ಕಂದ

ಶ್ರೀಗೆ ನಿವಾಸಂ ಸತ್ಯ
ಕ್ಕಾಗರಮೌದಾರ್ಯದಿರ್ಕೆಯಾರ್ಪಿನ ನೆಲೆಯು
ದ್ಯೋಗದ ಕಣಿ ಸಾಹಿತ್ಯದ
ಸಾಗರವಭಿಮಾನಮೇರು ಖಚರಾಧೀಶಂ ೧

ಭೂಜನವಂದ್ಯಂ ಘನತರ
ತೇಜಂ ತನ್ನಯ ಸಖಾನ್ವಿತಂ ನಡೆತಂದಂ
ರಾಜೀವಸಖೋದಯದೊಳ್
ಭ್ರಾಜಿತಋಷಿರೂಪನಾಂತು ಭರವಸದಿಂದಂ ೨

ಉತ್ಪಲಮಾಲೆ

ಭಾಸುರ ಪಾಟಳಿಪುರದ ಪಶ್ವಿಮಗೋಪುರದಬ್ಜಸಂಭವಾ
ವಾಸಮನೆಯ್ದಿ ಪೊಕ್ಕತುಳ ದುಂದುಭಿಯಂ ಭರದಿಂದೆ ಪೊಯ್ದು ಸಿಂ
ಹಾಸನದಲ್ಲಿ ಕುಳ್ಳಿತಿರೆ ಭೇರಿಯ ನಾದಕೆ ತತ್ಪುರಾಧಿಪರ್
ಭೂಸುರರೆಯ್ದೆ ಬಂದರಖಿಳಾಗಮತತ್ವಕಳಾವಿಶಾರದರ್ ೩

ಕಂದ

ಬಂದವರಂ ಕಂಡಾ ದ್ವಿಜ
ರೆಂದರ್ ನೀವಾರಮಕ್ಕಳೀ ಹರೆಯದೊಳೇ
ನೆಂದು ವಿರಕ್ತಿಯನಾಂತಿರಿ
ಯೆಂದೊಡೆ ಮೆಲ್ಲನೆ ನಗುತ್ತುಮವರಿಂತೆಂದರ್ ೪

ವಚನ

ನಾವೀ ವತ್ಸದೇಶದ ಕೌಶಾಂಬೀಪುರಮನಾಳ್ವಂ ಚಂದ್ರಶೇಖರನೆಂಬರಸನಾತನರಸಿ ಮೃಗಯಾವತಿಯೆಂಬಳವರಿರ್ವರ್ಗಂ ನಾಂ ಮೊದಲಾಗಿಯಂಧಕಂ ವೃಷಭಕಂ ವಿಮಲನೆಂಬರ್ ನಾಲ್ವರ್ ಮಕ್ಕಳಾದರಾ ನೃಪಾಲನೊಂದುದಿನ ವೊಡ್ಡೋಲಗಂ ಗೊಟ್ಟು ಕುಳ್ಳಿರೆ ಮೇಗೆ ಗಗನಮಂಡಲದೊಳ್ ಪಲವುಂ ಬಣ್ಣದಿಂ ನಾನಾರೂಪಾಗಿ ಮುಗಿಲ್ಗಳೆಲ್ಲ ನಿಮಿಷಕ್ಕೆ ನಿಶ್ಯೇಷಮಾಗಿ ಕರಗಿಪೋಗೆ ಪುದ್ಗಲಸ್ವಭಾವಂಗಳೆಲ್ಲ ವೀಯಂದಮೆಂದು ಸಂಸಾರನಿರ್ವೇಗಪರಾಯಣನಾಗಿಯೆಲ್ಲರಿಂ ಕಿಱಿಯಮಗಂ ವಿಮಳನೆಂಬವಂಗೆ ಪಟ್ಟಮಂ ಕಟ್ಟಿ ದೀಕ್ಷಾಗ್ರಹಣಕ್ಕೆ ಪೋಗೆಯಿತ್ತಲಾಮುಂಜ್ಯೇಷ್ಠನಿರೆ ಕನಿಷ್ಟಂಗೆ ಪಟ್ಟಮಂ ಕಟ್ಟಿದನೆಂದು ಮುನಿದು ವಿರಕ್ತಿಯನಾಂತು ಯಮಧರರೆಂಬ ಋಷಿಯರ ಸಮೀಪದೊಳ್ ದೀಕ್ಷೆಯಕೊಂಡು ಸಕಳಶಾಸ್ತ್ರ ವ್ಯಾಕರಣಛಂದೋಳಂಕಾರಕಾವ್ಯನಾಟಕಂಗಳೊಳತಿಪ್ರವೀಣನಾಗಿ ಗುರುಗಳಂ ಬೀಳ್ಕೊಂಡು ನಡೆದು ಅಂಗ ವಂಗ ಕಳಿಂಗ ಕಾಶ್ಮೀರ ಮಗಧ ಮಾಳವ ರಾಳ ನೇಪಾಳ ಲಾಳ ಚೋಳ ಗವುಳ ಗುರ್ಜರ ಪಾಂಚಾಳ ತುರಷ್ಕ ಖರ್ಪರ ಹಮ್ಮೀರ ಕಿಮ್ಮೀರ ಲಾಟ ಕರ್ನಾಟ ಮುಖ್ಯನಾನಾದೇಶಂಗಳೊಳ್ ವಿಹರಿಸುತ್ತಂ ಪಲಂಬರುದ್ದಂಡರಾದ ವಾದಿಗಳ ಮನವರ್ಗಮಮಱಿವುತುಂ ಬರುತ್ತಿರೆ ಪ್ರಖ್ಯಾತಿವೆತ್ತೀ ಪುರಮಂ ಪಲಂಬರ್ ಪೊಗಳೆ ಕೇಳ್ದು ನೋಡಲೆಂದು ಬಂದೆವೆನೆಯಾ ವಿಪ್ರರಿಂತೆಂದರ್

ಕಂದ

ಆದೊಡೆ ಪುರಮಂ ನೋಳ್ಪಾ
ಹ್ಲಾದತೆಯಿಂ ಬಂದೊಡೇಕೆ ನೋಡದೆ ಭೇರೀ
ನಾದಮನೆಸಗಿದಿರೆಂದೆನೆ
ವಾದಂ ಮಾಳ್ಪಳ್ತಿಯಿಂದವೆಸಗಿದೆವೆಂದರ್ ೫

