ಉತ್ಪಲಮಾಲೆ

ಶ್ರೀಸುಜನಸ್ತುತಂ ಖಚರವಂಶಶಿಖಾಮಣಿ ಜೈನಧರ್ಮವಾ
ರಾಶಿವಿವರ್ಧನುನ್ನತಸುಧಾಕಿರಣಂ ಸಕಳಾಗಮಜ್ಞನಾ
ಜ್ಞಾಸದನಂ ಸಮಸ್ತದುರಿತವ್ರಜಭಂಜನನುತ್ತಮೋತ್ತಮಂ
ಭಾಸುರಮೂರ್ತಿ ಮಿತ್ರಹಿತಕೃತ್ಯನುದಾರಸುರೇಂದ್ರಭೂರುಹಂ ೧

ಲಲಿತರಗಳೆ

ಭರವಸಂ ಪಿರಿದಾಗಿ ಮಱುದಿನಂ ನೆಟ್ಟಾನಾ
ಭರಣಂಗಳೆಲ್ಮಂ ಬೈತು ತಾಂ ಬೇಗಿದಿಂ
ವರಸಖಂಬೆರಸು ಖೇಚರಚಕ್ರವರ್ತಿ ಬೇ
ಡರ ರೂಪನಾಂತು ಬಿಲ್ಲಂಬುಮಂ ಹಸ್ತದಿಂ

ಧರಿಸಿ ವಿದ್ರುಮಘಟೋದರದಲ್ಲಿಯೊಂದು ಮಂ
ಜರನಂ ವಿನೋದದಿಂದಿಕ್ಕಿಯಾ ಪಾಟಳೀ
ಪರದಿಶಾವರಕೈದಿ ಬಂದು ನಿಜದಿಂದೆ ಗೋ
ಪುರದೊಳ್ ವಿರಾಜಿಪಬ್ಬೋದ್ಭವಾವಾಸಮಂ ೨

ಕಳಾಭಾಷಿಣಿ

ಪೊಕ್ಕು ಭೇರಿಯನೆ ಬಾರಿಸಿಯುನ್ನತ ಪೀಠದೊಳ್
ಮಿಕ್ಕು ಕುಳ್ಳಿದಿರಲಾರದವೆಣ್ದೆಸೆಯೆಲ್ಲಮಂ
ತೆಕ್ಕನೊತ್ತರಿಸಿ ತೀವಿರೆ ಕೇಳ್ದು ಪುರಾಣಶಾ
ಸ್ತ್ರಕ್ಕೆ ಬಲ್ಲ ವರವಿಪ್ರಜನಂ ನೆರೆದೆಲ್ಲರುಂ ೩

ಕಂದ

ಬಂದೊಳಗಂ ಪೊಕ್ಕೀಕ್ಷಿಸಿ
ಯೆಂದಿರದೇನೆಂದು ಭೇರಿಯಂ ಪೊಯ್ದಿರಿದೇ
ನೆಂದುನ್ನತಸನದೊಳಾ
ನಂದದಿ ಕುಳ್ಳಿದಿರೆಂದೊಡವರಿಂತೆಂದರ್ ೪

ತುಡುಪಿರ್ದೊಡೆ ದುಂದುಭಿಯಂ
ಪೊಡೆದೆವು ಜನವೆಯ್ದೆ ಬಂದು ನಲವಿಂ ಕುಳ್ಳಿ
ರ್ಪೆಡೆಯೆಂದು ಬಂದು ಕುಳ್ಳಿ
ರ್ದೊಡೆ ಪೊಲ್ಲಮೆ ಪೇಳಿಮೆಂದೊಡಾ ದ್ವಿಜರೆಂದರ್ ೫

ವಚನ

ಮತ್ತಮಿಲ್ಲಿ ವಿದ್ವಾಂಸರಾದವರ್ ವಾದಾರ್ಥದಿಂ ಬಂದು ಭೇರಿಯಂ ಪೊಯ್ದು ವಾದಂ ಗೆಲ್ದಲ್ಲದೆ ಸಿಂಹಾಸನದೊಳ್ ಕುಳ್ಳಿರಲ್ ಬಾರದೆನೆಯಾದೊಡವರ್ ಮಾಣಲಿಯೆಂದು ಸಿಂಹಾಸನದಿಂದಿಳಿದು ಕೆಳಗೆ ಕುಳ್ಳಿರಿ ನೀಂ ಬಂದ ವೃತ್ತಾಂತಮಂ ಪೇಳಿಮೆನೆ ಈ ಬೆಕ್ಕಂ ಮಾಱಲ್ ಬಂದೆವೆನೆ ಮತ್ತಮವರಿಂತೆಂದರ್

ಮಹಾಸ್ರಗ್ಧರೆ

ಬೆಲೆಯೇನೀ ಬೆಕ್ಕಿಗರ್ಥಂ ಬಗೆವೊಡಿದಱ ಸಾಮರ್ಥ್ಯಮೇನೆಂದು ವಿಪ್ರರ್
ನಲವಿಂದಂ ಕೇಳಲಾಗಳ್ ಕೃತಕಶಬರರಾದಿತ್ಯಸಂಖ್ಯಾಸಹಸ್ರಂ
ಬೆಲೆಯೀರೇಳುಂಯೋಜನಂ ಮೂಷಕವಿರವದಱೆಣ್ದಿಕ್ಕಿನೊಳ್ನೋಳ್ಪೊಡೇಂ ಕೇ
ವಮೇ ಸಾಮರ್ಥ್ಯಪೆಂದಂದುಸಿರಲವಱ ಸರ್ವಾಂಗಮಂ ನೋಡುವಾಗಳ್ ೬

