(ಮೊದಲ ಸಂಖ್ಯೆ ಆಶ್ವಾಸವನ್ನೂ, ಎರಡನೆಯ ಸಂಖ್ಯೆ ಪದ್ಯವನ್ನೂ ಸೂಚಿಸುತ್ತದೆ)

ಅಘಾತಿಕರ್ಮ: ಕರ್ಮಗಳಲ್ಲಿ ಘಾತಿ, ಅಘಾತಿ ಎಂದು ಎರಡು ಬಗೆ. ಜೀವಕ್ಕೆ ಸಹಜವಾಗಿರುವ ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಅನಂತಸುಖ ಎಂಬ ನಾಲ್ಕು ಅನಂತಗುಣಗಳಿಗೆ ಘಾತಿಕರ್ಮಗಳೆಂದು ಹೆಸರು. ಹಾಗೆ ಘಾತಿಯುಂಟುಮಾಡೂವ ಕರ್ಮಗಳು ಅಘಾತಿಕರ್ಮಗಳು. (೧೦ – ೩೦ ವ)

ಅಣು ವ್ರತ : ಶ್ರಾವಕರು ಆಚರಿಸುವ ಪ್ರಸಿದ್ಧ ಐದು ವ್ರತಗಳು, ಅವನ್ನು ಸಂನ್ಯಾಸಿಗಳಂತೆ ಸಂಕಲ್ಪಪೂರ್ವಕವಾಗಿ ಬಹುಸೂಕ್ಷ್ಮವಾಗಿ ಆಚರಿಸದೆ ಸ್ಥೂಲವಾಗಿ ಆಚರಿಸುವ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. (೧೦ – ೫೫)

ಅವಸರ್ಪಿಣಿಕಾಲ : ಕಾಲವನ್ನು ಸಾಮಾನ್ಯವಾಗಿ ಸಮಯ, ನಿಮಿಷ, ಮಾಸ, ವರ್ಷ ಮೊದಲಾಗಿ ಪರಿಗಣಿಸಲಾಗಿದೆ. ಆದರೆ ಅನಂತವಾದ ಕಾಲವನ್ನು ಹೀಗೆ ಪರಿಗಣಿಸಲಾಗುವುದಿಲ್ಲ. ಈ ಅನಂತಕಾಲವನ್ನು ಅಸಂಖ್ಯ ಕಲ್ಪಗಳಾಗಿ ವಿಭಾಗಿಸುತ್ತಾರೆ. ಒಂದೊಂದು ಕಲ್ಪಗಳಲ್ಲಿಯೂ ಉತ್ಸರ್ಪಿಣಿ, ಅವಸರ್ಪಿಣಿ ಎಂದು ಎರಡು ಭೇದ. ಉತ್ಸರ್ಪಿಣಿ ಕಾಲದಲ್ಲಿ ಧರ್ಮ, ಸತ್ಯ, ನ್ಯಾಯ, ಜನರ ಆಯುಸ್ಸು, ಸುಖ ಮುಂತಾದವು ಕ್ರ ಕ್ರಮವಾಗಿ ಹೆಚ್ಚುತ್ತ ಹೋಗುತ್ತವೆ. ಅವಸರ್ಪಿಣಿಯಲ್ಲಿ ಅವು ಕ್ರಮಕ್ರಮವಾಗಿ ಕಡಮೆಯಾಗುತ್ತ ಬಂದು ಕಡೆಗೆ ಅಧರ್ಮ ಅನ್ಯಾಯಾದಿಗಳು ತಾವೇ ತಾವಾಗುತ್ತವೆ. ಈ ಉಳಿಗಾಲಕ್ಕೆ ಅವಸರ್ಪಿಣಿಕಾಲವೆಂದು ಹೆಸರು. (೮ – ೨೪ವ)

ಆಸನ್ನಭವ್ಯ : ಸಮ್ಯಕ್ತ ದೊರೆಯುವ ಸಂಭವ ಬೇಗ ಬರುವುದಾದರೆ ಆ ಜೀವ ಆಸನ್ನಭವ್ಯ. (೧೦ – ೨೧ವ)

ಉತ್ಸರ್ಪಿಣಿ : ಅವಸರ್ಪಿಣಿಕಾಲ ನೋಡು (೮ – ೨೪ವ)

