ಉತ್ಪಲಮಾಲೆ

ಶ್ರೀವಿಭವಮರೇಂದ್ರನಸಹಾಯ ಪರಾಕ್ರಮನತ್ಯುದಾರ ಕ
ಲ್ಪಾವನಿಜಂ ವಿವೇಕನಿಧಿ ಚಾರುಚರಿತ್ರನನಂಗಮೂರ್ತಿ ಸ
ದ್ಭಾವಕಚಕ್ರಿ ಮಿತ್ರಪರಿಪಾಲಕನುನ್ನತ ತತ್ತ್ಜಕೋವಿದಂ
ಜೀವದಯಾಪರಂ ಪರಹಿತಾರ್ಥಯುತಂ ಖಚರಾಧಿನಾಯಕಂ ೧

ಚಂಪಕಮಾಲೆ

ಪರಮಸಖಾನ್ವಿತಂ ಮಱುದಿನಂ ಋಷಿರೂಪದೆ ಪೋಗಿ ಪಾಟಲೀ
ಪುರದ ಸಮೀರಣಾಸೆಯೊಳೆ ರಾಜಿಪ ಗೋಪುರದಬ್ಜಜಾಲಯಾಂ
ತರದೊಳೆ ಪೊಕ್ಕು ಭೇರಿಯನೆ ಬಾರಿಸಿಯುನ್ನತಪೀಠದಲ್ಲಿ ಕು
ಳ್ಳಿರೆ ಖಚರೇಶನಾ ಪುರದ ವಿಪ್ರಜನಂ ಬರೆ ಕೇಳ್ದು ಬೇಗದಿಂ ೨

ವಚನ

ಅಂತು ಬಂದು ಸಿಂಹಾಸನದೊಳ್ ಕುಳ್ಳಿರ್ದರಂ ಕಂಡು ನೀವೀ ಭೇರಿಯಂ ಪೊಯ್ದು ವಾದಂಗೆಲ್ದಲ್ಲದೆ ಸಿಂಹಾಸನದೊಳ್ ಕುಳ್ಳಿರಲ್ಬಾರದೆನೆಯಾ ಮಾತಿಂಗವರಾದೊಡೆ ಮಾಣಲಿಯೆಂದಿಳಿದು ಕೆಳಗೆ ಕುಳ್ಳಿರೆ ಮತ್ತಮಿಂತೆಂದರ್

ಕಂದ

ಆರ ಗುರುವಾರ ದೆಸೆಯಿಂ
ವೈರಾಗ್ಯಂಬೆತ್ತು ತಪಮನಾಂತಿರೆನಿಪ್ಪೀ
ಕಾರಣಮನೆಮಗೆ ತಿಳಿಯುವೊ
ಲೋರಂತಿರೆ ಪೇಳಿಮೆಂದೊಡವರಿಂತೆಂದರ್ ೩

ಎಮಗೆ ಗುರುವಿಲ್ಲ ವೈರಾ
ಗ್ಯಮದಾರಿಂ ಬಂದುದಿಲ್ಲ ನಾವಾಗೀ ವೇ
ಷಮನಾಂತುದಿಲ್ಲ ವಿಧಿಯಿಂ
ಸಮನಿಸಿದುದು ವಿಧಿಯನೆನ್ನರುಂ ಮೀಱುವರೇ ೪

ವಚನ

ಎನಲಾ ವಿಧಿಯ ವೃತ್ತಾಂತಮಂ ಯಥಾಕ್ರಮದಿಂ ಪೇಳಿಮೆನೆ ನಾವು ಪೇಳಲಂಜುವೆವೆನೆ ಅಂಜಲೇಕೆ ಗುಣವರ್ಮನ ವೃತ್ತಾಂತದವರುಳ್ಳೊಡೆ ಪೇಳಲಮ್ಮೆವೆನೆಯಾ ವೃತ್ತಾಂತಮೆಂತದಂ ಪೇಳಿಮೆನೆನ ಮನೋವೇಗಂ ಪೇಳ್ಗುಂ

ಕಂದ

ಕ್ಷಿತನುತ ಚಂಪಾಪುರದಧಿ
ಪತಿ ಗುಣವರ್ಮಂ ಪ್ರಧಾನಿ ಹರಿಯಾತಂ ಪೋ
ಗುತಮೊಂದು ಸರಸಿಯೊಳ್ ಶಿಲೆ
ಯತುಳಂ ನೀರೊಳಗೆ ಬೆಂಡುನೆಗೆದಿರೆ ಕಂಡಂ ೫

ಅರಸಂಗದನಱಿಪಲಿವಂ
ಮರುಳಾಗದೆ ಮಾಣನೆಂದು ಬಂಧಿಸಿ ಕಟ್ಟು
ತ್ತಿರೆ ಬೊಮ್ಮ ರಕ್ಕಸಂ ನಿ
ತ್ತರಿಸಿನ್ನಾಂ ಪೋಪೆನೆಂದು ನುಡಿದೊಡೆ ಬಿಟ್ಟರ್ ೬

