ಈ ಕಾವ್ಯದಲ್ಲಿ ಪಂಚಮಿ, ಷಷ್ಠಿ ವಿಭಕ್ತಿ ಪ್ರತ್ಯಯಗಳು ಕೇಶಿರಾಜನ ನಿಯಮಕ್ಕನುಸಾರವಾಗಿಯೇ ಬಂದಿವೆ. ಎಲ್ಲೆಲ್ಲಿಯೂ ಹೆಚ್ಚು ವ್ಯತ್ಯಾಸವಾಗಿಲ್ಲ. ಸಪ್ತಮಿವಿಭಕ್ತಿಯಲ್ಲಿ ಒಳ್, ಅಲ್ಲಿ ಎರಡು ಪ್ರತ್ಯಯಗಳಿವೆಯಷ್ಟೆ! ಅವೆರಡೂ ಈ ಕಾವ್ಯದಲ್ಲಿ ಪ್ರಯೋಗವಾಗಿವೆ. ಕಾಲದೊಳ್ (೨ – ೩೩), ನಾಡೊಳ್ (೨ – ೩೮) ತಟದೊಳ್ (೩ – ೪೩), ಪಂಕ್ತಿಯೊಳ್ (೨ – ೫೩), ಇರುಳೋಳ್ (೩ – ೧೮), ಶಾಸ್ತದಲ್ಲಿ (೩ – ೩೫), ಕಂಬದಲ್ಲಿ (೩ – ೧೧), ಸಿಂಹಾಸನದಲ್ಲಿ (೬ – ೩)

ಅಂ, ಉಂ, ಇವುಗಳು ಸಮುಚ್ಚಯದಲ್ಲಿ ಬರುವುದೆಂದು ಕೇಶಿರಾಜ ಸೂ. ೧೩೩ರಲ್ಲಿ ಹೇಳಲಾಗಿದೆ. ಅವನು ತಿಳಿಸಿದಂತೆ ದ್ವಿತೀಯಾ ಮಧ್ಯದಲ್ಲಿ ಉಂ ಬರುತ್ತದೆ. ಮಿಕ್ಕ ಎಡೆಗಳಲ್ಲಿ ಉಂ, ಅಂ, ಎರಡೂ ಬರುವುದಾಗಿ ಹೇಳಿದ್ದಾನೆ. ದ್ವಿತೀಯಾದಲ್ಲಿ ಉಂ ಬರುವುದು ಯೌವನಮುಮಂ (೩ – ೧೪, ಮೇಲೋಗರಮುಮಂ (೨ – ೪೮) ಉಚಿತಮುಮಂ (೯ – ೧೫), ಉಳಿದೆಡೆಯಲ್ಲಿ ಉಂ ಪ್ರಯೋಗ ಆದುಂ (೩ – ೨೨ವ) ಕೋಪಿಸುತ್ತುಂ (೩ – ೨೩ವ), ದುರಾಚಾರರುಂ (೩ – ೫೦), ಪಿಶಾಚರುಂ (೩ – ೫೦), ಕೋಪಿಗಳುಂ (೩ – ೫೦), ಇರುಳುಂ ಪಗಲುಂ (೩ – ೬೪)

ಕರ್ನಾಟಕ ಶಬ್ದ ಪಕಾರಕ್ಕೆ ವಿಕಲ್ಪದಿಂದ ಹಕಾರವಾಗುವುದೆಂದೂ ದ್ವಿತ್ವದಲ್ಲಿ ವಿಶೇಷವಾಗಿ ಹಕಾರವಿಲ್ಲ. ಇದು ದೇಶೀಯ ಚೆಲ್ವೆಂದು ಕೇಶಿರಾಜನ ಸೂ.೧೭೦ರಲ್ಲಿ ಹೇಳಲಾಗಿದೆ. ಈ ಕಾವ್ಯವು ೧೪ನೆಯ ಶತಮಾನದಲ್ಲಿ ರಚಿತವಾದುದರಿಂದ ಪಕಾರಕ್ಕೆ ಹಕಾರವಾದ ಪದಗಳು ಹೇರಳವಾಗಿ ಸಿಕ್ಕುತ್ತವೆ. ದ್ವಿತ್ವದಲ್ಲಿ ಪಕಾರಕ್ಕೆ ಹಕಾರವಿಲ್ಲ. ಉದಾ ಅಂತಪ್ಪರ್ (೨ – ೬೬ವ, ೩ – ೫೧ವ) ಇಂತಪ್ಪರ್ (೪ – ೧೬), ಅಂತಪ್ಪ ಎಂಬ ಶಬ್ದಕ್ಕೆ ಆದೇಶವಾಗಿ ಅನ್ನಂ ಎಂದು ಬರುವುದಾಗಿ ಸೂ ೧೭೧ರಲ್ಲಿ ಹೇಳಲಾಗಿದೆ. ಉದಾ : ನಿಮ್ಮನ್ನರ್, ಮೂಢನನ್ನರ್ (೩ – ೨೩ವ), ಅರಸಿಯ ನನ್ನರ್, ಅನ್ನರ್ (೪ – ೧೧ವ)

‘ಅೞ್ತಿಯೆಂದು ಪ್ರೀತಿ, ಅದನರ್ತಿಯೆಂದು ಪೇೞಲಾಗದು’ ಎಂದು ಸೂತ್ರ ೩೩ದಲ್ಲಿ ಹೇಳಲಾಗಿದೆ. ಈ ಕಾವ್ಯದಲ್ಲಿ ಅರ್ತಿ, ಅರ್ತಿಯಿಂದ (೬ – ೫), ಅರ್ತಿಯಿಂದೆ (೬ – ೧೦), ಇಲ್ಲಿ ಕವಿ ಕೇಶಿರಾಜನ ನಿಯಮವನ್ನು ಉಲ್ಲಂಘಿಸಿದ್ದಾನೆ. ಅಲ್ಲಲ್ಲಿ ಕೆಲವು ಪದಗಳಲ್ಲಿಯ ವಿಭಕ್ತಿ ಪಲ್ಲಟವಾದುದನ್ನೂ ಕಾಣುತ್ತೇವೆ. ಉದಾ: ಪಣಿಯಂ ಪತ್ತಲಿ (೬ – ೮) ಇಲ್ಲಿ ಚತುರ್ಥಿಗೆ ದ್ವಿತೀಯಾ ಬಂದಿದೆ. ಎಮ್ಮ ತಾಯುಂ ತಂದೆಯುಂ ವಿವಾಹವಾಗುತ್ತಿರೆ (೭ – ೮ವ) ಇಲ್ಲಿಯೂ ಚತುರ್ಥಿಗೆ ದ್ವಿತೀಯಾ ಬಂದಿದೆ.

ಈ ಕಾವ್ಯವು ಹಳಗನ್ನಡದ್ದಾಗಿದ್ದರೂ ನಡುಗನ್ನಡದ ಪ್ರಯೋಗಗಳು ವಿಶೇಷವಾಗಿವೆ. ಮುಖ್ಯವಾಗಿ ಕೆಲವನ್ನು ಇಲ್ಲಿ ಉದಾಹರಿಸಬಹುದು. ಉದಾ: ಎಹಂಗೆ (ಹೇಗೆ, ಅಹಂಗೆ (ಹಾಗೆ, ಅದರಿ ತೆರಿನಂ ಹೇಳೆ, ಮತದೊಳುಳ್ಳಡೆ, ನಿಯಮಿಸಿದಡೆ (೩ – ೨೦ವ) ಕೊಟ್ಟಡೆ, ತನ್ನಾಲಯಕ್ಕೆ ಕಂಡಡೆ (೪ – ೧೧) ನಿಜಪುರಕ್ಕೆ (೨ – ೨)

‘ಕೇಶಾಕೇಶೀ’ ‘ನಖಾನಖಿ’ ‘ದಂತಾದಂತಿ’ (೬ – ೨೪ವ) ‘ಮುಷ್ಟಾಮುಷ್ಟಿ’ ಈ ಪದಗಳು ಕೇಶಿರಾಜನ ಸೂತ್ರ ೧೯೭ಕ್ಕೆ ಅನ್ವಯಿಸುತ್ತವೆ. ಅರಿಸಮಾಸದ ಪದಗಳೂ ಅಲ್ಲಲ್ಲಿ ಇವೆ. ಉದಾ: ತನ್ನಾಲಯಕ್ಕೆ ಪದೆಪಭಿಷಸನ್ (೧ – ೯೧) ಮೂಢನನ್ನರ್ (೩ – ೨೩ವ), ಪೊಱವನದ, ಪುಱ್ಪಕವೃಷ್ಟಿ (೧ – ೮೮)

