ಕಂದ

ಶ್ರೀ ಮಹಿಮಾರ್ಣವನುನ್ನತ
ಹೇಮಾಚಳನತ್ಯುದಾರಗುಣ ಸುರಭೂಜಾ
ರಾಮಂ ಜಿನಸಮಯಾಂಬುಧಿ
ಸೋಮಂ ಮಿತ್ರ ಪ್ರಮೋದಕರ ಖಚರೇಶಂ ೧

ಕಳಾಭಾಷಿಣಿ

ಮಿತ್ರನಂ ಕರೆದು ಬೌದ್ಧತಪೋಧನರಾಗಿ ಲೋ
ಕತ್ರಯಂ ಪೊಗಳೆ ಸಂಭ್ರಮದಿಂದವೆ ಪಾಟಳೀ
ಪುತ್ರ ಪಟ್ಟಣದ ದಕ್ಷಿಣಗೋಪುರದಿರ್ಪ ವೈ
ಚಿತ್ರಮಪ್ಪ ಚತುರಾಸ್ಯನಿವಾಸಮನೆಯ್ದಿದರ್ ೨

ಕಂದ

ಆ ನಿಳಯದೊಳಗೆ ಖಚರಮ
ಹೀನಾಥಂ ಪೊಕ್ಕು ಭೇರಿಯಂ ಪೊಯ್ದುಚ್ಚ –
ಸ್ಥಾನದೊಳಿರೆ ಯೀ ಭೇರೀ
ಧ್ವಾನಮಿದೇನೆಂದು ಬಂದರಲ್ಲಿಯ ವಿಪ್ರರ್ ೩

ವಚನ

ಅಂತು ಬಂದಾ ನಿಳಯದೊಳಗಂ ಪೊಕ್ಕು ಸಿಂಹಾಸನದೊಳಿರ್ದ ಬೌದ್ಧರಂ ಕಂಡು ನೀವೀ ಭೇರಿಯಂ ಪೊಯ್ದು ಸಿಂಹಾಸನದೊಳೇಕೆ ಕುಳ್ಳಿರ್ದಿರೆನೆ ವಿನೋದದಿಂ ಭೇರಿಯಂ ಪೊಯ್ದೆವೆಲ್ಲರ್ ಕುಳ್ಳಿರ್ಪ ತಾಣವೆಂದು ಕುಳ್ಳಿರ್ದವೆನೆಯವರೀ ಭೇರಿಯಂ ವಿದ್ವಾಂಸರಾದವರ್ ಪೊಯ್ದು ವಾದಂ ಗೆಲ್ದಲ್ಲದೆ ಸಿಂಹಾಸನದೊಳ್ ಕುಳ್ಳಿರಲ್ಬಾರದೆನೆಯಾದೊಡೆ ಮಾಣಲಿಯೆಂದವರ್ ಸಿಂಹಾಸನದಿಂದಿಳಿದು ಕುಳ್ಳಿರೆ ಮತ್ತಮಿಂತೆಂದರ್

ಕಂದ

ಆರು ಗುರು ನಿಮಗೆ ತಪಮೇಂ
ಕಾರಣವಿದನೆಮಗೆ ಪೇಳಿಮೆಂದೆನೆ ಖಚರ
ಕ್ಷ್ಮಾರಮಣಂ ನಸುನಗುತೆಮ
ಗಾರುಂ ಗುgಲ್‌ಲವೆಂದೊಡವರಿಂತೆಂದರ್ ೪

ಗುರುವಿಲ್ಲದ ತಪಮುರ್ವೀ
ಶ್ವರನಿಲ್ಲದ ದೇಶವಮೃತಕರನಿಲ್ಲದ ಶಾ
ರ್ವರಿ ಬೆಳಸಿಲ್ಲದ ವಸುಮತಿ
ಕರಿಯಿಲ್ಲದ ಸೇನೆಯೊಪ್ಪಲಾರ್ಕುಮೆ ಜಗದೊಳ್ ೫

ವಚನ

ಅಂತುಂ ಗುರುವಿಲ್ಲದಾರುಂ ತಪಂಬಟ್ಟರಿಲ್ಲ ನಿಮಗೇಕೆ ಗುರುವಿಲ್ಲೆಂಬುದಂ ಪೇಳಿಮನೆ ನಾವಂಜುವೆವೆನೆ ಅಂಜಲೇಕೆ ಪೇಳಿಮೆನೆ ಕ್ಷೀರಕಥಾಕಾರಕನನ್ನರ್ ನಿಮ್ಮಸಬೆಯೊಳುಳ್ಳೊಡೆ ಪೇಳಲಂಜುವೆವೆನೆಯಾ ಕಥೆಯೆಂದೆಂದು ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ

ಮತ್ತೇಭವಿಕ್ರೀಡಿತ

ಪರಿದಾಡಲ್ ಪಲವಾಕಳಂ ಕಱೆವನಂ ಭೈತ್ರಂಗಳಿಂದೊಯ್ಯೆ ಸಾ
ಗರದತ್ತಂ ವರನಾಳಿಕೇರವಿಲಸದ್ವೀಪಕ್ಕೆಯಲ್ಲಿರ್ಪತೋ
ಮರನಾ ಧೇನುಗಳಂ ನಿರೀಕ್ಷಿಸಿಯಿದೇನೆಂದೆಂದೊಡೊಲ್ದೀವುವಾ
ದರದಿಂ ಬೇಡೆ ರಸಾಯನಂಗಳನೆನಲ್ ತೋಱಂತದಂ ನೋಡುವಂ ೬

