ಬ್ರಹ್ಮಶಿವನ ಲಘುಕೃತಿಯಿದು. ಇದನ್ನು ಪಂಡಿತರತ್ನ ಎ. ಶಾಂತಿರಾಜ ಶಾಸ್ತ್ರಿಗಳು ಎರಡು ಅಶುದ್ಧಪತ್ರಿಗಳ ಆಧಾರದಿಂದಲೂ (೧೯೪೨, ದ್ವಿ.ಮು. ೧೯೮೯) ಕೆ. ಅನಂತರಾಮು ಅವರು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯ (ಈಗ ಕುವೆಂಪು ಕಅಸಂ.) ಹಸ್ತಪ್ರತಿಯೊಂದರ ಆಧಾರದಿಂದಲೂ (ಕವಿ ಬ್ರಹ್ಮಶಿವ: ಒಂದು ಅಧ್ಯಯನ, ೧೯೯೧) ಈಗಾಗಲೇ ಎರಡು ಸಲ ಸಂಪಾದಿಸಿ ಪ್ರಕಟಿಸಿದ್ದಾರೆ. ಆದರೂ ತೃಪ್ತಿಕರವಲ್ಲದ ಪಾಠಗಳೂ ಸಂದೇಹಗಳೂ ಹಾಗೆಯೇ ಉಳಿದಿವೆ. ಇವೆರಡನ್ನೂ ಬಳಸಿಕೊಂಡು ಇನ್ನೊಮ್ಮೆ ಇಲ್ಲಿ ಕೃತಿಯನ್ನು ಪರಿಷ್ಕರಿಸಿದೆ. ಆದರೂ ಪರಿಷ್ಕರಣ ಪೂರ್ತಿ ತೃಪ್ತಿಕರ ಎನ್ನುವಂತಿಲ್ಲ.

ಶ್ರೀಯಂ ವಿಷ್ಣುಗೆ ಪದ್ಮಜಂಗೆ ಮತಿಯಂ ಸೂರ‍್ಯಂಗೆ ತೇಜತ್ವಮಂ
ಮಾಯಾಮಾರ್ಗಮನೀಶ್ವರಂಗೆ ಹರಿಗೊಲ್ದಿಂದ್ರತ್ವಮಂ ನಾಗಲೋ
ಕಾಯತ್ತಂ ಫಣಿರಾಜರಾಜಿತಫಣೀಂದ್ರಂಗಿತ್ತಿರಿಂ ದೇವ ನಿ
(ಮ್ಮೀ)ಯೊಂದಂದದ ಪೆಂಪನೇವೊಗೞ್ವೆನಾಂ ತ್ರೈಲೋಕ್ಯಚೂಡಾಮಣೀ || ೧ ||

ಮತಿ ನಿಮ್ಮಂ ನೆನೆಗುಂ ವಚಃಪ್ರತತಿ ನಿಮ್ಮಂ ಬಣ್ಣಿಕುಂ ಲೋಚನ
ದ್ವಿತಯಂ ನಿಮ್ಮನಭೀಕ್ಷಿಕುಂ ಕರಯುಗಂ ನಿಮ್ಮಂಘ್ರಿಯಂ ಪೂಜಿಕುಂ
ಶ್ರುತಿ ನಿಮ್ಮುಕ್ತಿಯನಾಲಿಕುಂ ಗುಣಿಗೆ ಕೇಳ್ ಕಳ್ಳಂಗೆ ಬೆಳ್ದಿಂಗಳು
ನ್ನತಿ ಜಾರಂಗೆ ಖಳಂಗೆ ನೀಂ ಸೊಗಯಿಸೈ ತ್ರೈಲೋಕ್ಯಚೂಡಾಮಣೀ || ೨ ||

ಧರಣೀಂದ್ರಂ ತ್ರಿದಶೇಂದ್ರನಂಬರಚರೇಂದ್ರಂ ಮಾನುಷೇಂದ್ರಂ ನಿಶಾ
ಚರರಾಜೇಂದ್ರರುಮಿಪ್ಪುದಗ್ಗಳಿಕೆಯೆ ನಿಮ್ಮಘ್ರಿಯಂ ಸಾರ್ದೊಡಾ
ಧರಣೀಂದ್ರಂ ತ್ರಿದಶೇಂದ್ರನಂಬರಚರೇಂದ್ರಂ ಮಾನುಷೇಂದ್ರಂ ನಿಶಾ
ಚರರಾಜೇಂದ್ರರೆ ಬಂದು ಕಾಲ್ಗೆಱಗರೇ ತ್ರೈಲೋಕ್ಯಚೂಡಾಮಣೀ || ೩ ||