ವಚನ

ಅಂತು ಬಿಡಿಸಿಕೊಂಡು ವೈರಮಂ ಮನದೆಗೊಂಡು ಪುರೋದ್ಯಾನದೊಳ್ ಮರ್ಕಟಂಗಳಂ ಮನುಷ್ಯರಂ ಕಾಣಲೊಡನೆ ಗೀತಮಂ ಪಾಡುವ ನಾನಾವಾದ್ಯಮಂ ಬಾರಿಸುವ ನೃತ್ಯಮನಾಡುವಂತೆ ಶಿಕ್ಷಿಸಿರೆಯರಸನಸವಸದಿಂದಲ್ಲಿಗೆ ಪೋಗೆಯಾ ಮರ್ಕಟಂಗಳ್ ತೂರ‍್ಯತ್ರಯಮನೆಸಗೆ ಕಂಡು ಬಂದರಸನದಂ ಮಂತ್ರಿಗೆ ಪೇಳಲರಸಂ ಗ್ರಹ ವೇಷ್ಟಿತನಾದನೆಂದಾತಂಗೆ ಧೂಪವಿಕ್ಕಿ ನಿಗ್ರಹಿಸೆಯಾತನಾ ವೇದನೆಗಾಱದೆ ಪೋಪೆನೆಂದು ಬಿಡಿಸಿಕೊಂಡರಸಂ ಮಂತ್ರಿವೆರಸೋಲಗದೊಳಿರ್ದಲ್ಲಿ ವಾನರ ಸಂಗೀತಮನಾಂ ಸಮ್ಯಕ್ಕಾಗಿ ಕಂಡೆಂ ಪುಸಿಯಲ್ಲ ಬಱಿದೆನ್ನನೇಕೆ ನಿಗ್ರಹಂಗೆಯ್ದಿರ್ ಪೇಳಿಮೆನೆ ಮಂತ್ರಿಯಿಂತೆಂದಂ

ಶ್ಲೋಕ

ಅಶ್ರದ್ಧೇಯಂ ನ ವಕ್ತವ್ಯಂ ಪ್ರತ್ಯಕ್ಷಮಪಿಯದ್ಭವೇತ್ |
ಯಥಾ ವಾನರಸಂಗೀತಂ ತಥೈವ ಪ್ಲವತೇ ಶಿಲಾ || ೭

ವಚನ

ಎಂದು ಮಂತ್ರಿಯರಸಂಗೆವೇಳ್ದನದಱಂ ಪೇಳ್ದುದಂ ಪರೀಕ್ಷಿಸದೆ ಮನೋದ್ವೇಷಮಂ ತಾಳ್ದವರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಲಮ್ಮೆವೆನೆ ಇಂತಪ್ಪರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮತ್ತಂ ಮನೋವೇಗನಿಂತೆಂದಂ

ಕಂದ

ಏಕಾಂತಗ್ರಾಹಿಣನೆಂ
ಬಾ ಕಥೆಯವರುಳ್ಳೊಡುಸಿರಲಮ್ಮೆ ವೆನಲ್ ಕೇ
ಳ್ದಾ ಕಥೆಯನಱಿಪಿಮೆನೆ ಸಭೆ
ಭೂಕಾಂತನವರ್ಗೆ ಪೇಳಲುದ್ಯತನಾದಂ ೮

ನಂದುರಬಾರಿಪುರಂ ರಾ
ಜಂ ದುರ್ದರನಾತನಾತ್ಮಜಂ ಜಾತ್ಯಂಧಂ
ಬಂದವ ತಿರಿದೊಡಮೀವಂ
ತಂದಿಕ್ಕಿದ ತನ್ನ ರತ್ನ ಭೂಷಾವಳಿಯಂ ೯

ಅದಕರಸಂ ಬೇಸತ್ತಿ
ಕ್ಕಿದನಾತಂಗೆಯ್ದೆ ಲೋಹದಾಭರಣಮನೀ
ಯದಿರಾರ್ಗಮೆಮ್ಮ ಕುಲದೇ
ವಿ ದಿಟಂ ಕೂರ್ತಿತ್ತ ದಿವ್ಯಭೂಷಣವೆಂದಂ ೧೦

ವಚನ

ಅಂತು ಕುಮಾರಂಗೆ ನಿಯಮಮಂ ಕೊಟ್ಟು ಮತ್ತಮಿವಂ ಲೋಹದವೆಂದು ಪೇಳ್ದೊಡಂ ಬೇಡಿಕೊಂಡೊಡಂ ಡಾಣೆಯೊಳ್ ಬೀಳೆ ಬಡಿವೆನೆಂದಾಜ್ಞೆಯಂ ಮಾಡಿದ ನಿಂತುಳ್ಳುದನಾಡಿದೊಡಂ ಶಾಸ್ತಿಮಾಡುವೆನೆಂಬವಿವೇಕಿನೃಪನ ಕಥೆಯವರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಲಮ್ಮೆವೆನೆ ಇಂತಪ್ಪವರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಪೇಳ್ಗುಂ

