ಆದಿಬ್ರಹ್ಮಂ ತೀವ್ರಾ
ಷ್ಟಾದಶವಿಧ ದೋಷರಹಿತನಾಪ್ತಂ ತಾನೆಂ
ದಾದರದಿಂದೋಲಗಿಪ್ಪುದು
ವಾದದೊಳೇಂ ಪೆಱತು ದೈವ

[ದೊ]ಳ್ ಪುರುಳುಂಟೇ || ೭೦[1] ||

ಪಾತ್ರನನಶೇಷಲೋಕಪ
ವಿತ್ರನನಜರನನನಂತವೀರ್ಯನನಖಿಳ
ಸ್ತೋತ್ರನನೆಂತುವಕಾರಣ
ಮಿತ್ರನನೋಲಗಿಪುದಮಿತಸೌಖ್ಯಮನೊಲ್ವಂ || ೭೧ ||

ಆನುಪಮಸುಖನಿಳಯನ
ನನಘನನಕ್ಷಯನಂ ತ್ರಿಲೋಕಪತಿಯಂ ಸರ್ವ
ಜ್ಞನನಾಪ್ತನೆಂದು ಪೊರ್ದುವು
ದನವದ್ಯನನಿಷ್ಟಸಿದ್ಧಿಯಂ ಬಯಸುವವಂ || ೭೨ ||

ನಿರುತಂ ತನ್ನೊಳ್ ಮೆಯ್ವೆ
ತ್ತಿರೆ ಸಾಸಿರದೆಂಟುನಾಮಮುಂ ಸಕಳಜಗ
ದ್ಗುರುವಾದನಾವನಾತನೆ
ಪರಮೇಶ್ವರನೆಂದು ನಂಬಿ ಸೇವಿಪುದಱಿವಂ || ೭೩ ||

ಗುಣಿಯಂ ತ್ರಿಲೋಕಚೂಡಾ
ಮಣಿಯಂ ಪರಮಾತ್ಮನಂ ಜಗಜ್ಜನಚೆಂತಾ
ಮಣಿಯನಘದೂರನಂ ಸುರ
ಗಣವಂದ್ಯನನಾಪ್ತನೆಂದು ಸೇವಿಪುದಱಿವಂ || ೭೪ ||

ಆಪ್ರಮಿತತೇಜನಂ ಭುವ
ಸಪ್ರಭುವಂ ಶಾಂತಮೂರ್ತಿಯಂ ಶಾಶ್ವತಸೌ
ಖ್ಯಪ್ರಿಯನನಖಿಳಮನುಜೇಂ
ದ್ರಪ್ರಣುತನನಾಪ್ತನೆಂದು ಬಗೆವುದು ಚದುರಂ || ೭೫ ||

ಸನ್ಮಾರ್ಗರೂಪನಂ ವಿ
ಶ್ವನ್ಮು ನಿಜನಭಾವಿತಕ್ರಮಾಬ್ಜನನಜನಂ
ಮನ್ಮನದಿಂದೋಲಗಿಪುದು
ಜನ್ಮ ಜರಾಮರಣರಹಿತನೆನಿಸಿದ ಜಿನನಂ || ೭೬ ||

ಪುಟ್ಟದನಂ ಪೊಂದದನಂ
ನೆಟ್ಟನೆ ಲೋಕೈಕದರ್ಶಿ ತಾನೆನಿಸಿದನಂ
ನಿಟ್ಟಿಸಿ ಮನದೊಳ್ ದುರಿತಘ
ರಟ್ಟನನೆನಗಾಪ್ತನೆಂದು ಭಾವಿಪುದಱಿವಂ || ೭೭ ||

ಭವಮಥನನಂ ಜಿತಾಂಗೋ
ದ್ಭವನಂ ಲೋಕೈಕಬಂಧುವಂ ದುರಿತಮಹಾ
ರ್ಣವತರಣನಿಪುಣನಂ ನ
ಚ್ಚುವುದರುಹನನಾಪ್ತನೆಂದು ನಿಶ್ಚಯದಿಂದಂ || ೭೮ ||

ಜಿನನಿರೆ ಜನನಿಯ ಬಸುಱೊಳ್
ವಿನಯದೆ ಬಲಗೊಳೆ ಪದಾರ್ಥನಿರ್ಣಯಮಕ್ಕುಂ
ಮುನಿಪತಿಗಳಿಗೆನೆ ಬಾಪ್ಪುರೆ
ಜಿನೇಂದ್ರನಂ ಬೋಧನಿಧೀಯನೋಲಗಿಸದಬಾರ್ || ೭೯ ||

ಪುಟ್ಟಲೊಡಂ ದೇವೇಂದ್ರಂ
ನಿಟ್ಟಿಸಿ ಸರ್ವಜ್ಞನೆಂದು ಪೊಡೆವಟ್ಟನೆನಲ್
ಮಟ್ಟಮಿರು ಮರುಳೆ ಪಟ್ಟಂ
ಗಟ್ಟಿದೊಡಱಸಲ್ಕೆ ವೇೞ್ಕುಮೇ ಲಕ್ಷಣಮಂ || ೮೦ ||

ದೇವೇಂದ್ರ ನರೇಂದ್ರ ಫಣೀಂ
ದ್ರಾವಳಿ ಪಿರಿದಪ್ಪ ಭಕ್ತಿಯಿಂ ಜಿನಪತಿಯಂ
ಭಾವಿಪರೆಂದೊಡೆ ಪೆರ್ಮೆಯ
ನೇವಣ್ಣಿಪುದಾನೆಗಂಡು[ಮ]ಡಿಯಱಸುವುದೇ || ೮೧ ||

