ಶ್ರೀಮದನಂತಚತುಷ್ಪಯ
ಧಾಮಂ ತ್ರೈಲೋಕ್ಯಶಿಖರಿಶೇಖರನಖಿಳ
ಸ್ವಾಮಿ ವರಮೋಕ್ಷಲಕ್ಷ್ಮೀ
ಧಾಮಂ ದಯೆಗೆಯ್ಗೆ ವಿಮಳರತ್ನತ್ರಯಮಂ || ||

ಅನುಪಮಮಪ್ಪಱಿವಿಂದ
ತ್ಯನುಪಮಗುಣಗಣದಿನನುಪಮಾಚಾರದಿನೀ
ಜಿನಸಮಯಿಗಳೋರೊರ್ಬರೆ
ಮನುಷ್ಯಲೋಕದೊಳೆ ದೇವರಿರ್ಪಂತಿರ್ಪರ್ || ||

ದೀವಳಿಗೆಯ ಕೞ್ತಲೆಯೊಳ್
ದೀವಿಗೆಗಳ್ ಬೆಳಪ ತೆಱದೆ ಕಲಿಕಾಲದೆ ಮಿ
ಥ್ಯಾವಿಳಸಿತವೆನೆ ಸಂದ ಜ
ನಾವಳಿಗಳ ನಡುವೆ ಬೆಳಗುತ್ತಿರ್ಪರ್ ಭವ್ಯರ್ || ||

ನಿಧಿಪುರುಷನಲ್ಲದಂಗೇಂ
ನಿಧಿ ಸಾರ್ಗುಮೆ ಸಾರದಂತೆ ಪಲರೊಳಗೆ ಗುಣಾಂ
ಬುಧಿಯಪ್ಪ ಭವ್ಯನಿರಲೇ
ನಧೀಗಮಸಮ್ಯಕ್ತ್ವಮುೞಿದವಂಗಾದಪುದೇ || ||

ಪಿರಿದಪ್ಪ ನಿಧಾನಂ ಸಾ
ರ್ತರೆ ದೆವಸಮನಱಸದಂದದಿಂ ಶ್ರೀಧರ್ಮಂ
ದೊರೆಕೊಂಡೊಡಲಸದೊಂದುಮ
ನಿರದೆ[ಯೆ] ಕೈಕೊಳ್ವುದಮಿತಸೌಖ್ಯಮನೊಲ್ವಂ || ||

ಪುರುಷನ ಪುಣ್ಯೋದಯದಿಂ
ವರಲಕ್ಷ್ಮಿ ಯುಮಿಷ್ಟಸಿದ್ಧಿಯುಂ ಜಿನಚರಣ
ಸ್ಮರಣೆಯುಮವಯೋಗದೊಳಂ
ದೊರೆಕೊಳ್ಗುಂ ದಿವಸವಾರದಿಂದಾದಪುದೇ || ||

ಪೊಲ್ಲದುಗೆಯ್ವುತ್ತಿರೆ ತ
ಳ್ವಿಲ್ಲದೆ ಸುಖಮಕ್ಕುಮೊಳ್ಳಿತನೆ ಮಾಡುತಿರಲ್
ಪೊಲ್ಲದುಮಕ್ಕುಂ ಕರ್ಮಮೆ
ಬಲ್ಲಿತ್ತುೞಿ ಪೆಱತ[ನಂ]ತರಂಗಮೆ ಮುಖ್ಯಂ || ||

ಮುನ್ನೆರಪಿದುಭಯಕರ್ಮಂ
ತನ್ನಂ ಪಿಡಿದೂಡುತಿರ್ಕುಮಿಂ ಜೋಯಿಸವೇ
ಕಿನ್ನೆನಲಂತುಟೆ ನಿಶ್ಚಯ
ವೆನ್ನೋದಿದ ತೆಱನಿದೆಂಬ ಮನುಜನೆ ಚದುರಂ || ||

ಶುಭಕರ್ಮಮನೊದವಿಸುತಿರೆ
ಶುಭಮಕ್ಕುಂ ಪೊಲ್ಲದಾಗದಶುಭೋದಯದಿಂ
ಶುಭಮಾಗದೊಡಂ ಮುಂತಣ
ಶುಭಲಾಭಂ ತಪ್ಪದೊಳ್ಳಿತಂ ಮಾೞ್ಕಱಿವಂ || ||

ನಿಧಿ ತಾಂ ದೊರೆಕೊಳ್ಗುಂ ಬಹು
ವಿಧ ವಿಘ್ನಸಹಿಷ್ಣುಗಂತೆ ಕೊಳಿಸುಗುಂ ಧೈ
ರ್ಯಧನಂಗೆ ಬೇಗಮಕ್ಷಯ
ನಿಧಿಪುಣ್ಯಂ ವಿಘ್ನಸಹನೆನಿಪ್ಪುದು ಪುರುಷಂ || ೧೦ ||

ರಾಜಪ್ರಸಾದಮುಂ ಜಿನ
ರಾಜಶ್ರೀಪ್ರಸಾದಸೇವೆಯುಂ ವಸ್ತುಗಳುಂ
ವಾಜಿಗಜವೃಂದಮುಂ ಸುಖ
ಭೋಜನಮುಂ ಪುಣ್ಯದುದಯದಿಂ ದೊರೆಕೊಳ್ಗುಂ || ೧೧ ||

