ಕಂದ

ಶ್ರೀಸುಕವಿಸ್ತುತನಖಿಳ ಕ
ಳಾಸದನಂ ಸುಕವಿಬೋಧಯಂ ದಾನ ಚಿರಾ
ಭ್ಯಾಸಂ ಜಿನಧರ್ಮಾಬ್ಜದಿ
ನೇಶಂ ಸಮ್ಯಕ್ತ್ಜರತ್ನ ರತ್ನಾಭರಣಂ ೧

ಅಂದು ಮುನೀಶಂಗೊಲವಿಂ
ವಂದಿಸಿ ಬೀಳ್ಕೊಂಡು ನಿಜಪುರಕ್ಕೆ ಬರುತ್ತಾ
ನಂದದೊಳೆ ಮನೋವೇಗಂ
ಮುಂದೆ ಬರುತಿರ್ಪ ತನ್ನ ಸಖನಂ ಕಂಡಂ ೨

ವಚನ

ಅಂತು ಕಂಡು ಪರಸ್ಪರಾಲಿಂಗನಂಗೆಯ್ದು ಎಲೆ ಮಿತ್ರಾ ನಿನ್ನ ನಾಂ ಕೂಡೆ ನೋಡಿ ಕಾಣದೆ ಇನ್ನೆವರಂ ಚಿಂತಿಸುತ್ತಿರ್ದೆಂ ನೀನಿನ್ನೆವರಮೆಲ್ಲಿಗೆ ಪೋಗಿರ್ದೆ ಪೇಳಿಂದು ಪವನವೇಗಂ ಬೆಸಗೊಳೆ ಮನೋವೇಗನಿಂತೆಂದಂ ಭರತಾರ‍್ಯಾಖಂಡದ ಜಿನಪತಿಯ ಪೂಜೆಯಂ ಮಾಡಿ ಬರುತ್ತಿರೆ ಮುಂತೊಂದೆಡೆಯೊಳ್ ಪಲವುಂ ತೆಱದ ಮಣಿಖಚಿತ ಮಾಟಕೂಟ ಪ್ರಾಸಾದದಿಂದೊಪ್ಪಂಬೆತ್ತ ಹರಿಹರಹಿರಣ್ಯಗರ್ಭಾಲಯಂಗಳಿಂದಲ್ಲಿ ಏಕದಂಡಿ ದ್ವಿದಂಡಿ ತ್ರಿದಂಡಿ ಹಂಸ ಪರಮಹಂಸ ಭೂತಿಕಾದಿ ಲಿಂಗ ಪ್ರಕಟ ಬ್ರಾಹ್ಮಣ ವೇದಘೋಷ ಘೂರ್ಣಾಯಮಾನಮಾದ ಪಾಟಳೀಪುತ್ರಪುರಮಂ ನೋಡಿಕೊಂಡು ಸೋಲ್ತು ಪೊಱಮಡಲಾಱದೆ ಭ್ರಮಿಸುತ್ತಿರ್ದು ಈಗಳ್ ಅಂತೆ ಪೊಱಮಟ್ಟು ಬಂದೆನೆನೆ ಕೇಳ್ದು ಪವನವೇಗನಿಂತೆಂದಂ –

ಕಂದ

ಈ ಚೆಲ್ವನಪ್ಪ ಪುರಮಂ
ಖೇಚರಪತಿ ನೋಡಲೆಂದು ಪೋಗುತ್ತೆನಗಂ
ಸೂಚಿಸದೆ ಪೋದೆ ಮಗಳ್ದೀ
ಲೋಚನಕಾನಂದಮಾಗೆ ತೋಱಗಳದಂ ೩

ಎನೆ ಕೇಳ್ದು ಮನೋವೇಗಂ
ಮನದೊಳ್ ನಗುತೆಂದನೆನ್ನ ಪೇಳ್ದಂದದೆ ಬ
ಪ್ಪನಿತುಳ್ಳೊಡಿಂದು ಪೊಳ್ತಿ
ಲ್ಲ ನಾಳೆ ರವಿಯೊಗೆವ ಪೊಳ್ತಱೊಳ್ ಪೊಱಮಡುವಂ ೪

ವಚನ

ಎಂದೊಡಂಬಡಿಸಿ ಪೋಗಿ ಪುರಮಂ ಪೊಕ್ಕು ಮರ್ದನಮಜ್ಜನಂ ಮಾಡಿ ದೇವತಾರ್ಚನಮಂ ನಿರ್ವರ್ತಿಸಿ ಭೋಜನಮಂ ಮಾಡಿ ತದನಂತರಂ ತಮ್ಮಿರ್ವರುಂ ಸುಖ ಸಂಕಥಾವಿನೋದದಿಂದಿರ್ಪ ಸಮಯದೊಳ್

ಕಂದ

ವಿಸ್ತರದೆ ಪದ್ಮರಾಗ ಮ
ಣಿಸ್ತಬಕದೆ ಸವೆದ ಸೆಂಡು ಸುರಪನಿಡಲ್ ಬಂ
ದಸ್ತಗಿರಿಮಸ್ತಕದೊಳೆ ನ
ಭಸ್ತಟದಿಂ ಬಿರ್ದುನಿಂದುದೆನಲಿನನೆಸೆದಂ ೫

