ವಿಪ್ರರು

ವಿಪ್ರರು ಪಾಟಲೀಪುತ್ರದ ಬ್ರಹ್ಮಸಭೆಯ ನಿವಾಸಿಗಳು. ಇವರಲ್ಲಿ ಏಕದಂಡಿ, ದ್ವಿದಂಡಿ, ತ್ರಿದಂಡಿ, ಹಂಸ, ಪರಮಹಂಸ ಭೂತಿಕಲಾದಿಗಳೂ ಇದ್ದರು. ಇವರು ಬ್ರಹ್ಮಸಭೆಯ ಎಂಟು ದ್ವಾರಗಳಲ್ಲಿ ವಾದಿಗಳನ್ನು ಎದುರಿಸಬಲ್ಲ ಸಮರ್ಥವೇದಶಾಸ್ತ್ರ ನಿಪುಣರೂ, ತರ್ಕಕರ್ಕಶರೂ ಆಗಿದ್ದರು. ಇವರು ಎಷ್ಟು ಜನರಿದ್ದರೆಂಬುದು ಎಲ್ಲಿಯೂ ಗೊತ್ತಾಗುವುದಿಲ್ಲ. ಆದರೆ ಪ್ರತಿದ್ವಾರದಲ್ಲಿಯೂ ಹಲವು ಜನ ವಿಪ್ರರಿದ್ದರೆಂಬುದನ್ನು ಅರಿಯುತ್ತೇವೆ. ಮನೋವೇಗನು ಎಂಟು ದಿನಗಳವರೆಗೆ ಎಂಟು ವೇಷಗಳನ್ನು ಧರಿಸಿಕೊಂಡು ಈ ವಿಪ್ರರೆಡೆ ಬಂದು, ಬ್ರಹ್ಮಸಭೆಯ ಗಂಟೆಯನ್ನು ಬಾರಿಸಿ ಸಭೆಯ ಪೀಠದ ಮೇಲೆ ಕುಳಿತುಕೊಳ್ಳುತ್ತಾನೆ. ಆಗ ಈ ಶಾಸ್ತ್ರ ಚತುರ್ಮುಖರು ಅಲ್ಲಿಗೆ ಬಂದು ಪೀಠದಿಂದ ಇಳಿಸಿ, ಅವರೊಡನೆ ವಾದವನ್ನು ಪ್ರಾರಂಭಿಸುತ್ತಾರೆ. ಇದು ಅವರ ನಿತ್ಯದ ಕಾರ್ಯ ಮನೋವೇಗನ ವಾದವೈಖರಿಗೂ, ಜಿಜ್ಞಾಸೆಗೂ ಮಾರುಹೋಗುತ್ತಾರೆ. ‘ನಿರ್ದೋಷಿಯೇ ದೇವರು, ನಿರ್ಗ್ರಂಥವೇ ತಪವು, ದಯಾಮೂಲವೇ ಧರ್ಮವೆಂದು’ ಮನೋವೇಗನು ಹೇಳಿದಾಗ ಅವನಿಗೆ ತಲೆಬಾಗುತ್ತಾರೆ. ಅಜ್ಞಾನವೆಂಬ ಕಾಡಿನಲ್ಲಿ ತಿರುಗುವವರಿಗೆ ಸುಜ್ಞಾನದ ಜ್ಯೋತಿಯಿಂದ ನಮ್ಮನ್ನು ಬೆಳಗಿಸಿದಿರಿ ಎಂದು ಅನೇಕ ರೀತಿಯಿಂದ ಮನೋವೇಗನನ್ನು ಸ್ತುತಿಸುತ್ತಾರೆ. ತಮಗೂ ಶ್ರಾವಕವ್ರತಗಳನ್ನು ದಯಪಾಲಿಸಬೇಕೆಂದು ಬೇಡಿಕೊಳ್ಳುತ್ತಾರೆ. ಹೀಗೆ ಕಾವ್ಯದ ಉದ್ದಕ್ಕೂ ಮನೋವೇಗನೊಡನೆ ಈ ವಿಪ್ರರ ಪಾತ್ರ ಬರುತ್ತದೆ. ಮನೋವೇಗನಿಗೆ ಪ್ರತಿಸ್ಪರ್ಧಿಗಳಾಗಿ ಇವರು ಕಾಣುತ್ತಾರೆ. ಆದ್ದರಿಂದ ಆ ವಿಪ್ರರ ಪಾತ್ರವು ಮನೋವೇಗನ ಪಾತ್ರವನ್ನು ಉಜ್ವಲಗೊಳಿಸಲು ಸಹಕಾರಿಯಾಗಿದೆ.

ವಾಸುಪೂಜ್ಯರು

ವಾಸುಪೂಜ್ಯರು ಈ ಕಾವ್ಯದ ಕೇಂದ್ರವ್ಯಕ್ತಿಗಳಾಗಿದ್ದಾರೆ. ಇವರು ಎರಡು ಸಂದರ್ಭಗಳಲ್ಲಿ ಈ ಕಾವ್ಯದಲ್ಲಿ ಕಾಣಬರುತ್ತಾರೆ. ಇವರು ಮೊದಲು ಅಯೋಧ್ಯಾಪುರದ ರಾಜರಾಗಿದ್ದು, ಸಂಸಾರದಲ್ಲಿ ಅಸಾರತೆಯನ್ನು ಕಂಡು, ಮಗನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗುತ್ತಾರೆ. ಹನ್ನೆರಡು ವರ್ಷಗಳವರೆಗೆ ಜಿನಮತದ ಪ್ರಸಿದ್ಧ ಆಗಮಗಳನ್ನು ಕಲಿತು, ಅನಂತರ ದೇಶಸಂಚಾರಮಾಡುತ್ತಾರೆ. ಒಂದು ಸಲ ಉಜ್ಜಯಿನಿಯ ಉದ್ಯಾನದಲ್ಲಿ ತಂಗಿದ್ದಾಗ ಕೇವಲಜ್ಞಾನ ಉತ್ಪತ್ತಿಯಾಗಿ ದೇವೇಂದ್ರನ ಆಸನ ಕಂಪನವಾಗುತ್ತದೆ. ದೇವೇಂದ್ರನು ಸಮವಸರಣವನ್ನು ನಿರ್ಮಿಸಿ ಪುಷ್ಟವೃಷ್ಟಿಯನ್ನು ಕರೆಯಿಸುತ್ತಾನೆ. ಹೀಗೆ ಇವರು ಕೇವಲಜ್ಞಾನಿಗಳಾಗುತ್ತಾರೆ.

ಮತ್ತೊಮ್ಮೆ ಇವರು ಅದೇ ಉದ್ಯಾನವನದಲ್ಲಿರುವಾಗ, ಸಮುದ್ರದತ್ತನೆಂಬ ವಣಿಗ್ವರನು, ಸಂಸಾರ, ಜೀವ, ಸುಖ, ದುಃಖಗಳ ಬಗ್ಗೆ ಇವರನ್ನು ವಿಚಾರಿಸುತ್ತಾನೆ. ಅಲ್ಲಿಗೆ ಮನೋವೇಗನೂ ಬಂದಿರುತ್ತಾನೆ. ಅವರು ಅಲ್ಲಿ ‘ಮಧುಬಿಂದು ವೃತ್ತಾಂತವನ್ನು ವಿವರಿಸುತ್ತಾರೆ. ಈ ದೃಷ್ಟಾಂತ ಜೈನ ಪುರಾಣದಲ್ಲಿ ಪ್ರಸಿದ್ಧವಾದುದೂ ಹಾಗೂ ಸ್ವಾರಸ್ಯವಾದುದೂ ಆಗಿದೆ. ಇದು ಎಲ್ಲ ಮತೀಯರ ಗಮನಕ್ಕೆ ಬಂದಾಗ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಆಗ ಮನೋವೇಗನು, ತನ್ನ ಸ್ನೇಹಿತನಿಗೆ ಸನ್ನುತ ಧರ್ಮವನ್ನು ತಿಳಿಸುವ ಉಪಾಯವಾವುದೆಂದು ಕೇಳುತ್ತಾನೆ. ಕುಮತಾಗಮಿಗಳ ವಾಸಸ್ಥಾನವಾದ ಪಾಟಲೀಪುತ್ರಕ್ಕೆ ಸ್ನೇಹಿತನನ್ನು ಕರೆದುಕೊಂಡುಹೋಗಿ, ಅಲ್ಲಿ ಪರಮತವನ್ನು ಖಂಡಿಸಿದಾಗ, ಅವನಿಗೆ ಜೈನಧರ್ಮದಲ್ಲಿ ಆಸಕ್ತಿ, ಉಂಟಾಗುವುದೆಂದು ವಾಸುಪೂಜ್ಯರು ತಿಳಿಸುತ್ತಾರೆ. ಇದರಿಂದ ಮನೋವೇಗನಿಗೆ, ಪವನವೇಗ, ವಿಪ್ರರಿಗೆ ಜೈನಧರ್ಮದಲ್ಲಿಯ ಶ್ರೇಷ್ಠತೆಯನ್ನು ತೋರಿಸಲು ಅವಕಾಶ ದೊರೆಯಿತು.