ಕಂದ

ಅದಱ ಕಿವಿ ಸೀಳ್ದುಗುವ ರ –
ಕ್ತದ ಪನಿಯಕಂಡಿದೇನೆನೆಲ್ ಮಱೆದಿರೆ ಕ
ರ್ಚಿದುದೊಂದಾಖುವೆನಲ್ ಕೇ
ಳ್ದಿದುವೆಯಸಂಭ್ಯಾವವೆಂದು ವಿಪ್ರರ್ ನಕ್ಕರ್ ೭

ನಗುತಿರೆ ಕಿರಾತರೆಂದರ್
ನಗಲೇಕವಗುಣದೊಳಿನಿಸುಮಿರ್ದೊಡೆ ನಿರುತಂ
ಸುಗುಣವ್ರಾತಂ ಕೆಡುವವೆ
ಜಗದೊಳಗಂ ನರನದೇಕೆ ನೀವಱೆಯದರೇ ೮

ವಚನ

ಎನಲಾವಱಿಯೆವಂತಪ್ಪವರಂ ನೀವಱಿವಿರಪ್ಪೊಡೆ ಪೇಳಿಮೆನೆ ಅದೊಡೆದರ್ದುರನ ಕಥೆಯನ್ನರುಳ್ಳೊಡೆ ಪೇಳಲಂಜುವೆವೆನೆ ಆ ಕಥೆಯೆಂತೆಂದು ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ

ಕಂದ

ವಸುಧಾವನಿತೆಯ ನಾಭಿಯೆ
ನಿಸುವ ಕೂಪದೊಳಗೊಂದು ಮಂಡೂಕಂ ವ
ಸುತಿರ್ಪುದದಱ ಪೊರೆಗಸ
ವಸದಿಂ ಸಿತಪಕ್ಷನೊಂದುಬರೆ ಕಂಡಾಗಳ್ ೯

ಮತ್ತೇಭವಿಕ್ರೀಡಿತ

ಬರವೆಲ್ಲಿಂದೆ ಮರಾಳವಾರಿನಿಧಿಯಿಂ ವಿಸ್ತಾರಮೇ ವಾರ್ಧಿ ವಿ
ಸ್ತರವೀ ಕೂಪದ ಪಾಟಿಯಪ್ಪುದೆ ದಿಟಂ ಪೇಳೆಂದೆನಲ್ ವಾರ್ಧಿಗಂ
ಧರೆಗಂ ಚಾರುವಿಯತ್ತಳಕ್ಕವೆಣೆಯಿಲ್ಲೆಂದೆಂಬುದಂ ಕೇಳ್ದುದ
ರ್ದುರನಂದಾಗಳೆ ನಕ್ಕುದೆಂಬ ಕಥೆಯುಂಟಂತಪ್ಪರಿಲ್ಲಿಲ್ಲವೇ ೧೦

ವಚನ

ಅಂತೆನಲಿಂತಪ್ಪವರೆಮ್ಮ ಸಭೆಯೊಳಿಲ್ಲೆನೆ ಮತ್ತಂ ದುರ್ಜನನ ಕಥೆಯನ್ನರುಳ್ಳೊಡೆ ಪೇಳಲ್ಕಮ್ಮೆವೆನೆಯಾ ಕಥೆಯೆಂತೆನೆ ವಿಪ್ರರ್ ಕೇಳೆ ಮನೋವೇಗಂ ಪೇಳ್ಗುಂ – ಸೌರಾಷ್ಟ್ರ ದೇಶದೊಳ್ ಕೋಟಿಕಾಗ್ರಾಮದೊಳ್ ಕಂದವಂಕರೆಂಬಿರ್ವರ್ ಗ್ರಾಮೀಣಿಗಳ್ ತಮ್ಮೊಳೋರ್ವೋರ್ವರ್ಗೆ ಸೈರಿಸದಿರುತ್ತಿರೆ ಆ ವಂಕಂ ವ್ಯಾಧಿಯಿಂ ಕಂಠಗತಪ್ರಾಣನಾಗಿರೆ ಪುತ್ರಂ ಬಂದೆಲೆ ಬೊಪ್ಪಾ ಪರತ್ರಯಮಂ ಸಾಧಿಸಿಕೊಂಬುದಕ್ಕೆ ಏನಾನುಂ ದಾನಧರ್ಮಂ ಮಾಡುವುದೆನೆ ಮಗನಂ ಕರೆದು ಎಲೆ ಮಗನೆ ನೀನೆನಗೆ ಧರ್ಮಮಂ ಮಾಡಿಕೊಡು – ವೆಯಪ್ಪೊಡೆ ನಾಂ ಪೇಳ್ದಂತೆ ಮಾಡೆನೆ ಕರಮೊಳ್ಳಿತ್ತು ಪೇಳಿಮನೆನೆ ನಾಂ ಸಾಯಲೊಡನೆ

ಉತ್ಸಾಹ

ನೆಗಪಿ ಪೆಣನನುಯ್ದು ಕಂದನಿರ್ದ ಕೈಯ ಕಡೆಯ ಮಂ
ಚಿಗೆಯ ಕಂಬದಲ್ಲಿ ನಿಱಿಸಿ ಪೊದಿಸಿ ಪಿಡಿಸಿಯಷ್ಟಿಯಂ
ಪುಗಿಸಿ ದನವನಗಲೆ ಸಾರ್ದು ನೀನಡಂಗಿರಲ್ಕವಂ
ತಗುಳ್ವಭರದೆ ಬಂದು ಪೊಯ್ಯೆ ಸಬಮುರುಳ್ದು ಬೀಳ್ವುದಂ ೧೧

ಕೊಂದನಿವನೆನ್ನ ತಂದೆಯ
ನೆಂದಬ್ಬರಿಸಲ್ಕೆ ಕೇಳ್ದು ನರಪತಿಯವನಂ
ಬಂಧಿಸಿ ಧನಧಾನ್ಯದೊಳೇ
ನೊಂದುಳಿಯದೆ ಕೊಂಡನಾದೊಡೆನಗದು ಮೋಕ್ಷಂ ೧೨

