ಉತ್ಪಲಮಾಲೆ

ಕೋಪಿಸಿ ಹೋಮಕುಂಡಶಿಖಿಯಂ ನೆಱೆ ನಂದಿಸಿ ತನ್ನ ದೇಹದೊಳ್
ಲೇಪಿಸಿಕೊಂಡು ತದ್ಭಸಿತಮೆಲ್ಲಮನಾ ಸತಿಯಸ್ಥಿಯೆಲ್ಲಮಂ
ಗೋಪತಿವಾಹನಂ ಶಿರಕರಾಂಘ್ರಿಸುಕಂಠದೊಳಾಂತುಕೊಂಡು ವಿ
ದ್ರೂಪನೆಯಾಗಿ ಹಾ ಸತಿ ಮಹಾ೩ಸತಿಯೆಂದೆನುತುಂ ವಿಯೋಗದಿಂ ೪೬

ಕಂದ

ಅಳಲುತ್ತುಂ ಬಳಲುತ್ತುಂ
ಕಳವಳಿಸುತ್ತಳುತೆ ಸುಯ್ಯುತೀಶಂ ವಿರಹಾ
ನಳನಿಂ ಬೇಯುತ್ತುಂ ತಾಂ
ತಳರ್ದನತನುಪ್ರತಾಪಮೇಂ ಕೇವಳಮೇ ೪೭

ವಚನ

ಅಂತು ತಳರ್ದು ತನ್ನಂ ಮಱೆದು ಸರ್ವಸುಖಮಂ ತೊಱೆದು ಪೆಱರಂ ನೋಡದೆ ದೆಸೆಯಂ ಕಾಣದೆ ಕಣ್ಗೆಟ್ಟು ಬಾಯಂ ಬಿಟ್ಟು ವಿಕಳನಾಗಿ ದೇವಾರಣ್ಯಮಂ ಪೊಕ್ಕು

ಚಂಪಕಮಾಲೆ

ಕಡವೊಡೆವೆಕ್ಕೆ ಕಕ್ಕೆ ತಱಿ ಕಾಱೆ ಬೆಳಲ್ ಬಿದಿರತ್ತಿ ಮುತ್ತವಂ
ಬಡೆ ತಡಸೀಳೆ ಬಾಳೆ ಸಿರಿಸಂಗೊರಸಂಕೊಲೆಯಿಪ್ಪೆ ಕಪ್ಪುರಂ
ಕೊಡಸಿಗೆ ಬಾಗೆ ಬೇಲರಳಿ ತಂಡಸು ಕೊಂಡಸು ಜಾಲಯಾಲದಿಂ
ದಿಡಿಕಿಱಿದಿರ್ದ ಪೇರಡವಿಯೊಳ್ ಹರನೆಯ್ತರೆ ಕಂಡು ಮನ್ಮಥಂ ೪೮

ಪೃಥ್ವಿ

ಅಯಂ ಸಭುವನತ್ರಯಪ್ರಥಿತಸಂಯಮಃ ಶಂಕರೋ
ಬಿನಿಭರ್ತಿವಪುಸಾಧುನಾಂ ವಿರಹಕಾತರಃ ಕಾಮಿನೀಂ
ಅನೇನ ಖಲು ನಿರ್ಜಿತಾವಯಮಿತಿ ಪ್ರಿಯಾಯಾಃ ಕರಂ
ಕರೇಣ ಪರಿತಾಡಯನ್ ಜಯತಿ ಜಾತಹಾ ಸಸ್ಮರಃ ೪೯

ವಚನ

ಅಂತು ಕಾಮಂ ತನ್ನ ವಲ್ಲಭೆಯ ಕೈಯಂ ಪೊಯ್ದುನಗುತ್ತಿರೆ ಮುಂತೆ ಪೋಗೆ ವೋಗೆ ಕೆಲಂಬರ್ ತಾಪಸರ್ಕ್ಕಂಡೀತಂ ತಾನಾರೆನೆ ಕೆಲಂಬರೀತನಪೂರ್ವಸಿದ್ಧನೆನೆ ಕೆಲಂಬರೀತನಂ ಜಗದೊಳಪೂರ್ವದರ್ಶನೀಯನೆನೆ ಕೆಲಂಬರೀತಂ ಪಿಶಾಚನೊ ಉನ್ಮತ್ತನೊಯೆನೆ ಕೆಲಂಬರೀತಂ ಮುಕ್ತಿಯಂ ಪಡೆಯಲೆಂದುಗ್ರೋಗ್ರತಪಮಂ ತಾಳ್ದಿರ್ದಪನೆನೆ ಮತ್ತೆ ಕೆಲಂಬರಿತೆಂದರ್

ಕಂದ

ಈಯಾಕಾರವಿಕಾರದೆ
ಸಾಯುಜ್ಯಮನೆಯ್ದಲಾರ್ಪಡನ್ಯಾಯಮೆ ತಾಂ
ನ್ಯಾಯಮದಪ್ಪೊಡೆ ಸುರಪಂ
ನ್ಯಾಯಮಿದಿನ್ನೇವುದೆಂದು ಕೆಲಬರ್ ನುಡಿದರ್ ೫೦

ವಚನ

ಮತ್ತ ಮಿಂತಪ್ಪ ದುರಾಚಾರರುಂ ದುಶ್ಚಿತ್ತರುಂ ಪಿಶಾಚರುಂ ಕೋಪಿಗಳುಂ ಕಾಮಿಗಳುಂ ಕಳವಳಿಗರುಂ ಕಷ್ಟರುಂ ದುಷ್ಟರುಂ ಸ್ವರ್ಗಾಪವರ್ಗಮಂ ಪಡೆವೊಡೆ ಪೂರ್ವೋಕ್ತಮಿಂತೆಂದುದಲ್ತೆ

