ಸ್ರಗ್ಧರೆ

ಶ್ರೀಮದ್ಭವ್ಯಾಳಿಚಕ್ರಪ್ರಕರಸುಖಕರಂ ಸರ್ವಮಿಥ್ಯಾಂಧಕಾರ
ಸ್ತೋಮಪ್ರಧ್ಜಂಸಿಬೋಧಾಮಲಕಿರಣಗಣೋದ್ಭಾಸಿಮೋಕ್ಷಾಬ್ಜಿನೀ ಸು
ಪ್ರೇಮಂ ಸ್ಯಾದ್ವಾದಪೂರ್ವಾಚಲಸಮುದಿತನಾಶ್ಚರ್ಯವ್ಯಕ್ತಾಭಿರಾಮಂ
ಹೇಮಾಂಗಂವರ್ಧಮಾನಾಹಿಮಕರನತಿನಿರ್ದೋಷಮಂ ಮಾಳ್ಕೆ ನಮ್ಮೊಳ್ ೧

ಮಹಾಸ್ರಗ್ಧರೆ

ಪುದಿದೆಂಟುಂ ಕರ್ಮಮಂ ಸಂಹರಿಸಿದ ಗುಣವೆಂಟಕ್ಕೆ ಪಕ್ಕಾದ ಲೋಕಾ
ಗ್ರದೊಳಾ ಪೂರ್ವಾಂಗದಿಂದು ಕಿಱಿದೆನಲೆಸೆದಿರ್ಪಕ್ಷಯಶ್ರೀಯ ಸೈಪೊಂ
ದಿದ ದಿವ್ಯಜ್ಞಾನಸಂಪತ್ತಿಯನುನಯದಿಂ ತಾಳ್ದಗಣ್ಯಪ್ರಭಾವಾ
ಸ್ಪದರಾದರ್ ಮಾಳ್ಕೆ ನಮ್ಮೊಳ್ ನಿಜಸುಖಪದಮಂ ಸಿದ್ಧರತ್ಯಂತಶುದ್ಧರ್ ೨

ಎಸೆವೈದಾಚಾರ ಪಂಚಾನನದಿನತುಳಪಂಚೇಷುಮತ್ತೇಭಮಂ ಭಂ
ಜಿಸಿ ಮೂವತ್ತಾಱುಮತ್ಯುನ್ನತಗುಣಜಳದಿಂ ಕರ್ಮದಾವಾಗ್ನಿ ಯಂ ನಂ
ದಿಸಿ ಶಿಷ್ಯವ್ರಾತಮಂ ದೋಷದ ಲವಮಿನಿತುಂ ಪೊರ್ದದೆಂಬಂದದಿಂ ಶಿ
ಕ್ಷಿಸಿದಾಚಾರ್ಯರ್‌ಕೃಪಾಭಾವದೆ ದುರುಳನ ಸಂಶುದ್ಧಿಯಂ ಮಾಳ್ಕೆ ನಮ್ಮೊಳ್ ೩

ಇದು ಹೇಯಂ ಕ್ರೋಧಮಾಕ್ರೋಧದಿನಿಳಿಗುಮಧಃಪಾತದುಗ್ರೋಗ್ರ ದುಃಖ
ಕ್ಕಿದುಪಾದೇಯಂ ದಯಂ ತದ್ದಯಮನೆಸಗಲಾ ಮೋಕ್ಷದತ್ಯಮತ ಸೌಖ್ಯಾ
ಸ್ಪದರಪ್ಪರ್ ತಪ್ಪದೆಂಬಂತಱಯೆ ತಿಳಿಪಿ ಯೋಜಿಪ್ಪುಪಾಧ್ಯಾಯರೆಮ್ಮೊಳ್
ಪುದಿದಜ್ಞಾನಾಂಧಕಾರಂ ಕಿಡೆ ಕಿಡಿಸುಗೆ ರತ್ನತ್ರಯ ಜ್ಯೋತಿಯಿಂದಂ ೪

ಮತ್ತೇಭವಿಕ್ರೀಡಿತ

ವರಚಾರಿತ್ರದೊಳುತ್ತಮೋತ್ತಮರಿವರ್ ಶೀಲಾದಿಯಾವಶ್ಯದೊಳ್
ಧರಣೀಪೂಜ್ಯರಿವರ್ ದಯಾಗುಣದೊಳುದ್ಯತ್ಸಜ್ಜಿನಸ್ತೋತ್ರ ಪಾ
ತ್ರರಿವರ್ ತಾವೆನಿಸಿರ್ಪ ದಂದುಗವಿದೂರರ್ ಸರ್ವಸಾಧುಪ್ರಸಿ
ದ್ಧರದೆಂದುಂ ಕೃಪೆಯಿಂದ ದಾಂಟಿಸುಗೆ ನಮ್ಮಂ ಜನ್ಮ ವಾರಾಶಿಯಂ ೫

ಕಂದ

ಕಮಳಾಸ್ಪದಂಗಳಕ್ಷಯ
ಪ್ರಮೋದದ ಪ್ರಚುರ ಸಂಪದಂಗಳ್ ಶರಣ
ಕೈಮಗರ್ಹತ್ಸಿದ್ಧಾಚಾ
ರ್ಯ ಮಹೋಪಾಧ್ಯಾಯ ಸರ್ವಸಾಧುಪದಂಗಳ್ ೬

ಮತ್ತೇಭವಿಕ್ರೀಡಿತ

ಕ್ರಮದಿಂ ಸತ್ಫಲವಕ್ಷಮಾಲೆ ವರದಂ ಖಡ್ಗಂ ಶರಂ ಪುಷ್ಪಬಾ
ಣಮುಮಾ ದಕ್ಷಿಣಹಸ್ತದಲ್ಲಿಯಭಯಂ ನೀಲೋತ್ಪಲಂ ಪಾಶಮು
ತ್ತಮ ಖೇಟಂ ಧನುರ್ವಿಕ್ಷುಚಾಪವೆಡಗೆಯ್ಯೊಳ್ ತೋಱೆ ಹೇಮಾಂಗಿ ವಿ
ಕ್ರಮೆ ಸಿದ್ಧಾಯನಿ ತಾರ್ಕ್ಷ್ಯಪುತ್ರಿ ನಮಗೀಗಿಷ್ಟಾರ್ಥಸಂಸಿದ್ದಿಯಂ ೭

