ಶ್ರೀ ವೀರಜಿನಾಧೀಶಂ
ದೇವರ ದೇವಂ ವಿಭೋಧದೃಗ್ವೀರ್ಯಸುಖಂ
ಶ್ರೀವಲ್ಲಭನನುಪಮನೊಸೆ
ದಾವಗಮೆಮಗೀಗೆ ವಿಮಳರತ್ನತ್ರಯಮಂ ||೧||

|| ಸ್ರ || ನಮಗೀಗತ್ಯಂತಸೌಖ್ಯಾಸ್ಪದಮನೊಸೆದು ಕಾರುಣ್ಯದಿಂ ಶ್ರೀ ಜಿನೇಂದ್ರಂ
ಕಮನೀಯಾಂಗಾತ್ಮ ತೇಜಃಪ್ರಸರದೆಸಕದಿಂ ವಿಶ್ರುತಂ ಮೋಕ್ಷಲಕ್ಷ್ಮೀ
ರಮಣಂ ಸರ್ವಜ್ಞನಾನಂದಿತಭುವನಜನಂ ಘೋರಸಂಸಾರದೂರಂ
ವಿಮಳಜ್ಞಾನಸ್ವರೂಪಂ ತ್ರಿಭುವನತಿಳಕಂ ವಿಶ್ವದೇವಾಧಿದೇವಂ || ||

ಜಗದೊಳಗುಳ್ಳ ಸುತತ್ತ್ವಮ
ನಗಣಿತಮನನಂತಭೇದಭಿನ್ನಸ್ಥಿತಿಯಂ
ಸುಗಮದಿನಱಿವಂತರೆ ಪೇ
ೞ್ದ ಗುಣಾಢ್ಯಂ ಗ್ಳಧಪಿಂಧಮುನಿ ಕೇವಳಮೇ || ||

ಕವಿ ಗಮಕಿ ವಾದಿ ವಾಗ್ಮಿ
ಪ್ರವರರೊಳುತ್ಕೃಷ್ಟಮೆನಿಸಿ ತಪದಿಂ ಶ್ರುತದಿಂ

[ವ]ಗೆಣೆಯಿಲ್ಲೆನೆ ಜಗದೊ
ಳ್ಭುವನಾರ್ಚ್ಯ ಸಮಂತಭದ್ರದೇವರ್ ನೆಗೞ್ದರ್ || ||

|| ಇನನಸ್ತಂಗತನಾಗೆ ತತ್ಸಮಯದೊಳ್ ಕಯ್ಯಿಕ್ಕಿ ವಂಶಾವಳೀ
ವನಮಧ್ಯಸ್ಥಿತನಾಗಿ ವಾಯುವಶದಿಂ ಕೇಶಂಗಳಂ ಸುತ್ತಿ ವೇ
ಣುನಿಕಾಯಂ ಬಿಡದೆತ್ತಿ ಮೋದುತಿರಲಧ್ರುವಾದ್ಯನುಪ್ರೇಕ್ಷೆಯಂ
ಮನದೊಳ್ ಭಾವಿಸಿ ಪೇೞ್ದ ಸೈರಣೆಯ ಮಾನುಷ್ಯ[ರ್] ಜಟಾಚಾರ್ಯರಂ || ||

ಚಂ || ಪದೆದನುರಾಗದಿಂ ನೆಗೞ್ದ ಶಾಸನದೇವತೆ ಪೂಸೆ ಪಾದಲೇ
ಪದ ಗುಣದಿಂದೆ ಯೋಜನಸಹಸ್ರಪುನೊರ್ಮೊದಲೆಯ್ದುವೊಂದು ಸಂ
ಪದಮನಪೂರ್ವಮಾಗೆ ತಳೆದೀ ಧರೆಯೊಳ್ ಸಲೆ ಪೂಜ್ಯಪಾದ ನಾ
ಮದಿನೆಸೆದಾ ಮುನೀಂದ್ರನನತಂದ್ರನನೞ್ತಿಯೊಳಾ[ರೊ] ಬಣ್ಣಿಸರ್ || ||

|| ಸಕಳಪ್ರಾಣಿಹಿತಾರ್ಥಮಾಗೆ ರುಜೆಗಳ್ ಪಿಂಗಲ್ಕೆ ಕಲ್ಯಾಣಕಾ
ರಕಮಂ ವಾಗ್ಮಳಮಂ ತೆರಳ್ಜಿ ಕಳೆಯಲ್ ಜೈನೇಂದ್ರಮಂ ಚಿತ್ತದೊಂ
ದು ಕಳಂಕಂ ಕಿಡಿಸಲ್ ಸಮಾಧಿಶತಯೋಗಗ್ರಂಥಮಂ ಪೇೞ್ದು ಸ
ರ್ವಕವೀಂದ್ರಸ್ತುತಶುದ್ಧಚಿತ್ತನೆಸೆದಂ ಶ್ರೀ ಪೂಜ್ಯಪಾದೋತ್ತಮಂ || ||