ಹರಿಯುಂ ಭಾಸ್ಕರನುಂ ಸರೋಜಭವನುಂ ದೇವೇಂದ್ರನುಂ ಚಂದ್ರನುಂ
ನರನುಂ ರಾವಣನುಂ ಮಹಾಮುನಿಗಳುಂ ದೇವಾಧಿದೇವರ್ಕಳುಂ
ನಿರುತಂ ನಿಮ್ಮನೆ ಪೂಜಿಸಿಂತು ಪಡೆದರ್ಭೋಗೋಪಭೋಗಂಗಳಂ
ಪರಮಾತ್ಮಾ ಕೆಲರೇಕೆ ನಿಮ್ಮ ಮಱೆವರ್ ತ್ರೈಲೋಕ್ಯಚೂಡಾಮಣೀ || ೪ ||

ಭವನುಂ ಭೋಗಿಲಸ್ವಾಮಿಯುಂ ಪರಕೆಯಂ ಬೇಳ್ವರ್ಕನುಂ ಜಕ್ಕನುಂ
ಜವನುಂ ಕೊಲ್ವೊಡೆ ಕಾವರೇ ಕಿಡಿಸುಗುಂ ತತ್ತ್ವಾದಿದೂರತ್ವಕಾ
ದಿವಿಜಾಕಾರದ ಮರ್ತ್ಯಲೋಕಮೊಳಕೊಂಡಿರ್ದಾಧಿಗಂ ವ್ಯಾಧಿಗಂ
ಭವದಂಘ್ರಿಸ್ಮರಣಂ ಸಮೂಲಹರಣಂ ತ್ರೈಲೋಕ್ಯಚೂಡಾಮಣೀ || ೫ ||

ಮದನಂ ನಿಮ್ಮ ತಪೋಗ್ನಿಯಿಂದಮುರಿದಂ ಭಾವೋದ್ಭವಂ ಮೂರ್ತಿಮ
ನ್ಮದನಂ ಮುಕ್ತಿಗೆ ಸಂದನಾ ಮದನನಂ ನೇತ್ರಾಗ್ನಿಯಿಂ ಸುಟ್ಟೊಡಾ
ಮದನಂ ಬೆಂದೊಡೆ ಪಂಡಿರಾವ ತೆಱದಿಂ ರುದ್ರಂಗೊಡಂಬಟ್ಟರಿಂ
ತಿದನಾರಯ್ವೊಡೆ ಯುಕ್ತಿ ಕೂಡದದಱಿಂ ತ್ರೈಲೋಕ್ಯಚೂಡಾಮಣೀ || ೬ ||

ಮದನಂ ಮಾರ್ಕೊಳೆ ಮುಕ್ಕುವೋದುದು ತಪಂ ಮೋಹಾರಿಯಿಂದೋರೆವೋ
ದುದು ಶೀಲಂ ನೆಗಱ್ದಂತರಾಯಖಳನಿಂ ಫಾಳಾಗ್ನಿಯುಂ ಸೂಱುವೋ
ದುದು ಬೋಧಾದಿ ಪರೀಷಹಾಬ್ಧಿವಿಲಯಪ್ರಸ್ಪಂದದಿಂ ಬೆಂದುವೋ
ದುದು ನೀನಲ್ಲ

[ದ] ದೇವರೊಳ್ಗುಣಗಣಂ ತ್ರೈಲೋಕ್ಯಚೂಡಾಮಣೀ || ೭ ||

ಪ್ರಜೆಗರ್ಥಕ್ಕೆ ಪರಿಗ್ರಹಕ್ಕೆ ಕೆಲಬರ್ ತೃಷ್ಣಾಪರರ್ದಂಡ ಮುಂ
ಡ ಜ [ಟಾಜಾ]ಳಧರರ್ಕಳಾಗಿ ನಮೆವರ್ ಸಂಸಾರದಿಂತೊಂದಿದ
ರ್ಗಳಿಗೀ ದುಃಖಮದೆಂತು ಪಿಂಗುಗು [ಮೊ] ಪೇೞ್ ಚಾತುರ‍್ಯದಿಂ ಜನ್ಮಮೃ
ತ್ಯುಜರಾಹಾನಿಯಿದೆಂದು ನೀನೆ ನೆಗೞ್ದೈ ತ್ರೈಲೋಕ್ಯಚೂಡಾಮಣೀ || ೮ ||