ಸಂಸ್ಕೃತಸ್ರಗ್ಧರಾ

ರಜ್ಜಾ ಬಧ್ನಾತಿ ವಾ ಯಂ ಮೃಗಯತಿ ಸಜತೀ ಮತ್ಸ್ಯಕಾನಾಂ ವಿಮಾರ್ಗೇ ವಂದ್ಯಸ್ತ್ರೀಷಂಡಕಾನಾಮಭಿಲಷತಿ ಸುತಂ ವಾಲುಕಾಭ್ಯಶ್ಚ ತೈಲಂ ದೋರ್ಭ್ಯಾಂಗಂತುಂಪಯೋಧಿಂ ಝಷಕುಲಕಳಿತಂ ಗೋವಿಷಾಣೇ ಪಿ ದುಗ್ಧಮ ಸರ್ವಾರಂಭಪ್ರವೃತ್ತೋ ನರಪಶುರಿಹ ಯೋ ಮೋಕ್ಷಮಿಚ್ಫೇತ್ಸುಖಾಯ ೫೧

ವಚನ

ಇಂತಪ್ಪವರ್ಗೆ ಸ್ವರ್ಗಾಪವರ್ಗಮಪ್ಪಡೆ ನರಪಶುಗಳೆಲ್ಲಂ ಸರಿಯೆನೆ ಮತ್ತೆ ಕೆಲಂಬರೀತಂ ಕೃತಾರ್ಥಶಿವನೆನೆ ಕೆಲಂಬರೀತಂ ಶಿವನಾದೊಡೆ ಶೈವಸಿದ್ಧಾಂತಕ್ಕೆ ವಿರೋಧವಪ್ಪುದೆನೆಯಾ ಸಿದ್ಧಾಂತಮೆಂತೆನೆಯಿಂತೆಂದು ಪೇಳ್ದರ್

ಸಂಸ್ಕೃತಸ್ರಗ್ಧರಾ

ಪಾತಾಳೇ ಚಾಂತರಿಕ್ಷೇ ದಶದಿಶಭುವನೇ ಸರ್ವಶೈಲೇ ಸಮುದ್ರೇ
ಕಾಷ್ಠೇ ಲೋಷ್ಠೇಷ್ಟಕಾಭಸ್ಮ ಸುಜಲಪವನೇ ಸ್ಥಾವರೇ ಜಂಗಮೇ ವಾ
ಬೀಜೇ ಸರ್ವೌಷಧೀನಾಮಸುರಸುರಪುರೇ ಪತ್ರಪುಱ್ಪೇ ತೃಣಾಗ್ರೇ
ಸರ್ವವ್ಯಾಪೀ ಶಿವೋಯಂ ತ್ರಿಭುವನಭವನೇ ನಾಸ್ತಿ ಚೇಹಾನ್ಯದೇವಃ ೫೨

ವಚನ

ಇಂತು ಸರ್ವವ್ಯಾಪಿಯಪ್ಪ ಶಿವಂಗೆ ಗಮನಾಗಮನಮಸಂಭಾವ್ಯಮೆಂದನೇಕ ವಿಕಲ್ಪಮಂ ನುಡಿಯುತ್ತಿರೆಯಲ್ಲಿಂ ತಳರ್ದು ಹಿಮವದ್ಗಿರಿಯ ಸಮೀಪಕ್ಕೆ ಪೋಗೆ ಮುನ್ನಂ ಸರ್ವಪರ್ವತಂಗಳ್ಗೆಱಂಕೆಯುಳ್ಳುದಱುಂದಖಿಳಧಾತ್ರಿಯಂ ತೊಳಲ್ದುಮೇವಂ ಪಡೆಯದೆ ಖೇಚರತ್ವದಿಂ ತ್ರಿದಶಲೋಕಕ್ಕೆ ಪೋಗಿ

ಕಂದ

ಅನಿತುಂ ಗಿರಿಗಳು ಖಾಂಡವ
ವನಮಂ ಹಸಿವೋಗೆ ಮೇದು ಮೆಲ್ಕೊತ್ತುತಿರಲ್
ವನಪಾಲಕನೀಕ್ಷಿಸಿ ಪರಿ
ದನಿಮಿಷಪತಿಯಲ್ಲಿಗೆಯ್ದಿ ಪುಯ್ಯಲನಿಟ್ಟಂ ೫೩

ಅಂತೈದೆ ಪುಯ್ಯಲಂ ಕೇ
ಳ್ದಂತಕನಂತಿರೆ ಕೆರಳ್ದು ಪವಿಯಂ ಪಿಡಿದೋ
ರಂತಿರೆ ತಿರುಪುತ್ತಮರವ –
ರಂ ತಡೆಯದೆ ನಡೆದು ಮುಂದಿರಲ್ ಕಂಡಾಗಳ್ ೫೪

ಚಂಪಕಮಾಲೆ

ಗಿರಿಗಳೆಱಂಕೆಗಳ್ ಮುಱಿವಿನಂ ಪವಿಯಿಂ ಸುರರಾಜನಟ್ಟೆ ನಿ
ರ್ಭರದೊಳೆ ಪೊಯ್ಯೆ ಬೀಳ್ತರುತೆ ಮೇನಕೆಯೆಂಬ ಮಹೀಧರಾಗ್ರದೊಳ್
ಪುರುಷಮಹೀಧರಂ ಕೆಡೆಯಲಾ ಗಿರಿಯುಗ್ಮದ ಸಂಗದಲ್ಲಿ ಶಂ
ಕರನ ವಧೂಟಿ ಸತ್ತು ಸತಿಯದ್ರಿತನೂಭವೆಯಾಗಿ ಪುಟ್ಟಿದಳ್ ೫೫