ಎರಡನೆಯ ಸಂದರ್ಭದಲ್ಲಿ ವಾಸುಪೂಜ್ಯರು ಅಮೋಘಕಾರ್ಯವನ್ನು ಮಾಡುತ್ತಾರೆ. ಇವರ ದಿವ್ಯಪಾತ್ರವು ನಮಗೆ ಮತ್ತೆ ಕಾಣುವುದು ಹತ್ತನೆಯ ಆಶ್ವಾಸದ ಅಂತ್ಯದಲ್ಲಿ. ಶ್ರಾವಕವ್ರತವು ಪವನವೇಗ, ವಿಪ್ರರಿಗೆ, ದೊರೆಯುವುದು ಇವರಿಂದ ಇಲ್ಲಿಯೇ. ಶ್ರಾವಕವ್ರತವನ್ನು ಇವರು ಸ್ವೀಕರಿಸುವಾಗ ಐದು ಅಣುವ್ರತಗಳು, ಎರಡು ಗುಣವ್ರತಗಳು, ನಾಲ್ಕು ಶಿಕ್ಷಾವ್ರತಗಳ ಬಗ್ಗೆ ನಮಗೆ ವಿವರಣೆ ಇಲ್ಲಿಯೇ ದೊರೆಯುತ್ತದೆ. ಕೊನೆಗೆ ವಾಸುಪೂಜ್ಯರು ಹೇಳಿದ ಹೋಸವ್ರತದ ಪ್ರಸಂಗವಂತೂ ಚಿತ್ತಾಕರ್ಷಕವಾದುದು. ಒಂದು ವ್ರತದಿಂದ ಉನ್ನತಕುಲವನ್ನೂ ಸಂಪತ್ ಸಮೃದ್ಧಿಯನ್ನೂ ಪಡೆಯುವಾಗ ಹಲವು ವ್ರತಗಳನ್ನೂ ಸ್ವೀಕರಿಸಿದರೆ ಏನು ತಾನೆ ಸಾಧ್ಯವಿಲ್ಲವೆಂದು ವ್ರತದ ಹಿರಿಮೆಯನ್ನು ಹುರಿಗೊಳಿಸುತ್ತಾರೆ. ಹೀಗೆ ವಾಸುಪೂಜ್ಯರ ಪಾತ್ರವು ಈ ಕಾವ್ಯದ ಎರಡು ಪ್ರಸಂಗಗಳಲ್ಲಿ ಬಂದಿದ್ದರೂ ಅಪರೋಕ್ಷವಾಗಿ ಕಾವ್ಯದ ಎಲ್ಲ ಪಾತ್ರಗಳ ಜೀವನಾಡಿಯನ್ನೂ ಮಿಡಿಯಬಲ್ಲುದಾಗಿದೆ.

) ಸನ್ನಿವೇಶಕಲ್ಪನೆಕಥನರೀತಿ

ವೃತ್ತವಿಲಾಸನ ಮುಖ್ಯ ಕಥಾಸಂವಿಧಾನವು ಹಿಂದಿನ ಧರ್ಮಪರೀಕ್ಷೆಕಾರರಂತೆ ಇದ್ದರೂ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ಕಥನರೀತಿಯಲ್ಲಿ ಕವಿಯ ಸ್ವಂತ ವ್ಯಕ್ತಿತ್ವವಿದೆ. ಮನೋವೇಗನ ಒಡ್ಡೋಲಗದಲ್ಲಿ ನೃತ್ಯಸಂಗೀತದ ಸನ್ನಿವೇಶದ ಕಲ್ಪನೆಯು ಹಿಂದಿನ ಧರ್ಮಪರೀಕ್ಷೆಕಾರರಲ್ಲಿ ಕಾಣುವುದಿಲ್ಲ. ಇದು ಕವಿಯ ಕಲೆಯ ಅಭಿರುಚಿಯನ್ನು ಸೂಚಿಸುತ್ತದೆ. ಹಿಂದಿನ ಧರ್ಮಪರೀಕ್ಷೆಕಾರರು ಆರು ದಿನಗಳಲ್ಲಿ ಹೇಳಿದ ಕಥೆಯನ್ನು ಈ ಕವಿಯು ಎಂಟು ದಿನಗಳವರೆಗೆ ಎಂಟು ಸನ್ನಿವೇಶಗಳಲ್ಲಿ ಹಿಗ್ಗಿಸಿಕೊಂಡು ಹೇಳಿದುದು ಇವನ ಕಲ್ಪನಾ ಸಾಮರ್ಥ್ಯ ಹಾಗೂ ಕಥನರೀತಿಯ ದ್ಯೋತಕವಾಗಿದೆ. ಮನೋವೇಗನ ಮೂಲಕ ಉಪಕಥೆಗಳನ್ನು ಹೇಳಿಸುವಲ್ಲಿ ಇವನದೇ ಒಂದು ಮಾದರಿಯಾಗಿದೆ. ಹಿಂದಿನ ಧರ್ಮಪರೀಕ್ಷೆಕಾರರು ಮನೋವೇಗನ ಮೂಲಕ ಮೊದಲನೆಯ ದಿನವೇ ಹದಿಮೂರು ಉಪಕಥೆಗಳನ್ನೂ ಹೇಳಿಸಿದರೆ ಈ ಕೃತಿಯಲ್ಲಿ ಒಂದೊಂದು ದಿವಸ ಎರಡೆರಡು ಕಥೆಗಳನ್ನು ಹದವರಿತು ಹೇಳುವ ಕ್ರಮವು ಕವಿಯ ಕಥನರೀತಿಯ ಸೊಗಸುಗಾರಿಕೆಯನ್ನು ಸೂಚಿಸುತ್ತದೆ. ಎರಡೆರಡು ಉಪಕಥೆಗಳಾದ ಕೂಡಲೇ ಒಂದೊಂದು ದಿವಸ ಒಂದೊಂದು ಅಸಂಬದ್ಧ ಕತೆಯನ್ನು ಹೇಳುವುದು, ಅದಕ್ಕೆ ಪುರಾಣಕಥೆಯನ್ನು ಸಂವಾದಿಯಾಗಿ ಜೋಡಿಸಿ ಅವನ್ನು ಖಂಡಿಸುವ ರೀತಿಯೂ ಕಥನರೀತಿಯ ಹೊಸಮಾದರಿಯಾಗಿದೆ.

ವೃತ್ತವಿಲಾಸನು ಎಂಟು ದಿನಗಳವರೆಗೆ ನಿತ್ಯವೂ ಪಾಟಲೀಪುತ್ರಕ್ಕೆ ಹೋಗಿ ಬರುವ ಸಂದರ್ಭವೂ ಎಂಟು ಆಶ್ವಾಸಗಳಲ್ಲಿ ವಿಂಗಡಿಸಿದುದು ಮೂಲದಿಂದ ಹೊರತಾಗಿಯೂ, ಸಮಂಜಸವಾಗಿಯೂ ಹೊಸ ಕಲ್ಪನಾಸಾಮರ್ಥ್ಯದಿಂದ ಕೂಡಿದುದಾಗಿಯೂ ಇದೆ. ಈ ಕಾವ್ಯದಲ್ಲಿ ನಿತ್ಯವೂ ನಿಯತವಾಗಿ ಸೂರ್ಯೋದಯ ಸೂರ್ಯಾಸ್ತದ ವರ್ಣನೆಗಳು ಬರುತ್ತವೆ. ಪ್ರತಿದಿನವೂ ನಿಯತವಾಗಿ ಸೂರ್ಯೋದಯ, ಸೂರ್ಯಾಸ್ತಗಳ ವರ್ಣನೆಗಳನ್ನು ಕಾವ್ಯದಲ್ಲಿ ತರುವುದು, ಪ್ರಕೃತಿಯ ಸಹಜ ಸೌಂದರ್ಯದ ಉಪಾಸಕನಾಗಿ ಕವಿಯು ಕಂಡರೂ ವಾಸ್ತವಿಕದ ಕಡೆ ಕವಿಯ ಕಾವ್ಯಗಳಲ್ಲಿ ಈ ವರ್ಣನೆಗಳನ್ನು ಒತ್ತಾಯದಿಂದ ತುರುಕುವುದುಂಟು. ಇವು ಒಂದೊಂದು ಸಲ ಮೂಲಕಥಾಸಂವಿಧಾನದಿಂದ ದೂರವಾಗಿಯೂ ಇರುವುದುಂಟು. ಆದರೆ ಇಲ್ಲಿ ಈ ವರ್ಣನೆಗಳು ಕಥೆಯ ಜೊತೆಯಲ್ಲಿ ಹೆಣೆದುಕೊಂಡಿವೆ. ಎಲ್ಲಿಯೂ ಬೇರ್ಪಟ್ಟಿಲ್ಲ. ಕೆಳಗಿನ ಉದಾಹರಣೆಗಳನ್ನು ನಿದರ್ಶನವಾಗಿ ಸೂಚಿಸಬಹುದು.