ಜಿನಪತಿ ಜಗದೊಳ್ ಪೂಜಾ
ರ್ಹನಪ್ಪುದಱಿನರ್ಹನಾದನೆಂದುಂ ಜನನಂ
ತನಗಿಲ್ಲದಱಿಂದಭವನು
ಮೆನೆ ನಿಜದಿಂ ಖ್ಯಾತಿವೆತ್ತನಿಂತೀ ಜಗದೊಳ್
ತನಗಿಲ್ಲದಱಿಂದಭವನು
ಮೆನೆ ನಿಜದಿಂ ಖ್ಯಾತಿವೆತ್ತನಿಂತೀ ಜಗದೊಳ್ || ೮೨ ||

ಚಂ || ಪುಸಿ ಕೊಲೆ ಪಾದರಂ ಕಳವಸೇವ್ಯವಿಮೋಹನಮೆಂಬ ತೀವ್ರದು
ರ್ವ್ಯಸನಮನಾವಗಂ ಬಿಡುವುದೆಂಬ ಜಿನೇಶ್ವರನಾಜ್ಞೆ ಮೀರೆ ಲಂ
ಘಿಸಿದೊಡಮೀಗಳುಂ ಜಗಮೆ ದಂಡಿಸುತಿರ್ದುಪುದೆಂದೊಡೋಹೊ ಬ
ಣ್ಣಿಸಲಳವೇ ಜಗತ್ತ್ರಯವಿಭುತ್ವಮನಿಂದ್ರನರೇಂದ್ರವಂದ್ಯನಾ || ೮೩ ||

ತನು ನಯನಹಾರಿ ಶಾಂತಾ
ತ್ಮನ ವಚನಂ ಶ್ರವಣಹಾರಿಯುಪಕಾರಿ ದಿಟಂ
ತನಗೆಂದಾರಾಧಿಸುವಂ
ಜಿನೇಂದ್ರನಂ ಗುಣನಿಧಾನನಂ ಮತಿವಂತಂ || ೮೪ ||

ಹಳಕುಳಿಶಚಕ್ರಲಾಂಛನ
ವಿಳಾಸಿ ಹಳಕುಳಿಶಚಕ್ರಧರಸಂಪದಮಂ
ಬೆಳೆಯಿಸುಗುಂ ತಮಗೆಱಗಲ್
ವಿಳಾಸದಾರ್ಹಂತ್ಯಪದಮುಮಂ ಜಿನನ ಪದಂ || ೮೫ ||

ಧರೆಯೆಲ್ಲಮನಾಳಿಸುಗುಂ
ಸುರೇಂದ್ರಸಂಪದಮನೆಯ್ದಿಕುಂ ಮುಕ್ತಿಯೊಳಾ
ದರದಿಂ ನೆರಪುಗುಮರ್ಹ
ತ್ಪರಮೇಶ್ವರ ತತ್ಪದಾಬ್ಜಸೇವನೆ ತನ್ನಂ || ೮೬ ||

ಪಲವುಂ ಮಾತಿನೊಳೇಂ ನಿ
ಶ್ಚಳಭಕ್ತಿಯಿನೊರ್ಮೆ ಬಂದು ಜೈನಾಲಯಮಂ
ಬಲವಂದನಿತಱಿನಘಸಂ
ಕುಳಮಂ ಗೆಲಲಾರ್ಕುಮಲ್ಲಿ ಸಂದೆಯಮುಂಟೇ || ೮೭ ||

|| ಅನಿಶಂ ಪಾಪಿ ಪರೋಪತಾಪಿ ನಿರುತಂ ಹಿಂಸಾರತಂ ತಾನೆನಿ
ಪ್ಪ ನಿಕೃಷ್ಟಂಗ[ಮ]ಶೇಷಜೀವದಯೆಯುಂ ಶಾಂತತ್ಪಮುಂ ನಿಶ್ಚಯಂ
ಮನದೊಳ್ ಪುಟ್ಟುಗುಮೊರ್ಮೆ ಕಂಡನಿತಱಿಂದೆಂದಂದೆ ಸದ್ಭಾವದಿಂ
ಜಿನನಂ ಭಾವಿಸುವಂಗದಾವ ಗಹನಂ ಮುಕ್ತ್ಯಂಗನಾಸಂಗಮಂ || ೮೮ ||

ಫಣಿಯ ವಿಷಂ ವಿಷಹರಣದ
ಮಣಿಯಿಂದಂ ಕಿಡುವ ತೆಱದೆ ದುರಿತವಿಪಂ ತತ್
ಕ್ಷಣದೊಳೆ ಕಿಡುಗುಂ ಭುವನ
ಪ್ರಣುತಜಿನೇಂದ್ರಾನನೇಂದುವಂ ನೋಡಲೊಡಂ || ೮೯ ||

|| ನಯನಾನಂದನಸಾಂದ್ರಚಂದ್ರಕರಮುಂ ಕರ್ಪೂರಮುಂ ಕೂರ್ಪ ಕಾಂ
ತೆಯ ಕಾಂತಾನನಚಂದ್ರನಂ ಕಮಳಷಂಡಶ್ರೀಯುಮುಂ ಧ್ಯಾನಮಾ
ೞ್ಕೆಯ ಚೆಲ್ವುಂ ಬೆಳೆಗೆಯ್ಯುಮೆಂಬಿವಿನಿತುಂ ಭವ್ಯಂಗೆ ನಿರ್ವ್ಯಾಕುಳಂ
ನಯನಾನಂದಕರಂ ಜಿನೇಂದ್ರಮುಖಚಂದ್ರಾಳೋಕನಶ್ರೀಪದಂ || ೯೦ ||

