ಕಂದ

ಶ್ರೀವಿಭುದಪ್ರಿಯನಖಿಳ ಕ
ಳಾವಾಸಂ ಕುವಳಯಪ್ರಮೋದಂ ಸುಮನೋ
ಜೀವಂ ಕಮಳಾನ್ವಿತನೆನ
ಲೀ ವಿದ್ಯಾಧರಮಹೀಧರಂ ಶೀತಕರಂ ೧

ಭರವಸದಿಂ ಖೇಚರಭೂ
ವರನಾ ದಿವಸದೊಳೆ ಸಖಸಮೇತಂ ಶ್ವೇತಾಂ
ಬರವೇಷಧಾರಿಯಾಗ
ಚ್ಚರಿಯೆನಿಸಲ್ ಪಾಟಲೀಪುರಕ್ಕೈತಂದಂ ೨

ಆ ಪುರದಾಗ್ನೆಯಕಗೋಣೆಯ
ಗೋಪುರದಬ್ಜಜನಿವಾಸಮಂ ಪೊಕ್ಕು ಜಯ
ಶ್ರೀಪತಿ ದುಂದುಭಿಯಂ ಪೊಡೆ
ದಾ ಪದದೊಳ್ ಕುಳ್ಳಿದಂ ಮೃಗೇಂದ್ರಾಸನದೊಳ್ ೩

ಉತ್ಪಲಮಾಲೆ

ಆಗಳವರ್ ಕರಂ ಪೊಡೆದ ದುಂದುಭಿಯುನ್ನತ ಘೋಷವಷ್ಟದಿ
ಗ್ಭಾಗಮನೆಯ್ದೆ ತತ್ಪುರದ ವಿಪ್ರಜನಂ ನೆಱು ಕೇಳ್ದು ವೇದಶಾ
ಸ್ತ್ರಾಗಮಕಾವ್ಯನಾಟಕವಿಚಕ್ಷಣದಕ್ಷರೆನಿಪ್ಪರೆಲ್ಲರೊಂ
ದಾಗಿಯಿದೇನೆನುತ್ತೆತಿಳಿಯಲ್ಕಮಳಾಸನವಾಸಮೆಯ್ದಿದರ್ ೪

ವಚನ

ಅಂತೆಯ್ದಿ ಬಂದೊಳಗಂ ಪೊಕ್ಕಾಂ ಶ್ವೇತಾಂಬರರಂ ಕಂಡು ನೀವಾರೆತ್ತಣಿಂ ಬಂದಿರಿಲ್ಲಿ ಭೇರಿಯಂ ಪೊಯ್ದು ಸಿಂಹಾಸನದೊಳೇಕೆ ಕುಳ್ಳಿರ್ದಿರಿಲ್ಲಿ ವಿದ್ವಾಂಸರಾದವರ್ ವಾದಾರ್ಥದಿಂ ಬಂದು ಭೇರಿಯಂ ಪೊಯ್ದು ವಾದಂ ಗೆಲ್ದಲ್ಲದೆ ಸಿಂಹಾಸನದೊಳ್ ಕುಳ್ಳಿರಲ್ ಬಾರದೆನೆಯಾದೊಡೆ ಮಾಣಲಿಯೆಂದವರಿಳಿದು ಕುಳ್ಳಿರಿ ಮತ್ತಮು ವಿಪ್ರರಿಂತೆಂದರ್ –

ನಿಮ್ಮ ಗುರುವಾರ್ ನೀವೇಂ ಕಾರಣಂ ತಪಂಗೊಂಡಿರೆನೆ ಎಮಗಾರುಂ ಗುರುವಿಲ್ಲ ನಮ್ಮ ತಪದ ಕಾರಣಂ ಪೇಳ್ವೊಡೆ ರಜಕಚಂದನದ ಕಥೆಯನ್ನರುಳ್ಳೊಡೆ ಪೇಳಲಮ್ಮೆವೆನೆಯಾ ಕಥೆಯೆಂತೆಂದು ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ

ಕಂದ

ಧರೆಗೊಪ್ಪಿರ್ಪುಜ್ಜಯಿನಿಯ
ಪುರದಧಿಪಂ ಶಾಂತನೆಂಬನಾತಂ ದಾಹ
ಜ್ವರಮಾಗೆ ವೈದ್ಯರಾರಿಂ
ಪರಿಹರಿಸದಿರಲ್ಕೆ ನಿತ್ತರಿಸದಿಂತೆಂದಂ ೫

ಎನ್ನಯ ದಾಹಜ್ವರಮಂ
ಸನ್ನುತಮಾಗಲ್ಕೆ ಬೇಗದಿಂ ಕಳೆಯಲೊಡಂ
ಮನ್ನಣೆಯಂ ಮಾಡಿಯವಂ
ಗುನ್ತ ಪದವಿಯನೂನಮಾಗಿರಲೀವೆಂ ೬

