ಶಾರ್ದೂಲವಿಕ್ರೀಡಿತ

ನಾವೊಂದುಳ್ಳುದನಾಡಲೆಯ್ದೆ ಪುಸಿಯೊಂದೇಕೇಳಿದಂಗೆಯ್ವಿರೈ
ನೀವೆಲ್ಲಂ ನೆಱೆ ಪೇಳ್ವ ಪುಣ್ಯಕಥನಂ ರಾಮಾಯಣಂ ಭಾರತಂ
ತಾವೆಲ್ಲಂ ಪುಸಿಯೆಂದು ನೀವಱಯಿರೇ ಪೇಳೆಂದೊಡೆಂದರ್ ದ್ವಿಜರ್
ನೀವೆಂಬೀ ಪುಸಿಯೆಮ್ಮ ಧರ್ಮಕಥೆಯೊಳ್ ಪೇಳ್ದುಳ್ಳುದಂ ಪೇಳಿರೇ ೩೯

ವಚನ

ಎನೆ ಕೇಳ್ದು ಶ್ವೇತಾಂಬರಧಾರಿಗಳಿಂತೆಂದರ್ ನಿಮ್ಮ ರಾಮಾಯಣದೊಳ್ ರಾವಣನೆಂಬ ರಾಕ್ಷಸಂ ದಿಗ್ವಿಜಯಕ್ಕೆ ಪೊಱಮಟ್ಟು ಭೂಮಿಯಂ ಸುತ್ತಿಬರುತ್ತಿರೆ ಕೈಲಾಸಮಂ ಕಂಡು ಈ ಗಿರಿಯಾವುದೆಂದು ಸಮೀಪದೊಳಿರ್ದ ಸಚಿವರಂ ಕೇಳಲವರಿದು ಕೈಲಾಸಗಿರಿಯೆಂಬುದು ಮಹಾ ಪಿರಿಯದಿಲ್ಲಿ ಈಶ್ವರನೆಂಬನೆಲ್ಲರಿಂ ಪಿರಿಯದೇವನಿರ್ಪನೆನೆ ಎನ್ನಿಂ ಪಿರಿಯ ದೇವನಿನ್ನೊರ್ವನುಂಟು ಗಡಮೆಂದು ಕೋಪಿಸಿ ಪುಷ್ಪಕದಿಂ ನೆಲಕ್ಕಿಳಿದು ತನ್ನಿಪ್ಪತ್ತುತೋಳುಗಳಿಂದಾ ಗಿರಿಯಂ ತರ್ಕಯಿಸಿಯಲ್ಲಾಡೆ ಗಿರಿಜೆ ನಡುಗಿ ಭಯಂಗೊಂಡು ಹರನನಾಲಿಂಗಿಸಲಂಜದಿರೆಂದುಂಗುಟದಿಂದಾ ಗಿರಿಯನೊತ್ತಲಾ ಪರ್ವತಂ ಮಿಡುಕದಂತಾಂಗೆಯದಂ ಬಿಟ್ಟು ಚೋದ್ಯಂಬಟ್ಟು ಇನ್ನೇನಂ ಮಾಳ್ಪೆನೆಂದು ಪೋಗಿ ತನ್ನ ದಶಶಿರಮನರಿದಿಂಡೆಯಕಟ್ಟಿ ಪೂಜಿಸಿ ಚಂದ್ರಹಾಸಮಂ ಪಡೆದನಾ ಶರಂಗಳನರಿದರ್ಚಿಸಿದೇಳುದಿನಕ್ಕೆ ತಂತಮ್ಮ ಕೊರಲೊಳ್ ಪತ್ತಿದುವೆಂಬಿದು ನಿಮ್ಮ ಮತಪುರಾಣದೊಳುಂಟೊ ಇಲ್ಲವೊ ಪೇಳಿಮೆನೆಯವರಿದು ಸುಪ್ರಸಿದ್ಧವಾಗಿ ಯಂಟೆನೆಯಾದೊಡೆಮ್ಮ ಶಿರವರಿದಾಗಳಾಗೆ ನಮ್ಮಟ್ಟೆಯೊಳ್ ಪತ್ತಿತೆಂದೊಡೆಂತು ಪುಸಿಯುಂ ಚೋದ್ಯಮುಮೆಂದೆಂಬಿರೆಂತುಪುಸಿಯೆಂದು ವಿಸ್ಮಯಂ – ಬಡುವಿರಿದಲ್ಲದಿನ್ನೊಂದು ಕೇಳಿಮೆಂದು ಮತ್ತಮಿಂತೆಂದಂ

ಕಂದ

ಪರಿಭಾವಿಸೆ ರಾಮಕಥಾಂ
ತರದೊಳ್ ಪೆಸರ್ವೆತ್ತ ವಾಲಿಸುಗ್ರೀವರ್ ವಾ
ನರವಂಶರಾಜರವರಿ
ರ್ವರೊಳಾ ವಾಲಿಯತನೂಜನಂಗದನೆಂಬಂ ೪೦

ರವಿವಂಶಜನೆನಿಸುವ ರಾ
ಘವನಲ್ಲಿಗೆ ಬಂದು ಕಂಡು ಬಾಲಿಯ ತನಯಂ
ಸವಿನಯದಿಂದೆಱಗಿ ಮಹೋ
ತ್ಸವದಿಂದಂ ಬೆಸನನೀವುದೆನೆ ಕೇಳ್ದಾಗಳ್ ೪೧

ಉತ್ಪಲಮಾಲೆ

ಭೂಸುತೆಯಾಣ್ಮ ನೊಲ್ದು ಬೆಸನಂ ಕುಡೆ ಲಂಕೆಗೆ ಪೋಗಿ ದಾನವಾ
ಧೀಶನ ರಾಜಮಂದಿರಮನಂಜದೆ ಪೊಕ್ಕವನಮ್ಮನಪ್ಪ ಕೈ
ಕೇಶಿಯ ಕೇಶಮಂ ಪಿಡಿದು ಭಂಗಮನಾಗಿಸೆ ಕಂಡು ರಾವಣಂ
ರೋಷಮನಾಂತು ಕಿಳ್ತು ಪೊಡೆದಂ ಪಿಡಿದೊಪ್ಪುವ ಚಂದ್ರಹಾಸದಿಂ ೪೨

