ಉತ್ಪಲಮಾಲೆ

ಆ ವಧು ಠಾಯೆ ಬಾಗು ಮುಹಚಾಳೆಯಮಂ ನೆಱೆ ಮಾಡಿ ತೋಡಿ ವೇ
ಳಾವಳಿ ದೇಶಿ ಗುಜ್ಜರಿ ವರಾಳಿಗಳಿಂದಮೆ ನಾಡೆಪಾಡುತುಂ
ಭಾವವನೂನ ರೇಖೆ ಗತಿ ರೀತಿ ಪಯಂ ತಿರಿಪೋಜೆ ಜಾತಿ ನಾ
ನಾವಿಧಿ ಚಾಳೆಯಂ ಮೆಱೆಯೆ ನರ್ತಿಸೆ ನೋಡಿದನಬ್ಜಸಂಭವಂ ೯೦

ಕಂದ

ಅಂತೆವೆಯಿಕ್ಕದೆ ನೋಡ
ಲ್ಕಾಂತೆಯವಂ ಸೋಲ್ತನೆಂದು ಪರಿಕಿಸಲಲ್ಲಿಂ
ದಂ ತಿರುಗಿ ಬಲದ ದೆಸೆಗಿರ
ದೆಂತುಂ ಭರದಿಂದೆ ಬಂದು ನರ್ತಿಸುತಿರ್ದಳ್ ೯೧

ಈಕೆಯನೆ ತಿರುಗಿ ನೋಡ
ಲ್ಕೇಕರಗಣ ಯತಿಗಳೈದೆ ನಗುಗುಂ ಪಿರಿದುಂ
ಲೋಕಾಪವಾದಮೆಂದಱಿ
ದಾ ಕಮಳಜನೊಂದುಪಾಯಮಂ ಚಿಂತಿಸಿದಂ ೯೨

ಚಲಿಸದೆ ಮುನ್ನಂ ತಪಮಂ
ತಳೆದಂ ಮೂಱುವರೆಸಾವಿರಬ್ದಂ ಮತ್ತಾ
ಫಲದೊಳ್ ಸಾಸಿರಬರಿಸದ
ಫಲಕ್ಕೆ ಮುಖಮೊಂದು ಬಲದೊಳುದಯಿಸಲೆಂದಂ ೯೩

ಎನೆಬಲದೊಳ್ ಜನಿಯಿಸಿದಾ
ನನದಿಂ ನೋಡುತ್ತಿರಲ್ಕೆ ಪಿಂತಣದೆಸೆಗಾ
ವನಿತೆ ಬರೆ ಮುನ್ನಿನಂದದೆ
ವನಜಜನಾ ದೆಸೆಯೊಳೊಂದು ಮುಖಮಂ ಪಡೆದಂ ೯೪

ಆ ವದನದೊಳೀಕ್ಷಿಸುತಿರೆ
ಯಾ ವಧುವಲ್ಲಿಂ ತೆರಳ್ದು ವಾಮಕ್ಕೆ ಬರ
ಲ್ಕಾವನಜಜನೀಕ್ಷಿಸಲೆಂ
ದೋವದೆ ಮುನ್ನಿನವೊಲಲ್ಲಿ ಮುಖಮಂ ಪಡೆದಂ ೯೫

