. ಕವಿಕಾಲ ವಿಚಾರ

ಕನ್ನಡ ಚಂಪೂಸಾಹಿತ್ಯ ಜೈನಕವಿಗಳಿಂದ ಪ್ರಾರಂಭವಾಗಿದೆ ಎನ್ನಬಹುದು. ಪಂಪ, ಪೊನ್ನ, ರನ್ನ, ನಾಗಚಂದ್ರ ಮೊದಲಾದ ಜೈನಕವಿಗಳು ಧಾರ್ಮಿಕ ಚಂಪೂ ಕಾವ್ಯಗಳನ್ನು ಬರೆದು ಜಿನಸಮಯ ದೀಪಕರು ಎನಿಸಿಕೊಂಡಿದ್ದಾರೆ. ಇವರ ಕಾಲ ೧೦ – ೧೧ನೆಯ ಶತಮಾನ ಇವರ ಕಾವ್ಯಗಳಲ್ಲಿ ಸ್ಪಧರ್ಮ ಪ್ರತಿಪಾದನೆಯನ್ನು ವಿವರವಾಗಿ ಕಾಣುತ್ತೇವೆ. ಆದರೆ ಅನ್ಯಮತದ ವಿಡಂಬನೆ ಕಾಣುವುದಿಲ್ಲ. ಏಳನೆಯ ಶತಮಾನದಿಂದಲೂ ಪ್ರಾಕೃತ, ಅಪಭ್ರಂಶ, ಸಂಸ್ಕೃತ ಜೈನಧಾರ್ಮಿಕ ಕಾವ್ಯಗಳಲ್ಲಿ ವೈದಿಕಧರ್ಮದ ಅವಹೇಳನ ಕಂಡುಬರುತ್ತದೆ. ಮೇಲಿನ ಕನ್ನಡದ ಜೈನಕವಿಗಳು ಪ್ರಾಕೃತ, ಅಪಭ್ರಂಶ, ಸಂಸ್ಕೃತ ಧಾರ್ಮಿಕ ಕಾವ್ಯಗಳನ್ನು ಬಲ್ಲವರಾಗಿದ್ದರೂ ಅನ್ಯಧರ್ಮ ವಿಡಂಬನೆಗೆ ತೊಡಗದಿದ್ದುದು ಅವರ ಮನೋವೈಶಾಲ್ಯಕ್ಕೆ ನಿದರ್ಶನವಾಗಿದೆ.

ಕರ್ನಾಟಕ ದೇಶದಲ್ಲಿ ೧೨ – ೧೩ನೆಯ ಶತಮಾನಗಳು ಮತೀಯ ಆಂದೋಲನವನ್ನುಂಟು ಮಾಡಿದವು. ರಾಮಾನುಜಾಚಾರ್ಯರು, ಬಸವಣ್ಣನವರು, ಮಧ್ವಾಚಾರ್ಯರು ಈ ಕಾಲದಲ್ಲಿ ಉದಯಿಸಿ ವೈದಿಕಧರ್ಮವನ್ನು ಎತ್ತಿಹಿಡಿದು ಬೌದ್ಧ ಜೈನಧರ್ಮಗಳನ್ನು ಖಂಡಿಸುತ್ತ ಬಂದರು. ಇದರಿಂದ ಜೈನಧರ್ಮಕ್ಕೆ ಬಲವಾದ ಏಟು ಬಿದ್ದಿತು. ೧೧೮೪ನೆಯ ತಾಳಿಕೋಟೆಯ ಒಂದು ಶಾಸನದಲ್ಲಿ ಜೈನ ಧರ್ಮದ ಅವಹೇಳನವನ್ನು ಕಾಣುತ್ತೇವೆ. ಅಬ್ಬಲೂರುಶಾಸನ (೧೨೦೦) ದಲ್ಲಿಯಂತೂ ಜೈನ, ವೀರಶೈವ ಧರ್ಮಗಳ ಸಂಘರ್ಷಣೆಯ ಚಿತ್ರವನ್ನು ಕಾಣುತ್ತೇವೆ. ಕನ್ನಡ ಕವಿಗಳಾದ ನಯಸೇನ, ಬ್ರಹ್ಮಶಿವ, ವೃತ್ತವಿಲಾಸರು ತಮ್ಮ ಧರ್ಮದ ಹಿರಿಮೆಯನ್ನು ತೋರಿಸಲು, ಅನ್ಯಧರ್ಮವನ್ನು ಕಟುವಾಗಿ ವಿಡಂಬನಾತ್ಮಕವಾಗಿ ಖಂಡಿಸುತ್ತ ಬಂದರು.

ನಯಸೇನನ ಧರ್ಮಾಮೃತವು ಜನಸಾಮಾನ್ಯರಿಗೆ ಬರೆದ ಜೈನಪುರಾಣವೆಂದು ಹೇಳುವುದುಂಟು. ಇದರಲ್ಲಿ ಅನ್ಯಮತದ ದೂಷಣೆಗಿಂತ ಸ್ವಮತದ ಪ್ರತಿಷ್ಠಾಪನೆಯೇ ಹೆಚ್ಚಾಗಿ ಕಾಣಬರುತ್ತದೆ. ಬ್ರಹ್ಮಶಿವ ‘ಸಮಯ ಪರೀಕ್ಷೆ’ ವೃತ್ತವಿಲಾಸನ ‘ಧರ್ಮ ಪರೀಕ್ಷೆ’ ಗಳೆರಡರಲ್ಲಿಯೂ ಸ್ವಧರ್ಮದ ಶ್ರೇಷ್ಠತೆಗಿಂತಲೂ ಅನ್ಯಧರ್ಮಗಳ ಖಂಡನೆ ಅಧಿಕವಾಗಿ ತೋರಿಬರುತ್ತದೆ. ಧರ್ಮಪರೀಕ್ಷೆಯಲ್ಲದೆ ‘ಶಾಸ್ತ್ರಸಾರ’

[1]ವೆಂಬ ಇನ್ನೊಂದು ಕೃತಿಯನ್ನು ವೃತ್ತವಿಲಾಸನು ಬರೆದಿರುವುದಾಗಿ ತಿಳಿದು ಬರುತ್ತದೆ. ಇವೆರಡು ಅಪ್ರಕಟಿತ ಕೃತಿಗಳು. ಇವುಗಳ ಕೆಲವು ಪದ್ಯಗಳು ಶ್ರೀ ವುರ್ತ್‌ರ ಪ್ರಾಕ್ಕಾವ್ಯಮಾಲಿಕೆಯಲ್ಲಿ ಉದ್ಧೃತವಾಗಿವೆ. ‘ಶಾಸ್ತ್ರಸಾರ’ದ ಪ್ರತಿ ಇನ್ನು ಎಲ್ಲಿಯೂ ಸಿಕ್ಕಿಲ್ಲ. ಧರ್ಮಪರೀಕ್ಷೆಯಲ್ಲಿಯೂ ಇದರ ಬಗ್ಗೆ ಪ್ರಸ್ತಾಪವಿಲ್ಲ. ಧರ್ಮಪರೀಕ್ಷೆಯ ಪ್ರತಿಗಳೇನೋ ಬೇಕಾದಷ್ಟು ಸಿಕ್ಕುತ್ತವೆ. ವೃತ್ತವಿಲಾಸನೇ ಈ ಕಾವ್ಯವನ್ನು ಬರೆದಿದ್ದಾನೆನ್ನುವುದಕ್ಕೆ ಈ ಗ್ರಂಥದ ಮೊದಲನೆಯ ಆಶ್ವಾಸದ ಪದ್ಯ ‘ಶಾರದೆ ಬಂದು ನರ್ತಿಸುಗೆ ವೃತ್ತವಿಲಾಸನ ವಕ್ತ್ರಪದ್ಮದೊಳ್’ (೧ – ೩೪) ಎಂಬ ಭಾಗದಿಂದಲೂ ಆಶ್ವಾಸಾಂತ್ಯ ಗದ್ಯಗಳ ‘ಇದು ವಿನಮದಮರಮಕುಟತಟಘಟಿತ ಮಣಿಗಣಮರೀಚಿಮಂಜರೀಪುಂಜರಂಜಿತ ಪಾದಾರವಿಂದ ಭಗವದರ್ಹತ್ಪರಮೇಶ್ವರ ವದನವಿನಿರ್ಗತಶ್ರುತಾಂಭೋಧಿವರ್ಧನ ಸುಧಾಕರಂ ಶ್ರೀಮದಮರಕೀರ್ತಿರಾವುಳವ್ರತೀಶ್ವರಚರಣಸರಸೀರುಹಷಟ್ಟದಂ ವೃತ್ತವಿಲಾಸ ವಿರಚಿತಮಪ್ಪ ಧರ್ಮಪರೀಕ್ಷೆಯೊಳ್’ ಎಂಬ ಮಾತುಗಳಿಂದಲೂ ಸ್ಪಷ್ಟವಾಗಿ ತಿಳಿದು ಬರುತ್ತದೆ. ಇವನು ಜೈನ ಕವಿಯೆಂಬುದಕ್ಕೆ ‘ಜಿನ ಸಮಯವಾರ್ಧಿವರ್ಧನ ಚಂದ್ರಂ’ (೬ – ೧೪), ‘ಜಿನಚರಣ ಕಮಲಷಟ್ಟದಂ’ (೯ – ೭೩) ‘ಜಿನಪದಸೇವಕ’ (೧೦ – ೯೮) ಎಂಬ ಉಕ್ತಿಗಳು ಪುಷ್ಟಿ ಕೊಡುತ್ತವೆ.