ಎಂದೊಡೆ ಕೇಳ್ದವರಿರ್ವರ್
ಮಂದರಗಿರಿಧೈರ್ಯರತುಳಕಾರಣಪುರುಷರ್
ಸಂದೆಯವಿಲ್ಲಿಂದಾ ದ್ವಿಜ
ವೃಂದಂ ತಮ್ಮಯ ಮನಸಿನೊಳ್ ನೆಱೆ ಬಗೆದರ್ ೬

ವಚನ

ಅಂತು ಬಗೆದು ಪಿರಿದುಪೊಳ್ತವರೊಡನೆ ಗೋಷ್ಠಿಯಂ ಮಾಡಿ ಇವರ್ ಮಹಾ ವಿದ್ವಾಂಸರ್ ಕಾರಣಪುರುಷರೆಂದಱಿದು ನೀವೆಮ್ಮೊಡನೆ ವಾದಂಮಾಳ್ಪ ಬಗೆಯುಳ್ಳೊಡೆ ನಿಮ್ಮ ಜಿನೇಶ್ವರನಂ ಸರ್ವಜ್ಞನೆಂಬಿರಪ್ಪೊಡೆ ಸರ್ವಜ್ಞಸಿದ್ಧಿಯಂ ಮಾಡಿಮೆನೆ ಮನೋವೇಗನಿಂತೆಂದಂ ನಿಯತದಿನ ವೇಳಾಮುಹೂರ್ತದಿಗ್ಭಾಗಾ ವಛಿನ್ನಬ್ರಹೋಪರಾಗಾ ದ್ಯತೀಂದ್ರಿಯಾರ್ಥಪ್ರಕಾಶಗಮಪ್ರಣಯನಂ ಸರ್ವಜ್ಞ ನಲ್ಲದಾವನಿಂದಾಗನಿಂದಾಗದಪ್ಪುದರಿಂ ಸರ್ವಜ್ಞನುಂಟದಂ ಜಗಕ್ಕಱಿಯೆ ಜಿನೇಶ್ವರಂ ಪೇಳ್ದನಪ್ಪುದಱಿಂ ಜಿನೇಶ್ವರನೆ ಸರ್ವಜ್ಞನೆಂದು ಮತ್ತಮಿಂತೆಂದಂ

ಸೂತ್ರಂ

ಯತ್ಸರ್ವಾಣಿ ಚರಾಚರಾಣಿ ವಿವಿಧ ದ್ರವ್ಯಾಣಿ ತೇಷಾಂ ಗುಣಾನ್
ಪರ್ಯಾಯಾನಪಿ ಭಾವಿಭೂತಭವತಸ್ಸರ್ವಾನ್ ಸದಾ ಸರ್ವಥಾ
ಜಾನೀತೇ ಯುಗಪತ್ ಪ್ರತಿಕ್ಷಣಮತಸ್ಸರ್ವಜ್ಞ ಇತ್ಯುಚ್ಯತೇ
ಸರ್ವಜ್ಞಾಯ ಜಿನೇಶ್ವರರಾಯ ಮಹತೇ ವೀರಾಯ ತಸ್ಮೈ ನಮಃ ೭

ವಚನ

ಎನೆ ವಿಪ್ರರಿಂತೆಂದರ್

ಮತ್ತೇಭವಿಕ್ರೀಡಿತ

ಅರುಹಂ ತಪ್ಪಿಸೆ ಮಿಕ್ಕದೇವರೆನಿಪರ್ ಸರ್ವಜ್ಞರಲ್ಲೆಂದು ಪೇ
ಳ್ದಿರಿ ಕೇಳಾದೊಡೆ ಕಂಜಜಂ ಹರಿಹರರ್ ಸರ್ವಜ್ಞರೆಂದಂದು ವಿ
ಪ್ರರೆನಲ್ ಖೇಚರನೆಂದನಂತವರ್ಗೆ ಸರ್ವಜ್ಞತ್ವಮುಂಟೆಂದು ಪೇ
ಳ್ವರ ಮಾತೊಪ್ಪದದೇಕೆ ನಿಮ್ಮಯ ಪುರಾಣಂ ಪೇಳ್ದುದಂ ಕೇಳಿರೇ ೮

ಕಂದ

ಎಂಬ ನುಡಿಗೇಳ್ದು ವಿಪ್ರಜ
ನಂ ಬೇಗದೆ ಪೇಳಿಯಾ ಪುರಾಣಮನೆನೆ ಭೂ
ಪಂ ಬಗೆದುನೋಡಿ ಕಾಪಿಳ
ನೆಂಬರ ಕಥೆಯನ್ನರುಳ್ಳೊಡಂಬುವೆನೆಂದಂ ೯

ವಚನ

ಆ ಕಥೆಯೆಂತೆಂದು ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ

ಉತ್ಪಲಮಾಲೆ

ಮಾಳವದೇಶದೊಳ್ ಮಧುರೆಯೆಂಬುದು ಪಟ್ಟಣವಾ ಪುರಾಧಿಪಂ
ಕಾಳಕರಾಳನೆಂಬರಸನೊಂದುದಿನಂ ಮನದಳ್ತಿಯಿಂದೆ ವೈ
ಹಾಳಿಗೆ ಪೋಗುತಿರ್ದೊಡಿದಿರೊಳ್ ಜಯನೆಂಬನ ಸೂನು ಕಾಪಿಳಂ
ಬಾಳಕನಾಡುತಿರ್ದಱಿಯದಾಗಳೆ ಸೀಂತೊಡೆ ಕೇಳ್ದು ಬೇಗದಿಂ ೧೦

ಕಂದ

ಕೋಪಿಸಿ ಮೂಗಂ ಕೊಯ್ದಂ
ಭೂಪತಿ ಶಿಶುವೆನ್ನದಂತವಂ ಪ್ರಾಯಂಬೆ
ತ್ತಾ ಪದದೊಳ್ ಪಿಂತಂ ಮಱು
ದಾ ಪುರದೊಳ್ ವರ್ತಿಸುತ್ತುಮಿರ್ದೊಂದುದಿನಂ ೧೧

ಪಲಬರ ಗಡಣದಿನಂಗಡಿ
ಯೊಳಗನೆ ಬರುತಿರ್ದು ಪಲವು ಕನ್ನಡಿಗಳಿರಲ್
ಪಲಬರವನೀಕ್ಷಿಸುತ್ತಿರೆ
ಯೊಲವಿಂ ತಾನೊಂದು ಕನ್ನಡಿಯನೀಕ್ಷಿಸಿದಂ ೧೨