ಕಳಾಭಾಷಿಣಿ

ಎಂದು ಡಂಗುರಿಸೆ ಕೇಳ್ದು ವಣಿಗ್ವರನೋರ್ವನೈ
ತಂದದಂ ಕಳೆವೆನೆಂದತಿಶೀತಳವಸ್ತುವಂ
ತಂದಪೆಂ ನದಿಯ ತೀರದೊಳೀಕ್ಷಿಸಿ ಬೇಗದಿಂ
ದೆಂದು ಪೋಗಿ ರಜಕವ್ರಜವಿರ್ದೆಡೆಗೆಯ್ದಿದಂ ೭

ಕಂದ

ಆ ರಜಕರೊಳೊರ್ವಂ ಗೋ
ಶೀರುಷಚಂದನ ನದಿಪ್ರವಾಹದೆ ಬಂದಾ
ತೀರವನೆಯ್ದಲ್ ತೆಗೆದದ
ನಾರಯ್ಯದೆ ಕಾಷ್ಠವೆಂದು ಕಡಿವವಸರದೊಳ್ ೮

ಉತ್ಪಲಮಾಲೆ

ಅಲ್ಲಿಗೆ ಬಂದದಂ ಪರದನೀಕ್ಷಿಸಿ ಚಂದನಮಪ್ಪುದೆಂದದಂ
ಮೆಲ್ಲನೆ ಚಿತ್ತದಿಂದಱಿದದಂ ಕಡಿವಾ ಕಡುಸೇದೆಯೇಕೆ ನೀ
ನೊಲ್ಲದೊಡೊಂದು ದೊಡ್ಡ ಪೊಱೆ ಪುಳ್ಳಿಯನೀವೆನಿದರ್ಕೆ ನೀನಿದಂ
ತಲ್ಲಳವಾಗದೀವುದೆನೆಯಾ ರಜಕಂ ಕುಡೆ ಕೊಂಡು ಬೇಗದಿಂ ೯

ಕಂದ

ಬಂದಾ ಪರದಂ ತಂದಾ
ಚಂದನಮಂ ನೃಪತಿಗೆಱೆಯೆ ದಾಹಜ್ವರವೆ
ಯ್ದೊಂದೆ ನಿಮಿಷಕ್ಕೆ ಪಱಪಡೆ
ಯೆಂದಾತಂಗಿತ್ತನೊಲ್ದು ಬೇಡಿದ ಪದಮಂ ೧೦

ವಚನ

ಅಂತು ಪರೀಕ್ಷೆಯಱಿಯದೆ ಚಂದನಮನಿಂಧನಮೆಂದು ಕಡಿಯಲ್ಪಗೆದ ರಜಕನನ್ನರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಲಮ್ಮೆವೆನೆ ಇಂತಪ್ಪರೆಮ್ಮ ಸಭೆಯೊಳಿಲ್ಲಂಜದೆ ಪೇಳಿ ಮೆನೆ ಮನೋವೇಗಂ ಮತ್ತಮಿಂತೆಂದಂ ಮೂರ್ಖಚತುಷ್ಟಯ ಕಥೆಯನ್ನರುಳ್ಳೊಡೆ ಮಾತಾಡಲಮ್ಮೆ ವೆನೆಯಾ ಕಥೆಯೆಂತೆಂದು ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ

ಚಂಪಕಮಾಲೆ

ಬರುತಿರೆ ಬಟ್ಟೆಯೊಳ್ ಗುರುಗಳೊರ್ವರವರ್ಗಿದಿರಾಗಿ ನಾಲ್ವರೈ
ತರುತವರೆಲ್ಲರೊರ್ಮೊದಲೆ ಬಂದು ನಮೋಸ್ತೆನೆ ಧರ್ಮವೃದ್ಧಿಯೆಂ
ದಿರದವರೊಂದೆ ಸೂಳ್ ಪರಸಿ ಪೋಗುತಿರಲ್ಕವರೆಂದರಿಂತಿವರ್
ಪರಸಿದುದೊಂದೆಯಾ ಪರಕೆ ನಮ್ಮೊಳಗಾರ್ಗದನಿಂತು ಪೇಳಿರೇ ೧೧

ಕಂದ

ಎಂದು ವಿಚಾರಿಸುತೆಲ್ಲಂ
ನಿಂದಿರ್ದಾ ಪರಕೆಯೆಮಗೆ ತಮಗೆನುತಂ ಭೋ
ರೆಂದುಲಿದು ಗುದ್ದನಾಟಿಸಿ
ನಿಂದು ಬಳಿಕ್ಕೆಯ್ದೆ ತಮ್ಮೊಳಂದಿಂತೆಂದರ್ ೧೨

