ಮರ್ದಂ ಗಂಜಿಯನೆಱೆಯು
ತ್ತಿರ್ದೊಡಮಾಯುಷ್ಯಮುಡುಗಿ ಬಂದೆಡೆಯೊಳ್ ಬೇ
ಡಿರ್ದೆಲ್ಲ ಸುಕೃತಮುಮನಿ
ತ್ತಿರ್ದೆಡೆಯಿಂದೆತ್ತಿ ಪೂಜಿಪರ್ ಸಲೆ ಜೈನರ್ || ೮೬ ||

ಪೊಲೆಯರ್ ತಮ್ಮಯ ಕೇರಿಗೆ
ಪೊಲೆಯರ್ ಬರೆ ತುಷ್ಟಿಮಾೞ್ಪರೆಂದದನಱಿದುಂ
ಕುಲಜರ್ ಸಮಯಿಗಳಂ ಸಾ
ರಲೀಯರಾರ್ಹತರ ತೆಱದೆ ನಿಷ್ಕಪಟತೆಯಿಂ || ೮೭ ||

ನೋಡಿರೆ ಸೈ[ದ]ರ್ ಪಿರಿದುಂ
ಕೂಡರೆನಲ್ ವೇಡ ಸಾಧುಗಳ್ಗುಪಸರ್ಗಂ
ಮಾಡಿದಪೆವೆಂದೊಡೆಲ್ಲಂ
ಕೂಡುವರಾರ್ದೆತ್ತಿ ಗುಣದೊಳೆಂತುಂ ಕೂಡರ್ || ೮೮ ||

ಆದರದಿಂದಂ ಬೋಧರ್
ಬೋಧರನಪ್ಪಿದೊಡೆ ಬೂದಿ ಬೂದಿ[ಯ] ನಾ[ದಿ]
ತ್ತಾದಮೆನಲ್ ನೆಗೞ್ದರ್ ನಾ
ೞ್ಗಾದೆಗೆ ದೊರೆ ಸಮಯಧರ್ಮದಡೆಗುೞಿದವರ್ಗಳ್ ೮೯ ||

|| ಜಿನಧರ್ಮಂ ಭುನೈಕಸೇವ್ಯಮನವದ್ಯಾಚಾರಸಾರಂ ಜಗ
ಜ್ಜನಕಂ ತಾನೆ ಶರಣ್ಯಮಂತದು ಸುರೇಂದ್ರಾಹೀಂದ್ರದೈತ್ಯೇಂದ್ರಮ
ರ್ತ್ಯನಿಕಾಯಸ್ತುತಮೆಂದೆ ನಂಬಿ ಪದಪಿಂ ಕೈಕೊಳ್ವವಂ ಭವ್ಯನಾ
ತನೆ ಲೋಕೋತ್ತಮನೆಂದು ಪೇೞ್ದನವನೀಶಂ ಧರ್ಮಮಹಾತ್ಮ್ಯಮಂ || ೯೦ ||

ನೀರಡಸಿದವಂಗೆಱೆದೊಡೆ
ನೀರಂ ಪುಣ್ಯಕ್ಕೆ ಮೇರೆಯಿಲ್ಲೆನೆ ದುಃಖಾಂ
ಭೋರಾಶಿಯೊಳರ್ದವನಂ
ಸರಮೆನಿಪ್ಪಱದಿನೆತ್ತಿದಂಗರಿದುಂಟೇ || ೯೧ ||

ಬಸನದ ವಸದಿಂದಂ ಪು
ಟ್ಟಿಸಿದಂ ಜನಕನೆ ನರೇಂದ್ರ ದೇವೇಂದ್ರ ಜಿನೇಂ
ದ್ರಸುಖಮನವಯವದಿಂದೆ
ಯ್ದಿಸುವಱನಂ ತಿಳಿಪುವಾ ಮಹಾತ್ಮಂ ಜನಕಂ || ೯೨ ||

ವಸುಧೇಶಸುಖಂ ಗೀರ್ವಾ
ಣಸುಖಂ ನಿರ್ವಾಣಸುಖಮುಮಂ ಕ್ರಮದಿಂ ಪೊ
ರ್ದಿಸಲಾರ್ಪ ಧರ್ಮಮಂ ಶಿ
ಕ್ಷಿಸುತಿರ್ಪಾ ಪುಣ್ಯದಿಂದತಃಪುರಮುಂಟೇ || ೯೩ ||

ಎನ್ನವರಿವರಿದಿರವರಿವ
ರೆನ್ನದೆ ದಯೆಯಿಂದಮಖಿಳಜೀವಾವಳಿಯಂ
ಸನ್ನುತ ಮುಕ್ತಿಶ್ರೀಯೊಳ್
ಮುನ್ನಂ ನೆರಪಲ್ಕೆ ಬಯಸಿ ನೆಗೞ್ವನೆ ಜೈನಂ || ೯೪ ||

