ಶ್ರೀ ವಿನಯಾಂಬುಧಿವರ್ಧನ
ಜೈವಾಕೃತನಾಗಮಾದಿ ಶಾಸ್ತ್ರೌಘಕಳಾ
ಕೋವಿದಮನರುಹಾಂಘ್ರಿದ್ವಯ
ಸೇವಕನಬರಚರಾನ್ವಯಾಂಬುಜಮಿತ್ರಂ ೧

ಚಂಪಕಮಾಲೆ

ಪರಮಸುಖಾನ್ವಿತಂ ಹರುಷದಿಂದಿರೆ ವಿಪ್ರಜನಂಗಳೆಲ್ಲರುಂ
ಕರಕಮಲಂಗಳಂ ಮುಗಿದು ನಿಮ್ಮ ಜಿನಾಗಮಶಾಸ್ತ್ರಮಂ ಸವಿ
ಸ್ತತರದೊಳೆ ನಿಷ್ಪ್ರಪಂಚದೆ ನಿರಾಲಸವೃತ್ತಿಯೊಳಂ ಜಲಕ್ಕನಾ
ಗಿರಲಱವಂತೆ ಪೇಳಿಮೆನಲೆಂದನವರ್ಗೆ ಖಗೇಂದ್ರವಲ್ಲಭಂ ೨

ವಚನ

ಸಕಳ ಪದಾರ್ಥಮಂ ಕರತಳಾಮಳಕದಂತೆ ಕಾಣ್ಬ ಸರ್ವಜ್ಞಂ ಪೇಳ್ದಾಗಮಮ ನಾಂ ಕೇಳೆ ನಿಮಗೆಂತಱಿಯಲಕ್ಕುಂ

ಮತ್ತೇಭವಿಕ್ರೀಡಿತ

ಅಕಳಂಕಾಕೃತಿಯಪ್ಪ ನರ್ತಕಿ ಸುರೇಖಾಪ್ರೌಢಿಯಿಂದಾಡಲಂ
ಧಕನೆಂತೀಕ್ಷಿಪನೋಜೆ ರೀತಿ ಗಮಕಂ ರಾಗಾಂಗಮೊಪ್ಪಲ್ಕೆ ಗಾ
ಯಕಿ ಪಾಡಲ್ ಸಲೆ ಕೇಳ್ವನೆಂತು ಬಧಿರಂ ನಾವೊಲ್ದು ಪೇಳಲ್ ಸ್ವಭಾ
ವಕದೋಷಾನ್ವಿತರೆಂತು ಪೇಳ್ ತಿಳಿವರೀ ಸರ್ವಜ್ಞಶಾಸ್ತ್ರೋಕ್ತಿಯಂ ೩

ಕಂದ

ಎಂದೆನೆ ಖೇಚರಭೂಪತಿ
ಗೆಂದರ್ ವಿಪ್ರರ್ ಸ್ವಭಾವದೋಷದ ತೆಱನೇ
ನೆಂದೆಮಗೆ ಪೇಳಿಮೆನಲಾ
ನಂದದೆ ತಿಳಿವಂತೆ ಪೇಳಲುದ್ಯುತನಾದಂ ೪

ಶ್ಲೋಕ

ಮೃತ್ಸಾರಿಣೀ ಮಹಿಷ ಹಂಸ ಸ್ವಭಾವಾಃ ಮಾರ್ಜಾರಕಂ
ಕಮಸ್ವಕಾಶ ಜಳೂಕ ಸಾಮ್ಯಃ ಸಚ್ಛಿದ್ರಕುಂಭಪಶು ಸರ್ಪ
ಶಿಲೋಪಮಾನಾಂತೇ ಶ್ರಾವಕಾ ಭುವಿ ಚತುರ್ದಶಧಾ ಭವಂತಿ ೫

ವಚನ

ಅದೆಂತೆನೆ

ಚಂಪಕಮಾಲೆ

ಉದಕದ ಸಂಗದಿಂದೆ ಮೃದುವಪ್ಪುದು ಮಣ್ ಬಿಸಿಲಿಂದೆ ಬೆಟ್ಟಿತ
ಪ್ಪುದು ನರರೊಳ್ ಕೆಲವಂಬರದಱಂದದೆ ಧಾರ್ಮಿಕರೊ೧ಳ್ ಸಮಂತು ನೋ
ಡಿದೊಡತಿ ಧಾರ್ಮಿಕರ್ ಪಿರಿದು ಪಾಪಿಗಳೊಳ್ ನೆಲಸಲ್ಕ ಪಾಪಸಂ
ಪದರೆನಿಸಿರ್ಪರೀ ನೆಗಳ್ದ ದೋಷಮಿವರ್ಗಿನಿತುಂ ಸ್ವಭಾವಕಂ ೬