ವಚನ

ಅಂತು ಪರ್ವತವೆರಡಱ ಸಂಗದಿಂ ವಿಸ್ಫುಲಿಂಗಂಬೆರಸು ಪುಟ್ಟಿದುದಱಿಂ ಕಾಮಾಗ್ನಿ ಪ್ರಬಲೆಯುಂ ಮಹೋಗ್ರರೂಪೆಯುಮಾಗಿ ತತ್‌ಕ್ಷಣದೊಳೆ ನವಯವ್ವನ ಪ್ರಾಪ್ತೆಯುಮಾಗಿ ತದ್ಗಿರಿನಿಕಟದೊಳೆ ವರ್ತಿಸುತ್ತಿರೆಯಲ್ಲಿಗೆ ಪರಮೇಶ್ವರಂ ಬಂದುಮಾಕೆಯಂ ಕಂಡು ಕರಂಸೋಲ್ತು ಸಮೀಪಕ್ಕೆ ಸಾರ್ದಿಂತೆಂದಂ

ಕಂದ

ನೀನಾರಾರ ತನೂಭವೆ
ಯೇನಿಲ್ಲಿರವೆಂದು ಬೆಸಗೊಳಲ್ಕಿಂತೆಂದಳ್
ನಾನುಮಯದ್ರಿತನೂಭವೆ
ಭೂನುತನಪ್ಪೊರ್ವಪತಿಯಪೇಕ್ಷೆಯೊಳಿರ್ಪೆಂ ೫೬

ವಚನ

ಎನೆ ನಾನೀಶ್ವರಂ ನೀನೆನಗೆ ವಲ್ಲಭೆಯಾದೊಡೆ ಜಗದ್ವಂದ್ಯೆಯಪ್ಪೆಯೆಂದು ಪಲತೆಱದ ವಚನರಚನೆಯಿಂ ನುಡಿದೊಡಾ ಕನ್ನೆ ನಾಂ ಪಿತನುಳ್ಳ ಸಿಸುವಪ್ಪುದಱಿಂ ನೀನೆಮ್ಮ ತಂದೆಯಂ ಬೇಡೆಂತುಂ ಕೊಟ್ಟೊಡೆ ನಿನ್ನ ವಲ್ಲಭೆಯಪ್ಪೆನೆಂದು ನುಡಿಯೆಯಂತೆಗೆಯ್ವೆನೆಂದು ಈಶಂ ಗಿರೀಶನಲ್ಲಿಗೆವಂದು

ಕಂದ

ಎನ್ನ ಸತಿಯಾಗೆ ತಕ್ಕಳ್
ನಿನ್ನಯ ಸುತೆಯೆಂದು ಪಿರಿದು ವಚನೋಕ್ತಿಗಳಿಂ
ಪನ್ನಗಭೂಷಂ ಬೇಡಲ್
ಕನ್ನೆಯನೊಲವಿಂದಮಿತ್ತನಾ ಗಿರಿರಾಜಂ ೫೭

ವಚನ

ಅಂತೀಯೆ ಶುಭಮುಹೂರ್ತದೊಳ್ ಮದುವೆಯಾಗಿ ಗಿರಿರಾಜನಿಂ ಕಳಿಪಿಸಿಕೊಂಡು ಗಿರಿಜೆಸಮೇತಂ ಪೋಗಿ ಕೈಲಾಸಗಿರಿಯೊಳಿಷ್ಟಭೋಗಕಾಮಸುಖಮನನುಭವಿಸುತ್ತ ಮಿರೆಯೊಂದುದಿನಂ ಪರಮೇಶ್ವರಂ ವಿಹಾರಾರ್ಥದಿಂ ಪೋಗಿ ಕೂಡೆ ಚರಿಯಿಸಿ ಮಗುಳ್ದು ಬಂದು ಬಾಗಿಲೊಳ್ ನಿಂದು ಕಾಂತೆ ಕದಮಂ ತೆಱೆಯನೆ ಪಿರಿದುಂ ಪೊಳ್ತು ತಡೆದು ಬಂದುದರ್ಕೆ ಕೋಪಿಸಿ ವಕ್ರೋಕ್ತಿಯಿಂದಿಂತೆಂದಳ್

ಸಂಸ್ಕೃತಸ್ರಗ್ಧರಾ

ಕೋ ವಾ ದ್ವಾರಾಗ್ರಸಂಸ್ಥಃ ಸುದುತಿ ಪಶುಪತಿಃ ಕಿಂ ವೃಷೋ ನಾರ್ಧನಾರೀ
ಕಿಂ ಷಂಢೋ ನೈವ ಶೂಲೀ ಕಿಮಸಿ ವನಚರೋನಪ್ರಿಯೇ ನೀಲಕಂಠಃ
ಬ್ರೂಹಿ ತ್ವಂ ಕಿಂ ಮಯೂರೋ ನ ಹಿ ವಿದಿತಶಿವಃ ಕಿಂ ಪುರಾಣಸೃಗಾಲಃ
ಇತ್ಯೇವಂ ಹೈಮವತ್ಯಾ ಚುತರನಿಗದಿತಃಶಂಕರಃ ಪಾತು ಯುಷ್ಮಾನ್ ೫೮

ಕಂದ

ಎಂದಿಂತು ವಚನರಚನೆಗೆ
ಳಿಂದಂ ಕ್ರೀಡಾವಿನೋದದಿಂ ಸತಿವೆರಸಾ
ನಂದದೆ ಪಿರಿದಿರುತಿರೆ ಪಲ
ವುಂ ದಿವಸಂ ಪೋದ ಬಳಿಕ ಮತ್ತೊಂದುದಿನಂ ೫೯