ವಚನ

ಎಂದು ಪೇಳೆ ಪೇಳ್ದಂತೆಮಾಡೆ ಅ ಕಂದನ ಸರ್ವಸ್ವಮಂ ಕವರ್ದುಕೊಂಡರೆಂಬ ದುರ್ಜನನ ಕಥೆಯಂತಪ್ಪರ್ ನಿಮ್ಮ ಸಭೆಯೊಳುಳ್ಳೊಡೆ ಪೇಳಮ್ಮೆವೆನೆ ಅಂತಪ್ಪವರಿಲ್ಲ ಪೇಳಿಮೆನೆ ಮತ್ತಂ ಮೂಢನ ಕಥೆಯವರುಳ್ಳೊಡೆ ಪೇಳಲಂಜುವೆವೆನೆಯಾ ಕಥೆಯೆಂತೆನೆ ಮನೋವೇಗಂ ಪೇಳ್ಗುಂ

ಮಹಾಸ್ರಗ್ಧರೆ

ನಿರುತಂ ಕಾಷ್ಠೋಷ್ಠನಾಮಂ ನಗರವದಱೊಳಂ ಭೂತಮತ್ಯಾಖ್ಯವಿಪ್ರಂ
ಭರದಿಂದಂ ಮುಂಜಿಗಟ್ಟಲ್ ಪಠಿಯಿಸಿ ಧನವಂ ವೇದಮಂ ಮೂವತಬ್ಧಂ
ಬರೆಗಂ ಮೂವತ್ತುವರ್ಷಂ ಪಠಿಯಿಸುವವರ್ಗಂ ಪೇಳ್ದನಲ್ಲಿಂ ಬಳಿಕ್ಕಂ
ವರಯಜ್ಞಾಕನ್ಯೆಯಂ ಚೆನ್ನೆಯನೆ ಮದುವೆಯಾದಂ ಮನೋರಾಗದಿಂದಂ ೧೩

ವಚನ

ಅಂತಿಷ್ಟಭಗಕಾಮಸುಖಮನನುಭವಿಸುತತುಮಿರೆ ಕೆಲವಾನುಂದಿವಸಕ್ಕತ್ತಲು ಪೌದನ – ಪುರಾಧಿಪತಿ ಯಾಗಮಂ ಮಾಡಲೆಂದು ಯೋಗ್ಯರಂ ಬರವೇಳ್ದಟ್ಟಿದೊಡೆ ಭೂತಮತಿ ಪೋಗಲುದ್ಯುಕ್ತನಾಗಿ ತನ್ನ ವಲ್ಲಭೆ ಯಜ್ಞೆಯಂ ಮನೆಯಿಂ ಪೊಱ ಮಡಲಾಗದೆಂದು ತನ್ನ ಛಾತ್ರನಪ್ಪಯಜ್ಞನಂ ನಡುಮನೆಯ ಜಗಲಿಯಿಂ ತೆರಳಲಾಗದೆಂದು ನಿಯಮಮಂ ಕೊಟ್ಟು ಪೋಗೆ ಯಜ್ಞೆಯಜ್ಞಂಗಿಂತೆಂದಳ್

ಉತ್ಪಲಮಾಲೆ

ಎನ್ನ ವಿಳಾಸಮೆನ್ನಸೊಬಗೆನ್ನ ವಿವೇಕತೆಯೆನ್ನ ರೂಪಸಂ
ಪನ್ನತೆಯೆನ್ನ ಯೌವನ ಮುಮೆನ್ನಯ ಗಾಡಿಯೆನಿಪ್ಪವೆಯ್ದೆನಿ
ನನ್ನನ್ನರೊಳೋತು ಕೂಡೆ ಸಫಳಂ ಸಲೆ ವೃದ್ಧನೊಳಪ್ಪುದೇನೊ ನೀ
ನೆನ್ನೊಳೆ ರಾಗದಿಂ ನೆಱೆದಿಹತ್ರಯ ಸೌಖ್ಯಮನಾಂಪುದೆಂಬುದಂ ೧೪

ನೀನಪ್ಪೊಡೆ ಗುರುವಿನ ಸತಿ
ಯೀನುಡಿ ನಿನಗುಚಿತ್ತಮಲ್ತು ಲೋಕಂ ಪಳಿಗುಂ
ಭೂನಾಥಂ ದಂಡಿಪನಭಿ
ಮಾನದ ಕೇಡಪ್ಪುದೆಯ್ದೆ ನರಕಕ್ಕಿಳಿಗುಂ ೧೫

ವಚನ

ಎನಲಾ ಧೂರ್ತೆ ಕವಕವಿಸಿ ನಕ್ಕು ಪಾಪಂ ಪುಣ್ಯಂ ಸ್ವರ್ಗಂ ನರಕಂಗಳೆಂದು ಮಾಡಿದ ಧೂರ್ತನ ಮಾತಿಂಗೆ ಬೆಳ್ಳಾದ ಪರಿಯಂ ನೋಡಾ ಪಾಪಂ ಪುಣ್ಯಮೆಂಬೆರಡಱ ಬಣ್ಣ ಮಾವುದವಂ ಬಲ್ಲವರಾರ್ ಸ್ವರ್ಗಂ ನರಕಮೆಂಬವೆಲ್ಲಿರ್ಪುವವಂ ಕಂಡು ಬಂದವರಾರ್ ಬಱಯ ಮಾತಿಂಗೆ ಬೆಗಡುಗೊಂಡಿರ್ಪ ಮೂರ್ಖನಂ ಕಂಡೆನೀಗಳಕ್ಕಟಾ ವೃಥಾ ಸಂಸಾರ ಸುಖಕ್ಕೀತೆಱನಾಗಿ ಜನ್ಮಮಂ ವ್ಯರ್ಥಂಮಾಡಿ ಕಿಡಿಸದೆ ಕೂಡಿ ಸುರತಾವೃತಾರ್ಣವದೊಳ್ ವೋಲಾಸ್ನಿಶ್ಚಿಂತವಿರದೆ ಭ್ರಮೆಗೊಂಡವರಂತೆ ಮೂಗುವಟ್ಟು – ಸಿರದಿರ್ಪಿರವಿದೇನೆಂದು ಮತ್ತಮಿಂತೆಂದಳ್