ಗುಣವ್ರತಗಳು : ಶ್ರಾವಕರು ಆಚರಿಸಬೇಕಾದ ಐದು ಅಣುವ್ರತಗಳಲ್ಲದೆ ಇನ್ನೂ ಕೆಲವು ವ್ರತಗಳಿವೆ. ಅವುಗಳಲ್ಲಿ ದಿಗ್ವ್ರತ, ದೇಶವ್ರತ, ಅನರ್ಥದಂಡ ವ್ರತಗಳೆಂದು ಮೂರು ಬಗೆ. ಈ ಮೂರು ವ್ರತಗಳ ಅಭ್ಯಾಸದಿಂದ ಮೂಲ ವ್ರತಗಳ ಗುಣಗಳ ವೃದ್ಧಿಯಾಗುತ್ತದೆ. ಅದರಿಂದ ಇವುಗಳಿಗೆ ಗುಣವ್ರತಗಳೆದು ಹೆಸರಿಸಲಾಗಿದೆ. (೧೦ – ೫೬)

ಗುರುಮೂಢತೆ : ಪಾಖಂಡಿಯೂ ನೀಚ ಆಚರಣೆಯನ್ನು ಮಾಡುವವನೂ ಪರಿಗ್ರಹ, ಲೋಭ, ವಿಷಯವಾಸನೆಗಳುಳ್ಳವನಿಗೆ ಗುರುವನೆಂದು ಮನ್ನಿಸುವುದಕ್ಕೆ ಗುರುಮೂಢತೆ ಎನ್ನುವರು.

ಚತುರ್ವಿಂಶತಿ ತೀರ್ಥಂಕರರು : ಇಪ್ಪತ್ತು ನಾಲ್ಕು ಜನ ತೀರ್ಥಂಕರರು. ಅವರು ಋಷಭ, ಅಜಿತ, ಶಂಭವ, ಅಭಿನಂದನ, ಸುಮತಿ, ಪದ್ಮಪ್ರಭ, ಸುಪಾರ್ಶ್ವ, ಚಂದ್ರ ಪ್ರಭ, ಪುಷ್ಪದಂತ, ಶೀತಲ, ಶ್ರೇಯಾಂಸ, ವಾಸುಪೂಜ್ಯ, ವಿಮಲ, ಅನಂತ, ಧರ್ಮನಾಥ, ಶಾಂತಿನಾಥ, ಕುಂಥನಾಥ, ಅರ್ಹನಾಥ, ಮಲ್ಲಿನಾಥ, ಮುನಿಸುವ್ರತ, ನಮಿನಾಥ, ನೇಮಿನಾಥ, ಪಾರ್ಶ್ವ, ವರ್ಧಮಾನ. (೮ – ೨೪ವ)

ದುಃಸ್ಸಮ : ಅವಸರ್ಪಿಣೀಕಾಲದ ಐದನೆಯ ಭಾಗ. (೮ – ೨೪ವ)

ದುಸ್ಸಮಸುಷಮ : ಅವಸರ್ಪಿಣೀಕಾಲದ ನಾಲ್ಕನೆಯ ಭಾಗ. (೮ – ೨೫ವ)

ದೇವಮೂಢತೆ : ದೇವ ಕುಲದೇವಗಳ ವಿಚಾರಮಾಡದೆ ಕಾಮ, ಕ್ರೋಧ, ಶಸ್ತ್ರಗಳನ್ನು ಧರಿಸಿದಂಥ ಈಶ್ವರ ದೇವ ದೇವತೆಗಳನ್ನು ಪೂಜಿಸುವುದು ದೇವಮೂಢತೆಯಾಗಿದೆ. ಎಲ್ಲವೂ ಈಶ್ವರನ ಇಚ್ಛೆಗ ಸ್ವಾಧೀನವಾಗಿದೆ. ಒಳಿತು ಕೆಡಕುಗಳ ಪ್ರೇರಣೆಯೂ ಅವನದೇ ಆಗಿದೆ ಎಂದು ತಿಳಿದು ವರ್ತಿಸುವುದು ದೇವಮೂಢತೆ ಎನ್ನಿಸುವುದು. (೧೦ – ೨೬)

ದ್ವಾದಶಾಂಗ : ಪವಿತ್ರವಾದ ಹನ್ನೆರಡು ಜೈನಶಾಸ್ತ್ರಗಳು.

