ಶಾರ್ದೂಲವಿಕ್ರೀಡಿತ

ಈ ರೂಪೀ ಬಲವೀಯಲಂಕರಣವೀ ಸಾಮರ್ಥ್ಯವೀ ತೇಜವಿಂ
ತಾರಯ್ಯಲ್ ತೃಣಭಾರಮಂ ತಳೆದು ನೀಚಾಚಾರದಿಂ ಬಾಳ್ವ ವಿ
ಸ್ತಾರಂ ವ್ಯರ್ಥವಿದೇಕೆ ಪೇಳಿಮೆನಲೇಂ ಧರ್ಮಾರ್ಥಮೀಯಂದದಿಂ
ದಾರುಂ ಬಾಳ್ವವರಿಲ್ಲ ನಿಮ್ಮ ಮತದೊಳ್ ನೀವೆಲ್ಲರುಂ ಪೇಳಿರೇ ೩೭

ವಚನ

ಎನಲಿಂತಪ್ಪ ವಿಭವಮುಳ್ಳವರಿನಿತು ನೀಚಾಚಾರದಿಂ ಬಾಳ್ವರೆಮ್ಮ ಮತದೊಳುಳ್ಳಡೆ ಪೇಳಿಮೆನೆಯಾವಂಜುವೆವೆನೆ ಅಂಜಲೇಕೆ ಪೇಳಿಮೆನೆ ಷೋಡಶಮುಷ್ಟಿಯ ಕಥೆಯವರುಳ್ಳೊಡೆ ಪೇಳಲಮ್ಮೆವೆನೆ ಆ ಕಥೆಯೆಂತೆಂದು ವಿಪ್ರಂ ಕೇಳೆ ಮನೋವೇಗಂ ಪೇಳ್ಗುಂ

ಕಂದ

ಪಿರಿದೆಸೆವ ಮಳಯದೇಶಾಂ
ತರದೊಳ್ ಶೃಂಗಾಳಮೆಂಬ ಪುರದೊಳ್ ಭ್ರಮರಂ
ಪರದನವನಾತ್ಮಜಂ ಮಧು
ಕರಗತಿಯೆಂಬಂ ಪಿತಂಗೆ ಕಲುಷಿತನಾದಂ ೩೮

ವಚನ

ಅಂತು ಕಲುಷಿತನಾಗಿ ಮನೆಯಿಂ ಪೊಱಮಟ್ಟು ದೇಶಭ್ರಮಣೆಯಿಂ ಬರುತ್ತಾಭೀರ ವಿಷಯಮಂ ಪೊಕ್ಕು

ಉತ್ಸಾಹ

ಕರಿಯ ಚಣಕರಾಸಿಯೊಂದ ನೋಡಿ ನಮ್ಮ ನಾಡೊಳೀ
ಪರಿಯ ಮೆಣಸನಂತರಾಸಿಯಿರ್ಪುವೆಂದೊಡೀತನೀ
ಧರೆಯನಿಳಿಕೆಗೆಯ್ದನೆಂದು ಕೋಪಿಸುತ್ತುಮೆಯ್ದೆಬಂ
ದರೆ ಬರವನನೋವದೆಂಟು ಗುದ್ದನಿಕ್ಕಿ ನೂಂಕಿದರ್ ೩೯

ಕಂದ

ಅಲ್ಲಿ ತಡೆವಡೆದು ತಾಂ ತಳು
ವಿಲ್ಲದೆ ನಿಜದೇಶಕೆಯ್ದೆ ಬಂದು ಬಳಿಕ್ಕಂ
ತಲ್ಲಿಯ ಮೆಣಸಿನ ರಾಶಿಯ
ನೆಲ್ಲವನೊಲಿದೀಕ್ಷಿಸುತ್ತೆ ಮತ್ತಿಂತೆಂದಂ ೪೦

ಕರಿಯಕಡಲೆಗಳ ಪುಂಜಂ
ಪಿರಿದಾಭಿರದೇಶದಲ್ಲಿಯಾ ಪುಂಜಕ್ಕೀ
ಧರೆಯೊಳ್ ಮೆಣಸಿನ ಪುಂಜಂ
ಸರಿಯೆಂದೆನಲಲ್ಲಿ ಗುರ್ದನಿಕ್ಕಿದರೆಂಟಂ ೪೧