ಅಸದೃಶಮಿವೆನಿಸಿ ಲೋಕ
ಕ್ಕೆಸೆಯೆ ಮನೋವಚನಕಾಯಮಳಮಂ ಕಳೆಯ
ಲ್ಕೆ ಸಮರ್ಥವೆನಿ[ಪ್ಪಂ]ತೆ ರ
ಚಿಸಿದರ್ ಕೇವಳಮೆ ಪೂಜ್ಯಪಾದಮುನೀಂದ್ರರ್ || ||

ಜಿನಶಾಸನಕ್ಕೆ ಭೂಷಣ
ಮೆನಿಸಿರ್ದಕಳಂಕತರ್ಕಮಂ ಪೇೞ್ದ ಮಹಾ
ಮುನಿಯಂ ಭವ್ಯಾಂಬುಜಮಿ
ತ್ರನನೊಲ್ದಕಳಂಕದೇವನಂ ಪೊಗೞದರಾರ್ || ||

|| ಎರಡುಂ ಕಯ್ಯ ತಳಂಗಳೊಂದೆ ಪುಟದೊಳ್ ಸಂಪ್ರೀತಿಯಿಂದಿಟ್ಟು ನಿ
ರ್ಭರದಿಂ ಚಾರಣರಾ ವಿದೇಹಮಹಿಗೊಯ್ಯಲ್ಪೋಗಿ ಸೀಮಂಧರೇ
ಶ್ವರರಂ ಬಂದಿಸಿ ತತ್ಪ್ರಣೀತ ಸಮಯಗ್ರಂಥಂಗಳಂ ತಂದು ಬಿ
ತ್ತರದಿಂ ಬಿತ್ತಿದ ಕೊಂಡಕುಂದಮುನಿನಾಥಖ್ಯಾತಿ ಲೋಕೋತ್ತ[ಮಂ] || ೧೦ ||

|| ಈ ಮಹಿಮಂಡಲಂ ಪೊಗೞಿ ಪೂರ್ವವಿದೇಹದೊಳಿರ್ದು ತಂದುದೋ
ಸಾಮಿ ಸುಲೋಚನಾಚರಿತೆ ಪಾಹುಡಮೆಂಬ ಪುರಾಣಮಂ ಮನಃ
ಪ್ರೇಮದಿನೋದುತಿರ್ಪ ಯತಿಗಳ್ಗೆ ನಿರನ್ವಯವಾಗಲೆಂದು ತಂ
ದಾ ಯತಿನಾಥನಿಂ ಪಿರಿಯರುಂ ಪೆಱರುಂಟೆ ತಪಃಪ್ರಭಾವದಿಂ || ೧೧ ||

ದ್ರವ್ಯಂಗಳಂದಮಂ ಸ್ವ
ದ್ರವ್ಯ ಪರದ್ರವ್ಯಭೇದಭಿನ್ನಸ್ಥಿತಿಯಂ
ಶ್ರವ್ಯಮೆನೆ ಪೇೞ್ದು ಮುನಿಜನ
ಸೇವ್ಯಮೆನಲ್ ಕೊಂಡಕುಂದಮುನಿಪರ್ ನೆಗೞ್ದರ್ || ೧೨ ||

ವಾದಿಗಳೊಳಗತ್ಯುತ್ತಮ
ವಾದಿಗಳಯ್ವತ್ತನಾಲ್ವರಂ ಗೆಲ್ದ ವಚಃ
ಶ್ರೀದಯಿತನಮಳಿನ ಸ್ಯಾ
ದ್ವಾದಾಚಳಸಿಂಹನಖಿಳತಾರ್ಕಿಕಭೂಪಂ || ೧೩ ||

ಜಿನಸಮಯಾಂಬರಸೋಮಂ
ವಿನೇಯಜನಕುಮುದಸೋಮನಖಿಳಧರಿತ್ರೀ
ಜಿನನಯನೋತ್ಸವಸೋಮಂ
ಜನಸ್ತುತಂ ಸೋಮದೇವಪಂಡಿತದೇವಂ || ೧೪ ||

ಪರಮಜಿನಚರಣಭಕ್ತಂ
ಪರಮಾಗಮವೇದಿ ಪರಮಮುನಿತುಷ್ಟಿಕರಂ
ಪರಮನರೇಶ್ವರವಂದ್ಯಂ
ಧರೆಗೆಸೆದಂ ಪರಮಪಂಡಿತಂ ಭೂಪಾಲಂ || ೧೫ ||