ಕಂದ

ಪೊಡೆದೊಡೆ ವಾಲಿಯಸುತನಿ
ರ್ಕಡಿಯಾಗಿ ನೆಲಕ್ಕೆ ಬೀಳೆಯಣುವಂ ಕಂಡಾ
ಕಡಿಗಳನೆರಡಂ ಪತ್ತಿಸಿ
ಪಡೆದಲ್ಲಿಂ ತಂದು ತೋಱೆ ರಘುಪತಿಗಾಗಳ್ ೪೩

ವಚನ

ಅಂತು ಕಂಡಾ ರಾಮಂ ಕಡಿಗಳನೆರಡುಂ ಪತ್ತಿಸಿ ಸಂಧಿಬಂಧವೆಂಬ ಮದ್ದಂ ತರಿಸಿ ಯರೆದು ಹಿಂಡಲಾ ಕಡಿಗಳ್ ಪತ್ತಿ ಜೀವಂ ಬೊಯ್ದಂಗದಂ ಬರ್ದುಂಕಿದನೆಂಬಿದು ನಿಮ್ಮ ಮತದ ರಾಮಾಯಣದೊಳುಂಟೊಯಿಲ್ಲವೋ ಪೇಳಿಮೆನೆಯವರಿಂತಿದು ಸುಪ್ರಸಿದ್ಧವಾಗುಳ್ಳುದನೆಂತಿಲ್ಲೆನಲ್ಬ – ರ್ಕುಮೆನೆಯಾದೊಡೆಮ್ಮಶಿರಂ ಪತ್ತಿದುದರ್ಕೇಂ ಪುಸಿಯೆಂದು ವಿಸ್ಮಯಂಬಡುವಿರಿದಲ್ಲದಿನ್ನೊಂದು ಕಥೆ ಕೇಳಿಮೆಂದು ಮತ್ತಮಿಂತೆಂದರ್

ಕಂದ

ಸದಮಳಗರ್ಭಂ ಕಾರ್ಗಾ
ಲದ ಮೇಘಂ ಮೊಳಗೆ ನವಿಲ್ಗೆ ಪುಟ್ಟುವವೊಲ್ ಪು
ಟ್ಟಿದುದೊರ್ವಸತಿಗೆ ಗರ್ಭಂ
ಮುದದಿಂದಂ ಪುರುಷಮೇಘರವವಮಂ ಕೇಳಲ್ ೪೪

ಮಹಾಸ್ರಗ್ಧರ್

ನವಮಾಸಂ ತೀವೆ ಪೆತ್ತಳ್ ಬಱಿಯ ತಲೆಯನಾ ಕಾಂತೆಯಾ ಮಸ್ತಕಂ ಕಾ
ಡುವುದಿರ್ದಿರ್ದೂರೊಳೆಲ್ಲಾ ಮನೆಮನೆಗಳೊಳಂ ಪೊಕ್ಕುಂ ಪಾಯ್ದಟ್ಟದಿಂದ
ಟ್ಟವನಾದಂ ಪಾಯ್ದು ಮತ್ತಂ ನೆಲಹನಡರ್ದು ತಾನಾರ್ತದಿಂ ಪಾಲ್ಮೆಗಾಸರ್ತು
ಪ್ಪವನೆಂತುಂ ತಿಂದೊಡೆಂಬರ್ ದಧಿಮುಖನಿವನೆಂದೆಲ್ಲರನ್ವರ್ಥಮಾಗಲ್ ೪೫

ವಚನ

ಅಂತು ದಧಿಮುಖನೆಂಬ ನಾಮದಿಂ ವರ್ತಿಸುತ್ತಿರೆ ಕೆಲವುಂ ದಿನಕ್ಕೆಯಾಯೆಡೆಗಗಸ್ತ್ಯಂ ತೀರ್ಥಯಾತ್ರೆಗೆ ಪೋಗುತ್ತಂಬರೆಯಾ ಮುನಿಯಂ ಕಂಡೆಱಗಿಯೆತ್ತಣಿಂ ಬಂದಿರೆಲ್ಲಿಗೆ ಪೋದೆಪಿರಿಂದೆನ್ನ ಮನೆಯೊಳಿಂದ ಭ್ಯಾಗತರಾಗಿಯೆನಲಾ ಮುನಿಯಿಂತೆಂದಂ

ಚಂಪಕಮಾಲೆ

ನಿನಗೆ ಕಳತ್ರಮಿಲ್ಲ ಪೆಱರಿಕ್ಕಿದೊಡೊಲ್ಲದುಣಲ್ಕುಪಾಯಮಿ
ಲ್ಲಿನಿತಿರಲಿಂಬುವೆತ್ತ ಮನೆಯಿಲ್ಲೆನಗೆಂತುಣಲಿಕ್ಕಲಾರ್ಪೆ ನೆ
ಟ್ಟನೆ ಮನೆಯಿಲ್ಲದನ್ಯಗೃಹದೊಳ್ ಸಲೆಮಾಡಿದ ದಾನಧರ್ಮಮಾ
ಮನೆಯವರ್ಗಪ್ಪುದರ್ತಿಯೊಳೆ ಮಾಡಿದ ದಾತೃಗದಿಲ್ಲ ನಿಶ್ಚಯಂ ೪೬

ವಚನ

ಅದಱಿಂ ನೀನೊರ್ವ ಪೆಂಡತಿಯಂ ಮಾಡಿಕೊಂಡು ಗೃಹಸ್ಥನಾಗಿ ಬಂದಲ್ಲದೆ ನಿನ್ನ ಮನೆಯೊಳುಣಬಾರದೆಂದು ಪೋದನಿತ್ತಲಾ ದಧಿಮುಖಂ ತಮ್ಮ ತಾಯಲ್ಲಿಗೆ ಬಂದು ಅಬ್ಬೆ ಎನಗೆ ಮದುವೆಯಾದಲ್ಲದೆ ಮಾಡಿದ ದಾನಧರ್ಮಂ ಸಲ್ಲದೆಂದೊಡೆನಗೊರ್ವ ಪೆಂಡತಿಯಂ ಮಾಡೆನೆ ಅಂತೆಗೈವೆನೆಂದು ಕೂಡೆ ನೋಡಿಯೊರ್ವ ನಿರ್ಧನೆಗೆ ಸಾಲ್ವನಿತು ಪೊನ್ನಂ ಕೊಟ್ಟಾಕೆಯ ಕೂಸಂ ತಂದು ಮದುವೆಯಂ ಮಾಡಿ ಕೆಲವಾನುಂ ದಿವಸಮಿರುತ್ತಿರೆಯಾ ದಧಿಮುಖನ ತಾಯಿಂತೆಂದಳ್

