ಕಂದ

ಶ್ರೀವಿಶದಕೀರ್ತಿ ಭರತದಿ
ಶಾವಲಯಂ ಸಕಲನೀತಿಶಾಸ್ತ್ರವಿದಂ ಸ
ದ್ಭಾವಕನರ್ಹದ್ಧರ್ಮೋ
ಜ್ಜೀವಕನಪ್ರತಿಮರೂಪನಖಿಳಕಳಾಪಂ ೧

ಉತ್ಪಲಮಾಲೆ

ಮಿತ್ರಸಮನ್ವಿತಂ ಪಡೆದು ಭೂತಿಕರಾಗಿಯನೂನಪಾಟಳೀ
ಪುತ್ರಪುರಕ್ಕವಂದದಱ ಕೋಣಪದಿಕ್ಕಿನ ಗೋಪುರಾಂತದೊಳ್
ಚಿತ್ರಮೆನಿಪ್ಪ ಕಂಜಭವನಾಲಯಮಿರ್ದೊಡೆ ಪೊಕ್ಕು ನಾಡೆ ಲೋ
ಕತ್ರಯವೆಯ್ದೆ ಕೇಳೆ ಪೊಡೆದಂ ಖಚರಾಧಿಪನಲ್ಲಿ ಭೇರಿಯಂ ೨

ವಚನ

ಅಂತುಂ ಭೇರಿಯಂ ಪೊಯ್ಯೆ ಕೇಳ್ದು ಸಕಳಕಳಾಪ್ರವೀಣರಪ್ಪ ತತ್ಪುರದ ವಿಪ್ರರೆಲ್ಲಂ ನೆರೆದು ಬಂದವರುಂ ಕಂಡಿತದರಿಲ್ಲಿ ಭೇರಿಯಂ ಪೊಯ್ದು ಸಿಂಹಾಸನದೊಳೇಕೆ ಕುಳ್ಳಿರ್ದಿರೆನೆಯವರೀ ಭೇರಿಯ ದನಿಯಂ ನೋಡಲೆಂದು ಪೊಯ್ದೆವೆಲ್ಲರುಂ ಕುಳ್ಳಿರ್ಪ ಠಾಣವೆಂದು ಕುಳ್ಳಿರ್ದೆವೆನೆಯಿಲ್ಲಿ ವಿದ್ವಾಂಸರಾದವರ್ ವಾದಾರ್ಥದಿಂ ಬಂದು ಭೇರಿಯಂ ಪೊಯ್ದು ವಾದಂ ಗೆಲ್ದಲ್ಲದೆ ಸಿಂಹಾಸನದೊಳ್ ಕುಳ್ಳಿರಲ್ ಬಾರದೆನೆಯಾದೊಡೆ ಮಾಣಲಿಯೆಂದವರಿಳಿದು ಕುಳ್ಳಿರೆ ಮತ್ತಮಿಂತೆಂದರೆ

ಕಂದ

ಆರು ಗುರು ನಿಮಗೆ ಪೇಳನೆ
ಯಾರುಂ ಗುರುವಿಲ್ಲ ನಮಗೆನಲ್ ದ್ವಿಜರೆಂದರ್
ಧಾರುಣಿಯೊಳ್ ಗುರುವಿಲ್ಲದ
ರಾರಾನುಂ ತಪಮನಾಂತು ಬಾಳ್ವರುಮೊಳರೇ ೩

ವಚನ

ಎನೆ ನಮ್ಮ ತಪದ ವೃತ್ತಾಂತಮಂ ಪೇಳ್ವೊಡೆ ಪಿತ್ತಜ್ವರಿತಂಗೆ ಪಾಲುಂ ಶರ್ಕೞಯಂ ಕೊಳ್ವುದೆಂದು ಪೇಳ್ದೊಡಂ ಕೆರಳ್ವನಲ್ಲದೆ ಕೈಕೊಳ್ವನಲ್ಲೆಂದು ಎಮ್ಮ ವೃತ್ತಾಂತಂ ನಿಮ್ಮ ಮನಕ್ಕೆ ಬಪ್ಪುದಲ್ಲೆನೆಯವರದಱ ತೆಱನಂ ಪೇಳೆ ಕೇಳ್ವ ಮನೆಯಮೃತಫಲದ ವೃತ್ತಾಂತದವರುಳ್ಳೊಡೆ ಪೇಳಲಮ್ಮೆವೆನೆ ಆ ವೃತ್ತಾಂತಮೆಂತೆಂದು ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ

ಕಂದ

ಪಿರಿದೆನಿಸುವಂಗದೇಶಾಂ
ತರದೊಳ್ ಶೋಭಿಪುದು ನಾಡೆ ಚಂಪಾಪುರವಾ
ಪುರದಧಿನಾಥಂ ನೃಪಶೇ
ಖರನೆಂಬಂ ಪಲವುಕಾಲಮರಸಾಗಿರ್ದಂ ೪

ವಚನ

ಅಂತು ರಾಜ್ಯಂಗೆಯ್ಯುತ್ತಮಿರ್ದೊಂದು ದಿನಂ ವಣಿಗ್ವರನೊರ್ವನಮೃತಫಲದ ಬೀಜಮಂ ತಂದು ಕಾಣ್ಕೆಯಂ ಕೊಟ್ಟೀ ಬೀಜಮಂ ಬಿತ್ತಿದೊಡನೆ ಮಹಾವೃಕ್ಷಮಪ್ಪುದು ಅಲ್ಲಿಯತಿಸ್ವಾದುವಪ್ಪ ಫಲಂಗಳಪ್ಪುವವಂ ಮೆಲೆಯಷ್ಟೋತ್ತರಶತವ್ಯಾಧಿ ಪಿಂಗುರಿ ವಳಿತಪಳಿತಸ್ತಂಭಮಪ್ಪುದೆಂದು ಪೇಳೆ ಕೇಳ್ದರಸಂ ವನಪಾಲಕನಂ ಕರೆದೀ ಬೀಜಮಂ ಬಿತ್ತಿ ಫಲಮಂ ಪಡೆಯೆಂದು ಕುಡೆಯವಂ ಬಿತ್ತಿ ಬೆಳೆದು ಫಲಭರಿತಮಾದ ಸಮಯದೊಳೊಂದುಸರ್ಪನಂ ಪರ್ದು ಪಿಡಿದು ಗಗನಮಾರ್ಗದೊಳ್ ಬರುತಿರೆಯು ಪಾವಿನ ವದನದಿಂ ವಿಷಂ ಪೊಱಮಟ್ಟಾ ಮರದ ಮೇಲೊಂದು ಫಲದಮೇಲೆ ಬೀಳೆಯಾ ವಿಷದುಗ್ರದಿಂದಾ ಫಲಂ ಪಣ್ತು ಬೇಗದಿಂ ನೆಲಕ್ಕೆ ಬೀಳೆಯದಂ ವನಪಾಲಂ ತಂದರಸಂಗೆ ಕುಡೆ ಅರಸಂ ತನ್ನ ಮಗಂಗೆ ಕುಡೆಯವಂ ಮೇಲೆ ವಿಷಮಜ್ವಾಲೆಯೆತ್ತಿಯದನರಸಂ ಕಂಡಾ ಸೆಟ್ಟಿಯಂ ದಂಡಿಸಿ ಸರ್ವಸ್ವಮಂ ಕವರ್ದುಕೊಂಡಾ ಮರನಂ ಬೇರ್ವೆರಸು ಕಡಿದುಬಿಸುಡೆಯಾ ಪುರದೊಳ್ ಸಾವಂ ಬಯಸುವ ತೊನ್ನರುಂ ತುಱುಚರುಂ ಮಹಾರೋಗಿಗಳುಂ ಸಾವಂ ಬಯಸಿ ಬಂದು ಮರದ ಫಲಮಂ ತಿಗುಡುಂ ಎಲೆಯುಂ ಬೇರುಮಂ ತಿಂದವರ್ ನಿರೋಗಿಗಳಾಗಿ ವಳಿತಸ್ತಂಭವರಾಗೆಯದಂ ಕಂಡರಸಂ ತನ್ನ ವಿವೇಕತೆಗಂ ಮಲಮಲಮಱುಗಿ ಬಳಿಕಾ ಶೆಟ್ಟಿಯಂ ಕರೆಸಿ ಮನ್ನಿಸಿದನೆಂಬ ವಿವೇಕಿಯರಸನನ್ನರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಲಮ್ಮೆವೆನೆಯಿಂತಪ್ಪರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಪೇಳಲ್ ತಗುಳ್ದಂ