ಕಂದ

ಕರಮೆ ಸೊಗಯಿಸುವಯೋಧ್ಯಾ
ಪುರದ ವಣಿಕ್ಪತಿ ಸಮುದ್ರದತ್ತಂ ಮತ್ತಾ
ಪರದನ ಸುತರಾವಿರ್ವರ್
ಗುರುಗಳ ಹೊರೆಯಲ್ಲಿಯೋದುತಿರಲೊಂದುದಿನಂ ೧೧

ಆ ಗುರುಗಳ್ ಮಲಸಂಜ್ಞೆಗೆ
ಪೋಗುತ್ತುಂ ತುಂಬಿ ತನ್ನಿ ಗುಂಡಿಗೆಯನೆನಲ್
ಬೇಗದೊಳೆ ತುಂಬಿ ತರುತಿ
ರ್ಪಾಗಳ್ ಮದದಾನೆಯೊಂದು ಭೂಪನ ಗೃಹದೊಳ್ ೧೨

ಪಱಿದುದು ಹೊರಜೆಯ ಮಿಳಿಯಂ
ಮುಱಿದುದು ಮದಸೊಕ್ಕಿ ಕಟ್ಟಿದಾ ಕಂಭಮನಿಂ
ತಱದೊಟ್ಟಿ ಕೊಲುತ ಮನುಜರ
ನಱೆಯಟ್ಟಿತು ನಮ್ಮನಿರ್ವರಂ ಕಂಡಾಗಳ್ ೧೩

ವಚನ

ಅಂತು ಬೆನ್ನಟ್ಟಿದೊಡೆ ಪುರದ ಬಹಿರ್ಭಾಗದೊಳ್ ಕೊಗ್ಗಿಯಗಿಡುವಿನ ಶಾಖೆಯೊಳ್ ಗುಂಡಿಗೆಯನೇಱಿ ಅದಱೊಳಾವಿರ್ಬರುಂ ಪೊಕ್ಕು ಮುಚ್ಚಳಮನಿಕ್ಕಿಕೊಂಡು ಪಿಪ್ಪಲಿದ್ವಾರಮಂ ಮುಚ್ಚಲ್ ಮಱುದಿರೆಯಾ ದ್ವಾರದಿಂ ಗಜಂ ಪೊಕ್ಕು ಎಮ್ಮಂ ಕಂಡು ಬೆನ್ನಟ್ಟಿ ಬರಲಾವಿರ್ವರುಮಾ ಗುಂಡಿಗೆಯೊಳೆಲ್ಲಿಯುಂ ನಿಲ್ಲದಱುದಿಂಗಳೋಡುತ್ತಿರಲ್ ಅದುಂ ಬೆನ್ನಟ್ಟಿ ಬೆಂಬಿಡದಿರೆ ನಿತ್ತರಿಸಲಾಱದೆ ಆ ಪಿಪ್ಪಲಿದ್ವಾರದಿಂ ನಾವಿರ್ವರುಂ ಪೊಱಮಟ್ಟು ಪಿಂತಣ ಬಾಲದೊಳೊಂದು ರೋಮಂ ಸಿಲ್ಕೆಯಾ ಗಂಧಗಜಮಲ್ಲಿಯೆ ನಿಂದುದಾವಿರ್ವರುಮೆಲ್ಲಿಯುಂ ನಿಲ್ಲದೋಡಿಯಡವಿಯಂ ಬಿಟ್ಟು ಬರ್ಪಾಗಳ್ ಮುಳ್ಗಳ್ ತೊಡಂಕಿ ಮಂಡೆಯಾ ರೋಮಮುಂ ಉಟ್ಟು ಪೊದೆದ ಸೀರೆಗಳೆಲ್ಲಂ ಪಱಿದು ಪೋದುವದಱಿಂ ತಾಪಸರೂಪರಾದೆವೆಮ್ಮ ತಪಶ್ಚರಣಕ್ಕೆ ಕಾರಣಮಿದೆಂದು ಪೇಳೆ ವಿಪ್ರರೆಲ್ಲಂ ಇಂತಿಪ್ಪ ಸತ್ಯವಚನಮಂ ನಿಮ್ಮ ದರ್ಶನದವರಾಡಲಾಗದೆಂಬಿರೆನೆ ನಿಮ್ಮನ್ನರ್ ತಾಪಸರಾಡಲಕ್ಕುಮೆ ಪೇಳಿಮೆನೆಯಾ ತಾಪಸರಿಂತೆಂದರ್

ಕಂದ

ಉಳ್ಳಾತಂ ಕಾಳ್ಗೆಡೆದೊಡ
ದೊಳ್ಳಿತ್ತೆಂದೆಂಬರೆಯ್ದೆ ಬಡವಂ ಪಿರಿದೊಂ
ದೊಳ್ಳಿತ್ತಂ ನುಡಿದೊಡದಂ
ಪೊಲ್ಲೆಂಬರ್ ಕಷ್ಟಮಲ್ಲವೇ ದಾರಿದ್ರ್ಯಂ ೧೪