ಪಕ್ಷಾಂತರವನ್ನು ಹೇಳುವ ಎಕಾರವು ಕಡೆಯಾಗಿಯುಳ್ಳ ‘ಒಡೆ’ ಶಬ್ದವು ಲಿಂಗತ್ರಯ ವಚನತ್ರಯ ಪುರುಷತ್ರಯಕ್ಕೆ ಅನುಗುಣವಾಗಿ ಧಾತುವಿನ ಕಡೆಯಲ್ಲಿ ಬರುವುದೆಂದು ಕೇಶಿರಾಜನ ಸೂ. ೨೬೧ರಲ್ಲಿ ತಿಳಿಸಲಾಗಿದೆ. ಈ ‘ಒಡೆ’ ಶಬ್ದ ಪ್ರತಿಯಾಗಿ ನಡುಗನ್ನಡದಲ್ಲಿ ‘ಅಡೆ’ ಶಬ್ದವು ಬರುವುದುಂಟು. ಈ ಎರಡೂ ಶಬ್ದಗಳು ಧಾತುವಿನ ಅಂತ್ಯದಲ್ಲಿ ಹತ್ತುವುದುಂಟು. ಇವುಗಳಿಂದ ಇಂಥ ಶಬ್ದಗಳೇ ಹಳಗನ್ನಡ, ಇಂಥವೇ ನಡುಗನ್ನಡವೆಂದು ಹೇಳಲು ಸಾಧ್ಯವಿದೆ. ಈ ಕಾವ್ಯದಲ್ಲಿ ‘ಒಡೆ’ ಯುಕ್ತವಾದ ಪದಗಳೇ ಹೇರಳವಾಗಿ ದೊರೆಯುತ್ತವೆ. ‘ಅಡೆ’ ಯುಕ್ತವಾದುವು ಬಹಳ ಕಡಿಮೆ. ಉದಾ: ಕೆಲವನ್ನು ಇಲ್ಲಿ ಕೊಡಲಾಗಿದೆ. ತುಡುಪಿರ್ದೊಡೆ (೩ – ೫) ಕುಳ್ಳಿರ್ದೊಡೆ (೩ – ೫) ನೋಳ್ಪೊಡೆ (೩ – ೬) ಪೇಳ್ದೊಡೆ (೩ – ೧೮ವ) ಎಂತೆಂದೊಡೆ (೩ – ೨೦ವ) ಅಡೆಗೆ – ಕಂಡಡೆ (೪ – ೧೧) ನಿಯಮಿಸಿದಡೆ (೩ – ೨೦ವ) ಮತದೊಳುಳ್ಳಡೆ ಕೊಟ್ಟಡೆ ಈ ಕಾವ್ಯದಲ್ಲಿ ಅಡೆಗಿಂತ ಒಡೆ ಪ್ರಯೋಗಗಳೇ ಹೆಚ್ಚಾಗಿರುವುದರಿಂದ ಹಳಗನ್ನಡ ಪ್ರಯೋಗಗಳೇ ಹೆಚ್ಚಾಗಿವೆ ಎಂದು ಹೇಳಲು ಸಾಧ್ಯವಿದೆ.

ಕೇಶಿರಾಜನ ಅಪಭ್ರಂಶ ಅವ್ಯಯ ಪ್ರಕರಣಗಳೆರಡೂ ಅವನ ಸ್ವಂತದ ಸ್ವತ್ತಾಗಿವೆಯಷ್ಟೆ. ಈ ಕಾವ್ಯದಲ್ಲಿ ಅಪಭ್ರಂಶ ಪದಗಳ ಸಂಖ್ಯೆ ಬಹಳ ಕಡಿಮೆ, ಸುಮಾರು ನೂರರಷ್ಟು ಪದಗಳಿವೆ. ಹಾಗೆಯೇ ಅವ್ಯಯ ಪದಗಳು ಈ ಕಾವ್ಯದಲ್ಲಿ ಸಾಕಷ್ಟು ಬಳಕೆಯಲ್ಲಿವೆ.

ಕೇಶಿರಾಜನ ಕಾಲಕ್ಕಿಂತ ನೂರು ವರ್ಷಗಳ ಈಚಿನ ಈ ಕಾವ್ಯದಲ್ಲಿ ವ್ಯಾಕರಣ ದೃಷ್ಟಿಯಿಂದ ಹೆಚ್ಚು ವ್ಯತ್ಯಾಸವೇನು ಕಾಣುವುದಿಲ್ಲ. ಇದರ ಕವಿ ಚಂಪೂಕಾರನಾದುದರಿಂದ ಶಬ್ದಮಣಿದರ್ಪಣದಲ್ಲಿಯ ಹೆಚ್ಚು ನಿಯಮಗಳನ್ನೇ ಅನುಸರಿಸಿಕೊಂಡು ಬಂದಿದ್ದಾನೆ. ಕೆಲವೆಡೆಗಳಲ್ಲಿ ಹಳಗನ್ನಡ ನಡುಗನ್ನಡ ಎರಡೂ ಪ್ರಯೋಗಗಳು ದೊರೆಯುತ್ತವೆ. ಆದರೂ ನಡುಗನ್ನಡಕ್ಕಿಂತ ಹಳಗನ್ನಡ ಪ್ರಯೋಗಗಳೇ ಹೆಚ್ಚು. ‘ಱೞ’ ಯುಕ್ತ ಶಬ್ದಗಳ ಪ್ರಯೋಗಗಳು ಈ ಕಾವ್ಯದಲ್ಲಿ ಇರದಿದ್ದರೂ ಶಕಟರೇಫ(ಱ)ದ ಪ್ರಯೋಗಗಳಂತೂ ನಿಯತವಾಗಿ ದೊರೆಯುತ್ತವೆ. ಪ್ರಾಸದಲ್ಲಿ ಅಲ್ಲಲ್ಲಿ ಶೈಥಿಲ್ಯವಿದ್ದರೂ ಉಳಿದೆಡೆಗಳಲ್ಲಿ ವ್ಯಾಕರಣಬದ್ಧವಾಗಿ ಈ ಕಾವ್ಯವನ್ನು ರಚಿಸಲಾಗಿದೆ. ಇದರಿಂದ ಈ ಕವಿಯ ಪಾಂಡಿತ್ಯವನ್ನೂ ಅವನ ವ್ಯಾಕರಣ ಪ್ರಜ್ಞೆಯನ್ನೂ ಅರಿಯುತ್ತೇವೆ.

. ವೃತ್ತವಿಲಾಸ ಧರ್ಮಪರೀಕ್ಷೆಯಲ್ಲಿಯ ಸ್ವಂತ ಕಥೆಗಳ ಉಪಕಥೆಗಳು ಪುರಾಣ ಕಥೆಗಳ ಆಕರಗಳು

ವೃತ್ತವಿಲಾಸನ ಧರ್ಮಪರೀಕ್ಷೆಯಲ್ಲಿ ಬರುವ ಒಟ್ಟು ಕಥೆಗಳನ್ನು ಸ್ವಂತದ ಕಥೆಗಳು ಉಪಕಥೆಗಳು ಪುರಾಣಕಥೆಗಳು ಎಂದು ಮೂರು ಭಾಗಗಳಲ್ಲಿ ವಿಂಗಡಿಸಬಹುದಾಗಿದೆ. ಈ ಕಥೆಗಳ ಮೂಲನೆಲೆ ಯಾವುದೆನ್ನುವುದನ್ನೂ ಇಲ್ಲಿ ಪರಿಶೀಲಿಸಿದೆ. ಮನೋವೇಗನು ಎಂಟು ದಿನಗಳಲ್ಲಿ ಎಂಟು ಸ್ವಂತದ ಕಥೆಗಳನ್ನು ಪಾಟಲೀಪುತ್ರದ ವಿದ್ವಾಂಸರಿಗೆ ತಿಳಿಸುತ್ತಾನೆ. ನಾಲ್ಕನೆಯ ದಿವಸ ಮನೋವೇಗನು ತಾಪಸವೇಷದಿಂದ ಬಂದು ಕಮಂಡಲು ಹಾಗೂ ಆನೆಯ ಕಥೆಯನ್ನು ಹೇಳುತ್ತಾನೆ. ಈ ಕಥೆಯು ಜಿನದಾಸಗಣಿ ಮಹತ್ತರನ (೬೭೭) ಶಿಷಿಧ ಚೂಣಿಯಲ್ಲಿಯ ಧೂರ್ತಾಖ್ಯಾನ ಹಾಗೂ ಹರಿಭದ್ರಸೂರಿಯ (೮೫೦) ಧೂರ್ತಾಖ್ಯಾನದಲ್ಲಿ ಕಾಣುತ್ತೇವೆ. ಹರಿಷೇಣ ಅಮಿತಗತಿಯರ ಧರ್ಮಪರೀಕ್ಷೆಯಲ್ಲಿಯೂ ಕಾಣುತ್ತೇವೆ. ಏಳನೆಯ ದಿವಸ ಮನೋವೇಗನು ಬೌದ್ಧಸನ್ಯಾಸಿಯ ವೇಷದಲ್ಲಿ ಬಂದು, ನರಿಗಳೆರಡು ಬೆಟ್ಟವನ್ನು ಹೊತ್ತುಕೊಂಡು ಹೋದವೆಂದು ಹೇಳುವ ಕಥೆಯೂ ಧೂರ್ತಾಖ್ಯಾನಗಳಲ್ಲಿ ಬರುವ ಶಶನು ಹೇಳುವ ತನ್ನ ಅನುಭವದ ಕಥೆಯನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ. ಎಂಟನೆಯ ದಿವಸದ ಕಥೆಯಲ್ಲಿ ಮನೋವೇಗನು ಶ್ವೇತಾಂಬರಧಾರಿಯಾಗಿ ಬಂದು ತನ್ನ ಕತ್ತನ್ನು ಕೊಯ್ದು ಬೆಳವಲದ ಮರದ ಮೇಲೆ ಎಸೆದು ಅಲ್ಲಿಯ ಹಣ್ಣನ್ನು ತಿಂದ ಕಥೆಯನ್ನು ಹೇಳುತ್ತಾನೆ. ಈ ಕಥೆಗೆ, ಹರಿಭದ್ರನ ಧೂರ್ತಾಖ್ಯಾನದಲ್ಲಿ ಏಲಾಷಾಢನು, ತನ್ನ ತಲೆಯ ಬೋಧವೃಕ್ಷದ ಹಣ್ಣನ್ನು ಸವಿಯುತ್ತಿತ್ತು ಎಂದು ಹೇಳಿದ ಕಥೆಯು ಮೂಲಾಧಾರವಾಗಿದೆ. ಹೀಗೆ ಮನೋವೇಗನು ಹೇಳಿದ ಮೂರು ಸ್ವಂತ ಕಥೆಗಳ ಆಕರವು ಧೂರ್ತಾಖ್ಯಾನವೇ ಆಗಿದೆ. ಉಳಿದ ಐದು ಸ್ವಂತದ ಕಥೆಗಳ ನಿರ್ಮಾಪಕ ಮೂಲ ಧರ್ಮಪರೀಕ್ಷೆಕಾರನೇ (ಈಗ ನಮಗೆ ತಿಳಿದ ಮಟ್ಟಿಗೆ ಜಯರಾಮನೆ) ಆಗಿರಬೇಕು.