ಕಂದ

ಎನೆ ಪರದನಣ್ಣೆವಾಲಂ
ಕೆನೆಮೊಸರಂ ಸದ್ಯಘೃತಮುಮಂ ತಕ್ರಮುಮಂ
ಮನಮೊಸೆದುಣಲಿಕ್ಕಲ್ ನೆ
ಟ್ಟನೆ ತೋಮರನುಂಡು ತಣಿದು ಮತ್ತಿಂತೆಂದಂ ೭

ನಿನಗಿವನಾರಿತ್ತರ್ ಪೇ
ಳೆನಲೆಮ್ಮ ಕುಲಾಧಿದೇವಿಯಿತ್ತಳೆನಲ್ ನೀ
ನೆನಗೀವುದೆಂದು ಬೇಡಿದ
ಧನಮಂ ಕೊಟ್ಟಾಗಳೊಯ್ದನಾ ಗೋವುಗಳಂ ೮

ವಚನ

ಅಂತೊಯ್ದು ತನ್ನ ಮನೆಯೊಳವನಿರಿಸಿ ಭೋಜನಸಮಯದೊಳ್ ಭಾಂಡಮಂ ತಂದು ತೋಱಿ ರಸಾಯನಮಂ ಕುಡು ಧೇನುವೇಯೆಂದು ಬೇಡಲವು ಮನೋದಿಂದಿರೆ ಯವನೊಂದೆರಡು ಮೂಱು ದಿವಸಂ ಸಂಧಿಸಿ ಬೇಡಿದೊಡುಸಿರದಿರೆ ಆಗೋವುಗಳಂ ನಿಗ್ರಹಂಗೈದು ಅವಱ ಗುಣಮನಱಿಯದೆ ತಗುಳ್ವನದರಿಂದಿಂತೆಂಬುದು

ಶ್ಲೋಕ

ಯೋ ಸದ್ಗುಣಂ ನ ಜಾನಾತಿ ಕಿಂ ಸ ಕರಿಷ್ಯತಿ |

ವಚನ

ಅದಲ್ಲದೆಯುಂ

ಶ್ಲೋಕ

ಗುಣಾ ಗುಣಜ್ಞೇಷು ಗುಣೀ ಭವಂತಿ ಆಜ್ಞೇಷು ದೋಷಾಃ ವಿಪರೀತ ಬುದ್ಧ್ಯಾ |
ಸ್‌ವಾದುತೋಯಾಃ ಪ್ರವಹಂತಿ ನದ್ಯಃ ಸಮುದ್ರಮಾಸಾದ್ಯ ಭವಂತ್ಯ ಪೇಯಾಃ || ೯

ವಚನ

ಇಂತು ಗುಣಿಗಳ ಗುಣವನಱಿಯದವರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಲಮ್ಮೆವೆನೆ ಯಿಂತಪ್ಪವರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಮತ್ತಮಿಂತೆಂದಂ –

ಕಂದ

ಕಡಿದಿರದೆಯಗರುವನಮಂ
ಕಡಿದರ ಕಥೆಯನ್ನರೀ ಸಭಾಮಧ್ಯದೊಳಿರ್ದೊಡೆ ಪೇಳಮ್ಮೆ ವಾವೆಂ
ದೊಡೆಯಾಕಥೆಯೆಂತುಟಱುಪಿ ಕೇಳುವೆವೆಂದರ್ ೧೦

ಎಂದಾ ವಿಪ್ರಜನಂಗ
ಳ್ಗೆಂದಂ ನೀವೇಕಚಿತ್ತದಿಂ ಕೇಳ್ವಡೆಯಾ
ನಂದದೆ ಪೇಳ್ದಪೆನಾಲಿಪು
ದೆಂದುಮನೋವೇಗನವರ್ಗೆ ಪೇಳಲ್ ತಗುಳ್ದಂ ೧೧

ಮಗಧೋರ್ವೀಭಾಗದ ರಾ
ಜಗೃಹಾಖ್ಯಪುರಮುಮಾ ಪುರಕ್ಕಧಿನಾಥಂ
ನೆಗಳ್ದ ಗಜರಥನೆನಿಪ್ಪಂ
ಸೊಗಯಿಸುತಿರೆ ಪಲವುಕಾಲಮರಸಾಗಿರ್ದಂ ೧೨

ವಚನ

ಅಂತಿರಲಾ ಪುರದೊಳೊರ್ವ ಕುಂಡನೆಂಬ ಸುಭಟನಿಪ್ಪನಾತನ ಸತಿ ಹಿರಿಮಾಲೆಯೆಂಬಳವರಿರ್ವರ್ಗಂ ಹರಿಯೆಂಬ ಕುಮಾರಂ ಪುಟ್ಟಿ ಕೆಲವು ದಿವಸಕ್ಕೆ ಯೌವನನಾಗಿ ತನ್ನ ಪಿತನಪ್ಪ ಕುಂಡುಂ ಸಾಯೆ ತಾಂ ವನಾಭ್ಯಾಸಮಂ ಕಲ್ತು ಜಿತಶ್ರಮನಾಗಿ ದಿವಸಕಂ ರಾಜದ್ವಾರಮಂ ಬಂದೋಲೈಸಿ ಪೋಗುತ್ತಿರಲೊಂದುದಿವಸಂ ವೈಹಾಳಿಯಂ ಮಾಡಲೆಂದರಸಂ ಪೊಱಮಟ್ಟು ಪೋಪಾಗಳ್