ಆ ಗುರುಗಳ್ ಪೋಪಲ್ಲಿಗೆ
ಬೇಗಂ ಪರಿದೆಯ್ದಿ ಕೇಳ್ವಮೀ ಪರಕೆಯನಾ
ರ್ಗಾಗಿತ್ತಿರೆಮ್ಮೊಳೆಂದೆನು
ತಾಗಳ್ ಪರಿದೆಯ್ದಿ ಕೇಳ್ದರಾ ಮುನಿವರನಂ ೧೩

ವಚನ

ಎಂದು ಪೋಗಿ ಕೇಳ್ವುದುಂ ಮುನಿವರನಿವರ್ ಮೂರ್ಖರೆಂಬುದಂ ನಿಶ್ಚಯಿಸಿಯಾ ನಾಲ್ವರೊಳೊರ್ವಂಗೆಂದೊಡೆಮೂವರ್ ಮುನಿಗುಮದಱಿಂದೆನಗೆ ಪೊಲ್ಲಮೆಯಕ್ಕುಮೆಂದು ವಿಚಾರಿಸಯಾತ್ಮ ರಕ್ಷಣೋಪಾಯನಪ್ಪನುಮಾನಮಂ ಮನದೊಳ್ ಬಗೆದು ನಾಲ್ವರೊಳಾರತಿ ಮೂರ್ಖರವರಂ ಪರಸಿದೆಮೆಂದಾ ಮುನಿಪತಿಯತ್ತಲ್ ಪೋಗೆಯಾ ಚತುಷ್ಟಯಂ ಮಗುಳ್ದುಬರುತ್ತುಮಾಗಳ್

ಕಂದ

ಆಂ ಮೂರ್ಖಂ ತಾಂ ಮೂರ್ಖಂ
ನೀಂ ಮೂರ್ಖಲ್ಯಲ್ಲ ನಿನ್ನ ನಾಲ್ಮಡಿಯೆನಿಸ
ರಿಲ್ಕಾಂ ಮೂರ್ಖನೆಂದು ತಮ್ಮೊಳ್
ಗೊಮ್ಮೆಂದೊಡೆ ರೊಮ್ಮೆನುತ್ತೆ ಬರುತಿರೆ ಪದದೊಳ್ ೧೪

ವಚನ

ಅಂತು ವಿವಾದಿಸುತ್ತಂ ಬಂದೊಂದು ಪಿರಿಯಪುರಮನೆಯ್ದಿ ಅಲ್ಲಿ ಸಭೆಯಂ ಮೇಳೈಸಿ ಎಮ್ಮ ನಾಲ್ವರೊಳಾರತಿಮೂರ್ಖರ್ ಪೇಳಿಮೆಂದೊಡವರ್ ನಿಮ್ಮ ಮೂರ್ಖತ್ವಮಂ ಪೇಳಿಮೆನೆಯಾ ನಾಲ್ವರೊಳೊರ್ವಂ ಸಭೆಗಭಿಮುಖನಾದಿ ನಿಂದಿರ್ದಿಂತೆಂದಂ

ಕಂದ

ಎನಗಿರ್ವರ್ ಪೆಂಡಿರವ
ರ್ಗನುವಶವಾಗಿರ್ಪೆನಾನವರ್ಗುಚಿತಮುಮಂ
ಮನಮೊಸೆದಿರ್ವರ್ಗಂ ನೆ
ಟ್ಟನೆ ತತ್ಸಮನಾಗೆ ಮಾಡುತಿರಲೊಂದು ದಿನಂ ೧೫

ಮಹಾಸ್ರಗ್ಧರೆ

ಇರೆ ನಿದ್ರಾಸಕ್ತಿಯಿಂದಂ ಮಮಭುಜಯುಗದೊಳ್ ಕಾಮಿನೀಯುಗ್ಮವಾಗಳ್
ಪರಿತಂದೊಂದಾಖು ಮೇಗಣ್ಗೆಳೆಯಲುರಿವ ಪೆರ್ವತ್ತಿಯಮಂ ಕರ್ಚಿಬೇಯು
ತ್ತಿರೆ ಬಾಯ್ವಿಟ್ಟೋಡೆ ಬಿದ್ದತ್ತದು ನಯನದೊಲಾಂ ನಂದಿಸಲ್ಕೈಯನೆತ್ತಲ್
ಪಿರಿದುಂ ನಿದ್ರಾವಿಭಂಗಂ ದೊರಕುಗುಮವರ್ಗೆಂದಿರ್ದು ಟೊಳ್ಳಾಯಾಯ್ತು ನೇತ್ರಂ ೧೬

ಕಂದ

ಅದಱಿಂ ಬಳಿಕ್ಕಮೆನಗಾ
ದುದು ಭಾವಿಸೆ ಟೊಳ್ಳಗಣ್ಣನೆಂಬೀ ನಾಮಂ
ಪದಪಿಂದವಧರಿಸುವುದಿಂ
ತಿದೆನ್ನ ಮೂರ್ಖತ್ವಮೆಂದು ಕೆಲದೊಳ್ ನಿಂದಂ ೧೭