ಈ ಕಾವ್ಯದಲ್ಲಿ ನಾಲ್ಕು ಜನ ಮೂಢರ ಕಥೆಗಳನ್ನೊಳಗೊಂಡ ಒಟ್ಟು ಇಪ್ಪತ್ತೊಂದು ಉಪಕಥೆಗಳಿವೆ. ಈ ಎಲ್ಲ ಕಥೆಗಳನ್ನು ಮನೋವೇಗನು ವಿಪ್ರರಿಗೆ ಹೇಳುತ್ತಾನೆ. ಈ ಕಥೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಕಥೆಗಳ ಮೂಲ ಉದ್ದೇಶ ಒಂದೇ ಆಗಿದೆ. ಈ ಉಪಕಥೆಗಳು ವಿವಿಧ ಕಾವ್ಯಗಳಲ್ಲಿ ದೊರೆಯುತ್ತವೆ. ಇದರಿಂದ ಇವುಗಳ ವೈವಿಧ್ಯ ಹಾಗೂ ಜನಪ್ರಿಯತೆಯನ್ನು ಅರಿಯಬಹುದಾಗಿದೆ. ಈ ಪುಟ್ಟಪುಟ್ಟ ಕಥೆಗಳಲ್ಲಿ ಹುದುಗಿದ ರೋಚಕತೆ, ಮಾರ್ಮಿಕತೆ ಹಾಗೂ ಮನೋಜ್ಞತೆಯನ್ನು ತಿಳಿಯಬಹುದಾಗಿದೆ.

೧೦. ಉಪಸಂಹಾರ

ವೃತ್ತವಿಲಾಸನ ಧರ್ಮಪರೀಕ್ಷೆಯು ಅಪ್ರಕಟಿತ ಗ್ರಂಥವಾದುದರಿಂದ ಇದನ್ನು ಎಂಟು ಹಸ್ತಪ್ರತಿಗಳ ಆಧಾರದಿಂದ ಸಂಪಾದಿಸಲಾಗಿದೆ.

ಶಂಕರಾಚಾರ್ಯ, ರಾಮಾನುಜಾಚಾರ್ಯರಂಥ ವೈದಿಕ ಸಂಸ್ಥಾಪಕರಿಂದ ಜೈನಧರ್ಮಕ್ಕೆ ವಜ್ರಾಘಾತವಾಯಿತು. ೧೨ನೆಯ ಶತಮಾನದ ಹೊತ್ತಿಗೆ ರಾಜಕೀಯ ಹಾಗೂ ಧಾರ್ಮಿಕ ಚಳವಳಿಯಲ್ಲಿ ವೀರಶೈವಧರ್ಮವು ಹಿರಿದಾದ ಪಾತ್ರವನ್ನು ವಹಿಸಿತ್ತು. ಈ ಧರ್ಮವೂ ಜೈನಧರ್ಮಕ್ಕೆ ಬಲವಾದ ಏಟು ಕೊಟ್ಟಿತು. ಹಲವಾರು ಬಸದಿಗಳು ಶಿವಾಲಯಗಳಾದುವು. ಜೈನರ ಮೇಲೆ ಅತ್ಯಾಚಾರ ನಡೆಯಿತು. ಹೀಗೆ ಕರ್ನಾಟಕದಲ್ಲಿ ಜೈನರಿಗೆ ವೈದಿಕರೂ ವೀರಶೈವರೂ ಪ್ರಚಂಡ ಶತ್ರುಗಳಾದರು. ಇಂಥ ಸಂದರ್ಭದಲ್ಲಿಯೂ ಕೆಲವು ಜೈನಕವಿಗಳು ದಿಟ್ಟತನದಿಂದ ಇವರನ್ನು ಎದುರಿಸಿ ಇವರ ಧರ್ಮದಲ್ಲಿರುವ ಲೋಕದೋಷಗಳನ್ನು ಎತ್ತಿತೋರಿಸಿ ತಮ್ಮ ಧರ್ಮದ ಪ್ರಚಾರವನ್ನು ಮಾಡುತ್ತ ಬಂದರು. ಇವರಲ್ಲಿ ಬ್ರಹ್ಮಶಿವ (೧೧೦೦) ನಯಸೇನ (೧೧೧೨) ವೃತ್ತವಿಲಾಸ (೧೩೬೦) ಈ ಮೂವರು ಮುಖ್ಯರಾಗಿದ್ದಾರೆ.

ಧರ್ಮಪರೀಕ್ಷೆಯನ್ನು ಸುಮಾರು ೧೮ – ೨೦ ಜನರು ವಿವಿಧ ಭಾಷೆಗಳಲ್ಲಿ ಬರೆದಿದ್ದಾರೆ. ಪ್ರಾಕೃತ – ಅಪಭ್ರಂಶ, ಸಂಸ್ಕೃತ, ಕನ್ನಡ, ಮರಾಠಿ, ಹಿಂದಿ, ಗುಜರಾತಿ ಮೊದಲಾದ ಭಾಷೆಗಳಲ್ಲಿ ಇದರ ಅನುವಾದವಾಗಿದೆ. ಜರ್ಮನಿ ಭಾಷೆಯಲ್ಲಿಯೂ ಇದರ ಅಧ್ಯಯನವಾಗಿದೆ. ಇದರಿಂದ ಈ ಕೃತಿಯ ಹಿರಿಮೆ ಗರಿಮೆಗಳನ್ನು ಅರಿಯಬಹದುದು.

ದೇಶೀಭಾಷೆಯಲ್ಲಿ ಮೊತ್ತ ಮೊದಲು ಧರ್ಮಪರೀಕ್ಷೆ ಕೃತಿಯು ಅನುವಾದವಾದುದು ವೃತ್ತವಿಲಾಸನಿಂದ.

ಈ ಕಾವ್ಯದಲ್ಲಿ ಪುರಾಣ ಭಾರತ ರಾಮಾಯಣ ಭಾಗವತಗಳ ಸಂದರ್ಭಗಳು ಬರುತ್ತವೆಯಷ್ಟೆ! ಇವುಗಳಿಗೆ ಧೂರ್ತಾಖ್ಯಾನವು ಪ್ರಚೋದನೆಯನ್ನಿತ್ತಿದೆ. ಅಲ್ಲಿಯ ಹಲವಾರು ಸಂದರ್ಭಗಳನ್ನು ಈ ಕಾವ್ಯದಲ್ಲಿ ಬಳಸಲಾಗಿದೆ. ಈ ಕವಿಯ ಕಾವ್ಯದಲ್ಲಿ ಹಿಂದಿನ ಧರ್ಮಪರೀಕ್ಷೆಕಾರರಿಗಿಂತ ಭಾರತ ಭಾಗವತ ರಾಮಾಯಣ ಪುರಾಣಗಳ ಸಂದರ್ಭಗಳು ಹೆಚ್ಚಾಗಿ ಕಾಣಬರುತ್ತವೆ. ಇದು ಕವಿಯ ವೈದಿಕ ಧರ್ಮದ ಆಳವಾದ ಅಭ್ಯಾಸದ ಕುರುಹಾಗಿದೆ.

