್ತಿದ
ಕಳಂಕಪಂಕಮನೆ ಚೆಚ್ಚಿರ ಭವ್ಯಜನಂ
ಗಳ ವಚನಮೆಂಬ ನಿರ್ಮಳ
ಜಳದಿಂ ಕುರ್ಚುವುದು ಸೌಖ್ಯಮಂ ಬಯಸುವವಂ || ೧೦೮ ||

|| ಎನ್ನಯ ನಂಟರೆನ್ನಯ ಸಹೋದರರೆನ್ನಯ ಪುತ್ರ ಪೌತ್ರ[ರೆಂ
ದೆ]ನ್ನಯ ಧಾನ್ಯವೆನ್ನಯ ವಿಭೂಷಣಮೆನ್ನ ನಿವಾಸಮೆನ್ನ ಕೆಯ್
ಎನ್ನಯ ಪೊಂಗಳೆಂದವನೆ ಕೂಡೆ ಪಲುಂಬುತುಮಾರ್ತದಲ್ಲಿ ಚಿ
ತ್ತಂ ನಿಲೆ ಜೀವಮಂ ಬಿಡುವರಾರ್ಹತರಲ್ಲದ ಮೂಢಜೀವಿಗಳ್ || ೧೦೯ ||

ಎಲ್ಲೆಲ್ಲಿ ಪುಟ್ಟಿದೊಡಮಂ
ತಲ್ಲಲ್ಲಿಯೆ ಪಿರಿದು ಮೋಹಮಕ್ಕುಂ ಜೀವಂ
ಗೆಲ್ಲೆಡೆಯೊಳಮದಱಿಂದಂ
ಬಲ್ಲಂದದೆ ಬಿಡುಗೆ ಮೋಹಮಂ ತತ್ತ್ವವಿದರ್ || ೧೧೦ ||

ಪರಲೋಕಮನೆಯ್ದಲ್ ಕಸ
ವರಮೆಂಬುದನ[ೞಿ]ದು ಚೆಚ್ಚರಂ ಬಾಹ್ಯಾಭ್ಯಂ
ತರದ ಪರಿಗ್ರಹಮಂ ಪರಿ
ಹರಿಸಲ್ ಜಿನಸಮಯಮಲ್ಲದವರಾರ್ತಪರೇ || ೧೧೧ ||

ಆವೆಡೆಯೊಳ್ ಪುಟ್ಟುವೆನಾ
ನಾವೆಡೆಯೊಳ್ ಜೀವಿಸುವೆನೊ ಶರಣೆನಗಾರೆಂ
ದೀ ವಿಧದಿಂದಱನಱಿಯದ
ಜೀವಂಗಳ್ ಪಿರಿದು ಮಱುಗುಗುಂ ಸಾವೆಡೆಯೊಳ್ || ೧೧೨ ||

ಮಿಡಮಿಡಮಿಡುಕುವ[ರ]ಸುವಂ
ಬಿಡುವಾಗಳ್ ದುಶ್ಚರಿತ್ರರಾರ್ಹತ[ನ]ಸುವಂ
ಬಿಡುವಾಗಳ್ ಕಲ್ಯಾಣಂ
ಕಡಂಗಿತೆನಗೆಂದು ಬಿಡುವನುತ್ಸವದಿಂದಂ || ೧೧೩ ||

|| ಶ್ರುತಿ ಪೇೞ್ದಂದದೆ ಸರ್ವಜೀವದಯೆಯೊಳ್ ಕೂಡಿರ್ದ ಧರ್ಮಕ್ಕೆ ಸ
ನ್ಮತಿಯಂ ತಂದು ಯಥೋಚಿತಾಚರಣದಿಂದಂ ವರ್ತಿಸುತ್ತಿರ್ಪವಂ
ಮತಿವಂತಂ ತನಗಪ್ಪ ಮೃತ್ಯುವನದಂ ಸತ್ಪಾತ್ರಮಂ ದಾನಿ ಪಾ
ರುತುಮಿರ್ಪಂತಿರೆ ಪಾರುತಿರ್ಪನಭಯಂ ಸಾವಾಗಲಿರ್ದಲ್ಲಿಯುಂ || ೧೧೪ ||