ವಚನ

ಅಂತು ನೋಡಿ ಮೂಗಿಲ್ಲದುದಂ ಕಂಡು ಇದು ಮೂಕೊಱೆಯಗನ್ನಡಿಯೆನಗಿದಂ ಧೂರ್ತಿಂದೆ ತೋಱೆದೆಯೆಂದಾ ಕನ್ನಡಿಯಂ ಶಿಲೆಯ ಮೇಲಿಕ್ಕಿ ಶತಚೂರ್ಣಮಂ ಮಾಡಿ ಕಳೆಯಲಾ ಕನ್ನಡಿಯೊಡೆಯಂ ಪಿಡಿದು ವಿವಾದಿಸಿ ಧರ್ಮಾಧಿಕರಣಕ್ಕೊಯ್ಯೆ ಯವರಾತನನೀ ಕನ್ನಡಿಯನೇಕೆ – ಯೊಡೆದೆಯೆಂದೊಡೆಯವನಿಂತೆಂದನಿವನೆನಗೆ ಮೂಗಿಲ್ಲದ ಕನ್ನಡಿಯಂ ಕೊಟ್ಟೊಡಾಂ ಕೋಪಿಸಿಯೊಡೆದೆನೆಂದೊಡವರು ಘೊಳ್ಳೆನೆ ನಗುತ್ತುಮವನವಿವೇಕತೆಯಂ ಮೆಯ್ಯಱಿಯಿಂದ ತಿಳಿಪಿಯಾ ಕನ್ನಡಿಯ ಬೆಲೆಯ ತೆಱಿಸಿದರಿಂತು ತನ್ನ ಕುಂದಂ ತಾನಱಿಯದೆ ಪೆಱರೊಳ್ ವಾದಿಸುವ ಕಾಪಿಳನ ಕಥೆಯನ್ನರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಲಂಜುವೆವೆನೆಯಿಂತಪ್ಪರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಮತ್ತಮಿಂತೆಂದಂ ಪಾಪಿಕೊಂಬರಸನ ಕಥೆಯನ್ನರುಳ್ಳೊಡೆ ಪೇಳಲಂಜುವೆನೆನೆಯಾ ಕಥೆಯೆಂತೆಂದು ವಿಪ್ರರ್ ಕೇಳಿ ಮನೋವೇಗಂ ಪೇಳ್ಗುಂ

ಮತ್ತೇಭವಿಕ್ರೀಡಿತ

ಕ್ಷಿತಿಯೊಳ್ ಕೌಶಿಕಮೆಂಬ ಪಟ್ಟಣದಧೀಶಂ ಪಾಪಿಯೆಂದೆಂಬ ಭೂ
ಪತಿಯಂತಾತನ ಮಂತ್ರಿ ದುಷ್ಟಮತಿ ಭೂತದ್ರೋಹನೆಂದೆಂಬನ
ಲ್ಲಿ ತಳಾಱಂ ಬಳಿಕೊರ್ವ ಕಳ್ಳನಿರುಳೊಳ್ ಬಂದೊರ್ವನಾವಾಸದೊಳ್
ಕೃತಕಂ ಕನ್ನಮನಿಕ್ಕೆ ಮೇಲ್ಗೆಡೆದುದಂತಾ ಭಿತ್ತಿಯಾ ಕಳ್ಳನಾ ೧೩

ವಚನ

ಅಂತು ಗೋಡೆಬಿರ್ದು ಕಳ್ಳಂ ಸಾಯೆಯದನರಸಂ ಕೇಳ್ದು ಆ ಶೆಟ್ಟಿಯಂ ಕರೆದು ನಿನ್ನ ಮನೆಯ ಗೋಡೆ ಕಳ್ಳನಂ ಕೊಂದುದಕ್ಕೆ ನಿನ್ನಂ ಶಾಸ್ತಿಯಂ ಮಾಡುವೆನೆನೆಯಾ ಶೆಟ್ಟಿ ಭಯಂಗೊಂಡು ನಾಂ ಕಾರೆಕೂಲಿಯಂ ಕೊಟ್ಟಿಕ್ಕಿದೆನೆನೆಯಾ ಕಾರೆಗೂಲಿಯವನಂ ಕರೆಸಿ ಕಳ್ಳಂ ಸಾವಂತು ಗೋಡೆಯನಿಕ್ಕಿದೆ ನಿನ್ನಂ ಶಾಸ್ತಿಯಂ ಮಾಡುವೆನೆನೆಯವನಿಂತೆಂದಂ ಸೂಳೆಯೊರ್ವಳಿಲ್ಲಿಯೇ ಪಲವುಂ ಸೂಳೆಡೆಯಾಡಲವಳಂ ಕಂಡು ಪಿರಿದುಂ ಸೋಲ್ತು

ಕಂದ

ತನು ಕೆಲಸಕ್ಕೆಳಸಿದೊಡಂ
ಮನವವಳಂ ನೆನೆಯುತಿರ್ದುದದು ಕಾರಣದಿಂ
ದೆನಸುಂ ಮಾಡಿದ ಕೆಲಸಂ
ಮನದಂತಿರೆ ಜಳಿಕನಾದುದಾಕೆಯ ದೆಸೆಯಿಂ ೧೪