ಅಪದಸ್ಥಂ ಸಲೆ ಕುವಳಯ
ರಿಪುವೆನಿಸುವ ಮಾನವಂಗಧೋಗತಿಯಂ ಸೂ
ಚಿಪ ಮಾಳ್ಕೆಯಿಂದೆ ಬೇಗದೊ
ಳಪರಾಂಭೋರಾಶಿಗಿಳಿದನಂಬುಜಮಿತ್ರಂ ೬

ಚಂಪಕಮಾಲೆ

ಪಡುವಣವಾರ್ಧಿವಾಡವನ ಕಾಂತಿಯೊ ಮೇಣ್ ವರುಣೇಶನಿಕ್ಕಿದೊ
ಳ್ದುಡುಗೆಯ ರತ್ನ ಸಂಕುಳದ ಕಾಂತಿಯೊ ಪಶ್ಚಿಮಶೈಲಜಾಲಮಂ
ಸುಡುವ ವನಾಗ್ನಿಕಾಂತಿಯೊ ನಿಶಾವಧುವುಟ್ಟರುಣಾಂಬರಾಂಶುವೋ
ಪೊಡವಿಯನೆಯ್ದೆ ಪರ್ವಿತೆನೆ ಪರ್ವಿತು ಸಂಜೆಯ ಕೆಂಪು ಲೋಕಮಂ ೭

ಮಹಾಸ್ರಗ್ಧರೆ

ಮುಳಿಸಿಂ ಬೆನ್ನಟ್ಟುತಿರ್ಪೀ ತಿಮಿರಗಜಮನಾಂ ಕೊಲ್ವೆನೆಂದರ್ಕನಸ್ತಾ
ಚಳದೊತ್ತಿಂ ನಿಂದು ಕುಂಭಸ್ಥಳಮನೆ ಪೊಡೆಯಲ್ ಖಡ್ಗದಿಂ ರಕ್ತಮುಕ್ತಾ
ಫಲಮುಚ್ಚಂಬಾಯ್ದು ಪತ್ತಿತ್ತೆನಿಪ ತೆಱದೆ ಸಂಧ್ಯಾರುಣಂ ತಾರಕಾಸಂ
ಕುಳಮಾದಂ ಪಶ್ಚಿಮಾಶಾಗಗನದೊಳೆಸೆದತ್ತು ರ್ಬಿಗಾಶ್ಚರ್ಯಮಾಗಲ್ ೮

ಉತ್ಪಲಮಾಲೆ

ಮಾಡಿದನೇಕೆ ಧಾತ್ರನಿರುಳಂ ನಮಗೇಕಿರುಳೊಳ್ ವಿಯೋಗಮಂ
ಮಾಡಿದನೆಂದು ಶೋಕಿಸುವ ಕೋಕನಿಕಾಯದ ಶೋಕದೇಳ್ಗೆಯಂ
ನೋಡದೆ ಮುಚ್ಚಿದಳ್ ನಳಿನಿ ಕಣ್ಗಳೆನಲ್ ಮುಗಿದತ್ತು ಮತ್ತದಂ
ನೋಡುತೆ ನಕ್ಕಳುತ್ಪಳಿನಿಯೆಂಬವೊಲೆಯ್ದಿದುದುರ್ವಿಕಾಶಮಂ ೯

ಮತ್ತೇಭವಿಕ್ರೀಡಿತ

ನೆಲನಂ ವ್ಯೋಮಮನಬ್ಧಿಯಂ ದೆಸೆಗಳಂ ನಿಶ್ಚಿದ್ರಮಪ್ಪಂದದಿಂ
ಜಲಜಾತೋದ್ಭವನಿಂದ್ರನೀಲಮಣಿಯಿಂದಂ ಕಟ್ಟಿ ಪನ್ನೀರ ಕ
ಜ್ವಲಮಂ ತೀವಿದನೆಂಬವೋಲಖಿಳ ಲೋಕಾಲೋಕಮಂ ಕೂಡೆ ಕ
ತ್ತಲೆ ತೀವಿತ್ತುಳಿದಾದ ವಸ್ತು ನಯನಕ್ಕಂತಿಂತೆನಲ್ ಬರ್ಪುದೇ ೧೦

ಕಂದ

ನೆಲನಗಲಕೆ ತೀವಿದ ಕ
ಳ್ತಲೆಯಂ ಕಳೆಯಲ್ಕೆ ಗಗನತಳದೊಳ್ ಪಲವುಂ
ಬೆಳಕಂಡಿಗಳಂ ಸಮೆದಂ
ಜಳಜಜನೆನೆ ತೊಳಗಿ ಬೆಳಗಿದುವು ಭಗಣಂಗಳ್ ೧೧

ಇದು ಕಮಲಿನಿಯುಮ್ಮಳದೊದ
ವಿದು ರಾತ್ರೀವನಿತೆಯುಟ್ಟ ಕೃಷಂಬರಮಿಂ
ತಿದು ಜಾರತತಿಗಿರಲ್ ಮಾ
ಡಿದ ಬಹುಳ ತಮಾಳವನಮುಮೆನಿಸಿದುದು ತಮಂ ೧೨