ಕಂದ

ಸನ್ನಾನಾರ್ಥಂ ಗಂಗೆಗೆ ಗಿರಿ
ಜಾನಾಥಂ ಪೋಗುತಿರ್ದು ಕಟ್ಟಿದಿರೊಳ್ ಗಂ
ಗಾನದಿ ಕನ್ಯಾರೂಪಿಂ
ನಾನಾಳಂಕೃತ ಸಮೇತೆಯಾಗಿರೆ ಕಂಡಂ ೬೦

ವಚನ

ಅಂತು ಕಂಡು ನೀನಾರೆಂದು ಬೆಸಗೊಳೆ ನಾಂ ಗಂಗೆಯೆನೆ ನಿನಗೆ ವಲ್ಲಭನಾರೆನೆ ಯೆನಗಾರುಂ ವಲ್ಲಭರಿಲ್ಲದೆಯೆನಗೆ ತಕ್ಕ ವಲ್ಲಭನಂ ನೋಡುತ್ತುಂ ಬರುತಿರ್ದಪೆನೆನೆ ಅದೊಡಾನೀಶ್ವರಂ ತ್ರಿಜಗದ್ವಂದ್ಯನೆನಗೆ ನೀಂ ವಲ್ಲಭೆಯಾಗೆಂದು ಪಲವುಂತೆಱದ ವಚನರಚನೆಯಿಂದೊಡಂಬಡಿಸಿ ಮದುವೆಯಾಗಿ ತಾಮಿರ್ವರುಂ ಕ್ರೀಡಾವಿನೋದದಿಂದಿರ್ದಾಕೆಯನಲ್ಲಿಯೆಯಿರಿಸಿಯೀಗಳೇ ಬಪ್ಪೆನೆಂದು ಕೈಲಸಗಿರಿಯನೈದಿ ಗೌರಿಯೊಳ್ ಸಂಭೋಗಕೇಳಿಯಿಂದಿರ್ದು ಬಾರದೆ ತಡೆದಿರೆಯಾ ಜಾಹ್ನವಿಯಱಸುತ್ತುಂ ಪಿಂತನೆ ಬರೆ ಈಶ್ವರನಂ ಕಂಡು ನೋಡುತಿರೆ ಸಮೀಪಕ್ಕೆ ಬಂದು ನಿಂದಿರ್ದ ಜಾಹ್ನವಿಯಂ ಕಂಡು ಹೈಮವತಿಯಿಂತೆಂದಳ್

ಸಂಸ್ಕೃತ ಶಾರ್ದೂಲವಿಕ್ರೀಡಿತ

ಕಾ ತ್ವಂ ಸುಂದರಿ ಜಾಹ್ನವಿ ಕಿಮಿಹ ತೇ ಭರ್ತಾ ಹರೋ ನನ್ವಯಂ
ಅಂಭಸ್ತ್ವಂ ಕಿಲ ವೇತ್ಸಿ ಮನ್ಮಥರಸಂ ಜಾನಾತ್ಯಯಂ ತತ್‌ಪತಿಃ
ಸ್ವಾಮಿನ್ ಸತ್ಯಮಿದಂ ನ ಹಿ ಪ್ರಿಯತಮೇ ಸತ್ಯ ಕುತಃ ಕಾಮಿನಾ
ಮಿತ್ಯೇವಂ ಹರಜಾಹ್ನವಿ ಗಿರಿಸುತಾ ಸಂಜಲ್ಪನಂ ಪಾತು ವಃ || ೬೧

ವಚನ

ಅಂತೀಶ್ವರನುಂ ಗಂಗೆಯುಂ ಪಾರ್ವತಿಯುಂ ತಮ್ಮೊಳೋರೊರ್ವರ್ ಜಲ್ಪಿಸುತ್ತಿರೆ ಪಿರಿದುಂ ಗಿರಿಜೆ ಕೋಪಿಸಿ

ಗಾಹೆ

ತಾ ಗೌರಿ ದೋಷ ವಿಯಾ ಪಾಯೇ ಪಡಿಯೂಣ ಪರಮದೇವೇ
ಣಷೊಮಂ ಮಂದೆವು ಶಿವಂ ಪರಮಂ ಪಾಲಿಂಘ ವಿಳಯೇಣ ೬೨

ಕಂದ

ಅಂತತಿ ರೋಷದೊಳಗಜಾ
ಕಾಂತೆ ಕರಂ ಮುಳಿದು ಗಲ್ಲದೊಳ್ ಕೈಯಿಟ್ಟೋ
ರಂತಿರೆಯಿರುಳುಂ ಪಗಲುಂ
ಚಿಂತಿಸುತುಂ ತನ್ನ ಮನದೊಳಂದಿಂತೆಂದಳ್ ೬೩

ಶಾರ್ದೂಲವಿಕ್ರೀಡಿತ

ಸಂಧ್ಯಾರಾಗವತೀ ಸ್ವಭಾವ ಚಪಲಾ ಗಂಗಾ ದ್ವಿಜಿಹ್ವಃ ಫಣೀ
ಚಂದ್ರೋ ಲಾಂಛನವಕ್ರ ಏವ ಮಲಿನೋ ಜಾತ್ಯೈವ ಮೂರ್ಖೋ ವೃಷಃ
ಕಷ್ಟಂ ದುರ್ಜನಸಂಕುಲೇ ಪತಿಗೃಹೇ ವಾಸ್ತವ್ಯಮೇತತ್ಕಥಂ
ದೇವೀ ವ್ಯಸ್ತಕಪೋಲ ಪಾಣಿತಳಕಾ ಚಿಂತಾನ್ವಿತಾ ಪಾತು ವಃ ೬೪