ಕಂದ

ಈ ಪ್ರಾಯದಲ್ಲಿ ನವಯುವ
ತ್ರೀಪ್ರೀತಿಗಳಿಲ್ಲ ಗಡ ಬಳಿಕ್ಕೇವುದೊ ಹೀ
ನಪ್ರಾಯವಾಗೆ ಸುರತವ
ದಪ್ರಸ್ತುತವೆಂದು ಪಿರಿದೊಡಂಬಡೆ ನುಡಿದಳ್ ೧೬

ವಚನ

ಅಂತನೇಕತೆಱದಿಂದೊಡಂಬಡಿಸಿ ಸಂಭೋಗಕೇಳೀವಿನೋದದಿಂದಿರುತ್ತಿರೆ ಕೆಲಬಲದ – ವರ್ಗಳ್ ಮರುಳಾಡುವುದಂ ಬಗೆಯದೆ ಕುಱಿ ಬಾಳೆಯಹಣ್ಣಂ ಮೆಚ್ಚಿದಂತೆ ಬೆಸನದೆಸಕದಿಂ ಮೆಯ್ಯಱಿಯದೆ ಮನೆವಾರ್ತೆಯಂ ಮಱುದು ಲಜ್ಜೆಯಂ ತೊಱೆದು ಇರುತ್ತಿರೆ ಕೆಲವು ದಿವಸಕ್ಕೆ ಉಪಾಧ್ಯಾಯರ್ ಬರ್ಪ ದಿನವಾಯ್ತೆಂದು ಕೆಯ್ಯಪೊತ್ತಗೆಯಂ ಬಿರ್ದಂತೆ ಲೆಕ್ಕಮಂ ಮಱೆದರಂತೆ ಮುಗಿಲ್ಮೇಲೆ ಕವಿದಂತೆ ಗಲ್ಲಕ್ಕೆ ಕೈಯನಿಟ್ಟು ಚಿಂತಾಕ್ರಾಂತನಾಗಿ ಯಜ್ಞನಿರೆ ಕಂಡು ಯಜ್ಞೆಯಿಂತೆಂದಳ್ –

ಕಂದ

ಬಾಯಳಿದು ಚಿಂತೆಯಿಂ ನೀ
ವಾಯಕ್ಕೇಕಿರ್ಪೆಯೆಂದೊಡವನೆಂದನುಪಾ
ಧ್ಯಾಯರ ಬರವು ಸಮೀಪಮ
ದಾಯಿತ್ತಿನ್ನೇವೆನೆಂದೊಡವಳಿಂತೆಂದಳ್ ೧೭

ಇಂದಿರುಳೊಳೆರಡು ಪೆಣನಂ
ತಂದಿರಿಸುವುದೆನಗೆ ನಿನಗುಪಾಧ್ಯಾಯರ್ ಪೋ
ಪಂದು ನಿಯಮಿಸಿದ ಠಾವಿನೊ
ಳೊಂದೊಂದಂ ಬಳಿಕಮೆಯ್ದೆ ಸುಡುವುದು ಮನೆಯಂ ೧೮

ಕಳಭಾಷಿಣಿ

ಅಂತುಗೆಯ್ದು ಧನಮೆಲ್ಲಮನೊಯ್ಯನೆ ಕೊಂಡು ನಿ
ಶ್ಚಿಂತದಿಂದೆ ಪರದೇಶಕೆ ಪೋಪುದೆ ಬುದ್ಧಿಯೆಂ
ದಿಂತು ಕಾಂತೆ ನೆಱೆ ಪೇಳ್ದೊಡೆ ಕೇಳ್ದವನಾಕೆ ಪೇ
ಳ್ದಂತೆಗೆಯ್ದು ನಡೆದಂ ಪರದೇಶಕೆ ಬೇಗದಿಂ ೧೯

ವಚನ

ಅಂತು ಪೋಗೆ ಪಿಂದೆ ವಿಪ್ರಂ ಬಂದು ಬೆಂದಿರ್ದ ಮನೆಯಂ ಕಂಡು ಚಿಂತಾಕ್ರಾಂತನಾಗಿಯೊಳಗಂ ಪೊಕ್ಕು ನೋಡೆ ಯಜ್ಞೆಯುಂ ಯಜ್ಞನುಂ ನಾಂ ಪೊಱಮಡಲಾಗದೆಂದು ನಿಯಮಿಸಿದಡೆ ಇಲ್ಲಿಯೆ ಸತ್ತರೆಂದು ಬೆಂದಿರ್ದ ಪೆಣನಂ ಕಂಡು ಕಡುದುಃಖಿತನಾಗಿ ಕಿಱಿದಾನುಂಬೇಗಮಳುತಿರ್ದು ತನ್ನೊಳ್ ತಾನೆ ಸಂತೈಸಿಕೊಂಡು ತನ್ನ ಮನದೊಳಿಂತೆಂದಂ

ಶ್ಲೋಕ

ಯಾವದಸ್ಥಿ ಮನುಷ್ಯಾಣಾಂ ಗಂಗಾತೋಯೇಷು ತಿಷ್ಠತೀ|
ತಾವದ್ವರ್ಷಸಹಸ್ರಾಣಿ ಪಿತಾ ಸ್ವರ್ಗೇ ಮಹೀಯತೇ || ೨೦

