ಶಾರ್ದೂಲವಿಕ್ರೀಡಿತ

ಈ ಸಂಸಾರದೊಳಾಗಳುಂ ತೊಳಲಿ ನಾನಾಯೋನಿಯೊಳ್ ಪುಟ್ಟಿ ಸಂ
ಕ್ಲೇಶಂಬಟ್ಟು ಬಳಿಕ್ಕೆ ತಾಱುವಶದಿಂ ಮಾನುಷ್ಯಜನ್ಮಕ್ಕೆ ಬಂ
ದೀ ಸನ್ಮಾರ್ಗಮನಪ್ಪುಕೆಯ್ದು ಜಿನಪಾದಾಂಭೋಜಮಂ ನಂಬಿ ತಾಂ
ಲೇಸಂ ತಾಳ್ದದೆ ಹಿಂಸೆಗಂಜದಿರುಳುಂಬಾತಂ ಗಡರ ಜೈನನೇ ೬೫

ಕಂದ

ಎನೆ ಕೇಳ್ದಾ ಜಾವದ ಪೊಲೆ
ಯನ ಪೆಂಡತಿಯೆಂದಳಿರುಳೊಳುಂಡಡೆ ದೋಷಂ
ಜನಿಯಿಪುದೆಂಬಿದನಱಿಪುವು
ದೆನೆ ಧನವತಿಯವಳ್ಗೆ ಪೇಳಲುದ್ಯತೆಯಾದಳ್ ೬೬

ವಚನ

ರಾತ್ರಿಯೊಳ್ ದ್ವೀಂದ್ರಿಯ ತ್ರೀಂದ್ರಿಯ ಚತುರಿಂದ್ರಿಯವಾದಿಯಾದ ಜೀವಂಗಳ್ ಮಿಶ್ರಿತಾನ್ನಪಾನ ಖಾದ್ಯ ಲೇಹ್ಯಮೆಂಬ ಚತುರ್ವಿಧಾಹಾರಮನುಂಡ ನರರ್ ನರಕಕ್ಕಿಳಿವರವರ್ಗೆ ಮನುಷ್ಯಗತಿ ದುರ್ಲಭಂ ಕಥಂಚಿತ್ ಮನುಷ್ಯಗತಿವಡೆದೊಡಂ

ಕಂದ

ಪರಿಕಿಪೊಡಲ್ಪಾಯುಷ್ಯಂ
ವಿರೂಪಿ ವಿಕಳಾಂಗನೇಳಿದಂ ಕುಲಹೀನಂ
ಸರುಜನದೆಂದುಂ ಮನುಜರೊ
ಳಿರುಳುಣ್ಬಂ ನರಕಭಾಜನಂ ಪರಮಾರ್ಥಂ ೬೭

ವಚನ

ಅದೆಂತೆನೆ

ಶ್ಲೋಕ

ವಿರೂಪೋ ವಿಕಳಾಂಗಶ್ಚ ಅಲ್ಪಾಯೂ ರೋಗಪೀಡಿತಃ
ದುರ್ಭಗೋ ದುಷ್ಕುಲಶ್ಚೈವ ನಕ್ತಭೋಜೀ ಸದಾಚರಃ ೬೮

ಕಂದ

ಎಂದಾ ಧನವತಿ ಪಿರಿದಾ
ನಂದದೆ ಪೇಳಲ್ಕೆ ಕೇಳ್ದು ಹೋಸವ್ರತಮಂ
ಕುಂದದೆ ಮಾಡಲ್ ಫಲಮೇ
ನೆಂದಾ ಚಾಂಡಾಲಪತ್ನಿ ಬೆಸಗೊಳಲೆಂದಳ್ ೬೯

ವಚನ

ಈ ಹೋಸವ್ರತವನಾವನಾನುಂ ಪಾಲಿಸಲ್ ಸುರಲೋಕದೊಳ್ ಸುರವರನಾಗಿ ಬರ್ದಲ್ಲಿಂ ಬಂದು ಈಲೋಕದೊಳಿಕ್ಷ್ವಾಕುವಂಶಾದಿಕ್ಷತ್ರಿಯನಾಗಿ ಈ ಬ್ಯಾದಿ ವೈಶ್ಯ ವಂಶದೊಳ್ ಪುಟ್ಟಿ ಭೋಗೋಪಭೋಗಂಗಳನನುಭವಿಸಿ ಬಳಿಕೆ ತಪೋನುಷ್ಠಾನಮಂ ಮಾಡಿ ಸರ್ವಜ್ಞ ಪದವಿ ಮೊದಲಾಗಿ ಸಿದ್ಧಪದಮಂ ಪಡೆವರೆಂದು ಪೇಳ್ದು ನಾಂ ಪೇಳ್ದೀ ವ್ರತಂ ಪೂರ್ವಾಚಾರ‍್ಯರ್ ಪೇಳ್ದ ಮತಮೆಂತೆನೆ