ಉತ್ಪಲಮಾಲೆ

ಸ್ಮರನ ಸರಳ್ಗಳಂ ಮಸೆವ ರತ್ನದ ಸಾರಣೆಯೊ ಶಕ್ರನೀಕ್ಷಿಸಲ್
ಪರಿಕಿಸೆ ರನ್ನದಿಂ ಸಮೆದ ದರ್ಪಣಮೊ ವರ ಪೂರ್ವದಿಗ್ವಧೂ
ದರಹಸಿತಾಸ್ಯಮೋ ದಿಟದಿನೆಂದೆನೆ ತತ್ ಕ್ರಮದಿಂದೆ ಶೋಭೆಯಂ
ಧರಿಯಿಸಿತೊಳ್ಪುವೆತ್ತೆಸೆವ ಮೂಡಣದಿಕ್ಕಿನ ಚಂದ್ರಮಂಡಲಂ ೧೩

ಕಂದ

ಆ ಸಮಯದಲ್ಲಿ ಖಚರಾ
ಧೀಶಂ ತೂರ‍್ಯತ್ರಯಕ್ಕೆ ಮನವಿತ್ತು ಕಳಾ
ವಾಸಂ ಸುರರಾಜ ಪ್ರವಿ
ಳಾಸದಿನಾಸ್ಥಾನಮಂಟಪಕ್ಕೆಯ್ತಂದಂ ೧೪

ಚಂಪಕಮಾಲೆ

ಮಿಸುನಿಯ ಕಂಬದಿಂದಖಿಳರತ್ನದ ಕೀಲಣೆಯಿಂ ಪ್ರವಾಳದೆ
ಣ್ದೆಸೆಗಳ ಕೂಟದಿಂ ಪಳುಕಿನೊಪ್ಪುವ ಭಿತ್ತಿಗಳಿಂದೆ ಮೌಕ್ತಿಕ
ಪ್ರಸರದ ಲಂಬಣಪ್ರಕರದಿಂ ನವಪಚ್ಚೆಯ ತೋರಣಂಗಳಿಂ
ದೆಸೆವುದು ಸಂತತಂ ಖಚರವಲ್ಲಭನೋಲಗಶಾಲೆ ನಾಡೆಯುಂ ೧೫

ಕಂದ

ಪಳಿಕಿನ ಮಣಿಕುಟ್ಟಿಮದೊಳ್
ಪೊಳೆಯುತ್ತಿರೆ ಪಚ್ಚೆದೋರಣಂಗಳ್ ಪುಲ್ಲೆಂ
ದೆಳಸಿ ನೆಱು ಮೇವ ಬಗೆಯಿಂ
ಬಳಸಿರ್ಪುವು ದೀಹದಖಿಳಮೃಗಶಾಬಂಗಳ್ ೧೬

ನೀಲದ ಲೋವೆಯ ಬಳಿವಿಡಿ
ದಾಲಂಬಿಪ ಮೌಕ್ತಿಕಂಗಳಿಂ ಚಾದಗೆ ಕಾ
ರ್ಗಾಲದ ಪನಿಯೆಂದೀಂಟಲ್
ಮೇಲಂಗೌವಳಿಸಿ ನಗಿಸಿದುವು ನೋಳ್ಪವರಂ ೧೭

ಶಶಿಭಗಣಂಗಳ್ ಪ್ರತಿಬಿಂ
ಬಿಸೆ ಪಳಿಕಿನ ಭಿತ್ತಿಯಲ್ಲಿಯಬ್ಜಭವಂ ನಿ
ರ್ಮಿಸಿದಂ ಜ್ಯೋತಿರ್ಲೋಕಮ
ನೆಸೆವವೊಲೀಯೆಡೆಯೊಳೊಂದನೆನೆ ಕಣ್ಗೊಳಿಕುಂ ೧೮

ವಚನ

ಅಂತನೇಕತೆಱದೆ ಶೋಭಾಭಿರಾಮಮಾದಾಸ್ಥಾನಮಂಟಪದ ಮಧ್ಯಸ್ಥಿತ ಮಣಿ ಮಯಸಿಂಹಾಸನಾಸೀನನಾಗಿ ನಿದ್ರೆಗೆಯ್ದ ಜಳನಿಧಿಯಂತೆ ಸಕಳರತ್ನಖಚಿತ ಮಕುಟಕಟಕಕೇಯೂರಹಾರಕರ್ಣಪೂರಾದಿ ನಾನಾ ಭೂಷಣಾಂಶುಗಳ್ ನಿಮಿರೆ ಪುರಜನ ಪರಿಜನವಾಪ್ತಜನಂಬೆರಸು ಒಡ್ಡೋಲಗಂಗೊಟ್ಟು ಕುಳಿತೀ ಸಮಯಂ ಬಾರ್ದು ಕರೆವ ಸೂಳೆವಳ್ಳರ ಕೊರಳಸರದ ಬಳಿವಿಡಿದು ನೂತ್ನರತ್ನದಂತೆ ಬಂದೋಲಗದೊಳಿಂದ್ರನೋಲಗಿಸುವ ರಂಭಾದಿ ಕಾಮಿನಿಯರಂತೆಯಿಕ್ಕೆಲದೊಳೊಯ್ಯಾರಂಗೊಂಡು ಕುಳಿತಿರ್ದ ತಳಿರಡಿಯ ತಾರಾಳಿನಸಖದ ಕೂರ್ಮೋನ್ನತಾಂಘ್ರಿಯುಗದ ಗೂಢಗುಲ್ಫದ ಮದನನ ತೂಣೀರಮೆನಿಪ ಕಿಱುದೊಡೆಯ ಕದಳೀಸ್ತಂಭದೂರುದ್ವಯದ ಪೀನನಿತಂಬದ ಮುಷ್ಟಿಗ್ರಾಹ್ನಮಧ್ಯದ ಗಂಭೀರ ನಾಭಿಯ ತೆಳ್ವಸುಱಅಸಿಯ ಬಾಸೆಯ ಘಟಕುಚದ ಲತಾಬಾಹುವಿನ ಸರಳವಿರಳಾಂಗುಳಿಗಳ ಸೆಳ್ಳುಗುರ ಕಂಬುಗ್ರೀವದ ಶಶಿಮುಖದ ಬಿಂಬಾಧರದ ವಜ್ರದ್ವಿಜದ ದರ್ಪಣಪ್ರತಿಗಂಡಭಿತ್ತಿಯ ಕರ್ನಾಟ ಶ್ರೀಕಾರಸನ್ನಿಭ – ಕರ್ಣದ್ವಯದ ಚಂಪಕ ನಾಸಿಕದ ಮೃಗಶಾಬನೇತ್ರದ ಕರ್ಬುವಿಲ್ಲ ಪುರ್ಬಿನ ಪೆಱೆನೊಸಲ ಭ್ರಮರಾಳಕದ ಸೋರ್ಮುಡಿಯ ಕಾಮಿನೀಕದಂಬಂ ವಿರಾಜಿಸುತ್ತಿರಲಾ ಸಮಯದೊಳ್ ಮೊಖರಿ ಗಾಣನೆಡಬಲದ ತಾಳವಱದು ಪಿಡಿದು ಪೊಡವಟ್ಟು ಬಾಜಿಸುವುದುಮಾ ಸಮಯದೊಳ್

