ಹಂಪಿಯ ಕನ್ನಡ ವಿಶ್ವವಿದ್ಯಾಲಯ ತಾನು ಯೋಜಿಸಿದ ‘ಸಮಗ್ರ ಕನ್ನಡ ಜೈನಸಾಹಿತ್ಯ’ದ ಸರಣಿಗಾಗಿ ‘ಬ್ರಹ್ಮಶಿವ – ವೃತ್ತವಿಲಾಸಂಪುಟ’ದ ಭಾಗವಾದ ಕವಿ ಬ್ರಹ್ಮಶಿವನ ‘ಸಮಯಪರೀಕ್ಷೆ’ ಸಂಪಾದಿಸಿಕೊಡುವ ಹಾಗೆ ತನ್ನ ೨೧ – ೭ – ೨೦೦೭ರ ಪತ್ರದಲ್ಲಿ ನನ್ನನ್ನು ಕೋರಿತು. ಆ ಕೆಲಸವನ್ನು ನಾನು ನನಗೆ ಸಂದ ಗೌರವವೆಂದು ಒಪ್ಪಿ ಯಥಾಶಕ್ತಿ ನಿರ್ವಹಿಸಿದ್ದೇನೆ. ಈ ಅವಕಾಶವನ್ನು ನನಗೆ ಮಾಡಿಕೊಟ್ಟ ಮಾನ್ಯ ಕುಲಪತಿಗಳಿಗೂ ಪ್ರಸಾರಾಂಗದ ಮಾನ್ಯ ನಿರ್ದೇಶಕರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಸಂಪಾದನಕಾರ್ಯದಲ್ಲಿ ನಾನು ಅನುಸರಿಸಿದ ಕ್ರಮವನ್ನು ಕುರಿತು ಕೆಲವು ಮಾತುಗಳನ್ನು ಹೇಳುವುದು ಅಗತ್ಯ.

ಬಿ.ಎಸ್‌. ಕುಲಕರ್ಣಿಯವರು ನಾಲ್ಕು ಹಸ್ತಪ್ರತಿಗಳ ಆಧಾರದಿಂದ ಸಂಪಾದಿಸಿ, ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ಮೂಲಕ ೧೯೫೮ರಲ್ಲಿ ಪ್ರಕಟಿಸಿದ ಮುದ್ರಿತಪ್ರತಿಯನ್ನು ಆಧಾರಪ್ರತಿಯನ್ನಾಗಿಟ್ಟುಕೊಂಡಿದ್ದೇನೆ. ಈಗ ದಶಕಗಳ ಕಾಲದಿಂದ ಆಸಕ್ತರು ತಮ್ಮ ಅಭ್ಯಾಸ ಸಂಶೋಧನೆಗಳಿಗಾಗಿ ಈ ಮುದ್ರಿತಗ್ರಂಥವನ್ನೇ ಬಳಸುತ್ತ ಬಂದಿರುವುದು ತಿಳಿದ ಸಂಗತಿ. ಕುಲಕರ್ಣಿಯವರು ಕೃತಿಯ ಸಂಪಾದನೆಯಲ್ಲಿ ಆಧಾರಪ್ರತಿಯಾಗಿ ತಾವು ಗ್ರಹಿಸಿದ ಹಸ್ತಪ್ರತಿಗೆ (ಇದು ಶ್ರವಣಬೆಳಗೊಳದ ಹಸ್ತಪ್ರತಿಭಂಡಾರದಲ್ಲಿ ನಿಕ್ಷೇಪಗೊಂಡಿರುವಂತೆ ತೋರುವುದು) ಹತ್ತಿರವಾಗುವಂತೆ ಗ್ರಂಥಪಾಠವನ್ನು ಒಪ್ಪಿರುವ ಕಾರಣದಿಂದ ಸಾಮಾನ್ಯ ಲಿಪಿಕಾರಸ್ಖಾಲಿತ್ಯಗಳೂ ಪದಚ್ಛೇದದೋಷಗಳೂ ತ್ರುಟಿತಭಾಗಗಳೂ ಇತರ ವಿಧದ ಕ್ಲೇಶಗಳೂ ಹಾಗೆಯೇ ಉಳಿದುಕೊಳ್ಳುವಂತಾಗಿದೆ. ಎಷ್ಟೋ ಕಡೆ ಪದ್ಯಗಳ ತಾತ್ಪರ್ಯವೇ ತಿಳಿಯದಂತಾಗಿದೆ. ಹೀಗಾಗಿ ಹೊಸ ಪರಿಷ್ಕರಣವೊಂದರ ಅಗತ್ಯ ಅನಿವಾರ್ಯವಾಗಿ ಇದ್ದಿತು.