ವೃತ್ತವಿಲಾಸನು ಧರ್ಮಪರೀಕ್ಷೆಯಲ್ಲಿ ಸ್ವಂತ ವಿಷಯವನ್ನೇನೂ ಹೇಳಿಕೊಂಡಿಲ್ಲ. ಪೂರ್ವಕವಿಗಳಾರನ್ನೂ ಇದರಲ್ಲಿ ಸ್ಮರಿಸಿಲ್ಲ. ಮುಂದಿನ ಜೈನ ಕವಿಗಳಾರೂ ಇವನನ್ನು ಸ್ಮರಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇವನ ಈ ಕಾವ್ಯದಲ್ಲಿ, ಇವನು ಯಾವ ಪ್ರದೇಶದವನು, ಯಾವ ಕಾಲದವನೆಂಬ ಪ್ರಸ್ತಾಪವೂ ಇಲ್ಲ. ಹೀಗಾಗಿ ಇವನ ಕಾಲ ನಿರ್ಣಯಕ್ಕೆ ಖಚಿತಪ್ರಮಾಣಗಳಾವುವೂ ದೊರೆಯುವುದಿಲ್ಲ. ಧರ್ಮಪರೀಕ್ಷೆಯ ಎರಡು ಓಲೆಗರಿ ಪ್ರತಿಗಳಲ್ಲಿ ಪ್ರತಿಮಾಡಿದ ಕಾಲ ಉಕ್ತವಾಗಿದೆ. ಇದರಿಂದ ಕವಿಯ ಕಾಲನಿರ್ಣಯಕ್ಕೆ ಸಹಾಯವಾಗುತ್ತದೆ. ಇದಲ್ಲದೆ ಕವಿಯು ಕೆಲವು ಜೈನ ಗುರುಗಳನ್ನು ಸ್ತುತಿಸಿದ್ದಾನೆ. ಇವುಗಳ ಆಧಾರದಿಂದಲೂ ಕವಿಯ ಕಾಲವನ್ನು ಊಹಿಸಲು ಅವಕಾಶವಿದೆ.

ವೃತ್ತವಿಲಾಸನ ಕಾಲದ ಬಗ್ಗೆ ಹಲವು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ರೆ. ಕಿಟಲ್ ಅವರು ವೀರಬಲ್ಲಾಳನ ಕಾಲದಲ್ಲಿ (೧೧೯೩ – ೧೧೯೯) ವೃತ್ತವಿಲಾಸನು ‘ಶಾಸ್ತ್ರಸಾರ’, ‘ಧರ್ಮಪರೀಕ್ಷೆ’ ಎಂಬ ಎರಡು ಗ್ರಂಥಗಳನ್ನು ಬರೆದನೆಂದೂ, ಲೂಯಿಸ್ ರೈಸರು ‘Vrithavilasa A Jaina who was the author of Sastrasara and of Dharma Pariskshe. His date is quite unknown’ ಎಂದು ಹೇಳಿದ್ದಾರೆ. ಇ.ಪಿ.ರೈಸರು ಇವನ ಕಾಲವನ್ನು ಸು.೧೧೬೦ ಎಂದೂ, ಕೆ.ಜಿ.ಪಾಠಕರು ಇವನ ಕಾಲವನ್ನು ೧೩ನೆಯ ಶತಮಾನವೆಂದೂ ತಿಳಿಸಿದ್ದಾರೆ. ದಿ. ಆರ್. ನರಸಿಂಹಾಚಾರ್ಯರು ಕವಿಯು ತಿಳಿಸಿದ ಗುರುಪರಂಪರೆಯ ಆಧಾರದಿಂದ ಇವನ ಕಾಲವನ್ನು ೧೧೬೦ ಎಂದು ಸೂಚಿಸಿದ್ದರು. ಡಾ. ಎ. ವೆಂಕಟಸುಬ್ಬಯ್ಯನವರು ವೃತ್ತವಿಲಾಸನ ಕಾಲದ ಬಗ್ಗೆ ತಮ್ಮ ಗ್ರಂಥದಲ್ಲಿ ವಿವರವಾಗಿ ಚರ್ಚಿಸಿ, ಆರ್. ನರಸಿಂಹಾಚಾರ್ಯರ ತಪ್ಪು ಗ್ರಹಿಕೆಯನ್ನು ಎತ್ತಿ ತೋರಿಸಿದ್ದಾರೆ.[2] ಕವಿಚರಿತೆಕಾರರು ಈ ತಪ್ಪುಗ್ರಹಿಕೆಯನ್ನು ಅನಂತರ ಒಪ್ಪಿಕೊಂಡು ಈ ಕವಿಯ ಕಾಲವನ್ನು ೧೩೬೦ ಎಂದು ಸೂಚಿಸಿದ್ದಾರೆ. ಡಾ. ರಂ. ಶ್ರೀ ಮುಗಳಿಯವರು ಕೂಡ ಕವಿಯ ಕಾಲವನ್ನು ೧೪ನೆಯ ಶತಮಾನವೆಂದು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಎರಡು ಓಲೆಗರಿಗಳ ಬಗ್ಗೆ ಪ್ರಸ್ತಾಪ ಮಾಡಿದೆಯಷ್ಟೆ. ಒಂದರ ಕಾಲ ಕ್ರಿ.ಶ. ೧೪೨೦ ಎಂದೂ ಮತ್ತೊಂದರ ಕಾಲ ೧೪೦೨ ಎಂದೂ ಇದೆ. ಎರಡೂ ಪ್ರತಿಗಳು ಕವಿಯ ಹತ್ತಿರ ಕಾಲದವು. ಕವಿಯ ಗುರುವಾದ ಅಮರಕೀರ್ತಿಯ ಗುರು, ಧರ್ಮಭೂಷಣನೆಂಬ ಜೈನಗುರುವಿನ ಬಗ್ಗೆ (೧೩೭೩) ಎಂದು ಶ್ರವಣಬೆಳ್ಗೊಳದ ೨೭೪ನೆಯ ಶಾಸನದಲ್ಲಿ ಉಕ್ತವಾಗಿದೆ. ಪ್ರೊ. ಡಿ.ಎಲ್.ಎನ್. ಅವರು ಕವಿಚರಿತೆಯ ಪರಿಶೋಧಿತ ಮುದ್ರಣದಲ್ಲಿ ಈ ಶಾಸನವನ್ನೇ ಆಧಾರವಾಗಿಟ್ಟುಕೊಂಡು ಕವಿಯಕಾಲ ೧೩೬೦ ಎಂದು ಊಹಿಸಿದ್ದಾರೆ. ಇದಕ್ಕೆ ಓಲೆಗರಿ ಪ್ರತಿಗಳೂ ಕವಿಯ ಹತ್ತಿರ ಕಾಲದವು ಎಂದು ಪುಷ್ಟಿಕೊಡುತ್ತವೆ. ೧೩೯೫ನೆಯ ಒಂದು ಶಾಸನ ಹಂಪೆಯ ಮ್ಯುಜಿಯಮ್ಮಿನಲ್ಲಿ ದೊರೆಯುತ್ತದೆ. ಅಲ್ಲಿಯೂ ಧರ್ಮಭೂಷಣನೆಂಬ ಒಬ್ಬ ಜೈನಗುರುವೂ ಅವನ ಶಿಷ್ಯನಾದ ಅಮರಕೀರ್ತಿಯ ಹೆಸರೂ ಹೇಳಲಾಗಿದೆ. ಈ ಅಮರಕೀರ್ತಿಯೇ ಕವಿಯ ಗುರು. ಇದಲ್ಲದೆ ಕವಿಯು ಬಲತ್ಕಾರಗಣದ ಗುರುಪರಂಪರೆಯನ್ನು ತಿಳಿಸಿದ್ದಾನೆ. ನಗರದ ೪೬ನೆಯ ಶಾಸನದಲ್ಲಿಯೂ, ಶ್ರವಣಬೆಳ್ಗೊಳದ ೨೭೪ನೆಯ (೧೩೭೩) ಬಲತ್ಕಾರಗಣದ ಗುರುಪರಪಂಪರೆಯನ್ನು ತೋರಿಸಿರುವಲ್ಲಿಯೂ ಒಂದೇ ಹೋಲಿಕೆಯಿದೆ. ಮೂರು ಉಲ್ಲೇಖಗಳಲ್ಲಿ ಕವಿಯ ಗುರುವಾದ ಅಮರಕೀರ್ತಿಯ ಹೆಸರು ಇದೆ. ಆದುದರಿಂದ ಈ ಕವಿಯ ಕಾಲವನ್ನು ಹದಿನಾಲ್ಕನೆಯ ಶತಮಾನದ ಉತ್ತರಾರ್ಧವೆಂದು ಹೇಳಲು ಸಾಧ್ಯವಿದೆ.