ಅವಿವೆನ್ನದೆಯ್ದಿ ಮೂಱುಂ
ಭುವನದೊಳಂ ತೊೞಲುತಿರ್ಪ ಜೀವಾವಳಿಯಂ
ಭುವನಾಗ್ರಕ್ಕೆಯ್ದಿಸುವರ್
ತವತರ್ವ[ಗೇಂ] ಪಿರಿಯ[ರೊ] ಮಹಾತ್ಮರೆ ಜೈನರ್ || ೯೫ ||

|| ಮತಿವಂತಂ ಸಲೆ ದೇವಮೂಢತೆಯುಮಂ ಪಾಷಂಡಿಮೂಢತ್ವಮಂ
ಸತತಂ ಲೌಕಿಕಮೂಢತಾಪರತೆಯಂ ನಿರ್ವ್ಯಗ್ರದಿಂ ಬಿಟ್ಟು ಶಾ
ಶ್ವತ ಸೌಖ್ಯಕ್ಕಿರದೊಯ್ಯಲಾರ್ಪಮಳಚಾರಿತ್ರಂಗಳೆಂದಾರ್ಹತ
ವ್ರತದೊಳ್ ಕೂಡಿದನಾವನಾತನೆ ವಲಂ ಸಮ್ಯಕ್ತ್ವರತ್ನಾಕರಂ || ೯೬ ||

ಜಿನನಲ್ಲದಾಪ್ತರಂ ಪಿಡಿ
ದು ನೆಗೞ್ವದುಂ ಕಿರ್ಚು ಕವಿಲೆ ಮರನಾಯುಧಮೆಂ
ಬಿನಿತರ್ಕಂ ಪೊಡಮಡುವುದು
ಮನೇಕಮಿವು ನೆಗೞ್ದ ದೇವತಾಮೂಢಂಗಳ್ || ೯೭ ||

ಪರಮುಖಕ್ಕೆಯ್ದಿಪ ಋಷಿ
ಯರನೊಲ್ಲದೆ ದುಶ್ಚರಿತ್ರರಂ ಲೋಲುಪರಂ
ಪರಲಿಂಗಿಗಳು ಪೊರ್ದಿ
ರ್ಪಿರವದು ಪಾಷಂಡಿಮೂಢಮೆಂಬುದದಕ್ಕುಂ || ೯೮ ||

ಪೊಡಮಡುವವರಂ ಕಂಡೊಡೆ
ಪೊಡಮಡುವರ್ ದೇವರಲ್ಲದಿರ್ದೊಡಮನ್ಯರ್
ಕುಡುವವರಂ ಕಂಡೊಡೆ ಪೊ
ಕುಡುವರ್ ಪಾತ್ರಮಿದಪಾತ್ರಮೆನ್ನರ್ ಮೂಢರ್ || ೯೯ ||

ಗುರುವೆಂಬರಿಲ್ಲ ನಿಯಮಿಸು
ವರಿಲ್ಲ ಬೞಿಕೋದಿನಿಷ್ಟಮಿಲ್ಲೊರ್ವರನೊ
ರ್ವರೆ ಕಂಡುಮವರ ನೆಗೞ್ದಂ
ತಿರೆ ನೆಗೞ್ವದು ಲೋಕಮೂಢಮೆಂದಱಿಗಱಿವಂ || ೧೦೦ ||

ಕುಲಮೈಶ್ಚರ್ಯಜ್ಞಾನಂ
ಬಲಮಾಜ್ಞೆ ಸುರೂಪು ಜಾತಿ ತಪಮೆಂಬಿವು ಕೇ
ವಲಮೆನ್ನೊಳೆಸೆಗುಮೆಂಬಾ
ಖಳಂಗೆ ಸಮ್ಯಕ್ತ್ವಮೊಪ್ಪಲೇನಱಿದಪುದೇ || ೧೦೧ ||

ಅನವದ್ಯಚರಿತನೆಂ ಕುಲ
ಜನೆನಾಗಮವಿದನೆನರಸನೆಂ ಬಡವಂ [ತಾ]
ನೆನಲಾಱೆನೊಡಂಬಡೆನೆಂ
ಬ ನರಂಗೇನೊಪ್ಪಲಱಿಗುಮೇ ಸಮ್ಯಕ್ತ್ವಂ || ೧೦೨ ||

ಕುಲಹೀನಂಗಾನೆಱಗೆಂ
ಕುಲಜನೆ[ನಿ]ಚ್ಛಾಮಿಯೆಂದು ಕೈಮುಗಿಯಲ್ ಪೋ
ಕುಲದಿಂ ಮಿಗಿಲಾನೆಂಬಾ
ಖಳಂಗೆ ಸಮ್ಯಕ್ತ್ವಮೊಪ್ಪಲೇನಱಿದಪುದೇ || ೧೦೩ ||

ಕುಲಜಂಗೆ ಮತ್ತಮೊರ್ವಂ
ಕುಲಜಂ ಜಗವಱಿಯೆ ನೋೞ್ಪೊಡೊಳನದಱಿಂದಂ
ಕುಲದೊಳ್ ಜಾತಿಯೊಳೆನಗಾ
ರಿಳೆಯೊಳ್ ಸಮರೆಂಬ ಮದಮನುೞಿವುದು ಚದುರಂ || ೧೦೪ ||

ಎವಗಱಿವುಂಟೆನುತುಂ ಪೊಂ
ಗುವರೆಗ್ಗರ್ ಮತ್ತಿನೋದಿನಿಂದಱಿವವನಿಂ
ದವಧಿ ಮನಃಪರ್ಯಯಮು
ಳ್ಳವರಿಂ ಮಿಗಿಲಭವನಱಿತಮುೞಿವುದು ಮದಮಂ || ೧೦೫ ||