|| ಸ್ರ || ಜನನೀಗರ್ಭಾಂಧಕೂಪಾಂತರದಿನೊಗೆದೆನಾನೀಗಳಿಂದೀಗ ಮಲ್ಲೋ
ಚನನೀಳೇಂದೀವರಂ ತಾಳ್ದಿದುದು ವಿಕಸನಶ್ರೀಯನಾತ್ಯಂತಿಕಂ ಮ
ಜ್ಜನನಂ ಸಾಫಲ್ಯಮೀಗಳ್ ಜಿನಮುಖಕಮಳಾಳೋಕನಂಬೆತ್ತೆನಾನೆಂ
ದೆನುತುಂ ತಾನಾಗಳುಂ ರಾಗದೆ ನಲಿವ ನರಂ ಲೋಕವಂದ್ಯಂ ಕೃತಾರ್ಥಂ || ೯೧ ||

ದೇವಸ್ತುತ್ಯನನರುಹ
ದ್ದೇವನನರ್ಚಿಸುತುಮಿರ್ಪ ಭವ್ಯನವಶ್ಯಂ
ಭಾವಿಪೊಡೆ ಮರ್ತ್ಯನಲ್ಲಂ
ದೇವಸ್ತುತ್ಯನೆ ದಲಲ್ಲಿ ಸಂದೆಯಮುಂಟೇ || ೯೨ ||

|| ಮನವೊಲ್ದರ್ಚಿಸಿದಾತನುಂ ಪಿರಿದೆನಿಪ್ಪಾನಂದದಿಂದಂ ಜಿನಾ
ರ್ಚನಮಂ ನೋಡಿದನುಂ ನಿರೀಕ್ಷಿಸಿ ಪವಿತ್ರಸ್ತೋತ್ರದಿಂ ಕೀರ್ತಿಸು
ತ್ತೆ ನಮಸ್ಕಾರಮನೊಲ್ದು ಮಾಡಿದವನುಂ ಪೂಜಾನುಮೋದಾಂತರಂ
ಗನುಮತ್ಯಂತಸುಖಂಗಳಂ ಪಡೆಗುಮಾ ದೇವೇಂದ್ರಲೋಕಂಗಳೊಳ್ || ೯೩ ||

ಮಾಡಿದೊಡಂ ಮೆಚ್ಚಿದೊಡಂ
ಮಾಡಿಸಿದೊಡಮಮಿತಸೌಖ್ಯಮೆನೆ ಕೆಮ್ಮನೆ ಕೆ
ಟ್ಟೋಡದೆ ಜಿನಪೂಜೆಗಳಂ
ಮಾಡದೊಡಂ ನೋಡಿ ಪಡೆಯಿಮುತ್ತಮಸುಖಮಂ || ೯೪ ||

ಪರಮಾತ್ಮಂ ಲೋಕತ್ರಯ
ಗುರು ಭಕ್ತಜನಾನುರಕ್ತನಕ್ಷರನಾದ್ಯಂ
ಪುರುಷೋತ್ತಮನೆಂಬುದು ದೇ
ವರ ದೇವನನಸಮಸೌಖ್ಯಮಂ ಬಯಸುವವಂ || ೯೫ ||

ವಿಹ್ವಳಸಂಸಾರಗುಹಾ
ಗಹ್ವರಮಂ ಪೊಱಮಡಲ್ಕೆ ಬಗೆಯುಳ್ಳಾತಂ
ಪ್ರಹ್ವಪರನಾಗಿ ನಿಲಿಪುದು
ಜಿಹ್ವಾಗ್ರದೊಳರುಹನೆಂಬ ಮೂಱಕ್ಕರಮಂ || ೯೬ ||

ಯಮನಿಯಮಸ್ವಾಧ್ಯಾಯ
ಕ್ರಮದೆ ತಪಂಗೆಯ್ಯದೊಡಮಘಾರಾತಿಯನ
ಶ್ರಮದಿಂ ಗೆಲಲಿವೆ ಸಾಲ್ಗುಂ
ಣಮೋರಹಂತಾಣವೆನಿಸಿದಕ್ಕರಮೇೞುಂ || ೯೭ ||

|| ಒಂದಿದ ಭಕ್ತಿಯಿಲ್ಲದೊಡಮೇಂ ನಿರುತಂ ಶರಣಂ ಜಿನೇಂದ್ರ ನೀ
ನೆಂದೊಡೆ ಸೌಖ್ಯಮಕ್ಕುಮೆನೆ ಭಕ್ತಿಯಿನುಚ್ಚರಿಸುತ್ತುಮಿರ್ದೊಡೇ
ನೆಂದಪುದಾತನುನ್ನತಿಯನಾ ಗುರುಪಂಚಕವಜ್ರಪಾತಮಾ
ದಂದೆ ಕೞಲ್ದು ನುಚ್ಚುನುಱಿಯಾಗದೆ ನಿಲ್ಕುಮೆ ಪಾಪಪರ್ವತಂ || ೯೮ ||