ಸೂರ್ಯೋದಯ

ಜಿನಧರ್ಮದೊಡನೆ ವಾದಿಸು
ವನ ವಂಶವ್ರಜಮನುರಿಪಲುದಯಿಪ ಖಚರೇಂ
ದ್ರನ ತೇಜೋವಹ್ನಿಯಿದೆಂ
ದೆನೆಯುದಯಾಚಲವನೇರಿದಂ ದಿವಸಕರಂ

ಉದಯಾಚಲದಲ್ಲಿ ಉದಿಸುವ ಸೂರ್ಯನು ಜಿನಧರ್ಮದೊಡನೆ ವಾದಿಸುವನ ವಂಶಸಮೂಹವನ್ನು ಸುಡಲು ಉದಯವಾಗುತ್ತಾನೋ ಅಥವಾ ಖೇಚರೇಂದ್ರನಾದ ಮನೋವೇಗನ ತೇಜೋವಹ್ನಿಯೋ ಇದು ಎನ್ನುವಂತೆ ಇವನು ಉದಯಿಸಿದನೆಂಬ ಮಾತು ಕಥೆಯ ಜೊತೆಗೆ ಹೇಗೆ ಹೆಣೆದುಕೊಂಡಿದೆ ಎನ್ನುವುದನ್ನು ಇಲ್ಲಿ ಅರಿಯಬಹುದು.

ಸೂರ್ಯಾಸ್ತದ ವರ್ಣನೆ

ಮನವಳುಪಿ ವಾರುಣೀಸೇ
ವನೆಯಂ ಮಾಡಿದೊಡೆ ನರಕವಪ್ಪುದೆನಿಪ್ಪೀ
ಜಿನಮತಮಂ ಮೀಱದೊಡಾ
ಯ್ತಿನಂಗಧೋಗತಿಯೆನಲ್ಕಧೋಗತಿಗಿಳಿದಂ

ರಾತ್ರಿಯಲ್ಲಿ ಜೈನರು ನೀರನ್ನು ಕೂಡ ಕುಡಿಯುವುದಿಲ್ಲವಷ್ಟೆ! ಜಿನಮತವನ್ನು ಮೀರಿ ರಾತ್ರಿಯಲ್ಲಿ ನೀರು ಕುಡಿದರೆ ಅಧೋಗತಿಗೆ ಇಳಿಯುತ್ತಾರೆನ್ನುವುದನ್ನು ಸೂಚಿಸಲು ಸೂರ್ಯನು ಅಸ್ತಂಗತನಾದನೆಂದು ಇಲ್ಲಿ ಹೇಳಿದೆ. ಮೇಲಿನ ಈ ಎರಡು ಪದ್ಯಗಳಲ್ಲಿ ಸೂರ್ಯೋದಯ, ಸೂರ್ಯಾಸ್ತಗಳ ವರ್ಣನೆಗಳು ಕಥೆಯ ಜೊತೆಯಲ್ಲಿ ಹೇಗೆ ಹೊಂದಿಕೊಂಡಿವೆ ಎನ್ನುವುದನ್ನು ಅರಿತಾಗ ಕವಿಯು ಆಯಾ ಸನ್ನಿವೇಶವನ್ನು ಕುಶಲಕಲ್ಪನೆಗೆ ಕಳೆಯೇರುವಂತೆ ಚಿತ್ರಿಸಬಲ್ಲನೆಂಬುದು ವಿದಿತವಾಗುತ್ತದೆ. ಕಥನರೀತಿಯು ಅದರ ಜೊತೆ ಹೆಜ್ಜೆ ಇಡುತ್ತದೆ. ಹೀಗೆ ಎಲ್ಲಿಯೂ ವರ್ಣನೆಗಳು ಮೂಲಕಥೆಯಿಂದ ದೂರವಾಗಿಲ್ಲವೆಂದು ಅನ್ನಿಸುತ್ತದೆ. ಎಲ್ಲವೂ ಒಟ್ಟಾಗಿ ಕಥೆಯ ಮೇಲ್ಮೆಯನ್ನು ಮೆರೆಸುತ್ತವೆ.

ಶೈಲಿ

ಕವಿಯ ಮನೋಧರ್ಮಕ್ಕನುಗುಣವಾಗಿ ಅವನ ಶೈಲಿಯಲ್ಲಿಯೂ ವ್ಯತ್ಯಾಸವನ್ನು ಕಾಣುತ್ತೇವೆ. ‘ಪ್ರತಿಭೆಯುಮಭ್ಯಾಸಮುಂ ವಿದ್ವತ್ಸೇವೆಯುಂ ಕಾವ್ಯ ಪರಿಚಯಮುಂ’ ಕವಿಯ ಕಾವ್ಯಕ್ಕೆ ಕಾರಣವೆಂದು ಲಾಕ್ಷಣಿಕರು ಹೇಳುತ್ತಾರೆ. ಇವುಗಳಿಂದ ಕವಿಯು ಪ್ರತಿಪಾದನೆ ಮಾಡುವ ಕಥಾವಸ್ತು, ಪಾತ್ರರಚನೆ, ವರ್ಣನೆ, ರಸ, ಕಲ್ಪನಾಸಾಮರ್ಥ್ಯ, ಅಲಂಕಾರ, ಧ್ವನಿ ಮೊದಲಾದವುಗಳು ಇವನ ಸ್ವತ್ತಾಗುತ್ತವೆ. ಕವಿಯಾದವನು ಇವುಗಳನ್ನು ತನ್ನ ಶಕ್ತ್ಯಾನುಸಾರವಾಗಿ ಚಿತ್ರಿಸುತ್ತಾನೆ. ಈ ಶಕ್ತಿಯೇ ಅವನ ಶೈಲಿಯ ಸ್ವರೂಪವನ್ನು ಸೂಚಿಸುತ್ತದೆ. ಶೈಲಿಯೆಂದರೆ ಕವಿಯ ಆತ್ಮವೆಂದೂ ಅವನ ‘ಭಾವನೆಗಳ ಅವತಾರ’ವೆಂದೂ, ಅವನ ಆಲೋಚನೆಗಳ ಉಡುಪೆಂದೂ, ಕಾವ್ಯಕನ್ಯೆಯ ಮುಖದ ಕಾಂತಿಯೆಂದೂ, ಕವಿಯ ಮನೋಧರ್ಮದ ಹೊದಿಕೆಯೆಂದೂ ಹೇಳುವುದುಂಟು ಇವೆಲ್ಲವೂ ಒಂದಾದಾಗ ಕಾವ್ಯದ ಅಲಂಪಿನ ಇಂಪು ಅಡರುತ್ತದೆ.

ಈ ಕಾವ್ಯದಲ್ಲಿ ಅಷ್ಟಾದಶವರ್ಣನೆಗಳ ಗೀಳು ಅಷ್ಟಾಗಿ ಇಲ್ಲದಿದ್ದರೂ ಸಮುದ್ರದ ವರ್ಣನೆ ಹಾಗೂ ಪುರವರ್ಣನೆಯಲ್ಲಿ ವಿರೋಧಾಭಾಸ ಅಲಂಕಾರಗಳ ಸುರಿಮಳೆಯಿದೆ. ಸಮುದ್ರದ ವರ್ಣನೆ ಇಂತಿದೆ :

ನಿಚಿತ ಕುಳೀರನಕ್ರಮಕರಪ್ರಕರಂ ಕರಿಕೂರ್ಮದರ್ದುರ
ಪ್ರಚಯಮುದಗ್ರವಾರ್ಘಣಿ ಝಷಾದಿ ಸಮಸ್ತ ಜಡಾಶ್ರಯ ವ್ರಜ
ಪ್ರಚಲಿತಘಾತಸಂಜನಿತ ತುಂಗತರಂಗ ಸಮೂಹ ಘಟ್ಟನ
ಪ್ರಚುರ ಘನಾಘನಪ್ರಬಳ ಘೋಷವಿಜೃಂಭಿತ ಘೂರ್ಣಿತಾರ್ಣವಂ

ಇಲ್ಲಿಯ ಸಂಸ್ಕೃತ ಪದಗಳ ಭೂಯಿಷ್ಠತೆಯನ್ನು ನೋಡಿದಾಗ ಇದು ಶಬ್ದಗಳ ಅರ್ಭಟವೋ ಅಥವಾ ಸಮುದ್ರದ ಅಲೆಗಳ ಆರ್ಭಟವೋ ಎಂದೆನ್ನಿಸುತ್ತದೆ. ಇಂಥ ವರ್ಣನೆಗಳನ್ನು ತರುವುದರಲ್ಲಿ ಪೂರ್ವಜರನ್ನು ಕವಿ ಅನುಸರಿಸಿದ್ದಾನೆ. ವಿಜಯಾರ್ಧ ಶೈಲವನ್ನು ವರ್ಣಿಸುವಲ್ಲಿ ವಿರೋಧಾಭಾಸ ಅಲಂಕಾರಗಳು ಅದೆಷ್ಟು ಬರುತ್ತವೆ! ಈ ಅಲಂಕಾರಗಳು ಕೂಡ ಹಿಂದಿನವರ ಅನುಕರಣಿಯೇ ಆಗಿದೆ.