ವಚನ

ಅಂತು ಕೆಲಕ್ಕೆ ಸಾರ್ವುದುಂ ಮತ್ತೊರ್ವಂ ಬಂದಿಂತಂದನೆನಗೆ ಖರಿರಿಖಿಯೆಂಬ ರಿರ್ವರ್ಪೆಂಡಿರವರ್ ನಿಚ್ಚಲೋರೊರ್ವರೊಂದೊಂದುಕಾಲನೊರಸುವರವರೊಂದು ದಿನವಿರ್ವರುಂ ಕಾಲಂ ಪೂಸುತಿರ್ದು ಖರಿಯೆಂಬ ಪಿರಿಯವಲ್ಲಭೆ ಬಲಗಾಲಂ ತಿಮಿರ್ದು ಬಿಸಿನೀರಂ ತರಲ್ಪೋಗೆ ರಿಖಿಯೆಂಬ ಕಿಱಿಯ[ಳ್] ಎಡಗಾಲಂ ಪೂಸಿ ತಿಮಿರ್ದು ಕಾಲಂ ಖರಿಯೊರಸಿದ ಬಲದ ಕಾಲ ಮೇಲಿರಿಸಿ ತಾನುಂ ಬಿಸಿನೀರಂ ತರಲ್ಕೆ ಪೋಗೆಯಾ ಖಿರಿ ಬಿಸಿನೀರಂ ತಂದು ನೋಡಿಯಾನೊರಸಿದ ಕಾಲ ಮೇಲೆ ತಾನೊರಸಿದ ಕಾಲನಿರಿಸಿದಳೆಂದು ಕೋಪಿಸಿಯೊನಕೆಯಿಂದಾ ಕಾಲಂ ಮುಱಿಯ ಕುಟ್ಟಿ ಪೋದಳಾ ರಿಖಿ ಪಿಂತನೆ ಬಂದಾನೊರಸಿದಕಾಲಂಖರಿಮುಱಿದಳಾನವಳೊರಸಿದ ಕಾಲಂ ಮುಱಿವೆನೆಂದೊನಕೆಯಿಂದೆ ಬಲದ ಕಾಲಂ ಮುಱಿಯೆ ಕುಟ್ಟಿದಳದಱಿಂ ಖಂಜನೆಂಬ ಪೆಸರಾದುದಿದೆನ್ನ ಮೂರ್ಖತ್ವಮೆಂದು ಬಿನ್ನವಿಸೆ ಕೆಲಕ್ಕೆ ಸಾರೆ ಮತ್ತೊರ್ವಂ ಬಂದೆನ್ನ ಬಿನ್ನಪಮನವಧರಿಪುದೋಂದಿಂತೆಂದಂ

ಚಂಪಕಮಾಲೆ

ಪರಿಕಿಸೆ ಪೆಂಡಿರಿರ್ವರೆನಗಂತವರೊಳ್ ಸುಖಗೋಷ್ಠಿಯಿಂ
ನಗುತ್ತಿರೆಯವರೆಂದರರ್ಕನುದಯಂಬರೆಗಂ ಸಲೆಮೋನದಿಂದವಾ
ರಿರದೊಡೆ ಪನ್ನೆರಳ್ಸವಡಿಮಂಡಗೆಯೊಮ್ಮನ ತುಪ್ಪವಣ್ಣೆವಾ
ಲ್ವೆರಸಿ ಸಿತಾನ್ವಿತಂ ತೆಱುವರೆಂದೊಡೆ ಮನೋದೊಳಿರ್ದೆವೆಲ್ಲರುಂ ೧೮

ಕಂದ

ಆ ಸಮಯದಲ್ಲಿ ತಸ್ಕರ
ನೋಸರಿಸದೆ ಕನ್ನವಿಕ್ಕಿ ಮನೆಯೊಳ್ ಪೊಕ್ಕಾ
ಸಾಸಿಗನಾವೆರ್ದಿರೆ ಕಂ
ಡೋಸರಿಸದೆಯೊಡವೆಯೆಲ್ಲಮಂ ನೆಱೆಕೊಂಡಂ ೧೯

ಅದಱಿಂನಿಲ್ಲದೆ ತಣಿವಂ
ದದಿನುಂಡಂ ಪಂಚಭಕ್ಷಪಾಯಸವಟ್ಟಿ
ರ್ದದನಳಿಪಿ ಬಳಿಕವೆನ್ನು
ಟ್ಟುದುಮಂ ಪೆಂಡಿರ್ಕಳುಟ್ಟುದುಂ ಸುಲಿಕೊಂಡಂ ೨೦