ಜಿನಪಾದಾಂಭೋರುಹಮಂ
ನೆನೆವವನುಂ ಜಿನಪದಾಬ್ಜಮಂ ಪೂಜಿಪನುಂ
ಜಿನನಂ ಸುತ್ತಿಯಿಸುವವನುಂ
ಮನುಷ್ಯನಾಗಿರ್ದೊಡೇನೊ ಮುಕ್ತನೆ ಬಗೆಯಲ್ || ೯೯ ||

ಅತಿದುರ್ಲಭಮಪ್ಪ ಮನು
ಷ್ಯತೆಯಂ ಪಡೆದಲ್ಲಿ ಜಿನನನಾರಾಧಿಸಿ ತಾ
ನತಿಶಯಸುಖಮಂ ಪಡೆಪಂ
ಮತಿವಂತಂ ಸ್ವಾರ್ಥವಿಕಳನವನೊಲ್ಲದವಂ || ೧೦೦ ||

ದುರಿತಾರಿಯನೋಲಗಿಸದ
ನರನೀ ಸಂಸಾರಘೋಮಕರಾಕರದೊಳ್
ತಿರಿತಂದು ಮುೞುಗುತಿರ್ಕುಂ
ಪರಮಾತ್ಮ ದ್ರೋಹನಾತನಾತ್ಮ ದ್ರೋಹಂ || ೧೦೧ ||

ಕುಡುಡಂ ಕಣ್ಣಂ ಪಡೆದೊಡೆ
ತಿರಿಕಂ ನಿಧಿವಡೆದೊಡೆಂತು ನಲಿದಾಡುಗುಮಂ
ತಿರೆ ಜಿನಪದಾಬ್ಜಸೇವನೆ
ದೊರೆಕೊಳೆ ಸಂಸಾರಿ ನಲಿವುದೊಲ್ವೊಡ ಸುಖಮಂ || ೧೦೨ ||

|| ಕುಲಮುಂ ರೂಪಮನೂನಮಪ್ಪ ಸಿರಿಯುಂ ಸೌಭಾಗ್ಯಮುಂ ತೇಜಮುಂ
ಬಲಮುಂ ಖ್ಯಾತಿಯುಮೊಪ್ಪುವೊಳ್ನುಡಿಗಳುಂ ಸೌಂದರ್ಯಮುಂ ಯೋಗ್ಯತಾ
ಬಲಮುಂ ಮಿಕ್ಕ ವಿಭುತ್ವಮುಂ ಜಿನಪದಾಂಭೋಜಾತಸಂಸೇವೆಯಿಂ
ಫಲಮಂತಲ್ಲದೊಡಿಂತಿವೆಲ್ಲಮಫಲಂ ವಿಶ್ವಂಭರಾಚಕ್ರದೊಳ್ || ೧೦೩ ||

ಮನವಾರೆ ನೆನೆದು ಕಣ್ ತ
ಣ್ಣನೆ ತಣಿವಿನಮೊಲ್ದು ನೋಡಿ ನಾಲಗೆ ಜಿನನೊಂ
ದನುಪಮಗುಣಮನೆ ಬಣ್ಣಿಪು
ದೆನೆ ಪೆತ್ತಂ ಸಕಳಜಗಮನಾಳಲ್ ಪೆತ್ತಂ || ೧೦೪ ||

ಚಂ || ಜರೆ ನಿಜಶಕ್ತಿ[ಯಂ] ಪಿೞಿದು ಪಿಂಡಿಸದನ್ನೆಗಮಾತ್ಮದೇಹದೊಳ್
ನರೆತೆರೆದೋಱದನ್ನೆಗಮನಾಕುಳಮಿಂದ್ರಿಯದೇೞ್ಗೆಯುಳ್ಳಿನಂ
ಮರಣದ ದಂದುಗಂ ತೊಡರದನ್ನೆಗಮರ್ಚಿಪುದೞ್ತಿಯಿಂ ಜಿನೇ
ಶ್ವರನನಹರ್ನಿಶಂ ನೆನೆವುದಿಂದ್ರನರೇಂದ್ರಫಣೀಂದ್ರವಂದ್ಯನಂ || ೧೦೫ ||

ಇಂತೀ ನಿಲವಿಂ ಪಡೆವುದ
ನಂತಸುಖಾಸ್ಪದಮನೆಂದು ಜಿನಬಿಂಬಂ ಪೇ
ೞ್ವಂತಿರ್ದುದು ಜಾನಿಸುವುದು
ಸಂತಂ [ತ]ದನಂತಸೌಖ್ಯಮಂ ಬಯಸುವವಂ || ೧೦೬ ||

ಮನದೊಳ್ ಭಾವಿಸುತುಂ ಬರೆ
ದನಿತ್ತಱಿಂ ಚಿತ್ರಿಕಂಗಮುತ್ತಮಸೌಖ್ಯಂ
ಜನಿಯಿಕುಮೆನೆ ತತ್ತ್ವಜ್ಞಂ
ಜಿನೇಂದ್ರನಂ ಭಾವಿಪಂದು ಗಹನಮೆ ಮೋಕ್ಷಂ || ೧೦೭ ||

|| ಕೊಲ್ಲದಿರೆಂಬುದೆಲ್ಲಿ ಪುಸಿಯಂ ಬಿಸುಡಿಂ ಗಡಮೆಂಬುದೆಲ್ಲಿ ನೀ
ನೊಲ್ಲದಿರೆಂತುವನ್ಯವನಿತಾರತಿಸಂಗಮಮೆಂಬುದೆಲ್ಲಿ ಚಿಃ
ಪೊಲ್ಲದು ಕಾಂಕ್ಷೆಗಳ್ ಕಳವು ಜೇನಡಗಂ ಬಿಸುಡೆಂಬುದೆಲ್ಲಿ ತಾ
ನಲ್ಲಿದವೆಂದು ನಂಬು ಪರಮಾತ್ಮನುಮಾಗಮಮುಂ ಪರತ್ರೆಯುಂ || ೧೦೮ ||