ವಚನ

ಎಂಬ ನೀತಿಯಂ ನೆನೆದಿವರೆನ್ನಾಜ್ಞೆಯಂ ಮೀಱದೆ ಸತ್ತವರಿವರಸ್ಥಿಗಳಂ ಗಂಗಾನದಿಯೊಳೆ ಬಿಟ್ಟವರ್ಗೆ ಪುಣ್ಯಮಂ ಮಾಡಿಕೊಡುವೆನೆಂದು ಪಿರಿದು ಭರಂಗೆಯ್ದು

ಚಂಪಕಮಾಲೆ

ಎರಡೆಡೆಯಸ್ಥಿಯಂ ದ್ವಿತಯಕುಂಭದೊಳಿಕ್ಕಿ ಕರದ್ವಯಂಗಳಿಂ
ಧರಿಯಿಸಿ ಪೋಗುತಿರ್ದೆಡೆಯ ಪಳ್ಳಿಯ ಮಾರ್ಗಧೆ ಯಜ್ಞೆಯಜ್ಞನುಂ
ಬರುತಿದಿರಲ್ಲಿ ಕಂಡಱಿದನೆದು ಪದಾನತರಾಗಿ ಭೀತಿಯಿಂ
ಕರಕಮಳಂಗಳಂ ಮುಗಿದಿರಲ್ ಪದೆದೀಕ್ಷಿಸಿ ನೀವಿದಾರೆನಲ್ ೨೧

ವಚನ

ಅಂತೆನೆ ಕೇಳ್ದು ತಾನಱಿದುಂ ಧೂರ್ತಿಂಗೆಯಱಿಯೆನೆಂದಪನೆಂದಂಜಿಯಾಂ ನಿಮ್ಮ ಛಾತ್ರಂ ಯಜ್ಞನೀಕೆ ನಿಮ್ಮ ವಲ್ಲಭೆ ಯಜ್ಞೆಯೆಂದು ಪೇಳೆ ಕೇಳ್ದು ವಿಪ್ರನಿಂತೆಂದಂ

ಕಂದ

ನಾನವರಸ್ಥಿಗಳಂ ಗಂ
ಗಾನದಿಯೊಳ್ ಬಿಡುವ ಭರದೆ ಪೋಗುತಿರೆ ಕಂ
ಡೇನೆಂದು ಧೂರ್ತನಾಡುವೆ
ನೀನೆನ್ನೊಡನೆಂದು ಕೋಪಿಸುತ್ತುಂ ಪೋದಂ ೨೨

ವಚನ

ಇಂತು ಪ್ರತ್ಯಕ್ಷಮಾಗಿ ಕಂಡುಂ ತನ್ನ ಕಿವಿಯಾರೆ ಕೇಳ್ದುಂ ನಂಬದ ಮೂಢನನ್ನರ್ ನಿಮ್ಮ ಸಭೆಯೊಳಿರ್ದೊಡೆ ಪೇಳಲಮ್ಮೆವೆನೆಯಿಂತಪ್ಪ ಮೂಢರೆಮ್ಮಸಭೆಯೊಳಿಲ್ಲಂಜದೆ ಪೇಳಿಮೆನೆ ಮನೋವೇಗಂ ಪೇಳಲ್ ತಗುಳ್ದಂ

ಸ್ವಾಗತ

ನೀತಿಶಾಸ್ತ್ರರಖಿಳಾಗಮವ
ವ್ರಾತದೊಳ್ ವರ ಕಳಾವಿದರಪ್ಪೀ
ಭೌತಿಕಪ್ರತತಿಗೊರ್ವಗೃಹಸ್ಥ
ಖ್ಯಾತನೌತಣಿಸೆ ಬಂದರದೆಲ್ಲಂ ೨೩

ಕಂದ

ಅಲ್ಲಿಗೆ ಮಾಂಡವ್ಯಂ ಬರ
ಲೆಲ್ಲರ್ ಕೋಪಿಸುತೆ ಪೋಗಲಾ ಯಜಮಾನಂ
ತಲ್ಲಣಿಸಿ ಪೋಗಿ ನೀವೇ
ಕಿಲ್ಲಿಂ ಪೋದಪ್ಪಿರೆಂದೊಡವರಿಂದೆಂದರ್ ೨೪

ವಚನ

ಎಮ್ಮ ಪಂತಿಗೆ ಮಾಂಡವ್ಯಂ ಸಲ್ಲನಾತಂ ಬಂದೊಡೆಮಗೆ ನಿಮ್ಮ ಮನೆಯೊಳ್ ಭೋಜನಮಾಗದೆನೆ ಕೇಳ್ದಾ ಮಾತಿಂಗೆ ಮಾಂಡವ್ಯನಿಂತೆಂದಂ ನಾಂ ಮಾಡಿದ ದೋಷಮೇನೆನೆ ಭೊತಿಕರಿಂತೆಂದರ್

ಶ್ಲೋಕ

ಅಪುತ್ರಸ್ಯಗತಿರ್ನಾಸ್ತಿ ಸ್ವರ್ಗೋನೈವಚನೈವಚ|
ತಸ್ಮಾತ್ಪುತ್ರಮುಖಂ ದೃಷ್ಟ್ಯಾ ಪಶ್ಚಾದ್ಭವತಿ ಭಿಕ್ಷುಕಂಃ || ೨೫

ವಚನ

ಎಂಬ ಶಾಸ್ತ್ರಮುಂಟಪ್ಪುದಱಂ ನಿನಗೆ ಮಕ್ಕಳಿಲ್ಲ ನೀನೆಮ್ಮ ಪಂತಿಗೆ ಸಲ್ಲೆಯೆಂದು ನುಡಿಯೆ ಮಾಂಡವ್ಯನೆನಗಿನ್ನೇಂ ಕೃತ್ಯಮೆನೆ ನೀನೊಂದು ಮದುವೆಯಾಗು ಮಕ್ಕಳಂ ಪಡೆವುದೆನೆ ಮಾಂಡವ್ಯನಿಂತೆಂದಂ