ಅಱಿವಿಲ್ಲೆಂಬುದನಕ್ಷಸೂತ್ರಮಣಿಯಿಂ ಕಾರುಣ್ಯಮಿಲ್ಲೆಂಬುದಂ
ಮಿಱುಗುತ್ತಿರ್ಪ ತ್ರಿಶೂಲದಿಂ ತನಗಣಂ ನಾಣ್ಮುನ್ನಮಿಲ್ಲೆಂಬುದಂ
ಮೊಱೆಗೆಟ್ಟರ್ಚಿಪ ಲಿಂಗದಿಂ ತಪದ ಮಾತಿಲ್ಲೆಂಬುದಂ ಗೌರಿಯಿಂ
ದಱೆದೇನೆಂದು ಜಡರ್ ಮೃಡಂಗೆಱಗುವರ್ ತ್ರೈಲೋಕ್ಯಚೂಡಾಮಣೀ || ೯ ||

ಉರಿಗಣ್ತೊಟ್ಟಹಿ ಕಾಲಕೂಟವೊದವಲ್ಸೂಲಂ ಕಪಾಲಂ ಗಜಾ
ಸುರನಂ ಪೇಸದೆ ಸೀಳ್ದು ಪಾಶುಪತವಂ ಮೇಲ್ಕೊಂಡನಾ ಶೂಲಿ ಶಂ
ಕರನಲ್ಲಂ ಪ್ರಲಯಕ್ಕೆ ಮುಖ್ಯನದಱಿಂ ರುದ್ರಂ ಮಹಾರೌದ್ರನೀ
ದೊರೆಯಂಗಾ ಪೆಸರೇಕೆ ಶಂಕರನೆ ನೀಂ ತ್ರೈಲೋಕ್ಯಚೂಡಾಮಣೀ || ೧೦ ||

ಪರಮಾತ್ಮಂ ಪರತಂತ್ರನೇ ಗತಭಯಂ ಶೂಲಕ್ಕೆ ಕೈದಪ್ಪನೇ
ಸಿರಿಯುಳ್ಳಂ ಪಿಡಿದೆತ್ತನೇಱುವನೆ ನಿಷ್ಕಾಮಂಗೆ ಗಂಗಾಂಗನಾ
ಗಿರಿಜಾಸಂಗಮುಮೇಕೆ ಜನ್ಮರಹಿತಂಗಾರ್ದ್ರಾಜಮಂತಂತೆ ಪೊ
ತ್ತಿರ [ದೇನೆಂ] ಬುದನೇಕರೂಪನೆ ಶಿವಂ ತ್ರೈಲೋಕ್ಯಚೂಡಾಮಣೀ || ೧೧ ||

ಘನಬಾಹುಸ್ಥಿತಖೞ್ಗಚಾಪಮುಸಲಂ ಖಟ್ವಾಂಗನಾ ಯೋಷಿದಾ
ನನವೀಕ್ಷಾಕುಳಿ [ತಾ]ಂಗಮನ್ಮನನನಂಗದ್ವೇಷಿ ಸರ್ವಜ್ಞನೆಂ
ಬಡೆ ಹಾಸ್ಯಾಸ್ಪದಪುಂಜವಗ್ಗದ ಮರುಳ್ಗೊಂಡಾಡುವಂ ಮತ್ತವಾ
ತನ ಮೆಯ್ಯೊಳ್ ಮೊಲನಾಗನುಳ್ಳುದು ದಿಟಂ ತ್ರೈಲೋಕ್ಯಚೂಡಾಮಣೀ || ೧೨ ||

ಪೆಗಲೊಳ್ತೋಳ್ದುರುಗಲ್ಗಳಂ ನೊಸಲೊಳಂ ಕಣ್ಣಂ ಮೊಗಕ್ಕಗ್ಗಳಂ
ಮೊಗಮಂ ತೋರ್ಪನನಾಪ್ತನಂ ಪರಮನಂ ಸರ್ವಜ್ಞನಂ ಮಾಱ[ಚ್ಚಿ] ಗಮೇನಂಕೊಲೆಯೆಣ್ಣೆಯೊಳ್ಬಗೆದುದಂ ಲೋಕಕ್ಕೆ ತೋರ್ಪಿಂದ್ರಜಾ
ಲಿಗನುಂ ದೇವರ ದೇವನಾಗದಿರನೆ ತ್ರೈಲೋಕ್ಯಚೂಡಾಮಣೀ || ೧೩ ||

ಪಡೆಮಾತೇಂ ಗಡ ಮತ್ಸ್ಯಕಚ್ಫಪವರಾಹಾಕಾರಮಂ ತಾಳ್ದಿದಂ
ಗಡ ಕುಬ್ಜದ್ವಿಜನಾಗಿ ದೈತ್ಯನಿದಿರೊಳ್ದಾನಕ್ಕೆ ಕೆಯ್ಯಾಂತವಂ
ಗಡ ಸಂಗ್ರಾಮದೊಳಾಂತು ಕಾದಿಯೆ ಜರಾಸಂಧಂಗೆ ಬೆನ್ನಿತ್ತವಂ
ಗಡ ದೇವಂ ಗಡ ಪೇೞ್ವೊಡಿನ್ನವಣಕಂ ತ್ರೈಲೋಕ್ಯಚೂಡಾಮಣೀ || ೧೪ ||