ವಚನ

ಅಂತುಳ್ಳುದನುಳ್ಳಂತಾಡಿ ಹದಿನಾಱುಗುದ್ದಂ ಪಡೆದನೆಂಬ ಕಥೆಯನ್ನವರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಲಮ್ಮೆವೆನೆ ಇಂತಪ್ಪವರೆಮ್ಮ ಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಮತ್ತಮಿಂತೆಂದಂ

ಕಂದ

ಸತ್ಯವಸತ್ಯವಿದೆನಗಿವ
ನತ್ಯಂತ ಪ್ರೀತಿನೆಂದು ಪರಿಕಿಸಿದವನಿಂ
ದತ್ಯಾಸಕ್ತನ ಕಥೆಯಂ
ಸತ್ಯಂ ಮಾಳ್ಪಾತನಾತನಿರ್ದೊಡೆ ಪೇಳೆಂ ೪೨

ಎನಲಾ ದ್ವಿಜರತ್ಯಾಸ
ಕ್ತನ ಕಥೆಯಂ ಪೇಳೆ ಕೇಳ್ವೆವೆಂತುಟು ತಾನೆಂ
ದೆನೆಯೊಲ್ದು ಮನೋವೇಗಂ
ಘನತೇಜಂ ಪೇಳಲಾಗಲುದ್ಯುತನಾದಂ ೪೩

ಭೂವನಿತೆಯುಟ್ಟ ವರಚಿ
ತ್ರಾವಳಿಯೆನಿಸಿರ್ಪ ಶರನಿಧಿಯ ಸೆಱಗಿದೆನಿಸಿ
ರ್ಪೀ ವಿಭವಮನಾಂತಿರ್ಪುದು
ರೇವಾನದಿಯದಱ ಚಾರು ದಕ್ಷಿಣತಟದೊಳ್ ೪೪

ಸ್ರಗ್ಧರೆ

ಸಾಮಂತಗ್ರಾಮ ನಾಮಂ ಬಹುಧನಿಯೆನಿಪಂ ತತ್ಪುರಗ್ರಾಮಕೂಟೋ
ದ್ಧಾಮಂಗಿರ್ವರ್ ಕಳತ್ರಂ ಪಿರಿಯವಳ ಪೆಸರ್ ಸುಂದರಾಖ್ಯ ಕುರಂಗೀ
ನಾಮಂ ಚಿಕ್ಕಾಕೆ ಮಕ್ಕಳ್ ಪಿರಿಯವಳ್ಗೊಳವಾ ಚಿಕ್ಕವಳ್ ಬಂಜೆಯಾತಂ
ಪ್ರೇಮಂ ಮುಳ್ಪಂ ಕುರುಂಗೀವಧುಗೆ ಪಿರಿಯಳಾವಾಸಮಂ ಪೊರ್ದನೆಂದುಂ ೪೫

ವಚನ

ಅಂತು ಕೆಲವಾನುಂದಿವಸಂ ಚಿಕ್ಕವಲ್ಲಭೆ ಕುರಂಗಿಯೊಳಿಷ್ಟಭೋಗಕಾಮಸುಖ ಮನನುಭವಿಸುತ್ತಮಿರೆಯೊಂದು ದಿವಸಂ

ಕಂದ

ಆತನನವನೀಪಾಳನ
ದೂತರ್ ಕೊಂಡೊಯ್ಯೆ ಮಾನ್ಯಖೇಟಕ್ಕಿತ್ತಲ್
ಪ್ರೀತಿಯ ವಲ್ಲಭೆ ಪಾಣ್ಬಂ
ಗೋತುಂ ಧನಧಾನ್ಯವೆಲ್ಲಮಂ ತವೆ ತಿಂದಳ್ ೪೬

ಎನಿತು ಧನಧಾನ್ಯಚಯವು
ಳ್ಳನಿತಂ ಜಾರಂಗಮಿಕ್ಕಿ ಕಾಮಾತುರದಿಂ
ನೆನೆಯದೆ ನಿಜಪತಿಯಂ ಪಾ
ಳ್ಮನೆಯಂ ನೆಱೆ ಮಾಡಿಕೊಂಡಿರುತ್ತಿರಲಿತ್ತಲ್ ೪೭