ನವಬಲದೇವರು : ವಿಜಯ, ಅಚಲ, ಸುಧರ್ಮ, ಸುಪ್ರಭ, ಸುದರ್ಶನ, ನಂದಿ, ನಂದಿಮಿತ್ರ, ರಾಮ, ಪದ್ಮ. (೮ – ೨೪ವ)

ನವವಾಸುದೇವರು : ಒಂಬತ್ತು ಜನ ಕೇಶವರು, ತ್ರಿಪೃಷ್ಠ, ದ್ವಿಪೃಷ್ಠ, ಸ್ವಯಂಭು, ಪುರುಷೋತ್ತಮ, ನರಸಿಂಹ, ಪುಂಡರೀಕ, ದತ್ತೇವ, ಲಕ್ಷ್ಮಣ, ಕೃಷ್ಣ (೮ – ೨೪ವ)

ಪಂಚಪರಮೇಷ್ಠಿ : ಜೈನರು ಪೂಜಿಸುವ, ಪ್ರಾರ್ಥಿಸುವ ಐವರು ಪರಮೇಷ್ಠಿಗಳು ಇವರು. ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧು. (೧ – ೬)

ಪುದ್ಗಲ : ತತ್ತ್ವಾರ್ಥಸೂತ್ರದಲ್ಲಿ ಪುದ್ಗಲಕ್ಕೆ ಸ್ಪರ್ಶ, ರಸ, ಗಂಧ, ವರ್ಣಗಳುಂಟೆಂದು ಹೇಳುತ್ತಾರೆ. ನಾಲ್ಕು ಗುಣಗಲು ಪ್ರತಿಯೊಂದು ಪುದ್ಗಲಾಣುಗಳಲ್ಲಿ ಸೂಕ್ಷ್ಮ ಸ್ಥೂಲ ರೂಪಗಳಲ್ಲಿ ನೋಡಲು ಸಿಕ್ಕುತ್ತವೆ. ಈನಾಲ್ಕು ಪದಾರ್ಥಗಳು ಧರ್ಮಗಳಿದ್ದಂತೆ. ಯಾವ ಪದಾರ್ಥಗಳಲ್ಲಿಯೂ ಒಂದೆರಡು ಮೂರು ಗುಣಗಳಷ್ಟೇ ಇರಲಾರವು. ಎಲ್ಲವೂ ಇರತಕ್ಕುವೇ: ಇದ್ದರೇನೇ ಅದು ಪುದ್ಗಲವು.

ಪ್ರತಿಮಾಯೋಗ : ಆಹಾರ ತ್ಯಾಗಮಾಡಿ ಒಂದು ವರ್ಷದವರೆಗೆ ಒಂದೇ ಸ್ಥಳದಲ್ಲಿ ನಿಂತುಕೊಂಡು ತಪಸ್ಸನ್ನು ಮಾಡುವುದು. ಇದರಲ್ಲಿ ಅಭ್ರಾವಕಾಶ ಯೋಗ, ಅತಾಪನಯೋಗ, ವರ್ಷಾಯೋಗವೆಂದು ಮೂರು ಬಗೆ. (೧ – ೮೫ವ)

ಭವ್ಯ : ಯಾವ ಜೀವಕ್ಕೆ ಸಿದ್ಧಸ್ಥಿತಿಗೆ ಏರುವ ಯೋಗ್ಯತೆ ಇರುವುದೋ ಆ ಜೀವಕ್ಕೆ ಭವ್ಯವೆನ್ನುವರು. ಉಳಿದ ಜೀವಿಗಳು ಅಭವ್ಯರು. (೧ – ೮೫ವ)