ಚಂಪಕಮಾಲೆ

ನರೆದಲೆ ಜೋಲ್ದಪುರ್ಬು ಕುಳಿದಕ್ಷಿಯುಗಂ ತುಟಿಯಾರ್ದ ಬೋಡ ಬಾಯ್
ತೆರಮಸಗಿರ್ದ ಮೋಱೆಯುಡುಗಿರ್ದುರವಕ್ಕುಳಿಸಿರ್ದ ಪೊಟ್ಟೆಮೇ
ಲ್ಸೆರೆ ಮಸಗಿರ್ದಕಾಲ್ ಮುರಿದಬೆನ್ನತಿ ಕಂಪಿಪಹಸ್ತಮಸ್ತಕಂ
ಪರಿಕಿಸೆ ತಾಪಸಂಗೆನಗೆ ಪೇಸದೆ ಕನ್ಯೆಯನೀಯಬಲ್ಲರೇ ೨೬

ಕಂದ

ಎಂದೊಡೆ ಸಮಸ್ತ ಭೌತಿಕ
ರೆಂದರ್ ಮುಂಪೇಳ್ದ ವೇದವಾಕ್ಯಕ್ರಮದಿಂ
ದಂ ದಿಟದೆ ಮದುವೆ ನಿಲ್ಲಿ
ನ್ನೆಂದೆನಲಾಡಿದ ವಾಕ್ಯವೆಂತೆನೆ ಪೇಳ್ದರೆ ೨೭

ಶ್ಲೋಕ

ನಷ್ಟೇ ಮೃತೇ ಪ್ರವ್ರಜಿತೇಕ್ಲೀಬೇಚಪತಿತೇ ಪತೌ|
ಪಂಚಸ್ವಾಪತ್ಸುನಾರೀಣಾಂ ಪತಿರನ್ಯೋ ವಿಧೀಯತೇ || ೨೮

ಅಹವೀಚಿರ್ವಿವಿಕ್ತಾಯಾಂ ಯದಿಪೂರ್ವಂವರೋ ಮೃತಃ ||
ಸಾ ಚೇದಕ್ಷತಯೋನಿಶ್ಚ ಪುನಸ್ಸಂಸ್ಕಾರಮರ್ಹತಿ || ೨೯

ಅಷ್ಟವರ್ಷಾಣ್ಯುದೀಕ್ಷೇತ ಬ್ರಾಹ್ಮಣೋಪ್ರೋಷಿತೇ ವರೇ |
ಅಪ್ರಸೂತಾ ಚ ಚತ್ವಾರಿ ಪರತ್ಯೋsನ್ಯಸ್ಸಮಾಚರೇತ್ || ೩೦

ಮಾತ್ರಾಪುತ್ರ್ಯಾಭ್‌ಯಾ ಚ ಪುತ್ರಾರ್ಥಂ ಪ್ರಾರ್ಥಿತೋ ನರಃ ||
ಪುಮಾನ್ ಋತೌಯದಿಭಜೇತ್ ಸಭವೇದ್ಬ್ರಹ್ಮಹಾ ಪುನಃ || ೩೧

ವಚನ

ಎಂದು ಭೌತಿಕರ್ ಪೇಳೆ ಕೇಲ್ದು ತನಗೆ ತಕ್ಕವಲ್ಲಭೆಯನಱಸಿ ಪಲವುಂ ದೇಶದೊಳ್ ತಿರುಗಿ ಪಡೆಯದೆ ಚಿಂತಿಸುತಿರ್ದು ತನ್ನ ತಂಗಿಯಪ್ಪ ಡಿಂಡಿಭೆಯೆಂಬ ಱಂಡೆಯಂ ಕಂಡು ಪಲವುಂತೆಱದಿನೊಡಂಬಡಿಸಿ ಮದುವೆಯಾಗಿಯಿಷ್ಟಭೋಗಕಾಮಸುಖ ಮನನುಭವಿಸುತ್ತುಮಿರೆ ಕೆಲವುಕಾಲಕ್ಕೆಯಾ ಡಿಂಡಿಭೆಗೆ ಗರ್ಭಂ ಪುಟ್ಟ ನವಮಾಸಂ ತೀವಿ ಬೆಸಲೆಯಾಗಿ ಪೆಣ್ಗೂಸಂ ಪಡೆದು ಛಾಯೆಯೆಂಬ ನಮಗ್ರಹಣಂಗೆಯ್ದು ಸಲಹುತ್ತಮಿರೆ ಕೊಡಗೂಸು ಪ್ರಾಯಕ್ಕೆ ಬೆಳೆಯೆವೆಳೆಯೆ

ಉತ್ಪಲಮಾಲೆ

ಆಕೆಯ ಲೋಚನಂ ಕುಸುಮಸಾಯಕವಾಕೆಯ ಪುರ್ಬುಕಬು೪ವಿ
ಲ್ಲಾಕೆಯ ಕುಂತಳಂ ಭ್ರಮರಸಂಕುಳವಾಕೆಯ ವಾಗ್ವಿಳಸಮುಂ
ಕೋಕಿಳನಾದವಾಕೆಯ ಮುಖಂ ಸಸಿಯೀ ಜಗಮಂ ಗೆಲಲ್ಕೆ ಸಾ
ಕೀಕೆಯ ರೂಪೆನುತ್ತೆ ಮಕರಧ್ವಜನಾಕೆಯನೆಯ್ದೆ ಪೊರ್ದುವಂ ೩೨