ಪೊಸೆಯದೆ ಪಜ್ಜೆಗಳಂ ನಾ
ಲ್ದೆಸೆಯೊಳಮೆಂಟೆಂಟು ದೆವಸಮಿರುಳುಂ ಪಗಲುಂ
ಮಿಸುಕದೆ ಸಲೆ ನಿಂದೆ[ಸಕಂ] ಪಸರಿಸಿದರ್ ಲೋಕದೊಳ್ ಚತುರ್ಮುಖದೇವರ್ || ೧೬ ||

|| ಮೆಟ್ಟಿಯೆ ನಿಲ್ವ ಕಲ್ಲನುಱಿ ಸುಟ್ಟೊಡಮಂಘ್ರಿಗಳುರ್ಚೆ ಗೂಂಟಮಂ
ಬೆಟ್ಟಿದೊಡಂ ಮಹೋಗ್ರಫಣಿ ಸುತ್ತಿದೊಡಂ ಮೊೞಕಾಲ್ಗಳಂ ಬಿಡಲ್
ಬಟ್ಟಲನೋವದೊತ್ತಿದೊಡಮಳ್ಕದೆ ಮೇರುನಗೇಂದ್ರದಂದದಿಂ
ಬೆಟ್ಟದ ದೇವರಲ್ಲದರ್ಗೆ ತೀರ್ಗುಮೆ ನಿಶ್ಚಳಯೋಗದಿಂದಿರಲ್ || ೧೭ ||

ವಾದಿಗಳೆನೆ ನೆಗೞ್ದ ಮಹಾ
ವಾದಿಗಳಂ ನುಡಿದು ಗೆಲ್ದು ಚಕ್ರೇಶ್ವರನೊ
ಲ್ದಾದರಿ[ಸೆ] ನೆಗೞ್ದನಿಂತೀ
ಮೇದಿನಿಯೊಳ್ ವಾದಿರಾಜದೇವರೆ ದೇವರ್ || ೧೮ ||

ಚಂ || ವನಗಜಮುಳ್ಳ ಪೇರಡವಿಯೊಳ್ ಬರೆ ಕಟ್ಟಿದಿರಾಗಿ ತಾಗೆ ಬೆ
ನ್ನನೆ ಪರಿತರ್ಪ ಪೆರ್ಬುಲಿ ಮಹಾಫಣಿಸಂಕುಳಮೆಯ್ದಿವರ್ಪ ಕಾ
ಯ್ವಿನ ಪಗೆ ಕೂಡೆ ಮಾಡುವುಪಸರ್ಗಮದಾಗಳೆ ಮಾಣ್ಗುಮೞ್ತಿಯಿಂ
ನೆನೆದೊಡೆ ಮೇಘಚಂದ್ರಮುನಿವಲ್ಲಭದಿವ್ಯಪದಾಂಬುಜಂಗಳಂ || ೧೯ ||

ಮೊಗದೊಳ್ ವಾಗ್ವಧು ಸಂತತ
ಮಗಲದೆ ನಿಲೆ ಕೀರ್ತಿವಧುಗೆ ಕೂರ್ತುಂ ಮತ್ತ
ರ್ಥಿಗಳಮೃತವಧುಗೆ ತಪದು
ಜ್ಜುಗಮೆಂತುಟೊ ಮೇಘಚಂದ್ರಮುನಿಪುಂಗವರಾ || ೨೦ ||

ಮಳಧಾರಿಗಳೆನೆ ನೆಗೞ್ದುಂ
ಮಳರಹಿತಮೆನಿಪ್ಪ ತಪದೆ ಸುಚರಿತ್ರದೆ ನಿ
ರ್ಮಳತೇಜೋಭುಂಭುಕಮಾ
ಯ್ತಿಳೆಗಚ್ಚರಿ ವೀರಣಂದಿಮಲಧಾರಿಗಳಾ || ೨೧ ||

ವೀರದಗುರ್ವಿಂದುಗ್ರನ
ವೀರಮನದಟಲೆದು ನೆಗೞ್ದ ಮದನನ ಮದಮಂ
ಬೀರಮುಮನಲೆದು ಗೆಲ್ದುದು
ವೀರತಪಂ ವೀರಣಂದಿಮಲಧಾರಿಗಳಾ || ೨೨ ||

|| ಸ್ರ || ಮುನಿಸೊಂದಾದಂದೆ ಸಂನ್ಯಾಸನ[ಮಿ]ರದಶನಂ ಛರ್ದಿಯಾದಂ[ದೆ] ಸಂನ್ಯಾ
ಸನವಕ್ಷಿ ಕ್ಷುದ್ರನಿದ್ರಾಭರದಿನೊಱಗೆ ಸಂನ್ಯಾಸನಂ ಗಾತ್ರಕಂಡೂ
ಯನಮಂ ಕೈ ಮುಟ್ಟೆ ಸಂನ್ಯಾಸನಮುಗುೞ್ದೊಡೆ ಸಂನ್ಯಾಸನಂ ಪೊಣ್ಕೆಯೆಂದೆಂ
ದೆನಸುಂ ತಾನೇಂ ಪರಿಚ್ಛೇದಿಯೊ ತಪದ ಬೆಡಂಗಂ ಗುಣವ್ರಾತತುಂಗಂ || ೨೩ ||

ಅತಿನಿರ್ಮಳಮೆನಿಸಿರ್ದಾ
ಶ್ರುತವದೆ ತಾಂ ಮೂರ್ತಿಗೊಂಡುದೆನ್ಗುಂ ಲೋಕಂ
ಶ್ರುತಕೇವಳಿ ಜಿನಸೇನರ
ನತಂದ್ರರಂ ವೀರಸೇನಭಟ್ಟಾರಕರಂ || ೨೪ ||