ವಚನ

ಎಂದು ಬಿನ್ನವಿಸಲಾ ಸೂಳೆಯಂ ಕರೆದು ನೀನವನ ಮುಂದೆಯೆಡೆಯಾಡೆಯವಂ ನಿನಗೆ ಸೋಲ್ತು ಮಾಡಿದ ಗೋಡೆಯಿಂ ಕಳ್ಳಂ ಸತ್ತನದಱಿಂದೀಕೆಯಂ ಶಾಸ್ತಿಯಂ ಮಾಡುವೆನೆನೆಯವಳಕ್ಕಸಾಲೆಗೆ ಭಂಗಾರಮಂ ಮಾಡವೇಳ್ದು ಪೊನ್ನಂ ಕೊಟ್ಟೊಡೆಯವಂ ಭಂಗಾರವಂಮಾಡಿಕುಡದೆ ಯೆಡೆಯಾಡಿಸಿದನೆನೆ ಯಾಯಕ್ಕಸಾಲೆಯಂ ನೀನೀಕೆಯನೆಡೆಯಾಡಿಸಿ ಭಂಗಾರಮಂ ಕುಡದ ಕಾರಣಂ ಗೋಡೆ ಶಿಥಿಲಮಾಗೆ ಕಳ್ಳಂ ಸತ್ತನದು ನಿನ್ನ ತಪ್ಪದರ್ಕೆ ನಿನ್ನಂ ಶಾಸ್ತಿಮಾಳ್ಪೆನೆನೆಯವನಾ ಭಂಗಾರಮಂ ಕೊಳಲ್ ಸಂತೆಗೆ ಪೊನ್ನಂ ಕಟ್ಟಿಕೊಂಡು ಪೋಗೆ ಕಳ್ಳಂ ಚೀಲಮಂ ಕತ್ತರಿಸಿ ಕೊಂಡು ಪೋದನದಱಿಂ ತಡೆದೆನೆನೆಯರಸಂ ತಳಾಱನಂ ಬರಿಸಿ ಆ ಕಳ್ಳನಂ ಬೇಗದಿಂ ಪಿಡಿದುತಾಯೆನೆ ತಳಾಱಂ ಪರಿದಾ ಕಳ್ಳನಂ ಕಾಣದೆ ಸಂತೆಯ ಮಂದಿಯೆಲ್ಲಮಂ ಪಿಡಿದು ತಂದೀಯೆ ಸಚಿವನರಸಂಗಿಂತೆಂದನಿವರೆಲ್ಲರಂ ಶಾಸ್ತಿಯಂ ಮಾಡೆ ಕಳ್ಳನಿವರೊಳಾವನವನಿವರೊಳಗೆ ಸಾವನೆನೆಯರಸನಂತೆಗೆಯ್ಯೆಂದನಾಪಾಪಿಯರಸನ ಕಥೆಯವರುಳ್ಳೊಡೆ ಪೇಳಲಂಜುವೆವೆನೆಯೀತಪ್ಪವರೆಮ್ಮ ಸಭೆಯೊಳಿಲ್ಲ ಪೇಳಿಮೆನೆ ಮನೋವೇಗಂ ಪೇಳ್ಗುಂ

ಉತ್ಪಲಮಾಲೆ

ಒಂದು ದಿನಂ ಮನೋಜರಿಪು ದಾರುಕಮೆಂಬ ವನಕ್ಕೆ ಪೋಗಿ ಪೊ
ಕ್ಕಿಂದು ನಿಭಾಸ್ಯೆ ತಾಪಸವಧೂಟಿಯನೀಕ್ಷಿಸಿ ಮೋಹಿಪೊಂದು ರೂ
ಪಂ ದಿಟವಾಂತು ತಾನೊಲಿಸಿಯಾಕೆಯೊಳೊಂದಿರೆ ನಿಚ್ಚನಿಚ್ಚಕಂ
ಪಿಂದಣ ಚಿತ್ತವಲ್ಲಿವಳಚಿತ್ತಮನೀಕ್ಷಿಪೆನೆಂದು ತಾಪಸಂ ೧೫

ಕಂದ

ಸ್ನಾನಕ್ಕೆ ಪೋಗಿ ಬಂದಪೆ
ನಾನೆಂದಾ ಸತಿಗೆ ಪೇಳ್ದು ಪೋಗುತೆ ಮಗುಳ್ದಾ
ಮಾನಿನಿಯಂ ವಂಚಿಸಿ ಬಂ
ದಾ ನಿಳಯಮನೆಯ್ದಿ ಪೊಕ್ಕಡಂಗಿರ್ದಾಗಳ್ ೧೬

ಬಂದು ಹರನಾ ವಧೂಟಿಯೊ
ಳೊಂದಿರೆ ಮುನಿ ಕಂಡು ಮುನಿದುಮೀತನ ಲಿಂಗಂ
ಸಂದಿಂಗೆ ಪಱಿದು ಬೀಳಲಿ
ಯೆಂದಿತ್ತಂ ಕೋಪದಿಂದೆ ಶಾಪಮನಾಗಳ್ ೧೭

ವಚನ

ಅಂತು ಕೋಪದಿಂ ಶಾಪಮಂ ಕುಡೆ ಲಿಂಗಂ ಪಱಿದು ಬೀಳಲೀಶ್ವರಂ ಕಂಡು ರೋಷದಿಂ ಪಱಿದುಬಿರ್ದಲಿಂಗಮೀ ತಾಪಸನ ಪಣೆಯಂ ಪತ್ತಲಿಯೆಂದು ನಿಯಮಮಂ ಕುಡೆಯದು ಪತ್ತುವುದುಮವನೀತನೀಶ್ವರನೆಂದಱಿದು ಪಾದಾಂಬುಜದೊಳ್ ಕೆಡದಿದೊಮ್ಮಿಂಗೆ ಕ್ಷಮಿಸುವುದೆಂದು ಲಜ್ಜೆಗೆಟ್ಟು ಬಾಯಂ ಬಿಟ್ಟು ಪೇಳೆಯಾ ಪಣೆಯ ಲಿಂಗಮಂ ಕಳೆದು ಕರುಣಿಸುವುದೆನೆಯೀ ಲಿಂಗಮಂ ಪೊತ್ತು ಕೈಲಾಸಕ್ಕೆ ಬನ್ನಿ ಕಳೆವೆನೆನೆ ಯಂತೆಗೆಯ್ವೆನೆಂದು ಪೊತ್ತು ನಡೆವಾಪೊತ್ತು ಕನಡೆವನಿತ್ತನಿತ್ತೆ ಬೆಳೆಯೆವೆಳೆಯೆ ಪಲಂಬರ್ ತಾಪಸರ್ ಪೊತ್ತು ಪೋಗೆ ಪಾರ್ವತಿ ಕಂಟ್ಟಹಾಸ್ಮಿತೆಯಾಗಲದರ್ಕೀಶ್ವರಂ ಸಂತುಷ್ಟಚಿತ್ತನಾಗಿಯಾ ತಾಪಸರಿದಂ ಪರಿಹರಿಸಿ ಕಳೆವುದೆನೆ ಯಾದೊಡದಂ ಯೋನಿಯೊಳ್ ಇರಿಸಿಯೆಹಂಗೆ ಪೂಜಾರ್ಹನಪ್ಪುದಹಂಗೆ ಮಾಡುವುದೆನೆಯಾಗಲಿಯೆಂದಾಕ್ರಮದೊಳೆ ಮಾಡಲಾ ಪಂಪರೆಯಿಂ ಲಿಂಗಪೂಜೆಯಾಯ್ತುಂದಿಂಬಳಿಯಂ ಅದಲ್ಲದಲ್ಲಿಂ ಮುನ್ನಂ

