ಶಾರ್ದೂಲವಿಕ್ರೀಡಿತ

ಶ್ರೀವಿದ್ಯಾಧರವಂಶಜಾತನನಘಂ ಕಂದರ್ಪರೂಪಂ ಬುಧೋ
ಜ್ಜೀವಂ ಸತ್ಯಪತಾಕನೂರ್ಜಿತಯಶಂ ನಾನಾ ಕಳಾನೀಕ ಶೋ
ಭಾವಾಸಂ ಕುಮತಾಂಧಕಾರದಿನಪಂ ಧೈರ‍್ಯಾಮರೇಂದ್ರಾಚಳಂ
ಭೂವಂದ್ಯಂ ಜಿನಪಾದಪದ್ಮಮಧುಪಂ ಸಮ್ಯಕ್ತ್ಜರತ್ನಾಕರಂ ೧

ಭ್ರಮರರುದ್ಧಿ

ಪರಮಸಖಂ ಬೆರಸಂದಿನ ದಿವಸಂ
ವರಧನುವಂ ಗದೆಯಂ ನೆಱೆ ಪಿಡಿದಾ
ದರದೊಳೆ ಬೇಡರ ರೂಪಮನೊಲವಿಂ
ಧರಿಯಿಸಿ ತತ್‌ಕ್ಷಣದಿಂದವೆ ನಡೆದಂ ೨

ಚಂಪಕಮಾಲೆ

ಭರದೊಳೆ ಪಾಟಲೀಪುರದ ವಿತ್ತಪದಿಕ್ಕಿನ ಶೋಭೆವೆತ್ತ ಗೋ
ಪುರದೊಳಮೆಯ್ಯ ಕಂಜಭವನಾಲಯಮಂ ನೆಱೆ ಪೊಕ್ಕು ಭೇರಿಯಂ
ತ್ವರಿತದೆ ಪೊಯ್ದು ಕುಳ್ಳಿತಿರೆಯುನ್ನತ ಪೀಠದ ಮಧ್ಯದಲ್ಲಿ ತ
ತ್ಪುರವರ ವಿಪ್ರರೆಯ್ದೆ ನಡೆತಂದರನೂನಕಳಾವಿಶಾರದರ್ ೩

ವಚನ

ಅಂತು ಬಂದವರಂ ಕಂಡು ನೀವೇಕೆ ಭೇರಿಯಂ ಪೊಯ್ದು ಸಿಂಹಾಸನದೊಳೆ ಕುಳ್ಳಿರ್ದಿರೆನೆ ವಿನೋದಕ್ಕೆ ಭೇರಿಯಂ ಪೊಯ್ದೆವೆಲ್ಲರ್ ಕುಳ್ಳಿರ್ಪ ತಾಣಮೆಂದು ಕುಳ್ಳಿರ್ದೊಡಿದು ದೋಷಮೆ ಪೇಳಿಮೆನೆ ಅವರಿಲ್ಲಿ ವಿದ್ವಾಂಸರಾದವರು ವಾದಮಂ ಮಾಳ್ಪೊಡೆ ಭೇರಿಯಂ ಪೊಯ್ದು ವಾದಂ ಗೆಲ್ದಲ್ಲದೆ ಸಿಂಹಾಸನದೊಳ್ ಕುಳ್ಳಿರಬಾರದೆನೆಯಾದೊಡೆ ಮಾಣಲಿಯೆಂದಿಳಿದು ಕೆಳಗೆ ಕುಳ್ಳಿರೆ ಮತ್ತಮಾ ವಿಪ್ರರಿಂತೆಂದರ್

ಕಂದ

ಇಲ್ಲಿಗೆ ಬಂದೀ ಕಾರ‍್ಯಮ
ನೆಲ್ಲಮನೆಮಗಱಿಪಿಮೆಂದೊಡವರಿಂತೆಂದರ್
ಬಿಲ್ಲುಂ ಗದೆಯುಂ ವಾಱುವ
ಮಿಲ್ಲಿಯೆನಲ್ಕೊಂಡುಬಂದೆವಾವಿವನೆಂದರ್ ೪