ವಚನ

ಅಂತು ಪಡೆದಾನನದಿಂದೀಕ್ಷಿಸುತ್ತಿರೆಯಾಕೆ ಗಗನತಳಕ್ಕೊಗೆದು ಮಸ್ತಕಾಗ್ರದೊಳ್ ನರ್ತಿಸುತ್ತಿರೆ ನೋಡಲುಂ ಕಾಣದೆ ಉಳಿದೈನೂಱುವರುಷದ ತಪದ ಫಲಕ್ಕೆ ತಕ್ಕಮುಖಂ ಜನಿಯಿಸೆಯಾ ಮುಖಂ ಶಿರದೊಳ್ ಪುಟ್ಟಲಿಯೆಂದು ನೆನೆಯೆಯಲ್ಲಿಯೊಂದು ಗಾರ್ದಭಮುಖಂ ಜನಿಯಿಸೆಯಾ ಮುಖದಿಂ ನೋಡುತ್ತಿರೆಯಾ ನರ್ತಿಸುವ ತಿಲೋತ್ತಮೆಯಲ್ಲಿಂದದೃಶ್ಯಾಕಾರಮಾಗಿ ಸ್ವರ್ಗಕ್ಕೆ ಪೋಗೆ ಯಾಕೆಯಂ ಕಾಣದೆ ಕಳವಳಿಸಿ ವಿಕಳಂಗೊಂಡು ದೆಸೆದೆಸೆಗೆ ವಿಸಟಂಬರಿದು ಸುರವಿದ್ಯಾಧರರೆಲ್ಲರುಂ ಗಗನತಳದೊಳ್ ನಗುತ್ತಿರೆಯದಕ್ಕಿಂದ್ರಾದಿದೇವರ್ಕಳುಪರೋಧಮಂ ಸದಾಶಿವನಱಿದು ಆ ಬ್ರಹ್ಮನ ಮಸ್ತಕದ ಶಿರಮಂ ನಖದಿಂ ಚಿವುಂಟಿ ಕಳೆಯೆ ಬೆಸನದೆಸಕದಿಂ ಕಣ್ಗಾಣದೆ ಮೈಯಱಿಯದೆ ಲಜ್ಜೆಯಂ ತೊಱೆದು ಪೊದೆಯೊಳಿರ್ದ ಪೆಣ್ಗರಡಿಯಂ ಕಂಡು ಕಾತರತನದಿಂ ಪಿಡಿದು ಅದಂ ನೆಱುಯಲ್ ಅದು ನಖದಿಂ ಶರೀರಮಂ ಸೀಳೆಯದೇ ಕ್ರಮವೆಂದು ನರರಂದಿಂದಿತ್ತಲಾ ಕ್ರಮದಿಂದಾಚರಿಸುವರಾ ಭಲ್ಲೂಕಿಗಂ ಬ್ರಹ್ಮಂಗಂ ಜಾಂಬೂನದನೆಂಬ ಮಗಂ ಪುಟ್ಟಿದನದಂ ತ್ರಿದಶರೆಲ್ಲಂ ಕಂಡು ಪರಿಹಾಸಂಗೆಯ್ಯೆ ಲಜ್ಜಿಸಿಯಲ್ಲಿಂ ಪೊಱಮಟ್ಟು ಭ್ರಮಣೆಯಿಂ ಬರುತ್ತೆಯಮರಾವತಿಯ ಬಹಿರ್ಭಾಗದೊಳೂರ್ವಶಿಯೆಂಬ ಷಣ್ಯಾಂಗನೆಯಿರೆ ಕಂಡಾಕೆಯ ಸಮೀಪಕ್ಕೆ ಪೋಗಿ ನಾನಾ ತೆಱದ ವಚನರಚನೆಯಿಂದೊಡಂಬಡಿಸಿಯಾಕೆಯೊಳ್ ನೆರೆದು ಮುನ್ನಾಕರ್ಷಣಂ ಗೆಯ್ದು ದಂಡದೊಳಿಟ್ಟುಕೊಂಡಿರ್ದ ಗರ್ಭಮನಾಕೆಯುದರದೊಳಿಕ್ಕಿದೊಡಲ್ಲಿ ವಸಿಷ್ಠನೆಂಬ ಮಗಂ ಪುಟ್ಟದನಾತಂಗೆ ಬ್ರಹ್ಮಂ ತನ್ನ ಪದವಿಯಂ ಕೊಟ್ಟು ತಾಂ ತಪಕ್ಕೆ ಪೋದನಿತ್ತಲಾವಸಿಷ್ಠಂ ಸಕಲಶಾಸ್ತ್ರಕಳಾಕುಶಲನಾಗಿಯೊಂದುದಿನಂ ಕೆಲಂಬರ್ ಭೂದೇವರ್ಗೆ ವಂದನೆಯಂ ಮಾಡಿದಡವರ್ ತನಗೆ ಪ್ರತಿವಂದನೆಯಂ ಮಾಡದಿರಲಾತನಿವರೆನಗೆ ಪ್ರತಿವಂದನೆಯನೇಕೆ ಮಾಡರೆಂದು ಕೆಲಂಬರಂ ಬೆಸಗೊಳೆ ನೀಂ ವೇಶ್ಯಾಪುತ್ರನಪ್ಪುದಱಿಂ ನಿನಗೆ ಪ್ರತಿವಂದನೆಯಂ ಮಾಡರೆನೆ ಪಿರಿದುಂ ಲಜ್ಜಿತನಾಗಿ ವೇದಪರ್ವತಕ್ಕೆ ಪೋಗಿ ತಪಂಗೈಯ್ವುತ್ತಮಿರ್ದು

ಕಂದ

ಆಗದು ತಪಕ್ಕೆ ವಿಘ್ನಂ
ಬಾಗಿದ ಬೆನ್ನುಡುಗಿದುರಮಡಂಗಿದ ಜಘನಂ
ತೂಗುವ ತಲೆ ಕಂಪಿದ ಕೈ
ಬೀಗಿದ ಸೆರೆ ಕವಿದ ಪುರ್ಬು ನುರ್ಗಿದ ಪಲ್ಗಳ್ ೯೬

ಶಾರ್ದೂಲವಿಕ್ರೀಡಿತ

ಎಂದಾ ಭೂಧರದಿಂ ತೆರಳ್ದು ಪಲವುಂ ದೇಶಂಗಳಂ ನೋಡುತ್ತಂ
ಬಂದೊಂದೂರೊಳವಕ್ಷಮಾಲೆಯೆನಿಪಾ ಚಾಂಡಾಳಿ ದೂರಾಂತರಂ
ಮುಂದೈತರ್ಪಳ ರೂಪನೀಕ್ಷಿಸಿ ಕರಂ ಸೋಲ್ತಾಕೆಯಿರ್ದಲ್ಲಿಗೈ
ತಂದಾ ಕಾಂತೆಯ ಹಸ್ತಮಂ ಪಿಡಿದನತ್ಯಾಸಕ್ತಿಯಿಂ ತಾಪಸಂ ೯೭