ಕಂದ

ಘನವೆನಿಪಯೋಧ್ಯಪುರದೊಳ್
ಧನದತ್ತನೆನಿಪ್ಪ ಸದ್ದಣಿಗ್ವರನಂತಾ
ತನ ತನುಜೆ ದೇವದತ್ತೆಯ
ನನುಪಮ ವಸುದತ್ತನೆಂಬ ಪರದಂಗಿತ್ತಂ ೫

ವಚನ

ಅಂತೀಯೆ ಶುಭದಿನ ಸುಮುಹೂರ್ತದೊಳ್ ಮದುವೆಯಂ ಮಾಡಲೆಂದು ವೇದಿಕಾಗ್ರದೊಳ್ ತೆರೆಯ ಸೀರೆಯಂ ಪಿಡಿದು ವರನುಂ ಕನ್ನಿಕೆಯುಮನಿರ್ಕೆಲದೊಳಿರಿಸಿ ಮುಹೂರ್ತದೊಳ್ ಪಾಣಿಗ್ರಹಣಂಗೆಯ್ವ ಸಮಯದೊಳ್ ಒಂದು ರಾಜಹಸ್ತಿ ಮದೋನ್ಮತ್ತನಾಗಿ ಬಂಧನಮಂ ಪಱಿದುಕೊಂಡು ಪಲಂಬರಂ ಕೊಲುತ್ತಂ ಬರೆಯದಂ ಕಂಡೋಡುವಾಗಳಾ ವಸುದತ್ತನ ಹಸ್ತಂ ದೇವದತ್ತೆಯಂ ಸೋಂಕೆ ಗರ್ಭಂ ಪುಟ್ಟಿ ನವಮಾಸಂ ತೀವಲಾ ಸಮಯದೊಳ್

ಕಂದ

ದಕ್ಷಿಣದಿಂದಂ ಬಂದರ್
ಭಿಕ್ಷೆಗೆ ಧನದತ್ತನಾಲಯಕ್ಕೆ ಪಲಂಬರ್
ಭಿಕ್ಷುಗಳವರಂ ಕಂಡ
ಬ್ಜಾಕ್ಷಿಲಸದ್ದೇವದತ್ತೆಯವರ್ಗಿಂತೆಂದಳ್ ೬

ಉತ್ಪಲಮಾಲೆ

ಆವೆಡೆಯಿಂದೆ ಬರ್ಪಪರಿ ಯೆಲ್ಲಿಗೆ ಪೋಪಿರಿ ಬಂದ ಕಾರ್ಯವಿ
ನ್ನಾವುದು ಪೇಳಿಮೆಂದು ಬೆಸಗೊಂಡೊಡೆ ಬಂದೆವು ದಕ್ಷಿಣಾಸೆಯಿಂ
ದಾವೆಡೆಯರ್ಘ್ಯಮುಳ್ಳೆಡೆಗೆ ಪೋದಪೆವಿಲ್ಲಿರಲಾಗದಪ್ಪುದಿ
ನ್ನೀ ವಿಷಯಾಂತರಾಳದೊಳೆ ಪನ್ನೆರಡುಂವರುಷಂಬರಂ ಬಱಂ ೬

ಉತ್ಪಲಮಾಲೆ

ಆವೆಡೆಯಿಂದೆ ಬರ್ಪಪರಿ ಯೆಲ್ಲಿಗೆ ಪೋಪಿರಿ ಬಂದ ಕಾರ್ಯವಿ
ನ್ನಾವುದು ಪೇಳಿಮೆಂದು ಬೆಸಗೊಂಡೊಂಡೆ ಬಂದೆವು ದಕ್ಷಿಣಾಸೆಯಿಂ
ದಾವೆಡೆಯರ್ಘ್ಯಮುಳ್ಳೆಡೆಗೆ ಪೋದಪೆವಿಲ್ಲಿರಲಾಗದಪ್ಪುದಿ
ನ್ನೀ ವಿಷಯಾಂತರಾಳದೊಳೆ ಪನ್ನೆರಡುಂವರುಷಂಬರಂ ಬಱಂ ೭

ವಚನ

ಎಂದು ಭಿಕ್ಷುಗಳ್ ಮಜ್ಜನನಿಗೆ ಪೇಳೆ ನಾಂ ಪೊಟ್ಟೆಯೊಳಿರ್ದು ಕೇಳ್ದು ಬಱಕ್ಕಂಜಿ ಪೊಱಮಡಲಮ್ಮದೆ ಪನ್ನೆರಡುವರುಷಂಬರಂ ಪೊಟ್ಟೆಯೊಳಿರೆಯಾ ಭಿಕ್ಷುಗಳ್ ಮುಗುಳ್ದು ಬಂದು ಸುಭಿಕ್ಷಮಾಯ್ತೆಮ್ಮ ದೇಶಕ್ಕೆ ಮರುಳ್ದುಪೋಪೆವೆಂದು ಪೇಳೆ ಕೇಳ್ದೆಮ್ಮ ತಾಯ ವದನದಿಂ ಪೊಱಮಟ್ಟಾಕ್ಷಣದೊಳೆಮ್ಮ ತಾಯ ತಲೆಯಂ ಪಿಡಿದು ಭೋಜನಮಂ ಬೇಡಿದೊಡೆ ಶಂಕೆಯಿಂದಿವಂ ರಾಕ್ಷಸನೆಂದು ವೋಡಿಪೋಗೆಯೆಲ್ಲರುಂ ನೆರೆದು ವಿಚಾರಿಸಿ ನಿರ್ದಾಟಿಸಿ ಪೊಱಮಡಿಸಿ ಕಳೆಯೆ ತಲೆಗೆಣ್ಣೆಯಂ ಪಡೆಯದೆ ಜಟಾಧಾರಿಯಾಗಿ ಕೆಲವುದಿನಂ ವಿಹಾರಿಸುತ್ತೆ ಅಯೋಧ್ಯೆಗೆ ಬಂದೆಮ್ಮ ತಾಯುಂ ತಂದೆಯುಂ ವಿವಾಹಮಾಗುತ್ತಿರೆ ನೋಡಿ ಕಂಡಲ್ಲಿಂದಂ ಬಂದೆವೆಮ್ಮ ತಪಶ್ಚರಣಗೆ ಕಾರಣಮಿದೆನೆ ಕೇಳ್ದು ವಿಪ್ರರಿಂತೆಂದರ್