ಶ್ಲೋಕ

ನಿಜಕುಲೈಕಮಂಡನಂ ತ್ರಿಜಗದೀಶಸಂಪದಂ
ಭಜತಿ ಯಃ ಸ್ವಭಾವತಃ ತ್ಯಜತಿ ನಕ್ತ ಭೋಜನಂ ೭೦

ಮಹಾಸ್ರಗ್ಧರೆ

ಕ್ಷಿತಿಯೊಳ್ ಪ್ರಖ್ಯಾತ ಹೋಸವ್ರತದ ಮಹಿಮೆಯಂ ಪೇಳೆ ಕೇಳ್ದೊಲ್ದುಹೋಸ
ವ್ರತಮಂ ಕೈಕೊಂಡು ಚಾಂಡಾಳಿತಿ ನಿಜ ನಿಳಯಕ್ಕೈದಿಯಾ ರಾತ್ರಿಯೊಳ್ ತ
ತ್ಪತಿಯೂಟಂ ಮಾಡುತಾ ಪೆಂಡತಿಯನೆ ಕರೆಯಲ್ಕೊಲ್ಲೆ ನಾನಿಂದು ಹೋಸ
ವ್ರತಮಂ ಕೈಕಂಡನೆಂತುಂಡಪೆನೆನಲಲಗಿಂ ಕುತ್ತಿದಂ ಮತ್ತಚಿತ್ತಂ ೭೧

ಶಾರ್ದೂಲವಿಕ್ರೀಡಿತ

ಆ ಚಾಂಡಾಳಿ ನಿದಾನದಿಂ ಮುಡುಪಿ ಮುಂ ಹೋಸವ್ರತಂಗೊಂಡದಂ
ಭೂಚಕ್ರಂ ಪೊಗಳಲ್ಕೆ ಪಾಲಿಸಿದ ಪುಣ್ಯಪ್ರಾಪ್ತಿಯಿಂ ಪಿಂಗಿ ತಾ
ನೀಚತ್ವಂ ನೆಲಸಿರ್ದಳಾ ಧನವತೀ ಸದ್ಗರ್ಭದೊಳ್ ಭಾವಿಸ
ಲ್ಕಾಚಾರವ್ರತಮೆಲ್ಲಮೊಂದಿದ ನರಂಗೇಂ ತೀರದೀ ಧಾತ್ರಿಯೊಳ್ ೭೨

ವಚನ

ಅಂತು ಧನವತಿಯಗರ್ಭದೊಳ್ ನೆಲಸಿ ನವಮಾಸಂ ತೀವಿ ಪೆಣ್ಗೂಸಂ ಬೆಸಲೆಯಾಗಿ ನಾಗಶ್ರೀಯೆಂಬ ನಾಮಗ್ರಹಣಂಗೆಯ್ದು ಇರಲತ್ತಲಾ ಚಾಂಡಾಳಂ ಪೆಂಡತಿಯಂ ಕೊಂದುದರ್ಕೆ ತನ್ನಲಗಿನಿಂ ತಾನೆ ಕುತ್ತಿಕೊಂಡು ಸತ್ತು ಸಚಿವೋತ್ತಮನ ಮನೆಯ ರಾತ್ರಿಜಾಗರನ ಗರ್ಭದೊಳ್ ಪುಟ್ಟಿರುತ್ತಿರೆ

ಕಂದ

ಆ ಪುರದೊಳ್ ಶ್ರೀಧರನೆಂ
ಬಾ ಪರದಂ ಮಾಳ್ಪನಂತದಾನವನೊಲವಿಂ
ತಾಂ ಪರದಾಡಳ್ಪೋಗು
ತ್ತೋಪಳ್ ಶ್ರೀವಧುಗೆ ದಾನಮಂ ನಿರವಿಸಿದಂ ೭೩