ಲೋಕಮೂಢತೆ : ಇದರಲ್ಲಿ ಅನೇಕ ಸಂಗತಿಗಳಿವೆ. ಗಂಗಾನದಿ ಪವಿತ್ರವೆಂದು ತಿಳಿಯುವುದು. ಅದರಲ್ಲಿ ಸತ್ತ ಮನುಷ್ಯನ ಮೂಳೆಂಯನ್ನು ಮುಳುಗಿಸುವುದರಿಂದ ಸದ್ಗತಿಯಾಗುತ್ತದೆಯೆಂದು ಹೇಳುವುದು; ಮರಣ ಹೊಂದಿದ ಪುರುಷನ ಸಂಗಡ ಹೆಂಡತಿ ಸತಿಹೋಗುವುದರಲ್ಲಿ ಪಾವಿತ್ರ್ಯವಿದೆ ಎನ್ನುವುದು; ಗ್ರಹಗಳ ಪೀಡೆ ದೂರಾಗೂವುದೆಂದು ತಾಯಿತ ಮಾಡಿ ಮಕ್ಕಳ ಕರಳಲ್ಲಿ ಹಾಕುವುದು, ಬಾವಿ, ಕೆರೆ, ಹೊಸ್ತಿಲು, ಒನಕೆಗಳನ್ನು ಪೂಜಿಸುವುದು, ದೇವರ ಹೆಸರಿನಲ್ಲಿ ಜಡೆಬಿಡುವುದು, ದೇವರ ಹೆಸರಿನಲ್ಲಿ ಛತ್ರ, ಚಾಮರ, ದೇವಾಲಯಗಳನ್ನು ಸಮರ್ಪಿಸಿ ಕೊಡುವುದು, ಜಾಗರಣೆ ಮಾಡುವುದು, ಹಸು, ಅನ್ನ, ಶಸ್ತ್ರ, ಗಿಡ, ಅಗ್ನಿ ಇವುಗಳನ್ನು ಪೂಜಿಸುವುದು ಇವೆಲ್ಲವೂ ಲೋಕ ಮೂಢತೆಗಳು. (೧೦ – ೨೨ವ)

ಶಿಕ್ಷಾವ್ರತಗಳು : ಇವು ನಾಲ್ಕು ಬಗೆ. ೧) ಸಂಧ್ಯಾ ೨) ಪ್ರೋಷಧೋಪವಾಸ, ೩) ಭೊಗೋಪಭೋಗಪರಿಣಾಮ ೪) ಅತಿಥಿಸಂವಿಭಾಗವ್ರತ. ಇವುಗಳನ್ನು ಶ್ರಾವಕನು ಆಚರಿಸುತ್ತಾನೆ. ಇವುಗಳಿಂದ ಶ್ರಾವಕನಿಗೆ ಧಾರ್ಮಿಕಜೀವನದ ಶಿಕ್ಷಣ ಮತ್ತು ಅಭ್ಯಾಸವಾಗುತ್ತದೆ. (೧೦ – ೫೯)

ಶ್ರಾವಕ : ಜೈನ ಗೃಹಸ್ಥ (೧೦ – ೪೮ವ)

ಶ್ರುತಕೇವಲಿ : ಕೇವಲಿಗಳಲ್ಲಿ ಒಂದು ಪಂಗಡ ಘಾತಿಕರ್ಮಗಳನ್ನು ನಾಶಮಾಡಿ ಸಂಪೂರ್ಣ ಜ್ಞಾನವನ್ನು ಪಡೆದು ಸರ್ವಾಗಮ ಶಾಸ್ತ್ರಗಳನ್ನೂ ಆಮೂಲಾಗ್ರವಾಗಿ ತಿಳಿದವನು. (೧ – ೧೦)

ಸಂಯಮ: ಅಹಿಂಸಾ, ಅಚೌರ್ಯ, ಸತ್ಯ, ಶೀಲ (ಬ್ರಹ್ಮಚರ್ಯ) ಅಪರಿ ಗ್ರಹ ಈ ಐದು ಮಹಾವ್ರತಗಳನ್ನು ಪಾಲಿಸುವುದು. ಈರ್ಷಾ, ಭಾಷಾ, ಏಷಣಾ, ಆದಾನ, ನಿಕ್ಷೇಪಣ, ಉತ್ಸರ್ಗ ಈ ಐದು ಸಮಿತಿಗಳನ್ನು ಪಾಲಿಸುವುದು. ನಾಲ್ಕು ಪ್ರಕಾರಗಳ ಕಷಾಯಗಳನ್ನು ನಿಗ್ರಹಿಸುವುದು. ಮನ, ವಚನ, ಕಾಯ, ರೂಪ ಈ ದಂಡಗಳನ್ನು ತ್ಯಜಿಸುವುದು. ಐದು ಇಂದ್ರಿಯಗಳನ್ನು ಗೆಲ್ಲುವುದು ಇದಕ್ಕೆ ಸಂಯಮವೆನ್ನುವರು. (೧ – ೮೫)