ರತ್ನಮನೊಂದನೆ ಪಡೆದಂ
ಯತ್ನದೆ ಸುಖಿಯಾಗಲಾರ್ಕುಮೆಂದೊಡೆ ಭವ್ಯಂ
ರತ್ನತ್ರಯಮಂ ಪಡೆದಂ
ನೂತ್ನಸುಖಕ್ಕಧಿಕನಪ್ಪುದೊಂದಚ್ಚರಿಯೇ || ೧೨ ||

|| ಪ್ರಚುರಂ ವರ್ತಿಕುಮಾವನಲ್ಲಿ ನಿರುತಂ ನಿಶ್ಯಂಕೆ ನಿಷ್ಕಾಂಕ್ಷೆ ನಿ
ರ್ವಿಚಿಕಿತ್ಸಾಖ್ಯಮಮೂಢದೃಕ್ತ್ವಮುಪಗೂಹಂ ಸಂಸ್ಥಿತಿಬ್ಯಾಪ್ತಿ ಭ
ವ್ಯಚಯಾಹ್ಲಾದನಕಾರಿವತ್ಸಳತೆ ಸದ್ಧರ್ಮಪ್ರಭಾವಂಗಳೆಂ
ಬುಚಿತಾಂಗಾಷ್ಟಕಯುಕ್ತನಾತನೆ ವಲಂ ಸಮ್ಯಕ್ತ್ವರತ್ನಾಕರಂ || ೧೩ ||

ಜಿನಪತಿ ನಚ್ಚಿದ ದೇವಂ
ಜಿನನುಕ್ತಮೆ ತತ್ತ್ವಮದಱೊಳಾರ್ತೆಸಗುವ ಸ
ನ್ಮನಿಗಳೆ ಮುನೀಶರೆಂದೆಂ
ದೆನುತುಂ ನಚ್ಚಿರ್ಪ ಮಾನವಂ ನಿಶ್ಯಂಕಂ || ೧೪ ||

ದುರಿತವಿದೂರನನರ್ಚಿಸು
ತಿರೆ ಪಾಪಂ ಪೊರ್ದದಮಿತಸೌಖ್ಯಮುಮಕ್ಕುಂ
ಪರಮಾರ್ಥಮೆಂದೆ ನಂಬಿ
ರ್ಪಿರವದೆ ನಿಶ್ಯಂಕೆಯೆಂದು ಪೇೞ್ವರ್ ಮುನಿಗಳ್ || ೧೫ ||

ಇನಿತಂ ಬಲ್ಲೆಂ ಸರ್ವ
ಜ್ಞನ ಮತದೊಳಮೆತ್ತಲಾನುಮೊಂದಕ್ಕರಮಂ
ಮನದೊಳ್ ತಾನನುಮಾನಿಸ
ದ ನರಂ ಸದ್ದೃಷ್ಟಿ ಜೈನರೊಳಗುತ್ಕೃಷ್ಟಂ || ೧೬ ||

ಉಪಶಮದೊಳಱಿತದೊಳ್ ಮಿ
ಕ್ಕಪವರ್ಗೋಚಿತಚರಿತದೊಳ್ ಸೈರಣೆಯೊಳ್
ತಪದೊಳ್ ವಿದ್ಯೆಯೊಳೆಂತೆಂ
ತು ಪೇೞ್ವೊಡಂ ಪಿರಿಯರಪ್ಪರವರೆ ಮುನೀಶರ್ || ೧೭ ||

ಎಂತಕ್ಕುಮೆಂದು ಮನದೊಳ್
ಸಂತಾಪಂಬಡದೆ ಜೈನಮಾರ್ಗದೆ ನಡೆಯಲ್
ಮುಂತಣ ಜನ್ಮಂಗಳೊಳ
ತ್ಯಂತಂ ಸುಖಿಯಪ್ಪನೆಂದು ನಂಬುಗೆ ಜೈನಂ || ೧೮ ||

ಇಂತಪ್ಪ ಲಕ್ಷ್ಮಿಯಕ್ಕೆನ
ಗಿಂತಪ್ಪುದು ಕೂಡಿ ಬರ್ಕೆ ಸುಕೃತದ ಫಲದಿಂ
ದಿಂತಪ್ಪ ಸೌಖ್ಯಯೋಗಮ
[ದೆಂ]ತಕ್ಕೆನಗೆಂದು ನೆಗೞ್ವನೆಂತುಂ ಭವ್ಯಂ || ೧೯ ||

ಪದಿನಾಲ್ಕುಂ ರತ್ನಂಗಳ
ಪದಮನಕೃ[ಪ]ಣಮನನಕ್ಕುಮೊಲ್ಲಂ ಲಘುಕ
ರ್ಮದ ವಶದಿಂ ರತ್ನತ್ರ
ಯದ ಲಕ್ಷ್ಮಿಯೆ ಸಾಲ್ಗುಮೆಂಬನುತ್ತಮಭವ್ಯಂ || ೨೦ ||

ಅಲಸದೆ ಬಹುರೂಪಗಳಂ
ಸಲೆ ತಾಳ್ಪುವ ದಿವ್ಯಲಕ್ಷ್ಮಿಯಂ ಪಗರಣಮೆಂ
ದಲಘುತರಚಕ್ರವರ್ತಿ
ತ್ವ ಲಕ್ಷ್ಮಿಯಂ ಕಸವಿದಿನಿತುಮೆಂಬಂ ಭವ್ಯಂ || ೨೧ ||