ಕಳಾಭಾಷಿಣಿ ವೃತ್ತ

ಅಂತು ಪೇಳಿ ಪರದೇಶಕೆ ಪೋಪುದುಮಿತ್ತಲಾ
ಕಾಂತೆ ದಾನಮನೆ ಮಾಡದೆಯಾ ಧನಮೆಲ್ಲಮಂ
ಸಂತತಂ ಗಳಿಸಿ ವಂಚಿಸಿ ಬೈತಿಡೆ ಸೆಟ್ಟಿ ಬಂ
ದಿಂತುಗೆಯ್ದಳಿವಳೆಂಬುದನಾಗಳೆ ಕೇಳಿದಂ ೭೪

ವಚನ

ಅಂತು ಕೇಳಿಯೊಂದು ಕೃತಕಪತ್ರಮನೊರ್ವ ಭೃತ್ಯನ ಕೈಯಲಿತ್ತು ನಾಂ ಶ್ರೀ ವನಿತೆಸಮೇತವಿರ್ದಲ್ಲಿಯದಂ ತಂದೀವುದೆಂದು ಪೇಳಲವನಂತೆಗಯಲಾ ಪತ್ರಮಂ ಬಿಟ್ಟೊಡೆ ನಿಮ್ಮ ಪಿತನಟ್ಟಿದಂ ತನಗನಿಷ್ಟಂ ಪಿರಿದೀಗಳಿಂತೆ ಬಂದೊಡೆ ಕಾಣ್ಗುಮಿಲ್ಲದೊಡೆ ಕಾಣಲಱಿಯಿರಿಯೆಂದೊದಿ ಪೇಳ ಕೇಳ್ದಾ ಶ್ರೀ ದುಃಖಿತೆಯಾಗಿಯಿಂತೆಂದಳ್

ಕಂದ

ಎಲೆ ಪತಿ ನೀನೀ ಮನೆಯಂ
ಸಲೆ ಸುಯ್ದಾನಮನೆ ಮಾಡಿ ಬರ್ಪುದು ಬಳಿಕಂ
ಕಳಿಪೆನ್ನಂ ಮುಂದೆಂದಾ
ಲಲನೆ ಕರಂ ಬೇಗದಿಂದೆ ಕಳುಹಿಸಿಕೊಂಡಳ್ ೭೫

ವಚನ

ಅಂತು ಕಳಿಹಗಿಸಿಕೊಂಡು ಪೋಗಲಿತ್ತಲ್

ಕಂದ

ಶ್ರೀಧರವಣಿಗ್ವರಂ ಕೂ
ರ್ತಾಧನವತಿಯಾತ್ಮ ಜಾತೆ ನಾಗಶ್ರೀಯಂ
ಭೂಧರಧೈರ್ಯಂ ನಿಖಿಳ ಕ
ಳಾಧರೆಯಂ ಮದುವೆಯಾದನತಿಮುದದಿಂದಂ ೭೬

ಇರೆ ಕೆಲವುದಿನಂ ಪರದಂ
ಬರವೇಳದಿರಲ್ಕೆ ತನಗೆತಾನೇ ಬೇಗಂ
ಬರೆ ಲೆಕ್ಕಿಸದಿರೆ ಗಂಡನ
ಚರಣಾಭ್ಜದೊಳೆಱಗಿ ಕಾಂತೆ ದುಃಖಿತೆಯಾದಳ್ ೭೭

ಕರುಣಿಸಿ ಕಿಱುಮನೆಯೊಳಗೊ
ಯ್ದಿರಿಸಿರುತಿರೆ ಕೆಲವುದಿವಸದಿಂ ಬಳಿಕಾ ಶ್ರೀ
ಧರಸೆಟ್ಟಿ ಪರದುಗೈಯಲ್
ಭರದಿಂ ಜಲಮಾರ್ಗದಳ್ಲಿಲ ಪೋಪುದುಮಿತ್ತಲ್ ೭೮