ಕವಿಪರಮೇಷ್ಠಿವೆಸರ್ ನಿಜ
ಕವಿತಾಗುಣದಿಂದಮೆಸೆಯೆ ಕವಿಜನವಂದ್ಯಂ
ಕವಿಪರಮೇಷ್ಠಿಮುನೀಂದ್ರಂ
ಭುವನಾಂತರ್ವರ್ತಿಕೀರ್ತಿ ನೆಗೞ್ದಂ ಧರೆಯೊಳ್ || ೨೫ ||

ಆಪ್ತೋದಿತಲೋಕಪ್ರ
ಜ್ಞಪ್ರಿಗೆ ಮುಂ ಕರ್ತೃವಾಗಿ ಕಡೆಯೊಳ್ ನಿಂದಿ
ರ್ದಾಪ್ತಸ್ಮ ರಣೆಯಿನಸುವಂ
ವ್ಯಾಪ್ತಯಶಂ ಬಿಟ್ಟು ಬಾಳಚಂದ್ರಂ ನಿಗೞ್ದಂ || ೨೬ ||

|| ಧರೆಯೊಳ್ ಸಂದ ಮೊರಂಬದೊಳ್ ನಿಜನಿಶೀಥಿಸ್ಥಾನದೊಳ್ ಮಣ್ಣನಾ
ದರದಿಂದೊರ್ಮೆಯೆ ತಂದು ಪೂಸಲೊಡನತ್ಯುಗ್ರ ಗ್ರಹಾನೇಕ ಸ
ರ್ಪರುಜಾಪೀಡೆಗಳಾಗಳಂತೆ ಕೆಡುಗಂ ತಾನೆಂದೊ[ಡೇಂ] ಮಮ್ಮ ಬಾ
ಪ್ಪುರೆ ಸಾಮಾನ್ಯಮೆ ಮೇಘಚಂದ್ರಮುನಿಮಾಹಾತ್ಮಂ ಧರಾಚಕ್ರದೊಳ್ || ೨೭ ||

ಪದಿಮೂಱು ದಿನಂ ಸಂನ್ಯಸ
ನದೆ ಕಾಯೋತ್ಸರ್ಗದಿಂದೆ ನಿಂದುಂ ನಿಂದಂ
ದದಿನಸುವಂ ಬಿಟ್ಟು ಜಗ
ದ್ವಿದಿತಯಶಂ ವೀರಣಂದಿ ಸುಗತಿಗೆ ಸಂದಂ || ೨೮ ||

ನಯದಿಂದಂ ತಾಯುಂ ತಂ
ದೆಯುಮೊಳ್ಪನೆ ಶಿಕ್ಷಿಪಂತೆ ಮನುಜಾವಳಿಯಂ
ನಯದಿಂ ಸಂಭೋಧಿಸಿ ಮು
ಕ್ತಿಯೊಳೊಂದಿಪ ಪೆರ್ಮೆ ಬಂಧವರ್ಮಂಗೆ ನಿಜಂ || ೨೯ ||

ರೋಗಂ ಸಮಸ್ತದುಃಖ
ಕ್ಕಾಗರಮದು ಕೇಳ ಜೀವಸಂಬೋಧನೆಯಂ
ಬೇಗಂ ಮಾಣ್ಗುಂ ದುಸ್ಸಹ
ರೋಗಂ ಸದ್ವೈ ದ್ಯನಿಂದುಪಶಮಿಸುವವೋಲ್ || ೩೦ ||

ಭವಜಳಧಿಯೊಳಗೆ ಮುೞ್ಕಾ
ಡುವ ಜೀವಾವಳಿಗೆ ಮುಕ್ತಿಯಂ ತಡೆಯದೆ ಪೊ
ರ್ದುವುದಂ ಪೇೞ್ದುದಱಿಂ ಬಂ
ಧುವರ್ಮನಂ ಭುವನಬಂಧುವೆನ್ನದರೊಳರೇ || ೩೧ ||

ಜಿನವಲ್ಲಭನಮಳಯಶೋ
ಧನನುತ್ತಮರಾಜಪೂಜಿತಂ ಬುಧನಿಳಯಂ
ಜಿನಪಾದಾಂಬುಜಮಧುಕರ
ನೆನೆ ನೆಗೞ್ದಂ ಪಂಪರಾಜನೂರ್ಜಿತತೇಜಂ || ೩೨ ||

ಶುಭಚರಿತನನಖಿಳಕವಿ
ಪ್ರಭುವಂ ಲೋಕೈಕಮಾನ್ಯನಂ ತ್ರೈಭುವನ
ಪ್ರಭುಚರಿತಮನತಿಭಕ್ತಿಯಿ
ನಭಿನುತಮೆನೆ ಪೇೞ್ದ ಪಂಪನಂ ಪೊಗೞದರಾರ್ || ೩೩ ||