ಹೋಸವ್ರತದ ಒಂದು ಪುಟ್ಟ ಸನ್ನಿವೇಶವು ವೃತ್ತವಿಲಾಸದಲ್ಲಿ ಅಲ್ಲದೆ ಉಳಿದ ಯಾವ ಧರ್ಮಪರೀಕ್ಷೆಕಾರರಲ್ಲಿಯೂ ಕಾಣುವುದಿಲ್ಲ. ವೃತ್ತವಿಲಾಸನಲ್ಲಿರುವ ಮನೋವೇಗವನ್ನು ತನ್ನ ಸ್ನೇಹಿತನಾದ ಪವನವೇಗನನ್ನಲ್ಲದೆ ಪಾಟಲೀಪುತ್ರದ ಪದಾರ್ಥಿಗಳೆಲ್ಲರನ್ನೂ ಶ್ರಾವಕವ್ರತವನ್ನು ಸ್ವೀಕರಿಸಲು ಉತ್ತೇಜಿಸುತ್ತಾನೆ. ಉಳಿದ ಧರ್ಮಪರೀಕ್ಷೆಕಾರರಲ್ಲಿ ಪವನವೇಗನೊಬ್ಬ ಮಾತ್ರ ಈ ವ್ರತವನ್ನು ಸ್ವೀಕರಿಸಿಸುತ್ತಾನೆ.

ಕಥೆಯೇ ಮಾಧ್ಯಮವಾಗಿ ಬಳಸಿಕೊಂಡು ಧರ್ಮದ ಪರೀಕ್ಷೆಯನ್ನು ನಡೆಸಿದುದು ಈ ಕೃತಿಯ ವೈಶಿಷ್ಟ್ಯ ಅಸಂಬದ್ಧ ಕಥೆಗಳನ್ನು ಹೇಳಿ ಪುರಾಣ ಕಥೆಗಳನ್ನು ತಾರ್ಕಿಕವಾಗಿಯೂ ಜಾಣ್ಮೆಯಿಂದಲೂ ಖಂಡಿಸಿದ್ದಾನೆ ಈ ಕವಿ. ಎಲ್ಲ ಧರ್ಮಪರೀಕ್ಷೆಕಾರರು ಹೀಗೆ ವೈದಿಕಧರ್ಮವನ್ನು ವಿಡಂಬಿಸುವಲ್ಲಿ ಕಥನಮಾಧ್ಯಮವೇ ಸರ್ವಶ್ರೇಷ್ಠವೆಂದೂ ಮುಖ್ಯವಾಗಿ ಈ ವೃತ್ತವಿಲಾಸನು ಪರಿಗಣಿಸಿದ್ದಾನೆ.

ವೃತ್ತವಿಲಾಸನ ಕಾವ್ಯದ ಗುರಿ ಪುರಾಣಗಳಲ್ಲಿಯ ಅಸಂಬದ್ಧತೆಯನ್ನೂ ಅಸತ್ಯವನ್ನೂ ವಿಡಂಬಿಸುವುದಾಗಿದೆ. ಇವನ ವಿಡಂಬನೆಯಲ್ಲಿ ಮೊನಚು ಮಾತುಗಳಿವೆ, ತರ್ಕಬದ್ಧತೆಯಿದೆ ಚಿಕಿತ್ಸಾ ಮನೋಭಾವನೆಯಿದೆ. ವೈದಿಕ ಪುರಾಣಗಳನ್ನು ವಿಡಂಬಿಸುವುದಕ್ಕೆ ಬಳಸಿಕೊಂಡ ಅಸಮಂಜಸ ಕಥೆಗಳನ್ನು ನೋಡಿದಾಗ ಇವನೊಬ್ಬ ಕಥೆಗಳ ರಹಸ್ಯವನ್ನು ಬಲ್ಲ ಉತ್ತಮ ಕತೆಗಾರನಾಗಿರಬೇಕೆಂದು ಅನ್ನಿಸುತ್ತದೆ.

ಈ ಕಾವ್ಯದಲ್ಲಿ ಕಾಣಬರುವ ವ್ಯಾಕರಣವೈಶಿಷ್ಟ್ಯಗಳನ್ನು ತಿಳಿಸಲಾಗಿದೆ. ಕಾವ್ಯವು ೧೪ನೆಯ ಶತಮಾನದ್ದಾಗಿದ್ದರೂ ಚಂಪೂಶೈಲಿಯ ಬಿಗುವೂ ಪೂರ್ವದ ಹಳಗನ್ನಡ, ಹಳಗನ್ನಡ ಭಾಷೆಗಳ ಬಳಕೆಯನ್ನೂ ಕಾಣುತ್ತೇವೆ.

ವೃತ್ತವಿಲಾಸನ ಕಾವ್ಯವು ಧರ್ಮಪರೀಕ್ಷೆ ಒಂದೆ ಅಲ್ಲ. ಶಾಸ್ತ್ರಸಾರವೆಂಬ ಮತ್ತೊಂದು ಕೃತಿಯಿದೆಯೆಂಬುದು ಪ್ರಾಕ್ಕಾವ್ಯ ಮಾಲೆಯಲ್ಲಿ ಕಾಣಬರುವ ಶಾಸ್ತ್ರಸಾರ ಪದ್ಯಗಳಿಂದ ತಿಳಿದಬರುತ್ತದೆ (ಪುಟ ೨ ನೋಡಿ) ಅಂತ್ಯದಲ್ಲಿ ಧರ್ಮಪಾರಿಭಾಷಿಕ ಶಬ್ದಗಳ ಸೂಚಿಯನ್ನೂ ಕಠಿಣ ಪದಗಳ ಅರ್ಥವನ್ನೂ ಪದ್ಯಗಳ ಪರೀಕ್ಷೆಯಲ್ಲಿಯೆ ಆಕಾರಾದಿಯನ್ನೂ ಇಲ್ಲಿ ಸೂಚಿಸಲಾಗಿದೆ.

ಒಟ್ಟಿನಲ್ಲಿ ವೃತ್ತವಿಲಾಸನ ಧರ್ಮಪರೀಕ್ಷೆಯ ಪರಿಷ್ಕರಣವನ್ನು ಇದರ ಸಾಹಿತ್ಯ ಸ್ವರೂಪವನ್ನೂ ನೆಲೆಬೆಲೆಗಳನ್ನೂ ತೋರಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಕವಿಯು ಶ್ರೇಷ್ಠಮಟ್ಟದ ತಾರ್ಕಿಕನೂ ಚತುರ ಕತೆಗಾರನೂ ಮೇಲ್ಮಟ್ಟದ ವಿಡಂಬನಕಾರನೂ ಆಗಿದ್ದಾನೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇವನ ಕಾವ್ಯವು ಕನ್ನಡಸಾಹಿತ್ಯದ ವಿಡಂಬನಾ ಪ್ರಪಂಚದಲ್ಲಿ ಮೇಲ್ತರಗತಿಯ ಕಾವ್ಯವಾಗಿ ನಿಲ್ಲಬಲ್ಲದು.

೧೧. ಗ್ರಂಥ ಸಂಪಾದನೆ

ವೃತ್ತವಿಲಾಸನ ಧರ್ಮಪರೀಕ್ಷೆಯನ್ನು ಎಂಟು ಪ್ರತಿಗಳ ಆಧಾರದಿಂದ ಪರಿಷ್ಕರಿಸಲಾಗಿದೆ. ಅವುಗಳ ಸಂಕೇತಗಳೊಡನೆ ಅವುಗಳ ಸ್ವರೂಪವನ್ನು ಈ ಕೆಳಗೆ ಕಾಣಿಸಿದೆ.

ಅ) ಇದು ಬೆಂಗಳೂರು ವಿಶ್ವವಿದ್ಯಾನಿಲಯದ (ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು) ಓಲೆಪ್ರತಿ. ಇದಕ್ಕೆ ಅಲ್ಲಿ ಕೆ. ೨೯೩ ಎಂದು ಹೆಸರಿಸಲಾಗಿದೆ. ಇದರಲ್ಲಿ ೪ – ೧೦೭ ಓಲೆಗಳಿವೆ. ಮೊದಲನೆಯ ಮೂರು ಓಲೆಗಳು ಹೋಗಿವೆ. ಅಲ್ಲಲ್ಲಿ ಕೆಲವು ಓಲೆಗಳು ತ್ರುಟಿತವಾಗಿವೆ. ಪ್ರತಿಯ ಕೊನೆಯಲ್ಲಿ ‘ಸ್ವಸ್ತಿ ಶ್ರೀಮತ್ ಶಕವರ್ಷ ೧೩೨೪ನೆಯ ಚಿತ್ರಭಾನು ಸಂವತ್ಸರದ ಜೇಷ್ಠ ಬ. ೨. ಶುಕ್ರವಾರದಲು’ ಎಂದಿದೆ. ಇದರಿಂದ ಈ ಪ್ರತಿಯು ಸುಮಾರು ೧೪೦೨ರಲ್ಲಿ ಹುಟ್ಟಿತೆಂದು ತಿಳಿದು ಬರುತ್ತದೆ. ಇದು ಕವಿಯ ಕಾಲದ ಹತ್ತಿರಪ್ರತಿ.