. ಧರ್ಮಪರೀಕ್ಷೆಯ ಕಥಾವಸ್ತುವಿನ ವಿಕಾಸ

ಧರ್ಮಪರೀಕ್ಷೆಯ ಕಥಾವಸ್ತು ತುಂಬಾ ಪುರಾತನವಾದುದು. ಜಯರಾಮನೆಂಬ ಕವಿ ಪ್ರಾಕೃತ ಭಾಷೆಯಲ್ಲಿ ‘ಧರ್ಮಪರೀಕ್ಷೆಯನ್ನು’ ರಚಿಸಿದನೆಂದು ಹರಿಷೇಣನ ೯೮೮ ಧರ್ಮಪರೀಕ್ಷೆಯಿಂದ ಗೊತ್ತಾಗುತ್ತದೆ. ಜಯರಾಮನ ಗ್ರಂಥ ಇನ್ನೂ ಸಿಕ್ಕಿಲ್ಲ. ಕಾಲಗರ್ಭದಲ್ಲಿ ಅಡಗಿದೆ. ಆದರೆ ಹರಿಷೇಣ, ತಾನು ಜಯರಾಮನನ್ನು ಅನುಸರಿಸಿ, ಅಪಭ್ರಂಶ ಭಾಷೆಯಲ್ಲಿ ತನ್ನ ಗ್ರಂಥವನ್ನು ಬರೆದಿರುವುದಾಗಿ ನಿಷ್ಪಕ್ಷಪಾತದಿಂದ ಹೇಳಿಕೊಂಡಿದ್ದಾನೆ. ಜಯರಾಮನು, ಹರಿಷೇಣನಿಗಿಂತ ಮೊದಲಿಗನೆಂಬುದು ಸ್ಪಷ್ಟ. ಹರಿಷೇಣನ ಅನಂತರ ಅಮಿತಗತಿ ೧೦೧೪ ಸಂಸ್ಕೃತದಲ್ಲಿ ಧರ್ಮಪರೀಕ್ಷೆಯನ್ನು ಬರೆದಿದ್ದಾನೆ. ಅಮಿತಗತಿಯ ಧರ್ಮಪರೀಕ್ಷೆಯು ಕನ್ನಡ, ಹಿಂದಿ, ಗುಜರಾಥೀ, ಮರಾಠಿ, ಜರ್ಮನ್, ಮೊದಲಾದ ಭಾಷೆಗಳಿಗೆ ಆಧಾರವಾಗಿದೆ. ಅಮಿತಗತಿಗೆ ಜಯರಾಮ, ಹರಿಷೇಣರ ಧರ್ಮಪರೀಕ್ಷೆಯು ಸಹಾಯವಾಗಿದ್ದರೂ ಆಗಿರಬಹುದು. ಅಮಿತಗತಿಯು ಇವರಿಬ್ಬರ ಹೆಸರನ್ನು ತನ್ನ ಗ್ರಂಥದಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ ಹರಿಷೇಣ ಅಮಿತಗತಿಯರ ‘ಧರ್ಮಪರೀಕ್ಷೆ’ ಯಲ್ಲಿ ಪರಸ್ಪರ ತುಂಬಾ ಹೋಲಿಕೆಯಿದೆ. ಹರಿಷೇಣನಿಗೆ ಜಯರಾಮನಿಂದ ವಿಷಯ ದೊರೆತಿದೆ. ಹರಿಷೇಣನ ಕಾವ್ಯದಲ್ಲಿ ಬರುವ ೧೪ – ೧೫ ಶ್ಲೋಕಗಳು ಅಮಿತಗತಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಸಿಕ್ಕುತ್ತವೆ. ವೃತ್ತ ವಿಲಾಸನ ಕನ್ನಡ ಧರ್ಮಪರೀಕ್ಷೆಗೆ ಅಮಿತಗತಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ಅವಿಗೆ ಹರಿಷೇಣ ಜಯರಾಮರ ಗ್ರಂಥಗಳು ನೋಡಲು ಸಿಕ್ಕಿರಬಹುದು. ಆದರೆ ‘ಮುನ್ನಿನ ಚಾರು ಸಂಸ್ಕೃತದ ಧರ್ಮಪರೀಕ್ಷೆಯನೋದಬಲ್ಲನು ಕನ್ನಡದಿಂದಲರ್ಥವಿಸಬಲ್ಲವನಿಲ್ಲದೊಡಾಗದೆಂದದಂ ಸನ್ನುತಮಾಗಿಯೆಲ್ಲರಱವಂತಿರೆ ಚಂಪುವೆನಿಪ್ಪ ಬಂಧದಿಂ ಕನ್ನಡದಿಂದೆ ಪೇಳ್ದೆನ್’ ಎಂಬ ಮಾತಿನಿಂದ ಅಮಿತಗತಿಯ ಧರ್ಮಪರೀಕ್ಷೆಯೇ ಇವನಿಗೆ ಆಧಾರವಾಗಿರಬಹುದು. ಅಲ್ಲದೆ ಮೇಲೆ ಹೇಳಿದ ೧೪ – ೧೫ ಶ್ಲೋಕಗಳು ವೃತ್ತ ವಿಲಾಸನಲ್ಲಿ ಯಥಾವತ್ತಾಗಿ ದೊರೆಯುತ್ತವೆ. ಜಯರಾಮನಿಗಿಂತ ಮುಂದೆ ಬೇರೊಂದು ಧರ್ಮಪರೀಕ್ಷೆ ಇತ್ತೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ ಜಿನದಾಸಗಣಿಯ ಧೂರ್ತಾಖ್ಯಾನ ೬೭೭ ಹರಿಭದ್ರನ ಧೂರ್ತಾಖ್ಯಾನ ೭೭೯ ಎಂಬ ಎರಡು ಕೃತಿಗಳು ಪ್ರಾಕೃತ ಭಾಷೆಯಲ್ಲಿ ದೊರೆಯುತ್ತವೆ. ಈ ಕಾವ್ಯಗಳಲ್ಲಿ ಬರುವ ಕಥೆಗಳು ಧರ್ಮಪರೀಕ್ಷೆಯಲ್ಲಿ ಬರುವ ಕಥೆಗಳನ್ನು ತುಂಬಾ ಹೋಲುತ್ತವೆ. ಧೂರ್ತಾಖ್ಯಾನಗಳಲ್ಲಿ ಬರುವ ಧೂರ್ತರು ತಮ್ಮ ಸ್ವಂತದ ಅಸಂಬದ್ಧವಾದ ಅನುಭವವನ್ನು ಒಬ್ಬೊಬ್ಬರಾಗಿ ಹೇಳುತ್ತ, ಅದಕ್ಕೆ ಅನುಗುಣವಾದ ಉದಾಹರಣೆಗಳನ್ನು ಪುರಾಣ, ರಾಮಾಯಣ, ಭಾರತ ಗ್ರಂಥಗಳಿಂದ ಕೊಡುತ್ತ ಜೈನದರ್ಶನಸಿದ್ಧಿಯನ್ನು ಸಾಧಿಸಿದ್ದಾರೆ. ಧೂರ್ತಾಖ್ಯಾನ ಧರ್ಮಪರೀಕ್ಷೆಯ ಗುರು ಹಾಗೂ ಉದ್ದೇಶ ಒಂದೇ ಆದರೂ ಕೃತಿಗಳ ರೀತಿರಚನೆಯಲ್ಲಿ ವ್ಯತ್ಯಾಸವಿದೆ. ಧರ್ಮಪರೀಕ್ಷೆಯಲ್ಲಿ ಬರುವ ಪಾತ್ರಗಳು, ಮುಖ್ಯಕಥೆ, ಸಂದರ್ಭ, ಕಥಾರಚನೆ ಹಾಗೂ ಅದರ ಸಂಬಂಧ ಧೂರ್ತಾಖ್ಯಾನಕ್ಕಿಂತ ವ್ಯತ್ಯಾಸವಿದೆ. ಆದರೆ ಧೂರ್ತಾಖ್ಯಾನದಲ್ಲಿರುವ ಆಶ್ಚರ್ಯಕರವಾದ ಕೆಲವು ಕಥೆಗಳನ್ನು ಧರ್ಮಪರೀಕ್ಷೆಯಲ್ಲಿಯೂ ಕಾಣುತ್ತೇವೆ. ಅಲ್ಲದೆ ಎರಡೂ ಕಾವ್ಯಗಳಲ್ಲಿ ಬರುವ ಪುರಾಣೇತಿಹಾಸ ಕಥೆಗಳನ್ನು ಉದಾಹರಣೆಯಾಗಿ ಕೊಡುವುದು ಒಂದೇ ಬಗೆಯಾಗಿದೆ. ಈ ರೀತಿಯಾಗಿ ಧರ್ಮಪರೀಕ್ಷೆಯಲ್ಲಿ ಬರುವ ಕೆಲವು ಕಥೆಗಳ ಆಕರ, ಧೂರ್ತಾಖ್ಯಾನವಾಗಿದೆ. ಆದುದರಿಂದ ಬಹುಶಃ ಜಯರಾಮನು ಜಿನದಾಸಗಣಿ, ಹರಿಭದ್ರರ ಧೂರ್ತಾಖ್ಯಾನವನ್ನು ಬಳಸಿಕೊಂಡಿರಬೇಕೆಂದು ತೋರುತ್ತದೆ.

. ಕಥಾಸಾರ

ಭರತಕ್ಷೇತ್ರದ ದಕ್ಷಿಣದಲ್ಲಿಯ ವೈಜಯಂತಿಯೆಂಬ ಪಟ್ಟದ ದೊರೆ ಜಿತರಿಪು. ಅವನ ಮಗ ಮನೋವೇಗ. ಇವನ ಸ್ನೇಹಿತ ಪವನವೇಗ ಇವನು ವಿಜಯಪುರದ ರಾಜನಾದ ಪ್ರಭಾಶಂಖನ ಮಗ. ಇವರು ವಿದ್ಯಾಧರರು. ಇಬ್ಬರೂ ಪುಷ್ಪದಂತನೆಂಬ ಉಪಾಧ್ಯಾಯರಲ್ಲಿ ಓದುತ್ತ, ಸಕಲ ಶಾಸ್ತ್ರವಿದ್ಯೆಗಳಲ್ಲಿ ವಿಚಕ್ಷಣರಾಗಿದ್ದಾರೆ. ಮನೋವೇಗನಿಗೆ ಸಮ್ಯಕ್ ಜ್ಞಾನ ಅಪ್ಪಣೆಯಂತೆ, ಇಬ್ಬರೂ ಸ್ನೇಹಿತರು ಪಾಟಲೀಪುರಕ್ಕೆ ಹೋಗಿ ಬ್ರಹ್ಮ ಸಭೆಯಲ್ಲಿದ್ದ ಭೇರಿಯನ್ನು ಹೊಡೆದು ಅಲ್ಲಿದ್ದ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲಿಯ ಶಾಸ್ತ್ರಜ್ಞರಾದ ವಿಪ್ರತು ಬಂದು ‘ಪಂಡಿತರಾದವರುವಾದಾರ್ಥವಾಗಿ ಬಂದು ಭೇರಿಯನ್ನು ಬಾರಿಸಿ ವಾದದಲ್ಲಿ ಗೆದ್ದವರು ಮಾತ್ರ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಪದ್ಧತಿಯಿದೆ. ನೀವು ಯಾವ ಶಾಸ್ತ್ರವನ್ನು ಬಲ್ಲಿರಿ!’ ಎಂದು ಕೇಳುತ್ತಾರೆ. ಆಗ ಆ ವಿದ್ಯಾಧರರು ನಾವು ಯಾವ ಶಾಸ್ತ್ರವನ್ನೂ ಅರಿಯೆವು, ಕುಳಿತುಕೊಳ್ಳುವ ಸ್ಥಳವೆಂದು ಕುಳಿತುಕೊಂಡೆವು’ ಎಂದು ಹೇಳಿ ಸಿಂಹಾಸನದಿಂದ ಇಳಿದು ಕಥೆಗಳನ್ನು ಹೇಳಿ ವೈದಿಕಧರ್ಮವನ್ನು ಖಂಡಿಸಿ ಜಯಪತ್ರಗಳನ್ನು ಪಡೆದುಕೊಂಡು ಹೋಗುತ್ತಾರೆ. ಇದು ನಿತ್ಯವೂ ನಡೆಯುತ್ತದೆ. ಬ್ರಹ್ಮ ಸಭೆಗೆ ಎಂಟು ದ್ವಾರಗಳಿವೆ. ಒಂದೊಂದು ದ್ವಾರದ ಮೂಲಕ, ಎಂಟು ದಿನಗಳವರೆಗೂ, ಇಬ್ಬರೂ ವಿವಿಧ ವೇಷಧಾರಿಗಳಾಗಿ ಬ್ರಹ್ಮ ಸಭೆಗೆ ಬರುತ್ತಾರೆ. ಬಂದ ಕೂಡಲೆ ಭೇರಿಯನ್ನು ಹೊಡೆದು, ಸಿಂಹಾಸನದಲ್ಲಿ ಕುಳಿತುಕೊಳ್ಳುವುದು ನಿತ್ಯದ ರೂಢಿ. ಅನಂತರ ನಿತ್ಯವೂ ಸ್ವಂತದ ಕಥೆಗಳನ್ನು ಹೇಳುವುದಕ್ಕಿಂತ ಮೊದಲು ಎರಡೋ ಮೂರೋ ಮೂರ್ಖರ ಅಥವಾ ಮೂಢರ ಕಥೆಗಳನ್ನು ಹೇಳುವುದು ವಾಡಿಕೆ. ಇವುಗಳನ್ನು ಸಮರ್ಥಿಸಿಕೊಳ್ಳಲು, ಪುರಾಣಗಳಲ್ಲಿಯ ಹಲವಾರು ಕಥೆಗಳನ್ನು ಎತ್ತಿಕೊಂಡು ಅವುಗಳಲ್ಲಿಯ ದೋಷಗಳನ್ನು ವ್ಯಂಗ್ಯೋಕ್ತಿಗಳಿಂದ ತೋರಿಸಲಾಗುತ್ತದೆ. ಈ ಕಥೆಗಳನ್ನು ಹೇಳುವುದು, ವಿಪ್ರರ ಜೊತೆಯಲ್ಲಿ ವಾದ ಮಾಡಿ, ಅವರೆಲ್ಲರನ್ನು ಸೋಲಿಸಿ, ಜಯಪತ್ರವನ್ನು ಪಡೆಯುವುದೆಲ್ಲವೂ ಮನೋವೇಗನ ಕಾರ್ಯ ಪವನವೇಗ, ವಾಚಕರ ಪರವಾಗಿ ಪ್ರೇಕ್ಷಕನಾಗಿ ನಿಲ್ಲುತ್ತಾನೆ.