ಉತ್ಪಲಮಾಲೆ

ಸಾರಣೆಧಾರೆವಟ್ಟಲಿವು ಸಾರಸವಸ್ತುವನೆಯ್ದೆ ಬಿಟ್ಟು ನಿ
ಸ್ಸಾರಮನಾಂಪುವಾ ತೆಱದೆ ಮಾನವರೊಳ್ ಕೆಲಬರ್ ದಯಾನ್ವಿತಾ
ಚಾರದ ಧರ್ಮಮಂ ಪಿಡಿಯದೀ ಪಶುಯಾಗದ ಪಾಪಧರ್ಮಮಂ
ಸಾರಮಿದೆಂದು ತಾಳ್ದುವರವರ್ಗಳ ದೋಷಗುಣಂ ಸ್ವಭಾವಕಂ ೭

ಮಹಾಸ್ರಗ್ಧರೆ

ಕೊಳದೊಳ್ ನೀರುಣ್ಣದಡ್ಡಂಗೆಡೆದು ಕಲಕುತುಂ ಗೋತ್ರಮಂ ಪೊಯ್ದು ಜೀವಂ
ಗಳನೊಂದಂ ನೀರುಣಲ್ ಪೊರ್ದಿಸದೆ ಮಲೆತು ಕೊಂಡಾಡಿಸುತ್ತಿರ್ಪ ಕೋಣಂ
ಗಳವೊಲ್ ಮರ್ತ್ಯರ್ ಕೆಲರ್ ನಿರ್ಮಳಜಿನಮತಮಂ ಕೇಳ್ದುಮತ್ತಂ ಕುಮಾರ್ಗಂ
ಗಳ ಮಿಥ್ಯಾಶಾಸ್ತ್ರದಿಂ ಧಾರ್ಮಿಕ ಮನಮನೆಂತುಂ ಕಲಂಕ್‌ತಮಿರ್ಪರ್ ೮

ಕಂದ

ನೀರಂ ಪಾಲಂ ಬೆರಸಲ್
ನೀರಂ ಸಿತಪಕ್ಷನುಳಿಪಿ ಪಾಲಂ ಕುಡಿವಂ
ತಾರಯ್ಯೆ ಕೆಲರ್ ನರರಾ
ಚಾರದ ಧರ್ಮವನೆ ತಾಳ್ದಧರ್ಮಮನುಳಿವರ್ ೯

ಮಹಾಸ್ರಗ್ಧರೆ

ಗಿಳಿಯುಕ್ತಾಯುಕ್ತಿಯಂ ಮೇಣಿ ತಿಳಿಯಲಱಿವುದೇ ಮುನ್ನಮೆಂತೋದಿದಂತೇ
ಗಳಪುತ್ತಿರ್ಕುಮಂ ಮನುಷಯರ್ ಕೆಲಬರದಱವೊಲ್ ನಾಡೆಯುಂ ಸರ್ವಧರ್ಮಂ
ಗಳ ಸಾರಾಸಾರಮಂ ಬಲ್ಲರ ಬಗೆಯಱಿದಾರಯ್ದು ಕೇಳ್ವನ್ನರಲ್ಲ
ಲ್ಲಿಳೆಯೊಳ್ ಮುಂಕೂರ್ತು ಕೈಕೊಂಡದಱುಳೆ ಕಳಿವರ್ ಕಾಲಮಂ ದುರ್ವಿವೇಕರ್ ೧೦

ಮಹಾಸ್ರಗ್ಧರೆ

ಮನೆಯೊಳ್ ಪಾಲುಂಡು ನಿಶ್ಚಿಂತದೆ ಬಳೆದು ಕರಂ ಸಾಧುವಾಗಿರ್ದ ಟಾವಿಂ
ದೆನಿಸುವಂ ಬೆಕ್ಕತ್ತಲಿತ್ತಲ್ ಮಿಡುಕದೆ ಪಲವುಂ ಪ್ರಾಣಿಯಂ ಕಾಣುತುಂ ನೆ
ಟ್ಟನೆ ನುಂಗುತ್ತಿರ್ಕುಮಿಂತೀ ನರರರೊಳೆ ಕೆಲಬರ್ ಧರ್ಮಮಂ ಕೇಳುತುಂ ಸ
ಜ್ಜನರೊಳ್ ಬರ್ದುಂ ಬಳಿಕ್ಕಂ ಬಿಡುವರೆ ಕೊಲೆಯಂ ಕ್ರೂರಮಂ ಕಷ್ಟಚಿತ್ತರ್ ೧೧