ಚಂಪಕಮಾಲೆ

ನುಸುಳ್ವ ಪೆಡಂಮಗುಳ್ವ ಹೆಱಮೆಟ್ಟುವ ತಟ್ಟುವ ಮೇಲೆ ಪಾಯ್ವ ಪಂ
ಠಿಸುವ ಕೆಲಕ್ಕೆ ಸಾರ್ವ ಖುರದಿಂ ಪೊಡೆದೆತ್ತುವ ಚಪ್ಪರಿಪ ಸೆ
ಲ್ಲಿಸುವ ತಱುಂಬುವಬ್ಬುಳಿಪ ಬೆರ್ಚುವ ಕರ್ಚುವ ಕೊಂಡು ಪಾಯ್ವ ಕಂ
ಪಿಸುವತಿದುಷ್ಟಮಪ್ಪ ಹಯಮಂ ಕುಡಲುಂ ಪಡೆದೀಯೆ ವಾಹಕಂ ೧೩

ಕಂದ

ಅಂತೀಯಲೊಡನೆ ವಸುಧಾ
ಕಾಂತಂ ಪಿಡಿದೇಱಿಕೊಂಡನಾ ದುಷ್ಟಾಶ್ವಂ
ಸಂತೈಸದೆ ಕೊಂಡೋಡಿತು
ಕಾಂತಾರಕ್ಕಾಗಿ ಪನ್ನೆರಳ್ಗಾವುದಮಂ ೧೪

ವಚನ

ಅಂತುಪೋಗಿ ಬಳಲ್ದು ವಿಂಧ್ಯಾಟವಿಯ ಮಧ್ಯದೊಳ್ ನಿಲೆಯಾ ಹಯದ ಬೊನ್ನೊಳೆ ಹರಿಹರಿದು ಬರೆಯರಸಂ ಕಂಡು ನೀನಾರೆನೆಯಾಂ ನಿನ್ನ ಭೃತ್ಯಂ ನೀವೇನನಾದೊಡಂ ಬೆಸಸಿಮೆಂದು ಪರಿಚಯಮಂ ಮಾಡಿ ವಾಜಿಯಂ ವಶಕ್ಕೆ ತಂದು ಮುಗುಳ್ದು ಬರೆ ಪುರಜನ ಪರಿಜನವೆಲ್ಲವಿದಿರ್ಗೊಂಡು ಪುರಪ್ರವೇಶಮಂಗೆಯ್ದರಮನೆಯೊಳಾಸ್ಥಾನಮಂಟಪ ಮಧ್ಯಸ್ಥಿತ ಸಿಂಹಾಸನಾಸೀನನಾಗಿ ಹರಿಯ ಬೆನ್ನೊಳ್ ಹರಿಹರಿದು ಬಂದುದಕ್ಕೆ ಪಿರಿದುಂ ಮೆಚ್ಚಿ ಪಂಚದಶಗ್ರಾಮಂಗಳಂ ಕೊಳ್ಳೆಂದೊಡೆಮ್ಮ ತಾಯಂ ಬೆಸಗೊಂಡು ಬಂದಪೆನೆಂದು ಮನೆಗೆ ಪೋಗಿ ಬೆಸಗೊಳೆ ತಾಯಿ ಯಿಂತೆಂದಳ್

ಎಲೆ ಮಗನೆ ನಾವೀರ್ವರೆರಡೂರಂ ಮಾಡೆ ಮಿಕ್ಕೂರಂ ಮಾಳ್ಪರಿಲ್ಲವಂತಿಕ್ಕೆ ನಮ್ಮಿರ್ವರ್ಗೆ ತಕ್ಕ ಸುಕ್ಷೇತ್ರಂ ಬೇಡಿಕೊಳ್ಳೆಂದೊಡಂತೆಗೆಯ್ವೆನೆಂದು ಬಂದರಸಂಗಿಂತೆಂದಂ ನಾವಿರ್ವ್ರರೆರಡೂರ ಮಾಡೆ ಮಿಕ್ಕೂರು ಮಾಳ್ಪರಿಲ್ಲದಱಿಂದೆನಗೊಂದು ಸುಕ್ಷೇತ್ರಮಂ ದಯೆಗೆಯ್ವುದೆನೆ ಅರಸನಿಂತೆಂದಂ ದ್ರವ್ಯಾತ್ ಸರ್ವಂ ಭವಿಷ್ಯತಿ ಯೆಂಬುದುಂಟು ವೂರಂ ಮಾಳ್ಪುದೇನಱಿದೆನೆ ಯವನೊಲ್ಲದೆ ಕ್ಷೇತ್ರಮಂ ಬೇಡೆಯರಸಂ ಮತ್ತಮಿಂತೆಂದಂ

ಶ್ಲೋಕ

ಯದ್ಭಾವಂ ತದ್ಭವತಿ ನಿತ್ಯಮಯನ್ನತ್ಯೋಪಿ
ಯತ್ನೇನ ಚಾಪಿ ಮಹತಾ ನ ಭವತ್ಯಭಾವಿ || ೧೫

ವಚನ

ಅದಲ್ಲದೆಯುಂ

ಶ್ಲೋಕ

ಕರತಳಗತಮಪಿನಶ್ಯತಿ ಯಸ್ಯ ತು ಭವಿತವ್ಯತಾ ನಾಸ್ತಿ

ಕಂದ

ಎಂದವನೀನಾಥಂ ಕೃಪೆ
ಯಿಂದಂ ಹರಿಗಗರುವನಮನೀಯಲು ಕರ ಲೇ
ಸೆಂದಾ ಬನಮಂ ಕೈಕೊಂ
ಡೊಂದುಳಿಯದೆ ಕಡಿದು ಭರದಿನಾರಿಸಿ ಸುಟ್ಟಂ ೧೬