ಮೊದಲನೆಯ ದಿವಸ ಮನೋವೇಗ ಪವನವೇಗರು ವಸ್ತ್ರಾಭರಣ ಅಲಂಕಾರ ಭೂಷಿತರಾಗಿ, ತಲೆಯ ಮೇಲೆ ಹುಲ್ಲು ಸೌದೆಯನ್ನು ಹೊತ್ತುಕೊಂಡು ಪಾಟಲೀಪುರಕ್ಕೇ ಬರುತ್ತಾರೆ. ವಸ್ತ್ರಾಭರಣಭೂಷಿತರಾದವರು ಹುಲ್ಲುಸೌದೆಯನ್ನು ಮಾರುವುದೆಂದರೆ ನೀಚಾಚಾರದಿಂದ ಬಾಳಿದ ಹಾಗೆ ಅಲ್ಲವೆ? ಎಂಬುದು ವಿಪ್ರರ ಪ್ರಶ್ನೆ. ಆಗ ಮನೋವೇಗನು ಎರಡು ಮೂಢರ ಕಥೆಗಳನ್ನು ಹೇಳಿ, ನಿಮ್ಮ ದೇವರು ಮತ್ಸ್ಯ, ಕೂರ್ಮ, ವರಾಹ, ನಾರಸಿಂಹರಾಗಿ ಬಾಳಿದುದು ನೀಚಾಚಾರವಲ್ಲವೆ? ನಿಮ್ಮ ದೇವರನ್ನು ಪರೀಕ್ಷೆ ಮಾಡಿ ತಿಳಿಸಿರೆಂದು ಕೇಳುತ್ತಾನೆ. ವಿಪ್ರರು ನಿರುತ್ತರರಾಗಿ ಜಯಪತ್ರವನ್ನು ಕೊಟ್ಟು ಕಳುಹಿಸುತ್ತಾರೆ.

ಎರಡನೆಯ ದಿವಸ, ಮನೋವೇಗ ಪವನವೇಗರು ಬೇಡರ ವೇಷವನ್ನು ಧರಿಸಿ, ವಿನೋದಕ್ಕಾಗಿ ಮಡಕೆಯಲ್ಲಿ ಒಂದು ಕಿವಿಹರಿದ ಬೆಕ್ಕನ್ನು ಇಟ್ಟುಕೊಂಡು ಬ್ರಹ್ಮಸಭೆಯ ಮತ್ತೊಂದು ದ್ವಾರದಿಂದ ಬರುತ್ತಾರೆ. ಅಲ್ಲಿ ತಾವು ಬೆಕ್ಕು ಮಾರಲು ಬಂದಿರುವುದಾಗಿ ಹೇಳಿ, ಅದರ ಸಾಮರ್ಥ್ಯ ಹಾಗೂ ಅದರ ಬೆಲೆಯನ್ನು ತಿಳಿಸಿ, ಅದರ ಕಿವಿಹರಿದ ಕಾರಣವನ್ನು ತಿಳಿಸುತ್ತಾರೆ. ಈ ಬೆಕ್ಕು ಇದ್ದಲ್ಲಿ ಹದಿನಾಲ್ಕು ಯೋಜನದವರೆಗೆ ಇಲಿಗಳು ಸುಳಿಯವೆಂದು ಹೇಳಿದಿರಿ, ಆದರೆ ಇದರ ಕಿವಿಯನ್ನು ಒಂದು ಇಲಿ ಕಚ್ಚಿತೆಂದು ಹೇಳುವುದು ಅಸಂಭಾವ್ಯವಲ್ಲವೆ ಎಂಬುದು ವಿಪ್ರರ ಪ್ರಶ್ನೆ. ಹಲವು ಸುಗುಣವಿದ್ದು ಒಂದು ಅವಗುಣವಿದ್ದರೆ ಹಾಸ್ಯ ಮಾಡುವಿರೇಕೆ ಎಂದು, ಮನೋವೇಗನು ಮೂರು ಮೂಢರ ಕಥೆಗಳನ್ನು ಹೇಳುತ್ತಾನೆ; ಅನಂತರ ಮಾಂಡವ್ಯ, ಡಿಂಡಿಭೆ, ಛಾಯೆಯರ ಕಥೆಯನ್ನು ಹೇಳುತ್ತಾ, ಶಿವ, ಬ್ರಹ್ಮ, ಕೃಷ್ಣ, ಇಂದ್ರ, ಅಗ್ನಿ, ಯಮ ಮೊದಲಾದ ದೇವತೆಗಳ ಅವಗುಣಗಳನ್ನು ಎತ್ತಿ ತೋರಿಸುತ್ತಾನೆ. ಎಂಥ ಅವಗುಣಗಳಿದ್ದರೂ ಅವರುಗಳ ದೇವತ್ವಕ್ಕೆ ಕುಂದುಕೊರತೆ ಇಲ್ಲವೋ ಹಾಗೆಯೇ ತನ್ನ ಬೆಕ್ಕಿಗೆ ಅಲ್ಪ ಕೊರತೆಯಿದ್ದರೂ ಅದರ ಸಾಮರ್ಥ್ಯ ಕೆಡುವುದಿಲ್ಲವೆಂದು ಮನೋವೇಗನು ಹೇಳಿ, ಜಯಪತ್ರದೊಡನೆ ತಾವಿಳಿದ ಉದ್ಯಾನಕ್ಕೆ ಹೋಗುತ್ತಾರೆ.

ಮೂರನೆಯ ದಿವಸ ಸ್ನೇಹಿತರಿಬ್ಬರೂ ಬೇಡರ ವೇಷದಲ್ಲಿ ಬಿಲ್ಲು ಗದೆಗಳನ್ನು ಮಾರಲು ಬರುತ್ತಾರೆ. ಬಿಲ್ಲುಗದೆಗಳ ಸಾಮರ್ಥ್ಯವನ್ನು ತಿಳಿಸಿ, ಅವನ್ನು ಸತ್ತ ಇಲಿಯ ಮೂಳೆಗಳಿಂದ ಮಾಡಲಾಗಿದೆಯೆಂದು ಹೇಳಿ ವಿಪ್ರರನ್ನು ಬೆರಗುಗೊಳಿಸುತ್ತಾರೆ. ಇಂಥ ಸಮರ್ಥವಾದ ಆಯುಧಗಳಿದ್ದರೂ ನಿಮಗೆ ಉಣಲುಡಲೇಕೆ ಇಲ್ಲವೆಂದು ಕೇಳಿದರೆ, ದಾರಿಯಲ್ಲಿ ಬರುವಾಗ ಕಳ್ಳರು ಎಲ್ಲವನ್ನು ದೋಚಿಕೊಂಡರೆಂದು ಹೇಳಿ, ಬ್ರಾಹ್ಮಣರನ್ನು ಅಚ್ಚರಿಗೊಳಿಸುತ್ತಾರೆ. ಅನಂತರ ಎರಡು ಮೂಢರ ಕಥೆಗಳನ್ನು ಹೇಳಿ, ಅರ್ಜುನನು ಮೂರುಲೋಕದ ಗಂಡನಾಗಿದ್ದರೂ ದಾರಿಯಲ್ಲಿ ಬೇಡರಿಂದ ಸುಲಿಸಿಕೊಂಡುದನ್ನು ತಿಳಿಸಿ, ಮಹಾಭಾರತದಲ್ಲಿಯ ಕೊನೆಯ ಒಂದು ಸನ್ನಿವೇಶವನ್ನು ಇಲ್ಲಿ ಗೇಲಿಮಾಡಿದ್ದಾನೆ ಆ ಮನೋವೇಗ. ಸಮರ್ಥನಾದ ಅರ್ಜುನನ ಧನುಸ್ಸನ್ನು ಬೇಡರು ಕಿತ್ತುಕೊಂಡಂತೆ; ಕಳ್ಳರು ಹಾಗೆಯೇ ನಮ್ಮಲ್ಲಿದ್ದ ಆಯುಧಗಳನ್ನು ಕಿತ್ತುಕೊಂಡರೆಂದು ಹೇಳಿ, ಜಯಪತ್ರವನ್ನು ಗಳಿಸುತ್ತಾನೆ.