ಮತ್ತೇಭವಿಕ್ರೀಡಿತ

ತಲೆಯೊಳ್ ತೀವಿದ ಹೇನುಸೀರ್ಮಣಕನೆಂತುಂ ಬಾರ್ಚಿ ತಾಂ ತಾಳ್ದಿಯಾ
ತಲೆಯಂ ನಿರ್ಮಳಮಪ್ಪಿನಂ ಪಣಿಗೆಮಾಳ್ಕುಂ ಮತ್ತಮಾ ಮಾಳ್ಕೆಯೊಳ್
ಕೆಲಬರ್ ಮಾನವರನ್ಯರಂ ವ್ರತಸುಶೀಲಾಚಾರಮಂ ಪೇಳ್ದು ನಿ
ರ್ಮಳರಂ ಮಾಡುವರಾತ್ಮದೋಷದಳಿವಂ ಮಾಡಲ್ಕದೇಂ ಬಲ್ಲರೇ ೧೨

ಚಂಪಕಮಾಲೆ

ಎಱಗವು ಮಕ್ಷಿಕಂ ಕುಸುಮ ಧೂಪ ಜವಾದಿ ಸುಗುಂಧ ವಸ್ತುವಿಂ
ಗೆಱಗುವವೋಲಮೇಧ್ಯದವಗಂಧದ ಪೂತ ಪಡುಂಕೆಯತ್ತಲಾ
ತೆಱದೆ ಸುಭವ್ಯರಂ ಋಷಿಯರಂ ನೆಱೆ ಸಾರದೆ ಸಾರ್ವರರ್ತಿಯಿಂ
ಕಱುಬರನಜ್ಞರು ಖಳರನನ್ಯರವಧೂತರಂ ಕೆಲರ್ ನರರ್ ೧೩

ಮಹಾಸ್ರಗ್ಧರೆ

ನಿಜದಿಂದಂ ಪಿಂಡುಗೂಡಿರ್ದೆಲೆ ತೃಣಗಣಮಂ ಮೇದು ಸತ್ಪಾನಮಂ ಪೀ
ರ್ದಜಪೋತಂ ಲೀಲೆಯಿಂದಂ ನಲಿವವೊಲರೆಬರ್ ಮಾನಸರ್ ಕೂರ್ಮೆಯಿಂದಂ
ಸಂಜನಬ್ರಾತಂಗಳಂ ಧಾರ್ಮ್ರಿಕರನಧಿಕರಂ ಕೂಡಿ ಸದ್ಧರ್ಮಮಂ ಕೇ
ಳ್ದು ಜಸಂಬೆತ್ತಿರ್ದ ಧರ್ಮಾಮೃತದೊಳೆ ತಣಿವರ್ ಸಂತತಂ ಸ್ವೇಚ್ಛೆಯಿಂದಂ ೧೪

ಚಂಪಕಮಾಲೆ

ಪಿಡಿಯದು ದೋಷಮಿಲ್ಲದತಿ ನಿರ್ಮಳಮಪ್ಪೆಡೆಯಂ ಜಲೂಕನೋ
ಗಡಿಸದೆ ಬಾಹುತರ್ದು ತುಱಿಯುಳ್ಳತಿದೋಷದ ತಾಣಮಂ ಕರಂ
ಪಿಡಿವುದು ಮರ್ತ್ಯರೊಳ್ ಕೆಲಬರಾ ತೆಱದಿಂದಮೆ ದಾನಧರ್ಮಮಂ
ಪಿಡಿಯದೆ ಸಂತತಂ ಪಿಡಿವರಬ್ರತಮಂ ಪುಸಿಯಂ ವಿಕರ್ಮಮಂ ೧೫

ಕಂದ

ಒಡೆದ ಕೊಡದೊಳಗೆ ನೀರ್ವೋ
ಯ್ಡೊಡದೆಂತುಂ ನಿಲ್ಲದಂತೆ ಕೆಲಬರ್ ನರರೊಳ್
ಪಡಿಮಾತೇಂ ನಿಲ್ಲವು ತಾ
ಳ್ದೊಡಮೇಂ ವ್ರತಸುಗುಣಶೀಲ ಚಾರುಚರಿತ್ರಂ ೧೬