ಕಂದ

ಅಂತುಮ್ಮಳಿಸುವ ಗಿರಿಜಾ
ಕಾಂತೆಯುಮಂ ರುದ್ರನರ್ಧದೇಹದೊಳೊಲವಿಂ
ದಂ ತಳೆದನೆಸೆವ ಗಂಗಾ
ಕಾಂತೆಯುಮಂ ತನ್ನ ಜಡೆಯ ನಡುವಿರಿಸಿಟ್ಟಂ ೬೫

ಮತ್ತೇಭವಿಕ್ರೀಡಿತ

ಅಳಿನೀಳಾಳಕಮಗ್ನಿಭಾಸುರ ಜಟಾಲೋಲೇಕ್ಷಮುಗ್ರೇಕ್ಷಣಂ
ತಿಲಕಾರ್ಧಂ ನಯನಾರ್ಧಮುನ್ನತಕುಚಂ ರಮ್ಯೋರುವಕ್ಷಸ್ಥಲಂ
ವಲಯಾಂಕಂ ಫಣಿಕಂಕಣಂ ಸುವಸನಂ ವ್ಯಾಘ್ರಾಜಿನಂ ಲೀಲಯಾ
ಲಲಿತಂ ಭೀಷಣಮರ್ಧನಾರಿಘಟಿತಂ ರೂಪಂ ಶಿವಂ ಪಾತುವಃ ೬೬

ವಚನ

ಅಂತು ಆರುಂ ಕೊಡದ ಕೊಳ್ಳದ ಗಂಗೆಯಂ ಸ್ವೀಕೃತಂ ಮಾಡಿ ಜಡೆಯ ನಡುವೆ ಮಡಗಿರಿಸಿಟ್ಟಂ ನಾವೊಲ್ದಿರಿಸಿದೊಡಾ ಛಾಯೆ ಕನ್ಯೆಯಂ ಬಿಡುವನಲ್ಲನೆನೆ ಕೇಳ್ದು ಡಿಂಡಿಭೆ ಮಾಂಡವ್ಯಂಗಿಂತೆಂದಳ್

ಕಂದ

ವನಜಜನ ಪೊರೆಯೊಳೀ ನಂ
ದನೆಯಂ ಸೈತಿರಿಸಲಕ್ಕುಮೆನೆ ಸತಿಗೆಂದಂ
ಮುನಿಮಾಂಡವ್ಯಂ ಪುಷ್ಕರ
ವನಜಭವಾಂಡಜಪುರಾಣಮಂ ಕೇಳ್ದಱಿಯಾ ೬೭

ವಚನ

ಎನಲಾ ಪುರಾಣಮಂ ಕೇಳ್ದಱಿದುದಿಲ್ಲದಱ ವೃತ್ತಾಂತಮಂ ತಿಳಿಯ ಪೇಳಿಮೆಂದು ಡಿಂಡಿಭೆ ಬೆಸಗೊಳೆ ಮಾಂಡವ್ಯ ಪೇಳ್ಗುಂ

ಕಂದ

ಭುವನಗಿರಿರಾಜಪುತ್ರಿಯ
ವಿವಾಹದೊಳ್ ಬ್ರಹ್ಮನೇ ಪುರೋಹಿತನಾಗಿ
ರ್ದವರನುಱೆ ಹೋಮಕುಂಡವ
ನವಯವದಿಂದಂ ಪ್ರದಕ್ಷಿಣಂ ಬರಿಸುತ್ತುಂ ೬೮

ವಚನ

ಅಂತು ಪ್ರದಕ್ಷಿಣಂ ಬರಿಸುತ್ತಂ ಪಾರ್ವತಿಯನೂನಮಾಗಿ ತೊಟ್ಟ ನವರತ್ನಖಚಿತ ದಿವ್ಯಾಭರಣಮಂ ಮೆಱೆಯೆ ನಿಱಿವಿಡಿದುಟ್ಟ ದೇವಾಂಗವಸ್ತ್ರಾಪಶಾಖೆಯಂ ತುಱುಂಬಿ ಮಿಱುಪ ಪರಿಮಳಮನುಗುಳ್ವ ಮಂದಾರಕುಸುಮದಾಮಂಗಳಿಂ ವಿಳಸಿತ ಮೆನಲಳವಡಿಕೆವಡೆದುದ್ವರ್ತನಂಗೆಯ್ದು ಯಕ್ಷಕರ್ದಮಂ ಸೊಗಯಿಸೆ ನಿಱಿಯಂ ಬಲಗೈಯಿಂ ಪಿಡಿದು ವಾಮಕರದಿಂ ಪತಿಯ ಬಲಗೈಯ ಕಿಱುವೆರಳಂ ಪಿಡಿದು ನಡೆವ ಗಾಡಿರೂಢಿವಡೆಯೆ ಸರ್ವಾಂಗ ಸೌಂದರತೆಯಿಂ ಸರೋಜಜಂ ನೋಳ್ಪಾಗಳ್

ಕಂದ

ಗಿರಿಜೆಯೊಳದೊಡೆಯ ಚೆಲ್ವಂ
ಪರಿಕಿಸಿ ಸರಸಿರುಹಸಂಭವಂ ಸೋಲ್ತು ಕರಂ
ಪರವಶನಾಗಲ್ ಕಳೆ ಸೋ
ರ್ದಿರದುಗೆ ಕಳಸದೊಳಗಲ್ಲಿ ಕಳಶಜನೊಗೆದಂ ೬೯

ಮಿಗೆಕಿಱಿದಿಂದ್ರಿಯವದು ಕೆಳ
ಗುಗೆ ವೃಷಭನ ಪಜ್ಜೆಯೊಂದರೊಳ್ ಮತ್ತದ ಱುಳ್
ನೆಗಳ್ದರ್ ವಾಲ್ಖಿಲ್ಯಾದಿ ಮು
ನಿಗಳೇಳ್ಕೋಟಿ ಪ್ರಸಿದ್ಧರಲ್ಲಿಂ ಬಳಿಕಂ ೭೦