ವಚನ

ಅಂತುಂ ಕೈಯಂ ಪಿಡಿದು ಪಲವು ತೆಱದ ವಚನಾಳಾಪದಿಂದಾಕೆಯನೊಡಂಬಡಿಸಿ ಕೂಡುವುದುಂ ಆಕೆಗೆ ಶಕುನಿಯೆಂಬ ಮಗಂ ಪುಟ್ಟಿಯಾತಂ ತಮ್ಮ ತಂದೆಯಂತೆ ಪರ್ವತಾಗ್ರದೊಳುಗ್ರೋಗ್ರ ತಪಂಗೆಯ್ದುಕರಂ ವೃದ್ಧನಾಗಿ ಬಳಿಕ ದೇಶಭ್ರಮಣೆಯಿಂ ಬರುತ್ತೆ ಗೌತಮಗ್ರಾಮವೆಂಬೂರೊಳೊರ್ವ ಪೊಲತಿಯಂ ಕಂಡಾಸಕ್ತಚಿತ್ತನಾಗಿ ನೀನೆನ್ನೊಳ್ ಒಲ್ದು ಕೂಡುವುದಾಂ ನಿನಗಾಸಕ್ತಚಿತ್ತನಾದೆನೆನೆ ನಾಂ ಪೊಲತಿ ನಿಮಗದನುಚಿತಮೆನೆಯಾತಂ ಪೂರ್ವದೊಳಂ ಪಲವುಂ ಪುರಾಣಂಗಳೊಳ್ ಸ್ತ್ರೀಯರಿಗೆ ದುಷ್ಕುಲ ಮುಮಶುಚಿತ್ವ ಮುಮಿಲ್ಲೆಂದು ಪೇಳ್ದುದಂ ಕೇಳ್ದುದಿಲ್ಲಕ್ಕುಮೆನೆಯಾಕೆ ನಾಂ ಕೇಳ್ದಱದುದಿಲ್ಲದೆಂತೆನೆ ಶಕುನಿಯಿಂತೆಂದಂ

ಶ್ಲೋಕ

ಅಜಾಶ್ವಾ ಮುಖತೋ ಮೇಧ್ಯಾಃ ಗಾವೋಮೇಧ್ಯಾಸ್ತು ಪೃಷ್ಠತಃ |
ಬ್ರಾಹ್ಮಣಾಃ ಪಾದತೋ ಮೇಧ್ಯಾಃ ಸ್ತ್ರಿಯೋ ಮೇಧ್ಯಾಸ್ತು ಸರ್ವತಃ || ೯೮

ವಚನ

ಅದಲ್ಲದೆಯುಂ

ಶ್ಲೋಕ

ಕಾಮಃ ಪುಣ್ಯವಶಾಜ್ಜಾತಃ ಕಾಮಿನೀ ಪುಣ್ಯಪ್ರೇರಿತಾ |
ಸೇವ್ಯಾಸೇವ್ಯೇನ ಕರ್ತವ್ಯಂ ಸ್ತ್ರೀ ರತ್ನಂ ದುಷ್ಕುಲಾದಪಿ || ೯೯

ಕಳಾಭಾಷಿಣಿ

ಎಂದನೇಕ ತೆಱದಾಗಮಶಾಸ್ತ್ರಪುರಾಣದೋ
ದಿಂದಮಾ ಪೊಲತಿಯಂ ತಿಳಿಪಲ್ ವಶಮಾಗಿಯಾ
ನಂದದಿಂ ಶಕುನಿಯೊಳ್ ನೆರೆಯಲ್ಕವಳಾಕ್ಷಣಂ
ನಂದನಂ ಜನಿಸಿದಂ ಭರದಿಂದೆ ಪರಾಶರಂ ೧೦೦