ವಚನ

ಅಂತಾಕೆಯ ಶೈಶವಾನಂತರಂ ತಾಯುಂ ತಂದೆಯುಂ ತೀರ್ಥಸ್ನಾನಾರ್ಥಂ ಪೋಗಲುದ್ಯುಕ್ತರಾಗಿ ಚೆನ್ನೆಯಪ್ಪ ಕನ್ಯೆಯನಿನ್ನಾರ ಸಮೀಪದೊಳಿರಿಸಿ ಪೋಪೆವೆಂದು ಚಿಂತಾಕ್ರಾಂತನಾಗಿರ್ದ ಮಾಂಡವ್ಯಂಗೆ ಡಿಂಡಿಭೆಯಿಂತೆಂದಳ್

ಕಂದ

ಪರಮೇಶ್ವರನ ಸಮೀಪದೊ
ಳಿರಿಸುವಮೀ ಸುತೆಯನೆಂದ ಡಿಂಡಿಭೆಗೆಂದಂ
ಮರುಳುತನಂ ಬೇಡಾತನ
ಪರಿಯಂ ಕೇಳೆಂದು ಪೇಳಲುದ್ಯೋಗಿಸಿದಂ ೩೩

ಲಲಿತರಗಳೆ

ಪೂರ್ವದೊಳ್ ಕಾಮಿನೀರೂಪಿನಿತ್ತಿಲ್ಲದಿರೆ
ಗೀರ್ವಾಣಪತಿ ಕಾಮತಾಪದೊಳ್ ಬೇಯುತಿರೆ
ಯೊಂದುದಿನವಜನೆ ದೇವಾರಣ್ಯದೊಳ್ ನಲಿದು
ಸಂದಮೃತರಸಭರಿತಮಪ್ಪ ಫಲಮಂ ಮೆಲಿದು
ಸ್ಮರವಿಕಾರದೆ ಕಳೆಸಡಿಲ್ದೊಕ್ಕು ನದಿಯಾಗಿ
ಪರಿಯಲದಱೊಳಗೆ ಪುಟ್ಟಿದ್ಯರು ಸತಿಮೊದಲಾಗಿ
ಮೂವತ್ತು ಮೂಱುಕೋಟಿ ಪ್ರಚುರದೇವತೆಯ
ರಾ ವಿಮಳದೇವತೆಯರಂ ಸುರಾಳಿಗೆ ಸತಿಯ
ನೀಶಂಗೆ ಕುಡಲವರ್ ಸುಖದಿನಿರುತಿರಲಿತ್ತ
ಲಾ ಸರಸಿರುಹಜಂಗೆ ಮಾಂಸದತ್ತಲ್ ಚಿತ್ತ
ವಾಗಿ ತಾಂ ಮೆಲಲು ದೂಷಿಪುದು ಜನವೆಂದಗಿದು
ಬೇಗಮಮರರ್ವೆರಸು ಮೆಲುವ ಮನಮಂ ಬಗೆದು
ನರಯಾಗ ಫಣಿಯಾಗ ಹಯಯಾಗ ಗಜಯಾಗ
ಖರಯಾಗ ಗೋಯಾಗ ಮೃಗಯಾಗ ವಜಯಾಗ
ವಾದಿಯಾದಖಿಳಯಾಗಂಗಳಂ ಬೇಗದಿಂ
ದಾದರದೆ ಸಕಳ ದಾನಂಗಳಂ ರಾಗದಿಂ
ಮಾಡಿದೊಡಭೀಷ್ಟಾರ್ಥಮಂ ನೆಱೆ ಪಡೆಗುಮೆಂದು
ರೂಢಿಯಪ್ಪಂತು ಸೂತ್ರಂಗಳಂ ತಾನಂದು
ವಿರಚಿಸಿದನಬ್ಜಜಾತಂ ಪಲವು ಛಂದದಿಂ
ಭರದಿಂದೆ ಯಾಗಮಂ ಮಾಡುವಾನಂದದಿಂ ೩೪

ವಚನ

ಮತ್ತಂ ಪೇಳ್ದ ಸೂತ್ರಂಗಳೇ ವೇದವಾಕ್ಯಮೆಂದು ಪೆಸರನಿಟ್ಟು ಸಕಳ ಜನಂಗಳ್ಗಿವಂ ಸ್ವಯಂಭುವೆಂದು ಪ್ರಸಿದ್ಧಿಯಂ ಮಾಡಿದನದೆಂತೆನೆ

ಶ್ಲೋಕ

ಗೋಸಾವಿತ್ರೀಂ ಪ್ರವಕ್ಷ್ಯಾಮಿ ಸರ್ವಪಾಪವಿನಾಶಿನೀಂ |
ದಂತಾಗ್ರೇಷು ಮರುದ್ದೇವೋ ಜಿಹ್ವಾಗ್ರೇ ಚ ಸರಸ್ವತೀ || ೩೫

ಕರ್ಣಯೋರಶ್ಚಿನೀದೇವೌ ಚಕ್ಷುಷೋಃ ಶಶಿಭಾಸ್ಕರೌ |
ಗವಾಂ ಶೃಂಗಾಗ್ರಭೋಗೋಶ್ಚ ಸುರೇಂದ್ರವಿಷ್ಣುಭೂಸ್ಥಿತಃ || ೩೬

ಮುಖೇ ಬ್ರಹ್ಮೋಹರಸಿ ಸ್ಕಂಧೋ ಲಲಾಟೇ ಚ ಮಹೇಶ್ವರಃ |
ಕಕುದೇ ಚ ಜಗತ್ಸರ್ವಂ ನಕ್ಷತ್ರಗ್ರಹತಾರಕಾಃ || ೩೭

ಋಷಯೋ ರೋಮಕೂಪೇಷು ತಪಃ ಕುವ೪ಂತಿ ಸರ್ವದಾ |
ಅಪಾನೇ ಸರ್ವತೀರ್ಥಾನಿ ಪ್ರಸ್ರವಣ್ಯಾಂ ಚ ಜಾಹ್ನ ವೀ || ೩೮