ನಾಲ್ಕನೆಯ ದಿವಸ ಮನೋವೇಗ, ಪವನವೇಗರು ತಾಪಸರ ವೇಷದಿಂದ ಬ್ರಹ್ಮ ಸಭೆಗೆ ಬರುತ್ತಾರೆ. ಬಂದ ಕೂಡಲೇ ಎರಡು ಮೂರ್ಖರ ಕಥೆಗಳನ್ನು ಹೇಳಿ ಮದದಾನೆಯ ಬಾಲದ. ಕೂದಲು ಗಿಂಡಿಯಲ್ಲಿ ಸಿಕ್ಕಿಕೊಂಡ ಒಂದು ಅಸಂಬದ್ಧ ಕಥೆಯನ್ನು ಹೇಳುತ್ತಾನೆ. ಈ ಪ್ರಸಿದ್ಧ ಕಥೆಯು ಹರಿಭದ್ರಸೂರಿಯ ಧೂರ್ತಾಖ್ಯಾನದಲ್ಲಿ ಬರುತ್ತದೆ; ಈ ಕಥೆಗೆ ಸಂವಾದಿಯಾಗಿ ಅಗಸ್ತ್ಯನು ಸಮುದ್ರದ ನೀರೆಲ್ಲವನ್ನು ಕುಡಿಯುವುದು. ಅವನ ಕಮಂಡಲದಲ್ಲಿ ವಿಷ್ಣು ಪ್ರವೇಶಿಸಿದುದು; ಅಲ್ಲಿ ಅವನು ಧರೆಯನ್ನು ನುಂಗಿ ವಟವೃಕ್ಷದ ಮೇಲೆ ಮಲಗಿದುದು ಹೀಗೆ ಹಲವಾರು ಪುರಾಣಗಳಲ್ಲಿಯ ಕಥೆಗಳನ್ನು ಹೇಳಿ ತನ್ನ ಅಸಂಬದ್ಧ ಕಥೆಯನ್ನು ಸಮರ್ಥಿಸಿಕೊಂಡು ಜಯಪತ್ರದೊಡನೆ ಹಿಂದಿರುತ್ತಾರೆ.

ಐದನೆಯ ದಿವಸ ಋಷಿವೇಷದಿಂದ ಪಾಟಲೀಪುರದ ಬ್ರಹ್ಮಸಭೆಗೆ ಬರುತ್ತಾರೆ. ಬಂದಕೂಡಲೆ ಮನೋವೇಗನು ಎರಡು ಮೂಢರ ಕಥೆಗಳನ್ನು ಹೇಳಿ, ಶಿವನ ಲಂಪಟತನವನ್ನು ತಿಳಿಸಲು ಒಂದು ಕಥೆಯನ್ನು ಹೇಳುತ್ತಾನೆ. ಅನಂತರ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು, ಒಬ್ಬ ಸ್ತ್ರೀಗೋಸ್ಕರ ಮುಷ್ಟಾಮುಷ್ಟಿ ಕೇಶಾಕೇಶಿಯಿಂದ ಜಗಳವಾಡಿದುದನ್ನೂ, ಇವರ ಲಂಪಟತನವನ್ನು ಹೇಳಿ, ಮನೋವೇಗನು ಗೇಲಿಮಾಡುತ್ತಾನೆ. ಈಶ್ವರನ ಬಾಹುಗಳಿಂದ ಉದಿಸಿದ ಬ್ರಹ್ಮ ವಿಷ್ಣು ಇಬ್ಬರೂ ಶಿವನ ಸಾಮರ್ಥ್ಯವನ್ನು ಅರಿಯಲು ಅಸಮರ್ಥರಾಗಿದ್ದಾರಂದು ಪರಿಹಾಸ್ಯ ಮಾಡುತ್ತಾನೆ. ಕೊನೆಗೆ ಜಿನನ ಸರ್ವಜ್ಞತ್ವವವನ್ನು ತಿಳಿಸಿ, ಜಯಪತ್ರವನ್ನು ಪಡೆದುಕೊಂಡು ಹೋಗುತ್ತಾನೆ.

ಆರನೆಯ ದಿವಸ ಇಬ್ಬರು ಸ್ನೇಹಿತರು ಭೂತಿಕರವೇಷವನ್ನು ಧರಿಸಿಕೊಂಡು ಬ್ರಹ್ಮಸಭೆಗೆ ಬರುತ್ತಾರೆ. ವಾಡಿಕೆಯಂತೆ ಎರಡು ಮೂರ್ಖರ ಕಥೆಗಳನ್ನು ಹೇಳಿ, ತನ್ನ ಒಂದು ಅಸಂಬದ್ಧ ಕಥೆಯನ್ನು ಮನೋವೇಗನು, ವಿಪ್ರನಿಗೆ ಹೇಳುತ್ತಾನೆ. ಆ ಕಥೆಯನ್ನು ಸಮರ್ಥಿಸಿಕೊಳ್ಳಲು, ಒಬ್ಬರೊಬ್ಬರ ತೋಳು ಸೋಂಕಿನಿಂದ ಒಬ್ಬಳಿಗೆ ಗರ್ಭವುಂಟಾಗಿ ಭಗೀರಥನು ಹುಟ್ಟಿದುದು, ಗಾಂಧಾರಿಯು ಚತುರ್ಥಸ್ನಾನ ಮಾಡಿ ಧೃತರಾಷ್ಟ್ರನನ್ನು ನೆನೆದು, ಹಲಸಿನ ಮರವನ್ನು ಅಪ್ಪಿಕೊಂಡಾಗ ಗರ್ಭೋತ್ಪತ್ತಿಯಾಗಿ, ಮುಂದೆ ಅವಳಿಗೆ ನೂರು ಜನ ಕೌರವರು ಹುಟ್ಟಿದುದೆಂದು ತಿಳಿಸುತ್ತಾನೆ. ಇನ್ನೂ ಮುಂದೆ ಅಭಿಮನ್ಯು, ತಾಯಿಯ ಹೊಟ್ಟೆಯಲ್ಲಿರುವಾಗಲೇ ಚಕ್ರವ್ಯೂಹ ಪ್ರವೇಶವನ್ನು ಅರಿತುದು, ಮಂಡೋದರಿಯ ಗರ್ಭವು ಏಳುನೂರು ವರ್ಷಗಳವರೆಗೆ ಸ್ತಂಭಿತವಾದುದು, ವ್ಯಾಸರು ಹುಟ್ಟಿದ ಕೂಡಲೇ ತಂದೆಯನ್ನು ಮಾತಾಡಿಸಿದುದು, ಕುಂತಿ ಸೂರ್ಯರಿಂದ ಕರ್ಣ ಹುಟ್ಟಿದರೂ ಅವಳು ಕನ್ನೆಯಾಗಿ ಉಳಿದುದನ್ನು ಹೇಳಿ, ತನ್ನ ಅಸಂಬದ್ಧ ಕತೆಗೆ ಮನೋವೇಗನು ಸಮರ್ಥಿಸಿಕೊಳ್ಳುತ್ತಾನೆ.

ಏಳನೆಯ ದಿವಸ ಮನೋವೇಗನು, ತನ್ನ ಸ್ನೇಹಿತನೊಂದಿಗೆ ಬೌದ್ಧರ ವೇಷವನ್ನು ಧರಿಸಿಕೊಂಡು ಬ್ರಹ್ಮಸಭೆಗೆ ಬರುತ್ತಾನೆ. ಅಲ್ಲಿ ವಿಪ್ರರಿಗೆ ಎರಡು ಮೂಢರ ಕಥೆಗಳನ್ನು ಹೇಳಿ ಅನಂತರ ಎರಡು ಕೊಬ್ಬಿದ ನರಿಗಳು ಬೆಟ್ಟವನ್ನು ಎತ್ತಿಕೊಂಡು ಹೋದವೆಂದು ಹೇಳಿ, ಇದಕ್ಕೆ ಸಂವಾದಿಯಾಗಿ ರಾಮಾಯಣದಲ್ಲಿ ಕಪಿಗಳು ಕಡಲಿಗೆ ಸೇತುವೆಯನ್ನು ಕಟ್ಟುವಾಗ ಒಂದರ ಮೇಲೊಂದು ಬೆಟ್ಟವನ್ನು ಅಡಕಿಲಿನಂತೆ ಎತ್ತಿಕೊಂಡು ಹೋದ ಸಂದರ್ಭವನ್ನು ಪ್ರಸ್ತಾಪಿಸಿ, ಪುರಾಣಗಳಲ್ಲಿಯ ಲೋಪದೋಷಗಳನ್ನು ಎತ್ತಿ ತೋರಿಸಿ, ಜೈನಧರ್ಮದಲ್ಲಿ ಆ ವಿಪ್ರರು ಒಲಿಯುವಂತೆ ಮಾಡುತ್ತಾನೆ. ಆಮೇಲೆ ಮನೋವೇಗನು ತನ್ನ ಸ್ನೇಹಿತರಿಗೆ ರಾವಣನ ಕುಲೋತ್ಪತ್ತಿ, ವಾಲಿಸುಗ್ರೀವ ಮೊದಲಾದ ಕಪಿನಾಯಕರ ಜನನಭೇದ, ತ್ರಿಷಷ್ಠಿಶಲಾಕಾಪುರುಷರ ಕ್ರಮ, ರಾಮಲಕ್ಷ್ಮೀಧರರ ಸಾಮರ್ಥ್ಯವನ್ನು ತಿಳಿಸುತ್ತಾನೆ.