ಉಗುರೊಳ್ ವಕ್ಷಮನುರ್ಚಿ ದೈತ್ಯತತಿಯಂ ಸೀಳ್ದಿಕ್ಕಿದಂ ಮಿಕ್ಕ ದಾ
ಯಿಗರಂ ಪಾಂಡವರ್ಗಿಕ್ಕಿ ಪೊಕ್ಕೆಸಗಿದಂ ತೇರಂ ಮರುಳ್ಗೊಂಡು ಜಾ
ರೆಗೆ ಗೋಪಾಂಗನೆಗೊಲ್ದನಾತನೆ ಗಡಂ ಸರ್ವಜ್ಞನೆಂದೂಳ್ಗುಮೀ
ಜಗಮಂ ಬಾರಿಪರಾರೊ ಶೂನ್ಯಹೃದಯರ್ ತ್ರೈಲೋಕ್ಯಚೂಡಾಮಣೀ || ೧೫ ||

ಗಿರಿದುರ್ಗಂ ವನದುರ್ಗಮೆಂಬೆಡೆಗಳೊಳ್ ಜನ್ಮಾಂಧನಾದಂಗೆ ನ
ಟ್ಟಿರುಳೊಳ್ ಜೆಟ್ಟಿಗನಾಗಿ ಬಟ್ಟೆವರುತಿರ್ಪಾತಂಗೆ ಮಿಥ್ಯಾತ್ವದೊಳ್
ಪೊರೆದಜ್ಞಾನಿ ವಿವೇಕಿಯಲ್ಲದವನಂ ತತ್ತ್ವಕ್ಕೆ ತಪ್ಪಂತೆವೋಲ್
ಪರೆ[ದೇ]ನೆಂದೊಡೆ ಯುಕ್ತಿ ಕೂಡದದಱಿಂ ತ್ರೈಲೋಕ್ಯಚೂಡಾಮಣೀ || ೧೬ ||

ಅಱಿವುಂ ಕಾಣ್ಕೆಯುಮಾತ್ಮಲಕ್ಷಣಮುಮಭವ್ಯಂ ಭವ್ಯ [ನೆಂ]ದಾತ್ಮನಿ
ರ್ತೆಱನೇಗೆಯ್ದುಮಭವ್ಯಜೀವನಗಲಂ ಮಿಥ್ಯಾತ್ವದಿಂ ಭವ್ಯನುಂ
ಪೊಱಪೊಣ್ಮಲ್ ಬಗೆದಪ್ಪೊಡಂ ಘನತರಂ ಮಿಥ್ಯಾತ್ವ[ನೆ]ಲ್ಲಂದಮ
ಚ್ಚರಿಯಾ ವಿರುಪಾತ್ಮನಾತ್ಮವಿಕಳರ್ ತ್ರೈಲೋಕ್ಯಚೂಡಾಮಣೀ || ೧೭ ||

ಆಯಸಂಬಟ್ಟ ದಿಗಂಬರಂಗೆ ಗಣಿಕಾಸಂಪರ್ಕಮೊಂದಲ್ಲದಿ
ಲ್ಲ ಯಥೇಷ್ಟರ್ಪರಲಿಂಗಿಗಳ್ಕಿಡದೆಯುಂ ಕೆಟ್ಟರ್ಪರಾ ಸ್ತ್ರೀರತರ್
ನಿಯತಂ ಸೇವಿತಮದ್ಯಮಾಂಸಮಧುವೆತ್ತೀ ಜೈನವೆತ್ತೆಂತುಮಾ
ನೆಯ ಗುಜ್ಜನ್ಯಮೃಗಕ್ಕೆಯುದ್ದಮೆ ವಲಂ ತ್ರೈಲೋಕ್ಯಚೂಡಾಮಣೀ || ೧೮ ||

ಕೊಲಲಾಗೆಂಬುದು ಬೌದ್ಧರಾಗಮದೊಳುಂಟೆಂದಿರ್ದೊಡಂ ಶೂಲಿ ಪಂ
ದಲೆಯಂ ಸೂಡಿದನೆಯ್ದೆ ವಿಪ್ರಮತದೊಳ್ ಜನ್ಮಂ ಮೊದಲ್ಬುದ್ಧರೊಳ್
ಸಲೆ ಪಾತ್ರಾಂತರಮಾದ ಭೋಜ್ಯಮೆ ಭೋಜ್ಯಂ ಮೆಚ್ಚಿದೆಂ ದೇವ ನಿ
ಮ್ಮೊಳಹಿಂಸಾಸ್ಮೃತಿಯುಕ್ತಿಯೊಂದೆ ಸುಲಭಂ ತ್ರೈಲೋಕ್ಯಚೂಡಾಮಣೀ || ೧೯ ||