ಉತ್ಪಲಮಾಲೆ

ಆದಿಯೊಳೊಂದಿನಿತ್ತು ಸಚರಾಚರಮಿಲ್ಲದನಂತಕಾಲಮುಂ
ಪೋದೆ ಬಳಿಕ್ಕನಾಶ್ರಯದೊಳದ್ಭುತಗಾತ್ರತೆವೆತ್ತ ತತ್ತಿಯೊಂ
ದಾದುದನುಕ್ರಮಂ ಬೆಳೆದು ಪೆರ್ಚಿದವೋಲೆರಡಾಗೆಯಲ್ಲಿ ಮೇ
ಲಾದುದಮೊಂದು ಭಾಗಮೆನಸುಂ ಕೆಳಗಾದುದೊಂದು ಭಾಗಮುಂ ೧೮

ಕಂದ

ಅದಱೊಳ್ ಮೇಗಣ ಭಾಗದೊ
ಳುದಿಸಿದುವಾ ಸ್ವರ್ಗ ಲೋಕವೆಂಬವನೇಕಂ
ಪದಪಿಂದಂ ಕೆಳಗಣ ಭಾ
ಗದೊಳೊಗೆದವು ಧಾತ್ರಿಗಿರಿಚಯಂ ವಾರಿಧಿಗಳ್ ೧೯

ಅಂತದಱ ನಡುವೆ ತನ್ನಿಂ
ದಂ ತಾನೇ ಪುಟ್ಟಿದಂ ಸದಾಶಿವನೆಣ್ದಿ
ಕ್ಕಂ ತಿರುಗಿ ನೋಡಿಯಖಿಳದಿ
ಗಂತಂಬರವಾರುಮಿಲ್ಲದಿರೆ ಕಂಡಾಗಳ್ ೨೦

ಉತ್ಪಲಮಾಲೆ

ಶಂಕಿಸಿ ಶಂಕರಂ ಬಲದ ತೋಳನಭೀಕ್ಷಿಸಲಲ್ಲಿ ಪುಟ್ಟಿದಂ
ಪಂಕಜಗರ್ಭನಂದೆಡದ ಬಾಹುವನೀಕ್ಷಿಸಲಲ್ಲಿಯಂದದಿಂ
ದಂ ಕಮಳಾಂಬಕಂ ಜನಿಸಿ ಕಾಂತೆಯರಿಲ್ಲದೆ ತಾಮನೇಕಕಾ
ಲಂ ಕಳಿವನ್ನಮಿರ್ದು ಸಲೆ ಸೈರಿಸಲಾಱದೆ ತಮ್ಮ ಮೂವರುಂ ೨೧

ಚಂಪಕಮಾಲೆ

ಸ್ಮರಪರಿತಾಪದಿಂ ಬೆದಱೆ ಬೆಚ್ಚನೆ ಸುಯ್ದು ಬಳಲ್ದಳಲ್ದುನಿ
ತ್ತರಿಸದೆ ಧಾತ್ರಿಯೊಳ್ ಬಳಹದಿಂ ಬರೆದಂ ಸತಿರೂಪನೊಪ್ಪುವಂ
ತಿರೆ ಹರಿ ಜೀವಮಂ ಪಡೆದನಬ್ಜಜನಾ ಸತಿ ನಗ್ನರೂಪಿನಿಂ
ದಿರೆ ನಡೆನೋಡಿ ತಂದುಡಿಸಿದಂ ವರವಸ್ತ್ರಮನುಗ್ರಲೋಚನಂ ೨೨

ಕಂದ

ಆ ಸುದತಿಗೆ ಕೂರ್ತು ಸರೋ
ಜಾಸನನಂಭೋಜನೇತ್ರನದ್ರಿತನೂಜಾ
ಧೀಶರಿವಳೆಮಗೆ ತಮಗೆಂ
ದೋಸರಿಸದೆ ತಳ್ತು ಮುಷ್ಟಿಯುದ್ಧಂಗೆಯ್ದರ್ ೨೩

ವಚನ

ಅಂತು ಮುಷ್ಟಾಮುಷ್ಟಿ ಕೇಶಾಕೇಶಿ ನಖಾನಖಿ ದಂತಾದಂತಿಯೆಂಬ ಪಲವುತೆಱದ ಯುದ್ಧಸನ್ನದ್ಧರಾಗಿರೆ ಸಕಳಸುರಸಮಿತಿ ಬಂದಡ್ಡಂಬೊಕ್ಕವರಂ ಬಾರಿಸಿಯಿಂತಪ್ಪನುಚಿತಮಂ ನೆಗಳಲಾಗ ಯಥೋಚಿತವೆಂತಂತೆ ಮಾಳ್ಪುದೆನೆಯವರೆಮಗೆ ನೀವೆ ಸ್ಮಾರ್ತರಾಗಿದಂ ತಿಳಿಪಿಮೆನೆಯವರ್ ತಮ್ಮೊಳಾಳೋಚಿಸಿ ತಿಳಿದಿಂತೆಂದರ್ ಮುನ್ನಂ ಬರೆದಾತಂ ತಂದೆ ಚೈತನ್ಯಮಂ ಪಡೆದಾತಂ ತಾಯ್ ವಸ್ತ್ರಮಂ ಕೊಟ್ಟಾತಂ ಗಂಡನೆಂದಾ ಕನ್ನೆಯಂ ಶಿವಂಗೆ ಕುಡೆ ಸುಖದಿಂದಿಷ್ಟಭೋಗಕಾಮಸುಖವನನುಭವಿಸಿಯಿರುತ್ತಿರೆ ಸೈರಿಸಲಾಱದೆ ಹರಿಬ್ರಹ್ಮರೀರ್ವರುಂ ಬಂದಾ ಕನ್ನೆಯಂ ಪಿಡಿದು ಝೋಂಪಿಸೆಯಾಕೆ ಲಜ್ಜೆಯಿಂ ಕರಗಿ ನೀರಾಗಿ ಪರಿದು ಗಂಗೆಯೆಂಬ ನದಿಯಾಗಿ ಪೋದಳಾಕೆ ಪೋಗಲೊಡನೆ ತಮ್ಮ ಮೂವರುಮೇಕಾಕಿಗಳಾಗಿ ಮುನ್ನಿನಂತೆ ಸ್ತ್ರೀರೂಪಂ ಹರಿ ಬರೆಯೆ ಕಂಜಜಂ ಜೀವಮಂ ಪಡೆಯೆ ಯೀಶ್ವರಂ ವಸ್ತ್ರಮಂ ಕೊಟ್ಟು ಸುಖದಿಂದಿರುತ್ತಿರೆ ಲೋಕೋಕ್ತಿಯಿಂತೆಂದುದು