ಸಾಮಂತರ್ ಮಂಡಳಿಕರ್
ಭೂಮೀಶ್ವರರಿಂದ್ರರರುಹರೆಂಬಿವರೊರ್ವ
ರ್ಗೇಮಾತೊ ಪಿರಿಯರೊರ್ವರ್
ತಾಮೇಕೈಶ್ವರ್ಯಗರ್ವರಪ್ಪರ್ ಮನುಜರ್ || ೧೦೬ ||

ಅಹಮಹಮಿಕೆ ಸಲ್ಲೆಂತೆನೆ
ಮಹಿಮೆಯೊಳಾ ಚಕ್ರವರ್ತಿಗಂ ಸುರಪತಿಗಂ
ಮಹಿಮೆಯೊಳಾ ಸ್ವರ್ಗದೊಳಂ
ಮಹನೀಯತರಾಜ್ಞೆ ಕೂಡೆ ಸಲ್ಲದದೆಂದುಂ || ೧೦೭ ||

ಪರಿಕಿಪೊಡೆ ಚೆಲ್ವರಾರೊ
ರ್ವರಿನೊರ್ವರ್ ಕಾಮದೇವರುಂ ಚಕ್ರಾಧೀ
ಶ್ವರರುಮಮರೇಂದ್ರರುಂ ಚೆ
ಲ್ವರುಂಟೆನಲ್ ಸುಜನರುೞಿಗೆ ರೂಪಿನ ಮದಮಂ || ೧೦೮ ||

ಉಟ್ಟುಂ ತೊಟ್ಟುಂ ರೂಪಿನೊ
ಳಿಟ್ಟಳವೆಸೆವಾತನುಳ್ಳುದಂ ಬಱಿದಾಗಲ್
ಕೊಟ್ಟುಂ ಪೆಂಡಿರ ನಲವಂ
ನಿಟ್ಟಿಸಲಣಮಾಱರುೞಿಗೆ ರೂಪಿನ ಮದಮಂ || ೧೦೯ ||

ಬಡಿದೊಡೆ ಕಂಡುದಱಿಂದಿ
ಟ್ಟೊಡೆ ಕಯ್ಯುಂ ಕಾಲುಮಡಿಯೆ ಪೊಯ್ದೊಡೆ ಮತ್ತಂ
ಕುಡುವಂ ಕುರೂಪಿಯೆಂ[ದು]
ಬಿಡರಬಲೆಯರದಱಿನುೞಿಗೆ ರೂಪಿನ ಮದಮಂ || ೧೧೦ ||

ಪಿರಿದಪ್ಪಾಳಾಪದೊಳೇಂ
ಪರೇಂಗಿತಜ್ಞಂ ಸಮಸ್ತಶಾಸ್ತ್ರಂಗಳೊಳಂ
ಪರಿಣತನೆನಿಸಿದನುಂ ಪೆಂ
ಡಿರ ಚಿತ್ತಮನಿಂತುಟೆಂದು ನಿಟ್ಟಿಸಲಾಱಂ || ೧೧೧ ||

ಎನ್ನ ಸಮನಾರೊ ಪೇ[ೞನ
ಶನಾವಮೋದರ್ಯ]ಮಾದಿಯಾಗಿರೆ ತಪದಿಂ
ದೆನಲಿಂ ಕಾಯಕ್ಲೇಶಿಗ
ಳೆನಿಬರುಮೊಳರುೞಿಗೆ ತಪದ ಮದಮಂ ಚದುರಂ || ೧೧೨ ||

ಕೇಸರಿಗೆ ವಾಸುದೇವಂ
ಗಾ ಸವೋರ್ವೀಶ್ವರಂಗೆ ನೆಗೞ್ದಮರೇಂದ್ರಂ
ಗಾ ಸರ್ವಜ್ಞನ ಸತ್ತ್ವಂ
ಸಾಸಿರ್ಮಡಿಗಧಿಕಮದಱಿನುೞಿ ಬಳಮದಮಂ || ೧೧೩ ||

ಮುನಿವಂಗೆ ಪೀಡೆ ಮಾಡಿದೆ
ನೆನುತುಂ ರಾಗಿಸ[ಲೆ] ವೇಡ ಸದೃಷ್ಟಿಯದೇ
ಕೆನಲವನ ಪಾಪದುದಯಮೆ
ಘನತರದುಃಖಮನವಂಗೆ ಮಾಡುವ ಕತದಿಂ || ೧೧೪ ||

ಮಾಡಿದೆನೆಂಬಭಿಮಾನಂ
ಬೇಡೇಕೆನೆ ತಾಂ ನಿಮಿತ್ತಮಾತ್ರಮದೆಂತುಂ
ಮಾಡುವೆನೆಂಬೊಡೆ ಮೆಚ್ಚಿತು
ಮಾಡಲ್ಕೆ ಸಮರ್ಥನಪ್ಪೊಡಪ್ಪುದು ಗರ್ವಂ || ೧೧೫ ||

