ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಜೈನಕವಿಗಳ ಸಾಧನೆ ಸಿದ್ಧಿಗಳು ವಿಶೇಷವಾಗಿ ಉಲ್ಲೇಖನಾರ್ಹವಾಗಿವೆ. ಇವರಲ್ಲಿ ಬ್ರಹ್ಮಶಿವನಿಗೆ ಒಂದು ಅನನ್ಯವಾದ ಸ್ಥಾನ ಸಲ್ಲುತ್ತದೆ. ಅವನ ಕೃತಿಗಳು ಎರಡು : ೧ ‘ಸಮಯಪರೀಕ್ಷೆ’ ೨. ತ್ರೈಕೋಕ್ಯಚೂಡಾಮಣಿ ಸ್ತೋತ್ರ (=ಛತ್ತೀಸರತ್ನಮಾಲೆ). ಇವುಗಳಲ್ಲಿ ಕವಿಯ ಪ್ರಸಿದ್ಧಿಗೆ ಕಾರಣವಾಗಿರುವುದು ಮೊದಲನೆಯ ರಚನೆಯೇ. ಒಂದು ಅಂದಾಜಿನಂತೆ ‘ಸಮಯಪರೀಕ್ಷೆ’ಯಲ್ಲಿ ೧೭೩೦ ಕಂದಪದ್ಯಗಳೂ ೨೫೧ ವರ್ಣವೃತ್ತಗಳೂ ಇವೆ (ಪ್ರತ್ಯಂತರದ ಅಧಿಕಪಾಠದಲ್ಲಿ ೧೯೫ ಕಂದಗಳೂ ೨೭ ವೃತ್ತಳೂ ಇವೆ). ಅಲ್ಲಲ್ಲಿ ಕೆಲವು ಸಂಸ್ಕೃತಶ್ಲೋಕಗಳಿವೆ. ಎರಡನೆಯ ಸ್ತೋತ್ರ ಗ್ರಂಥದಲ್ಲಿ ೩೬ ವೃತ್ತಗಳು ಮಾತ್ರಿವಿದ್ದು, ಮೊದಲನೆಯದು ಶಾರ್ದೂಲ ವಿಕ್ರೀಡಿತವಾಗಿದ್ದು, ಉಳಿದುವೆಲ್ಲ ಮತ್ತೇಭವಿಕ್ರೀಡಿತಗಳಾಗಿವೆ. (ಇಂತಹ ಲಘು ಪ್ರಮಾಣದ ರಚನೆಗಳಲ್ಲಿ ಒಂದೆರಡು ಪದ್ಯಗಳು ಹೆಚ್ಚಾಗಿರುವುದು ಸಾಮಾನ್ಯ. ಇಲ್ಲಿಯೂ ೩೮/೩೯ ಪದ್ಯಗಳುಂಟು).

‘ಸಮಯಪರೀಕ್ಷೆ’ಯಲ್ಲಿ ೧೫ ಅಧಿಕಾರಗಳಿವೆ. ಇದು ಒಂದು ಪದ್ಯನಿಬದ್ಧವಾದ ಕೃತಿ. ಸಾಧಾರಣವಾಗಿ ಕನ್ನಡದ ಪ್ರಾಚೀನ ಜೈನಕವಿಗಳು ತಮ್ಮ ರಚನೆಗಳನ್ನು ಗದ್ಯಪದ್ಯಮಿಶ್ರಿತ ಚಂಪುಗಳನ್ನಾಗಿ ಕಟ್ಟಿದ್ದರೆ, ಬ್ರಹ್ಮಶಿವನು ಕೇವಲ ಪದ್ಯಗಳಿಂದಲೇ ಕೃತಿರಚನೆಮಾಡಿದ್ದಾನೆ. ಇದು ಒಂದು ವಿಶೇಷ. ವೃತ್ತಗಳ ಆಯ್ಕೆ ಹಳೆಯ ಚಂಪುಗಳಲ್ಲಿ ಕಾಣುವಂತೆಯೇ. ಆದರೆ ಪ್ರಮಾಣದಲ್ಲಿ ಒಂದು ವಿಶೇಷವಿದೆ. ಸಂಖ್ಯೆಯಲ್ಲಿ ಕಂದ ಪದ್ಯಗಳೇ ಹೆಚ್ಚು. ಶಾಸ್ತ್ರಗ್ರಂಥಗಳಲ್ಲಿ ಅನುಸರಿಸುವ ಪರಿಪಾಠಿಯಂತೆ ವಿಭಾಗಗಳನ್ನು ಅಧಿಕಾರಗಳೆಂದಿದೆ, ಆಶ್ವಾಸಗಳೆಂದಿಲ್ಲ. ಇದು ಕೃತಿ ಒಂದು ಕಾವ್ಯವಲ್ಲ, ಶಾಸ್ತ್ರ ಅಥವಾ ಶಾಸ್ತ್ರಸದೃಶವಾದ ರಚನೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ.

‘ಸಮಯಪರೀಕ್ಷೆ’ಯಲ್ಲಿ ಕಥಾವಸ್ತು ಎಂಬುದಿಲ್ಲ. ವರ್ಣನೆಗಳಿಲ್ಲ, ಪಾತ್ರ ಸನ್ನಿವೇಶಗಳಿಲ್ಲ. ವಿವಿಧ ಧರ್ಮಗಳ ಸಾರಾಸಾವಿಮರ್ಶೆಯೇ ಇಲ್ಲಿ ವಸ್ತು. ವಿವಿಧ ಸಮುದಾಯಗಳ ಆಚಾರವಿಚಾರಗಳ ಕಥನವೇ ಇಲ್ಲಿ ವರ್ಣನೆ. ಮತಾನುಯಾಯಿಗಳ ಶೀಲ ಸ್ವಭಾವಗಳ ಪರಿಶೀಲನೆಯೇ ಪಾತ್ರಚಿತ್ರಣ. ಅವರ ನಡೆನುಡಿಗಳ ಸಂದರ್ಭ ವಿಶೇಷಗಳೇ ಸನ್ನಿವೇಶಸ್ಥಾನಗಳು. ಇವೆಲ್ಲ ವಾದ ಪ್ರತಿವಾದಗಳ ನೆಲೆಯಲ್ಲಿ, ತರ್ಕದ ಸರಣಿ ಹಿಡಿದು ನಡೆಯದಿದ್ದರೂ ಒಟ್ಟಿನಲ್ಲಿ ಇಲ್ಲಿಯ ಧೋರಣೆ ಇರುವುದು ಹಾಗೆಯೇ. ಹಾಗಾಗಿ ಇದೊಂದು ವಾದಗ್ರಂಥ. ಪ್ರತಿಪಾದಿಸಿರುವ ವಸ್ತು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜೈನಧರ್ಮದ ಸಾಮಾನ್ಯಸ್ವರೂಪವನ್ನೂ ತತ್ತ್ವಗಳನ್ನೂ ಹಿರಿಮೆಯನ್ನೂ ಸಾರಲು, ಸ್ಥಾಪಿಸಲು, ಉಗ್ಗಡಿಸಲು ಹೊರಟಿರುವುದಂತೂ ಸ್ಪಷ್ಟ. ಆ ಮಟ್ಟಿಗೆ ಒಂದು ಉದ್ದೇಶ, ವ್ಯವಸ್ಥೆ ಇಲ್ಲಿ ಉಂಟು. ಆದರ ಅಂತಹ ಬಂಧಕೌಶಲ, ನಯ, ಅಚ್ಚುಕಟ್ಟು ಕಾಣಿಸುವುದಿಲ್ಲ. ಬೇರೆ ಅಧಿಕಾರಗಳ ಸಂಗತಿಗಳು ಬೆರೆತುಬರುತ್ತವೆ. ಪುನರಾವೃತ್ತಿಗಳೂ ಇರುತ್ತವೆ. ಇದಕ್ಕೆ ಕೃತಿಯಲ್ಲಿ ಸುಳಭವಾಗಿ ಉದಾಹರಣೆಗಳನ್ನು ಕಂಡುಕೊಳ್ಳಬಹುದು. ಕವಿಯ ಅತ್ಯತ್ಸಾಹದ, ಉಗ್ರ ಮತಾಭಿನಿವೇಶದ ಫಲವಿದು ಎಂದು ತೋರುತ್ತದೆ. ಹೀಗಾಗಿ ಅವ್ಯವಸ್ಥೆ ಪುನರಾವೃತ್ತಿಗಳ ಜೊತೆಗೆ ಅತ್ಯುಕ್ತಿಗಳೂ ಅತಿಶಯೋಕ್ತಿಗಳೂ ಬಿದ್ದೆದ್ದು ಬರುತ್ತವೆ.