ಕಾವ್ಯದಲ್ಲಿಯ ಉಚಿತವಾದ ವರ್ಣನೆಗಳು ಕವಿಯ ಶೈಲಿಗೆ ಸೊಬಗನ್ನು ಕೊಟ್ಟಂತಾಗುತ್ತವೆ. ಕೆಲವು ವರ್ಣನಾಪದ್ಯಗಳನ್ನು ಉದ್ಧರಿಸಿ ಕಾವ್ಯಕನ್ನಿಕೆಯ ಸೊಬಗನ್ನು ಸೂರೆಗೊಳಿಸಿದೆ.

ವನವರ್ಣನೆ

ತಳಿರಡಿ ಸೋಗೆ ಸೋರ್ಮುಡಿ ಪಿಕಸ್ವನವೊಳ್ನುಡಿ ಪೀವರಸ್ತನಂ
ಘಳತತಿ ಲೋಚನಂ ಕುಸುಮಸಂಕುಲವಾನನವಂಬುಜಂ ಭುಜಂ
ವಿಳಸಿತ ಶಾಖೆಯಂಗಮೆ ಲತಾಂಗಮದಾಗಿರೆ ಸರ್ವರೂಪಿನಿಂ
ಲಲನೆಯರಂತೆ ಶೋಭಿಸುವುದೀಕ್ಷಿಪರಕ್ಷಿಗೆ ಪಾವನಂ ವನಂ

ಇಲ್ಲಿಯ ಈ ಪಾವನವಾದ ವನವು ನೋಡುವವರ ಕಣ್ಣಿಗೆ ಲಲನೆಯರಂತೆ ಶೋಭಿಸುತ್ತದಂತೆ. ವನದಲ್ಲಿಯ ವಸ್ತುಗಳೆಲ್ಲವೂ ಒಟ್ಟು ಗೂಡಿದಾಗ ಲಲನೆಯರ ಹಾಗೆ ಶೋಭಿಸುವ ಕವಿಯ ಒಳ್ನೋಟ ಸಹಜವೂ ಉಚಿತವೂ ಆಗಿದೆ.

ಮಾಯದ ಹಕ್ಕಿ

ಓದಿಪೆನೆಂದದೊಂದು ಗಿಳಿಯಂ ಪಿಡಿಯಲ್ಕದೆಯ್ದೆ ಕೆಂ
ಪಾದುದು ತತ್ಕರದ್ಯುತಿಯಿನಂತದನೀಕ್ಷಿಸೆ ಲೋಚನಾಂಶುವಿಂ
ದಾದುದು ಬೆಳ್ಪದರ್ಕಗಿದು ಮಾಯದ ಪಕ್ಕಿಯಿದೆಂದು ಮುಗ್ಧೆತಾ
ನೋಂದಿಸಲಂಜಿ ಭೀತಿ ಮಿಗೆ ಪಂಜರದೊಳ್ ಪುಗಿಸಿಟ್ಟು ಮುಚ್ಚಿದಳ್

ಒಬ್ಬಳು ಗಿಳಿಗೆ ಓದು ಕಲಿಸುವೆನೆಂದು ಒಂದು ಗಿಳಿಯನ್ನು ಕೈಯಲ್ಲಿ ಹಿಡಿದಳಂತೆ. ಅವಳ ಕೋಮಲ ಕೈಯ ಪ್ರಕಾಶದಿಮದ ಅದು ಕೆಂಪಾಯಿತಂತೆ. ಇದು ಹೀಗೇಕಾಯಿತೆಂದು ಲೋಚನಾಂಶುವಿನಿಮದ ನೋಡಿದಳಂತೆ. ಆಗ ಅದು ಬೆಳ್ಳಗಾಯಿತಂತೆ. ಇದೊಂದು ಮಾಯದ ಹಕ್ಕಿ; ಇಂಥದಕ್ಕೆ ಹೇಗೆ ಓದು ಕಲಿಸುವುದು ಎಂದು ಪಂಜರದಲ್ಲಿ ಮತ್ತೆ ಬಿಟ್ಟುಬಿಟ್ಟಳಂತೆ. ಆ ಮುಗ್ಧೆ ನಿಜವಾಗಿಯೂ ಮುಗ್ಧೆಯೇ ಸರಿ.

ನಕ್ಷತ್ರಗಳ ವರ್ಣನೆ

ನೆಲನಗಲಕೆ ತೀವಿದ ಕ
ಳ್ತಲೆಯಂ ಕಳೆಯಲ್ಕೆ ಗಗನತಳದೊಳ್ ಪಲವುಂ
ಬೆಳಕಂಡಿಗಳಂ ಸಮೆದಂ
ಜಳಜಳನೆನೆ ತೊಳಗಿ ಬೆಳಗಿದುವು ಭಗಣಂಗಳ್

ಇಲ್ಲಿ ನಕ್ಷತ್ರಗಳನ್ನು ಬೆಳಕಂಡಿಗೆ ಹೋಲಿಸಿರುವುದು ಸೊಗಸಾದ ಚಿತ್ರ.

ಕೋಳಿಯ ಕೂಗು

ಪರಿಹರಿಸಿ ನಿದ್ರೆಯುಡುಗಿದ
ಕೊರಲಂ ನಿಮಿರ್ದೆತ್ತೆ ನೋಡಿ ನಾಲ್ದೆಸೆಯಂ ಕೇ
ಸರಮಂ ಬಿದಿರ್ದೆಱಂಕೆಯ
ನೆರಡಂ ಬಡಿದಿರ್ದು ಕೋಳಿ ಕೂಗಿದುವಾಗಳ್

ಕೋಳಿಯ ಕೂಗನ್ನು ನಾವೆಲ್ಲರು ನಿತ್ಯವೂ ಕೇಳುತ್ತೇವೆ. ಆದರೆ ನಿದ್ರೆಯುಡುಗಿದ ಕೊರಲಿನ ಕೇಸರವನ್ನು ಎತ್ತಿ ರೆಕ್ಕೆಯನ್ನು ಬಡಿಯುವ ನೋಟವನ್ನು ಕವಿಯಂತೆ ಅದೆಷ್ಟು ಜನ ನೋಡಿ ಆನಂದಿಸಿಯಾರು?

ಹೀಗೆ ಮೇಲಿನ ಹಲವು ವರ್ಣನೆಗಳಿಂದ ಕವಿಯ ಕವಿತಾಶಕ್ತಿ ಹಾಗೂ ಅವನ ಶೈಲಿಯ ಸೊಬಗನ್ನು ಅರಿಯಬಹುದಾಗಿದೆ.

. ಅಲಂಕಾರಗಳು

ಕಾವ್ಯದಲ್ಲಿ ಬರುವ ಅಲಂಕಾರಗಳು ಕಾವ್ಯಕನ್ನಿಕೆಯ ಶೋಭೆಯನ್ನು ಹೆಚ್ಚಿಸುತ್ತವೆ. ಕವಿಯ ಪ್ರತಿಭೆ ಹಾಗೂ ಪಾಂಡಿತ್ಯದ ಪರಿಚಯವಾಗಬೇಕಾದರೆ ಅವನು ಹಲವು ಅಲಂಕಾರಗಳನ್ನು ಬಳಸಿರಬೇಕು. ಬಳಸಬೇಕೆಂದು ಹಲವು ಅಲಂಕಾರಗಳನ್ನು ಅನಾವಶ್ಯಕವಾಗಿ ತುರುಕಿದಾಗ ಶೋಭೆ ಕೆಡುತ್ತದೆ. ಕೆಲವು ಜನ ಕವಿಗಳು ಹಾಗೆ ಬಳಸಿ ಕಾವ್ಯದ ಸ್ವಾರಸ್ಯವನ್ನು ಕೆಡಿಸುತ್ತಾರೆ. ವೃತ್ತವಿಲಾಸನು ತನ್ನ ಕಾವ್ಯದಲ್ಲಿ ಹೆಚ್ಚಾಗಿ ಅಲಂಕಾರಗಳನ್ನೇ ಬಳಸಿಲ್ಲ. ಅಲ್ಲಲ್ಲಿ ಕೆಲವು ಅಲಂಕಾರಗಳು ಕಾವ್ಯದ ಅಂಗವಾಗಿ ಕಥೆಯೊಡನೆ ಸೇರಿಕೊಂಡಿವೆ. ಮುಖ್ಯವಾಗಿ ಉಪಮೆ, ರೂಪಕ, ದೃಷ್ಟಾಂತ, ವಿರೋಧಾಭಾಸ ಮೊದಲಾದ ಅಲಂಕಾರಗಳು ಅಲ್ಲಲ್ಲಿ ಚದುರಿವೆ.