ಮನದೊಳ್ ತನ್ನಂ ಭಾವಿಸಿ
ದನಿತಱೊಳಪವರ್ಗಮಾರ್ಗಮಂ ತೋರುವವೋಲ್
ಜನವಂದ್ಯರಾಗೆ ಮಾಡುವ
ಜಿನರಿಂದಾರುಂ ಪರೋಪಕಾರಿಗಳೊಳರೇ || ೧೦೯ ||

ಮತಿಹೀನಂಗಂ ವಿಳಸ
ನ್ಮತಿಯಕ್ಕುಂ ಶಿಷ್ಟಸಂಗದಿಂದೆಂದೊಡೆ ಸ
ನ್ಮತಿಯೊಳ್ ಕೇವಳವಿದ್ಯಾ
ಪತಿ ನೆಲಸಿರೆ ಸುಮತಿಯಪ್ಪದೊಂದಚ್ಚರಿಯೇ || ೧೧೦ ||

ಚಿಂತಿಪುದು ಜಿನೇಶ್ವರನಂ
ಸಂತತಮುತ್ಸವದೆ ಯಾ ಮತಿಸ್ಸಾಗತಿಯೆಂ
ಬಂ ತನಗಾಗದಿರದು[ವ] ತ್ಯಂತಸುಖಂ ಸಿದ್ಧವಚನಮೇಂ ತಪ್ಪುಗುಮೇ || ೧೧೧ ||

ಅತಿವಿಷಮಮಪ್ಪ ಖಳಸಂ
ಸೃತಿಸುಖಮನೆ ನೆನೆಯುತಿರ್ಪನೆಂತಂತಿರೆ ಭಾ
ವಿತನಾಗಿ ಸಂತತಂ ಜಿನ
ಪತಿಯಂ ನೆನೆ ನೆನೆವವಂಗೆ ತೀರದುದುಂಟೇ || ೧೧೨ ||

ಚಂ || ಅರಿದು ಗೆಲಲ್ಕೆ ಕಿಲ್ಟಿಷರುಜಾಳಿಯನೌಷಧಸಾಧ್ಯಮಲ್ಲದಂ
ನರರೞಿವೆಜ್ಜರೇನಱಿವರೇ ಕಿಡಿಸಲ್ ಜಿನರಾಜಪಾದಸಂ
ಸ್ಮರಣಮಹೌಷಧಂ ಕಿಡಿಸುಗುಂ ಸಲೆ ಭವ್ಯನೆ ದೇವದೇವನಂ
ಸ್ಮರಿಸುವುದೇಕಚಿತ್ತದಿನಹೀಂದ್ರನರೇಂದ್ರಸುರೇಂದ್ರವಂದ್ಯನಂ || ೧೧೩ ||

ಪ[ಲ]ವೞಿತೊರೆಗಳ ನೀರ್ಗಳ
ನಲಸದೆ ಮಿಂದಂ ಪುನೀತನಲ್ಲಂ ದಲ್ ನಿ
ರ್ಮಳಜೈನೇಂದ್ರಾಭಿಷವಣ
ಜಳದಿಂದೆ ಪವಿತ್ರಗಾತ್ರನಕ್ಕುಂ ಜೈನಂ || ೧೧೪ ||

ಜ್ಯೋತ್ಸ್ನೆಯೊಳೆ ತಿಮಿರಪಟಳಂ
ಕೃತ್ಸ್ನಂ ಕಿಡುವಂತೆ ದೋಷವರ್ಜಿತ ಪರಮಾ
ರ್ಹತ್ಸ್ನಪನಸಲಿಲದಿವಿಜಸ
ರಿತ್ಸ್ನಾನದೆ ದುರಿತತಿಮಿರಪಟಳಂ ಕಿಡುಗುಂ || ೧೧೫ ||

ಶಾಂತಿಗೆ ಪುಣ್ಯಾಹದ ನೀ
ರಂ ತಳಿದೊಡೆ ಶುದ್ಧಿಯಾಗಲಱಿಗುಮೆ ಗೇಹಂ
ಭ್ರಾಂತೇಂ ಜಿನಗಂಧೋದಕ
ಮಂ ತಳಿವುದು ಮನೆಗಳೊಳಗೆ ಮಾಂಗಲ್ಯಕರಂ || ೧೧೬ ||

ಕಳಶಂ ಕನ್ನಡಿ ತೋರಣ
ಮೆಳದಳಿಸುವ ಕಱುಕೆ ಸೇಸೆ ಬಾಸಿಗಮಿವು ಮಂ
ಗಳಮೆ ಜಿನಪಾದಪದ್ಮಂ
ಗಳನರ್ಚಿಸಿದಾ [ಸು]ಪುಷ್ಪಮದೆ ಮಾಂಗಲ್ಯಂ || ೧೧೭ ||