ಕಾಲವಿಚಾರ:

ಬ್ರಹ್ಮಶಿವ ತನ್ನ ಕೃತಿಗಳಲ್ಲಿ ಎಲ್ಲಿಯೂ ತಾನು ಬದುಕಿದ್ದ ಕಾಲದ, ಕೃತಿರಚನೆ ಮಾಡಿದ ವರ್ಷದ ಬಗೆಗೆ ಯಾವುದೇ ಮಾಹಿತಿ ಒದಗಿಸಿಲ್ಲ. ಕೃತಿಯಲ್ಲಿ ದೊರೆಯಬಹುದಾದ ಆಂತರಿಕಸಾಕ್ಷ್ಯಗಳನ್ನೂ ಅನ್ಯ ಬಾಹ್ಯಾಧಾರಗಳನ್ನೂ ಸಮೀಕರಿಸಿ, ತುಲನೆಮಾಡಿ ಸಂಭಾವ್ಯವಾದ ಅವನ ಜಿವಿತಕಾಲವನ್ನು ಸ್ಥೂಲವಾಗಿಯಾದರೂ ಗೊತ್ತುಮಾಡಿಕೊಳ್ಳಬೇಕಾಗಿದೆ. ಅಂತಹ ಪ್ರಯತ್ನಗಳು ‘ಕರ್ಣಾಟಕ ಕವಿಚರಿತೆಯ ಆರ್. ನರಸಿಂಹಾಚಾರ್ಯರಿಂದ ಮೊದಲುಗೊಂಡು ಇತ್ತೀಚೆಯ ವರೆಗೂ ನಡೆದಿರುವುದು ಕಾಣುತ್ತದೆ. ಈ ಪ್ರಯತ್ನಗಳಲ್ಲಿ ಎ. ವೆಂಕಟಸುಬ್ಬಯ್ಯ, ಎಚ್‌. ದೇವೀರಪ್ಪ, ಡಿ.ಎಲ್. ನರಸಿಂಹಾಚಾರ್, ಬಿ.ಎಸ್. ಕುಲಕರ್ಣೀ, ಹಂಪ, ನಾಗರಾಜಯ್ಯ, ಸೀತಾರಾಮ ಜಾಗೀರ್ದಾರ್, ಕೆ. ಅನಂತರಾಮು, ಎಂ.ಎಚ್.ಕೃಷ್ಣಯ್ಯ ಈ ಮೊದಲಾದವರು ಕೈತೊಡಗಿಸಿದ್ದಾರೆ. ಇವರು ಮಾಡಿರುವ ಚರ್ಚೆಗಳು ಮುಖ್ಯವಾಗಿ ಈ ನಾಲ್ಕು ಭೂಮಿಕೆಗಳ ಮೇಲೆ ನಡೆದಿವೆ.:

೧. ಬ್ರಹ್ಮಶಿವನು ಆದಿಕವಿ ಪಂಪನ ಮೊಮ್ಮಗನೋ ಅಭಿನವಪಂಪ ನಾಗಚಂದ್ರನ ಮೊಮ್ಮಗನೋ?

೨. ಬ್ರಹ್ಮಶಿವನು ಕೀರ್ತಿಸಿರುವ ಜೈನಾಚಾರ್ಯರಲ್ಲಿ ವೀರಣಂದಿಮುನಿ, ಅವನ ಗುರು ಮೇಘಚಂದ್ರ ಇವರ ಕಾಲವನ್ನು ಶಾಸನಾಸಕ್ಷ್ಯಗಳ ಬೆಳಕಿನಲ್ಲಿ ತೃಪ್ತಿಕರವಾಗಿ ಗೊತ್ತುಮಾಡಬಹುದೇ?

೩. ಬ್ರಹ್ಮಶಿವನ ತಂದೆ ಸಿಂಗಿರಾಜ, ಗೆಳೆಯ ಅಗ್ಗಳ ಇವರು ಸರಿಯಾಗಿ ಇಂಥವರೇ ಎಂದು ಗುರುತಿಸಬಹುದುದೇ?

೪. ಬ್ರಹ್ಮಶಿವನು ಜೀವಿಸಿದ್ದುದು ಬಸವಾದ್ಯರ ಮೂಲಕ ಉನ್ನತಿಗೇರಿದ ವೀರಶೈವ ಧರ್ಮದ ಕಾಲಕ್ಕೆ ಮೊದಲೋ ಬಳಿಕವೋ?

ಇವುಗಳ ಜೊತೆಗೆ ಸಮಯಪರೀಕ್ಷೆಯಲ್ಲಿ ಉಲ್ಲೇಖಗೊಂಡಿರುವ ಜೈನ ಯತಿಗಳ, ಕವಿಗಳ, ಐತಿಹಾಸಿಕ ವ್ಯಕ್ತಿಗಳ ಹಾಗೂ ಸಂದರ್ಭಗಳ ಸಂಗತಿಗಳು ಕೂಡ ಪೋಷಕಸಾಕ್ಷ್ಯಗಳಾಗಿ ಸಹಾಯಕ್ಕೆ ಬಳಕೆಯಾಗಿವೆ.

ಮೇಲೆ ಹೇಳಿದ ಮುಖ್ಯ ಹಾಗೂ ಪೋಷಕ ಆಧಾರಗಳನ್ನು ಹಿಡಿದು ವಿದ್ವಾಂಸರು ತಮ್ಮ ತಮ್ಮ ಚರ್ಚೆಗಳನ್ನು ವಿಸ್ತಾರವಾಗಿ, ಸ್ವತಂತ್ರವಾಗಿ, ವಿಶದವಾಗಿ ಉತ್ತರ ಪ್ರತ್ಯುತ್ತರಗಳ ರೂಪದಲ್ಲಿ ಈಗಾಗಲೇ ಮಂಡಿಸಿದ್ದಾರೆ.

ಈ ವಿಷಯದಲ್ಲಿ ತಾತ್ಪರ್ಯವಾಗಿ ಇಲ್ಲಿ ಹೇಳಬಹುದಾದದ್ದು ಎಂದರೆ :

೧. ಬ್ರಹ್ಮಶಿವನು ಅಭಿನಪಂಪ ನಾಗಚಂದ್ರನ ಮಗನಾದ ಸಿಂಗಿರಾಜನಿಗೆ ಮಗನೆಂದಿಟ್ಟುಕೊಟ್ಟರೆ ಬೇರೆ ಕೆಲವು ಸಾಕ್ಷ್ಯಗಳೊಂದಿಗೆ ಅದು ಸಮರ್ಪಕವಾಗಿ ಹೊಂದಿಕೊಳ್ಳುತ್ತದೆ. ‘ಸಮಯಪರೀಕ್ಷೆ’ಯಲ್ಲಿ ನಾಗಚಂದ್ರನ ಬಗೆಗೆ ದೊರೆಯುವ ಕೆಲವು ವಿಶೇಷವಿವರಗಳು, ವರ್ಣನೆಯಲ್ಲಿ ಕಾಣುವ ಆಪ್ತತೆಯ ದನಿ, ಬದುಕು ನಡೆಸಿದ ಸ್ಥಳದ ಭೌಗೋಳಿಕಸಾಮೀಪ್ಯ ಇತ್ಯಾದಿಗಳು ಅಂತಹ ಸಾಕ್ಷ್ಯಗಳು.