ಎಂಟನೆಯ ದಿವಸ ಇಬ್ಬರೂ ಸ್ನೇಹಿತರು ಶ್ವೇತಾಂಬರಧಾರಿಗಳಾಗಿ ಬ್ರಹ್ಮ ಸಭೆಗೆ ಬರುತ್ತಾರೆ. ಅಲ್ಲಿ ಮನೋವೇಗನು ಐದು ಮೂರ್ಖರ ಕಥೆಗಳನ್ನು ಹೇಳುತ್ತಾನೆ. ಅನಂತರ, ಹಸಿದಿರುವ ತಾವಿಬ್ಬರೂ ಬೇಲದ ಮರವನ್ನು ಏರಲಾರದೆ ತಮ್ಮ ತಲೆಗಳನ್ನು ಕತ್ತರಿಸಿ, ಮರದ ಮೇಲೆ ಎಸೆಯಲು, ರುಂಡಗಳು ಹಣ್ಣನ್ನು ತಿನ್ನಲು ಕೆಳಗೆ ಇರುವ ಮುಂಡಗಳು ತೃಪ್ತಿ ಹೊಂದಿವೆಂಬ ಅಸಂಬದ್ಧವಾಗಿ ಮನೋವೇಗನು ಹೇಳುತ್ತಾನೆ. ಈ ಕಥೆಗೆ ಸಂವಾದಿಯಾಗಿ ರಾವಣನು ಶಿರಕತ್ತರಿಸಿಕೊಂಡು ಮತ್ತೆ ಹತ್ತಿದುದು, ಜರಾಸಂಧನ ಉತ್ಪತ್ತಿ, ಅಂಗದನನ್ನು ಎರಡು ತುಂಡು ಮಾಡಿದಾಗ ಮತ್ತೆ ಹತ್ತಿದುದು, ದುಂದುಭಿಯ ಶಿರವು ಹತ್ತಿದುದು, ದಧಿಮುಖನ ಶಿರವು ಹತ್ತಿದುದು, ಭೂಸುರರು ತಣಿದರೆ ಪಿತರು ಪಿತಾಮಹರು ತೃಪ್ತರಾಗುವುದು ಈ ಎಲ್ಲಾ ಕಥೆಗಳು ಮನೋವೇಗನ ಕಥೆಗೆ ಸಂವಾದಿಯಾಗಿ ನಿಲ್ಲುತ್ತವೆ. ಹೀಗೆ ಎಂಟುದಿನಗಳಲ್ಲಿಯೂ ಮನೋವೇಗನಿಗೆ ಜಯಪತ್ರ ದೊರೆಯುತ್ತದೆ. ಎಂಟೂ ದ್ವಾರಗಳಲ್ಲಿದ್ದ ವಿಪ್ರರೆಲ್ಲರೂ ಬಂದು ಶಾಸ್ತ್ರ ಪುರಾಣಗಳಲ್ಲಿರುವ ಲೋಪದೋಷಗಳನ್ನರಿತು ಮನೋವೇಗನ ವಾಕ್‌ಚಾತುರ್ಯಕ್ಕೂ, ತರ್ಕಬದ್ಧವಾದ ಮಾತಿಗೂ ಮಾರು ಹೋಗುತ್ತಾರೆ. ಅನಂತರ ಮನೋವೇಗನು ಎಲ್ಲ ವಿಪ್ರರನ್ನು ತನ್ನ ಗುರುಗಳಾದ ವಾಸುಪೂಜ್ಯರ ಸನ್ನಿಧಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವರು, ವಿಪ್ರರಿಗೆ ಹೋಸವ್ರತದ ಮಹಿಮೆಯನ್ನು ಒಂದು ಕಥೆಯ ಮೂಲಕ ನಿರೂಪಿಸಿ, ಜೈನ ಧರ್ಮದ ಸಾರಸರ್ವಸ್ವವನ್ನು ತಿಳಿಸುತ್ತಾರೆ. ಆಗ ಪವನವೇಗನೂ ವಿಪ್ರರೆಲ್ಲರೂ ಅವರ ಬೋಧನೆಗೆ ಮಾರುಹೋಗಿ ಜೈನಧರ್ಮದ ಸಮ್ಯಕ್ ದೃಷ್ಟಿಯನ್ನು ಅರಿತು ಶ್ರಾವಕವ್ರತವನ್ನು ಸ್ವೀಕರಿಸುತ್ತಾರೆ.

. ಕಾವ್ಯದ ಗುರಿ, ಪಾತ್ರರಚನೆ, ಸನ್ನಿವೇಶ ಕಲ್ಪನೆ, ಕಥನರೀತಿ ಶೈಲಿ

) ಕಾವ್ಯದ ಗುರಿ :

ಧರ್ಮಪರೀಕ್ಷೆಯ ಜಿನೇಂದ್ರ ಧರ್ಮಕಥೆಯೂ (೧೦೯೬) ಜಿನಮತಮಂ ಪ್ರಕಟಿಸುವ ಸಜ್ಜನರಂ ಪಾಲಿಸುವ (೨ – ೨೮) ಪುಣ್ಯಬಂಧವೂ ಆಗಿದೆ. ಭವ್ಯಜನ ಹಿತಕರಣಕ್ಕೆ ಈ ಕಾವ್ಯವು ದುರಿತತಿಮಿರರವಿರುಚಿಯಿದು, ಸತ್ಕೈವಲ್ಯಪದದ ನಿಶ್ರೇಣಿ, ಸಮಂತಿದು ರತ್ನತ್ರಯ ನಿಧಿ (೧ – ೦೯೭) ಯಾಗಿದೆ. ಇದರ ಕವಿಯು ಜಿನಪದಸೇವಕನೂ, ಜಿನಮುನೀಂದ್ರ ಪದಾರ್ಚಕನು ಅನ್ಯಧರ್ಮವನ್ನು ಕನಸಿನಲ್ಲಿಯೂ (೧೦ – ೯೮) ನೆನೆಯದೆ ಇದ್ದುದರಿಂದ ಜೈನಧರ್ಮದಲ್ಲಿ ಶ್ರದ್ಧೆಯುಳ್ಳ ಇವನ ಕಾವ್ಯದ ಉದ್ದೇಶ, ಸ್ವಮತದ ಪ್ರಚಾರ ಅನ್ಯಮತ ವಿಡಂಬನೆ. ಇದನ್ನು ಕವಿಯು ಮನದಟ್ಟು ಮಾಡಿಕೊಂಡಂತೆ ತೋರುತ್ತದೆ.

ಹನ್ನೆರಡನೆಯ ಶತಮಾನದ ನಯಸೇನ (೧೧೧೨) ಬ್ರಹ್ಮ ಶಿವ (೧೧೦೦) ಇವರುಗಳ ಕಾವ್ಯದ ಗುರಿ, ಅನ್ಯಮತದ ಖಂಡನೆಯೂ ಸ್ವಮತದ ಪ್ರತಿಷ್ಠಾಪನೆಯೂ ಆಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನವು ರಾಜಕೀಯ, ಧಾರ್ಮಿಕ ಆಂದೋಲನದ ಕಾಲ. ಆಗ ಕನ್ನಡನಾಡು, ಶಾಂಕರ, ವೀರಶೈವ, ಶ್ರೀವೈಷ್ಣವ, ಮಧ್ವಮತಗಳ ಕೂಡಲಸಂಗಮವಾಗಿತ್ತು. ಈ ಧರ್ಮಗಳ ಪ್ರಚಾರದಿಂದ ಜೈನಧರ್ಮವು ಇಳಿಮುಖವಾಗಿ ಸಾಗಿತ್ತು. ಹನ್ನೆರಡನೆಯ ಶತಮಾನದ ಮಧ್ಯಕಾಲದಲ್ಲಿ ವೀರಶೈವರಂತೂ ತಮ್ಮ ಮತದ ಕ್ರಾಂತಿಯ ಕಹಳೆಯನ್ನೇ ಊದಿದರು. ವೈದಿಕಾಭಿಮಾನಿಗಳಂತೂ ಮೊದಲಿನಿಂದಲೂ ಬೌದ್ಧ, ಜೈನಧರ್ಮಗಳ ವಿರೋಧಿಗಳಾಗಿದ್ದರು. ಈ ಬಗೆಯ ಧಾರ್ಮಿಕ ಕ್ರಾಂತಿಯ ಪ್ರಭಾವವು ಸಾಹಿತ್ಯದಲ್ಲಿ ಮೂಡುವುದು ಸಹಜವಷ್ಟೆ. ನಯಸೇನ, ಬ್ರಹ್ಮಶಿವರು ತಮ್ಮ ಧರ್ಮವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದುಂಟು.