ಪಿರಿದುಂ ಲಜ್ಜಿಸಿಯಲ್ಲಿಂ
ತೆರಳ್ದು ಪೋಪಲ್ಲಿಯೊಂದು ವಲ್ಮೀಕದ ಮೇ
ಲಿರದಿಂದ್ರಿಯವುಗೆಯದಱುಳ್
ನಿರುತಂ ವಾಲ್ಮೀಕಿಯೆಂಬ ಮುನಿಯುದಯಿಸಿದಂ ೭೧

ತಡೆದಿರದಲ್ಲಿಂ ಮುಂದಕೆ
ನಡೆಯುತ್ತಿರೆ ಭಸ್ಮದೊಳಗೆ ಕಿಱಿದಿಂದ್ರಿಯವೊ
ಕ್ಕೊಡೆಯದಱೊಳುದಯಿಸಿದನಾ
ಗಡೆ ಭೂರಿಶ್ರಮನೆನಿಪನೊರ್ವ ಸಮರ್ಥಂ ೭೨

ಮತ್ತಲ್ಲಿಂ ಮುಂದಕೆ ನಡೆ
ಯುತ್ತಿರ್ಪೆಡೆಯಲ್ಲಿ ಶಲ್ಯದೊಳ್ ಕಳೆ ಸೋರಲು
ಬಿತ್ತರದಿಂದದಱೊಳ್ ಭೂ
ಪೋತ್ತಮನೊಗೆದಂ ಪ್ರತಾಪಿ ಶಲ್ಯನೆನಿಪ್ಪಂ ೭೩

ಮುಂದೆ ನಡೆಯುತ್ತಿರಲ್ ಮ
ತ್ತೊಂದೆಡೆಯೊಳ್ ಕಿಱಿದು ಶುಕ್ಲಮುಗೆಯೂರ್ವಶಿಯಾ
ನಂದದೊಳೊಗೆದಳ್ ಮತ್ತದ
ಱಿಂದಂ ಮುಂದಣ್ಗೆ ಬೇಗದಿಂ ನಡೆಯುತ್ತಂ ೭೪

ನಿಡುಲಿಂಗಮನೆಡಗೈಯಿಂ
ಪಿಡಿದುಱೆ ನಡೆವಾಗಲಿಂದ್ರಿಯಂ ಮೇಗಣ್ಗಂ
ಸಿಡಿಯೆ ಖಗಮೊಂದು ನುಂಗಲ್
ಪೊಡವೀಶಂ ಶಕುನಿಯೆಂಬನುದಯಂಗೆಯ್ದಂ ೭೫

ಅಂತು ನಡೆಯುತ್ತುಮಿರಲೋ
ರಂತುದಯಿಸಿದರ್ ಪಲಂಬರವನಿಂದ್ರಿಯದಿಂ
ಮುಂತೊಂದು ಸರಸಿಯೆಡೆಯೊಳ
ದೆಂತುಂ ಲಿಂಗಮನೆ ಪಿಡಿದು ಪುಸಯಿಸಿ ಜಡಿಯಲ್ ೭೬

ಮಿಕ್ಕಿಂದ್ರಿಯಮುಂ ಪದ್ಮ ದೊ
ಳೊಕ್ಕೊಡೆ ಸಲೆ ಪದ್ಮೆಯೆಂಬ ಸುತೆಯುದಯಿಸಿದಳ್
ತಕ್ಕಳಿವಳೆನ್ನ ಸುರತಸು
ಖಕ್ಕೆನುತೆಂದವಳ ಕೈಯುಮಂ ಪಿಡಿಯಲೊಡಂ ೭೭

ವಚನ

ಅಂತು ಕೈಯಂ ಪಿಡಿದಾಕ್ಷಣದೊಳೆ ನವಯೌವನಪ್ರಾಪ್ತಿಯಾಗಿರೆ ಎಲೆ ಮಗಳೆ ಎನ್ನೊಳೊಲವಿಂ ಕೂಡೆನೆ ನೀಂ ಪಿತಂ ನಿನ್ನೊಳೆಂತು ಕೂಡಲಕ್ಕುಮೆನೆ ಪುತ್ತಾರ್ಥದಿಂತಾಯಿಯನಾದೊಡಂ ತಂಗಿಯನಾದೊಡಂ ಸೊಸೆಯನಾದೊಡಂ ಮಗಳನಾದೊಡಂ ಮತ್ತಮಾರನಾದೊಡಂ ಸಂತಾನಾಭಿವೃದ್ಧಿನಿಮಿತ್ತಂ ಕೂಡಿದೊಡೆ ದೋಷಮಿಲ್ಲೆಂದು ಪೇಳ್ದ ವೇದವಾಕ್ಯಕ್ರಮಮಂ ಕೇಳ್ದಱಿದುದಿಲ್ಲಕ್ಕುಮೆನೆ ನಾಂ ಕೇಳ್ದಱಿದುದಿಲ್ಲಾವೇದೋಕ್ತಕ್ರಮಮೆಂತು ಪೇಳಿಮೆಂದಾ ಕಾಂತೆ ಬೆಸಗೊಳೆ ಸರೋಜಸಂಭವನಿಂತೆಂದಂ –