ಕಂದ

ಗವಸಣಿಗೆಯನೊಯ್ಯನೆ ಕಳೆ
ದು ವಾಸಮಂ ಪಿಡಿದು ಕಳೆಯ ಮಯಣಮನನುವಿಂ
ಪವಣಾಗಿರ ಪತ್ತಿಸಿ ಪೊ
ಲ್ಲವಣೆ ಕರಂ ಶುದ್ಧಮಾಗೆ ಪುಂಖಿಸಿ ಬಳಿಕಂ ೧೯

ಗಹಗಹಿಕೆ ಸೊಗಯಿಸುತ್ತಿರೆ
ಮೊಹಚಾಳೆಯ ಬಾಗುಲಾಗುಮಂ ತಂದು ಕರಂ
ಬಹುಭಂಗಿ ಮೆಱೆಯೆ ಸಭೆಯೊಳ್
ರಹಿಯಿಸಿದಂ ವಾಸಕಾಱನತಿಶಯನೀಱಂ ೨೦

ವಚನ

ಅಂತು ರಾಗಮಂ ಮೂರ್ತಿಗೊಳಿಸಲೊಡಂ ಗಾಂಧರ್ವಸರ್ವಜ್ಞನೆಂಬ ಗಾಯಕಂ ನಾಯಕಂ ಸಹಗಾಣರಂ ಕೂಡಿಕೊಂಡು ಎತ್ತಿದ ಶ್ರುತಿಯನಿಳಿಪಲೀಯದೆ ಗದ್ಗದ ಭೀತ ಖಿನ್ನ ಜರ್ಜರ ಮುಕುಳಿತ ಚ್ಯುತ ಕಂಪಿತ ಮುದ್ರಿಷ್ಟಂಗಳೆಂಬ ದೋಷಂಗಳಂ ಪೊರ್ದಲೀಯದೆ ಷಡ್ಜವೃಷಭ ಗಾಂಧಾರ ಮಧ್ಯಮ ಪಂಚಮ ದೈವತ ನಿಷಾದಮೆಂಬ ಸಪ್ತಸ್ವರಮೇಳಾಪದಿಂತುವೊಂದಿ ಗುಂಡಕ್ರಿ ದೇಶಿ ದೇಶಾಕ್ಷಿ ಧನ್ವಾಸಿ ಮಾಳವ ಶ್ರೀವರಾಳಿ ಮಲಹರಿ ಗುಜ್ಜರಿ ಗೌಳಿ ಬಂಗಾಳ ನಾಟ ಕಾಮ್ಬೋದಿ ವಸಂತ ವಿಭ್ರ ಮರೀಚಿ ದೀಪ ಘಂಟಾರವಾದಿಯಾದನೇಕರಾಗಾಂಗ ಕ್ರಿಯಾಂಗ ದೇಶೀಯಮಾರ್ಗವೆಂಬ ಭೇದದೊಳುಂ ಧ್ರವ ಮಟ್ಠೆಯಂ ಪಡಿಯಟ್ಠೆಯಂ ಅಟ್ಟತಾಳದೆಕ್ಕತಾಳ ರೂಪಕಂ ರಚ್ಫೆಯವೆಂಬೇಳುಂ ತೆಱದ ತಾಳಕ್ರಮದಿಂದಿಳೆ ಝೋಂಬಡೆ ತ್ರಿವಳಿಗಳಂ ಸೂಳುಕ್ರಮದಿಂ ಸಭಾಪತಿ ಯಂಕಮಾಲೆಯಂ ಪಾಡುವಾ ಸಮಯದೊಳ್