ಕಂದ

ಪುಸಿಯನಪದಸ್ಥಮಂ ತಾ
ಪಸರಾಡಲ್ ತಕ್ಕುದಲ್ತು ಕೇಳ್ ಪೆರ್ಬುಸಿಯಂ
ಬಿಸುಟುಳ್ಳದನಾಡೆಂದೆನೆ
ಪುಸಿಯಿದಱೊಳಗಾವುದೆಂದೊಡಾ ದ್ವಿಜರೆಂದರ್ ೮

ಮುಟ್ಟಿದುದು ಪತಿಯ ಹಸ್ತಂ
ಮುಟ್ಟಲೊಡಂ ಸತಿಗೆ ಗರ್ಭವಾ ಗರ್ಭದೊಳಂ
ಹೆಟ್ಟುಗೆಗೆ ಪೇಳ್ದ ಮಾತಂ
ಪೊಟ್ಟೆಯ ಶಿಶು ಕೇಳ್ದುದೆಂಬುದಿದು ವಿಪರೀತಂ ೯

ವಚನ

ಅದಲ್ಲದೆಯುಂ ಬಱದ ಸುದ್ದಿಯಂ ಕೇಳ್ದಂಜಿ ಪನ್ನೆರಡುವರುಷಂಬರಂ ಪೊಟ್ಟೆಯಿಂ ಪೊಱಮಡದಿರ್ದುದೆಂಬುದುಂ ಪೊಱಮಡುವಾಗಳ್ ತಾಯ ಬಾಯಿಂ ಪೊಱಮೆಟ್ಟುದೆಂಬುದುಂ ತತ್‌ಕ್ಷಣದೊಳೆ ತಾಯ ತಲೆಯಂ ಪಿಡಿದು ವುಣಲ್ವೇಡಿತೆಂಬುದುಂ ಮತ್ತಂ ತಾಂ ಮಗನಾಗಿಯುಂ ತಾಯಿ ಕನ್ನೆಯಾಗಿರ್ದಳೆಂಬುದುಂ ವಿರುದ್ದಮಪ್ಪ ಪುಸಿಯಲ್ಲದೊಂದುಂ ಸತ್ಯಮಿಲ್ಲೆನೆಯಿಂತಪ್ಪುದು ನಿಮ್ಮ ಮತಪುರಾಣದೊಳುಂಟೊ ಯಿಲ್ಲೊ ಪೇಳಿಮನೆನೆ ಅವರಿಂತಪ್ಪ ಪುಸಿಯೆಮ್ಮ ಮತದೊಳುಳ್ಳೊಡೆ ಪೇಳಿಮೆನೆ ಮನೋವೇಗಂ ಪೇಳಲ್ ತಗುಳ್ದಂ

ಕಂದ

ಕ್ಷಿತಿಗೆಸೆವಯೋಧ್ಯಪುರುದೊಳ್
ತೃತೀಯರಥನೆಂಬ ನೃಪನ ತನುಜೆಯರಿರ್ವರ್
ಚತುರೆಯರು ಶುದ್ಧನೀರಂ
ಸತತಂ ಮಿಂದೊಂದೆತಾಣದೊಳ್ ಪವಡಿಪುದುಂ ೧೦

ಓರೊರ್ವರ ತೋಳ್ ಸೋಂಕಿಂ
ದೊರ್ವಗೆ ಸಮಂತು ಗರ್ಭಮುದಯಿಸೆ ಲೋಕ
ಕ್ಕೊರ್ವನೆ ಸದ್ಭಟನೆನಿಸಿದ
ದೋರ್ವಳನಪ್ರತಿಮನೀ ಭಗೀರಥನೊಗೆದಂ ೧೧

ವಚನ

ಅದಲ್ಲದೆಯುಂ

ಕಂದ

ಅತಿಶಯ ಶೌರಿಪುರಕ್ಕಧಿ
ಪತಿಯಂಧವೃಷ್ಣಿಯೆಂಬನಾತನ ತಮ್ಮಂ
ಕ್ಷಿತಿಗೆ ನರವೃಷ್ಣಿಯಾತನ
ಸುತೆ ಸಲೆ ಗಾಂಧಾರಿಯೆಂಬ ಕನ್ಯಾರತ್ನಂ ೧೨

ಆ ಸುದತಿಗೆ ಪತಿಯಾದಂ
ವ್ಯಾಸಸುತಂ ಹಸ್ತಿನಾಪುರೇಶಂ ತಾರಾ
ಧೀಶಕುಲಸಂಭವಂ ಗುಣ
ಕೋಶಂ ಧೃತರಾಷ್ಟ್ರನೆಂಬ ಪುಟ್ಟುಂಗುರುಡಂ ೧೩

ವಚನ

ಅಂತವರಿಷ್ಟಭೋಗಕಾಮಸುಖಮನನುಭವಿಸುತ್ತಿರ್ದೊಂದುದಿನಂ ಗಾಂಧಾರಿ ಪುಱ್ಪವತಿಯಾಗಿ ಚತುರ್ಥಸ್ನಾನಮಂ ಮಾಡಿ ವನಪ್ರದೇಶದೊಳ್ ವಿಹಾರಿಸುತ್ತಂ ಬರುತ್ತೊಂದು ಫಲಿತ ಪನಸವೃಕ್ಷಮಂ ಕಂಡು ಧೃರಾಷ್ಟ್ರನಂ ನೆನೆದಾಲಿಂಗಿಸೆ ಯಾಕೆಗೆಯದುವೆ ಪ್ರತ್ಯಕ್ಷಂ ಗರ್ಭಮೊಗೆದು ನವಮಾಸಂ ತೀವಿ ಪನಸಫಲಮಂ ಪಡೆಯಲದಱೊಳ್ ದುರ್ಯೋಧನಂ ಮೊದಲಾಗಿ ನೂರ್ವರ್ ಕುಮಾರರಿರ್ದರೆಂಬುದು ನಿಮ್ಮ ಮತದೊಳುಂಟೊ ಯಿಲ್ಲವೋ ಪೇಳಿಮೆನೆಯವರುಂಟೆನೆಯಾದೊಡೆ ಸ್ತ್ರೀ ಸೋಂಕಿನಿಂ ವೃಕ್ಷಾಲಿಂಗನದಿಂ ಗರ್ಭವಾಗಲಕ್ಕು ಗಡಾ ಯೆಮ್ಮ ತಂದೆಯ ಕೈಸೋಂಕಿಂದೆಮ್ಮ ಜನನಿಗೆ ಗರ್ಭವಾಗಲಾರದೆ ಪೇಳಿಮೆನಲವರ್ ಗರ್ಭವಾಗಲಿಯಾ ಪೊಟ್ಟೆಯ ಶಿಶು ಮಾತಂ ಕೇಳ್ದುದಘಟಿತಮೆನೆಯಿದು ನಿಮ್ಮ ಮತದೊಳುಂಟೋ ಇಲ್ಲೋ ಪೇಳಿಮನೆನೆ ಎಮ್ಮಲ್ಲಿಯಿಲ್ಲ ನೀವಱಿವಿರಪ್ಪೊಡೆ ಪೇಳಿಮೆನೆ ಮನೋವೇಗಂ ಪೇಳಲ್ ತಗುಳ್ದಂ