ವೇದವಾಕ್ಯ

ಮಾತರಮುಪೈತಿ ಸ್ವಸಾರಮುಪೈತಿ ಪುತ್ರಾರ್ಥೀ
ನ ಚ ಕಾಮಾರ್ಥೀ ನಾಪುತ್ರಸ್ಯ ಲೋಕೋ ಸ್ತಿ
ತತ್ಸರ್ವಂ ಪಶವೋ ವಿದುಃ
ತಸ್ಮಾ ತ್ಪುತ್ರಾರ್ಥಂ ಮಾತರಂ ಸ್ವಸಾರಂ ಚಾಧಿರೋಹತಿ || ೭೮

ವಚನ

ಇಂತು ಕುಲಾಭಿವೃದ್ಧಿ ನಿಮಿತ್ತಮಾಗೆ ದೋಷಮಿಲ್ಲೆಂದು ಪಿರಿದುಂ ವಚನರಚನೆಯಿಂದೊಡಂಬಡಿಸಿ ತವಚಿತ್ತೇ ಮಮಚಿತ್ತಂ ಸಂದಧಾಮಿ ತವ ಹೃದಯೇ ಮಮಹೃದಯಂ ಸಂದಧಾಮಿ ತವಸ್ಥೇಷು ಮಮ ಅಸ್ಥೀನಿ ಸಂದಧಾಮಿ ತವ ಪ್ರಾಣೇ ಮಮಪ್ರಾಣಂ ಸಂದಧಾಮಿಸ್ವಾಹಾಯೆಂದು ಮಂತ್ರಮನುಚ್ಚರಿಸಿಯಾ ಚೆನ್ನೆಯಪ್ಪ ಕನ್ನೆಯಂ ವಶೀಕರಣಮಂ ಮಾಡಿಕೊಂಡು ದಿವ್ಯಷಣ್ಮಾಸಂ ಸುರತಸುಖಾ – ಮೃತಾರ್ಣವದೊಳೋಲಾಡುತಂ ತನ್ನಂ ತಾನಱಿಯದೆ ಕುಱಿ ಬಾಳೆಯಹಣ್ಣಂ ಮೆಚ್ಚಿದಂತೆಯಾಸಕ್ತಚಿತ್ತನಾಗಿ ಕೂಡಿರ್ಪುದಂ ಸರ್ವಗೀರ್ವಾಣರಱಿದೆಲ್ಲರುಂ ನೆಱೆದಂಭೋರುಹಗರ್ಭಂ ನಿಕೃಷ್ಟಂ ಪೊಲ್ಲಮೆಯಂ ಮಾಡಿದನೆಂದು ಪಿರಿದುಂ ದೂಷಿಸಿ ಗಂಧರ್ವರಂ ಕಱೆದು ನೀಮಜನ ಸಂಭೋಗಮಂ ಕಿಡಿಸಿಮೆನೆಯಾಗಲೆಂದು ಕೈಕೊಂಡು ಸುರತಗೃಹಕ್ಕೆಯ್ದೆ

ಕಂದ

ಅಬ್ಬರಿಸಿ ಬೊಬ್ಬೆಯಂ ಕೊ
ಟ್ಟೆಬ್ಬಿಸಿದೊಡೆ ಶಾಪಮೀಗುಮೀತನೆನುತ್ತಂ
ಬೆಬ್ಬಳಗೊಳುತುಂ ಬ್ರಹ್ಮನ
ನೆಬ್ಬಿಸಲನುಮಾನಮಂ ಮನಸ್ಸಿಂ ಬಗೆದರ್ ೭೯

ಹಾಡಿದೊಡೆ ಸುರತಸುಖಮಂ
ನಾಡೆ ಕರಂ ಮಾಣ್ಗುಮೆಂದು ಗೀತಮನೊಂದಂ
ಮಾಡಿ ಮನೋಮುದದಿಂದಂ
ಪಾಡಿದರಾ ಗೀತಮೆಂತೆನಲ್ಕೇಪೇಳ್ವೆಂ ೮೦

ಶ್ಲೋಕ

ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ |
ಭರ್ಗೋ ದೇವಸ್ಯ ಧೀಮಹಿ ಧಿಯೊಯೋನಃಪ್ರಚೋದಯಾತ್ || ೮೧

ವಚನ

ಎಂದು ಮಾಡಿದ ಗೀತಕ್ಕೆ ಗಾಯತ್ರಿಯೆಂದು ಪೆಸರನಿಟ್ಟು ಪಾಡೆ ಕೇಳ್ದು ಕರಂ ಲಜ್ಜಿಸಿ ಸುರತಮಂ ಮಾಣ್ದು ವನಿತೆಗೆ ಗರ್ಭಮಾದುದನಱಿದು ತನ್ನ ಮನದೊಳ್ ಪೂರ್ವೋಕ್ತಮಂ ನೆನೆದನದೆಂತೆನೆ

ಶ್ಲೋಕ

ಪುಸ್ತಕಪ್ರತ್ಯಯಾಯದ್ಗೀತಂ ಯದ್ಗೀತಂ ಗುರುಸನ್ನಿಧೌ
ನ ಶೋಭತೇ ಸಭಾಮಧ್ಯೇ ಜಾರಗರ್ಭ ಇವ ಸ್ತ್ರೀಯಃ ೮೨

ವಚನ

ಎಂಬುದಱಿಂ ಲೋಕಾಪವಾದಮಕ್ಕುಮೆಂದಂಜಿ ತನ್ನ ಲಿಂಗದಿಂದಾಕೆಯುದರದ ಗರ್ಭಮನಾಕರ್ಷಿಸಿ ತನ್ನಂಡದೊಳ್ ತಳೆಯೆ ಅಂದಿಂದಂಡವಾತವೆಂದಾದುದಾ ಸುರತಗೃಹಮಂ ಪೊಱಮಟ್ಟುಸ್ಮರವಿಕಾರಂ ಪಿಂಗದೆ ಲೋಕಭ್ರಮಣೆಯಿಂ ಬರುತ್ತೆ