ತನಗೆಂತುಂ ಕೂರ್ಪವರ್ಗಂ
ಮನದೊಳ್ ಮುನಿವರ್ಗಮಪ್ಪ ಸುಖದುಃಖಂಗ
ಳ್ಗಿನಿಸುಂ ರಾಗಿಸವೇಡೇ
ಕೆನೆ ನಿಜವಶಮಲ್ಲವವರ ಮಾಡಿದ ಕರ್ಮಂ || ೧೧೬ ||

ಸಿರಿಪರ್ವತಮುಂ ಗಂಗೆಯು
ಮೆರೆದವರ್ಗಾತ್ತಿತ್ತು ಪೆತ್ತುವೇ ಕೀರ್ತಿಯನಂ
ತುರತರ ಜಸವೆತ್ತಾನುಂ
ದೊರೆಕೊಳೆ ಜಸಮುೞಿಯೆ ಮದಮನುೞಿವುದು ಜೈನಂ || ೧೧೭ ||

|| ಶ್ರುತಿ ಪೇೞ್ದಷ್ಟಮದಂಗಳೆಂಬುವಿದೆ ದಲ್ ವಿಜ್ಞಾನಮೈಶ್ವರ್ಯಮಾ
ಜ್ಞೆ ತಪಂ ಜಾತಿ ಕುಲಂ ಸುರೂಪು ಬಲವೆಂದೆಂತವಂ [ನಾ]ಡೆ ಸ
ನ್ಮತಿಯಿಂದಂ ತೊಱೆದಯ್ದೆ ಶಾಶ್ವತಸುಖಕ್ಕಾವಾಸಮಪ್ಪಾರ್ಹತ
ವ್ರತದೊಳ್ ವರ್ತಿಪನಾವನಾತನೆ ವಲಂ ಸಮ್ಯಕ್ತ್ವರತ್ನಾಕರಂ || ೧೧೮ ||

|| ಅಪವರ್ಗೋಚಿತಮಾರ್ಗದಿಂದಿನಿತುಮಂ ಮಿಥ್ಯಾತ್ವದೊಳ್ ಕೂಡಿ ವ
ರ್ತಿಪ ದೆಯ್ವಂ ತಪಮಾಶ್ರ[ಮಂ] ತಪಸಿಗಳ್ ತದ್‌ಜ್ಞಾನ[ಮಂ] ಜ್ಞಾನಮೆಂ
ಬ ಪುರಾಣೇಪ್ಪದಿ[ನಾ] ಷಡಾಯತನಮಂ ಸೇವಿಪ್ಪುದಂ ಬಿಟ್ಟು ಮಿ
ಕ್ಕಪವರ್ಗೋಚಿತಮಾರ್ಗದೊಳ್ ನಡೆವವಂ ಸಮ್ಯಕ್ತ್ವರತ್ನಾಕರಂ || ೧೧೯ ||

ಎಲ್ಲಾ ದೆಯ್ವಂಗಳ್ ತಾಂ
ಕಲ್ಲುಂ ಮರನಾಗೆ ಕಾಣ್ಬನಭವಂಗರುಹಂ
ಗಲ್ಲದೆ ಪೆಱರ್ಗೆಱಗಲ್ ತಾ
ನೊಲ್ಲನೆನಿಪ್ಪವನೆ ಜೈನನಲ್ಲದನಲ್ಲಂ || ೧೨೦ ||

ಒಂದೆಸೆಯೊಳ್ ಜಿನಬಿಂಬಮ
ನೊಂದೆಸೆಯೊಳ್ ಲಿಂಗವಿಷ್ಣುಬಿಂಬಮನವನಂ
ತೊಂದೆಡೆಯೊಳ್ ಪೂಜಿಸುವಾ
ಸಂದೇಹಿಗೆ ಜೈನನೆಂಬ ಪೆಸರೆಂತೆಸೆಗುಂ || ೧೨೧ ||

ದೇಗುಲಮಂ ಕಂಡಲ್ಲಿಗೆ
ಪೋಗಿ ಮಹೇಶ್ವರನುಮಪ್ಪ ಬಸದಿಗೆ ಬಂದಿ
ರ್ದಾಗಳೆ ಜೈನನುಮಪ್ಪಾ
ಕಾಗೆಗೆ ಸಮ್ಯಕ್ತ್ವಮೊಪ್ಪಲೇನಱಿದಪುದೇ || ೧೨೨ ||

ಎಕ್ಕಲದೇವಿ[ಗಮಾ] ಮಾ
ಲಕ್ಕನಿಗಂ ಬನದ ಬಳರಿಗಂ ಮೈಲಾರಂ
ಗಳ್ಕದೆ ಜಾತ್ರೆಯ ಮಾೞ್ಪಂ
ಮೊಕ್ಕ[ಳಿ]ಗಂ ಜೈನನಲ್ಲನಾತಂ ಕೌಳಂ || ೧೨೩ ||

ದಿವಸಕರ ಬೃಹಸ್ಪತಿ ಸೋ
ಮವಾರದಂದೇಕಠಾಣಮಂ ಪಂಚಮಿಯೊಳ್
ನಾಗರಮಾಡುವ ಕಿವಿಯೊಳ್
ನಾಗರ ಹೆಡೆಯಿಡುವಡಲ್ಲವೆಂತುಂ ಜೈನಂ(?) || ೧೨೪ ||