ವಚನ

ಅಂತು ಸುಡಲೊಡನರಸನವನಂ ಕಂಡಾನಿತ್ತ ಕ್ಷೇತ್ರಮನೇನಂ ಮಾಡಿದೆಯೆಂದು ಬೆಸಗೊಳಲದನೆಲ್ಲಮಂ ಕಡಿದು ಸುಟ್ಟೆನೆನೆಯರಸಂ ತನ್ನ ಮನದೊಲ್ ಪಿರಿದುಂ ವಿಸ್ಮಯಂಬಟ್ಟಿಂತೆಂದಂ

ಕಂದ

ಆಗಲ್ವೇಡಿರ್ದುದು ತನ
ಗಾಗಪ್ಪುದದೊಲ್ಲೆನೆಂದೊಡಂ ಬೇಕೆನೆ ತಾ
ನಾಗದುದಾಗದದೆಂತನ –
ಲಾಗುಂ ಪೋಗುಂ ಪುರಾರ್ಜಿತಂ ತಪ್ಪುವುದೇ ೧೭

ವಚನ

ಎಂದಾತಂಗೆ ನೀಂ ಸುಟ್ಟ ತಾಣದೊಳೇನಾನುಂ ಬರ್ದುಂಕಿದ ಮರನುಳ್ಳೊಡೆ ಕೊಂಡು ಬಾಯೆನೆ ಯವಂ ಪರಿದೆಯ್ದಿಯರೆಬೆಂದುಳಿದ ಕರಿಗೊಳ್ಳಿಯಂ ತಂದೊಡರಸನಿವಂ ನೀನಂಗಡಿಗೊಯ್ದು ಮಾಜು ಪೋಗೆನೆಯವಂ ಕೊಂಡೊಯ್ದು ಮಾಱೆ ಪಿರಿದುಂ ಪೊನ್ನಾಗೆ ಕಂಡು ಚಿತ್ತದೊಳ್ ಕರಂ ನೊಂದು ಮಲ್ಮಲ ಮಱುಗಿದನೆಂಬ ಹರಿಯ ಕಥೆಯನ್ನವರುಳ್ಳೊಡೆ ಪೇಳಲಮ್ಮೆವೆನೆ ಯಿಂತಪ್ಪರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮನೆ ಮನೋವೇಗಂ ಪೇಳ್ಗುಂ

ಕಂದ

ಕ್ಷಿತಿವಿನುತ ಕರ್ಮಪುರದೊಳ್
ಮತಿಬಂಧುರನೆಂಬ ಸೆಟ್ಟಿಯಾತನ ಸುತಾರಾ
ವತಿ ಬೌದ್ಧಭಕ್ತನೆಮ್ಮಯ
ಪಿತನೋದಿಪರಲ್ಲಿ ಬೌದ್ಧತಾಪಸರೆಮ್ಮಂ ೧೮

ಉತ್ಪಲಮಾಲೆ

ಒಂದುದಿನಂ ಮುಗಿಲ್ ಕವಿದ ಕಾಲದ ವೃಷ್ಟಿ ಸಮಗ್ರವಾಗೆ ಭೋ
ರೆಂದಿರುಳುಂ ಪಗಲ್ ಕಱೆಯೆ ಬೌದ್ಧಗೃಹಂ ನಿಲಬಾರದೆಂದೆನಿ
ಪ್ಪಂದದೆ ಸೋಱೆ ತಪೋಧನರಂ ಬರವಾಱಿಸಲ್ಕೆ ನಾ
ಡೊಂದು ಮಹೀಧರಾಗ್ರಮುಮನೇಱಿಯದಂ ಪಿಡಿದಾರಿಸುತ್ತಿರಲ್ ೧೯

ಆ ಗಿರಿಯಂ ಸೃಗಾಲಯಂಗಳಂ ಪಿಡಿದೊಯ್ಯನೆ ಕಿಳ್ತು ಪೊತ್ತಣಂ
ಬೇಗದೆ ಬಂದು ಪನ್ನೆರಡುಯೋಜನಮಂ ಕಳಿದೊಂದು ತಾಣವಿಂ
ಬಾಗಿರಲಿಟ್ಟೊಡಾ ಮುನಿಯ ಲಾಂಛನ ವಸ್ತ್ರಮನಾಂತು ಬೌದ್ಧರೂ
ಪಾಗಿ ಧರಿತ್ರಿಯಂ ತಿರಿಗಿ ಬಂದೆವಿದೆಮ್ಮ ತಪಕ್ಕೆ ಕಾರಣಂ ೨೦

ವಚನ

ಎನೆ ವಿಪ್ರರಿಂತೆಂದರೀ ರಕ್ತಾಂಬರಧಾರಿಗಳಪ್ಪ ತಾಪಸರ ಮಾತು ವಿಚಿತ್ರವಪ್ಪ ಪುಸಿ ಜಂಬುಕಂಗಳೆರಡೊಂದಾಗಿ ಪರ್ವತಮಂ ಕಿಳ್ತು ಪೊತ್ತು ದ್ವಾದಶಯೋಜನಮಂ ಕೊಂಡು ಪೋಗಿರಿಸಿದವೆಂಬುದೆಂತು ಘಟಿಯಿಸುವುದಿಂತಪ್ಪ ಪುಸಿಯಂ ಕಂಡುಂ ಕೇಳ್ದಮಱಿ ದುದಿಲ್ಲೆನೆಯಿದು ನಿಮ್ಮ ಪುರಾಣದೊಳಿಲ್ಲಾ ಪೇಳಿಮೆನೆ ನಾವಱದುದಿಲ್ಲ ನೀವಱವಿರಪ್ಪೊಡೆ ಪೇಳಿಮೆನೆ ಮನೋವೇಗನಿಂತೆಂದಂ