ಮಹಾಸ್ರಗ್ಧರೆ

ಪಸು ಪಿಂಡಿಂ ಮುಂತೆ ನೀರುಳ್ಳೆಡೆಗೆ ಪರಿದು ನೀರುಂಡು ಬಂದೇಱಿಯೊಳ್‌ನಿಂ
ದು ಸಮಂತೆಯ್ತರ್ಪ ಗೋವಂ ಕರೆದುದಕಮುಮಂ ತೋಱುವಂತುತ್ತಮರ್‌ಸಂ
ತಸದಿಂದಾಚಾರ‍್ಯರಿಂದಾಗಮಮನೊಲವಿನಿಂ ಕೇಳ್ದು ತಾನೋದಿಯುಂ ಮಿ
ತ್ರಸಮೂಹಕ್ಕೊಲ್ದು ಧರ್ಮಾಮೃತದೊಳೆ ತಣಿವ ಮಾಳ್ಪುದಾನಂದದಿಂದಂ ೧೭

ಕಂದ

ಅನವರತಂ ಫಣಿಪಂ ಪಾ
ಲನೆ ಕುಡಿದುಂ ಬಿಡದು ವಿಷಮನಾ ತೆಱದೆ ಕೆಲರ್
ಮನುಜರ್ ಭವ್ಯರೊಳಂ ಋಷಿ
ಜನದೊಳ್ ಕಲ್ತೋದಿ ಕುಟಿಲವೃತ್ತಿಯನುಳಿಯರ್ ೧೮

ಪಲಕಾಲಂ ನೀರೊಳಗಿರೆ
ಶಿಲೆ ಮೆಲ್ಲಿತ್ತಾಗಲಱಿಯದಾ ತೆಱದೆ ನರರ್
ಕೆಲಬರ್ ಸದ್ದೃಷ್ಟಿಗಳೊಳ್
ಬೆಳೆದುಂ ಪಾಪಮನೆ ತೊಱುಯರೊಳ್ಪಂ ಮೆಱೆಯರ್ ೧೯

ಬಿತ್ತರಿಪುದಿಂತು ಮನುಜರ
ಚಿತ್ತಂ ಪದಿನಾಲ್ಕು ಭೇದಮದು ನಾಲ್ಕು ತೆಱಂ
ಬೆತ್ತಿರ್ಪುದೆಂತೆನಲ್ ಕೇ
ಳುತ್ತಮ ಮಧ್ಯಮ ಕನಿಷ್ಠವಧಿಕಕನಿಷ್ಠಂ ೨೦

ವಚನ

ಎಂದೀ ಪದಿನಾಲ್ಕರೊಳಾಡಿನ ಹಂಸೆಯ ಪಸುವನ್ನರುತ್ತಮರೊಡೆದ ಕೊಡದ ಶುಕದ ಕಲ್ಲಮಣ್ಣಂದದವರ್ ಮಧ್ಯಮರ್ ಕೋಣನ ನೊಣವಿನ ಸರೆಯನ್ನರ್ ಕನಿಷ್ಠರ್ ಉರಗನ ಬೆಕ್ಕಿನ ಪಣಿಗೆಯ ಜಿಗುಳೆಯನ್ನರ್ ನಿಕೃಷ್ಟರಿಂತೀ ತೆಱನವರೆಲ್ಲಂ ಬೆರಸಿಕೊಂಡಿರ್ಪ ಕಾರಣಂ ಧರ್ಮಸ್ವರೂಪಮಂ ಪೇಳ ಮುನ್ನಮವರ ಮನದ ಪರಿಣಾಮಮಂ ತಿಳಿದು ನೋಡಲವನಱಿಪುವುದುಂ ಅಱಿಪಿದೊಡವರ್ ತಮ್ಮ ಪರಿಣಾಮವನಱಿದರೀ ತೆಱದ ಮನದವರೆಂದು ತಮ್ಮೊಳ್ ತಾಮೆ ತಿಳಿದು ಪೊಲ್ಲಮನಳಿದೊಳ್ಪಂ ತಳೆವರೆಂದು ಮಾನಸವೇಗಂ ಪೇಳೆಯಾ ಭೂಸುರರೆಲ್ಲಂ ಹರ್ಷಚಿತ್ತರಾಗಿ ನೀಂ ಪೇಳ್ವ ಧರ್ಮಮಂ ಪೇಳಿಮನೆನೆ ಮಾನಸವೇಗಂ ಪೇಳ್ಗುಂ