ಕಂದ

ದ್ವಾರಾವತಿಯಧಿನಾಥಂ
ನಾರಾಯಣನಾತನನುಜೆಯಪ್ಪ ಸುಭದ್ರಾ
ನಾರಿಯನೊಲವಿಂದರ್ಜುನ
ವೀರಂಗೀಯಲ್ಕೆ ಮದುವೆಯಾಗಿರುತಿರ್ದಂ ೧೪

ಅಂತಿರೆ ಕೆಲವುದಿನಕ್ಕಾ
ಕಾಂತೆಗೆ ಬಸಿಱೊಗೆದು ತೀವೆ ನವಮಾಸಂ ನಿ
ಶ್ಚಿಂತಂ ಬೆಸಲಾಗಲ್ ಶ್ರೀ
ಕಾಂತಂ ತನ್ನಾಲಯಕ್ಕೆ ಕರೆಸಿದನಾಗಳ್ ೧೫

ಮಹಾಸ್ರಗ್ಧರೆ

ಬೆಸಲಾಗಲ್ಕೆಂದು ಬಂದಿರ್ದನುಜೆಯಲಸುಗೆಂದೊಂದಿರಳ್ ಕೇಶವಂ ರಂ
ಜಿಸಿ ಚಕ್ರವ್ಯೂಹವೃತ್ತಾಂತರಮನೊರೆಯಲಾ ಕಾಂತೆ ಕೇಳುತ್ತೆ ನಿದ್ರಾ
ವಶದಿಂ ಕಣ್ಮುಚ್ಚಿ ಚಿತ್ತಂ ಮಱೆದಿರಲಱಿದಾ ಪೊಟ್ಟೆಯೊಳ್ ಕೂಸು ಹೂವೆಂ
ದುಸಿರಲ್ಕಾಶಂಕೆಗೊಂಡೀ ಸುದತಿಯುದರದೊಳ್ ಪುಟ್ಟುಗುಂ ದೈತ್ಯನೆಂದು ೧೬

ಕಂದ

ಎನಲಭಿಮನ್ಯುಕುಮಾರಂ
ಜನಿಸಿದನೆಂದೆಂಬುದುಂಟೆ ಪೇಳೆನಲುಂಟುಂ
ಟೆನಲಾದೊಡೆ ನಾವೆಮ್ಮಯ
ಜನನಿಯ ಜಠರದೊಳಗಿರ್ದು ಕೇಳ್ದುದು ಪುಸಿಯೇ ೧೭

ವಚನ

ಎಂಬುದುಂ ಪೊಟ್ಟೆಯೊಳಿರ್ದು ಕೇಳಲಕ್ಕುಂ ನವಮಾಸಂ ತೀವೆ ಬಳಿಕ್ಕೆ ಪನ್ನೆರಡು ವರುಷಂಬರಂ ಪೊಟ್ಟೆಯೊಳಿರ್ದನೆಂಬುದೆಂತುಕ್ಕುಮೆನಲಿದು ನಿಮ್ಮ ಮತದೊಳಿಲ್ಲೋ ಪೇಳಿಮೆನೆ ಈ ಪುಸಿ ನಮ್ಮ ಪುರಾಣದೊಳಿಲ್ಲ ನೀವಱಿವಿರಪ್ಪೊಡೆ ಪೇಳಿಮೆನೆ ಮನೋವೇಗಂ ಪೇಳ್ಗುಂ

ಚಂಪಕಮಾಲೆ

ಅನುಪಮಮಪ್ಪ ಪೇರಡವಿಯೊಳ್ ಮಯನೆಂಬ ತಪಸ್ವಿಯೊಂದಿರಳ್
ಕನಸಿನೊಳಿಂದ್ರಿಯಂ ಚಲಿಸೆ ಕೌಪಿನೊಳುಕ್ಕಡೆ ಪೋಗಿ ತಾಂ ಸರ
ಸ್ಸಿನೊಳೊಗೆದೊಂದು ಪಂಕಜದ ಮಧ್ಯದೊಳೊಯ್ಯನೆ ಪಿಂಡವಲ್ಲಿನೆ
ಟ್ಟನೆ ಪೊಳೆಯುತ್ತಿರಲ್ಕೆ ಪರಿದಲ್ಲಿಗೆ ಬಂದುದೊಂದು ಮಂಡುಕಂ ೧೮

ವಚನ

ಅಂತು ಬಂದು ಇಂದ್ರಿಯಮಂ ಕಂಡು ನುಂಗೆ ಗರ್ಭೋತ್ತತ್ತಿಯಾಗೆ ಪೆಣ್ಗೂಸಂ ಪೆತ್ತು ಮೊಗಮಂ ನೋಡಿ ನೀಂ ಮನುಷ್ಯೆಯಾದೆ ನಿನಗಮೆನಗಂ ಸಂಬಂಧಮಿಲ್ಲೆಂದು ಕಮಳಕರ್ಣಿಕಾಮಧ್ಯದೊಳಿರಿಸಿ ಪೋಗಲಾ ಶಿಶುವಾರುಮಂ ಕಾಣದೆ ದೆಸೆದೆಸೆಗಳಂ ನೋಳ್ಪಾಗಳ್

ಕಂದ

ಮುನಿಪತಿ ಬರೆ ಸಂಧ್ಯಾವಂ
ದನೆಗಲ್ಲಿಗೆ ಕಮಳಮಧ್ಯದೊಳ್ ಶಿಶುವಿರೆ ನೆ
ಟ್ಟನೆ ದಿವ್ಯಜ್ಞಾನದೆ ನಿಜ
ತನೂಜೆಯೆಂದಱಿದು ತನ್ನ ಮನೆಗುಯ್ವಾಗಳ್ ೧೯

ಪರಿಕಿಸಿಯವಳಂ ಮಂಡೋ
ದರಿಯೆಂಬೀ ಪೆಸರನಿಟ್ಟು ಸಲಹಲ್ ನೆರೆದಾ
ತರುಣಿಯನೊಂದುದಿನಂ ಮುನಿ
ವರನಂದಿನ ಕೌಪನುಟ್ಟು ಮೀವವಸರದೊಳ್ ೨೦

ದ್ರವದಿಂದಂ ನೆನೆದಿಂದ್ರಿಯ
ವವಳುದರಂಬೊಕ್ಕು ಗರ್ಭವಾಗಲ್ ಭವರದಿಂ
ದವಳುದರಮನೀಕ್ಷಿಸಿ ಭೂ
ಭುವನನುತಂ ಜ್ಞಾದಿಂದೆ ಮುನಿವರನಱದಂ ೨೧