ಉತ್ಪಲಮಾಲೆ

ಸೀತೆಯನೊಯ್ಯೆ ಲಂಕೆಗೆ ದಶಾನನನಾತನೊಳಾಂತು ಕಾದಿ ಭೂ
ಜಾತೆಯನಾಂ ತರಲ್ ಶರಧಿಯಾ ನೆಱೆ ಪಾಯ್ವುದಶಕ್ಯವೆಂದು ಚಿಂ
ತಾತುರನಾಗಿ ರಾಮನಿರಲಾ ಕಪಿನಾಯಕರೆಂದರದ್ರಿಯಂ
ಸೇತುವನೆಯ್ದೆ ಕಟ್ಟಿ ಕಟಕಂ ನಡೆವಂತಿರೆ ಮಾಳ್ಪೆವಬ್ಧಿಯಂ ೨೧

ಉತ್ಪಮಾಲೆ

ಎಂದು ಕಪಿವ್ರಜಂ ಪರಿದು ಬೆಟ್ಟುಗಳಂ ನೆಱೆ ಕಿಳ್ತು ನೆತ್ತಿಯೊಳ್
ಸಂದಿಸಿ ಮೂಱುನಾಲ್ಕನಡಕಲ್ಗಿರಿಯಾಗಿರೆ ಪೊತ್ತು ಬೇಗದಿಂ
ತಂದು ಸಮುದ್ರಮಂ ಕ್ಷಣೆದ ಕಟ್ಟಿದರೆಂಬುದು ನಿಮ್ಮ ಶಾಸ್ತ್ರದ್
ಸಂದಪುರಾಣದೊಳ್ ಪಡೆದು ಪೇಳ್ವುದು ಸತ್ಯಮೋ ಮೇಣಸತ್ಯಮೋ ೨೨

ಸಂಸ್ಕೃತದ ಗ್ರಂಥ

ಏತೇ ತೇ ಮಮ ಬಾಹವಃ ಸುರಪತೇ ದೋರ್ದಂಡ ಕಂಡೂಹರಾಃ |
ಸೋಹಂ ಸರ್ವಜಗತ್ಪರಾಭವಕರೋ ಲಂಕೇಶ್ವರೋ ರಾವಣಃ ||
ಸೇತುಂ ಬದ್ಧಮಿಮಂ ಶ್ರುಣೋಮಿ ಕಪಿಭಿಃ ಪಶ್ಯಾಮಿ ಲಂಕಾವೃತಾ |
ಜೀವದ್ಭಿಸ್ತು ನ ಪಶ್ಯತೇ ಕಿಮಥವಾ ಕಿಂ ವಾನರಾಶ್ರೂಯತೇ || ೨೩

ವಚನ

ಎಂಬೀ ಎಲ್ಲಮಂ ಮನೋವೇಗಂ ಬೆಸಗೊಳೆ ವಿಪ್ರರಿದು ಸತ್ಯಮೆನೆಯಾದೊಡ ಸತ್ತ್ವಂಗಳಪ್ಪ ವಾನರಂಗಳಡಕಲ್ಗಿರಿಯಂ ಪೊತ್ತೊಂದೆ ಪಲವುಂ ಯೋಜನಮಂ ತರಲಕ್ಕು ಗಡಮಾ ವನಚರಂಗಳಿಂ ಸತ್ತ್ವಮುಳ್ಳ ಜಂಬುಕಂಗಳೆರಡೊಂದಾಗಿ ಯೊಂದುಗಿರಿಯಂ ಪೊತ್ತು ಪನ್ನೆರಡುಯೋಜನವಂ ಪೊತ್ತುತಂದೆವೆಂದೊಡೆಮ್ಮ ನುಡಿಯ ಪುಸಿಮಾಳ್ಪಿರೆನೆಯಾ ವಿಪ್ರರೆಲ್ಲಂ ನಿರುತ್ತರರಾಗಿ ಯಿವರ್ ಕಾರಣಪುರುಷರೆಂದಱಿದು ನೀವು ಜಯವಾದಿಗಳೆಂದು ಜಯಪತ್ರಮಂ ಕುಡೆ ಕೊಂಡು ತಾಮಿರ್ಪುದ್ಯಾನಕ್ಕೆ ಬಂದು ರಮ್ಯಕ್ಷೇತ್ರದೊಳ್ ಕುಳ್ಳಿರೆ ಪವನವೇಗನಿಂತೆಂದಂ

ಉತ್ಪಲಮಾಲೆ

ಖೇಚರನಪ್ಪ ರಾವಣನಿಳಾತ್ಮಜೆಯ ಪಿಡಿದೊಯ್ಯೆ ಲಂಕೆಗಾ
ಭೂಚರ ರಾಮಲಕ್ಷ್ಮಣರಗಾಧ ಪಯೋಧಿಯನೆಂತು ಪಾಯ್ದುರಾ
ತ್ರಿಂಚರ ರಾಜನಂ ರಣದೊಳಾಂತಿಱಿದಿಕ್ಕಿದರೆಂಬ ಭೇದಮಂ
ಸೂಚಿಪುದೆನ್ನೊಳೆಂದೊಡಱಿಪಲ್ ಬಗೆದಂ ಖಚರಾಧಿನಾಯಕಂ ೨೪