ಕೃಪಣಮನ[ಮು]ೞಿದವಂ ನಾ
ಕಪತಿತ್ವಮನೆಯ್ದೆ ಬಯಸುವಂ ಪಿರಿದುಂ ಮು
ಕ್ತಿಪಥಕ್ಕೆ ಸಲುವೆನೊಲ್ಲೆಂ
ಕುಪತಿತ್ವಮನೆಂದೆ ಬಗೆವನುತ್ತಮ ಜೈನಂ || ೨೨ ||

ಸಕಳಜಗತೀಶ್ವರತ್ವಮ
ನಕಾಮಿಕಂ ಮಾೞ್ಪ ತಪಮನಲ್ಪಸುಖಕ್ಕು
ತ್ಸುಕನಳಿಪಿಂ ಕುಡುವುದು ಮಾ
ಣಿಕಮಂ ತವುಡಿಂಗೆ ಮಾಱುವಂತಾಗಿರ್ಕುಂ || ೨೩ ||

ಲಾಭಮೆ ನರೇಂದ್ರವಿಭವಂ
ಲಾಭಮೆ ದೇವೇಂದ್ರವಿಭವಮೆಂದುಂ ಭವ್ಯಂ
ಗೇ ಭಂಡಮೊ ರತ್ನತ್ರಯ
ಲಾಭಮೆ ಲಾಭದೊಳಗೆಲ್ಲಮುತ್ತಮಲಾಭಂ || ೨೪ ||

ಸಂಗದೊಳೊಳ್ಳಿದಳಪ್ಪಮೃ
ತಾಂಗನೆಯತ್ತಮೆಱಕಮುಳ್ಳವಂ ಮರ್ತ್ಯವಧೂ
ಸಂಗಕ್ಕೆಱಗನದಂತುಟೆ
ಪೊಂಗೆಱಗುವ ದೀಪವರ್ತಿ ಮಣ್ಣೆಱಗುಗುಮೇ || ೨೫ ||

ತನಗೆ ಶುಭೋದಯಮಾದೊಡೆ
ಧನಧಾನ್ಯಪರಿಗ್ರಹಂಗಳೆಯ್ತರುತಿರ್ಕುಂ
ತನಗಶುಭೋದಯಮಾದೊಡೆ
ಯೆನಿತುಂ ಮಱುಗಿದೊಡಮಾಗದೆಂಬಂ ಜೈನಂ || ೨೬ ||

ಇವನೇತರ್ಕಮಣಂ ಭಂ
ಡವಲ್ಲ ಪಡೆದಪ್ಪನೆಲ್ಲ ವಿದ್ಯೆಗಳೊಳಮಾ
ನಿವನಿಂದಂ ಕುಶಳನೆನೇ
ಕಿವನಂದದೆ ಪಡೆಯೆನೆಂದು ಮಱುಗವನೆಗ್ಗಂ || ೨೭ ||

ಪುರುಷಾರ್ಥದಿಂದಾಗದು
ಸಿರಿಯೆಂತೆನೆ ದುಶ್ಚರಿತ್ರನುಂ ದುರ್ಮತಿಯುಂ
ಪುರುಷಾರ್ಥದಿಂದೆ ಪಡೆವರೆ
ಸಿರಿಯಂ ಪುಣ್ಯಫಲಮುಳ್ಳೊಡೆನ್ನನುಮಣ್ಗುಂ || ೨೮ ||

ಪಡೆಯದೊಡೆ ವಿಷಾದಮುಮಂ
ಪಡೆದೊಡೆ ಹರುಷಮಮನುಳಿಗಿಯುತ್ತಮನೇಕೆಂ
ದೊಡೆ ಪುಣ್ಯದುದಯದಿಂದಮೆ
ಪಡೆಗುಂ ಮಱುಗಿದೊಡೆ ಲಬ್ಧಿಹೀನಂ ಪಡೆಯಂ || ೨೯ ||

ಜೀವಂಗೆ ಪುಣ್ಯವಶದಿಂ
ದೇವಗ್ರಹಮಂತ್ರತಂತ್ರ ನೈಮಿತ್ತಂಗಳ್
ತಾವೊಳ್ಪನೀಗುಮಂತವು
ಜೀವಂಗೊಳ್ಪೞಿದೊಡಾಗಲಾರ್ಪುವೆ ಮಾಡಲ್ || ೩೦ ||

ಕುಲಹೀನಂ ತೊನ್ನಂ ಕಿಸು
ಗುಳಿಯಕ್ಕೆ ಜೈನನೆನೆ ಜಿನ
ನಿಳಯಕ್ಕೊಯ್ದೋವಿ ಲೇಸುಮಾೞ್ಪನೆ ಜೈನಂ || ೩೧ ||

ಸಕಳಂಕರಪ್ಪ ವೈಶೇ
ಷಿಕ ವೈದಿಕ ಬುದ್ಧ ಸಾಂಖ್ಯ ಚಾರ್ವಾಕಮತ
ಪ್ರಕರಕ್ಕೆಱಗದೆ ವರ್ತಿಸು
ವಕಳಂಕನಮೂಢದೃಷ್ಟಿಯೆನಿಕುಂ ನಿರುತಂ || ೩೨ ||

ಶಾ || ವಿ || ಮುಂ ಕೊಟ್ಟಂತುಟುಮಾರ ಮೇಲೆ ರಿಣವುಂಟಾದರ್ಥಮಂ ದಾತೃ ತಾಂ
ಬೈಂಕಿಟ್ಟೀಸುವ ಭಟ್ಟಗುತ್ತನವರಲ್ಲಿಂದಗ್ಗಳಂ ಕಾಣಿಯಂ
ಕಿಂಕುರ್ವಾಣದಿನೀವರಲ್ಲರದಱಿಂ ನೀನನ್ಯದೇಹಕ್ಕದೇ
ಕಿಂ ಕಷ್ಟಂಬಡಲಾತ್ಮ ಸೇವೆ ಕುಡದೆ ಸ್ವರ್ಗಾಪವರ್ಗಂಗಳಂ(?) || ೩೩ ||