ಕಂದ

ಗಳಿಸಿರ್ದ ಧನದೊಳೊಂದಿನಿ
ತುಳಿಯದೆ ನಿನ್ನಯ ವಿವಾಹದೊಳ್ ಪೋದುದು ನಾಂ
ಸಲಹಲ್ ನೆಱೆಯೆಂ ನೀನೀ
ಗಳೆ ಪೋಪುದು ಬರ್ದುಕಲಾರ್ಪ ತಾಣಕ್ಕೆಂದಳ್ ೪೭

ವಚನ

ಎನಲಂತೆಗೆಯ್ವೆವೆಂದು ದಧಿಮುಖಂ ತನ್ನ ಪೆಂಡತಿಯಂ ಕರೆದು ಪೋಪೆವೇಳೆನಲಾಕೆ ತನ್ನ ಗಂಡನ ತಲೆಯಂ ನೆಲಹಿನೊಳಿಕ್ಕಿ ಪೆಗಲೊಳ್ ತಳೆದು ಪೋಗಿಯೊಂದು ಮಹಾಪತ್ತನಮನೈದಿಯಲ್ಲಿ ಜೂದಾಡುತಿರ್ದ ದೇಗುಲದ ತೊಲೆಯೊಳಾ ನೆಲಹಂ ಕಟ್ಟಿ ಬಟ್ಟೆಯೊಗೆಯಲ್ ಪೋಗೆಯಾ ದೇಗುಲದೊಳ್ ಜೂದುಗಾಱರೋರೋರ್ವರೊಳ್ ಕಲಹಂಗೈದು ಕಡಿತಲೆಯಂ ಕೊಂಡೊರ್ವನೊರ್ವನ ಶಿರಮುರುಳೆ ಪೊಯ್ಯಲಾ ಕಡಿತಲೆಯ ಕೊನೆತಾಗಿ ನೆಲಹು ಹಱಿದು ನೆಲಹಿನೊಳಿರ್ದ ದಧಿಮುಖನ ಶಿರಂ ಪಱದು ಬೀಳುತ್ತೆ ಜೂದುಗಾಱನ ಮುಂಡದೊಳ್ ಪತ್ತಿರ್ದು ಕುಳ್ಳಿರ್ಪುದುಮಾ ಸಮಯದೊಳ್

ಕಂದ

ಹಲಿಯಂ ಬೇಡಿ ಮಗುಳ್ದಾ
ಲಲನೆ ಕರಂ ಬೇಗದಿಂದೆ ಪರಿತಂದಾದೇ
ಗುಲದೊಳಗೆ ಪೊಕ್ಕು ನೆಲಹಿನ
ತಲೆಗವಯವಮಾಗಿ ಕೆಳಗೆ ಕುಳ್ಳಿರೆ ಕಂಡಳ್ ೪೮

ಅಪ್ಪುದನಜಹರಿರುದ್ರರ್
ತಪ್ಪಿಸಲಾರ್ತಪರೆ ಬಱಿಯ ತಲೆಗಂಗಮುಮಾ
ಗೊಪ್ಪುವುದಘಟಿತಮಲ್ಲದೆ
ಯುಪ್ಪಿಕ್ಕಿಮ್ಮ ಡಿಸಂದಂತಿದಾಯ್ತೆನಗೀಗಳ್ ೪೯

ಮತ್ತೇಭವಿಕ್ರೀಡಿತ

ಎನುತಾ ಕಾಮಿನಿ ಕಾಂತನೊಂದು ಕೆಲದೊಳ್ ಕುಳ್ಳಿರ್ಪುದುಂ ಜೂದುಗಾಱನ
ಚಿತ್ತಪ್ರಿಯಕಾಂತೆ ಬಂದು ಭರದಿಂದೆನ್ನಾಣ್ಮನಿಂತೀತನೆಂ
ದೆನೆಯಾ ಕಾಂತೆಯರೆನ್ನ ತನ್ನ ಪತಿಯೊಂದೋರೊರ್ವರೊಳ್ ಕಾದುತಿ
ರ್ಪಿನೆಗಂ ಮಾಣಿಸಿಯಿರ್ದ ನಾಲ್ವರವರಂ ಧರ್ಮಸ್ಥಳಕ್ಕಟ್ಟಿದರ್ ೫೦

ವಚನ

ಅಂತು ಕಳುಪೆ ಧರ್ಮಾಧಿಕರಣಂಗಳಲ್ಲಿಗೆ ಬಂದು ತಂತಮ್ಮ ವೃತ್ತಾಂತಮಂ ಸವಿಸ್ತರಂ ಪೇಳೆ ಕೇಳ್ದು ನಿಶ್ಚಯಿಸಿ ತಮ್ಮ ನಿಬರುಂ ಪೂರ್ವೋಕ್ತಿಯಂ ವಿಚಾರಿಸಿಯಿಂತೆಂದರ್

ಶ್ಲೋಕ

ಸರ್ವೌಷಧೀನಾಮಶನಂ ಪ್ರಧಾನಂ| ಸರ್ವೇಷು ಪಾನೇಷು ಜಲಂ ಪ್ರಧಾನಂ ||
ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಸರ್ವಸ್ಯಗಾತ್ರಸ್ಯ ಶಿರಃ ಪ್ರಧಾನಂ || ೫೧