ವೃತ್ತವಿಲಾಸನ ಧರ್ಮಪರೀಕ್ಷೆ (೧೩೬೦)ಯೂ ಇವರ ಜಾಡನ್ನೇ ತುಳಿದಿದೆ. ಅಪಭ್ರಂಶ, ಸಂಸ್ಕೃತ ಭಾಷೆಗಳಲ್ಲಿರುವ ಧರ್ಮಪರೀಕ್ಷೆ ಕೃತಿಗಳು ಕನ್ನಡ ಧರ್ಮಪರೀಕ್ಷೆಗೆ ಕಥಾವಸ್ತುವನ್ನು ಒದಗಿಸಿದ್ದರೂ, ಈ ಕಾಲದ ಒಂದು ಶ್ರೇಷ್ಠ ವಿಡಂಬನಾ ಕೃತಿಯಾಗಿ ಪರಿಣಮಿಸಿದೆ. ವೃತ್ತ ವಿಲಾಸನು ಹಿಂದಿನವರ ಜಾಡನ್ನು ತುಳಿದಿದ್ದರೂ, ಅಲ್ಲಿ ದೊರೆಯದ ಎಷ್ಟೋ ಪುರಾಣ ಪ್ರಸಂಗಗಳೂ ಉಪಕಥೆಗಳೂ ಹೆಚ್ಚಾಗಿ ದೊರೆಯುತ್ತವೆ. ಇದು ಕವಿಯ ವೈದಿಕಧರ್ಮ, ಶಾಸ್ತ್ರಪುರಾಣಗಳ ಆಳವಾದ ಅಭ್ಯಾಸವನ್ನು ಸೂಚಿಸುತ್ತದೆ. ಇವನ ಕಾವ್ಯದ ಗುರಿ ಕೇವಲ ಮತ ಪ್ರಚಾರವಲ್ಲ. ಕಾವ್ಯ ಸತ್ತೃವನ್ನು ತೋರಿಸುವುದೂ ಆಗಿದೆ. ಆರಂಭದ ಮೂರು ಆಶ್ವಾಸಗಳಲ್ಲಿ ನಾವು ಇದನ್ನು ಕಾಣಬಹುದಾಗಿದೆ. ಮಹಾಕಾವ್ಯದ ಅಷ್ಟಾದಶವರ್ಣನೆಗಳಲ್ಲಿ ಕೆಲವನ್ನು ಇಲ್ಲಿ ಬಳಸಿಕೊಂಡಿದ್ದಾನೆ. ಸಮುದ್ರ, ಪರ್ವತ, ಪುರ, ಉದ್ಯಾನ, ತಂಗಾಳಿಯ ವರ್ಣನೆ, ಸೂರ್ಯೋದಯ, ಸೂರ್ಯಾಸ್ತ ಚಂದ್ರೋದಯ ವರ್ಣನೆ ಹೀಗೆ ಕೆಲವು ಮುಖ್ಯ ವರ್ಣನೆಗಳು ಹಿತಮಿತವಾಗಿ ಬಂದಿವೆ. ಇವು ಎಲ್ಲಿಯೂ ಎಲ್ಲೆಯನ್ನು ಮೀರಿಲ್ಲ. ಇವನ ಕಾವ್ಯ ‘ಜಿನೇಂದ್ರಧರ್ಮ ಕಥೆ’ ಯಾದುದರಿಂದ ಜಲಕ್ರೀಡೆ, ಮಧುಪಾನ, ದ್ಯೂತ, ವೇಶ್ಯಾವಾಟಿ[3], ಬೇಟೆ ಮೊದಲಾದ ವರ್ಣನೆಗಳನ್ನು ಕೈಬಿಟ್ಟಿದ್ದಾನೆ. ಮನೋವೇಗನ ಒಡ್ಡೋಲಗ, ಅಲ್ಲಿಯ ಸಂಗೀತ ಹಾಗೂ ನೃತ್ಯದ ವರ್ಣನೆಗಳು ಹಿಂದಿನ ಯಾವ ಧರ್ಮಪರೀಕ್ಷೆ ಕೃತಿಗಳಲ್ಲಿಯೂ ಕಾಣುವುದಿಲ್ಲ. ಮನೋವೇಗನು ಎಂಟು ದಿನಗಳವರೆಗೆ ವಿಪ್ರರಿಗೆ ಕಥೆಗಳನ್ನು ಹೇಳಿದನಷ್ಟೆ! ಆ ಎಂಟು ದಿನಗಳಲ್ಲಿ ನಿಯತವಾಗಿ ಸೂರ್ಯೋದಯ, ಸೂರ್ಯಾಸ್ತಗಳ ವರ್ಣನೆಗಳು ಬರುತ್ತವೆ. ಈ ವರ್ಣನೆಗಳು ವೈವಿಧ್ಯಪೂರ್ಣವಾಗಿವೆ. ಈ ಪ್ರಸಂಗಗಳೆಲ್ಲವೂ ಕವಿಯ ಕಾವ್ಯಸತ್ವನ್ನು ತೋರಿಸುತ್ತವೆ.

ವೃತ್ತವಿಲಾಸನ ಕಾವ್ಯದ ಗುರಿ ಮುಖ್ಯವಾಗಿ ಪುರಾಣಗಳಲ್ಲಿಯ ವಿಷಯಗಳನ್ನು ವಿಡಂಬಿಸುವುದಾಗಿದೆ. ಇವನ ವಿಡಂಬನೆಯಲ್ಲಿ ಮೊನಚುಮಾತುಗಳಿವೆ. ತರ್ಕಬದ್ಧತೆಯಿದೆ. ಚಿಕಿತ್ಸಾ ಮನೋಭಾವನೆಯಿದೆ. ಎಲ್ಲಿಯೂ ಯಾರ ಮನಸ್ಸನ್ನು ನೋಯಿಸುವುದಿಲ್ಲ. ಎಂಟು ದಿನಗಳಲ್ಲಿ, ವಿಪ್ರರೊಡನೆ ಮಾಡಿದ ಸಂಭಾಷಣೆಯಲ್ಲಿ ಕಥಾನಾಯಕನಾದ ಮನೋವೇಗನು ಅವರನ್ನು ಎಲ್ಲಿಯೂ ರೇಗಿಸುವುದಿಲ್ಲ. ಅವರ ಕುತೂಹಲ ಕೆರಳಿಸುವಂತೆ ಒಂದರ ಹಿಂದೆ ಮತ್ತೊಂದು ಪುರಾಣ ಕಥೆಗಳನ್ನು ಸರಪಳಿಯಾಗಿ ಜೋಡಿಸುತ್ತಾನೆ. ಕೊನೆಗೆ ಅವರನ್ನು ಒಪ್ಪಿಸಿ, ನಿತ್ಯವೂ ಜಯಪತ್ರವನ್ನು ಪಡೆದುಕೊಂಡು ಹೋಗುತ್ತಾನೆ. ಹೀಗೆ ಕವಿಯ ಕಾವ್ಯದ ಗುರಿಯು ಹಿಂದಿನ ಕಾವ್ಯಗಳ ಗುರಿಯಾಗಿದ್ದರೂ ಇವನ ನಿರೂಪಣಾಕ್ರಮದಲ್ಲಿ ಹೊಸತನವಿದೆ.

ಪಾತ್ರರಚನೆ

ಈ ಕಾವ್ಯಗಳಲ್ಲಿ ಬರುವ ಪಾತ್ರಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ೧. ಪ್ರಧಾನ ಪಾತ್ರಗಳು ೨. ಗೌಣ ಪಾತ್ರಗಳು.

ಮನೋವೇಗ

ಪ್ರಧಾನ ಪಾತ್ರಗಳಲ್ಲಿ ಮನೋವೇಗನಿಗೆ, ಹಿರಿದಾದ ಸ್ಥಾನವಿದೆ. ಇವನು ಈ ಕಾವ್ಯದ ಸೂತ್ರಧಾರ. ಇವನು ಖೇಚರಪತಿಯಾದ ಜಿತರಿಪು, ವಾಯುವೇಗಯರ ಮಗ. ಇವನು ವಿದ್ಯಾಧರ ಚಕ್ರವರ್ತಿಯೂ, ಕಂದರ್ಪರೂಪನೂ ಧೈರ್ಯಾಮರೇಂದ್ರಾಚಲನೂ, ಭೂವಂದ್ಯನೂ, ಜಿನಪಾದಪದ್ಮಮಧುಪನೂ, ಸಮ್ಯಕ್ತ್ವ ರತ್ನಾಕರನೂ ಆಗಿದ್ದಾನೆ.

ಇವನು ಚಿಕ್ಕವಯಸ್ಸಿನಲ್ಲಿ ‘ಜಿನಮಾರ್ಗ ನಡೆಗಲ್ತನು ಜಿನ ಪುರಾಣ ಶಾಸ್ತೋಕ್ತಿಗಳಿಂದ ನುಡಿಗಲ್ಲು’ದರಿಂದ ಜೈನಧರ್ಮದ ಪ್ರಾವೀಣ್ಯವನ್ನು ಪಡೆದುಕೊಂಡಿದ್ದಾನೆ. ತನ್ನ ಬಾಲ್ಯ ಸ್ನೇಹಿತನಾದ ಪವನವೇಗನೂ ತನ್ನ ಹಾಗೆಯೇ ಜೈನಧರ್ಮದಲ್ಲಿ ಆಸಕ್ತಿಯುಳ್ಳವನಾಗಿ ಶ್ರಾವಕವ್ರತವನ್ನು ಸ್ವೀಕರಿಸುವಂತೆ ಮಾಡುವುದೇ ಇವನ ಮನೋಭಿಲಾಷೆ ಅದಕ್ಕಾಗಿ ಎಂಟುದಿನಗಳವರೆಗೆ ತನ್ನ ಸ್ನೇಹಿತನನ್ನು ಪಾಟಲೀಪುತ್ರಕ್ಕೆ ಕರೆದೊಯ್ದು ಅಲ್ಲಿಯ ಬ್ರಹ್ಮಸಭೆಯಲ್ಲಿರುವ ವಾದಾರ್ಥಿಗಳನ್ನು ಸೋಲಿಸಿ ಜಯಪತ್ರಗಳನ್ನು ಪಡೆದುಕೊಂಡು ಬರುತ್ತಾನೆ. ಅಲ್ಲಿಯ ಪ್ರಸಂಗಗಳಿಂದ ಮನೋವೇಗನ ತೀಕ್ಷ್ಣಬುದ್ಧಿ, ವಾದವೈಖರಿ, ಜನರನ್ನು ಒಲಿಸಿಕೊಳ್ಳುವ ಆಕರ್ಷಣ ಶಕ್ತಿ ಎಷ್ಟೆಂಬುದನ್ನು ತಿಳಿಯಲಾಗುತ್ತದೆ.