ವಚನ

ಅಂತಾನುಳ್ಳುದಂ ನುಡಿದೊಡದಂ ಪೊಲ್ಲೆಂಬರ್ ಪುಸಿಯೆಂಬಿರೆಮ್ಮ ನುಡಿಯೆಂತು ಪುಸಿ ಪೇಳಿಮೆನೆ ವಿಪ್ರರಿಂತೆಂದರ್ ನೀವಿರ್ವರುಂ ಗುಂಡಿಗೆಯೊಳ್ ಪುಗುವುದುಂ ಮುಚ್ಚುಳ ಮನಿಕ್ಕಲ್ ಮಱೆದಿರಲ್ ಗಜಂ ಪಿಂತನೆ ಪುಗುವುದುಂ ಅನಿತು ಭಾರಮನಾ ಕೊಗ್ಗಿಯ ಶಾಖೆಯಾನ್ತಿರ್ಪುದುಂ ನೀವಾ ಗಜಮಂ ಕಂಡೋಡುವುದುಂ ಮತ್ತಮದು ಬೆನ್ನಟ್ಟವುದುಂ ನೀವಱೊಳಱುದಿಂಗಳ್ವರಂ ತೊಳಲ್ವುದುಂ ಮತ್ತಮದಱೊಳ್ ನಿತ್ತರಿಸಲಾಱದೆ ಪೊಱಮಟ್ಟು ಗಜಂ ಪೊಱಮಡದಂತೆ ಮುಚ್ಚುಳಮನಿಕ್ಕಿ ಪೋಪುದುಂ ಅದುವಾ ಪಿಪ್ಪಲಿದ್ವಾರದೊಳ್ ತನ್ನ ಸರ್ವಾಂಗಮೆಲ್ಲಮ ಪೊಱಮಟ್ಟು ಪಿಂತಣ ಬಾಲದ ರೋಮಮೊಂದು ಸಿಲ್ಕೆ ಆ ಗಂಧಗಜಮಲ್ಲಿಯೆ ನಿಲ್ವುದುಂ ನೀಮಿರ್ವರುಂ ನಿಲ್ಲದಡವಿಯಂ ಪೊಕ್ಕೋಡುವಾಗಳಲ್ಲಿಯ ಮುಳ್ಗಳ್ ತೊಡಂಕಿ ಮಂಡೆಯ ರೋಮಂ ಉಟ್ಟು ಪೊದೆದ ಸೀರೆಗಳೆಲ್ಲಂ ಪೋಗಿ ನೀಮಿರ್ವರೋಡಿ ಬಂದೆವೆಂಬುದಿದು ವಿರುದ್ಧಂ ಪಿರಿದುಂ ಪುಸಿಯೆನೆ ಮನೋವೇಗನಿಂತೆಂದಂ ನಿಮ್ಮ ಪುರಾಣದ ಪುಸಿಯಿದಱಹವಣೆ ಪೇಳಿಮೆನೆ ಯೆಮ್ಮ ಪುರಾಣದೊಳಿನಿತು ಪುಸಿಯುಳ್ಳೊಡೆ ಪೇಳಿಮೆನೆ ಮನೋವೇಗಂ ಪೇಳಲ್ ತಗುಳ್ದಂ

ಮತ್ತೇಭವಿಕ್ರೀಡಿತ

ಜಗಮಂ ನಿರ್ಮಿಸಿ ರಕ್ಷಿಸೆಂದು ಹರಿಗಿತ್ತಾ ಕಂಜಜಂ ಪೋಗೆ ಭಿ
ಕ್ಷೆಗೆ ರುದ್ರಂ ಬರೆ ಕೊಲ್ಗುಮೆಂದುದರದೊಳ್ ಬೈತಿಟ್ಟುಕೊಂಡಿರ್ದು ಮೆ
ಲ್ಲಗೆ ಕುಂಭೋದ್ಭವನಲ್ಲಿಗೈದಿ ಹರನಂ ವಂಚಿಪ್ಪ ಠಾವಂ ದಿಟಂ
ಬಗೆದಾನಂದೊಳೀವುದೊಂದೊಱುದೊಡಿಂತೆಂದಂ ಮುನೀಂದ್ರೋತ್ತಮಂ ೧೫

ಕಂದ

ಪುಗು ನೀಂ ಬೇಗದೊಳಾನಿ
ರ್ಪಗಸೆಯ ಗೊಂದಣದ ಶಾಖೆಯೊಳ್ ನೇಱಿರ್ಪೀ
ಸೊಗಯಿಪ ಕಮಂಡಲದೊಳೆನೆ
ಮಿಗೆ ಪೊಕ್ಕದಱೊಳಗೆ ಕಂಡನಬ್ಧಿಯನೇಳಂ ೧೬

ಆ ಜಳರಾಸಿಗಳೊಳ್ ವಿ
ಭ್ರಾಜಿಸುವಿಂಗಡಲ ನಡುವೆ ದಿನಕರ ಸಂಖ್ಯಾ
ಯೋಜನದಗಲದಿನಿರೆ ವಟ
ಭೂಜವದಂ ಕಂಡು ಬಂದನಲ್ಲಿಗೆ ಕೃಷ್ಣಂ ೧೭