ವಚನ

ಅಂತು ಪರಾಶರಂ ಪುಟ್ಟಿ ವಿಂಧ್ಯಗಿರಿಯೊಳ್ ತಂದೆಯಂತೆ ತಪಂಗೆಯ್ಯುತ್ತುಮಿರ್ದು ವೃದ್ಧನಾಗಿ ಕೆಲವಾನುಂ ದಿವಸಕ್ಕೆ ವಿಹಾರಿಸುತ್ತುಂ ಬರುತ್ತೆ ಗಂಗೆಯಂ ಪಾಯ್ವಾಗಳಂಬಿಗರ ಮಗಳ್ ಮತ್ಸ್ಯಗಂಧಿಯೆಂಬ ಕನ್ನಿಕೆ ನಾವಿಗೆ ಹುಟ್ಟನಿಕ್ಕುವಲ್ಲಿ ನಡುಪೊಳೆಯೊಳಾಸಕ್ತಚಿತ್ತನಾಗಿಯಾಕೆಯ ಕೈಯಂ ಪಿಡಿಯೆಯಾ ಕನ್ನೆ ಯೆಲೆ ದೇವಾ ಯಿಲ್ಲಿ ಜನ ಸಂಕೀರ್ಣಂ ನಿಮಗುಚಿತಮೇ ಯೆನೆಯಾ ಮುನಿ ವಿಭೂತಿಯನಭಿಮಂತ್ರಿಸಿ ತಳಿದು ತೀವಿದ ಮಂಜಂ ಪಡೆದು ಪೊಳೆಯ ನಡುವೆ ಮಂಜಿನ ಕಳ್ತಲೆಯೊಳ್ ನೆರೆಯಲವರೀರ್ವರ್ಗಂ ವ್ಯಾಸಂ ಪುಟ್ಟಿದನಾ ವ್ಯಾಸಂ ತಮ್ಮ ತಾಯಿ ಯೋಜನಗಂಧಿಯೊಡ ಹುಟ್ಟಿದನ ಮಕ್ಕಳು ಅಂಬೆಯಂಬಾಲೆಯಂಬಿಕೆಯೆಂಬ ಮೂವರ್ ಕನ್ನೆಯರಂ ಮದುವೆಯಾಗಿ ಕೆಲವಾನುಂ ದಿವಸಕ್ಕೆ ಮೂವರ್ ಕನ್ನೆಯರಿಂ ಧೃತರಾಷ್ಟ್ರಂ ಪಾಂಡುರಾಜಂ ವಿದುರನೆಂಬ ಮೂವರ್ ಮಕ್ಕಳಂ ಪಡೆದನೆಂದು ಪುಷ್ಕರ ಬ್ರಹ್ಮಾಂಡ ಪುರಾಣಂಗಳ್ ಪೇಳ್ವವದುಕಾರಣಂ ತನ್ನ ಮಗಳೊಳ್ ತಾನೆ ನೆರೆದರವಿಂದಸಂಭವಂ ನಾವಿತ್ತ ಛಾಯಾಕನ್ನೆಯಂ ಬಿಡುವನಲ್ಲೆನೆ ಡಿಂಡಿಭೆ ಮತ್ತಮಿಂತೆಂದಳ್

ಕಂದ

ಶ್ರೀಪತಿಯ ಪೊರೆಯೊಳಿರಿಸುವ
ದೀ ಪುತ್ರಿಯನೊಂದೊಡೆಂದನಾ ಮಾಂಡವ್ಯಂ
ಕೋಪಿಸಿಯಿರಿಸದಿರವನ ಸ
ಮೀಪದೊಳೆನಲೇಕೆ ಪೇಳೆನಲ್ ಕೇಳೆಂದಂ ೧೦೧

ಮೊದಲೊಳ್ ದ್ವಾರಾವತಿಯೊಳ್
ಪದಿನಾಱುಸಾಸಿರ ಸಮಸ್ತಗೋಪೀಜನದೊಳ್
ಮುದದಿಂದೆ ಕೂಡಿಯುಂ ತಣಿ
ಯದೆ ವಿಂಧ್ಯಾಟವಿಯನೆಯ್ದಿ ತೊಳಲಿ ಬರುತ್ತುಂ ೧೦೨

ವಚನ

ಮತ್ತಂ ರಾಜಮತಿ ಚಂದ್ರಮತಿಯೆಂಬ ಗೋಪಕಾಂತೆಯರಂ ಕಂಡು ಪಲವುಂ ತೆಱದ ವಚನರಚನೆಯಿಂದೊಡಂಬಡಿಸಿ ಸಂಭೋಗಸುಖದಿಂದಿರುತಿರ್ದು ಮತ್ತೊಂದು ದಿನಂ ರಾತ್ರಿಯೊಳ್ ಸಂಕೇತಗೃಹಕ್ಕೆ ಬಂದು ಬಾಗಿಲೊಳ್ ನಿಂದು ಕದಹಂ ಬೆರಳಿಂ ಮಿಡಿಯೆ ಕೇಳ್ದು ಗೋಪಕಾಂತೆಯಿಂತೆಂದಳ್

ಸಂಸ್ಕೃತ ಸೂತ್ರಾವೃತ್ತ

ಅಂಗುಲ್ಯಾ ಕಃ ಕವಾಟಂ ಪ್ರಹರತಿ ಕುಟಿಲೇ ಮಾಧವಃ ಕಿಂ ವಸಂತಃ
ನೋ ಚಕ್ರೀ ಕಿಂ ಕುಲಾಲೋ ನ ಹಿ ಧರಣಿಧರಃ ಕಿಂ ದ್ವಿಜಿಹ್ವಃ ಫಣೀಂದ್ರಃ
ನಾಹಂ ಘೋರಾಹಿಮರ್ದೀ ಕಿಮಸಿ ಖಗಪತಿಃ ನೋ ಹರಿಃ ಕಿಂ ಕಪೀಂದ್ರಃ
ಇತ್ಯೇವಂ ಗೋಪಕನ್ಯಾಪ್ರತಿವಚನಜಡಃ ಪಾತು ವಶ್ಚಕ್ರಪಾಣಿಃ || ೧೦೩

ಕಂದ

ಇಂತು ಪದಿನಾಱುಸಾಸಿರ
ಕಾಂತೆಯರೊಳ್ ನೆರೆದು ತಣಿಯದನ್ಯಾಂಗನೆಯೊಳ್
ಸಂತತಮಳಿಪಿಂ ಕೂಡುವ
ನೆಂತುಂ ಛಾಯಾಸ್ವರೂಪಿಯಂ ಬಿಟ್ಟಪನೇ ೧೦೪