ಚಂಪಕಮಾಲೆ

ಮಹಿಪತಿ ಬೇಡಿತಂ ಪಡೆದುಕೊಟ್ಟು ಮನೋತ್ಸವದಿಂದೆ ಬೀಳ್ಕೊಡಲ್
ಬಹುಧನಿ ಮಾನ್ಯಖೇಟಪುರದಿಂ ಸ್ವಪುರಕ್ಕೆ ಬರುತ್ತೆ ಭೃತ್ಯನಂ
ಬಹುಗತಿಯೆಂಬನಂ ಕರೆದು ಮತ್ ಪ್ರಿಯೆಯಪ್ಪ ಕುರಂಗಿಗೀಗಳಾ
ಗೃಹದೊಳೆ ಮಾಡಲೆಂದಱಪು ಮಜ್ಜನಭೋಜನಕಾರ್ಯಯತ್ನಮಂ ೪೮

ವಚನ

ಎಂದು ಪೇಳೆಯಾ ಭೃತ್ಯಂ ಮನೋವೇಗದಿಂದಾ ಕುರಂಗಿಯ ಗೃಹಕ್ಕೆ ಬಂದು ಎಲೆಯಕ್ಕಾ ನಿನ್ನ ವಲ್ಲಭಂ ರಾಜಪ್ರಸಾದಂಬಡೆದು ಬರುತ್ತುಮಿರ್ದಪನ್ ಮಜ್ಜನ ಭೋಜನಯತ್ನಮಂ ಮಾಡಿಮೆನೆಯಾಕೆ ಕೇಳ್ದು ಮಾಳ್ಪುದರ್ಕು – ಪಾಯಮನೊಂದುಮಂ ಕಾಣದೆ ಚಿಂತಾಕ್ರಾಂತೆಯಾಗಿ ಇದಕ್ಕೆ ತಕ್ಕಬುದ್ಧಿಯಂ ಕಾಣ್ಬೆನೆಂದು ಪಿರಿಯವಲ್ಲಭೆ ಸುಂದರಿಯ ಗೃಹಕ್ಕೆ ಬಂದು ಎಲೆ ಅಕ್ಕಾ ನಿನ್ನ ವಲ್ಲಭಂ ರಾಜ ಪ್ರಸಾದಂ ಪಡೆದು ಬರುತ್ತಯ್ದನೆ ಮಜ್ಜನಭೋಜನಕ್ಕೆ ಯತ್ನಂಮ ಮಾಡಿಮೆನೆ ಯಾತನೆನ್ನ ಮನೆಗೆಂದುಂ ಬಾರನಿಂದೇಕೆ ಬರ್ಪನೆನೆ ನಾಂ ಕಳಿಪುವೆಂ ನೀಂ ತೇಜದ ಪಿರಿಯ ವಲ್ಲಭೆಯಪ್ಪುದಱಂದೆಲ್ಲಮಂ ನೀನೆ ಮಾಡಲ್ವೇಳ್ಪುದೆನೆಯಂತೆಗೆಯ್ವೆನೆಂದು ಪಲವುಂ ತೆಱದ ಭಕ್ಷ್ಯಮಂ ಪಾಯಸಂಗಳುಮಂ ಓಗರಮಂ ಪರಿಪರಿಯ ಮೇಲೋ ಗರಮುಮಂ ಪಾನಪಳಿದ್ಯಮಂ ಮಾಡಿಯಿರುತ್ತಿರಲಿತ್ತಲ್

ಕಂದ

ಬಹುಧನಿ ಬಂದಂ ಪರಿಜನ
ಸಹಿತಂ ಭರವಸದೆ ಕಿಱಿಯ ವನಿತೆ ಕುರಂಗೀ
ಗೃಹಕಾಕೆ ಬಱಿಯ ಕಲಹವ
ನೆ ಹಣ್ಣಿ ಕಡುರೋಷದಿಂದೆ ಬಗ್ಗಿಸಿ ನುಡಿದಳ್ ೪೯

ಪಿರಿಯವಳ ಮನೆಯಲೆಲ್ಲಾ
ಪರಿಕರಮಂ ಮಾಡವೇಳ್ದು ಕಳುಪಿ ಬಳಿಕ್ಕಂ
ಬರವಿಲ್ಲಿಗೇಕೆ ಪೇಳೆಂ
ದುರುವಣೆಯಿಂ ನೂಂಕಿ ಕಳುಪಿದಳ್ ಮನೆಯಿಂದಂ ೫೦