ಚಂಪಕಮಾಲೆ

ಸೊಗಯಿಸುವೀ ತ್ರಿಪಂಚಮುರುಪಂಚಸರಾಸ್ಯೆಯನಾಂತು ರಂಗ ಪೂ
ಜೆಗೆ ಕರವೊಪ್ಪುವಾವುಜಿಗನಾವುಜಮಂ ಪಿಡಿದೆತ್ತಿ ಕಂದವ
ಟ್ಟಿಗೆಯನೆ ಕಂಡದೊಳ್ ತಳೆದು ತನ್ನೆಡಗೈಯನೆ ನೇತ್ರವಟ್ಟೆಯೊ
ಳ್ಪುಗಿಸಿ ನಿರಂತರಂ ಕಳೆಯನೇಣನಣಂ ಬಲಿದೊತ್ತಿ ಹಸ್ತದೊಳ್ ೨೧

ಕಂದ

ಪೊಳೆಮದ್ದಳಿಕೆಯ ನೊಪ್ಪಿರೆ
ತಳದಿಂದಂ ನೀವಿ ನೇವರಿಸಿಯುಲ್ಲಾಸಂ
ಗಳನಿತ್ತು ಪೊಯ್ದು ನೋಡಿದ
ನಳವಡೆ ಝೇಂಕಾರಮಂ ಮನೋಮುದದಿಂದಂ ೨೨

ಅಳಗಂ ಸುಳಿಯಳಗಂ ಬೊ
ಟ್ಟಳಮೊಳ ಕತ್ತರಮುಮೆಸೆವ ಪೊಱಕತ್ತರವ
ಗ್ಗಳಿಸಿರೆ ನಾನಾ ಭೇದಂ
ಗಳ ಪಹರಣಿ ತುಡುಕುಮೋಡಿಯಂ ಬಾಜಿಸಿದಂ ೨೩

ವಚನ

ಆ ಸಮಯದೊಳ್ ಮದ್ದಳಿಗಂ ಮದ್ದಳೆಯಂ ಕೂರ್ಪನಲ್ಲಳಂತೆ ತೊಡೆಯೊಳಳವಡಿಸಿ ಪೊಱಮನದ ಕಾಂತೆಯಂತೆ ಬೀಣಿಗೆಯಂ ಬಿಗಿದು ಚಂದ್ರಮಂಡಳದ ಕಳಂಕಮನುದ್ದುವಂತೆ ಲೋಹಚಕ್ರದಿಂ ಪಳೆಯ ಬೋಹಣಮನುದ್ದಿ ಭಾರತಿಯ ಮುಖಕಮಲದೊಳ್ ಕತ್ತುರಿಯಬೊಟ್ಟನಿಡುವಂತೆ ಪೊಸಬೋಹಣಮಂ ಪತ್ತಿಸಿ ಪುಂಶ್ಚಳಿಯಂತೆ ಕಣ್ಣಱಿದು ನುಡಿಸಿದಾಕಾರಮಂ ಪೊಯ್ದು ಠವಣೆಯೊಳ್ ಪವಣಱಿದು ಪೆಕ್ಖಣ ಪಠ್ಠಿಯೊಳ್ತಕ್ಕನೆನಿಸಿ ಲಾಗು ಮೋಡಿ ಚಮತ್ಕಾರ ತುಡಿಕು ರಿಗ್ಘವಣೆ ಪಹರಣೆಗಳೆಂಬ ನಾನಾ ಶಬ್ದಂಗಳಂ ಬಾರಿಸಿ ತಿರಿಪಂ ತಂದು ಬೈಸಿಕೆಯೊಳ್ ಝಂಕಾಳತನದಿಂದಾಱುಬಾಯಂ ಬಿಟ್ಟು ಮೋಹಿಸುವುದು ಮಾಗಳಾ ಪಾತ್ರಚೂಡಾಮಣಿಯೆಂಬ ನರ್ತಕಿಯುಟ್ಟ ಚಲ್ಲಣದ ತೊಟ್ಟ ಸುಯಾಣದ ಕಂಚುಳಿಕೆಯ ಇಟ್ಟ ಕತ್ತುರಿಯತಿಲಕದ ಮುತ್ತಿನ ಸೂಸಕದ ವಜ್ರದೋಲೆಯ ಮಾಣಿಕ್ಯದ ಕರ್ಣಪೂರದ ಮೂಗಿನ ಮೂಕುತಿಯ ಪಚ್ಚೆಯ ಪದಕದ ತೋರಹಾರದ ಕೀರ್ತಿಮುಖದ ತೋಳಬಂದಿಯ ಮಣಿಖಚಿತ ಕೇಯೂರದ ಪುಷ್ಯರಾಗದ ಭೂಳೆಯದ ರನ್ನದ ಪಿಂಡುಗಂಕಣದ ನವರತ್ನದುಂಗುರದ ಕನಕ ಕಾಂಚೀದಾಮದ ನೀಲದಪಾಯವಟ್ಟದ ಖುಚ್ಫಯದ ನೇವುರದ ಕಾಲಹಳಚಿನುಂಗುರದ ಶೃಂಗಾರಂ ಪಳಂಚನಾಗೆ ಜವನಿಕೆಯ ಮೊಱುಯೊಳೊಂದೆರೆಡು ಕಳಾಸಮಂ ತಂದು ಸುಧಾಸೂತಿಬಿಂಬಕ್ಕೆ ಮಱುಯಾದ ಮೇಘಮಂಡಲವೋಸರಿಸುವಂತೆ ಮೇಘವರ್ಣದ ಜವನಿಕೆಯನೋ – ಸರಿಸುವುದುಮಾ ಸಮಯದೊಳ್