ಯೋಗ್ಯಂ ತತ್ತ್ವಂಗಳೊಳಗನಱಿಯದ ಪುರುಷಂ
ಯೋಗ್ಯಂ ತಾನಲ್ಲದೊಡಂ
ಯೋಗ್ಯನೆ ಜಿನತತ್ತವದೊಳಗನಱಿವ ಮಹಾತ್ಮಂ || ೩೪ ||

ಅವರಿಂದಂ ಸಚ್ಚರಿತರ್
ಭುವನದೊಳಾರೆಂದು ಜೈನಸಮಯಿಗಳೊಳ್ ಕೆ
ಟ್ಟವರಂ ದ್ವೇಷಿಸಿ ದೂಸಿಸು
ವವರಂ ಮಾರ್ಕೊಂಡು ಮುಚ್ಚಿ ಕಳೆಪಂ ಜೈನಂ || ೩೫ ||

ಆನೆ ಕಡುಗುಜ್ಜನಾದೊಡ
ಮೇನನ್ಯಮೃಗಕ್ಕದೆಂತುಮುದ್ದಮೆ ಜೈನಂ
ಹೀನನೆನಿಸಿದೊಡಮಿತರ
ಜ್ಞಾನಿಗಳಿಂ ಮಿಗಿಲೆನಿಕ್ಕುಮೆಲ್ಲಂದದೊಳಂ || ೩೬ ||

ಪಡೆಯಲ್ ಬಾರದ ಗತಿಯಂ
ಪಡೆದುಂ ಶ್ರೀಜೈನಧರ್ಮಮಂ ಪಡೆದುಮದಂ
ಕಿಡಿಸಿ ಬೞಿಕೆಂತು ಪಡೆದಪೆ
ಕಿಡದಿರು ನೀನೆಂದು ನಿಲಿಪನುತ್ತಮಪುರುಷಂ || ೩೭ ||

ತ್ರಿದಶಾದ್ಯುತ್ತಮಸುಖಸಂ
ಪದಮಂ ಕುಡಲಾರ್ಪ ಸುವ್ರತಂ ವಿಕಳಾತ್ಮಂ
ಗೊದವಿರ್ದು ಕಿಡುವುದೆಂಬುದು
ನಿಧಿ ದೊರೆಕೊಂಡಿರ್ದಲಾದ ತೆಱನಂ ಪೋಲ್ಕುಂ || ೩೮ ||

ಪುರುಳಿಲ್ಲದಂಗೆ ಜೈನಂ
ದೊರೆಕೊಂಡುಂ ದುಶ್ಚರಿತ್ರಮಂ ಬಿಡದುದಱಿಂ
ಚಿರಕಾಲಂ ನಿಲಲಱಿಯದು
ಪರಿಕಿಸುವೊಡದಂತೆ ನಾಯ್ಗೆ ನೆಯ್ಯಕ್ಕುಗುಮೇ || ೩೯ ||

ಕರಗದೊಳಿಟ್ಟೊಡೆ ಜೂಳಿಯಿ
ನಿರದದು ಪೊಱಮಡುಗು ಬಸನಿಯಂ ತಪದೊಳ್ ತಂ
ದಿರಿಸಿದೊಡವನಿರಲಱಿವನೆ
[ಕ]ರುಳಂ ತರ್ಕೈಸಿ ಪರಿವನೆನಿತೆಡೆವರಿವಂ || ೪೦ ||

ತವಿಸುತಿರೆ ತಪದೊಳೊಡಲಂ
ನೆವನೆವದಿಂ ಶಾಂತಿ ಮಾಡೆ ಬೇತಾಳಂ ಮೂ
ಡುವ ತೆಱದಿನಂತರಾಯಂ
ಸಮನಿಸುಗುಂ ಪುಣ್ಯಹೀನನಪ್ಪಂಗೆಂತುಂ || ೪೧ ||

|| ಸ್ರ || ವನಿತಾಂಗಾಲಿಂಗನೋ[ತ್ಕಂಠಮೆ] ಜಿನಪದಪರ್ಯಂತಧಾತ್ರೀತಳಾಲಿಂ
ಗನದೊಳ್ ಕಾಂತಾಕುಚಸ್ಪರ್ಶನಕರಮಭವಶ್ರೀಪಾದಾಂಭೋರುಹಸ್ಪ
ರ್ಶನದೊಳ್ ತತ್ಪಕ್ಷಬಿಂಬಾಧರಮನೆರೆವ [ಬಾಯ್ ಸಾರ]ಚಿನ್ಮೂರ್ತಿಸಂಕೀ
ರ್ತನದೊಳ್ ನಿಂದಂದು ಮರ್ತ್ಯಂಗಮೃತಪದವಿ ಕೈಸಾರ್ವುದೇಂ
ಚೋದ್ಯಮಾಯ್ತೇ || ೪೨ ||

ಕಿವಿ ಮೆಯ್ ಕಣ್ ನಾಲಗೆ ಮೂ
ಗಿವೈದಱೊಳಗೊಂದಱಿಚ್ಚೆಯಂ ಸಲಿಸಿದ ಮಾ
ನವನಾಳ್ಗುಂ ನರಕಂಗಳೊ
ಳವಯ್ದುವಂ ಕೂಡೆ ಜಿನನೊಳಕ್ಕುಂ ಸೌಖ್ಯಂ || ೪೩ ||