ವಚನ

ಅಂತು ಜ್ಞಾನದಿಂದಱಿದು ಗಂಡಸಿಲ್ಲದೆ ಸತಿಗೆ ಗರ್ಭಮೊಪ್ಪಲಱಿಯದೆಂದು ಗರ್ಭಮಂ ಸ್ತಂಭಿಸಿ ಏಳ್ನೂಱುವರ್ಷಂಬರಮಿರಲತ್ತಲಾ ಲಂಕೆಯೊಳ್ ರಾವಣಂ ಪುಟ್ಟಿ ಬೆಳೆದು ರಾಜ್ಯಕ್ಕೆ ನಿಂದೊಂದುದಿನಂ ವಿಹಾರನಿಮಿತ್ತಂ ಕಾನನದೊಳ್ ತೊಳಲುತ್ತುಂ ಬಂದಾ ಮುನಿಯಾಶ್ರಮಮಂ ಪೊರ್ದಿಯಲ್ಲಿರ್ದ ಕನ್ನೆಯಂ ಕಂಡು ಸೋಲ್ತು ಮಿನಿಪತಿಯಂ ಬೇಡಲಾ ಮುನಿಯಾತಂಗೆ ಕುಡೆ ಶುಭದಿನ ಮುಹೂರ್ತದೊಳ್ ಮದುವೆಯಾಗಿ ಕಳಿಪಿಸಿಕೊಂಡು ಸತಿವೆರಸಿ ಲಂಕಾಪುರಮಂ ಪೊಕ್ಕು ಸುಖದಿನಿರುತ್ತಿರಲಂದು ಸ್ತಂಭಿಸಿದ ಗರ್ಭಮನುಕ್ರಮದಿಂ ಬಳೆದು ಪ್ರಸೂತೆಯಾಗಲಿಂದ್ರಜಿತ್ಕುಮಾರಂ ಪುಟ್ಟಿದನೆಂಬಿದು ನಿಮ್ಮ ಮತದೊಳುಂಟೊ ಇಲ್ಲವೊ ಪೇಳಿಮೆನೆಯವರಿದುಂಟೆನೆಯಾದೊಡಾತಂ ತಮ್ಮ ತಾಯಗರ್ಭದೊಳೇಳ್ನೂ ಱುವರ್ಷಂಬರಮಿರಲಕ್ಕುಂ ಗಡ ನಾಮೆಮ್ಮ ತಾಯ ಬಸಿಱೊಳ್ ಪನ್ನೆರಡು ವರ್ಷಂಬರಮಿರ್ದೆವೆಂದೊಡೇಕೆ ಪುಸಿಯೆಂಬಿರೆನೆಯಾದೊಡಾಗಲಿ ನೀಂ ಬಾಯಿಂ ಪುಟ್ಟಿದಿರೆಂಬುದೆಂತಕ್ಕುಮನೆಯಿದು ನಿಮ್ಮ ಮತದೊಳಿಲ್ಲೊ ಪೇಳಿಮನೆಯವರಿಂತಪ್ಪ ಸಟಿಯೆಮ್ಮ ಮತದೊಳುಳ್ಳೊಡೆ ಪೇಳಿಮೆನೆ ಮನೋವೇಗಂ ಪೇಳ್ಗುಂ

ಕಂದ

ಕೊಂತಿ ಪಿರಿಯ ಮಗಂ ಕಿವಿ
ಯಿಂದುದಯಿಸಿ ಕರ್ಣನಾದನೆಂದೆಂಬರೆ ಬಾ
ಯಿಂ ತೊಟ್ಟನುದಯಿಸಿದನೆನ
ಲಂತು ಪುಸಿಯೆಂದು ನುಡಿವುದನುಚಿತಮಲ್ತೇ ೨೨

ಎನಲಾ ಬಾಯಿಂ ಪುಟ್ಟುವುದಾಗಲಿ ಪುಟ್ಟಿದಾಕ್ಷಣಮೆ ತಾಯ ತಲೆಯಂ ಪಿಡಿದು ಭೋಜನಮಂ ಬೇಡಿದುದೆಂತುಂ ಪುಸಿಯೆನೆ ಇಂತಪ್ಪುದು ನಿಮ್ಮ ಪುರಾಣದೊಳಿಲ್ಲೊ ಪೇಳಿಮೆನೆ ಈ ಪುಸಿಯೆಮ್ಮ ಪುರಾಣಾದೊಳಿಲ್ಲ ನೀವಱಿವಿರಪ್ಪೊಡೆ ಪೇಳಿಮೆನೆ ಮನೋವೇಗಂ ಪೇಳ್ಗುಂ

ಮತ್ತೇಭವಿಕ್ರೀಡಿತ

ನಿರವದ್ಯಂ ಜಗದೊಳ್ ಪರಾಶರಮುನೀಂದ್ರಂ ಗಂಗೆಯಂ ಪಾಯ್ದು ನಿ
ರ್ಭರದಿಂದಾ ತಡಿಗೆಯ್ದ ಲಂಬಿಗರನೆಂತುಂ ಕಾಣದಾಳೋಕಿಸು
ತ್ತಿರಲೊರ್ವಂಬಿಗಪುತ್ರಿ ಕನ್ನಿಕೆಯಿರಲ್ ಕಂಡಾಕೆಯಂ ಬೇಗದಿಂ
ಕರೆದೀ ನಾವೆಗೆ ಪುಟ್ಚನಿಕ್ಕುವುದೆನಲ್ಕಿಂತೆಂದಳಾಶಂಕೆಯಿಂ ೨೩

ಕಂದ

ದೇವರ್ಷಿ ನೀಂ ವಿಚಾರಿಸೆ
ನಾವೆಯನಾಂ ನಿಮ್ಮ ಸರಿಯೊಳೇಱಲ್ಪಹುದೇ
ದೇವ ಕುಲಹೀನೆಯಾನೆನೆ
ನಾವೆಯೊಳಿಲ್ಲಿಲ್ಲ ದೋಷವಂಜದಿರೆಂದಂ ೨೪

ಎನಲಂಜದೆ ನಾವೆಯನಾ
ಮುನಿಪತಿಯೊಡನೇಱಿಪುಟ್ಟನಿಕ್ಕುತ್ತಿರೆ ಯೋ
ಜನಗಂಧಿಯಂಬಿಗಿತ್ತಿಗೆ
ಮನಸಂದಂ ನದಿಯ ಮಧ್ಯದೊಳ್ ಮುನಿನಾಥಂ ೨೫

ಕಂದ

ಎನ್ನೊಡನೆ ಕೂಡು ನೀನೆಲೆ
ಕನ್ನೆಯೆನಲ್ಕೆನ್ನ ಮೆಯ್ಯದುರ್ಗಂಧದ ನಾ
ತಂ ನಿಲಬಾರದುದಂ ಕಳೆ
ನಿನ್ನೊಳ್ ನಾಂ ನೆರೆವೆನಿಲ್ಲದಿರ್ದೊಡೆ ನೆರೆಯೆಂ ೨೬

ಎಂದೊಡೆ ಕಳೆದಂ ತತ್‌ಕ್ಷಣ
ದಿಂದಂ ದುರ್ಗಂಧಮಂ ಸುಗಂಧಂ ತನುವಿಂ
ದೊಂದಿರ್ಪಂತಿರೆ ಮಾಡಿದ
ನಂದಿಂದೆ ಸುಗಂಧಿಯೆಂಬ ಪೆಸರಂ ಪಡೆದಳ್ ೨೭