ಚಂಪಕಮಾಲೆ

ನಿಲವಿನ ರೇಖೆ ರೇಖೆಗಳವಟ್ಟ ಶರೀರದ ಲಾಗು ಲಾಗಿನೊಳ್
ನೆಲಸಿದ ರೂಪು ರೂಪಿನೊಳಗುರ್ವಿಸುವುನ್ನತ ದೇಸಿ ದೇಶಿಯೊಳ್
ನೆಲಸಿದ ಗಾಡಿ ಗಾಡಿಯೊಳನಾರತವೊಪ್ಪುವ ತೊಂಡು ತೊಂಡಿನೊಳ್
ನೆಲೆ ಬಳಸಿರ್ಪ ಭಾವವಳವಟ್ಟಿರೆ ನರ್ತಕಿ ನಾಡೆ ನರ್ತಿಪಳ್ ೨೪

ಕಂದ

ವದನದೊಳೆ ಹಾವಮುರು ಚಿ
ತ್ತದೊಳೊಪ್ಪುವ ಭಾವಮಕ್ಷಿಯೊಳ್ ಸುವಿಳಾಸಂ
ವಿದಿತಂ ಭ್ರೂಯುಗದೊಳ್ ಪು
ಟ್ಟಿದುದನುಪಮವಿಭ್ರಮಂ ಲಸನ್ನರ್ತಕಿಯಾ ೨೫

ಪಯಪಾಡು ನಿಜ್ಜವಣೆ ಚಾ
ಳೆಯಮುಲ್ಲಾಸಂ ತಿರಿಂಪು ತಡವಿತ್ತಡಮುಂ
ನಯನವಿಶೇಷಂ ಲೀಲಾ
ಯಿಯ ಲುಳಿ ಪುರಿದೆಸೆವಿನಂತರಂ ನರ್ತಿಸಿದಳ್ ೨೬

ವಚನ

ಮತ್ತಂ ದಿಂಡುಮುಂಡಾಸನಂ ದಪ್ಪಸರಣ ಒಳಗಭವರಿ ಹೊಳಹು ತಿರಿಪು ಸಮಸೂಚಿ ವಿಷಮಸೂಚಿ ಕೂರ್ಮಂ ನಾಗಬಂಧವರ್ಧಭ್ರಮರಿ ತಿಗಮಾರಿ ಮೊಳೆಯಂ ಮುಱುವನುಡುವರಿ ಮೊಸಳೆವರಿ ಜಲಶಯನಂ ಅಚ್ಯುತಂ ಮತ್ಸ್ಯಪುಟಂ ಲಂಕಾದಹನಮೆಂಬ ಪಲವುಂ ತೆಱದ ಕರಣಂಗಳಿಂ ವಿಚಿತ್ರಮಪ್ಪ ಚಿತ್ರವಿದ್ಯೆಯಿಂ ಲಾಸ್ಯತಾಂಡವಮೆಂಬೆರಡುಂತೆಱದ ನೃತ್ಯಭೇದದಿಂದಾಡಿ ಸಭಾಪತಿಯಂ ಮೆಚ್ಚಿಸಿಯುಂ ಆನೆ ಹಯನಾದಂತೆಯುಂ ಕಲ್ಪವೃಕ್ಷಂ ಪಣ್ತಂತೆಯುಂ ಕೇಳಿಸಿದ ಸಂಪ್ರದಾಯಕ್ಕಂ ವಂದಿಸಂದೋಹಕ್ಕಭಿವಾಂಛಿತಾರ್ಥ ಫಲಮಂ ಕೊಟ್ಟು ಬೇಳ್ಪವರಂ ತುಷ್ಟಿವಡಿಸಿ ಯೋಲಗಮಂ ವಿಸರ್ಜಿಸಲ್ವೇಳ್ದು ಶಯ್ಯಾಗೃಹಕ್ಕೆ ಬಿಜಯಂಗೆಯ್ದು ಹಂಸತೂಳತಲ್ಪಶಯನ ಸ್ಥಾನದೊಳೊಱಗಿ

ಕಂದ

ಕ್ಷೀರಾಂಭೋರಾಶಿಯೊಳಂ
ಭೋರುಹನಯನಂ ವಿಳಾಸದಿಂದಿರ್ಪವೊಲಿಂ
ತಾರಯ್ಯೆ ಮನೋವೇಗ ಮ
ಹೀರಮಣಂ ಹಂಸತೂಳಿಯೊಳ್ ಪಟ್ಟಿರ್ದಂ ೨೭

ಜಿನಮತಮಂ ಪ್ರಕಟಿಪ ಸ
ಜ್ಜನರಂ ಪಾಲಿಸುವ ಸಖನ ಮೂರ್ಖತೆಯಂ ನೆ
ಟ್ಟನೆ ಕಳೆವದೊಂದು ಮನಮಂ
ನೆನೆಯಲ್ ಬಗೆವಂತೆ ಖಚರಪತಿ ಕಣ್ಗವಿದಂ ೨೮