ಪದೆದಾಡಂ ತವ ಕೊಂದು ಸಗ್ಗಮನದೆಕ್ಕೊಲ್ದೀವರಂತೀಯಲಾ
ಗದೆ ತನ್ನಿಷ್ಟಕಳತ್ರಪುತ್ರನಿವಹಕ್ಕಾನಂದದಿಂ ಬಂದು ಕೂ
ರದರೇ ಕೊಂದಡದಿಂಬ ಶಾಸ್ತ್ರದಿನಹಿಂಸಾ ಲಕ್ಷಣೋ ಧರ್ಮಮೆಂ
ಬುದನೀ ತತ್ಸವಿತುರ್ವರೇಣ್ಯರೞದರ್ ತ್ರೈಲೋಕ್ಯಚೂಡಾಮಣೀ || ೨೦ ||

ಅಱುದಿಂಗಳ್ವರಮೊರ್ವನಂಬುಧಿಯೊಳಂ ನಿದ್ರಾಂಗನಾಸಕ್ತನೆ
ಚ್ಚಱನೊರ್ವಂ ಭುಜರಾಗ್ವಲಯಮಂ [ಸಾರ್ತ] ರ್ಪಿನಂ ಪರ್ವಿ ಕೈ
ಪಱಿದೆರ್ದಾಡಿದನೊರ್ವನಿಂದ್ರವಧುವಂ ನೋಡಲ್ಚತುರ್ವಕ್ತ್ರದಿಂ
ನೆಱೆದಂ ಮುಕ್ತಿಗೆ ನಂಬಲಕ್ಕುಮವರಂ ತ್ರೈಲೋಕ್ಯಚೂಡಾಮಣೀ || ೨೧ ||

ಕೆಲದೊಳ್ಕುಳ್ಳಿರಲುಂಬ ಕೂೞ್ ದ್ವಿಗುಣಮಲ್ತುಂಬಾತನೋಳ್ಮೇಣ್ ಕ್ಷುಧಾ
ನಳನಳುಱುತ್ತಿರಲುಂತು ಮಾನವರ ಮೆಯ್ಯೊಳ್ ಭೋಜ್ಯಮೇ ದೇವಸಂ
ಕುಳಮುಂ ಭೂಸುರಭೋಜನಚ್ಫಲದ ಧೂರ್ತಸ್ವಾರ್ಥಮಂ ತೀರ್ಚಿ ದು
ರ್ಬಳರಾ ಮುಗ್ಧರನಾಳಿಗೊಂಡು ಕೆಡಿಪರ್ ತ್ರೈಲೋಕ್ಯಚೂಡಾಮಣೀ || ೨೨ ||

ಅಪಪಾಠೋಕ್ತಿಗಳಿಂ ಪ್ರಯತ್ನದಿನವಂ ಪೇೞ್ದಾತನಿಂ ಪಾಪಲೋ
ಲುಪನಿಂ ದುಷ್ಪಮಗಾಲದೊಂದೆಸಕದಿಂ ಸಾಲ್ಗುಂ ಭವಚ್ಫಾಸನ
ಕ್ಕಪವಾದಂ ಖಳಚಿತ್ತನೊಳ್ ಸುಚರಿತಂಗಾಸನ್ನಭವ್ಯಂಗದಾ
ದಪುದೇ ಕತ್ತಲೆಯುಂಟೆ ತಿಗ್ಮರುಚಿಯೊಳ್ ತ್ರೈಲೋಕ್ಯಚೂಡಾಮಣೀ || ೨೩ ||

ಹರಿಯುಂ ಬ್ರಹ್ಮನುಮಾ ಮಹೇಶ್ವರನುಮಿಂತೀ ಮೂವರುಂ ಕರ್ಮನಿ
ರ್ಜರೆಯಂ ಗೆಲ್ದವರಲ್ಲರೊಮ್ಮೆ ಹರಿಯುಂ ಪತ್ತುಂ ಭವಂ ಬಂದನೀ
ಶ್ವರನುಂ ಮಾಯೆಯಿನೊಂದಿ ಪೊಕ್ಕನಜನುಂ ಶೂನ್ಯತ್ವದೊಳ್ [ಪೊಂದಿದಂ] ಪರಮಾತ್ಮಂ [ಸು]ಜಿನೇಂದ್ರ ನೀಂ ಪಿರಿಯನೈ ತ್ರೈಲೋಕ್ಯಚೂಡಾಮಣೀ || ೨೪ ||