೨. ಬ್ರಹ್ಮಶಿವನ ಗುರುವಾದ ವೀರಣಂದಿ ‘ಆಚಾರಸಾರಕರ್ಣಾಟವೃತ್ತಿ’ಯನ್ನು ಬರೆದ (೧೧೫೪) ತರುವಾಯದಲ್ಲಿಇ ‘ಸಮಯಪರೀಕ್ಷೆ’ ರಚಿತವಾಗಿದೆ; ಬ್ರಹ್ಮಶಿವನ ಗೆಳೆಯನಾದ ಅಗ್ಗಳದೇವನು ‘ಚಂದ್ರಪ್ರಭಪುರಾಣದ ಕರ್ತೃವಾಗಿ (೧೧೮೯) ಸುಪರಿಚಿತನಾದ ಅಗ್ಗಳನೆಂದೇ ತಿಳಿಯುವುದು ವಸ್ತುಸ್ಥಿತಿಗೆ ಹತ್ತಿರವಾದ್ದು. ಈ ಕೃತಿಯ ಅನಂತರದಲ್ಲಿ ‘ಸಮಯಪರೀಕ್ಷೆ’ ರಚಿತವಾಗಿದೆ. ಇದರಲ್ಲಿ ‘ಜೀವ ಸಂಭೋದನೆ’ಯ ಬಂಧುವರ್ಮ ಕವಿಯನ್ನು (ಸು. ೧೧೯೦) ಬ್ರಹ್ಮಶಿವನು ತುಂಬ ಆಪ್ತಭಾವದಿಂದ ಸ್ಮರಿಸಿರುವುದನ್ನು ವಿಶೇಷವಾಗಿ ಗಮನಿಸಬೇಕು. ಬಂಧುವರ್ಮನು ತನ್ನ ಇನ್ನೊಂದು ಕೃತಿ ‘ಹರಿವಂಶಾಭ್ಯುದಯ’ದ ರಚನೆಯಲ್ಲಿ ಅದೇ ಕಾವ್ಯವಸ್ತುವಿನ ಕರ್ಣಪಾರ್ಯಕವಿ (ಸು. ೧೧೬೦ – ೭೦) ಕೃತವಾದ ‘ನೇಮಿನಾಥ ಪುರಾಣ’ವನ್ನು ಅನುಸರಿಸಿರುವುದು ಕಂಡುಬಂದಿದ್ದು, ಈತನು ನಾಗಚಂದ್ರನನ್ನು ‘ಆದ್ಯತನ’ನೆಂದು ಹೇಳಿರುವುದು ಈ ಇಬ್ಬರೂ ಸಮಕಾಲೀನರೋ ಸಮೀಪ ವರ್ತಿಗಳೋ ಆಗಿರುವುದನ್ನು ಸ್ಥಾಪಿಸುತ್ತದೆ. ಹೀಗೆ ನಾಗಚಂದ್ರಸಾಮೀಪ್ಯ ಬ್ರಹ್ಮ ಶಿವನ ಕಾಲನಿರ್ಣಯಕ್ಕೆ ಸಹಕಾರಿಯಾಗಿದೆ.

೩. ವೀರಶೈವದ ಉನ್ನತಿಯ ಕಾಲದಲ್ಲಿಯೇ ಬ್ರಹ್ಮಶಿವನು ಜೀವಿಸಿದ್ದು ಕೃತಿರಚನೆಮಾಡಿರುವುದು ಸಂಭಾವ್ಯವಾದ್ದು. ಹಾಗಿರುವುದರಿಂದಲೇ ಶಿವನ, ಶಿವನ ಪರಿವಾರ ದೇವತೆಗಳ, ಹಾಗೂ ಶೈವಧರ್ಮದ, ಶೈವಧರ್ಮದ ಅನುಯಾಗಿಳ ಬಗೆಗೆ ಅವನು ಉಳಿದೆಲ್ಲ ಧರ್ಮಗಳಿಗಿಂತ ಹೆಚ್ಚಾಗಿ ಟೀಕೆ ಟಿಪ್ಪಣಿಗಳನ್ನು ಮಾಡಿರುವುದು. ಜೇಡರ ದಾಸಿಮಯ್ಯ, ಸಿರಿಯಾಳ ಕುಂಬಱ ಗುಂಡಯ್ಯ, ಬೇಡರ ಕಣ್ಣಪ್ಪ, ಮಲುಹಣ, ಬಾಣ, ಮಯೂರ, ಉದ್ಘಟರ ಕಥೆಗಳ ಘಟನೆಗಳ ಉಲ್ಲೇಖಗಳು ಬಂದಿರುವುದು ಬಹುಶಃ ಆ ಹಿನ್ನೆಲೆಯಿದ್ದುದರಿಂದಲೇ ವೀರಶೈವವೆಂಬ ಮಾತೂ ಆಚಾರದ ಪ್ರಕ್ರಿಯೆಗಳೂ ಇಲ್ಲಿ ಅಷ್ಟಾಗಿ ಕಾಣುವುದಿಲ್ಲ ವೆಂಬುದೇನೋ ನಿಜ. ಒಂದು ಸಮಸಾಯಿಕ ವಿದ್ಯಮಾನವಾದ್ದರಿಂದ ಆ ಬಗ್ಗೆ ಪ್ರಸ್ತಾವವಿಲ್ಲದಿರಬಹುದು. ಆ ಧರ್ಮದವರು ತೋರಿಸಬಹುದಾದ ಪ್ರತಿಕ್ರಿಯೆ ಕ್ಷೀಣವಾಗಿ ಮಾತ್ರ ಕೇಳುತ್ತದೆ. ಇದು ಇನ್ನೂ ಶೋಧಿತವಾಗಬೇಕಾದ ಸಂಗತಿ. ಲಿಂಗಿ, ಶಿವಭಕ್ತ, ಮಹೇಶ್ವರ, ಪರಲಿಂಗಿ ಇಂಥ ಮಾತುಗಳಿಂದಲೇ ವೀರಶೈವವನ್ನು ಬ್ರಹ್ಮಶಿವನು ಇಂತಿತಗೊಳಿಸಿರಬಹುದು. ಈಗ ತಿಳಿದಿರುವಂತೆ ವೀರಶೈವಪೂರ್ವ ಕಾಲೀನ ಶೈವವನ್ನೇ ಹೇಳುತ್ತವೆಯೆಂದು ಆ ಮಾತುಗಳನ್ನು ಅರ್ಥ ಮಾಡಬೇಕಾಗಿಲ್ಲ. ಅವನು ಎತ್ತಿ ಆಡುತ್ತಿರುವುದೂ ಟೀಕಿಸುತ್ತಿರುವುದೂ ತನ್ನ ಕಾಲದ ಶಿವಭಕ್ತರನ್ನೇ ಎಂದು ಸಾಮಾನ್ಯವಾಗಿ ತಿಳಿದರೆ, ಅದು ಹೆಚ್ಚು ಸ್ವಾಭಾವಿಕವಾದ್ದು; ಅದರಲ್ಲಿ ತಪ್ಪೇನಿಲ್ಲ.

ದೇಶ, ಆಶ್ರಯ :

ಬ್ರಹ್ಮಶಿವನು ತಾನು ಪೊಟ್ಟಳಗೆರೆಯವನೆಂದು ಹೇಳಿಕೊಂಡಿದ್ದಾನೆ (೧ – ೫೭). ಈ ಸ್ಥಳ ಆಂದ್ರಪ್ರದೇಶದ ಹೈದರಾಬಾದಿಗೆ ಹತ್ತಿರದಲ್ಲಿ ಹೈದರಾಬಾದು – ಜಹೀರಾಬಾದಿಗೆ ಹೋಗುವ ಮಾರ್ಗದಲ್ಲಿ ಸುಮಾರು ೩೦ ಕಿ.ಮೀ. ದೂರದಲ್ಲಿರುವ ಪೊಟ್ಲಚರುವು (ಪಟ್ಟಣಚೆರು/ಪಟಾನ್‌ಚೆರು) ಎಂಬ ಸ್ಥಳವೇ ಆಗಿದೆ. ಇದು ಒಂದು ಕಾಲಕ್ಕೆ ಪ್ರಸಿದ್ಧವಾಗಿದ್ದ ಜೈನಧಾರ್ಮಿಕಕೇಂದ್ರವಾಗಿದ್ದು, ತರುವಾಯದಲ್ಲಿ ಶೈವವು ಅಲ್ಲಿ ಉನ್ನತಿಗೇರಿತು.