ಚಂಪಕಮಾಲೆ

ಸುರಪುರಕೈದಿ ರಂಭೆಮೊದಲಾದ ಸುರಾಂಗನೆಯರ್ಕಳಂ ನಿರಂ
ತರದೊಳೆ ನೋಡಿ ಸೋಲ್ತು ನೆರೆಯಲ್ಕನುವಿಲ್ಲದೆ ಚಿಂತಿಸುತ್ತೆ ನಾ
ನೆರೆಯೆ ಕಳತ್ರದಾನಮುಮನೀಯರಿದರ್ಕನುವೇನೆನುತ್ತೆ ತಾಂ
ಪರಿಕಿಸಿ ಪದ್ಮಸೂನು ನೆನೆದಂ ತಪದಿಂದಮೆ ಸಾಧ್ಯಮೆಂಬುದಂ ೮೩

ಶ್ಲೋಕ

ಯದ್ದೂರಂ ಯದ್ದುರಾರಾಧ್ಯಂ ಯಚ್ಚ ದೂರೇ ವ್ಯವಸ್ಥಿತಂ |
ತತ್ಸರ್ವಂ ತಪಸಾ ಸಾಧ್ಯಂ ತಪೋ ಹಿ ದುರತಿಕ್ರಮಂ || ೮೪

ವಚನ

ಎಂದಾವುದೊಂದಾನುಮೊಂದು ಕಾರ‍್ಯಂ ಸಾಧ್ಯಮಾಗದೊಡೆ ತಪಸಿಂ ಸಾಧ್ಯಂಮಾಡಿ ಕೊಳ್ವುದುಂ ತಪದಿಂ ಸಾಧ್ಯಮಾಗದ ಕಾರ್ಯಮಿಲ್ಲೆಂದು ತನ್ನ ಮನದೊಳೆ ನಿಶ್ಚಯಿಸಿ

ಕಂದ

ತಪದುನ್ನತಿಯಿಂ ಸುರರಾ
ಜಪದವಿಯಂ ಪಡೆದು ದೇವಕಾಂತೆಯರೊಳ್ ಭೋ
ಗಿಪೆನೆಂದು ಬೊಮ್ಮನಾಂತಂ
ತಪಮಂ ಮೂಱುವರೆ ದಿವ್ಯಸಾವಿರಯುಗಮಂ ೮೫

ವಚನ

ಅಂತು ತಪಂಬಡುತ್ತಿರೆ ಯಿಂದ್ರನಱದು ಚಿಂತಾಕ್ರಾಂತನಾಗಿರೆ ಬೃಹಸ್ಪತಿ ಕಂಡಿದೇಕೆ ಚಿಂತಿಸುತಿರ್ಪೆಯೆನೆ ಬ್ರಹ್ಮನೆನ್ನ ಪದವಿಯಂ ಪಡೆಯಲೆಂದು ತಪಂಬಡುತಿರ್ಪನೆಂಬುದರ್ಕೆ ಚಿಂತಿಸುತಿರ್ದಪೆನೆನೆ ಸುರೇಜ್ಯನಿಂತೆಂದಂ

ವಸಂತತಿಲಕಂ

ತಾವತ್ತಪೋವಪುಷಿಚೇತಸಿ ತತ್ತ್ವಚಿಂತಾ
ಕಾಮಂ ಹೃಷೀಕ ವಿಜಯಃ ಪರಮಶ್ಯಮಶ್ಚ
ಯಾವನ್ನ ಪಶ್ಯತಿ ಮುಖಂ ಮೃಗಲೋಚನಾನಾಂ
ಶೃಂಗಾರವೃತ್ತಿಭಿರುದಾಹೃತ ಕಾಮಸೂತ್ರಂ ೮೬

ಕಂದ

ತರುಣಿಯರೆ ತಪೋಗ್ರತೆಯಂ
ಪರಿಹರಿಸುವುದಕ್ಕೆ ಕಾರಣಂ ಕೇಳೆಂದಾ
ಸುರಮಂತ್ರಿ ಪೇಳೆ ಕೇಳ್ದಾ
ಸುರಪಂ ತತ್ಕ್ರಮದೆ ಕಿಡಿಸುವನುವಂ ಬಗೆದಂ ೮೭

ಚಂಪಕಮಾಲೆ

ಸತಿಯರೊಳೆಳ್ಳನಿತ್ತನಿತು ಚೆಲ್ವುಮನುಳ್ಳೆಡೆಯಲ್ಲಿ ಕೊಂಡು ರೂ
ಪತಿಶಯವಪ್ಪಿನಂ ಪಡೆದು ಮಾಡಿ ತಿಲೋತ್ತಮೆಯೆಂಬ ನಾಮವ
ನ್ವಿತಮೆನಲಿಟ್ಟು ಬ್ರಹ್ಮನ ತಪಂ ಕಿಡುವಂತಿರೆ ಮಾಳ್ಪುದೆಂದು ತಾಂ
ಶತಮಖನೆಂದೊಡಾಕೆ ಪರಿದೆಯ್ದಿದಳಬ್ಜಜನಿರ್ದ ತಾಣಮಂ ೮೮

ಕಂದ

ಅಂತೆಯ್ದಿಯಬ್ಜಗರ್ಭನ
ಮುಂತಿದಿರೊಳ್ ನಿಂದು ನೋಡಿ ಕಣ್ದೆಱೆಸುವೆನಾ
ನೆಂತೆಂದು ತನ್ನ ಮನದೊಳ್
ಚಿಂತಿಸುತಿರ್ದೊಂದುಪಾಯಮಂ ನೆಱೆ ಬಗೆದಳ್ ೮೯