ಅಂತು ಪೊಱಮಟ್ಟು ಮನೆಯಿಂ
ಚಿಂತಿಸುತಂ ಪೊಱಗೆ ನಿಂದು ನಾನಾ ಪರಿಯಿಂ
ದಂ ತಿಳಿಪಲಾಱದಲ್ಲಿಂ
ದಂ ತಿಳಿಪಿ ಸಮಸ್ತ ಪರಿಜನಂ ಬೆರಸಾಗಳ್ ೫೧

ಹಸಿವಿಂ ಬಳಲ್ಕೆಯಿಂ ಸೈ
ರಿಸಲಾಱದೆ ಪಿರಿಯ ವನಿತೆ ಸುಂದರಿಯ ಗೃಹ
ಕ್ಕಸವಸದಿಂ ಬಂದಂ ಚಿಂ
ತಿಸುತಂ ಬಹುಧನಿ ವಿವೇಕರಹಿತಂ ವಿಕಳಂ ೫೨

ವಚನ

ಅಂತು ಬರ್ಪುದುಂ ಕಮ್ಮೆಣ್ಣೆಯಿಂ ಮರ್ದನಂ ಮಾಡಿಸಿ ಪನ್ನೀರಿಂ ಮಜ್ಜನಂಬುಗಿಸಿ ದಿವ್ಯದೇವಾಂಗವಸ್ತ್ರಮನುಟ್ಟು ನವರತ್ನಖಚಿತ ಸರ್ವಾಭರಣಭೂಷಿತನಾಗಿ ಕಸ್ತೂರಿ ಕಾಶ್ಮೀರ ಬಾವನ್ನ ಘನಸಾರಮೇಳಾಪಿತ ಯಕ್ಷಕರ್ದಮಮನುದ್ವರ್ತನಂಗೆಯ್ದು ಸಮಸ್ತ ಪರಿವಾರಮುಂ ತಾನುಂ ಭೋಜನಶಾಲೆಯಂ ಪೊಕ್ಕು ನೋಳ್ಪಾಗಳ್

ಕಂದ

ಮರಕತದಡ್ಡಣಿಗೆಯ ಮೇ
ಲಿರಿಸಿದ ಪೊಂಬರಿಯಣಂಗಳೇಂ ಪೋಲ್ತುವೊ ನೋ
ಳ್ಪರ ಕಣ್ಗಂ ಮನಕಂ ಬಿ
ತ್ತರಿಸಲ್ಕತಿಶಯವಲರ್ದ ಪೊಂದಾವರೆಯಂ ೫೩

ವಚನ

ಅಂತೊಪ್ಪುವ ಪರಿಯಣದ ಪಂತಿಯೊಳ್ ಕ್ರಮವಱದು ಯಜಮಾನನುಂ ಶಿಷ್ಟರುಂ ಸೇನಬೋವರುಂ ಸಂಧಿವಿಗ್ರಹಿಗಳುಂ ಕವಿಗಮಕಿವಾದಿವಾಗ್ಮಿಗಳುಂ ಸವಿಯಱದು ಹೆಸರಿಡುವ ಭೋಜನಪ್ರವೀಣರುಂ ಸಮಸ್ತ ಸಾಮಂತರುಂ ನಾಯಕರುಂ ಬೆರಸುಕುಳ್ಳಿರ್ಪುದುಂ

ಕಂದ

ಎಸೆವಣ್ಣೆವಾಲೊಳಂ ರಂ
ಜಿಸಿ ಸೇವೆಗೆಯಿಕ್ಕಿ ಹದದೊಳಟ್ಟಿರ್ದಾ ಪಾ
ಯಸಮಂ ಬಡಿಸಿದರೊಲವಿಂ
ಸಸಿವದನೆಯರಖಿಳ ಪರಿಜನಂ ತಲೆದೂಗಲ್ ೫೪

ಪರಡಿಯ ಕುಳಿಗಳೊಳೆಲ್ಲಂ
ಭರದಿಂ ಪಾಲ್ತೀವಿ ಬಲಿದು ಬಣ್ಣಂ ಬಂದಂ
ಬೆರಸು ವಿರಾಜಿಸುತಿರಲದ
ನರವಿಂದಾನನೆಯರೊಲಿದು ಬಡಿಸಿದರಾಗಳ್ ೫೫