ವಚನ

ಅದೆಂತೆಂದೊಡೆ ಭರತಮಹೀಭಾಗದೊಳುತ್ಸರ್ಪಿಣಿಯವಸಪಿ೪ಣಿಯೆಂಬೆರಡುಂ ಸಮಯಂ ಪ್ರವರ್ತಿಸುವವಱೊಳೊಂದಱೊಳ್ ಷಟ್ಕಾಲಂ ವರ್ತಿಸುವಲ್ಲಿಯಾ ಕಾಲಂಗಳ ಪೆಸರಾವುದೆಂದೊಡೆ ಸುಷಮ ಸುಷಮಂ ಸುಷಮ ದುಸ್ಸಮಂ ದುಸ್ಸಮ ಸುಷಮಂ ದುಸ್ಸಮಂ ಅತಿದುಸ್ಸಮಮೆಂಬಿವಱೊಳವಸರ್ಪಿಣಿಯೊಳ್ ವರ್ತಿಸುವ ದುಸ್ಸಮ ಸುಷಮಮೆಂಬ ಚತುರ್ಥಕಾಲದೊಳ್ ತ್ರಿಷಷ್ಟಿ ಪುರುಷರ್ ವರ್ತಿಪರವರವರಾರೆಂದೊಡೆ – ಆದಿ ಅಜಿತ ಸಂಭವ ಅಭಿನಂದನ ಸುಮತಿ ಪದ್ಮಪ್ರಭಾ ಸುಪಾರ್ಶ್ವ ಚಂದ್ರಪ್ರಭಾ ಪುಷ್ಪದಂತ ಶೀತಳ ಶ್ರೇಯಾಂಸ ವಾಸುಪೂಜ್ಯ ವಿಮಳ ಅನಂತ ಧರ್ಮ ಶಾಂತಿ ಕುಂಥು ಅರ ಮಲ್ಲಿಮುನಿಸುವ್ರತ ನಮಿ ನೇಮಿ ಪಾರ್ಶ್ವ ಶ್ರೀವೀರವರ್ಧಮಾನರೆಂಬ ಚತುರ್ವಿಂಶತಿ ತೀರ್ಥಂಕರರೆಲ್ಲರಂ ಮೋಕ್ಷಗಾಮಿಗಳುಂ ಮತ್ತಂ ಭರತಂ ಸಗರಂ ಮಘವಂ ಸನತ್ಕುಮಾರಂ ಶಾಂತಿ ಕುಂಥು ಅರಂ ಸುಭೌಮಂ ಪದ್ಮಂ ಹರಿಷೇಣಂ ಜಯಸೇನಂ ಬ್ರಹ್ಮದತ್ತನೆಂಬ ದ್ವಾದಶಚಕ್ರವರ್ತಿಗಳಿವರೊಳೆಣ್ಬರ್ ಮುಕ್ತಿಯಂ ಪಡೆದರಲ್ಲಿ ಬ್ರಹ್ಮದತ್ತಂ ಸುಭೌಮನೆಂಬಿರ್ಬರುಂ ಸಪ್ತನರಕಕ್ಕಿಳಿದರ್ ಮಘವಂ ಸನತ್ಕುಮಾರನೆಂಬರ್ ಸ್ವರ್ಗಕೈದಿದರ್ ನವ ಬಲದೇವರೆಂದು ವಿಜಯನಬಲಂ ಧರ್ಮಂ ಸುಪ್ರಭಂ ಸುದರ್ಶನಂ ನಂದಿ ನಂದಿಮಿತ್ರಂ ರಾಮಂ ಪದ್ಮನೆಂಬವರ್ ಮುಕ್ತಿಗಾಮಿಗಲುಂ ಅಲ್ಲಿ ಪದ್ಮನೆಂಬಂ ಬ್ರಹ್ಮಕಲ್ಪಕ್ಕೆ ಸಂದಂ ನವವಾಸುದೇವರೆಂದು ತ್ರಿಷಷ್ಟಂ ದ್ವಿಷಷ್ಟಂ ಸ್ವಯಂಭೂ ಪುರುಷೋತ್ತಮಂ ಪುರುಷಸಿಂಹಂ ಪುಂಡರೀಕಂ ದತ್ತಂ ನಾರಾಯಣಂ ಕೃಷ್ಣನೆಂಬವರೊಳಗೊರ್ವಂ ಸಪ್ತ ನರಕಕ್ಕಿಳಿದನೊರ್ವನಾಱನೆಯ ನರಕಕ್ಕಿಳಿದಂ ಒರ್ವನೈದನೆಯ ನರಕಕ್ಕಿಳಿದನೊರ್ವಂ ನಾಲ್ಕನೆಯ ನರಕಕ್ಕಿಳಿದಂ ಕಡೆಯಾತಂ ಮೂಱನೆಯ ನರಕಕ್ಕಿಳಿದಂ ಮತ್ತಮಿವರ್ ದೇವರೆಂದಾರಾಧಿಸುವರ್ ಮತ್ತಂ ನವ ಪ್ರತಿವಾಸುದೇವರೆಂದು ಅಶ್ವ ಗ್ರೀವಂ ತಾರಕಂ ಮೇರಕಂ ಮಧುಕೈಟಭಂ ನಿಶುಂಭಂ ಬಲಿಪ್ರಹರಣಂ ರಾವಣಂ ಜರಾಸಂಧಯಿಂತಿವರೆಲ್ಲಂ ನರಕಗಾಮಿಗಳ್