ನುತಶುಭ್ರಾಂಗನನೂನ ವಜ್ರವಸಿಚಕ್ರಂ ಚಕ್ರಮಾ ಪಾಶಮು
ನ್ನತ ದಂಡಾನ್ವಿತ ಷಡ್ಭುಜ ಪ್ರೇಳಸತ್ಕಂಠೀರವಾರೂಢನ
ಪ್ರತಿಮಂ ಜೈನಮತಾಬ್ಧಿವರ್ಧನಶಶಾಂಕಂ ನಮ್ಮ ಭೀಷ್ಟಾರ್ಥಮಂ
ಸತತಂ ಮಾಳ್ಕೆ ಮತಂಗಯಕ್ಷನಭಯಂ ಸಿದ್ಧಾಯನೀ ವಲ್ಲಭಂ ೮

ಕಂದ

ಘನಗುಣ ಸಮುದಯದೆ ಸುವ
ರ್ಣನಿಚಯದಿಂದಖಿಳ ವಚನಮಣಿಗಣದಿಂ ನೆ
ಟ್ಟನೆ ಛಂದದೋಳಿಯಿಂ ವಾ
ಗ್ವನಿತೆಯಲಂಕರಿಸುಗೆಮ್ಮ ಕೃತಿಕಾಮಿನಿಯಂ ೯

ಕೇವಳಿಗಳೊಲ್ಮೆಯಿಂ ಶ್ರುತ
ಕೇವಳಿಗಳ್ ದುರಿತದೂರದನುಬದ್ಧ ಲಸತ್
ಕೇವಳಿಗಳ್ ನಮಗೆ ಕೃಪಾ
ಭಾವದಎ ಕರುಣಿಸುಗಎ ವಿಮಳಬೋಧೋದಯಮಂ ೧೦

ಲಲನೆಯರನುಳಿದು ವಸುಧಾ
ಲಲನೆಯನುಱೆ ಮೆಟ್ಟಿನಡೆವುದನುಚಿತಮೆಂಬ
ಗ್ಗಳಿಕೆಯೊಳೆಸೆದರ್ ಚತುರಂ
ಗುಳ ಚಾರಣರೆನಿಸಿ ಕೊಂಡಕುಂದಾಚಾರ್ಯರ್ ೧೧

ಕಂದ

ನಮಗೆ ಕರುಣಿಸುಗೆ ಮತಿಯಂ
ಸಮಂತಭದ್ರರ್ ಸುಗೃಧ್ರಪಿಂಛಾಚಾರ್ಯರ್
ಕ್ರಮದಿಂ ಬಳಾಕ ಪಿಂಛಾ
ಖ್ಯ ಮುನಿಗಳೆಸೆವೀ ಮಯೂರಪಿಂಛಾಚಾರ್ಯರ್ ೧೨

ಅಕಳಂಕವ್ರತಯುಕ್ತರ್
ತ್ರಿಕರಣಶುದ್ಧರ್ ಪ್ರಸಿದ್ಧರಘತಿಮಿರ ಸಹ
ಸ್ರಕರರ್ ತಾಮೆನೆ ಪುಂಡುರು
ಳುಕ ಭಟ್ಟಾಚಾರ್ಯರಾರ್ಯರತಿಗಾಂಭೀರ್ಯರ್ ೧೩

ಮಹಾಸ್ರಗ್ಧರೆ

ಭರದಿಂ ಜೈನೇಂದ್ರಮಂ ಭಾಸುರಮೆನಲೊರೆದಂ ಪಾಣಿನೀಯಕ್ಕೆಟೀಕಂ
ಬರೆದಂ ತತ್ತ್ವಾರ್ಥಮಂ ಟಿಪ್ಪಣದಿನಪಿದಂ ಯಂತ್ರಸನ್ಮಂತ್ರತಂತ್ರೋ
ತ್ಕರಮಂ ಭೂರಕ್ಷಣಾರ್ಥಂ ವಿರಚಿಸಿ ಜಸಮಂ ತಾಳ್ದಿದಂ ವಿಶ್ವವಿದ್ಯಾ
ಭರಣಂ ಭವ್ಯಾಳಿಯಾರಾಧಿತಪದಕಮಲಂ ಪೂಜ್ಯಪಾದವ್ರತೀಂದ್ರಂ ೧೪

ಕಂದ

ವರಭವ್ಯವದನ ಹೃತ್ಸರ
ಸಿರುಹೋತ್ಪಳ ಚಂಡಶೀತಕರರಮಳಗುಣಾ
ಭರಣರ್ ಕುಸುಮಾಯುಧಮದ
ಹರಣರ್ ಜಿನಸೇನ ವೀರಸೇನಾಚಾರ್ಯರ್ ೧೫

ಸ್ರಗ್ಧರೆ

ಭೂವಂದ್ಯಂ ಶ್ರೀಬಲಾತ್ಕಾರ ಗಣತಿಲಕರೀ ಮೂಲಸಂಘಾಗ್ರಗಣ್ಯರ್
ಭಾವೋದ್ಭೂತ ಪ್ರತಾಪ ಪ್ರಬಲಗಝಘಟಾಸಿಂಹರಂಹೋಟವಿಪ್ರೋ
ದ್ದಾವಂ ಕಾರುಣ್ಯಪುಣ್ಯಾಮೃತಜಲನಿಧಿತಾರೇಶನಿಂ ಖ್ಯಾತಿವೆತ್ತಂ
ತ್ರೈವಿದ್ಯಾಧೀಶ್ವರಂ ಭಾಸುರಗುಣನಿಲಯಂ ಕೇಶವೇಂದ್ರವ್ರತೀಂದ್ರಂ ೧೬