ಪೊನ್ನಂ ವಿನೇಯರನ್ನಂ
ರನ್ನಂ ಭವ್ಯಾಬ್ಜಮುಖವಿಕಾಸನಮಿತ್ರಂ
ಪೊನ್ನನೆನಲ್ ನೇರಾಣಿಯ
ಪೊನ್ನನ್ನನಮೂಲ್ಯರತ್ನದನ್ನಂ ರನ್ನಂ || ೩೪ ||

ಪೊನ್ನನೆ ಪಂಪನೆ ರಜಕನೆ
ರನ್ನನೆ ಕವಿತಾಗುಣೋದಯನೆ ದರ್ಶನಸಂ
ಪನ್ನತೆಯೊಳ್ ಕವಿತೆಯೊಳವ
ರನ್ನನೆ ವಿದಿತಾತ್ಮಭಾವನಗ್ಗಳದವಂ || ೩೫ ||

ವಿತ್ತಂ ಸತ್ಪಾತ್ರಕ್ಕಾ
ಯತ್ತಂ ನಿಜವಾಣಿ ತೀರ್ಥಂಕರಕೀರ್ತನೆಗಾ
ಯತ್ತಂ ವ್ರತಕ್ಕೆ ತನುವಾ
ಯತ್ತವೆನಲ್ ನಾಗಚಂದ್ರಬುಧನೆ ಕೃತಾರ್ಥಂ || ೩೬ ||

ಪಟ್ಟಣದ ನಡುವೆ ಬೆಳ್ಳಿಯ
ಬೆಟ್ಟಂಗಳನಿಳಿಪ ಜೈನನಿಳಯಂಗಳನೀ
ಸೃಷ್ಟಿಯೊಳೆ ಕೂಡೆ ಮಾಡಿದ
ರಟ್ಟಂ ಶಂಖಾವನೀಶನೆನೆ ಪೊಗೞದರಾರ್ || ೩೭ ||

ಗುಣದ ಕಣಿ ದಾನಚಿಂತಾ
ಮಣಿ ವಿಮಳಚರಿತ್ರಜೈನಶಾಸನರಕ್ಷಾ
ಮಣಿ ಸಜ್ಜನೈಕಚೂಡಾ
ಮಣಿಯೆಂದೆಂದತ್ತಿಮಬ್ಬೆಯಂ ಪೊಗೞದರಾರ್ || ೩೮ ||

|| ಸ್ರ || ಭರದಿಂ ಬಂ[ದೆತ್ತೆ] ಮುಂದೇಮ್ಮ ಸಕದೆಸಕದಿಂ ತೀವಿ ಮುಂದೊತ್ತೆ ಗೋದಾ
ವರಿ ಭೂಪಂ ತೈಲಪಂ ನಿಸ್ತರಿಸು ಕಟಕಮಂ ಬೇಗಮಿನ್ನಬ್ಬ ನೀನೆಂ
ದೆರೆಯಲ್ ಸರ್ವಜ್ಞನಂ ಪೊತ್ತಗಿಯದೆ ನದಿಯಂ ಪೊಕ್ಕೊಡಾ ವಾರಿಪೂರಂ
ಬಿರಿದತ್ತಾ ಚಕ್ರಿ ಪಾಯ್ದಂ ತೊಱಿಯನಮಳಸಮ್ಯಕ್ತ್ವವಿಖ್ಯಾತಿಯಿಂದಂ || ೩೯ ||

ಅಕಳಂಕಚರಿತೆ ಜಿನಚರ
ಣಕಂಜಕಿಂಜಲ್ಕಪುಂಜರಂಜಿತತನು ಸ
ರ್ವಕಳಾವಿದೆ ಶೌಚಿ ಘಟಾಂ
ತಿಕೆ ದಾನವಿನೋದೆಯೆಂಬ ಬಿರುದಿಂ ನೆಗೞ್ದಳ್ || ೪೦ ||

ಅತಿಧವಳಕೀರ್ತಿಲಕ್ಷ್ಮೀ
ಪತಿಯಂ ಜಿನಸಮಯವಾರ್ಧಿವರ್ಧನತಾರಾ
ಪತಿಯಂ ಕೂರ್ತನಿಶಂ ರಾ
ಜಿತನಂ ರಾಯನನುದಾರಿಯಂ ಪೊಗೞದರಾರ್ || ೪೧ ||

ಅಮಳಿನಚರಿತಂ ಜೈನಾ
ಗಮಕುಶಲಂ ಗಂಗವಂಶತಿಳಕಂ ಭ್ಯೋ
ತ್ತಮನಮಳವಾಗ್ವಧೂಟೀ
ರಮಣಂ ಶ್ರೀರಾಯ ರಾಚಮಲ್ಲಂ ನೆಗೞ್ದಂ || ೪೨ ||