ಗೋಮುಖೇ ತು ಶ್ರಿಯೋ ದೇವೀ ರಾಮೋ ಲಾಂಗೂಲಮಾಶ್ರಿತಃ |
ಚತ್ವಾರಸ್ಸಾಗರಾಃಪೂರ್ಣಾಃ ಗವಾಂಗೇಷು ಪಯೋಧರಃ ||

ಖುರೇಷು ಜಂಬುಕೋ ದೇವಃ ಖುರಾಗ್ರೇಷು ಚ ಪನ್ನಗಾಃ |
ಜಠರೇ ಪೃಥಿವೀ ಸರ್ವಾ ಸಶೈಲವನಕಾನನಾಃ || ೪೦

ವಚನ

ಅಂತು ಗೋಶರೀರದೊಳಿವನೆಲ್ಲವನಧ್ಯಾರೋಪಿಸಿ ಕೊಲ್ವುದರ್ಕೆ ಮಾಡಿದ ಸೂತ್ರ ಮೆಂತೆನೆ

ಶ್ಲೋಕ

ಅಶ್ವಯಜ್ಞೇ ಸುರಾಪಾನೇ ಗೋಶವೇ ಗವ್ಯಸಂಗಮೇ |
ಗವಾಮಯೇ ಪಶುಂ ಹನ್ಯಾತ್ ರಾಜಸೂಯೇ ಚ ಭೂಭುಜಂ || ೪೧

ಬ್ರಹ್ಮೇಬ್ರಾಹ್ಮಣಂ ಜುಹು ವೈಶ್ಯೇ ಚ ವರವೈಶ್ಯಜಂ |
ತಪಸೇಜುಹು ಶೂದ್ರಾಣ ಜಪಂ ಮಂತ್ರಂ ಕ್ರಮಂ ವಿದುಃ || ೪೨

ವಚನ

ಅದಲ್ಲದೆಯುಂ

ಶ್ಲೋಕ

ಬ್ರಾಹ್ಮಣೇ ಮೃಗಶಾಬೇ ಚ ಪ್ರತ್ಯಕ್ಷಮೃತದರ್ಶನೇ |
ತತ್‌ಕ್ಷಣಂ ಖಾದಯೇತ್ಪುಣ್ಯಂ ತ್ಯಕ್ತಂ ಚೇನ್ನರಕಂ ವ್ರಜೇತ್ || ೪೩

ವಚನ

ಎಂದಿಂತನೇಕ ತೆಱದ ಸೂತ್ರಂಗಳಂ ಮಾಡಿ ಯಾಗೋದ್ಯೋಗಮಂ ಪ್ರಕಟಿಸಿ ಸಕಲ ಸುರಸಮಿತಿಯಂ ಕರೆಯಲ್ಪಟ್ಟಿದೊಡೆಲ್ಲರುಂ ತಮ್ಮ ತಮ್ಮ ಕಂತೆಯರ್ವೇರಸನೇಕಭವಂಗಳಿಂ ಬಂದು ಸರೋಜಸಂಭವನಂ ಕಂಡು ಯಾಗಮಂಟಪದೊಳಜಂಬೆರಸು ಒಡ್ಡೋಲಗಂಗೊಟ್ಟು ಕುಳ್ಳಿರಲ್ಲಲಿಗೆ ಸತಿಸಮೇತಂ ಈಶ್ವರಂ ಸಕಲಶೃಂಗಾರಂಬೆರಸು ನೃತ್ಯಮನಾಡುತುಂ ಅತ್ಯುತ್ಸಾಹದಿಂ ಗಗನಮಾರ್ಗದಿಂ ಬೇಗದಿಂ ಬರುತಿರ್ಪಾಗಳುಂ

ಚಂಪಕಮಾಲೆ

ಸತಿಯ ಲಲಾಟದೊಳ್ ಕದಪಿನೊಳ್ ಕೊರಳೊಳ್ ಕುಚಯಗ್ಮದೊಳ್‌ನಖ
ಕ್ಷತಮಿರೆ ದೇವಕೋಟಿಗಳಭೀಕ್ಷಿಸಿ ನಕ್ಕೊಡೆ ಧಾತೃ ಕಂಡು ಲ
ಜ್ಜಿತಮನನಾಗಿಯಂತವರನಿರ್ವರುಮಂ ತಗುಳ್ವೆಂದುಪಾಯಮಂ
ಶತದಳಸಂಭವಂ ನೆನೆದು ಮಾಡಿದನಲ್ಲಿಗೆ ತಕ್ಕ ಸೂತ್ರಮಂ ೪೪

ವಚನ

ಮತ್ತಮದೆಂತೆನೆ

ಶ್ಲೋಕ

ವಿದ್ಯಾವಿತ್ತವಿಹೀನಾಯ ಶೂದ್ರಕರ್ಮೋಪಜೀವಿನಃ |
ತೇ ಸಂತಿ ದೋಷ ಕಾಃ ಶ್ರಾದ್ಧೇ ಅಂಗಹೀನಗುಣಾನ್ವಿತಾಃ || ೪೫

ವಚನ

ಎಂದಳಿಯನಂ ಮಗಳುಮನವಜ್ಞೆಗೆಯ್ದು ಪೋಗಲ್ವೇಳೆ ಕೇಳ್ದು ಸುತೆ ಕೋಪಮಂ ತಾಳ್ದು ಸಭೆಯಂ ಪೊಕ್ಕು ತನ್ನ ತಂದೆಯಪ್ಪರವಿಂದಸಭಂವನ ಮೇಲೆ ನಾಲಗೆಯಂ ಕಿಳ್ತಿಕ್ಕಿ ಹೋಮಕುಂಡದೊಳ್ ಬಿಳ್ದುರಿದು ಭಸ್ಮಮಾಗೆ ಸಾವಂ ಶೂಲಿ ಕಂಡು