ಪ್ರಸ್ತುತ ಪರಿಷ್ಕರಣಕ್ಕೆ ನಾನು ಶ್ರವಣಬೆಳಗೊಳದ ಹಸ್ತಪ್ರತಿಭಂಡಾರದಲ್ಲಿರುವ ಎರಡು ಹಸ್ತಪ್ರತಿಗಳಿಂದಲೂ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಭಂಡಾರದಲ್ಲಿರುವ ಎರಡು ಹಸ್ತಪ್ರತಿಗಳಿಂದಲೂ ಸಹಾಯಪಡೆದಿದ್ದೇನೆ. ಬಗೆಬಗೆಯ ಲಿಪಿಕಾರಸ್ಖಾಲಿತ್ಯಗಳೂ ಸಂದಿಗ್ಧತೆಗಳೂ ಪಾಠಕ್ಲೇಶಗಳೂ ತ್ರುಟಿತಗಳೂ ಇರುವೆಡೆಗಳಲ್ಲೆಲ್ಲ ಪ್ರತ್ಯೇಕವಾಗಿ ಪಾಠಾಂತರಗಳನ್ನು ಆ ಹಸ್ತಪ್ರತಿಗಳಿಂದ ಗುರುತಿಸಿಕೊಂಡು ಹೊಸದಾಗಿಯೇ ಗ್ರಂಥವನ್ನು ಪರಿಷ್ಕರಿಸಿದ್ದೇನೆ. ಬಿ.ಎಸ್. ಸಣ್ಣಯ್ಯನವರು ಶ್ರವಣಬೆಳಗೊಳದ ಹಸ್ತಪ್ರತಿಗಳಿಂದಲೂ ವೈ.ಸಿ. ಭಾನುಮತಿಯವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಗಳಿಂದಲೂ ನನಗಾಗಿ ಪಾಠಾಂತರಗಳನ್ನು ಗುರುತಿಸಿಕೊಟ್ಟಿದ್ದಾರೆ. ಈ ವಿಷಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಗಳಿಂದ ಹೆಚ್ಚಿನ ಸಹಾಯವಾಗಿದೆ. ಹಳೆಯ ಪರಿಷ್ಕರಣದ ಅನೇಕ ಅರೆಕೊರೆಗಳು ಸೇರ್ಪಡುವಂತಾಗಿದೆ. ಸಮಯಪರೀಕ್ಷೆಯ ಹಸ್ತಪ್ರತಿಗಳನ್ನು ಬಳಸಿಕೊಳ್ಳಲು ಅವಕಾಶ ವಿತ್ತ ಶ್ರವಣಬೆಳಗೊಲದ ಪೂಜ್ಯ ಸ್ವಾಮೀಜಿಯವರಿಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಾನ್ಯ ನಿರ್ದೇಶಕರಿಗೂ, ಪಾಠಾಂತರಗಳನ್ನು ಗುರುತಿಸಿಕೊಟ್ಟ ಬಿ.ಎಸ್.ಸಣ್ಣಯ್ಯನವರಿಗೂ ವೈ.ಸಿ. ಭಾನುಮತಿಯವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ವಿಶೇಷವಾಗಿ ವೈ.ಸಿ. ಭಾನುಮತಿಯವರ ಸಹಾಯವನ್ನು ನಾನು ನೆನೆಯುತ್ತೇನೆ.