ಜಿನಸಮಯಸುಧಾರ್ಣವವ
ರ್ಧನಚಂದ್ರಂ ಜಿನಮತಾಂಬುಜಾಕರಹಂಸಂ
ಜಿನಪದಪಯೋಜಭೃಂಗಂ
ವಿನೇಯನಿಧಿ ಚತುರಮಂತ್ರಿತಿಲಕಂ ಭರತಂ || ೪೩ ||

ಪ್ರವಿಮಳಜಿನಶಾಸನದಿಂ
ಪವಿತ್ರಮೆನೆ ಮಾಡಿ ಕೂಂಡಿ ಮೂಸಾಸಿರಮಂ
ಭುವನನುತನಾದನಾತ್ಮೀ
ಯವಚೋಮೃತದಿಂದೆ ಪೇೞ್ದ ಪೆರ್ಗಡೆ ಬೊಮ್ಮಂ || ೪೪ ||

ಆ ವಿಭುವಿನಗ್ರತನಯಂ
ಪಾವನಚರಿತಂ ವಿನೇಯಕಲ್ಪಮಹೀಜಂ
ಕೇವಳಮೆ ನಾಗದೇವಂ
ಭೂವಿಶ್ರುತಕೀರ್ತಿ ಮಂಡಳೇಶ್ವರತಿಳಕಂ || ೪೫ ||

|| ಸ್ರ || ಜನತಾನಂದಂ ಚಳುಕ್ಯಾಭರಣನವನಿಪಾಳೋತ್ತಮಂ ಸಾರ್ವಭೌಮಂ
ಜನಕಂ ತ್ರೈಲೋಕ್ಯಮಲ್ಲಂ ಸಕಳವಸುಮತೀವಲ್ಲಭಂ ವಿಕ್ರಮಾಂಕಾ
ವನಿಪಂ ತಾನಗ್ರಜಾತಂ ತ್ರಿಭುವನವಿಭು ದೇವಾಧಿವೇವಂ ಜಿನೇಂದ್ರಂ
ತನಗಾಪ್ತಂ ಮತ್ತೆನಲ್ಕೇಂ ಪಿರಿಯನೊ ಜಗತೀನಾಥರೊಳ್ ಕೀರ್ತಿದೇವಂ || ೪೬ ||

ಅರಸುಮಗಂ ಗಡ ಕವಿ ಗಡ
ಪಿರಿದೀವಂ ಗಡ ಬೞಿಕ್ಕೆ ಜೈನಂ ಗಡೆನಲ್
ಧರಣಿಪತಿ ಕೀರ್ತಿದೇವಂ
ನಿರುತಂ ಪೊನ್ ಕಮ್ಮಿತಾದುದೆನಿಸಿದಣಿಳೆಯೊಳ್ || ೪೭ ||

ಇವನಂತಿರೊಳ್ಪಿನಿಂ ನೆಗ
ೞ್ದವರವರಾರೆಂದು ನಾಗದೇವನ ಮಗನಾ
ಹವಮಲ್ಲ ನೃಪತಿಯನ್ನಯ
ಕುವಳಯಮಿತ್ರನನೇಕರುಂ ಬಣ್ಣಿಸುವರ್ || ೪೮ ||

ಇನ್ನರಿವರೆಂದು ಬಣ್ಣಿಸು
ವನ್ನರ ಲೋಕೈಕಸಾರಸರ್ವಸ್ವರೆನಿ
ಪನ್ನರ ಸಮಸ್ತಗುಣಸಂ
ಪನ್ನರೆ ಭವ್ಯರ್ಕಳೆಂದು ಬಣ್ಣಿಪುದು ಜಗಂ || ೪೯ ||

ಮನವಚನಕಾಯದಿಂ ಜೀ
ವನಿಕಾಯಮನೞಿಯರೞಿವುದೆನ್ನರ್ ಮತ್ತಂ
ತೆ[ನಿ]ತುಮೊಡಂಬಡರೆನೆ ತಾ
ಮೆನೆ ಜಗದೊಳ್ ಜೈನರಿಂ ದಯಾಪರರೊಳರೇ || ೫೦ ||

ಶ್ರೀಮಹಿತನಂ ತ್ರಿಲೋಕ
ಸ್ವಾಮಿಯನಾನಂದಮೂರ್ತಿಯಂ ಮುಕ್ತಿವಧೂ
ಪ್ರೇಮಮನಖಿಳಜಗದ್ರ
ಕ್ಷಾಮಣಿಯಂ ಪೊಗೞ್ವುದಮೃತಸೌಖ್ಯಮನೊಲ್ವಂ || ೫೧ ||

ಆನುಪಮಗುಣಭೂಷಣನಂ
ವಿನೇಯಜನಕುಮುದಚಂದ್ರನಂ ಸಕಳಜಗ
ಜ್ಜನವಂದ್ಯನೆನಿಸಿ ನೆಗೞ್ದಾ
ದಿನಾಥನಂ ದೇವದೇವನಂ ಪೊಗೞ್ಗೆ ಬುಧಂ || ೫೨ ||