ಮಹಾಸ್ರಗ್ಧರೆ

ಧರೆಯೊಳ್ ಶ್ರೀಕೇಶವೇಂದ್ರವ್ರತಿಪತಿತನಯಂ ಚಾರುಕೀರ್ತಿವ್ರತೀಂದ್ರಂ
ಪಿರಿದಾರ್ಪಿಂ ಸಿಂಹನಾದಂ ನೆಗಳೆ ಮಿಗೆಯುಪನ್ಯಾಸಮಂ ಮಾಡೆ ಕೇಳ್ದಾ
ಪರವಾದೀಭವ್ರಜಂಗಳ್ ಮದಮನುಡುಗಿ ಕಣ್ಗೆಟ್ಟು ಕೆಟ್ಟೋಡೆ ನಾನಾ
ಗಿರಿಯೊಳ್ ಕಾಂತಾರದೊಳ್ ನಂದನವನದೊಳಗಂ ಪೊಕ್ಕಡಂಗುತ್ತುಮಿರ್ಪರ್ ೧೭

ಮತ್ತೇಭವಿಕ್ರೀಡಿತ

ಹರನಂ ಶ್ರೀಧರನಂ ಸರೋಜಭವನಂ ಮುಂಗೆಲ್ದೆ ನೊಂದಂಬಿನಿಂ
ಪರಿದೈದಂಬಿನೊಳೆಚ್ಚೊಡೀಗಭಯಕೀರ್ತಿಖ್ಯಾತಯೋಗೀಂದ್ರಸ
ಚ್ಚರಣಾಬ್ಜಕ್ಕೆಱಗಿರ್ದುವಂಜಿಯೆನೆ ಬಿಲ್ಲೇಕೆಂದು ಬಿಟ್ಟೋಡಿ ಮೆ
ಯ್ಗರೆದಂದಿಂದೆ ಬಳಿಕ್ಕನಂಗವೆಸರಾಯ್ತಂಗೋದ್ಭವಂಗುರ್ವಿಯೊಳ್ ೧೮

ಕಂದ

ಧರೆಯಂ ದೆಸೆಯಂ ಗಗನಾಂ
ತರಮಂ ಬೆಳಗಿದುದು ಕೂಡೆ ಶಶಿರುಚಿಶೈತ್ಯಂ
ಪೊರೆದು ಪರಕಲಿಸಿತೆಂಬಂ
ತಿರೆ ಕೀರ್ತಿ ವಸಂತಕೀರ್ತಿ ಮುನಿಪುಂಗವನಾ ೧೯

ವತ್ತೇಭವಿಕ್ರೀಡಿತ

ವಿಭುಧಾಭೀಷ್ಟ ಫಲಪ್ರದಂ ಸುಕವಿರಾಜಂ ದೋಷದೂರಂ ವಿರಾ
ಗ ಬಹುತ್ವಂ ಸುಮನಸ್ಸಮೂಹಲಸಿತಂ ಕಲ್ಪದ್ರು[ಮ] ಮೆಂಬಂತೆ ಚಾ
ರು ಬಲಾತ್ಕಾರಗಣಾಗ್ರಗಣ್ಯನೆಸೆದಂ ವಾದೀಭಸಿಂಹಾಹ್ವಯಂ
ಪ್ರಬಲಖ್ಯಾತಿ ವಿಶಾಲಕೀರ್ತಿಯತಿಪಂ ಸ್ಯಾದ್ವಾದವಿದ್ಯಾಧಿಪಂ ೨೦

ಜಿನಧರ್ಮಾಂಬರಚಂದ್ರನುನ್ನತಗುಣಾಂಭೋರಾಶಿಚಂದ್ರಂ ಕುಮಾ
ರ್ಗನಿಕಾಯಾಂಬುಜಚಂದ್ರನಾ ಶ್ರೀತ ಚಕೋರ ಪ್ರೌಘಚಂದ್ರಂ ಸುಹೃ
ಜ್ಜನಹೃತ್ಕೈರವಚಂದ್ರನೆಂಬ ಗುಣಮಂ ಕೈಕೊಂಡು ರಂಜಿಪ್ಪನೀ
ಘನ ವಿಶ್ವಂಭರೆ ಕೀರ್ತಿಸಲ್ ಕುಮುದಚಂದ್ರಾಖ್ಯಾತಭಟ್ಟಾರಕಂ ೨೧

ಕಂದ

ಸಿದ್ಧಾಂತವಾರ್ದಿ ಪಾರಗ
ರುದ್ಧೂತಕಳಂಕರತನುದರ್ಪಾಪಹರರ್
ಶುದ್ಧಾಂತಃಕರಣರ್ ಸಲೆ
ಸೈದ್ಧಾಂತಿಕ ಮಾಘಣಂದಿಯತಿಕುಲವರ್ಯರ್ ೨೨

ಸಾರತರ ಸಕಲ ತತ್ತ್ವವಿ
ಚಾರಪರರ್ ಮೂಲಸಂಘದೊಳ್ ನೆಗಳ್ದ ಬಲಾ
ತ್ಕಾರಗಣತಿಲಕರಘಚಯ
ದೂರರ್ ಶುಭಕೀರ್ತಿರಾವುಳಬ್ರತಿನಾಥರ್ ೨೩

ಮಹಾಸ್ರಗ್ಧರೆ

ಅಕಳಂಕಂ ಧರ್ಮಭೂಷವ್ರತಿಪತಿಯಿದಿರೊಳ್ ಮೀಱೆ ಮಾಱಾಂಪರಾರ್ ವಾ
ದಿಕದಂಬಂ ಸಾಂಖ್ಯಭೂಭೃತ್ಕುಳ ಕುಳಿಶನೊಳಿಭಾಟ್ಟಪಂಕೇಜ ಜೈವಾ
ತೃಕನೊಳ್ ಚಾರ್ವಾಕಮೇಘಾನಿಳನೊಳತುಳಮೀಮಾಂಸಕಾಂ ಬೋಧಿಕುಂಭಾ
ರ್ಭಕನೊಳ್ ನೈಯಾಯಿಕೋದ್ಯತ್ತಿಮಿರದಿನಪನೊಳ್ ಸರ್ವಭಾಷಾ ಸಮರ್ಥರ್ ೨೪