ಬಂದಾ ಭೂರುಹದೆರಡೆಲೆ
ಯೊಂದಿದ ಮಧ್ಯದೊಳೆ ಪೊಕ್ಕುಮದಱಲೊಂದಿರೆ ಗೋ
ವಿಂದಂ ಮತ್ತತ್ತಲ್ ಪರಿ
ತಂದಂ ಭಿಕ್ಷಕ್ಕೆ ಪೋಗಿ ಸರಸಿಜಗರ್ಭಂ ೧೮

ಉತ್ಪಲಮಾಲೆ

ಬಂದು ಸರೋಜಜಂ ಹರಿಯನೀಕ್ಷಿಸಿ ಕಾಣದೆ ಕೂಡೆ ನೋಳ್ಪೆನಂ
ದಂದು ಬರುತ್ತಗಸ್ತ್ಯಮುನಿ ಮುಂದಿರೆ ಕಂಡು ವಿಚಾಲ್ ನಗು
ತ್ತುಂ ದಯೆಯಿಂದಮೆನ್ನಯ ಕಮಂಡಲದೊಳ್ ಮಿಗೆ ಪೊಕ್ಕು ನೋಡು ಪೋ
ಗೆಂದೊಡೆ ಪೋಗಿಯಾಱುತಿಂಗಳದರಱೊಳ್ ನೆಱೆ ಪೊಕ್ಕು ತೊಳಲ್ದು ನೋಡಿದಂ ೧೯

ವಚನ

ಅಂತು ನೋಡುತುಂ ಬಂದು ವಟವಿಟಪಿಯಂ ಕಂಡು ಅದಱೆಲೆದಪ್ಪದೆ ಶೋಧಿಸಿ ನೋಡುತುಂ ಬರ್ಪಾಗಳೆರಡೆಲೆಯ ಮಧ್ಯದೊಳು ನಿದ್ರಾಮುದ್ರಿತನಾಗಿರ್ದ ಹರಿಯಂ ಕಂಡು ಧರೆಯಂ ನುಂಗಿರ್ದನೆಂದು ಬರೆದಱಿದು ಪೊಟ್ಟೆಯೊಳ್ ಪುಗುವುಪಾಯಮಂ ಕಾಣದೆ ಚಿಂತಿಸುತಿರ್ಪಾಗಳಚ್ಯುತನಾಗುಳಿಸೆ ಬ್ರಹ್ಮಂ ವಕ್ತ್ರದಿಂ ಪೊಕ್ಕು ಪೊಟ್ಟೆಯೊಳಿರ್ದ ಸರ್ವೋರ್ವರೆಯಂ ಕಂಡು ಇದನೆಲ್ಲಿಂ ಪೊಱಮಡಿಸುವೆನೆಂದು ದೆಸೆ ದೆಸೆಯ ನೋಡಿ ಕಾಣದೆ ನಾಭೀಕಮಳಮಂ ಕಂಡು ಆ ಕಮಳನಾಳದಿಂ ಸರ್ವೋರ್ವರೆಯಂ ಪೊಱಮಟ್ಟು ವೃಷಣಂ ಸಿಕ್ಕಿಯಾಕಮಳಮಧ್ಯದೊಳೆ ಕುಳ್ಳಿರೆ ಬ್ರಹ್ಮಂ ಕಮಳಾಸನನಾದನೆಂಬಿದು ನಿಮ್ಮ ಪುರಾಣದೊಳುಂಟೋ ಯಿಲ್ಲೋ ಪೇಳಿಮೆನೆಯಾ ವಿಪ್ರರೆಲ್ಲ ಮಿದುಂಟೆನೆಯಾದೊಡಿದು ಪುಸಿಯಲ್ಲ ಪೇಳಿಮೆನೆ ಇದಲ್ಲದೆ ಮತ್ತಮಿಂತಪ್ಪ ಪುಸಿಯೆಮ್ಮ ಪುರಾಣದೊಳುಂಟೆ ಪೇಳಿಮೆಂದು ಕೇಳೆ ಇನ್ನುಂ ಪಲವುಂ ಪುಸಿಯುಂಟೆನೆ ಅದಂ ಪೇಳಿಮೆನೆ ಮನೋವೇಗಂ ಪೇಳ್ಗುಂ

ಕಂದ

ವಿದಿತಂ ಕುರುಜಾಂಗಳಮೆಂ
ಬುದು ನಾಡಾ ನಾಡೊಳಿರ್ಪುದತಿಶಯಶೋಭಾ
ಸ್ಪದಮಾಗಿ ಹಸ್ತಿನಾಪುರ
ವದಱಧಿಪಂ ಸತ್ಯನಿಧಿ ಯುಧಿಷ್ಠಿರನೆಂಬಂ ೨೦