ಮಡದಿಯ ಹಚ್ಚಡುಮಂ ಸುಲಿ
ವೆಡೆಯೊಳ್ ಕೇಳಣ್ಣ ಕಿವಿಯ ಕೊಪ್ಪಂ ನೀಂ ಕೊ
ಳ್ವೊಡೆ ನೋಯದಂತೆ ತೆಗೆಯೆಂ
ದೊಡೆ ಮನೋಂಗೆಟ್ಟಳಿವಳೆ ಸೋತವಳೆಂದಂ ೨೧

ವಚನ

ಅಂತು ಸೋಲ್ತಳೆಂದಾಕೆಯಂ ಪನ್ನೆರಳ್ಸವಡಿ ಮಂಡಗೆಯಂ ಒರ್ಮಾನ ತುಪ್ಪಮಂ ಪಾಲಂ ಸರ್ಕರೆಯಂ ತಂದೀಗಳೆ ಕುಡಲ್ಬೇಕೆಂದೆಳ್ದು ಕುಣಿದಾಡಿದೆಂ ಪೋದ ಪೊನ್ನಂ ಭಂಗಾರಮಂ ಲೆಕ್ಕಿಸದಿದನೆ ಪಿರಿದು ಮಾಡಿ ಬಗೆದೆನಿದೆನ್ನ ಮೂರ್ಖತ್ವಮೆಂದು ಪೇಳ್ದಾ೩ತಂ ಕೆಲಕ್ಕೆ ಸಾರೆ ಮತ್ತೊರ್ವಂ ತನ್ನ ಮೂರ್ಖತ್ವಮಂ ಪೇಳಲ್ ತಗುಳ್ದಂ

ಉತ್ಪಲಮಾಲೆ

ಎನ್ನಪಿತಂ ಮಹಾಪ್ರಭುಸಮಾನ ಗೃಹಸ್ಥನಪುತ್ರಿಯೊರ್ವಳಂ
ಚೆನ್ನಯನೊಲ್ದು ತಂದೆನಗೆಮಾಡೆ ವಿವಾಹಮನಾ ವಧೂಟಿ ತಾಂ
ತನ್ನಯ ತಾಯಿತಂದೆಯನಗಲ್ದಿರಲಾಱದೆ ಯ ವನಂಬರಂ
ಸನ್ನುತವಪ್ಪಿನಂ ಸಲೆ ತವರ್ಮನೆಯೊಳ್ ಪಲಕಾಲಮಿರ್ಪುದುಂ ೨೨

ಕಂದ

ಅಂತಿರೆ ಕೆಲವು ದಿನಕ್ಕಾ
ಕಾಂತೆಯನೊಡಗೊಂಡು ಬರ್ಪೆನೆಂಬೀ ಬಗೆಯೋ
ರಂತೆನ್ನ ಮನದೊಳುದಯಿಸ
ಲಾಂ ತಾಯ್ಗಂ ತಂದೆಗುಸಿರಲವರಿಂತೆಂದರ್ ೨೩

ವಚನ

ಎಲೆ ಮಗನೆ ನೀಂ ಬಹ್ವಾಶಿ ದಿವಸದೊಳೈದಾಱುಸೂಳುಂಡಲ್ಲದೆ ನಿಲಲಾಱೆ ಬಿಯಗರ ಮನೆಯೊಳಿದಂ ಕಂಡೊಡೆ ಮರುಳಾಡುವರದಱಿಂ ಕಿಱಿದಾಗಿ ಯುಣ್ಬುದು ಉಣಲ್ ಕರೆಯ ಪಿರಿದುಂ ಪ್ರಾರ್ಥಿಸಿಕೊಂಬುದೆಂದು ಬುದ್ದಿಯಂ ಪೇಳೆ ಯಂತೆಗೈವೆನೆಂದು ಪೋಗಿಯಾ ತೆಱದಿಂದವರ್ ಪ್ರಾರ್ಥಿಸೆ ಹಸಿವಿಲ್ಲೆಂದುಣದೆ

ಕಂದ

ಹಸಿದು ನಿಜಾತ್ಮನನೆ ನಿರೋ
ಧಿಸುವ ಮಹಾಪಾಪಕರ್ಮನಾನನಮನಭೀ
ಕ್ಷಿಸಲಾಗದೆಂಬ ತೆಱದಿಂ
ಬಿಸರುಹಸಖನಪರಗಿರಿಯ ಮಱೆಯಂ ಸಾರ್ದಂ ೨೪

ವಚನ

ಅಂತುನೇಸರ್ಪಡುವುದುಂ ರಾತ್ರಿಯೊಳುಣಲೆಬ್ಬಿಸಲ್ಕೆನಗೆ ಪಸಿವಿಲ್ಲೊಲ್ಲೆನೆನೆ
ಪಸಿದಾಗಳಡುಗೆಯಂ ಮಾಡಿಯುಣಲಿಕ್ಕೆಂದೆನ್ನ ಪೆಂಡತಿಗೆ ಪೇಳಿ ಕೊಟ್ಟಕ್ಕಿಯಂ
ನೇರ್ಪಡಿಸಿ ನಾಂ ಪಟ್ಟಿರ್ದ ಮಂಚದ ಸಮೀಪದೊಳಿರಿಸಿ ಎಲ್ಲಂ ನಿದ್ರಾಸಕ್ತರಾಗಿ
ತಮ್ಮ ಶಯನಸ್ಥಾನಕ್ಕೆ ನಿದ್ರೆಗೈಯಲ್ಪೋಗಲೊಡನೆ