ಪ್ರತಿಯ ಲಕ್ಷಣ ಇದರಲ್ಲಿ ಕೆಲವು ಓಲೆಗಳು ಹೋಗಿವೆ. ಪ್ರಾರಂಭವಾದುದು ನಾಲ್ಕನೆಯ ಓಲೆಯಿಂದ. ಶಕಟರೇಫವನ್ನು ಇದರಲ್ಲಿ ಬಳಸಲಾಗಿದೆ. ಪ್ರತಿಯೊಂದು ಓಲೆಯು ೧೫ ಇಂಚು ಉದ್ದ ಒಂದೂ ಕಾಲು ಇಂಚು ಅಗಲವಾಗದೆ. ಪ್ರತಿಯೊಂದು ಓಲೆಯಲ್ಲಿ ಐದೈದು ಪಂಕ್ತಿಗಳಿವೆ. ಓಲೆಗರಿಯ ಎರಡೂ ಭಾಗಗಳಲ್ಲಿ ಬರೆಯಲಾಗಿದೆ. ಅಕ್ಷರಗಳು ಸ್ಫುಟವಾಗಿವೆ. ಈ ಪ್ರತಿಯು ನನಗೆ ಕೊನೆಗೆ ಸಿಕ್ಕಿದುದರಿಂದ ಮೂಲವಾಗಿ ಇಟ್ಟುಕೊಳ್ಳಲಿಲ್ಲ. ಆದರೂ ಪಾಠಾಂತರಕ್ಕೆ ಪೂರ್ತಿಯಾಗಿ ಇದನ್ನು ಬಳಸಿಕೊಂಡಿದೆ. ‘ಹೆಚ್ಚಾಗಿ ಇದರಲ್ಲಿಯ ಪಾಠಗಳೇ ಶುದ್ಧಪಾಠಗಳೆಂದು ಪರಿಗಣಿಸಲಾಗಿದೆ. ಇದಕ್ಕೆ ‘ಅ’ ಪ್ರತಿಯೊಂದು ಸಂಕೇತಿಸಲಾಗಿದೆ.

ಕ) ಇದು ದಿ. ಪೂಜ್ಯ ಡಾ. ಎ.ಎನ್. ಉಪಾಧ್ಯೆ ಅವರು ಕೊಟ್ಟ ಓಲೆಪ್ರತಿ. ಮೊದಲು ನಾನು ಗ ಪ್ರತಿಯನ್ನು ಪ್ರತಿಮಾಡಿಕೊಂಡು ಬೇರೆ ಪ್ರತಿಗಳ ಅನ್ವೇಷಣೆಯಲ್ಲಿ ಇದ್ದೆನು. ಆಗ ಡಾ. ಉಪಾಧ್ಯೆ ಅವರ ಪರಿಚಯವಾಗಿ ಅವರು ಸಂತೋಷದಿಂದ ಹರಸಿ ಈ ಪ್ರತಿಯನ್ನು ಕಳುಹಿಸಿಕೊಟ್ಟರು. ಗ ಪ್ರತಿಯನ್ನು ಮೊದಲು ಪ್ರತಿಮಾಡಿಕೊಂಡಿದೆಯಾದರೂ ಇದೇ ಮೂಲ ಪ್ರತಿಯೆಂದು ಪರಿಗಣಿಸಲಾಗಿದೆ. ಈ ಪ್ರತಿಯ ಕೊನೆಯಲ್ಲಿ ‘ಸ್ವಸ್ತಿ ಶ್ರೀ ಶಕವರ್ಷ ೧೩೪೨ನೆಯ ಯಿಳಂಬಿ ಸಂವತ್ಸರ ಪುಷ್ಯಮಾಸದ ಶುಕ್ಲಪಕ್ಷದ ದ್ವಾದಶಿಯ ಶುಕ್ರವಾರದಲು ಮಜ್ಜಿಗಾಮಿಯ ಶ್ರೀ ಆದಿಪರಮೇಶ್ವರ ಪಾದಾರವಿಂದದಲ್ಲಿ ಚಿಕ್ಕರಾಮಸೇನ ದೇವರುಗಳು ಯೀ ಧರ್ಮಪರೀಕ್ಷೆಯ ಪ್ರತಿಯಿದ್ದದಂತೆ ಬರೆದುದು ಸಮಾಪ್ತ ಶುಭಂ’ ಎಂದಿದೆ. ಈ ಓಲೆಯನ್ನು ಸುಮಾರು ೧೪೨೦ರಲ್ಲಿ ಬರೆಯಲಾಗಿದೆಯೆಂದು ತಿಳಿದು ಬರುತ್ತದೆ. ಆ ಪ್ರತಿಯನ್ನು ಬರೆದ ಮೇಲೆ ಈ ಪ್ರತಿಯನ್ನು ಬರೆಯಲಾಗಿದೆ.

ಇದರ ಲಕ್ಷಣ ಇದರಲ್ಲಿ ೩೪ ಓಲೆಗಳಿವೆ. ಇದು ೧೮ ಇಂಚು ಉದ್ದ ೨ ಇಂಚು ಅಗಲವಾಗಿದೆ. ಪ್ರತಿಯೋಲೆಯಲ್ಲಿ ಹತ್ತು ಸಾಲುಗಳಿವೆ. ಶಕಟರೇಫದ ಪ್ರಯೋಗವಿದೆ. ಅಲ್ಲಲ್ಲಿ ಚಿತ್ರಗಳನ್ನು ಬರೆಯಲಾಗಿದೆ. ೫, ೨೭, ೩೨ ಈ ಓಲೆಪ್ರತಿಗಳ ಮೂರನೆಯ ಒಂದು ಭಾಗವು ಮುರಿದು ಹೋಗಿದೆ ೨೦, ೨೧, ೩೩ ಈ ಓಲೆಗಳು ತ್ರುಟಿವಾಗಿವೆ. ಸ್ಫುಟವಾಗಿ ಬರೆಯಲಾಗಿದೆ. ಈ ಪ್ರತಿಗೆ ಖ ಪ್ರತಿಯೆಂದು ಹೆಸರಿಸಲಾಗಿದೆ. ಇದರಲ್ಲಿಯೂ ಶಕಟರೇಫದ ಬಳಕೆಯಿದೆ.

(ಗ) ಇದು ನನ್ನಲ್ಲಿರುವ ಓಲೆಗರಿಪ್ರತಿ. ಇದನ್ನು ದಿ. ಪೂಜ್ಯ ಪ್ರೊ. ಡಿ.ಕೆ. ಭೀಮಸೇನರಾಯರು ಸಂಪಾದಕನಾ ಕ್ರಮವನ್ನು ತೋರಿಸಿ, ಆಶೀರ್ವದಿಸಿಕೊಟ್ಟದ್ದು. ಇದರಲ್ಲಿ ಪ್ರತಿಮಾಡಿದ ಕಾಲವನ್ನು ಸೂಚಿಸಿಲ್ಲ. ಇದು ೧೪ ಇಂಚು ಉದ್ದ, ಒಂದೂ ಮುಕ್ಕಾಲು ಇಂಚು ಅಗಲವಿರುವ ಓಲೆಪ್ರತಿ. ಪ್ರತಿಯೋಲೆಯಲ್ಲಿ ಒಂಭತ್ತು ಸಾಲುಗಳನ್ನು ಬರೆದಿದೆ. ೬೫ ಓಲೆಗಳಿವೆ. ಮೂರು ನಾಲ್ಕು ಓಲೆಗಳು ತ್ರುಟಿತವಾಗಿವೆ. ಒಂದೆರಡು ಓಲೆಗಳು ಕಾಲುಭಾಗದಷ್ಟು ಮುರಿದಿವೆ. ಇದರಲ್ಲಿ ಶಕಟರೇಫದ ಬಳಕೆಯಿಲ್ಲ. ಇದನ್ನೇ ಮೊದಲು ಪ್ರತಿಮಾಡಿಕೊಂಡಿದ್ದರೂ ‘ಕ’ ಪ್ರತಿಯನ್ನೇ ಮೂಲವಾಗಿ ಇಟ್ಟುಕೊಂಡಿದೆ.