ವಚನ

ಎನೆಯಿವಱ ಬೆಲೆಯಂ ಪೇಳಿಮೆನೆ ಪ್ರತ್ಯೇಕಂ ದ್ವಾದಶಸಹಸ್ರಸುವರ್ಣಬೆಲೆಯೆನೆ ಇವಱ ಸಾಮರ್ಥ್ಯಮೇನೆನೆ ಈ ಬಿಲ್ಲಿಂ ಬಾಣಮಂ ಪೂಡಿ ಎಚ್ಚಿದೊಡೆ ಶತಯೋಜನಮಂ ಪೋಗಿ ಶತ್ರುಚ್ಫೇದನಂ ಮಾಳ್ಪುದೀ ಗದೆಯಂ ಮಹಾಪರ್ವತದ ಮೇಲಿರಿಸೆ ಶತಚೂರ್ಣಮಂ ಮಾಳ್ಪುದೆಂದು ಪೇಳೆ ಇವನೇತಱಿಂ ಮಾಡಿದಿರೆಂದು ವಿಪ್ರರ್ ಕೇಳೆ ಕೃತಕ ಕಿರಾತರಿಂತೆಂದರ್

ಚಂಪಕಮಾಲೆ

ಅಡವಿಯೊಳಾಂ ತೊಳಲ್ದು ಬರಲೊಂದೆಡೆಯೊಳ್ ಮೃತಮಾದ ಮೂಷಕಂ
ಕೆಡೆದಿರಲಾದುದೀಧನು ಗದಾಯುಧಮಂತದಱಸ್ಥಿಯಿಂದಮೆಂ
ದೊಡೆ ಬೆಱಗಾಗಿ ನಿಮ್ಮ ಗುಣನಾಮಮುಮಂ ನೆಱೆ ಪೇಳಿಮೆಂದು ಕೇ
ಳ್ದೊಡೆ ಧರೆಯಲ್ಲಿ ಕೋಟಿಭಟರೆಂಬುದು ನಮ್ಮ ಗುಣಾಭಿಧಾನಕಂ ೫

ಕಂದ

ಎನಲೀಯಾಯುಧವೀ ಪೆಸ
ರಿನಿತಾಗಿಯು ನಿಮಗದೇಕೆಯುಣಲುಡಲಿಲ್ಲೆಂ
ದೆನೆ ಬರ್ಪ ಬಟ್ಟೆಯೊಳ್ ಭೋಂ
ಕನೆ ಕಳ್ಳರ್ ಸುಲಿದುಕೊಂಡರೆನೆ ಕೇಳ್ದಾಗಳ್ ೬

ನಗೆ ಘೊಳ್ಳೆನೆ ಸಭೆಯೆಲ್ಲಂ
ನಗಲೇಕುಳ್ದುದಕಿನಿತ್ತು ಪುಸಿಯುಂಟೇ ಪೇಳ್
ಜಗದೊಳೆನೆ ನಿಮ್ಮ ಮನದೊಳ್
ಬಗೆದಱವುದು ನಿಮ್ಮ ಮತಪುರಾಣಕ್ರಮದಿಂ ೭

ಎಂದೊಡೆ ಸಭೆಯೆಲ್ಲಂ ತಾ
ವೆಂದರಿನಿತ್ತೊಂದು ಪುಸಿಪುರಾಣಂಗಳೊಳುಂ
ಟೆಂದೆಂಬೊಡೆ ಪೇಳಿಮೆನ
ಲ್ಕೆಂದಂ ಮನದೊಳ್ ನಗುತ್ತೆ ಖಚರಾಧೀಶಂ ೮

ವಚನ

ಇಲ್ಲಿ ಗುಡಭೂತಿಯ ಕಥೆಯನ್ನರುಳ್ಳೊಡೆ ಪೇಳಲಮ್ಮೆವೆನೆಯಾ ಕಥೆಯೆಂತೆಂದು ವಸುಧಾಮರರೆಲ್ಲಂ ಬೆಸಗೊಳೆ ಮನೋವೇಗಂ ಪೇಳ್ಗುಂ