ಪೆಂಡತಿ ಮಾಹೇಶ್ವರಿ ಗಡ
ಗಂಡಂ ಗಡ ಜೈನನವನ ಮಕ್ಕಳ್ ಗಡ ಮಾ
ರ್ತಂಡಂಗೆ ಭಕ್ತರೆನಿಪಾ
ಭಂಡಂಗುತ್ತಮದ ಜೈನವೆಸರೆಂತೆಸೆಗುಂ || ೧೨೫ ||

ಪದಿನೆಂಟುಂ ದೋಷಂಗಳ
ನುದಿರ್ಪಿ ನಿರ್ದೋಷಿಯೆನಿಸಿದಂ ಪರಮಾತ್ಮಂ
ಪುದಿದಜ್ಞಾನದೆ ರಚಿಯಿಸೆ
ಸದೋಷನೆಂದೂಳ್ವವಂ ಕುದೃಷ್ಟಂ ಕಷ್ಟಂ || ೧೨೬ ||

ಚಂ || ಜಿನಗೃಹಮಂ ಮನೋಮುದದೆ ಮಾಡದನಾಪ್ತಗೃಹಂಗಳಂ ಮಹಾ
ಜನಮನೆ ನೋಡಿ ಮಾಡಿಸುವವಂ ಶುಚಿಯಪ್ಪುದದತ್ತಲಿರ್ಕೆ ಕ
ಲ್ಲನೆ ತೆಗೆವಲ್ಲಿ ಸುಣ್ಣಮುಮನಿಟ್ಟಗೆಯಂ ಸುಡುವಲ್ಲಿ ಸಾವ ಜೀ
ವನಿಕರದೊಂದು ಹಿಂಸೆಯೊಳೆ ಪಾಪಮೆ ಮೊಕ್ಕಳಮೆಂದೆನಲ್ ಫಲಂ || ೧೨೭ ||

ಪರತಪಮಂ ಕಸವೆಂದಾ
ಪುರಾಣಮಂ ಪುಸಿಯ ಪುಡಿಕೆಯೆಂದೆಂದವರಾ
ಪ್ತರೆ ಠಕ್ಕರಂದು ಬಗೆವನೆ
ನಿರುತಂ ದರ್ಶನಿಕನಪ್ಪನಲ್ಲದನಲ್ಲಂ || ೧೨೮ ||

ಅಱುವತ್ತನಾಲ್ಕು ಕಳೆಯುಮ
ನಱಿದೊಡಮೇಂ ಜೈನನಲ್ಲದಿಪ್ಪವನಂ ತಾಂ
ಕುಱಿಯಂದಮಾಗೆ ಬಗೆವುದು
ಮಱಿದುಮಿವಂ ಯೋಗ್ಯನೆನ್ನದಿರ್ಪುದು ಜೈನಂ || ೧೨೯ ||

ಪೊದಱು ಮರಂ ಗಿಡು ಪುಲ್ಲೆಂ
ಬುದು ತಿರ್ಯಗ್ಜಾತಿಯೆಂಬುದಲ್ಲದೆ ನರನೆಂ
ಬುದೆ ಜೈನನಲ್ಲದವನಂ
ಪದಪಿಂದಂ ಯೋಗ್ಯನೆನ್ನದಿರ್ಪಂ ಜೈನಂ || ೧೩೦ ||

ವೈದಿಕಮಲ್ಲದೆ ಧರ್ಮಮ
ನಾದರಿಸುವೆನಲ್ಲೆನೆಂದೆನುತ್ತುಂ ಪಾತ್ರಂ
ಭೂದೇವರೆ ಜಗದೊಳಗಂ
[ದಾದರಿಸುವವಂ]ಗೆ ಜೈನವೆಸರೆಂತೆಸೆಗುಂ || ೧೩೧ ||

ಯೋಗ್ಯಂ ತಾನೆನಿಸಿದೊಡಮ
ಯೋಗ್ಯನೆ ಜಿನಮತದ ಸಾರಮಱಿಯದ ಮನುಜಂ
ಯೋಗ್ಯಂ ತಾನಲ್ಲದೊಡಂ
ಯೋಗ್ಯನೆ ಜಿನಸೂಕ್ತದಲ್ಲಿ ರತಿಯುಳ್ಳ ನರಂ || ೧೩೨ ||

ಪ್ರಳಯಾನಿಲನಿಂ ಕನಕಾ
ಚಳಮೆಂತುಂ ತಳರದಂತೆ ದರ್ಶನಶುದ್ಧಂ
ಚಳಿಯಿಸಲಱಿಯಂ ಕುಮತಂ
ಗಳಿನಾಪ್ತಪದಾರ್ಥದಲ್ಲಿ ದೃಢನಪ್ಪುದಱಿಂ || ೧೩೩ ||

ಪರಲಿಂಗಿಗಳ ತಪಂ ದು
ರ್ಧರಮೆನುತುಂ ಪೊಗೞ್ದು ಭಗವರಂ ಗೊರವರನಾ
ದರದಿಂ ಸ್ನಾತಕರಂ ಬು
ದ್ಧರನೊಂದಲ್ಕಕ್ಕುಮೆನ್ನದಂ ದರ್ಶನಿಕಂ || ೧೩೪ ||