ಚಂ || ನಿರುಪಮ ನೂತ್ನರತ್ನಮೊಡೆದಂದೞಲಾವಗಮಕ್ಕುಮಂತದಂ
ಪರಿಕಿಸುವಾಗ ಕಾಜೊಡೆದೊಡಾಗದು ನೋವು ಜಗಕ್ಕೆ ನೋೞ್ಪೊಡಂ
ತಿರೆ ಜಿನಯೋಗಿ ಕೆಟ್ಟೊಡೆ ಜನಕ್ಕೞಲಾವಗಮಕ್ಕುಮೆಯ್ದೆ ಕೆ
ಟ್ಟಿರಲಿತರ ವ್ರತೀಶವರನಂ ಮಱೆದುಂ ಪೆಸರ್ಗೊಳ್ವುದೇ ಜನಂ || ೪೪ ||

|| ದಯೆಯಂ ಬಿಟ್ಟು ಚರಿತ್ರಮಂ ತೊಱೆದು ಸನ್ಮಾರ್ಗಕ್ರಮಂದಪ್ಪಿ ನಿ
ಷ್ಕ್ರಿಯೆಯಿಂದಂ ನಡೆದೋಜೆಯಂ ಮಱೆದು ಮಿಥ್ಯಾಮಾರ್ಗಮಂ ಪೊರ್ದಿ ರೂ
ಢಿಯ ಸದ್ಧರ್ಮದೊಳೞ್ತಿವಟ್ಟವನುಮಂ ಮತ್ತಂ ಮನಂಬೊಯ್ದು ಜೈ
ನಯತೀಂದ್ರೋತ್ತಮರೆಂದು ನಿಟ್ಟೆಗೊಳಿಸಲ್ಕೆಂತುಂ ಪೆಱರ್ ಬಲ್ಲರೇ || ೪೫ ||

ಎಳಗಱುಗಳ ಕಂಡ ಪಯಂ
ಗಳೆಂತು ರಾಗಿಸುಗುಮಂತೆ ಜೈನಂ ಭವ್ಯಾ
ವಳಿಯಂ ಪಿರಿದುಂ ಕಂಡಾ
ಗಳೆ ಕೂರ್ಮೆಯಿನೊಲ್ದು [ನೋ]ೞ್ಪೊಡದು ವಾತ್ಸಲ್ಯಂ || ೪೬ ||

ಎನಗೆ ನಿಧಿ ಸಾರ್ದುದಾದಂ
ಮನೋರಥಂ ಕೂಡಿಬಂದುದೆನಗೆಯ್ದೆ ಕೃತಾ
ರ್ಥನೆನಾದೆನೆಂಬವಂ ನರ
[ನೆನಿಕುಂ] ಸದ್ದೃಷ್ಟಿ ಜೈನನೆೞ್ತಂದಾಗಳ್ || ೪೭ ||

ವಸುಧೆಯನಾಳ್ವಂತೆ ಸುಧಾ
ರಸಮಂ ಪೀರ್ದಂತೆ ನಲ್ಲರೊಳ್ ನೆರೆದಂತೇಂ
ಬಸಮಾಗಿರ್ಕುಂ ಚಿತ್ತ
ಕ್ಕೆ ಸಂತಸಂ ಗುಣಿಗೆ ಜೈನನೆೞ್ತಂದಾಗಳ್ || ೪೮ ||

ಇವರೆಮ್ಮಯ ಕುಲದವರೆಮ
ಗಿವರಿಂ ಬಿಟ್ಟಾಪ್ತರಿಲ್ಲ ಪೆಱರೆಂದತ್ಯು
ತ್ಸವದಿಂ ಸಮಯಿಗಳಂ ತಣಿ
ಪುವಂದಮಂ ಜೈನರಲ್ಲಿ ಕಲ್ತರೆ ಬಲ್ಲರ್ || ೪೯ ||

ಬಡವಂ ಮಾಣಿಕಮಂ ಕಂ
ಡೊಡೆ ರಾಗಿಸುವಂತೆ ಜೈನಸಮಯಿಗಳಂ ಕಂ
ಸೊಡೆ ಜೈನಂ ರಾಗಿಸುಗುಂ
ಕುಡುಗುಂ ತನಗುಳ್ಳ ಮಾರ್ಗದಿಂ ನಿರ್ಧನ[ನುಂ] || ೫೦ ||

ಜಿನಸಮಯಿಗಳೆೞ್ತರೆ ತ
ನ್ನನೊತ್ತೆಯಿಟ್ಟಾದೊಡಂ ಮಹೋತ್ಸವದಿಂ ನಿ
ರ್ಧನನಪ್ಪ ಜೈನನಿಕ್ಕುಗು
ಮನವರತಂ ಪೆಱರದೆಂತುಮುಣಲಿಕ್ಕುವರೇ || ೫೧ ||

ಪರಿಣತನೆನಿಸುವ ಜೈನಂ
ದೊರೆಕೊಂಡುಂ ಪಲವು ದಿವಸಮಿರೆಯುಂ ಪರಮಾ
ದರದಿಂದಲಸದೆ ನಿಚ್ಚಂ
ದೊರೆಕೊಂಡುದು ನಿಧಿಯೆನುತ್ತುಮಿಕ್ಕುವುದಱಿವರ್ || ೫೨ ||