ಕಂದ

ಅಹೀರದೇಸದೊಳಿರ್ಪುದು
ಮಾಹೂರೆಂದೆಂಬುದೊಂದು ಪುರಮಾ ಪುರದೊ
ಳ್ಗಾಹಿಲ್ಲದ ಕಡುಮೂರ್ಖಂ
ಬಾಹಾಬಳದೀರ್ಘಕಾಯನೆಂಬತುಳಭಟಂ ೯

ಚಂಪಕಮಾಲೆ

ತವಕದೆ ಬೆಲ್ಲಮಂ ಮೆಲುತೆ ನಾಲಗೆಯಂ ಬಿಡೆ ಕರ್ಚಿಕೊಂಡು ನೊಂ
ದವನವಿವೇಕದಿಂ ಮುಱಿದುಕೊಂಡನಿನಿತ್ತಿರದಂತೆ ಪಲ್ಗಳೆ
ಲ್ಲವನುಱೆಬೆಲ್ಲಮಂ ಮೆಲಿದೆನಾದೊಡೆಯೆನ್ನಧಿದೇವರಾಣೆಯೆಂ
ದವನಿರಧಾಣೆಯಿಟ್ಟು ತೊಱೆದಂ ಕಡುಗೋಪದೆ ಮೂರ್ಖನೆಂಬವಂ ೧೦

ವಚನ

ಅಂತು ಬೆಲ್ಲಮಂ ತೊಱೆದು ತನ್ನ ಸುಖಕ್ಕೆ ತಾನೆ ಈ ತೆಱನಾದ ಗುಡಭೂತಿಯೆಂಬನ್ನ ಕಡುಮೂರ್ಖನನ್ನರ್ ನಿಮ್ಮ ಸಭೆಯೊಳ್ ಉಳ್ಳೊಡೆ ಪೇಳಲಮ್ಮೆವೆನೆಯಿಂತಪ್ಪ ಮೂರ್ಖರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಮತ್ತಮಿಂತೆಂದಂ

ಕಂದ

ಉಂಡುಟ್ಟು ಬಾಳ್ವ ನರರಂ
ಕಂಡಡೆ ಸೈರಿಸದ ಚಂಡವೇಗನ ಕಥೆಗೋ
ರಂಡಲಮೆನಿಪರ್ಗೆ ಭಯಂ
ಗೊಂಡಪೆನಂತಪ್ಪರಿಲ್ಲರೇ ನಿಜ ಸಭೆಯೊಳ್ ೧೧

ವಚನ

ಎನಲಾ ಚಂಡವೇಗನ ಕಥೆಯೆಂತೆಂದು ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ

ಕಂದ

ಧರೆಗೊಪ್ಪಿರ್ಪುಜ್ಜಯಿನಿಯ
ಪುರದೊಳ್ ವ್ಯವಹಾರಿ ಚಂಡವೇಗನೆನಿಪ್ಪಂ
ಪರದಾಡಿ ಪಲವು ಸೂಳೊಳ್
ಪಿರಿದರ್ಥಂ ನಷ್ಟವಾಗೆ ಬಡತನವಾಗಲ್ ೧೨

ಉತ್ಪಲಮಾಲೆ

ಅಂತು ದರಿದ್ರನಾಗಿಯುಣಲಿಲ್ಲುಡಲಿಲ್ಲೆನಗೆಂದು ದುಃಖದಿಂ
ಚಿಂತಿಸಿ ತಾಳ್ದಿದಂ ತಪಮನೊಲ್ದು ಬಳಾರಿಯ ಮುಂದೆಯಾಕೆ ಬೇ
ಳ್ಪಂತುಟನೀವೆ ನೀಂ ಪಡೆದು ಬೇಡೆನೆ ನಾಂ ನೆನೆಯಿತ್ತು ಸಾಧ್ಯಮ
ಪ್ಪಂತುಟನೀವುದೆಂದೆರೆಯಲೆಂದಳವಂಗೆ ಬಳಾರಿ ಬೇಗದಿಂ ೧೩