ಮನೋವೇಗನಿಗೆ ಕಥೆ ಹೇಳುವುದರಲ್ಲಿ ಜಾಣ್ಮೆ ಹೆಚ್ಚು. ಈ ಕಾವ್ಯದಲ್ಲಿ ಹದಿನಾರು ಉಪಕಥೆಗಳು ನಾಲ್ಕು ಮೂರ್ಖಚತುಷ್ಟಯರ ಕಥೆಗಳು ಬರುವುವಷ್ಟೆ! ಒಂದೊಂದು ದಿನವೂ ಎರಡೆರಡು ಉಪಕಥೆಗಳನ್ನು ಸಂದರ್ಭಕ್ಕೆ ಸರಿಯಾಗಿ ಹೇಳಿ ವಾದಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಾನೆ. ಆರನೆಯ ದಿನದಲ್ಲಿ ಹೇಳಿದ ‘ಪಿತ್ತಜ್ವರಿಯ ಕಥೆ’ ಹಾಗೂ ‘ಅಮೃತಫಲವೃಕ್ಷವನ್ನು ಕಡಿದುಹಾಕಿದ ರಾಜನ ಕಥೆ’ಯನ್ನು ಇಲ್ಲಿ ಉದಾಹರಿಸಬಹುದು. ಇವನಿಗೆ ಉಪಕಥೆಗಳನ್ನು ನಿರೂಪಿಸುವಲ್ಲಿ ಎಷ್ಟು ನಿಪುಣತೆಯಿದೆಯೋ ಅಷ್ಟೇ ಕುಶಲತೆ ಅಸಂಬದ್ಧ ಕಥೆಗಳನ್ನು ಜೋಡಿಸುವಲ್ಲಿ ಇದೆ. ಅಸಂಬದ್ಧ ಕಥೆಗೆ ಸಂವಾದಿಯಾಗಿ ಪುರಾಣಗಳಲ್ಲಿಯ ಕಥೆಗಳನ್ನು ಹೊಂದಿಸುವಲ್ಲಿ ಜಾಣ್ಮೆಯಿದೆ.

ಮನೋವೇಗನು ಜೈನಧರ್ಮತತ್ತ್ವ ಶಾಸ್ತ್ರಗಳನ್ನು ಚೆನ್ನಾಗಿ ಅರಿತಿದ್ದಾನೆ. ಇವನು ತನ್ನ ಸ್ನೇಹಿತರಿಗೆ ಪರಮತದಲ್ಲಿಯ ಲೋಪದೋಷಗಳನ್ನು ತೋರಿಸುವುದಷ್ಟೇ ಅಲ್ಲ, ಸ್ವಮತದಲ್ಲಿಯ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತಾನೆ. ಅಲ್ಲದೆ ವಿಪ್ರರಿಗೂ ಜೈನಧರ್ಮದ ಶ್ರೇಷ್ಠತೆಯ ಅರಿವನ್ನುಂಟುಮಾಡುತ್ತಾನೆ. ಅವರೆಲ್ಲರನ್ನೂ ವಾಸುಪೂಜ್ಯರ ಹತ್ತಿರ ಕರೆದುಕೊಂಡು ಹೋಗಿ ವ್ರತವನ್ನು ಕೊಡಿಸುತ್ತಾನೆ. ಹೀಗೆ ಮನೋವೇಗನ ಪಾತ್ರವು ಕಾವ್ಯದ ಉದ್ದಕ್ಕೂ ಹಾಸುಹೊಕ್ಕಾಗಿ ಬೆಳೆದಿದೆ. ಇವನು ‘ವಿವೇಕನಿಧಿ’ ಯೂ, ‘ಮಿತ್ರಪರಿಪಾಲಕನೂ’, ‘ಉನ್ನತ ತತ್ತ್ವ ಕೋವಿದನೂ’, ‘ಜೀವದಯಾಪರಂಪರ ಹಿತಾರ್ಥ’ನೂ ‘ಜಿನಸಮಯವಾರ್ಧಿವರ್ಧನಚಂದ್ರನೂ’ ಆಗಿದ್ದಾನೆ. ಇವನ ಪಾತ್ರದಿಂದಲೇ ಈ ಕಾವ್ಯಕ್ಕೆ ಜೀವಕಳೆ ತುಂಬಿದೆ.

ಪವನವೇಗ

ಪವನವೇಗನು ಮನೋವೇಗನ ಸ್ನೇಹಿತ. ಇವನು ವಿಜಯಪುರದ ಪ್ರಭಾಶಂಖ ವಿಮಲಮತಿಯರ ಮಗ, ಪುಷ್ಪದಂತ ಉಪಾಧ್ಯಾಯರ ಹತ್ತಿರ ಇವರಿಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೂ ಮನೋವೇಗನ ಹಾಗೆ ಇವನಿಗೆ ಸಮ್ಯಗ್ದೃಷ್ಟಿ ಪ್ರಾಪ್ತಿಯಾಗಿರುವುದಿಲ್ಲ. ಇವನ ಸ್ನೇಹಿತನಾದ ಮನೋವೇಗನಿಗೆ ಅದೊಂದು ಕೊರಗು. ಅದಕ್ಕಾಗಿ ಇವನ ಸ್ನೇಹಿತನು, ಇವನನ್ನು ಪಾಟಲಿಪುತ್ರಕ್ಕೆ ಕರೆದೊಯ್ಯುತ್ತಾನೆ. ಇವನಿಗೋಸ್ಕರವೇ ಹಲವು ವೇಷಗಳನ್ನು ಧರಿಸಿ, ಬ್ರಹ್ಮ ಸಭೆಯ ವಾದಿಗಳನ್ನು ಸೋಲಿಸಿ ಇವನ ಮೂಢತ್ರಯವನ್ನು ದೂರಮಾಡುತ್ತಾನೆ. ಹೀಗಾಗಿ ಮನೋವೇಗನ ಪಾತ್ರಪೋಷಣೆಗೆ ಇವನ ಪಾತ್ರವು ಸಹಕಾರಿಯಾಗಿದೆ.

ಈ ಕಾವ್ಯದಲ್ಲಿ ಪವನವೇಗನ ಪಾತ್ರವು ಅಲ್ಲಲ್ಲಿ ಕಾಣಬರುತ್ತದೆ. ಮೊದಲನೆಯ ಹಾಗೂ ಎರಡನೆಯ ಆಶ್ವಾಸಗಳಲ್ಲಿ ಇವನ ಪಾತ್ರವು ಕಂಡುಬಂದರೂ, ಮುಂದೆ ವಾಚಕರ ಪ್ರತಿನಿಧಿಯಾಗಿ ಇವನು ನಿಲ್ಲುತ್ತಾನೆ. ಮನೋವೇಗನ ಜೊತೆಯಲ್ಲಿ ನಿತ್ಯವೂ ವೇಷಮರೆಸಿಕೊಂಡು ಪಾಟಲೀಪುತ್ರಕ್ಕೆ ಇವನು ಬಂದರು ಎಲ್ಲಿಯೂ ಇವನದು ಹೆಚ್ಚಿನ ಪಾತ್ರವಿಲ್ಲ. ಎಲ್ಲೆಲ್ಲಿಯೂ ಮನೋವೇಗನದೆ! ಇವನು ಮಾತ್ರ ವೀಕ್ಷಕನಾಗಿ ನಿಲ್ಲುತ್ತಾನೆ. ಇಬ್ಬರೂ ಉದ್ಯಾನವನಕ್ಕೆ ವಾಪಸು ಬಂದಾಗ ಜಿನಮತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮನೋವೇಗನಿಂದ ಕೇಳಿ ಪಡೆಯುತ್ತಾನೆ. ಮನೋವೇಗನು ಅಷ್ಟು ಉಪಕಥೆಗಳನ್ನೂ, ಅಸಂಬದ್ಧ ಕಥೆಗಳನ್ನೂ ಹೇಳಿದುದು ಇವನಿಗೋಸ್ಕರವಲ್ಲವೆ? ಇವನಿಗಾಗಿಯೇ ಈ ಕಾವ್ಯವು ರಚಿತವಾಗಿದೆಯೋ ಎಂದು ಅನ್ನಿಸುತ್ತದೆ. ಒಟ್ಟಿನಲ್ಲಿ ಇವನ ಪಾತ್ರವು ಕಾವ್ಯದ ಕಥೆಯನ್ನು ಬೆಳೆಸುವುದಷ್ಟೇ ಅಲ್ಲ; ಕಥಾನಾಯಕನ ಹಿರಿಮೆಯನ್ನು ಎತ್ತಿ ತೋರಿಸುವ ಉಪನಾಯಕನ ಸ್ಥಾನದಲ್ಲಿ ಇವನು ನಿಲ್ಲುತ್ತಾನೆ.

 


[1] ಇತ್ತೀಚಿನ ಸಂಶೋಧನೆಯಿಂದ ವೃತ್ತವಿಲಾಸನು ‘ಶಾಸ್ತ್ರಸಾರ’ದ ಕತೃವಲ್ಲ. ‘ಶಾಸ್ತ್ರಸಾರ’ವೆಂಬುದು ಸಮುದಾಯದ ಮಾಘಣಂದಿಯ “ಶಾಸ್ತ್ರಸಾರಸಮುಚ್ಚಯ”ವೇ ಇರಬಹುದು ಎನ್ನಿಸುತ್ತದೆ. ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ, ಐದನೆಯ ಸಂಪು, ಪು. ೪೬೮.

[2] ಕೆಲವು ಕನ್ನಡ ಕವಿಗಳ ಜೀವನ ಕಾಲವಿಚಾರ ಪು. ೨೧೨-೨೧೬

[3] ವೃತ್ತವಿಲಾಸನು “ಮಹಾಕಾವ್ಯದ ಕಟ್ಟುನಿಟ್ಟುಗಳನ್ನು ಪಾಲಿಸಿ ಕುಕವಿನಿಂದೆ ವೇಶ್ಯಾವಾಟಿಯ ವರ್ಣನೆಗಳನ್ನು ಸರಿಯಾಗಿ ಮಾಡುವುದಲ್ಲದೆ, ಸರಸಹಾಸ್ಯವನ್ನು ಅವನು ಸಾಕಷ್ಟು ಹರಿಸಿದ್ದಾನೆ.” (ಕನ್ನಡ ಸಾಹಿತ್ಯದಲ್ಲಿ ಹಾಸ್ಯ, ಪುಟ ೧೫೩-೭ ಡಾ. ಸುಂಕಾಪುರ) ಎಂಬ ಮಾತು ಆಶ್ಚರ್ಯವನ್ನುಂಟುಮಾಡುತ್ತದೆ. ಈ ಕಾವ್ಯದಲ್ಲಿ ಎಲ್ಲಿಯೂ ವೇಶ್ಯಾವಾಟಿಯ ವರ್ಣನೆಯು ಸಿಕ್ಕುವುದಿಲ್ಲ.