|| ಮನೆಯಂ ಪುತ್ರಕಳತ್ರಮಿತ್ರಧನಧಾನ್ಯವ್ರಾತಮಂ ಬಿಟ್ಟು ಪಂ
ಚನಮಸ್ಕಾರಮನಾಲಿಸುತ್ತಮವನೋದುತ್ತುಂ ಮನಂದಂದು ದೇ
ವನೆ ತಾನಾಗಿ ಸಮಾಧಿಯೊಳ್ ನೆಱೆದು ಬೇಗಂ ದೇಹಮಂ ಬಿಟ್ಟು ಜೈ
ನನವೋಲ್ ಸ್ವರ್ಗಮನೆಯ್ದಲೇನಱಿವನೇ ಸದ್ಧರ್ಮಮಾರ್ಗೇತರಂ || ೧೧೫ ||

ಸರ್ವಜ್ಞನಲ್ಲಿ ಮನಮಂ
ನಿರ್ವಂದದೆ ನಿಲಿಸಿ ಜೀವಮಂ ಬಿಟ್ಟಾತಂ
ಸರ್ವಾತ್ಮ ಸಿದ್ಧಿನೆನಿಸುಗುಂ ಕ್ರಮದಿಂದಂ || ೧೧೬ ||

ಇನ್ನರಿವರೆಂದು ಬಣ್ಣಿಸು
ವನ್ನರೆ ಲೋಕೈಕಸಾರಸರ್ವಸ್ವರೆನಿ
ಪ್ಪನ್ನರೆ ಸಮಸ್ತಗುಣಸಂ
ಪನ್ನರೆ ಜಿನಭಕ್ತರೆಂದು ಬಣ್ಣಿಪುದು ಜಗಂ || ೧೧೭ ||

|| ಸ್ರ || ಪರಮಾರ್ಥಂ ಸತ್ಯದೊಳ್ ಶೌಚದೊಳೆ ಪರಹಿತೌದಾರ್ಯದೊಳ್ ಪೆರ್ಮೆಯೊಳ್ಸ
ಚ್ಚರಿತವ್ಯಾಪಾರದೊಳ್ ನಿರ್ಮಳಮೆನಿಸಿದ ವಿಜ್ಞಾನದೊಳ್ ಮೋಕ್ಷಲಕ್ಷ್ಮೀ
ಶ್ವರದಿವ್ಯಶ್ರೀಪದಾರಾಧನದೊಳಧಿಕಶಾಂತತ್ವದೊಳ್ ಪೆಂಪಿನೊಳ್ ಭ
ವ್ಯರನೆಂತುಂ ಪೋಲಲೇನಾರ್ತಪರೆ ವಿಮಳಸದ್ಭೋಧಸದ್ವೃತ್ತಹೀನರ್ || ೧೧೮ ||

ಚಂ || ಬಯಕೆ ವಿಶಿಷ್ಟಸಂಗಮದೊಳಾರ್ಹತದೊಳ್ ಮತಿ ದುಶ್ಚರಿತ್ರದೊಳ್
ಭಯಮನಿಶಂ ಸದಾಚರಿತದೊಳ್ ರತಿ ಧರ್ಮದೊಳೞ್ತಿ ಶಕ್ತಿ ತ
ಮ್ಮಯ ಮನಮಂ ನಿವಾರಿಪೊಡೆಯನ್ಯರ ಸದ್ಗುಣದಲ್ಲಿ ಹರ್ಷಬು
ದ್ಧಿಯೆ ನಿಜಮಾಗಿ ವರ್ತಿಸುವ ಭವ್ಯರೆ ಭಾವಿಸೆ ದೇವರಲ್ಲರೇ || ೧೧೯ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಜರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ
ಸಮಯಪರೀಕ್ಷೆಯೊಳ ಸಚ್ಚರಿತ್ರವರ್ಣನಂ ಷಷ್ಠಾಧಿಕಾರಂ