ಕಂದ

ಮುನ್ನಂ ನೀಂ ಕೊಟ್ಟಿರಿಸಿದ
ರನ್ನದ ಫಲವಿಲ್ಲದಾಗಿ ಸಿರಿಯೊಂದುಳಿಯಲ್
ನಿನ್ನಭಿಮತಫಲವೀವೆನ
ದಂ ನೆಟ್ಟನೆ ಬೇಡೆನಲ್ಕೆಯವನಿಂತೆಂದಂ ೧೪

ಮುಂಕೊಟ್ಟಟ್ಟುದದುಳ್ಳೊಡೆ
ನೀಂ ಕುಡುಲೇಂ ತನಗೆ ತಾನೆ ಮಾಳ್ಪುದು ಫಲಮಂ
ಮುಂ ಕುಡದಿರ್ದುದಱಿಂ ಪಲ
ವುಂ ಕಾಲಂ ನಿನ್ನ ಮುಂದೆ ತಪದೊಳ್ ನವೆದೆಂ ೧೫

ವಚನ

ಎನೆ ಮೆಚ್ಚಿ ನಿನಗೆ ಭಾಗ್ಯಮಿಲ್ಲದೊಡಂ ನಿನ್ನ ನೆರೆಮನೆಯವರ ಭಾಗ್ಯಮಂ ಪಚ್ಚಿಕೊಡುವೆನೆಂದು ಪಿರಿದಪ್ಪ ಜಯಗಂಟೆಯಂ ಕೊಟ್ಟಿದಂ ನೀನೇನನಾದೊಡಂ ನೆನೆದುಬಾರಿಸೆಯಾಕ್ಷಣದೊಳೆ ಬರ್ಕುಮದರರ್ಧಂ ನಿನ್ನ ನೆರೆಮನೆಯವರ್ಗೆ ಬರ್ಕುಂ ಪೋಗೆನೆ ಆ ಜಯಗಂಟೆಯಂ ಕೊಂಡುಬಂದು ತನ್ನ ಮನೆಯೊಳ್ ಧನಕನಕಸಮೃದ್ಧಿಯಾಗಲಿಯೆಂದು ಬಾರಿಸೆ ಧನಕಸಮೃದ್ಧಿಯಾಯಿತದಱರ್ಧಂ ನೆರೆಮನೆಯ ವರ್ಗಾಯ್ತದಂ ಕಂಡು ಸೈರಿಸಲಾಱದೆ ಕರಂ ಸಿಡಿಮಿಡಿಗೊಂಡು ಮತ್ತೆ ತನ್ನ ಮನೆಯ ವಿತ್ತಮೆಲ್ಲಂ ಪೋಗಲಿಯೆಂದು ಬಾರಿಸೆ ಎಲ್ಲಂ ಪೋಯ್ತಾ ನೆರೆಮನೆಯ ವನರ್ಧಂ ಪೋಯ್ತು ಮತ್ತೆ ನಿತ್ತರಿಸದೆನ್ನುವೆರಡು ಕಣ್ಣೊಡೆದು ಪೋಗಲಿಯೆಂದು ಬಾರಿಸೆ ತನ್ನವೆರಡುಂ ನೆರೆಮನೆಯವನದೊಂದು ಕಣ್ಣೊಡೆದು ಪೋಯ್ತು ಮತ್ತೆ ತನ್ನವೆರಡುಂ ಕಾಲುಂ ಮುಱದು ಪೋಗಲಿಯೆಂದು ಬಾರಿಸೆ ತನ್ನವೆರಡುಂ ನೆರೆ ಮನೆಯವನದೊಂದು ಕಾಲುಂ ಮುಱದು ಪೋದುದು ಇಂತು ಪೆಱರುನ್ನತಿಕೆಯಂ ಸೈರಿಸಿದ ಸಹ್ಯರ್ ನಿಮ್ಮ ಸಭೆಯೊಳಿರ್ದೊಡೆ ಪೇಳಲಮ್ಮೆವೆನೆ ಇಂತಪ್ಪವರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಪೇಳಲ್ ತಗುಳ್ದಂ