ವಚನ

ಆ ನಾಗಸ್ರೀಯುತ್ಕೃಷ್ಟಮಪ್ಪನ್ನದಾನಮಂ ಮಾಡುತ್ತಿರಲೊಂದುದಿನಂ ಶ್ರೀಯಿಂತೆಂದಳ್

ಕಂದ

ಎಲೆ ತಂಗೇ ನೀಂ ಋಷಿಯರ
ನಿಲಿಸುವ ಪೊಳ್ತೆನ್ನನೇಕೆ ಕರೆಯಿಸೆ ಬಂದಾಂ
ಕೆಲಸಂಗೆಯ್ವೆಂ ಪಿರಿದೆಂ
ಜಲನೆತ್ತುವೆನಿನಿತು ಪುಣ್ಯಮಂ ಸಾಧಿಸುವೆಂ ೭೯

ಎಂದಾಕೆ ನುಡಿಯಲಾಗಲಿ
ಯೆಂದಾ ಪೊತ್ತಱೊಳೆ ನಿಚ್ಚಂ ಕರೆಸು
ತ್ತೊಂದೆವಸಂ ಕರೆವವರಿ
ಲ್ಲೆಂದೆನುತಿರೆ ಕಾಳನಾಯಿ ಕರೆಯಲ್ಪೋಗಲ್ ೮೦

ಅದನಾಕೆ ಕಂಡು ಕೋಪಿಸಿ
ಕುದಿವೆಣ್ಣೆಯನದಱ ತಲೆಯಮೇಲುಱು ಪೊಯ್ಯ
ಲ್ಕದು ಮಗುಳ್ದುಬಂದು ತಾಂ ಕೆಡೆ
ದುದು ನಾಗಶ್ರೀಯ ಮನೆಯ ಬಾಗಿಲೊಳಾಗಳ್ ೮೧

ವಚನ

ಅಂತು ಬಿಳ್ದ ಕಾಳನಾಯಂ ಕಂಡು ಅದಱ ಜೀವಂ ಪೋಪುದನಱಿದು ಪಂಚನಮಸ್ಕಾರಮಂ ಪೇಳೆ ಕೇಳ್ದು ಪ್ರಾಣಮಂ ಬಿಟ್ಟಾ ಪಂಚನಮಸ್ಕಾರದ ಫಲದಿಂದದು ವ್ಯಂತರದೇವನಾಗಿ ಪುಟ್ಟಿರುತ್ತಿರಲತ್ತಲಾಗಿ ಆ ಸೆಟ್ಟಿ ವ್ಯವಹರಿಸಿ ಬಹುಧನಮಂ ಪಡೆದು –

ಮ್ತೇತಭವಿಕ್ರೀಡಿತ

ಪಿರಿದುಂ ಪೊಂಗಳನುದ್ಘರತ್ನಚಯಮಂ ಸದ್ವಸ್ತು ಸಂದೋಹಮಂ
ನಿರುತಂ ತೀವಿ ಬರುತ್ತೆ ಭೈತ್ರಮೆಡೆಯೊಳ್ ಪೆರ್ಗಾಳಿಯಿಂ ಪುಟ್ಟಿದಾ
ತೆರೆಯಿಂ ದುರ್ಧರಮಪ್ಪುದೊಂದು ಸುಳಿಯೊಳಿಳ್ದಲ್ಲಿ ತಿಱ್ರೆಂದು ತಾಂ
ತಿರುಗುತ್ತಿರ್ದುದುಮುಂ ಸುರರ್ ಮಥಿಸಿದಾ ಸ್ವರ್ಣಾದ್ರಿಯೆಂದೆಂಬಿನಂ ೮೨

ಕಂದ

ಅದಕಾ ವ್ಯಂತರದೇವಂ
ಗೊದವಿದುದಾಸನ್ನ ಕಂಪವದನಱದಲ್ಲಿಂ
ಪದಪಿಂದೆ ಬಂದು ಭೈತ್ರವ
ನುದಿತಯಶಂ ತೆಗೆದು ಸುಪಥದೊಳ್ ತಂದಿಟ್ಟಂ ೮೩