ಸ್ರಗ್ಧರೆ

ಕಾರುಣ್ಯಂ ಕ್ಷೀರಪೂರಂ ಗುಣತತಿಮಣಿಗಳ್ ಬೋಧಿಕಲ್ಪಾವನೀಜಂ
ಚಾರಿತ್ರಂ ನಿರ್ಮಲಂ ಶಾಂತತೆ ಹಿಮರುಚಿ ವಾಗ್ವೃತ್ತಿಪೀಯೂಷಮಾಗಲ್
ಕ್ಷೀರಾಂಭೋರಾಶಿಯೆಂಬಂತೆಸೆವನಮರಕೀರ್ತಿವ್ರತೀಂದ್ರಂ ತಪಃಶ್ರೀ
ನಾರೀಕರ್ಣಾವತಂಸಂ ಯತಿಕುಲತಿಲಕಂ ಧರ್ಮಭೂಷಾತ್ಮಜಾತಂ ೨೫

ಕಂದ

ಮಲಧಾರಿಯಾಗಿಯುಂ ನಿ
ರ್ಮಲಚಿತ್ತಂ ಶಾಂತನಿಲಯನಘವನದಾವಂ
ಕಲಿಯಾಗಿಯಯಶಭೀಕರ
ನಿಳೆಯೊಳ್ ಶ್ರೀಭಾನುಕೀರ್ತಿಯತಿಪಲಲಾಮಂ ೨೬

ಚಂಪಕಮಾಲೆ

ಪದಯುಗಪಲ್ಲವಪ್ರಭೆಯೆ ಮೆಟ್ಟು ದಿಶಾವಳಿಯೆ ಕಟ್ಟು ನಿತ್ಯವೆ
ತ್ತಿದ ಕೊಡೆಯಾಗಸಂ ಧರಣಿತಲ್ಪತಳಂ ತನುವಂ ಪೊದಳ್ದು ಪ
ತ್ತಿದ ಮಲದೊಡ್ಡು ಮೇಲೆಸೆವ ಹಾಸಿಕೆಯೆಂದೆನಲೇವೊಗಳ್ವೆನ
ಗ್ಗದ ಮುನಿಭಾನುಕೀರ್ತಿ ಮಲಧಾರಿಯ ವೀರತಪಃಪ್ರಭಾವಮಂ ೨೭

ಉತ್ಪಲಮಾಲೆ

ವಾದಿಮದದ್ವಿಪಪ್ರಬಲಕೇಸರಿ ವಾದಿಬಳಾಹಕಾನಿಳಂ
ವಾದಿ ಪಯೋಜಷಂಡತುಹಿನದ್ಯುತಿ ವಾದಿಮನೋಜಶಂಕರಂ
ವಾದಿ ಮಹಾದ್ರಿವಜ್ರಧರನೆಂದು ಮನೋಮುದದಿಂದೆ ಕೀರ್ತಿಕುಂ
ಮೇದಿನಿ ಹೇಮದೇವಮುನಿರಾಜನನಾಶ್ರಿತಕಲ್ಪಭೂಜನಂ ೨೮

ಮತ್ತೇಭವಿಕ್ರೀಡಿತ

ಮುಗಿ ನೈಯಾಯಿಕ ಕೈಗಳಂ ಮರುಳಲಾ ಚಾರ್ವಾಕ ಮಾತಾಡದಿರ್
ಪೊಗಳಾನಂದದೆ ಭಾಟ್ಟ ನಿನ್ನ ಬಿರುದಂ ಬಿಟ್ಟೋಡು ಮೀಮಾಂಸ ವಾ
ದಿಗಳೆಂದೆನ್ನದಿರಿಲ್ಲಿ ಸಾಂಖ್ಯ ಭರದಿಂ ಬಂದಪ್ಪನುದ್ದಂಡ ವಾ
ದಿಗಜವ್ರಾತಮೃಗೇಂದ್ರನೀಯಭಯಸೂರಿ ಖ್ಯಾತವಾದೀರ್ಶವರಂ ೨೯

ಚಂಪಕಮಾಲೆ

ಇದು ಪುಸಿಯಾದೊಡಬ್ಜಭವನಂಗನೆ ಭಾರತಿದೇವಿಯಾಣೆಯಾ
ಡಿದ ನುಡಿ ತತ್ತ್ವ ಮೋದಿದೊಡೆ ಪದ್ಯಮೊಱಲ್ದುದೆ ಗದ್ಯಮೊಲ್ದು ಪೇ
ಳ್ದುದೆ ಕೃತಿಯಿಟ್ಟುದೇ ಪದನೊಡರ್ಚಿತೆ ಬಂಧುರಛಂದಮೆಂಬ ಪೆಂ
ಪೊದವಿ ವಿರಾಜಿಪಂ ಸಭೆಗೆ ವಲ್ಲಭನೀ ಭಯಲೋಭ ದುರ್ಲಭಂ ೩೦

ಗುರುವೆನಿಸಿರ್ದು ಮತ್ತೆ ಬುಧರಂ ಪೆಱಗಿಕ್ಕುವುದಾವ ಹೆಮ್ಮೆಯೆಂ
ದಿರದೆ ಸುರೇಜ್ಯನಂ ಸೆರಗುಮಾಡದೆ ಸದ್ಭುಧಕೋಟಿಯಿಂದಣಂ
ಪರಿವೃತನಾಗಿ ತಾನೆ ಗುರುವಾದನೆನುತ್ತಮೆ ಚಿಕ್ಕಹೇಮದೇ
ವರನಿಳೆ ಕೂರ್ತು ಕೀರ್ತಿಪುದು ಸನ್ಮುನಿವಲ್ಲಭನಾತ್ಮಜಾತನಂ ೩೧

ಕಂದ

ಮಹಿಪತಿಗಳ ಸಭೆಯೊಳ್ ಚಿ
ಕ್ಕಹೇಮದೇವಾರ್ಯನೊಮ್ಮೆ ನುಡಿದೊಡೆ ತಾರ್ಕ್ಷ್ಯಂ
ಗಹಿಪತಿ ಸೆಡೆವಂತಂಜಿದ
ರಹಮ್ಮನುಳಿದುಕ್ಕನೊಕ್ಕರೀ ತರ್ಕಜ್ಞರ್ ೩೨

ಕಾರ‍್ಯಪರರಪ್ಪರ್ ಚಾ
ತುರ‍್ಯರ್ ಸಕಳಾಗಮಾದಿಶಾಸ್ತ್ರವಿದರ್ ಮಾ
ತ್ಸರ‍್ಯಮನೆ ಬಿಟ್ಟು ಕವಿತಾ
ಚಾರ‍್ಯರ್ ತಿರ್ದುಗೆ ಮದೀಯಕೃತಿಯಂ ದಯೆಯಿಂ ೩೩