ಚಾರಿತ್ರದಲ್ಲಿ ತಪಗಳೊ
ಳಾರಿಂದಂ ಪಿರಿಯ[ನೆ]ನಿಪ ಪರಲಿಂಗಿಯುಮಂ
ಸೀರಿಂದೆ ಕಷ್ಟಮೆಂದು ವಿ
ಚಾರಿಸುವಂ ಜೈನನನ್ನನಲ್ಲದನಲ್ಲಂ || ೧೩೫ ||

ಅರಿದೆನಿಪ ತಪದೆ ನೆಗೞ್ದೊಡ
ಮರಿದೆನಿಪ ಚರಿತ್ರದಿಂದೆ ನೆಗೞ್ಡೊಡಮೇನೋ
ಪರಿಕಿಸುವೊಡಾಯುಮಿಲ್ಲದ
ಸಿರಿ[ಯಂ]ದಮೆ ಶುದ್ಧದೃಷ್ಟಿಯಲ್ಲದನೆಸಕಂ || ೧೩೬ ||

ಪೊಡವಡುಗೆಮ ಜೀಯೆಂಗೆಮ
ಕುಡೆ ಕೊಳ್ಗೆಮ ಧರ್ಮದಲ್ಲಿ ಮಾಧ್ಯಸ್ಥಿಕೆಯಂ
ನುಡಿಗೆಮ ಪರಸಮಯಿಗಳೊಳ್
ಕಿಡದಿರ್ಕುಮೆ ಸ್ವಾರ್ಥವಶ[ದೆ] ಸುದೃಷ್ಟಿತ್ವಂ || ೧೩೭ ||

ಇಷ್ಟನೆನಿಸಿರ್ದ ಮೀಥ್ಯಾ
ದೃಷ್ಟಿಗೆ ಜಿನಧರ್ಮದತ್ತಲೆಱಗೆಂಬವೊಲು
ತ್ಕೃಷ್ಟನೆನೆ ನೆಗೞ್ದ ಸಮ್ಯಕ್
ದೃಷ್ಟಿಯವಂಗೆಱಗೆ ಕಿಡದೆ ಸಮ್ಯಕ್ತ್ವಗುಣಂ || ೧೩೮ ||

ನುಡಿಯದೆ ಕೂೞಂ ತಿಂಬನು
ಮೆಡಹಿದೊಡರಹಂತನೆಂಬವಂ ಜೈನನೆಯ
ಪ್ಪೊಡೆ ಮೂಗ[ನೇ]ಣಗೋಣಂ
ನುಡಿವವನುಂ ಜೈನನಾಗದೇಕೆಯೊ ಮಾಣ್ಬಂ || ೧೩೯ ||

ವ್ಯವಹಾರಕುಶಲನಾಗ
ಲ್ಕೆ ವೇೞ್ಪುದೆಂದದನೆ ಪಿಡಿದು ಜಿನಮಾರ್ಗಮನೊಂ
ದುವನಲ್ಲದೆನಿಪ ಲೋಕ
ವ್ಯವಹಾರದೆ ಠಕ್ಕನಲ್ಲದಲ್ಲಂ ಜೈನಂ || ೧೪೦ ||

ಆಗಮಮನೆ ಭಾವಿಸುತಿ
ರ್ಪಾಗಮಮಾರ್ಗದೊಳೆ ನಡೆವ ನುಡಿವಾಗಳ್ ತಾ
ನಾಗಮಭಾಷೆಗಳನೆ ನುಡಿ
ವಾ ಗುಣನಿಧಿ ಜೈನನಕ್ಕುಮಲ್ಲದನಲ್ಲಂ || ೧೪೧ ||

ಜೈನರೆ ಕಣ್ಣುಂ ಗತಿಯುಂ
ಜೈನರೆ ತಾಯ್ ತಂದೆ ಸಕಳಮಾದ ಪದಾರ್ಥಂ
ಜೈನರೆನಗೆಂದು ವರ್ತಿಪ
ಜೈನಂ ಜೈನರೊಳಗೆಲ್ಲಮುತ್ತಮಜೈನಂ || ೧೪೨ ||

ಪರಮಾರ್ಥದಿಂ ಜಿನಾಧೀ
ಶ್ವರನೆಳ್ಳಂ ಕೊದಳಿವೆರಸು ಮೆದ್ದವನಕ್ಕುಂ
ಪಿರಿದುಂ ತಾತ್ಪರ್ಯ ಜೈ
ನರೊಳೆಂತುಮಿವಂಗಿದೇನೆನಿಪ್ಪಂ ಜೈನಂ || ೧೪೩ ||

ಬಹುಳಾಳಾಪದೊಳೇಂ ಮು
ಕ್ತಿಹೇತು ತಾಮಲ್ಲದೆನಿಪ ಲೌಕಿಕಚರಿತಂ
ಪ್ರಹಸನಪಾತ್ರ[ವೆ]ನುತ್ತಂ
ಮಹಿತಾಚಾದೊಳೆ ನಡೆವನುತ್ತಮಜೈನಂ || ೧೧೪ ||