ವಚನ

ಅಂತಾಕೆಯೊಳ್ ಕಗೂಡಲುಜ್ಜುಗಂಗೆಯ್ಯಲಾ ಕನ್ನೆಯಿರ್ಕೆಲದ ತೀರಂಬಿಡಿದು ನೋಡುವ ಜನಂಗಳಿಂದಪವಾದಂ ಬರ್ಕುಂ ಲಜ್ಜೆಯಕ್ಕುಮಿದಕ್ಕುಪಾಯಮಂ ಮಾಡಿಮೆನೆಯದರ್ಕೆ ವಿಭೂತಿಯನಭಿಮಂತ್ರಿಸಿ ತಳಿದು ನೀಹಾರಂ ಪರಿವೇಷಿಸುವಂತೆ ಮಾಡಿ ಆ ನಾವೆ ನಿಲ್ವುದಕ್ಕುಪಾಯಮಂ ಮಾಡಿಮೆನೆ ಬಳಿಕ್ಕಂ ನಾವೆಯಂ ನಿಲಿಸಿ ಕೂಡುವಾ ಸಮಯದೊಳ್

ಕಂದ

ಆನಂದದೆ ಕೂಡಿ ಬಳಿ
ಕ್ಕಾ ನದಿಯ ತಡಿಯನೆಯ್ದೆ ಯಾಕೆ ಬಸಿಱೊಳ್
ತಾನಾಕ್ಷಣದಿಂ ಜಡೆ ಕೌ
ಪೀನಂ ಲಾಕುಳಸಮೇತಮೊಗೆದಂ ವ್ಯಾಸಂ ೨೮

ಉತ್ಪಲಮಾಲೆ

ಅಂತು ತನೂಭವಂ ಜನಿಸಿಯಾಕ್ಷಣದೊಳ್ ಪರಿದೆಯ್ದಿ ಬೊಪ್ಪ ನಾ
ನೆಂತು ಬರ್ದುಂಕುವೆಂ ಬೆಸಸಿಮೆಂದೊಡೆ ತಾಪಸನಾಗಿ ಬಾಳ್ವುದೆ
ನ್ನಂತಿರೆನುತ್ತೆ ಪೋದನೆನಿಪಿಂತಿದು ನಿಮ್ಮ ಪುರಾಣಶಾಸ್ತ್ರದೊಳ್
ಸಂತತಮುಳ್ಳುದೋ ಪುಸಿಯೊ ಪೇಳಿಮೆನಲ್ಕಪರುಂಟಿದೆಂಬುದುಂ ೨೯

ವಚನ

ಆದೊಡೆಮ್ಮ ತಾಯ ಪೊಟ್ಟೆಯೊಳ್ ಪುಟ್ಟಿದಾಗಳೆ ಪಿಡಿದು ಭೋಜನಮಂ ಬೇಡಿತ್ತನೆಂತುಂ ಪುಸಿಯೆಂಬಿರೆನೆಯಾದೊಡುಣಲ್ವೇಡಿದುದಾಗಲಿ ಮತ್ತಂ ತಾಂ ಮಗನಾಗಿಯುಂ ತಾಯ್ ಕನ್ನೆಯಾಗಿರ್ದಳೆಂಬುದುಮಸಂಭಾವ್ಯಮೆನೆಯಿದು ನಿಮ್ಮ ಮತದೊಳಿಲ್ಲೊಪೇಳಿಮೆನೆಯಿದು ನಮ್ಮ ಮತದೊಳಿಲ್ಲ ನೀಮಱಿವಿರಪ್ಪೊಡೆ ಪೇಳಿಮೆನೆ ಮನೋವೇಗಂ ಪೇಳ್ಗುಂ

ಕಂದ

ಕೊಂತಿಗಮಾದಿತ್ಯಂಗೊಗೆ
ದಂ ತಡೆಯದೆ ಕರ್ಣನಾಕೆ ಕನ್ನಿಕೆ ಗಡ ಮ
ತ್ತೆಂತು ಘಟಿಸಿದುದು ಪುಸಿಯಿದ
ಱಂತುಟು ಮುನ್ನೊಂದು ಕಥೆಯದಂ ಕೇಳೆಂದಂ ೩೦

ವಚನ

ಅದೆಂತೆಂದೊಡುದ್ದಾಲಕನೆಂಬ ಋಷಿಯೊಂದುದಿನಂ ಗಂಗೆಯೊಳ್ ಸ್ನಾನಂಮಾಡಿ ಕೌಪಂ ಪ್ರಕ್ಷಾಲಿಸಿ ಕಮಲಕರ್ಣಿಕೆಯೊಳ್ ನಿಷ್ಪೀಡನಂಗೆಯ್ಯಲಾ ಕೌಪೀನಮಂ ಪತ್ತಿದಿಂದ್ರಿಯಂ ಕಮಲದೊಳ್ ಬೀಳಲಲ್ಲಿಗೊರ್ವಳಯೋಧ್ಯಾಪುರಪತಿಯಪ್ಪ ರಘುವೀರನ ಮಗಳು ಚಂದ್ರಮತಿ ಮೀಯಲೆಂದು ಬಂದು ಕಮಲಕರ್ಣಿಕೆಯೊಳಿರ್ದ ಶುಕ್ಲಮಂ ಕಂಡಾಘ್ರಾಣಿಸೆ ಗರ್ಭಂ ಜನಿಸಿ ತಾಂ ಮನೆಗೆಬರೆ ಮಾತಾಪಿತರ್ ಕಂಡೆಲೆ ಮಗಳೆ ನಿನಗಾವನಿಂ ಗರ್ಭಂ ಪುಟ್ಟಿತ್ತೆನೆ ನಾನಱಿಯೆನಾರೊಳಂ ಕೂಡಿದುದಿಲ್ಲೆನೆ ವಿಸ್ಮಯಚಿತ್ತರಾಗಿರುತ್ತಿರೆ

ಕಂದ

ನವಮಾಸಂ ತೀವಿ ತನೂ
ಭವನಂ ತೃಣಬಿಂದುವೆಂಬನಂ ಪೆಱು ಜಾರಾ
ಕುವರನಿವನೆನೆ ಜನಂ ಮ
ತ್ತವನಂ ಭಿಕ್ಷಕ್ಕೆ ಬಂದು ಮುನಿಪತಿ ಕಂಡಂ ೩೧

ವಚನ

ಅಂತು ಕಂಡುದ್ದಾಲಕಮುನೀಶ್ವರಂ ತನ್ನ ಮಗನೆಂದಱಿದು ರಘುಭೂಪನಲ್ಲಿಗೆ ಬಂದು ಕನ್ನೆಯಂ ಬೇಡಿ ಮದುವೆಯಾದನೆಂಬಿದು ನಿಮ್ಮ ಮತಪುರಾಣದೊಳುಂಟೊ ಯಿಲ್ಲವೊ ಪೇಳಿಮೆನೆಯವರುಂಟೆನೆಯಾದೊಡವರ್ ಕನ್ನೆಯಲಾಗಲಕ್ಕುಂ ಗಡ ಎಮ್ಮ ತಾಯ್ ಕನ್ನೆಯಾದಳೆಂದೊಡೆ ಪುಸಿಯೆಂಬಿರೇಕೆಂದನೇಕತೆಱದ ಹೇತು ನಯದೃಷ್ಟಾಂತಮಂ ಕೊಟ್ಟು ವಾದಂಗೆಲ್ದು ಜಯಪತ್ರಮಂ ಕೊಂಡುದ್ಯಾನಕ್ಕೆ ವಂದು ಮನೋವೇಗಂ ಪವನವೇಗಂಗೆಯಿಂತೆಂದಂ