ವಚನ

ಎಂದು ಶಿರಮಾರವಲ್ಲಭನಾದವರ್ಗೆ ಪರಿಯಪ್ಪನೆಂದು ಧರ್ಮಾಧಿಕರಣಂಗಳ್ ಪೇಳ್ದು ಪೋದರೆಂಬಿದು ನಿಮ್ಮ ದೇವಾಸುರಪುರಾಣಶಾಸ್ತ್ರದೊಳುಂಟೊ ಇಲ್ಲವೋ ಪೇಳಿಮೆನೆಯವರಿದು ಲೋಕಪ್ರಸಿದ್ಧವಾಗುಳ್ಳುದನೆಂತಿಲ್ಲೆನಲ್ ಬರ್ಪುದೆನೆಯಾದೊಡೆ ಪುಟ್ಟುವಲ್ಲಿ ಬಱಯ ಶಿರಂ ಪುಟ್ಟಿ ಮತ್ತೊಂದು ಮುಂಡದೊಳು ಪತ್ತಿತೆನಲಕ್ಕುಂಗಡ ಮೆಮ್ಮಶಿರಮೆಮ್ಮ ಮುಂಡದೊಳರಿದಾಗಳೆ ಪತ್ತಿತೆಂದೊಡೆ ಪುಸಿಯುಂ ಚೋದ್ಯಮುಂ ಎಂಬಿರಿಂತಪ್ಪ ಪುಸಿಯುಂ ಚೋದ್ಯಮುಂ ನಿಮ್ಮ ಮತದೊಳನೇಕಮೊಳವೆನೆಯಾ ವಿಪ್ರಪ್ರಕರಂ ಮತ್ತಮಿಂತಪ್ಪವಿನ್ನಾವುವುಂಟು ಪೇಳಿಮೆನೆ ಮನೋವೇಗಂ ಪೇಳ್ಗುಂ

ಮಹಾಸ್ರಗ್ಧರೆ

ಪಿರಿದೊಂದುಗ್ರಾಜಿಯೊಳ್ ದುಂದುಭಿಯ ಶಿರಮನಾಟಂದು ಕೊಂಡುಗ್ರನೇತ್ರಂ
ಗರುಡಂಗೊಲ್ದಿತ್ತನೆಂದುಂ ಪಳದೆನಿಸದಿದಾರ್ ತಿಂದೊಡಂ ತೀರದಿಂತೀ
ಶಿರಮಂ ನೀಂ ಕೊಂಡು ನಿನ್ನೀ ಬಸಿಱ ಹಸಿವಡಂಗಲ್ಕೆ ನಿತ್ಯಾಹ್ನಿಕಂ ತಿಳ
ದಿರು ಕೆಯ್ಯಿಂದೆಲ್ಲಿಯುಂ ನೀನಿಳಿಪದೆ ಧರೆಯೊಳ್ ವರ್ತಿಸೆಂದಿಂತು ಪೇಳ್ದಂ ೫೨

ವಚನ

ಎಂದು ಪೇಳೆ ಕೇಳ್ದಾ ಮಾಳ್ಕೆಯೊಳೆ ವರ್ತಿಸುತ್ತಿರೆಯತ್ತಲಾ ದುಂದುಭಿಯಟ್ಟೆ ಭೀಮಸೇನನ ವಲ್ಲಭೆಯ ಹಿಡಿಂಬೆಯ ಗರ್ಭದೊಳ್ ನೆಲಸಿ ನವಮಾಸಂ ತೀವಿ ಬಱಿಯ ಮುಂಡಮಂ ಬೆಸಲೆಯಾಗಿಯದಂ ಕಂಡು ಪೇಸಿ ಕಾಡಿನೊಳ್ ಬಿಸುಟುಕಳೆಯೆಯಲ್ಲಿಗೆ ಗರುಡಂ ತೊಳಲುತ್ತುಂ ಬಂದು ಬಿದ್ದಿರ್ದ ಮುಂಡಮಂ ಕಂಡು

ಕಂದ

ಪಿಡಿದಿರ್ದ ಶಿರಮನಾ ಕಾ
ಡೆಡೆಯೊಳ್ ಬೀಳಿಕ್ಕಿ ಮುಂಡದತ್ತಲ್ ಗರುಡಂ
ನಡೆಯಲದಱಿಂದೆ ಮುನ್ನವೆ
ನಡೆದು ಶಿರಂ ಪತ್ತಿರೆಯ್ದೆ ಮುಂಡಮನಾಗಳ್ ೫೩

ಉತ್ಪಲಮಾಲೆ

ಪತ್ತೆ ಶಿರಂ ಪೊರಳ್ದು ಕೆಲನಂ ಬಲನಂ ನೆಱೆನೋಡುತೆಳ್ದ ಪೋ
ಗುತ್ತಿರೆ ಕಂಡು ಚಿತ್ತದೊಳೆ ಶಂಕಿಸಿ ಕಶ್ಯಪನಾತ್ಮ ಸಂಭವಂ
ಚಿತ್ತಜವೈರಿಯಿರ್ದೆಡೆಗೆ ಪೋಗಿ ಪದಾನತನಾಗಿ ದೇವ ನೀ
ನಿತ್ತ ಶಿರಂ ಕರಂ ಪರಿದು ಪತ್ತಿದುದೊಂದು ಮಹೋಗ್ರಮುಂಡವಂ ೫೪

ಎಂದು ವಿಚಿತ್ರಮಾಗೆ ವಿನತಾತ್ಮಭವಂ ಕ್ರಮದಿಂದೆ ಪೇಳೆ ಕೇ
ಳ್ದಿಂದುಧರಂ ನಗುತ್ತೆ ಬೆಱಗಾಗಿರಲತ್ತ ಶಿರಸ್ಸು ಮುಂಡದೊಳ್
ಸಂಧಿಸಿದಾತನೆಯ್ದಿ ನಿಜಗೇಹಮನಾತನ ಮಾತೆ ನೀನಿದಾ
ರೆಂದು ಹಿಡಿಂಬೆ ಕೇಳಿದೊಡೆ ನಿನ್ನ ತನೂಭವನೆಂದು ಪೇಳಿದಂ ೫೫