ಕಂದ

ಶತಬಲಿಯೆಂಬಸುರ ಮಹೀ
ಪತಿಸುರರಂ ಹಿಂಡಿ ಹಿಳಿದು ತನ್ನಯ ಪದಮಂ
ಸುತನೆನಿಪ ಸಹಸ್ರಬಲಿ
ಕ್ಷಿತಿಪತಿಗಿತ್ತೊಂದು ಗಿರಿಯೊಳಿರ್ದಂ ತಪದಿಂ ೧೬

ವಚನ

ಅಂತು ತಪಂಬಡುತ್ತಿರೆ ದೇವರ್ಕಳದನಱಿದು ಸಹಸ್ರಬಲಿ ಬಲಿಯದ ಮುನ್ನವೆ ಕೊಲ್ಲದಿರ್ದೊಡೆ ನಮ್ಮಂ ದೆಸೆಗಿಡಿಸಿ ಕೊಲ್ಗುಮೆಂದು ತಾಮೆಲ್ಲರುಂ ನೆರೆದು ಪಿರಿದಾಳೋಚನಂಗೆಯ್ದು ಬರುತಿರ್ಪಾ ಸಮಯದೊಳ್ ಶತಬಲಿ ಮುಂದೊಂದುಗಿರಿಯೊಳ್ ತಪಂಗೆಯ್ಯುತ್ತುಮಿರೆ ಕಂಡು ಮುನ್ನಮೀತನಂ ಕೊಲ್ಲದಿರ್ದೊಡಾತಂ ಸಾಧ್ಯನಾಗನೀತಂ ತಾಪಸಂ ಶಸ್ತ್ರದಿಂ ಕೊಲಲು ಪಾಪಂ ಸಮನಿಸುಗುಮೆಂದು ತಾಮೆಲ್ಲರುಂ ಕೂಡಿ ವಜ್ರಕಂಟಕಾನ್ವಿತವಪ್ಪ ಜಿಹ್ವೆಯ ಗವಯಮಂ ಪುಟ್ಟಿಯಿಸಿಯಾ ಗವಯವದಿಂ ನೆಕ್ಕಿಸಲಾತನ ಶಿರಸ್ಸಿನಸ್ಥಿಯೊಳರ್ಧಂ ಶಕ್ರಂಗೆ ವಜ್ರಾಯುಧಮಾಯ್ತು ಮತ್ತರ್ಧಂ ಹರಿಗೆ ಚಕ್ರಮಾಯ್ತು ಮತ್ತಾತನ ಪೃಷ್ಠದಸ್ಥಿಯರ್ಧಂ ಹರಂಗೆ ಪಿನಾಕವಾಯ್ತು ಮತ್ತಮರ್ಧಂ ಪಿರಿದಪ್ಪ ಗಾಂಡೀವಮೆಂಬ ಬಿಲ್ಲಾಯ್ತು ಅದಂ ವರುಣಂಗೆ ಕೊಟ್ಟೊಡಾತಂ ಪಾವಕಂಗಿತ್ತನಾ ಪಾವಕಂ ಪಾರ್ಥಂಗೆ ಕೊಟ್ಟನದಲ್ಲದೆಯುಂ

ಕಂದ

ಉದರದೊಳುಳ್ಳೆಲ್ವನಿತುಂ
ತ್ರಿದಶವ್ರಾತಕ್ಕೆ ಬಿಲ್ಗಳಾದುವು ಕೈಕಾ
ಲೊದವಿರ್ದ ತೋರಯೆಲುಗಳ್
ಗದೆಯಾದುವು ಸಪ್ತಶತಮಭೀಕ್ಷಿಸಲದಱುಳ್ ೧೭

ನೀಲಮುಖಿ ಕೌರವಕ್ಷಿತಿ
ಪಾಲಂಗುದ್ದಂಡರುಧಿರಮುಖಿಭೀಮಂಗಾ
ಕಾಲಂಗೆ ಕಾಲದಂಡಂ
ಮೇಲಾದುವನುಳಿದ ಸುರಸಮೂಹಕ್ಕಿತ್ತರ್ ೧೮