ಆ ನರಪತಿಯೊಂದುದಿನಂ
ನಾನಾ ಯಾಗಮನೆ ಮಾಳ್ಪ ಬಗೆಯಂ ಬಗೆದಂ
ದಾ ನೈಮಿತ್ತಿಕರಂ ಕರೆ
ದೇನಿದಱ ವಿಧಾನಮೆಂದೊಡವರಿಂತೆಂದರ್ ೨೧

ಶ್ಲೋಕ

ಅಶ್ವಮೇಧೇ ಹಯಂ ಹನ್ಯಾತ್ ಪುಂಡರೀಕೇ ದಂತಿನಂ |
ವರಾಹೇ ಸೂಕರಂ ವಧ್ಯಾತ್ ಗೋಸೂಯೆ ಕಪಿಲಾಂ ವಿದುಃ || ೨೨

ಬ್ರಹ್ಮಹತ್ಯಾನಿವೃತ್ತ್ಯರ್ಥಂ ಸಮಿತಸ್ತೇನ ಕಾರಯೇತ್ |
ತನ್ಮಾಂಸೇ ಇಷ್ಟಭೋಜನಂ ನ ಭೋಜ್ಯಂ ಮಂತ್ರವರ್ಜಿತಂ || ೨೩

ವಚನ

ಎಂದನೇಕತೆಱದ ಯಾಗಂಗಳ ಕ್ರಮಮಂ ವೇದೋಕ್ತಕ್ರಮದಿಂ ಸವಿಸ್ತರಂ ಪೇಳ್ದು ಮತ್ತಮಿಂತೆಂದರಾ ಯಾಗಮನಾವನೊರ್ವಂ ಮಾಡಲಾ ಫಲಮಂ ಸಾಮರ್ಥ್ಯದಿಂದನ್ಯರ್ ಕೊಳ್ವುದಱಿ ಪೆಱರ್ ಕೊಳ್ಳದಂತಾಗಿ ಮಾಡಲ್ವೇಳ್ಪುದೆನೆಯದನಾರುಂ ಕೊಳ್ಳದಂತಾಗಿ ಮಾಳ್ಪಡಾವುದುಪಾಯಮೆಂದು ಯುಧಿಷ್ಠಿರಂ ನೈಮಿತ್ತಿಕರಂ ಬೆಸೆಗೊಳೆ ಅವರಿಂತೆಂದರ್ ಪಾತಾಳತಳದೊಳ್ ನಾಥದೇವನೆಂಬ ಯೋಗೀಶ್ವರನಿರ್ಪನಾತನಂ ಧರಣೇಂದ್ರಂ ಬೆರಸೊಡಗೊಂಡು ತಂದು ಯಾಗಮಂಟಪದೊಳ್ ಕುಳ್ಳಿರಿಸಲಾ ಫಲಮನಾರುಂ ಕೊಳಲ್ಪಡೆಯರೆಂದು ಪೇಳೆ ಕೇಳ್ದು

ಸ್ರಗ್ಧರೆ

ಪಾತಾಳಂ ತಾನಭೇದ್ಯಂ ಪುಗುವೊಡರಿದು ಮೇಣ್ಪೊಕ್ಕೊಡಂ ಬಾರನಾರ್ಗಂ
ಖ್ಯಾತಂ ನಾಗಾಖ್ಯಯೋಗೀಶ್ವರನವನೊಲವಿಂ ಬಂದೊಡಮ ಬಾರನಾರ್ಗಂ
ಮಾತೇಂ ನಾಗೇಂದ್ರನಂತಾತನನತಿಬಳನಂತಪ್ಪರಾರೆಂದು ಚಿಂತಾ
ಚೇತಂ ತಾನಾಗೆ ಧರ್ಮಾತ್ಮಜನದನಱಿದಾ ಪಾರ್ಥನಾಂ ತರ್ಪೆನೆಂದಂ ೨೪

ಉತ್ಪಲಮಾಲೆ

ಎಂದು ಧನಂಜಯಂ ಪಿಡಿದು ಗಾಂಡಿವಮಂ ತಿರುವಿಟ್ಟು ನೀವಿ ತೊ
ಟ್ಟೊಂದಿಸುವಿಂ ನೆಲಂ ರಸೆಗೆ ಬಾದಣಮಪ್ಪಿನಮೆಚ್ಚು ಪೊಕ್ಕನ
ಲ್ಲಿಂದಹಿಲೋಕಮಂ ಬಗೆಯದಂತದನೀಕ್ಷಿಸೆ ನಾಗರಾಜನೆ
ಯ್ತೆಂದು ಪಳಂಚಿ ತಳ್ತಿಱದನಾತ್ಮ ಬಲಂ ಬೆರಸಾಜಿರಂಗದೊಳ್ ೨೫