ಇದು ಮುಕ್ತಿಹೇತುವೆಂದೆಂ
ಬುದನಱಿತುಂ ಪೆಱತನಱಿದೊಡೆಂತೆಂದೆನೆ ನೂ
ಲ್ವುದುಗಿಡಿಸಿ ದೈವವಾಡ
ಲ್ಕದೇಕೆ ಖಳಕರ್ಮಬಂಧಮಂ ಬಿಡಿಸುವವಂ || ೧೪೫ ||

ಪಿರಿದುಂ ನುಡಿಯಂ ಸುಜನಂ
ಸ್ಥಿರಸತ್ತ್ವಂ ಮಧುರವಚನನತ್ಯಂತದಯಾ
ಪರನತಿನಿರ್ಮಳನೆನಿಸಿದ
ನರನಂ ಕಂಡಱಿಗೆ ಭವ್ಯನೆಂದಱಿವಾತಂ || ೧೪೬ ||

ಮದಮಾತ್ಸರ್ಯವಿದೂರಿ
ಮೃದುವಚನಂ ಶಾಂತಮೂರ್ತಿ ನಿರ್ಮಳಮತಿ ಜೀ
ವದಯಾಪರನಪ್ಪನನಱಿ
ವುದು ಭಾವಿಸಿ ಭವ್ಯನೀತನೆಂದಱಿವಾತಂ || ೧೪೭ ||

ನಷ್ಟಾಚಾರನನೆಂದುಂ
ದುಷ್ಟನನುದ್ಧತನನಾರೊಳಂ ಸೆಣಸುವನಂ
ಶಿಷ್ಟರ ನುಡಿಯಂ ಕೇಳದ
ಕಷ್ಟನುಮಿವನಲ್ಲ ಜೈನನೆಂದಱಿಗಱಿವಂ || ೧೪೮ ||

ಇದನಿಂಬಾಗಱಿಗೆ ಕುಮಾ
ರ್ಗದೊಳಾವಂ ನಡೆವನವನೆ ವೈಷ್ಣವನೆಂದೆಂ
ಬುದು ಮೇಣ್ ಮಾಹೇಶ್ವರನೆಂ
ಬುದು ದಿಟದಿಂ ದೈವಧರ್ಮದೊಳಗಱಿಯದವಂ || ೧೪೯* ||

ಅವರಿವರೆನ್ನದೆ ಮಿಥ್ಯಾ
ತ್ವವಶದೆ ಮಾಹೇಶ್ವರರ್ ದಿಟಕ್ಕೆನೆ ಸಂದಿ
ರ್ದವರೊಳಗೆತ್ತಾನುಂ ಪು
ಣ್ಯವಶದೆ ಸದ್ದೃಷ್ಟಿಯಾದ ಕೆಲಬರೆ ಜೈನರ್ || ೧೫೦ ||

ಕಳ್ಳಂ ಪಿರಿದುಂ ಹುಡಿವವ
ನೊಳ್ಳಿತು ಹೊಲ್ಲೆಂದುಮಱಿ[ವ]ನಂತದಱಿಂದಾ
ಕಳ್ಳಿಂ ಮಿಥ್ಯಾತ್ವಮೆ ಮಿಗಿ
ಲೊಳ್ಳಿತು ಹೊಲ್ಲೆಂದು ಭೇದಮಱಿಯದ ಕತದಿಂ || ೧೫೧ ||

ಕಳ್ಳಂ ಕುಡಿದಂ ತಿಳಿದಂ
ದೊಳ್ಳಿತು ಹೊಲ್ಲೆಂದುಮಱಿವನೆಂದಾನುಂ ತಾ
ನೊಳ್ಳಿತ್ತು ಹೊಲ್ಲದೆಂಬುದ
ನೆಳ್ಳನಿತುಂ ತಿಳಿಯದಾ ಕುದೃಷ್ಟಿಯೆ ಕಷ್ಟಂ || ೧೫೨ ||

ಒಳ್ಳಿತ್ತು ಹೊಲ್ಲದೆಂಬುದ
ನೊಳ್ಳಿತ್ತಾಗಱಿಯಲೀಯದಂತಾ ಕತದಿಂ
ಕಳ್ಳಿಂ ಕನಕದ ಕಾಯಿಂ
ಗುಳ್ಳದ ವಿಷದಿಂದಮಗ್ಗಳಂ ಮಿಥ್ಯಾತ್ವಂ || ೧೫೩ ||

|| ಜಿತದೋಷಂ ಮದವೆಂಟುಮಂ ತೊಱಿದು ದುಃಖಾವಾಸಮಪ್ಪಾ ಷಡಾ
ಯತನ ಪ್ರೀತಿಯನಾವಗಂ ಕಿಡಿಸಿ ಮೂಱುಂ ಮೂಢಮಂ ಬಿಟ್ಟು ಸ
ನ್ಮತಿಯೆಂಬೆಂಟೆಸೆವಂಗದೊಳ್ ನೆಱೆದು ಲೋಕಸ್ತುತ್ಯವಪ್ಪಾರ್ಹತ
ವ್ರತದೊಳ್ ವರ್ತಿಪನಾವನಾತನೆ ವಲಂ ಸಮ್ಯಕ್ತ್ವರತ್ನಾಕರಂ || ೧೫೪ ||