ಚಂಪಕಮಾಲೆ

ಪರಸಮಯಂಗಳೆಲ್ಲವಱಸಾರತೆಯಂ ವರಧರ್ಮಮಂ ನಿರಂ
ತರದೊಳೆ ಕೇಳ್ವರೊಂದು ಪರಿಣಾಮತೆಯಂ ಕಿಱಿದಾಗಿ ಪೇಳ್ದು ನಿ
ರ್ಜರ ನರ ಕಿನ್ನರೋರಗ ವಿನೂತ ಪದದ್ವಯನಪ್ಪ ಸಜ್ಜಿನೇ
ಶ್ವರಮತಮಂ ಸವಿಸ್ತರದೆ ಪೇಳ್ದಪೆನಾ ನೆಱೆ ಕೇಳ್ವುದೆಲ್ಲರುಂ ೨೧

ವಚನ

ಅದೆಂತೆನೆ ಭವ್ಯನುಮಭವ್ಯನುಮೆಂದೀ ತೆಱನಲ್ಲಿಯಾಸನ್ನಭವ್ಯಂ ದೂರಭವ್ಯನೆಂದಕ್ಕು ಮಭವ್ಯನುಮಮಂದಷಾಣಮುಮಂ ಭವ್ಯಂ ಸುವರ್ಣಪಾಷಾಣಮುಮಂ ಪೋಲ್ತಿರ್ಪರಲ್ಲಿ ಭವ್ಯನಪ್ಪವಂ ಧರ್ಮಾಧರ್ಮಂಗಳಂ ಪೋಲ್ತಿರ್ಪರಲ್ಲಿ ಮನುಷ್ಯಂ ಧರ್ಮಾ ಧರ್ಮಂಗಳಂ ವಿಚಾರಿಸಿ ಪರೀಕ್ಷಿಸಿ ಕೈಕೊಳ್ವುದದೆಂತೆನೆ

ಶ್ಲೋಕ

ಪೀತಂ ವರ್ಣೇ ಸಿತಂ ಛೇದೇ | ನಿಘರ್ಷೇ ಕುಂಕುಮಪ್ರಭಂ ||
ಸ್ನಿಗ್ಧಂ ಗುರು ಮೃದುತ್ವಂ ಚ | ಷಡೇತತ್ ಸ್ವರ್ಣಲಕ್ಷಣಂ || ೨೨

ವಚನ

ಅಂತು ಪಲವುಂ ಪ್ರಕಾರದಿಂ ಸುವರ್ಣಮಂ ಪರೀಕ್ಷಿಸಿಕೊಳ್ವಂತೆ ಧರ್ಮಮಂ ಪರೀಕ್ಷಿಸಿ ಕೈಕೊಳ್ವುದು ಬಳಿಕ ಮೂಢತ್ರಯಮನುಳಿವುದಾ ಮೂಢತ್ರಯವಾವುವೆಂದೊಡೆ ಲೋಕಮೂಢ ಸಮಯಮೂಢ ದೇವತಾಮೂಢಂಗಳೆಂಬವಕ್ಕುಮವು ಕರ್ಮಬಂಧ ಕಾರಣದಿಂ ಮನುಜರ ಮನದಿಂದಗಲವಾ ಲೋಕಮೂಢವೆಂತೆಂದೊಡೆ –

ಮಾಳಾವೃತ್ತ

ಶರಧಿ ನದಿ ಬಾವಿ ಸತ್ಸರಸಿಯೊಳ್ ಮೀಯೆ ಕಮ್ಮರಿಗಳಂ ಪಾಯೆ ಕಿಚ್ಚಂ ಪುಗಲಘವ್ರಜಂ
ಪರಿಹರಿಪುದೆಂಬುದಂ ಭರದೆ ಯಾಗಕ್ಕೆ ಕೊಲ್ವುದದು ಸದ್ಧರ್ಮವೆಂದೋದಿ ನೆಱೆ ಪೇಳ್ವುದುಂ
ಸುರೆ ಮಧು ಸುಮಾಂಸದಿಂದರಿಸುವರ್ ತುಷ್ಟಿಯಂ ಪರಿದೆನಲ್ ಜನ್ನದಿಂದಾ ಬಹಳ ಪಕ್ಷದಿಂ
ಸುರತತಿ ಪಿತೃವ್ರಜಂ ನಿರುತವೆಂದೆಂದು ಪೇಳ್ವರ ಗುಣಂ ಲೋಕಮೂಢಂ ತಿಳಿಗೆ ನಿಶ್ಚಯಂ ೨೩