ಚಂಪಕಮಾಲೆ

ಪಿಡಿದಿಡೆ ಶಕ್ತಿಯಿಂದೆಸೆ ಶರಾಳಿಗಳಿಂದಿಡೆ ಸೆಂಡುಕೋಲ್ಗಳಿಂ
ದಿಡೆ ಸಬಳಂಗಳಿಂದಿಡೆ ಸುತೋಮರದಿಂದಿಡೆ ಪಿಂಡಿವಾಳದಿಂ
ದಿಡೆ ಕರಚಕ್ರದಿಂ ಫಣಿಪನಂತೆನಿತಂ ತೆಗೆದೊಂದು ಬಾಣದಿಂ
ಕಡಿಕಡಿ ಪಲ್ಲಟಂಗೆಡೆಯಲೆಚ್ಚಿದನಾಜಿಯೊಳಿಂದ್ರನಂದನಂ ೨೬

ವಚನ

ಅಂತೆಚ್ಚಿನ ನಾಗೇಂದ್ರನಂ ವಿರಥನಂ ಮಾಡಿದೊಡೆ ಮೆಚ್ಚಿ ನಾಗೇಂದ್ರಂ ತನ್ನ ಕುಮಾರಿ ನಾಗದತ್ತೆಯೆಂಬವಳಂ ಪಾರ್ಥಂಗೆ ಕುಡೆ ಶುಭದಿನಮುಹೂರ್ತದೊಳ್ ಮದುವೆಯಾಗಿ ಚತುರ್ಥಿಯಂ ಮಾಡಿ ಮದುವೆಯಂ ಕಳಿಪೆ ನೀವಿಲ್ಲದೆ ನಾನೊರ್ವನೆ ಪೋಗೆನೆಂದು ನಾಥದೇವನುಂ ನಾಗೇಂದ್ರನುಂ ಶತಕೋಟಿಬಲಂಬೆರಸಾ ಛಿದ್ರದಿಂ ದಮೆ ಪಾರ್ಥನೊಡಗೊಂಡು ಬಂದು ಯಾಗಮಂಟಪದೊಳ್ ಕುಳ್ಳಿರಿಸಿದನೆಂಬುದು ನಿಮ್ಮ ಪುರಾಣದೊಳುಂಟೊಯಿಲ್ಲೊ ಪೇಳಿಮೆನೆಯವರಿದುಂಟೆನೆಯಾದೊಡೆಮ್ಮನೀ ಗುಂಡಿಗೆಯೊಳೀ ಛಿದ್ರದಿಂದೆಂತು ಪೊಕ್ಕು ಪೊಱಮಟ್ಟರೆಂದು ವೃಥಾ ಮರುಳಾಡುವಿರೇಕೆನೆಯವರಿಂತೆಂದರಾ ದ್ವಾರದಿಂ ಪುಗಲಕ್ಕುಮಾ ಗುಂಡಿಗೆಯೊಳ್ ನೀವಿರ್ವ ರುಮಾಗಜಮುಮೆಂತು ಪಿಡಿದುದೆಂತು ಪೇಳಿಮೆನೆ ಮನೋವೇಗನಿಂತೆಂದಂ

ಕಂದ

ಕಿಱುಕುಣಿಕೆಯ ಬೆಟ್ಟುದ್ದದ
ಕಿಱಿಯನಗಸ್ತ್ಯಂ ಪಯೋಧಿಯಂ ಕುಡಿಯಲೊಡಂ
ನೆಱೆದುದವನುದರವೆಂದೆನೆ
ನೆಱೆಯದೆ ಗುಂಡಿಗೆ ಮದದ್ವಿಭಕ್ಕಂ ನಮಗಂ ೨೭

ವಚನ

ಅದಲ್ಲದೆಯುಂ

ಕಂದ

ಆ ಮುನಿಯ ಕಮಂಡಲದೊಳ್
ಭೂಮಿ ನಗವ್ರಾತವಖಿಳನದಿವಾರಾಶಿ
ಸ್ತೋಮವಿರಲಕ್ಕು ಗಡ ನಾ
ವೀ ಮದಗಜವೆರಸು ಗುಂಡಿಗೆಯೊಳಿರಲರಿದೇ ೨೮

ವಚನ

ಎಂದನೇಕತೆಱದುಪಮೆಯಂ ಕೊಟ್ಟು ನುಡಿದಿಂತೆಂದಂ ನಿಮ್ಮ ಪುರಾಣಮೇನೇನ ಸತ್ಯಮನಾಡಿದೊಡಂ ಸತ್ಯಮೆಂಬಿರಿ ನಾಂ ಸತ್ಯಮನಾಡಿದೊಡಮಸತ್ಯಮೆಂಬಿರಾತ್ಮ ದೋಷಂ ನ ಪಶ್ಯತಿ ಎಂಬ ನೀತಿ ನಿಮ್ಮಲ್ಲಿ ಯಥಾರ್ಥಮಾಯ್ತೆಂದು ನುಡಿದು ನಿಲ್ಲದೆ ಮತ್ತಮಿಂತೆಂದಂ

ಕಂದ

ತನಗುಳ್ಳವಗುಣಮಂ ಗುಣ
ಮೆನುತಿರ್ಪನ್ಯರ ಗುಣಂಗಳಂ ದುರ್ಗುಣಮೆಂ
ದೆನುತಿರ್ಪ ಪಾಪರತ ಚಿ
ತ್ತನನಾವಂ ತಿಳಿಪಲಾರ್ಪನಾತನೆ ದೇವಂ ೨೯