ತಮಗೆಂತು ದುಃಖಮು[ಱುದು]
ತಮಗೆಂತು ಸುಖಾಭಿಲಾಷೆಯದಱಿಂ ತಮ್ಮಂ
ದಮದೆಂತುಟಂತೆ ಬಗೆವುದು
ಸಮಸ್ತಭವ್ಯರುಮನಮಿತಸೌಖ್ಯಮನೊಲ್ವಂ || ೫೩ ||

ಜಿನಸಮಯಿ ಮನೆಗೆ ವರೆ ಕ
ಯ್ಯನೊಲ್ದು ಮುಗಿದಿತ್ತ ಬನ್ನಿಮಿರಿಮೇಬೆಸನೇ
ನೆನುತುಂ ಪದಪಿಲ್ಲದೆ ಸ
ತ್ತನಂದದಿಂದಿರ್ಪ ಗರ್ವಿ ಜೈನನೆ ಬಗೆಯಲ್ || ೫೪ ||

ಬೆರಲುಂ ಕಿವಿಯುಂ ಮಿಂಚುವ
ಸಿರಿವಂತರನಿತ್ತಬನ್ನಿಮೆಂದಾದರದಿಂ
ಕರೆವ ಬಡಜೈನನಾದೊಡೆ
ಕರೆಯದ ದುರ್ಗರ್ವಿ ಜೈನನೆನಿಕುಮೆ ಕಷ್ಟಂ || ೫೫ ||

ಬಡವನಾದರದಿಂ ಬಂ
ದೊಡೆ ಸಿರಿವಂತಂಗೆ ಮೇಲೆ ಬಿೞ್ದೊಲ್ಲದೊಡಂ
ಕುಡುಗುಂ ವಾತ್ಸಲ್ಯದಿನಂ
ದೊಡೆ ಮತ್ತಾ ಜೈನನಲ್ಲಿ ಪುರುಳಱಸುವುದೇ || ೫೬ ||

ಬಡವಂಗೆ ಕೊಟ್ಟೊ[ಡೇನೆ]
ಮ್ಮೊಡವೆಯನಾನೀವೆನಿತ್ತೊಡೆನಗಿನ್ನಿವನಿ
ಮ್ಮಡಿ ಕುಡುಗುಮೆಂದು ಕುಡುವಾ
ಬಡಮನದವನಧಿಕನಲ್ಲನಲ್ಲಂ ಜೈನಂ || ೫೭ ||

ಬಡವಂ ಗುಣಿಯಾಗಿರ್ದೊಡ
ಮೊಡನುಡಿಯಂ ಹಸ್ತಿಮೂರ್ಖನಾದೊಡವಂ ತಾಂ
ನುಡಿವಂ ಸಿರಿವಂತರೊಳೆಂ
ದೊಡೆ ಮತ್ತವನಱಿತದಲ್ಲಿ ಪುರುಳಱಸುವುದೇ || ೫೮ ||

ಉಣಲಿಕ್ಕುಗುಮುಡಕೊಡುಗುಂ
ಗುಣಮುಳ್ಳ ವಿನೇಯನಿಕರಮಾನದಱಿಂದಂ
ಗುಣಿಯೆನಿಸುವೆನೆಂಬ ನಿ
ರ್ಗುಣಿಯಪ್ಪಂಗೊಪ್ಪಲಱಿಗುಮೆ ಜೈನತನಂ || ೫೯ ||

ಎಂತು ಕುವಳಯಸಮಾಜದ
ಸಂತಸಮಂ ಸಸಿ ಸಮರ್ಥಿಪಂತೆ ಸಮರ್ಥಂ
ಸಂತಂ ಭವ್ಯಸಮಾಜದ
ಸಂತಸವೆಸೆವಂತು ನೆಗೞ್ವೊಡಾತಂ ಜೈನಂ || ೬೦ ||

ಜನನಿ ಜನಕಾಗ್ರಜರುಂ
ತನುಜಾನುಜಬಂಧುವರ್ಗಮುಂ ಜೈನನೆ ಬೇ
ಱೆನಗೆ ಪೆಱರಾರುಮಿಲ್ಲೆಂ
ಬನಿತಂ ಬಗೆವವನೆ ಜೈನನುೞಿದವನಲ್ಲಂ || ೬೧ ||

ಜೈನಂಗೆಡಱಾದೆಡೆಯೊಳ್
ಜೈನಂ ಕೆಯ್ಕೊಂಡು ಕಾಯಲಾರ್ಪಡೆ ಜೈನಂ
ಜೈನನುಪೇಕ್ಷಿಪೊಡಂತವ
ಜೈನನೆ ನಿರ್ಗುಣಿಯವಂ ನಿಕೃಷ್ಟಂ ಕಷ್ಟಂ || ೬೨ ||

ತಮಗಂ ಮಕ್ಕಳ್ಗಂ ರೋ
ಗಮಾದೊಡಾ ಕ್ಷಣದೆ ಮರ್ದು ಮಾೞ್ಪಪೊಲರುಹ
ತ್ಸಮಯಿಗೆ ರುಜೆಯಾದೊಡೆ ಮ
ರ್ದು ಮಾೞ್ಪುದಾ ಕ್ಷಣದೆ ಮುಕ್ತಿಯಂ ಬಯಸುವವಂ || ೬೩ ||

ದೇವರನರ್ಚಿಸುವಲ್ಲಿಯ
ಪೂವಿನ ಫಳಮೊಂದನೀಯರನನ್ಯರದೆಂತುಂ
ಶ್ರಾವಕರೊಲ್ದೀಗುಂ ಜಿನ
ಪಾವನಪೂಜೆಯನನಂತಸುಖದಾಯಕಮಂ || ೬೪ ||