ಪ್ರಸ್ತುತ ಪರಿಷ್ಕರಣದಲ್ಲಿ, ಬಿ.ಎಸ್. ಕುಲಕರ್ಣಿಯವರು ತಮ್ಮ ಪರಿಷ್ಕರಣದ ಅನುಭಂಧದಲ್ಲಿ ಕೊಟ್ಟಿರುವ ಅಧಿಕಪಾಠವನ್ನು, ಅದು ಏಕೈಕಪ್ರತಿಯ ಪಾಠವಾಗಿರುವುದರಿಂದಲೂ ಇತರ ಕಾರಣಗಳಿಮದಲೂ ಸೇರಿಸಿಲ್ಲ. ಅಲ್ಲಿಯೂ ಒಳ್ಳೆಯ ಪದ್ಯಗಳಿವೆ. ಮುಂದೆ ಈ ಕೃತಿಯ ಕಾರಣಗಳಿಂದಲೂ ಸೇರಿಸಿಲ್ಲ. ಅಲ್ಲಿಯೂ ಒಳ್ಳೆಯ ಪದ್ಯಗಳಿವೆ. ಮುಂದೆ ಈ ಕೃತಿಯ ಸವಿಮರ್ಶಪಾಠಪರಿಷ್ಕರಣವನ್ನು ಸಿದ್ಧಪಡಿಸುವವರು ಆ ಪ್ರತಿಯ ಪಾಠಗಳನ್ನೂ ಉಚಿತವರಿತ್ತು. ಬಳಸಬಹುದಾಗಿದೆ.

ಪ್ರಸ್ತುತ ಪರಿಷ್ಕರಣ ಹೊಸದಾಗಿ ಹಸ್ತಪ್ರತಿಗಳ ಸಹಾಯವನ್ನು ಪಡೆದು ಸಂಪಾದನೆಗೊಂಡಿರುವುದರಿಂದ ಇನ್ನು ಮುಂದೆ ಈ ವಿಶಿಷ್ಟಗ್ರಂಥದ ವಾಚನ, ಅಭ್ಯಾಸ ಮತ್ತು ಸಂಶೋಧನೆಗಳು ಅನುಕೂಲಕರವಾಗಿ ನಡೆಯುವುದು ಸಾಧ್ಯವೆಂದು ನನ್ನ ನಂಬಿಕೆ. ಪಾಠಪರಿಷ್ಕರಣಪಟ್ಟಿಕೆಯಲ್ಲಿ (ಅನುಬಂಧ: ೨) ಮುಖ್ಯಪಾಠಭೇದಗಳನ್ನು ಪಟ್ಟಿಮಾಡಿಕೊಟ್ಟಿದೆ; ಸಂಪಾದಕೀಯವಾದ ಊಹಾಪಾಠಗಳನ್ನು ಚೌಕಕಂಸಗಳಲ್ಲಿ ತೋರಿಸಿದೆ.

ಕೆಲವು ಅನುಬಂಧಗಳನ್ನು ಗ್ರಂಥದ ಕೊನೆಯಲ್ಲಿ ಸೇರಿಸಿದೆ. ಅವುಗಳ ಅನುಕ್ರಮ ಹೀಗೆ:

ತ್ರೈಲೋಕ್ಯಚೂಡಾಮಣಿಸ್ತೋತ್ರ
ಸಮಯಪರೀಕ್ಷೆಗೆ ಸಂಬಂಧಿಸಿ
೧. ಸಾಂಸ್ಕೃತಿಕಪದಕೋಶ

೨. ಜೈನಪಾರಿಭಾಷಿಕಪದಕೋಶ

೩. ಶಬ್ದಾರ್ಥಕೋಶ

೪. ಪಾಠಪರಿಷ್ಕರಣಪಟ್ಟಿಕೆ

೫. ಅಭ್ಯಾಸಸೂಚಿ

ಇವುಗಳ ಸಿದ್ಧತೆಯಲ್ಲಿಯೂ ನಾಣು ಕೆಲವರು ಮಿತ್ರರ ಸಹಾಯಪಡೆದಿದ್ದೇನೆ.

೧. ತ್ರೈಲೋಕ್ಯಚೂಡಾಮಣಿ ಸ್ತೋತ್ರದ ಸಂಪಾದನೆಗೆ ಕೆ. ಅನಂತರಾಮು ಅವರ ಪರಿಷ್ಕರಣವನ್ನು ಆಧಾರಪ್ರತಿಯಾಗಿ ಗ್ರಹಿಸಿದ್ದೇನೆ.