ಎನೆ ಕೇಳ್ದು ವಿಪ್ರರೆಲ್ಲಂ
ಮನದೊಳ್ ನೆಱೆ ಮೆಚ್ಚಿ ಜೈತವಾದಿಗಳೀ ಮೇ
ದಿನಿಯೊಳ್ ನೀವೆಂದಿತ್ತರ್
ಘನಗುಣನಿಧಿಗಳ್ಗೆ ವಿಜಯಪತ್ರಮನೊಲವಿಂ ೩೦

ವಚನ

ಅಂತೀಯೆ ಜಯಪತ್ರಮಂ ಕೊಂಡು ತಮ್ಮಿರ್ವರುಂ ವಿಮಾನಮಂ ಬೈತಿರ್ದುದ್ಯಾನವನಕ್ಕೆ ಬಂದು ಕುಮತಾಗಮಂಗಳೊಳಗುಳ್ಳ ಪ್ರಪಂಚಮನೆಲ್ಲವಂ ಸ್ವದರ್ಶನದ ನಿಷ್ಟ್ರಪಂಚಮುಮಂ ಕೆಳೆಯಂಗೆ ತಿಳಿವಂತು ಪೇಳ್ದು ಮಿಥ್ಯಾತ್ವಮಂ ಬಿಡಿಸಿ ಹೃಷ್ಟನಂ ಮಾಡಿ ಜಗದ್ವ್ಯಾವೃತಿಯೆಲ್ಲಮಂ ಸ್ವಸಮಯಪುರಾಣಕ್ರಮದಿಂ ವ್ಯಕ್ತಮಪ್ಪಂತು ತಿಳಿಯೆಪೇಳ್ದು ಸುಖದಿನಿರುತ್ತಿರೆಯಾ ಸಮಯದೊಳ್

ಕಂದ

ಜಿನಸಮಯದೊಡನೆ ವಾದಿಸು
ವನ ತೇಜೋವಹ್ನಿಯಂ ನಭಕ್ಕಿಡೆ ಮಗುಳ್ದೀ
ವನನಿಧಿಯೊಳ್ ಬಿರ್ದಿರ್ದ
ತ್ತೆನಿಪಂತಿರೆ ಬಿರ್ದನರ್ಕನಪರಾಂಬುಧಿಯೊಳ್ ೩೧

ವಚನ

ಅಂತು ನೇಸರ್ಪಡುವುದುಂ ನಿದ್ರಾಮುದ್ರಿತರಾಗಿ ಕಿಱಿದಾನುಂಬೇಗಮಿರುತ್ತಿರೆ ಕುಕಿಲ್ವ ಪಿಕನಿಕರದಿಂಕೇಗುವಸೋಗೆವಿಂಡಿನಿಂದುಲಿವಳಿಕುಳಂಗಳಿಂದೋದುವ ಶುಕಶಾರಿಕಾ ಸಮೂಹದಿಂ ಸುಳಿವ ತಣ್ಣೆಲರಿಂ ಬಾರಿಸುವ ಸಂಧ್ಯಾನಕಧ್ವಾನದಿಂ ನಿದ್ರೆತಿಳಿದೆಚ್ಚೆತ್ತು ಜಳಕ ದೇವತಾರ್ಚನೆಯಂ ನಿರ್ವರ್ತಿಸಿ ನಿತ್ಯದಾನಮಂ ಕೊಟ್ಟು ಕುಳ್ಳಿರ್ಪ ಸಮಯದೊಳ್

ಕಂದ

ಜಿನಧರ್ಮದೊಡನೆ ವಾದಿಸು
ವನ ವಂಶವ್ರಜಮನುರಿಪಲುದಯಿಪ ಖಚರೇಂ
ದ್ರನ ತೇಜೋವಹ್ನಿಯಿದೆಂ
ದೆನೆಯುದಯಾಚಲಮನೇಱಿದಂ ದಿವಸಕರಂ ೩೨

ವಚನ

ಅಂತು ನೇಸರ್ಮೂಡುವುದುಂ

ಕಂದ

ಪರಹಿತಮೆ ಬೆಸನೆಯರ್ಹ
ಚ್ಚರಣದ್ವಯಭಕ್ತಿಚಿತ್ತವೃತ್ತಿದಯಂ ಸ
ಚ್ಚರಿತಂ ತನಗೆನೆ ಸಖಸುಖ
ಕರನೆಸೆದಂ ಧಾತ್ರಿಯಲ್ಲಿ ವೃತ್ತವಿಳಾಸಂ ೩೩

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಬೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಟದಂ
ವೃತ್ತ ವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್ ಬ್ರಹ್ಮನ ಜಗತ್ಕರ್ತೃತ್ವ
ವಿಷ್ಣುವಿನ ಪಲಕತ್ವವಗಸ್ತ್ಯನ ಸಾಮರ್ಥ್ಯನಿರೂಪಣಂ
ಪಂಚಮಾಶ್ವಾಸಂ