ಕಡುಗಾಯ್ದ ಬಟ್ಟವಾಲೊಳ್
ತಡೆಯದೆ ಬಲ್ಲಕ್ಕಿಯಿಕ್ಕಿ ತರುಣಿಯರು ಹದಂ
ಬಡೆದಟ್ಟ ಪಾಯಸಮುಮಂ
ಮಡದಿಯರಾನಂದದಿಂದೆ ಬಡಿಸಿದರಾಗಳ್ ೫೬

ಮತ್ತೇಭವಿಕ್ರೀಡಿತ

ಮಿಗೆ ಪಾಲೋಗರ ಬೋನವಿಡ್ಡಲಿಗೆಗಳ್ ಜೂಗಾಯಿ ಹಾಲುಂಡೆ ಮಂ
ಡಗೆಯೆಣ್ಣೂರಿಗೆ ಬೀಸುಹೂರಿಗೆ ತಱಂಗೆಳ್ಳುಂಡೆ ಕರ್ಪೂರ ನಾ
ಳಿಗೆ ಸಂಜೂರಿಗೆ ಲಡ್ಡು ಗೆಳ್ಳುದಱಗೀಯಂಗಾರಕಂ ಕ್ಷೀರಪೂ
ರಿಗೆಯಂ ಪೂಸಣವಾದಿ ಭಕ್ಷ್ಯಚಯಮಂ ತಂದಿಕ್ಕಿದರ್ ಕಾಂತೆಯರ್ ೫೭

ಕಂದ

ಹಾಗಲ ಹಡಲಂ ಗುಳ್ಳಂ
ಕೂಗುರಿ ಕೂಷ್ಮಾಂಡವವರೆ ಬದಣೆಗಳಿಂ ಲೇ
ಸಾಗಿರೆ ಮಾಡಿದ ಸಲೆಮೇ
ಲೋಗರಮಂ ತಂದು ಬಡಿಸಿದರ್ ಮಾನಿನಿಯರ್ ೫೮

ಸುರುಚಿರ ಚಿಕ್ಕವತಂ ಚಿರಿ
ಕೆ ರಾಜಗಿರಿ ಕೆಸವು ಕೀರೆದೊಗ್ಗಳೆಯೆಲೆ ವಾ
ದುರವಂ ಬಡಿಸಿದರಂತತಿ
ಭರದಿಂದುಣ್ಬವರ ಮನದ ಹವಣಱಿದಾಗಳ್ ೫೯

ವಚನ

ಅಂತನೇಕ ತೆಱದ ಪಾಯಸಮುಂ ಪರಿಪರಿಯ ಭಕ್ಷ್ಯಮಂ ತಾಳಿಲ ಪಳವಂ ಹಪ್ಪಳ ಪಲ್ಲೇಹ ಪಾಸವಿ ಸೀಕರಣೆ ಹೊದಕಪಾನ ಪಳಿದೆಯವೆಂಬ ನಾನಾ ಭಿನ್ನ ರುಚಿಯ ಶಾಕಂಗಳುಂ ಮಗಮಗಿಪ ಕಮ್ಮಗಳಮೆ ಮಧ್ಯ ರಾಜಾನ್ನಮಂ ಪ್ರತಿಸೂರ್ಯನೆಂಬ ಪೆಸರೆಸೆವ ಸಣ್ಣ ಭತ್ತದೋಗರಮಂ ಕಬ್ಬೆಸಱ ತೊವ್ವೆಯುಂ ದೆಸೆದೆಸೆಗೆ ಪಸರಿಸುವ ಪರಿಮಳದಿಂ ಮಗಮಗಿಸುವ ಸದ್ಯೋಘೃತಮುಂ ಘಟ್ಟಿ ಮೊಸರಂ ಹುಳಿಯಲೊತ್ತಿದಲ್ಲಮುಂ ಮೊದಲಾಗಿ ಹದನಱದು ಬಡಿಸೆ ಸುಭೋಜನಮಂ ಪರಿವಾರಂಬೆರಸುಣುತ ಬಹುಧನಿಯಿಂತೆಂದಂ