ಶ್ಲೋಕ

ಕಾರ್ಯ ವಿಷ್ಣುಃ ಕ್ರಿಯಾ ಬ್ರಹ್ಮ ಕಾರಣಂ ತು ಮಹೇಶ್ವರಃ |
ಏಕೋಮೂರ್ತಿಸ್ತ್ರಯೋಭಾಗಾಃ ಬ್ರಹ್ಮ ವಿಷ್ಣು ಮಹೇಶ್ವರಾಃ || ೨೪

ಕಂದ

ಅಂತಾ ಮೂವರಿನುದಯಿಸಿ
ತಿಂತಿಣಿಸಿ ಚರಾಚರಂ ನಿರಂತರದಿಂ ತಾ
ಮಿಂತುಂ ವರ್ತಿಸುತಿರ್ದುಮ
ನಂತಯುಗಂ ಪೋದ ಬಳಿಕೆ ಮತ್ತೊಂದುದಿನಂ ೨೫

ಚಂಪಕಮಾಲೆ

ಸರಸಿಜಗರ್ಭನಿಂದಧಿಕ ನಾನೆನೆ ವಿಷ್ಣು ಸಮಂತು ವಿಷ್ಣುವಿಂ
ಸರಸಿಜಗರ್ಭನಾನಧಿಕನೆಂದು ವಿವಾದಿಸಿಯೊರ್ವರೊರ್ವರೊಳ್
ಪಿರಿದು ಸಗರ್ವದಿಂದೆ ಸೆಣಸುತ್ತಿರೆ ನೋಡಿ ಸಮರ್ಥರಾರಿದಂ
ಪರಿಕಿಪೆನೆಂದು ತಾಂ ಬೆಸಸಿದಂ ಫಣಿರಾಜಭೂಷಣಂ ೨೬

ಮತ್ತೇಭವಿಕ್ರೀಡಿತ

ಭರದಿಂದೀಕ್ಷಿಸಿ ಬರ್ಪುದೆನ್ನ ಪದಮಂ ಕಂಜಾಕ್ಷ ನೀಂ ಪದ್ಮವಿ
ಷ್ಟರ ನೀನೀಕ್ಷಿಸಿ ಬರ್ಪುದೆನ್ನ ಶಿರಮಂ ನಿಮ್ಮಿರ್ವರೊಳ್ ಮುಂದೆ ಬಂ
ದಿರುತಿರ್ಪಾತನೆ ಲೋಕವಂದ್ಯನದಿಕಂ ಕೇಳೆಂದು ಚಂದ್ರಾರ್ಧಶೇ
ಖರನಂದೀಯೆಯವರ್ಗೆ ಕೂರ್ತು ಬೆಸನಂ ತಾಳ್ದರ್ ಮನೋರಾಗದಿಂ ೨೭

ವಚನ

ಅಂತು ಬೆಸನಂ ಕೈಕೊಳ್ವುದುಂ ಶಂಕರಂ ಸ್ವರ್ಗ ಲೋಕದೊಳ್ ಶಿರಂ ಮಧ್ಯಲೋಕದೊಳ್ ಲಿಂಗಂ ಪಾತಾಳಲೋಕದೊಳ್ ಪಾದಮಿರ್ಪಂತು ಬೆಳೆದುನಿಂದಿರೆ ಬ್ರಹ್ಮ ಲಿಂಗಪ್ರದೇಶದಿಂದಣಿಚಿನಾಕೃತಿಯಂ ತಳೆದುಮನೇಕಕ್ಲೇಶಾಯಾಸದಿಂದೆ ತಾನುಂ ನಾಭೀಪ್ರದೇಶಮನೆಯ್ದಿ ಮೇಗಣಿಂ ಬರ್ಪ ಕೇತಕೀಕುಸುಮಮಂ ಕಂಡುಯೆಲ್ಲಿಂದಂ ಬಂದೆಯೆಂದಜಂ ಬೆಸಗೊಳೆ ನಾನೀಶ್ವರನಪಿಂಗಳಜಟಾಮಕುಟದಿಂ ಬಂದೆನೆನೆಯಾ ದೊಡಲ್ಲಿಂ ಪೊಱಮಟ್ಟೆನಿತುಕಾಲಮುಂಟೆನೆ ನಾಂ ಪೊಱಮಟ್ಟು ದಿವ್ಯ ಷಣ್ಮಾಸವೆನೆ ಕೇಳ್ದು ಮನಂಗುಂದಿ ಪೋಪೊಡೆನ್ನಳವಲ್ಲೆಂದು ಕೇದಗೆಯಂ ನಾನಾಪ್ರಕಾರದಿಂ ಪ್ರಾರ್ಥಿಸಿ ನೀನೀಶ್ವರನ ಮುಂದೆಯೀತನಂ ಪಿಂಗಳಜಟಾಜೂಟದ ಸಮೀಪದೊಳಾಂ ಕಂಡೆನೆಂದೆಂಬುದೆಂದೊಡಂಬಡಿಸಿ ತಾನಾ ಕೇದಗೆಯ ಕೂಡೆ ಮಗುಳ್ದು ಬಂದು ಶಶಿಧರನ ಮುಂದೆ ನಿಂದಿರ್ದು ದೇವ ನಿನ್ನ ಪಿಂಗಳಜಟಾಜೂಟಮಂ ನೋಡಿ ಬಂದೆನಲ್ಲಿರ್ದ ಕೇದೆಗೆಯಂ ಕೇಳಿಮೆಂದು ಬಿನ್ನಪಂಗೆಯ್ಯಲಾ ಕೇದಗೆಯನೀಶ್ವರಂ ಬೆಸಗೊಳೆಯೀತಂ ಜಟಾಮಕುಟಕ್ಕೆ ಬಂದನೆಂದು ಪುಸಿನುಡಿಯೆ ಕೇಳ್ದು ಹರನಱಿದುಸಿರದಿರೆಯಾ ಸಮಯದೊಳ್