(ಚ) ಇದು ಕನ್ನಡ ಅಧ್ಯಯನ ಸಂಸ್ಥೆಯ ಕೆ.ಎ. ೪೭ನೆಯ ನಂಬರಿನ ಕಾಗದದ ಪ್ರತಿ. ಇದರಲ್ಲಿ ೧ – ೧೫೬ ಪತ್ರಗಳಿವೆ. ಪ್ರತಿ ಪತ್ರದಲ್ಲಿ ೨೨ ಪಂಕ್ತಿಗಳೂ ಪ್ರತಿ ಪಂಕ್ತಿಯಲ್ಲಿ ಸು. ೨೨ ಅಕ್ಷರಗಳೂ ಇವೆ. ಇದು ೧೨.೬ x ೭.೯ ಇಂಚು ಉದ್ದಗಲಗಳುಳ್ಳದಾಗಿದೆ. ಪತ್ರದ ಒಂದು ಕಡೆ ಮಾತ್ರ ಬರೆದಿದೆ. ಮಧ್ಯ ಮಧ್ಯ ಕೆಂಪು ಮಸಿಯಿಂದ ತಪ್ಪುಗಳನ್ನು ತಿದ್ದಿದೆ. ೧೪ – ೧೫ ಪತ್ರಗಳ ಮಧ್ಯದಲ್ಲಿ ಕ್ರಮಾಂಕವಿಲ್ಲದ ಪದ್ಯಕ್ರಮಗಳ ವ್ಯತ್ಯಾಸವನ್ನು ತಿಳಿಸುವ ಒಂದು ಪತ್ರವಿದೆ. ಈ ಪ್ರತಿಯ ಕೊನೆಯಲ್ಲಿ ‘ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾನಶಖವರ್ಷ ೧೬೭೬ನೆಯ ಭಾವನಾಮ ಸಂವತ್ಸರದ ವೈಶಾಖ ಶುದ್ಧ ೧೫ ಸೋಮವಾರದ್ದಿವ್ಸದಲ್ಲೂ ಮಹಿಶೂರ ನಗರದ ಅಠವಣಿ ಚಾವಡಿಯ ಕರಣೀಕ ದೇವರಸೈಯ್ಯನವರ ಮಗ ಮದುಮಂಣೈಯ್ಯನು ಧರ್ಮಪರೀಕ್ಷೆಯ ಬರದುಕೊಟ್ಟುಯಿರೂವಂತ್ಥಾ ಪುಸ್ತಕ ಮನೋದಿದವರ್ಗ್ಗೆ ಮನಮುಟ್ಟಿ ಕೇಳಿದವರ್ಗ್ಗೆ ವೋದಿಸಿ ಕೇಳಿದವರ್ಗ್ಗೆ ಸದ್ಧರ್ಮಾಭಿವೃದ್ಧಿರಸ್ತು ಶೋಭನಮಸ್ತು ಆಯುರಾರೋಗ್ಯ ಐಶ್ವರ್ಯಮಸ್ತು ಶ್ರೀ ಶ್ರೀ ಶ್ರೀ’ ಎಂದಿದೆ. ಇದರಿಂದ ಈ ಪ್ರತಿಯು ೧೭೫೪ರ ಸುಮಾರಿನಲ್ಲಿ ಹುಟ್ಟಿತೆಂದು ತಿಳಿದುಬರುತ್ತದೆ. ಆದರೆ ಕನ್ನಡ ಅಧ್ಯಯನ ಸಂಸ್ಥೆಯ ಕೆ ೧೩೩ ಓಲೆಪ್ರತಿ. ಕೆ.ಎ. ೨೧೭ ಕಾಗದ ಪ್ರತಿ, ಈ ಎರಡು ಪ್ರತಿಗಳಲ್ಲಿ ಮೇಲೆ ಸೂಚಿಸಿದ ಕಾಲವನ್ನೂ ಪ್ರತಿ ಮಾಡಿದವನ ಹೆಸರನ್ನೂ ಬರೆಯಲಾಗಿದೆ. ಬಹುಶಃ ಕೆ. ೧೩೩ ಓಲೆ ಪ್ರತಿಯ ಪ್ರತಿಗಳೇ ಕೆ.ಎ. ೪೭ ಹಾಗೂ ಕೆ.ಎ.೨೧೭ ಎಂದು ತೋರುತ್ತದೆ. ಮೂರು ಪ್ರತಿಗಳು ಏಕಕಾಲದಲ್ಲಿ ಒಬ್ಬನಿಂದ ಬರೆದಿರಲಾರವು ಆದ್ದರಿಂದ ಕೆ.ಎ. ೪೭ರ ಈ ಪ್ರತಿಯು ಕೆ. ೧೩೩ ಓಲೆಪ್ರತಿಯಿಂದ ಬರೆದಿರಬಹುದು. ಕೆ.ಎ. ೪೭ ಕಾಗದ ಪ್ರತಿಯು ಇತ್ತೀಚಿನದೆಂದು ತೋರುತ್ತದೆ. ಕ್ರಿ.ಶ. ೧೭೫೪ರ ಹಿಂದೆ ಬರೆದಿರಲಾರದು. ಕೆ. ೧೩೩ರ ಕಾಲವನ್ನೇ ಇದರಲ್ಲಿ (ಕೆ.ಎ.೪೭) ಬರೆದಿರಬಹುದು.

ಈ ಪ್ರತಿಯನ್ನು ಉದ್ದಕ್ಕೂ ಬಳಸಿಕೊಳ್ಳಲಾಗಿದೆ. ಇದರಲ್ಲಿ ಶುದ್ಧವಾದ ಪಾಠಗಳು ಬಹಳ ಕಡಿಮೆ. ಶಕಟರೇಫದ ಬಳಕೆಯಿದೆ. ಶುದ್ಧವಾದ ಬರವಣಿಗೆಯಿದೆ. ಇದಕ್ಕೆ ‘ಚ’ ಪ್ರತಿಯೆಂದು ಸಂಕೇತಿಸಲಾಗಿದೆ.

(ಜ) ‘ಚ’ ಪ್ರತಿಯಲ್ಲಿ ಮಧ್ಯೆ ಮಧ್ಯೆ ಕೆಂಪು ಮಸಿಯಿಂದ ತಪ್ಪುಗಳನ್ನು ತಿದ್ದಿದಿದನ್ನೇ ‘ಜ’ ಪ್ರತಿಯೆಂದು ಸೂಚಿಸಲಾಗಿದೆ. ಪಾಠಾಂತರ ಹಾಕುವಾಗ ‘ಜ’ ಪ್ರತಿಯೆಂದು ಸಂಕೇತಿಸಿದುದು ‘ಚ’ ಪ್ರತಿಯಲ್ಲಿಯ ಕೆಂಪು ಮಸಿಯಿಮದ ಬರೆದುದೆಂದು ಪರಿಗಣಿಸಬೇಕು.

(ಟ) ಇದೊಂದು ಓಲೆಗರಿ ಪ್ರತಿ. ಇದನ್ನು ಮಾನ್ಯ ಮಿತ್ರರಾದ ಶ್ರೀರಾಮ ಚಂದ್ರಗೌಡರು ಕೊಟ್ಟುದು. ಇದು ೧೪ x ೧ ಇಂಚು ಉದ್ದಗಲವಿದೆ. ಪ್ರತಿಯೋಲೆಯಲ್ಲಿ ೫ ಪಂಕ್ತಿಗಳಿವೆ ೯೮ ಓಲೆಗಳಿವೆ. ಸ್ಫುಟವಾಗಿ ಬರೆಯಲಾಗಿದೆ. ಬರೆದ ಕಾಲವನ್ನು ತಿಳಿಸಿಲ್ಲ. ಇದನ್ನು ಹೆಚ್ಚು ಬಳಸಿಕೊಂಡಿಲ್ಲ. ಕೆಲವೆಡೆಯ ಪಾಠಾಂತರಗಳ ಶುದ್ಧಿಗಾಗಿ ಬಳಸಲಾಗಿದೆ. ಇದಕ್ಕೆ ‘ಟ’ ಪ್ರತಿಯೆಂದು ಕರೆಯಲಾಗಿದೆ.

(ಡ) ಈ ಪ್ರತಿಯನ್ನು ಮಾನ್ಯಮಿತ್ರರಾದ ಎನ್. ಬಸವಾರಾಧ್ಯರು ಕೊಟ್ಟುದು. ಇದಕ್ಕೆ ‘ಡ’ ಪ್ರತಿಯೆಂದು ಸಂಕೇತಿಸಲಾಗಿದೆ. ಈ ಪ್ರತಿಯ ಕೊನೆಯಲ್ಲಿ ‘ಶಕವರ್ಷ ೧೭೨೨ನೆಯ ರೌದ್ರಿ ಸಂ. ಪುಷ್ಯ ಶುದ್ಧ ೩ ಭಾನುವಾರ ಧರ್ಮಪರೀಕ್ಷೆ ಬರೆಯುವುದಕ್ಕೆ ಶುಭಮಸ್ತು’ ಎಂದಿದೆ. ಇದರ ಕಾಲ ಸುಮಾರು ಕ್ರಿ.ಶ. ೧೮೦೦ ಆಗಬಹುದು. ಅಂತ್ಯದಲ್ಲಿ ಈ ಮಾತುಗಳಿವೆ –

ತಪ್ಪಂಬರೆದಾತಂ ಕಡು ಜಡ –
ನಪ್ಪ ತಪ್ಪಿದನೆಂದು ಬೈಯ್ಯಲ್ಬೇಡಂ
ತಪ್ಪಕ್ಕು ಶುದ್ಧವಕ್ಕುಂ
ತಪ್ಪುಳ್ಳೊಡೆ ತಿದ್ದಿ ಮೆರೆವುದು ಉತ್ತಮಪುರುಷರ್

ಎಂಬ ಒಂದು ಕಂದ ಪದ್ಯವಿದೆ. ಈ ಪದ್ಯದಿಂದ ಪ್ರತಿಕಾರನ ಸಾಮಾನ್ಯ ಮನೋಧರ್ಮವನ್ನು ತಿಳಿಯಬಹುದಾಗಿದೆ. ಪ್ರತಿಕಾರನು ತಪ್ಪುಮಾಡುವುದು ಸಹಜ. ಕೆಲವರು ಅರ್ಥವಾಗದ ಕಡೆ ಅರ್ಥವಾಗುವಂತೆ ತಿದ್ದುವುದೂ ಉಂಟು. ಕವಿಯ ಪಾಠವನ್ನು ಹಾಳುಮಾಡಬೇಕೆಂಬ ಉದ್ದೇಶವಿಲ್ಲ. ಓದುಗರಿಗೆ ಸುಲಭವಾಗಿ ಅರ್ಥವಾಗಲೆಂಬುದಾಗಿರುತ್ತದೆ. ಇಂಥದರಿಂದ ಮೂಲ ಪಾಠಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗುತ್ತದೆ.