ವಚನ

ಅಂತಿರಿಸಿ ಸೆಟ್ಟಿಯಂ ಕಂಡು ಪಾದಾನತನಾಗಿ ನಾಂ ನಿನ್ನ ಮನೆಯ ಕೃಷ್ಣಶ್ವಾನಂ ಎನಗೆ ನಿನ್ನ ಪಿಱಯವಲ್ಲಭೆಯಿಂದಾದನಿಷ್ಟಮಪ್ಪ ಮರಣದೊಳ್ ನಿನ್ನ ಕಿಱಿಯರಸಿ ನಾಗಶ್ರೀ ಪೇಳ್ದ ಪಂಚನಮಸ್ಕಾರದ ಫಲದಿಂದೆನಗೆ ದೇವಗತಿ ಪ್ರಾಪ್ತಿಯಾದುದೆಂದು ಪೇಳ್ದು ದಿವ್ಯಾಭರಣ ವಸ್ತುವಂ ಕೊಟ್ಟು ಮತ್ತೊಂದು ದಿವ್ಯ ಹಾರಮಂ ನಾಗಶ್ರೀಗೆ ಕುಡುವುದೆಂದಿತ್ತು ಸ್ವರ್ಗಕ್ಕೆ ಪೋಗೆ ಯಿದಂ ಕಂಡು ಸೆಟ್ಟಿ ಸಂತುಷ್ಟನಾಗಿ

ಕಂದ

ಭರದಿಂ ಬಂದಾ ಪರದಂ
ಪುರಮಂ ಪೊಕ್ಕಲ್ಲಿ ನೃಪತಿಯಂ ಕಂಡು ಬಳಿ
ಕ್ಕಿರುತಿರಲೊಂದು ದಿನಂ ವ್ಯಂ
ತರದೇವಂ ಕೊಟ್ಟ ಪದಕಮಂ ಸತಿಗಿತ್ತಂ ೮೪

ಆ ಪದಕಮನತಿ ಮುದದಿಂ
ದಾ ಪರದನ ಕಾಂತೆಯಪ್ಪ ನಾಗಶ್ರೀ ಸ
ದ್ರೂಪವತಿ ಕೊರಲೊಳಿಕ್ಕಿರೆ
ಭೂಪಾಲನ ಭೃತ್ಯನೊರ್ವ ಧೂರ್ತಂ ಕಂಡಂ ೮೫

ಅದನರಸಂಗಱಿಪಲ್ಕಾ
ಪದದೊಳೆ ಸೆಟ್ಟಿಯನೆ ಕರೆಸಿ ಬೇಡಿದೊಡಂತಾ
ಪದಕಮನರಸಂಗಿತ್ತಂ
ಪದಪಿಂದಾ ನೃಪತಿ ತನ್ನ ವಲ್ಲಭೆಗಿತ್ತಂ ೮೬

ಆ ನೃಪನ ಕಾಂತೆ ಪದಕಮ
ನಾನಂದದೆ ಕೊರಲೊಳಿಕ್ಕೆ ಸರ್ಪಾಕೃತಿಯಂ
ತಾನಾಂತು ಪೂತ್ಕರಿಸುತಿರೆ
ಮಾನಿನಿ ಬಿಟ್ಟೋಡೆ ಕಂಡು ಬೆಱಗಾಗಿ ನೃಪಂ ೮೭

ಕಾಳಾಭಾಷಿಣಿ

ಸೆಟ್ಟಿನೀನೆಮಗೆ ಕೊಟ್ಟ ಮಹಾಪದಕಂ ಕರಂ
ಬೆಟ್ಟಿತಪ್ಪ ಫಣಿಯಾದುದಿದೇನೆನೆ ಕೇಳಿದಾ
ಸೆಟ್ಟಿಯೀ ಪದಕವಿಂತೆಮಗಾದನುಮಾನಮಂ
ನೆಟ್ಟನಾಲಿಸುವುದೆಂದುಸಿರ್ದಂ ಕ್ರಮದಿಂದೆ ತಾಂ ೮೮

ವಚನ

ಅಂತು ಪೇಳೆ ಕೇಳ್ದರಸನಿಂತೆಂದಂ

ಕಂದ

ನಾಯಿ ಗಡ ದೇವನಾಯ್ತುಗ
ಡೀಯನುಪಮಹಾರವೊಂದನಿತ್ತುದು ಗಡ ಮೆಂ
ಬೀಯತಿಮತಮಂ ನುಡಿವೀ
ಬಾಯಿದು ಪುಸಿನುಡಿಗಳೊಱತೆಯೆಂಬುದು ಪುಸಿಯೇ ೮೯