ಉತ್ಪಲಮಾಲೆ

ವಾರಿಜನೇತ್ರನೀಶ್ವರನ ಲಿಂಗಸಮೀಪದೊಳಿರ್ದು ಸೂಕರಾ
ಕಾರಮನಾಂತು ಜಂಘೆಯನನೇಕದಿನಂ ಪರಿದೆಯ್ದಿ ಪೋಪರಿ
ನ್ನಾರಿದರಿಂದ ಮುಂದೆನಗಸಾಧ್ಯಮೆನುತ್ತೆ ಬಿಗುತು೪ ತನ್ನಹಂ
ಕಾರಮನೊಕ್ಕು ತಾಂ ಮಗುಳ್ದು ಬಂದಿದಿರೊಳ್ ಮುಗಿದಂ ಕರಂಗಳಂ ೨೮

ಕಂದ

ಬಿನ್ನಪವಗಜಾಧೀಶ್ವರ
ನಿನ್ನಂಗ್ರಿಯನೀಕ್ಷಿಸಲ್ಕೆ ಪೋಗುತ್ತೆ ಮಗು
ಳ್ದೆನ್ನಳವಲ್ಲದೆ ಜಂಘಾ
ಸನ್ನಿಧಿಯಿಂ ಬಂದೆನೀಗಳವಧರಿರಿಸೆಂದು ೨೯

ಎಂದೆನೆ ಲಾಲಿಸಿ ಪುಸಿಯ
ಲ್ಲೆಂದು ಮನಂಮೆಚ್ಚಿ ರಾಜ್ಯಪೂಜ್ಯತೆಯಿಂ ಬಾ
ಳೆಂದಿಳೆಗೆ ಕೂರ್ತು ಪತಿಯಾ
ಗೆಂದಿತ್ತಂ ಕೇಶವಂಗುಮೇಶಮಂ ವರಮಂ ೩೦

ವಚನ

ಅಂತು ವರಮಂ ಕೊಟ್ಟು ಕಮಲಸಂಭವನ ಪುಸಿನುಡಿಗೆ ಕಡುಮುಳಿದಾತನ ಮೊಗಮಂ ನೋಡಿ

ಶ್ಲೋಕ

ಸತ್ಯಾದುತ್ಪದ್ಯತೇ ಧರ್ಮೋ ದಯಾ ದಾನೇನ ವರ್ಧತೇ |
ಕ್ಷಮಯಾ ಸ್ಥಾಪ್ಯತೇ ಧರ್ಮಃ ಕ್ರೋಧಲೋಭಾದ್ವಿನಶ್ಯತಿ || ೩೧

ಕಂದ

ಎಂದು ಪಲತೆಱದೊಳಾ ಗೋ
ವಿಂದನನಾನಂದದಿಂದೆಯಾದರಿಸಿ ಬಳಿ
ಕ್ಕಿಂದುಧರಮೂರ್ತಿ ಬರದಿಂ
ಮುಂದಿದರ್ದ ಸರೋಜಭವನನೀಕ್ಷಿಸಿ ಬೇಗಂ ೩೨

ಪುಸಿದನಿವನೆಂದು ಕಡುಗೋ
ಪಿಸಿ ಭಿಕ್ಷಾವೃತ್ತಿಯಾಗಿ ಬಾಳಾರುಂ ಪೂ
ಜಿಸದಿರ್ಕೆ ನಿನ್ನನೆಂದಾ
ವಿಷಮಾಕ್ಷಂ ವಿಸಜಜಂಗೆ ಶಾಪಮನಿತ್ತಂ ೩೩

ವಚನ

ಅಂತು ಶಾಪಮಂ ಕೊಟ್ಟು ಬಳಿಕ್ಕೆ ಪಕ್ಷಮನಾಡಿದ ಕೇದಗೆಯಂ ಕಂಡು ಕಂಟಕಾವೃತಮಾಗಿಯೆನ್ನ ಜಟಾಮುಕುಟಕ್ಕೆ ಯೋಗ್ಯಮಲ್ಲದೆ ಪೋಗೆಂದು ಶಾಪಮಂ ಕೊಟ್ಟನಂದಿಂದಂ ಬಳಿಕ್ಕಾ ಕೇದಗೆ ಹರಂಗೆ ಪೊಱಗಾದುದೆಂಬರಾ ಹರಂ ಬೆಳೆದಾ ಕ್ರಮದೊಳೆ ವೂರ್ಧ್ವಲೋಕದೊಳ್ ಶಿರಮಂ ಮಧ್ಯಲೋಕದೊಳ್ ಲಿಂಗಮಂ ಪಾತಾಳಲೋಕದೊಳ್ ಪಾದಮಂ ಪೂಜಿಸುವರೆಂದು ಶೈವಸಿದ್ಧಾಂತದೊಳ್ ಪೇಳ್ವುದದಱಿಂದೀಶ್ವರಂ ಸರ್ವಗತನೆಂಬರದೆಂತೆನೆ

ಶ್ಲೋಕ

ಸ್ಥಾವರೇ ಜಂಗಮೇ ಚೈವ ತ್ರೈಲೋಕ್ಯೇ ಸಚರಾಚರೇ |
ಏಕೋ ದೇವಃ ಶಿವೋ ಲೋಕೇ ಪೂಜನೀಯೋ ನ ಸಂಶಯಃ || ೩೪

ಲಿಂಗಮಧ್ಯೇ ಜಗತ್ ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗಬಾಹ್ಯಾತ್ಪರಂ ನಾಸ್ತಿ ತಸ್ಮಾತ್ ಲಿಂಗಂ ಪ್ರಪೂಜಯೇತ್ || ೩೫

ತ್ರಿವಿದಿ

ಆ ಹರಂ ತನ್ನುಭಯ ಬಾಹುವಿನೊಳೊಗೆದವರ
ಸಾಹಸದ ಹವಣನಱಿಯದಂ ಸರ್ವಜ್ಞ
ನೇ ಹೇಳಿ ನೀವು ಹುಸಿಯದೆ ೩೬

ಪುಸಿನುಸುಳು ಗರ್ವದಾ ವಿಷವಿಷಯದಿಂದೆ ಪರ
ವಸರೆಯ್ದೆ ದೇವರಪ್ಪೊಡೆ ಬಳಿಕ ಮಾ
ನಸರೆಂಬರಾರೋ ಪೇಳಿರೆ ೩೭

ವಚನ

ಅಂತನೇಕಕ್ಲೇಶಾಯಾಸದಿಂ ಮನುಷ್ಯಧರ್ಮದೊಳ್ ನಡೆವ ಮಾನಗರ್ವನಿರ್ಭರ ರುಮಪ್ಪವರ್ ದೇವರಲ್ಲೆಂದು ಮನೋವೇಗಂ ಪೇಳೆ ಕೇಳ್ದು ವಿಪ್ರರಿಂತೆಂದರ್