ಚಂಪಕಮಾಲೆ

ಸತಿಸಹಿತಾನಿರುಳ್ ಪಿರಿದು ನಿದ್ರೆಯೊಳಿರ್ದುದಯಕ್ಕೆ ಮುನ್ನವಾ
ಸತಿ ಪೊರಮಟ್ಟುಪೋಗೆ ಪಸಿವಿಂ ನಿಲಲಾಱದೆ ಕೊಡೆ ನೋಡಿ ಕಂ
ಡತಿಶಯಮಾಗೆ ನೇರ್ಪಡಿಸಿದಕ್ಕಿಯಿರಲ್ ನೆಱೆ ಬಾಯೆ ಬೇಗಲಾ
ರ್ತತೆ ಪಿರಿದಾಗೆ ತೀವಿಕೊಳಲಾಗಳೆ ಕಾಂತೆ ಮಗುಳ್ದು ಬೇಗದಿಂ ೨೫

ಕಂದ

ಬಂದಾಕೆ ನುಡಿಸೆ ಬಾಯ್ಬಿರಿ
ವಂದದೆ ನೇರ್ಪಡಿಸಿದಕ್ಕಿ ತೀವಿಱೆ ನುಡಿಯುಂ
ಕುಂದಿರಲಿದೇನೋ ಸೋಜಿಗ
ವೆಂದೀಕ್ಷಿಸಿ ನೆಗೆದ ಗಲ್ಲಮಂ ಕಂಡಾಗಳ್ ೨೬

ಕಳಾಭಾಷಿಣಿ

ಕೆಟ್ಟಿನೆನ್ನ ಪತಿಗಾದುದು ಬೆಟ್ಟಿಹ ರೋಗವೆಂ
ದೊಟ್ಟಿಯಂ ತೊಡಱಿಯತ್ತೊಡೆಯಾ ಮನೆಯಲ್ಲರುಂ
ತೊಟ್ಟನೆರ್ದು ಪರಿತಂದವರೀಕ್ಷಿಸಿ ಬೇಗದಿಂ
ಪುಟ್ಟಿದೀ ರುಜೆಗೆ ತಕ್ಕುನುವಾವುದೆನುತ್ತಿರಲ್ ೨೭

ಕಂದ

ಇವನತಿಮೂರ್ಖತೆಯಂ ನೋ
ಡುವೆನೆಂಬೀ ಬಗೆ ಮನಂಬುಗಲ್ ಭರವಸದಿಂ
ದವೆ ಬಂದನೆಂಬ ತೆಱದಿಂ
ದವಯವದಿಂದುದಯಗಿರಿಯನೇಱದನರ್ಕಂ ೨೮

ವಚನ

ಅಂತು ನೇಸರ್ಮೂಡುವುದುಂ ಹಲಸಿಗನೊರ್ವಂ ವಾತ ಪಿತ್ತಶ್ಲೇಷ್ಮ ತಲೆಬೇನೆ ಕಣ್ಣುಬೇನೆ ಗುಲ್ಮಕ್ಷಯ ಕಾಮಾಲೆ ಪಾಂಡು ಕುಷ್ಟ ಭಗಂಧರಾದಿಯಾದ ರೋಗವೆಲ್ಲಮಂ ಕಳೆವೆನೆನುತ್ತೆ ಕೇರಿಕೇರಿಯಂ ಸುತ್ತಿ ಬರುತಿರೆ ಕಂಡು ಕರೆದಾ ವೈದ್ಯಂಗೆ ತೋಱೆ ಕಂಡಾ ವೈದ್ಯನಾದಾನನಿದಾನಚಿಕಿತ್ಸೆಯಿಂ ತಿಳಿದು ರೋಗವಲ್ಲೆಂದು ತನ್ನ ಮನದೊಳಱಿದಿವಂ ಪಸಿದೇನಾನುಮಂ ಮುಕ್ಕದೆ ಮಾಣನೆಂದು ಗಲ್ಲಮಂ ತಡವಿ ನೋಡಿಯಕ್ಕಿತೀವಿರ್ದುದನಱಿದುಯೀರೋಗಕ್ಕೀಕ್ಷಣದೊಳ್ ತಕ್ಕೌಷಧಿಯಂ ಮಾಡದೊಡೆ ಸಾಯ್ಗು ಮೆನೆಯಾಮನೆಯವರೆಲ್ಲಂ ನೂಱುಗದ್ಯಾಣಪೊನ್ನನವಸರಂಕೊಟ್ಟು ಪ್ರಾಣಮಂ ಕಾವುದೆನೆಯಾತಂ ಶಸ್ತ್ರದಿಂ ಗಲ್ಲಮಂ ಪಾಳಿಸಿ ವ್ರಣವೆರಸಿದಕ್ಕಿಯಂ ತೆಗೆದು ಕತ್ತಿಯಿಂದೆತ್ತಿ ತೋಱಯಿದುಂ ತಂಡುಲವ್ಯಾಧಿಯೆಂದು ಪೆಸರಿಟ್ಟು ಮನೆಯವರೆಲ್ಲರುಂ ತೊಲಗಿಮೆಂದೊಂದು ಕಂಬಳಿಯಂ ಪೊದಿಸಿದೊಡಾ ತಂಡುಲಮಂ ಹೊಣಕೆ ನುಂಗಿ ಕಳೆದನಂದದಿಂದೆನ್ನೆಲ್ಲರುಂ ಗಲ್ಲಪೋಟನೆಂದು ಪೆಸರನಿಟ್ಟರ್ ಇದೆನ್ನ ಮೂರ್ಖತ್ವವೆಂದು ಪೇಳೆ ಕೇಳ್ದಾ ಧರ್ಮಾಧಿಕರಣದವರ್ ನೀವೆಲ್ಲರುಂ ಸಮಾನ ಮೂರ್ಖರಾ ಪರಕೆಯಂ ನೀವೆಲ್ಲರುಂ ಪಚ್ಚುಕೊಳ್ಳಿಮೆಂದು ಪೋದರ್