ಚಂಪಕಮಾಲೆ

ಹೂಸಿದ ಬೂದಿ ತೊಟ್ಟಮಣಿ ಯುಟ್ಟ ತೊವಲ್ ತಳಿರ್ಗಾಸೆ ಲಾಕುಳಂ
ಬಾಸಣಿಸಿರ್ದ ಜಾದುಮಸಿಯಸ್ಥಿಯಮಾಲೆಯನಿಕ್ಕಿಕೊಂಡು ದು
ರ್ವೇಷದೊಳಿರ್ಪರಂ ಸಮಯಿಯೆಂದು ತಪಸ್ವಿಗಳೆಂದು ನಾಡೆ ಸಂ
ತೋಷದೆ ಕಾಣ್ಬುದೇ ಸಮಯಮೂಢತೆಯೆಂಬುದು ವಿಶ್ವಧಾತ್ರಿಯೊಳ್ ೨೪

ದಡ್ಡಕ್ಕರ

ಪವು ದೇಹಂಗಳಂ ಪಲವು ಪಾದಂಗಳಂ ಪಲವು ವಕ್ತ್ರಂಗಳಂ ಪಲವು ನೇತ್ರಂಗಳಂ
ಪಲವು ಹಸ್ತಂಗಳಂ ಪಲವು ಶಸ್ತ್ರಂಗಳಂ ಪಲವುಮಾಕಾರಮಂ ಪಲವಳಂಕಾರಮಂ
ನಲವಿನಿಂ ತಾಳ್ದನಂ ಪಲಬರಂ ತೂಳ್ದನಂ ಕೆಲಬರಾಳಾದನಂ ಕೆಲಬರಂಕಾದನಂ
ಲಲನೆಯರ್ಗೋತನಂ ಪಲಬರೊಳ್ ಸೋತನಂ ಪಲಬರಂ ಮಾಳ್ಪನಂ ಕೆಲಬರಂ ನೋಳ್ಪನಂ ೨೫

ಪರಿಕಿಸದೆ ದೇವನೆಂದಾ
ದರದಿಂದೆಱಗುವುದೆ ದೇವತಾಮೂಢತ್ವಂ ೨೬

ವಚನ

ಅದಲ್ಲದಿನ್ನು ದೇವನೆಂತಪ್ಪನೆಂದೊಡೆ ಮತಿ ಶ್ರುತಾವಧಿಯೆಂಬ ತ್ರಿಜ್ಞಾನಮಂ ತಳೆದು ಮಧ್ಯಮಲೋಕಕ್ಕವತರಿಸಲೊಡಂ ಗರ್ಭಾವತರಣ ಜನ್ಮಾಭಿಷೇಕಾನಂತರಂ ದೀಕ್ಷೆಯಂ ಕೈಕೊಂಡುತ್ತಮ ಕ್ಷಮಾರ್ದವಾರ್ಜನ ಸತ್ಯ ಶೌಚ ಸಂಯಮ ತಪಸ್ತ್ಯಾಗಾಕಿಂಚನ್ಯ ಬ್ರಹ್ಮ ಚರ‍್ಯಮೆಂಬ ಪತ್ತುಂ ತೆಱದ ಧರ್ಮಂಗಳೊಳಂ ನೆಗಳ್ದು ಪರೀಷಹಂಗಳಂ ಗೆಲ್ದಿರ್ದು –

ಮತ್ತೇಭವಿಕ್ರೀಡಿತ

ಗಣನಾತೀತ ಸಮಗ್ರರಾಜ್ಯಪದಮಂ ಭೋಗೋಪಭೋಗಕ್ಕೆ ಕಾ
ರಣಮಪ್ಪ ಕರಿ ವಾಜಿ ಸ್ಯಂದನಮುಮಂ ಶ್ರೀಗಂಧಮಾಲ್ಯಾಂಗಭೂ
ಷಣ ವಸ್ತ್ರಾದಿಸಮಸ್ತಮಂ ಬಯಸಿ ಚಿಂತಾಚೇತನಾಗಿರ್ಪದು
ರ್ಗುಣಮುಂ ಭಾವಿಸೆಯುತ್ತಮರ್ ತಿಳಿವರಾರ್ತಧ್ಯಾನಮೆಂದೆಂಬುದಂ ೨೭