ಕಂದ

ರವಿ ಕೊಂತಿಯೊಡನೆ ಕೂಡಲ್
ಕಿವಿಯಿಂದಂ ಕರ್ಣನೊಗೆದನೆಂಬಿದು ಪುಸಿಮಾ
ತವನೊಗೆದಂದಮನತ್ಯು
ತ್ಸವದಿಂ ಕೇಳೆಂದು ೩೨

ಸದಮಳಮೆನಿಪಾರ‍್ಯಾಖಂ
ಡದ ಕುರುಜಾಂಗಣಮೆನಿಪ್ಪದೇಶದೊಳೆಸೆದಿ
ರ್ಪುದಿ ನಾಡೆ ಹಸ್ತಿನಾಪುರ
ವದರಧಿಪಂ ಚಿತ್ರವೀರ‍್ಯನೆಂಬ ನೃಪಾಲಂ ೩೩

ಮತ್ತೇಭವಿಕ್ರೀಡಿತ

ಪ್ರಕಟಖ್ಯಾತವಿಚಿತ್ರನೆಂಬ ಮಹಿಪಾಳಂಗಂಬೆಯಂಬಾಲೆಯಂ –
ಬಿಕೆಯೆಂಬರ್ ಸಲೆ ಮೂವರಂಗನೆಯರಂತಾ ಕಾಂತೆಯರ್ಗೊಪ್ಪುವ –
ರ್ಭಕರಾದರ್ ಧೃತರಾಷ್ಟ್ರ ಪಾಂಡು ವಿದುರರ್ ತತ್ಪುತ್ರರೊಳ್ ಪುಟ್ಟುತಂ
ಧಕನಾದಂ ಧೃತರಾಷ್ಟ್ರನಲ್ಲಿ ರಾಜನಾದಂ ಪಾಂಡುಭೂಪಾಳಕಂ ೩೪

ವಚನ

ಅಂತಾ ಮೂವರುಂ ಸುಖದಿನಿರುತ್ತಿರೆ ಯಿತ್ತಲ್ ಶೌರಿಪುರೇಶನಂಧಕವೃಷ್ಣಿಯೆಂಬ – ರಸನೊಡಹುಟ್ಟಿದಂ ನರವೃಷ್ಣಿ ತನ್ನ ಸುತೆ ಗಾಂಧಾರಿಯಂ ಜಾತ್ಯಂಧನಪ್ಪ ಧೃರಾಷ್ಟ್ರಂಗೆ ಕೊಟ್ಟನಂಧಕವೃಷ್ಣಿ ತನ್ನ ಸುತೆ ಕೊಂತಿಯಂ ಪಾಂಡುರಾಜಂಗೆ ಕೊಟ್ಟೆವೆನಲಾಮಾತಂ ಕೇಳ್ದಾತಂ ಸಂತುಷ್ಟಚಿತ್ತನಾಗಿರೆಯೊಂದುದಿನಂ ಅಂಧಕವೃಷ್ಣಿ ಪಾಂಡುರಾಜನಂ ಪಾಂಡುರೋಗಿಯೆಂದು ಕೇಳ್ದಾತಂಗೆ ತನ್ನ ಮಗಳಂ ಕುಡೆನೆನೆ ಯದಂ ಪಾಂಡುರಾಜಂ ಕೇಳ್ದು ದುಃಖಿತನಾಗಿ ಚಿಂತಾಗ್ನಿಯಿಂ ಸಂತಪ್ತನಾಗಿ ಯಾವುದ್ಯಾನಮಂ ಪೊಕ್ಕು ತೊಳಲುತ್ತಂ ಬರುತೊಂದು ಲತಾಗೃಹದ ಮುಂದೆ ಬಿರ್ದಿರ್ದ ರತ್ನಮುದ್ರಿಕೆಯಂ ಕಂಡು ತೆಗೆದುಕೊಂಡಿರ್ಪ ಸಮಯದೊಳ್

ಕಂಟಿಕಾ

ಅಂತಾ ಬನದೊಳಗುಮ್ಮಳಿಸುತ್ತುಂ
ಚಿಂತಾಗತಿಯೆನಿಪೀ ಖಚರೇಂದ್ರಂ
ಮುಂತೆಯ್ತರುತಿರೆ ಕಂಡಖಿಳೋರ್ವೀ
ಕಾಂತಂ ದುಗುಡವಿದೇಂ ನಿನಗೆಂದಂ ೩೫

ಚಂಪಕಮಾಲೆ

ಎನೆ ಬನದೊಳ್ ವಿಹಾರಿಸುತೆ ಮುದ್ರಿಕೆಯಂ ಮಱೆದೆರ್ದುಪೋಗುತುಂ
ನೆನೆದಱಸುತ್ತೆ ಬಂದೆನೆನೆ ಪಾಂಡುವದಂ ಕುಡೆ ಕೊಂಡು ಖೇಚರಂ
ಮನದೊಳೆ ಮೆಚ್ಚಿ ನಿನ್ನ ಮನದುಮ್ಮಳವೇನದನಂಜವೇಡ ಪೇ
ಳೆನೆ ತನಗಾದ ದುಃಸ್ಥಿತಿಯ ಖೇದಮನೆಲ್ಲಮನೊಲ್ದು ಪೇಳಿದಂ ೩೬

ವಚನ

ಅಂತು ಪೇಳೆ ಕೇಳ್ದು ವಿಯಚ್ಚರನೀ ಕಾಮಮುದ್ರಿಕೆಯಂ ಕೊಂಡು ಪಾಂಡು ವಿಂಗಿತ್ತಭಿಲಷಿತರೂಪಂಬಡೆದಿಷ್ಟಭೋಗಮಂ ಮಾಡಿಕೊಳ್ಳೆಂದು ಕುಡೆ ಕೊಂಡು ಆತಂ ಶೌರಿಪುರಕ್ಕೆ ವಂದು ಆ ಬನದೊಳ್ ಕೊಂತಿ ಜಲಕ್ರೀಡೆಯನಾಡುತ್ತಿರೆಯಲ್ಲಿಗೆ ಕಾಮಮುದ್ರಿಕಾಪ್ರಭಾವದಿಂ ವಿಶಿಷ್ಟರೂಪಾಗಿರೆ ಕೊಂತಿ ಕಂಡಾಸಕ್ತಚಿತ್ತೆಯಾಗಿ ಯಾತನಂ ಸ್ತ್ರೀರೂಪಂ ಮಾಡಿ ಕೆಳದಿಯರ್ವೆರಸು ಮನೆಗೊಡಗೊಂಡು ಬಂದು ಶಯ್ಯಾಗೃಹದೊಳ್ ಮಡಗಿರಿಸಿರುತ್ತಿರೆ

ಕಂದ

ಪದಿನೆಂಟುದಿನತನಕ್ಕಾ
ಸುದತಿಯೊಳೊಡಗೂಡಿ ಸುಖದೊಳೋಲಾಡಿ ಮನೋ
ಮುದದಿಂ ಕಳಿಹಿಸಿಕೊಂಡೆ
ಯ್ದಿದನತಿವೇಗದೊಳೆ ಪಾಂಡು ತನ್ನಯ ಪುರಮಂ ೩೭