ಪಸುರ್ವಂದರಳಂಕಾರಂ
ಪಸೆ ಪಱಿಯೆಂಬಿವಱಿನಾದ ಪರಿಣಯನಮದೇ
ನೆಸೆಗುಮೆ ಜಿನರಾಜಾರ್ಚನ
ಮೊಸಗೆಯ ಮೇಲೊಸಗೆಯಲ್ತೆ ಭವ್ಯಂಗೆಂದುಂ || ೧೧೮ ||

|| ಸ್ರ || ಅತಿಗಂಭೀರಂ ಭವಾಂಭೋನಿಧಿ ಕೞಿಯಲಣಂ ಬಾರದೆನ್ನಂಗಮೀ ಸಂ
ಸ್ಮತಿಯೊಳ್ ಮತ್ತಾರುಮಾಱರ್ ತೆಗೆಯಲರ್ದಾತನಂ ದುಃಖನಕ್ರಾ
ಹತನಂ ಕರ್ಮೋಗ್ರವಾತಾಚಳಿತನನಭವಂ ಸರ್ವಗೀರ್ವಾಣರಾಜಾ
ರ್ಚಿತಪಾದಾಂಭೋಜಯುಗ್ಮಂ ಬಗೆವೊಡೆ ಜಗದೊಳ್ ತಾನೆ ಹಸ್ತಾವಳಂಬಂ || ೧೧೯ ||

ದೇವನ ತಲೆಗೇಱಿದ ಪು
ಷ್ಟಾವಳಿಯಂ ಮುಟ್ಟಿ ಮೀವರುೞಿದೆಡೆಗಳೊಳಿ
ನ್ನೇವೊಗೞ್ವದೊ ನೆಗೞ್ದರ್ಹ
ದ್ದೇವನನರ್ಚಿಸಿದ ಕುಸುಮವಖಿಳಪವಿತ್ರಂ || ೧೨೦ ||

|| ಸ್ರ || ಜಿನಪಾದಾಂಭೋಜಮಂ ಪೂಜಿಸಿದ ವಿವಿಧಮಪ್ಪರ್ಚನಾನೀಕಮಂ ದೇ
ವನಿಕಾಯಂ ಪ್ರೀತಿಯಿಂದಂ ತಲೆಯೊಳೆಸೆವಿನಂ ತಾಳುವರ್ ನಿಚ್ಚಲುಂ ಮ
ತ್ತಿನ ದೈವಂಗಳ್ಗೆ ಕೊಟ್ಟರ್ಚನೆಯನೆ ಖಳರುಂ ದುಷ್ಟರುಂ ಕಷ್ಟರುಂ ದು
ರ್ಜನರುಂ ಸೇವಿಪ್ಪರೆಂದಂದರುಹನೆ ಪಿರಿಯಂ ದೇವರೊಳ್ ತಾಂ ಮಹಂತಂ || ೧೨೧ ||

|| ಸ್ರ || ಅತಿರೌದ್ರಾರ್ಥಾವಹಂಗಳ್ ಸ್ವವಚನವಿರಸೋತ್ಪಾದಿಗಳ್ ದೇವದೂಷ್ಯ
ಸ್ಥಿತಿಗಳ್ ತಾವನ್ಯದೇವಸ್ತುತಿಗಳಖಿಳಪುಣ್ಯೇತರಂಗಳ್ ಜಿನೇಂದ್ರ
ಸ್ತುತಿಗಳ್ ಕರ್ಣಾಮೃತಸ್ಯಂದಿಗಳಖಿಳಭವಾನಂದಿಗಳ್ ಲೋಕಮಾಂಗ
ಲ್ಯತರಂಗಳ್ ಪಾವನಂಗಳ್ ಸಕಳತನಜನಪ್ರಾರ್ಥಿತಾರ್ಥಪ್ರದಂಗಳ್ || ೧೨೨ ||

ದೇವರ ದೇವನನರುಹ
ದ್ದೇವನನೋಲಗಿಸೆ ಮುಕ್ತಿಯಕ್ಕುಂ ಪೆಱರಂ
ಸೇವಿಸಿದೊಡಾಗದೆಂತೆನೆ
ಭಾವಿಸಲೇನುಂಟೆ ಮೊರಡಿಯೊಳ್ ಮಾದುಫಲಂ || ೧೨೩ ||

ಆರ್ತದೊಳ್ ತೊಡರ್ದು ಪಲವುಂ
ಮೂರ್ತಿಗಳಂ ತಾಳ್ದಿ ನಮೆವ ಕಾಪುರುಷರ್ ತಾ
ವಾರ್ತಪರೆ ಶಾಂತರೂಪಿಂ
ವರ್ತಿಸಿ ಜಿನರಾಜನಂತು ಮುಕ್ತಿಯನೀಯಲ್ || ೧೨೪ ||

ಆವಾವ ತೆಱದೊಳೆಂತುಂ
ಭಾವಿಪ್ಪೊಡ[ಮೇ]ಕರೂಪ[ರಾ]ಗಿರ್ಪವರಂ
ದೇವರಿವರೆಂದು ನಂಬದೆ
ಮೂವಣ್ಣಂ ಬಂದ ದೇವರಂ ನಂಬುವುದೇ || ೧೨೫ ||

ಮತಿಗೆಟ್ಟು ಸಂತತಂ ಸಂ
ಸೃತಿಯೊಳ್ ನಮೆವವರನಾದಮೋಲಗಿ[ಸಿ] ಚತು
ರ್ಗತಿಯೊಳ್ ಬೀೞದೆ ಪಂಚಮ
ಗತಿಯೊಳ್ ನೆಲಸುವೊಡೆ ಸೇವಿಪುದು ಜಿನಪತಿಯಂ || ೧೨೬ ||