ಕವಿ ಬ್ರಹ್ಮಶಿವನ ರಾಜಾಶ್ರಯ ಸ್ಪಷ್ಟವಿಲ್ಲ. ಅವನ ‘ತ್ರೈಲೋಕ್ಯಚೂಡಾಮಣಿ ಸ್ತೋತ್ರ’ದ ಪದ್ಯದ ಆಧಾರದ ಮೇಲೆ (ಪ. ೩೮) ಅವನು ರಾಜ್ಯಪೂಜ್ಯಾಸ್ಪದನಾಗಿ ಕವಿಚಕ್ರವರ್ತಿಯೆಂಬ ಪ್ರಶಸ್ತಿಗೆ ಭಾಜನನಾಗಿದ್ದನೆಂದು ತಿಳಿಯುವುದಾದರೂ ಆ ಪ್ರಶಸ್ತಿಯನ್ನು ಅವನಿಗೆ ನೀಡಿದ ಚಕ್ರವರ್ತಿ ಯಾರೆಂಬುದು ಸ್ಪಷ್ಟವಿಲ್ಲ. ವಿವಿಧವಾಗಿ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅದು ಆರ್‌. ನರಸಿಂಹಾಚಾರ್ಯರರೂ ಶಾಸನತಜ್ಞ ಎನ್‌. ಲಕ್ಷ್ಮೀನಾರಾಯಣರಾಯರೂ ಭಾವಿಸುವಂತೆ ಕಲ್ಯಾಣಚಾಲುಕ್ಯವಂಶದ ವಿಷ್ಣುವರ್ಧನವಿಜಯಾದಿತ್ಯ ಪ್ರತಿನಾಮದ ಕೀರ್ತಿವರ್ಮನೇ, ಮತ್ತೊಬ್ಬನೇ ಸ್ಪಷ್ಟವಿಲ್ಲ. ಕೀರ್ತಿದೇವನೆಂಬವನ ವಿಚಾರ ‘ಸಮಯಪರೀಕ್ಷೆ’ಯಲ್ಲಿಯೂ ಉಂಟು (೧ – ೪೭) ಕೀರ್ತಿವರ್ಮ ಕೀರ್ತಿದೇವರು ಅಭಿನ್ನರೇ ಎಂದಿಟ್ಟುಕೊಂಡರೂ ಆ ಪ್ರಭುವನ್ನು ಗುರುತಿಸುವ ತೊಡಕು ಪರಿಹಾರವಾಗುತ್ತಿಲ್ಲ. ಡಾ. ಬಿ.ಆರ್‌. ಗೋಪಾಲ್‌ಅವರು ‘ಸಮಯಪರೀಕ್ಷೆ’ಯಲ್ಲಿ ಉಕ್ತನಾಗಿರುವ ಕೀರ್ತಿವರ್ಮ ಹಾನಗಲ್ಲು ಕದಂಬರ ಮಾಂಡಲಿಕನಾದ ಕೀರ್ತಿವರ್ಮನಾಗಿರಬೇಕು ಎಂದಿದ್ದಾರೆ. ಪ್ರಾಚೀನನಾದ ಪ್ರಭುವೊಬ್ಬನ ಉಲ್ಲೇಖ ಕೃತಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅಸಂಗತವಾದ್ದೇನೂ ಅಲ್ಲ. ಆದರೆ ಸಮಕಾಲೀನತೆ ಮತ್ತು ಆಶ್ರಯ ಇವು ಇನ್ನೂ ಬಗೆಹರಿಯಬೇಕಾದ ಪ್ರಶ್ನೆಗಳಾಗಿವೆ.

ವೈಯಕ್ತಿಕವಿವರ:

ಕವಿಯ ಹೆಸರು ಬ್ರಹ್ಮಶಿವ ಎಂಬುದಾಗಿ ಪರಿಚಿತವಾಗಿದೆ. ಆದರೆ ಗ್ರಂಥಶರೀರದಲ್ಲಿ ಬ್ರಹ್ಮ/ಬಮ್ಮನೆಂದೂ ಅಧಿಕಾರಾಂತ್ಯ ಗದ್ಯದಲ್ಲಿ ಬ್ರಹ್ಮದೇವನೆಂದೂ ಇರುವುದು ಕಂಡುಬಂದಿದೆ. ಕೃತಿಯ ಪ್ರತ್ಯಂತರದ ಪಾಠ ಬ್ರಹ್ಮ ಶಿವನೆಂದಿದ್ದರೂ ಕವಿಯ ನಿಜನಾಮ ಬ್ರಹ್ಮ/ಬ್ರಹ್ಮದೇವ ಎಂದೇ ಇದ್ದಿರಬೇಕು.

ಬ್ರಹ್ಮಶಿವ ವತ್ಸಗೋತ್ರದ ಜೈನಬ್ರಾಹ್ಮಣ, ಪೊಟ್ಟಳಗೆರೆಯ ಪ್ರಸಿದ್ಧನಾದ ಸಿಂಗರಾಜ ಖ್ಯಾತ ಜೈನಕವಿ ನಾಗಚಂದ್ರನ ಮಗ. ಇದು ಹೀಗಿದ್ದುದರಿಂದ ಮನೆ ಜೈನಬಸದಿಗಳ ನಡುವೆ ಓಡಾಡುತ್ತಲೇ ನಡೆಯುವದನ್ನೂ ಸದಾ ಜೈನಾಗಮಗಳನ್ನು ಅಭ್ಯಾಸಮಾಡುತ್ತಲೇ ನುಡಿಯುವುದನ್ನೂ ಕಲಿತು ಪ್ರಸಿದ್ಧಿಗೆ ಬಂದುದು ಸ್ವಾಭಾವಿಕವೇ ಆಗಿದೆ (ತ್ರೈ. ಚೂ. ಪ ೨೯/೩೮). ಈ ನಡುವೆ ವೀರಶೈವಧರ್ಮ ಒಂದು ಸಾಮಾಜಿಕ ಧಾರ್ಮಿಕ ಚಳುವಳಿಯಾಗಿ ಹಬ್ಬುತ್ತಿದ್ದ ಕಾಲದಲ್ಲಿ ಅಂದಿನ ಹಲವರಂತೆ ಬ್ರಹ್ಮಶಿವನನ್ನೂ ಅದು ಆಕರ್ಷಿಸಿದಂತೆ ತೋರುವುದು. ಆ ಧರ್ಮವನ್ನೊಪ್ಪಿ, ಸ್ವಲ್ಪಕಾಲ ಅದರಲ್ಲಿ ನಡೆದುಕೊಂಡು, ಅದು ಹಿತವೆನ್ನಿಸದೆ ಮತ್ತೆ ತನ್ನ ಹುಟ್ಟಿನ ಧರ್ಮಕ್ಕೆ ಹಿಂದಿರುಗಿದ ಹಾಗೆ ಅವನೇ ಹೇಳಿಕೊಂಡಿದ್ದಾನೆ (ಸಮಪ. ೧ – ೫೯). ಮೂಲತಃ ಬ್ರಾಹ್ಮಣರಾಗಿದ್ದ ಅವನ ಪೂರ್ವಿಕರು ಜೈನಧರ್ಮವನ್ನು ಸ್ವೀಕರಿಸಿದ ಮೇಲೆ, ಈಗ ಆ ಮನೆತನದ ಕವಿಯ ಬದುಕಿನಲ್ಲಿ ಇನ್ನೊಂದು ಮತಾಂತರ ಮತ್ತು ಪುನರಾಗಮನ ನಡೆದುಹೋಯಿತು. ಸ್ವಧರ್ಮಕ್ಕೆ ಮರಳಿದ ಮೇಲೆ, ಮತಭೇದವಿಲ್ಲದೆ ಎಲ್ಲ ಶೈವಶಾಖೆಗಳು ಇತರ ಧರ್ಮಗಳೂ ಅವನ ಟೀಕೆ ಟಿಪ್ಪಣಿಗಳಿಗೆ ಗುರಿಯಾದವು.