ಎನಲಾ ಡಿಂಡಿಭೆ ಭರದಿಂ
ವನಜಾರಿಯ ಪೊರೆಯೊಳೀ ಸುತೆಯನಿರಿಸುವಮೆಂ
ದೆನೆ ಮಾಂಡವ್ಯನದನುಚಿತ
ಮೆನೆಯಾ ಸತಿ ಪೇಳದೇಕೆನಲ್ ಕೇಳೆಂದಂ ೧೦೫

ಕಂಡಾ ವಿಶ್ವಮಿತ್ರನ
ಹೆಂಡತಿಗತಿಸೋಲ್ತು ಸೊಗಯಿಪಾಕೃತಿಯಂ ಕೈ
ಕೊಂಡೊಲಿಸಿ ಕೂಡುವಾಗಳ್
ಗಂಡಂ ಬರಲಱದು ಪಾಣ್ಬೆ ಪಾಣ್ಬಂಗೆಂದಳ್ ೧೦೬

ಕಳಾಭಾಷಿಣಿ

ಬಂದನೆನ್ನಪತಿ ಮಂಜರರೂಪದೆ ಪೋಗು ನೀ
ನೆಂದು ಪೇಳ್ವೊಡವನಾ ತೆಱದಿಂದಮೆ ಪೋಗುತಿ
ರ್ಪಂದಮಂ ತಿಳಿದು ಕೋಪಿಸಿ ಚರ್ಮದ ಚೀರದಿಂ
ದಂದಿಡಲ್ಕದುವೆ ತಾಗಿದುದಾತನ ದೇಹಮಂ ೧೦೭

ವಚನ

ಅಂತು ತಾಗಲಾ ಕಲೆಯಂ ಕಳಂಕಾಂಕಮೆಂಬರಂತಾತಂ ರೋಹಿಣೀ ಮೊದಲಾದ ಪ್ಪರಸಿಯರ್ ಪಲಂಬಿರರ್ದುಂ ತಾಪಸಪತ್ನಿಗಳಿಪಿದ ಚಂದ್ರಂ ನಾವಿತ್ತೋಡೀ ಛಾಯಾದೇವಿಯಂ ಬಿಡುವನಲ್ಲೆನೆಯಾದೊಡಾ ತನೂಜೆಯಂ ಶಕ್ರನ ಸಮೀಪದೊಳಿರಿಸುವದೆಂದು ಡಿಂಡಿಭೆಯೆನೆ ಮಾಂಡವ್ಯನೆಂದನಲ್ಲಿರಿಸಲಾಗದಾತನ ವೃತ್ತಾಂತಮಂ ಕೇಳೆಂದು ಪೇಳ್ದನದೆಂತೆನೆ

ಚಂಪಕಮಾಲೆ

ಸುರಪತಿ ಗೌತಮಾಖ್ಯಮುನಿನಾಥನ ಕಾಂತೆಯಹಲ್ಯೆಯಂ ವನಾಂ
ತರದೊಳೆ ಕಂಡೊಡಂಬಡಿಸಿ ಕೂಡುತಿರಲ್ ಮುನಿ ಕಂಡು ಕೋಪದಿಂ
ದುರಿದು ಸಹಸ್ರಯೋನಿಯುದಯಿಕ್ಕೆ ನಿಜಾಂಗದೊಳೆಂದು ಶಾಪಮಂ
ಭರವಸದಿಂ ಕುಡಲ್ಕವನ ದೇಹದೊಳಾದುವು ಯೋನಿಸಾವಿರಂ ೧೦೮

ವಚನ

ಅಂತು ಜನಿಯಿಸಿದ ಯೋನಿಸಾವಿರಮಂ ಕಂಡು ಲಜ್ಜಿತನಾಗಿ ತಲೆಯಂ ಬಾಗಿ ಮುನಿಪತಿಯ ಚರಣಸರಸಿರುಹದೊಳ್ ಕಡೆದು ಕರುಣಂಬರ್ಪಂತೆ ನುಡಿದು ಕ್ಷಮಿಯಿಸುವುದೆಂದು ಬೇಡಿಕೊಳೆ ಕರುಣಿಸಿಯಾ ಯೋನಿಗಳೆಲ್ಲಂ ನೇತ್ರಗಳಾಗಲಿಯೆಂದು ಮಾಡಿದನಂದಿಂದಂ ಶಕ್ರಂ ಸಹಸ್ರಾಕ್ಷನಾದನಾತನನೇಕ ದೇವಕಾಂತೆಯರಿರ್ದುಂ ಮುನಿಪತ್ನಿಗಳಿಪಿದವಂ ಛಾಯಾಕನ್ನೆಯಂ ಬಿಡುವನಲ್ಲೆನೆಯಾದೊಡಾಕೆಯಂ ಸೂರ್ಯನ ಸಮೀಪದೊಳಿರಿಸುವಮೆನೆಯಾ ಡಿಂಡಿಭೆಗೆ ಮಾಂಡವ್ಯನಿಂತೆಂದನದನುಚಿತಮೆನೆಯಾತಂ ಮಾಡಿದ ದೋಷಮೇನೆಂದು ಬೆಸಗೊಂಡೊಡಿಂತೆಂದಂ