ಇದು ೧೧ x ೧.೫ ಇಂಚು ಉದ್ದಗಲವುಳ್ಳುದು. ಇದರಲ್ಲಿ ೧೦೮ ಓಲೆಗಳಿವೆ. ಪ್ರತಿಯೋಲೆಯಲ್ಲಿ ಏಳು ಪಂಕ್ತಿಗಳಿವೆ. ಶಕಟರೇಫದ ಪ್ರಯೋಗವಿಲ್ಲ. ತುಂಬಾ ಓಲೆಗಳು ತ್ರುಟಿತವಾಗಿವೆ. ಇದನ್ನು ಹೆಚ್ಚು ಬಳಸಿಕೊಂಡಿಲ್ಲ. ಅಲ್ಲಲ್ಲಿ ಪಾಠಾಂತರಕ್ಕೆ ಕ್ಷಿಷ್ಟತೆ ಬಂದಾಗ ಇದನ್ನು ಬಳಸಿಕೊಂಡಿದೆ.

(ಪ್ರಾ) ವೃತ್ತವಿಲಾಸನ ಧರ್ಮಪರೀಕ್ಷೆಯು ಒಂದು ಸಲವೂ ಪ್ರಕಟವಾಗಿಲ್ಲ. ಆದರೆ ಈ ಕೃತಿಯ ಕೆಲವು ಭಾಗಗಳನ್ನು ಪ್ರಾಕ್ಕಾವ್ಯ ಮಾಲೆಯಲ್ಲಿ ಸುಮಾರು ೯೫ ವರ್ಷಗಳ ಹಿಂದೆ ಪ್ರಕಟಿಸಲಾಗಿದೆ. ಇದಕ್ಕೆ ‘ಪ್ರಾ’ ಎಂದು ಸಂಕೇತಿಸಲಾಗಿದೆ ಇಲ್ಲಿಯ ಶುದ್ಧವಾದ ಪಾಠಗಳನ್ನು ಅಲ್ಲಲ್ಲಿ ತೆಗೆದುಕೊಳ್ಳಲಾಗಿದೆ.

೧೯ನೆಯ ಶತಮಾನದಲ್ಲಿ ಚಂದ್ರಸಾಗರವರ್ಣಿ ಎಂಬ ಕವಿಯು ವೃತ್ತವಿಲಾಸನ ಧರ್ಮಪರೀಕ್ಷೆಯನ್ನು ಗದ್ಯಾನುವಾದ ಮಾಡಿದ್ದಾನೆ. ಇಲ್ಲಿಯ ಒಂದು ಪಾಠವನ್ನು ಪಾಠಾಂತರಕ್ಕಾಗಿ ಆರಿಸಿಕೊಳ್ಳಲಾಗಿದೆ.

ಈ ಮೇಲಿನ ಪ್ರತಿಗಳಲ್ಲಿ ‘ಅ’. ‘ಕ’. ಈ ಎರಡು ಪ್ರತಿಗಳು ಶುದ್ಧವಾದುವೆಂದು ಪರಿಗಣಿಸಲಾಗಿದೆ. ಈ ಎರಡು ಪ್ರತಿಗಳೂ ಕವಿಯ ಕಾಲದ ಹತ್ತಿರದ ಪ್ರತಿಗಳು. ‘ಕ’ ಪ್ರತಿಗಿಂತ ‘ಅ’ ಪ್ರತಿಯು ಇನ್ನೂ ಹತ್ತಿರವಾದುದು. ‘ಕ’ ಪ್ರತಿಯಲ್ಲಿಯೂ ಕೆಲವು ಅಶುದ್ಧಪಾಠಗಳಿವೆ. ಅಂಥವನ್ನು ಕೆಳಗೆ ಪಾಠಾಂತರಕ್ಕಾಗಿ ಕೊಡಲಾಗಿದೆ. ಈ ಎರಡೂ ಪ್ರತಿಗಳಲ್ಲಿ ‘ಪುಱ್ಪ’ ಎಂಬ ಶಬ್ದವು ಪುಷ್ಪ ಎಂಬುದಕ್ಕೆ ಅಲ್ಲಲ್ಲಿ ಪ್ರಯೋಗವಾಗಿದೆ. ಉಳಿದ ಯಾವ ಪ್ರತಿಯಲ್ಲಿಯೂ ಈ ಶಬ್ದವು ಸಿಕ್ಕುವುದಿಲ್ಲ. ಗ.ಚ.ಜ. ಪ್ರತಿಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದರೂ ಇವುಗಳ ಪಾಠಗಳು ಅಷ್ಟು ಸಾಧುವಾದುವಲ್ಲ. ಗ,ಚ, ಪ್ರತಿಗಳು ‘ಕ’ ಪ್ರತಿಯಿಂದ ಹುಟ್ಟಿರಬೇಕೆಂದು ತೋರುತ್ತದೆ. ಏಕೆಂದರೆ ಒಂದೊಂದು ಸಲ ಈ ಮೂರು ಪ್ರತಿಗಳ ಪಾಠಗಳು ಒಂದೇ ಆಗಿವೆ. ಕೆಲವೆಡೆಯಲ್ಲಿ ಭಿನ್ನವೂ ಆಗಿವೆ ಪ್ರತಿಕಾರರ ಕೈವಾಡದಿಂದ ಹೇಗೆ ಪಾಠಗಳಲ್ಲಿ ವ್ಯತ್ಯಾಸವಾಗುತ್ತದೆ ಎಂಬುದನ್ನು ಅರಿಯಬಹುದಾಗಿದೆ.

ಎಚ್ಚರಿಕೆಯಿಂದ ಈ ಪರಿಷ್ಕರಣವನ್ನು ನೇರವೇರಿಸಿದ್ದರೂ ಅಲ್ಲಿ ಇಲ್ಲಿ ಭಿನ್ನಾಭಿಪ್ರಾಯಕ್ಕೆ ಎಡೆಯುಂಟೆಂಬ ಅರಿವು ಈ ಸಂಪಾದಕನಿಗೆ ಇದೆ. ಈ ಪರಿಷ್ಕರಣದಿಂದ ಕವಿಯ ಪಾಠವನ್ನು ಕೊಂಚಮಟ್ಟಿಗಾದರೂ ಅರಿಯಬಹುದಾಗಿದೆ. ಉತ್ತಮ ಪಾಠಗಳ ಸೂಕ್ತ ಸಲಹೆಗಳಿಗೆ ಸ್ವಾಗತವುಂಟು.

ಈ ಕಾವ್ಯವನ್ನು ಸಂಪಾದಿಸುವಲ್ಲಿ ಹಸ್ತಪ್ರತಿಯ ನೆರವನ್ನು ನೀಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜಿ.ಎಸ್. ಶಿವರುದ್ರಪ್ಪನವರಿಗೂ ಎಸ್. ಶಿವಣ್ಣನವರಿಗೂ ನಾನು ಕೃತಜ್ಞನಾಗಿದ್ದೇನೆ. ಹಾಗೆಯೇ ಪ್ರಾಚ್ಯವಿದ್ಯಾ ಸಂಶೋಧನಾಲಯದ ಅಂದಿನ ನಿರ್ದೇಶಕರಾಗಿದ್ದ ಶ್ರೀ ಎಚ್. ದೇವೀರಪ್ಪ ಅವರಿಗೂ, ಕನ್ನಡ ಅಧ್ಯಯನ ಸಂಸ್ಥೆಯ ಅಂದಿನ ನಿರ್ದೇಶಕರಾಗಿದ್ದ ಪ್ರೊ. ದೇ. ಜವರೇಗೌಡರಿಗೂ ಇಂದಿನ ನಿರ್ದೇಶಕರಾಗಿರುವ ಡಾ. ಹಾ.ಮಾ. ನಾಯಕ ಅವರಿಗೂ ಶ್ರೀ ಎನ್. ಬಸವಾರಾಧ್ಯರಿಗೂ ಶ್ರೀ ರಾಮಚಂದ್ರ ಗೌಡರಿಗೂ ದಿ. ಡಾ. ಎ.ಎನ್. ಉಪಾಧ್ಯೆ ಅವರಿಗೂ ಪ್ರೊ. ದಿ. ಡಿ.ಕೆ. ಭೀಮಸೇನರಾಯರಿಗೂ ಚಿರಋಣಿಯಾಗಿದ್ದೇನೆ.