ಉತ್ಪಲಮಾಲೆ

ಸಾರದೆ ದುರ್ಜನಪ್ರಕರದಾನನಮಂ ಶಠರಾಸ್ಯಮಂ ದುರಾ
ಚಾರರ ತುಂಡಮಂ ಕೃಪೆವಿಹೀನರ ದುರ್ಮೊಗಮಂ ನಿರಸ್ತಭೂ
ಭಾರಕರಪ್ಪರಾ ಲಪನಮಂ ಮನದೊಂದಳುಪಿಂದೆ ಸಂತತಂ
ಶಾರದೆ ಬಂದು ನರ್ತಿಸುಗೆ ವೃತ್ತವಿಳಾಸನ ವಕ್ತ್ರಪದ್ಮದೊಳ್ ೩೪

ಚಂಪಕಮಾಲೆ

ಬಡವು ಕವಿತ್ವಮೆಂದಿಳಿಕೆಗೆಯ್ಯದೆ ಕೇಳ್ವುದು ಪುಣ್ಯಬಂಧಮಂ
ಪಡೆವ ಜಿನೇಂದ್ರಧರ್ಮಕಥೆ ತತ್ಕೃತಿಯೊಳ್ ಕೃತಿದೋಷವುಳ್ಳೊಡಂ
ತೊಡರ್ವುದು ದೋಷಮಲ್ತು ಕವಿವಲ್ಲಭರೆಂತೆನಲಿಕ್ಷುಸಾರದೊಳ್
ತೊಡರ್ದ ಕಳಂಕಮಂ ಕಳೆಯಲಂತದು ಶರ್ಕರೆಯಾಗದಿರ್ಕುಮೇ ೩೫

ಮತ್ತೇಭವಿಕ್ರೀಡಿತ

ದುರುಳರ್ ದುರ್ಜನರೆಗ್ಗುಗೆಯ್ವ ಭಯದಿಂ ಸತ್ಕಾವ್ಯಮಂ ಪೇಳದಂ
ಜಿರವೇಡಂಜದೆ ಪೇಳ್ವುದಾಖುಭಯದಿಂದಾವಾಸಮಂ ಮಾಡದಿ
ರ್ಪರೆ ಮೀನೆಂಜಲಿಗಂಜಿ ನೀರ್ದೊಱೆವರೇ ಮೇಣ್ ಮಕ್ಷಿಕಾಶಂಕೆಗು
ಣ್ಣರೆ ಧೂಮಕ್ಕೆ ಸಮಂತು ಬೆರ್ಚಿ ಪಚನವ್ಯಾಪಾರಮಂ ಮಾಣ್ಬರೇ

ಉತ್ಪಲಮಾಲೆ

ಮುನ್ನಿನ ಚಾರುಸಂಸ್ಕೃತದ ಧರ್ಮಪರೀಕ್ಷೆಯನೋದಬಲ್ಲನುಂ
ಕನ್ನಡದಿಂದಲರ್ಥವಿಸಬಲ್ಲವನಿಲ್ಲದೊಡಾಗದೆಂದದಂ
ಸನ್ನುತಮಾಗಿಯೆಲ್ಲರಱಿವಂತಿರೆ ಚಂಪುವೆನಿಪ್ಪ ಬಂಧದಿಂ
ಕನ್ನಡದಿಂದೆ ಪೇಳ್ದೆನಿದನೋದುಗೆ ಕೇಳುಗೆ ಕೂರ್ತು ಸಜ್ಜನರ್ ೩೭

ಕಂದ

ವ್ರತಗುರುಗಳಮರಕೀರ್ತಿ
ವ್ರತಿಪತಿಗಳ್ ಚಾರುಸೂಕ್ತಿ ಮುಕ್ತಾಭರಣರ್
ಶ್ರುತಗುರುಗಳೆಂಬ ಮಹಿಮೋ
ನ್ನತಿಯಿಂ ಕೃತಕೃತ್ಯನಲ್ತೆ ವೃತ್ತವಿಲಾಸಂ ೩೮

ಚಂಪಕಮಾಲೆ

ನಿಚಿತ ಕುಳೀರನ ಕ್ರಮಕರಪ್ರಕರಂ ಕರಿಕೂರ್ಮದರ್ದುರ
ಪ್ರಚಯಮುದಗ್ರವಾರ್ಘಣಿ ಝಷಾದಿ ಸಮಸ್ತಜಡಾಶ್ರಯವ್ರಜ
ಪ್ರಚಳಿತಘಾತಸಂಜನಿತ ತುಂಗತರಂಗ ಸಮೂಹಘಟ್ಟನ
ಪ್ರಚುರ ಘನಾಘನಪ್ರಬಳಘೋಷವಿಜೃಂಭಿತಘೂರ್ಣಿತಾರ್ಣವಂ ೩೯

ಕಂದ

ತೀವಿದ ಜಳಚರದಿಂ ರ
ತ್ನಾವಳಿಯಿಂದಳಿನಿಕಾಯದಿಂ ನಿಱಿವಿಡಿದೀ
ಭೂವಧು ಸುತ್ತಿದ ವರಚಿ
ತ್ರಾವಳಿಯೆನೆ ಶೋಭೆ ಭದ್ರವಾಯ್ತು ಸಮುದ್ರಂ ೪೦

ಶಾರ್ದೂಲವಿಕ್ರೀಡಿತ

ಆ ವಾರಾಶಿಯ ಸುತ್ತಿನೊಳ್ ಮೆಱೆವ ಜಂಬೂದ್ವೀಪವಾ ದ್ವೀಪಮ
ಧ್ಯಾವಷ್ಟಂಭಿತ ಮೇರು ಮೇರುವಿನ ತೆಂಕಲ್ ಭಾರತಕ್ಷೇತ್ರಮು
ರ್ವಿವಿಖ್ಯಾತಿಯ ಭಾರತಾವನಿಯೊಳಿರ್ಕುಂ ನಾಡೆಯುಂ ತಾನೆ ಶೋ
ಭಾವಾಸಂ ವಿಜಯಾರ್ಧಶೈಳವದಱಾಶ್ಚಯಂ ಜಗದ್ಭುಂಭುಕಂ ೪೧