ಕೊಱೆದೀಡಾಡುವ ಸೀಲ್ವ ಖಂಡಿಸುವ ಕೊಯ್ದೊಟ್ಟೊಟ್ಟುವೆತ್ತೆತ್ತಿಪಾ
ಸಱೆಯೊಳ್ ಪೊಯ್ದು ಕಟಾರದಿಂದಿಱಿವ ನಾನಾ ಕೈದುವಿಂ ತತ್ತಱಂ
ದಱಿವೀ ಪ್ರಾಣಿಗಳಂ ಕೊಲಲ್ ಬಯಸುತಿರ್ಪೀ ಚಿತ್ತಮಂನಾಡೆ ನೀ
ನಱಿ ಪಾಪಂಗಳ ತಾಣವೆಂದೆನಿಪ ರೌದ್ರಧ್ಯಾನವೆಂದೆಂಬುದಂ ೨೮

ವಚನ

ಇಂತಪ್ಪಾರ್ತ ರೌದ್ರಧ್ಯಾನಂಗಳಂ ಪರಿಹರಿಸಿ ಜಿನೇಂದ್ರವ್ರತಭಾವನೆಗಳಿಂ ದುರಿತಕುಳಮಂ ಕಟ್ಟುಬಿಡುವ ಪರಿಣಾಮತೆಯಂ ಪಂಚೇಂದ್ರಿಯ ವಿಷಯಂಗಳನುಪಶಮಿಸುವ ಭೇದಮಂ ಸಕಲಜೀವಂಗಳೊಳ್ ಮೈತ್ರೀ ಮೋದಕಾರುಣ್ಯ ಮಾಧ್ಯಸ್ಥಮಪ್ಪ ಭಾವನೆಗಳೆಂಬಿವೆಲ್ಲಂ ಧರ್ಮಧ್ಯಾನಂಗಳಕ್ಕುಂ

ಕಂದ

ಅಗಲ್ದಿಂದ್ರಿಯವಿಷಯಂಗಳಿ
ನಗಲದೆ ಕರಣಂಗಳಂ ವಶಂ ಮಾಡಿ ನಿಜಂ
ಮಿಗೆ ಸಂಕಲ್ಪ ವಿಕಲ್ಪದಿ
ನಗಲ್ದಾತ್ಮ ಧ್ಯಾನಮದುವೆ ಶುಕ್ಲಧ್ಯಾನಂ ೨೯

ವಚನ

ಇಂತಪ್ಪ ಧರ್ಮಧ್ಯಾನಮನವಿಚಳಮಪ್ಪ ನಿಲವಿಂ ನಿಂದು ತ್ರಿಕರಣಮಂ ತನ್ನೊಳ್ ಮಡಂಗಿಯುಚ್ಛ್ವಾಸ ನಿಶ್ವಾಸಮಂ ಮಂದಮಂದಮಂ ಮಾಡಿ ನಾಸಾಗ್ರದೊಳೆ ನೇತ್ರಂಗಳು ನಿಲಿಸಿ ಮನಮಂ ಭ್ರೂಯುಗಮಧ್ಯದೊಳ್ ತಾಳ್ದಿಯಂತರಂಗ ಬಹಿರಂಗ ಜಲ್ಪದಿಂ ತೊಲಗಿಸಿಯಾ ಶುಕ್ಲಧ್ಯಾನಮಂ ಧ್ಯಾನಿಸಿ ಜ್ಞಾನಾವರ್ಣಾದಿ ಘಾತಿಕರ್ಮಂಗಳಂ ಕಿಡಿಸಿ ಕೇವಲಜ್ಞಾನಮಂ ಪಡೆದು ಚತುರ್ನಿಕಾಯದೇವರಿಂ ಸೌರ್ಧರ್ಮೇಂದ್ರದೇವರಿಂ ವಂದಿತ ಚರಣಾರವಿಂದನಾಗಿ ಚತುಸ್ತ್ರಿಂಶದತಿಶಯಮಂ ಪಡೆದು ಸಕಳರತ್ನಖಚಿತ ಕನಕಮಯಮಪ್ಪ ಧನದನಿರ್ಮಿತ ಸಮವಸರಣ ಮಧ್ಯದೊಳ್ ದ್ವಾದಶಗಣಪರಿವೃತನಾಗಿ

ಮಹಾಸ್ರಗ್ಧರೆ

ಸುರಭೂಜಂ ಚಾಮರಂ ಭಾವಳಯಜನಿನದಂ ಚಾರು ದೇವಾನಕಂಕೇ
ಸರಿಪೀಠಂ ಪುಷ್ಪವೃಷ್ಟಿ ಪ್ರತತಿಯಮಳಛತ್ರತ್ರಯಾದ್ಯುದ್ಘಶೋಭಾ
ಕರನಾ ಸಿಂಹಾಸನಾಗ್ರಸ್ಥಿತ ದಶಶತಪತ್ರಾಂಬುಜಾತಾಗ್ರದೊಳ್ ನಾ
ಲ್ವೆರಳಂ ಬಿಟ್ಟಿರ್ಪನೆಂದುಂ ಸಮವಸರಣಾನಾಥಂ ತ್ರಿಲೋಕಾಧಿನಾಥಂ ೩೦