ಕಂದ

ಹಿತಮಂ ಸಾತ್ವಿಕ ಪರನ
ನ್ವಿತನಾಗಮಯುಕ್ತನಪ್ಪ ಬಹುಬುದ್ಧಿಯೆನಿ
ಪ್ಪತುಳಂ ಕುರಂಗಿ ಮಾಡಿದ
ಕೃತ್ಯಮನುಳ್ಳಂತಿರುಸಿರೆ ಕೇಳ್ದಿಂತೆಂದಂ ೬೦

ನುಡಿಯದಿರೆನ್ನ ಕುರಂಗೀ
ಮಡದಿಗೆ ಸರಿಯುಂಟೆ ಹಾರೆನುತ್ತಂ ಹಿತಮಂ
ನುಡಿದವನಂ ಭಂಗಿಸಿ ಕಿಡೆ
ನುಡಿವವನೆ ಪರೀಕ್ಷೆವಂತನತ್ಯಾಸಕ್ತಂ ೬೧

ವಚನ

ಇಂತಪ್ಪ ವಿಕಳರುಂ ಪರೀಕ್ಷಾಹೀನರುಂ ನಿಮ್ಮ ಸಭೆಯೊಳುಳ್ಳೊಡೆ ನಾಂ ಪೇಳಲಮ್ಮೆವೆನೆ ಇಂತಪ್ಪರೆಮ್ಮ ಸಭೆಯೊಳಿಲ್ಲ ನೀವಂಜದೆ ಪೇಳಿಮೆಂದು ವಿಪ್ರಪ್ರಕರಂ ಬೆಸಗೊಳೆ ಮನೋವೇಗಂ ಪೇಳಲ್ ತಗುಳ್ದಂ

ಚಂಪಕಮಾಲೆ

ಸಿರಿಯ ಮನಃಪ್ರಿಯಂ ಭುವನ ಪಾಲಕನುನ್ನತಮೂರ್ತಿ ಕೌಸ್ತುಭಾ
ಭರಣನೆನಿಪ್ಪ ವಿಷ್ಣು ದನಗಾಯನೆ ನಂದನ ಕಂದನಾಗಿ ಕಿಂ
ಕರವೆಸಗೆಯ್ಯನೇ ನರನ ಸಾರಥಿಯಾಗಿ ಪೃಥಾತನೂಭವರ್
ನಿರವಿಸೆ ಕೌರವೇಂದ್ರನ ಸಮೀಪಕ್ಕೆ ದೋರಿಗನಾಗಿ ಪೋಗನ್ ೬೨

ಕಂದ

ಸಿರಿ ತನಗೆ ಕಾಂತೆ ಗಡ ಲೋ
ಗರ ದನಮಂ ಕಾಯಲೇಕೆ ಸಕಲ ಜಗತ್ತಂ
ಪರಿಪಾಲಿಸುವಾತಂ ಗಡ
ನರನಾಳಾಗಿರ್ಪುದೇಕೆ ಚೋದ್ಯಮಿದೆಲ್ಲಂ ೬೩