ಬ್ರಹ್ಮಶಿವನ ವೀರಣಂದಿ ಸಿದ್ಧಾಂತಚಕ್ರವರ್ತಿಯ ಶಿಷ್ಯ. ಈ ವೀರಣಂದಿ ಮೇಘಚಂದ್ರ ತ್ರೈವಿದ್ಯನ ಶಿಷ್ಯ. ಇವನೇ ‘ಆಚಾರಸಾರಕರ್ಣಾಟಕವೃತ್ತಿ’ಯನ್ನು ರಚಿಸಿದವನು (೧೧೫೪). ಇವರಲ್ಲದೆ ಕವಿ ಇತರ ಜೈನಾಚಾರ್ಯರರಲ್ಲಿ ಕೆಲವರನ್ನು ಸ್ಮರಿಸಿದ್ದಾನೆ. ಗೃಧ್ರಪಿಂಛ, ಸಮಂತಭದ್ರ, ಜಟಾಚಾರ್ಯ (ಜಟಾಸಿಂಹನಂದಿ), ಪೂಜ್ಯಪಾದ, ಅಕಳಂಕದೇವ, ಕುಂದಕುಂದ, ಸೋಮದೇವ ಸೂರಿ, ಭೂಪಾಲ, ಚರ್ತುಮುಖದೇವ, ಬೆಟ್ಟದ ದೇವ, ವಾದಿರಾಜ, ಜಿನಸೇನ ವೀರಸೇನರು, ಕವಿಪರಮೇಷ್ಠಿ ಇವರು ಹಾಗೆ ಸ್ಮರಣೆಗೊಂಡವರು. ಪ್ರಭುಗಳಲ್ಲಿ, ಅಧಿಕಾರಿಗಳಲ್ಲಿ ಭರತ (ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಮಂತ್ರಿ), ರಟ್ಟ ಶಂಖಾವನೀಶ (ರಟ್ಟರ ಶಂಕರಗಂಡ), ರಾಯ (ಚಾವುಂಡ ರಾಯ), ರಾಚಮಲ್ಲ (ಗಂಗರಾಜ ನಾಲ್ವಡಿ ರಾಚಮಲ್ಲ), ಕೀರ್ತಿದೇವ (ಚಾಲುಕ್ಯರಾಜ ಕೀರ್ತಿದೇವ), ಆಹವಮಲ್ಲ (ಚಾಲುಕ್ಯರಾಜ, ನಾಗದೇವನ ಮಗ), ಪೆರ್ಗಡೆ ಬೊಮ್ಮ (ಕೂಂಡಿ ಮೂಸಾಸಿರದ ಸೀಮೆಯವನು), ನಾಗದೇವ (ಪೆರ್ಗಡೆ ಬೊಮ್ಮನ ಮಗ). ಇವರಲ್ಲಿ ಕೊನೆಯ ನಾಲ್ವರನ್ನು ಇತಿಹಾಸದಲ್ಲಿ ಇನ್ನೂ ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಪ್ರತ್ಯೇಕವಾಗಿ ಮೂರು ಪದ್ಯಗಳಲ್ಲಿ ಕೀರ್ತಿಸಿರುವ ಅತ್ತಮಬ್ಬೆ ಬ್ರಹ್ಮಶಿವನ ವಿಶೇಷಗೌರವಕ್ಕೆ ಪಾತ್ರಳಾದ ವ್ಯಕ್ತಿ. ಆಕೆಯ ಚರಿತ್ರೆಯ ಕಥನದಲ್ಲಿ ಬ್ರಹ್ಮಶಿವನ ಉಲ್ಲೇಖ ತಪ್ಪದೆ ಬರುವಂಥದಾಗಿದೆ.

ಇನ್ನು ಪೂರ್ವಕವಿಸ್ಮರಣೆಯ ವಿಚಾರ. ರಜಕ (ಅಸಗ), ಪಂಪ (ಆದಿಪಂಪ), ಪೊನ್ನ, ರನ್ನ, ಕವಿತಾಗುಣೋದಯ(ಕಾವ್ಯಾವಲೋಕನಕರ್ತೃ ನಾಗವರ್ಮ), ಅಗ್ಗಳ, ನಾಗಚಂದ್ರ, ಬಂಧುವರ್ಮ ಇವರು ಇಲ್ಲಿ ಉಲ್ಲೇಖಗೊಂಡಿದ್ದಾರೆ. ಇವರಲ್ಲಿ ಆತ್ಮೀಯಭಾವದಿಂದ ಸ್ಮೃತನಾಗಿರುವ ‘ಜೀವಸಂಬೋಧನೆ’ಯ ಕವಿ ಬಂಧುವರ್ಮ ಬ್ರಹ್ಮಶಿವನಿಗೆ ತೀರ ಸಮೀಪವರ್ತಿಯೋ ಸಮಕಾಲೀನನೋ ಆಗಿದ್ದಾನೆ; ದರ್ಶನ ಸಂಪನ್ನತೆಯಲ್ಲಿಯೂ ಕವಿತೆಯಲ್ಲಿಯೂ ಪಂಪಾದ್ಯರಿಗೆ ಸದೃಶನಾದವನು ಎಂಬ ಹೆಮ್ಮೆಯ ಅಗ್ಗಳದೇವನು ಆವನಗಿಎ ಗೆಳೆಯನೇ ಆಗಿದ್ದಾನೆ. ( ವಿವರಗಳಿಗೆ ನೋಡಿ: ಕೆ. ಅನಂತರಾಮು, ‘ಕವಿ ಬ್ರಹ್ಮಶಿವ: ಒಂದು ಅಧ್ಯಯನ’, ಮೈಸೂರು, ೧೯೯೧, ಪೂ. ೩೦ – ೪೭)

ಬ್ರಹ್ಮಶಿವನು ಪಂಪಾದ್ಯರಂತೆ ತಾನೂ ಒಬ್ಬ ಮಾರ್ಗಕವಿಯಾಗಿ ಮನ್ನಣೆಗಳಸಿದ್ದನೆಂಬುದನ್ನು ಕೇಶಿರಾಜನ ‘ಶಬ್ದಮಣಿದರ್ಪಣ’ದಲ್ಲಿ ದೊರೆಯುವ ಪ್ರಯೋಗೋದಾಹರಣೆಗಳಿಂದ ತಿಳಿಯಬಹುದಾಗಿದೆ. “ಮಿಱುಗುತ್ತಿರ್ಪ ತ್ರಿಶೂಲ ದಿಂ “ (೬೯ – ೨), “ಅಹಿಂಸಾ ಪರಮೋ ಧರ್ಮವೆಂಬುದನೀ ತತ್ಸವಿತುರ್ವರೇಣ್ಯ ರೞಿದರ್ ತ್ರೈಲೋಕ್ಯಚೂಡಾಮಣೀ” (೮೫ – ೨) ಇವೆರಡೂ ‘ತ್ರೈಲೋಕ್ಯ ಚೂಡಾಮಣಿ ಸ್ತೋತ್ರ’ದ ಪದ್ಯಗಳ (ಪ. ೨೦/೯, ೨೭/೨೦) ಭಾಗಗಳಾಗಿವೆ. ಹೀಗೆಯೇ ‘ಸಮಯಪರೀಕ್ಷೆ’ಯಿಂದೆತ್ತಿದ ಪದಗಳೋ ಪದ್ಯಭಾಗಗಳೋ ಇರುವುದೂ ಸಾಧ್ಯ: ಅದನ್ನು ಎಚ್ಚರಿಕೆಯಿಂದ ಶೋಧಿಸಬೇಕಾಗಿದೆ.

ವಸ್ತುವಿಮರ್ಶೆ:

ಬ್ರಹ್ಮಶಿವನ ‘ಸಮಯಪರೀಕ್ಷೆ’ ಒಂದು ಅಪೂರ್ವರೀತಿಯ ಕೃತಿ. ಜೈನಮಾರ್ಗದಲ್ಲಿ ನಿಶ್ಚಲವಾಗಿ ನಿಂತು, ಅದರ ತಾತ್ತ್ವಿಕ ಹಾಗೂ ಬೌದ್ಧಿಕ ನೆಲೆಗಳನ್ನು ಪೋಷಿಸುವ, ಉಪದೇಶಿಸುವ ಹಾಗೂ ಪ್ರಸಾರಮಾಡುವ ಸಂಕಲ್ಪಕ್ಕೆ ಕವಿ ತನ್ನನ್ನು ಪೂರ್ಣವಾಗಿ ತೆತ್ತುಕೊಂಡಿದ್ದಾನೆ. ತನ್ನ ಕೃತಿ ಒಂದು ‘ರತ್ನಕರಂಡಕ’ವೆಂದೂ ಪರಧರ್ಮೀಯರನ್ನು ದಾರಿಗೆ ತರುವ ಕಾವ್ಯವೆಂದೂ ಹೇಳಿರುವುದನ್ನು ನೋಡಿದರೆ ಇದು ತಿಳಿಯುತ್ತದೆ. ‘ಆಪ್ರಾಗಮಧರ್ಮ’ವನ್ನು, ಎಂದರೆ ಜೈನ ತೀರ್ಥಂಕರರಿಂದ ಪ್ರಣೀತವಾದ ಧರ್ಮವನ್ನು ಸಮುದಾಯವು ಪುರಸ್ಕರಿಸಬೇಕೆಂದೂ ‘ಅನಾಪ್ತಾಗಮ ಕುಧರ್ಮ’ವನ್ನು, ಎಂದರೆ ಜೈನೇತರಗಳಾದ ಮಿಥ್ಯಾಧರ್ಮಗಳನ್ನು, ತಿರಸ್ಕರಿಸಬೇಕೆಂದೂ ಸಯುಕ್ತಿಕವಾಗಿ ಸ್ಥಾಪಿಸುವುದು ಅವನ ಆಶಯವಾಗಿದೆ. ಜೈನಧರ್ಮದಲ್ಲಿರುವವರು ಶ್ರದ್ಧೆ ನಿಷ್ಠೆಗಳಿಂದ ಅದನ್ನು ಅನುಸರಿಸುವುದಾಗಬೇಕು, ಇತರ ಧರ್ಮದವರು ಜೈನಧರ್ಮದ ಮಹಿಮೆಯನ್ನು ಅರಿತು ಒಪ್ಪಿಕೊಂಡು, ತಮ್ಮ ತಮ್ಮ ಧರ್ಮದ ಅಸಾರತೆಯನ್ನು ಅರ್ಥಮಾಡಿಕೊಳ್ಳಬೇಕು ಎಂಬುದಾಗಿ ಸಾರಿಸಾರಿ ಹೇಳಿದ್ದಾನೆ.