ಕಂದ

ಕ್ಷಿತಿಯೊಳ್ ಶೌರೀಪುರಕಧಿ
ಪತಿಯಂಧಕವೃಷ್ಣಿ ಕೊಂತಿಯಾತನ ಸುತೆಯಾ
ಸತಿ ನದಿಯೊಳ್ ಮೆಯ್ದೊಳೆವಾ
ಗತಿಶಯ ರೂಪಿಂದೆ ಬಂದು ನೆರೆದಂ ಸೂರ್ಯಂ ೧೦೯

ಆರುಂ ಕುಡದಾ ಕೊಂತಿಯ
ನೋರಂತಿರೆ ನೆರೆದ ತರಣಿ ನಾವಿರಿಸಿದೊಡೀ
ವಾರಿಜಮುಖಿಯಂ ಛಾಯೆಯ
ನಾರಯ್ಯಲ್ ಬಿಡುವನಲ್ಲಿದಂ ಕೇಳ್ದಱಿಯಾ ೧೧೦

ವಚನ

ಎನೆಯೀ ಕನ್ನೆಯಂ ಯಮನ ಸಮೀಪದೊಳಿರಿಸಲಕ್ಕುಮೆಂತೆನೆಯಾತಂ ಬಾಲ ಬ್ರಹ್ಮಚಾರಿ ಸಕಲದೂಷಣವಿದೂರಂ ಸತ್ಯನೆಂದು ಡಿಂಡಿಭೆಯೆನೆ ಮಾಂಡವ್ಯನದರ್ಕೊಡಂಬಟ್ಟು ಯಮಪುರಕ್ಕೆ ಪೋಗಿಯಾ ಕನ್ನೆಯಂ ಕಾಲನ ಸಮೀಪದೊಳಿರಿಸಿಯವರ್ ತೀರ್ಥಯಾತ್ರೆಗೆ ಪೋಗೆಯಂತಕಂ ಕನ್ನೆಯ ರೂಪು ಯೌವನಮಂ ಕಂಡು ಸೋಲ್ತು ತಾನದರ್ಕಿಂತೆಂದಂ

ಶ್ಲೋಕ

ಸಂಸರ್ಗಾದ್ದುರ್ಬಲಾಂ ಜೀರ್ಣಾಂ ದ್ರುಹ್ಯನ್ತೀಮಪನಿಚ್ಫತೀಂ |
ಕುಷ್ಠಿನೀಂ ದುರ್ಭಗಾಂ ಕಾಣಾಂ ವಿರೂಪಾಂ ಕ್ಷೀಣವಿಗ್ರಹಾಂ || ೧೧೧

ನಿನ್ದಿತಾಂ ನಿಂದ್ಯಜಾತೀಯಾಂ ಸ್ವಜಾತೀಯಾಂ ತಪಸ್ವಿನೀಂ |
ಬಾಲಾಂ ನಿಸ್ವಾಂಚ ಕಶ್ಚಿಸ್ತ್ರೀ ಕಾಮೀ ಭೋಕ್ತುಂ ಪ್ರವರ್ತತೇ || ೧೧೨

ವಚನ

ಎಂದಾ ಕನ್ನೆಯಂ ಸ್ವೀಕೃತಂ ಮಾಡಿ ತನಗೆ ಬ್ರಹ್ಮಚಾರಿಯೆಂಬ ಪ್ರಸಿದ್ಧಿಯುಳ್ಳುದಱಿಂ ಜನಾಪವಾದಮಕ್ಕುಮೆಂದಂಜಿಯಾಕೆಯಂ ಪಗಲ್ ನುಂಗಿ ಯಿರುಳುಗುಳ್ದು ದಿನಂಪ್ರತಿ ಸಂಭೋಗಸುಖಮನನುಭವಿಸುತ್ತುಮಿರ್ದೊಂದುದಿನಂ ಗಂಗಾಸ್ನಾನಕ್ಕೆ ಪೋಗಿ ಛಾಯಾಕನ್ನೆಯಂ ಪೊಟ್ಟೆಯೊಳಿರ್ದಳಂ ಪೊಱಮಡಿಸಿ ಲತಾಮಂಟಪದೊಳಿರಿಸಿ ಜಳಮಂ ಪೊಕ್ಕಘಮರ್ಷಣಮಿರ್ದನುಷ್ಠಾನಮಂ ದಿನಂಪ್ರತಿ ಮಾಡುತಿದಲ್ಲಿ ಒಂದುದಿನಂ ವನವಹ್ನಿ ಕಂಡಾಸಕ್ತಚಿತ್ತನಾಗಿ ತನ್ನ ಸಖನಪ್ಪ ಪವನನಂ ಕರೆದು ಈ ಕಾಂತೆಯನೆನಗೆ ವಶಂ ಮಾಡಿಕುಡುವುದೆನೆಯಾತನಿಂತೆಂದಂ

ಕಂದ

ಅಂತಕನತಿಬಲನಾತನ
ಕಾಂತೆಯುಮಂ ತರ್ಪುದೆನಗೆ ವಶವಲ್ತೆನಲೀ
ಭ್ರಾಂತೇಕೆ ಕಾಣಲೀಯದೊ
ಡಂತಕನೇಗೆಯ್ವ ನೀನೊಡಂಬಡಿಸೆಂದಂ ೧೧೩