ವಚನ

ಅಂತು ಪೇಳೆ ಕೇಳ್ದು ನಿನ್ನ ಶಿರಂ ಪುಟ್ಟಿದ ವೃತ್ತಾಂತಮೆಂತೆಂದು ಬೆಸಗೊಳಲದಂ ಸವಿಸ್ತರಂ ಪೇಳೆ ಕೇಳ್ದು ಸಂತೋಷಂಬಟ್ಟಾತಂ ಪುಟ್ಟಿದರ್ಕನ್ವರ್ಥನಮಪ್ಪ ಘಟೋತ್ಕಚನೆಂಬ ಪೆಸರಂ ಕೊಟ್ಟಳತ್ತಲೀಶ್ವರನಿಂತೆಂದನಾತಂ ಸಾಮರ್ಥ್ಯಪುರುಷನಾತಂಗೆ ನೀಂ ಧ್ವಜಮಾಗಿರೆಂದು ಗರುಡಂಗೆ ನಿಯಾಮಂ ಕೊಡಲಂತೆಗೈವೆನೆಂದಱಸುತ್ತುಂ ಪೋಗಿಯಾ ಘಟೋತ್ಕಚಂಗೆ ಧ್ವಜಮಾಗಿರ್ದನದಱಿಂ ಪರ್ದಿನ ಧ್ವಜಮಾದುದಾತಂ ಪಲವುಂ ಕಾಲಮಿರ್ದನೆಂಬಿದು ನಿಮ್ಮ ಮತ ಭಾರತಕಥಾ ವೃತ್ತಾಂತ ದೊಳುಂಟೋಯಿಲ್ಲವೋ ಪೇಳಿಮೆನೆಯದು ಲೋಕಪ್ರಸಿದ್ಧವಾಗುಳ್ಳುದನೆಂತಿಲ್ಲೆನಲ್ ಬಪ್ಪುದೆಂದು ವಿಪ್ರರೆನೆಯಾದೊಡೊಂದುಭವದ ಶಿರಂ ಮತ್ತೊಂದು ಭವದ ಮುಂಡವಂ ಪತ್ತಲಕ್ಕುಂ ಗಡವೆಮ್ಮ ಶಿರವೆಮ್ಮ ಮುಂಡವನರಿದಾಗಳೆ ಪತ್ತಿತೆಂದೊಡೆ ಪುಸಿಯುಂ ಚೋದ್ಯಮುಮಾದುದೆಂಬರಿಂತಪ್ಪ ಪುಸಿಯನಿನ್ನೊಂದಂ ಕೇಳಿಮೆಂದು ಮನೋವೇಗಂ ಪೇಳಲ್ ತಗುಳ್ದಂ

ಕಂದ

ಆದಿ ಕ್ಷತ್ರಿಯನೊರ್ವಂ
ಮಾದೇವನನೊಲಿಸಿ ದಿವ್ಯಪಿಂಡಮನೊಂದಂ
ಸಾಧಿಸಿ ಭರವಸದಿಂ ತಂ
ದಾದರದಿಂ ಪಚ್ಚಿ ಪೆಂಡಿರಿರ್ವರಿಗಿತ್ತಂ ೫೬

ಮಹಾಸ್ರಗ್ಧರೆ

ಅದನಿರ್ಬರ್ ನುಂಗೆ ಗರ್ಭಂ ಜನಿಸಿ ಬಳಿಕಮೊಂಬತ್ತುತಿಂಗಳ್ಗೆ ಪೆತ್ತರ್
ಪದೆದಿರ್ಪರ್ಧಾಂಗಮಂ ಕಂಡಗಿದಿವು ನಮಗೇಂ ಬಾರ್ತೆಯೆಂದೊಲ್ಲದೀಡಾ
ಡಿದರುಯ್ದಾ ತಿಪ್ಪೆಯತ್ತಲ್ ಜರೆಯೆನಿಸುವವಳ್ ಕಂಡು ಕೊಂಡುಯ್ದು ಸಂದಿ
ಕ್ಕಿದೊಡಂತಾ ಸಂದು ಸಂದಿಲ್ಲೆನಿಪ ತೆಱದಿ ಪತ್ತಿತ್ತಿಳಾಸೇವ್ಯಮಾಗಲ್ ೫೭

ಕಂದ

ಸಂದಿಸಿದಳ್ ಜರೆಯೆಂಬುದ
ರಿಂದೆ ಜರಾಸಂಧನೆಂಬುದನ್ವರ್ಥದ ನಾ
ಮಂ ದಿಟದಿನಾದುದವನಾ
ನಂದದೆ ಪಲಕಾಲವರಸುಗೆಯ್ಯುತ್ತಿರ್ದಂ ೫೮

ಚಂಪಕಮಾಲೆ

ಇರದೆ ಭುಜಪ್ರತಾಪದ ಸಗರ್ವದೊಳುರ್ಬಿ ಕಡಂಗಿ ಭೀಮನೊಳ್
ಧುರದೊಳಿದಿರ್ಚಿ ತಳ್ತಿಱಿದೊಡಂಜದವಂ ಮಗುಳ್ದಟ್ಟೆ ಮೇಲೆವಾ
ಯ್ದುರವಣೆಯಿಂದೆ ಕುಟ್ಟಿ ಪಿಡಿದೋವದೆ ಸೀಳ್ದು ಬಿಸುಟೊಡುರ್ವಿಗ
ಚ್ಚರಿಯೆನಿಪಂತೆ ಸೀಳ್ಗಳೆರಡುಂ ನೆಱೆ ಪತ್ತಿದುವೆಯ್ದೆ ಬೇಗದಿಂ ೫೯

ವಚನ

ಅಂತು ಪತ್ತೆ ಮತ್ತಂ ಭೀಮನೊಳ್ ಕಾದಲೆಂದಿರ್ದನೆಂಬಿದು ನಿಮ್ಮ ಮತದ ಭಾರತಾವತಾರದ ಕಥೆಯೊಳುಂಟೋ ಯಿಲ್ಲವೊ ಪೇಳಿಮೆನೆ ವಿಪ್ರರಿದು ಜಗತ್ಪ್ರಸಿದ್ಧವಾಗಿ ಯುಂಟೆನೆಯಾದೊಡಿರ್ವರುದರದ್ ಬೇಱೆ ಬೇಱೆ ಪುಟ್ಟಿದುವೆರಡುಂ ಭಾಗಂಗಳುಂ ಪತ್ತಿ ಭೀಮನೊಳ್ ಕಾದಿ ಸೀಳೆಪಟ್ಟು ಮತ್ತಂ ಭೀಮನೊಳ್ ಕಾದಲೆಂದು ಬರಲಕ್ಕುಂ ಗಡಮೆಮ್ಮ ಶಿರವೆಮ್ಮಟ್ಟೆಯೊಳ್ ಪತ್ತಿತೆನೆ ಪುಸಿಯುಂ ಚೋದ್ಯಮುಮೆಂಬಿರೆನೆಯಾದೊಡಾ ಶಿರಂ ಪತ್ತಲದನಲ್ಲೆನ್ನುವುದಲ್ಲದೆಯುಂ