 

ಅರಿಕೆ

ಈ ಪ್ರಕಟವಾಗುತ್ತಿರುವ ಈ ‘ಧರ್ಮಪರೀಕ್ಷೆ’ ಎಂಬ ಕಾವ್ಯವು ನನ್ನ ಮೂರನೆಯ ಅಪ್ರಕಟಿತ ಕೃತಿ. ಇದರ ಮುದ್ರಣದ ಕರಡು ಹಸ್ತಪ್ರತಿಯನ್ನು ದಿ. ಪ್ರೊ. ಡಿ.ಎಲ್. ನರಸಿಂಹಾಚಾರ್ಯ ಅವರು ನೋಡಿ, ‘ಱೞ’ ಪ್ರಯೋಗವನ್ನು ಬಳಸಬೇಡಿರೆಂದು ಸೂಚಿಸಿದರು. ಪ್ರೊ. ಜಿ. ವರದರಾಜರಾವ್ ಹಾಗೂ ವಿದ್ವಾನ್ ಎಂ.ಎನ್. ಬಸವರಾಜಯ್ಯನವರು ಈ ಗ್ರಂಥದ ಮುದ್ರಣ ಪ್ರತಿಯನ್ನು ಅಮೂಲಾಗ್ರವಾಗಿ ಓದಿ ಸೂಕ್ತ ಅಭಿಪ್ರಾಯವನ್ನಿತ್ತರು. ಈ ಮೂವರು ವಿದ್ವಾಂಸರಿಗೂ ನನ್ನ ಹೃತ್ಪೂರ್ವಕವಾದ ನಮಸ್ಕಾರಗಳನ್ನು ಅರ್ಪಿಸುತ್ತೇನೆ.

ಈ ಕಾವ್ಯವು ನನ್ನ ಪಿ.ಎಚ್.ಡಿ. ಪ್ರಬಂಧದ ಒಂದು ಭಾಗವೂ ಆಗಿದೆ. ಈ ಭಾಗವನ್ನು ಪ್ರಕಟಿಸಲು ಅನುಮತಿಯಿತ್ತು, ಮುನ್ನುಡಿಯನ್ನು ಬರೆದು ಪ್ರೋತ್ಸಾಹವನ್ನು ಕೊಟ್ಟ ಡಾ. ಹಾ.ಮಾ. ನಾಯಕ ಅವರಿಗೆ ನನ್ನ ಹಾರ್ದಿಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಕನ್ನಡ ಅಧ್ಯಯನ ಸಂಸ್ಥೆಯ ಉಪನಿರ್ದೇಶಕರಾದ ಮಾನ್ಯ ಶ್ರೀ ಎನ್. ಬಸವಾರಾಧ್ಯ ಎಂ.ಎ. ಅವರು ವಿಭಾಗ ಸಂಪಾದಕರ ಮಾತಿನಲ್ಲಿ ಈ ಕೃತಿಯ ಹಿರಿಮೆಯನ್ನು ತೋರಿಸಿದ್ದಾರೆ. ಇದಲ್ಲದೆ ಇವರು ಹಾಗೂ ಇವರ ಸಹೋದ್ಯೋಗಿಗಳಾದ ಮಿತ್ರ ಜಿ.ಜಿ. ಮಂಜುನಾಥನ್ ಎಂ.ಎ., ಶ್ರೀಮತಿ ವೈ.ಸಿ. ಭಾನುಮತಿ ಎಂ.ಎ. ಅವರು ಈ ಕೃತಿಯ ಕರಡಚ್ಚನ್ನು ತಿದ್ದುವಲ್ಲಿ, ಅಲ್ಲಲ್ಲಿ ಮೂಲ ಓಲೆಗರಿಯೊಡನೆ ತಾಳೆ ಹಾಕಿ ನೋಡುವಲ್ಲಿ, ಈ ಕೃತಿಯು ಸರ್ವತೋಮುಖವಾಗಿ, ಸುಂದರವಾಗಿ, ರೂಪುಗೊಳ್ಳುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಇವರ ಈ ತುಂಬು ಹೊಣೆಗಾರಿಕೆಗೆ ನನ್ನ ಹಾರ್ದಿಕ ವಂದನೆಗಳು ಸಲ್ಲುತ್ತವೆ. ಈ ಗ್ರಂಥದ ಶುದ್ಧ ಹಸ್ತಪ್ರತಿಯನ್ನು ಸಿದ್ಧಮಾಡಿಕೊಟ್ಟ ನನ್ನ ವಿದ್ಯಾರ್ಥಿಮಿತ್ರರಾದ ಶ್ರೀ ಗಿರಿಗೌಡ ಎಂ.ಎ. ಶ್ರೀ ಟಿ.ಗೋಪಾಲ್ ಎಂ.ಎ. ಅವರಿಗೂ ಋಣಿಯಾಗಿದ್ದೇನೆ. ಇದರಲ್ಲಿ ಬಂದಿರುವ ಸಂಸ್ಕೃತ ಶ್ಲೋಕಗಳನ್ನು ತಿದ್ದಿಕೊಟ್ಟ ಮಾನ್ಯ ಶ್ರೀ ಎಚ್. ಎಸ್. ಘಾಟಕ್ ಹಾಗೂ ಶ್ರೀ ರಾಮಾಚಾರ್ಯ ಮಾಳಗಿ ಮತ್ತು ಇತರರಿಗೂ ಈ ಕೃತಿಯು ಅಚ್ಚುಕಟ್ಟಾಗಿ ಪ್ರಕಟಿಸಲು ಸೂಕ್ತ ಸಲಹೆಗಳನ್ನಿತ್ತ ಮಾನ್ಯ ಶ್ರೀ ಪ್ರಧಾನ್ ಗುರುದತ್ತ ಎಂ.ಎ., ಎಂ.ಫಿಲ್., ಅವರಿಗೂ ತುಂಬು ಹೃದಯದಿಂದ ವಂದನೆಗಳನ್ನು ಅರ್ಪಿಸುತ್ತೇನೆ.

ಈ ಕೃತಿಯಲ್ಲಿ ೨೬ ಪುಟ್ಟ ಕಥೆಗಳು ಬರುತ್ತವೆ. ಈ ಕಥೆಗಳನ್ನು ಓದಿ, ಆನಂದದಿಂದ ಮೆಲಕುಹಾಕುತ್ತಿರುವ ನನ್ನ ಮಕ್ಕಳಾದ ಚಿರಂಜೀವಿಗಳಾದ ಉಷಾ, ಗುರುರಾಜ, ರಘೂತ್ತಮ, ಚಂದ್ರಿಕಾ ಹಾಗೂ ನನ್ನ ಸಹಧರ್ಮಿಣಿ ಆರ್. ಇಂದಿರಾ ಇವರನ್ನೂ ಸ್ಮರಿಸದೆ ಇರಲಾರೆ. ಕೊನೆಯದಾಗಿಯೂ ಹಾಗೂ ಮುಖ್ಯವಾಗಿಯೂ ನನ್ನ ವಿದ್ಯಾಗುರುಗಳೂ, ಮಾವನವರೂ ಆದ ದಿ. ಪ್ರೊ. ಡಿ.ಕೆ. ಭೀಮಸೇನರಾಯರವರ ಚಿರಾತ್ಮಕ್ಕೆ ಮೌನವಾಗಿ ಮಣಿದು ಅವರಿಗೆ ಈ ಕೃತಿಯನ್ನು ಅರ್ಪಿಸಿ ಕೃತಾರ್ಥನಾಗುತ್ತೇನೆ.

ತಾಂಡವ ಮೂರ್ತಿ ಪ್ರೆಸ್ಸಿನ ಮಾಲೀಕರಾದ ಶ್ರೀ ಸಿ. ನಟರಾಜ್ ಅವರು ಸಾಹಿತ್ಯಪ್ರೇಮಿಗಳು. ಅವರಿಗೆ ಈ ಕಾವ್ಯದಲ್ಲಿ ಅಭಿರುಚಿಯಿದ್ದುದರಿಂದಲೇ ಈ ಗ್ರಂಥವು ಅಂದವಾಗಿ ಪ್ರಕಟಿತವಾಗಿದೆ. ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಕೆ. ರಾಘವೇಂದ್ರರಾವ್
ಸಿ. ಎಚ್. ೩ ‘ಸೌಹಾರ್ದ’
೪ನೆಯ ಮೇನ್, ೮ನೆಯ ಕ್ರಾಸ್ ಕೆ. ರಾಘವೇಂದ್ರರಾವ್
ಜಯನಗರ, ವೈಸೂರು – ೧೪