ಭುವನಾಧೀಶ್ವರ ಭವ್ಯಬಂಧು ಜಿತಕರ್ಮಾರಾತಿ ದೇವಾಧಿದೇ
ವವೆಸರ್ನಿನ್ನೊಳ್ ಪೆಂಪುವೆತ್ತುದು ಪೆಱರ್ಗೆಂತೊಪ್ಪುಗುಂ ದೇವ ಕೊ
ಳ್ಳಿವಣಂ ಬೇಡುವರಂತೆ ಸುಟ್ಟುಮುರಿದುಂ ದೇವತ್ವಮಂ ಮಾಡಿಕೊ
ಳ್ವವರಂ ಮನ್ನೆಯದೇವರೆಂದು ತೊಱೆದೆಂ ತ್ರೈಲೋಕ್ಯಚೂಡಾಮಣೀ || ೨೫ ||

ಬ್ರತದಿಂ ದಾನದಿನಾದ ಭೋಗಮನದಂ ತಾನಿತ್ತನೆಂಬರ್ಜಗ
ತ್ತ್ರಿತಯಂ ಶಾಶ್ವತಮಂತದಂ ಮುರಹರಂ ಮಾಡಿಟ್ಟನೆಂಬರ್ ಧನು
ರ್ಯುತನಂ ಬಂಟನನಾಪ್ತರೆಂಬರೊಲಿದೆಲ್ವಂ ತೊಟ್ಟನೆಂಬರ್ ಮಹಾ
ವ್ರತಿಯುಂ ಯೋಗಿಯುಮೆಂಬರಿಂಬಱಿಯದರ್ ತ್ರೈಲೋಕ್ಯಚೂಡಾಮಣೀ || ೨೬ ||

ಕೆಱೆಯಂ ಸಂಜೆಯನಿಂದ್ರನಂ ಗಣಪನಂ ಗೌರೀಶನಂ ಭಾನುವಂ
ಪೆಱೆಯಂ ಗೋಕುಳಮಂ ಗಿರಿಪ್ರಕರಮಂ ಬಾದುಬ್ಬೆಯಂ ಕಾಂತಿಯಂ
ತೊಱುಯಂ ವಾರ್ಧಿಯನೈದು ಪಾಲುಮರನಂ ದೈವಂಗಳೆಂದಿಂತು ಕೂ
ರ್ತೆಱಗುತ್ತಿರ್ಪವರೆಂತು ಮುಕ್ತಿವಡೆವರ್ ತ್ರೈಲೋಕ್ಯಚೂಡಾಮಣೀ || ೨೭ ||

ನದಿಗಳ್ ವಾರ್ಧಿಯನೊಂದುಗುಂದದೆ ಪೊಗುತ್ತಿರ್ಪಂತೆ ವಾರಾಶಿ ಪೊ
ಕ್ಕುದೆ ಸಿಂಧುಪ್ರಕರಂಗಳಂ ಜಿನಪತಿ ನಿನ್ನೊಳ್ ಪದಾರ್ಥೋಕ್ತಿಗಳ್
ವಿದಿತಂ ನೀಂ ಪರದೃಷ್ಟಿಗಪ್ರಕಟನೈ ತದ್ಬೋಧದೊಳ್ ಲೋಕಮಿ
ರ್ದುದು ಲೋಕತ್ರಯಬೋಧದಿಂ ಪೊಱಗು ನೀಂ ತ್ರೈಲೋಕ್ಯಚೂಡಾಮಣೀ || ೨೮ ||

ಗುರುವೊರ್ವಂ ಸುರಕಾಂತೆಗೋತು ತಪದಿಂ ಕೆಟ್ಟಂ ಸಮಸ್ತಾವನೀ
ಶ್ವರನೊರ್ವಂ ತುರುಗಾತಿಗೋತು ನೆರೆದಂ ಸರ್ವಜ್ಞನೊರ್ವಂ ತನೂ
ದರಿಯಂ ಮೆಯ್ಯೊಳಗಿಟ್ಟು ಬಯ್ತನೆನೆಯುಂ ಮೂವಣ್ಣಂ ಬಂದ ದೇ
ವರುಮಂ ದೇವರೆ ಗೆತ್ತದೇಕೆಱಗುವರ್ ತ್ರೈಲೋಕ್ಯಚೂಡಾಮಣೀ || ೨೯ ||