ಕಂದ

ಶಿರಮಂ ಕೊಱೆದೀಡಾಡಲ್
ಮರನಂ ಪರಿದೇಱಿ ಪಣ್ಗಳಂ ತಿನಲಿತ್ತಲ್
ಧರೆಗೊಱಗಿದ ಮುಂಡಂಗಳು
ದರವಾದಂ ತೀವಿತೆಂಬ ಪುಸಿಯೆ ವಿಚಿತ್ರಂ ೬೦

ಕಂದ

ಎಂದಾ ದ್ವಿಜರೆನೆ ಖೇಚರ
ರೆಂದರ್ ನಿಜಮತದ ವೇದಶಾಸ್ತ್ರ ಪುರಾಣಂ
ಸಂದೆಯವಿಲ್ಲದೆ ಪುಸಿದೊಂ
ದಂದದ ಪುಸಿಯಲ್ಲದೆಮ್ಮೊಳುಂಟೆ ವಿಚಿತ್ರಂ ೬೧

ಚಂಪಕಮಾಲೆ

ಎನಲಿನಿತೊಂದು ಪೆರ್ವುಸಿಗಳೆಮ್ಮಯ ವೇದ ಶಾಸ್ತ್ರ ಪುರಾಣದೋ
ದಿನೊಳಣಮಿಲ್ಲ ನೀವಱಿವೊಡೆಮ್ಮೊಳೆ ಸೂಚಿಪುದೆಂದು ವಿಪ್ರರೆ
ಯ್ದೆನೆಯವರೆಲ್ಲರಂ ತಿಳಿಪಲೆಂದು ಮನೋಮುದದಿಂದೆ ಖೇಚರಾ
ವನಿಪತಿ ಪೇಳಲುಜ್ಜುಗಿಸಿದಂ ಸಭೆ ಭಾಪುರೆ ಭಾಪೆನಿಪ್ಪಿನಂ ೬೨

ವಚನ

ಅದೆಂತೆಂದೊಡೆ ಮುನ್ನಮೆ ಸತ್ತರಂ ಪಿತರ ಪಿತಾಮಹರ್ಕಳೆಂದವರ್ಗೆ ಮಹಾಪಕ್ಷದೊಳ್ ಪಂಚಭಕ್ಷ್ಯಪಾಯಸ ತುಪ್ಪಮಂ ಪೆಱರ್ಗಿಕ್ಕೆ ಸ್ವರ್ಗಮಾದನೇಕ ಗತಿಗಳೊಳಿರ್ದ ಪಿತಾಮಹಾಪಿತರ್ಕಳ ಬಸಿರ್ತೀವಲಕ್ಕುಗಡಮೆಮ್ಮ ಶಿರಂ ಮರದ ಮೇಲೆ ಮೆಲ್ದೊಡೆ ಕೆಳಗಿರ್ದೆಮ್ಮಟ್ಟೆಯ ಹೊಟ್ಟೆ ತೀವಿತೆಂದೊಡೆ ನಿಮಗೆ ಪುಸಿಯುಂ ಚೋದ್ಯಮುಮೆಂತಾದುದು ಪೇಳಿಮೆನೆಯಾ ಪರವಾದಿಗಳದರ್ಕೆ ಮಱುಮಾತು ಕುಡದಿರೆ ಶ್ವೇತಪಟರಿಂತೆಂದರ್

ಶ್ಲೋಕ

ಕುಯೋನಿಜಾನಾಂ ಮಧುಮದ್ಯಮಾಂಸಂ
ಕದನ್ನ ಮನ್ನಂ ಚ ತಥಾ ಪರೇಷಾಂ
ಕಲ್ಯಾಣಕಂ ಚಕ್ರಧರಂ ಸುಭೋಜ್ಯಂ
ಸ್ವರ್ಗೇs ಮೃತಾಭಂ ಚ ಭುವಿಸ್ಥಿತಾನಾಂ ೬೩

ಕದನ್ನಮಯಾ ವಿದಿತಃ ಫಣೀಯಾ
ಕದನ್ನಮಯಾ ಪಿತರ ಸ್ವವಿಪ್ರಾಂ
ತ್ರಾಸಿಂ ಪ್ರಭೇದಾ ಪ್ರಭುಜಾಪ್ತಿ ಜಂತುಃ
ನಿದಿರ್ವಮಾಲ್ಯಾದಿಷುನೈಕ ಕಾಮಃ ೬೪

ಸಾಯುಜ್ಯಮಾಯಂತಿ ಪರೇಣ ಪುಂಸಾಃ
ಯೋಗಾಸ್ಥಿತಾಸ್ತೇ ಪಿತರಃ ಪ್ರಬುದ್ಧಾಃ
ಕ್ವಚಿದ್ಗತಾ ದಿವ್ಯಮನುಷ್ಯಭಾವಂ
ನತಾಸ್ತ್ರಿರೂಪಾವಿಶದನ್ನ ಭುಕ್ತಿಂ ೬೫

ಕಂದ

ಸ್ಥಳಚರ ಜಳಚರ ಖಗ ಸಂ
ಕುಳದಡಗಿಂ ಪಂಚಭಕ್ಷ್ಯ ಪಾಯಸಮಂ ಕಾ
ಲ್ದೊಳೆದು ತಣಿಯೂಡೆ ವಿಪ್ರಾ
ವಳಿಯಂ ತಣಿವರ್ ಸಮಸ್ತ ಪಿತರಪ್ರಕರಂ ೬೬