ವಚನ

ಅದೆಂತೆಂದೊಡಾ ಮಹೀಧರಂ ಸಮುದ್ರದಂತನಿಮಿಷಾಸ್ಪದಮಾಗಿಯುಂ ಜಡಾಕರ ಮಲ್ತು ಐರಾವತದಂತೆ ಪುಷ್ಕರಾನ್ವಿತಮಾಗಿಯುಂ ಮಾತಂಗವಂಶೋದ್ಭವಮಲ್ತು ಹರಿಯಂತೆ ಲಕ್ಷ್ಮೀಸಮಾಲಿಂಗಿತಮಾಗಿಯುಂ ಪುಣ್ಯಜನದ್ವೇಷಿಯಲ್ತು ವಿಯತ್ತಳದಂತೆ ರಾಜಾರ್ಕಕುಜವಿ ರಾಜಿತಮಗಿಯುಂ ಅಪದಮಲ್ತು ಸತ್ಪುತ್ರನಂತೆ ವಂಶೋನ್ನತ ಮುಳ್ಳದಾಗಿಯುಂ ಯೋನಿಸಂಭೂತಮಲ್ತು ವಾಸವನಂತೆ ವಜ್ರಾಭಿರಾಮ ನಾಗಿಯುಂ ಗೋತ್ರವೈರಿಯಲ್ತು ಅಂತುಮಲ್ಲದೆಯುಂ

ಉತ್ಪಲಮಾಲೆ

ಆ ಗಿರಿಶೃಂಗ ಸಂಜನಿತ ಭೂರುಹಶಾಖೆ ಚಳತ್ ಸಮೀರನಿಂ
ತಾಗೆ ಹಿಮಾಂಶುಮಂಡಲಮನಾ ಕಲೆಯಂ ಜನಮೆಯ್ದೆ ಕಲ್ಪಿಕುಂ
ನಾಗನಿವಾಸವಾಲದ ಮರಂ ಶಶಕಂ ಮೃಗಮೆಂದೆನುತ್ತೆ ಹಾ
ಳಾಗಿರುತಿರ್ಪುದೇನಿದು ವಿಚಾರಿಸಿ ನೋಡುವೊಡಿಂದುಮಂಡಲಂ ೪೨

ವಚನ

ಮತ್ತಮಾ ಪರ್ವತದ ದಕ್ಷಿಣಶ್ರೇಣಿಯೊಳಂ ರೂಢಿವಡೆದ ಕನ್ನರಮಿತ್ತಂ ಕಿನ್ನರ ಗೀತೆ ಬಹುಕೇತು ಪುಂಡರೀಕಂ ಸಿಂಹಧ್ವಜಂ ಶ್ವೇತಕೇತುಕಂ ಗಿರಿ ಗರುಡಧ್ವಜ ಶ್ರೀಧರಂ ಲೋಹಾರ್ಗಳಂ ವೈಮಾರ್ಗಳಂ ಶಕಟಮುಖಿ ಬಹುಮುಖಿ ಚತುರ್ಮುಖಿ ವಿಮುಖಿ ಪುರಂಜಯಂ ಅರಿಂಜಯಂ ವೈರಾಟಂ ವೈಜಯಂತಿ ಕಮಲಪುಱ್ಪಕಂ ಗಗನಚರಿ ಭೀಮಚರಿ ಮಾಯಾಚರಿ ವಿನಯಚರಿ ಅಭ್ರಪುರಂ ಶುಭ್ರಪುರಂ ವಿರಂಜಸ್ಕಂ ರಥನೂಪುರಂ ಚಕ್ರವಾಳಂ ಮೇಖಳಾಪುರಂ ಸಂಜಯಂತಂ ವಿಜಯಂತಂ ಅಪರಾಜಿತಂ ಕ್ಷೇಮಂಕರಿ ಚಿತ್ರಕೂಟಂ ವಿಚಿತ್ರಕೂಟಂ ಹೇಮಕೂಟಂ ಮೇಘಕೂಟಂ ಮಹಾಕೂಟಂ ತ್ರಿಕೂಟಂ ಚಂದ್ರಪುರಂ ಚಂದ್ರಾಭಂ ಸೂರ‍್ಯಪುರಂ ಸೂರ‍್ಯಾಭಂ ದಧಿಮುಖಂ ನಿತ್ಯವಹಿನಿ ನಿತ್ಯಜ್ಯೋತಿ ನಿರ್ಮಳಜ್ಯೋತಿ ರತ್ನಜ್ಯೋತಿ ರತ್ನಪುರಂ ವೈಜಯಂತಿ ಎಂಬೈವತ್ತುಂ ಪಟ್ಟಣಂಗಳುಳ್ಳ ನಾಡತಿಶಯ ಮಹಿಮೆಯೆಂತೆಂದೊಡೆ

ಕಂದ

ಬಡತನಮೆಂಬುದು ಸತಿಯರ
ನಡುವಿನೊಳಾಲೀಢವಲಗುವಿನ್ನಣದೊಳ್ ಸಂ
ಕಡಿ ಕುಚಮಧ್ಯದೊಳಾ ಕೌ
ಳ್ನುಡಿ ಕುಂಟಣಿವದಿರೊಳಲ್ಲದಿಲ್ಲಾ ನಾಡೊಳ್ ೪೩

ಕಂದ

ಮದಗಜದೊಳ್ ಬಂಧನಮುರು
ನದಿಯೊಳ್ ವಕ್ರಗತಿ ಕೇಶತತಿಯೊಳ್ ತೊಡಕ
ಬ್ಜದೊಳಾಱಡಿ ವರಕುಚಯು
ಗ್ಮದೊಳಲ್ಲದೆ ಕಠಿಣವೃತ್ತಿಯಿಲ್ಲಾ ನಾಡೊಳ್ ೪೪