ಎಂದೆನಲಾಕೆಯ ಹೊರೆಗಾ
ಮಂದಾನಿಳನೆಯ್ದಿ ಪಲವು ವಚನೋಕ್ತಿಗಳಿಂ
ದಿಂದುಮುಖಿ ಪಿರಿದೊಡಂಬಡು
ವಂದದಿ ನುಡಿದಾಕೆಯೊಡನೆ ಕೂಡಿದನವನಂ ೧೧೪

ಕೂಡುವ ಸಮಯದೊಳಾ ಸತಿ
ಬೇಡ ಯಮಂ ಬರ್ಪ ಪೊತ್ತಿದಿರದೆಪೋಗೆಂ
ದಾಡಿದೊಡೆಯಗ್ನಿ ಯೆಂದಂ
ನಾಡೆ ಮನಂ ಸೋಲ್ತೆನಬಲೆ ಮಿಡುಕಲ್ ನೆಱುಯಂ ೧೧೫

ಕಳಾಭಾಷಿಣಿ

ಎಂದೊಡಾ ಸುದತಿ ನುಂಗಿದಳಗ್ನಿಯನಂತಕಂ
ಬಂದು ತತ್ಸತಿಯನೊಯ್ಯನೆ ನುಂಗಿ ನಿಜಾಲಯ
ಕ್ಕೆಂದು ಪೋಗಿ ಸುಖದಿಂದಿರಲಗ್ನಿಯನಾಕೆಯಾ
ನಂದದಿಂದುಗುಳ್ದು ಕೂಡಿದಳಾತನ ಪೊಟ್ಟೆಯೊಳ್ ೧೧೬

ವಚನ

ಅಂತಿರುತ್ತಿರೆ ಲೋಕದೊಳಗ್ನಿಯ ಭಾವಮಾಗಿರೆ ದ್ವಿಜೋತ್ತಮರ ಹೋಮಾದಿ ಕರ್ಮಂ ಕಿಡೆಯದಱಂ ತ್ರೈಲೋಕ್ಯಕ್ಕೆಲ್ಲಂ ಸಂತಾಪಂ ಪುಟ್ಟೆ ಸಕಲದೇವರ್ಕಳೆಲ್ಲಂ ಧ್ಯಾನದಿಂದಱದು ಮಾರುತನಂ ಕರೆದು ಅಗ್ನಿಯೆಲ್ಲಿಗೆ ಪೋದನೆಂದು ಬೆಸೆಗೊಳೆ ನಾನಱಯೆನೆನೆಯಾತನೆಲ್ಲಿರ್ದೊಡಂ ನೀನಱಸಿ ತರಲ್ವೇಳ್ಪುದೆನೆಯಾತನಾಗಲಿ ಯೆಂದೆನೆಯಲ್ಲಾಸುರರ್ಗೌತಣಮಂ ಪೇಳ್ವೆಲ್ಲರಂ ತನ್ನ ಮನೆಗೆ ಕರೆದುಕೊಂಡು ಬಂದು ಪಾದಪ್ರಕ್ಷಾಲನಂಗೆಯ್ದವರೆಲ್ಲರ್ಗೊಂದೊಂದಾಸನಮನಿತ್ತು ಯಮಂಗೆ ಮೂಱ ಸನಮನೀಯೆಯಾತನೆನಗೆ ಮೂಱಸನಮೇಕೆಯೆನೆ ವಾಯುವಿಂತೆಂದಂ

ಕಂದ

ನಿನ್ನುದರದೊಳಗೆ ಬೈತಾ
ಕನ್ನೆಯನುಗುಳೆಂದೊಡುಗುಳ್ದನಂತಕನೆಲೆ ಕೇಳ್
ಕನ್ನೆಯೆ ನಿನ್ನುದರದ ಶಿಖಿ
ಯನ್ನೆಱೆನೀನುಗುಳ್ವುದೆಂದೊಡುಗುಳ್ದಳ್ ಬೇಗಂ ೧೧೭

ಅಂತುಗುಳ್ವಪದದೊಳುರಿದುವು
ಕಾಂತೆಯ ರಂಜಿಸುವ ಗಡ್ಡಮೀಸೆಗಳಂದಿಂ
ದಂ ತೊಡಗಿ ಪೋದುವೆಲ್ಲಾ
ಕಾಂತಾಳಿಯ ಗಡ್ಡ ಮೀಸೆಯಿನಿತಿಲ್ಲದವೊಲ್ ೧೧೮

ಉತ್ಪಲಮಾಲೆ

ಅಂತಕನಾಗಳಗ್ನಿಯನಭೀಕ್ಷಿಸಿ ದಂಡಮನೆತ್ತಿ ಕೋಪದಿಂ
ದಂತಿರಿಪುತ್ತುಮೆಯ್ದಿದೊಡೆ ಸರ್ವರೊಳಂದಿರದೋಡಿ ಪೊಕ್ಕು ನಿ
ಶ್ಚಿಂತಮಡಂಗಿ ಸರ್ವಗತನಾದನೆನಿಪ್ಪುದು ವೇದಶಾಸ್ತ್ರದೊಳ್
ಸಂತತಮುಂಟೆ ಪೇಳಿಮೆನೆಯಾ ದ್ವಿಜರಿಂತಿದು ಸತ್ಯವೆಂಬುದುಂ ೧೧೯