ಅಂದಾ ಮುನಿಪತಿಯಸ್ಥಿಗ
ಳಿಂದಂ ತೆತ್ತೀಸಕೋಟಿ ಸುರರ್ಗಾಯುಧಮುಂ
ಸಂದೆಯಮಿಲ್ಲಾದವು ನರ
ದಿಂದಾದುದು ಬಗೆವೊಡಬ್ಜಗರ್ಭನ ಪಾಶಂ ೧೯

ದೇವಾಸುರಯುದ್ಧದೆ ಮಾ
ದೇವಂ ಗೆಲ್ದಂ ಪಿನಾಕದಿಂ ದಾನವರಂ
ದೇವೇಂದ್ರನ ಬನಮಂ ಗಾಂ
ಡೀವಾಸ್ತ್ರದೆ ಪಾರ್ಥನೆಯ್ದೆ ಸುಟ್ಟು ಬಳಿಕ್ಕಂ ೨೦

ಅರಿದಂ ಶಲ್ಯದ ಬಾಣದೆ
ಧುರದೊಳ್ ಸೈಂಧವನ ತಲೆಯನದಱಂ ಬಳಿಕಂ
ಹಿರಿಯಣ್ಣನ ಯಾಗಕ್ಕತಿ
ಭರದಿಂದಂ ತಂದನೆಯ್ದಿ ಲಂಕೆಯ ಧನಮಂ ೨೧

ತರಳ

ಇಳೆಯನಾ ಶರದಿಂದೆ ಬೇಗದೆ ನಾಗಲೋಕಕೆ ಕಂಡಿಯಂ
ತಳೆದು ಪೊಕ್ಕೊಡೆ ಕಂಡು ವಾಸುಗಿ ಕಾದಿ ಸೋಲ್ತತಿ ಮೆಚ್ಚಿತ
ನ್ನೊಳೆ ವಿಚಾರಿಸಿ ನಾಗದತ್ತೆಯೆನಿಪ್ಪ ಪುತ್ರಿಯನೀಯಲಾ
ಗಳೆ ವಿವಾಹಮನಾಂತು ದೋರ್ಬಲದಿಂದಮೊಪ್ಪಿದನರ್ಜುನಂ ೨೨