ಬ್ರಹ್ಮಶಿವನ ಕಾಲಕ್ಕೆ ವಿಭಿನ್ನ ಶೈವಪಂಥಗಳು ತಮ್ಮ ಒಳ್ಳೆಯ ಅಂಶಗಳನ್ನು ವೀರಶೈವದೊಳಗೆ ಬೆರಸಿ ಅದರ ಉನ್ನತಿಗೆ ಸಹಕಾರಿಯಾದವು. ಆ ಧರ್ಮ ಒಂದು ಸಾಮಾಜಿಕ ಚಳವಳಿಯಾಗಿ ಹಬ್ಬಿ ಜನರನ್ನು ತನ್ನತ್ತ ಸೆಳೆಯತೊಡಗಿತ್ತು. ಗಂಗ ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಒಳ್ಳೆಯ ಪೋಷಣೆ ಪಡೆದಿದ್ದ ಜೈನಧರ್ಮ ಈಗ ಜಾರುವ ದಾರಿಯಲ್ಲಿ ಸಾಗಿ ತನ್ನ ಪ್ರಭಾವವನ್ನು ಕಳೆದುಕೊಳ್ಳತೊಡಗಿತ್ತು. ಪರಿಸ್ಥಿತಿ ಹೀಗಿರುವಾಗ, ಬ್ರಹ್ಮಶಿವ ತನ್ನ ಧರ್ಮದ ಅಗ್ಗಳಿಕೆಯನ್ನು ಎತ್ತಿಹಿಡಿಯುವಲ್ಲಿಯೂ ಅನ್ಯಧರ್ಮಗಳ ದೋಷ ದೌರ್ಬಲ್ಯಗಳನ್ನು ಆವೇಶದಿಂದ ಹೊರಹಾಕುವಲ್ಲಿಯೂ ಮತಪ್ರಸಾರಕನಂತ ಕೆಲಸಮಾಡಿದ್ದಾನೆ. ಶೈವ ವೈಷ್ಣವಗಳೂ ಬೌದ್ಧವೂ ಸೇರಿದಂತೆ ಉಳಿದೆಲ್ಲ ಧರ್ಮಗಳನ್ನೂ ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು, ತಾನು ನಂಬಿ ನಡೆಯುತ್ತಿದ್ದ ಜೈನಧರ್ಮವನ್ನು ತಕ್ಕಡಿಯ ಇನ್ನೊಂದು ತಟ್ಟೆಯಲ್ಲಿಟ್ಟು ತೂಕದಲ್ಲಿ ಜೈನವೇ ಹೆಚ್ಚು ಎನ್ನುವುದನ್ನು ಉದ್ದಕ್ಕೆ ಪ್ರತಿಪಾದಿಸುತ್ತಹೋಗಿದ್ದಾನೆ. ಹೀಗಾಗಿ ಈ ಕೃತಿಗೆ ‘ಸಮಯಪರೀಕ್ಷೆ’ ಎಂಬ ಹೆಸರು ಅನ್ವರ್ಥವಾಗಿದೆ.

ಬ್ರಹ್ಮಶಿವನ ಕೃತಿ ‘ಸಮಯಪರೀಕ್ಷೆ’ ವಿಡಂಬನೆಯ ಮಾಧ್ಯಮದಲ್ಲಿರುವ ಒಂದು ವಾದಗ್ರಂಥ. ಕ್ಷೋಭೆ ಅಸ್ಥಿರತೆ ಪರಿವರ್ತನೆಗಳ ಕಾಲಘಟ್ಟವನ್ನು ಅವನು ಸಮರ್ಥವಾಗಿ ಬಳಸಿಕೊಂಡು ಸ್ವಮತಪ್ರಶಂಸೆ ಅನ್ಯಮತಗರ್ಹಣೆಗಳಿಗೆ ಅದನ್ನು ಸುಸಂಧಿಯಾಗಿ ಮಾಡಿಕೊಂಡಿದ್ದಾನೆ. ತಾನು ಶೈವಕ್ಕೋ ವೀರಶೈವಕ್ಕೋ ಮೊದಲ ಮತಾಂತರವನ್ನು ಪಡೆಯುವಾಗಲೇ ಆ ಮತದ ತತ್ತ್ವಗಳನ್ನೂ ಸಾಹಿತ್ಯವನ್ನೂ ಅವನು ಆಸ್ಥೆಯಿಂದ ಅಭ್ಯಾಸಮಾಡಿರಬೇಕು. ಸ್ವಂತ ಕುತೂಹಲದಿಂದ ಇತರ ಪಂಥಗಳ ಪರಿಚಯವನ್ನೂ ತಕ್ಕಮಟ್ಟಿಗೆ ಮಾಡಿಕೊಂಡಿರಬೇಕು. ಸ್ಥೂಲವಾಗಿ ಹೇಳಬಹುದಾದರೆ, ಷಡ್ದರ್ಶನಗಳ, ಷಣ್ಮತಗಳ ಒಂದು ಸರಳ ಸಾಮಾನ್ಯ ಪರಿಚಯದಿಂದ ವಿವಿಧ ಪಂಥಗಳ ವಿಮರ್ಶೆಯ ಧೈರ್ಯವನ್ನು ಅವನು ಸಂಪಾದಿಸಿರುವಂತಿದೆ. ಆದರೆ ಅವನು ಶುದ್ಧವಾದ ತರ್ಕದ ನೆಲೆಗಟ್ಟಿನ ಮೇಲೆ ನಿಂತು ವಿಚಾರಮಾಡಲು ಹೋಗುವುದಿಲ್ಲ; ಗಹನತತ್ತ್ವಗಳ ಗೋಜಿಗೆ ಹೋಗದೆ ಹಾಸ್ಯ ಅಣಕ ವಿಡಂಬನೆಗಳ ಆಯುಧಗಳನ್ನು ಬಳಸಿ ನಂಬಿಕೆಗಳನ್ನೂ ಆಚರಣೆಗಳನ್ನೂ ಎತ್ತಿಕೊಂಡು ಅಲ್ಲಿ ಕೊಳೆ ಹುಳುಕುಗಳು ಏನು ಕಾಣುತ್ತವೆ ಎಂಬುದನ್ನು ತೋರಿಸಲು ಹೊರಟಿದ್ದಾನೆ. ಆದ್ದರಿಂದ ಅವನ ಟೀಕೆ ಟಿಪ್ಪಣಿಗಳು ಅಸಹನೆಯಿಂದ, ಕೆಲವೊಮ್ಮೆ ಅಸಭ್ಯತೆಯಿಂದ ಕೂಡಿರುತ್ತವೆ; ಕಟುವಾಗಿರುತ್ತವೆ, ಅನುದಾರವಾಗಿರುತ್ತವೆ. ಹೀಗೆ ಮಾಡುವುದರಿಂದ ಜೈನಧರ್ಮೀಯರು ಸ್ವಧರ್ಮಕ್ಕೆ ನಿಷ್ಠರಾಗಿ ನಿಲ್ಲುತ್ತಾರೆ, ಅನ್ಯಧರ್ಮೀಯರೂ ಜೈನಧರ್ಮದ ಕಡೆಗೆ ಹೊರಳುತ್ತಾರೆ ಎಂದು ಅವನು ನಂಬಿದಂತಿದೆ. ತನ್ನ ಉದ್ದೇಶ ಸಾಧನೆಗೆ ಅವನಿಗೆ ಜೈನಧರ್ಮದ ಎಲ್ಲ ನಂಬಿಕೆಗಳೂ ನಡೆವಳಿಕೆಗಳೂ ಒಳ್ಳೆಯವಾಗಿ, ಆದ್ದರಿಂದ ಉಪಾದೇಯವಾಗಿ, ಸಮರ್ಥನಯೋಗ್ಯವಾಗಿ ಕಂಡಿವೆ, ಅನ್ಯಧರ್ಮಗಳ ಎಲ್ಲ ನಂಬಿಕೆಗಳೂ ನಡೆವಳಿಕೆಗಳೂ ಕೆಟ್ಟವಾಗಿ, ಹೇಯವಾಗಿ ತಿರಸ್ಕಾರಯೋಗ್ಯವಾಗಿ ಕಂಡಿವೆ. ಇದು ತಾರ್ಕಿಕವಾಗಿ, ಸಾಮಾಜಿಕವಾಗಿ ಸರಿಯಾದ ನಿಲವೇನೂ ಅಲ್ಲ.