ವಚನ

ಮತ್ತಮದಲ್ಲದೆಯುಂ ನಿತ್ಯಂ ದೇವಂ ಜನನಮರಣವರ್ಜಿತಂ ಚಿನ್ಮಯನೆಂಬಡೆಯದು ಘಟಿಯಿಸದದೆಂತೆನೆ

ಶ್ಲೋಕ

ಮತ್ಸ್ಯಃ ಕೂರ್ಮೋವರಾಹಶ್ಚ ನಾರಸಿಂಹೋಥ ವಾಮನಃ
ರಾಮೋರಾಮಶ್ಚಕೃಷ್ಣಶ್ಚ ಬುದ್ಧಃ ಕಲ್ಕೀ ಚ ತೇ ದಶ ೬೪

ವಚನ

ಎಂದಿಂತು ಸಾವುಪುಟ್ಟುಗಳುಳ್ಳುದಱಂದನಿತ್ಯನುಂ ಜರಾಮರಣಾನ್ವಿತನುಂ ತಿರ್ಯ ಗ್ಜಾತಿಯೊಳ್ ಪುಟ್ಟಿದುದಱಂದಜ್ಞಾನಿಯುಂ ಸಂದೆಯಮಿಲ್ಲಮತ್ತಮೀ ಜನನ ಮರಣಂಗಳ್ ಕ್ರೀಡಾವಿನೋದವೊ ನಿತ್ಯಕರ್ಮಾನುಷ್ಠಾನವೊ ಪೇಳಿಂ ಬಱದೆ ನಮ್ಮನೆ ನೀಚಾಚಾರದೊಳ್ ನಡೆದರೆಂಬಿರೆನೆ ವಿಪ್ರರೆಲ್ಲಂ ನಿರುತ್ತರರಾಗಿ ಜಯವಾದಿಗಳ್ ನೀವೆಂದು ಜಯಪತ್ರಮಂ ಕುಡೆ ಕೊಂಡು ವಿಮಾನಮಂ ನಿಕ್ಷೇಪೋದ್ಯಾನಕ್ಕೆ ಬಂದು ನವಬಲದೇವ ನವವಾಸುದೇವ – ನವಪ್ರತಿವಾಸುದೇವರುತ್ಪತ್ತಿಯಂ ಸ್ವಸಮಯಪುರಾಣಕ್ರಮದಿಂ ಸವಿಸ್ತರಂ ಪವನವೇಗಂಗೆ ತಿಳಿಯೆ ಪೇಳ್ದು

ಕಂದ

ಅಖಿಳ ಪರವಾದಿ ಸಂತತಿ
ಗೆ ಖೇದಮಂ ತನ್ನ ದರ್ಶನಕ್ಕತಿಶಯಮಂ
ಸಖನ ಮನಕ್ಕನುಪಮತರ
ಸುಖಮಂ ಪಡೆದಂ ಸಮಂತು ವೃತ್ತವಿಳಾಸಂ ೬೫

ವಚನ

ಅ ಸಮಯದೊಳ್

ಕಂದ

ಉಳಿವುದು ರಾಗದ್ವೇಷಂ
ಗಳನೆಂದೆಂಬರುಹಮತಮನೇಳಿಸಿ ನರಕ
ಕ್ಕಿಳಿವುದೆ ನಿಜವೆಂದಿಳೆಯಂ
ತಿಳಿಪುವವೋಲರ್ಕನಪರಜಳನಿಧಿಗಿಳಿದಂ ೬೬

ವಚನ

ಅಂತು ನೇಸರ್ಪಡುವುದುಂ ನಿದ್ರಾಮುದ್ರಿತರಾಗಿರುತ್ತಿರೆ

ಕಂದ

ಕಮಳಾನಂದತೆ ಸುಮನ
ರ್ಗೆ ಮನೋಹರ ವೃತ್ತಿ ಸುಕವಿತತಿಗುತ್ಸಾಹಂ
ಕುಮುದಕ್ಕಮುದಮುಮಾಯ್ತಾ
ದಮೆ ವೃತ್ತವಿಳಾಸನೆಂಬ ಮಿತ್ರೋದಯದೊಳ್ ೬೭

ವಚನ

ಅಂತು ನೇಸರ್ಮೂಡುವುದುಂ

ಉತ್ಪಲಮಾಲೆ

ಪಿಂಗೆ ಪೊದಳ್ದ ನಿದ್ರೆ ತನುವಂ ಮುರಿದೆರ್ದು ಜಳಪ್ರಸೇಚದಿಂ
ದಂಗಶುಚಿತ್ವಮಂ ಪಡೆದು ಚಿತ್ತಿವಿಶುದ್ಧದೊಳರ್ಹಪಾದಪ
ದ್ಮಂಗಳಿನಳ್ಕಱಿಂ ಬಿಡದೆ ಪೂಜಿಸಿ ವಂದಿಸಿ ನಿತ್ಯದಾನಧ –
ರ್ಮಂಗಳನೊಲ್ದುಮಾಡಿ ಜಸಮಂ ಪಡೆದಂ ಖಚರಾಧಿನಾಯಕಂ ೬೮

ಗದ್ಯ

ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ
ಪಾದಾರವಿಂದ ಭಗವದರ್ಹತ್ಪರಮೇಶ್ವರವದನವಿನಿರ್ಗತ ಶ್ರುತಾಂಬೋಧಿವರ್ಧನ
ಸುಧಾಕರ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಟದಂ
ವೃತ್ತ ವಿಲಾಸವಿರಚಿತಮಪ್ಪ ಧರ್ಮಪರೀಕ್ಷೆಯೊಳ್
ವಿಷ್ಣುದೇವತಾಪರೀಕ್ಷೆ
ದ್ವಿತೀಯಾಶ್ವಾಸಂ