ವಚನ

ಆ ಸಮಯದೊಳ್ ಪ್ರತಿಸಂಧಿಸಿಂಹಸಹಸ್ರಬಲಾನ್ವಿತನಪ್ಪ ನಾರಾಯಣಂಗೆ ಮಲ್ಲಯುದ್ಧದೊಳ್ ಸೋಲದ ಮಹಾಬಲನಪ್ಪ ಭೀಮಂ ಪಾರ್ಥಂ ನೋಡೆ ನೋಡೆ ಕುಲಬಲನೆಂಬ ರಾಕ್ಷಸನಿಂ ಪಿಡಿಪೆತ್ತಂ ಮತ್ತಮಾ ಸವ್ಯಸಾಚಿ ಯಿಂದ್ರಕೀಲದೊಳ್ ಮಾಯಾಸೂಕರನಿಮಿತ್ತಂ ಹರನೊಳ್ ಕಾದಿ ಗೆಲ್ದಂ ಸೋಮಿನಿಯೆಂಬ ಬ್ರಾಹ್ಮಣಿಯಂ ವಿವಾಹದ ಸಮಯದೊಳ್ ಹಸೆಯ ಮೇಲಿರ್ದಳಂ ಯಮಂ ಯಮಪುರಕ್ಕೊಯ್ಯೆಯಾಕೆಯ ಭರ್ತಾರಂ ಪಿರಿದುಂ ಕ್ಲೇಶಂಗೆಯ್ಯೆ ಕೇಳ್ದು ಪಾರ್ಥಂ ಯಮಪುರಕ್ಕೆ ದಾಳಿಯಿಟ್ಟು ಕಾಲನೊಳ್ ಕಾದಿ ಗೆಲ್ದವನಂ ಕಟ್ಟಿಯಾ ಬ್ರಾಹ್ಮಣಿಯಂ ತಂದಂ ತನ್ನ ಬಾಣದ ಗಱಿನಿಮಿತ್ತಂ ಗರುಡನ ಪಕ್ಕಮಂ ಕೊಳ್ವಾಗಳಡ್ಡಂಬಂದ ನಾರಾಯಣನಂ ಕಟ್ಟಿ ಯೇಳುದಿನಂ ನೆಲಮಾಳಿಗೆಯೊಳಿರಿಸಿಟ್ಟಂ ಅದಲ್ಲದೆಯುಂ ತಾಯ ನೋಂಪಿಗೆ ಐರಾವತಮಂ ತರಲೆಂದು ದೇವೇಂದ್ರನೊಳ್ ಕಾದಿ ಶರಪಂಜರಮಂ ಕಟ್ಟಿಯೆ ಸ್ವರ್ಗದಿಂದೈರಾವತಮಂ ಇಳಿಹಿತಂದು ಪರಾಕ್ರಮಿಯುಂ ದಿವ್ಯಾಯುಧಸಾಮರ್ಥ್ಯ ಸಮನ್ವಿತನಾಗಿರ್ದುಂ ಬಟ್ಟೆಯೊಳ್ ಬರ್ಪಲ್ಲಿ ಬೇಡರಿಂ ಸುಲಿಸಿಕೊಮಡನೆಂಬಿದು ನಿಮ್ಮ ಮತ ಪುರಾಣಶಾಸ್ತ್ರಂಗಳೊಳುಂಟೋ ಇಲ್ಲವೋ ಪೇಳಿಮೆನೆಯಾ ವಿಪ್ರರುಂಟೆನೆಯಾದೊಡಾವು ಸುಲಿಸಿಕೊಂಡೆವೆನೆಮ್ಮ ನುಡಿಯೇಕಸತ್ಯಮಂಬಿರೆನೆ ಆ ವಿಪ್ರರೆಲ್ಲಂ ನಿರುತ್ತರರಾಗಿ ಮೋನಗೊಂಡಿರೆ ವಾದಂ ಗೆಲ್ದು ಜಯ ಪತ್ರಮಂ ಕೊಂಡು ಮುನ್ನಿನಂತಿರುದ್ಯಾನಕ್ಕೆ ಬಂದು ಮಿತ್ರಂಗೆ ಪರಸಮಯದ ಪ್ರಪಂಚಮೆಲ್ಲಮಂ ತಿಳಿಯಲಱುಪಿ ಸುಖದಿಂದಿರುತಿರಲಾ ಸಮಯದೊಳ್

ಮತ್ತೇಭವಿಕ್ರೀಡಿತ

ಉದಯಂಗೆಯ್ದು ಧರಿತ್ರಿಯಂ ದೃಢಮೆನಲ್ ಪಾದಂಗಳಿಂ ಮೆಟ್ಟಿ ನಿ
ಲ್ಲದೆ ಭೂಜಂಗಳನೇಱಿ ನಿಲ್ಲದೆ ಗಿರಿವ್ರಾತಕ್ಕೆ ಪಾಯ್ದಲ್ಲಿನಿ
ಲ್ಲದೆ ಬೇಗಂ ಗಗನಕ್ಕೆ ಪಾಯ್ದು ಪಿಡಿಯಲ್ಕಾಧಾರಮಂ ನೋಡಿ ಕಾ
ಣದ ಬೀಳ್ವಂತಿರೆ ಪೋಗಿ ಬಿರ್ದನಪರಾಂಭೋರಾಶಿಯೊಳ್ ಭಾಸ್ಕರಂ ೨೩

ವಚನ

ಅಂತು ನೇಸರ್ಪಡುವುದುಂ ಸಂಧ್ಯಾವಂದನೆಯಂ ಮಾಡಿ ದೇವತಾನಮಸ್ಕರಂಗೆಯ್ದು ಮಿತ್ರಂಗೆ ಅರ್ಹತ್ಪರಮೇಶ್ವರನ ಸನ್ಮಾರ್ಗಸಂಪತ್ತಿಯಂ ತಿಳಿವಂತೆ ಕಿಱಿದಱೊಳೆ ತಿಳಿಪಿ ಸಂತುಷ್ಟಚಿತ್ತನಂ ಮಾಡಿ ತದನಂತರಂ ನಿದ್ರಾಮುದ್ರಿತರಾಗಿರುತಿರಲಾ ಸಮಯದೊಳ್