ಅಂತಾತನಿತ್ತ ಬರಲಾ
ಕೊಂತಿಗೆ ಬಸಿಱಾಗಿ ಗರ್ಭಚಿಹ್ನಂ ಪಿರಿದೋ
ರಂತಱಿಯಲಾಗೆಯುಂ ತಾ
ಯುಂ ತಂದೆಯುಮಱಿದಿದಾರ್ಗೆ ಪುಟ್ಟಿದುದೆಂದರ್ ೩೮

ಎಂದು ಬೆಸಗೊಂಡ ತಾಯುಂ
ತದಂದೆಗೆ ತನ್ನುಳ್ಳ ತೆಱನನಱಿಪಿದೊಡೆ ಕರಂ
ಕುಂದಕ್ಕುಮೆಮ್ಮ ವಂಶ
ಕ್ಕೆಂದಾಕೆಯನುಯ್ದು ಗುಪ್ತದಿರಿದಿರಿಸುವುದುಂ ೩೯

ಆ ವನಿತೆಗೆ ನವಮಾಸಂ
ತೀವಿ ತನೂಭವನನೊರ್ವನಂ ಬೆಸಲಾಗಲ್
ಭೂವಳಯದೂಳಪವಾದಂ
ತೀವುಗುಮೆಂದಂಜಿ ಶಿಶುವನಾಕ್ಷಣದಿಂದಂ ೪೦

ಮಂದಸಿನೊಳಿರಿಸಿ ಕೊಂಡೊ
ಯ್ದೊಂದು ಮಹಾಯಮುನೆಯೆಂಬ ನದಿಯೊಳ್ ಬಿಡಲಾ
ಕಂದನ ಪುಣ್ಯಪ್ರೇರಣೆ
ಯಿಂದಲ್ಲಿಗೆ ಬಂದನೊರ್ವ ಧರಣೀನಾಥಂ ೪೧

ಮತ್ತೇಭವಿಕ್ರೀಡಿತ

ಪೆಸರೊಳ್ ಸೂರ‍್ಯನೆನಿಪ್ಪನಂಗಮಹಿಪಂ ಚಂಪಾಪುರೇಶಂ ವಿರಾ
ಜಿಸಲಾ ವಾಹಿನಿಯೊಳ್ ಪ್ರವಾಹವಶದಿಂದಂ ಮೇಗಣಿಂ ಬರ್ಪಮಂ –
ದಸನಾಳೋಕಿಸಿ ಕೊಕ್ಕದಂ ಪಿಡಿದು ತಂದಂ ತನ್ನ ಗೇಹಕ್ಕೆ ಸಂ
ತಸದಿಂದಂ ನಿಜಕಾಂತೆ ರಾಧೆಯೆನಿಪಳ್ಗಾನಂದದಿಂ ತೋಱದಂ ೪೨

ವಚನ

ಅಂತು ತೋಱಲಾ ಮಂದಸಂ ತೆಱೆದು ನೋಳ್ಪಾಗಳದಱೊಳ್ ಪಟ್ಟಿರ್ದ ಶಿಶು ತನ್ನ ಕರ್ಣಯುಗಮಂ ನಿಜಕರದ್ವಯದಿಂ ಪಿಡಿದಿರಲಾತಂಗೆ ಕರ್ಣನೆಂದು ಗುಣನಾಮಮಂ ಕೊಟ್ಟು ಸಲಹಿದರೆಂದು ಜಿನಸಮಯ ಮಹಾಪುರಾಣಕ್ರಮದಿಂ ಪೇಳೆ ಕೇಳ್ದು ಮಿತ್ರಂ ಸಂತುಷ್ಟಚಿತ್ತನಾಗಿ ಸುಖಸಂಕಥಾವಿನೋದದಿಂದಿರುತ್ತಿರಲಾ ಸಮಯದೊಳ್

ಕಂದ

ಹದನೇಱೆ ಕಾಯ್ದುರಿವ ಲೋ
ಹದ ಬಟ್ಟಂ ನಿಱಿಸಿ ಹೇವಣಿಗನಡೆಗಲ್ಲಾ
ಗ್ರದೊಳಿಕ್ಕುಳಿಂದೆ ಪಿಡಿದೊ
ಡ್ಡಿದನೆನೆ ರವಿಯೆಸೆದನಸ್ತಗಿರಿಮಸ್ತಕದೊಳ್ ೪೩

ಆರುಂ ಬಾಳ್ವರು ನಿರಾ
ಧಾರದೊಳಿರೆ ಕೇಡು ತಪ್ಪದೆಂದಱಿಪುವವೊಲ್
ಪಾರಿದ ಪಥದಿಂದಪರಾಂ
ಭೋರಾಶಿಯೊಳಂಬುಜಪ್ರಿಯಂ ಬಿಳ್ದಿರ್ದಂ ೪೪

ವಚನ

ಅಂತು ನೇಸರ್ಪಡುವುದುಂ ನಿದ್ರಾಮುದ್ರಿತರಾಗಿ ಕಿಱಿದಾನುಂಬೇಗಮಿರುತ್ತಿರೆ

ಕಂದ

ಮೊರೆವಳಿಕುಳಂಗಳಿಂದುಲಿ
ವರಗಿಳಿಯಿಂ ಬಗ್ಗಿಪನ್ಯಭೃತ್ಸಂಚಯದಿಂ
ಸುರಗೃಹಸಂಧ್ಯಾನಕದಿಂ
ಪರಿಹರಿಸಿತು ನಿದ್ರೆ ಖಚರಚಕ್ರೇಶ್ರನಾ ೪೫

ವಚನ

ಅಂತು ನಿದ್ರೆಯಿಂದೆಳ್ಚತ್ತು ಸ್ನಾನ ದೇವತಾರ್ಚನೆಯಂ ಮಾಡಿ ನಿತ್ಯದಾನಮಂ ಕೊಟ್ಟು ತದನಂತರಮೋಲಗಂಗೊಟ್ಟಿರ್ಪ ಸಮಯದೊಳ್

ಕಂದ

ಭುವನದ ವಿಳಾಸಮಂ ನೋ
ಡುವೆನೆನುತುಂ ನಾಗರಾಜನವನೀತಳದಿಂ
ದವೆ ಬರ್ಪ ತೆಱದೊಳೇಱಿದ
ನವಯೆವದಿಂದುದಯಶಿಖರಿಶಿಖರದೊಳರ್ಕಂ ೪೬

ಭರದಿಂ ತನ್ನ ಸಖಂಗಾ
ದರದಿಂದಂ ಪಲವು ದರ್ಶನಂಗಳ ಮಿಥ್ಯೋ
ತ್ಕರಮಂ ತಿಳಿಸುವ ಬಗೆಯಂ
ಧರಿಯಿಸಿದಂ ಚಿತ್ತದೊಳಗೆ ವೃತ್ತವಿಳಾಸಂ ೪೭

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಭೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಪದಂ
ವೃತ್ತವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್ ಕೌರವ ಭಗೀರಥನಭಿ
ಮನ್ಯುವಿಂದ್ರಜಿತುವೇದವ್ಯಾಸ ಕರ್ಣ ತದೃಣಬಿಂದುವಿನುತ್ಪತ್ತಿ ವರ್ಣನಂ
ಸಪ್ತಮಾಶ್ವಾಸಂ