ವಚನ

ಅದಲ್ಲದೆಯುಂ

ಕಂದ

ಸರ್ವಜ್ಞಂ ಗಡ ಕಾಲಂ
ಸರ್ವದನುದರದೊಳಗಿರ್ದೊಡಱಿಯಂ ಗಡ ತಾಂ
ಸರ್ವಜ್ಞತೆ ಘಟಿಯಿಸುವುದ
ಪೂರ್ವವಿದಂ ಪೇಳಿಮೆಂದೊಡವರಿಂತೆಂದರ್ ೧೨೦

ವಚನ

ಮತ್ತಮಾತನ ಗುಣಮಿನಿತು ಕಿಡೆ ದೇವತ್ವಮುಂ ವಂದ್ಯತ್ವಮುಂ ಕಿಡುವುದೆ ಪೇಳಿಮೆನೆಯವರೆಮ್ಮ ಮಾರ್ಜಾರಂಗೆ ಕಿಂಚಿದೂಣೆಯಂ ಬರೆಯದಱ ಸಾಮರ್ಥ್ಯಂ ಕಿಡುವುದೆ ಪೇಳಿಮೆಂದನೇಕದೃಷ್ಟಾಂತಂಗಳಂ ತೋಱಿ ನುಡಿದು ವಾದಂ ಗೆಲ್ದು ಜಯ ಪತ್ರಮಂ ಕೊಂಡು ಬೆಕ್ಕಂ ಮಾಱಿ ಯುದ್ಯಾನಕ್ಕೆ ಬಂದವರ ಪುರಾಣದ ಸಟೆಯೆಲ್ಲಮಂ ತಿಳಿವಂತೆಯಱಿಪಿ ಸುಖದಿನಿರಲಾ ಸಮಯದೊಳ್

ಕಂದ

ಕಮಳಿನಿಯ ವಿರಹಪರಿತಾ
ಪಮನಾಱಿಸಲರ್ಕನಪರಸಂಧ್ಯಾರುಣಮೆಂ
ಬಮರ್ದತಳಿರೊಳ್ ಪೊರಳ್ದುಱ
ದೆ ಮೆಯ್ಯನೀಡಾಡಿದಂತೆ ಜಳನಿಧಿಗಿಳಿದಂ ೧೨೧

ವಚನ

ಅಂತು ನೇಸರ್ಪಡುವುದುಂ ತಮ್ಮಿರ್ವರುಂ ನಿದ್ರಾಮುದ್ರಿತರಾಗಿ ಕಿಱಿದಾನುಂಬೇಗಮಿರ್ದು ತೀಡುವ ತಂಗಾಳಿಯಿಂ ಮೊರೆವ ತುಂಬಿವಿಂಡಿಂ ಕುಕಿಲ್ವ ಕೋಗಿಲೆಯಿಂ ಪೊಡೆವ ಸಂಧ್ಯಾನಕಧ್ವನಿಯಿಂ ನಿದ್ರೆ ಪಿಂಗೆ ಯೆರ್ದು ಜಳಕಂ ದೇವತಾರ್ಚನೆ ಸಂಧ್ಯಾವಂದನೆ ನಿತ್ಯಕರ್ಮಾನುಷ್ಠಾನ ಧ್ಯಾನ ಜಪ ತಪ ಸಮಾಧಿಯಂ ನಿರ್ವರ್ತಿಸಲಾ ಸಮಯದೊಳ್

ಚಂಪಕಮಾಲೆ

ಶಶಿಗೆ ಕಳಂಕಮೇಱೆ ದನುಜರ್ಗಳಲೇಱೆಯುಳೂಕವೃಂದಕು
ಬ್ಬಸವಣವೇರೆಯುತ್ಪಳಿನಿಗುಮ್ಮಲವೇರೆ ಸರೋರುಹಕ್ಕೆ ಸಂ
ತಸದೊದವೇಱೆ ಕೋಕಮಿಥುನಕ್ಕನುರಾಗತೆಯೇಱೆ ಲೀಲೆಯಿಂ
ವಿಸರುಹಮಿತ್ರನಂದುದಯಪರ್ವತಮಂ ಭರದಿಂದಮೇಱಿದಂ ೧೨೨

ವಚನ

ಅಂತು ನೇಸರ್ಮೂಡುವುದುಂ

ಕಂದ

ಮುನಿಯಿತ್ತ ನೇಮದಿಂ ಮಿ
ತ್ರನ ಮನದೊಳ್ ಪುಟ್ಟಿ ನಿಮಿರ್ದ ಮೂಢತ್ರಯಮೊಂ
ದಿನಿತಿಲ್ಲದಂತೆ ಪರಿಹರಿ
ಪನುವಂ ಬೇಗದೊಳೆ ಬಗೆದ ವೃತ್ತವಿಲಾಸಂ ೧೨೩

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಬೋಧಿವರ್ಧನ
ಸುಧಾಕರಂ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಟದಂ
ವೃತ್ತ ವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್
ಸರ್ವದೇವತಾಪರೀಕ್ಷೆ ವರ್ಣನಂ
ತೃತೀಯಾಶ್ವಾಸಂ