ಜಿನ ನೀನುಂ ಪೆಱರುಂ ಸಮಾನ[ಮ]ನಿತುಂ ದುರ್ಬೋಧದಿಂ ವಿಶ್ವದೇ
ವನಮಸ್ಕಾರಮನಾರೊಡರ್ಚಿದವರುಂ ಬೆಳ್ವಿಟ್ಟುಮಂ ಪಿಟ್ಟುಮಂ
ಕುನಯಾತ್ಮರ್ಬೆರಸಿಟ್ಟು ಕೆಟ್ಟರೆನೆ ನಿನ್ನೊಳ್ವೈರಮಂ ಪೂಣ್ದು ಕೆಟ್ಟರ
ಕೇಡೆಂಬುದು ಯುಕ್ತಿಸಿದ್ಧಮದಱಿಂ ತ್ರೈಲೋಕ್ಯಚೂಡಾಮಣೀ || ೩೦ ||

ಅವರಿಂ ಮುನ್ನಣಮಿಲ್ಲ ತದ್ವಿದ ಕಳತ್ರಂ ತತ್ಕೃತಂ ಧರ್ಮಮೆಂ
ದವರಿಂದಿತ್ತಲುಮಿಲ್ಲ ವರ್ತಿಪರ [ಮೂ]ಲಾಗ್ರಂ ವಿಶುದ್ಧಾತ್ಮರ
ಪ್ಪವರ್ಗಾ ಪಾಂಡುತನೂಭವರ್ಗೆ ಛಲದಿಂ ಗೋಧರ್ಮಮಂ ಮಾಡಿ [ಸ
ಯ್ದವ]ರೊಳ್ ಧೂರ್ತರ ದೇವನೇನೆಸಗ [ನೋ] ತ್ರೈಲೋಕ್ಯಚೂಡಾಮಣೀ[1] || ೩೧ ||

ಭರತಂ ಬೇರ್ಕೆಯೆ ಸಂಮಾನಮ ಸುರರ್ಮೂವತ್ತೆರೞಸಿರಂ
ಪರಬ್ರಹ್ಮನೆಯೀವನೆಂದು ನೆಗೞ್ವರ್ಮುನ್ನೀಗಳೊರ್ವರ್ಗೆ ಸಾ
ಸಿರಮಾದತ್ತಧಿದೈವಮೆಂತವರ್ಗಳುಂ ದೈವಂಗಳೋ ಮೇ[ಣ್ ಸು] ಸೀ
ಕರದಂತಸ್ಥಿತಸೈಕತಪ್ರಕರಮೋ ತ್ರೈಲೋಕ್ಯಚೂಡಾಮಣೀ[2] (?) || ೩೨ ||

ಜಿನಮಾರ್ಗಂ ಬಿಡದನ್ಯಮಾರ್ಗಮನದೇಂ ಪೇೞ್ ದೂಷಣಂಗೆಯ್ದುದು
ರ್ಜನನಾದಂ ಕರಮೆಂಗು ಮೆಚ್ಚದವರ್ಗಳ್ ಮಧ್ಯಸ್ಥರಾರಯ್ಯೆ ಪಾ
ವಿನ ಪಲ್ಲೊಳ್ ವಿಷಮುಂಟು ಕಿಚ್ಚು ಸುಡುಗುಂ ನಂಜೞ್ಕದೆಂಬಂತೆ ಪೇ
ೞ್ದೆನಿದೇಂ ವಸ್ತುವಿಚಾರಮೀ ತೆಱನಿದಂ ತ್ರೈಲೋಕ್ಯಚೂಡಾಮಣೀ[3] || ೩೩ ||

ಜಿನಮಾರ್ಗಂ ಪೊಱಗಾಗಿ ಧರ್ಮಮೊಳವೆ ಜೈನಾಗಮಂ ಬಿಟ್ಟು ಮಿ
ಕ್ಕಿನ [ಕೌ]ಳಂ ನುಡಿವಾಗಮಂಗಳೊಳವೆ ನಿರ್ಗ್ರಂಥಮಾರ್ಗಕ್ಕೆ ಮ
ತ್ತೆನಸುಂ ದಿವ್ಯತಪಂಗಳೆಂಬಿವೊಳವೆ ಸರ್ವಜ್ಞನಿಂದತ್ತಲಿಂ
ದ್ರನರೇಂದ್ರಾದಿಗಳೆಂಬ ದೇವರೊಳರೆ ತ್ರೈಲೋಕ್ಯಚೂಡಾಮಣೀ || ೩೪ ||

ಪರಮಶ್ರೀಪತಿಯಾದ ನಿನ್ನ ಮಹಿಮಾವಷ್ಟಂಭಮುಂ ಛತ್ರಚಾ
ಮರ ಸಿಂಹಾಸನ ಧರ್ಮಚಕ್ರವಿಭವಂ ತ್ರೈಲೋಕ್ಯನಾಥತ್ವಮುಂ
ಧರಣೀಂದ್ರಾನತಮಾನವೇಂದ್ರದಿವಿಜೇಂದ್ರಸ್ತೋತ್ರಮುದ್ಯೋತಿಸು
ತ್ತಿರೆ ನೀನಲ್ಲದದಾರ್ ತ್ರಿಲೋಕಗುರುಗಳ್ ತ್ರೈಲೋಕ್ಯಚೂಡಾಮಣೀ || ೩೫ ||