ಇಂತಿಪ್ಪತ್ತೈದುಂ ಮಲ
ಮಂ ತೊಱೆದು ಜಿನೇಂದ್ರಧರ್ಮಮಖಿಳಜಗಕ್ಕೋ
ರಂತಾಯ್ತು ವಂದ್ಯವೆನಗಾ
ಯ್ತಂತದೆ ಮೋಕ್ಷಪಥಮೆಂಬವಂ ದರ್ಶನಿಕಂ || ೧೫೫ ||

ಕೆಸಱೊಳಗಬ್ಜಂ ಕಲ್ಲೊಳ್
ಮಿಸುಗುವ ಪೊನ್ ಪುಟ್ಟಿ ಪೋಲದಂತಾವೆಡೆಯಂ
ವಸುಧಾಸೇವ್ಯಂ ಕ್ಷೀರಂ
ಪಸುವಿನ ತನುವಿನೊ[ಳೆ] ಪುಟ್ಟಿ ಪೋಲದು ತನುವಂ || ೧೫೬ ||

ಮದ ಮೂಢ ಷಡಾಯತನದೊ
ಳೊದವಿದ ಶಂಕಾದಿ ಮಳದೊಳೊಂದದೆ ಸಮ್ಯ
ಕ್ತ್ವದೊಳೊಂದಿ ದೃಢವ್ರತನ
ಪ್ಪುದಱಿಂದಮೆ ಮುಕ್ತನಪ್ಪನೆಂತುಂ ಭವ್ಯಂ || ೧೫೭ ||

ನಾರಕ ತಿರ್ಯಕ್ ಗತಿಯಂ
ಸಾರರ್ ಕುತ್ಸಕ ಕುದೇಶದೊಳ್ ಪುಟ್ಟರಣಂ
ದಾರಿದ್ರ್ಯದ ದೆಸೆಯಱಿಯರ್
ನಾರಿತ್ವದೊಳೊಂದರೆಲ್ಲಿಯುಂ ದರ್ಶನಿಕರ್ || ೧೫೮ ||

ವ್ರತನಿರತನಲ್ಲದೊಡಮಾ
ರ್ಹತ[ನೆಂ]ದುಂ ಭವಸಮುದ್ರದೊಳ್ ಸುೞಿಯಂ ದು
ರ್ಗತಿಯೊಳ್ ಪುಟ್ವಂ ಪಂಚಮ
ಗತಿಯೊಳ್ [ತಾಂ] ನಿಲ್ಲದಾತನೆಡೆಯೊಳ್ ನಿಲ್ಲಂ || ೧೫೯ ||

ಅನುಪಮದರ್ಶನದಿಂ ಕೆ
ಟ್ಟನೆ ಕೆಟ್ಟಂ ತನ್ನ ಚರಿತದಿಂದಂ ಕೆಟ್ಟಾ
ತನೆ ಕೆಟ್ಟನಲ್ಲನದಱಿಂ
ಜಿನಧರ್ಮಂ ನಚ್ಚಿದಂಗೆ ಕೇಡಿಲ್ಲೆಂತುಂ || ೧೬೦ ||

ಪರಮಾರ್ಥ ಶಲ್ಯತ್ರಯ
ವಿರಹಿತನಮಳಿನಚಿರತ್ರಯುತನೆಂದು ತದು
ರ್ವರೆ ಪೊಗೞೆ ರೂಢಿವೆತ್ತಂ
ಪರಮಶ್ರೀನಾಥನೆನಿಸಿ ಸಿರಿವೆತ್ತ ನರಂ || ೧೬೧ ||

|| ಅತಿರಮ್ಯಾಂಗುಳಿಶಾಖಮಸ್ಖಳಿತದಾನಂ ವಿಸ್ತೃತಚ್ಛಾಯಮೂ
ರ್ಜಿತರಾಗಾರುಣಪಲ್ಲವಂ ನಖಮಣಿಪ್ರೋತ್ಫುಲಲೀಲಂ ನಿಜ
ಸ್ಥಿತಿಸೇವ್ಯಂ ವಿನಮದ್ವಿನೇಯಜನಭೃಂಗಂ ಭವ್ಯಲೋಕಕ್ಕೆ ಸಂ
ತತಮೀಗಿಷ್ಟಫಲಂಗಳಂ ಪರಮಜೈನೇಂದ್ರಾಂಘ್ರಿಕಲ್ಪಾಂಘ್ರಿಪಂ || ೧೬೨ ||

ಇದು ಭಗವದರ್ಹತ್ಪರಮೇಶ್ವರಚರಣಸ್ಮ ರಣಪರಿಣತಾಂತಃಕರಣ
ವೀರಣಂದಿಮುನೀಂದ್ರಚರಣಸರಸಿರುಹಷಟ್ಜರಣ
ಮಿಥ್ಯಾಸಮಯತಿಮಿರಚಂಡಕಿರಣ ಸಕಳಾಗಮಪದಾರ್ಥನಿಪುಣ
ಮಹಾಕವಿ ಬ್ರಹ್ಮದೇವವಿರಚಿತಮಪ್ಪ

ಸಮಯಪರೀಕ್ಷಯೊಳ್ ಸಮ್ಯಕ್ತಸ್ವರೂಪನಿರೂಪಣಂ ಚತುರ್ಥಾಧಿಕಾರಂ