ನಿರ್ವಾಣಪದಸ್ಥಿತನಂ
ದುರ್ವಾರಭವಾಬ್ಧಿತೀರಪಾರಂಗಮನಂ
ಸವೇಶ್ವರನಂ ಪೊಗೞ್ವುದ
ಪೂರ್ವಗುಣಸ್ತುತಿಶತಂಗಳಿಂ ಮತಿವಂತಂ || ೫೩ ||

ಖರಕರನಂ ಹಿಮಕರನಂ
ತರುವಂ ಗಿರಿಯಂ ಮೃಗಾರಿಯಂ ಕರಿಯಂ ಸುಂ
ದರಿಯಂ ಬಣ್ಣಿಸದರ್ಹ
ತ್ಪರಮೇಶನನೞ್ತಿಯಿಂದೆ ಬಣ್ಣಿಸುಗಱಿವಂ || ೫೪ ||

|| ಮತಿಗೆಟ್ಟೊರ್ವರನೊರ್ವರೆಚ್ಚರಿಱಿದರ್ ಕೊಂದರ್ ಕೆಲರ್ ಬಂಧುಸಂ
ತತಿಯಂ ದೈತ್ಯರನೆಂಬ ಪಾತಕಕಥಾಳಾಪಂಗಳಂ ಪೇೞ್ದು ದು
ರ್ಗತಿಯೊಳ್ ಬೀೞದೆ ಸರ್ವಜೀವಹಿತಮಂ ಸದ್ಭಾವದಿಂ ದೇವಸಂ
ಸ್ತುತಮಂ ಪೇೞ್ವುದು ಜೈನಧರ್ಮಕಥೆಯಂ ಲೋಕೈಕಮಾಂಗಲ್ಯಮಂ || ೫೫ ||

ಮತಿ ತವದನ್ನೆಗಮರ್ಹನ
ನತಿಶಯಮೆನೆ ಪೊಗೞ್ವುದೞ್ತಿಯಿಂ ಸಕಳಜಗ
ತ್ಪತಿಯಂ ನಾಲಗೆ ತಣಿವಿನ
ಮತಂದ್ರಮನನಾಗಿ ಸಂತತಂ ಮತಿವಂತಂ || ೫೬ ||

ಇಳೆಯೊಳ್ ಸಲೆ ನೆಲಸಿದ ಪೊ
ಟ್ಟಳಗೆಱೆಯೊಳ್ ನೆಗೞ್ದ ಸಿಂಗರಾಜನ ಸುತನ
ಗ್ಗಳದೇವನ ಕೆಳೆಯಂ ದ್ವಿಜ
ಕುಳರತ್ನಂ ವತ್ಸಗೋತ್ರತಿಳಕಂ ಬ್ರಹ್ಮಂ || ೫೭ ||

ಸೌರಂ [ಕೌ]ಳೋತ್ತರಮೆಂ
ಬಾರಾಧನೆಗಳೊಳಮಖಿಳವೇದಸ್ಮೃತಿ ತ
ತ್ಪೌರಾಣಮೆನಿಪ್ಪುವಱೊಳ್
ಸಾರಮನಿಂಬಾಗಿ ನೆಱೆಯೆ ನಿರುತಂ ಬಲ್ಲಂ || ೫೮ ||

ಪಿರಿದೞ್ತಿ ಮುನ್ನ ಮಾಹೇ
ಶ್ವರದೊಳ್ ತನಗದಱೊಳೊಳ್ಪುಗಾಣದೆ ನೆಗೞ್ದೇ
ಪರಮಜಿನಧರ್ಮದೊಳಪೊ
ಕ್ಕು ರಾಗಿಪಂ ಸುಕವಿ ಪಂಪರಾಜನ ಮೊಮ್ಮಂ || ೫೯ ||

ಘನಮಿಥ್ಯಾತ್ವಾಚಳಭೇ
ದನವಜ್ರಂ ಜೈನಮಾರ್ಗನಿಶ್ಚಳಚಿತ್ತಂ
ಜಿನಸಮಯಸುಧಾರ್ಣವವ
ರ್ಧನಚಂದ್ರಂ ಪೇೞ್ದನೆಸೆಯೆ ಭವ್ಯರ ಮತದಿಂ || ೬೦ ||

ಇದು ರತ್ನಕರಂಡಕಮೆಂ
ಬುದು ಭಾವಿಸುವಾಗಳಿದುವೆ ಪರಸಮಯಿಗಳಂ
ಮುದದಿಂ ಪಥಕ್ಕೆ ತರಲಾ
ರ್ಪುದು ಸಮಯಪರೀಕ್ಷೆಯೆಂಬುದಿಂತೀ ಕಾವ್ಯಂ || ೬೧ ||

ಆಪ್ತಾಗಮಧರ್ಮಮುಮನ
ನಾಪ್ತಗಮಮಾ ಕುಧರ್ಮಮೆಂಬೆರಡುಮನೊ
ಲ್ದಾಪ್ತೋದಿತಮೆನಿಪ ಸುಖಾ
ವಾಪ್ತಿಯನೊಲ್ವರ್ಗೆ ತಿಳಿಯೆ ಪೇೞ್ವೆಂ ಕ್ರಮದಿಂ || ೬೨ ||