ವಚನ

ಎಂಬುದು ನಿಮ್ಮ ಮತದೊಳುಂಟೊ ಇಲ್ಲವೊ ಪೇಳಿಮೆನೆಯವರಿದು ಜಗತ್ಪ್ರಸಿದ್ಧವಾಗಿವುಳ್ಳುದಿಲ್ಲೆಂದೇಕೆ ಸಂದೇಹಮಾಡಿ ನುಡಿದಿರೆನೆಯಾ ಶ್ವೇತಪಟನಿಂತೆಂದಂ ಹಿಂದೆಯೆಂದಾನುಂ ಸತ್ತು ಪರತ್ರಯಮನೈದಿದಿ ಪಿತರ ಪಿತಾಮಹ ಪ್ರಪಿತಾಮಹರೆಲ್ಲಮೀ ಲೋಕದೊಳ್ ಪಾರ್ವರುಂಡು ತಣಿದೊಡೆ ತಾಮೆಲ್ಲರುಂ ತಣಿವರೆಂದು ಪೇಳ್ವುದು ಪುಸಿಯುಂ ಚೋದ್ಯಮುಮಲ್ಲಿದು ನಿಶ್ಚಯಮೆಂಬಿರೆಮ್ಮ ಶಿರಮಲ್ಲಿಯೆ ಮರನನೇಱ ಮೇಲಿರ್ದ ಪಣ್ ತಿಂದೊಡೆ ಕಳಗಿರ್ದ ಮುಂಡಂಗಳ ಪೊಟ್ಟೆ ತೀವಿತೆಂದೊಡೇಕೆ ಪುಸಿಯುಂ ಚೋದ್ಯಮುಮೆಂಬಿರೆನೆಯಾ ಮಾತಂ ಕೇಳ್ದು ವಿಪ್ರರ್ ಬೆಱಗಾಗಿ ಮಱುಮಾತಂ ಕುಡದಿರೆ ನಿಮ್ಮ ವೇದಪುರಾಣ ಶಾಸ್ತ್ರಂಗಳಿಂತಪ್ಪುವವಂ ವಿಚಾರಿಸಿ ನೋಡಿಮೆನೆಯಾ ವಿದ್ವಾಂಸರೆಮ್ಮ ವೇದಶಾಸ್ತ್ರಪುರಾಣಂಗಳ್ ದೇವತಾಧಿಷ್ಠಿತಂಗಳಾಗಿಯುಂ ವಿಚಾರಿಸಿ ನಿರ್ಣಯ ನಿಷ್ಪತ್ತಿಯಿಲ್ಲದುವಿನ್ನದಂತಿರ್ಕೆ ನಿಮ್ಮಾಗಮಂಗಳುಂ ನಿಮ್ಮ ಪುರಾಣಂಗಳುಂ ನಿಮ್ಮ ದೇವತಾಧಿಷ್ಠಿತಂಗಳುಂ ನಿರ್ಣಯನಿಷ್ಪತ್ತಿಯುಳ್ಳುದಱಯುಳ್ಳುದಱಿಂದೆಮಗೆ ಜಲಕ್ಕನಱಿವಂತು ಪೇಳೆ ನಾವುಮದನೆ ಕೈಕೊಳ್ವೆವಿನ್ನೆಮಗೆ ವಿಚಾರವೇನುಮಿಲ್ಲೆನೆ ಶ್ವೇತಪಟನಿಂತೆಂದಂ

ಕಂದ

ನಾವಾಂತು ಬಂದ ವೇಷಂ
ನಾವೊಲವಿಂ ಪೇಳ್ದ ಕಥೆಗಳೆಲ್ಲಂ ಪುಸಿಗಳ್
ನೀವದ ನಿಶ್ಚಯಮೆಂಬೀ
ಭಾವನೆಯಂ ಮಾಡಬೇಡೆನಲ್ಕವರೆಂದರ್ ೬೭

ಶಾರ್ದೂಲವಿಕ್ರೀಡಿತ

ನೀವೆಮ್ಮಂ ನೆಱೆ ಬುದ್ಧಿಹೀನರಿವರೆಂದೇ ಕೇಳಿದಂಗೆಯ್ವಿರೈ
ನೀವಾಂತೀ ಘನವೇಷವೀ ಕಥೆಗಳೆಲ್ಲಂ ಮೆಚ್ಚುವಂತಪ್ಪುವೇ
ನೀವತ್ಯಂತ ಸಧಾರ್ಮಿಕರ್ ಸಕಲತತ್ವಜ್ಞಾನರೆಂದೆಂಬುದಂ
ನೀವೆಮ್ಮಂ ಗೆಲಿದಂದದಿಂದಮಱದೆಂ ನಿಮ್ಮನ್ನರಿಲ್ಲೆಂಬುದಂ ೬೮

ವಚನ

ಎಂದನೇಕ ತೆಱದಿಂದಾ ಶ್ವೇತಪಟರಂ ಸ್ತುತಿಯಿಸುತ್ತಿರಲಾ ಸಮಯದೊಳ್ ಮುನ್ನಂ ಸೋಲ್ತ ಪಲವುಂ ಬಾಗಿಲ ಪಂಡಿತರ್ಕಳೆಲ್ಲಂ ನೆರೆದು ಬಂದವರ ವದನಾರವಿಂದಮಂ ನೋಡಿ ನೀಂ ಸರ್ವಜ್ಞಭಾಷಿತದ ತತ್ವವಿಶಾರದರೈ ನೀಂ ಸಕಲದರ್ಶನ ನಿರ್ಣಯ ನಿಷ್ಪತ್ತಿಯೊಳ್ ಪ್ರವೀಣರ್ ನೀಂ ಪರಹಿತಚರಿತ್ರರ್ ನೀವಭಿಮಾನಮೇರುಗಳ್ ನಿಮ್ಮ ಗುರುಗಳಾರ್ ನಿಮ್ಮ ಸಮಯವಾವುದು ನೀವಾರ್ ನಿಮ್ಮ ಪೆಸರೇನ್ ನೀವಿಲ್ಲಿಗೆ ಬಂದ ಕಾರಣವೇನೆಂಬುದಂ ಎಮ್ಮಂ ಪೊಲಗೆಡೆಸಿ ಕಾಡದೆ ಜಲಕ್ಕನಱಿಯೆ ಪೇಳ್ವುದೆಂದಾಗ್ರಹಂಗೆಯ್ಯೆ ಕೇಳ್ದು ಮನೋವೇಗನೀ ವಿಪ್ರರೆಲ್ಲರ್ ಕುಟಿಲಸ್ವಭಾವದಿಂ ಪ್ರಸನ್ನಚಿತ್ತರಾಗಿ ಬೆಸಗೊಂಡರೆಂದರೆಱಿಪಿಯಿದೆನ್ನ ಪ್ರತಿಜ್ಞೆಗೆ ಸಾಧ್ಯವಾಯಿತೆಂದು ತನ್ನ ಮನದೊಳೆ ಹರ್ಷೋತ್ಕರ್ಷಚಿತ್ತರಾಗಿ ಕೃಪಾವಳೋಕ ನದಿಂ ನೋಡಿ