ಉಪಮೆ : ‘ಕಲ್ಪ ಕುಜಮಂ ಬಳಸಿದ ಕಲ್ಪಲತೆಯಂತೆ’ ‘ಕಲ್ಲಂತಾಗಿದ ಮಿಟ್ಟೆಯಂತೆ’

ರೂಪಕ : ‘ತುಂಬಿವಿಂಡಿನ ಝೇಂಕಾರಮೆ ಗೀತಮಾಗೆ’ ‘ಮಾಂಗೋನರ ರಸಮನಸದಳಮುಂಡ ಗಂಡುಗೋಗಿಲೆ ತಂಡದುಚ್ಫಸ್ವರಮೆ ವಾದ್ಯಮಾಗೆ’

ದೃಷ್ಟಾಂತ : ‘ಮದ್ದಳೆಗಂ ಮದ್ದಳೆಯಂ ಕೂರ್ಪ ನಲ್ಲಳಂತೆ ತೊಡೆಯೊಳಳವಡಿಸಿ’

ವಿರೋಧಾಭಾಸಾಲಂಕಾರ

ಬಡತನವೆಂಬುದು ಸತಿಯರ
ನಡುವಿನೊಳಾಲೀಢವಲಗು ವಿನ್ನಣದೊಳ್ ಸಂ
ಕಡಿ ಕುಚಮಧ್ಯದೊಳಾ ಕೌ
ಳ್ನುಡಿ ಕುಂಟಣಿವದಿರೊಳಲ್ಲದಿಲ್ಲಾ ನಾಡೋಳ್

ಈ ರೀತಿಯಾಗಿ ಕೆಲವು ಅಲಂಕಾರಗಳು ಅಲ್ಲಲ್ಲಿ ಚೆಲ್ಲವರಿದಿವೆ. ಅಲಂಕಾರಗಳಲ್ಲದೆ ಹಲವು ನಾಣ್ಣುಡಿಗಳನ್ನು ಈ ಕಾವ್ಯದಲ್ಲಿ ಬಳಸಲಾಗಿದೆ. ಇದರಿಂದ ಕವಿ ಜನಜೀವನದ ನಿತ್ಯ ಮಾತುಗಳಿಂದಲೂ ದೂರಾಗಿಲ್ಲವೆಂದು ಹೇಳಬಹುದಾಗಿದೆ.

. ನಾಣ್ಣುಡಿಗಳು

‘ಆನೆ ಹಯನಾದಂತೆಯುಂ’, ‘ಕಲ್ಪವೃಕ್ಷಂ ಪಣ್ತಂತೆಯುಂ’, ‘ಆತ್ಮದೋಷಂನ ಪಶ್ಯತಿ’, ‘ಆಖುಭಯದಿಂದಾವಾಸಮಂ ಮಾಡದಿರ್ಪರೆ’, ‘ಮೀನೆಂಜಲಿಗಂಜಿ ನೀರ್ದೊಳೆವರೇ’, ‘ಮಕ್ಷಿಕಾಶಂಕೆಗುಣ್ಣರೆ’, ‘ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ’, ‘ಸರ್ವೇಷು ಗಾತ್ರೇಷು ಶಿರಃ ಪ್ರಧಾನಂ’ ಹೀಗೆ ಕನ್ನಡ ಸಂಸ್ಕೃತ ನಾಣ್ಣುಡಿಗಳು ಅಲ್ಲಲ್ಲಿ ಕಾಣಬರುತ್ತವೆ.

. ಛಂದೋವೈವಿಧ್ಯ

ಕಾವ್ಯಕನ್ನಿಕೆಗೆ ಅಲಂಕಾರಗಳು ತೊಡವುಗಳಾದರೆ ಛಂದಸ್ಸೇ ಅವಳ ನಡಿಗೆ, ರಸಧ್ವನಿಗಳು ಅವಳ ಉಸಿರು. ಇವೆಲ್ಲವೂ ಒಂದಾದಾಗ ರಸಸ್ಯಂದನವಾಗಲು ಸಾಧ್ಯ. ಧರ್ಮಪರೀಕ್ಷೆಯಲ್ಲಿ ಛಂದೋವೈವಿಧ್ಯವಿದೆ. ವೃತ್ತವಿಲಾಸನು ವೃತ್ತಗಳೊಡನೆ ಲಾಸ್ಯವಾಡಿದ್ದಾನೆ. ವಿವಿಧ ಛಂದಸ್ಸುಗಳನ್ನು ಬಳಸಿ ತನ್ನ ಹೆಸರನ್ನು ಸಾರ್ಥಕ ಮಾಡಿಕೊಂಡಿದ್ದಾನೆ. ಕವಿ, ಚಂಪೂಕಾವ್ಯ ಪರಂಪರೆಯ ಅವನತಿಯಲ್ಲಿ ಇದ್ದವನು. ಕವಿಯ ಕಾಲದಲ್ಲಿ ಷಟ್ಟದಿಯ ಛಂದಸ್ಸು ಉಚ್ಫ್ರಾಯ ಸ್ಥಿತಿಯಲ್ಲಿತ್ತು. ಎಲ್ಲ ಕವಿಗಳು ಆಗ ತಮ್ಮ ಕಾವ್ಯಗಳನ್ನು ಷಟ್ಟದಿ ಛಂದಸ್ಸಿನಲ್ಲಿಯೇ ಬರೆಯುತ್ತಿದ್ದರು. ಇದರಿಂದ ಇವನ ಛಂದಸ್ಸಿನಲ್ಲಿಯೂ ಶೈಲಿಯಲ್ಲಿಯೂ ಶೈಥಿಲ್ಯವಿದೆ. ಆದರೂ ಹಲವಾರು ವೃತ್ತಗಳನ್ನು ಬಳಸುವುದಲ್ಲದೆ ರಗಳೆ, ತ್ರಿಪದಿ, ದಡ್ಡಕ್ಕರ ಮೊದಲಾದ ಕನ್ನಡ ದೇಶೀಯ ರೂಪಗಳನ್ನು ತನ್ನ ಕಾವ್ಯದಲ್ಲಿ ಸೇರಿಸಿದ್ದಾನೆ. ಇದರಲ್ಲಿ ಐದು ವಿಧದ ಸಂಸ್ಕೃತ ವೃತ್ತಗಳಿವೆ. ಇವುಗಳ ಭಾಷೆ ಹಾಗೂ ಛಂದಸ್ಸು ಸಂಸ್ಕೃತ, ಲಿಪಿ ಮಾತ್ರ ಕನ್ನಡದ್ದು. ಹರಿಷೇಣನ ೯೮೮ ಧರ್ಮಪರೀಕ್ಷೆಯಲ್ಲಿಯ ೧೪ – ೧೫ ಸಂಸ್ಕೃತ ಶ್ಲೋಕಗಳು ಯಥಾವತ್ತಾಗಿ ಕನ್ನಡ ಧರ್ಮಪರೀಕ್ಷೆಯಲ್ಲಿ ಇವೆ. ಖ್ಯಾತ ಕರ್ಣಾಟಕ ವೃತ್ತಗಳನ್ನು ಬಳಸುವುದಲ್ಲದೆ ಕೆಲವು ಅಪೂರ್ವ ವೃತ್ತಗಳಾದ ಕಳಾಭಾಷಿಣೀ, ಉತ್ಸಾಹ, ರಥೋದ್ಧತ, ಸ್ವಾಗತ, ಪೃಥ್ವಿ, ಭ್ರಮರ, ತರಳ, ಕಂಠಿಕೆ, ಮಾಳಾ, ವಸಂತತಿಲಕ ಮೊದಲಾದುವುಗಳನ್ನು ಇಲ್ಲಿ ಪ್ರಯೋಗಿಸಲಾಗಿದೆ. ಹೀಗೆ ಕವಿಯು ಬಳಸಿದ ಛಂದೋವೈವಿಧ್ಯದಿಂದ ಅವನ ಛಂದಶ್ಯಾಸ್ತ್ರದ ಅರಿವನ್ನೂ ಅವನ ಪಾಂಡಿತ್ಯವನ್ನೂ ತಿಳಿಯಬಹುದಾಗಿದೆ.