ವಚನ

ಅಂತು ನಿದ್ರಾಮುದ್ರಿತನಾಗಿ ಕಿಱುದಾನುಂ ಬೇಗಮಿರಲಾ ಸಮಯದೊಳ್ ಶರನಿಧಿಯೊಳ್ ಪರಿದಾಡಿ ಪೊಱಮಟ್ಟು ಪನಿಹುಲ್ಲ ಬಿಂದು ಸಂದೋಹಮಂ ಪೂಸಿ ಕಳೆದು ಸರೋಜಷಂಡದೊಳ್ದಿಂಡುವಾಯ್ದು ವಿಕಾಸಕ್ಕೆ ಪಕ್ಕುಗುಡುತ್ತುಂ ಪೂದೋಂಟದೊಳ್ ಪೊಕ್ಕು ಕುಸುಮರಜದೊಳ್ ಪೊರಳುತ್ತುಂ ಪತತ್ರಿ ಸಂದೋಹದೊಳೊಂದೆ ತೂಂಕಡಂ ಕಿಡಿಸುತ್ತುಂ ಕೋಕಂಗಳಖಿಳಮಂ ನೂಂಕಿ ಕಳೆದು ರಾಗದೊಳ್ ನೆರಪುತ್ತಂ ಬನದೊಳ್ ಬಳಸಿ ಸುಳಿದು ಪುರಮಂ ಪೊಕ್ಕು ವಲ್ಲಭೆಯರ ಬಟ್ಟಬಲ್ಮೊಲೆಯಿಟ್ಟೆಡೆಯೊಳ್ ನಟ್ಟ ನಡುವೆ ಪೊಕ್ಕುಪಟ್ಟಿರ್ದ ವಿಟರಂ ಪೊಱಮಡಿಸಲೆಂದು ಬಂದ ದೂತನಂತೆ ಬಂದು ತಂಗಾಳಿ ತೀಡುವಾ ಸಮಯದೊಳ್

ಕಂದ

ಪರಿಹರಿಸಿ ನಿದ್ರೆಯುಡುಗಿದ
ಕೊರಲಂ ನಿಮಿರ್ದೆತ್ತೆ ನೋಡಿ ನಾಲ್ದೆಸೆಯಂ ಕೇ
ಸರಮಂ ಬಿದಿರ್ದೆಱಂಕೆಯ
ನೆರಡಂ ಬಡಿದಿದು ಕೋಳಿ ಕೂಗಿದುವಾಗಳ್ ೨೯

ದಳದಳಿಸಿ ಪೊಳೆವ ಪೊಸಕೆಂ
ದಳಿರ್ಗಳ ಕಾವಣವೊ ಕಮಳಿನಿಯರಾಗದ ಪೆ
ರ್ಬೆಳವಿಗೆಯೊ ಪೇಳಿ [ಮೆ]ನೆ ಕ
ಣ್ಗೊಳಿಸಿದುದರುಣೋದಯಂ ಸುರೇಂದ್ರನ ದೆಸೆಯೊಳ್ ೩೦

ಆ ಸಮಯದಲ್ಲಿಯಮರಾ
ವಾಸದ ಸಂಧಾನಕ ಪ್ರಣಾದಂಗಳ್ ವಾ
ರಾಶಿಯ ಘನ ನಿನದದವೋ
ಲಾಸುರಮಾಗಳ್ಕೆ ತೀವಿತೆಂಟುಂದೆಸೆಯೊಳ್ ೩೧

ವಚನ

ಅಂತು ನೆಗಳ್ದ ಸಂಧ್ಯಾಸಮಯದಾನಕ ಪ್ರಣಾದದಿಂ ನಿದ್ರೆ ತಿಳಿದೆರ್ದು ಪುಂಡರೀಕ ಷಂಡದಂತೆ ಮಿತ್ರಾಭ್ಯುದಯಮಂ ಫಲ್ಗುಣನಂತೆ ಧರ್ಮಾಭಿಲಾಷೆಯಂ ಚಕ್ರವಾಕದಂತೆ ನಿರ್ದೋಷಮಂ ಸುರಪತಿಯಂತೆ ವಿಬುಧಸಂತುಷ್ಟಿಯಂ ಸರಸಿಜಾಂಬಕನಂತೆ ಸುಮನಸದ್ವೇಷಿಜನ ವಿಧ್ವಂಸನಮಂ ಮನದೊಳ್ ಸ್ಮರಿಯಿಸುತಿರ್ಪ ಸಮಯದೊಳ್

ಉತ್ಪಲಮಾಲೆ

ಬಾಡಿತು ನೈದಿಲೋಡಿತು ತಮಂ ತೆಗೆದೋಡಿತು ದೈತ್ಯಸಂಕುಳಂ
ತೀಡಿತು ಸೌರಭಂ ನಲಿದು ನೋಡಿತು ಪಂಕಜವಲ್ಲಿ ಷಟ್ಟದಂ
ಪಾಡಿದುವೈದೆ ಕೋಕಮಿಥುನಂ ನೆಱೆ ಕೂಡಿದುವೊಲ್ಲು ಮೂಡಿದಂ
ಮೂಡಣದಿಕ್ಕಿನೊಳ್ ತೊಳಗುತುಂ ಬೆಳಗುತ್ತೆ ಸರೋಜಬಾಂಧವಂ ೩೨