ಜಂಗುಳಿದೇವರನೊಂದಱು
ದಿಂಗಳ್ ಕುಳ್ಳಿರ್ದು ಪೂಜಿಸುತ್ತಿರದೆ ಗುಣೋ
ತ್ತುಂಗನೆನೆ ನೆಗೞ್ದ ಜಿನನ ಪ
ದಂಗಳನರ್ಚಿಪುದು ಸೌಖ್ಯಮಂ ಬಯಸುವವಂ || ೧೨೭ ||

ಸಾಲದೆ ಮುಕ್ತ್ಯಂಗನೆಯಂ
ಸೋಲಿಸುವೊಡೆ ಜಿನಪದಾಬ್ಜಸೇವನೆ ಮತ್ತಂ
ಪಾಲುಂಡುಂ ಮೇಲುಂಬುದೆ
ಲೋಲುಪರೆನಿಸಿರ್ದ ದೇವರಂ ಸೇವಿಪುದೇ || ೧೨೮ ||

ಪೊನ್ನೆಂಬ ಪೆಸರೊಳ್ ಕ
ರ್ಬೊನ್ನುಂ ಕಿಸುವೊನ್ನುಮೆಯ್ದಲಾರ್ಕುಮೆ ಪೇ[ೞೇಂ] ಪೊನ್ನಂದಮಂ ವಿಚಾರಿಪೊ
ಡನ್ನವೆ ಜಿನನಾಥನೊಡನೆ ಮತ್ತಿನ ದೆಯ್ವಂ || ೧೨೯ ||

ಚಂ || ಒಡೆಯನೆ ತಾಂ ಜಗತ್ತ್ರಯಕೆ ನಿಶ್ಚಯಮೆಂಬುದನೀ ಜಗಕ್ಕೆ ಕ
ನ್ನಡಿಸುವವೋಲ್ ಫಣೀಂದ್ರ ದನುಜೇಂದ್ರ ಸುರೇಂದ್ರರನೂನಭಕ್ತಿ ನೇ
ರ್ಪಡೆ ಪಿಡಿಯಲ್ಕೆ ಪೂರ್ಣಸಸಿಯಂ ನಗುವಂದದಿನೊಪ್ಪಿ ತೋರ್ಪ ಮು
ಕ್ಕೊಡೆಯೊಡೆಯಂಗೆ ಮಾಡುವುದವೊರ್ಮೆಯೆ[ಯೀ]ಗುಮನಂತಸೌಖ್ಯಮಂ || ೧೩೦ ||

ಪರಮಜಿನಭಕ್ತಿ ದೊರೆಕೊಳೆ
ಪರಸಮಯಂಗಳ್ಗೆ ಮತ್ತಮೆಱುಗುತ್ತಿರ್ಪಂ
ಪಿರಿದುಂ ನಿಧಿ [ದೊರೆಕೊಂಡುಂ] ಜರಗಂ ಕರ್ಚುತ್ತುಮಿರ್ಪ ಮರುಳಂ ಪೋಲ್ಕುಂ || ೧೩೧ ||

ಜಿನನಾಮೋಚ್ಚಾರಣಮುಂ
ಜಿನಚರಣಸ್ಮ ರಣಮುಂ ಜಿನಾಗಮತತಿಯುಂ
ಮನುಜಂಗೆ ಕೂಡದೆಂತುಂ
ಘನತರದುಷ್ಕರ್ಮಬಂಧಮುಳ್ಳನ್ನೆವರಂ || ೧೩೨ ||

ನರಕಮನೆ ಬಯಸನೆಂತುಂ
ನರಕಕ್ಷಯಮೋಕ್ಷಲಕ್ಷ್ಮಿಯೊಳ್ ಕೂಡುವುದಂ
ಪಿರಿದುಂ ಬಯಸುಗುಮದು ತಾಂ
ದೊರೆಕೊಳ್ಗುಂ ವೀತರಾಗಪದಸೇವನೆಯಿಂ || ೧೩೩ ||

ಜಿನಮಾರ್ಗದೆ ನಡೆದು ಜಗ
ಜ್ಜನಸಂಸ್ತುತನಾಗಿ ಮುಕ್ತಿಯೊಳ್ ಕೂಡುವುದಂ
ಮನುಜಂ ತಾನೊ[ಲ್ವ]ನೆ ಕ
ರ್ಮನಿಕಾಯಂ ಪೊರ್ದಲೀಯದವನನದೆಂತುಂ || ೧೩೬ ||

ಚಂ || ಎನಿತು ವಿವೇಕಿಯಕ್ಕೆಮ ಬಹುಶ್ರುತನಕ್ಕೆಮ ಶಬ್ದಶಾಸ್ತ್ರಮು
ಳ್ಳನಿತಱೊಳಂ ಕರಂ ಕುಶಲನಕ್ಕೆಮ ವಿದ್ಯೆಯೊಳಾದ ಕರ್ಮಬಂ
ಧನಶಿಥಿಲತ್ವಮಿಲ್ಲದೊಡೆ ಪುಟ್ಟುವುದಲ್ತು ಜಿನೇಂದ್ರತತ್ತ್ವವಾ
ಸನೆ ಭವವಾರಣಂ ಮದವಿದಾರಣಮಕ್ಷಯಸೌಖ್ಯಕಾರಣಂ || ೧೩೭ ||