ಈ ಕಾವ್ಯದಲ್ಲಿ ಬರುವ ರಸ ಹಾಗೂ ಧ್ವನಿಯ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬಹುದು. ಈ ಕಾವ್ಯವು ‘ಜಿನೇಂದ್ರಧರ್ಮ’ ಕಥೆಯಾಗಿದ್ದರೂ ಜಿನಧರ್ಮದ ಪ್ರಸಾರಕ್ಕೆ ವಿಡಂಬನೆಯ ನೆರವನ್ನು ಪಡೆದ ಕಾವ್ಯವಾಗಿದೆ. ಅನ್ಯ ಮತದ ದೂಷಣೆಗೆ ಹಾಸ್ಯರಸದ ನೆರವನ್ನು ಪಡೆಯಬೇಕಲ್ಲವೆ? ಕವಿ ಇಲ್ಲಿ ಹಾಸಯ ರಸವನ್ನು ಪ್ರಧಾನವಾಗಿ ತಂದಿದ್ದಾನೆ. ಉಪಕಥೆಗಳನ್ನು ಹೇಳುವಲ್ಲಿ, ಸ್ವಂತದ ಕಥೆಗಳನ್ನು ನಿರೂಪಿಸುವಲ್ಲಿ ಈ ಕಥೆಗಳಿಗೆ ಸಂವಾದಿಯಾಗಿ ಪುರಾಣ ಕಥೆಗಳನ್ನು ಖಂಡಿಸುವಲ್ಲಿ ಹಾಸ್ಯದ ಹೊನಲನ್ನೇ ಹರಿಸಿದ್ದಾನೆ. ಇದರಲ್ಲಿ ಬರುವ ನಾಲ್ಕು ಮೂರ್ಖರ ಕಥೆಗಳಂತೂ ಹಾಸ್ಯ ರಸಕ್ಕೆ ಉತ್ತಮ ನಿದರ್ಶನ. ಇದಲ್ಲದೆ ಜಿನಮತದ ನಿರೂಪಣೆ ಮತ್ತು ತತ್ತ್ವಗಳ ಪ್ರಸಾರವನ್ನು ಜಿನಧರ್ಮದಲ್ಲಿಯ ಶ್ರದ್ಧಾಭಕ್ತಿಯನ್ನು ಈ ಕಾವ್ಯವು ಸೂಚಿಸುತ್ತದೆ. ಕಾವ್ಯದ ಕೊನೆಯ ಭಾಗವಾದ ಹೋಸವ್ರತವು ಭಕ್ತಿ ರಸದ ಉಕ್ಕಂದವಾಗಿ ಉಕ್ಕಿದೆ.

ವಿಡಂಬಿಸುವುದು ಯಾವಾಗಲೂ ನೇರವಾಗಿರುವುದಿಲ್ಲ. ಚತುರ ವಿಡಂಬಕನು ಧ್ವನಿಯುಕ್ತವಾಗಿ ಅಪಹಾಸ್ಯ ಮಾಡುತ್ತಾನೆ. ವಕ್ರೋಕ್ತಿಗಳಿಂದ, ಮೂದಲಿಕೆಗಳಿಂದ ಪ್ರತಿಪಕ್ಷವನ್ನು ತಿವಿಯುತ್ತಾನೆ. ಇಂಥ ಎಲ್ಲ ಸಂದರ್ಭಗಳಲ್ಲಿಯೂ ಧ್ವನಿಯುಕ್ತವಾಗಿ ಹೇಳಬೇಕಾಗುತ್ತದೆ. ಕಾವ್ಯದ ಉದ್ದಕ್ಕೂ ಧ್ವನ್ಯಾವಲೋಕನವನ್ನು ಮಾಡಬಹುದು. ವೃತ್ತವಿಲಾಸನು ಧ್ವನಿಯುಕ್ತವಾಗಿ ವಿಡಂಬಿಸಬಲ್ಲ ಸಮರ್ಥಕವಿಯಾಗಿದ್ದಾನೆ. ಇವನು ನಿತ್ಯವೂ ಹೇಳಿದ ಎಂಟು ದಿನಗಳ ಕಥೆಗಳಲ್ಲಿ ವೈದಿಕಧರ್ಮದ ವಿಡಂಬನೆಯು ಎದ್ದು ಕಾಣುತ್ತದೆ. ಮೊದಲನೆಯ ದಿವಸ ಹಿಂದಿನ ಧರ್ಮಪರೀಕ್ಷೆಕಾರರು ವಿಡಂಬಿಸಿದಂತೆ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹರು ದೇವರೆ ಎಂದು ಇವನೂ ಕೇಳುತ್ತಾನೆ. ಎರಡನೆಯ ದಿವಸ, ೩ – ೪ ತಿಂಗಳು ಊರಿಗೆ ಹೋದ ಬ್ರಾಹ್ಮಣನೊಬ್ಬನು ತನ್ನ ಹೆಂಡತಿ ಹಾಗೂ ಶಿಷ್ಯ ಎದುರಿಗೆ ಬಂದರೂ ಅರಿಯದ ಮಹಾಮೂರ್ಖನೆಂದು ತಿಳಿಸಿ, ಬ್ರಾಹ್ಮಣರು ಹೀಗಿರುತ್ತಾರೆಂದು ಗೇಲಿಮಾಡಿದ್ದಾನೆ ಕವಿ. ಅದೇ ದಿವಸ ಶಿವ, ಬ್ರಹ್ಮ, ಕೃಷ್ಣ, ಸೂರ್ಯ, ಇಂದ್ರ ಮೊದಲಾದ ದೇವತೆಗಳ ಅವಗುಣಗಳನ್ನು ಎತ್ತಿ ಹೇಳಿ, ಸತ್ಯವಂತನಾದ ಯಮನೂ ಅವಕಾಶ ದೊರೆತಾಗ ಹೇಗೆ ಭೋಗಲಾಲಸೆಯುಳ್ಳವನಾಗುತ್ತಾನೆಂಬುದನ್ನು ತೋರಿಸುತ್ತಾನೆ. ಹೀಗೆ ಮೊದಲನೆಯ ನಾಲ್ಕು ದಿನಗಳಲ್ಲಿ ಪುರಾಣಕಥೆಗಳನ್ನು ಪರಿಹಾಸ್ಯ ಮಾಡುವುದು, ಕೊನೆಯ ನಾಲ್ಕು ದಿನಗಳಲ್ಲಿ ವೈದಿಕಧರ್ಮವನ್ನು ಖಂಡಿಸುವುದರ ಜೊತೆಯಲ್ಲಿ ಜಿನಧರ್ಮದ ತತ್ವ್ತವಿವರಣೆ ಹಾಗೂ ಅದರ ನಿರೂಪಣೆಯನ್ನು ಈ ಕಾವ್ಯದಲ್ಲಿ ಕಾಣುತ್ತೇವೆ. ಕೊನೆಯ ಆಶ್ವಾಸದಲ್ಲಿ ಬರುವ ಹೋಸವ್ರತದ ಪ್ರಸಂಗವಂತೂ ಜಿನಧರ್ಮದ ಸಾರಸರ್ವಸ್ವವಾಗಿದೆ.

ಒಟ್ಟಾರೆ ಕಾವ್ಯದ ಶೈಲಿಗೆ ಪೋಷಕವಾದ ಕಥಾವಸ್ತು, ಪಾತ್ರರಚನೆ, ವರ್ಣನೆಗಳು, ಕಲ್ಪನಾಶಕ್ತಿ, ಅಲಂಕಾರ, ರಸ, ಧ್ವನಿಗಳೆಲ್ಲವೂ ಈ ಕಾವ್ಯದಲ್ಲಿ ಚೆಲ್ಲವರಿದಿವೆ. ಇವು ಕಾವ್ಯದ ಶೈಲಿಯ ಸೊಬಗನ್ನು ಹೆಚ್ಚಿಸಿವೆ. ಈತನು ಶ್ರೇಷ್ಠಮಟ್ಟದ ತಾರ್ಕಿಕನೂ ಮೇಲ್ಮಟ್ಟದ ವಿಡಂಬನಕಾರನೂ ಆಗಿದ್ದನೆಂಬುದು ನಿರ್ವಿವಾದ.