ವಚನ

ಅಂತು ನೇಸರ್ಮೂಡುವುದುಂ ಮರ್ದನಮಜ್ಜನಮಂ ಮಾಡಿ ಯಕ್ಷಕರ್ದಮದೊಳ್ ಉದ್ವರ್ತನಂಗೆಯ್ದು ಸಂಧ್ಯಾವಂದನೆ ನಿತ್ಯಕರ್ಮಾನುಷ್ಠಾನಜಪತಪಸ್ಸಂಯಮಾದಿ ದೇವತಾರ್ಚನಾದಿ ವಿಧಿಗಳಂ ನಿರ್ವರ್ತಿಸಿ ಗುರುಜನ ವಿಪ್ರಜನ ವಂದ್ಯಜನದಾಶೀರ್ವಾದ ಶತಸಹಸ್ರಮನಾಂತು ತಾಂಬೂಲಮುಖ್ಯ ಗೋದಾನ ಮಹಿಷೀದಾನ ವಸ್ತ್ರದಾನ ತುರಗದಾನಾದಿಯನೇಕದಾನಮಂ ಕೊಟ್ಟು ಆಜ್ಯನಿರೀಕ್ಷಂಂಗೆಯ್ದು ಮುನಿವರಂ ಪೇಳ್ದ ವೃತ್ತಾಂತಮಂ ಚಿತ್ತದೊಳ್ ನೆನೆದು ಪವನವೇಗನಂ ಕರೆಯಿಸಿ ಶುಭಮುಹೂರ್ತದೊಳ್ ಪಯಣಮಂ ಮಾಡಿ ಪೋಗುತ್ತೆ

ಶಾರ್ದೂಲವಿಕ್ರೀಡಿತ

ಮಾರ್ತಂಡೋದಯಕಾಲದೊಳ್ ಪವನವೇಗಾಖ್ಯಂ ಮನೋವೇಗನುಂ
ಸಾರ್ತಂದರ್ ಸಲೆ ಪಾಟಳೀಪುರವರೋದ್ಯಾನಕ್ಕೆ ತಾಮಿರ್ವರುಂ
ಕೀರ್ತಿಶ್ರೀಯುತರಲ್ಲಿ ಪುಷ್ಪಕ ವಿಮಾನದ್ವಂದ್ವಮಂ ಬಯ್ತು ಸನ್ಮೂರ್ತಿ
ಪ್ರಾಯವಳಂಕೃತಿ ಪ್ರಕರ ವಸ್ತ್ರಾದ್ಯುದ್ಘಶೋಭಾನ್ವಿತರ್ ೩೩

ಕಂದ

ತೃಣಕಾಷ್ಠಭಾರಮಂ ಪೊ
ತ್ತಣಮೆ ತದುದ್ಯಾನದಿಂದೆ ಪೊಱಮಟ್ಟಾ ಪ
ಟ್ಟಣದ ಕಮನೀಯತರ ಮೂ
ಡಣ ಗೋಪುರದಬ್ಜಭವನ ಗೃಹಮಂ ಪೊಕ್ಕರ್ ೩೪

ವಚನ

ಅಂತು ಪೊಕ್ಕು ಪುಲ್ಲುಂ ಪುಳ್ಳಿಯ ಪೊಱೆಯನಿಳುಪಿ ಭೇರಿಯಂ ಪೊಯ್ದು ಸಿಂಹಾಸನದೊಳ್ ಕುಳ್ಳಿರೆಯಾ ಭೇರೀರವಮಂ ಕೇಳ್ದು ವೇದಪಾರಾವಾರಪಾರಾಯಣರುಂ ಶಾಸ್ತ್ರಚತುರ್ಮುಖರುಂ ತರ್ಕಕರ್ಕಶರುಮಪ್ಪ ತತ್ಪುರದ ವಿಪ್ರಜನಂಗಳೆಲ್ಲಂ ಬಂದವರಲಂಕಾರಾಕಾರಮಂ ಕಂಡಿವರ್ ಕಾರಣ ಪುರುಷರಾಗಲೆವೇಳ್ಕುಮೆಂದು ವಿಷ್ಣು ವಿಕಲ್ಪದಿಂ ನಮಸ್ಕಾರಮಂಗೆಯ್ದು ಮತ್ತಮಿಂತೆಂದರ್

ಉತ್ಸಾಹ

ಆವ ದೇಶದಿಂದೆ ಬಂದಿ
ರಾವಶಾಸ್ತ್ರದಲ್ಲಿ ಬಲ್ಲಿ
ರಾವವಿದ್ಯೆ ನಿಮ್ಮೊಳುಂಟು
ನೀವು ಪೇಳಿ ಬೇಗದಿಂದೆ ೩೫

ಕಂದ

ಎನಲವನೀತಳಮಂ ಸು
ತ್ತಿ ನೊಡುತಂ ಬಂದೆವೀ ಪುರದ ಚೆಲ್ವಂ ನೆ
ಟ್ಟನೆ ನೋಡಲೆಂದು ಶಾಸ್ತ್ರಮ
ನಿನಿತಂ ಕೇಳ್ದಱಿವೆವಾದ ವಿದ್ಯೆಯೊಳೆನಿತಂ ೩೬

ವಚನ

ಎಂದೊಡವರಿಂತೆಂದರಿಲ್ಲಿ ವಿದ್ವಾಂಸರಾದವರ್ ವಾದಾರ್ಥದಿಂ ಬಂದು ಭೇರೀರವಮಂ ಮಾಡಿ ವಾದಂ ಗೆಲ್ದಲ್ಲದೆ ಸಿಂಹಾಸನದೊಳ್ ಕುಳ್ಳಿರಲ್ಲಾರದೇಕೆ ಕುಳ್ಳಿರ್ದಿರೆನೆಯಾದೊಡೆ ಮಾಣಲಿಯೆಂದು ಸಿಂಹಾಸನದಿಂದಿಳಿದು ಕುಳ್ಳಿರೆ ಮತ್ತಂ ವಿಪ್ರರಿಂತೆಂದರ್