ಕಂದ

ಪರಿಕಿಸುವಡಿವರ ಭರತೋ
ರ್ವರೆಯೊಳ್ ತತ್ಕಾಲದೊಳ್ ತ್ರಿಷಷ್ಟಿಶಲಾಕಾ
ಪುರುಷರಿವರೆಂದು ರುದ್ರರ್
ಧರೆಯೊಳಗೇಕಾದಶರ್ ನೆಗಳ್ದರ್ ಬಳಿಕಂ ೨೫

ವಚನ

ಅಂತು ನೆಗಳ್ದವರಾರೆಂದೊಡೆ ಭೀಮಾವಳಿ ಜಿತಶತ್ರು ರುದ್ರಂ ವೈಶ್ವಾನರಂ ಸುಪ್ರತಿಷ್ಠಂ ಅಚಲಂ ಪುಂಡರೀಕಂ ಅಜಿತಂಧರಂ ಅಜಿತನಾಭಿ ಪ್ರೇತಾಳಪೀಡಂ ಸಾತ್ವಕೀ ಪುತ್ರನೆಂಬರಿವರ್ ದೇವರೆಂಬ ನಾಮಾಂಕಿತವಾಗಿರ್ದರ್ ದಶಪೂರ್ವಾಧ್ಯಾಯ ಭ್ಯಾಸದೊಳನಂತವಿದ್ಯೆಯಂ ಸಾಧಿಸಿ ವಿಷಯಾತುರದಿಂ ಮಿಥ್ಯಾತ್ವಪ್ರಬಲವಾಗಿ ಸ್ವಚ್ಛಂದವೃತ್ತಿಯಂ ನಡೆದವರೊಳೀರ್ವರ್ ಸಪ್ತಮರ್ ನರಕಕ್ಕಿಳಿದವರೈವರಾಱನೆಯ ನರಕಕ್ಕಿಳಿದರುಳಿದೋರ್ವಂ ತೃತೀಯನರಕಕ್ಕಿಳಿದರಿಂತಿವರ್ ದೇವರೆಂದಾರಾಧನೆಗೆ ಯೋಗ್ಯರಪ್ಪರೆಂದೆಲ್ಲಮಂ ಪೇಳ್ದು ಮತ್ತಮಿಂತೆಂದಂ

ಕಂದ

ವಾನರಕುಲವುದಯಿಸಿತಂ
ದಾನವಕುಲದೊಳ್ ದಶಾನನಂ ಜನಿಯಿಸಿದಂ
ನೀನೇಕಚಿತ್ತದಿಂ ಕೇ
ಳಾನಱಿಪುವೆನರುಹಮತಪುರಾಣಕ್ರಮದಿಂ ೨೬

ವಚನ

ಅದೆಂತೆಂದೊಡೆ

ಕಂದ

ಜಿನನಾಥ ಕಾಲದೊಳ್ ನೆ
ಟ್ಟನೆ ನಾನಾ ಶೋಭೆಯಿಂದೆ ರಾಜಿಪ ಭರತಾ
ವನಿತಳದೊಳಿರ್ಪ ವಿಜಯಾ
ರ್ಧನಗೇಂದ್ರದ ಚಾರು ದಕ್ಷಿಣಶ್ರೇಣಿಯೊಳಂ ೨೭

ಸತತಂ ಸೊಗಯಿಸುತಿರ್ಕುಂ
ರಥನೂಪುರ ಚಕ್ರವಾಳವಾ ಪುರದಧಿಪಂ
ವಿದಿತಯಶಂ ಪೂರ್ಣ ಘನಾ
ಖ್ಯಧರಾಧಿಪನವನ ಸೂನು ತೋಯದವಾಹಂ ೨೮