. ಧರ್ಮಪರೀಕ್ಷೆಯಲ್ಲಿಯ ವ್ಯಾಕರಣ ವೈಶಿಷ್ಟ್ಯಗಳು

ವೃತ್ತವಿಲಾಸನ ಧರ್ಮಪರೀಕ್ಷೆಯು ಚಂಪೂಗ್ರಂಥ. ಇವನ ಕಾಲಕ್ಕಾಗಲೇ ಚಂಪೂ ಸಾಹಿತ್ಯವು ಅವನತಿಗೆ ಇಳಿಯುತ್ತ ಬಂದಿತ್ತು. ಆಗ ವಿಶೇಷವಾಗಿ ತ್ರಿಪದಿ, ವಚನ, ರಗಳೆ, ಷಟ್ಟದಿ, ಮೊದಲಾದ ಪ್ರಕಾರಗಳಲ್ಲಿಯೇ ಕಾವ್ಯ ರಚನೆ ಮಾಡುತ್ತಿದ್ದರು. ಇಂಥ ಇಳಿಗಾಲದಲ್ಲಿ ಬರೆದ ಇವನ ಚಂಪೂಕೃತಿ ಪಂಪಾದಿಗಳ ಕೃತಿಗೆ ಸರಿದೊರೆಯಾಗಿ ನಿಲ್ಲಲು ಸಾಧ್ಯವಿಲ್ಲ. ೧೧ – ೧೨ನೆಯ ಶತಮಾನದ ಹೊತ್ತಿಗೆ ಚಂಪೂವಿನ ಹಿರಿಮೆಗರಿಮೆಗಳು ಕುಗ್ಗುತ್ತ ಬಂದಿದ್ದವು. ಕನ್ನಡ ಭಾಷೆ ಹಳಗನ್ನಡದಿಂದ ನಡುಗನ್ನಡಕ್ಕೆ ಮಾರ್ಪಾಡಾಗುತ್ತಿತ್ತು. ವಚನ, ರಗಳೆ, ಷಟ್ಟದಿಗಳಲ್ಲಿ ಈ ಮಾರ್ಪಾಡುಗಳನ್ನು ಕಾಣುತ್ತೇವೆ. ೧೩ನೆಯ ಶತಮಾನದ ಕೇಶಿರಾಜನು ಚಂಪೂ ಕಾವ್ಯಗಳೇ ತನ್ನ ಶಾಸ್ತ್ರೀಯ ಗ್ರಂಥಕ್ಕೆ ಪ್ರಮಾಣ ಪ್ರಯೋಗಗಳೆಂದು ಪ್ರತಿಪಾದಿಸಿದನು. ತನಗಿಂತ ಹಿಂದೆ ಶ್ರೀಮಂತವಾಗಿ ಬೆಳೆದಿದ್ದ ತ್ರಿಪದಿ, ವಚನ, ರಗಳೆ, ಷಟ್ಟದಿಕೃತಿಗಳು ತನ್ನ ಶಾಸ್ತ್ರೀಯ ಕೃತಿಗೆ ಪ್ರಮಾಣವಲ್ಲವೆಂದು ಕೈಬಿಟ್ಟಿದ್ದಾನೆ.

ಕೇಶಿರಾಜನ ಅನಂತರ ಸುಮಾರು ನೂರು ವರ್ಷಗಳಾದ ಮೇಲೆ ಈ ಧರ್ಮಪರೀಕ್ಷೆ ಕಾವ್ಯವು ಹುಟ್ಟಿದೆ. ಭಾಷೆಯಲ್ಲಿ ವ್ಯತ್ಯಾಸವಾಗುವುದು ಜೀವಂತ ಭಾಷೆಯ ಲಕ್ಷಣವಾಗಿದೆ. ಭಾಷಾಶಾಸ್ತ್ರದ ದೃಷ್ಟಿಯಿಂದ ನೂರು ವರ್ಷಗಳ ಕಾಲವು ಅಷ್ಟೇನೂ ಹೆಚ್ಚಾದುದಲ್ಲ. ಆದುದರಿಂದ ಶಬ್ದಮಣಿದರ್ಪಣದಲ್ಲಿ ಕಾಣಬರುವ ಅದೆಷ್ಟೋ ವ್ಯಾಕರಣ ವೈಶಿಷ್ಟ್ಯಗಳು ಧರ್ಮಪರೀಕ್ಷೆಯಲ್ಲಿಯೂ ಕಾಣಬರುತ್ತದೆ. ಆದರೆ ಈ ಕಾವ್ಯದಲ್ಲಿ ಱೞ, ಕುಳಗಳ ಪ್ರಾಸವು ಅಲ್ಲಲ್ಲಿ ಇದ್ದುದರಿಂದ, ಱೞ ಈ ಕಾಲದಲ್ಲಿ ಮಾಯವಾದುದರಿಂದ, ಇಲ್ಲಿ ಱೞ ಪ್ರಸ್ತಾಪವನ್ನೇ ಕೈ ಬಿಡಲಾಗಿದೆ. ಸಂಸ್ಕೃತದ ಲಕಾರ ಕ್ಷಳರೂಪದಲ್ಲಿ ಸಾಕಷ್ಟು ಎಡೆಯಲ್ಲಿ ಕಾಣಬರುತ್ತದೆ. ಉದಾ: ವೃತ್ತವಿಳಾಸಂ (೧ – ೨೮), ಕೇವಳಿ (೧ – ೧೦), ನಿಖಿಳ (೧ – ೯), ತಾಂಬೂಳ (೧ – ೫೩), ಫಳ (೧ – ೪೭), ಜಳರೇಖೆ (೧ – ೭೧)

ಈ ಕಾವ್ಯದಲ್ಲಿ ಕೇಶಿರಾಜನಿಗೆ ಒಪ್ಪಿಗೆಯಾದ ಕುಳಕ್ಷಳ (೬ – ೧೦) (೧ – ೫೬)ಗಳ ಪ್ರಾಸವಲ್ಲದೆ ಲಕಾರ ಳಕಾರಗಳ (೩ – ೪೭) (೧ – ೧೧) ಪ್ರಾಸವಿದೆ. ಕುಳ ಲಕಾರಗಳ ಪ್ರಾಸ (೧ – ೪೭)ವೂ ಕ್ಷಳಕಾರ ಲಕಾರಗಳ ಪ್ರಾಸವೂ (೩ – ೬೭) ಕೇಶಿರಾಜನಿಗೆ ಒಪ್ಪಿಗೆಯಾಗದಿದ್ದರೂ ಇಲ್ಲಿ ದೊರೆಯುತ್ತವೆ. ಳಕಾರ ಣಕಾರಗಳ ಪ್ರಾಸ (೧ – ೭೪), ಸಕಾರ ಷಕಾರಗಳ ಪ್ರಾಸವೂ ಲಕಾರ ಕುಳ ಕ್ಷಳಗಳ ಪ್ರಾಸ (೨ – ೧೦) ವೂ ಈ ಕಾವ್ಯದಲ್ಲಿ ಇವೆ. ಈ ಬಗೆಯ ಪ್ರಾಸದಲ್ಲಿಯ ಶೈಥಿಲ್ಯವನ್ನು ನೋಡಿದಾಗ ೧೪ನೆಯ ಶತಮಾನದ ಹೊತ್ತಿಗೆ ಪ್ರಾಸಗಳ ನಿಯಮ ಹೇಗೆ ಸಡಿಲಾಗುತ್ತ ಬಂದಿದೆ ಎಂದು ಅನ್ನಿಸುತ್ತದೆ.

ಧರ್ಮಪರೀಕ್ಷೆಯು ೧೪ನೆಯ ಶತಮಾನದ ಕಾವ್ಯವಾಗಿದ್ದರೂ ಅದರಲ್ಲಿ ಪೂರ್ವದ ಹಳಗನ್ನಡದ ಪ್ರಯೋಗಗಳು ಅಲ್ಲಲ್ಲಿ ನುಸುಳಿಕೊಂಡಿವೆ. ಚಂಪೂ ಕಾವ್ಯವನ್ನೇ ಬರೆಯಲು ಹೊರಟ ಕವಿಗಳಿಗೆ ಇದು ಸಹಜವಾದದು. ಪಂಪಾದಿ ಕವಿಗಳಲ್ಲಿ ಅಷ್ಟೇ ಅಲ್ಲ, ೧೬ – ೧೭ನೇ ಶತಮಾನದಲ್ಲಿಯ ಚಂಪೂಕಾರರಲ್ಲಿಯೂ ಈ ಪದಗಳು ಅಲ್ಲಲ್ಲಿ ದೊರೆಯುತ್ತವೆ. ಹಳಗನ್ನಡ ಪದಗಳ ಜೊತೆಯಲ್ಲಿ ಪೂರ್ವದ ಹಳಗನ್ನಡ, ನಡುಗನ್ನಡ ಪದಗಳು ಚಂಪೂಕಾವ್ಯಗಳಲ್ಲಿ ಬರುವುದು ಸಹಜವಾಗಿದೆ. ಪೂರ್ವದ ಹಳಗನ್ನಡ ಕೆಲವು ಪದಗಳನ್ನು ಇಲ್ಲಿ ಉದಾಹರಿಸಲಾಗಿದೆ ಕಿಡೆ (೧ – ೪), ಪುಗು (೫ – ೧೬), ತುಡೆ (೧ – ೫೪), ಕುಡೆ (೧ – ೭೨), ಕಳ್ತಲೆ (೩ – ೧೦೪ವ), ಸೀತೆ (೫ – ೧೪ವ) ವಸ್ತ್ರವೆಂಬ ಅರ್ಥದಲ್ಲಿ, ಕೂಸಂ ತಂದು (೯ – ೪೭ವ) (ಕೂಸು ಶಬ್ದಕ್ಕೆ ಪೂರ್ವದ ಹಳಗನ್ನಡದಲ್ಲಿ ಹೆಂಗಸು ಎಂಬ ಅರ್ಥದಲ್ಲಿ ಪ್ರಯೋಗ ಉಂಟು).