ಬ್ರಹ್ಮಶಿವನು ತನ್ನ ಕೃತಿಯನ್ನು ೧೫ ಅಧಿಕಾರಗಳಲ್ಲಿ ವಿಭಜನೆಮಾಡಿದ್ದಾನೆ. ಅವುಗಳಲ್ಲಿಯ ವಿಷಯನ್ಯಾಸ ಹೀಗಿದೆ:

೧. ಆಪ್ತನ, ಎಂದರೆ ತೀರ್ಥಂಕರನ ಹಿರಿಮೆ, ಲಕ್ಷಣ, ಜಿನಭಕ್ತಿಯ ಪ್ರಯೋಜನ ಇತ್ಯಾದಿ. ೨. ಕಾಲಸ್ವರೂಪ, ಜೈನ ಧರ್ಮದ ಅನಾದಿ ಅನಿಧನ ಸ್ವರೂಪ, ಭರತಕ್ಷೇತ್ರ, ಜೈನತೀರ್ಥಗಳು ಇ. ೩. ಆಗಮಗಳೆಂಬ ಜೈನ ಧಾರ್ಮಿಕ ಸಾಹಿತ್ಯದ ಅತಿಶಯತೆ ಪರಿಣಾಮ, ಜೈನೇತರ ಆಗಮಗಳ ನಿರರ್ಥಕತೆ ಇ. ೪. ರತ್ನತ್ರಯದ ಸ್ವರೂಪ, ಜೀವಾಜೀವಾದಿ ಸಪ್ತತತ್ತ್ವಗಳು ಇ. ೫. ಶ್ರಾವಕರೆಂಬ ಜೈನಧರ್ಮದ ಗೃಹಸ್ಥರ ವ್ರತನಿಯಮಗಳು ಇ. ೬. ಶ್ರಾವಕರ ಉದಾತ್ತವಾದ ನಡೆವಳಿಕೆಗಳ ಕಥನ ಇ. ೭. ಜೈನಮುನಿಗಳ ಆಚರಣೆ, ಅವರ ಹಿರಿಮೆ, ದಾನಗುಣದ ಪ್ರಶಂಸೆ ಇ. ೮. ಜೈನೇತರವಾದ ಪುರಾಣಗಳು, ಶಾಸ್ತ್ರಗಳು, ಗುರುಗಳು, ದೈವಗಳ ಅಸಾರತೆ ಅಯೋಗ್ಯತೆಗಳು ಇ. ೯. ಮೂಢತ್ರಯಗಳಲ್ಲಿ ಒಂದಾಗಿರುವ ದೇವತಾಮೂಢತೆ; ಅದನ್ನು ನಂಬಿ ಉಂಟಾಗುವ ಅನರ್ಥಪರಂಪರೆ ಇ. ೧೦. ಜೈನೇತರವಾದ ಆಗಮಗಳ ಅಸಾರತೆ, ವೈದಿಕಸಂಪ್ರದಾಯದ ಪುರಾಣಗಳು, ರಾಮಾಯಣ ಭಾರತಾದಿಗಳು ಅಗ್ರಾಹ್ಯವೆಂಬ ವಾದ ಇ. ೧೧. ಯಜ್ಞಯಾಗಗಳ, ವೈದಿಕಕಲ್ಪನೆಗಳ, ಆಚಾರಗಳ, ವೇದಗಳು ಅಪೌರುಷೇಯವೆಂಬ ಗ್ರಹಿಕೆಯ ನಿರಸನ ಇ. ೧೨. ಮೂಢತ್ರಯಗಳಲ್ಲಿ ಒಂದಾದ ಲೋಕಮೂಢತೆಯ ಸ್ವರೂಪ, ಜೈನಶ್ರಾವಕರೂ ಇತರರೂ ಆಚರಿಸುವ. ಲೋಕಮೂಢತೆಯ ನಿದರ್ಶನಗಳು ಇ. ೧೩. ಜೈನೇತರರು ಜೈನಧರ್ಮದ ವಿಷಯದಲ್ಲಿ ತೋರುವ ಅಸಹನೆ, ಅದರ ಖಂಡನೆ, ಜೈನಧರ್ಮದ ಹಿರಿಮೆಯ ವರ್ಣನೆ ಇ. ೧೪. ಜೈನೇತರರಾದ ಮಿಥ್ಯಾಧರ್ಮಿಗಳ, ಎಂದರೆ ಕಪಟಸಂನ್ಯಾಸಿಗಳ, ಕೆಟ್ಟ ನಡವಳಿಕೆಗಳು ಇ. ೧೫. ಜೈನಧರ್ಮದ ಶ್ರೇಷ್ಠತೆ, ಸರ್ವಮಾನ್ಯತೆಗಳ ಕಥನ ಇ.

ಈ ಅಧಿಕಾರಗಳಲ್ಲಿ ೨೫೦ ಪದ್ಯಗಳಿರುವ ಅಷ್ಟಮಾಧಿಕಾರ ತುಂಬ ದೊಡ್ಡದು, ೪೯ ಪದ್ಯಗಳಿರುವ ದ್ವಾದಶಾಧಿಕಾರ ತುಂಬ ಚಿಕ್ಕದು. ಅಧಿಕಾರಗಳೊಳಗಿನ ವಿಷಯ ವಿನ್ಯಾಸ ಇನ್ನೂ ಹದವಾಗಿ, ತರ್ಕಬದ್ಧವಾಗಿ, ಪರಿಷ್ಕಾರವಾಗಿ ಇರಬಹುದಾಗಿತ್ತು; ಹೇಳಿದ್ದನ್ನೇ ಬೇರೆ ಬೇರೆ ಮಾತುಗಳಲ್ಲಿ ಮತ್ತೆ ಮತ್ತೆ ಹೇಳುವ, ಗೊತ್ತಾದ ಅಧಿಕಾರದಲ್ಲಿ ಅಲ್ಲದೆ ಬೇರೆ ಅಧಿಕಾರದಲ್ಲಿಯೂ ಸಮಾನಸಂಗತಿಗಳನ್ನು ಆವರ್ತಿಸುವ ಪ್ರಸಂಗಗಳನ್ನು ನಿವಾರಿಸುವುದು ಸಾಧ್ಯವಿತ್ತು.