ವಚನ

ಅಂತಾತನಂ ಭೀಮನೆಂಬ ರಾಕ್ಷಸರ ಬೆಂತರದೇವಂ ಪೂರ್ವಭವಸ್ನೇಹಕಾರಣಂ ಲಂಕಾಪುರಕ್ಕೊಯ್ದಾ ಲಂಕಾಪುರಮಂ ರಾಕ್ಷಸರ ವಿದ್ಯೆಯಂ ನವಮುಖದ ಕಂಠಾಭರಣಮಂ ಕೊಟ್ಟೊಡಂದಿಂದಾ ತೋಯದ ವಾಹಕಕುಲಂ ರಾಕ್ಷಸಕುಲವಾದುದಾ ಕುಲದೊಳನೇಕರುಂ ಪುಟ್ಟಿಜ್ಯಂಗೆಯ್ದು ಪೋದಂದಿಂ ಬಳಿಕಂ ಧವಳಕೀರ್ತಿಯೆಂಬಂ ಪುಟ್ಟಿ ರಾಜ್ಯಂಗೆಯ್ಯುತ್ತಮಿರ್ದಾತಂ ವಿಜಯಾರ್ಧಪರ್ವತದ ದಕ್ಷಿಣಶ್ರೇಣಿಯೊಳ್ ಮೇಘಪುರಾಧಿಪತನತಿ[ೕ] ಂದ್ರನೆಂಬನಾತನ ಮಗಂ ಶ್ರೀಕಂಠನೆಂಬನಾತನ ತಂಗಿ ದೇವಿಲೆಯೆಂಬಳಾಕೆಯಂ ಮದುವೆಯಾಗಿಯಾ ದೇವಿಲೆಯಗ್ರಜನಪ್ಪ ಶ್ರೀಕಂಠಂಗೆ ವಾನರದ್ವೀಪಮಂ ಕುಡೆಯಾ ದ್ವೀಪದೊಳರಸುಗೆಯ್ದಕಾರಣಂ ಶ್ರೀಕಂಠನ ಕುಲಂ ವಾನರಕುಲಮೆಂದಾದುದಾ ರಾವಣಂ ರಾಕ್ಷಸಕುಲದೊಳ್ ಪುಟ್ಟಿದನೆಂದೆಂಬರಾತಂ ನಿಶಾಚರನಲ್ಲ ಸುಗ್ರೀವ ಹನುಮಾದಿಗಳು ಶ್ರೀಕಂಠನ ಕುಲೋದ್ಭವರಾಗಿ ವಾನರಕುಲದೊಳ್ ಪುಟ್ಟಿದರೆಂಬ ಪೆಸರಿಂಗೆ ವಾನರರೆಂಬರ್ ವಾನರರಲ್ಲವರಾಕಾಶಗಾಮಿನೀ ವಿದ್ಯಾಭಾವದಿಂ ಲಂಕೆ ಮೊದಲಾದನೇಕ ದ್ವೀಪಂಗಳ್ಗೆ ಪೋಪ ಸಾಮರ್ಥ್ಯಮುಂಟವರ್ ಸೇತುವಂ ಕಟ್ಟಲ್ ಸಂಬಂಧವಿಲ್ಲೆಂದು ಸ್ವಸಮಯ ಪ್ರಸಿದ್ಧಮಹಾಪುರಾಣೋಕ್ತಿಯಿಂ ರಾಮಾಯಣದೊಳಸುರ ವಾನರಕುಲೋತ್ಪತ್ತಿಯಂ ಸವಿಸ್ತರಂ ತಿಳಿಯಪೇಳ್ದು ಮಿತ್ರನಂ ಸಂತುಷ್ಟನಂ ಮಾಡಿ ಸುಖಸಂಕಥಾವಿನೋದದಿಂದಿರಲಾ ಸಮಯದೊಳ್

ಕಂದ

ಮನವಳುಪಿ ವಾರುಣೀಸೇ
ವನೆಯಂ ಮಾಡಿದೊಡೆ ನರಕವಪ್ಪುದೆನಿಪ್ಪೀ
ಜಿನಮತಮಂ ಮೀಱಿದೊಡಾ
ಯ್ತಿನಂಗಧೋಗತಿಯೆನಲ್ಕಧೋಗತಿಗಿಳಿದಂ ೨೯

ವಚನ

ಅಂತು ನೇಸರ್ಪಡುವುದುಂ ನಿದ್ರಾಮುದ್ರಿತರಾಗಿ ಕಿಱಿದಾನುಂಬೇಗಮಿರೆ ತೀಡುವ ತಂಗಾಳಿಯಂ ಮೊರೆವ ಭೃಂಗಸಂಗತಂಗಳಿಂದುಲಿವರಗಿಳಿಗಳ ಬಳಗದಿಂ ಕುಕಿಲ್ವ ಕಳಕಂಠನಿನಾದದಿಂ ಬಾಱಿಸುವ ದೇವವೇಷದ ಸಂಧ್ಯಾನಕ ಧ್ವಾನದಿಂ ನಿದ್ರೆತಿಳಿದೆಚ್ಚತ್ತು ಜಳಕ ದೇವತಾರ್ಚನೆಯಂ ನಿವ೪ರ್ತಿಸಿ ನಿತ್ಯದಾನಮಂ ಕೊಟ್ಟು ನಿಜಸಖಂ ಬೆರಸು ಕುಳ್ಳಿರ್ದ ಸಮಯದೊಳ್

ಕಂದ

ಮುಗಿದವು ಕುಮುದಂ ದಾನವ
ರಗಿದರ್ ಖಳರುಗಿದರತುಳತಿಮಿರಪ್ರಕರಂ
ಸುಗಿದುದು ತಾರಾವಳಿ ಮೇ
ಲ್ದೆಗೆದುದು ಪೂರ್ವಾದ್ರಿಶಿಖರದೊಳ್ ರವಿಬಿಂಬಂ ೩೦

ವಚನ

ಅಂತು ನೇಸರ್ಮೂಡುವುದುಂ

ಕಂದ

ಸಕಳಕಳಾಗಮಶಾಸ್ತ್ರ
ಪ್ರಕರದಿನಱಿವಂತೆ ಮಿತ್ರನಂ ತಿಲಿಪಿದನೀ
ಸುಕವಿಜನಸೇವ್ಯಂ ಮಾನಂ
ಸುಕರ ಯಶಃಪ್ರಾದ್ವಿಭಾಷಿ ವೃತ್ತವಿಲಾಸಂ ೩೧

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಭೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಪದಂ
ವೃತ್ತ ವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್ ರಾವಣಕುಲೋತ್ಪತ್ತಿ
ವಾಲಿಸುಗ್ರೀವಾದಿ ಕಪಿನಾಯಕರ ಜನನಭೇದ ತ್ರಿಷಷ್ಟಿಶಲಾಕಾಪುರುಷರ
ಕ್ರಮಂ ರಾಮಲಕ್ಷೀಧರರ ಸಾಮರ್ಥ್ಯವರ್ಣನಂ
ಅಷ್ಟಮಾಶ್ವಾಸಂ