ವೃತ್ತವಿಲಾಸನು ಹರಿಷೇಣನ ಅಪಭ್ರಂಶ ಕೃತಿಯನ್ನು ನೋಡಿರಬೇಕೆಂದು ಹಿಂದೆ ತಿಳಿಸಲಾಗಿದೆ. ಅದಕ್ಕೆ ಉಪಷ್ಟಂಭಕವಾಗಿ ಅಲ್ಲಿಯ ಎಷ್ಟೋ ಶಬ್ದಗಳನ್ನು ಈ ಕವಿಯು ಬಳಸಿರಲು ಸಾಧ್ಯವಿದೆ. ಉದಾ : ಬೋಹಣ, ಮೊಖರಿಗಾಣ (೨ – ೧೯), ಸಹಗಾಣರಂ (೨ – ೨೧) ಪೆಕ್ಖಣ (೨ – ೨೪ವ), ಪುಂಶ್ಚಳಿಯಂತೆ, ಠವಣೆಯೊಳ್, ಪೆಕ್ಕಣ, ಪಟ್ಠಯೊಳ್, ಪಹರಣೆ ಈ ಮೊದಲಾದುವುಗಳು.

‘ಪುಱ್ಪ’ ಎಂಬ ಶಬ್ದಕ್ಕೆ ಕಿಟೆಲ್ ನಿಘಂಟಿನಲ್ಲಿ ಪುಷ್ಪ ಎಂದು ಅರ್ಥವಿದೆ. ಹಲಾಯುಧ ನಿಘಂಟಿನಲ್ಲಿ ಪುಷ್ಪವೆಂದೇ ಕೊಟ್ಟಿದ್ದಾನೆ. ಶಕಟರೇಫ ಪ್ರಯೋಗವುಳ್ಳ ಈ ಶಬ್ದ ಕನ್ನಡದ್ದಾಗಿರಲು ಸಾಧ್ಯ. ಸಂಸ್ಕೃತ ನಿಘಂಟಿನಲ್ಲಿ ಈ ಶಬ್ದವಿಲ್ಲ. ಪಂಪರಾಮಾಯಣದಲ್ಲಿ (೧ – ೧೧೮) ಪುಱ್ಪಚಾಪವಿದೆ. ಚಂದ್ರಪ್ರಭಪುರಾಣದಲ್ಲಿ (೧ – ೪೧), (೩ – ೬೧), (೮ – ೧೦೪) ಪುಱ್ಪ, ಪುಱ್ಪಕದಂಬ ಪದಗಳಿವೆ. ಹಲಾಯುಧ ನಿಘಂಟಿನಲ್ಲಿ ಪುಱ್ಪವತಿ ಇದೆ. ಈ ಕಾವ್ಯದಲ್ಲಿ ಈ ಶಬ್ದವನ್ನು ಹಲವೆಡೆಯಲ್ಲಿ ಕಾಣುತ್ತೇವೆ. ಪುಱ್ಪಕ ವಿಮಾನ, ಪಿಱ್ಪವತಿ, ಪಿಱ್ಪವೃಷ್ಟಿ (೧ – ೮೮) ಅರಿಸಮಾಸವಾಗಿದೆ. ಒಂದು ಆಶ್ಚರ್ಯಕರವಾದ ವಿಷಯವೆಂದರೆ ಈ ಪುಱ್ಪ ಶಬ್ದವು ಈ ಕಾವ್ಯದಲ್ಲಿಯ ಒಂದು ಸಂಸ್ಕೃತ ಸ್ರಗ್ಧರಾವೃತ್ತದಲ್ಲಿಯೂ ‘ಪತ್ರಪುಱ್ಪತೃಣಾಗ್ರೇ’ (೩ – ೫೨) ಎಂದು ಕಾಣಬರುತ್ತದೆ. ಎಲ್ಲೆಡೆಯಲ್ಲಿಯೂ ಶರಟರೇಫಯುಕ್ತವಾಗಿಯೇ ಬರೆಯಲಾಗಿದೆ.

ಈ ಗ್ರಂಥದಲ್ಲಿ ಪ್ರಥಮಾ, ದ್ವಿತೀಯಾ ವಿಭಕ್ತಿಗಳಂತೂ ನಿಯತವಾಗಿ ಎಲ್ಲೆಲ್ಲಿಯೂ ಬಂದಿವೆ. ಕೆಲವೆಡೆಯಲ್ಲಿ ಪ್ರಥಮಾ ವಿಭಕ್ತಿ ಪ್ರತ್ಯಯಗಳಿಲ್ಲದೆ ಪ್ರಕೃತಿ ರೂಪಗಳನ್ನೇ ಪ್ರಯೋಗಿಸಲಾಗಿದೆ. ಇಂ. ಇಂದಂ, ಇಂದೆ ಎಂದು ತೃತೀಯೆಗೆ ಮೂರು ವಿಭಕ್ತಿ ಪ್ರತ್ಯಯಗಳು ಬರುತ್ತವೆಯೆಂದೂ, ಈ ಮೂರಕ್ಕೂ ಆದೇಶವಾಗಿ ‘ಎ’ ಕಾರ ಬರುತ್ತದೆಂದು ಕೇಶಿರಾಜನ ಸೂತ್ರ ೧೧೭ ವೃತ್ತಿಯಲ್ಲಿ ಹೇಳಲಾಗಿದೆ. ಈ ಕಾವ್ಯದಲ್ಲಿ ಈ ಸೂತ್ರಕ್ಕೆ ಸಂಬಂಧಪಟ್ಟಂತೆ ಹೇರಳವಾದ ಪ್ರಯೋಗಗಳು ದೊರೆಯುತ್ತವೆ. ಉದಾ: ಒಲವಿಂ (೨ – ೫೭), ಎಸಕದಿಂ (೩ – ೧೭ವ) ಆನಂದದಿಂದೆ, ಅರ್ತಿಯಿಂದೆ (೬ – ೧೦), ಆಸಕ್ತಿಯಿಂದಂ (೯ – ೧೬), ಆನಂದದೆ (೩ – ೬), ಅಸ್ತ್ರದೆ (೪ – ೨೦).

ಅಕಾರಾಂತಪುಲ್ಲಿಂಗಕ್ಕೆ ಪರವಾದ ಚತುರ್ಥಿಗೆ ಬಿಂದುವಿನಿಂದ ಕೂಡಿದ ಗೆಕಾರ ಬರುವುದುಂಟು. (ಕೇಶಿ. ಸೂ. ೧೨೩ ವೃತ್ತಿ) ಉದಾ: ಆತಂಗೆ (೫ – ೧೦), ಆವಂಗೆ (೬ – ೫ವ), ಅರಸಂಗೆ (೬ – ೧೫ವ), ಕುಮಾರಂಗೆ (೫ – ೧೧ವ) ಶಿವಂಗೆ (೬ – ೧೫ವ) ಅಕಾರಾಂತ ಚತುರ್ಥಿಗೆ ವಿಕಲ್ಪದಿಂದ ದ್ವಿರ್ಭಾವವಾಗುತ್ತದೆ. ಗೀತಕ್ಕೆ (೩ – ೮೪ವ), ಸಮೀಪಕ್ಕೆ (೨ – ೬೫), ದಿವಸಕ್ಕೆ (೩ – ೧೦೪ವ), ಭಿಕ್ಷಕ್ಕೆ (೪ – ೧೮), ಧರ್ಮಕ್ಕೆ (೧ – ೯೫), ಸ್ವರ್ಗಕ್ಕೆ (೩ – ೯೮), ಅಕಾರಂತವಲ್ಲದ ಸ್ವರ, ವ್ಯಂಜನಾಂತಗಳಿಗೆ ಲಿಂಗ, ವಚನ, ವ್ಯವಸ್ಥೆಯಿಲ್ಲದೆ ಚತುರ್ಥಿಗೆ ಗೆಕಾರ ಬರುವುದುಂಟು. ವಧುಗೆ (೨ – ೪೪), ಪೊರಿಗೆ (೨ – ೫೦), ಆವರ್ಗೆ (೩ – ೫), ಡಿಂಡಿಭೆಗೆ (೩ – ೨೭ವ), ರತಿಗೆ (೧ – ೬೭ವ) ಸುರಾಳಿಗೆ (೨ – ೨೮).