ಬ್ರಹ್ಮಶಿವನು ತನಗೆ ಬೇಕಾದ, ವಸ್ತುನಿರ್ವಹಣೆಗೆ ಅವಶ್ಯವಾದ ಸಾಮಗ್ರಿಯನ್ನು ಜೈನ ಆಗಮಗಳಿಂದಲೂ ಜಿನಸೇನಾದ್ಯರ ಪುರಣಾಗಳಿಂದಲೂ ಸ್ವೀಕರಿಸಿರುವಂತೆಯೇ ವೈದಿಕಸಾಹಿತ್ಯದ ನಾನಾ ಮೂಲಗಳಿಂದಲೂ ಪುರಾಣಗಳಿಂದಲೂ ಸ್ವೀಕರಿಸಿದ್ದಾನೆ. ವೈದಿಕಪುರಾಣಗಳಿಂದ ವಿಷಯಸಂಗ್ರಹ ಮಾಡಿರುವುದೇ ಹೆಚ್ಚು. ಅಲ್ಲದೆ ಲೋಕಾನುಭವವೂ ಸುತ್ತಲೂ ಸಮಾಜದೊಂದಿಗೆ ಪಡೆದಿದ್ದ ಹಿಂದಿನ ಒಡನಾಟದ ಲಾಭವೂ ಅವನ ನೆರವಿಗೆ ಬಂದಿವೆ. ವಿಶೇಷವಾಗಿ ಅವನು ಬ್ರಾಹ್ಮಣಸಮುದಾಯದ ಯಜ್ಞಯಾಗಗಳನ್ನೂ ಅಲ್ಲಿ ನಡೆಯುವ ಪಶುಬಲಿಯನ್ನೂ ಪ್ರತಿಭಟಿಸಿದ್ದಾನೆ; ಹಾಗೆಯೇ ಸಾಮಾಜಿಕವಾಗಿ ಕೆಳಸ್ತರದ ಜನ ಪೂಜಿಸುವ ಜಂಗುಳಿದೈವಗಳನ್ನೂ ಆಗ ನಡೆಯುವ ಪ್ರಾಣಿಬಲಿಯನ್ನೂ ಖಂಡಿಸಿದ್ದಾನೆ. ಅಹಿಂಸೆಯನ್ನೇ ಪರಮಧರ್ಮವೆಂದು ನಂಬಿರುವ ಜೈನಧರ್ಮದ ಅಗ್ಗಳಿಕೆಯನ್ನು ಆ ಮೂಲಕ ಸಾರುವ ಅವಕಾಶವನ್ನೆಲ್ಲ ಅವನು ತಪ್ಪದೆ ಬಳಸಿದ್ದಾನೆ. ಅವನ ಟೀಕೆ ಟಿಪ್ಪಣಿಗಳು ಸ್ಮೃತಿಗಳ ಪುರಾಣಗಳ ಉಲ್ಲೇಖಗಳನ್ನು ಎತ್ತಿಕೊಟ್ಟು ಖಂಡಿಸುವ ವಿಧಾನವಲ್ಲ; ನೆನಪಿನ ಬಲವನ್ನು ನೆಚ್ಚಿ, ಸಮುದಾಯದಲ್ಲಿ ತೇಲಿಬರುವ ಮಾತುಗಳನ್ನೇ ಅನುವಾದಿಸಿ ಹಗುರವಾಗಿ ಟೀಕಿಸುವ, ಟಿಪ್ಪಣಿ ಬರೆಯುವ ರೀತಿಯದು. ಕೆಲವು ವಿವಗಳೂ ವಿಶ್ಲೇಷಣೆಗಳೂ ಸ್ಫುಟವಾಗಿ, ನಿಖರವಾಗಿ ದಾಖಲಾಗಿರುವುದು ನಿಜ.

ಬ್ರಹ್ಮಶಿವನು ವೈದಿಕಮೂಲದ ವಿವರಗಳನ್ನು ನಿರ್ಲಿಪ್ತತೆಯ ನೆಲೆಯಲ್ಲಿ ಸಾವಧಾನಚಿತ್ತದಿಂದ ಪರಿಭಾವಿಸಿ, ದೋಷ ದೌರ್ಬಲ್ಯಗಳನ್ನು ಗುರುತಿಸದೆ ಇರುವುದೂ ಅವನಿಗೆ ಅವುಗಳ ಬಗೆಗೆ ಇರುವ ದ್ವೇಷ ಅಸಹನೆಗಳು ಕಟುಟೀಕೆಗಳಲ್ಲಿ ಪ್ರಕಟವಾಗುವುದೂ ಒಂದು ರೀತಿಯಲ್ಲಿ ಪಕ್ಷಪಾತದ ದೃಷ್ಟಿ, ಪಾರ್ಶ್ವದೃಷ್ಟಿ ಎಂದೇ ಹೇಳಬೇಕು. ಸ್ಮೃತಿಗಳ ಕಾಲಕ್ರಮ ಇತಿಹಾಸದಲ್ಲಿ ಬೆಳವಣಿಗೆಯುಂಟಾಗಿ ಅಭಿಪ್ರಾಯಭೇದಗಳು ಹೊರಟಿರುವುದನ್ನು ಅವನು ಗುರುತಿಸುವುದಿಲ್ಲ. ಎಂದೋ ನಡೆವಳಿಕೆಯಲ್ಲಿದ್ದು, ತನ್ನ ಕಾಲಕ್ಕೆ ಬಿದ್ದುಹೋಗಿರಬಹುದಾದ ಸಂಗತಿಗಳನ್ನು ತನ್ನ ಕಾಲದಲ್ಲಿ ಇನ್ನೂ ಪ್ರಚಲಿತವಿರುವಂತೆಯೇ ಭಾವಿಸಿ ಆವೇಶದಿಂದ ಖಂಡಿಸಿದ್ದಾನೆ. ಕಲಿಯುಗದ ವರ್ಜ್ಯಗಳೆಂದು ಸ್ಮೃತಿಕಾರರು ಹೇಳುವ (ಪರಾಶರಸ್ಮೃತಿ – ಗೋಭಿಲ, ೪ – ೧೦ – ೨೨ ವ್ಯಾ.) ಯಜ್ಞಾಧಾನ (ಆಶ್ವಾಲಂಭ=ಅಶ್ವಮೇಧ) ಗವಾಲಂಭ (=ಗೋಮೇಧ), ಸಂನ್ಯಾಸ, ಪಲಪೈತೃಕ )ಮಾಂಸದ ಅಡಿಗೆಯೊಂದಿಗೆ ಪ್ರಚಲಿತ ವಿದ್ಯಮಾನಗಳೆಂಬತೆಯೇ ಅವನು ತಿಳಿದು ಖಂಡಿಸಿದ್ದಾನೆ. ಬೇರೆ ಕೆಲವು ವಿದ್ಯಮಾನಗಳೆಂಬಂತೆಯೇ ಅವನು ತಿಳಿದು ಖಂಡಿಸಿದ್ದಾನೆ. ಬೇರೆ ಕೆಲವು ಸ್ಮೃತಿಗಳಲ್ಲಿಯೂ, ಉದಾ.ಗೆ ಯಾಜ್ಞವಲ್ಕ್ಯ ಸ್ಮೃತಿಯಲ್ಲಿ, ಉದಾರವಾದ ಗ್ರಹಿಕೆಗಳು ಬಂದಿವೆ. ಅಲ್ಲದೆ ಪುರಾಣಗಳ ಕಥಾಪ್ರಪಂಚವನ್ನು ಪ್ರತಿಮಾಸೃಷ್ಟಿಗಳಾಗಿ, ಭಾವಸತ್ಯಗಳಾಗಿ ಕಾಣುವ ವಿಶಾಲವಾದ ದೃಷ್ಟಿ ಅವನಿಗೆ ಸಾಧ್ಯವಾಗಿಲ್ಲವಾದ್ದರಿಂದ, ಅವನಲ್ಲಿ ಸಹಾನುಭೂತಿಪರತೆ ಇಲ್ಲವಾಗಿದೆ. ಐತಿಹ್ಯಗಳನ್ನು ಉಲ್ಲೇಖಿಸಿ ಅವನ್ನು ವಾಚ್ಯವಾಗಿ ಅರ್ಥೈಸುತ್ತಾನೆ, ಖಂಡಿಸುತ್ತಾನೆ. ವೈದಿಕಶ್ರದ್ಧೆಯ ಜನಸಾಮಾನ್ಯರು ಅವಕ್ಕೆ ಕೊಡುತ್ತಿರುವ ಅರ್ಥಪರಿವೇಷವೂ ಪೂಜ್ಯಸ್ಥಾನವೂ ಅವನಿಗೆ ಅಸಹನೀಯವಾಗಿ ಕಂಡಿದೆ. ಪುರಾಣಗಳ ಸಂಕೇತಗಳನ್ನೂ ಐತಿಹ್ಯಗಳನ್ನೂ ಮೃದ್‌ವಾಚ್ಯಕವಾಗಿ ಗ್ರಹಿಸಿ, ಹಲವು ಆಭಾಸಗಳಿಗೆ ಎಡೆಮಾಡಿದ್ದಾನೆ.