ಇಂತಪ್ಪನಾಪ್ತನೆಂಬುದ[ದೆಂ]ತುಂ ದುಷ್ಕೃತಿಗೆ ತೋಱದಾತನ ಮನಮುಂ
ಭ್ರಾಂತೇಂ ಪುದಿಯುತ್ತಿರ್ಕುಮ
ನಂತಭವಂ ಮಱಸಿ ದರ್ಶನಾವರಣೀಯಂ || ೧೩೮ ||

ಪುರುಷಂಗೆ ಪಲವು ಭವದೊಳ್
ನೆರಪಿದ ದುಷ್ಕರ್ಮಮೆಯ್ದೆ ತವುವನ್ನೆವರಂ
ಪರಮಜಿನೇಂದ್ರಪದಾಬ್ಜ
ಸ್ಮರಣಮದೇಗೆಯ್ದುಮೊಂದಲಱಿಯದು ಮನದೊಳ್ || ೧೩೯ ||

ಅಂತಿಲ್ಲದ ಸಂಸ್ಕೃತಿಯೊಳ್
ನಂತಭವಂ ಪುಟ್ಟೆ ನಮೆದು ಬೆದಬೆದಬೆಂದಂ
ದೆಂತಾನುಂ ಸಾರ್ಗುಂಕ
ರ್ಮಾಂತಕನಂ ಸೌಖ್ಯಭಾಗಿಯೆನಿಸಿದ ಜೀವಂ || ೧೪೦ ||

ಅಱಿಯಮೆಯಿಂದಂ ಪೋದುವು
ಪೆಱಗಣ ಜನ್ಮಂಗಳೆಂದು ಬಗೆದಾಪೊತ್ತುಂ
ಮಱುಗಲ್ವೇಡ ಜಿನೇಂದ್ರಂ
ಗೆಱಗಲೊಡಂ ಪೋದ ಜನ್ಮ ಮನಿತುಂ ಸಫಲಂ || ೧೪೧ ||

ಬರಿಸದ ಜೀವಿತಮೊರ್ಮೆಯೆ
ದೊರೆಕೊಳೆ ಬಡವಂಗೆ ಸಮೆದ ಪೆಱಗಣ ದುಃಖಂ
ಪರೆವಂತಿರೆ ಸಂಸಾರಿಗೆ
ಪರೆಗು ಮಳಂ ಜಿನಪದಾಬ್ಜಮಂ ಸಾರಲೊಡಂ || ೧೪೨ ||

|| ಇಱಿದುಂ ಕಳ್ದುಮಸತ್ಯಮಂ ನುಡಿದುಮನ್ಯಸ್ತ್ರೀಯರಂ ಸಾರ್ದುಮೇ
ತೆಱದಿಂದಂ ಧನಧಾನ್ಯಮಂ ನೆರಪಿದೀ ದುಷ್ಕರ್ಮಮಂ ಪಿಂಗಿಸ
ಲ್ಕಱಿಯೆಂ ಕೆಟ್ಟೆನೆನಲ್ಕೆ ವೇಡೆಲೆ ಜಿನೇಂದ್ರ ಶ್ರೀಪದಾಬ್ಜಂಗಳಂ
ಮಱೆಗೊಂಡಾಗಳೆ ಪಿಂಗಿ ಪೋಕುಮದಱಿಂ ದುಷ್ಕರ್ಮಮುಂ ನಿಶ್ಚಯಂ || ೧೪೩ ||

|| ಶಾಪದೆ ನೊಂದವಂಗೆ ಬಹುದುಃಖದೊಳೊಂದಿದವಂಗೆ ಕಾಮಸಂ
ತಾಪದೆ ಬೆಂದವಂಗೆ ಬಡವಂಗದವಂಗತಿದುಃಖಿತಂಗೆ ಧಾ
ತ್ರೀಪತಿಕೋಪದೊಳ್ ತೊಡರ್ದವಂಗೆ ಶರಣ್ ಪೆಱತಿಲ್ಲ ಜೈನಸ
ದ್ರೂಪವಿಶೇಷಸಂಸ್ಮರಣಮೊಂದೆ ವಲಂ ಕರಣೀಯಮೆಲ್ಲಿಯುಂ || ೧೪೪ ||

ಸ್ರ || ಶ್ರೀಮದ್ದೇವೇಂದ್ರವೃಂದಾರ್ಚಿತಪದಕಮಳಂ ಭವ್ಯಲೋಕೈಕಸೇವ್ಯಂ
ಕಾಮಪ್ರಧ್ವಂಸಿ ವಿಧ್ವಂಸಿತದುರಿತಭಟಾಟೋಪನಾರ್ಹಂತ್ಯಲಕ್ಷ್ಮೀ
ರಾಮಾಕೇಳೀನಿವಾಸಂ ವಿಪುಳವಿಮಳಕೈವಲ್ಯಬೋಧಪ್ರಭಾವೋ
ದ್ದಾಮಂ ಲೋಕೈಕನಾಥಂ ಕುಡುಗೆ ನಿಜಸುಖಾವಾಪ್ತಿಯಂ ವೀರನಾಥಂ || ೧೪೫ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಟರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ
ಸಮಯಪರೀಕ್ಷೆಯೊಳಾಪ್ತಸ್ವರೂಪನಿರೂಪಣಂ ಪ್ರಥಮಾಧಿಕಾರಂ

 


[1] ಪ್ರತ್ಯಂತರದ ಪಾಠ