ಚಂಪಕಮಾಲೆ

ತೊಲಗೆಲೆ ಸಂಜೆ ನಿದ್ರೆ ಪೆಱಸಾರ್ ಸತಿಯೊಳ್ ನೆರೆ ಚಕ್ರವಾಕ ಕ
ತ್ತಲೆ ಪೊಗುಗೊಂದಿಯಂ ಮುಳುಗಿ ಬೇಗದೆ ತಾರೆಗಳೆಯ್ದೆ ಬಂದಪಂ
ಜಲರುಹಮಿತ್ರನೆಂದಿಳೆಗೆ ಸಾಱುವವೊಲ್ ಸುರಗೇಹದೊಳ್ ಸಮಂ
ತೊಲೆದುವು ಘಂಟೆಭೇರಿಕಹಳಾರವಮುಂ ಬೆಳಗಪ್ಪ ಜಾವದೊಳ್ ೨೪

ವಚನ

ಅಂತು ಮೊಳಗುವ ಸಂಧ್ಯಾನಕ ಧ್ವಾನದಿಂ ಜಳಧಿಘೋಷಣಂ ನೆಗಳೆ ಖಚರ ಚಕ್ರವರ್ತಿ ನಿದ್ರೆತಿಳಿದೆರ್ದು ಜಳಕ ದೇವತಾರ್ಚನೆಯಂ ಮಾಡಿ ನಿತ್ಯಕರ್ಮಾನುಷ್ಠಾನಧ್ಯಾನ ಮೌನಜಪತಪಸಮಾಧಿಶೀಲಗುಣಮಂ ನಿರ್ವರ್ತಿಸಿ ನಿತ್ಯವೈಮಿತ್ತಿಕ ದಾನಮಂ ಕೊಟ್ಟು ತನ್ನ ಪ್ರಿಯಸಖನ ವದನಾರವಿಂದಮಂ ನೋಡೆ ದರಹಸಿತ ವದನಾರವಿಂದನಾಗಲಾ ಸಮಯದೊಳ್

ಕಂದ

ಮಿತ್ರನಘನಿಚಯದಂತೆ ಧ
ರಿತ್ರಿಯ ತಮಮೆಯ್ದೆ ತೆರಳ್ದು ಪೋದುದು ಮತ್ತಂ
ಮಿತ್ರಾನನದಂದೆ ಶತ
ಪತ್ರಂಗಳಲರ್ದುವರ್ಕನುದಯಿಸುವಾಗಳ್ ೨೫

ಬೇಗದೊಳನುನಯದೆ ಮನೋ
ವೇಗನ ಚಿತ್ತಾನುರಾಗಮಂ ಪ್ರಕಟಿಸುವು
ದ್ಯೋಗಿಯೆನಿಪಂತೆ ಪಿರಿದುಂ
ರಾಗದೊಳುದಯಾದ್ರಿಯೇಱಿದಂ ದಿವಸಕರಂ ೨೬

ವಚನ

ಅಂತು ನೇಸರ್ಮೂಡುವುದುಂ –

ಕಂದ

ಮಿತ್ರಾಭ್ಯುದಯಮನೀಕ್ಷಿಸಿ
ಮಿತ್ರಾಭ್ಯುದಯಮನೆ ಮಾಳ್ಪ ಬಗೆಯಂ ತಳೆದಂ
ಧಾತ್ರಿ ಮಝ ಭಾಪೆನುತ್ತಿರೆ
ಗೋತ್ರ ಶಿರೋಮಣಿಯೆನಿಪ್ಪ ವೃತ್ತವಿಳಾಸಂ ೨೭

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಬೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಟದಂ
ವೃತ್ತ ವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್ ಈಶ್ವರಾದಿ
ಸಕಲದೇವಾಸುರಾರ್ಜುನರ ಶಸ್ತ್ರಾಸ್ತ್ರ ಸಾಮರ್ಥ್ಯಪರೀಕ್ಷಾವರ್ಣನಂ
ಚತುರ್ಥಾಶ್ವಾಸಂ