ಚಂಪಕಮಾಲೆ

ವನರುಹಸಂಭವಂ ಸುರನರೋರಗಲೋಕದೊಳುಳ್ಳಮೂಲ್ಯವೆಂ
ದೆನಿಸುವ ವಸ್ತುವಂ ನೆರಪಿ ಮಾಡಿದನೀ ವಿಷಯಾಂತರಾಳದೊಳ್
ಮನದೊಲವಿಂದೆನಲ್ಕೆ ಪಲವುಂ ರಚನಾತಿಶಯಂಗಳಿಂದಮೀ
ಜನನುತ ವೈಜಯಂತಿಪುರಮೊಪ್ಪುವುದುರ್ವರೆಯೊಳ್ ಸವಿಸ್ತರಂ ೪೫

ಕಂದ

ಆ ಪುರದ ವಿಮಳಲಕ್ಷ್ಮೀ
ನೂಪುರವೆನಿಸಿರ್ಪ ಚಾರುನಂದನವನಮಂ
ಶ್ರೀಪತಿಯಂಬುಜಗರ್ಭನು
ಮಾಪತಿಯುಂ ಪೊಗಳಲಾಱರದತಿಶಯಮಂ ೪೬

ವಚನ

ಅದೆಂತೆಂದೊಡದಱ ಬಹಿರ್ವಳಯದೊಳ್ ಮರಕತಮಣಿಮಾಡದಂತಿರ್ದ ಕೇದಗೆಯ ಮಂಟಪದೊಳಗೆ ನೆಲಗಟ್ಟಂಗಟ್ಟಿದಂತಿರ್ದ ಕಳ್ತಲೆಯಂ ಕಿಳ್ತಲೆಯಲೆಂದು ಪೊತ್ತಿಸಿದ ಕೈದೀವಿಗೆಯಂತೆ ಪೂತಲರ್ದ ಪೊಂಗೇದಗೆಯ ಪರಿಮಳಕ್ಕೆ ಕೌವರೆಗೊಂಡು ಬರ್ಪ ತುಂಬಿವಿಂಡಿನ ಝೇಂಕಾರಮೆ ಗೀತಮಾಗೆ ಮಾಂಗೊನರರಸಮನಸದಳಮುಂಡ ಗಂಡುಗೋಗಿಲೆಯ ತಂಡದುಚ್ಚಸ್ವರಮೆ ವಾದ್ಯಮಾಗೆ ಅಖಿಳ ಪಕ್ವಫಲಂಗಳಂ ತಣಿಯೆ ತಿಂದುರ್ವಿಕೊರ್ವಿದ ಮಯೂರ ವೃಂದದಾನಂದದಾಟಮೆ ಲಾಸ್ಯತಾಂಡವಮೆಂಬ ನೃತ್ಯಮಾಗೆ ಮನೋಜರಾಜನಂ ಸಂತತಂ ಲೀಲೆಯಿಂದೋಲಗಿಸುವ ಸಂಪ್ರದಾಯದಂತೆ ವಿರಾಜಿಸುತಿರ್ಪುದದಱ ಮೆಯ್ಯೊಳ್

ಚಂಪಕಮಾಲೆ

ತಳಿರಡಿ ಸೋಗೆ ಸೋರ್ಮುಡಿ ಪಿಕಸ್ವನವೊಳ್ನುಡಿ ಪೀವರಸ್ತನಂ
ಘಳತತಿ ಲೋಚನಂ ಕುಸುಮಸಂಕುಳವನನವಾಂಬುಜಂ ಭುಜಂ
ವಿಳಸಿತಶಾಖೆಯಂಗಮೆ ಲತಾಂಗಮದಾಗಿರೆ ಸರ್ವರೂಪಿನಿಂ
ಲಲನೆಯರಂತೆ ಶೋಭಿಸುವುದೀಕ್ಷಿಪರಕ್ಷಿಗೆ ಪಾವನಂ ವನಂ ೪೭

ಶಾರ್ದೂಲವಿಕ್ರೀಡಿತ

ಬೇರಿಂದಂ ಕೊನೆಮುಟ್ಟಿ ಕಾಯ್ತ ಪಲಸು ಬಿಲ್ಲೆಂಬಿನಂ ಪಣ್ತ ಜಂ
ಬೀರಂ ಬಿಣ್ಗೊನೆ ಜೋಲ್ದ ಬಾಳೆ ಫಲಸಂದೋಹಂಗಳಿಂ ತೀವಿದಾ
ನಾರಂಗಂ ತನಿವಣ್ಗಳಿಂ ಪುದಿದ ನೇಱೆಲ್ದೋರೆಗೊಂಚಲ್ಗಳಿಂ
ದೋರಂತೊಪ್ಪುವ ಪಣ್ತ ಚೂತತತಿಯಿಂ ಚೆಲ್ವಾದುದಾ ನಂದನಂ ೪೮

ಕಂದ

ಪಚ್ಚೆಗಳಿಂ ಮಿಸುನಿಗಳಿಂ
ಚೆಚ್ಚರದಿಂದಬ್ಜಸಂಭವಂ ಮಾಡಿ ಮನಂ
ಮೆಚ್ಚುವಿನಂ ಮಾಮರದೊಳ್
ಬೆಚ್ಚಂತೆಸೆದಿರ್ಪುವಲ್ಲಿ ಕಾಯ್ ಪಣ್ಣುಗಳುಂ ೪೯

ಮತ್ತೇಭವಿಕ್ರೀಡಿತ

ಬನಮಂ ಬಣ್ಣಿಸಿ ಪಾಡುತಿರ್ಪ ವಿಲಸತ್ ಭೃಂಗಾಳಿ ಭೃಂಗಾಳಿ ಗೇ
ಯನಿನಾದೋನ್ನತಿಯಂ ಮಹೋತ್ಸವದೆ ಕೇಳ್ವಂ ಮನ್ಮಥಂ ಮನ್ಮಥಾಂ
ಕನ ವೀರೋನ್ನ ತಕಬ್ಬಮಂ ಪಠಿಯಿಕುಂ ಕೀರಾಳಿ ಕೀರಾಳಿಯೋ
ದಿನ ಚೆಲ್ವಂ ಪೊಗಳ್ವಂತೆ ಕೋಕಿಳರವಂ ಹೈಯೆಂಬಿನಂ ಪೊಣ್ಮುಗುಂ ೫೦