ರಾಗಿಸಿ ಸಮಯಿಗಳಂ ಕಂ
ಡಾಗಳೆ ಸಂತುಷ್ಟಿಮಾೞ್ಪರಲ್ಲದೆ ಕೊರಲಿಂ
ಮೇಗಣ ಮಾತಂ ನುಡಿಯರ
ದೇಗೆಯ್ದುಂ ತಾವದೆಂತು ನುಡಿವರ್ ಭವ್ಯರ್ || ೬೫ ||

ಆದರಿಸಿ ಭವ್ಯಜನಮಂ
ಸೋದರರಿವರೆಂದು ತಮ್ಮ ಸುಕೃತ್ಯದ ಫಲದೋ
ಪಾದಿಯನೀವರ್ ಜೈನರ್
ಬಾದಿನೊಳೇನನ್ಯಸಮಯದವತಿತ್ತಪರೇ || ೬೬ ||

ವಿನೊಂದಂ ಪ್ರಿಯದಿಂದಂ
ದಾನಮನಿತ್ತಂಗಮಮಿತಸೌಖ್ಯಂ ಕಡೆಯೊಳ್
ತಾನಕ್ಕುಮೆಂದೊಡುತ್ತಮ
ದಾನದ ಸತ್ಪಲ[ದಿ]ನಿತ್ತವಂಗರಿದುಂಟೇ? || ೬೭ ||

ಬೆಲೆಯಿಡುವವರಿಂ ಮಾಡಿದ
ಫಲಕ್ಕೆ ಕಡೆಯಿಲ್ಲ ದಾನದೆಡೆಗೆಂದೊಡೆ ಕೇಳ್
ಬೆಲೆಯಿಡಬಾರದ ಧರ್ಮದ
ಫಲಮಂ ಕೊಟ್ಟೊಂದು ಫಲಮನದನೇವೇೞ್ವೆಂ || ೬೮ ||

ಜೈನಪದಾಭ್ಯರ್ಚನೆಯುಂ
ದಾನಮುಮಣಮಿಲ್ಲದಿರ್ಡೊಡಂ ದಿಬ್ಯಸುಖಂ
ಜೈನಂಗಕ್ಕುಮೊಡಂಬಡೆ
ದಾನಕ್ಕಂ ಜೈನಪೂಜೆಗಂ ಸನ್ಮತಿಯಿಂ || ೬೯ ||

|| ಪಿರಿದಾಯಾಸದೆ ಘೋರವೀರತಪಮಂ ಮಾಡಿರ್ಕನಾಯಾಸದಿಂ
ನರನಾಂ ಜೈನನೆನೆಂದೊಡೆಂದನಿತಱಿಂ ವಾತ್ಸಲ್ಯದಿಂದೀಯೆ ಬಿ
ತ್ತರದಿಂ ಭವ್ಯರ ಗೆಯ್ದ ಪುಣ್ಯಫಲಮುಂ ಕೈಸಾರ್ಗುಮೆಂದಂದೆ ಬಾ
ಪ್ಪುರೆ ಲೋಕೋತ್ತರಮಾರ್ಹತವ್ರತಮದಂ ಬಣ್ಣಿಪ್ಪನೇವಣ್ಣಿಪಂ || ೭೦ ||

ಖ್ಯಾತಿಯುಮಂ ಪಿರಿದಪ್ಪ ವಿ
ಭೂತಿಯುಮಂ ಜೈನನಾಗೆ ಪಡೆಯಲ್ ಬರ್ಕುಂ
ಮಾತೇನನ್ಯರ ಸಮಯದೊ
ಳೇತೆಱದಿಂ ಪಡೆಯಲೆಂತುಮಱಿವನೆ ಮನುಜಂ || ೭೧ ||

ಪಸಿವಿಂಗೆ ತೃಷೆಗೆ ನಿದ್ರೆಗೆ
ಬಿಸಿಲ್ಗೆ ಸೀತಕ್ಕೆ ತಮಗೆ ಯತ್ನಂ ಮಾೞ್ಪಂ
ತು ಸದಾಪ್ರಯತ್ನಮಂ ಭ
ವ್ಯಸಮಿತಿ ನಿಜಸಮಯಿಗೊಲ್ದು ಮಾೞ್ಪಂ ನಿಚ್ಚಂ || ೭೨ ||

ಬರೆ ಭವಯಾಂಬುಜಮಿತ್ರಂ
ಸರಾಗದಿಂ ನಿಜಗೃಹಾಂಗಣಕ್ಕೀಕ್ಷಿಸಿ ಭ
ವ್ಯರ ವದನಮರಲುತಿರಲಿರ
ಲಿರವೇೞ್ಕುಂ ಸಮಯಧರ್ಮಮಿಂತುಟೆಯಲ್ತೇ || ೭೩ ||

ಸಲೆ ಮುನ್ನಂ ಪಾವಿಂಗಂ
[ಬಲಿ]ಯಿಕ್ಕದ ವಜ್ರಲೋಭಿಯುಂ ಶ್ರಾವಕನಾ
ಗಲೊಡಂ ನಿಜಸಮಯಿಗೆ ವ
ತ್ಸಲತೆಯಿನಿರ್ದೊಡಮೆಯೆಲ್ಲಮಂ ವೆಚ್ಚಿಸುಗುಂ || ೭೪ ||