ಉತ್ಸಾಹ

ಎನುತೆ ಬೆಱಗುವಟ್ಟು ಸೆಟ್ಟಿ ಹುಸಿದನೆಂದು ಭೂಭುಜಂ
ಮುನಿದವಂಗೆ ನಿಗ್ರಹಂಗಳಂ ಪೊಣರ್ಚಲತ್ತಲಾ
ಕನಕಪೀಠವಲುಗೆ ದೇವನಱಿದು ಬಂದು ಬೇಗದಿಂ
ಜಿನವರಂಗೆ ಮಾಡಿದಂ ಸಮಸ್ತದುಃಖಕೋಟಿಯಂ ೯೦

ವಚನ

ಅಂತುಪಸರ್ಗಂ ಮಾಡೆಯರಸನಾಶಂಕೆಗೊಂಡಾ ದೇವನ ಚರಣಯುಗದೊಳ್ ಬೀಳಲಿದೆನ್ನಳವಲ್ಲ ಸೆಟ್ಟಿಯಂ ಪ್ರಾರ್ಥಿಸೆನೆಯಾ ಸೆಟ್ಟಿಯಸಮೀಪಕ್ಕೆ ಬಂದನೇಕ ತೆಱದೆ ಲಜ್ಜೆಗೆಟ್ಟು ಬೇಡಿಕೊಳೆಯಾತಂ ದೇವಂಗೆ ಪೇಳೆಯುಪಸರ್ಗವಂ ಮಾಣಿಸಿ

ಕಂದ

ಧರಣೀನಾಥಂಗಾ ವ್ಯಂ
ತರದೇವಂ ತನ್ನ ಪೂರ್ವಜನ್ಮದ ವೃತ್ತಾಂ
ತರಮಂ ಜಲಕ್ಕನಱವಂ
ತಿರೆಪೇಳ್ದು ಬಳಿಕ್ಕೆ ನಿಜವಿನಾಸಕೆ ಪೋದಂ ೯೧

ಇತ್ತಲ್ ಪರಿಜನಮುಂ ಭೂ
ಪೋತ್ತಮನುಂ ದೃಷ್ಟವಾಗೆ ಕಂಡತಿ ಹರ್ಷಂ
ಬೆತ್ತೀ ಧರ್ಮಮೆ ಸುಖಸಂ
ಪತ್ತಿಗೆ ಕಾರಣಮುಮೆಂದು ನಂಬಿದರಾಗಳ್ ೯೨

ಮತ್ತೇಭವಿಕ್ರೀಡಿತ

ಕ್ಷಿತಿಪಂ ತತ್ಪರಿವಾರಮಂ ಜಿನಗೃಹಕ್ಕೆಳ್ತಂದು ಸಂಪ್ರೀತಿಯಿಂ
ವ್ರತಮಂ ಕೊಂಡು ಗುಣಂಗಳಂ ತಳೆದು ಮೂಱುಮೂಢಮಂ ಬಿಟ್ಟುಸ
ನ್ನುತಸಮ್ಯಕ್ತ್ವಮನಪ್ಪುಕೆಯ್ದರವರೆಲ್ಲಂ ಸೆಟ್ಟಿ ತಾಂ ತನ್ನ ಪೆಂ
ಡತಿ ಮುಂ ಸಂಚಿಸಿದರ್ಥದಿಂದೆ ಜಿನಚೈತ್ಯಾವಾಸಮಂ ಮಾಡಿದಂ ೯೩

ಕಂದ

ಅಂತಾ ಭವ್ಯಂ ಜನಂ ಪಲ
ವುಂ ತೆಱದಿಂ ದಾನಧರ್ಮಮಂ ಮಾಡುತೆ ನಿ
ಶ್ಚಿಂತದೊಳರುಹತ್ವದಯುಗ
ಮಂ ತಡೆಯದೆ ಪೂಜಿಸುತ್ತೆ ಸುಖದಿಂದಿರ್ದರ್ ೯೪

ಒಂದೇ ಹೋಸವ್ರತಫಲ
ದಿಂದುನ್ನತಕುಲಮನೂನಸಂಪನ್ನತೆಯಾ
ಯ್ತೆಂದೊಡೆ ಫಲವುಂ ವ್ರತಗುಣ
ಮೊಂದಿದ ಮನುಜಂಗೆ ತೀರದಿರ್ಪುದುಮುಂಟೇ ೯೫