ಕಂದ

ನೀರೆಱುದು ಸಲಹಿದನ ಋಣ
ಭಾರಕೆ ವನಲಕ್ಷ್ಮಿಪಚ್ಚೆಗೊಡಗಳಿನಿಂದ್ರಾ
ಗಾರದ ಸುಧೆಯಂ ಕೈಗಳಿ
ನಾರಯೆ ತಪ್ಪಂತೆಯಿರ್ಪ ತೆಂಗಿನ ಮರಗಳ್ ೫೧

ಉತ್ಪಲಮಾಲೆ

ನಿತ್ಯವಸಂತವಲ್ಲಿ ಪಿಕನಿಸ್ವನವಲ್ಲಿ ಮರಾಳಯಾನ ಸಾಂ
ಗತ್ಯಮದಲ್ಲಿ ತುಂಬಿಗಳ ಗಾವರವಲ್ಲಿ ಮಯೂರವೃಂದದಾ
ನೃತ್ಯವಿನೋದವಲ್ಲಿ ಬಿಡದೋದುವ ಕೀರನಿಕಾಯದೋದಿನೌ
ನ್ನತ್ಯಮದಲ್ಲಿ ತೋರ್ಪುದೆನೆ ಶೋಭಿಪುದುರ್ವಿಗೆ ಪಾವನಂ ವನಂ ೫೨

ವಚನ

ಮತ್ತಮಾ ನಂದನವನದ ಬಳಿವಿಡಿದು ನಳನಳಿಸಿ ಬಳವಳ ಬೆಳೆದೆಳಲತೆಯ ತಾಂಬೂಲಲತೆಯ ಕಂಬುಲತೆಯ ಜಾತಿಲತೆಯ ಕುಂದಲತೆಯ ಅಶೋಕಲತೆಯ ಮಾಧವೀಲತೆಯ ಮಾಕಂದಲತೆಯ ಚಂದಕಲತೆಯ ತಿಂತಿಣಿಯಿಂ ಸಲ್ಲಲಿತಮಾದ ವಲ್ಲೀವನ ಪ್ರದೇಶದೊಳ್

ಕಂದ

ಸುಳಿಸುಳಿದು ಬೆಳೆದು ನಳನಳಿ
ಪೆಳಲತೆಗಳ ಮಂಟಪಂಗಳೊಳಮೆಯ್ಯೊಳ್ ಕಂ
ಗೊಳಿಸಿದುದು ಸರಸಿ ವಸುಧಾ
ಲಲನೆಯ ಗಂಭೀರನಾಭಿಯೆಂದೆನಿಸುವ ವೊಲ್ ೫೩

ವಚನ

ಅಂತೊಪ್ಪುವ ನಂದನವನದ ಲತಾಮಂಟಪದ ಬಳಿವಿಡಿದು ನಳನಳಿಸಿ ಬೆಳೆದೊಱಗಿದಿಂದಿರೆಯ ಜನ್ಮಮಂದಿರವೆನಿಪ ಸೌಂದರ‍್ಯಮಂ ತಳೆದ. ಗಂಧಶಾಳಿಯ ಕ್ಷೇತ್ರಪ್ರದೇಶದಿಂದೊಳಮೆಯ್ಯೊಳ್

ಚಂಪಕಮಾಲೆ

ಕುಡಿತೆಯೊಳೊಮ್ಮೆ ಗುಜ್ಜಗೊರವಂ ಕುಡಿಯಲ್ ಪುಡಿವಾಱಿತೊಂದಿಧೀಂ
ಕಿಡುವೆಡೆಗೆಯ್ದದಾಯ್ತು ಬಡಕೋಡಗಕಾ ರಘುವಂಶಸಂಭವಂ
ತುಡೆವಿಶಿಖಾಗ್ರದಲ್ಲಿ ಜಳಬಿಂದುವೊಲಾಯ್ತೆನುತಂದು ವಾರ್ಧಿಯಂ
ಜಡಿವವೊಲಾಯ್ತಗಳ್ ಕರೆಯುತಿರ್ಪ ಮರಾಳಕುಳಸ್ವನಂಗಳಿಂ ೫೪

ವಚನ

ಮತ್ತಮಾ ಜಳಖಾತಿಕೆಯಿಂದೊಳಗೆ ಬಳಸಿಯಂಬರಂಬರಂ ಬೆಳೆದ ಚೆನ್ನರನ್ನದ ಕೋಟೆಯಿಂ ಪವಳದಾಳ್ವೇರಿಯಿಂ ಮಾಣಿಕ್ಯದಿಂ ಕಡೆದು ಕಂಡಣಿಸಿ ಕೆತ್ತಿಸಿದ ತೆನೆಗಳಿಂ ಅಂಬರವಿಂಬುಗಿಡೆ ಮಿಳಿರ್ದು ಮಿಳ್ಳಿಸುವ ಜಯಪತಾಕೆಗಳ ಗೊಂದಣದಿಂ ವಿದ್ಯಾಧರ ವಿಮಾನಮೆಂಬ ಸಂದೆಗಮನೊಡರಿಸುವ ಚಂದ್ರಕಾಂತದ ಮುಗಿಲಟ್ಟಳೆಗಳಿಂ ನೀಲದಿಂದಂದಂಬಡೆದು ಮಾಡಿದ ಗೋಪುರದಿಂ ವೈಡೂರ್ಯದ ವಂಕ ದ್ವಾರದಿಂ ವಜ್ರದ ಕವಾಟದಿಂ ಪುಷ್ಯರಾಗದಗುಳಿಯಿಂ ಮುತ್ತಿನ ಲಂಬಣಂಗಳಿಂ ಮರಕತದ ತೋರಣಂಗಳಿಂದೋರಣಂಬಡೆದು ರಾರಾಜಿಸುವ ಪ್ರಾಕಾರದಿಂದೊಳಗೆ ಸೋಮವೀಧಿ ಸೂರ್ಯವೀಧಿಯಿಕ್ಕೆಲದೊಳೊಪ್ಪುವ ನವರತ್ನ ಖಚಿತ ಮಾಟಕೂಟ ಪ್ರಾಸಾದದಿಂ ಜಗದ ಕಣ್ಗೆ ಮಂಗಳವೆನಿಸಿ ಸೊಗಯಿಸುತಿರ್ಪುದಂತುಮಲ್ಲದೆಯುಂ