ಕಂದ

ನೀವೆಂದಂದದೊಳಾ ಜಿನ
ದೇವಂ ಸರ್ವಜ್ಞನಪ್ಪನಾದೊಡಿವೆಲ್ಲಾ
ದೇವರ ಗುಣಮಂ ಬಣ್ಣಿಸು
ವೀ ವೇದಂ ಜಿನರನೇಕೆ ಬಣ್ಣಿಸದೆಂದರ್ ೩೮

ವಚನ

ಎನೆ ವೇದಂ ಜಿನರನನೇಕತೆಱದಿಂ ಸುತ್ತಿಯಿಸಿದುದೊಂದು ಸಹಸ್ರವುಂಟು ನೀವಱಿಯಲಕ್ಕುಮೆನೆಯವರಾವಱಯೆವದಂ ಪೇಳಿಮನೆ ಮನೋವೇಗಂ ಪೇಳ್ಗುಂ

ವೇದವಾಕ್ಯಂ

ಅರ್ಹನ್ ಬಿಭರ್ಷಿ ಸಾಯಕಾನಿ ಧನ್ವಾರ್ಹನ್ನಿಷ್ಕಂ ಯಜತಂ ವಿಶ್ವರೂಪಂ |
ಅರ್ಹನ್ನಿದಂ ದಯಸೇ ವಿಶ್ವಮಭ್ವಂ ನ ವಾ ಓಜೀಯೋ ರುದ್ರ ತ್ವದಸ್ತಿ || ೩೯

ವಚನ

ಎಂದು ವೇದವಾಕ್ಯಂ ಸಕಳವಿಮಳಕೇವಳಜ್ಞಾನಸ್ವರೂಪನುಂ ನಾಗನರಾಮರೇಂದ್ರ ಮುನೀಂದ್ರವಂದಿತನುಂ ಪೂಜಿತನುಂ ಸಕಲಜಗಜ್ಜಿತದಮನೋಜವಿಜಯನುಂ ಜಿನೇಶ್ವರನೆ ಕಾಣಾ ಎಲೆ ವಿಪ್ರರಿರಾ ನೀವೆ ಓದಿಯಱಿದು ಮತ್ತಮಱಿಯೆವೆಂದು ಸಂವಾದಿಸಿದದಱಂ ಜಿನಂ ವೇದದೊಳ್ ಪ್ರಸಿದ್ಧಂ ಮತ್ತಮದಱುಳುಂ ಜೀವಾದಿ ಪದಾರ್ಥಂಗಳಂ ಪೂರ್ವಾಪರವಿರೋಧಮಿಲ್ಲದೆ ಪೇಳ್ವುದೇ ವೇದಂ ಪೂರ್ವಾಪರ ವಿರೋಧವುಳ್ಳುದು ವೇದಮಲ್ಲೆಂದು ನಿರುತ್ತರರಂ ಮಾಡಿ ವಾದಂಗೆಲ್ದು ಜಯ ಪತ್ರಮಂ ಕೊಂಡುದ್ಯಾನವನಕ್ಕೆ ಬಂದು ವೇದೋಕ್ತಿಯಿಂ ಸ್ವಸಮಯಮಹಾಪುರಾಣದೊಳ್ ಯಥೋಚಿತಕ್ರಮದಿಂ ಪೇಳ್ವನ ಸಮಯದೊಳ್

ಕಂದ

ದಿನಲಕ್ಷ್ಮಿಯ ಹಾರದ ಮ
ಧ್ಯನಾಯಕ ಖ್ಯಾತ ಪದ್ಮರಾಗದ ಮಣಿ ನೆ
ಟ್ಟನೆ ಪಱಿದು ಬಿರ್ದುದಬ್ಧಿಯೊ
ಳೆನಿಪಂದದಿನರ್ಕನಪರಜಳನಿಧಿಗಿಳಿದಂ ೪೦

ವಚನ

ಅಂತುಂ ನೇಸರ್ಪಡುವುದುಂ ತಮ್ಮಿರ್ವರುಂ ನಿದ್ರಾಮುದ್ರಿತರಾಗಿ ಕಿಱಿದಾನುಂ ಬೇಗಮಿರ್ದು ಖಚರಚಕ್ರವರ್ತಿಯೆಸಗುವ ಪರಹಿತಾರ್ಥವ್ಯಸನಂ ತೊಡೆವೊಯ್ದೆಬ್ಬಿಸಿದಂತೆ ಬೇಗಮೆಚ್ಚತ್ತು ಜಳಕದೇವತಾರ್ಚನೆಯಂ ನಿತ್ಯಕರ್ಮಾನುಷ್ಠಾನಧ್ಯಾನಮಂ ತೀರ್ಚಿ ಸಖಂಬೆರಸು ಕುಳ್ಳಿರ್ದ ಸಮಯದೊಳ್

ಕಂದ

ಸುರವೈರಿಗಳೊಳ್ ಕಾದುವ
ಭರದಿಂದಮರೇಂದ್ರನಂಗರಕ್ಗೆ ಪಿಡಿದಾ
ದರದಿಂದೆತ್ತಿದ ಮಾಣಿಕ
ವರಿಗೆಯಿದೆನೆ ಪೂರ್ವದೆಸೆಯೊಳಿನನುದಯಿಸಿದಂ೪೧

ವಚನ

ಅಂತು ನೇಸರ್ಮೂಡುವುದುಂ

ಕಂದ

ಮಿತ್ರನ ಮಿಥ್ಯಾತ್ವ ಲತಾ
ದಾತ್ರಂ ಜಿನಸಮಯವಾರ್ಧಿವರ್ಧನ ಚಂದ್ರಂ
ಗೋತ್ರಪರಿಪಾಲನಮಲಚ
ರಿತ್ರಂ ಸತ್ಪಾತ್ರದಾನಿ ವೃತ್ತವಿಳಾಸಂ ೪೨

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಭೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಪದಂ
ವೃತ್ತವಿಲಾಸವಿರಚಿತಮಪ್ಪಧರ್ಮಪರೀಕ್ಷೆಯೊಳ್ ಬ್ರಹ್ಮವಿಷ್ಣುಮಹೇಶ್ವರ
ದೇವತಾಪರೀಕ್ಷಾ ನಿರೂಪಣಂ
ಷಷ್ಷಮಾಶ್ವಾಸಂ