ಪಡೆಮಾತೇಂ ಜೈನನೆನೆಂ
ದೊಡೆ ಸಾಲ್ಗುಂ ಕಳ್ಳನಾದೊಡಂ ತಾನೆಡೆಯಂ
ಕುಡುವಂ ಕೂೞಿಕ್ಕುವರೆ
ಲ್ಲೆಡೆಗಳೊಳಂ ಜೈನಮಱಿಯಲಿಂತಿರೆ ಸಾರಂ || ೭೫ ||

ಅತಿಪರಿಚಯಮಾಗುತ್ತಿರೆ
ಮತಹೀನ[ರ]ವಜ್ಞೆಗೆಯ್ವ[ರು]ೞಿದರ್ ಜೈನ
ರ್ಗತಿಪರಿಚಯಮಾಗುತ್ತಿರ
ಲತಿಶಯವಾತ್ಸಲ್ಯಮೊಂದುಗುಂ ಸಮಯಿಗಳೊಳ್ || ೭೬ ||

ಯೋಗ್ಯರ್ ನಿಜಸಮಯದರಂ
ಯೋಗ್ಯರುಮಂ ಕಂಡು ಸೆಣಸುವರ್ ಪೆಱವೆಡೆಯೊಳ್
ಯೋಗ್ಯನೆನೆ ನೆಗೞ್ದ ಜೈನಂ
ಯೋಗ್ಯಂ ನಿಜಸಮಯಿಯಾಗೆ ಪೊಡೆವಡುತಿರ್ಕುಂ || ೭೭ || 

ಪಿಂಗಳನೇತ್ರನನೆಂತುಂ
ಪಿಂಗದೆ ಪೂಜಿಸುತುಮಿರ್ಪ ಮಾಹೇಶ್ವರನುಂ
ಲಿಂಗಿಯುಮಂ ಶಿವಭಕ್ತನು
ಮಂ ಗಹನಂಗೆಯ್ಯರೆಮ್ಮ ಸಮಯಿಗಳೆನ್ನಂ || ೭೮ ||

ಒಂದು ಪೊಱೆ ಜಡೆಯುಮಂ ಪಲ
ವಂದದ ಮುದ್ರೆಯಮನೆಯ್ದೆ ಪೊತ್ತೆನ್ನಂ ಬಾ
ಯೆಂದು ಬಿಸಿಲಲ್ಲಿ ನಿಂದನ
ನೆಂದುಂ ನೆೞಲಿಂಗೆ ಕರೆಯರೆಮ್ಮ ಭಳಾರರ್ || ೭೯ ||

ಸಿರಿವಂತರಪ್ಪ ಮಾಹೇ
ಶ್ವರರುಂ ವೈಷ್ಣವರುಮೊರ್ವ ಬಡವನುಮಂ ನಿ
ತ್ತರಿಪರೆ ನಿಜಸಮಯಿಯನಾ
ದರದಿಂದ ಜೈನರಲ್ಲದೆಲ್ಲಂದದೊಳಂ || ೮೦ ||

ಒರ್ವಂ ಸಮಯಿಗಳಂ ತಾ
ನೊರ್ವನೆ ಸಂತೋಸಮಾಗೆ ಮಾೞ್ಪಂ ಜೈನಂ
ನೂರ್ವರ್ ಮಾಹೇಶ್ವರರಿ
ರ್ದೊವಂ ಮಾಹೇಶ್ವರಂಗೆ ಕೆಟ್ಟಡಡೆಗಾಗರ್ || ೮೧ ||

ಅಟ್ಟುಂಬ ಸಮಯಿಯಲ್ಲಿಗೆ
ಕೆಟ್ಟೞಿದಾಸತ್ತು ಬಂದನುಣಲುಂ ಪಡೆಯಂ
ತೊಟ್ಟನೆ ಕಲ್ಲಂ ತಾಗಿದ
ಮಿಟ್ಟೆಯವೋಲ್ ಮಗುೞ್ವನಂತು ನೆಗೞ್ವರೆ ಜೈನರ್ || ೮೨ ||

ಬಾಡಿದ ಮೊಗಮಂ ದಯೆಯಿಂ
ನೋಡಿ ಕರಂ ಪಸಿದ ರೂಪನಱಿದುಣಲೆಡೆಯಂ
ಮಾಡುವರಾರ್ಹತರೆಡೆಯಂ
ಮಾಡುವರುಣಸಾಗದಂತು ಸಮಯಿಗೆ ಲೋಗರ್ || ೮೩ ||

ಅವರನ್ನರಿನ್ನರೆಂಬೀ
ಬವರದೊಳೇನಹಿಯ ಮುಖದೊಳಮೃತಂ ಪೇೞ್ ಸಂ
ಭವಿಕುಮೆ ನೋೞ್ಪೊಡೆ ವಿಪ್ರಂ
ಗೆ ವತ್ಸಳತೆಯುಂಟೆ ವಿಪ್ರಸಂತತಿಯೊಳೆಂತುಂ || ೮೪ ||

ಬಡದೇಸಿಗನಿಂತಿವನಾ
ವೊಡಲೆಲ್ಲಂ ಕೆಟ್ಟು ತೊನ್ನನಾದೊಡವಂ ಪ
ಟ್ಟಡೆಯೊಳ್ ಕಿಸುಗುಳ[ವೆ]ನಿಸಿ
ರ್ದೊಡಮಾರ್ಹತಮಾಗೆ ರಕ್ಷಿಪರ್ ಸಲೆ ಜೈನರ್ || ೮೫ ||