ವಚನ

ಇಂತಪ್ಪ ಪಲವುಂ ವ್ರತಂಗಳಂ ದಾನಪೂಜೆ ಶೀಲೋಪವಾಸವೆಂಬ ಚತುರ್ವಿಧಮಪ್ಪ ಶ್ರಾವಕಾಚಾರದಿಂ ನಡೆದವರ್ ಜಘನ್ಯಮಧ್ಯಮೋತ್ತಮಭೋಗಭೂಮಿಗಳೊಳಂ ಪದಿನಾಱನೆಯ ಕಲ್ಪಾತೀತಂಗಳೊಳಂ ತಂತಮ್ಮ ಪಡೆದ ಪುಣ್ಯಫಲದಿಂ ಜನಿಯಿಸಿಯಾ ಕ್ಷಣದೊಳೆ ಪನ್ನೆರಡು ಪದಿನಾಱು ವರುಷದ ನವಯೌವನರಾಗಿ ದಿವ್ಯ ಕಾಯರುಂ ದಿವ್ಯಾಭರಣಭೂಷಿತರುಂ ಗತಶ್ರಮರುಮಾಗಿ ಜರಾಮರಣಾಪಮೃತ್ಯುವಿಲ್ಲದೆ ಭೋಗೋಪಭೋಗವಸ್ತುಗಳಂ ಸುರತರುವೀಯೆ ಸುಖಂ ಪಡೆದು ಪಳಿತಾಪಮಂ ಮೊದಲಾಗಿ ಮೂವತ್ತು ಮೂಱುಸಾಗರೋಪಮಸಂಖ್ಯೆಯ ಪರಮಾಯುಷ್ಯಮನುಳ್ಳರಾಗಿ ಸುಖಮಿರ್ಪರೆಂದು ತಿಳಿಪೆ ತಿಳಿದು.

ಮಹಾಸ್ರಗ್ಧರೆ

ವ್ರತಮಂ ಕೈಕೊಂಡು ಮೂಢತ್ರಯಮನುಳಿದು ನಾನಾಗುಣಾನೀಕಶೋಭಾ
ನ್ವಿತಮಪ್ಪಾಚಾರದಿಂದಂ ನಡೆದು ವಿಮಲರತ್ನತ್ರಯಾನೀಕಮಂ ಸ
ನ್ನುತಮಾಗಲ್ಪೆತ್ತು ದೇವಾಧಿಪಪದವಿಗಳೊಳ್ ಬಿರ್ದು ಕೈವಲ್ಯಲಕ್ಷ್ಮೀ
ಪತಿಯಾ ಜೈನಮಂ ನಂಬಿದರೆ ನಲಿದು ಬೆಟ್ಟೆಚ್ಚಕೋಲ್ ತಪ್ಪಿತುಂಟೇ ೯೬

ಕಂದ

ಇದು ದುರಿತತಿಮಿರ ರವಿರುಚಿ
ಯಿದು ಸತ್ಕೈವಲ್ಯಪದದ ನಿಶ್ರೇಣಿ ಸಮಂ
ತಿದು ರತ್ನತ್ರಯನಿಧಿಯೆನಿ
ಪುದು ಧರ್ಮಪರೀಕ್ಷೆ ಭವ್ಯಜನಹಿತಕರಣಂ ೯೭

ಚಂಪಕಮಾಲೆ

ಜಿನಪದಸೇವಕಂ ಜಿನಮುನೀಂದ್ರಪದಾರ್ಚಕನನ್ಯದೈವಮಂ
ಕನಸಿನೊಳಾವಗಂ ನೆನೆಯದುತ್ತಮಚಿತ್ತನುದಾರಮೇರು ಸ
ಜ್ಜನನಿಧಿ ಸತ್ಯಶೌಚಗುಣದಾಗರನಾಜ್ಞೆಯ ಜನ್ಮ ಭೂಮಿಯೆಂ
ದನುನಯದಿಂದೆ ಕೀರ್ತಿಪುದು ವೃತ್ತವಿಲಾಸನನೀ ಜಗಜ್ಜನಂ ೯೮

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಭೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಟದಂ
ವೃತ್ತವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್ ಪವನವೇಗ ಮೊದಲಾಗಿ
ಸಕಲವಿಪ್ರಜನಂಗಳ ವ್ರತಾರೋಪಣವರ್ಣನಂ
ದಶಮಾಶ್ಪಾಸಂ