ಮತ್ತೇಭವಿಕ್ರೀಡಿತ

ಇಳೆಯೊಳ್ ಮಿತ್ರನಿಮಿತ್ತಮಾಗಿ ತಳೆದಾ ಶ್ವೇತಾಂಬರಾಕಾರಮಂ
ಕಳೆದಾಶ್ಚರ್ಯಮೆನಿಪ್ಪ ಮುನ್ನಿನ ಲಸದ್ವಿದ್ಯಾಧರಾಕಾರಮಂ
ತಳೆದುತ್ಪನ್ನವ ದಿವ್ಯಭೂಷಣಮನಾಂತಾನಂದದಿಂದಂ ದ್ವಿಜಾ
ವಳಿಗಳ್ ಬಣ್ಣಿಸಲಪ್ರತರ್ಕ್ಯಮಹಿಮ ಸಂಪತ್ತಿಯಂ ತೋಱದಂ ೬೯

ಕಂದ

ಅದಱಿಂದೆ ವಿಪ್ರರೆಲ್ಲಂ
ಮುದಮಂ ನೆಱೆತಳೆದು ಖೇಚರಾಧಿಪ ಮುಂ ಕೇ
ಳ್ದದನೆಮಗಱಿಪೆನೆ ತಿಳಿಪಲ್
ಪದೆದು ಮನೋವೇಗನವರ್ಗೆ ಪೇಳಲ್ ತಗುಳ್ದಂ ೭೦

ಪರಮಜ್ಞಾನನಿಧಾನರ್
ಕರುಣಾಕರರುಭಯವಿಧಪರಿಗ್ರಹರಹಿತರ್
ನಿರವದ್ಯಚರಿತರೆಮ್ಮಯ
ಗುರುಗಳ್ ಘನಯೋಗಿ ವಾಸುಪೂಜ್ಯವ್ರತಿಪರ್ ೭೧

ಕೊಲೆ ಹುಸಿ ಕಳವನ್ಯಾಂಗನೆ
ಯೊಲವತಿಕಾಂಕ್ಷೆಗಳೆನಿಪ್ಪ ದಷವ್ರಾತಂ
ತೊಲಗಿದ ಜೀವದಯಂ ಸಲೆ
ನೆಲಸಿದ ಜಿನಧರ್ಮಮೆಮ್ಮ ನಿರ್ಮಲ ಸಮಯಂ ೭೨

ವಚನ

ಮತ್ತಮೀ ಭರತಕ್ಷೇತ್ರದ ವಿಜಯಾರ್ಧಪರ್ವತದ ದಕ್ಷಿಣಶ್ರೇಣಿಯ ವೈಜಯಂತೀಪುರದ ವಿದ್ಯಾಧರಂ ರಿಪುಜಿತನೆಂಬನಾತನ ಮಗನಾಂ ಮನೋವೇಗನೀತನೆನ್ನ ಮಿತ್ರಂ ಪವನವೇಗನೆಂಬನೀತಂ ತತ್ವಮಂ ಕೇಳಲುಮಂ ಕೈಕೊಳಲುಮೊಲ್ಲದಿರೆ ದಿವ್ಯಮುನಿ ವಾಸುಪೂಜ್ಯರುಪದೇಶದಿಂದಿಲ್ಲಿ ಈತನಂ ತಿಳಿಪಲೆಂದೊಡಗೊಂಡುಂಯೀ ಕೃತಕವೇಷದಿಂ ಪುಸಿಯ ಪಸರವೆನಿಸಿ ಪೂರ್ವಾಪರ ವಿರೋಧಂಗಳಪ್ಪ ಕಥೆಗಳಂ ಚರ್ಚಿಸಿ ನಿಮ್ಮ ವೇದ ಶಾಸ್ತ್ರ ಪುರಾಣಂಗಳಂ ಪುಸಿಕಥೆಗಳ್ ಸಮಾನಂಮಾಡಿ ನುಡಿದು ನಿಮ್ಮ ಪಲವುಂ ಬಾಗಿಲವಾದಂ ಗೆಲ್ದೆವಂದು ಪೇಳ್ದವರಂ ಸಂತುಷ್ಟರಂ ಮಾಡಿ

ಮತ್ತೇಭವಿಕ್ರೀಡಿತ

ಎಸೆವ ವೇದ ಪುರಾಣ ಶಾಸ್ತ್ರ ಕಥಾಸಾಂಗತ್ಯದೊಳ್ ಪೇಳ್ವ ಪೆ
ರ್ಬುಸಿಗನ್ವರ್ಥಮೆನಲ್ಕೊಡರ್ಚಿ ಕಥೆಯಂ ದುರ್ಬೋಧರಂ ತಿರ್ದಿ ವಿ
ಪ್ರಸಮೂಹಕ್ಕೆ ಸಖಂಗೆ ಪೇಳಲನುಗೆಯ್ದವ್ಯಕ್ತಮಪ್ಪಂತು ರಂ
ಜಿಸೆ ಪೂರ್ವಾಪರದೊಳ್ ವಿರೋಧಮಿನಿತಿಲ್ಲೆಂಬಂತೆ ಸದ್ಧರ್ಮಮಂ ೭೩

ಕಂದ

ವಿನಯನಿಧಾನಂ ಸಜ್ಜನ
ಜನಸೇವ್ಯ ಪರಹಿತಾರ್ಥ ಚಾರುಚರಿತ್ರಂ
ಜಿನಚರಣಕಮಳಷ್ಟ್ಪದ
ನೆನಿಪಂ ಸಾಹಿತ್ಯಮೇರು ವೃತ್ತವಿಲಾಸಂ ೭೪

ಗದ್ಯ

ಇದು ವಿನಮದಮರಮಕುಟತನಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಬೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಪದಂ
ವೃತ್ತ ವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್ ರಾವಣನ ಶಿರವರಿದು
ಪತ್ತಿತ್ತುಂ ಜರಾಸಂಧನುತ್ಪತ್ತಿಯಂ ಬಾಲಿಯ ಮಗನಿಕ್ಕಡಿಯಾಗಿ
ಪತ್ತುತ್ತುಂ ದುಂದುಭಿಯ ಶಿರಂ ಪತ್ತಿತ್ತುಂ ದಧಿಮುಖನ ಶಿರಂ ಪತ್ತಿತ್ತುಂ
ನವಮಾಶ್ವಾಸಂ