೨. ಪಾಠಪರಿಷ್ಕರಣಪಟ್ಟಿಕೆ : ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಗಳಿಂದ ಸ್ವೀಕರಿಸಿರುವ ಪಾಠಗಳನ್ನು ತುಲನಾತ್ಮಕವಾಗಿ ಗುರುತಿಸಿದ್ದೇನೆ.

೩. ಜೈನಪಾರಿಭಾಷಿಕಪದಕೋಶ: ಕೆಲವು ಮುಖ್ಯವಾದ ಜೈನಧರ್ಮದ ಪರಿಭಾಷೆಯ ಶಬ್ದದಗಳಿಗೆ ಇಲ್ಲಿ ವಿವರಣೆ ನೀಡಿದೆ. ಇದನ್ನು ಕೆ. ಅನಂತರಾಮು ಅವರು ಸಿದ್ಧಪಡಿಸಿದ್ದಾರೆ.

೪. ಸಾಂಸ್ಕೃತಿಕಪದಕೋಶ: ಸಾಂಸ್ಕೃತಿಕ ಮಹತ್ತ್ವದ ಕೆಲವು ಶಬ್ದಗಳನ್ನು ಆಸಕ್ತರ ಕುತೂಹಲಕ್ಕಾಗಿ ಇಲ್ಲಿ ಪಟ್ಟಿಮಾಡಿಕೊಟ್ಟಿದೆ. ಇದನ್ನು ಕೂಡ ಕೆ. ಅನಂತರಾಮು ಸಿದ್ಧಪಡಿಸಿದ್ದಾರೆ.

೫. ಶಬ್ದಾರ್ಥಕೋಶ: ಅಭ್ಯಾಸಿಗಳ ಅನುಕೂಲಕ್ಕಾಗಿ ತಕ್ಕಮಟ್ಟಿಗೆ ವಿಸ್ತಾರವಾಗಿಯೇ ಈ ಕೋಶವನ್ನು ಸಿದ್ಧಪಡಿಸಿದ್ದೇನೆ. ಹೀಗಿದ್ದೂ, ಕೆಲವು ಕಡೆ ಶಬ್ದೂಪಗಳೂ ಅರ್ಥವಿವರಣೆಗಳೂ ಇನ್ನು ವಿಶದ ಪಡಬೇಕಾಗಿವೆ. ವಕಾರತ್ರಯ, ಚಕಾರಚತುಷ್ಯದ ವಿವರಣೆ ನೀಡಿದವರು ವಿದ್ವಾನ್ ಎಚ್‌.ವಿ. ನಾಗರಾಜ ರಾವ್ ಅವರು.

೬. ಅಭ್ಯಾಸಸೂಚಿ: ‘ಸಮಯ ಪರೀಕ್ಷೆ’ಯ ಕವಿ ಮತ್ತು ಕೃತಿಗಳ ಅಭ್ಯಾಸಕ್ಕೆ ಸಹಾಯವಾಗಲೆಂದು ಈ ಸೂಚಿಯನ್ನು ಇಲ್ಲಿ ಕೊಟ್ಟಿದೆ. ಇದನ್ನು ಸಿದ್ಧಪಡಿಸಿರುವವರು. ಬೆಂಗಳೂರು ಆಚಾರ್ಯಪಾಠಶಾಲಾ ಕಾಲೇಜು ಗ್ರಂಥಪಾಲರಾದ ಎಸ್‌. ಕಾರ್ತಿಕ್ ಅವರು.

ಹೀಗೆ ಸಹಾಯವಾದ ಎಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಮುದ್ರಾಕ್ಷರಗಳನ್ನು ವಿನ್ಯಾಸಗೊಳಿಸಿದ ಪ್ರೊ. ಎಸ್‌. ವಿದ್ಯಾಶಂಕರ ಅವರಿಗೂ ನನ್ನ ಕೃತಜ್ಞತೆಗಳು.

ಟಿ.ವಿ. ವೆಂಕಟಾಚಲ ಶಾಸ್ತ್ರೀ
ಮೈಸೂರು ೨೬.೮.೨೦೦೮