ಸಮವಸರಣ : ತೀರ್ಥಂಕರನ ಧರ್ಮಬೋಧೆಗೆ ಅನುಕೂಲಿಸುವಂತೆ ಕುಬೇರನು ಸಮವಸರಣ ಮಂಟಪವನ್ನು ನಿರ್ಮಿಸುತ್ತಾನೆ. ಈ ಸಮವಸರಣದಲ್ಲಿ ಮನುಷ್ಯರೂ ದೇವತೆಗಳೂ ಸಮಸ್ತ ಪ್ರಾಣಿಗಳೂ ನೆರೆದು ತೀರ್ಥಂಕರನ ದಿವ್ಯ ಬೋಧನೆಗಳನ್ನು ಕೇಳುತ್ತಾರೆ. (೧ – ೮೭ವ)

ಸಮಾಧಿಮರಣ : ಆತ್ಮನ ಅಮರತ್ವನ್ನು ಒಪ್ಪುವ ಸಾಧಕನು ಮರಣಕ್ಕೆ ಹೆದರಲಾರನು. ಅವನು ಮರಣವೊಂದು ಮಹಾಯಾತ್ರೆಯೆಂದು ಭಾವಿಸುವನು. ಅವನಲ್ಲಿ ನಿರ್ಭೀತಿ, ವೀರತ್ವಗಳು ಪ್ರಾಮುಖ್ಯವಾಗಿ ಕಂಡುಬರುತ್ತವೆ. ಸಾಧಕನು ರಾಗ, ದ್ವೇಷ, ಕ್ರೋಧ, ಮಾನ, ಮಾಯಾ, ಲೋಭಗಳನ್ನು ತ್ಯಜಿಸಿ ಶುದ್ಧ ಅಹಿಂಸಾತ್ಮಕ ವೃತ್ತಿಗಳನ್ನು ಪಾಲಿಸುತ್ತ ಸಾಮಾಧಿಮರಣವನ್ನು ಹೊಂದುತ್ತಾನೆ.

ಸಮ್ಯಕ್ತ್ವ : ಆರು ದ್ರವ್ಯ, ಐದು ಅಸ್ತಿಕಾಯ, ಒಂಬತ್ತು ಪದಾರ್ಥಗಳ ಬಗ್ಗೆ ಜಿನೇಂದ್ರರು ಹೇಳಿದಂತೆ ತಿಳಿವಳಿಕೆಯನ್ನು ಇಟ್ಟುಕೊಳ್ಳುವುದಕ್ಕೆ ಸಮ್ಯಕ್ತ್ವವೆಂದು ಹೆಸರು. ಸತ್ಯಸ್ವರೂಪದ ಮೇಲೆ ಶ್ರದ್ದೆಯಿಡುವುದೇ ಸಮ್ಯಕ್ತ್ವವೆನಿಸುವುದು. (೧೦ – ೩೩ವ)

ಸಮ್ಯಗ್ದರ್ಶನ : ಮೋಕ್ಷವನ್ನು ಪಡೆಯಲು ಸಾಧನವಾದ ದೃಢವಾದ ನಂಬಿಕೆ. ಜೀವ ಮೊದಲಾದ ನವತತ್ತ್ವಗಳಲ್ಲಿ ಶ್ರದ್ಧೆಯಿಡುವುದು. ಈ ಬಗೆಯಾದ ಸರಿಯಾದ ನಂಬಿಕೆಯೇ ಸಮ್ಯಗ್ದರ್ಶನ. (೧೦ – ೪೦)

ಸಮ್ಯಗ್ದೃಷ್ಟಿ : ತೀರ್ಥಕರರಲ್ಲಿಯೂ ಅವರು ಬೆಳಗಿಸುವ ಆಗಮಗಳಲ್ಲಿಯೂ ಗುರುಗಳಲ್ಲಿಯೂ ಪೂರ್ಣವಾದ ನಂಬಿಕೆಯಿಡುವುದು, ಮೋಕ್ಷವನ್ನು ಪಡೆಯಲು ಸಾಧನವಾದ ನಂಬಿಕೆ, ಶ್ರದ್ಧೆ. (೧೦ – ೬೪)

ಸಾಗರೋಪಮಕಾಲ : ಜೈನರಲ್ಲಿ ಜೀವ ಬದುಕುವ ಒಂದು ಕಾಲ ವಿಭಾಗ.

ಹೋಸವ್ರತ : ರಾತ್ರಿಯಲ್ಲಿ ಊಟಮಾಡದೇ ಇರುವುದು. (೧೦ – ೬೨ವ)