ಇಂತಿರೆ ದೂಷಿಸುವುದು ಗುಣಿ
ಗೇಂ ತಕ್ಕುದೆ ಜಗಮನೆಲ್ಲಮೆಂಬುದನುೞಿದಾ
ದ್ಯಂತಂ ಭಾವಿಸಿ ಕೇಳ್ದವ
ರಿಂತಿದೆ ಸುಖಹೇತುವೆಂದು ನಂಬುಗುಮಲ್ತೇ || ೬೩ ||

ತಿಳಿವುಳ್ಳನೆಯ್ದೆ ಕೇಳ್ದೊಡೆ
ಮುಳಿಯಂ ತಿಳಿಯಲ್ಕೆ ಬಯಸುಗುಂ ಸನ್ಮತಿಯೇಂ
ತಿಳಿಯಲೊಡಂ ದುರ್ಜನನುಂ
ವಿಳಸಿತಮತಿ ಧರ್ಮದತ್ತಲೆಱಗುಗುಮಲ್ತೇ || ೬೪ ||

ಗುಣದೋಷಮನಱಿದವಱೊಳ್
ಗುಣಮಂ ಕೆಯ್ಕೊಂಡು ದೋಷಮಂ ನೆಱೆ ಬಿಡುವಾ
ಗುಣವಂತನ ಮುಂದೋದುಗೆ
ಗುಣಕ್ಕೆ ಮುಳಿವವನ ಮುಂದೆ ಬೇಡಿದನೋದಲ್ || ೬೫ ||

ಅನುಪಮಸಮ್ಯಗ್ದೃಷ್ಟಿಯಿಂ
ನನುಪಮಸಮಭಾವನಪ್ಪನಿಂ ಬರೆಯಿಪುದೀ
ಜಿನಧರ್ಮಾಮೃತಮಂ ದು
ರ್ಜನನಿಂದಂ ಬರೆಯಿಸಲ್ಕೆ ಬೇಡಿದನಱಿವಂ || ೬೬ ||

ಮೂವತ್ತನಾಲ್ಕು ತೆಱದಿನ
ದಾವಂಗತಿಶಯವಿಶೇಷಮೊಪ್ಪಗುಮಂತಾ
ದೇವನೆ ಮೂಲೋಕಕ್ಕಂ
ದೇವನೆ ನೆಗೞ್ದತಿಶಯಂಗಳಿಲ್ಲದನಲ್ಲಂ || ೬೭ ||

ಸಕಳಂ ನಿಷ್ಕಳನೆಂಬೀ
ವಿಕಲ್ಪದಿಂ ಸಕಳಲೋಕಹಿತತತ್ತ್ವಸುದೇ[ಶಿ]ಕನುಂ ಲೋಕಾಗ್ರಗತಾ
ಷ್ಟಕರ್ಮನಿರ್ಮಕ್ತಶುದ್ಧನುಂ ತಾನಾಪ್ತಂ || ೬೮ ||

ಸಂಗತಗುಣನಖಿಳಜಗ
ನ್ಮಂಗಳಕಾರಣನನಂತಬೋಧಾತ್ಮಂ ನಿ
ಸ್ಸಂಗಂ ನಿರುಪಮನೆ[ನೆ ಸಂ] ದಂಗೆಱಗುವು[ದೆಲೆ] [ಸು]ಸೌಖ್ಯಮಂ ಬಯಸುವವಂ || ೬೯ ||

ಅಮಳಿನದರ್ಶನದಿಂ ವಿ
ಶ್ವಮನೊರ್ಮೊದಲೆಯ್ದೆ ಕಂಡು ಬೞಿಕಂ ಲೋಕಾ
ಗ್ರಮನೆಯ್ದಿ ನಿಂದ ದೇವೋ
ತ್ತಮನಂ ಸೇವಿಪುದು ಮೋಕ್ಷಮಂ ಬಯಸುವವಂ || ೭೦ ||

|| ಮೊದಲೊಳ್ ತಾನೆ ಜಿನೇಶ್ವರಂ ತ್ರಿಭುವನಸ್ತೋತ್ರೈಕಪಾತ್ರಂ ಮಹಾ
ಭ್ಯುದಯಪ್ರಾಪ್ತಿಗೆ ಹೇತು ನಿರ್ಮಳಗುಣಂ ನಿಶ್ರೇಯಸಶ್ರೀಶನ
ಪುದಱಿಂದಾ ವಿಭುವಂ ಪ್ರಸನ್ನನನಶೇಷಾರಾಧ್ಯನಂ ಭಕ್ತಿಭಾ
ವದಿನಾರಾಧಿಪುದಾಗಳುಂ ಸದಯನಂ ಲೋಕತ್ರಯಸ್ವಾಮಿಯಂ || ೭೦[1] ||

 


[1] ಪ್ರತ್ಯಂತರದ ಪಾಠ