ಕಂದ

ಈ ತೆಱದೆ ಸಮವಸರಣ ವಿ
ಭೂತಿಗೆ ತಾನೊಡೆಯನಾದನದಱಿಂದೆ ಜಗ
ಖ್ಯಾತಿಯನಾಂತೀಶ್ವರನೆಂ
ಬಾತಂ ತಾನೆಂದು ನುಡಿವ ನುಡಿ ಸಿದ್ಧಾಂತಂ ೩೧

ವಚನ

ಅಂತುಮಲ್ಲದೆಯುಂ

ಮಹಾಸ್ರಗ್ಧರೆ

ಜರೆ ಖೇದಂ ಮೃತ್ಯ ಮೋಹಂ ಕ್ಷುಧೆ ತೃಷೆ ಜನನಂ ವಿಸ್ಮಯಂ ಚಿಂತೆ ರೋಗಂ
ಹರುಷಂ ಸ್ವೇದಂ ವಿಷದಂ ರತಿ ಮುಳಿಸು ಮದಂ ಭೀತಿ ನಿದ್ರಾದಿದೋಷೋ
ತ್ಕರದಿಂದಂ ಪಿಂಗಿದಂ ಶಾಶ್ವತಗುಣನಿಳಯಂ ಸರ್ವಲೋಕೈಕವಂದ್ಯಂ
ನಿರವದ್ಯಂ ನಿತ್ಯರೂಪಂ ನಿರುಪಮಮಹಿಮಂ ನಿರ್ಮಳಂ ನಿಷ್ಕಳಂಕಂ ೩೨

ಇಂತು ಸಕಳದೋಷದಿಂ ಪಿಂಗಿದನಪ್ಪುದಱಿಂ ನಿರ್ದೋಷಿ ಪರಮಾತ್ಮನುಂ ಭವನಾಮರ ವ್ಯಂತರ ಜ್ಯೋತಿಷ್ಕ ಕಲ್ಪವಾಸಿಗಳೆಂಬ ಶತೇಂದ್ರಕೃತಪೂಜೆಗರ್ಹನಪ್ಪುದಱಿಂದರ್ಹನುಂ ಮೂಱುಂಲೋಕದ ವಸ್ತುಸ್ವರೂಪಮಂ ಕರತಳಾಮಳಕವಾಗೆ ಕಾಣ್ಬ ಕೇವಳಜ್ಞಾನಂವೆಂಬೀ ತೃತೀಯಲೋಚನವನುಳ್ಳನಾಗ ತ್ರಿಣೇತ್ರನುಂ ಕರ್ಮಂಗಳಂ ನಿರ್ಮೂಲ ನಂಗೆಯ್ದನಪ್ಪುದಱಿಂ ಜಿನನುಂ ಸ್ಮರವಿಕಾರಧ್ವಂಸಿಯಪ್ಪುದಱಿಂ ಸ್ಮರವಿಜಯನುಂ ಜಾತಿಜರಾಮರಣಮೆಂಬ ತ್ರಿಪುರಮಂ ಕಿಡಿಸಿದನಪ್ಪುದಱಿಂ ತ್ರಿಪುರಹರನುಂ ಸಹಸ್ರದಳಕಮಳೋಪರಿಸ್ಥಿತನಪ್ಪುದಱಿಂ ಕಮಳಾಸನನುಂ ಧರ್ಮತೀರ್ಥಕರ್ತಾರನಪ್ಪುದಱಿಂ ತೀರ್ಥಕರಪರಮದೇವನುಂ ಸಕಲಲೋಕಪದಾರ್ಥಂಗಳಂ ಕರತಳಾಮಳಕವಾಗೆ ಕಾಣ್ಬನೊರ್ಮೊದಲೊಳಱಿವ ಸರ್ವಜ್ಞನುಮೆಂಬಿವು ಮೊದಲಾಗೆ ಪಲವನ್ವರ್ಥ ನಾಮಂಗಳಿಂ ವಿರಾಜಿಸುತಿರ್ಪನಂತು ಮಲ್ಲದೆಯುಂ