ಕಂದ

ಇಂತಪ್ಪತಿಮೂರ್ಖರ್ಗಾ
ವೆಂತುಂ ಭೀತಾತ್ಮ ರಪ್ಪೆವದುಕಾರಣದಿಂ
ದಂತಪ್ಪವರೀ ನಿಮ್ಮ ಸ
ಭಾಂತರದೊಳಗಿಲ್ಲವೇ ವಿಚಾರಿಸಿ ಪೇಳಿಂ ೨೯

ಮಹಾಸ್ರಗ್ಧರೆ

ಎನೆ ಕೇಳ್ದಾ ವಿಪ್ರರೆಲ್ಲಂ ಖವಖವಿಸಿ ನಗುತ್ತೆಂದರಿಂತಪ್ಪ ಮೂರ್ಖರ್
ಜನಿಸರ್ ನಮ್ಮೀ ಮಹಾಪತ್ತಣದೊಳದಕೆ ನೀವಂಜಲೇಬೇಡ ಪೇಳೆಂ
ದೆನೆ ಕೇಳ್ದಾಜ್ಞಾಭಿರಾಮಂ ಸಖಮುಖಕಮಳಾರ್ಕಂ ಪರಾರ್ಥೈಕಚಿತ್ತಂ
ಜಿನಧರ್ಮಾಂಭೋಧಿಚಂದ್ರಂ ಖಗಕುಳತಿಳಕಂ ಪೇಳಲುದ್ಯುಕ್ತನಾದಂ ೩೦

ವಚನ

ಅದೆಂತೆಂದೊಡೆ ಘೂರ್ಜರದೇಶದೊಳ್ ವಂಶಗ್ರಾಹವೆಂಬ ಪಟ್ಟಣವಲ್ಲಿಯೆಮ್ಮನ್ವಯಂ ಶ್ವೇತಪಟ್ಟಾನ್ವಯವಾವು ರಟ್ಟಗಾವುಂಡಂಗಳ ಮಕ್ಕಳೆಮಗೆ ಕುಱೆ ಪಿರಿದೊಳವವಂ ಕಾಯಲ್ ಪೋಗಿಯಡವಿಯಂ ತೊಳಲುತ್ತೆಬರುತ್ತೆ ತುಱುಗಿ ಮಿಱುಪ ಫಲಂಗಳಿಂದೊಱಗಿ ಬೀಳ್ವ ಬೆಳಲಮರನಂ ಕಂಡು ನಾವೀರ್ವರುಂ ಮೆಲ್ಲಲ್ ಬಯಸಿ ಮರನನೇಱಲಮ್ಮದೆ ಸಿಡಿಮಿಡಿಗೊಳುತ್ತಿರ್ದು ಪೂರ್ವೋಕ್ತಮಂ ನೆನೆದೆವದೆಂತೆನೆ

ಶ್ಲೋಕ

ಸರ್ವೌಷಧೀನಾಮಶನಂ ಪ್ರಧಾನಂ ಸರ್ವೇಷು ಪಾನೇಷು ಜಲಂ ಪ್ರಧಾನಂ
ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಸರ್ವೇಷು ಗಾತ್ರೇಷು ಶಿರಃ ಪ್ರಧಾನಂ ೩೧