ನುಡಿಗಳ್ ಕರ್ಣರಸಾಯನಂ ತನು ಮನೋನೇತ್ರಪ್ರಿಯಂ ವೇಷಮೇ
ರ್ಪಡೆ ಶಾಂತಂ ದಯೆ ದೀನರೊಳ್ ಬುಧರೊಳತ್ಯಂತಾದರಂ ಮಾರ್ಗಮ
ಪ್ಪೊಡೆ ಶಿಷ್ಟಪ್ರಿಯ ನೀಂ ನಿಜಂ ನಿರವಧಿಜ್ಞಾನಾತ್ಮನೈ ಕ್ರೂರರಾ
ವೆಡೆಯೊಳ್ ನೀಂ ನಿನಗೆಗ್ಗರೇಕೆ ಮುನಿವರ್ ತ್ರೈಲೋಕ್ಯಚೂಡಾಮಣೀ || ೩೬ ||

ಸ್ಮರವಿಧ್ವಂಸಕ ನಿಮ್ಮನರ್ಚಿಸುವೊಡೆನ್ನೀ ಕೈಗಳೈದಾಱುಸಾ
ವಿರಮಂ ಪೆರ್ಚಿಸು ರಾಗದಿಂ ನೆರೆದು ನೋಡಲ್ಕಂಗಳಾಱೇೞು ಸಾ
ವಿರಮಂ ಪೆರ್ಚಿಸು ನಾಡೆ ಬಣ್ಣಿಸಲೆ ತಿಣ್ಣಂ ಬಾಯ್ಗಳೇೞೆಂಟು ಸಾ
ವಿರಮೇಕಾಗವಿವೆಂದು ಚಿಂತಿಸುವೆನಾಂ ತ್ರೈಲೋಕ್ಯಚೂಡಾಮಣೀ || ೩೭ ||

ಎಡೆಯಾಡುತ್ತುಮನೂನಜೈನಭವನಕ್ಕಾನಂದದಿಂದಂ ತಳ
ರ್ನಡೆಗಲ್ತೆಂ ಪರಮಾಗಮಾಭ್ಯಸನದಿಂದಾಪೊೞ್ತುಮಾಗಳ್ತೊದ
ಳ್ನುಡಿಗಲ್ತೆಂ ಕಿಱಿಯಂದು ಪುಣ್ಯವಶದಿಂದಾ ರಾಜ್ಯಪೂಜ್ಯಾಸ್ಪದಂ
ಬಡೆದಾಗಳ್ ಕವಿಚಕ್ರವರ್ತಿವೆಸರಂ ತ್ರೈಲೋಕ್ಯಚೂಡಾಮಣೀ || ೩೮ ||[4]

 


[1] ಈ ಚಿಹ್ನೆಯ ಪದ್ಯಗಳು ಎ. ಶಾಂತಿರಾಜ ಶಾಸ್ತ್ರಿಗಳ ಆವೃತ್ತಿಯಲ್ಲಿಲ್ಲ.

[2] “

[3] “

[4] ಎ. ಶಾಂತಿರಾಜ ಶಾಸ್ತ್ರಿಗಳು ಸಂಪಾದಿಸಿರುವ ಕೃತಿಯಲ್ಲಿ ೩೦ ಪದ್ಯಗಳು ಮಾತ್ರವೇ ಇವೆ. ಅಧ್ಯಯನ ಸಂಸ್ಥೆಯ ಹಸ್ತಪ್ರತಿಯಲ್ಲಿಲ್ಲದ ಹೆಚ್ಚಿನ ಪದ್ಯವೊಂದು ಹೀಗೆ ಅಲ್ಲಿದೆ :

ತನುಸೌಂದರ್ಯದಿನನ್ನನಿನ್ನನೆನುಲುದ್ಘಾಚಾರದಿಂದೆನ್ನನಿ
ನ್ನನೆನಲ್ಬೋಧದಿನನ್ನನಿನ್ನನೆನಲಾತ್ಮೈಶ್ಚರ್ಯದಿಂದೆನ್ನನಿ
ನ್ನನೆನಲ್ಸೌಖ್ಯದಿನನ್ನನಿನ್ನನೆನಲಂತಾ ಪೆಂಪಿನಿಂದನ್ನನಿ
ನ್ನನೆನಲ್ಬಾರದು ನಿನ್ನ ನೀನೆ ಪಿರಿ [ಯೈ] ತ್ರೈಲೋಕ್ಯಚೂಡಾಮಣೀ ||