ಕಂದ

ಎಂದು ಪಿಡಿದಿರ್ದ ಕತ್ತಿಗೆ
ಯಿಂದ ಶರಿವರಿಯೆ ಕೊಱೆದು ಮೇಗಣ್ಗಿಡಲಾ
ನಂದದೆ ತುದಿಗಡರ್ದುದು ಕೊಂ
ಬಿಂದಂ ಕೊಂಬಿಂಗೆ ಪಾಯ್ದು ಬೇಗದಿನಾಗಳ್ ೩೨

ಮತ್ತೇಭವಿಕ್ರೀಡಿತ

ತನಿವಣ್ಣಂ ಹಸಿವೋಡುವಂತಿರೆ ಬಸಿಱ್ ತೀವಲ್ ಶಿರಂ ಕೊಯ್ದು ಸಾ
ಲ್ವಿನೆಗಂ ತಿಂದಿಳಿತಂದು ಭೂತಳದೊಳಿರ್ದಾ ಮುಂಡದೊಳ್ ಪತ್ತೆ ಭೋಂ
ಕನೆ ನಾವೆಳ್ದುಬರುತ್ತುಮೆಮ್ಮ ಕುಱಿಯೆಲ್ಲಂ ಕೆಟ್ಟುಪೋಗಲ್ಕೆ ಕಾ
ನನದೊಳ್ ಕೂಡೆ ತೊಳಲ್ದು ನೋಡಿಯವನೊಂದಂ ಕಾಣದಾವಿರ್ವರುಂ ೩೩

ಕಂದ

ಮನೆಯತ್ತಲ್ ಪೋಗೆ ಪಿತಂ
ಕನಲುಗುಮೆಂದಂಜಿ ಪಲವುನಾಡಂ ಕಳಿದೊ
ಯ್ಯನೆ ಬಂದೆವೀ ಪುರಂ ಚೆ
ಲ್ವೆನೆ ನೋಡುವಮೆಂಬುದೆಮ್ಮ ಬಗೆಯೊಳ್ ಪುಟ್ಟಲ್ ೩೪

ಶ್ವೇತಾಂಬರರ್ಗೆ ಬೋಳುಂ
ಶ್ವೇತಾಂಬರಮುಚಿತಮುಟ್ಟಕುಱುವಡಮಿದು ತಾಂ
ಜಾತಿಯೊಳೆ ರಟ್ಟಗೌಡ
ಖ್ಯಾತರ್ಗೌಚಿತ್ಯವಿದಱನೆಮಗಾಯ್ತು ತಪಂ ೩೫

ವಚನ

ಎನೆ ಕೇಳ್ದು ವಿಪ್ರರಿಂತೆಂದರ್

ಕಂದ

ಇನಿತೊಂದು ಪುಸಿಯನಾಡುವ
ಮನುಷ್ಯರಂ ಕಂಡುದಿಲ್ಲ ಕೇಳ್ದಱಿಯೆವು ಮಾ
ಣನುಚಿತಮೀ ನುಡಿ ನಿಮಗೆಂ
ದೆನೆ ಕೇಳ್ದಾ ಶ್ವೇತಪಟರವರ್ಗಿಂತೆಂದರ್ ೩೬

ನೀವಾಡಿದ ಪುಸಿಯೆಲ್ಲಂ
ಭಾವಿಸುವೊಡೆ ಸತ್ಯಮೆಂಬಿರೆಂದೊಡೆ ನಮಗೇ
ನಾವಾಡಿದಿನಿತುನುಡಿಯೊಳ
ಗಾವುದು ಪುಸಿ ಪೇಳಿಮೆಂದೊಡವರಿಂತೆಂದರ್ ೩೭

ಅರಿದೀಡಾಡಿದ ಮನುಜರ
ಶರಿಮುರ್ವೀರುಹಮನಡರ್ದು ತುದಿಗೊಂಬಿನೊಳ
ಚ್ಚರಿಯೆನಿಸುವ ತನಿವಣ್ಣಂ
ಪಿರಿದಾಗಿರೆ ತಿಂದು ತಣಿದುದೆಂಬುದು ಚಿತ್ರಂ ೩೮

ವಚನ

ಅದಲ್ಲದೆಯುಂ ನೆಲದೊಳಿರ್ದ ತಮ್ಮಟ್ಟೆಗಳ ಬಸಿರ್ತೀವುದುಂ ತೀವಲೊಡನಾ ಮರ ದಿಂದಿಳಿದುಂ ಬಂದು ತಮ್ಮಟ್ಟೆಗಳ ಕೊರಲೊಳ್ ಪತ್ತಿತೆಂಬುದುಂ ಪುಸಿಯುಂ ಚೋದ್ಯಮುಮಲ್ಲದೆ ಸತ್ಯಮುಂಟೆ ಪೇಳಿಮೆನೆ ಶ್ವೇತಾಂಬರರಿಂತೆಂದರ್